ಪತ್ರಿಕೆಗಳಲ್ಲಿ ದೂರದಲ್ಲೆಲ್ಲೋ ಸೌರಮಂಡಲದಂತಹುದೇ ನಕ್ಷತ್ರ-ಗ್ರಹಗಳ ಸಂಸಾರವೊಂದು ಕಂಡು ಬಂದಿದೆ ಎನ್ನುವ ಸುದ್ದಿ ಮೆರೆದಾಡಿತು. ಅಮೆರಿಕೆಯ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸ್ಮಿತ್ಸೋನಿಯನ್ ಕೇಂದ್ರದ ಖಭೌತ ವಿಜ್ಞಾನಿ ಡೇವಿಡ್ ಚಾರ್ಬೋನಿಯ ನೇತೃತ್ವದಲ್ಲಿ ಖಗೋಳವಿಜ್ಞಾನಿಗಳ ತಂಡವೊಂದು ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಶೋಧನೆಯೇ ಈ ಸುದ್ದಿಗೆ ಮೂಲ. ಹೌದೇ? ಹಾಗೊಂದು ಹೊಸ ಲೋಕ ಕಂಡಿತೇ? ಎಲ್ಲಿದೆ ಆ ಲೋಕ? ಹೇಗಿದೆ ಆ ಪ್ರಪಂಚ? ಅಲ್ಲಿ ಜೀವಿಗಳಿರಬಹುದೇ? ಇದು ಭೂಮಿಯಂತಹುದೇ ಲೋಕವೆನ್ನುವುದು ಖಾತ್ರಿಯೇ?

ಈ ಕೌತುಕ ಸಹಜವೇ. ಖಸ್ವರ್ಗವೇ ಇಳೆಗೆ ಇಳಿದಂತೆ,ಖ ಎನ್ನುವ ನುಡಿ ಕೇಳಿದ್ದೀರಲ್ಲ!  ಈ ಲೋಕದಂತೆಯೋ, ಅಥವಾ ಇದಕ್ಕಿಂತಲೂ ಮಿಗಿಲಾದ ಮತ್ತೊಂದು ಲೋಕವೋ ಇದೆ ಎನ್ನುವ ಆಶಯವನ್ನು ಈ ನುಡಿಯಲ್ಲಿ ಕಾಣಬಹುದು. ಪ್ರಪಂಚದ ಎಲ್ಲ ಸಂಸ್ಕೃತಿಗಳ ಕಥೆ, ಪುರಾಣಗಳಲ್ಲೂ ಈ ಆಶಯ ಕಾಣಸಿಗುತ್ತದೆ.  ಆದರೆ ಕಳೆದ ಮೂರ್ನಾಲ್ಕು ಶತಮಾನಗಳ ಅಧ್ಯಯನಗಳು ಕಇರುವುದೊಂದೇ ಭೂಮಿಕಿ ಎನ್ನುವುದನ್ನು ಸ್ಪಷ್ಟವಾಗಿಸಿವೆ. ಇದೇ ಸತ್ಯ ಎಂದೂ ಮಾನವತೆ ನಂಬಿಯಾಗಿದೆ. ಅಂತಹ ಸಮಯದಲ್ಲಿ ಇಳೆಯಂತಹುದೇ ಮತ್ತೊಂದು ಲೋಕವಿರಬಹುದು ಎನ್ನುವ ಸುದ್ದಿ ಬೆರಗನ್ನುಂಟು ಮಾಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ವಾಸ್ತವವೇನೆಂದರೆ ಕಳೆದ ಒಂದು ದಶಕಗಳಿಂದೀಚೆಗಷ್ಟೆ ಸೌರಮಂಡಲದ ಆಚೆಗೂ ನಕ್ಷತ್ರಗಳನ್ನು ಪ್ರದಕ್ಷಿಣೆ ಬರುವ ಗ್ರಹಗಳು ಕಾಣಿಸಿವೆ. ಸೌರಮಂಡಲದ ಆಚೆಗೆ ಹೊಸದೊಂದು ನಕ್ಷತ್ರ-ಗ್ರಹಗಳ ಸಂಸಾರ ಮೊತ್ತಮೊದಲಿಗೆ 1997ರ ಸುಮಾರಿಗೆ ಪತ್ತೆಯಾಯಿತು. ಅಂದಿನಿಂದ ಇಂದಿನವರೆಗೆ ಸುಮಾರು 400ಕ್ಕೂ ಹೆಚ್ಚು ಇಂತಹ ಗ್ರಹಗಳನ್ನು ಗುರುತಿಸಲಾಗಿದೆ.  