(ಮಾರನೇ ದಿನದ ಮಧ್ಯಾಹ್ನದ ಸಮಯ. ಗೌಡ್ತಿ, ದುರ್ಗಿ ಪಡಸಾಲೆಯಲ್ಲಿದ್ದಾರೆ.)

ಗೌಡ್ತಿ : ಹುಲಿಗೊಂಡ ಈಗೆಲ್ಲಿದ್ದಾನ?

ದುರ್ಗಿ : ಕುದರೀ ಕೊಟ್ಟಿಗ್ಯಾಗ ಕುಂತಾರ‍್ರಿ.

ಗೌಡ್ತಿ : ಊಟ ಮಾಡ್ಯಾನಿಲ್ಲ?

ದುರ್ಗಿ : ಇಲ್ಲರಿ.

ಗೌಡ್ತಿ : ಕುದುರೀ ಬೆನ್ನಬಿಟ್ಟ ಇಳಧಾನಂಧಾಗಾಯ್ತು.

ದುರ್ಗಿ : ಕುದರೀ ಭಾಳ ಕಟದ್ದಾರ ಕಾಣತೈತಿ, ಬಾಯಲೆ ಒಂದs ಸವನ ಬುರುಗ ಬೀಳಾಕ ಹತ್ತೇತಿ. ಕಣ್ಣಂತೂ ಕೆಂಡಧಾಂಗ ಉರದ ಉರದ ಉದರಿ ಬೀಳಾವರ‍್ಹಾಂಗ ಕಾಣತಾವ.

ಗೌಡ್ತಿ : ಅದೊಮದ ಕುದರಿ ಎಂದ ಸಾಯತೈತೊ!

ದುರ್ಗಿ : ನೀವೂ ಒಂದ ಸಲ ಊಟಕ್ಕ ಕರೀತೀರೇನ?

ಗೌಡ್ತಿ : ಹಸಿದಾಗ ತಿಂದಾನೇಳು. ಕೊಮಾಲೀನ ಯಾರು ಕರತಂದರು?

ದುರ್ಗಿ : ನಾನsರಿ.

ಗೌಡ್ತಿ : ನಿನಗ್ಯಾರು ಹೇಳಿದ್ದರು?

ದುರ್ಗಿ : ಯಾರಿಲ್ಲರಿ.

ಗೌಡ್ತಿ : ನಾಯಿಗಿ ಹೇಳಿದರ, ನಾಯಿ ತನ್ನ ಬಾಲಕ್ಯ ಹೇಳಿತಂತ. ಮನಿಗೆಲಸಾ ಮಾಡಾಕಂತs ನಿನ್ನ ಇಟಕೊಂಡರ ನಿನ್ನ ಕೈಯಾಗೊಂದ ಆಳ ಬ್ಯಾರೇ ಬೇಕಾಯ್ತ?

ದುರ್ಗಿ : ಕಾಳ ಭಾಳಿದ್ದುವರಿ.

ಗೌಡ್ತಿ : ಎಂಟ ದಿನ ಆಗಲಿ, ನೀನs ಹಸನ ಮಾಡಬೇಕಿತ್ತು. ಈ ಮನ್ಯಾಗ ನನ್ನ ಮಾತ ನಡೀಬೇಕೊ? ನಿನ್ನ ಕಾರಭಾರ ನಡೀಬೇಕೊ? ನಾ ಅತ್ಲಾಗ ಬೀಗವ್ನ ಕಳಸಾಕಂತ ಹೋದರ ಇತ್ಲಾಗ ಆಕೀನ್ನ ಕರಕೊಂಬಂದ ಕುಂತಿದಿ; ತಿಳಿಬಾರದ?

ದುರ್ಗಿ : ಆಕಿಗೇನೂ ಕೂಲಿ ಕೊಟ್ಟಿಲ್ಲರಿ. ತಂಗಳನ್ನ ಹಾಕಿದೆ, ಅಷ್ಟ.

ಗೌಡ್ತಿ : ತಂಗಳನ್ನಾನೂ ಕೊಟ್ಟೆ; ಚಾಡೀ ಹೇಳಾಕ ಸುದ್ದೀನೂ ಕೊಟ್ಟಿ.

