(ಅದೇ ದಿನ ರಾತ್ರಿ ಎಲ್ಲರೂ ಉಂಡು ಮಲಗಿದ್ದಾರೆ. ಚಂಪಿ ತನ್ನ ರೂಮಿನಲ್ಲಿ ಚಡಪಡಿಸುತ್ತಿದ್ದಾಳೆ. ದೂರದಲ್ಲಿ ಹುಡುಗರು ಕಾಡುಕುದರೆಯ ಬಗ್ಗೆ ಮೇಳವಾಗಿ ಹಾಡಿಕೊಂಡು ಕುಣಿಯುತ್ತಿದ್ದು ಅದು ಹಿನ್ನೆಲೆಯಲ್ಲಿ ಕೇಳಿಸುತ್ತದೆ. ತುಸುಹೊತ್ತು ತಡೆದು ಚಂಪಿ ತನ್ನ ಆಭರಣಗಳನ್ನು ಕಳಚಲಾರಂಭಿಸುತ್ತಾಳೆ, ಅಷ್ಟರಲ್ಲಿ ದುರ್ಗಿ ಬರುತ್ತಾಳೆ.)

ದುರ್ಗಿ : ತಗೀಬ್ಯಾಡ ತಡೀಯೇ ಎವ್ವಾ! ಈ ಸೀರಿ, ಈ ದಾಗೀನದಾಗ ನೀ ಎಷ್ಟ ಚಂದ ಕಾಣಸ್ತಿ ಗೊತ್ತೈತಿ? ನೀ ಏನs ಅನ್ನು, ನಾ ಅಂತೂ ಆ ಹುಡುಗನ ನಶೀಬಂತೀನಿ. ನೀ ಏನಂತಿ?

ಚಂಪಿ : ನೀ ಹೋಗಿ ಮಲಕ್ಕೊ ಅಂತೀನಿ.

ದುರ್ಗಿ : ಛೀ, ಇನs ನಿನ್ನ ಸಿಟ್ಟ ಹೋಗೇ ಇಲ್ಲ. ನನಗಂತೂ ಅತ್ತಬಿಡೋವಷ್ಟು ಆನಂದ ಆಗೇತಿ. ನಶೀಬಂತಿಯೋ ಅಲ್ಲಂತಿಯೋ ಹೇಳಲ್ಲ. – ನಿನಗಿಂತ ಶೀಲಕ್ಕ ದೊಡ್ಡಾಕಿ, ಆಕೀದs ಮದಿವಿಲ್ಲ, ನಿಂದ ಆಗಿಬಿಟ್ಟಿತಂದರ…!…

ಚಂಪಿ : ದುರ್ಗಿ, ಸಂಜೀತನಕ ಓಡ್ಯಾಡಿ ದಣಿದೀಗಿ, ಮಲಕ್ಕೊಬಾರದ?

ಹುಡುಗರ ಹಾಡು : ಕಾಡು ಕುದರಿ ಓಡಿ ಬಂದಿತ್ತs||

ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ!
ಮೂಡಬೆಟ್ಟ ಸೂರ್ಯಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ!
ಮುಗಿವೇ ಇಲ್ಲ
ಮುಗಿಲಿನಿಂದ!
ಜಾರಿಬಿದ್ದ ಉಲ್ಕೀಹಾಂಗ|
ಕಾಡಿನಿಂದ ಚಂಗನೆ ನೆಗೆದಿತ್ತ||

ದುರ್ಗಿ : ಅದು ಖರೆ. ಇಂದಂತೂ ಖರೆ ಹೇಳ್ತೀನಿ ಚಂಪಕ್ಕಾ, ಕಣ್ತುಂಬ ನಿದ್ದಿ ಬರತೈತಿ ನನಗ. ಶೀಲಕ್ಕನ ನಶೀಬ ಆಕೀ ಹಲ್ಲಿನ್ಹಾಂಗs, ಭಾ ಖೊಟ್ಟಿ. ಮನಿಶಾನ ಮನಸ ಹಸನ ಇರಬೇಕು ಮಗಳs, ಹೊಟ್ಟೀಕಿಚ್ಚ ಮಾಡಿದರ ಏನ ಬಂತು? ನಶೀಬ ಕಸಕೊಳ್ಳಾಕ ಬರತೈತಿ? ನಾಳಿ ಯಾವಾಗ ಬೆಳಕ ಹರದೀತೋ, ಯಾವಾಗ ನೀ ಧಾರೀ ಎರಕೊಂಡಿಯೋ ಅಂತ ಮನಸ ಹರದಾಡಕ ಹತ್ತೇತಿ.

