ಸಾಗರ ಸಮೀಪದ ಗೊರೆಮನೆಯಲ್ಲಿ ಮಹಾಬಲಯ್ಯ ಮತ್ತು ಮಂಜುನಾಥಪ್ಪನವರು ಕಾಡು ಬೆಳೆಸಿದ ಸುದ್ದಿ ಪ್ರತಿಯೊಬ್ಬರಿಗೂ ಕುತೂಹಲಕರ.  ಅರೆ ಎಲ್ಲರೂ ಅಡಿಕೆ ತ್ವಾಟ, ಬಾಳೆತ್ವಾಟ, ಏಲಕ್ಕಿ, ಕಾಳುಮೆಣಸು ಬೆಳೆದು ದುಡ್ಡು ಮಾಡಿದ್ರೆ, ಈ ಮಾಬ್ಲಯ್ಯ ಸರಿ ಇದ್ದಂಗಿಲ್ಲೆ, ಇರೋ ೩೦ ಎಕ್ರೆ ಖುಷಿಗೂ ಕಾಡುಗಿಡ ತಂದು ನೆಡ್ತ್ನಡ, ಅವನ್ನು ಮಕ್ಕಳನ್ನು ಸಾಕಿದಂಗೆ ಸಾಕ್ತ್ನಡ ಎನ್ನೋ ಮಾತುಗಳು, ಅವಹೇಳನಗಳು ೪೦ ವರ್ಷದ ಹಿಂದೆ ಎಲ್ಲೆಲ್ಲೂ ಅನುರಣನವಾಗುತ್ತಿತ್ತು.  ಈ ಮಾತುಗಳನ್ನೆಲ್ಲಾ ಮೆಟ್ಟಿ ನಿಂತು ಇವರು ಸಾಕಿದ ಮರಗಳು ಬೆಳೆದು ನಿಂತಿವೆ.  ನಿಮ್ಮ ಮುಂದಿನ ಜೀವನಕ್ಕೆ ನಾವು ಆಸರೆಯಾಗುತ್ತೇವೆ ಎಂದು ಹೇಳುತ್ತವೆ.  ಮನೆಯವರೆಲ್ಲರಿಗೂ ಸಾರ್ಥಕ ಭಾವವನ್ನು ಮೂಡಿಸುತ್ತಿವೆ.  ಇದೆಲ್ಲಾ ಹೇಗೆ ಸಾಧ್ಯವಾಯಿತು?

ಲಿಂಗನಮಕ್ಕಿಯಲ್ಲಿ ಶರಾವತಿ ನದಿಗೆ ಅಣೆಕಟ್ಟನ್ನು ನಿರ್ಮಿಸಿದಾಗ, ಸಾಗರ ತಾಲ್ಲೂಕಿನ ಅನೇಕ ಹಳ್ಳಿಗಳು ಮುಳುಗಡೆಯಾದವು.  ಅದರೊಂದಿಗೆ ಲಕ್ಷೆಪಲಕ್ಷ ಜೀವವೈವಿಧ್ಯಗಳು ಮರೆಯಾದವು.  ಪರಿಹಾರವಾಗಿ ಎಲೆಲ್ಲೋ ಜಮೀನು ಸಿಕ್ಕಿತು.  ಆದರೆ ಮಣ್ಣಿನ ವಾಸನೆ ಮಾತ್ರ ಇವರಾರನ್ನೂ ಬಿಡಲಿಲ್ಲ.  ಬೇಸಿಗೆಯಲ್ಲಿ ನೀರಿಳಿದಾಗ ಮಹಾಬಲಯ್ಯನವರು ಮುಳುಗಿಹೋದ ತಮ್ಮ ಜಮೀನಿಗೆ ಪದೆ ಪದೇ ಹೋಗುತ್ತಿದ್ದರು.  ಅಲ್ಲಿರುವ ಗಿಡ-ಬಳ್ಳಿಗಳನ್ನು ತಂದು ಮನೆಯ ಸುತ್ತಲೂ ನೆಡುತ್ತಿದ್ದರು.  ಇದರಿಂದ ಹಳೆಯ ಜಾಗದಲ್ಲಿ ಇದ್ದ ತೃಪ್ತಿ ಪಡೆಯುತ್ತಿದ್ದರು.  ಈ ರೀತಿ ಗಿಡ ನೆಡುವ ಹವ್ಯಾಸವೇ ಮುಳುಗಡೆಯ ನೋವನ್ನು ಮರೆಸಿತು.  ನೂರಾರು ಮರಗಳು ಮನೆಯ ಸುತ್ತಲೂ ಬೆಳೆದುನಿಂತವು.  ಜಮೀನಿನಲ್ಲಿ ಹರಿಯುತ್ತಿದ್ದ ಹೊಳೆಯೂ ಇವರೊಂದಿಗೆ ಸೇರಿತು.  ಎಲ್ಲಿಂದಲೋ ಹೊತ್ತು ತಂದ ಗುಳುಮಾವಿನ ಗಿಡಗಳನ್ನು ದಡದಲ್ಲಿ ಒತ್ತಿ ನಿಲ್ಲಿಸಿತು.  ದಿನೇ ದಿನೇ ಕಾಡು ದಟ್ಟವಾಯಿತು.

