(ಪಡಸಾಲೆಯಲ್ಲಿ ಗೌಡ್ತಿ ಕೈಮೇಲೆ ತಲೆಯೂರಿ ಚಿಂತಾಮಗ್ನಳಾಗಿ ಕುಳಿತಿದ್ದಾಳೆ. ದುರ್ಗಿ ಸಹಾನುಭೂತಿಯಿಂದ, ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯದೆ ಕುಳಿತಿದ್ದಾಳೆ. ಚಂಪಿ ತನ್ನ ರೂಮಿನಲ್ಲಿ ಕಿಡಕಿಯಲ್ಲಿ ಏನನ್ನೋ ತದೇಕ ಧ್ಯಾನದಿಂದ ಚಿಂತಿಸುತ್ತ ನಿಂತಿದ್ದಾಳೆ.)

ದುರ್ಗಿ  : ಸಮಾಧಾನ ತಗೊಳ್ಳೆವ್ವಾ, ಮಾತಾಡಿ ಮನಸ ಹುಣ್ಣ ಮಾಡಿದರ ಏನ ಬಂತು? ಈಗೇನ ಅಂಥಾಗ್ದಾಗೇತಿ?

ಗೌಡ್ತಿ  : ನಿನ್ನಿ ರಾತ್ರಿ ನೀನs ಕೇಳಲಿಲ್ಲೇನ? ಇನ್ನೂ ಏನ ಆಗೋದ ಬಾಕೀ ಐತಿ?

ದುರ್ಗಿ  : ಆಗೋದ ಆಗೇತಿ, ಇನ್ಹೆಂಗ ಸುಧಾರಿಸಬೇಕಂತ ನೋಡ್ರಿ. ಹಿಂಗಾತಲ್ಲ ಅಂತ ಕುಂತರ ಎದಕ್ಕ ಬಂತು?

ಗೌಡ್ತಿ  : ಅಕ್ಕಾ ತಂಗೇರಾಗಿ, ಒಂದ ಹೊಟ್ಟೇಲೆ ಹುಟ್ಟಿದವರಾಗಿ ಹಿಂಗ ಮಾಡೋದು ಉಂಟೇನ?

ದುರ್ಗಿ : ವಯಸ್ಸಿಗಿ ಬಂದಾರೆವ್ವಾ, ಏನೋ…….

ಗೌಡ್ತಿ : ನನ್ನ ಮಕ್ಕಳ ವಯಸ್ಸ ನನಗ್ಗೊತ್ತಿಲ್ಲೇನ?

ದುರ್ಗಿ : ಗೊತ್ತಿದ್ದರ ಶೀಲಕ್ಕನ ಮದಿವೀದೂ ಹೆಂಗರೆ ಗಟ್ಟಿ ಮಾಡಿಬಿಡ್ರಿ….

ಗೌಡ್ತಿ : ಹಾಂಗಂತ ಹಾದಿ ಬೀದೀಲೆ ಹೋಗವರಿಗೆ ಕಟ್ಟಾಕ ಆಗತೈತೇನ? ನೋಡಿದಿಲ್ಲೊ – ಬಡವ ಅಂತ ಪಾರೋತಿನ ಕೊಟ್ಟರ ಮನ್ಯಾಗ ಹೆಂಗ್ಹೆಂಗ ಹಾರ್ಯಾಡತಾನ! ಸಲಿಗೀ ನಾಯೀ ತಲೀಗೇರಿಸಿಕೊಂಡ್ಹಾಂಗ ಆಗೇತಿ!

ದುರ್ಗಿ : ಆಗೋದ ಆಗಿ ಹೋಯ್ತಲ್ಲವಾ, ಗ್ವಾಡೀ ತೊಳದಷ್ಟೂ ರಾಡಿ ಬರತೈತಿ, ಸುಮ್ಮನ ಅದನ್ಯಾಕ ಅಡಿ ಕೆಡತೀರಿ?

(ಅಷ್ಟರಲ್ಲಿ ಪಾರೋತಿ ಹುಲಿಗೊಂಡನನ್ನು ಕರೆದುಕೊಂಡು ಬರುವಳು. ಗೌಡ್ತಿ ಬಿಗುಮಾನದಿಂದಲೇ ಮಾತಾಡುವಳು. ಚಂಪಿ ತನ್ನ ರೂಮಿನಲ್ಲಿ ಯಾರಿಗೂ ಕಾಣದಂತೆ ನಿಂತು ಇವರ ಮಾತು ಕೇಳಿಸಿಕೊಳ್ಳುವಳು.)

