ಮಲಯಜವಾರಿಯಿಂ ಕುಳಿರ್ವ ಬಾವಿಗಳಲ್ಲಿ ಮೃಣಾಳದಂಡಮಂ
ಡಲಿಗಳ ದಂಡತೋರಣಕದಿಂ ನವಕಾಂಚನ ಕೇತಕೀದಳಂ
ಗಳ ಪರಿಡೋಣಿಯಿಂ ವಕುಳಮಾಲೆಯೊಳಾಲಿಸಿದಬ್ಜಿನೀದಳಾ
ವಳಿಗಳ ಮಾಲೆಗುಂಡಿಗೆಗಳಿಂ ಸಮೆದಾಡುವ ಱಟಳಂಗಳಂ     ೨೧

ವ|| ಅಂತವಂ ನೋಡುತ್ತಂ ಪೋಗೆ ಮತ್ತಮಲ್ಲಿಗಲ್ಲಿಗೆ ಪಳುಕಿನ ಬಲಾಕೆಗಳೊಳಂ ಬರೆದ ಸುರಶರಾಸನಂಗಳೊಳಂ ಸೊಗಯಿಸುವ ವಾರಿಧಾರೆಗಳಹ ಸುರಿಯುತಂ ನಡೆವ ಜಂತ್ರದ ಮುಗಿಲ್ಗಳುಮನಲ್ಲಲ್ಲಿಗೆ ಮುತ್ತಿನ ಪುಡಿಯ ನುಣ್ಮಲಳ್ಗಳಾಲವಾಲಂಗಳಿಂ ಕೂಡಿರ್ದೆಡೆವಿಡದೆ ಸುರಿವ ತೋರವನಿಗಳಿಂ ದುರ್ದಿನಂ ಮಸಗಿಸುವ ಪತ್ರ ಯಂತ್ರ್ವ ವೃಕ್ಷಂಗಳುಮನಲ್ಲ ಲ್ಲಿಗೆ ನಾಂದೆಱಕೆಗಳಂ ಬಿದಿರೆ ಕೆದಱುವ ತುಂತುಱಂ