ನೋಡು ಇದು ಮಸೆ ಮರ.  ಇದರ ಸೊಪ್ಪಿನ ವಾಸನೆ ನೋಡು.  ಇದನ್ನು ನೀರಿನಲ್ಲಿ ನೆನೆಸಿ, ಹಿಂಡಿ ಕುಡಿದರೆ ಉಷ್ಣವೆಲ್ಲಾ ಮಾಯ.  ಇದು ಸಳ್ಳೆಮರ.  ಬೇಸಿಗೆಯಲ್ಲೂ ಹಸಿರಾಗಿರುತ್ತದೆ.  ಇದು ಕಣಗಲು ಮರ.  ಇದರ ಬೇರನ್ನು ಕಡಿದು ಬುಡಕ್ಕೆ ಮಡಕೆ ಕಟ್ಟಿದರಾಯಿತು.  ದಿನಕ್ಕೆ ೩-೪ ಲೀಟರ್ ನೀರು ಬರ್‍ತದೆ.  ಸಿಹಿ ಇರ್‍ತದೆ.  ನಮ್ಮಲ್ಲಿ ತೊಡೆದವ್ವು ಮಾಡಲು ಮೊದಲು ಇದರ ನೀರನ್ನೇ ಬಳಸುತ್ತಿದ್ದರು.  ಇದು ಎತ್ಯಾಗ, ಇದು ಬಿಲ್ಕಂಬಿ.  ಇವೆರಡೂ ನಾಟಕ್ಕೆ ಉಪಯೋಗ.  ಇದು ಬಿಲ್ವಾರ.  ವಾಸ್ತು ಬಾಗಿಲಿಗೆ ತುಂಬಾ ಶ್ರೇಷ್ಠ.  ಇದು ಕುಂಠಿಕರಕಲು.  ಇದರ ಚಕ್ಕೆ (ತೊಗಟೆ)ಯನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚಿದರೆ ಎಂತಹ ಗಾಯವಾದರೂ ವಾಸಿಯಾಗುತ್ತದೆ.  ಈ ನಂದಿ ಮರ ವಿಪರೀತ ಬೀಜ ಬಿಡ್ತದೆ.  ಗಿಡ ಮಾಡೋದು ಮಾತ್ರ ತುಂಬಾ ಕಷ್ಟ.  ಬಿದಿರು ತುಂಬಾ ಇತ್ತು.  ಎಲ್ಲಾ ಕಟ್ಟೆರೋಗ ಬಂದು ಸತ್ತೋಯ್ತು.  ಈಗ ಅಲ್ಲೊಂದು ಇಲ್ಲೊಂದು ಇದೆ.  ಮುಳ್ಳುಹಣ್ಣು, ಮುರುಗಲು, ತುಮುರು, ಚಳ್ಳೆ ಹೀಗೆ ವರ್ಷಾವಧಿ ಅನೇಕ ಹಣ್ಣುಗಳು ಸಿಗ್ತಲೇ ಇರ್‍ತವೆ.  ಹೊಳೆಸಾಲು ಮಾವಿನಮರಗಳು ೪೦ಕ್ಕೂ ಹೆಚ್ಚಿವೆ.  ಎರಡು ವರ್ಷಕ್ಕೆ ಒಂದು ಲಕ್ಷ ಮಾವಿನಮಿಡಿ ಸಿಗ್ತದೆ.  ಒಂದೊಂದು ಮಾವೂ ಒಂದೊಂದು ಪರಿಮಳ.  ಈ ದೊಡ್ಡ ಮರದ ಮಾವಿನಕಾಯನ್ನು ಬೇಯಿಸಿ ಉಪ್ಪಿನಲ್ಲಿಟ್ಟರೆ ನಾಲ್ಕು ವರ್ಷ ಕೆಡದೆ ಹಂಗೆ ಇರುತ್ತದೆ.  ಈ ಜಿಂಕೆ ಸೊಪ್ಪು ತಿಂದರೆ ಹುಳಿ ಹುಳಿ.  ಇದರ ತಂಬುಳಿ ತುಂಬಾ ಚೆನ್ನ.  ಕಾಡು ನೆಲ್ಲಿಗಿಡ ೮೦ಕ್ಕೂ ಹೆಚ್ಚಿದು, ಕರೇ ಕೋಮಾರಿ ಮರ ೧೦೦ ಅಡಿಗಳವರೆಗೆ ಯಾವುದೇ ಅಂಕುಡೊಂಕಿಲ್ಲದೆ ನೆಟ್ಟಗೆ ಬೆಳೆಯುತ್ತದೆ.  