ದುರ್ಗಿ : ಈ ಮನೀ ಗುಟ್ಟಿನಾಗ ನಂದೂ ಪಾಲೈತಿ. ನಾ ಯಾಕ ಹೇಳೇನ್ರಿ ಎವ್ವಾ?

ಗೌಡ್ತಿ : ನೀ ಯಾಕ ಹೇಳಬೇಕ? ಆಕಿಗಿ ಕಣ್ಣಿಲ್ಲಾ?

ದುರ್ಗಿ : ಕಾಣಾಕ ಆಕೀನ್ನ ಒಳಗ ಬಿಟ್ಟೇ ಇಲ್ಲರಿ.

ಗೌಡ್ತಿ : ಸಾಲದ? ಬೀಗರ ಬಂದ ಒಳಗ ಕುಂತಾರ. ಹುಲಿಗೊಂಡ ಹೊರಗ ಕುದರೀ ಓಡ್ಯಾಡ್ಸಾಕ ಹತ್ಯಾನs. ಇಷ್ಟ ಕಾಣದ? ಇನ್ನ ತಗೊಳ್ಳವಾ: ’ಬೀಗರು ಒಳಗ ಕುಂತಾಗ, ಮನೀ ಅಳಿಯಾ ಹೊರಗ ಕುದರೀ ಕಟೀತಿದ್ದರೇss’ ಅಂತ ಡಂಗರಾ ಸಾರತಾಳ. ಈ ಊರ ಮಂದಿ ಬಾಯಾಗ ನಾಲಿಗೀ ಇಟಕೊಂಡಿಲ್ಲs-ಕುಡಗೋಲ ಇಟಕೊಂಡಾರ. ಹಾಕಿ ಎಳೆದರ, ಹೊಟ್ಯಾಗಿನ ಕರಳ ಹರದ ಹೊರಗೆ ಬರತಾವ!

ದುರ್ಗಿ : ಹೆಂಗೊ ಮದಿವಿ ಗಟ್ಟಿ ಆತಲ್ಲ. ಮತ್ತ ಯಾಕ ಆ ಮಾತು?

ಗೌಡ್ತಿ : ಬೀಗರ ಮನಸ್ಸಿನಾಗ ಸಂಶೆ ಉಳೀತs? ಮಂದಿ ನನ್ನ ಮನೀ ಕಡೆ ಬಟ್ಟ ಮಾಡಿ ನಗೋ ಹಾಂಗಾಯ್ತು? ಮನಿತನದ ಮಾನ ಮರ್ಯಾದಿ ನಿನ್ನಂಥ ಆಳಿಗಿ ಹೆಂಗ ತಿಳೀಬೇಕ?

ದುರ್ಗಿ : ಗಂಡ ಕರ್ಯಾಕ ಬಂದಾನ. ಚಾಡೀ ಹೇಳ್ಯಾಳೆಷ್ಟು? ನಾಲಿಗೀಲೆ ನಿಮ್ಮ ತಟ್ಲಿ ನೆಕ್ಕ್ಯಾಳೆಷ್ಟು, ಬಿಡರಿ.

ಗೌಡ್ತಿ : ಗಂಡನ ಜೋಡೀ ಬಾಳ್ವೇ ಮಾಡೋ ಹೆಂಗಸೇನs ಅದು? ಇಡೀ ಊರಿಗೇ ಬೆದಿ ಹಚ್ಚಿ ಮೋಜಾ ನೋಡೋ ಜಾತಿ. ಅವರವ್ವ ನನಗ್ಗೊತ್ತಿಲ್ಲಂದ್ಯಾ? ಆಕೀ ಗಂಡ ಕರ್ಯಾಕ ಎಂದ ಬಂದಾವ?

ದುರ್ಗಿ : ಇಂದs.

ಗೌಡ್ತಿ : ಕರಕೊಂಡ ಹೋದ್ನ?

(ಹೊರಗೆ ಗಲಾಟೆ ಕೇಳಿಸುತ್ತದೆ. ಅವ್ವಗ ಹೇಳ್ತೇನೆಂದು ಪಾರೋತಿ ಹೇಳುತ್ತಿದ್ದಾಳೆ.)

ಹೊರಗೇನ ಗದ್ದಲದು? ಏನ್ರೇ, ಪಾರೋತಿ, ಶೀಲಕ್ಕಾ?

(ಪಾರೋತಿ, ಶೀಲಕ್ಕ ಒಳಬರುವರು.)

