ಮದುವೆ ಸಂಭ್ರಮ, ಮನೆಯನ್ನು ಶೃಂಗರಿಸಲಾಗಿದೆ. ಹೊರಗೆ ಮಂಗಳವಾದ್ಯ ಕೇಳಿಸುತ್ತಿದೆ. ಎಲ್ಲರೂ ಹೊಸ ಸೀರೆ ಉಟ್ಟುಕೊಂಡಿದ್ದಾರೆ. ದುರ್ಗಿ ತುಂಬ ಗಡಿಬಿಡಿಯಿಂದ ಒಳಗಿಂದ ಏನೇನೋ ಸಾಮಾನು ತೆಗೆದುಕೊಂಡು ಹೊರಗೆ ಹೋಗುತ್ತಾಳೆ, ಬರುತ್ತಾಳೆ. ತುಸು ಸಮಯವಾದ ಮೇಲೆ ಬೀಗರ ಕಡೆಯ ಹೆಂಗಸರು ಮದುವೆ ಆಚರಣೆಗೆ ಸಂಬಂಧಪಟ್ಟ ಹಾಡುಗಳನ್ನು ಹೇಳುತ್ತ ಬರುತ್ತಾರೆ. ಒಳಗಿನಿಂದ ಗೌಡ್ತಿ ಬಂದು ಸ್ವಾಗತಿಸುತ್ತಾಳೆ. ಪಾರೋತಿ ಹಾಗೂ ಶೀಲಕ್ಕ ಹೋಗಿ ಶೃಂಗಾರಗೊಂಡಿರುವ ಚಂಪಿಯನ್ನು ಕರೆತರುತ್ತಾರೆ. ಹಸೆಮಣೆಯ ಮೇಲೆ ಕೂರಿಸುತ್ತಾರೆ. ಬೀಗಿತ್ತಿಯರು ಆರತಿ ಬೆಳಗಿ ಮಧುವಿಗೆ ಹೊಸ ಸೀರೆ ಆಭರಣಗಳನ್ನು ಕೊಟ್ಟು ಹಾಡುತ್ತ ಹೋಗುತ್ತಾರೆ. ಅವರೊಂದಿಗೆ ಪಾರೋತಿ, ಗೌಡ್ತಿ, ಶೀಲಕ್ಕ ಹೋಗುತ್ತಾರೆ. ದುರ್ಗಿ ಒಳಗೆ ಹೋಗುತ್ತಾಳೆ. ಈಗ ಚಂಪಿ ಒಬ್ಬಳೇ ಯೋಚನಾಮಗ್ನಳಾಗಿ ಕೂತಿದ್ದಾಳೆ. ಅಷ್ಟರಲ್ಲಿ ಹುಲಿಗೊಂಡ ರಭಸದಿಂದ ಬರುತ್ತಾನೆ. ಆಶ್ಚರ್ಯವೆಂದರೆ ಅವನೊಬ್ಬನೇ ಈಗ ಹಳೇ ಉಡುಪಿನಲ್ಲಿ, ಅವನು ಈ ಹಿಂದೆ ಹೇಳಿದ್ದಂಥ, ಕುದುರೆ ಪಳಗಿಸುವಾಗ ಹರಿದು ರಕ್ತಮಯವಾಗಿದ್ದ ಅಂಗಿ ಹಾಕಿ ಹಳೇ ಧೋತ್ರ ಉಟ್ಟಿದ್ದಾನೆ. ಕುಳಿತ ಚಂಪಿಯನ್ನು ಪ್ರದಕ್ಷಿಸಿ, ಅವಳ ಗಮನ ಸೆಳೆಯಲು ಯತ್ನಿಸಿ, ಸೋತು ಅವಳನ್ನೇ ದಿಟ್ಟಿಸುತ್ತ ನಿಲ್ಲುತ್ತಾನೆ. ಚಂಪಿಯೀಗ ಕುತೂಹಲ, ಆಸೆಗಳಿಂದೆಂಬಂತೆ ಆಭರಣಗಳನ್ನು ಪರೀಕ್ಷಿಸಿ ನೋಡತೊಡಗುತ್ತಾಳೆ.)