ಚಂಪಿ : ಎಲ್ಲರೂ ಮಲಗ್ಯಾರ, ನೀನೂ ಹೋಗಲ್ಲ.

ದುರ್ಗಿ : ಯಾಕ ಹಿಂಗ ಅವಸರ ಮಾಡ್ತಿ? ನಾಳಿ ಹಿಂಗ ಒಬ್ಬಾಕೀನs ಸಿಗತಿ?

ಚಂಪಿ : ನಾ ಎಲ್ಲಿ ಹೋಗತೀನಿ?

ದುರ್ಗಿ : ಎಲ್ಲಿ ಗೊತ್ತಿಲ್ಲ? ನಾಳಿ ಇಷ್ಟೊತ್ತಿನಾಗ ಗಂಡನ ತೆಕ್ಕ್ಯಾಗ ಇರತಿ!

ಚಂಪಿ : ಥೂ

(ದುರ್ಗಿ ನಗುವಳು, ಹಿನ್ನೆಲೆ ಹಾಡು ಕೇಳಿಸುವುದು)

ಮೈಯ ಬೆಂಕಿ ಮಿರಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ|
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ|
ಧೂಮಕೇತು
ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈ ಹೈ ಅಂತ ಹಾರಿ ಬಂದಿತ್ತ||

ದುರ್ಗಿ : ಮದಿವೆಂದರ ಏನಂತ ತಿಳಕೊಂಡೇ ಮಗಳ? ಒಂದ ಗಂಡಸು, ಒಂದ ಹೆಂಗಸು, ಒಂದು ಘಮಘಮಾ ನಾರೋ ಹಾಸಿಗಿ! ಮಲಗಿ ಬೆಳಿಗ್ಗೆದ್ದರ ಮಯ ಎಷ್ಟರ ಹಗರ ಆಗಿರತೈತಿ ಗೊತ್ತಾ?

ಚಂಪಿ : ನಾ ಮಲಗತೀನಿ.

ದುರ್ಗಿ : ಮಲಗು, ಮಲಗು. ನಿನಗ ನಿದ್ದಿ ಬರಾಣಿಲ್ಲಂತ ನನಗೂ ಗೊತ್ತೈತಿ, ಮಲಗು. ಕನಸ ಬಿದ್ದರ ನಾಳಿ ನನಗೂ ಹೇಳಬೇಕs ಮತ್ತ!

(ನಗುತ್ತ ಹೊರಡುವಳು. ಏನೋ ನೆನಪಾಗಿ ಮತ್ತೆ ನಿಲ್ಲುವಳು.)

ಅಂಧಾಂಗ ಹುಲಿಗೊಂಡ ಹರಕ ಅಂಗೀ ಹಾಕಿದ್ನಲ್ಲ. ಯಾಕಂತ?

ಚಂಪಿ : ನನಗೇನ ಗೊತ್ತು?

ದುರ್ಗಿ : (ತಂತಾನೇ ಮಾತಾಡಿಕೊಂಡು ಹೊರಡುವಳು.)

ವಿಚಿತ್ರ ಹುಡುಗ, ಬರೀ ತನ್ನ ಹಟಾನs ಗೆಲ್ಲಬೇಕಂದರ ಹೆಂಗ? ಆಯ್ತು, ಇದೊಂದ ಮದಿವ್ಯಾದರ ತಾನs ಹಾದೀ ಹಿಡೀತಾನ. ಆ ಹುಡುಗೋರ ಜೋಡೀ ಹಾಡಿಕೊಂಡ ಕುಣ್ಯಾಕ ಹತ್ಯಾನೋ ಏನೊ. ಈ ಹಾಡಂದರ ಭಲೇ ಖಶಿ ಅವಗ. ಬೆಳಗಿನಿಂದ ಯಾರ ಜೋಡೀ ಮಾತಾಡಿಲ್ಲ. ಹಿಂಗಾದರೂ ಖುಶಿ ಆಗಲಿ ಮಾರಾಯಗ.