ಮಲ್ಟ, ನೇರಳೆ, ರಂಜಾಲು, ಮತ್ತಿ, ಅತ್ತಿ, ಅರಳಿ, ತಾರಿ, ನಿಸಣಿ, ಸಂಪಿಗೆ, ಪರಿಗೆ, ಕೌಲು, ಚುಂಗೋಳಿ, ಬುಕ್ಕಿ, ಚಾಪಲು, ಮುಂಗಲು, ಹಲಸು, ಬಿಟೆ, ಸಂಮಣೆ, ಹನ್ನೆ, ಹುಣಾಲು, ಬೆಳಾಲು, ಜಂಬೆ, ಜಾಲದ ಗರಿಗೆ, ಗಂಧಗರಿಗೆ, ಕಕ್ಕೆ, ಗೌರಿ, ಮದ್ದಾಲು, ಕಡಾಲು, ಬೆಂಡು, ಅಚಿಡಿ, ಬೂರಲು, ಮುತ್ತುಗ, ದೇವದಾರಿ, ಬಸವನಪಾದ… ಮಹಾಬಲಯ್ಯನವರು ಮರಗಳನ್ನು ತೋರಿಸುತ್ತಾ ಹೇಳುತ್ತಲೇ ಹೋಗುತ್ತಿದ್ದರು.  ೩೦,೦೦೦ ಮರಗಳಿರುವ ಇಡೀ ಕಾಡಿನಲ್ಲಿ ಕೇವಲ ಪಕ್ಷಿವೀಕ್ಷಣೆ ಮಾಡಲು ಒಂದು ದಿನವೇ ಬೇಕು.  ನೂರಾರು ಮರ, ಗಿಡ, ಬಳ್ಳಿ, ಕುರುಚಲು ಪೊದೆಗಳ ಹೆಸರನ್ನು ಹೇಳುತ್ತಾರೆ.  ಜೊತೆಗೆ  ನನಗೆ ಗೊತ್ತಿಲ್ಲದ ಅನೇಕ ಗಿಡಮರಗಳೂ ಇವೆ ಎನ್ನುತ್ತಾರೆ.  ಈ ಕಾಡಿನಿಂದ ಸಿಗುವ ಉಪ ಫಸಲಿನಿಂದ ಇಂದು ಯಾವುದೇ ಶ್ರಮವಿಲ್ಲದೆ ನಿರಂತರ ಆದಾಯವಿದೆ.  ವಾಟೆಕಾಯಿ, ಅಂಟುವಾಳ, ಸೀಗೆ, ಸುರಳಿಕಾಯಿ, ಅಣಲೆ, ತೋರಂಗಲು, ಮಾವಿನಮಿಡಿ ಮುಂತಾದ ಕಾಯಿಗಳಿಂದ ವರ್ಷಕ್ಕೆ ೪೦ ಸಾವಿರದಷ್ಟು ಆದಾಯ.  ಔಷಧೀಯ ಮರಗಳು ಮನೆಮದ್ದಿಗೆ ಉಪಯುಕ್ತ.  ತರಗೆಲೆಗಳನ್ನು ಕಾಲುಭಾಗದಷ್ಟು ಶೇಖರಿಸಿದರೂ ೫ ಎಕರೆ ತೋಟಕ್ಕೆ ಸಾಕಾಗುವಷ್ಟು ಕಾಂಪೋಸ್ಟ್ ಸಿಗುತ್ತದೆ.  ಇಲ್ಲಿನ ಕಪ್ಪು ಗೋಡುಮಣ್ಣು, ಅದರೊಳಗಿನ ಎರೆಹುಳು, ಸಾವಿರಾರು ಸೂಕ್ಷ್ಮ ಜೀವಿಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತಲೇ ಇವೆ.  ಮಳೆನೀರಿನ ಹನಿ ಹನಿಯೂ ಹೊರಹೋಗದಂತೆ ಅಲ್ಲಿಯೇ ಇಂಗುವುದು.  ಇದರಿಂದ ಅಂತರ್ಜಲ ಭೂಮಿಯೊಳಗಿನಿಂದ ಉಕ್ಕಿ ಬೇಸಿಗೆಯಲ್ಲೂ ಜುಳು ಜುಳು ಹೊಳೆ ಹರಿಯುತ್ತದೆ.  