gತನಗಾಗಳ್ ಪೊಡವಟ್ಟಳಂ ಪದಪಿನಿಂ ಪೊಣ್ಮಿತ್ತಬಾಯಿತ್ತ ಬಾ
ಯೆನುತಂ ತನ್ನ ಕೆಲಕ್ಕೆ ಕಾಂತೆ ಕರೆದಾದಂ ಭ್ರಾಂತಿಯಿಂದಂ ಸಖೀ
ಜನಮೆಲ್ಲಂ ನಡೆನೋಡೆ ಷಿಂತಿರಿಸಿಕೊಂಡಾಗಳ್ಮೊದಲ್ಗೊಂಡಲಂ
ಪಿನೊಳಾ ಕಾಂತೆಯ ಮೆಯ್ಯನೊಯ್ಯನೆಳವುತ್ತಿರ್ದಳ್ ಕರಾಂಭೋಜದಿಂ             ೪೦

ವ|| ಆಗಳ್ ಯುವರಾಜಂ ಕೃತಸಕಲಾಗಮನೋಚಿತೋಪಚಾರನಾಗಿ ತದವಸ್ಥೆಯಪ್ಪ ಚಿತ್ರರಥನಂದನೆಯಂ ನೋಡಿ

ಇಂತಪ್ಪವಸ್ಥೆಯಿಂದಿವ
ಳಿಂತಿರೆಯುಂ ದುರ್ವಿದಗ್ಧವೆನ್ನ ಮನಂ ಮ
ತ್ತೆಂತುಂ ನಂಬಿದುದಿಲ್ಲಾ
ನಿಂ ತಿಳಿವೆಂ ನಿಪುಣವಚನದಿಂ ಕಾಮಿನಿಯಂ             ೪೧
ವ|| ಎಂದು ತನ್ನ ಮನದೊಳೆ ಬಗೆದು ವಾಗ್ವಿಲಾಸಿನೀವಲ್ಲಭಂ ವಿದಗ್ಧವಿದ್ಯಾಧರಂ ಗಂಧರ್ವರಾಜನಂದನೆಯನಿಂತೆಂದಂ

ಪರಿತಾಪಮಾವ ತೆಱದಿಂ
ದೊರೆಕೊಂಡುದೊ ದೇವಿ ನಿನಗೆ ನೋವಿದು ನಿನ್ನಿಂ
ಪಿರಿದೆನ್ನದದಱನೆಂತುಂ
ಸರೋಜಮುಖಿ ನಿನ್ನ ಸುಖಮನಾಂ ಬಯಸಿದಪೆಂ      ೪೨

ಎನಿತಂಗಜಾತತಾಪಮೊ
ತನು ಕಂಪಿಸುತಲರ ಮೇಲೆ ಬೀೞ್ದುದಿದಂ ಕಂ
ಡನುಕಂಪಮಾನಮೆನ್ನಯ
ತನುವುಂ ಬೀೞಲ್ಕೆ ಬಗೆದಪುದು ಮೃಗನಯನೇ          ೪೩

ವ|| ಅದಲ್ಲದೆಯುಂ ದೇವಿ ಭವದವಸ್ಥೆಯಂ ಕಂಡೀ ಪರಿಜನಂ ಮಱುಗುತ್ತಿರ್ದಪುದದು ಕಾರಣದಿಂ

ಲಲಿತಾಂಗಿ ನೀಂ ವಿವಾಹೋ
ಜ್ವಲಮೆನಿಸಿದ ಮಂಗಳಪ್ರಸಾಧನಚಯಮಂ
ತಳೆ ಕುಸುಮಶಿಳೀಮುಖಮಂ
ತಳೆದೊಡೆ ನವಲತಿಕೆ ಪಿರಿದುಮೊಪ್ಪುವುದಲ್ತೇ           ೪೪