ಸಕಲ ಸಾಗರಾಪತಿಯಾದ ವರುಣನ ಸಂಪದ್ದೇವತೆಗಳೂ ಒಟ್ಟಿಗೆ ಸೇರಿ ಬಂದಿದ್ದಾರೋ ಎಂಬಂತೆ ಕನ್ಯೆಯರ ತಂಡವು ಬರುತ್ತಿತ್ತು. ವ|| ಹೀಗೆ ಶಿಶಿರೋಪಚಾರನಿಪುಣೆಯರಾದ ಕಾದಂಬರಿಯ ಪರಿಜನರು ಚಂದ್ರಾಪೀಡನಿಗೆ ತಾವು ತಾವೇ ನಮಸ್ಕರಿಸಿ ಸರಿದು ಸರಿದು ಹೋಗುತ್ತಿರಲಾಗಿ, ೨೦. ಬಾಳೆಮರಗಳಿಗೆ ಕಟ್ಟಿರುವ ಸುಂದರವಾದ ತೋರಣದಿಂದ ಕೂಡಿರುವ ಹಿಮಗೃಹದ ಮುಂಬಾಗಿಲು, ಸೇರಿಸಿ ಕಟ್ಟಿರುವ ದಪ್ಪಮಲ್ಲಿಗೆಯ ಸರಗಳ ಕುಚ್ಚಿನಿಂದಲೂ, ಲಕ್ಕೀಹೂವಿನ ಚಾಮರದಿಂದಲೂ, ಬಿಳಿನೈದಿಲೆಯ ಧ್ವಜಪಂಕ್ತಿಯಿಂದಲೂ, ಕಿರುಗಂಟೆಯಂತೆ ಕಟ್ಟಿರುವ ಬಿಳಿಕಮಲಗಳ ಮೊಗ್ಗುಗಳಿಂದಲೂ, ಸಿಹಿಮಾವಿನ ಮರದ ಕೆಂಪುಚಿಗುರುಗಳಿಂದಲೂ ಶೋಭಿಸುತ್ತಿತ್ತು. ವ|| ಹಾಗೆಯೆ ಅದನ್ನು ದಾಟಿಕೊಂಡು ಹೋಗಿ ನಾಲ್ಕು ದಿಕ್ಕುಗಳನ್ನೂ ನೋಡುತ್ತಿರಲಾಗಿ ಅಲ್ಲಿ ಒಂದು ಕಡೆ ಎರಡು ದಡವನ್ನೂ ಅನುಸರಿಸಿ ನೆಟ್ಟಿರುವ ಹೊಂಗೆಮರಗಳ ಚಿಗುರುಗಳಿಂದ ತುಂಬಿದ ಕೊಂಬೆಗಳುಳ್ಳ ವನಪಂಕ್ತಿಯಿಂದಲೂ, ಹೂವಿನ ಧೂಳುಗಳೆಂಬ ನುಣುಪಾದ ಮರಳುಗಳ ದಿಣ್ಣೆಗಳಿಂದಲೂ ಶೋಭಿಸುವ ಗಂಧೋದಕದ ನದಿಗಳನ್ನು ಕಂಡನು. ಮತ್ತೊಂದು ಕಡೆಯಲ್ಲಿ ಜೋಲಾಡುತ್ತಿರುವ ಹೂವಿನ ಗೊಂಚಲಿನ ಚಾಮರಗಳಿಂದಲೂ ಒದ್ದೆಯಾದ ಕೆಂಪುಬಟ್ಟೆಯ ಮೇಲ್ಕಟ್ಟಿನಿಂದಲೂ ಅತಿಶಯವಾಗಿ ಶೋಭಿಸುವ ಚಂದ್ರದ ಪುಡಿಗಳಿಂದ ಕೂಡಿರುವ ನೆಲಗಟ್ಟಿನ ಮೇಲೆ ಹಾಸಿರುವ ಕೆಂದಾವರೆದಳದ ಹಾಸಿಗೆಗಳನ್ನು ನೋಡಿದನು. ಮತ್ತೊಂದು ಕಡೆಯಲ್ಲಿ ಏಲಕ್ಕಿಯ ಸರದಿಂದ ಸೇಚನವನ್ನು ಹೊಂದಿ ಮುಟ್ಟುವುದರಿಂದಲೇ ತಿಳಿಯಲು ಸಾಧ್ಯವಾಗಿರುವ (ಸ್ಪರ್ಶಾನುಮೇಯ) ಕಾಗೆಬಂಗಾರದ ಚಪ್ಪರಗಳನ್ನು ನೋಡಿದನು. ಮತ್ತೊಂದು ಕಡೆ ಸಿಹಿಮಾವಿನ ರಸದಿಂದ ನೆನೆಸಿದ ಜಂಬುನೇರಿಳೆ ಚಿಗುರನ್ನು ಹೊದೆಸಿರುವ ತಂಪಾದ ಚಪ್ಪರಗಳನ್ನು ಕಂಡನು. ಮತ್ತೊಂದು ಕಡೆ ಬಾಗೆಹೂವಿನ ಎಸಳುಗಳಿಂದ ಹಸಿರುಹುಲ್ಲಿನ ಪ್ರದೇಶದಂತೆ ಮಾಡಲ್ಪಟ್ಟ ತಾವರೆದಂಟುಗಳಿಂದ ನಿರ್ಮಿಸಲ್ಪಟ್ಟ ಧಾರಾಗೃಹಗಳ ಮೇಲೆ ನಿಲ್ಲಿಸಿರುವ, ಮೋಘೋದಯದಿಂದ ಪುಷ್ಟಿತವಾಗುವ ಕಡಹದ ಮರದ ಹೂವಿನ ಪರಾಗಗಳನ್ನು ಬಳಿದಿರುವ ಯಂತ್ರದ ನವಿಲುಗಳನ್ನು ಕಂಡನು. ಮತ್ತೊಂಡು ಕಡೆ ಯಂತ್ರದ ಆನೆಮರಿಯ ಸೊಂಡಿಲಿನಿಂದ ಕದಡಿದ ತಾವರೆಗೊಳಗಳನ್ನು ಅವಲೋಕಿಸಿದನು. ಅದಲ್ಲದೆ ಒಂದು ಕಡೆ ೨೧. ಗಂಧೋದಕದಿಂದ ತುಂಬಿರುವ ತಂಪಾದ ಬಾವಿಗಳಲ್ಲಿ ತಾವರೆಯ ದಂಟುಗಳಿಂದ ಮಾಡಿದ ಅರೆಕಾಲುಗಳಿಂದಲೂ, ಹೊಸದಾದ ಹೊಂಬಣ್ಣದ ಕೇತಕೀದಳಗಳಿಂದ ಮಾಡಿದ ನೀರು ಹರಿಯುವ ದೋಣಿಗಳಿಂದಲೂ ಕೂಡಿದ, ವಕುಳಮಾಲಿಕೆಗಲಿಂದ ಜೋಡಿಸಿದ ತಾವರೆಯೆಲೆಗಳ ದೊನ್ನೆಗಳೆಂಬ ಮಾಲಿಕೆಯಂತೆ ಜೋಡಿಸಿದ ಗಡಿಗೆಗಳಿಂದ ನಿರ್ಮಿಸಿರುವ ತಿರುಗುತ್ತಿರುವ ರಾಟೆಗಳನ್ನು ನೋಡಿದನು. ವ|| ಹಾಗೆಯೆ ಅವುಗಳನ್ನೆಲ್ಲಾ ನೋಡುತ್ತಾ ಹೋಗುತ್ತಿರಲಾಗಿ ಅಲ್ಲಿ ಸಟಿಕಶಿಲೆಯಿಂದ ನಿರ್ಮಿತವಾದ ಬೆಳ್ಳಕ್ಕಿಗಳಿಂದಲೂ, ಚಿತ್ರಿಸಿರುವ ಕಾಮನಬಿಲ್ಲುಗಳಿಂದಲೂ ಕೂಡಿಕೊಂಡು ಸುಂದರವಾದ ಜಲಧಾರೆಗಳನ್ನು ಸುರಿಸುತ್ತಾ ಚಲಿಸುವ ಯಂತ್ರದ

