ಈ ನಾಟಕವನ್ನು ಬರೆದು ಬಹುದಿನಗಳಾದವು. ಈ ಮಧ್ಯೆ ಇದನ್ನು ಚಿತ್ರೀಕರಿಸಿದ್ದು ಆಯಿತು. ಚಿತ್ರವಾದ ಮೇಲೆ ಮತ್ತೆ ಕೆಲವು ಬದಲಾವಣೆಗಳನ್ನು ಮಾಡಿ ಇದೀಗ ಹೊರತರುತ್ತಿದ್ದೇನೆ. ಇದಕ್ಕೆ ಮೂಲಪ್ರೇರಣೆ ಲೋರ್ಕಾ ಅವರ ’ದಿ ಹೌಸ್‌ಆಫ್ ಬರ್ನಾಡ್‌ಆಲ್ಬಾ’ ಎಂಬ ನಾಟಕ. ಆದರೆ ಅದು ಬೇರೆ, ಇದೇ ಬೇರೆ, ದರ್ಶನದಲ್ಲೂ ಮತ್ತು ನಿರೂಪಣೆಯಲ್ಲೂ. ಲೋರ‍್ಕಾ ಅವರಿಗೆ ನನ್ನ ಪ್ರಥಮ ವಂದನೆಗಳು ಸಲ್ಲಬೇಕು.

ಚಿತ್ರನೋಡಿ ಅದರ ಕೊರತೆಗಳನ್ನು ತಿಳಿಸಿ ನಾಟಕ ಈಗಿನ ಸ್ಥಿತಿಗೆ ಬರುವಂತೆ ಮಾಡಿದ ವೈಎನ್.ಕೆ. ಅವರಿಗೆ, ಚಿತ್ರೀಕರಿಸಿದ ವ್ಹೀಲ್ ಪ್ರೊಡಕ್ಷನ್ಸ್‌ ನಿರ್ಮಾಪಕ ಸ್ನೇಹಿತರಿಗೆ, ಸುಂದರ ಮುಖಪುಟ ಬರೆದುಕೊಟ್ಟ ಆತ್ಮೀಯರಾದ ಚಂದ್ರಕಾಂತ ಕುಸನೂರ ಅವರಿಗೆ, ’ಈ ನಾಟಕದ ಬಗೆಗೆ’ ಬರೆದ ಬೈರಮಂಗಲ ರಾಮೇಗೌಡರಿಗೆ, ಪ್ರಕಾಶಪಡಿಸುತ್ತಿರುವ ಸುಬ್ಬಣ್ಣನವರಿಗೆ, ಮುದ್ರಿಸಿದ ಬಾ.ಕಿ.ನ. ಅವರಿಗೆ ವಂದನೆಗಳು.

ಚಂದ್ರಶೇಖರ ಕಂಬಾರ