ಆಲೋಚಿಸುತ್ತಿದ್ದಳು. ೪೦. ಆಗ ತನಗೆ ನಮಸ್ಕಾರ ಮಾಡಿದ ಆ ಪತ್ರಲೇಖೆಯನ್ನು ಪ್ರೀತಿಯುಕ್ಕಿ ಬರುತ್ತಿರಲು,. ‘ಇತ್ತ ಬಾ’ ಹೇಳುತ್ತಾ, ತನ್ನ ಹತ್ತಿರಕ್ಕೆ ಕರೆದಳು. ಗೆಳತಿಯರೆಲ್ಲ ಬೆರಗಾಗಿ ನಿಟ್ಟಿಸಿ ನೋಡುತ್ತಿರಲು ಅವಳನ್ನು ತನ್ನ ಹಿಂದೆಯೆ ಕುಳ್ಳಿರಿಸಿಕೊಂಡು, ಪ್ರೀತಿಯಿಂದ ಪತ್ರಲೇಖೆಯ ಮೈಯನ್ನು ತನ್ನ ಕರಕಮಲದಿಂದ ಮೆಲ್ಲಮೆಲ್ಲನೆ ನೇವರಿಸುತ್ತಿದ್ದಳು. ವ|| ಆಗ ಕಾದಂಬರಿಯು ಚಂದ್ರಾಪೀಡನಿಗೆ ಅತಿಥಿಗಳು ಬಂದಾಗ ಮಾಡಬೇಕಾದ ಉಪಚಾರಗಳನ್ನು ಮಾಡಿದಳು. ಚಂದ್ರಾಪೀಡನು ಹಾಗೆ ಸೊರಗಿರುವ ಕಾದಂಬರಿಯನ್ನು ನೋಡಿ, ೪೧. “ಇವಳು ಇಂತಹ ಅವಸ್ಥೆಯಿಂದ ಹೀಗಿದ್ದರೂ ಸರಿಯಾಗಿ ನಿಶ್ಚ್ಚಯಿಸಲು ಶಕ್ತಿಯಿಲ್ಲದ ನನ್ನ ಹೆಡ್ಡ ಮನಸ್ಸು ಏನಾದರೂ ನಂಬಲೇ ಇಲ್ಲವಲ್ಲ. ಇನ್ನು ನಾನು ಜಾಣತನದ ಮಾತುಗಳಲ್ಲಿ ಇವಳ ಹೃದ್ಗತವನ್ನು ತಿಳಿದುಕೊಳ್ಳುತ್ತೇನೆ.” ವ|| ಎಂದು ತನ್ನ ಮನಸ್ಸಿನಲ್ಲಿ ಆಲೋಚಿಸಿ, ಜಾಣತನದ ಮಾತುಗಳಿಂದ ನಿಪುಣನಾದ ಹಾಗೂ ರಸಿಕತನದಲ್ಲಿ ಕುಶಲನಾದ ಚಂದ್ರಾಪೀಡನು ಗಂಧರ್ವರಾಜಪುತ್ರಿಯನ್ನು ಕುರಿತು ಹೀಗೆಂದನು. ೪೨. “ದೇವಿ, ನಿನಗೆ ಈ ಸಂತಾಪವು ಹೇಗೆ ಉಂಟಾಯಿತು? ನನ್ನ ಮನಸ್ಸಿನ ಬಾಧೆಯು ನಿನ್ನದಕ್ಕಿಂತಲೂ ಮಿಗಿಲಾಗಿದೆ. ಆದ್ದರಿಂದ ಎಲೈ ಕಮಲಮುಖಿಯೆ, ನಾನು ನಿನ್ನ ಸುಖವನ್ನು ಬಯಸುತ್ತೇನೆ. ೪೩. ಎಲೈ ಹರಿಣನೇತ್ರೆ, ನಿನ್ನ ಅಂಗಜಸಂತಾಪವು ಎಷ್ಟು ಮಿಗಿಲಾಗಿದೆಯೋ? ನಿನ್ನ ದೇಹವು ನಡುಗುತ್ತಾ ಹೂವಿನ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡು ಅನುಕಂಪಮಾನವಾದ (೧. ನಿನ್ನಂತೆಯೆ ನಡುಗುತ್ತಿರುವ ೨. ದಯೆಯಿಂದ ಕೂಡಿಕೊಂಡಿರುವ) ನನ್ನ ಶರೀರವೂ ಬೀಳಲು ಇಚ್ಛಿಸುತ್ತಿದೆ. ಟಿ. ನೀನು ಹೂವಿನ ಹಾಸಿಗೆಯ ಮೇಲಿರುವುದನ್ನು ನೋಡಿ ನನಗೂ ಅಲ್ಲಿ ಸೇರಿ ನಿನ್ನನ್ನು ಅಪ್ಪಿಕೊಳ್ಳಬೇಕೆಂಬ ಆಸೆಯಾಗಿದೆ ಎಂಬ ವ್ಯಂಗ್ಯಾರ್ಥವೂ ಇಲ್ಲಿ ತೋರುತ್ತದೆ. ವ|| ಅದಲ್ಲದೆ ದೇವಿ, ನಿನ್ನ ಈ ಸ್ಥಿತಿಯನ್ನು ನೋಡಿ ಪರಿಜನರು ದುಖಪಡುತ್ತಿರುವರು. ಆದ್ದರಿಂದ ೪೪. ಎಲೈ ಸುಂದರಿ, ನೀನು ಮದುವೆಗೆ ಯೋಗ್ಯವಾದ ತಳತಳಿಸುವ ಮಂಗಳಾಲಂಕಾರಗಳನ್ನು ಧರಿಸು. ಹೊಸಬಳ್ಳಿಯು ಹೂವುಗಳಿಂದಲೂ ದುಂಬಿಗಳಿಂದಲೂ ಕೂಡಿಕೊಂಡಿದ್ದರೆ ಬಹಳ ಚೆನ್ನಾಗಿ ಒಪ್ಪುತ್ತದೆ!” ವ|| ಎಂದು ಚಂದ್ರಾಪೀಡನು ಹೇಳಲಾಗಿ, ಕಾದಂಬರೀದೇವಿಯು ಎಳೆಯತನದಿಂದ ಸರಳಸ್ವಭಾವದವಳಾದರೂ ಮನ್ಮಥನಿಂದ ಉಪದೇಶಿಸಲ್ಪಟ್ಟ ಪ್ರeಯಿಂದ ನಿಪುಣನಾದ ರಾಜಕುಮಾರನ

ವ|| ಎಂದು ನುಡಿಯ ಕಾದಂಬರೀದೇವಿ ಬಾಲ್ಯದಿಂ ಸ್ವಭಾವಮುಗ್ಧೆಯಾಗಿಯುಂ ಮನ್ಮಥೋಪದಿಷ್ಟಪ್ರeಯಿಂ ರಾಜಸರ್ವಜ್ಞನವ್ಯಕ್ತವ್ಯಾಹಾರ ಸೂಚಿತಮಪ್ಪರ್ಥಮಂ ಮನದೊಱದಿನಿವಿರಿದು ಮನೋರಥಮಸಂಭಾವ್ಯಮೆಂದು ಭಾವಿಸುತ್ತಂ ಶಾಲೀನತೆಯನವಲಂಬಿಸಿ ನುಡಿಯಲಱಯದೆ