ಮಂಜು ಮಸಗೆ ಪಾರ್ವ ಜಂತ್ರದ ಪತ್ರಶಕುನಿಗಳುಮನಲ್ಲಲ್ಲಿಗೆ ಮಧುಕರನಿರಮೆಂಬ ಕಿಂಕಿಣಿಗಳ ನುಣ್ಚರಂಗಳಿಂದೆಸೆವಲರುಯ್ಯಲೆಗಳುಮನಲ್ಲಲ್ಲಿಗೆ ತಾವರೆಯ ಕೊಡೆಯೆಲೆಗಳಿಂ ಮುಚ್ಚಿದ ಪಚ್ಚೆಯ ಪವಳದ ಪದ್ಮರಾಗದ ಪಳುಕಿನ ತಣ್ಗಳಸಂಗಳುಮನಲ್ಲಿಲ್ಲಿಗೆ ಕರ್ಪೂರಪಲ್ಲವರಸದಿನವಾಸಿಸಿದ ತಾವರೆಯ ನೂಲ ದುಗುಲಂಗಳುಮನಲ್ಲಲ್ಲಿಗೆೞವಾೞೆಯ ತಿರುಳೆಲೆಗಳೊಳಂ ತಾವರೆಯ ತಳಿರೆಲೆಗಳೊಳಂ ಪೊಸವೂಗಳೆಸಳ್ಗಳೊಳಂ ಸಮೆದ ಬಿಜ್ಜಣಿಗೆಗಳುಮಂ ಪೆಱವಂ ಪಲತೆಱದ ಶಿಶಿರೋಪಟಾರಂಗಳಂ ಮಾೞ್ಪ ಪರಿಜನಂಗಳುಮಂ ನೋಡುತ್ತಂ ಪೋಗೆವೋಗೆ

ಘನಸಮಯಂಗಳಿಕ್ಕೆವನೆ ಮಾಗಿಯಿರುಳ್ಗಳ ಬಿಟ್ಟ ಬೀಡು ಚಂ
ದನಕುಲಮಂದಿರಂ ಜಲನೀಶನ ವಾರಿವಿಹಾರಭೂಮಿ ನಂ
ದನವನದೇವಿಯರ್ಕಳೆವಟ್ಟ ಹಿಮಾಲಯದಂತರಂಗಮೆಂ
ಬಿನೆಗಮಳುಂಬಮೊಪ್ಪುವ ಹಿಮಾಲಯಮಂ ನಡೆನೋಡಿದಂ ನೃಪಂ      ೨೨

ಅಕ್ಕರ || ಉಡುಪ ವಿರಹ ದುಸ್ಸಹವಾಸರಂಗಳಂ ಕೞಪಲ್ಕೆ ಕುಮುದಿನಿಯಿರ್ಪ ತಾಣಂ
ಸಿಡಿಲ ಕಿಚ್ಚಿನ ಬೇಗೆಯಾನಾೞಸಲ್ ಜಲಧರಸಂಕುಲಮಿರ್ಪ ತಾಣಂ
ಕಡಲ ಬಳಗಂ ಬಾಡಬವಹ್ನಿತಾಪಮಂ ಪರಿಂರಿಸಲ್ಕೆ ಬಂದಿರ್ಪ ತಾಣಂ
ಮೃಡನ ಭಾಳೇಕ್ಷಣಾನಲನಳುರಲ್ಕೆ ಮಗ್ಗಿಸಲ್ ಮನುಮತನಿರ್ಪ ತಾಣಂ             ೨೩

ವ|| ಎಂದು ಭಾವಿಸುತ್ತಂ ಪೋಗೆವೋಗೆ ಕಡವಿನಲರ ಕೇಸರಂಗಳಿಂ ಪೊರೆದೆಲರ್ಗಳುಂ ಹಿಮಸ್ಪರ್ಶನದಿಂ ಕಂಟಕಿತ ಮಾದಂತೆಯುಂ ಎಲರಲೆಪದಿಂ ನಡುಗುವೆಲೆದುಱುಗಲಿಂ ಕದಳೀವನಂಗಳುಮೈಕಿಲಡರ್ದು ನಡುಗಿದಪುವೆಂಬಂತೆಯುಂ ಅಲರ್ವಂಡನುಂಡು ಸೊಕ್ಕಿ ಮೊರೆವ ಮೊರೆಪದಿಂ ತುಂಬಿಗಳುಂ ಪಲ್ಪಗುಟ್ಟಿದಪುವೆಂಬಂತೆಯುಂ ಕೂಡೆ ಮುಸುಱುವ ಮಱದುಂಬಿಯ ಬಂಬಲಿಂ ಲತೆಗಳುಂ ಕರಿಯದಡ್ಡಿಯಂ ಕವಿದಂತೆಯುಮಾಗೆ ಪಿಡಿಕೈಸಲಪ್ಪ ತಂಪಿಂ ತೀವಿಂದಂತಾಗಿ