(ಹೋಗಿ ದುರ್ಗಿ ಮಲಗುವಳು. ಹಾಡು ಈಗ ಇನ್ನೂ ಹತ್ತಿರವಾಗುತ್ತದೆ.)

ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸುತ್ತ|
ಬೆನ್ನಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ|
ಬಿಗಿದ ಕಾಡ
ಬಿಲ್ಲಿನಿಂದ|
ಬಿಟ್ಟ ಬಾಣಧಾಂಗ ಚಿಮ್ಮಿ|
ಹದ್ದಮೀರಿ ಹಾರಿ ಬಂದಿತ್ತ||

ನೆಲ ಒದ್ದು ಗುದ್ದ ತೋಡಿ
ಗುದ್ದಿನ ಒದ್ದಿ ಒದ್ದಿಯಾಗಿ|
ಒರತೀ ನೀರು ಭರ್ತಿಯಾಗಿ
ಹರಿಯೋ ಹಾಂಗ ಹೆಜ್ಜೀ ಹಾಕಿ|
ಹತ್ತಿದವರ
ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಆಡಿ|
ಕಳ್ಳೆಮಳ್ಳೆ ಆಡಿಸಿ ಕೆಡಿವಿತ್ತ||

(ಮೇಲಿನ ಹಾಡು ಮುಗಿಯುವತನಕ ಚಂಪಿ ಆಭರಣಗಳನ್ನು ಬಿಚ್ಚಿ ಎಲ್ಲಿ ಹೊರಡಲು ತಯಾರಾಗುವುದು, ಬೇರೆಯವರು ಮಲಗಿದ್ದರ ಬಗ್ಗೆ ಅನುಮಾನಗೊಳ್ಳುವುದು, ನೋಡಿ ಖಾತ್ರಿ ಮಾಡಿಕೊಳ್ಳುವುದು – ನಡದೇ ಇರುತ್ತದೆ. ಒಂದು ಸಲ ಪಾರೋತಿ, ಶೀಲಿಯರ ರೂಮುಗಳಲ್ಲಿ ಇಣಿಕಿ ಅವರಿಬ್ಬರೂ ಮಲಗಿದ್ದನ್ನು ಖಾತ್ರಿ ಮಾಡಿಕೊಳ್ಳುತ್ತಾಳೆ. ಅಷ್ಟರಲ್ಲಿ ಹಾಡು ಮುಗಿದು ಕುದುರೆಯ ಹೇಷಾರವ ಕೇಳಿಸುತ್ತದೆ. ಈಗ ಎಲ್ಲ ನಿಶ್ಯಬ್ದವಾಗಿದೆ. ಮೆಲ್ಲಗೆ ಬಾಗಿಲ ಕಡೆಗೆ ಹೆಜ್ಜೆ ಹಾಕುತ್ತಾಳೆ. ಬಾಗಿಲು ತೆಗೆದು ಇನ್ನೇನು ಹೊರಡಬೇಕು, ಅಷ್ಟರಲ್ಲಿ ಹಿಂದಿನಿಂದ ’ಚಂಪೀ’ ಎಂದದ್ದು ಕೇಳಿಸಿ ಬಿಚ್ಚಿ ಬೀಳುತ್ತಾಳೆ, ಹಿಂದಿನಿಂದ ಶೀಲಕ್ಕ ಕಾಣಿಸಿಕೊಳ್ಳುತ್ತಾಳೆ.)

ಶೀಲಕ್ಕ : ನೀ ಎಲ್ಲಿಗೆ ಹೊಂಟೀಯಂತ ನನಗ್ಗೊತ್ತು.