ಸುದತಿ ಪೆಱತೊಂದು ನೆವದಿಂ
ಕೆದಱದಳೊಂದಿನಿಸು ಮಂದಹಾಸದ್ಯುತಿಯಂ
ವದನಾಬ್ಜಪರಿಮಳಾಗತ
ಮದಾಳಿಪಟಲಾಂಧಕಾರಮಂ ಚೆದಱಪವೋಲ್          ೪೫

ವ|| ಆಗಳಾ ಕಾದಂಬರೀದೇವಿಯ ಕೆಳದಿ ಮದಲೇಖೆಯೆಂಬಳ್ ಮೂರ್ತಿನಾರಾಯಣನ ಮೊಗಮಂ ನೋಡಿ

ಇದನೇನೆಂದಪುದಿಂತುತುಟೆಂದುಸಿರಲಾರ್ಗಂ ಬಾರದೀ ತಾಪದೊಂ
ದೊದವಿಂತೀ ಸುಕುಮಾರಭಾವಯುತೆಗಾದಂ ತಾಪಮಂ ಮಾಡದಾ
ವುದು ಪೇೞಂತುಟೆ ದಲ್ ಮೃಣಾಳಿನಿಗೆ ತೀವ್ರಾಗ್ನಿಸ್ವರೂಪಂಗಳಾ
ಗದೆ ಮಾಣ್ದಿರ್ದುವೆ ಚಂದ್ರಿಕಾಪ್ರಸರಮುಂ ನೀಹಾರವಿಸ್ತಾರಮುಂ            ೪೬

ನೀರೇಜ ತಾಳವೃಂತ ಸ
ಮೀರಾದಿಗಳಿಂದೆ ಕಾಪಮೊದವಿದಪುದು ನೋ
ಡೀ ರಮಣಿಗೆ ರತ್ವದ
ನಾರತ ಸಂಗತಿಯದೊಂದೆ ಜೀವಾಧಾರಂ   ೪೭

ವ|| ಎಂದು ಕಾದಂಬರೀಹೃದಯಗತಮಪ್ಪುದನೇ ಮದಲೇಖೆ ನುಡಿಯೆ ತನ್ನ ನುಡಿಗಳ್ಗೆ ಪ್ರತ್ಯುತ್ತರದಂತೇತೆಱದೊಳಮೀ ನುಡಿ ಘಟಿಯಿಸುವುದೆಂದು ಸಂದೇಹ ಡೋಲಾರೂಢಚಿತ್ತನಾಗಿ ಮಹಾಶ್ವೇತೆವೆರಸು ಪ್ರೀತ್ಯುಪಚಯಚತುರಂಗಳಪ್ಪ ವಚನಂಗಳಂ ನುಡಿಯುತ್ತಂ ಪಿರಿದುಬೇಗಮಿರ್ದು ಗಂಧರ್ವರಾಜನಂದನೆಯಿಂ ತನ್ನೆಂತಾನುಂ ಬಿಡಿಸಿ ಬೀೞ್ಕೊಂಡು ನಿಜಸ್ಕಂಧಾವಾರಕ್ಕೆ ಪೋಗಲೆಂದು ತದೀಯ ಭವನಮಂ ಪೊಱಮಟ್ಟಿಂದ್ರಾಯುಧದ ಬೆಂಗವಂದಾಗಳ್ ಕೇಯೂರಕಂ ದೇವ ಪತ್ರಲೇಖೆಯಂ ಕೆಲವು ದಿನಕ್ಕೆ ಕಳುಪಿದಪೆವಿರಿಸುವುದೆಂದು ಪ್ರಥಮದರ್ಶನಜನಿತ ಪ್ರೀತಿಯಪ್ಪ ಕಾದಂಬರೀದೇವಿಯ ಬೆಸದಿಂ ಮದಲೇಖೆ ಬಿನ್ನಪಂಗೆಯ್ದಟ್ಟಿದಳೆಂಬುದುಂ ಮನುಜಮಕರಧ್ವಜನಿಂತೆಂದಂ

