ರಾಮದುರ್ಗದ  ಶಬರಿಕೊಳ್ಳದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಬಿ.ಮಂಜುನಾಥ ೧೯೮೫ರ ಸುಮಾರಿಗೆ ಅರಣ್ಯೀಕರಣ ಚಟುವಟಿಕೆಯಲ್ಲಿ ನಿರತರಾಗಿದ್ದರು. ಕಲ್ಲುಗುಡ್ಡದ  ಉರಿಬಿಸಿಲಲ್ಲಿ  ಅಡ್ಡಾಡಿ ಬಾಯಾರಿಕೆ ಹೆಚ್ಚಿತು, ಕುಡಿಯಲು ನೀರು ತರಲು ವಾಚಮನ್‌ಗೆ ಹೇಳಿದ್ದರು.  ಆದರೆ  ನೀರಿರಲಿಲ್ಲ. ‘ಸರ್! ನೆಲ್ಲಿಕಾಯಿ ತಿಂದ್ರೆ ಬಾಯಾರಿಕೆ ನೀಗುತ್ತೆ! ಎಂದು ನಾಲ್ಕಾರು ನೆಲ್ಲಿಕಾಯಿಗಳನ್ನು ರೇಂಜರ್ ಸಾಹೇಬರಿಗೆ  ಕೊಟ್ಟರು. ನೆಲ್ಲಿ ಗಾತ್ರ ನೋಡಿ  ಮಂಜುನಾಥ್‌ಗೆ  ಅಚ್ಚರಿ. ಬರೋಬ್ಬರಿ ಲಿಂಬುಗಾತ್ರ! ಬೆಟ್ಟದ ನೆಲ್ಲಿ ಇಷ್ಟೆಲ್ಲ ದೊಡ್ಡದಾಗಿ ಬೆಳೆದದ್ದು ಹೇಗೆಂದು ಅಚ್ಚರಿಪಟ್ಟರು. ಸಂಸ್ಥಾನದ  ಅರಸನೊಬ್ಬ ಬನಾರಸ್‌ನಿಂದ ನೆಲ್ಲಿ ತರಿಸಿ ಶಬರಿಕೊಳ್ಳದಲ್ಲಿ ಅರಣ್ಯೀಕರಣ ಮಾಡಿದ ದಾಖಲೆ ಪತ್ತೆ ಹಚ್ಚಿದರು, ಬೀಜ ಸಂಗ್ರಹಿಸಿ ಸಸಿ ಬೆಳೆಸಿದರು. ಹೊಸ ಕೃಷಿ ಹುಡುಕಾಟದಲ್ಲಿದ್ದ ರಾಮದುರ್ಗದ ಕೃಷಿಕ ಅಖಿಲ್‌ಅಮೃತ  ಸರದೇಶಪಾಂಡೆಗೆ ನೆಲ್ಲಿಕೃಷಿ ಮಾಡಲು ಸೂಚಿಸಿದರು. ಪರಿಣಾಮ ೧೯೮೮ರಲ್ಲಿ ಸುರೇಬಾನ್‌ನ ಶಬರಿಕೊಳ್ಳದ ನೆಲ್ಲಿ ಲಿಂಗದಾಳ ಹಳ್ಳಿಯಲ್ಲಿ  ಸರದೇಶಪಾಂಡೆಯ ಕೃಷಿ ನೆಲಕ್ಕೆ  ಏರಿತು.  ನಾವು ಅಡಿಕೆ,ತೆಂಗಿನ ತೋಟ ಮಾಡುವಂತೆ ಐದು ಎಕರೆಯಲ್ಲಿ ೫೦೦ ನೆಲ್ಲಿ ನೆಟ್ಟರು. ಲಿಂಬುಗಾತ್ರದ ನೆಲ್ಲಿಯನ್ನು ಬೆಳಗಾವ, ಧಾರವಾಡ, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು. ಬಜಾರದ ನೆಲ್ಲಿ ಮಾರಾಟ ಬೇಜಾರಾಗಿ ಮೌಲ್ಯವರ್ಧನೆಯ ಮೊರೆ ಹೋದರು. ಹೆಂಡತಿ ಅಶ್ವಿನಿ ಸರದೇಶಪಾಂಡೆ ನೇತ್ರತ್ವದಲ್ಲಿ ನೆಲ್ಲಿಯ ಜ್ಯಾಮ್, ಉಪ್ಪಿನಕಾಯಿ, ಜ್ಯೂಸ್, ಮೊರಬ್ಬ, ಆವಳಾ ಸುಫಾರಿ, ಹುಳಿಪುಡಿ, ಕ್ಯಾಂಡಿ ಹೀಗೆ ವಿವಿಧ  ಉತ್ಪನ್ನ ತಯಾರಿ ಆರಂಭಿಸಿದರು.  