ಮನಮಮೃತಾಂಶುಮಯಂ ಚೇ
ತನೆ ಬಿಸಮಯಮಿಂದ್ರಿಯೋತ್ಕರಂ ಕುಮುದಮಯಂ
ತನು ಸಾಂದ್ರಚಂದ್ರಿಕಾಮಯ
ಮೆನಿಸಿದುದು ನರೇಂದ್ರಚಂದ್ರಮಂಗಾಕ್ಷಣದೊಳ್        ೨೪

ಕೃತಕಮೇಘಗಳನ್ನೂ, ಅಲ್ಲಲ್ಲಿ ಮುತ್ತಿನ ಪುಡಿಯೆಂಬ ನುಣುಪಾದ ಮರಳುಗಳಿಂದ ಕಟ್ಟಿರುವ ಪಾತಿಗಳಿಂದ ಕೂಡಿಕೊಂಡು ಒಂದೇಸಮನೆ ಸುರಿಯುತ್ತಿರುವ ದಪ್ಪದಪ್ಪ ನೀರು ಹನಿಗಳಿಂದ ಮಳೆದಿವಸವನ್ನುಂಟುಮಾಡುತ್ತಿರುವ ಯಂತ್ರದ ಕೃತಕವೃಕ್ಷಗಳನ್ನೂ, ಅದಲ್ಲದೆ ಒದ್ದೆಯಾದ ರೆಕ್ಕೆಗಳನ್ನು ಕೊಡಹಿದರೆ ತುಂತುರುಗಳಿಂದ ಮಂಜುಬೀಳುವಂತೆ ಮಾಡುತ್ತಾ ಹಾರಾಡುತ್ತಿರುವ ಎಲೆಗಳಿಂದ ಮಾಡಿರುವ ಯಂತ್ರದ ಕೃತಕಪಕ್ಷಿಗಳನ್ನೂ, ಅಲ್ಲಲ್ಲಿ ದುಂಬಿಗಳ ಗುಂಪೆಂಬ ಕಿರುಗಂಟೆಗಳ ಇಂಪಾದ ಧ್ವನಿಯಿಂದ ರಮ್ಯವಾದ ಹೂವಿನ ಉಯ್ಯಾಲೆಗಳನ್ನೂ, ಅಲ್ಲಲ್ಲಿ ತಾವರೆಯ ಕೊಡೆಯಂತಿರುವ ಎಳೆಗಳಿಂದ ಮುಚ್ಚಿದ, ಪಚ್ಚೆಯ, ಹವಳದ, ಪದ್ಮರಾಗದ ಮತ್ತು ಸಟಿಕದ ತಂಪಾದ ಗಡಿಗೆಗಳನ್ನೂ, ಅಲ್ಲಲ್ಲಿ ಕರ್ಪೂರವೃಕ್ಷದ ಚಿಗುರಿನ ರಸದಿಂದ ಸುವಾಸನೆ ಕಟ್ಟಿರುವ ತಾವರೆ ನೂಲಿನಿಂದ ಮಾಡಿದ ಉತ್ತಮ ವಸ್ತ್ರಗಳನ್ನೂ ಅಲ್ಲಲ್ಲಿ ಎಳೆಬಾಳೆಯ ಸುಳಿಯೆಲೆಗಳಿಂದಲೂ, ತಾವರೆಯ ಚಿಗುರೆಲೆಗಳಿಂದಲೂ, ಹೊಸ ಹೂವುಗಳ ದಳಗಳಿಂದಲೂ ಮಾಡಿರುವ ಬೀಸಣಿಗೆಗಳನ್ನೂ, ಹೀಗೆಯೆ ಹಲವಾರು ಬಗೆಯಾದ ಶೈತ್ಯೋಪಚಾರಕ್ಕೆ ಬೇಕಾದ ಸಾಮಗ್ರಿಗಳನ್ನು ಮಾಡುತ್ತಿರುವ ಪರಿಜನರನ್ನೂ ನೋಡುತ್ತಾ ಹೋಗುತ್ತಿದ್ದನು. ೨೨. ಮಳೆಗಾಲಕ್ಕೆ ವಾಸಸ್ಥಳದಂತೆಯೂ ಚಳಿಗಾಲದ ರಾತ್ರಿಗಳಿಗೆ ತಂಗುವ ಸ್ಥಳದಂತೆಯೂ ಚಂದನಕ್ಕೆ ತೌರುಮನೆಯಂತೆಯೂ ವರುಣನಿಗೆ ಜಲಕ್ರೀಡೆಯಾಡುವ ಪ್ರದೇಶದಂತೆಯೂ ಇಂದ್ರನ ನಂದನವನದ ದೇವತೆಗಳಿಗೆ ಆಶ್ರಯಸ್ಥಾನದಂತೆಯೂ ಹಿಮಾಲಯಪರ್ವತದ ಹೃದಯದಂತೆಯೂ ಬಹಳ ಚೆನ್ನಾಗಿ ಶೋಭಿಸುವ ಹಿಮಗೃಹವನ್ನು ಚಂದ್ರಾಪೀಡನು ಚೆನ್ನಾಗಿ ನೋಡಿದನು. ೨೩. “ಇದು ಚಂದ್ರನ ವಿರಹದಿಂದ ಸಹಿಸಲಸಾಧ್ಯವಾದ ಹಗಲುಗಳನ್ನು ಕಳೆಯುವುದಕ್ಕಾಗಿ ಕುಮುದಿನಿಯು ಇರುವ ಸ್ಥಳ. ತಮ್ಮಲ್ಲಿ ಸೇರಿಕೊಂಡಿರುವ ಸಿಡಿಲಿನ ಬೆಂಕಿಯ ತಾಪವನ್ನು ಪರಿಹರಿಸಿಕೊಳ್ಳಲು ಮೇಘಸಮೂಹವು ಬಂದು ಇರುವ ಸ್ಥಳ. ಒಳಗಿರುವ ಬಡಬಾಗ್ನಿಯ ತಾಪವನ್ನು ನಿವಾರಿಸಿಕೊಳ್ಳುವುದಕ್ಕಾಗಿ ಸಮುದ್ರಗಳು ಬಂದಿರುವ ಸ್ಥಳ. ಪರಮೇಶ್ವರನ ಹಣೆಗಣ್ಣಿನ ಬೆಂಕಿಯು ಹರಡಿಕೊಳ್ಳಲು ಅದನ್ನು ಅಡಗಿಸಲು ಮನ್ಮಥನು ಬಂದಿರುವ ಸ್ಥಳ.” ವ|| ಎಂದು ಭಾವಿಸುತ್ತ ಹೋಗುತ್ತಿರಲಾಗಿ ಕದಂಬಪುಷ್ಪಗಳ ಒಳಗಿನ ಕುಸುಮಗಳನ್ನು ತರುತ್ತಿರುವ ಗಾಳಿ (ಕುಸುಮಗಳು ನವಿರಿನಂತಿರುವುದರಿಂದ) ಅಲ್ಲಿನ ಚಳಿಯಿಂದ ಮೈ ನವಿರುಗೊಂಡಂತಿದ್ದಿತು. ಗಾಳಿ ಬೀಸುವುದರಿಂದ ಅಲ್ಲಾಡುತ್ತಿರುವ ಎಲೆಗಳಿಂದ ಕೂಡಿರುವ ಬಾಳೆಯ ತೋಪು ಇಲ್ಲಿನ ಚಳಿ ಆವರಿಸಿಕೊಳ್ಳಲು ಗಡಗಡನೆ ನಡುಗುತ್ತಿರುವಂತೆ ಕಾಣುತ್ತಿತ್ತು. ದುಂಬಿಗಳು ಹೂವಿನ ಬಂಡನ್ನು ಕುಡಿದು ಸೊಕ್ಕಿ ಝೇಂಕರಿಸುತ್ತಿರಲು ಅವು ಇಲ್ಲಿನ ಚಳಿಯಿಂದ ಹಲ್ಲುಮೊರೆಯುವಂತೆ ಕಾಣುತ್ತಿದ್ದುವು. ಅಲ್ಲಿನ ಲತೆಗಳ ಮೇಲೆ ಮರಿದುಂಬಿಗಳ ಗುಂಪು ಆವರಿಸಿಕೊಂಡಿರಲು ಆ ಲತೆಗಳು ಇಲ್ಲಿನ ಚಳಿಯನ್ನು ತಡೆಯಲಾರದೆ ಕರಿಯ ಹಚ್ಚಡವನ್ನು ಹೊದ್ದುಕೊಂಡಂತೆ ಕಾಣುತ್ತಿದ್ದುವು. ಹೀಗೆ ಹಿಡಿಯಿಂದ ಉಂಡೆಮಾಡಿ ಹಿಡಿದುಕೊಳ್ಳಬಹುದೋ ಎಂಬಂತೆ ಗಾಢವಾದ ಚಳಿಯಿಂದ ತುಂಬಿದಂತಾಗಿತ್ತು. ೨೪. ಆ ಚಂದ್ರಾಪೀಡನಿಗೆ ಕೂಡಲೆ ತನ್ನ ಮನಸ್ಸು ಚಂದ್ರನಿಂದ ನಿಷ್ಪನ್ನವಾದಂತೆಯೂ ಚೈತನ್ಯವು ತಾವರೆದಂಟಿನಿಂದ