ಹುಲಿಗೊಂಡ : ಚಂಪೀ,

ಚಂಪಿ : ಈ ಬಳಿ ನನ್ನ ಕೈಗಿ ಚಂದ ಕಾಣತಾವೇನ ಮಾವಾ? ನೋಡು, ಮಣಕೈಮಟ ಇಡಿಸ್ಯಾರ. ಬಳಿ ಇಟಗೊಂಡ, ಹಣಿತುಂಬ ಕುಂಕುಮ ಹಚಿಕೊಂಡ ಕನ್ನಡಿ ನೋಡಿದರ, ಕನ್ನಡ್ಯಾಗ ನನ್ನ ಬದಲ ಗುಡ್ಯಾಗಿನ ಮಾರಿ ಮೂಡ್ಯಾಳ!

ಹುಲಿಗೊಂಡ : ಸೇಡ ತೀರಿತ?

ಚಂಪಿ : ಮಾವಾ ಈ ಸರ ಎಷ್ಟ ಚೆಲೋ ಐತೆಲ್ಲಾ? ಹದಿನೆಂಟ ತೊಲಿ ಐತೆಂತ!

ಹುಲಿಗೊಂಡ : ಇಂದಾದರೂ ಸೇಡ ತೀರಿಸಿಕೊಂಡಿಯೋ ಇಲ್ಲೊ- ಹೇಳು.

ಚಂಪಿ : ಇದೇನ ಮಾವಾ, ಹಳೀ ಅಂಗೀ ಹಾಕೀದಿ! ನಾ ಮದಿವ್ಯಾದರ ನಿನಗ ಆನಂದ ಆಗಲಿಲ್ಲೇನು?

ಹುಲಿಗೊಂಡ : ಇಲ್ಲ.

ಚಂಪಿ : ಮತ್ತ ಯಾಕ ಇಲ್ಲಿ ನಿಂತೀದಿ?

ಹುಲಿಗೊಂಡ : ಕಣ್ಣತುಂಬ ನಿನ್ನ ಮದಿವೀ ನೋಡಾಕ.

ಚಂಪಿ : ನಾ ನಿನ್ನ ಮದಿವೀ ನೋಡಿಧಾಂಗ.

(ದುರ್ಗಿ ಬರುವಳು. ಪರಿಸ್ಥಿತಿಯನ್ನು ಗಮನಿಸಿ)

ದುರ್ಗಿ : ಎಪಾ ಹುಲಿಗೊಂಡಾ, ನಿನ್ನ ಕಾಲಿಗಿ ಬೀಳತೀನಿ. ಮಂಗಳ ಕಾರ‍್ಯೇ ನಡದೈತಿ, ಅಲ್ಲದ್ದ ಆಡಬ್ಯಾಡ. ಹೋಗಿ ಬೀಗರ‍್ನ ವಿಚಾರಿಸ್ಕೋ ಹೋಗು.

ಹುಲಿಗೊಂಡ : ನಾ ಏನೂ ಮಾಡೋದಿಲ್ಲ ತಡೀಬೆ. ತುಸು ಮಾತಾಡ್ತೀನಿ.

ದುರ್ಗಿ : ಅದೇನ ಮಾತು? ಈಗs ಆಡಬೇಕ?

ಹುಲಿಗೊಂಡ : ನನ್ನಿಂದೇನ ಅಡಚಣಿ ಆಗೇತೀಗ?

ದುರ್ಗಿ : ಆಗದೇನು? ಹಳೀ ಅಂಗೀ ಧೋತ್ರ ಉಟ್ಟ ಹೊರಗಿನವರ‍್ಹಾಂಗ ನಿಂತೀದಿ, ಬೀಗರೇನೆಂದಕೊಂಡಾರಂತ ತಿಳೀಬಾರದ? ಹಂತ್ಯಾಕ ಬೆಂಕಿ ಐತೆಂತ ಸಿಕ್ಕ ಸಿಕ್ಕವರ ಮನೀಗಿ ಬೆಂಕೀ ಹಚ್ಚಬಾರದೋ ಮಗನs, ಬಾಳ್ವೇಕ ಬೆಳಕ ಕೊಡಬೇಡ.