ರಾಮದುರ್ಗದ ಪೇಟೆಯಲ್ಲಿ ‘ಅಲಕಾ ನೆಲ್ಲಿ ಉತ್ಪನ್ನಗಳು’ ಮಾರಾಟಕ್ಕೆಂದು ಅಂಗಡಿ ತೆರೆದರು!  ರಾಜ್ಯದ ಪ್ರಥಮ ನೆಲ್ಲಿ ಕೃಷಿಕನ ಯಶೋಗಾಥೆ  ಹಲವರನ್ನು ಸೆಳೆಯಿತು. ಕಳೆದ ೨೦ವರ್ಷಗಳ ಅಖಿಲ್‌ರ ನೆಲ್ಲಿ ಕೃಷಿ ಅನುಭವ ಪರಿಣಾಮ ಈಗ ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೆಲ್ಲಿ ತೋಟಗಳಾಗಿವೆ.

ಕುಂದಾಪುರ ಆಜ್ರಿಯ ಶಶಿಧರ ಶೆಟ್ಟರ  ಕಾಡು ತೋಟ(ಅನಲಾಗ್ ಫಾರೆಸ್ಟ್)ದಲ್ಲಿ ತಿಂಗಳಿಗೆ ಎರಡು ಕ್ವಿಂಟಾಲ್ ನೋನಿ ಹಣ್ಣು ದೊರೆಯುತ್ತಿದೆ. ಈಗ ಇವನ್ನು ಕಷಾಯವಾಗಿಸಿ ಮಾರುಕಟ್ಟೆಗೆ ಕಳಿಸುವ ಸಿದ್ದತೆ ನಡೆದಿದೆ. ಸಾಗರದ ಮಂಚಾಲೆ ಪ್ರಕಾಶ್‌ರಾವ್  ತಮ್ಮ ಮನೆ ಹಿಂದಿನ ಗುಡ್ಡದ ಭೂಮಿಯಲ್ಲಿ ದಾಲ್ಚಿನ್ನಿ ನೆಟ್ಟು ಎರಡು ವರ್ಷವಾಗಿವೆ. ನೀರಾವರಿ ಅಗತ್ಯವಿಲ್ಲ, ದನಕರುಗಳ ಉಪಟಳವಿಲ್ಲ,ರೋಗಬಾಧೆಯಿಲ್ಲದ ಕಾಡು ಸಸ್ಯ ಸಮೃದ್ಧವಾಗಿ ಹಸಿರಾಡುತ್ತಿದೆ. ಚಿಕ್ಕಮಗಳೂರಿನ ಕೊಪ್ಪದ ಗ್ರಾಮ ಅರಣ್ಯ ಸಮಿತಿ ಕಾಡು ದಾಲ್ಚಿನ್ನಿ  ಎಲೆಗಳನ್ನು ಕಿಲೋಗೆ ೮-೨೦ರೂಪಾಯಿಗೆ ಮಾರಾಟ ಮಾಡಿದೆ. ಇವನ್ನು ಒಟ್ಟು ಮಾಡಿಸಿದರೆ ಕಿಲೋಗೆ  ೧೮೦ ರೂಪಾಯಿ ದೊರೆಯುವ ಮಾಹಿತಿಯಿದೆ!. ಉತ್ತರ ಕನ್ನಡದ ಮುಂಡಗೋಡದ ಅರಿಶಿನಗೇರಿ ಪ್ರದೇಶದಲ್ಲಿ ಕೇರಳ ಮೂಲದ ಹಲವು ಕುಟುಂಬಗಳಿವೆ. ಇವರು  ಮಾಡಹಾಗಲು(ಕಾಟುಪೀರೆ) ಕೃಷಿ  