ವ|| ಅಂತು ಕಳೆದಾ ಮಱುದಿವಸಮಾ ಕನ್ನೆಯನೆ ನೆನವುತ್ತಮಾಸ್ಥಾನಮಂಟಪದೊಳಿರ್ಪನ್ನೆಗಂ ಪಡಿಯಱಂಬೆರಸು ಕೇಯೂರಕಂ ಭೋಂಕನೆ ಬಂದು

ವಿನಯಂ ಕೈಗ್ಮಣ್ಮೆ ದೂರಾಂತರದೊಳೆಱಗೆ ಕಂಡಿತ್ತ ಬಾ ಯಿತ್ತ ಬಾಯೆಂ
ಬಿನಮೈತಂದಂಘ್ರಿಪದ್ಮಕ್ಕೆಱಗೆ ತೆಗೆದು ತೞ್ಕೈಸಿದಂ ಪ್ರೀತಿಯಿಂ ಮು
ನ್ನ ನಿಜಾಪಾಂಗಾವಲೋಕಂ ಬೞಕೆ ಹೃದಯವೆಲ್ಲಿಂ ಬೞಕ್ಕಂತೆ ರೋಮಾಂ
ಚನಿಕಾಯೋದ್ಭೇದವಲ್ಲಿಂ ಬೞಕ ಭುಜಯುಗಂ ಸುತ್ತೆ ರಾಜೇಂದ್ರಚಂದ್ರಂ            ೧

ವ|| ಅನಂತರಂ

ಒಸರ್ದಪುದು ನುಡಿಯೊಳೊಲವಿನ
ರಸವೆನೆ ನಸುವೆಳ್ಪು ಮಂದಮಂದಸ್ಮಿತದಿಂ
ಪಸರಿಸುತಿರೆ ಯುವರಾಜಂ
ಬೆಸಗೊಂಡಂ ಪ್ರೀತಿಯಿಂದೆ ಕೇಯೂರಕನಂ   ೨

ಅರಸಿಯರ್ಗೆ ಮಹಾಶ್ವೇತೆಗೆ
ಪರಿಜನನಿವಹಕ್ಕೆ ಕುಶಲಮೇ ಪೇೞೆನಲಾ
ಝೆದರದಿಂದೆ ದೇವ ನೀಮಿಂ
ತಿರೆ ಬೆಸಗೊಂಡಂತೆ ಕುಶಲಮಂತವರ್ಗೆಲ್ಲಂ             ೩

ವ|| ಎಂದಾಗಳಿರ್ಪುವೊರೆದ ದುಗುಲದ ಬಾಸಣಿಗೆಯಂ ಕಳೆದು ತಾವರೆಯ ನೂಲಿಂಸುತ್ತಿದ ಸಿರಿಕಂಡದುರುಳಿಯಂ ಪತ್ತಿಸಿದ ಮೃಣಾಳನಾಳವಲಯದಿಂ ಮುದ್ರಿಸಿದ ನಳಿನೀಪತ್ರಪುಟಮಂ ತೆಗೆದು ಕಾದಂಬರೀದೇವಿಯಟ್ಟಿದ ಮದನವೇದನೆಯ ವಿನ್ನಾಣಂಗಳಪ್ಪ ಪಸುರೆಸೆವ ಪಾಲಡಿಕೆಯ ಗೊಂಚಲಮಂ ಖಚರಕಾಮಿನಿಯರ ಕದಂಪಿನ ಬೆಳ್ಪನಪ್ಪುಕೆಯ್ದು ಕಪ್ಪುರವಳ್ಳಿಯ ಬಿಳಿಯೆಲೆಯ ವೀಳೆಯಮಂ ಎಳೆವೆಯ ಮಱಗಳನೇೞಪ ಕಪ್ಪುರದ ಪಳುಕುಗಳುಮಂ ಕತ್ತುರಿಯ ಕಂಪಿನಿಂ ಸೊಂಪಂ ತಳೆದ ಮಲಯಜವಿಲೇಪನಮುಮನರಸಂಗೆ ತೋಱ ಕಾದಂಬರಿಯ ಚೂಡಾಮಣಿ ಮರೀಚಿರಂಜಿತಾಂಜಲಿ ಸಮಭ್ಯರ್ಚಮುಮಂ ಮಹಾಶ್ವೇತೆಯ ಕಂಠಗ್ರಹಕುಶಲವಚನ ಸಂಬೋಧನಮುಮಂ ಮದಲೇಖೆಯ ನಮಸ್ಕಾರಮುಮಂ ತಮಾಲಿಕೆಯ ಪಾದಪ್ರಣಾಮಮುಮಂ ಬಿನ್ನವಿಸಿ ಮಹಾಶ್ವೇತೆಯಿಂತೆಂದಟ್ಟಿ ದಳಂತೆನೆ