ವಾರಿಮಯಂ ದಿವಸಂ ಮಣಿ
ಹಾರಮಯಂ ತಿಗ್ಮರೋಚಿ ಕಿರಣಾವಳಿ ಕ
ರ್ಪೂರಮಯಂ ಪವನಂ ನೀ
ಹಾರಮಯಂ ಭುವನಮೆನಿಸಿ ತೋಱತ್ತಾಗಳ್            ೨೫

ವ|| ಅಂತು ಪೊರ್ದೆ

ಕುಳಿರ್ವ ಹಿಮಾಲಯದೊಳ್ ಕೋ
ಮಳೆ ನಿಜಪರಿವಾರಸಹಿತಮಿರ್ದಳ್ ಹಿಮವ
ತ್ತಳದೊಳ್ ತರಂಗಿಣೀಸಂ
ಕುಳದಿಂ ಬಳಸಿರ್ದ ದಿವಿಜನದಿಯೆಂಬಿನೆಗಂ ೨೬

ಪರಿವೇಷದ ತೆಱದಿಂದನ
ವರತಂ ಕರ್ಪೂರರಸದ ಪರಿಕಣಿ ಸುತ್ತಂ
ಪರಿಯಲ್ ಮೃಣಾಳಪೊಸವಂ
ದರ ನಡುವಣ ಪೂವಿನೆಸಳ ಪಾಸಿನೊಳಿರ್ದಳ್          ೨೭

ವ|| ಆಗಳ್

ಅಪರಿಮಿತಂ ಪೊಣ್ಮುವ ಬಾ
ಷ್ಟಪಯೋಧಾರಾಳಿ ಪರಿವ ಪರಿನಾಳಿಕೆಯೊಂ
ದುಪಮೆಗೆ ಬಂದಿರ್ದುದು ಕ
ರ್ಣಪೂರನವಕೇತಕೀದಳಂ ಕಾಮಿನಿಯಾ      ೨೮

ಸಂತಾಪಭೀತಿಯಿಂ ತನು
ಕಾಂತಿ ತೆರಳ್ದೋಡಿದಪುದೆನಲ್ ನಿಡುಸುಯ್ಯಿಂ
ದಂ ತೊಲಗೆ ಮೇಲುದೆಸೆದುದು
ಕಾಂತೆಯ ಚಂದನವಿಲಿಪ್ತಘನಕುಚಯುಗಳಂ             ೨೯

ಅರಸಂ ಬರಲೌತ್ಸುಕ್ಯದೆ
ಪರಿಯಲ್ ಗಱಯಿಟ್ಟುವೆನಿಸಿ ಮಾರ್ತೊಳಗುವ ಚಾ
ಮರದಿಂದಮೆಸೆವ ಕುಚಮಂ
ಕರಕಮಲದಿನೊತ್ತಿ ಕಾಂತೆ ಕಣ್ಗೆಸೆದಿರ್ದಳ್    ೩೦

ನಿಷ್ಪನ್ನವಾದಂತೆಯೂ ಇಂದ್ರಿಯಗಳು ನೈದಿಲೆಯಿಂದ ನಿಷ್ಪನ್ನವಾದಂತೆಯೂ ಶರೀರವು ದಟ್ಟವಾದ ಬೆಳದಿಂಗಳಿಂದ ನಿಷ್ಪನ್ನವಾದಂತೆಯೂ ಭಾಸವಾಯಿತು. ೨೫. ಮತ್ತು ದಿವಸವೆಲ್ಲ ಜಲಮಯವಾದಂತೆಯೂ ಸೂರ್ಯಕಿರಣಗಳು ಮಣಿಸರಮಯವಾದಂತೆಯೂ ಗಾಳಿಯ ಕರ್ಪೂರಮಯವಾದಂತೆಯೂ ಜಗತ್ತೆಲ್ಲ ಹಿಮಮಯವಾದಂತೆಯೂ ಅವನಿಗೆ ತೋರಿತು. ವ|| ಹಾಗೆ ಅಲ್ಲಿಗೆ ಹೋಗಲಾಗಿ ೨೬. ತಣ್ಣಗಿರುವ ಆ ಹಿಮಗೃಹದಲ್ಲಿ ಕೋಮಲೆಯಾದ ಕಾದಂಬರಿಯು ತನ್ನ ಪರಿವಾರದೊಂದಿಗೆ ಇದ್ದಳು. ಆಗ ಅವಳು ಹಿಮಾಚಲಪ್ರದೇಶದಲ್ಲಿ ಇತರ ನದಿಗಳಿಂದ ಸುತ್ತುವರಿಯಲ್ಪಟ್ಟಿರುವ ಗಂಗಾನದಿಯಂತೆ ಶೋಭಿಸುತ್ತಿದ್ದಳು. ೨೭. ತಾವರೆದಂಟುಗಳಿಂದ ಕಟ್ಟಿದ ಒಂದು ಹೊಸ ಚಪ್ಪರದ ಮಧ್ಯದಲ್ಲಿ ಹಾಸಿದ್ದ ಹೂವಿನ ದಳಗಳಿಂದ ಮಾಡಿದ ಹಾಸಿಗೆಯಲ್ಲಿ ಕಾದಂಬರೀದೇವಿಯು ಮಲಗಿದ್ದಳು. ಆ ಚಪ್ಪರದ ಸುತ್ತಲೂ ಪರಿವೇಷದಂತೆ ಯಾವಾಗಲೂ ಕರ್ಪೂರ ರಸದ ಕಾಲುವೆಯು ಸುತ್ತಲೂ ಹರಿಯುತ್ತಿತ್ತು. ವ|| ಆಗ ೨೮. ಅವಳು ತನ್ನ ಕಿವಿಯಲ್ಲಿ ಹೊಸದಾದ ಕೇದಗೆಹೂವಿನ ದಳವೊಂದನ್ನು ಮುಡಿದುಕೊಂಡಿದ್ದಳು. ಅದು ಅತ್ಯಕವಾಗಿ ಹರಿಯುತ್ತಿರುವ ಕಣ್ಣೀರಿನ ಧಾರೆಯ ಪರಂಪರೆಯು ಹರಿದುಹೋಗಲು ಇಟ್ಟಿರುವ ನಲ್ಲಿಯಂತೆ ಕಾಣುತ್ತಿತ್ತು. ೨೯. ದೇಹದಲ್ಲಿ ವ್ಯಾಪಿಸಿರುವ ತಾಪದ ಭಯದಿಂದ ಅವಳ ಶರೀರಕಾಂತಿಯು ಓಡಿಹೋಗುತ್ತಿದೆಯೋ ಎಂಬಂತೆ ನಿಟ್ಟುಸಿರಿನಿಂದ ಅವಳ ಮೇಲುಹೊದಿಕೆಯು ದೂರ ಸರಿಯುತ್ತಿತ್ತು. ಇದರಿಂದ ಗಂಧಲೇಪನದಿಂದ ಕೂಡಿದ ಅವಳ ದಪ್ಪವಾದ ಸ್ತನಗಳು ಶೋಭಿಸುತ್ತಿದ್ದುವು. ೩೦. ಎರಡು ಕಡೆಗಳಲ್ಲೂ ಬೀಸುತ್ತಿರುವ ಚಾಮರಗಳು ಅವಳ ಸ್ತನಗಳಲ್ಲಿ ಪ್ರತಿಬಿಂಬಿಸಿದ್ದುವು. ಇದರಿಂದ ಚಂದ್ರಾಪೀಡನು ಬರಲಾಗಿ ಅವನ ಹತ್ತಿರಕ್ಕೆ ಹೋಗಬೇಕೆಂಬ ಉತ್ಸಾಹದಿಂದ ಅಲ್ಲಿಗೆ ಹಾರಿಹೋಗಲು ಆ ಎರಡು ಸ್ತನಗಳೂ ರೆಕ್ಕೆಯನ್ನು ಕಟ್ಟಿಕೊಂಡಿರುವಂತೆ ಶೋಭಿಸುತ್ತಿದ್ದುವು.