ಮಾಡುತ್ತಾರೆ. ಕಾಡು ಬಳ್ಳಿಗೆ ಕೃಷಿ ಆರೈಕೆ ನೀಡಿ ಕಣ್ಮರೆಯಾಗಲಿದ್ದ ಸಂಕುಲ ಉಳಿಸಿಕೊಂಡಿದ್ದಾರೆ. ಪ್ರತಿವರ್ಷ ಜುಲೈ-ಅಗಸ್ಟ್ ಸಂದರ್ಭದಲ್ಲಿ  ಮುಂಡಗೋಡ, ಹುಬ್ಬಳ್ಳಿ, ಶಿರಸಿ ಮಾರುಕಟ್ಟೆಗೆ ಇಲ್ಲಿನ ಮಾಡಹಾಗಲು ಪೂರೈಕೆಯಾಗುತ್ತದೆ. ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದ ಕರಾವಳಿ ಮನೆಯ ಹಿತ್ತಲು, ಬೇಲಿಯಂಚಿನಲ್ಲಿ ಜುಮ್ಮಿನಮರ ನೋಡಿರಬಹುದು. ಅವನ್ನು ಯಾರೂ ಬೆಳೆಸಿಲ್ಲ, ಆದರೆ ನೈಸರ್ಗಿಕವಾಗಿ ಹುಟ್ಟಿದ್ದನ್ನು ಕಡಿಯದೇ ಕಾಳಜಿಯಿಂದ ಜೋಪಾನ ಮಾಡಿದ್ದಾರೆ ಅಷ್ಟೇ!. ಹತ್ತಾರು ಕಿಲೋ ಮೀಟರ್ ನಡೆದು  ಹಸಿ ಹಸಿ ಮರಗಳನ್ನು ಕಡಿದು ಕಟ್ಟಿಗೆ ತರುವವರು ಮನೆ ಸನಿಹ ಮುಳ್ಳಿನ ಮರ ಉಳಿಸಿದ್ದಾದರೂ ಏಕೆ? ಕುತೂಹಲವಿತ್ತು. ಕರಾವಳಿಗರ ಮೀನು ಅಡುಗೆಗೆ ಜುಮ್ಮಿನಕಾಯಿ ವಿಶಿಷ್ಟ ರುಚಿ ನೀಡುತ್ತದೆ! ಹಿತ್ತಲಿನ ಸಾಂಬಾರವಾಗಿ ಕಾಡು ಮರ ಸಂರಕ್ಷಣೆಯಾಗಿದೆ.

ಮಲೆನಾಡಿನ ನಮ್ಮ ಕೃಷಿ ಬೆಳೆ ಆಯ್ಕೆಯ ಬದಲಾವಣೆ ಘಟ್ಟ ಇದು. ಅಡಿಕೆ, ತೆಂಗು, ಮಾವು, ಸಪೋಟ, ದಾಳಿಂಬೆ, ಕಾಫಿಗಿಂತ ಬೇರೆ ದಾರಿ ಹುಡುಕುವವರಿಗೆ ಕಾಡು ಸಸ್ಯಗಳು ಒಂದು ಅವಕಾಶ ತೆರೆದಿವೆ. ಕಾಡು ದಟ್ಟವಾಗಿದ್ದಾಗ ಅಡವಿ ಸಸ್ಯಗಳ ಬಳಸಿಬಲ್ಲ ಜ್ಞಾನ ಮನೆಮನೆಗಿತ್ತು. ಸ್ಥಳೀಯರ ಆಹಾರ, ಜೌಷಧ ಮೂಲವಾದ ಈ ಸಂಪತ್ತನ್ನು ಅರಣ್ಯ ಇಲಾಖೆ ಕಿರು ಅರಣ್ಯ ಉತ್ಪನ್ನಗಳೆಂದು ಲಿಲಾವು ಮಾಡಿತು, ಕಾಡು ಮೂಲೆಯ ಬಳಕೆ ಸೀಮೆ ದಾಟಿ ಮಾರುಕಟ್ಟೆಯತ್ತ ತಿರುಗಿಸಿತು. ದಾಲ್ಚಿನ್ನಿ, ಉಪ್ಪಾಗೆ, ಮುರುಗಲು, ರಾಮಪತ್ರೆ, ಮರಾಠಿಮೊಗ್ಗು