ಸಾವಿರಾರು ರೀತಿಯ ಕ್ರಿಮಿಕೀಟಗಳು, ಅವುಗಳನ್ನು ತಿನ್ನಲು ೫೦ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು, ಕಪ್ಪೆಗಳು, ಓತಿಕ್ಯಾತ, ಹಾವುರಾಣಿ, ಹಾವು, ಮೊಲ, ಜಿಂಕೆ ಇಲ್ಲೀಗ ಲೆಕ್ಕವಿಲ್ಲದಷ್ಟು ಜೀವವೈವಿಧ್ಯಗಳ ಸಂತೆ.  ಇವರು ನೆಟ್ಟಿದ್ದು ಕೆಲವು ಸಾವಿರ ಮರಗಳನ್ನು ಮಾತ್ರ.  ಆದರೆ ಇಂದು ಬೆಲೆ ಕಟ್ಟಲಾಗದಷ್ಟು ಆಸ್ತಿ ಇವರದಾಗಿದೆ.  ಉಳಿದ ಕೃಷಿಯಂತೆ ಕಾಡು ಕೃಷಿ ಸಹಾ ಒಂದು ಜೀವನ ವಿಧಾನ ಎನ್ನುವುದನ್ನು ಮಾಡಿ ತೋರಿಸಿದವರು ಮಹಾಬಲಯ್ಯ ಮತ್ತು ಮಂಜುನಾಥಪ್ಪ ಸಹೋದರರು.

ವಗ್ಗರಣೆ : ಕಾಡು ಬೆಳೆಸುವವರಿಗೆ ಮಹಾಬಲಯ್ಯನವರು ನೀಡುವ ಸಲಹೆಗಳು; ಅಕ್ಕಪಕ್ಕದ ಕಾಡುಗಳನ್ನು ಬದುಕಲು ಬಿಡಿರಿ.  ಅಲ್ಲಿ ಸಿಗುವ ಬೀಜ ಸಸಿಗಳನ್ನೇ ತಂದು ನೆಡಿರಿ.  ದನ, ಎಮ್ಮೆ, ಕುರಿಗಳನ್ನು ನೀವು ಬೆಳೆಸುತ್ತಿರುವ ಕಾಡಿಗೆ ಮೇಯಲು ಬಿಡಬೇಡಿರಿ.  ಮೃಗಶಿರಾ ಮಳೆಯಲ್ಲಿ ಗಿಡ ನೆಡಿ.  ನೆಟ್ಟ ಗಿಡದ ಪಕ್ಕ ಚಿಕ್ಕ ಹೊಂಡ ಮಾಡಿ ನೀರಿಂಗಿಸಿ.  ನೆಟ್ಟ ಮೇಲೆ ಗೊಬ್ಬರ, ನೀರು ಮುಂತಾದ ರಕ್ಷಣೆಯೂ ನಿಮ್ಮ ಜವಾಬ್ದಾರಿಯೇ ಆಗಿದೆ.  ಗಿಡ ನೆಡುವಾಗ ೧೫ ಅಡಿ ಅಂತರವಿರಲಿ.  ಗಿಡ ಬಲಿತ ಮೇಲೆ ಸೊಪ್ಪು, ರೆಂಬೆ, ಕೊಂಬೆಗಳನ್ನು ಕಡಿಯಬೇಡಿ.  ಕಳೆಗಿಡಗಳು, ಬಳ್ಳಿಗಳು, ನೆಟ್ಟ ಗಿಡಗಳನ್ನು ಆವರಿಸದಂತೆ ನೋಡಿಕೊಳ್ಳಿರಿ.  ಉರುವಲಿಗೋಸ್ಕರವೇ ಪ್ರತಿವರ್ಷ ಬೇರೆ ಬೇಗ ಬೆಳೆಯುವ ಗಿಡ ನೆಡಿರಿ.  ಕೈಗೆ ಸಿಕ್ಕಿದ ಯಾವುದೇ ಜಾತಿಯ ಗಿಡವಾದರೂ ಅದು ನಿಮ್ಮ ಕಾಡಿಗೆ ಯೋಗ್ಯವಾದದ್ದೇ ಆಗಿರುತ್ತದೆ.  ದಿನಾಲೂ ಕನಿಷ್ಠ ನಾಲ್ಕು ತಾಸು ನಿಮ್ಮ ಕಾಡಿನ ಯೋಗಕ್ಷೇಮಕ್ಕಾಗಿ ನಿಮ್ಮ ಸಮಯವನ್ನು ಮೀಸಲಿಡಿ.