ಪಾರೋತಿ : ನೋಡವ್ವಾ….

ಶೀಲಕ್ಕ : (ನಡುವೆ ತಡೆದು) ಹಾಂಗಂದಿಲ್ಲ.

ಪಾರೋತಿ : ಸುಳ್ಳು ಹೇಳ್ತೀಯೇನ?

ಶೀಲಕ್ಕ : ನಾ ಹಾಂಗಂದಿಲ್ಲ, ಬೇಕಾದರ ಮಾವನ್ನ ಕೇಳು.

ಪಾರೋತಿ : ಓತಿಕ್ಯಾತಿಗೊಂದು ಬೇಲೀ ಸಾಕ್ಷಿ, -ನೋಡವ್ವಾ….

ಗೌಡ್ತಿ : ಏನ್ರೇ ಅದು?

ಪಾರೋತಿ : ಶೀಲಿ ಕುದುರೀ ಹತ್ತತಾಳಂತ.

ಗೌಡ್ತಿ : ಬರೋಬ್ಬರಿ ಹೇಳು, ಏನ ಹೇಳಬೇಕಂತಿ?

ಪಾರೋತಿ : ಅವ ಅಂಗೀ ಕಳದ ಕುದರೀ ಮೈ ತಿಕ್ಕತಿದ್ದಾ.

ಗೌಡ್ತಿ : ಹೂ.

ಪಾರೋತಿ : ಈಕಿ ಅವನ ಬೆನ್ನ ನೋಡಿಕೋತ, ಕುದರೀ ಹತ್ತತೀನಿ ಮಾವಾ ಅಂತಿದ್ಲು.

ಗೌಡ್ತಿ : ಅವ ಏನೆಂದ?

ಪಾರೋತಿ : ಅಷ್ಟರಾಗ ನಾ ಹೋದೆ.

ಗೌಡ್ತಿ : ದುರ್ಗಿ ಆ ಬಾರಕೋಲ ತತಾ.

ದುರ್ಗಿ : ಸಣ್ಣ ಮಗಳು, ಏನೋ ಆಟಕ್ಕ ಅಂದಿರಬೇಕು, ಬಿಡ್ರಿ ಎವ್ವಾ.

ಪಾರೋತಿ : ಆಹಾ! ಸಣ್ಣ ಮಗಳು! ಆಗಲೇ ಕುದರೀ ಹತ್ತಾಕ ನಿಂತಾಳ!

ದುರ್ಗಿ : ಏನಂತ ಮಾತಾಡ್ತಿ ಬಿಡs ಪಾರೋತಿ. ಶೀಲಕ್ಕ, ನಿನ್ನ ಕ್ವಾಣಿಗಿ ನಡಿ.

ಗೌಡ್ತಿ : ದುರ್ಗೀ, ಸಿಕ್ಕ ಸಿಕ್ಕಾಗ ಬಾಯಿ ಹಾಕಬ್ಯಾಡಂತ ಹೇಳಿಲ್ಲಾ? ನೀನು ಈ ಮನೀ ಆಳು. ನಿನ್ನ ಜಾಗ ಚಪ್ಪಲೀ ಹಂತ್ಯಾಕಿನ ಮೂಲಿ. ಈ ಮನೀ ವ್ಯವಹಾರದಾಗ ಬರಬ್ಯಾಡ. ಪ್ರಸಂಗ ಬಂದಾಗ ನಾ ಹೇಳತೀನಿ, ಆಗ ಬೊಗಳೀಯಂತ. ಅಲ್ಲೀತನಕ ಆ ಮೂಲ್ಯಾಗ ಬಿದ್ದಿರು.

(ತಾನೇ ಹೋಗಿ ನೇತು ಹಾಕಿದ ಬಾರುಕೋಲು ತಗೊಂಡು)

ಏನs ಶೀಲಿ?

ಶೀಲಕ್ಕ : (ಹೆದರಿ) ಖರೇನs,ನಾ ಹಾಂಗಂದಿಲ್ಲೆವ್ವಾ….

ಗೌಡ್ತಿ : ಕೊಟ್ಟಿಗ್ಗ್ಯಾದರೂ ಹೋಗಿದ್ದ್ಯೊ, ಇಲ್ಲೊ?