ಚಂಪಿ : ಗೊತ್ತಿದ್ದರ ಆಯ್ತಲ್ಲ, ನಾಳೆ ಎಲ್ಲಾರಿಗು ಹೇಳು.

ಶೀಲಕ್ಕ : ಮಾವನ ಜೋಡಿ ಹೋಗಬ್ಯಾಡ.

ಚಂಪಿ : ಯಾಕ? ನೀ ಹೋಗಬೇಕಂತೀಯೇನು?

ಶೀಲಕ್ಕ : ಅವ ನಮ್ಮಿಬ್ಬರ ಅಕ್ಕನ ಗಂಡ.

ಚಂಪಿ : ಅಂದು ರಾತ್ರಿ ಮಾವನ ಹಂತ್ಯಾಕ ಹೋಗಿದ್ದೆಲ್ಲ, ಅಕ್ಕನ ಗಂಡಂತ ತಿಳೀಲಿಲ್ಲಾ ನಿನಗ? ಯಾಕ ಹೋಗಿದ್ದಿ ಹೇಳಲಿ? ನಿನಗೂ ಮಾವ ಬೇಕು. ಅಕ್ಕಾ, ಶೀಲಕ್ಕಾ, – ಆದರೇನು ಮಾಡ್ಲಿ, ಕುದರಿಗಿ ನಿನ್ನ ಕಂಡರ ಆಗಿ ಬರಾಣಿಲ್ಲ, ನನ್ನ ಕಂಡರ ಬೆನ್ನ ಹುರಿ ಬಿಗೀ ಮಾಡಿ ಕರೀತೈತಿ. ಅದಕ್ಕs ಹೊಸಾ ಸೀರಿ ಉಟಕೊಂಡ ಮಾವನ ಮನೀಗಿ ಹೊಂಟೇನಿ. ಅವ್ವಾ ಮಲಗ್ಯಾಳಲ್ಲಾ, ನೀನs ಅವ್ವಂತ ತಿಳಕೊಂಡು ಅಲ್ಲಾ ಬೆಲ್ಲಾ ಕೊಟ್ಟು ಕಳಿಸಿಕೊಡು.

ಶೀಲಕ್ಕ : ಬೀಗರ ಬಂದಾರ, ತಿಳೀಬಾರದ? ಹಿಂದೆ ಆದದ್ದಾಯ್ತು. ಪಾರೋತೀ ಮುಖಾನಾದರೂ ನೋಡು. ಪಾರೋತಿ ನಮ್ಮಕ್ಕ.

ಚಂಪಿ : ಔಷಧಿ ಬಾಟ್ಲೀಹಾಂಗ ನಾರತಾಳ, ಮಾವ ಅಕೀ ಸಲುವಾಗಿ ಇಲ್ಲಿದ್ದಾನಂತ ತಿಳದೀಯೇನು? ಮಾವ ನನ್ನ ಹಕ್ಕು – ಅವ ಕುದರೀ ಪಳಗಿಸಿದ್ದು ನನ್ನ ಸಲುವಾಗಿ. ಇಷ್ಟದಿನ ಅಕ್ಕ ತಂಗೀ ಅಂತ ಅಂಜತಿದ್ದೆ. ಇಂದ ನನಗ ಬಲ ಬಂದೈತಿ. ನನ್ನ ಹಕ್ಕಿಂದೇನೈತೋ ಅದನ್ನ ಪಡದs ಪಡೀತೀನಿ. ನನ್ನ ತಡ್ಯಾಕ ಯಾರಿಗೂ ಶಕ್ಯಿಲ್ಲ.

ಶೀಲಕ್ಕ : ನಾ ನಿನ್ನ ಬಿಡೋದಿಲ್ಲ. ಅಧೆಂಗ ಹೋಗ್ತೀಯೋ ನೋಡೇ ಬಿಡ್ತೀನಿ.

(ಅಡ್ಡಗಟ್ಟುವಳು.)

ಚಂಪಿ : ಮಾವ ಕಾಡಕುದರಿ ಪಳಗಿಸ್ಯಾನ. ನಾ ಅವನ್ನ ಪಳಗಿಸೀನಿ – ತಿಳಕೊ.