ವ|| ಹಾಗೆ ರಾತ್ರಿಯನ್ನು ಕಳೆದು ಮರುದಿವಸ ಆ ಕಾದಂಬರಿಯನ್ನೇ ನೆನೆಯುತ್ತಾ ಆಸ್ಥಾನಮಂಟಪದೊಳಗಿದ್ದನು, ಆಗ ದ್ವಾರಪಾಲಕನೊಂದಿಗೆ ಕೇಯೂರಕನು ತಟ್ಟನೆ ಬಂದು, ೧. ಬಹಳ ವಿನಯದಿಂದ ದೂರದಲ್ಲೇ ನಮಸ್ಕರಿಸಿದನು, ಅವನನ್ನು ನೋಡಿ ಚಂದ್ರಾಪೀಡನು “ಈ ಕಡೆ ಬಾ, ಈ ಕಡೆ ಬಾ” ಎಂದು ಕರೆದನು. ಅವನು ಬಂದು ಪಾದಕಮಲಕ್ಕೆ ನಮಸ್ಕರಿಸಿದನು. ಚಂದ್ರಾಪೀಡನು ಅವನನ್ನು ಮೊದಲು ತನ್ನ ಕಡೆಗಣ್ಣಿನ ನೋಟವೂ, ಬಳಿಕ ಹೃದಯವೂ, ಆಮೇಲೆ ನಿಮಿರಿದ ರೋಮಾಂಚಸಮೂಹವೂ, ಆಮೇಲೆ ಎರಡು ತೋಳುಗಳೂ ಸುತ್ತುಗಟ್ಟಲು ಬಾಚಿ ತಬ್ಬಿಕೊಂಡನು. ವ|| ಆಮೇಲೆ ೨. ಮಾತಿನಲ್ಲಿ ಪ್ರೀತಿಯ ರಸವು ಜಿನುಗುತ್ತಿದೆಯೋ ಎಂಬಂತೆ ಮಂದಹಾಸದಿಂದ ನಸುಬಿಳುಪು ಹರಡುತ್ತಿರಲು ಯುವರಾಜನು ಪ್ರೀತಿಯಿಂದ ಕೇಯೂರಕನನ್ನು ಕೇಳಿದನು. ೩. “ಕೇಯೂರಕ, ಕಾದಂಬರೀದೇವಿಗೂ ಮಹಾಶ್ವೇತೆಗೂ ಪರಿಜನರ ಸಮುದಾಯಕ್ಕೂ ಕ್ಷೇಮವೆ? ಹೇಳು” ಎಂದು ಆದರದಿಂದ ಕೇಳಲು, ಅವನು “ಪ್ರಭುವೆ ನೀವು ಹೇಳಿದಂತೆ ಅವರೆಲ್ಲರೂ ಕ್ಷೇಮವಾಗಿದ್ದಾರೆ.” ವ|| ಎಂದು ಹೇಳಿ ಆಗ ಒದ್ದೆಯಾದ ಬಟ್ಟೆಯ ಹೊದಿಕೆಯನ್ನು ತೆಗೆದು ತಾವರೆಯ ನೂಲಿನಿಂದ ಸುತ್ತಿರುವ ತಾವರೆದಂಟನ್ನು ಬಲೆಯಂತೆ ಸುತ್ತಿ ಕಟ್ಟಿ, ಅದರ ಮೇಲೆ ದಟ್ಟವಾಗಿ ಗಂಧವನ್ನು ಲೇಪಿಸಿ ಮೊಹರು ಮಾಡಿರುವ ಒಂದು ತಾವರೆಯೆಲೆಯ ದೊನ್ನೆಯನ್ನು ತೆಗೆದು ಕಾದಂಬರೀದೇವಿಯು ಕಳುಹಿಸಿದ ತನ್ನ ವಿರಹವೇದನೆಗೆ ಸೂಚಕವಾದ ಹಸುರುಬಣ್ಣದಿಂದ ಕೂಡಿರುವ ಹಸಿಯಡಕೆಯ ಗೊಂಚಲನ್ನೂ. ದೇವತಾಸ್ತ್ರೀಯರ ಕೆನ್ನೆಯಂತೆ ಬೆಳ್ಳಗಿರುವ ಕರ್ಪೂರದ ಬಳ್ಳಿಯ ಬಿಳಿಯೆಲೆಯ ವೀಳೆಯವನ್ನೂ, ಬಾಲಚಂದ್ರನ ಭಾಗಗಳನ್ನು ತಿರಸ್ಕರಿಸುವ (ಬಾಲಚಂದ್ರನ ಭಾಗಗಳಂತಿರುವ) ಕರ್ಪೂರದ ಚೂರುಗಳನ್ನೂ, ಕಸ್ತೂರಿಯ ವಾಸನೆಯಿಂದ ಮನೋಹರವಾದ ಶ್ರೀಗಂಧದ ವಿಲೇಪನವನ್ನೂ ಚಂದ್ರಾಪೀಡನಿಗೆ ತೋರಿಸಿ, ಕಾದಂಬರೀದೇವಿಯು ತನ್ನ (ತಲೆಯ ಮೇಲೆ ಅಂಜಲಿಯನ್ನಿಟ್ಟು ಮಾಡುವ) ನಮಸ್ಕಾರವನ್ನೂ, ಮಹಾಶ್ವೇತೆಯ ಸ್ನೇಹಾಲಿಂಗನಪೂರ್ವಕವಾದ ಕುಶಲಪ್ರಶ್ನೆಯನ್ನೂ, ಮದಲೇಖೆಯ ನಮಸ್ಕಾರವನ್ನೂ, ತಮಾಲಿಕೆಯ ಪಾದಪ್ರಣಾಮವನ್ನೂ ಅರಿಕೆ ಮಾಡಿ, ಮಹಾಶ್ವೇತೆಯು ಹೀಗೆ ಹೇಳಿ

ಹಿಮಕರಮಯಮೆನಿಸಿದ ನಿಜ ನಿಜ
ವಿಮಲಗುಣವ್ರಜಮೆ ತನ್ನಗಲ್ಕೆಯೊಳುಷ್ಣಾಂ
ಶುಮಯಮೆನಿಸಿದಪುವೆನೆ ಮು
ನ್ನಮೆ ತನ್ನಂ ಕಾಣದಿರ್ಪುದದು ಸುಖಮಲ್ತೇ   ೪

ಅಮೃತೋತ್ಪತ್ತಿಯ ದಿವಸಂ
ಸಮನಿಸಿತೆಂಬಂತೆ ದೈವದಿಂದೆಂತಾನುಂ
ಸಮನಿಸಿದಾ ನಿನ್ನಿನ ದಿವ
ಸಮನೀನಾಂ ಬಿಡದೆ ಬಯಸುತಿರ್ದಪುದು ಜನಂ        ೫

ವ|| ಮತ್ತಂ ತನ್ನಗಲ್ಕೆಯಿಂ ಗಂಧರ್ವರಾಜನಂದನೆಗೆ ಶೀತೋಷ್ಣಭವನಮದು ಮದುವೆಗಳಿಪಿದ ಮನೆಯಂತೆ ನಿರ್ವೃತ್ತ ಮಹೋತ್ಸವಮಾಗಿರ್ಪುದಂತುಮಲ್ಲದೆಯುಂ

ವಿದಿತೆಯೆನಾಂ ತನಗೆಲ್ಲಂ
ದದೊಳಂ ಪರಿಹೃತ ಸಮಸ್ತಸಂಗೆಯನೆನ್ನೀ
ಹೃದಯಂ ನೋಡಲ್ಬಯಸಿದ
ಪುದಕಾರಣಪಕ್ಷಪಾತಿಯೆನಿಸಿದ ತನ್ನಂ          ೬

ತನು ಬಸಮಲ್ತು ಮತ್ಸಖಿಗೆ ಮನ್ಮಥನನ್ನನೆನಿಪ್ಪ ತನ್ನುಮಂ
ನೆನೆದಪಳೊರ್ಮೆ ಬಂದೆನಗೆ ಮಾೞುದ್ಪು ಪೆರ್ಮೆಯ ನಿಮ್ಮ ನಣ್ಣಿನಿಂ
ಜನಿಯಿಸಿದೀ ಕದರ್ಥನೆಗೆ ಸೈರಿಪುದಿಲ್ಲಿಗೆ ಬರ್ಪುದೆಂದು ಪೇ
ೞನಿವಿರಿದೊಂದು ದರ್ಪಮೆನಗಾದುದು ತನ್ನಯ ನಿರ್ಮಳತ್ವದಿಂ             ೭

ವ|| ಎಂದು ನುಡಿಯಲ್ ಪೇೞ್ದಳಿದಲ್ಲದೆಯುಂ

ಇದನಂದಾ ಶಯನೀಯದೊಳ್ ಮತು ದೇವರ್ಬಂದಿರೆಂದೀಗಳ
ಟ್ಟಿದಳೆಂದೊಯ್ಯನೆ ಚಾಮರಾಂಗನೆಯ ಕೆಯ್ಯೊಳ್ ಕೊಟ್ಟನಾತ್ಮೋತ್ತರೀ
ಯ ದುಕೂಲಾಂಚಲ ಸೂಕ್ಷ ಸೂತ್ರವಿವರವ್ರಾತಂಗಳಿಂ ಕೂಡೆ ನು
ಣ್ಗದಿರ್ಗಳ್ ಸೂಸುವ ಶೇಷವೆಂಬಮಳ ತಾರೋದಾರಮಂ ಹಾರಮಂ     ೮

