(ರಾತ್ರಿ. ಪಾರೋತಿ ತನ್ನ ರೂಮಿನಲ್ಲಿ ಮಲಗಿದ್ದಾಲೆ. ಚಂಪಿ ತನ್ನ ರೂಮಿನಲ್ಲಿ ಶೃಂಗಾರಗೊಳ್ಳುತ್ತಿದ್ದಾಳೆ. ಶೀಲಿಯೂ ಅಷ್ಟಿಷ್ಟು ಶೃಂಗಾರಗೊಂಡು ತನ್ನ ರೂಮಿನಿಂದ ಮೆಲ್ಲಗೆ ಕೆಳ ಬಂದು ಚಂಪಿಯ ರೂಮಿನ ಹೊರಬದಿಯಲ್ಲಿ ನಿಲ್ಲುತ್ತಾಳೆ.)

ಪಾರೋತಿ : ದುರ್ಗೀ ಇವ ಎಲ್ಲಿ ಹೋಗ್ಯಾನಂತ ನಿನಗೇನಾರ ಗೊತ್ತೈತೇನs?

ದುರ್ಗಿ : (ಒಳಗಿನಿಂದ) ಇಲ್ಲs ಎವ್ವಾ. ಯಾಕs? ನಿನಗೇನೂ ಹೇಳಿಲ್ಲೇನ?

ಪಾರೋತಿ : ನನ್ನ ಲೆಕ್ಕದಾಗ ಇಟ್ಟಿದ್ದರಲ್ಲೇನು? ನೋಡಿದಾಗೊಮ್ಮಿ ನನ್ನ ಹೆಸರ ಸೈತ ಮರತವರ‍್ಹಾಂಗ ಮಾಡತಾನ.

ದುರ್ಗಿ : (ಒಳಗಿನಿಂದಲೇ) ಊರ ಮಂದಿ ಉಂಡಮಲಗ್ಯಾರಲ್ಲs ಎವ್ವಾ, ಎಲ್ಲಿ ಹೋಗಿದ್ದಾನು?

ಪಾರೋತಿ : ಯಾ ಕಾಡಿನಾಗ ಕುದರೀ ಹತ್ತಿಕೊಂಡ ಅಡ್ಡ್ಯಾಡತಾನೊ!

ಶೀಲಿ : (ಪಾರೋತಿಗೆ ಕೇಳಿಸುವಂತೆ)

ನಿನಗೇನಾರ ಮಾವ ಹೇಳ್ಯಾನೇನನs ಚಂಪಿ?

ಚಂಪಿ : (ಜೋರಿನಿಂದ) ನನಗ್ಯಾಕ ಹೇಳ್ತಾನ?

ಶೀಲಕ್ಕ : ದಿನಾ ತೋಟಕ್ಕ ಊಟಾ ಒಯ್ತಿಯಲ್ಲ, ಅಲ್ಲಿ ಹೇಳ್ಯಾನೇನು?-ಅಂದೆ.

ಚಂಪಿ : ದೀಡೀ ಮಾತಾಡಿದರ ನಾಲಿಗಿ ಕೀಳತೀನಿ.

ಶೀಲಕ್ಕ : ಇಲ್ಲಂದರ ಇಲ್ಲಂತ ಹೇಳಲ್ಲ. ಅದಕ್ಯಾಕಷ್ಟ ಸಿಟ್ಟ ಮಾಡ್ತಿ? ಏನೋ ಆಗಾಗ ಅವನ ಕುದರೀ ಹತ್ತತ್ತೀ, ಸಣ್ಣ ಸೊಸಿ ಅಂತ ಅವಗೂ ನಿನ್ನ ಮ್ಯಾಲ ಮಾಯೇ ಭಾಳ ಐತಿ, ನಿನಗಾದರೂ ಹೇಳಿದ್ದಾನು, ಅಂತ ಅಂದುಕೊಂಡ್ನೆವಾ.