ಆದರೆ ಇದುವರೆವಿಗೂ ಪತ್ತೆಯಾದ ಯಾವ ಗ್ರಹದಲ್ಲಿಯೂ ವಾತಾವರಣವಿದೆ ಎನ್ನುವ ಸುಳಿವು ಸಿಕ್ಕಿರಲಿಲ್ಲ. ಇದೀಗ ಪತ್ತೆಯಾಗಿರುವ ಈ ಹೊಸ ಗ್ರಹದಲ್ಲಿ ವಾತಾವರಣವಿರುವ ಕುರುಹುಗಳು ದೊರಕಿವೆ ಎನ್ನುವುದೇ ದೊಡ್ಡ ಸುದ್ದಿ.

ಭೂಮಿಯ ಅನನ್ಯತೆಗೆ ಅದರಲ್ಲಿರುವ ಜಲರಾಶಿ ಹಾಗೂ ವಿಶಿಷ್ಟ ವಾತಾವರಣವೇ ಕಾರಣ. ಇವೆರಡೂ ಒಟ್ಟುಗೂಡಿದ ಫಲವೇ ಭೂಮಿಗೆ ಜಲಗ್ರಹ ಹಾಗೂ ಜೀವಗ್ರಹ ಎನ್ನುವ ಬಿರುದುಗಳು ದೊರಕಿವೆ. ಇದು ಒಂದು ವಿಧದಲ್ಲಿ ಆಕಸ್ಮಿಕವೂ ಹೌದು.  ವಿಶ್ವದ ಆದಿಯಲ್ಲಿ ದೂಳಿನ ಕಣಗಳಿಂದ ಸೌರಮಂಡಲವು ರೂಪುಗೊಳ್ಳುತ್ತಿದ್ದ ಸಮಯದಲ್ಲಿ ಆದ ಆಕಸ್ಮಿಕದಿಂದಾಗಿ ಭೂಮಿಗೆ ವಾತಾವರಣ ಹಾಗೂ ನೀರು ದೊರಕಿದೆ. ಸೌರಮಂಡಲದಲ್ಲಿರುವ ಉಳಿದ ಗ್ರಹಗಳಲ್ಲಿ ಕೆಲವದರಲ್ಲಿ ಅಧಿಕ ಉಷ್ಣತೆಯಿಂದಾಗಿ ರೂಪುಗೊಂಡ ನೀರು ಒಡೆದು ಮರಳಿ ಆಕ್ಸಿಜನ್ ಮತ್ತು ಹೈಡ್ರೊಜನ್ ಅನಿಲಗಳಾಗಿ ಬಿಟ್ಟಿದೆ. ಇನ್ನು ಕೆಲವದರಲ್ಲಿ ಉಷ್ಣತೆ ಸಾಕಾಗದೆ ಅದು ಮಂಜಾಗಿಯೇ ಉಳಿದಿದೆ. ನೀರು ದ್ರವವಾಗಿಯೇ ಇರುವ ಒಂದೇ ಗ್ರಹ ಭೂಮಿ. ಸೌರಮಂಡಲದಾಚೆ ಇರುವ ಕೋಟ್ಯಂತರ ನಕ್ಷತ್ರಗಳಲ್ಲೂ ಸೂರ್ಯನಂತಹವು ಕೆಲವು ಇರಬಹುದು. ಅಂತಹ ನಕ್ಷತ್ರಗಳಿಗೂ ಗ್ರಹಕುಟುಂಬ ಇದ್ದೀತು. ಹಾಗಿರುವ ಗ್ರಹಗಳಲ್ಲಿ ಯಾವುದಾದರೂ ಭೂಮಿಯಂತೆಯೇ ಇರಬಹುದು ಎನ್ನುವ ಊಹೆಯಿಂದ ಸೌರಮಂಡಲದಾಚೆಯ ಲೋಕಗಳಿಗಾಗಿ ಹುಡುಕಾಟ ನಡೆಯಲು ಕಾರಣ.