ಯುವತಿ ಹಿಮೋಪಲಪ್ರತಿಮೆಯಂ ನಳಿತೋಳ್ಗಳಿನಾಗಳಾಗಳ
ಪ್ಪುವ ಶಶಿಸಾಲಭಂಜಿಕೆಯನೊಯ್ದು ಕದಂಪಿನೊಳಾಗಳಾಗಳೊ
ತ್ತುವ ಶಶಿಕಾಂತಪುತ್ರಿಕೆಯ ಮೇಲೆ ನಿಜಾಂಘ್ರಿಯನಾಗಳಾಗಳಿ
ಕ್ಕುವ ಪಿರಿದಪ್ಪ ಬೇವಸದೊಳಂ ತಡೆದಿರ್ದಳದೊಂದು ಬೇಗಮಂ           ೩೧

ಸ್ಮರಪರವಶಂಗಳಾದಂ
ತಿರೆ ಮುಕ್ತಾತ್ಮಂಗಳೆನಿಸಿಯುಂ ಹಾರಂಗಳ್
ಕರನಿಕರದಿಂದ ಮುಂ ತಾಂ
ಸರಸಿಜಲೋಚನೆಯನಾದವಪ್ಪಿದುವಾಗಳ್   ೩೨

ಸುಂದರಿ ನವೇಂದುಮಣಿಮುಕು
ರಂದಳೆದೊತ್ತಿರ್ದಳುರದೊಳಿನ್ನುದಯಂ ಗೆ
ಯ್ವಂದೆನ್ನ ಕೊಂದೆ ನೀನೆಂ
ದಿಂದುವಿನೆರ್ದೆಯಂಟಿ ಸೂರುಳಿಡಿಸುವ ತೆಱದಿಂ        ೩೩

ವ|| ಅಂತು ಕಾದಂಬರಿದೇವಿಯಂ ನೋಡಿ ದೂರದೊಳೆ ಕಂಡನನ್ನೆಗಂ ಮೂರ್ತಿ ನಾರಾಯಣಂ ಬಂದೆನೆಂದು ಪೇೞಲುತ್ತರಳತಾರಕೆಯಾಗಿ

ಬರವನದಾರ್ ಪೇೞ್ದಟ್ಟಿದ
ರರಸಂ ಬಂದಪನೆ ಕಂಡಿರೇಂ ನೀವೆನಿತಂ
ತರಮಾವೆಡೆಯೆನುತೆನುತಂ
ಪರಿಜನಮಂ ಕಣ್ಣ ಸನ್ನೆಯಿಂ ಬೆಸಗೊಂಡಳ್ ೩೪

ವ|| ಅಂತು ಬೆಸಗೊಳ್ಳುತ್ತಂ ಗೆಂಟಿನೊಳೆ ಬರುತಿರ್ದ ಯುವರಾಜನಂ ಭೋಂಕನೆ ಕಂಡು ನವಗ್ರಾಹಕರಿಣಿಯಂದದಿನೂರುಸ್ತಂಭವಿಧೃತೆಯಾಗಿ