ವ|| ಕುಡುವುದುಂ ವಿದಗ್ಧವಿಧ್ಯಾಧರನಿಂತೆಂದಂ

ಕಳುಹಿಸಿದ್ದಾಳೆ ಎಂದನು. ಏನೆಂದರೆ, ೪. “ಯುವರಾಜ, ಮೊದಲು ನಿನ್ನನ್ನು ನೋಡದಿದ್ದರೇ ಬಹಳ ಸುಖವಾಗಿತ್ತು. ಏಕೆಂದರೆ, ನಿನ್ನ ಭೇಟಿಯ ಕಾಲದಲ್ಲಿ ತಂಪಾದ ಕಿರಣಗಳುಳ್ಳ ಚಂದ್ರನಿಂದ ನಿರ್ಮಿಸಲ್ಪಟ್ಟಂತಿದ್ದ ನಿನ್ನ ಗುಣಸಮುದಾಯವು ನೀನು ಅಗಲಿದ ಮೇಲೆ ಬಿಸಿಯಾದ ಕಿರಣಗಳುಳ್ಳ ಸೂರ್ಯನಿಂದ ಮಾಡಲ್ಪಟ್ಟಂತೆ ಆಗಿವೆ. ಟಿ. ನಿನ್ನ ಭೇಟಿಯ ಸುಖಮಯವಾಗಿತ್ತು. ಈಗ ಅಗಲಿಕೆಯು ಕೇವಲ ದುಖಮಯವಾಗಿದೆ ಎಂದು ತಾತ್ಪರ್ಯ.೫. ಸುದೈವದಿಂದ ನಿನ್ನ ದರ್ಶನಭಾಗ್ಯವುಂಟಾದ ನೆನ್ನೆದಿನವು ಅಮೃತವು ಹುಟ್ಟಿದ ದಿವಸವೇ ಒದಗಿ ಬಂದಂತೆ ಬಹಳ ಅಪ್ಯಾಯಮಾನವಾಗಿತ್ತು. ಆ ದಿನವನ್ನೇ ನನ್ನಿಂದ ಮೊದದಲ್ಗೊಂಡು ಇಡೀ ಗಂಧರ್ವಲೋಕದ ಜನರೆಲ್ಲರೂ ಮತ್ತೆ ಬಯಸುತ್ತಿದ್ದಾರೆ. ವ|| ಮತ್ತು ನಿನ್ನ ವಿಯೋಗದಿಂದ ಗಂಧರ್ವರಾಜಪುತ್ರಿಯಾದ ಕಾದಂಬರಿಗೆ ವಾಸಸ್ಥಾನವಾದ ಶೀತೋಷ್ಣಭವನವು (ಶೀತವೂ ಉಷ್ಣವೂ ಸಮನಾಗಿದ್ದು ಹಿತಕರವಾದ ಮನೆ), ಮದುವೆ ಮುಗಿದ ಮನೆಯಂತೆ ಸಡಗರವು ನಿಂತು ಬಿಕೋ ಎನ್ನುತ್ತಿದೆ. ಅದಲ್ಲದೆ, ೬. ನಾನು ಎಲ್ಲಾ ಬಗೆಯಲ್ಲೂ ಸರ್ವಸಂಗ ಪರಿತ್ಯಾಗ ಮಾಡಿರುವಳೆಂಬುದು ನಿನಗೆ ಗೊತ್ತೇ ಇದೆ. ಇಂತಹ ನನ್ನ ಮನಸ್ಸು ಯಾವ ಕಾರಣವಿಲ್ಲದಿದ್ದರೂ ನನ್ನ ಮೇಲೆ ಮಮತೆಯನ್ನಿಟ್ಟಿರುವ ನಿನ್ನನ್ನು ನೋಡಬೇಕೆಂದು ಬಯಸುತ್ತಿದೆ. ೭. ನನ್ನ ಗೆಳತಿಯಾದ ಕಾದಂಬರಿಗಂತೂ ನಿನ್ನ ಅಗಲಿಕೆಯಿಂದ ಶರೀರದ ಮೇಲಿನ ಹತೋಟಿಯೇ ತಪ್ಪಿಹೋಗಿದೆ. ಮನ್ಮಥನಿಗೆ ಸಮಾನನಾದ ನಿನ್ನನ್ನು ನೆನೆಸಿಕೊಳ್ಳುತ್ತಿದ್ದಾಳೆ. ಮತ್ತೊಮ್ಮೆ ಬಂದು ನನಗೆ ಹೆಮ್ಮೆಯನ್ನುಂಟುಮಾಡು. ನಿನ್ನೊಂದು ಸ್ನೇಹದಿಂದ ನಾನು ಕೊಡುತ್ತಿರುವ ಕಾಟವನ್ನು ಕ್ಷಮಿಸಬೇಕು. ಇಲ್ಲಿಗೆ ಬರಬೇಕೆಂದು ಹೇಳಿಕಳುಹಿಸುವಷ್ಟು ದಿಟ್ಟತನವು ನನಗೆ ಉಂಟಾಗಿರುವುದಕ್ಕೆ ನಿಮ್ಮ ಸೌಜನ್ಯವೇ ಕಾರಣವಲ್ಲದೆ ಮತ್ತೆ ಬೇರೆ ಅಲ್ಲ.” ವ|| ಹೀಗೆ ಹೇಳಲು ತಿಳಿಸಿದ್ದಾಳೆ. ಅದಲ್ಲದೆ, ೮. “ಪ್ರಭುಗಳು ಇದನ್ನು ಆ ದಿನ ಹಾಸಿಗೆಯಲ್ಲೇ ಮರೆತು ಬಂದುಬಿಟ್ಟಿರೆಂದು ಈಗ ಅದನ್ನು ಕಳುಹಿಸಿದ್ದಾಳೆ” ಎಂದು ಹೇಳಿ ತನ್ನ ಹೊದೆಯುವ ಬಟ್ಟೆಯ ಸೆರಗಿನ, ಸಣ್ಣ ಸಣ್ಣ ಎಳೆಗಳ ತೂತುಗಳಿಂದ ಒಟ್ಟಿಗೆ ಹೊರಸೂಸುತ್ತಿರುವ ಸೊಗಸಾದ ಕಾಂತಿಗಳಿಂದ ಕೂಡಿರುವ, ಹಿಂದೆ ಕೊಟ್ಟಿದ್ದ ಶೇಷವೆಂಬ ಸ್ವಚ್ಛವಾದ ಹಾಗೂ ಶ್ರೇಷ್ಠವಾದ ಮುತ್ತಿನ ಹಾರವನ್ನು ಚಾಮರಿತಿಯ ಕೈಗೆ ಮೆಲ್ಲನೆ ಕೊಟ್ಟನು. ವ|| ಕೊಡಲಾಗಿ ರಸಿಕಾಗ್ರೇಸರನಾದ

ಪದಪಿಂ ತಮ್ಮಾಳ್ಗಳನಿಂ
ತು ದೇವಿಯರ್ ನೆನೆವುದೆಂಬುದಿದು ಸಕಲಗುಣಾ
ಸ್ಪದೆಯೆನಿಪ ಮಹಾಶ್ವೇತೆಯ
ಪದಕಮಲಾರಾಧನೆಯ ತಪಫಲಮಲ್ತೇ        ೯

ವ|| ಎನುತ್ತಮೆಲ್ಲಮಂ ಪ್ರೀತಿವೆರಸು ತಾನೇ ಕೆಯ್ಕೊಂಡು ಕಿಱದುಬೇಗಮಿರ್ದಲ್ಲಿಂದ ಮೆೞ್ದು ಸನ್ಮಾನಪುರಸ್ಸರಮಖಿಳ ರಾಜಲೋಕಮುಮಂ ಪ್ರಧಾನನಿವಹಮುಮಂ ವಿಸರ್ಜಿಸಿ ಗಜಗಮನರಾಜಪುತ್ರಂ ಗಂಧಮಾದನ ನಾಗೇಂದ್ರನಲ್ಲಿಗೆ ಬಂದು ನಿಜನಖಾಂಶುಜಾಲಜಟಿಲಮಾಗಿ ಮೃಣಾಳನಾಳದಂತೆ ಸೊಗಯಿಸುವೆಳವುಲ್ಲ ಕವಳಮಂ ನೀಡುತ್ತಂ ಮದಲೇಖೆಗೆಱಗುವ ಚಂಚರೀಕದಿಂಚರನುತ್ಕಂಠಿತನಾಗಿ ವಲ್ಲಭವಾಜಿಯ ಮಂದುರದಲ್ಲಿಗೆ ಕೇಯೂರಕದ್ವಿತೀಯನಾಗಿ ಬಂದಿಂದ್ರಾಯುಧದ ಕುಂಕುಮಕಪಿಲಕೇಸರ ಸಟೆಯನೊಯ್ಯನೋಸರಿಸುತ್ತಂ ಖುರಮಣಿಕೆಯೊಳ್ ಕಾಲನಿಕ್ಕಿ ಮಂದುರದ ಮುಂಡಿಗೆಯಂ ಮಲಂಗಿ ಕೌತುಕಂಬೆರಸು ಕೇಯೂರಕನನಿಂತೆಂದಂ