(ಎನ್ನುತ್ತ ಶೀಲಕ್ಕನನ್ನು ದಬ್ಬಿ ಹೊರಗೆ ಹೋಗುವಳು. ಹೋಗಿ ಹೊರಗಿನಿಂದ ಚಿಲಕ ಹಾಕಿಕೊಳ್ಳುವಳು. ಶೀಲಕ್ಕ ಓಡಿಬಂದು ಬಾಗಿಲು ತೆರೆಯಲು ಯತ್ನಿಸುತ್ತ)

ಶೀಲಕ್ಕ : ಎವ್ವಾ, ಎವ್ವಾ, ಚಂಪಿ ಮಾವನ ಜೋಡೀ ಓಡಿ ಹೊಂಟಾಳ! ಎವ್ವಾ! ಎವ್ವಾ!

(ಗೌಡ್ತಿ ಎಚ್ಚರಾಗಿ ಏಳುತ್ತಾಳೆ. ಶೀಲಕ್ಕ ಗೌಡ್ತಿಯ ಬಳಿಗೆ ಓಡಿಹೋಗುತ್ತಾಳೆ.)

ಗೌಡ್ತಿ : ಏನೇ ಅದು?

ಶೀಲಕ್ಕ : ಎವ್ವಾ, ಎವ್ವಾ, ಚಂಪಿ ಮಾವನ ಜೋಡೀ ಓಡಿಹೊಂಟಾಳ!

(ಗೌಡ್ತಿ ತಕ್ಷಣ ಬಂದೂಕು ತೆಗೆದುಕೊಂಡು ಅವಸರದಿಂದ ಓಡಿಬರುವಳು. ಇಬ್ಬರೂ ಜೋರಿನಿಂದ ಬಾಗಿಲು ತೆಗೆಯಲೆತ್ನಿಸುವರು. ಅದು ತೆರೆಯುವುದಿಲ್ಲ. ತಕ್ಷಣ ಗೌಡ್ತಿ ಮೆಟ್ಟಿಲು ಹತ್ತಿ ಶೀಲಕ್ಕನ ರೂಮಿನ ಮುಂಭಾಗದಲ್ಲಿ ಹೊರಗನ್ನು ಎದುರಿಸಿ ನಿಲ್ಲುವಳು. ಈ ಮಧ್ಯೆ ದುರ್ಗಿಗೂ ಎಚ್ಚರವಾಗಿ ಅವಳೂ ಅಟ್ಟದ ಮೇಲೆ ಹೋಗುವಳು.)

ಗೌಡ್ತಿ : ಏ ಹುಲಿಗೊಂಡಾ.

ಹುಲಿಗೊಂಡ : (ಹೊರಗಿನಿಂದ)

ಎವ್ವಾ ಗೌಡ್ತಿ, ನಿನ್ನ ಹಿರೀಮಗಳೂ ಬ್ಯಾಡ. ನಿನ್ನ ಆಸ್ತಿಪಾಸ್ತೀನೂ ಬ್ಯಾಡ, ಮ್ಯಾಲ ನಿನ್ನ ಗೌಡ್ಕೀನೂ ಬ್ಯಾಡ. ನನಗೆ ನನ್ನ ಹೇಂತಿ ಸಿಕ್ಕಾಳ, ಹೊಂಟೀವ್ರಿ ಎವ್ವ!…

ಗೌಡ್ತಿ : ಬದ್ಮಾಸ್ ಭಾಡ್ಯಾ, ಕೈಯಾಗೇನೈತಿ ನೋಡಿಲ್ಲಿ. ಚಂಪೀನ ಕೆಳಗಿಳಿಸಿ ನೀ ಅದೆಲ್ಲಿ ಹಾಳಾಗಿ ಹೋಗ್ತಿ ಹೋಗು. ಏ ಚಂಪೀ, ಇಳದ ಬಾರೇ….

ದುರ್ಗಿ : ಎವ್ವಾ ಚಂಪಕ್ಕಾ, ಹಾಂಗ ಮಾಡಬ್ಯಾಡ ಇಳದ ಬಾ ಮಗಳs.