ಗೌಡ್ತಿ : ಹುಲಿಗೊಂಡಾ, ಇಂದs ಬೀಗರ ಊರಿಗಿ ಹೋಗು. ಅದೇನೋ ಇಪ್ಪತ್ತೈದ ಸಾವಿರ ವರದಕ್ಷಿಣೆ ಕೊಡಬೇಕಂತಿದ್ದರಲ್ಲ, – ಎಷ್ಟ ಆಗತೈತೋ ಅಷ್ಟ ಕಡಿಮೆ ಮಾಡಾಕ ಖಟಪಟಿ ಮಾಡು. ಅಷ್ಟ ಬೇಕs ಬೇಕಂತ ಅವರೇನಾದರೂ ಹಟ ಹಿಡಿದರ, ಹೋಗಲಿ ಅಷ್ಟಕ್ಕs ಒಪ್ಪಿಕೊಂಡ ಬಾ.

ಹುಲಿಗೊಂಡ : ಕುದರೀ ನಾಲ ಬಡಸಾಕ ನಾ ಇಂದ ಗೋಕಾವಿಗಿ ಹೊಂಟೇನಿ.

ಪಾರೋತಿ : ಕುದರೀ ನಾಲ ನಾಳಿ ಬಡಸಾಕ ಆಗಾಣಿಲ್ಲಾ?

ಹುಲಿಗೊಂಡ : ಇಲ್ಲ,

ಗೌಡ್ತಿ : ಮನೀ ಅಳಿಯಾ ಆಗಿ ನೀ ಹಿಂಗ ಮಾಡಿದರ ಹೆಂಗೋ ತಮ್ಮ? ಕುದರೀ ನಾಲ ದೊಡ್ಡದೊ? ಮದಿವೀ ವ್ಯವಹಾರ ದೊಡ್ಡದೊ? ನಾಲ ಬಡಿಯುವವರು ನಾಳಿಗೆಂದರ ಎಲ್ಲಿ ಓಡಿ ಹೋಗತಾರೇನು? ಹುಚ್ಚರ‍್ಹಾಂಗ ಆಡಬ್ಯಾಡ. ಇಂದs ಹೋಗಿ ಬಾ.

ಹುಲಿಗೊಂಡ  : ನನಗ ಮದಿವೀ ವ್ಯವಹಾರ ತಿಳಿಯಾಣಿಲ್ಲ.

ಗೌಡ್ತಿ : ಜೋಡಿ ಯಾರನ್ನಾದರೂ ಕರಕೊಂಡ ಹೋಗು.

ಹುಲಿಗೊಂಡ : ಆ ಜೋಡಿದಾರ‍್ನs ಕಳಸರಿ.

ಪಾರೋತಿ : ಹೋಗಲಿ, ಬೀಗರ‍್ನs ಇಲ್ಲಿಗೆ ಕರಕೊಂಡಾದರೂ ಬಾ.

ಹುಲಿಗೊಂಡ : ಅದಕ್ಕ ನಾನs ಆಗಬೇಕಂತೇನು?

ಪಾರೋತಿ : ಸುತ್ತಿ ಸುತ್ತಿ ಯಾಕ ಮಾತಾಡ್ತಿ? ನನ್ನಿಂದ ಆಗೋದಿಲ್ವಾ – ಅನ್ನು, ಚಂಪೀನ ಮದಿವೀ ಮಾಡಿಕೊಡಾಕ ಮನಸ್ಸ ಹೆಂಗ ಬಂದೀತ ಹೇಳು; ದಿನಾ ತೆಕ್ಕಿ ತುಂಬ ಸುಖ ಕೊಡತಾಳ!

ಗೌಡ್ತಿ : ಪಾರೋತಿ ನೀ ಸುಮ್ಮಕಿರು. ಹುಲಿಗೊಂಡಾ, ಮನೀ ವ್ಯವಹಾರ ಅಂದಮ್ಯಾಲ ಮನಿಯವರು ಮಾಡಬೇಕೋ ಹೊರಗಿನವರು ಮಾಡಬೇಕೊ?