(ಸರ‍್ರನೇ ಹುಲಿಗೊಂಡ ಹೊರಗೆ ಹೋಗುವನು. ದುರ್ಗಿಗೆ ಬಹಳ ಚಿಂತೆಯಾಗುತ್ತದೆ. ಅವನು ಹೋದ ರೀತಿಯಿಂದಲೇ ಅವಳಿಗೆ ಅಸಮಾಧಾನವಾಗಿದೆ. ಹಾಗೇ ನಿಂತಿರುವಾಗ ಚಂಪಿ ಮಾತಾಡುತ್ತಾಳೆ.)

ಚಂಪಿ : ದುರ್ಗೀ,

ದುರ್ಗಿ : ಅಂ?

ಚಂಪಿ : ಕನಸಿನಾಗ ಮದಿವಿ ಅದರ ಚೆಲೋನೊ ? ಕೆಟ್ಟೊ?

ದುರ್ಗಿ : (ಕೂರುತ್ತ) ಮದಿವಿ? ಏನೇನ ಕನಸ ಕಂಡೆ ಎವ್ವಾ?

ಚಂಪಿ : ನಿಬ್ಬಣ ಬಂದಿತ್ತು. ಹೊಸಾ ಸೀರೀ ಉಟಕೊಂಡ ಸಿಂಗಾರಾಗಿ ನಾ ಕುದರೀ ಮ್ಯಾಲ ಕೂತಿದ್ದೆ. ಅಷ್ಟರಾಗ ಕುದರಿ ದೊಡ್ಡದ ದೊಡ್ಡದ ಆಗಿ,…. ಅಯ್ ಶಿವನ ಹಿಂಗ್ಯಾಕಂತ ನೋಡಿದರ – ಕುದರಿ ಮುಗಿಲತನಕ ಬೆಳದಿತ್ತು; ಇದೇನೆಂಬೋ ಕುದರೀ ಅಂತ ನೋಡತೀನಿ; ಮಾವನs ಕುದರಿ ಆಗಿದ್ದ! ಇನ್ಹೆಂಗ ಮಾಡಲಿ ಮಾವಾ ಅಂತ ಅವನ್ನ ತಬ್ಬಿಕೊಂಡೆ. ತಡಿ ಅಂದವನs ಒಮ್ಮಿ ಮೈ ಝಾಡಿಸಿದ ಝಾಡಿಸಿದಾ, …ಆಕಾಸ ಗಡಗಡ ನಡಿಗಿ ತಾರಕ್ಕಿ ಬುಳುಬುಳು ಉದರಿ ಬಿದ್ಧಾಂಗಾದುವು! ನಾ ಜೀವ ತಡೀಲಾರದ ಮುತ್ತಿನ್ಹಾಂಗ ಬಿದ್ದ ಚಿಕ್ಕೀನೆಲ್ಲಾ ಆರಿಸಿ ಉಡಿ ತುಂಬಿಕೊಳ್ತಾ ಇದ್ದೆ!

(ಅಷ್ಟರಲ್ಲಿ ಶೀಲಕ್ಕ ಅವಸರದಿಂದ ಬರುವಳು.)

ಶೀಲಕ್ಕ : ದುರ್ಗೀ, ದೇವರ ಮನೀ ಟ್ರಂಕಿನಾಗ ಆಯೀ ಸೀರೀ ತಾಯೀ ಸೀರೀ ಅದಾವಂತ, ಲಗು ಕೊಡಂದಾಳ ಅವ್ವ.