ಆನೆೞ್ತಂದ ಬೞಕ್ಕೆ ಚಿತ್ರರಥರಾಜಾವಾಸದೊಳ್ ವಾರ್ತೆಯೇ
ನಾ ನೀರೇಜದಳಾಕ್ಷಿಗೇಂ ಬಿನದಮೇಗೆಯ್ವಳ್ ಮಹಾಶ್ವೇತೆ ತಾ
ನೇನೆಂಬಳ್ ಮದಲೇಖೆ ತತ್ಪರಿಜನಾಲಾಪಂಗಳೇನಲ್ಲಿ ನೀ
ನೇನಂ ಮಾಡುತಮಿರ್ದೆಯೆಂದು ಬೆಸಗೊಂಡಂ ಚಂದ್ರಚೂಡಾಹ್ವಯಂ    ೧೦

ವ|| ಎಂದು ಬೆಸಗೊಳ್ವುದುಂ ಕೇಯೂರಕಂ ದೇವರ್ ಬಿಜಯಂಗೆಯ್ಯಲೊಡನೆ

ಹೃದಯಭವಪ್ರಯಾಣಪಟಹಧ್ವನಿಯೆಂಬಿನಮೆತ್ತಲುಂ ಪೊದ
ೞ್ದೊದವಿದ ರತ್ನನೂಪುರಕಲಾಪಕಲಧ್ವನಿಗಂಚೆವಿಂಡು ತಂ
ಡದಿನುಲಿವುತ್ತಿರಲ್ ಕೆಳದಿಯರ್ವೆರಸಾಗಳೆ ನಿಮ್ಮನೀಕ್ಷಿಸಲ್
ಪದೆದಿರದೇಱದಳ್ ತರುಣಿ ತನ್ನಯ ರನ್ನದ ಕನ್ನೆಮಾಡಮಂ     ೧೧

ಪರಪುರುಷನೆನಿಪ್ಪ ದಿವಾ
ಕರನ ಕರಸ್ಪರ್ಶನಕ್ಕೆ ಸೈರಿಸದೆ ಸುಧಾ
ಕರಬಿಂಬಮನದ ಮಯಾ
ಗಿರಿಸಿದಳೆನಲೆತ್ತಿದತ್ತು ಧವಳಚ್ಛತ್ರಂ             ೧೨

ಚಂದ್ರಾಪೀಡನು ಹೀಗೆಂದನು. ೯. “ಕಾದಂಬರೀದೇವಿಯರು ತಮ್ಮ ಸೇವಕರನ್ನು ಹೀಗೆ ಪ್ರೀತಿಯಿಂದ ಸ್ಮರಿಸುವುದೆಂಬುದು ಸಮಸ್ತ ಗುಣಗಳಿಗೂ ನೆಲೆಯೆನಿಸಿರುವ ಮಹಾಶ್ವೇತೆಯ ಪಾದಕಮಲಗಳ ಸೇವೆಯೆಂಬ ತಪಸ್ಸಿನ ಫಲವೇ ಅಲ್ಲವೇ?” ವ|| ಎಂದು ಹೇಳುತ್ತ ಅವೆಲ್ಲವನ್ನೂ ಪ್ರೀತಿಯಿಂದ ತೆಗೆದುಕೊಂಡು ಸ್ವಲ್ಪ ಕಾಲವಿದ್ದು, ಅಲ್ಲಿಂದ ಎದ್ದು, ಸನ್ಮಾನಪೂರ್ವಕವಾಗಿ ಸಮಸ್ತ ರಾಜರನ್ನೂ ಸಮಸ್ತ ಮಂತ್ರಿಗಳನ್ನೂ ಕಳುಹಿಸಿ, ಆನೆಯಂತೆ ನಡಗೆಯುಳ್ಳ ರಾಜಪುತ್ರರು ಗಂಧಮಾದನವೆಂಬ ಆನೆಯ ಸಮೀಪಕ್ಕೆ ಬಂದನು. ತನ್ನ ಉಗುರುಗಳ ಕಾಂತಿಯಿಂದ ಕೂಡಿಕೊಂಡು,ತಾವರೆಯ ದಂಟಿನಂತೆ ಮನೋಹರವಾದ ಎಳೆಯ ಹುಲ್ಲುಗಳ ಕವಳವನ್ನು ಆ ಆನೆಗೆ ತಿನ್ನಿಸಿದನು. ಅಧರ ಮದೋದಕದ ಧಾರೆಗೆ ಎರಗುತ್ತಿರುವ ದುಂಬಿಗಳ ಇಂಪಾದ ದನಿಯಿಂದ ಲವಲವಿಕೆಯನ್ನು ಹೊಂದಿದನು. ಬಳಿಕ ಹಾಗೆಯೆ ಕೇಯೂರಕನೊಂದಿಗೆ ಒಳ್ಳೊಳ್ಳೆಯ ಕುದುರೆಗಳನ್ನು ಕಟ್ಟಿರುವ ಲಾಯಕ್ಕೆ ಬಂದನು. ಅಲ್ಲಿ ಇಂದ್ರಾಯುಧದ ಕಣ್ಣುಗಳ ಮೇಲೆ ಬೀಳುತ್ತಿದ್ದ ಕುಂಕುಮದಂತೆ ನಸುಕೆಂಬಣ್ಣದ ಕೊರಳು ಕೂದಲುಗಳ ಸಮೂಹವನ್ನು ಮೆಲ್ಲಮೆಲ್ಲನೆ ಪಕ್ಕಕ್ಕೆ ಸರಿಸುತ್ತಲೂ, ಕುದುರೆಯ ಕಾಲನ್ನು ಕಟ್ಟುವ ಗೂಟದ ಮೇಲೆ ಕಾಲನ್ನಿಟ್ಟುಕೊಂಡು ಲಾಯದ ಕಂಭವನ್ನು ಒರಗಿ ಕುತೂಹಲದಿಂದ ಕೂಡಿ ಕೇಯೂರಕನನ್ನು ಕುರಿತು ಹೀಗೆ ಹೇಳಿದನು. ೧೦. “ಕೇಯೂರಕ, ನಾನು ಈ ಕಡೆ ಬಂದ ಮೇಲೆ ಚಿತ್ರರಥನ ಅರಮನೆಯ ಸಮಾಚಾರವೇನು? ಆ ಕಮಲಾಕ್ಷಿಯಾದ ಕಾದಂಬರಿಯು ಹೇಗೆ ಕಾಲ ಕಳೆಯುತ್ತಿದ್ದಾಳೆ? ಮಹಾಶ್ವೇತೆಯು ಏನು ಮಾಡುತ್ತಿದ್ದಾಳೆ? ಮದಲೇಖೆಯು ಏನು ಮಾಡುತ್ತಿದ್ದಾಳೆ? ಅಲ್ಲಿ ಪರಿಜನರ ಮಾತುಕತೆಗಳೇನು? ನೀನು ಏನು ಮಾಡುತ್ತಿದ್ದೆ?” ಎಂದು ಚಂದ್ರಾಪೀಡನು ಕೇಳಿದನು. ವ|| ಆಗ ಕೇಯೂರಕನು “ಪ್ರಭುಗಳು ಈ ಕಡೆ ಪ್ರಯಾಣ ಮಾಡಿದ ಮೇಲೆ ೧೧. ಕಾದಂಬರೀದೇವಿಯು ಮನ್ಮಥನ ಪ್ರಯಾಣಕಾಲದ ತಮಟೆಯ ಧ್ವನಿಯೋ ಎಂಬಂತೆ ಉಂಟಾಗಿ ಹರಡಿರುವ ರತ್ನದ ಕಾಲುಗಡಗಗಳ ಇಂಪಾದ ಶಬ್ದವನ್ನು ಕೇಳಿ ಹಂಸಗಳು ತಂಡತಂಡವಾಗಿ ದನಿಮಾಡುತ್ತಿರಲು, ಕೆಳದಿಯರೊಂದಿಗೆ ನಿಮ್ಮನ್ನು ನೋಡುವುದಕ್ಕಾಗಿ ಆಸಕ್ತಿಯಿಂದ ಕೂಡಲೆ ಅಂತಪುರದ ರತ್ನದ ಮಹಡಿಯನ್ನು ಹತ್ತಿದಳು. ೧೨. ಆಗ ಅವಳಿಗೆ ಹಿಡಿದಿರುವ ಬಿಳಿಯ ಕೊಡೆಯು ಪರಪುರುಷನಾದ ಸೂರ್ಯನ ಕರಸ್ಪರ್ಶಕ್ಕೆ (೧. ಕರಣಗಳ ಸಂಪರ್ಕಕ್ಕೆ ೨. ಕೈಯಿಂದ ಮುಟ್ಟುವಿಗೆ) ಇಷ್ಟಪಡದೆ