ಹುಲಿಗೊಂಡ  : ನಾ ಈ ಮನೆಯವನಲ್ಲ.

(ಸರ‍್ರನೆ ಹೋಗುವನು. ಗೌಡ್ತಿ ಬೆರಗು ಕೋಪದಿಂದ ಕೂರುವಳು. ಪಾರೋತಿ ಉಳಿದವರ ಆಶ್ಚರ್ಯ ಗಮನಿಸದೆ ಮಾತಾಡತೊಡಗುವಳು.)

ಪಾರತೋತಿ : ನೋಡ, ಹೆಂಗಿದ್ದ ನಾಡ ಬಡವ! ಒಂದು ಪವಾಸ ಎರಡುಪವಾಸ ಸಾಯತಿದ್ದ. ಏನೋ ನಾನs ದೊಡ್ಡ ಮನಸ್ಸ ಮಾಡಿ ಗೌಡಿಕೀ ಬಿರದ ಕೊಟ್ಟ ಮದಿವ್ಯಾದರ ತಲೀಮ್ಯಾಲ ಮೆಣಸ ಅರೀತೇನಂತಾನ! ಬೇಡಿ ಬಂದಿರಬೇಕ ಬಾ. ಬರಿಗೈಲೆ ಬಂದವನ ಕೈಯಾಗ ಆಸ್ತಿಪಾಸ್ತಿ ಕೊಟ್ಟರ ಉಣ್ಣಾಕ ಬರಬೇಕಲ್ಲ! ಯಾಕ? ಹಣ್ಯಾಗ ಬರದಿಲ್ಲ ನೋಡು.

(ಪಾರೋತಿ ಮಾತಾಡುತ್ತಿರುವಂತೆಯೇ ಹೊರಗೆ ಜನರ ಗಲಾಟೆ, – “ಎಳಕೊಂಬರ‍್ಯೋ ಬಿದ್ದಾಡೀನ” “ಓಡಿಬಂದಾಳ ಮತ್ತ” “ಬಿಡಬ್ಯಾಡ ಆ ರಂಡೀನ” ಮುಂತಾದ ಮಾತುಗಳು ಕೇಳಿಬರುತ್ತವೆ. ಪಾರೋತಿ ಮಧ್ಯೆ ತನ್ನ ಮಾತು ನಿಲ್ಲಿಸಬೇಕಾಗಿ ಬಂದುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತ ತನ್ನ ರೂಮಿಗೆ ಹೋಗಿ ಬಿದ್ದುಕೊಳ್ಳುವಳು. ದುರ್ಗಿ ಗೌಡ್ತಿಯ ಮನದಿಂಗಿತ ತಿಳಿದುಕೊಂಡು ಅವಳಿಗೆ ಪರದೆ ಅಡ್ಡಗಟ್ಟಿ ಹೊರಗೆ ಹೋಗುವಳು. ರಾಯಪ್ಪ ಮತ್ತು ಅವನ ಮಿತ್ರರು ಕೊಮಾಲಿಯನ್ನು ಎಳೆದು ತರುವಳು. ಚಂಪಿ ಈಗ ತನ್ನ ಹಾಸಿಗೆಯ ಮೇಲೆ ಆಯಾಸದಿಂದ ಒರಗುವಳು.)

ರಾಯಪ್ಪ  : ಎವ್ವಾ ಗೌಡ್ತಿ, ಶರಣ್ರಿ, ನಾ ರಾಯಪ್ಪ.

ಗೌಡ್ತಿ : ಮತ್ತೇನಪಾ? ಇನ್ನs ಬಾಳುವೇಕ ಹತ್ತಲಿಲ್ಲs ಇವಳು?