ಚಂಪಿ : (ಇವಳೂ ಅದೇ ವ್ಯಂಗ್ಯದಿಂದ)

ನಮಗ ಎಷ್ಟಂದರೂ ಕುದರೀ ಬೆನ್ನ ಗೊತ್ತವಾ. ನೀ ಅದರ ಲದ್ದೀ ಸೈತ ಕಂಡಾಕಿ. ಯಾಕಂದರ ನಾಕೈದ ಬರೆ ಒದಿಸಿಕೊಂಡಿದೀ ನೋಡು.

(ಶೀಲಿಗಿ ಇದರಿಂದ ನೋವಾಗುತ್ತದೆ. ಇಲ್ಲೀತನಕ ಪಾರೋತಿಗೂ ಕೇಳಿಸುವಂತೆ ಮಾತಾಡುತ್ತಿದ್ದ ಚಂಪಿ ಈಗ ಮೆಲ್ಲಗೆ ಶೀಲಿಗೆ ಮಾತ್ರ ಕೇಳಿಸುವಂತೆ)

ಸಾಕ? ಇನ್ನಷ್ಟ ಹೇಳಲಾ?

ಶೀಲಕ್ಕ : ಥೂ ಹಲ್ಕಟ್ಟ ರಂಡೆ!

ಪಾರೋತಿ : ಶೀಲೀ, ಕೊಮಾಲಿ ಮತ್ತ ಓಡಿಬಂದಾಳಂತ, ಖರೇ ಏನ?

ಶೀಲಕ್ಕ : ಅದೇನೋ ನನಗ್ಗೊತ್ತಿಲ್ಲವಾ.,

ಚಂಪಿ : (ಮೆಲ್ಲಗೆ) ಗೊತ್ತಿಲ್ಲ್ಯಾಕಂತಿ? ಮಧ್ಯಾಹ್ನದಾಗ ಭೇಟ್ಯಾಗಿದ್ದೀ, (ಜೋರಿನಿಂದ) ಹೇಳ ಶೀಲಕ್ಕಾ, ಕೊಮಾಲಿ ಮಾಡೋದನ್ನೆಲ್ಲಾ ಕದ್ದ ಕದ್ದ ನೋಡತಾ ಬೆರಳ ಸೀಪತಿ, ಹೇಳಲ್ಲ.

ದುರ್ಗಿ : ಆಕೀ ಸುದ್ದಿ ಏನಂತ ಮಾತಾಡ್ತೀರಿ, ನಿಮ್ಮವ್ವ ಬರೋ ಯಾಳೇ ಆತು, ಇನ್ನ ಮಲಗಬಾರದ?

ಪಾರೋತಿ : ಕದ್ದ ಕದ್ದ ಏನ ನೋಡತಾಳು?

(ಶೀಲಿಗೆ ಆತಂಕವಾಗುತ್ತದೆ. ಚಂಪಿಯ ಬಾಯಿ ಹೇಗೆ ನಿಲ್ಲಿಸಬೇಕೆಂದು ತಿಳಿಯದೆ ಒದ್ದಾಡುತ್ತಾಳೆ.)

ಚಂಪಿ : ಅದs ಕೊಮಾಲಿ ಮಧ್ಯಾಹ್ನ ಮನೀಗಿ ಬಂದು ಶೀಲಕ್ಕಗ ಎಲ್ಲಾ ಕತಿ ಮಾಡಿ ಹೇಳಿ ಹೋಗ್ಯಾಳ.

ಪಾರೋತಿ : ಹೌಂದೇನs ಶೀಲಿ? ಮಧ್ಯಾಹ್ನ ಕೊಮಾಲಿ ಬಂದಿದ್ಲ?

ಶೀಲಕ್ಕ : ಹೌಂದು.

ಪಾರೋತಿ : ಮತ್ತ ನನಗೇನೂ ಗೊತ್ತಿಲ್ಲಂದಿ?

ದುರ್ಗಿ : ತಂಪೊತ್ತಿನಾಗ ಇದೇನ ಸುದ್ದೀ ಹೇಳತೀಯೆ ಚಂಪಕ್ಕ?

ಚಂಪಿ : ಎಷ್ಟ ಮಜಾ ಐತಿ ಕತಿ ಅದು! ಕೊಮಾಲಿ ಗಂಡನ ಜೋಡಿ ಮಲಗಿದ್ದಳಂತ. ಗಂಡಗ ನಿದ್ದಿ ಹತ್ತಿತ್ತಂತ ಅಷ್ಟರಾಗ ಗಲ್ಲದ ಮ್ಯಾಲ ಹೂ ಬಿತ್ತಂತ. ಅವ್ ಇದೇನ?, -ಅಂತ ನೊಡತಾಳ: ನಮ್ಮೂರ ಹುಡುಗೋರೆಲ್ಲಾ ಕಿಡಿಕ್ಯಾಗ ನಿಂತಾರಲ್ಲ! ಈಕಿಗೂ ಮನಸ ತಡ್ಯಾಕಾಗದs ಬಂದಳಂತ. ಮತ್ತೇನ ಕೇಳ್ತಿ? -ಹುಡುಗೋರೆಲ್ಲಾ ಈಕೀನ್ನ ಎತ್ತಿಕೊಂಡ ಕಾಡಿಗಿ ಹೋದರಂತ. ಆಮ್ಯಾಲ ಕಾಡಿನಾಗೇನ ಮಜಾ ಅಂತೀ… ಮುಂದಿಂದ ನೀ ಹೇಳs ಶೀಲಕ್ಕಾ….

ದುರ್ಗಿ : ಏನ ಕೇಳ್ತಿ ಮಲಕ್ಕೊಳ್ಳಾ ಎವ್ವಾ. ಮನೆತನಸ್ಥ ಹುಡಿಗೇರು ಮಾತಾಡೋ ಮಾತs ಇವೆಲ್ಲಾ?

ಪಾರೋತಿ : ಇದೆಲ್ಲ ನಿನಗ್ಹೆಂಗ ತಿಳೀತs ಚಂಪಿ?

ಚಂಪಿ : ಶೀಲಕ್ಕೆ ಹೇಳಿದ್ಲು. ಅಲ್ಲೇನs ಶೀಲಕ್ಕಾ?

ಪಾರೋತಿ : ಎಲ್ಲಾ ಸುಳ್ಳು. ಏನೇನೋ ಹುಟ್ಟಿಸಿಕೊಂಡ ಹೇಳತಾಲ.

ಪಾರೋತಿ : ಥೂ ರಂಡೇರ್ಯಾ! ನಿಮ್ಮ ರಗತದ ಗುಣ ಎಲ್ಲಿಹೋದೀತ ಹೇಳು. ಅವ್ವ ಬರಲಿಲ್ಲೇನ ಇನ್ನೂ?…

ದುರ್ಗಿ : ನಿನ್ನ ಚಿಂತಿ ನಿನಗs ಸಾವಿರದಾವ, ಮತ್ತೊಂದು ಯಾಕ ಹಚ್ಚಿಕೊಳ್ತಿ? ಏನಿದ್ದರೂ ನಿಮ್ಮವ್ವ ನೋಡಿಕೊಳ್ತಾಳ; ನೀ ಸುಮ್ಮನ ಮಲಗು. ಬೆಳೆದ ದೊಡ್ಡವರಾದರೂ ಇನ್ನs ಹುಡುಗಾಟಿಕಿ ಬಿಟ್ಟೇ ಇಲ್ಲ, ಇಬ್ಬರೂ. ಎಂದ ಸಮ ಬುದ್ಧಿ ಬರತೈತೋ, ದೇವರs ಬಲ್ಲ.