ವ|| ಆಗಳ್ ಚಿತ್ರರಥನಂದನೆ ತುರಗಖುರಲುಳಿತಧೂಳೀಧೂಸರಮಪ್ಪ ಭವದ್ಗಮನ ಮಾರ್ಗಮಂ ನೋಡುತ್ತುಮಿರ್ಯ ಕಿಱದುಬೇಗದಿಂ ನೀಂ ತಿರೋಹಿತದರ್ಶನನಪ್ಪುದುಮಾ ದಿಗಂತಮೆಲ್ಲಮಂ ದಗ್ದೋದಧವಳದೀರ್ಘಂಗಳಪ್ಪ ಪಾಂಗಾವಲೋಕನದಿಂ ತೇಂಕಾಡಿಸುತ್ತಂ ಪಿರಿದು ಬೇಗಮಲ್ಲಿಯೆ ನಿಂದು ಬಿಸುಸುಯ್ದಲ್ಲಿಂದಮೆೞ್ದು ಬಿಜಯಂಗೆಯ್ಯೆ

ಅಲರೆಡಪಿದಪ್ಪೆ ನೀಂ ಕೋ
ಮಲೆಯೆಂದಡಿಗಡಿಗೆಂವಂದು ಪೇೞ್ವಂದದೆ ಪೂ
ವಲಿಯಲ್ಲಿ ಜಿನುಗುತಿರ್ದುದು
ಬಲವಂದಳಿಮಾಲೆ ಮಧುರಮಂದ್ರಧ್ವನಿಯಿಂ             ೧೩

ವ|| ಮತ್ತಮಾ ಲಾವಣ್ಯವತಿಯ ಪದನಖಮಯೂಖಂಗಳಂ ಜಲಧಾರೆಗೆತ್ತುತ್ಕಂಠಂಗಳಾದ ಸೋಗೆಗಳ ಕೇಗುಗಳ್ಗಗಿದವರ ಕೊರಲಂ ಬಿಗಿವಂತೆ ಕೆಯ್ಯಿಂದಮುರ್ಚುವ ಮಣಿಕಂಕಣಂಗಳಂ ತಿಡಿಸುತ್ತಂ ಕರದಿಂ ಕುಸುಮಧವಳಂಗಳಪ್ಪ ಭವನಲತಾಪಲ್ಲವಂಗಳಂ ಮನದಿಂ ಭವದ್ಗುಣಂಗಳುಮನವಲಂಬಿಸುತ್ತಂ ಕ್ರೀಡಾಪರ್ವತಕ್ಕೆವಂದು

ಇದು ನಿಂದ ನವೇಂದೂಪಲ
ಮಿದಭವನಂ ಪೂಜೆಗೆಯ್ದ ಶೀಕರತಲಮಿಂ
ತಿದು ನೃಪನಾರೋಗಿಪ ಪವ
ಳದ ನೆಲೆಯಿದು ಪವಡಿಸಿರ್ದ ಚಂದನತಲ್ಪಂ             ೧೪

ವ|| ಎಂದು ಪರಿಜನಂಗಳ್ ಪೇೞೆ ಮಗುೞೆ ಮಗುೞೆ ಕೇಳುತ್ತಂ ನೀವಿದೆರ್ಡೆಗಳಂ ನೋಡುತ್ತಂ ಪಗಲಂ ಕೞಪಿ ಮಹಾಶ್ವೇತಾ ನಿರೋಧದಿಂದೆಂತಾನುಮಲ್ಲಿಯೆ ಕೃತಾಹಾರೆಯಾಗಿ ಕಿಱದುಬೇಗಮಿರ್ದು ಚಂದ್ರೋದಯಮಾಗಲೊಡಮೇನಾನುಮಂ ಚಿಂತಿಸುತ್ತಮಲ್ಲಿಂದಮೆೞ್ದು

ಚರಣನಖಾಂತರ್ಗತ ಹಿಮ
ಕಿರಣಪ್ರತಿಬಿಂಬಭೂರಿಭಾರದಿನತಿಮಂ
ಥರತೆ ದೊರೆಕೊಂಡುದೆಂಬಂ
ತಿರೆ ಮೆಲ್ಲನೆ ತರುಣಿ ಸೆಜ್ಜೆವನೆಗೆೞ್ತಂದಳ್      ೧೫

ವ|| ಅಂತುವಂದು ಸೆಜ್ಜೆವನೆಯೊಳ್ ಮೆಯ್ಯನೀಡಾಡಿ ದಾರುಣವೆನಿಪ ದಾಹಜ್ವರ ದಿನಿಕ್ಕುವಟ್ಟಂತೇನಾನುಂ ವ್ಯಾ ಕೆಯ್ಕೊಂಡಂತಾರೊಳಂ ನುಡಿಯದೆ ಪೊರಳುತ್ತಮಿರ್ದು