ರಾಯಪ್ಪ : ಬಾಳ್ವೆ ಮಾಡೋ ಹೆಂಗಸೇನ್ರಿ ಎವ್ವಾ ಇದು? ಈ ಹೆಂತಿನೂ ಸಾಕು, ಈ ಊರ ಬೀಗತನಾನೂ ಸಾಕು. ಸ್ವಂತ ಹಡದವ್ವಂತ ತಿಳಕೊಂಡ ಹೇಳ್ತೀನ್ರೆವ್ವಾ, – ನೀವು ಹೇಳಿ ಕಳಿಸಿದ ಮ್ಯಾಲ ಒಂದಿಷ್ಟು ದಿನ ದುಡಕೊಂಡ ಇದ್ಧಾಂಗ ಮಾಡಿದ್ಲು. ಹಾದಿಗಿ ಬಂದಳಂತ ನಾನೂ ಮೈಮರತೆ. ಇದ್ದಕ್ಕಿದ್ದಾಂಗ ಒಂದು ದಿನ ಹರೀವತ್ತ ನೋಡತೀನಿ, ’ಮನೀ’ ಎಲ್ಲಾ ಬಳಕೊಂಡ, ಯಾರನ್ನೋ ಕಟಕೊಂಡ ಪರ್ಯಾರಿ ಆಗ್ಯಾಳ! ಈಕೀನ ಪತ್ತೇ ಮಾಡಾಕ, ಖರೇ ಹೇಳ್ತೇನ್ರೆವ್ವಾ, ಜೋಡ ಕಾಲ್ಮರಿ ಸವದ ಹೋದುವು. ಮೊನ್ನಿ ನಿಮ್ಮ ಊರಿಗಿ ಬಂದಾಳಂತ ಸುದ್ದಿ ಗೊತ್ತಾಗಿ ಬಂದವು. ಬಂದ ನೋಡಿದರ ಆಗಲೇ ಬಸರೂ ಆಗ್ಯಾಳ!

ಗೌಡ್ತಿ : ಬಸರ!

ರಾಯಪ್ಪ  : ಆಕೀನs ಕೇಳ್ರಿ ಎವ್ವಾ. ಈಗ ನೀವs ನನ್ನ ಮಾನ ಕಾಪಾಡಬೇಕ್ರಿ ತಾಯೀ.

ಗೌಡ್ತಿ : ವಿಚಾರ ಮಾಡೋಣು, ತುಸು ತಡೀಯಪ.

ರಾಯಪ್ಪ : ಏನ ವಿಚಾರ ಬ್ಯಾಡ, ಗಿಚಾರ ಬ್ಯಾಡ, – ನನ್ನ ಮನ್ಯಾಗಿನ ದಾಗೀನ ತಂದಾಳ ಅವನ್ನಷ್ಟ ಕೊಡಸರಿ; ಸೋಡ ಪತ್ರ ಮಾಡಿಸಿ ಬಿಡರೆವ್ವ, ಅಷ್ಟs ಸಾಕು.

ಗೌಡ್ತಿ : ನಿನ್ನ ಗಂಡ ಹೇಳಿದ್ದ ಖರೇ ಏನs ಕೊಮಾಲಿ?

ಕೊಮಾಲಿ : ಹೌಂದು.

ಗೌಡ್ತಿ : ಬಸರಾದದ್ದು ಖರೇ ಏನ?

ಕೊಮಾಲಿ : ಹೌದು.

ಗೌಡ್ತಿ : ಗಂಡನಿಗೊ? ಮಿಂಡನಿಗೊ?

ಕೊಮಾಲಿ : ಮಿಂಡರಿಗೆ.

ಗೌಡ್ತಿ : ಮಾಡೋದಲ್ಲದs ಹಾದರ ಮಾಡಿದೇ ಅಂತ ಹೇಳೋವಷ್ಟ ಧೈರ್ಯ ಬಂತೇನs ನಿನಗೆ? ನಿನ್ನ ಮಣಿಸುವಂಥವರು ಈ ಊರಾಗ ಯಾರೂ ಇಲ್ಲಂದ ತಿಳದೇನ? ನೀ ಏನ ಮಾಡೀಯೇ, ನಿನ್ನ ಸೊಂಟದಾಗಿನ ಬೆಂಕಿ ಹಾಂಗ ಮಾಡಸೈತಿ! ಗಂಡನ ದಾಗೀನ ಕೊಡು, ಈ ಊರಾಗೂ ಇರಬ್ಯಾಡ, ಎಲ್ಲಿ ಹಾಳಾಗಿ ಹೋಗ್ತಿ ಹೋಗು. ಈ ಊರಾಗಿನ ಯರಾದರೂ ತುತ್ತ ಅನ್ನ ಹಾಕಿದರೆ, ಅವರನ್ನ ಸುಡತೀನಿ. ಹೊರಬೀಳು.