ಹೀಗೆ ಹಲವು ಸಾಂಬಾರಗಳು ಸಿಟಿಗೆ ಹೊರಟವು. ಕಾಡು ಮರಗಳ ಟೊಂಗೆ ಕತ್ತರಿಸಿ, ಮರ ಕಡಿದು, ಚಕ್ಕೆ ಎತ್ತಿ ಇವನ್ನು ಸಂಗ್ರಹಿಸುವ ಪೈಪೋಟಿಯಲ್ಲಿ  ಅಡವಿ ಸಸ್ಯಗಳಿಗೆ ಆಪತ್ತು  ಒದಗಿತು. ಉತ್ಪನ್ನಗಳಿಗೆ ಬೆಲೆ ಏರುತ್ತಿರುವಂತೆ  ಕೃಷಿ ಭೂಮಿಯಲ್ಲಿ ಕಾಡು ಸಸ್ಯ ಬೆಳೆಸುವ ಕಾಳಜಿ ಗೋಚರಿಸಿತು. ಬೊಜ್ಜು ಕರಗಿಸಲು ಅಗತ್ಯವಾದ ಹೈಡ್ರಾಕ್ಸಿ ಸಿಟ್ರಿಕ್  ಆಸಿಡ್  ಉಪ್ಪಾಗೆ, ಮುರುಗಲಿನಲ್ಲಿದೆ  ಎಂದು ತಿಳಿದ ಬಳಿಕ  ಬೆಲೆ ಗಗನಕ್ಕೇರಿತು. ಅರಣ್ಯ ನರ್ಸರಿಗಳಲ್ಲಿ ಸಸಿಗಳು ಉದುಸಿದವು. ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆ ನಿಧಾನಕ್ಕೆ  ಹೆಚ್ಚಿತು. ಗ್ರಾಮೀಣ ಕೈಗಾರಿಕೆಗಳು ಕೋಕಂ ಜ್ಯೂಸ್ ತಯಾರಿಗೆ ನಿಂತವು. ಹತ್ತಾರು ವರ್ಷ ಬಳಿಕ ಈಗ ನೋಡಿದರೆ ಒಂದಿಷ್ಟು ಸಸ್ಯ ಬೆಳೆಸಿದವರು ಕಣ್ಣೆದುರು ನಿಲ್ಲುತ್ತಾರೆ. ಕಿಸೆಗೆ ಕಾಸು ನೀಡುವ ಕಾಡು ಸಸ್ಯಗಳು ಕೃಷಿಗೆ ಒಲಿದಿವೆ.

ನಮ್ಮ ಕೃಷಿ ಬೆಳೆಗಳ ಮೂಲ ಕಾಡು. ಅಡವಿ ಸಸ್ಯ ಹುಡುಕಿ ಕೃಷಿ ಮಾನ್ಯತೆ ನೀಡುವ ಕೆಲಸ ವನವಾಸಿ ಮೂಲದಿಂದ ಆರಂಭ. ಈಗ ಮಾರುಕಟ್ಟೆಗೆ ತಕ್ಕಂತೆ ನಮ್ಮ ಅರಣ್ಯ ಪ್ರೀತಿ ಬದಲು.  ಕಾಡು ಗಿಡ ಎಂದು ಹೆಸರೇ ಗೊತ್ತಿಲ್ಲದಂತಿದ್ದ ಹಲವು ಸಸ್ಯಗಳತ್ತ  ಸಂಶೋಧನೆಯ  ಹೊಸ ಬೆಳಕು ಮೂಡುತ್ತಿದೆ. ಅಡಿಕೆ, ತೆಂಗಿನ ತೋಟಗಳಲ್ಲಿ ಶ್ರೀಗಂಧ, ಶತಾವರಿ, ಗೌರಿಹೂವು ಹೀಗೆ ವಿವಿಧ ಸಸ್ಯ ಬೆಳೆಸುವ ಆಸಕ್ತಿ ಕಾಣುತ್ತಿದೆ. ರಾಮಪತ್ರೆಯ ಕಸಿಗಿಡಗಳು, ಕಾಡು ನೋನಿಯ ಸುಧಾರಿತ ತಳಿಗಳ ಹುಡುಕಾಟ ಸಹಜವಾಗಿದೆ. ಒಂದು ಮಿಡಿಮಾವಿನ ಮರ ವರ್ಷಕ್ಕೆ ೪೫ ಸಾವಿರ ಆದಾಯ ನೀಡುತ್ತದೆಂಬ ವರ್ತಮಾನ ಶಿರಸಿಯ ಮಾಳಂಜಿಯ ನಾಗೇಶ ನಾಯ್ಕರ ಹೊಲದಲ್ಲಿ ಕೇಳಿಸಿತು. ಮಿಡಿಮಾವು ಮಾರುಕಟ್ಟೆ ಬೇಡಿಕೆ ಗಮನಿಸಿದವರು ಸಸಿ ನೆಡಲು ಆರಂಭಿಸಿದರು. ಉತ್ತರ ಕನ್ನಡದಲ್ಲಿ ಅಪ್ಪಟ ಕಾಡು ಮಾವಿನ ಕಸಿಗಿಡಗಳು  ಕಳೆದ ೪-೫ ವರ್ಷಗಳ ಈಚೆಗೆ ಲಕ್ಷಾಂತರ ನಾಟಿಯಾಗಿವೆ, ಮಿಡಿಮಾವಿನ ತೋಟಗಳೆದ್ದಿವೆ. ದುರ್ನಾತ ಬೀರುವ ಗಿಡವೆಂದೇ ಅವಜ್ಞೆಗೆ ಗುರಿಯಾದ ಹೇತಾರಿ ಸಸ್ಯಕ್ಕೆ  ಜೌಷಧೀಯ ಮಹತ್ವ ಬಂದಿದೆ. ಕಾಡು ಗಿಡ ಕೃಷಿ ಅರಣ್ಯದಲ್ಲಿ ಸ್ಥಾನ ಪಡೆಯುತ್ತಿದೆ. ಹುಣಸೂರಿನ ಪ್ರದೇಶದಲ್ಲಿ ಹೆಬ್ಬೇವು  ಭೀಮ ಗಾತ್ರದಲ್ಲಿ ಬೆಳೆಯುವದು ಗಮನಕ್ಕೆ ಬಂದ ಬಳಿಕ ಖಾಸಗಿ ಭೂಮಿಗಳಿಗೆ ಹೆಬ್ಬೇವು ಹಬ್ಬಿದೆ. ಹಾಸನದ ಮಾರ್‌ಶೆಟ್ಟಿಹಳ್ಳಿ ಗೇಟ್ ಸನಿಹದ ಚಲುವೆ ಗೌಡರು ತೆಂಗಿನ ತೋಟದಲ್ಲಿ ಬೆಳೆಸಿದ ಸಾಲು ಸಸಿಗಳಿಗೆ ಈಗ ೧೦ ವರ್ಷ, ಹೆಬ್ಬೇವಿನ ಹೆಮ್ಮರ ಹಸುರಿನ ಹೊಸಕತೆ ಹೇಳುತ್ತಿದೆ.

ಕಾಡು  ಉಳಿಸಬೇಕು, ಕಣಿವೆ ಬಚಾವು ಮಾಡಬೇಕು ಎಂದು ನಾವು ಭಾಷಣ, ಆಂದೋಲನ ಮಾಡುವದಕ್ಕಿಂತ ಜನ ಬೆಳೆಸಿದ ಸಸ್ಯ ನೋಡಿದರೆ ವೈವಿಧ್ಯ ಸಂರಕ್ಷಣೆಯ ಕಾಲುದಾರಿ  ಕಾಣುತ್ತದೆ. ಕಾಡು ಸಸ್ಯಗಳಿಗೆ ಹೇಗೆ ಜಾಗತಿಕ ಬೇಡಿಕೆ ಹೆಚ್ಚುತ್ತಿದೆ ಎಂಬುದಕ್ಕೆ ಪಶ್ಚಿಮ ವರ್ಜಿನಿಯಾದ ಸಂಶೋಧನೆಯನ್ನು ಕೊಂಚ ಗಮನಿಸಬೇಕು. ಅಲ್ಲಿನ ವೀಲಿಂಗ್ ಜಸೂಟ್ ವಿಶ್ವವಿದ್ಯಾಲಯದ ಡಾ.