ಸೂರ್ಯಮಂಡಲಕ್ಕೆ ಚಂದ್ರಬಿಂಬವನ್ನು ಮರೆಯಾಗಿಟ್ಟಿದ್ದಾಳೋ ಎಂಬಂತೆ ಕಾಣುತ್ತಿತ್ತು. ವ|| ಆಗ ಕಾದಂಬರೀದೇವಿಯು ಕುದುರೆಯ ಗೊರಸಿನಿಂದ ಎಬ್ಬಿಸಲ್ಪಟ್ಟ ಧೂಳುಗಳಿಂದ ಮಲಿನವಾದ ನಿಮ್ಮ ಪ್ರಯಾಣಮಾರ್ಗವನ್ನೇ ನೋಡುತ್ತಾ ಇದ್ದಳು. ಸ್ವಲ್ಪ ಹೊತ್ತಾದ ಮೇಲೆ ನೀವು ಕಣ್ಮರೆಯಾಗಲು ಆ ದಿಗ್ಭಾಗವನ್ನೆಲ್ಲ ಕ್ಷೀರಸಮುದ್ರದಂತೆ ಶುಭ್ರವಾದ ಹಾಗೂ ನೀಳವಾದ ಕಡೆಗಣ್ಣಿನ ನೋಟದಿಂದ ತೊಳೆಯುತ್ತಾ ಬಹಳ ಹೊತ್ತು ಅಲ್ಲಿಯೇ ನಿಂತಿದ್ದು ನಿಟ್ಟುಸಿರು ಬಿಟ್ಟು ಅಲ್ಲಿಂದ ಎದ್ದು ಹೊರಡಲಾಗಿ, ೧೨. “ಕೋಮಲೆಯಾದ ನೀನು ಈ ಹೂವುಗಳನ್ನು ಎಡವಬೇಡ ! ಎಚ್ಚರಿಕೆ!” ಎಂದು ಹೇಳುತ್ತಿವೆಯೋ ಎಂಬಂತೆ ನೆಲದ ಮೇಲೆ ಚೆಲ್ಲಿರುವ ಹೂವುಗಳ ಮೇಲೆ ಕುಳಿತುಕೊಂಡಿರುವ ತುಂಬಿಗಳ ಗುಂಪು ಪ್ರದಕ್ಷಿಣೆ ಮಾಡಿಮೃದುವಾಗಿಯೂ ಗಂಭೀರವಾಗಿಯೂ ಇರುವ ಧ್ವನಿಯಿಂದ ಝೇಂಕರಿಸುತ್ತಿದ್ದುವು. ವ|| ಮತ್ತು ಆ ಸುಂದರಿಯ ಕಾಲಿನ ಉಗುರುಗಳ ಕಾಂತಿಯನ್ನು ಜಲಧಾರೆಯೆಂದು ಭ್ರಮಿಸಿ ನವಿಲುಗಳು ಕೊರಳನ್ನು ಮೇಲಕ್ಕೆ ಎತ್ತಿ ಕೂಗುತ್ತಿದ್ದುವು. ಆ ಕೇಕಾರವಕ್ಕೆ ಕಾದಂಬರಿಯು ಹೆದರಿ ಅವುಗಳ ಕೊರಳಿನಿಂದ ಧ್ವನಿ ಹೊರಡದಂತೆ ಮಾಡುವುದಕ್ಕಾಗಿ ತನ್ನ ಕೈಯಿಂದ ಜಾರಿ ಬೀಳುತ್ತಿರುವ ರನ್ನದ ಕಡಗಗಳನ್ನು ಅವುಗಳ ಕತ್ತಿಗೆ ತೊಡಿಸುತ್ತಿದ್ದಳು. ಹೂವುಗಳಿಂದ ಶುಭ್ರವಾದ ಅರಮನೆಯ ಬಳ್ಳಿಗಳ ಚಿಗುರನ್ನು ಕೈಯಲ್ಲಿದಾಲಿಸಿ ಅಂತೆಯೆ ಹೂವಿನಂತೆ ಶುಭ್ರವಾದ ನಿನ್ನ ಗುಣಗಳನ್ನು ಮನಸ್ಸಿನಲ್ಲಿ ಧರಿಸಿ ಕ್ರೀಡಾಪರ್ವತಕ್ಕೆ ಬಂದಳು. ಟಿ. ಕೈಯಿಂದ ಹೂಬಳ್ಳಿಗಳ ಚಿಗುರನ್ನು ಮುಟ್ಟಿ ಮುಟ್ಟಿ ನೋಡುತ್ತಾ ಮನಸ್ಸಿನಲ್ಲಿ ನಿನ್ನ ಗುಣಗಳನ್ನು ಚಿಂತಿಸುತ್ತಾ ಬಂದಳು ಎಂದು ಅಭಿಪ್ರಾಯ. ೧೪. ಇದು ಯುವರಾಜನಿದ್ದ ಹೊಸ ಚಂದ್ರಕಾಂತಶಿಲೆ. ಇದು ಪರಮೇಶ್ವರನನ್ನು ಪೂಜೆಮಾಡಿದ ತಂಪಾದ ಪ್ರದೇಶ. ಇದು ಆ ಅರಸನು ಊಟಮಾಡಿದ ಹವಳದಿಂದ ಅಲಂಕರಿಸಲ್ಪಟ್ಟ ಸ್ಥಳ. ಇದು ಅವನು ಮಲಗಿದ್ದ ಸುಗಂಧಮಯವಾದ ಹಾಸಿಗೆ. ವ|| ಎಂದು ಪರಿಜನರು ಹೇಳುತ್ತಿರಲು ಮತ್ತೆ ಮತ್ತೆ ಕೇಳುತ್ತಾ, ನೀವು ಇದ್ದ ಸ್ಥಳಗಳನ್ನು ನೋಡುತ್ತಾ, ಹಗಲನ್ನು ಕಳೆದು ಇಷ್ಟವಿಲ್ಲದಿದ್ದರೂ ಮಹಾಶ್ವೇತೆಯ ಬಲಾತ್ಕಾರದಿಂದ ಅಲ್ಲಿಯೆ ಊಟಮಾಡಿ ಸ್ವಲ್ಪ ಹೊತ್ತು ಇದ್ದು, ಚಂದ್ರೋದಯವಾಗಲಾಗಿ ಏನನ್ನೋ ಚಿಂತಿಸುತ್ತಾ ಅಲ್ಲಿಂದ ಎದ್ದು ೧೫. ಕಾದಂಬರಿಯು ಮೆಲ್ಲಮೆಲ್ಲನೆ ಮಲಗುವ ಮನೆಗೆ ಬಂದಳು. ಆಗ ಅವಳು ಕಾಲಿನ ಉಗುರುಗಳಲ್ಲಿ ಪ್ರತಿಬಿಂಬಿಸಿರುವ ಚಂದ್ರನಿಂದ ಉಂಟಾದ ಹೆಚ್ಚಾದ ಭಾರದಿಂದ ಬಹಳ ನಿಧಾನವಾಗಿ ನಡೆಯುತ್ತಿರುವವಳಂತೆ ಕಾಣುತ್ತಿದ್ದಳು. ವ|| ಹಾಗೆ ಬಂದು ಶಯನಗೃಹದಲ್ಲಿ ದೇಹವನ್ನು ಈಡಾಡಿ ಭಯಂಕರವಾದ ಸಂತಾಪವನ್ನುಂಟುಮಾಡುವ ಜ್ವರದಿಂದ ಪೀಡಿತಳಾದವಳಂತೆಯೂ,

ಪೊಳೆವ ಭುವನಪ್ರದೀಪಂ
ಗಳೊಡನೆ ಕುಮುದಿನಿಗಳೊಡನೆ ಚಕ್ರಾಹ್ವಯಸಂ
ಕುಳದೊಡನೆ ನಿದ್ರೆಯಿಂದು
ತ್ಪಳಾಕ್ಷಿ ಕೋಟಲೆಗೊಳುತ್ತಮಿರುಳಂ ಕಳೆದಳ್           ೧೬