(ಶೀಲಿ ಮಲಗುವುದಕ್ಕೆ ತನ್ನ ರೂಮಿಗೆ ಹೊರಡುವಳು. ದುರ್ಗಿ ಬಂದು ಪಾರೋತಿಗೆ ಔಷಧ ಕುಡಿಸಿ, ದೀಪ ಆರಿಸಿ ಮಲಗುವುದಕ್ಕೆ ಹೋಗುವಳು. ಪಾರೋತಿ ಹೊರಳಿ ಮಲಗುವಳು. ಎಲ್ಲ ನಿಶ್ಯಬ್ದವಾದುದನ್ನು ಗಮನಿಸಿ ಚಂಪಿ ತನ್ನ ರೂಮಿನಲ್ಲಿ ಕನ್ನಡಿ ಮುಂದೆ ನಿಂತು ಇನ್ನಷ್ಟು ಶೃಂಗಾರವಾಗುತ್ತಿದ್ದಾಳೆ. ಆಗಾಗ ಕಿಡಕಿಯಿಂದ ಹೊರಗೆ ಇಣಕುತ್ತಿದ್ದಾಳೆ. ಶೀಲಕ್ಕ ತನ್ನ ರೂಮಿನಲ್ಲಿ ಉರಿಯುತ್ತಿರುವ ದೀಪ ಆರಿಸಿ ಮೆಲ್ಲಗೆ ಹೊರಬರುತ್ತಾಳೆ. ಕೆಲವು ಮೆಟ್ಟಿಲು ಇಳಿಯುವಷ್ಟರಲ್ಲಿ ಹೊರಗಿನಿಂದ ಗೌಡ್ತಿ ಬರುತ್ತಿರುವುದು ಗೊತ್ತಾಗಿ ಮತ್ತೆ ಹಿಂದೆ ಸರಿಯುತ್ತಾಳೆ. ಗೌಡ್ತಿ ಬಂದು ತುಸು ಯೋಚಿಸಿ ಅಲ್ಲೇ ತೂಗು ಹಾಕಿದ್ದ ಬಂದೂಕು ತೆಗೆದುಕೊಳ್ಳುತ್ತಾಳೆ.)

ಗೌಡ್ತೀ : ದುರ್ಗೀ.

ದುರ್ಗಿ : (ಏಳುತ್ತ) ಏನ್ರವ್ವಾ?

ಗೌಡ್ತಿ : ಯಾರೋ ನಮ್ಮ ಬಣಿವೀ ಸುತ್ತ ನಡದಾಡಿಧಾಂಗಿತ್ತು. ನೀ ಏನಾರ ನೋಡಿಯೇನು? ನಾಕೈದ ದಿನ ಹಿಂಗಾತು…

ದುರ್ಗಿ : ಇಷ್ಟದಿನ ನನ್ನ ಕಣ್ಣಿಗ್ಯಾರೂ ಬಿದ್ದೇ ಇಲ್ಲರಿ.

ಗೌಡ್ತಿ : ಈ ಹುಲಿಗೊಂಡ ಎಲ್ಲಿ ಹೊಗಿದ್ದಾನು? ಮನ್ಯಾಗ ಗಂಡಸಿದ್ದೂ ಇಲ್ಲಧಾಂಗಾಗೇತಿ. ಹೋಗಿ ನೋಡಿ ಬರೋಣು, ಬಾಲ.