ಶೀಲಕ್ಕ : ಕೋಳಿ ತತ್ತೀ ಹಾಕೇತೇನಂತ ನೋಡಾಕ ಹೋಗಿದ್ದೆ.

ಗೌಡ್ತಿ : ಯಾಕ, ಅದನೆಂದೂ ಕಂಡಿಲ್ಲೇನ?

(ಥಟ್ಟನೆ ಬಾರುಕೋಲಿನಿಂದ ಶೀಲಕ್ಕನನ್ನು ಕಟೆಯುವಳು. ಏಟು ಬಿದ್ದ ಶೀಲಕ್ಕ ಅಳತೊಡಗುವಳು.)
ಕುದರೀ ಹತ್ತತೀ ಏನs ಬೋಸಡೆ? ಹತ್ತಿದ ಮ್ಯಾಲ ಕುದರೀ ಹೆಂಗ ಕಟೀಬೇಕಂತ ಹೇಳಿಕೊಡಲಿ?
(ಮತ್ತೆ ಕಟೆಯವುಳು. ದುರ್ಗಿ ಬಂದು ಗೌಡ್ತಿಯ ಕೈಯಲ್ಲಿಯ ಬಾರುಕೋಲು ಕಸಿಯುವಳು.)

ದುರ್ಗಿ : ದೊಡ್ಡವರಾಗಿ ನಿಮಗೂ ತಿಳಿಯಾಣಿಲ್ಲೇನ ಬಿಡ್ರೀಯೆವ್ವ.

ಗೌಡ್ತಿ : ದುರ್ಗೀ, ಮೂವತ್ತ ವರ್ಷ ಈ ಮನೀ ಎಂಜಲಾ ತಿಂದೀದಿ, -ಗೊತ್ತಿಲ್ಲಾ ನಿನಗ ನಾ ಯಾರ ಬುದ್ಧೀಮಾತ ಕೇಳಾಣಿಲ್ಲಂತ?

(ಶೀಲಕ್ಕನಿಗೆ)

ಏ, ನಿನ್ನ ಕ್ವಾಣಿಗೆ ಹೋಗು. ಹಾಸಿಗ್ಯಾಗ ಬಿದ್ದಕೊಂಡು ಅಳು. ಕೇಳಿಸ್ತಿಲ್ಲ? ಪಾರೋತಿ, ಔಷಧಿ ತಗೋ ಯಾಳೆ ಆಗೇತಿ, ನೀ ಹೋಗು.

(ಶೀಲಕ್ಕ ಅಟ್ಟದ ಮೇಲಿನ ತನ್ನ ರೂಮಿಗೂ, ಪಾರೋತಿ ರಂಗದ ಬಲಭಾಗದ ತನ್ನ ರೂಮಿಗೂ ಹೋಗುವರು.)

ಗೌಡ್ತಿ : ದನ, ದನಾ ಕಾಯೋದ ಬೇಕು; ಈ ಮಕ್ಕಳ್ನ ಕಾಯೋದ ಬ್ಯಾಡಾ. ಸಾಲದ್ದಕ್ಕ ಈ ಊರ ಮಂದೀ ಕಣ್ಣೆಲ್ಲಾ ನನ್ನ ಮನೀ ಮ್ಯಾಲs. ಇವರೇನ ತಿಳಕೊಂಡಿದ್ದಾರು. ಹೆಣಮಗಳು, ಹೆಂಗ ನಿಭಾಯಿಸ್ಯಾಳು ಅಂತ. ತಾಳು ತಾಳು, ನನ್ನ ಬಂದೂಕಿನ ಗುರಿ ಎಂದಿಗೂ ಹುಸಿ ಹೋಗಿಲ್ಲಂತ, ಈ ಬಾಡೇರಿಗೆಲ್ಲಾ ಒಂದ ದಿನ ತೋರಸ್ತೀನಿ.

ಪಾರೋತಿ : (ರೂಮಿನ ಒಳಗಡೆಯಿಂದ) ಎವ್ವಾ,

ಗೌಡ್ತಿ : ಮತ್ತೇನ?

ಪಾರೋತಿ : (ಹೊರಬಂದು) ನನ್ನ ಪಾವುಡರ ಡಬ್ಬಿ ಇಲ್ಲೆವ್ವಾ.