ವ|| ಅಂತು ಕಳೆದು ಬೆಳಗಾಗಲೊಡನೆನ್ನಂ ನಿಮ್ಮಲ್ಲಿಗಟ್ಟಿದಳೆಂಬುದುಮದೆಲ್ಲಮಂ ಕೇಳ್ದಲ್ಲಿಗೆ ಪೋಗಲುದ್ಯುಕ್ತನಾಗಿ ಮನುಜೇಂದ್ರ ಚಂದ್ರನಿಂದ್ರಾಯುಧದ ಬೆಂಗೆವಂದು ಪತ್ರಲೇಖೆಯಂ ಪೆಱಗನೇಱಸಿ ವೈಶಂಪಾಯನಾದಿ ಪಿರಜನಮನಿರಲ್ವೇೞ್ದು ತುರಗಾರೂಢನಪ್ಪ ಕೇಯೂರಕನೊಡವರೆ ಹೇಮಕೂಟಕ್ಕೆವಂದು ಕನ್ಯಾಂತಪುರದ್ವಾರಮನೆಯ್ದೆವಂದು ಪಡಿಯಱನ ಕೆಯ್ಯೊಳ್ ಕುದುರೆಯಂ ಕೊಟ್ಟು ಕಾದಂಬರೀ ಪ್ರಥಮದರ್ಶನಕೌತುಕೆಯಪ್ಪ ಪತ್ರಲೇಖೆವೆರಸು ಪುಗುತಂದಿದಿರ್ವಪ್ಪ ಪುರುಷವರನಂ ಕಾದಂಬರೀದೇವಿಯೆಲ್ಲಿರ್ದಪಳೆಂಬುದುಮಾತಂ ಪೊಡವಟ್ಟು ದೇವ ಮತ್ತಮಯೂರಕಮೆಂಬ ಕೇಳೀಶೈಲದ ತಾವರೆಗೊಳದ ಹಿಮಗೃಹದೊಳಿರ್ದಪಳೆಂದು ಬಿನ್ನವಿಸೆ ಕೇಯೂರಕೋಪದಿಶ್ಯಮಾನ ಮಾರ್ಗನಾಗಿ ಪ್ರಮದವನದೊಳಗೆ ಬರುತಂ

ಬಿಸಿಲೆಲ್ಲ ಪಸಲೆಗವಿದುದು
ಪಸುರ್ವೆಳಗಿಂದೆನಿಪ ಬಾಲಕದಳೀವನದೊಳ್
ಬಿಸರುಹದಳಂಗಳಿಂ ಪೊದೆ
ಯಿಸಿರ್ದ ಹಿಮಗೃಹಮನವನಿಪಾಲಂ ಕಂಡಂ             ೧೭

ನಳಿನೀಪತ್ರಾಂಶುಕಾಚ್ಛಾದಿತ ಕುಚಯುಗಳಂ ಚಂದನಾಪಾಂಡು ಗಂಡ
ಸ್ಥಳಯುಗ್ಮಂ ಕೇತಕೀಕೋಮಲದಳ ವಿಲಸತ್ಕರ್ಣಪತ್ರಂ ಮೃಣಾಳೀ
ವಳಯಾಲಂಕಾರಕಾಂತಂ ವಕುಳಮುಕುಳಹಾಂಚಿತಂ ಪದ್ಮಸೂತ್ರೋ
ಜ್ವಳ ಚಂಚಚ್ಚಾಮರಂ ಭೋಂಕನೆ ಪೊಱಮಡುತ್ತಿರ್ದತ್ತು ಕಾಂತಾಕದಂಬಂ          ೧೮

ದಳಿತ ಪ್ರೋನ್ನಾಳಳನೀರೇರುಹ ಕುವಲಯರಂಭಾದಳಾಂಭೋಜಪತ್ರಾ
ವಳಿಯಂ ಲೀಲಾತಪತ್ರಾವಳಿ ಸೊಗಯಿಸೆ ತಮ್ಮೊಳ್ ಜಲಶ್ರೀಸಮಾಜಂ
ಕುಳಮೊಂದೊಂದಾಗಿ ಬಂದತ್ತೆನಿಸಿ ಬರುತುಮಿರ್ದತ್ತು ಕನ್ಯಾಕದಂಬಂ ೧೯

ಯಾವುದಾದರೂ ರೋಗ ಬಂದಿದೆಯೊ ಎಂಬಂತೆಯೂ ಯಾರೊಂದಿಗೂ ಮಾತನಾಡದೆ ಹೊರಳಾಡುತ್ತಿದ್ದು ೧೬. ಕನ್ನೆ ದಿಲೆಯಂತೆ ಕಣ್ಣುಳ್ಳ ಕಾದಂಬರಿಯು ಪ್ರಕಾಶಿಸುತ್ತಿರುವ ಮನೆದೀಪಗಳ ಜೊತೆಯಲ್ಲೂ, ಕನ್ನೆ ದಿಲೆಗಳ ಜೊತೆಯಲ್ಲೂ, ಚಕ್ರವಾಕಪಕ್ಷಿಗಳ ಜೊತೆಯಲ್ಲೂ ನಿದ್ರೆಯಿಲ್ಲದೆ ಕಷ್ಟಪಡುತ್ತಾ ರಾತ್ರಿಯನ್ನು ಕಳೆದಳು. ವ|| ಹಾಗೆ ರಾತ್ರಿಯನ್ನು ಕಳೆದು ಬೆಳಗಾಗಲು ನನ್ನನ್ನು ನಿಮ್ಮಲ್ಲಿಗೆ ಕಳುಹಿಸಿದಳು” ಎಂದು ಹೇಳಲಾಗಿ, ಅದೆಲ್ಲವನ್ನೂ ಕೇಳಿ ಚಂದ್ರನಂತೆ ಆಹ್ಲಾದಕರನಾದ ಚಂದ್ರಾಪೀಡ ಮಹಾರಾಜನು ಅಲ್ಲಿಗೆ ಹೋಗಲು ಉದ್ಯುಕ್ತನಾದನು. ಇಂದ್ರಾಯುಧವನ್ನು ಹತ್ತಿ ಪತ್ರಲೇಖೆಯನ್ನೂ ಹಿಂದುಗಡೆ ಕೂರಿಸಿಕೊಂಡನು. ವೈಶಂಪಾಯನನೇ ಮೊದಲಾದ ಪರಿಜನರನ್ನು ಅಲ್ಲೇ ಇರುವಂತೆ ತಿಳಿಸಿದನು. ಬಳಿಕ ಕುದುರೆಯನ್ನು ಹತ್ತಿ ಕೇಯೂರಕನು ಜೊತೆಯಲ್ಲೇ ಬರುತ್ತಿರಲು ಹೇಮಕೂಟಕ್ಕೆ ಬಂದನು. ಅಲ್ಲಿ ಕನ್ಯಾಂತಪುರದ ಬಾಗಿಲಿಗೆ ಬಂದು, ದ್ವಾರಪಾಲಕನ ಕೈಯಲ್ಲಿ ಕುದುರೆಯನ್ನು ಕೊಟ್ಟು ಕಾದಂಬರಿಯನ್ನು ಮೊದಲಬಾರಿಗೆ ನೋಡಬೇಕೆಂಬ ಕುತೂಹಲವುಳ್ಳ ಪತ್ರಲೇಖೆಯೊಡನೆ ಒಳಕ್ಕೆ ಬಂದನು. ಅಲ್ಲಿದ್ದ ನಪುಂಸಕಸೇವಕನನ್ನು ‘ಕಾದಂಬರೀದೇವಿಯು ಎಲ್ಲಿದ್ದಾಳೆ?’ ಎಂದು ಕೇಳಿದನು. ಅವನು ನಮಸ್ಕರಿಸಿ ‘ಸ್ವಾಮಿ, ಮತ್ತಮಯೂರವೆಂಬ ಕ್ರೀಡಾಪರ್ವತದಲ್ಲಿರುವ ತಾವರೆಗೊಳದ ಹತ್ತಿರದಲ್ಲಿ ಶೀತಗೃಹದಲ್ಲಿದ್ದಾಳೆಂದು ಅರಿಕೆ ಮಾಡಿದನು. ಬಳಿಕ ಕೇಯೂರಕನು ದಾರಿಯನ್ನು ತೋರಿಸುತ್ತಿರಲು, ಉದ್ಯಾನವನದ ಒಳಕ್ಕೆ ಬಂದನು. ೧೭. ಅಲ್ಲಿ ಒಂದು ಬಾಳೆಯ ಗಿಡದ ಪೊದರಿತ್ತು. ಅದರ ಹಸಿರುಕಾಂತಿಯಿಂದ ಬಿಸಿಲೆಲ್ಲ ಹಸಿರು ಹುಲ್ಲುಮಯವಾಗಿರುವಂತೆ ಕಾಣುತ್ತಿತ್ತು. ಅಲ್ಲಿ ತಾವರೆ ಎಲೆಗಳನ್ನು ಹೊದಿಸಿರುವ ಒಂದು ಹಿಮಗೃಹವನ್ನು ಅರಸನು ನೋಡಿದನು. ೧೮. ಅಲ್ಲಿ ಹೆಂಗಸರ ಗುಂಪು ಬೇಗ ಬೇಗನೆ ಹೊರಕ್ಕೆ ಬರುತ್ತಿತ್ತು. ಆ ಹೆಂಗಸರು ತಮ್ಮ ಸ್ತನಗಳನ್ನು ತಾವರೆಯೆಲೆಯಿಂದ ಮುಚ್ಚಿಕೊಂಡಿದ್ದರು. ಅವರ ಎರಡು ಕೆನ್ನೆಗಳೂ ಲೇಪನದಿಂದ ಶುಭ್ರವಾಗಿದ್ದುವು. ಕಿವಿಗಳಲ್ಲಿ ಕೇತಕೀಪುಷ್ಪದ ಕೋಮಲವಾದ ಎಸಳುಗಳು ಕರ್ಣಾಭರಣವಾಗಿ ಶೋಭಿಸುತ್ತಿದ್ದುವು. ಅಲ್ಲದೆ ಅವರು ತಾವರೆದಂಟಿನಿಂದ ಮಾಡಿದ ಬಳೆಗಳನ್ನು ತೊಟ್ಟುಕೊಂಡು ಚೆನ್ನಾಗಿ ಕಾಣುತ್ತಿದ್ದರು. ವಕುಳದ ಮೊಗ್ಗುಗಳಿಂದ ಕಟ್ಟಿದ ಹಾರದಿಂದ ಶೋಭಿಸುತ್ತಿದ್ದರು. ತಾವರೆಯ ದಂಟಿನ ಎಳೆಗಳಿಂದ ಮಾಡಿರುವ ಪ್ರಕಾಶಮಾನವಾದ ಹಾಗೂ ಚಲಿಸುತ್ತಿರುವ ಚಾಮರಗಳನ್ನು ಹಿಡಿದುಕೊಂಡಿದ್ದರು. ೧೯. ದಂಟಿನಿಂದ ಕೂಡಿರುವ ಅರಳಿರುವ ಕಮಲ, ಕನ್ನೆ ದಿಲೆ, ಬಾಳೆಗರಿ, ತಾವರೆಯೆಲೆಗಳ ಸಮೂಹದಿಂದ ಮಾಡಿರುವ ವಿಲಾಸಮಯವಾದ ಛತ್ರಿಗಳು ಸಾಲುಸಾಲಾಗಿ ಶೋಭಿಸುತ್ತಿರಲು, ಜಲಸಂಪತ್ತಿನ ಅದೇವತೆಗಳೂ ಕಮಲದಲ್ಲಿ ವಾಸಿಸುವ ಲಕ್ಷಿ ಯರೂ