(ಗೌಡ್ತಿಯ ಮಾತನ್ನು ಕೇಳಿ ಚಂಪಿ ಭಯಗೊಂಡು ಥಟ್ಟನೆ ಎದ್ದುನಿಂತು ತನ್ನ ಹೊಟ್ಟೆ ಹಿಡಿದುಕೊಂಡು “ಬ್ಯಾಡ ಬ್ಯಾಟ!” ಎಂದು ಕಿರುಚುತ್ತಾಳೆ. ತಕ್ಷಣ ತಾನು ಚೀರಿದ್ದು ಅರಿವಾಗಿ “ಬ್ಯಾಡ ಬ್ಯಾಡ” ಎಂದು ದನಿಯಿಲ್ಲದೆ ಬರೀ ತುಟಿಯಲ್ಲೇ ಗೊಣಗುತ್ತ ಮತ್ತೆ ಮಂಚದ ಮೇಲೆ ಒರಗುತ್ತಾಳೆ. ಹೊರಗಿನವರಿಗೆ ಇವಳು ಕಿರುಚಿದ್ದು ಕೇಳಿಸಿ, ಎಲ್ಲರೂ ಆ ಕಡೆ ನೋಡುತ್ತಾರೆ. ಗೌಡ್ತಿ ತಕ್ಷಣ ಅದನ್ನು ಗಮನಿಸಿ ಹೊರಗೆ ಕಳಿಸುವ ತರಾತುರಿಯಲ್ಲಿದ್ದಾಗ)

ಕೊಮಾಲಿ : ಗಂಡಂದರ ಇವನೊಬ್ಬನs ಅಲ್ಲ. ಊರಂದರ ಇದೊಂದs ಅಲ್ಲ.

(ಎನ್ನುತ್ತ ಹೋಗುವಳು. ಗೌಡ್ತಿಗೆ ಇನ್ನೂ ಕೋಪ ಬರುವುದು.)

ಗೌಡ್ತಿ : ಏ ಹಳಬಾ, ಪಂಚರಿಗಿ ಹೇಳು, – ಈ ರಂಡೀನ ಈಗಿಂದೀಗ ಊರ ಬಿಟ್ಟ ಹೊರಗ ಹಾಕಂತ.

ಹಳಬ : ಆಗಲೆವ್ವ.

ಗೌಡ್ತಿ : ಹೋಗ್ರೆಪ ಇನ್ನ.

(ಎಲ್ಲರೂ ಹೊರಗೆ ಹೋಗುವರು. ಗೌಡ್ತಿ ಸಿಟ್ಟಿನಿಂದ ಪರದೆ ಹರಿದು ಚಂಪಿಯ ರೂಮಿನತ್ತ ಖೆಕ್ಕರಿಸಿ ನೋಡುತ್ತ)

ಗೌಡ್ತಿ : ಏ ದುರ್ಗಿ.

ದುರ್ಗಿ : ಎವ್ವಾ.

ಗೌಡ್ತಿ : ಈಗೀಂದೀಗ ಬೀಗರ ಊರಿಗೆ ಹೋಗು. ಇಪ್ಪತ್ತೈದಲ್ಲ, ಐವತ್ತ ಸಾವಿರ ವರದಕ್ಷಿಣೆ ಕೇಳಿದರೂ ಒಪ್ಪಿಕೊ. ಎಂದ ಮೊದಲನೇ ಮುಹೂರ್ತ ಐತಿ ನೋಡು, ಅಂದs ಮದಿವಿ! ಮದಿವೀ ಇಲ್ಲೇ ನಮ್ಮೂರ ಶಿವಲಿಂಗನ ಗುಡ್ಯಾಗಂತ ಹೇಳು. ಮುಹೂರ್ತನ ನಾಳೇ ಇದ್ದರ ದಿಬ್ಬಣ ನಿನ್ನ ಜೋಡೀನs ಕರಕೊಂಬಾ. ತಿಳೀತಿಲ್ಲ?

ದುರ್ಗಿ : (ಚಿಂತೆಯಿಂದ) ಹೂನ್ರಿ.

ಗೌಡ್ತಿ : ಮತ್ತ ಹೊರಡೀಗ.