ಗೌಡ್ತಿ : ಅಲ್ಲೇ ಇದ್ದೀತ ಹುಡಿಕಿ ನೋಡು.

ಪಾರೋತಿ : ನೋಡಿದೆ. ಎಲ್ಲೂ ಇಲ್ಲ. ಹರೀವತ್ತ ಚಂಪಿ ನನ್ನ ಕ್ವಾಣಿಗಿ ಬಂದಿದ್ಲು…

ದುರ್ಗಿ : ಬಿಡs ಪಾರಕ್ಕ, ಚಾಡೀ ಹೇಳಾಕಲ್ದs ನೀ ಬಾಯಿ ತಗ್ಯೂದs ಇಲ್ಲ. ಚಂಪಿ ಏನ ಮಾಡಿದರೂ ಕತೀ ಕಟ್ಟತಿ.

ಪಾರೋತಿ : ನೀ ಬಾಯ್ಮುಚ್ಚಗ. ಆಳಂದ ಮ್ಯಾಲ ಆಳಿನ್ಹಾಂಗ ಇರಬೇಕು. ಕೆತ್ತಂದರ ಕೆತ್ತಬೇಕು, ಮೆತ್ತಂದರ ಮೆತ್ತಬೇಕು.

ಗೌಡ್ತಿ : ವಯಸ್ಸಿಗಾದರೂ ಕಿಮ್ಮತ್ತ ಕೊಡಾಕ ಕಲಿಯೇ ಪಾರೋತಿ. ದುರ್ಗಿಗಿ ನಾ ಅಂತೀನಂತ ನೀನೂ ಅನ್ನೋದಾ?

ಪಾರೋತಿ : ನೀವಿಬ್ಬರೂ ಗುಟ್ಟ ಹಂಚಿಕೊಂಡೀರಿ, ಬೇಕಾದರ ನೀ ಕಿಮ್ಮತ್ತ ಕೊಟ್ಟಕೊ. ಅಕೀ ಮಾತಿಗಿ ಮುನ್ನೂರು ರುಪಾಯಿ ಕೊಡು, ಯಾರ ಬ್ಯಾಡಾಂತಾರ? ನನ್ನ ಉಸಾಬರಿಗಿ ಬಂದರ, ನಾ ಅನ್ನುವಾಕೇ.

ಗೌಡ್ತಿ : ಬಾಯಿ ಮುಚ್ಚತೀಯೋ? ನಿನಗೂ ಬಾರಕೋಲ ಬೇಕೊ?

ಪಾರೋತಿ : ಬಾರಕೋಲ್ಯಕ, ಬಂದೂಕ ತಗೊ.

(ಅಳುತ್ತ) ಈ ಮನ್ಯಾಗ ನನ್ನ ಮಾತಂದರ ಎಲ್ಲಾರ ಬದ್ದಿ ಉರೀತೇತಿ. ಯಾಕ? ನಾ ಇದ್ದದ್ದ ಇದ್ಧಾಂಗ ಹೇಳ್ತೀನ್ನೋಡು. ಅಪ್ಪಾ ಇದ್ದಿದ್ದರ….

ಗೌಡ್ತೀ : ಚಂಪೀ, ಏ ಚಂಪೀ…

ಪಾರೋತಿ : ನಿನ್ನ ಮಾತ ಆಕಿಗೆಲ್ಲಿ ಕೇಳಸ್ತಾವ? ಮಾವನ್ನ ನೆನೀತಾ ಬೆರಳ ಸೀಪಿಕೋತ ನಿಂತಿರತಾಳ.

ಗೌಡ್ತಿ : ಏನಂಬೊ ಮಾತಾಡ್ತಿಯೆ? ಚಂಪಿ ನಿಂತರ ಮಾವನ್ನೋಡಿ ನಿಂತಳಂತಿ, ಕುಂತರ ಮಾವನ್ನೋಡಿ ಕುಂತಳಂತಿ. ಬೇಕ, ಬ್ಯಾಡಾದ್ದೆಲ್ಲಾ ಮಾತಾಡಿ ಮನೀತುಂಬ ಯಾಕ ನಿನ್ನ ನಾರೋ ಉಗಳ ಸಿಡಸ್ತೀಯೆ? ಆಕಿ ಈ ಮನ್ಯಾಗ ಇರಬೇಕಂತಿಯೋ, ಬ್ಯಾಡಂತಿಯೊ? ಹಿರೀ ಅಕ್ಕ ಅಂದರ ಹಿರೀ ಹೊಳೀ ಹಾಂಗಿರಬೇಕ. ಹೆಚ್ಚೂ ಕಮ್ಮಿ ಅದರ ನೋಡಿಕೊಳ್ಯಾಕ ನಾ ಇಲ್ಲಾ? ಅವಳೇನು, ನಿನ್ನ ಆಸ್ತೀ ಒಳಗ ಪಾಲಾ ಬೇಡಿದಳ?