ಅಸ್ಪಷ್ಟವಾದ ಮಾತುಗಳಿಂದ ಸೂಚಿತವಾದ ಅಭಿಪ್ರಾಯವನ್ನು ಮನಸ್ಸಿನಲ್ಲಿ ತಿಳಿದುಕೊಂಡು ಇಷ್ಟು ಮಟ್ಟಿಗೆ ಇಷ್ಟಾರ್ಥವು ಕೈಗೂಡಲಾರದೆಂದು ಭಾವಿಸುತ್ತ ಹಿಂಜರಿದು ಮಾತನಾಡದೆ ಹೋದಳು. ೪೫. ಆ ಕಾದಂಬರಿಯು ತನ್ನ ಮುಖಕಮಲದ ಸುವಾಸನೆಗಾಗಿ ಬಂದಿರುವ ಕೊಬ್ಬಿದ ದುಂಬಿಗಳ ಗುಂಪೆಂಬ ಕತ್ತಲೆಯನ್ನು ಚದುರಿಸುವವಳಂತೆ, ಬೇರೊಂದು ನೆಪದಿಂದ ನಸುನಗೆಯ ಬೆಳಕನ್ನು ಕೊಂಚ ಹರಡಿದಳು. ವ|| ಆಗ ಆ ಕಾದಂಬರೀದೇವಿಯ ಗೆಳತಿಯಾದ ಮದಲೇಖೆಯೆಂಬುವಳು ನಾರಾಯಣಸ್ವರೂಪನಾದ ರಾಜಕುಮಾರನ ಮುಖವನ್ನು ನೋಡಿ, ೪೬. “ಕುಮಾರ, ನಾನು ಏನು ಹೇಳಲಿ? ಈಗ ಇವಳಿಗೆ ಉಂಟಾಗಿರುವ ಸಂತಾಪವು ಇಷ್ಟೆಂದು ಹೇಳಲು ಯಾರಿಗೂ ಸಾಧ್ಯವಿಲ್ಲದಂತಾಗಿದೆ. ಇಂತಹ ಸುಕುಮಾರಭಾವಯುತೆಗೆ (೧. ಕೋಮಲಪ್ರಕೃತಿಯುಳ್ಳವಳಿಗೆ, ೨. ರಾಜಕುಮಾರನಾದ ನಿನ್ನಲ್ಲಿ ಪ್ರೀತಿಯಿಟ್ಟಿರುವವಳಿಗೆ) ಯಾವುದು ತಾನೆ ಸಂತಾಪವನ್ನುಂಟುಮಾಡುವುದಿಲ್ಲ?ಹೇಳು. ಇದು ಖಂಡಿತ. ತಾವರೆಬಳ್ಳಿಗೆ ಬೆಳದಿಂಗಳ ಪ್ರಸಾರವೂ ಮಂಜು ಕವಿಯುವುದೂ ತೀಕ್ಷ ವಾದ ಬೆಂಕಿಯ ರೂಪವನ್ನು ತಾಳದೆ ಇರುತ್ತವೆಯೆ ಟಿ. ಇಲ್ಲಿ “ಸುಕುಮಾರಭಾವಯುತೆ” ಎಂಬಲ್ಲಿ ಶ್ಲೇಷೆಯಿಂದ ಕಾದಂಬರಿಯು ರಾಜಕುಮಾರನ ಮೇಲೆ ಪ್ರೀತಿಯಿಟ್ಟಿರುವುದನ್ನು ಸೂಚಿಸಿದಂತಾಯಿತು. ೪೭. ಇವಳಿಗೆ ಕಮಲದ ಎಲೆಯ ಬೀಸಣಿಗೆಯ ಗಾಳಿ ಮೊದಲಾದ ಶೈತ್ಯೋಪಚಾರಗಳಿಂದ ಎಷ್ಟು ಸಂತಾಪವಾಗುತ್ತಿದೆ. ಎಂಬುದನ್ನು ನೀನೇ ನೋಡು. ಒಟ್ಟಿನಲ್ಲಿ ಈ ಸುಂದರಿಗೆ ಧೈರ್ಯವೊಂದು ಎಡಬಿಡದೆ ಇರುವುದರಿಂದ ಅದೇ ಇವಳ ಜೀವಕ್ಕೆ ಮುಖ್ಯಾಧಾರವಾಗಿದೆ. ಟಿ. ‘ ರತ್ವದನಾರತ ಸಂಗತಿ” ಎಂಬಲ್ಲಿ ರತ್ವದ, ಅನಾರತಸಂಗತಿ. ಧೈರ್ಯದ ಎಡೆಬಿಡದ ಸಂಬಂಧ. ರ, ತ್ವತ್ಚ್‌ಅನಾರತ್ಚಸಂಗತಿ. ಎಲೈ ಧೈರ್ಯವಂತನೆ ನಿನ್ನ ಎಡೆಬಿಡದ ಸಹವಾಸವು ಎಂಬ ಎರಡರ್ಥವಿದೆ. ವ|| ಹೀಗೆ ಕಾದಂಬರಿಯ ಮನಸ್ಸನಲ್ಲಿರುವ ಆಶಯವನ್ನೇ ಮದಲೇಖೆ ನುಡಿದಳು. ಚಂದ್ರಾಪೀಡನು ತನ್ನ ಮಾತಿಗೆ ಈ ಮದಲೇಖೆಯ ಮಾತು ಹೇಗಾದರೂ ಪ್ರತ್ಯುತ್ತರವಾಗಿ ಹೊಂದಾಣಿಕೆಯಾಗುತ್ತಿದೆಯೆ? ಎಂದು ಸಂಶಯವೆಂಬ ತೊಟ್ಟಿಲನ್ನು ಏರಿರುವ ಮನಸ್ಸುಳ್ಳವನಾಗಿ (ಸಂಶಯಚಿತ್ತನಾಗಿ), ಮಹಾಶ್ವೇತೆಯೊಂದಿಗೆ ಹೆಚ್ಚ ಸ್ನೇಹವನ್ನು ತೋರ್ಪಡಿಸುವ ಜಾಣತನದ ಮಾತುಗಳನ್ನಾಡುತ್ತಾ ಬಹಳ ಹೊತ್ತನ್ನು ಕಳೆದನು. ಬಳಿಕ ಕಾದಂಬರಿಯಿಂದ ಬಹಳ ಕಷ್ಟಪಟ್ಟು ಬಿಡಿಸಿಕೊಂಡು ಬೀಳ್ಕೊಂಡು ತನ್ನ ಪಾಳೆಯಕ್ಕೆ ಹೋಗಬೇಕೆಂದು ಅವಳ ಮನೆಯಿಂದ ಹೊರಟು ಇಂದ್ರಾಯುಧವನ್ನು ಹತ್ತುವಷ್ಟರಲ್ಲಿ ಕೇಯೂರಕನು ಬಂದು “ಸ್ವಾಮಿ, ಪತ್ರಲೇಖೆಯನ್ನು ಕೆಲವು ದಿನಗಳ ಮಟ್ಟಿಗೆ ಇಲ್ಲೇ ಇರಿಸಿಕೊಂಡು ಆಮೇಲೆ ಕಳುಹಿಸಿಕೊಡುತ್ತೇವೆ. ಇಲ್ಲೇ ಬಿಟ್ಟುಹೋಗಬೇಕು ಎಂದು ಅವಳನ್ನು ಮೊದಲು ಕಂಡಮಾತ್ರದಿಂದಲೆ ಸ್ನೇಹವುಂಟಾಗಿರುವ ಕಾದಂಬರಿಯ ಅಪ್ಪಣೆಯಂತೆ ಮದಲೇಖೆಯು ಅರಿಕೆಮಾಡಲು ಹೇಳಿಕಳುಹಿಸಿದ್ದಾಳೆ” ಎಂದು ಹೇಳಲು ಮಾನವರೂಪಿನಿಂದ ಶೋಭಿಸುವ ಮನ್ಮಥನಂತಿರುವ ಚಂದ್ರಾಪೀಡನು ಹೀಗೆಂದನು.