 

ಈ ಹುಡುಕಾಟ ಸುಲಭವಲ್ಲ. ಏಕೆಂದರೆ ನಮಗೆ ಬಹಳ  ಹತ್ತಿರವಿರುವ ನಕ್ಷತ್ರ ಸೀರಿಯಸ್ (ಲುಬ್ಧಕ) ಸುಮಾರು 85 ಲಕ್ಷ ಕೋಟಿ ಕಿಲೋಮೀಟರು ದೂರದಲ್ಲಿದೆ. ಇಷ್ಟು ದೂರದಲ್ಲಿರುವ ನಕ್ಷತ್ರಗಳನ್ನು ಸ್ಪಷ್ಟವಾಗಿ ಕಾಣುವುದೇ ಕಷ್ಟ. ಹೀಗಾಗಿ, ನೇರವಾಗಿ ಈ ಗ್ರಹಗಳನ್ನು ನೋಡಲಾಗದಿದ್ದರೂ ಅವುಗಳ ಇರವಿನಿಂದ ನಕ್ಷತ್ರದ ಮೇಲಾಗುವ ಪರಿಣಾಮಗಳನ್ನು ಪತ್ತೆ ಮಾಡಿ ಗ್ರಹ ಇದೆ ಎಂದು ತಿಳಿದುಕೊಳ್ಳುತ್ತಾರೆ.  ಉದಾಹರಣೆಗೆ, ನಕ್ಷತ್ರಗಳ ಬಳಿಯಲ್ಲಿ ಗ್ರಹಗಳಿದ್ದಾಗ ಗ್ರಹಗಳ ಗುರುತ್ವಾಕರ್ಷಣೆಯ ಪ್ರಭಾವದಿಂದಾಗಿ ನಕ್ಷತ್ರಗಳಿಂದ ಬರುವ ಬೆಳಕು ತುಸು ಕದಲಿದಂತೆ ಅನಿಸುತ್ತದೆ. ಇದನ್ನು ಗಮನಿಸಿ ಅಲ್ಲಿ ಗ್ರಹವಿರಬಹುದು ಎಂದು ಊಹಿಸುತ್ತಾರೆ. ಗ್ರಹಗಳು ನಕ್ಷತ್ರಗಳಿಂದ ಬರುವ ಬೆಳಕಿಗೆ ಅಡ್ಡ ಬಂದಾಗ ನಕ್ಷತ್ರಗಳ ಹೊಳಪು ಕುಂದಿದಂತೆ ಅನಿಸುತ್ತದೆ. ಹೊಳಪು ನಿಯತ ಕಾಲಾವಧಿಯಲ್ಲಿ ಕುಂದಿ, ಹೆಚ್ಚಾಗುತ್ತಲಿದ್ದರೆ, ನಕ್ಷತ್ರದ ಸುತ್ತ ಯಾವುದೋ ಕಾಯ ಸುತ್ತುತ್ತಿದೆ ಎಂದು ತಿಳಿಯಬಹುದು. ಸುತ್ತುವ ಕಾಯದ ಗಾತ್ರವನ್ನೂ ಇದರಿಂದ ಲೆಕ್ಕ ಹಾಕಬಹುದು.