ಪಾರೋತಿ : ಆಸ್ತಿ ಬೇಡಿದರ ಕೊಟ್ಟೇನು, ನನ್ನ ಹಾಸಿಗ್ಯಾಗ ಪಾಲಾ ಬೇಡತಾಳ; ಈಕಿನ್ನ ತಂಗಿ ಅಂತ  ಹೆಂಗನ್ನಲಿ? ನನ್ನ ಎದ್ಯಾಗ ಹಿಂತಾ ದೊಡ್ಡ ಹುಣ್ಣ ಮಾಡ್ಯಾಳ, ಮಾತಾಡಿದಾಗೊಮ್ಮಿ ನಾ ಅಲ್ಲ, ನನ್ನ ಹುಣ್ ಮಾತಾಡತೈತಿ. ಅದಕ್ಕs ನನ್ನ ಮಾತ ನಿಮಗ ನಾರತಾವ.

(ಅಳುವಳು)

ಗೌಡ್ತಿ : ಆಕಾಶ ಕಳಚಿ ಬೀಳೋವಂಥಾದ್ದೇನೂ ಆಗಿಲ್ಲ. ಈಗಲೂ ನೀ ಬಾಯಿ ಮುಚ್ಚಿದರ, ಬೀಳೋ ಆಕಾಸ ಅಲ್ಲೇ ನಿಲ್ಲಸ್ತೀನಿ, ಬಾಯಿ ಮುಚ್ಚತಿ? ಚಂಪೀ, ಏ ಚಂಪಿ,

(ಚಂಪಿ ಹೊರಬರುವಳು)

ಈಕೀ ಪಾವುಡರ ಡಬ್ಬೀ ತಂಗೊಂಡೀಯೇನ?

ಚಂಪಿ : ಇಲ್ಲ.

ಗೌಡ್ತಿ : ಸುಳ್ಳ ಹೇಳಿದರ ಚರ್ಮಾ ಸುಲೀತೀನಿ.

ಚಂಪಿ : ನಾ ತಗೊಂಡಿಲ್ಲ.

ಗೌಡ್ತಿ : ದುರ್ಗೀ, ಹೋಗಿ ಆಕೀ ಕ್ವಾಣ್ಯಾಗ ಹುಡುಕು. ನಾ ಶೀಲೀ ಕ್ವಾಣ್ಯಾಗ ಹುಡುಕತೀನಿ.

(ಗೌಡ್ತಿ ಇನ್ನೇನು ಮೆಟ್ಟಲು ಹತ್ತಬೇಕೆನ್ನುವಷ್ಟರಲ್ಲಿ ಶೀಲಕ್ಕ ದಡಬಡ ಇಳಿಯುತ್ತ ಬಂದು ಪೌಡರ ಡಬ್ಬಿ ತಂದು ಗೌಡ್ತಿಯ ಮುಂದಿನ ಮೆಟ್ಟಲ ಮೇಲೆ ಇಟ್ಟು ಹೊರಡುವಳು. ಗೌಡ್ತೀಯ ಕೋಪ ನೆತ್ತಿಗೇರುತ್ತದೆ.)

ಗೌಡ್ತಿ : ನೀ ಯಾಕ ಅದನ್ನ ತಗೊಂಡಿದ್ದೆ?

ಶೀಲಕ್ಕ : ವಾಸನೆ ನೋಡಾಕ ತಗೊಂಡಿದ್ದೆ.