ಆರೊ ಪಡೆದಪರಿದಂ ಕೇ
ಯೂರಕ ದೇವೀಪ್ರಸಾದಮಂ ಧನ್ಯೆಯಿವಳ್
ಸಾರಿರ್ದಪಳ್ ಗಡಿಂತೀ
ಕಾರುಣ್ಯಪದಕ್ಕೆ ಪತ್ರಲೇಖೆಯೆ ನೋಂತಳ್   ೪೮

ವ|| ಎಂದು ಪತ್ರಲೇಖೆಯನಿರಲ್ವೇೞ್ದು ನಡೆಗೊಂಡು ನಿಜಸ್ಕಂಧಾವಾರಮಂ ಪುಗುವಾಗಳ್

ಚರನುಜ್ಜೈನಿಯಿನೊರ್ವನಾಗಳೆ ಬರಲ್ ಕಾಣುತ್ತಮೌತ್ಸುಕ್ಯದಿಂ
ಪರಿವಾರಂಬೆರಸೆಮ್ಮ ತಂದೆಯುಮಶೇಷಾಂತಪುರಸ್ತ್ರೀಜನಂ
ಬೆರಸೆಮ್ಮಬ್ಬೆಯುಮಿರ್ದರೇ ಸುಖದಿನೆಂದಾವಿರ್ಭವತ್ಪ್ರೀತಿನಿ
ರ್ಭರವಿಸ್ತಾರಿತನೇತ್ರನಂದು ಬೆಸಗೊಂಡಂ ಚಂದ್ರಚೂಡಾಹ್ವಯಂ          ೪೯

ವ|| ಅಂತು ಬೆಸಗೊಳ್ವುದುಮಾ ಲೇಖವಾಹಕಂ ಪೊಡೆಮಡುತ್ತೈದೆವಂದು ದೇವರ್ ಬೆಸಸಿದಂದದೊಳೆಲ್ಲರುಂ ಸುಖದಿನಿರ್ದರೆಂದು ಬಿನ್ನವಿಸಿ ನಿಮ್ಮ ತಂದೆಯರಟ್ಟಿದ

ರಾಜಾದೇಶಮಿದೆಂದು ಲೇಖನದ್ವಿತಯಮಂ ನೀಡೆ
ಯುವರಾಜನೃಪಂ ನಯವಿನ
ಯವಿನೂತಂ ತಲೆಯೊಳಾಂತು ಕೈಕೊಂಡು ಮಹೋ
ತ್ಸವದಿಂದಂ ರಾಜಾದೇ
ಶವನಾಗಳ್ ಬಿರ್ಚಿ ನೋಡಿ ತಾಂ ಬಾಚಿಸಿದಂ           ೫೦

ವ|| ಅದೆಂತೆನೆ ಸ್ವಸ್ತಿ ಸಕಲರಾಜಶಿಖಂಡಶೇಖರಾರ್ಚಿತ ಚರಣಾರವಿಂದನುಂ ಪರಮ ಮಾಹೇಶ್ವರನುಂ ಮಹಾರಾಜಾರಾಜನುಮೆನಿಸಿದ ಶ್ರೀಮತ್ತಾರಾಪೀಡದೇವಂ ಸಕಲಗುಣಸಂಪದಾಯತನನಪ್ಪ ಯುವರಾಜನಂ ಪರಮಾಶೀರ್ವಾದಪುರಸ್ಸರಂ ಕಾರ್ಯಮಂ ಬೆಸಸಿರ್ಪಂ

ಪ್ರಜೆಯೆಲ್ಲಂ ಕ್ಷೇಮದಿಂಡಿರ್ದುದು ಕುಶಲದಿನಿರ್ದಪ್ಪೆವಾವಾದೊಡಂ ದಿ
ಗ್ವಿಜಯಂಗೆಯ್ಯಲ್ಕೆ ಪೋದಂ ಪಲವು ದಿವಸಮಾದತ್ತು ಕಾಣಲ್ಕೆವೇೞ್ಕುಂ
ವಿಜಯಾಲಂಕಾರನಂ ಪುತ್ರನನೆನುತೆ ಮಹೋತ್ಕಂಠೆಯಿಂ ತನ್ನ ಮಾತೃ
ವ್ರಜಮಿರ್ದತ್ತೋಲೆಯಂ ಬಾಚಿಸುವುದು ತಡಮೆೞ್ತಂದು ತಾಂ ಕಾಣ್ಬುದೆಮ್ಮಂ        ೫೧