ಇದೀಗ ಮತ್ತೊಂದು ಲೋಕವೆಂದು ಕರೆಸಿಕೊಳ್ಳುತ್ತಿರುವ ಜಿಜೆ1214ಬಿ ಎನ್ನುವ ಗ್ರಹ ಮತ್ತು ಅದರ ಸೂರ್ಯ (ನಕ್ಷತ್ರ ಎನ್ನಿ) ಸೌರಮಂಡಲದಾಚೆ ಗುರುತಿಸಲಾದ ಇತರೆ ಗ್ರಹಗಳಂತಹ ಕಾಯಗಳಿಗೆ ಹೋಲಿಸಿದರೆ ಬಹಳ ಹತ್ತಿರದಲ್ಲಿಯೇ ಇದೆ ಎನ್ನಬಹುದು. ಸಮೀಪ ಎಂದರೆ ಸುಮಾರು 13 ಪಾರ್ಸೆಕ್ನಷ್ಟು ದೂರ ಅಥವಾ ನಮಗೂ ಸೂರ್ಯನಿಗೂ ಇರುವ ಅಂತರದ 273000 ಪಟ್ಟು ದೂರದಲ್ಲಿದೆ.  ಎರಡು ವರ್ಷಗಳ ಹಿಂದೆ  ಸೂರ್ಯನಿಗೆ ಸರಿಸಮಾನವಾದ ಗಾತ್ರವಿರುವ ನಕ್ಷತ್ರಗಳನ್ನು ಗುರುತಿಸಿ ಅವುಗಳಲ್ಲಿ ಯಾವುದರಲ್ಲಾದರೂ ಗ್ರಹಗಳಿರಬಹುದೇ ಎಂದು ಹುಡುಕಲು ಕಎಂ-ಅರ್ಥ್ಕಿ ಅನ್ನುವ ಅಂತಾರಾಷ್ಟ್ರೀಯ ಯೋಜನೆಯೊಂದು ಆರಂಭವಾಯಿತು. ವಿವಿಧ ದೇಶಗಳಲ್ಲಿರುವ ದೂರದರ್ಶಕಗಳಿಂದ ಈ ನಕ್ಷತ್ರಗಳನ್ನು ಗಮನಿಸಿ, ಗ್ರಹಗಳನ್ನು ಹುಡುಕುವ ಪ್ರಯತ್ನ ಇದು. ಈ ನಕ್ಷತ್ರಗಳ ಬೆಳಕಿಗೆ ಎಲ್ಲಿಯಾದರೂ ಗ್ರಹಣ ಹಿಡಿಯುತ್ತದೆಯೋ ಎಂದು ಅವುಗಳಿಂದ ಬರುವ ಬೆಳಕಿನ ಚಿತ್ರಣಗಳನ್ನು ಪರೀಕ್ಷಿಸಲಾಯಿತು. ಅದರಲ್ಲಿ ಜಿಜೆ1214 ಎನ್ನುವ ನಕ್ಷತ್ರದ ಬೆಳಕು 225 ಬಾರಿ ಕುಂದಿದ್ದು ಕಂಡು ಬಂದಿತು. ಎಂಟು ದೂರದರ್ಶಕಗಳನ್ನು ಅದರತ್ತ ನೆಟ್ಟಿಸಿ ಗಮನಿಸಲಾಯಿತು. ನಕ್ಷತ್ರದ ಬೆಳಕು ನಿಜವಾಗಿಯೂ ಕುಂದುತ್ತಿತ್ತು. ಅದರ ಬಳಿ ಗ್ರಹವೊಂದಿರಬಹುದು ಎನ್ನುವ ಗುಮಾನಿ ಉಂಟಾಯಿತು.  ಆಕಾಶದಲ್ಲಿ ಆ ನಕ್ಷತ್ರವಿರುವ ಸ್ಥಾನದಲ್ಲಿ ಬೇರೊಂದು ನಕ್ಷತ್ರ ಇಲ್ಲವೆನ್ನುವುದು ಖಾತ್ರಿಯಾದಾಗ, ಇದು ಗ್ರಹವೇ ಇರಬೇಕು ಎನ್ನಿಸಿತು. ಅದಕ್ಕೆ ಜಿಜೆ1214ಬಿ ಎಂದು ನಾಮಕರಣವೂ ಆಯಿತು.