(ಎಂದು ಹೇಳಿ ತನ್ನ ರೂಮಿನನಲ್ಲಿ ಹೊಕ್ಕು ಬಾಗಿಲಿಕ್ಕಿಕೊಳ್ಳುವಳು. ಗೌಡ್ತಿ ಕೆಕ್ಕರಿಸಿ ಅವಳನ್ನೇ ನೋಡುತ್ತಿರುವಂತೆ ಪಾರೋತಿ ಬಂದು ಆ ಡಬ್ಬಿಯನ್ನು ತೆಗೆದುಕೊಂಡು ಹೋಗುವಳು. ಗೌಡ್ತಿ ಮತ್ತೆ ಬಂದು ಆಸನದಲ್ಲಿ ಕುಸಿಯುವಳು.)

ದುರ್ಗಿ : (ಸಹಾನುಭೂತಿಯಿಂದ) ಈ ಮನಿ ಎಂದ ತಂಪಾಗತೈತೊ!

ಗೌಡ್ತಿ : ಈಗೇನೂ ಈ ಮನೀಗಿ ಬೆಂಕಿ ಬಿದ್ದಿಲ್ಲ ಹೆಣಮಗಳs; ಒಂದ ವೇಳೆ ಬಿತ್ತಂತ ತಿಳಕೊ; ಆಗಲೂ ಕಣ್ಣೀರ ಸುರಿಸಿ ಅರಸ ಬಾ ಅಂತ ನಿನ್ನ ಕರೆಯೋಣಿಲ್ಲ, ಆಯ್ತ?

ದುರ್ಗಿ : ಏನಂತ ಮಾತಾಡ್ತೀರೆವ್ವ. ಇದs ಮನ್ಯಾಗ ನಾನೂ ಮುದುಕ್ಯಾಗೀನಿ…

ಗೌಡ್ತಿ : (ಹೊರಗೆ ಯಾರೋ ಬಂದುದನ್ನು ಗಮನಿಸುವಳು)

ಆದರಿದು ನಿನ್ನ ಮನಿ ಅಲ್ಲ; ನಂದು. ನನ್ನ ಹಾಂಗ ನೋಡಬ್ಯಾಡ. ಮತ್ತ ಬಾಯಿ ತಗೀಬ್ಯಾಡ. ನೀ ಇರೋದು ಈ ಮನೀ ಆಳಾಗಿ; ಅಡಿಗೀ ಮಾಡಾಕ, ಕಸಗೂಡಸಾಕ, ಅದು ಇದು ಕೆಲಸಾ ಮಾಡಾಕ. ಈಗೊಂದ ಸಣ್ಣ ಕೆಲಸ ಮಾಡ್ತೀಯೇನು? ಹೊರಗ್ಯಾರೋ ಬಂದಾರ, ಯಾರು, ಯಾಕ ಬಂದಾರಂತ ಕೇಳಿ, ಒಳಗೆ ಕರಕೊಂಬಾ.

(ದುರ್ಗಿ ಹೊರಗೆ ಹೋಗುವಳು. ಗೌಡ್ತೀ ತನ್ನ ಪಲ್ಲಂಗದ ಸುತ್ತ, ದಿನಾ ಹೊರಗಿನವರು ಬಂದಾಗ ಕಟ್ಟಿಕೊಳ್ಳುವಂಥದಾದ್ದರಿಂದ ಸುಲಭವಾಗಿ ಕಟ್ಟಿಬರುವ ಒಂದು ಪರದೆ ಕಟ್ಟಿಕೊಳ್ಳುತ್ತಾಳೆ. ಈಗವಳ ಮುಖ ಮಾತ್ರ ಕಾಣಿಸುತ್ತದೆ. ಅಷ್ಟರಲ್ಲಿ ದುರ್ಗಿ, ಅವಳ ಹಿಂದಿನಿಂದ ರಾಯಪ್ಪ, ನಾಲ್ಕು ಜನ ಗರಡೀ ಹುಡುಗರು ಬಂದು ಬಾಗಿಲ ಬಳಿಯೇ ನಿಂತುಕೊಂಡು ಗೌಡ್ತಿಗೆ ನಮಸ್ಕಾರ ಮಾಡುತ್ತಾರೆ. ಅವರ ಹಿಂದಿನಿಂದ ಕೊಮಾಲಿ ಮೆಲ್ಲಗೆ ಬರುವಳು.)

ರಾಯಪ್ಪ : ಶರಣ್ರಿಯೇವ್ವ.

ಗೌಡ್ತಿ : ನಿಂತಕೊಂಡs ಹೇಳು, ಏನ ತಕರಾರು? ಯಾರ ನೀನು?