ವ|| ಅಂತಾ ಶಿಶಿರೋಪಚಾರನಿಪುಣೆಯರಪ್ಪ ಕಾದಂಬರೀಪರಿಜನಂಗಳ್ ತಮತಮಗೆ ಪೊಡಮಟ್ಟೋಸರಿಸಿ ಪೋಗೆವೋಗೆ

ಒದವಿದ ತೋರಮಲ್ಲಿಗೆಯ ಹಾರದ ಸೂಸಕದಿಂದೆ ಸಿಂಧುವಾ
ರದ ಚಮರೀಜದಿಂದೆ ಕುಮುದಧ್ವಜಮಾಲಿಕೆಯಿಂದೆ ಪುಂಡರೀ
ಕದ ಕಿಱುಗಂಟೆಯಿಂದೆ ಸಹಕಾರದ ಕೆಂದಳಿರಿಂದೆ ಚೆಲ್ವುವೆ
ತ್ತುದು ಕದಳೀದ್ರುಮಗ್ರಥಿತ ಸುಂದರವಂದನಮಾಲಿಕಾವೃತ್ತಂ    ೨೦

ವ|| ಅಂತದಂ ನುಸುಳುತ್ತಂ ಪೋಗೆ ನಾಲ್ದೆಸೆಯುಮಂ ನೋೞ್ಪೌಗಳೊಂದೊಂದು ದೆಸೆಯೊಳಿರ್ತಡಿವಿಡಿದು ನಟ್ಟ ತಮಾಲದ ತಳಿರ್ಗೊಂಬುಗಳಂ ಸಮೆದ ವನಲೇಖೆಗಳುಮಂ ಕುಸುಮರಜಮೆಂಬ ನುಣ್ಮಳಲ ಪುೞಲ್ಗಳಿಂದಮೆಸೆವ ಚಂದನರಸದ ಪಳ್ಳಂಗಳುಮಂ ಓರೊಂದೆಡೆಯೊಳೆೞಲ್ವಲರ್ಗೊಂಚಲ ಚಾಮರಂಗಳೊಳಂ ನಾಂದ ನಾರಂಗವಟ್ಟೆಯ ಮೇಲ್ಕಟ್ಟಿನೊಳ ಮಿಟ್ಟಳಮೆಸೆವ ಸಿಂಧೂರದ ನೆಲಗಟ್ಟಿನೊಳ್ ಪಾಸಿದ ಕೆಂದಾವರೆಯೆಸಳ ಪಸೆಗಳುಮಂ ಮತ್ತೊಂದೆಡೆಯೊಳೇಲಾರಸದಿಂ ಸಿಂಪಣಿಗೆಗೊಟ್ಟು ಮುಟ್ಟಿದೊಡಲ್ಲದೞಯಲ್ಬಾರದೆಂದೆನಿಪ ಭೃಂಗದ ಚಪ್ಪರಂಗಳುಮಂ ಪೆಱತೊಂದೆಡೆಯೊಳ್ ಸಹಕಾರರಸದಿಂ ತೊಯ್ದರನೇಱಲ ತಳಿರ್ಗಳಿಂ ಪೊದೆಯಿಸಿದ ಕುಳಿರ್ವ ಕಾವಣಂಗಳುಮಂ ಮತ್ತಮೊಂದೆಡೆಯೊಳ್ ಸಿರಿಸದೆಸಳ ಪಸಲೆಯ ಮೃಣಾಳನಾಳಧಾರಾಗೃಹಂಗಳ ಮೇಲೆ ಮುಗಿಲ್ಗಡವಿನಲರ ಧೂಳಿಯೊಳ್ ಪೊರೆದು ನಿಲಿಸಿದ ಯಂತ್ರಮಯೂರಂಗಳುಮಂ ಒಂದೆಡೆಯೊಳ್ ಜಂತ್ರದ ಮಱಯಾನೆಯ ಕರಪುಟಂಗಳಿಂ ಕದಡಿದ ತಾವರೆಗೊಳಂಗಳುಮನಂತು ಮಲ್ಲದೊಂದೆಡೆಯೊಳ್