ವ|| ಎಂದು ಬಾಚಿಸಿ ಕುದುರೆಯನೇಱರ್ದಂದದೊಳೆ ಪ್ರಯಾಣಭೇರಿಯಂ ಪೊಯ್ಸಿ

ಮುಂದಿರ್ದ ಮೇಘನಾದನ
ನೆಂದಂ ನೀನಿರ್ದು ಪತ್ರಲೇಖಾಂಗನೆಯಂ
ಮುಂದಿಟ್ಟು ಬೞಕೆ ಬರ್ಪುದು
ತಂದಪನಿಲ್ಲಿವರಮಾಕೆಯಂ ಕೇಯೂರಂ        ೫೨

೪೮. “ಕೇಯೂರಕ, ಕಾದಂಬರೀದೇವಿಯರ ಇಂತಹ ಅನುಗ್ರಹವು ಮತ್ತಾರಿಗೆ ಲಭಿಸುತ್ತದೆ? ಇವಳೇ ಧನ್ಯಳಲ್ಲವೆ? ಇದ್ದು ಬರಲಿ, ದೇವಿಯ ದಯೆಗೆ ಪಾತ್ರಳಾಗಲು ಪತ್ರಲೇಖೆಯು ಎಷ್ಟು ಪುಣ್ಯ ಮಾಡಿದ್ದಳೊ !” ವ|| ಎಂದು ಪತ್ರಲೇಖೆಯನ್ನು ಇರುವುದಕ್ಕೆ ಹೇಳಿ, ಪ್ರಯಾಣ ಬೆಳಸಿ, ತನ್ನ ಪಾಳೆಯಕ್ಕೆ ಬರುತ್ತಿರುವಲ್ಲಿ, ೪೯. ಆಗ ಉಜ್ಜಯಿನಿಪಟ್ಟಣದಿಂದ ಒಬ್ಬ ದೂತನು ಬಂದನು. ಅವನನ್ನು ಕಂಡ ಕೂಡಲೇ ಚಂದ್ರಾಪೀಡನು ಉಕ್ಕುತ್ತಿರುವ ಪ್ರೀತಿಯಿಂದ ಬಹಳ ಅಗಲವಾದ ಕಣ್ಣುಳ್ಳವನಾಗಿ, “ನಮ್ಮ ತಂದೆಯವರು ಪರಿವಾರಸಮೇತರಾಗಿ ಕ್ಷೇಮವಾಗಿದ್ದಾರೆಯೆ?” ಎಂದು ಬಹಳ ಕುತೂಹಲದಿಂದ ಕೇಳಿದನು. ವ|| ಹಾಗೆ ಕೇಳಲಾಗಿ, ಆ ಓಲೆಕಾರನು ನಮಸ್ಕರಿಸಿ, ಹತ್ತಿರಕ್ಕೆ ಬಂದು, “ಪ್ರಭುಗಳು ಕೇಳಿದಂತೆ ಎಲ್ಲರೂ ಸುಖವಾಗಿದ್ದಾರೆ” ಎಂದು ಅರಿಕೆ ಮಾಡಿ, “ನಿಮ್ಮ ತಂದೆಯವರು ಕಳುಹಿಸಿರುವ ರಾಜಾeಯಿದು” ಎಂದು ಎರಡು ಪತ್ರಗಳನ್ನು ಕೊಟ್ಟನು. ೫೦. ವಿನಯದಿಂದ ಶೋಭಿಸುವ ಯುವರಾಜನು ಆ ರಾಜಸಂದೇಶವನ್ನು ಬಹಳ ಸಂತೋಷದಿಂದ ತಲೆಯ ಮೇಲಿಟ್ಟುಕೊಂಡು ತಾನೇ ಬಿಚ್ಚಿ ನೋಡಿ ಓದಿಕೊಂಡನು. ವ|| ಅದು ಹೇಗೆಂದರೆ, ‘ಸ್ವಸ್ತಿ ಸಮಸ್ತರಾಜರ ಶಿಖಾಮಣಿಗಳಿಂದ ಪೂಜಿಸಲ್ಪಡುವ ಪಾದಕಮಲವುಳ್ಳ ಪರಮೇಶ್ವರನ ಪರಮಭಕ್ತನಾದ ಮಹಾರಾಜಾರಾಜನಾದ ಶ್ರೀ ತಾರಾಪೀಡಮಹಾರಾಜರು ಸಮಸ್ತ ಗುಣಸಂಪತ್ತಿಗೆ ಮನೆಯಂತಿರುವ ಯುವರಾಜನಿಗೆ ಅಮೋಘವಾದ ಆಶೀರ್ವಾದದೊಂದಿಗೆ ಕರ್ತವ್ಯವನ್ನು ನಿರೂಪಿಸುತ್ತಾನೆ. ಏನೆಂದರೆ, ೫೧. ಪ್ರಜೆಗಳೆಲ್ಲರೂ ಕ್ಷೇಮದಿಂದಿದ್ದಾರೆ. ನಾವೂ ಕ್ಷೇಮದಿಂದಿದ್ದೇವೆ. ನೀನು ದಿಗ್ವಿಜಯಕ್ಕಾಗಿ ಪ್ರಯಾಣಮಾಡಿ ಬಹಳ ದಿನಗಳಾದುವು. ನಿನ್ನ ತಾಯಂದಿರು ಜಯದಿಂದ ಶೋಭಿಸುತ್ತಿರುವ ಮಗನನ್ನು ನೋಡಬೇಕೆಂದು ತವಕಿಸುತ್ತಿದ್ದಾರೆ. ಆದ್ದರಿಂದ ಈ ಪತ್ರವನ್ನು ಓದಿದ ಕೂಡಲೇ ತಡಮಾಡದೆ ಬಂದು ನಮ್ಮನ್ನು ಕಾಣತಕ್ಕದ್ದು.” ಟಿ. ಓಲೆಕಾರನು ಎರಡು ಪತ್ರಗಳನ್ನು ಕೊಟ್ಟನೆಂದು ಹಿಂದೆ ಹೇಳಿದೆ. ಮತ್ತೊಂದು ಪತ್ರವು ಶುಕನಾಸನು ಇದೇ ಅಭಿಪ್ರಾಯವನ್ನು ತಾನೂ ತಿಳಿಸಿ ಬರೆದಿದ್ದ ಪತ್ರವೆಂದು ಮೂಲಕಾದಂಬರಿಯಲ್ಲಿದೆ. ಇಲ್ಲಿ ಬಿಟ್ಟುಹೋಗಿದೆ. ವ|| ಹೀಗೆ ಓದಿ ಕುದುರೆಯ ಮೇಲೆ ಕುಳಿತುಕೊಂಡೇ ಪ್ರಯಾಣಭೇರಿಯನ್ನು ಹೊಡೆಸಿದನು. ೫೨. ಮುಂದಿದ್ದ ಮೇಘನಾದನನ್ನು ಕುರಿತು, “ನೀನು ಪತ್ರಲೇಖೆಯು ಬರುವವರೆಗೂ ಇಲ್ಲೇ ಇದ್ದು, ಅವಳನ್ನು ಕರೆದುಕೊಂಡು