ರಾಯಪ್ಪ : ಎವ್ವಾ ಗೌಡ್ತಿ, ಕೊಮಾಲಿ ನನ್ನ ಹೆಂಡ್ತಿ. ನಡ್ಯಾಕ ಕರಕೊಂಡ ಹೋದರ ಹೇಳದs ಕೇಳದs ಓಡಿಬಂದಾಳ.

ಗೌಡ್ತಿ : ಕೊಮಾಲೀ ಗಂಡನs ನೀನು?

ರಾಯಪ್ಪ : ಹೂನ್ರಿ. ಈಗ ನನ್ನ ಜೋಡಿ ಬರಾಕ ಒಲ್ಲೆ ಅನ್ನಾಕ ಹತ್ಯಾಳ್ರಿ. ಬುದ್ದೀ ರೀತಿ ಹೇಳಿ ಕಳಿಸಿಕೊಡ್ರೀಯಪಾ ಅಂತ ಗೌಡ್ರಿಗಿ ಹೇಳಿದರ, -ನಿನ್ನಂಥವನ ಜೋಡಿ ಅಧೆಂಗ ಇದ್ದಾಳೋ-? ಅಂತಾರ.

ಗೌಡ್ತಿ : ಮಾಡಿಕೊಂಡ ಗಂಡ ಅಂತಿ, ಕಟ್ಟಿ ಹಾಕಿ ಆಳಾಕ ಆಗವೊಲ್ದು ಅಂದರ ಅನ್ನದs ಇನ್ನೇನೊ ಮಾಡತಾರ? ದಯಾಮಾಯದ ಕಾಲ ಅಲ್ಲಪಾ ಇವು. ಇಂಥಾ ದಿಂಡೇರ‍್ನ ಆಳೋದಂದರ, ಸಣ್ಣ ಮಾತಲ್ಲ. ಏಳತಾ ಬೀಳತಾ ಸೊಂಟದ ಮ್ಯಾಲ ಎರಡೆರಡ ಚೆಲ್ಲಬೇಕು. ಬರೀ ನೀನs ಮಾತಾಡಬೇಕು. ಮಾತಾಡೋವಾಗೆಲ್ಲಾ ಆಕೀ ಕಡೆ ಮುಖ ಮಾಡಿ ಕಿರಚಬೇಕು. ಕಿರಿಚಿದಾಗೆಲ್ಲಾ ನಿನ್ನ ಉಗುಳ ಆಕೀ ಮಾರಿ ಮ್ಯಾಲ ಸಿಡೀತಿರಬೇಕು. ತಿಳೀತ? ಕಟ್ಟಿ ಆಳೋದಂದರ ಅದು.

(ಕೊಮಾಲಿಗೆ)

ಏಯ್, ಏನs ಕೊಮಾಲಿ, ಮಾಡಿಕೊಂಡ ಗಂಡನ್ನ ಬಿಟ್ಟು ಓಡಿ ಬಂದೀದಿ, ನಾಚಿಕಿ ಬರೋಣಿಲ್ಲಾ? ನಿನ್ನ ನೋಡಿ ಊರ ಹುಡಿಗೇರೆಲ್ಲಾ ಹಾದಿಗೆಟ್ಟಾರು. ಸುಮ್ಮನ ಗಂಡನ ಮನೀಗಿ ಹೋಗಿ ಬಾಳ್ವೆ ಮಾಡು. ತಿಳೀತಿಲ್ಲ? ಹಾಂಗ್ಹಿಂಗ ವಾಂಡತನ ಮಾಡಿದರ ಈ ಊರಾಗಿನ ಎಲ್ಲಾರೂ ನಿನ್ನ ಮಾರೀ ಕಡೆ ಉಗಳೋಹಾಂಗ ಮಾಡೇನು. ಇನ್ನೇನ ನೀ ಹೇಳೋ ಜರೂರಿಲ್ಲ. ನಿಂತ ಕಾಲಮ್ಯಾಲ, ಈಗಿಂದೀಗ ಹೊರಡು, ಹೊರಬೀಳೀಗೆ….

(ಕೊಮಾಲಿ ಹೊರಡುವಳು. ಉಳಿದವರು ಗೌಡ್ತಿಗೆ ನಮಸ್ಕರಿಸಿ ಹೋಗುವರು.)