(ಗೌಡ್ತಿ ಹೊರಡುವಳು. ದುರ್ಗಿಯೂ ಬೆನ್ನು ಹತ್ತುವಳು. ಇಬ್ಬರೂ ಹೊರಗೆ ಹೋಗುತ್ತಲೂ ಶೀಲಕ್ಕ ಮೆಲ್ಲಗೆ ಕೆಳಗಿಳಿದು ಬರುವಳು. ಪಾರೋತಿಯ ರೂಮಿನಲ್ಲಿ ಹಣಕಿ, ಅವಳು ಮಲಗಿದ್ದು ಖಾತ್ರಿಯಾಗಿ ಚಂಪಿಯ ರೂಮಿಗೆ ಹೋಗುವಳು. ಗೌಡ್ತಿ ಇರೋತನಕ ಮಲಗಿದಂತೆ ನಟಿಸುತ್ತಿದ್ದ ಚಂಪಿ ಎದ್ದು ಕಿಟಕಿಯಲ್ಲಿ ಹಣಿಕಿ, ಹೊರಡುವ ಸಿದ್ಧತೆಯಲ್ಲಿದ್ದಾಗ ಶೀಲಕ್ಕ ಬಾಗಿಲಲ್ಲಿ ಕಾಣಿಸುತ್ತಾಳೆ. ಮೊದಮೊದಲು ಪಾರೋತಿಗೆ ಕೇಳಿಸದಂತೆ ಮಾತಾಡುತ್ತಿದ್ದರೂ ಆತಂಕ ಹೆಚ್ಚಾದಂತೆ ಇಬ್ಬರ ದನಿಗಳೂ ಸಾಮಾನ್ಯ ಮಟ್ಟಕ್ಕೆ ಏರುತ್ತವೆ.)

ಶೀಲಕ್ಕ : ಏನು! ಮಲಗಬೇಕಾದರೂ ಇಷ್ಟ ಶಿಂಗಾರ ಆಗಬೇಕ? ಓಹೊ! ಕನಸಿನಾಗೂ ಚಂದ ಕಾಣಬೇಕಲ್ಲ, ಅದಕ್ಕs ಇರಬೇಕು.

ಚಂಪಿ : ನನ್ನ ಹಾಂಗ ನೋಡಬ್ಯಾಡ, ನೋಡಿದರ ನಿನ್ನ ಮುಖದ ಮ್ಯಾಲ ವಾಂತೀ ಮಾಡಿಕೋತೀನಿ.

ಶೀಲಕ್ಕ : ನಿನ್ನಿ ರಾತ್ರಿ ಎಷ್ಟೋತ್ತಿಗೆ ಮಲಿಗಿದಿ?

ಚಂಪಿ : ಯಾಕ?

ಶೀಲಕ್ಕ : ರಾತ್ರಿ ಹಿತ್ತಲಾಗ ಕುದರೀ ಸಪ್ಪಳ ಕೇಳಿಸ್ತು.

ಚಂಪಿ : ಕುದರಿ ಹಗ್ಗಾ ಹರಕೊಂಡು ಓಡ್ಯಾಡಿರಬೇಕು.

ಶೀಲಕ್ಕ : ಅದರ ಮ್ಯಾಲ ಯಾರೋ ಕುಂತಿದ್ದರು!

ಚಂಪಿ : ನಿನಗ ಹ್ಯಾಂಗ ಗೊತ್ತಾಯ್ತು?

ಶಿಲಕ್ಕ : ನಾ ನೋಡಿದೆ.

ಚಂಪಿ : ಯಾರು?

ಶೀಲಕ್ಕ : ಮಾವ.

ಚಂಪಿ : (ಶೀಲಕ್ಕನ ಜುಟ್ಟು ಹಿಡಿಯುತ್ತ)

ಹುಚ್ಚರಂಡೆ ಸುಳ್ಳ್ಯಾಕ ಹೇಳ್ತಿ?

(ಇಬ್ಬರೂ ತುಸು ಹೊತ್ತು ಕಿತ್ತಾಡುವರು. ಶೀಲಕ್ಕ ಬಿಡಿಸಿಕೊಂಡು)

ಶಿಲಕ್ಕ : ಸುಳ್ಳ? ಹೋಗಿ ಕಿಡಿಕ್ಯಾಗ ನೋಡು.

(ಚಂಪಿ ಕಿಡಿಕಿಯಲ್ಲಿ ನೋಡಿ ತುಡುಗು ಸಿಕ್ಕಿದ್ದಕ್ಕೆ ಆತಂಕಗೊಳ್ಳುವಳು.)

ಶೀಲಕ್ಕ : ಯಾರಿದ್ದಾರ ಹೇಳಲ್ಲ.