ದುರ್ಗಿ : ಬರತೀನಿ ತಡಿ ಚಂಪಕ್ಕ…

(ಒಳಗೆ ಹೋಗುವಳು. ಶೀಲಕ್ಕ ಶೃಂಗಾರಗೊಂಡ ಚಂಪಿ ಮತ್ತು ಅವಳ ಮುಂದಿನ ಆಭರಣ, ಕೈಬಳೆಗಳನ್ನು ಆಸೆಬುರುಕುತನದಿಂದ ನೋಡುತ್ತ)

ಶೀಲಕ್ಕ : ಕೈತುಂಬ ಬಳಿ ಇಟ್ಟುಕೊಂಡಾಗ ಎಷ್ಟ ಚಂದ ಕಾಣ್ತೀಯೇ ಚಂಪಿ! ನಿನ್ನ ನೋಡಿದರೆ ನಾ ಯಾವಾಗ ಮದಿವ್ಯಾದೇನೋ ಅನಸತೈತಿ. ಅಷ್ಟೊಂದ ಬಳಿ ಅದಾವ ನನಗೊಂದ ಕೊಡಗs,

ಚಂಪಿ : ಬೇಕ ?

ದುರ್ಗಿ : (ಒಳಗಿನಿಂದ) ಏನದು ಅಮಂಗಳ? ಮದುಮಗಳ ಬಳಿ ಕೇಳತಾರೇನs- ಶೀಲಕ್ಕ?

ಶೀಲಕ್ಕ : ಆಹಾ! ಈ ದಾಗೀನ ಎಷ್ಟ ಚಂದ ಅದಾವ!

(ಎನ್ನುತ್ತ ಆಭರಣಗಳಿಗೆ ಕೈ ಹಾಕುವಳು. ಚಂಪಿ ಥಟ್ಟನೆ ಅವಳ ಕೈಗೆ ಏಟು ಹಾಕುವಳು.)

ಚಂಪಿ : ಮುಟ್ಟಿದರೆ ಕೈ ಕೀಳತೀನಿ.

ಶೀಲಕ್ಕ ಎದ್ದು ಮಸಲತ್ತಿನಿಂದ ಚಂಪಿಯ ಹಿಂದಿನಿಂದ ಬಂದು ಆಭರಣಗಳಲ್ಲಿಯ ಸರಕ್ಕೆ ಕೈ ಹಾಕುವಳು. ಚಂಪ ದೃಷ್ಟಿಯಿಂದಲೇ ತಡೆಯುವಳು.)

ಶೀಲಕ್ಕ  : ಆ ಸರಾನಾದರೂ ತೋರಿಸs.

ಚಂಪಿ : ಹೇಳಲಿಲ್ಲಾ ಕೈ ಕೀಳತೀನಂತ?

ದುರ್ಗಿ : (ಒಳಗಿನಿಂದ) ನೋಡತಾಳಂತ ತೋರಸs ಚಂಪಕ್ಕಾ.

ಚಂಪಿ : (ಕಿರುಚುತ್ತ) ನಾ ತೋರಸಾಣಿಲ್ಲಾ.

ಶೀಲಕ್ಕ : ತೋರಸs…

(ಎಂದು ಸರಕ್ಕೆ ಕೈ ಹಾಕುವಳು. ಚಂಪಿ ತಕ್ಷಣ ಅವಳ ಕೈ ಹಿಡಿದೆಳೆದು ಕಚ್ಚುವಳು. ಶೀಲಕ್ಕ ಹಾ ಎಂದು ಕಿರುಚಿದೊಡನೆ ಕೈಬಿಡುವಳು. ಕೈಗೆ ನೋವಾಗಿದೆ. “ಹುಚ್ಚರಂಡೇ” ಎನ್ನುತ್ತ ಶೀಲಕ್ಕ ಚಂಪಿಗೆ ಏಟು ಹಾಕುವಳು. ಅದು ಅವಳ ಕೈ ಬಳೆಗೆ ತಾಕಿ ಬಳೆ ಒಡೆದು ಬೀಳುತ್ತವೆ. ಚಂಪಿಯ ಕೋಪ ನೆತ್ತಿಗೇರುತ್ತದೆ. ಕನಸಿನ ಭಯ, ಹುಲಿಗೊಂಡನ ಮಾತಿನಿಂದಾದ ಆತಂಕ, ಬಳೆ ಒಡೆದ ಅಮಂಗಳ – ಮೂರೂ ಸೇರಿ ಹುಚ್ಚಿಯಂತಾಗುತ್ತಾಳೆ.)