ಜಿಜೆ1214ಬಿ ಇಷ್ಟು ಹತ್ತಿರದಲ್ಲಿ ಇರುವುದರಿಂದ ಅದರಲ್ಲಿ ವಾತಾವರಣ ಇರುವ ಸುಳಿವು ಸಿಕ್ಕಿದೆ ಎನ್ನುತ್ತಾರೆ ಚಾರ್ಬೋನಿ. ನಿಜ, ಇಷ್ಟು ಹತ್ತಿರದಲ್ಲಿ ಇದ್ದರೂ ಆ ಗ್ರಹ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಕಾಣಿಸುವುದೇನಿದ್ದರೂ ಆ ನಕ್ಷತ್ರದ ಮಿಣುಕು ಬೆಳಕು ಅಷ್ಟೆ. ಅದೂ ಗ್ರಹ ಪ್ರದಕ್ಷಿಣೆ ಹಾಕುವುದರಿಂದ ಹೆಚ್ಚು, ಕಡಿಮೆ ಆಗುತ್ತಿರುತ್ತದೆ. ಹೀಗಿದ್ದೂ ಅದರಲ್ಲಿ ವಾತಾವರಣ ಇರಬೇಕು ಎಂದು ಪತ್ತೆ ಮಾಡಿದ್ದು ವಿಶೇಷವೇ ಸರಿ. ನಕ್ಷತ್ರದ ಬೆಳಕಿಗೆ ಗ್ರಹ ಅಡ್ಡಬಂದಾಗ ನಕ್ಷತ್ರದ ಹೊಳಪು ಕುಂದಿದಂತೆ ತೋರುತ್ತದಷ್ಟೆ. ಬೆಳಕು ಎಷ್ಟು ಹೊತ್ತು ಕುಂದಿರುತ್ತದೆ ಎನ್ನುವುದನ್ನು ಪತ್ತೆ ಮಾಡಿದರೆ, ಗ್ರಹ ಎಷ್ಟು ವೇಗವಾಗಿ ಚಲಿಸುತ್ತಿದೆ ಎಂದು ಲೆಕ್ಕ ಹಾಕಬಹುದು. ಅದರ ಜೊತೆಗೇ ಗ್ರಹದ ಗಾತ್ರವನ್ನೂ ಲೆಕ್ಕ ಹಾಕುವುದು ಸಾಧ್ಯ. ಹೀಗೆ ಲೆಕ್ಕ ಹಾಕಿದಾಗ ಗ್ರಹದ ವ್ಯಾಸ ಭೂಮಿಯ ಐದರಷ್ಟಿರಬಹುದು ಎಂದು ಅಂದಾಜಾಗಿದೆ. ತೂಕವೂ ಅಷ್ಟೆ. ಭೂಮಿಯ ಏಳು ಪಟ್ಟು ಭಾರಿ ಈ ಗ್ರಹ. ಅಂದರೆ ಇದು ಭೂಮಿಯಂತೆಯೂ ಇಲ್ಲ, ಸೌರಮಂಡಲದ ಗುರು, ನೆಪ್ಚೂನ್ಗಳಂತೆ ತಣ್ಣಗಿನ ಕಾಯವೂ ಆಗಿರಲಿಕ್ಕಿಲ್ಲ ಎಂದು ಚಾರ್ಬೋನಿ ಊಹಿಸಿದ್ದಾರೆ. ಅದು ನಕ್ಷತ್ರಕ್ಕೆ ಅಡ್ಡ ಬಂದಾಗ ಎರಡು