ಬ್ರಯಾನ್ ರಾಡೆನ್‌ಬುಶ್ ಹೆದ್ದಾರಿಯ ಲಾರಿ ಚಾಲಕರ ಚಲನೆಯ ದಕ್ಷತೆ ಗಮನಿಸಿದರು. ಸುದೀರ್ಘ ಪ್ರಯಾಣದಲ್ಲಿ ಬಳಲಿಕೆ, ಮಾನಸಿಕ ಒತ್ತಡದಲ್ಲಿರುವವರು  ಹೆಚ್ಚು ಅಪಘಾತ ಮಾಡುತ್ತಿರುವದು ಬೆಳಕಿಗೆ ಬಂದಿತು. ಇವರಿಗೆ ನಮ್ಮ  ಕಾಡು ದಾಲ್ಚಿನ್ನಿಯ  ಚಾಕಲೇಟು ತಿನ್ನಿಸಿದರು. ಚಾಲಕರಲ್ಲಿ ದಾಲ್ಚಿನ್ನಿಯ ಸುವಾಸನೆ ಹೊಸ ಚೈತನ್ಯ ನೀಡಿತು, ಕೆಲಸದ ದಕ್ಷತೆಯಲ್ಲಿ ಪ್ರಗತಿಯಾಯಿತು. ಆಲಸ್ಯ, ನಿದ್ದೆ ಓಡಿ ಹೋಯಿತು. ಲಾರಿಯ ವೇಗ ಹೆಚ್ಚಿ ಸರಕು ಸಾಗಣೆ ಸಲೀಸಾಯಿತು! ಲಾರಿ ಚಾಲಕರಷ್ಟೇ ಅಲ್ಲ, ಕ್ರೀಡಾಪಟು, ಗುಮಾಸ್ತರಿಗೂ ಬಳಲಿಕೆ ತಗ್ಗಿಸುತ್ತದೆಂಬುದು ಸಾಬೀತಾಯಿತು. ಈಗ ಎಲ್ಲರಿಗೂ ಒತ್ತಡ ಜಾಸ್ತಿ, ಬಳಲಿಕೆ ಸಹಜ. ಬೆಳಿಗ್ಗೆ ಏಳುವಾಗಲೇ ದಾಲ್ಚಿನ್ನಿ ಚಾಕಲೇಟು ಅಗತ್ಯವಿರುವ ಕುಂಭಕರ್ಣ ಸಂತತಿ  ಎಲ್ಲರ ಮನೆಮನೆಗಳಲ್ಲಿದೆ. ಬೇಡಿಕೆ ಏರಲು ಇನ್ನೇನು ಬೇಕು? ಇಂತಹ ಸಂಶೋಧನೆಗಳನ್ನು ಎತ್ತಿ ಹೇಳಿ ಕಾಡುತ್ಪನ್ನಕ್ಕೆ ಬೇಡಿಕೆ ಹೆಚ್ಚಿಸುವ ಕೆಲಸ ನಡೆದಿದೆ. ಮಲೆನಾಡಿನ ನಾವು ಮರ ಕಡಿದು ನಾಶ ಮಾಡುವದಕ್ಕಿಂತ ಗಿಡ ಬೆಳೆಸಿ ಬಳಸುವ ಪರಿಜ್ಞಾನ ಹಂಚಬೇಕು.

ಕೃಷಿಗೂ ಕಾಡಿಗೂ ಸಂಬಂಧವಿರಬೇಕು ಎಂಬುದು ಸುಸ್ಥಿರ ಸಾವಯವದ ಸುಲಭ ಸೂತ್ರ. ಶ್ರೀಲಂಕಾದ ಅನಲಾಗ್ ಫಾರೆಸ್ಟ್‌ನ ಬೀಜಮಂತ್ರ! ನಮ್ಮ ಪಕ್ಕದ ಅಡವಿ ಸಸ್ಯ ಕೃಷಿಯಲ್ಲಿ ಆಹಾರ, ಔಷಧಗಳ ಜತೆಗೆ  ಜಾಗತಿಕ ಮಾರುಕಟ್ಟೆ ತಲುಪುವ ಅವಕಾಶಗಳಂತೂ  ಕಾಡು-ಹಳ್ಳಿಗರಿಗೆ ಹೊಸ ಚೇತನ ನೀಡಬಹುದು. ಕಾಡು ಮರದ ಉತ್ಪನ್ನಗಳು ಅಪ್ಪಟ ಸಾವಯವ ಎಂಬುದನ್ನು ನೆನಪಿಸಬೇಕು. ಆಗ ಕಾಡು ಸಸ್ಯಗಳು ಕೃಷಿ ಏಳ್ಗೆಯ ಕವೆಗೋಲಾಗಬಹುದು. ಇದು  ಮಲೆನಾಡಿನ ಭವಿಷ್ಯದ ಕೃಷಿ ನೀತಿಯಾಗಬಹುದು.