ಚಂಪಿ : ನಿನಗ ಈ ಬಳಿ ಬೇಕಲ್ಲ? ತಗೊ, ತಗೊ! ತಗೊ!

(ಎಂದು ಕಿರುಚುತ್ತ ಎರಡೂ ಕೈ ಕೈ ಕುಟ್ಟಿ ಬಳೆ ಒಡೆದುಕೊಳ್ಳುವಳು. ಶೀಲಕ್ಕ ಗಾಬರಿಯಿಂದ ಹೊರಗೆ ಓಡಿಹೋಗುವಳು. ದುರ್ಗಿ ಒಳಗಿನಿಂದ “ಚಂಪಕ್ಕಾ ಏನಿದೆಲ್ಲಾ?” ಎನ್ನುತ್ತ ಓಡಿಬರುವಳು. ಬಳೆ ಒಡೆದು ಚಂಪಿಯ ಎರಡೂ ಕಯಗೆ ರಕ್ತ ಬರುತ್ತಿದೆ. ಚಂಪಿ ಆವೇಶದಿಂದ ಇನ್ನೂ ಕೈಕೈ ಕುಟ್ಟಿಕೊಳ್ಳುತ್ತಿದ್ದಾಳೆ. ದುರ್ಗಿ ತಾನೇನು ಮಾಡುತ್ತಿದ್ದೇನೆಂಬ ಅರಿವಿಲ್ಲದೆ ಚಂಪಿಯನ್ನೆಳೆದು “ಬಳಿ ಒಡಕೊಂಡೇನs ರಂಡೆ?” ಎನ್ನುತ್ತ ಚಂಪಿಯ ಕೆನ್ನೆ ಕೆನ್ನೆಗೆ ಬಾರಿಸುವಳು. ಚಂಪಿ ಬಿಡಿಸಿಕೊಂಡು-)

ಚಂಪಿ : ನಿನಗೇನ ಬೇಕು?

(ಎಂದು ಕಿರುಚುವಳು. ದುರ್ಗಿಯ ಕೋಪ ಈಗ ದುಃಖವಾಗಿ ಪರಿಣಮಿಸುತ್ತದೆ.)

ದುರ್ಗಿ : ನೀವೆಲ್ಲಾ ಬದುಕಬೇಕs ಎವ್ವಾ!

(ಚಂಪಿಯ ದುಃಖ ಒತ್ತರಿಸಿ ಬಂದು ತಾಯಿಯನ್ನು ತಬ್ಬುವಂತೆ ದುರ್ಗಿಯನ್ನು ತಬ್ಬಿಕೊಳ್ಳುತ್ತಾಳೆ.)

ದುರ್ಗಿ : ಈ ಮನ್ಯಾಗ ಒಂದ ಸಿಡ್ಲ ಐತಿ. ಯಾವತ್ತೂ ಒಳಗೊಳಗs ಗುಡಗಾಡತೈತಿ. ಯಾವಾಗ ಯಾರ ಮ್ಯಾಲ ಬಿದ್ದೀತಂತ ಹೇಳಾಗ ಆಗವೊಲ್ದು. ಬಾಳೇವಂದರ ಬರೀ ಬೆಂಕಿ ಅಲ್ಲs ಮಗಳ, ಬೆಳಕೂ ಇರತೈತಿ, ನಿನ್ನ ತಾಯೀ ಸಮ ಅಂತ ತಿಳಕೊ, ಕರಳ ಮುಟ್ಟಿಕೊಂಡ ಹೇಳತೀನಿ, ನನ್ನ ಮಾತ ಕೇಳು: ಮದಿವ್ಯಾಗು.

ಚಂಪಿ : ಏನ ಮಾಡಲಿ? ದಿನಾ ಹೋಧಾಂಗ ಹುಣ್ಣ ಹೋದೀತಂದರ ಹೆಚ್ಚೆಚ್ಚ ಉರುಪ ಬಿಡತೈತಿ. ಯಾರೆಲ್ಲಾ ಬಂದ ಅದರಾಗs ಚೂರೀ ಆಡಸ್ತಾರ.