ಸ್ಥಾನದಲ್ಲಿ ಬೆಳಕಿನ ಪ್ರಖರತೆಯಲ್ಲಿ ವ್ಯತ್ಯಾಸವನ್ನು ಕಂಡಿದ್ದಾರೆ. ಇದು ಗ್ರಹದ ಮೇಲಿರುವ ವಾತಾವರಣದೊಳಗಿನಿಂದ ನಕ್ಷತ್ರದ ಬೆಳಕು ಹಾದು ಬರುತ್ತಿರುವುದರ ಸೂಚನೆ ಎನ್ನಲಾಗಿದೆ. ಜೊತೆಗೆ ಈ ವ್ಯತ್ಯಾಸ, ಬೆಳಕು ಹೈಡ್ರೊಜನ್ ಯುಕ್ತ ಅನಿಲವೊಂದರ ಮೂಲಕ ಹಾದು ಬರುವಾಗ ತೋರುವ ಲಕ್ಷಣಗಳನ್ನೇ ತೋರುತ್ತದೆಯಾದ್ದರಿಂದ, ಅದು ಹೈಡ್ರೊಜನ್ ಯುಕ್ತ ವಾತಾವರಣವಿರಬೇಕು ಹಾಗೂ ಅಷ್ಟು ಉಷ್ಣತೆಯಲ್ಲಿ ಹೈಡ್ರೊಜನ್ ಅನಿಲವೊಂದೇ ಇರುವ ಸಾಧ್ಯತೆ ಕಡಿಮೆಯಾದ್ದರಿಂದ, ಅದು ನೀರಿನ ರೂಪದಲ್ಲಿ ಇರಬಹುದು ಎಂದು ಊಹಿಸಿದ್ದಾರೆ. ಇಷ್ಟೇ ಆದರೆ ಅಲ್ಲಿ ಜೀವಿಗಳು (ಭೂಮಿಯಲ್ಲಿ ಇರುವಂಥ ಜೀವಿಗಳು ಎನ್ನಿ) ಇರುವ ಸಾಧ್ಯತೆ ಕಡಿಮೆಯೇ!

ಇವೆಲ್ಲವೂ ಊಹೆಯಷ್ಟೆ! ಏಕೆಂದರೆ ಈ ಗ್ರಹವನ್ನು ಇನ್ನೂ ಯಾರೂ ನೋಡಿಲ್ಲ. ಚಂದ್ರನಿಂದ ನಮ್ಮ ಭೂಮಿಯ ಸುಂದರ ದೃಶ್ಯವನ್ನು ಕಂಡ ಹಾಗೆ ಈ ಗ್ರಹದ ಚಿತ್ರವನ್ನು ಯಾರೂ ತೆಗೆದಿಲ್ಲ. ಏನಿದ್ದರೂ, ನಕ್ಷತ್ರದಿಂದ ಹೊಮ್ಮಿದ ಬೆಳಕಿನಲ್ಲಿರುವ ವ್ಯತ್ಯಾಸಗಳಷ್ಟೆ ಗ್ರಹವಿರಬೇಕು ಎಂದು ಸೂಚಿಸಿವೆ. ಕಳೆದ ತಿಂಗಳಷ್ಟೆ ಹೀಗೆ ಭೂಮಿಯಿಂದ ಕಂಡು ಗ್ರಹವೆಂದು ಭಾವಿಸಿದ್ದ ಕಾಯವೊಂದು ಬರೀ ಭ್ರಮೆ ಎಂದು ತಿಳಿದುಬಂದಿತ್ತು. ಜಿಜೆ1214ಬಿ ಭ್ರಮೆಯಲ್ಲ. ಮತ್ತೊಂದು ಲೋಕ ಎಂದು ಆಶಿಸೋಣ.