ವ|| ಕೇಯೂರಕಂಗೆ ನೀನಿಂತು ಪೇೞ್ವುದು

ನೆನೆಯದೆ ತಮ್ಮ ವತ್ಸಲತೆಯಂ ಪರಿಭಾವಿಸದೊಳ್ಪನೞ್ಕಱಂ
ಮನದೊಳಣಂ ವಿಚಾರಿಸದೆ ನಿಸ್ಪ ಹತಾತ್ಮಕನೆಂಬಳೀಕಭ
ಕ್ತನುಮುಪಚಾರಶೀಲನುಮೆನಿಪ್ಪೆನಗಂ ನುಡಿಯೊಂದು ಮಾಟವೊಂ
ದೆನಿಸಿದ ಮಾನವಂಗೆ ದೇವಿ ಹಸಾದಮನೇಕೆ ಮಾಡಿದಳ್        ೫೩

ವ|| ಅದಲ್ಲದೆಯುಂ

ಎನಸುಂ ಕೈವಾರದಿಂದಿಲ್ಲದ ಗುಣಗಣಮಂ ರಾಗದಿಂ ಕೆಮ್ಮನೀ ಪಾಂ
ಥನೊಳಧ್ಯಾರೋಪಣಂಗೆಯ್ದೆನಗನವರತಂ ಬಣ್ಣಿಸುತ್ತಿರ್ದಳೀ ಮ
ರ್ತ್ಯನೊಳಾವೊಲ್ಪಪ್ಪೊಡೆಂತೀ ತೆಱನುಮರಿದೆನುತ್ತಂ ಮಹಾಶ್ವೇತೆಯಂತಾ
ಮನದೊಳ್ ಮೇಣ್ ಮಾತಿನೊಳ್ ಮೇಣಱಗುಮರಸಿಯೆಂದಾಂ ಕರಂ ನಾಣ್ಚಿದಪ್ಪೆಂ         ೫೪

ಜನಕಾಜ್ಞೆಮೀಱಲಂಗಮೆ
ತನುವಿಂತವರೊಡವೆಯಾಗಿ ಸಲ್ಗೆಮ ಗಂಧ
ರ್ವನಿವಾಸಕ್ಕನುವಿಸುವೀ
ಮನವಪ್ಪೊಡೆ ತನಗೆ ಮಱುವೋದತ್ತೀಗಳ್   ೫೫

ವ|| ಎಂದಿವು ಮೊದಲಾಗಿ ಪಲವುಮಂ ಗಂಧರ್ವರಾಜನಂದನೆಗೆ ಕೇಯೂರಕನಿಂ ಬಿನ್ನವಿಸಲ್ವೇೞ್ಕುಮೆಂದು ಮೇಘನಾದಂಗೆ ಪೇೞ್ದು ಕೆಲದೊಳಿರ್ದ ವೈಶಂಪಾಯನಂಗಂ ಕಟಕಮಂ ಸಂವರಿಸಿಕೊಂಡು ಬರ್ಪುದೆಂದುಮೊಪ್ಪಿಸಿ

ಖುರನಿರ್ಭಿಣ್ಣ ನ್ನ್ವ ಮಹೀತಲಂ ಗಮನಹೇಲಾಹರ್ಷಹೇಷಾರವಂ
ಸುರಿತಾಂತಧ್ವಜವಾತ್ತಕುಂತಲತಿಕಂ ಸಂವಾಹವಾಜಿವ್ರಜಂ
ಬರೆ ತಾನೇಱದ ದಿವ್ಯವಾಜಿಗಿನಿಸುಂ ಪಕ್ಕಾಗಿ ಕಾದಂಬರೀ
ವಿರಹೋತ್ಕಂಠಿತಚಿತ್ತನಂದು ತಳರ್ದಂ ವೈರೀಭಕಂಠೀರವಂ    ೫೬