ದುರ್ಗಿ : ತಾಳಿಕೊ ಮಗಳ. ಇದರಿಂದ ಎಲ್ಲಾ ಬರೋಬರಿ ಆಗತೈತಿ. ನನ್ನ ಮಾತು ಕೇಳು: ಹೋಗಿ ಮುಖ ತೊಳಕೊಂಡ ಬ್ಯಾರೇ ಬಳಿ ಹಾಕ್ಕೊ. ಒಳಗ ನಡಿ, ನಾ ಹೋಗಿ ಸೀರೀ ಕೊಟ್ಟ ಬರತೀನಿ.

(ನಿಧಾನವಾಗಿ ನಡೆಸಿಕೊಂಡು ಹೋಗಿ ಅವಳ ರೂಮಿಗಿ ಕಳಿಸಿ ಹೋಗುವಳು. ಚಂಪಿ ತನ್ನ ಮಂಚದ ಮೇಲೆ ಕೂರುವಳು. ಹುಲಿಗೊಂಡ ರಭಸದಿಂದ ಬರುವನು.)

ಚಂಪಿ : ಮತ್ತೇನ ಗಾಳೀ ತಂದಿ?

ಹುಲಿಗೊಂಡ : ನಾ ಹೊಂಟೇನಿ.

ಚಂಪಿ : ಹೋಗು- ಅದರ ಇಲ್ಲಿಗ್ಯಾಕ ಬಂದಿ?

ಹುಲಿಗೊಂಡ : ನಿನ್ನ ನೋಡಾಕ.

ಚಂಪಿ : ನೋಡಿ ನಗಾಕ?

ಹುಲಿಗೊಂಡ : ನಾ ನಕ್ಕರ ಇಡೀ ಊರಿಗೇ ಹುಚ್ಚ ಹತ್ತತೈತಿ.

ಚಂಪಿ : ನೋಡಿದ್ದಾಯ್ತಲ್ಲ, ಇನ್ನ ಹೋಗು.

ಹುಲಿಗೊಂಡ :  ಮದಿವ್ಯಾಗಿ ನೀ ಹೋಗ್ತಿ. ಮನೀಬಿಟ್ಟ ನಾ ಹೊಂಟೇನಿ. ಅಗಲೋ ಮುನ್ನ ನಾಕ ಮಾತ ಮಾತಾಡಬಾರದೇನು?

(ನಿಶ್ಚಿಂತೆಯಿಂದ ಕೂತು ಬೀಡಿ ಹೊತ್ತಿಸುವನು.)

ಚಂಪಿ : ಮಾತಿನಿಂದ ಏನೂ ಆಗೋದಿಲ್ಲ.

ಹುಲಿಗೊಂಡ : ನನಗಿನ್ನೇನ ಮಾಡಂದಿ?

ಚಂಪಿ : ಕುದರೀ ಸವಾರ ಎಷ್ಟೆಲ್ಲಾ ಮಾಡಬಲ್ಲ. ಅದಕ್ಕಂತs ಕುದರೀ ಹತ್ತಿದಿವಿ. ನೋಡಬಾರದ, ಎಲ್ಲಿ ಕಾಡಿನಾಗ ಚೆಲ್ಲತೈತೊ, ಕೊಳ್ಳದಾಗ ಚೆಲ್ಲತೈತೋ! ನಾ ಬಸರಾಗೀನಿ ಗೊತ್ತಾ?