ಚಂಪಿ : (ಹೊರಗಿನಿಂದ) ನಾ ಬರಾಣಿಲ್ಲ.

ಗೌಡ್ತಿ : ಇಷ್ಟ ಧೈರ್ಯ ಬಂತೇನs ನಿನಗ? ಏ ಹುಲಿಗೊಂಡಾ

(ಬಂದೂಕು ಗುರಿ ಹಿಡಿಯುತ್ತಾ)

ಗುಂಡಿಗೆ ಬಲಿ ಆಗಬ್ಯಡ, ಹೇಳಿರತೀನಿ.

ದುರ್ಗಿ : ಎವ್ವಾ ಚಂಪಕ್ಕಾ, ಅಪ್ಪಾ ಹುಲಿಗೊಂಡಾ ನನ್ನ ಮಾತ ಕೇಳ್ರಿ…

ಹುಲಿಗೊಂಡ : (ಹೊರಗಿನಿಂದ) ಬರ್ತೀನಿ, ಶರಣ್ರೀಯೆವ್ವ..

ಗೌಡ್ತಿ : ಏ ಹುಲಿಗೊಂಡಾ…

ದುರ್ಗಿ : ಚಂಪಕ್ಕಾ…

(ಗೌಡ್ತಿ ಗುಂಡು ಹಾರಿಸುವಳು. ತಕ್ಷಣ ಕುದುರೆ ದೌಡಾಯಿಸಿದ ಸಪ್ಪಳ ಕೇಳಿಸುತ್ತದೆ. ಗುಂಡಿನ ಸಪ್ಪಳಕ್ಕೆ ದುರ್ಗಿ ಕುಸಿಯುವಳು. ಶೀಲಕ್ಕ ಕಣ್ಣು ಮುಚ್ಚಿಕೊಳ್ಳುವಳು. ತನ್ನ ರೂಮಿನಲ್ಲಿ ಮಲಗಿದ್ದ ಪಾರೋತಿ ’ಎವ್ವಾs’ ಎಂದು ಕಿಟಾರನೆ ಕಿರಿಚಿ ಬೆದರಿದ ಎಳೆಗರುವಿನಂತೆ ದಿಕ್ಕುತಪ್ಪಿ ಎದ್ದು ನೋಡಾಡಿ ಮೇಲಕ್ಕೆ ಹೋಗುವಳು. ತುಸು ಹೊತ್ತು ನೀರವ. ಪಾರೋತಿ ಆಘಾತದಲ್ಲಿದ್ದ ಎಲ್ಲರನ್ನೂ ಗಾಬರಿಯಿಂದ ನೋಡುತ್ತ ಶೀಲೀ, ದುರ್ಗೀ, ಎಂದು ಮಾತಾಡಿಸುತ್ತ ’ಎವ್ವಾs’ ಎಂದು ತನ್ನ ತಾಯಿಯ ಬಳಿಗೆ ಹೋಗುವಳು. ಆಘಾತದಲ್ಲಿ ಕಲ್ಲಿನಂತೆ ನಿಂತಿದ್ದ ಅವಳನ್ನು ಅಲುಗಿಸುತ್ತಾ ಮಾತಾಡಿಸುವಳು.)

ಪಾರೋತಿ : ಎವ್ವಾ, ಎವ್ವಾ! ಏನಾಯ್ತು? ಯಾಕ ಯಾರೂ ಬಾಯಿ ಬಿಡುವೊಲ್ಲಿರಿ? ಎವ್ವಾ ಏನಾಯ್ತಬೇ?

ಗೌಡ್ತಿ : ಗುರಿ ತಪ್ಪತs ಮಗಳs!….

(ಎನ್ನುತ್ತ ಗೌಡ್ತಿ ಕುಸಿಯುವಳು. ಆಸೆಯಿಂದ ದುರ್ಗಿ ಗೌಡ್ತಿಯನ್ನೇ ನೋಡುತ್ತಿರುವಾಗ) 

ತೆರೆ