ಕಾದಂಬರಿಯ ದ್ವಿತೀಯ ಸಂದರ್ಶನ
ಸಮಾಪ್ತ

ಬಾ. ಇಲ್ಲಿಯವರೆಗೆ ಕೇಯೂರಕನು ಕರೆದುಕೊಂಡು ಬರುತ್ತಾನೆ. ವ|| ಕಾದಂಬರೀದೇವಿಗೆ ಹೀಗೆ ಹೇಳುವಂತೆ ಕೇಯೂರಕನಿಗೆ ತಿಳಿಸು. ೫೩. ನೀವು ನನ್ನ ಮೇಲೆ ಇಟ್ಟಿರುವ ವಾತ್ಸಲ್ಯವನ್ನೂ ನೆನೆಯದೆ, ನಿಮ್ಮ ಸೌಜನ್ಯವನ್ನೂ ಗಮನಿಸಿದೆ, ನಿಮ್ಮ ಪ್ರೀತಿಯನ್ನೂ ಮನಸ್ಸಿನಲ್ಲಿ ಸ್ವಲ್ಪವೂ ವಿಚಾರಮಾಡದೆ ಉದಾಸೀನ ಮಾಡಿರುವ ಹಾಗೂ ಕಪಟವಿಶ್ವಾಸವನ್ನು ತೋರಿಸುತ್ತಾ ಕೃತಕ ಉಪಚಾರದಲ್ಲಿ ನಿಪುಣನಾದ, ನುಡಿಯಲ್ಲೇ ಒಂದು ನಡೆಯಲ್ಲೇ ಒಂದು ಮಾಡುತ್ತಿರುವ ಮನುಷ್ಯನಾದ ನನಗೆ, ನೀವು ಏಕೆ ಇಷ್ಟೊಂದು ಅನುಗ್ರಹವನ್ನು ಮಾಡಿದಿರಿ! ವ|| ಅದೂ ಅಲ್ಲದೆ ೫೪. ಈ ಮಹಾಶ್ವೇತೆಯು ಒಬ್ಬ ದಾರಿಹೋಕನನ್ನು ಮಮತೆಯಿಂದ ಸುಮ್ಮನೆ ಏನೇನೂ ಇಲ್ಲದ ಗುಣಗಳನ್ನು ಅವನಲ್ಲಿ ಆರೋಪಿಸಿ ಒಂದೇ ಸಮನೆ ಹೊಗಳಿಬಿಟ್ಟಳು. ಈ ಮನುಷ್ಯನಲ್ಲಿ ಅಷ್ಟು ಒಳ್ಳೆತನವಾದರೂ ಎಲ್ಲಿ ಬಂತು? ಇದನ್ನು ತಿಳಿಯುವುದೇ ಕಷ್ಟವಾಗಿದೆ ಎನ್ನುತ್ತಾ ಮಹಾಶ್ವೇತೆಯನ್ನು ದೇವಿಯವರು ಮನಸ್ಸಿನಿಂದಲೂ ಮಾತಿನಿಂದಲೂ ಜರೆಯುತ್ತಾರಲ್ಲ ಎಂದು ನನಗೆ ಬಹಳ ನಾಚಿಕೆಯಾಗಿದೆ. ೫೫. ತಂದೆಯ ಮಾತನ್ನು ಮೀರುವುದು ಸರೆಯೆ? ಈ ಶರೀರವು ಅವರ ಒಡವೆಯಾಗಿ ಇದ್ದುಕೊಂಡಿರಲಿ. ಆದರೆ ಹೇಮಕೂಟದಲ್ಲೇ ನೆಲೆಸಲು ಬಯಸುವ ಈ ನನ್ನ ಮನಸ್ಸಾದರೋ ನಿಮ್ಮ ಅನವಾಗಿದೆ.” ವ|| ಹೀಗೆಯೇ ಹಲವು ಮಾತುಗಳನ್ನು ಕೇಯೂರಕನ ಮೂಲಕ ಕಾದಂಬರೀದೇವಿಗೆ ಅರಿಕೆ ಮಾಡಬೇಕೆಂದು ಮೇಘನಾದನಿಗೆ ತಿಳಿಸಿ, ಪಕ್ಕದಲ್ಲಿದ್ದ ವೈಶಂಪಾಯನನಿಗೆ ಪಾಳೆಯವನ್ನು ಪ್ರಯಾಣಕ್ಕೆ ಸಿದ್ಧಪಡಿಸಿಕೊಂಡು ಬರುವಂತೆ ನೇಮಿಸಿ, ೫೬. ಶತ್ರುಗಳೆಂಬ ಆನೆಗಳಿಗೆ ಸಿಂಹಪ್ರಾಯನಾದ ರಾಜಕುಮಾರನು ಗೊರಸುಗಳಿಂದ ನೆಲವನ್ನು ಸೀಳುತ್ತಿರುವ, ಪ್ರಯಾಣದ ವಿನೋದದಿಂದ ಉಂಟಾದ ಸಂತೋಷದಿಂದ ಕೆನೆಯುತ್ತಿರುವ, ಚಲಿಸುತ್ತಿರುವ ಬಾವುಟಗಳ ಅಂಚುಳ್ಳ ನೀಳವಾದ ಭಲ್ಲೆಗಳನ್ನು ಹಿಡಿದಿರುವ ಸವಾರರು ಏರಿರುವ ಸವಾರಿ ಕುದುರೆಗಳ ಗುಂಪು ಜೊತೆಯಲ್ಲಿ ಬರುತ್ತಿರಲಾಗಿ, ತಾನು ಸವಾರಿ ಮಾಡುವ ಇಂದ್ರಾಯುಧದ ಮೇಲೆ ಮಂಡಿಸಿ, ಕಾದಂಬರಿಯ ವಿಹರದಿಂದ ತಳಮಳಗೊಳ್ಳುತ್ತಿರುವ ಮನಸ್ಸುಳ್ಳವನಾಗಿ ಪ್ರಯಾಣ ಮಾಡಿದನು.

ಕಾದಂಬರಿಯ ದ್ವಿತೀಯ ಸಂದರ್ಶನ

ಮುಗಿಯಿತು