ಹುಲಿಗೊಂಡ : (ಆನಂದದಿಂದ)

ಏನ ಮಾಡಲೇ ನನ್ನ ಗೊಂಬೆ? ಇಲ್ಲೀತನಕ ಏನೇನೋ ಕನಸ ಕಾಣತಿದ್ದೆ: ನಾ ನೀ ಇಬ್ಬರೂ ಕುದರೀ ಹತ್ತತೀವಿ. ಓಡಿಸಿಕೊಂಡ ಈ ಮಂದೀನ ಮೀರಿ, ಊರ ಮೀರಿ, ಹೊಳೀ ಹಾರಿ, ಸೀಮೀ ದಾಟಿ ಕಾಡಿಗಿ ಹೋಗತೀವಿ. ಅಲ್ಲಿ ನಮ್ಮಂಥ ಹುಚ್ಚರು ನಿಮ್ಮಂಥಾ ಹುಚ್ಚರs ಇತರಾರ, ನಮ್ಮ ನಮ್ಮಲ್ಲಿ – ಗೌಡಿಕಿಲ್ಲ, ಹಳಬಿಲ್ಲ, ಆಳಾವ್ರಿಲ್ಲ, ಆಳಿಸಿಕೊಂಬಾವ್ರಿಲ್ಲ, ಎಲ್ಲರೂ ಸಮನಾಗಿ ಸಂಜೀತನಕ ದುಡೀತೀವಿ ತಿಂತೀವಿ – ಕಾಡಿನಾಗ ಹಾಡಿಕೊಂಡ ಅಡ್ಡಾಡತೀವಿ! ಹಕ್ಕಿ ಹಾಡತಾವ, ಮರ ತೂಗತಾವ, ಗವಿ ಸಿಳ್ಳಹಾಕತಾವ, ಕಲ್ಲಬಂಡಿ ತಮ್ಮ ಎದ್ಯಾಗಿನ ವೀರ ಸುರೀತಾವ, ಕಾಡಿನ ಮಾತ ನಮಗ ತಿಳೀತಾವ, ನಮ್ಮ ಮಾತ ಕಾಡಿಗಿ ತಿಳೀತಾವ!

ಚಂಪಿ : ನಮ್ಮಂಥಾ ಹುಚ್ಚರು ಅಲ್ಲಿ ಇರದಿದ್ದರ?

ಹುಲಿಗೊಂಡ : ಬ್ಯಾಡ. ನಮ್ಮ ಜೋಡಿ ಕಾಡ ಇರತೈತಿ! ನಿನಗ್ಗೊತ್ತಿಲ್ಲ, ಕಾಡು ನರಮನಿಶ್ಯಾನಷ್ಟ ದುಷ್ಟ ಅಲ್ಲ.

ಚಂಪಿ : ಇದೆಲ್ಲ ಕನಸ ಹೌಂದೆಲ್ಲೊ?

ಹುಲಿಗೊಂಡ : ಮದಿವ್ಯಾಗಿ ಹೊಂಟೀಯಲ್ಲ. ಇನ್ನಿದೆಲ್ಲಾ ಕನಸs ಖರೆ.

(ಅಷ್ಟರಲ್ಲಿ ದುಗಿ ಅವಸರದಿಂದ ಪಡಸಾಲೆಗೆ ಬಂದು ಅಡಿಗೆ ಮನೆ ಕಡೆ ಹೋಗುತ್ತ)

ದುರ್ಗಿ : ಚಂಪಕ್ಕಾ ತಯಾರಾದೀ? ಶೀಲಕ್ಕ ಎಲ್ಲಿ ಹೋದ್ಲು?

(ಒಳಗೆ ಹೋಗುವಳು. ಹುಲಿಗೊಂಡ ಎದ್ದುನಿಂತು)

ಹುಲಿಗೊಂಡ : ನಾ ಹೋಗತೀನಿ.

ಚಂಪಿ : ಎಲ್ಲಿಗೆ?

ಹುಲಿಗೊಂಡ : ಕಾಡಿಗೆ.

ಚಂಪಿ : ನಾನೂ ಬರತೀನಿ

(ಹುಲಿಗೊಂಡ ತಬ್ಬಿಬ್ಬಾಗುವನು.)

ರಾತ್ರಿ ಕುದರೀ ತಯ್ಯಾರ ಮಾಡಿಕೊಂಡ ಕೊಟ್ಟಿಗ್ಯಾಗ ಕಾದಿರು. ಬರತೀನಿ.