ಚಂಪಿ : ಹೌದು, ಮಾವನs

(ಶೀಲಕ್ಕ ಜಗಳದಿಂದ ಅಸ್ತವ್ಯಸ್ತವಾಗಿರುವ ತನ್ನ ಉಡುಪನ್ನು ಸರಿಪಡಿಸಿಕೊಳ್ಳುವಳು. ಹೊರಗೆ ಪಡಸಾಲೆಯಲ್ಲಿ ಗೌಡ್ತಿ. ಅವಳ ಹಿಂದಿನಿಂದ ದುರ್ಗಿ ಬರುವರು.)

ಚಂಪಿ : ಇಷ್ಟುದಿನ ಕೊಮಾಲಿ ಏನ ಮಾಡತಾಳಂತ ಕದ್ದಕದ್ದ ನೋಡತಿದ್ದಿ. ಈಗ ನನಗೂ ಗಂಟ ಬಿದ್ದೇನs ಬೇತಾಳ? ನಾಕೈದ ಸಲ ನಿನ್ನ ಕನಸಿನಾಗ ನೋಡಿದೆ. ನಾಕೈದ ಸಲsನೂ ಸತ್ತಿದ್ದಿ. ಮತ್ತ ಜೀವಂತ ಎದ್ದ ಬಂದ ನನ್ನ ಬೆನ್ನ ಯಾಕ ಕಾಯತೀಯೆ?

ಶೀಲಕ್ಕ : ಯಾಕ ಗೊತ್ತಿಲ್ಲಾ; ಮನಿತನದ ಮಾನಾ ಕಾಯಾಕ. ಹುಲಿಗೊಂಡ ಮಾವ, ನಮ್ಮಿಬ್ಬರ ಅಕ್ಕನ ಗಂಡ, ನೆಪ್ಪಿರಲಿ.

ಚಂಪಿ : ನಿನ್ನಷ್ಟs ನನಗೂ ಗೊತ್ತೈತಿ.

ಶೀಲಕ್ಕ : ಗೊತ್ತಿದ್ದಿದ್ದರ ಹಿಂಗ ಮಾಡತಿರಲಿಲ್ಲ.

ಚಂಪಿ : ದೇವರೂ, ನಿನ್ನ ಕುರುಡೀನ ಮಾಡಿದ್ದರ ಎಷ್ಟ ಚೆಲೋ ಇತ್ತು, ಗೊತ್ತಾ?

ಶೀಲಕ್ಕ : (ಮೈಮೇಲಿನ ಗಾಯಗಳನ್ನು ಸಾವರಿಸಿಕೊಳ್ಳುತ್ತ)

ಮಾವನ್ಹಾಂಗs ಎಷ್ಟ ಕಸುವಿದ್ದೀಯೆ?

ಚಂಪಿ : ಮಾವನ ಕಸುವು ನಿನಗೂ ಗೊತ್ತಾಗೇತಿ!…

ಶೀಲಕ್ಕ : ಬಾಯ ಮುಚ್ಚದಿದ್ದರ ನೀ ಮಾಡೋದನ್ನೆಲ್ಲಾ ಅವ್ವಗ ಹೇಳ್ತೀನ್ನೋಡು.

ಚಂಪಿ : ಹೇಳ ಹೋಗs. ಮೊನ್ನಿ ನೀ ಮಾವನ ಕೆಳಗ ಉಳ್ಳಾಡಿ ಬಂದದ್ದ ನನಗ ಗೊತ್ತಿಲ್ಲಂದಿ? ಮೈಗೆಲ್ಲ ಕುದರಿ ಲದ್ದಿ ಹತ್ತಿತ್ತು….

ಶೀಲಕ್ಕ : ಥೂ ದರಿದ್ರ ರಂಡೆ!

(ಇದನ್ನು ಕೇಳಿ ಗೌಡ್ತಿ ಕುಸಿಯುವಳು. ಮಾತಿಲ್ಲದೆ ದುರ್ಗಿ ಅವಳ ಸಹಾಯಕ್ಕೆ ಒದಗುವಳು.)