ನವರೋಮರಾಜಿ ತಾಮ್ರ ತಾಮ್ಯ್ವ
ತ್ರಿ ತ್ತ್ರ್ವಿ ವಳಿಯೊಳ್ ತೆರೆಗೊಳಲ್ಕೆ ಮುರಿದೇೞ್ವೆಡೆಯೊಳ್
ಯುವತಿ ನಿಜಾಂಗಮನಂಗೋ
ದ್ಭವನಾಗಳ್ ಪಿಂಡಿ ಪಿೞದನೆಂಬವೊಲಿರ್ದಳ್            ೩೫

ಅವುಗಳ ಮೇಲೆ ಕೈಯಿಟ್ಟುಕೊಂಡಿದ್ದ ಕಾದಂಬರಿಯು ಅವು ಹಾರಿಹೋಗದಿರುವಂತೆ ಒತ್ತಿ ಹಿಡಿದುಕೊಂಡಿರುವಂತೆ ಕಾಣುತ್ತಿದ್ದಳು. ೩೧. ಆ ತರುಣಿಯು ಪದೇಪದೇ ನೀರ್ಗಲ್ಲಿನ ಪ್ರತಿಮೆಯನ್ನು ತನ್ನ ಕೋಮಲವಾದ ತೋಳುಗಳಿಂದ ತಬ್ಬಿಕೊಳ್ಳುತ್ತಿದ್ದಳು; ಕರ್ಪೂರದ ಬೊಂಬೆಯನ್ನು ಪದೇಪದೇ ತನ್ನ ಕೆನ್ನೆಗೆ ಒತ್ತಿ ಹಿಡಿದುಕೊಳ್ಳುತ್ತಿದ್ದಳು. ಮತ್ತು ಪದೇಪದೇ ಚಂದ್ರಕಾಂತಪುತ್ಥಳಿಯ ಮೇಲೆ ತನ್ನ ಕಾಲನ್ನು ಇಡುತ್ತಿದ್ದಳು. ಹೀಗೆ ಹೆಚ್ಚಾದ ವಿರಹವ್ಯಥೆಯ ತೀವ್ರತೆಯನ್ನು ತಡೆಯುತ್ತಿದ್ದಳು. ೩೨. ಹಾರಗಳು “ಮುಕ್ತಾತ್ಮ”ಗಳು (೧. ಮುತ್ತಿನಿಂದ ನಿರ್ಮಿತವಾದುವು.

೨. ಸಂಸಾರಬಂಧನದಿಂದ ಬಿಡುಗಡೆ ಹೊಂದಿದ ಜೀವನ್ಮುಕ್ತರು). ಹೀಗಿದ್ದರೂ ಕಮಲನೇತ್ರೆಯಾದ ಕಾದಂಬರಿಯ ಸೌಂದರ್ಯವನ್ನು ನೋಡಿ ಕಾಮಪರವಶತೆಯಿಂದ ಅವಳನ್ನು ಗಾಢವಾಗಿ ತಬ್ಬಿಕೊಂಡಿದ್ದುವು ! ೩೩. ಆ ಸುಂದರಿಯು ಹೊಸದಾದ ಚಂದ್ರಕಾಂತಶಿಲೆಯಿಂದ ಮಾಡಿದ ಕನ್ನಡಿಯನ್ನು ಕಾಮಸಂತಾಪಶಾಂತಿಗಾಗಿ ತನ್ನ ಎದೆಗೆ ಅವುಚಿಕೊಂಡಿದ್ದಳು. ಅದನ್ನು ನೋಡಿದರೆ ನೀನು ಉದಯಿಸಿದರೆ, ನಾನು ಸತ್ತಂತೆಯೇ. ಆದ್ದರಿಂದ ಉದಯಿಸಬೇಡ ಎಂದು ಚಂದ್ರನನ್ನು ಎದೆ ಮುಟ್ಟಿಸಿ ಆಣೆಯಿಡಿಸುತ್ತಿರುವಳೋ ಎಂಬಂತೆ ಕಾಣುತ್ತಿದ್ದಳು. ವ|| ಹಾಗೆ ಕಾದಂಬರೀದೇವಿಯನ್ನು ದೂರದಲ್ಲೇ ನೋಡುತ್ತಿರುವಷ್ಟರಲ್ಲಿ ಶ್ರೀಮನ್ನಾರಾಯಣ ಸ್ವರೂಪನಾದ ಚಂದ್ರಾಪೀಡನು ಬಂದನೆಂದು ಅವಳಿಗೆ ತಿಳಿಸಿದರು. ಕೂಡಲೆ ಕಣ್ಣುಗುಡ್ಡೆಗಳು ಚಲಿಸುತ್ತಿರಲು, ೩೪. “ಅವನು ಬರುವಂತೆ ಯಾರು ಹೇಳಿಕಳುಹಿಸಿದ್ದಾರೆ? ಅರಸನು ಬರುತ್ತಿರುವನೆ? ನೀವು ನೋಡಿದಿರಾ? ಎಷ್ಟು ದೂರದಲ್ಲಿದ್ದಾನೆ? ಯಾವ ಸ್ಥಳದಲ್ಲಿದ್ದಾನೆ?” ಎಂಬುದಾಗಿ ಕಣ್ಣುಸನ್ನೆಯಿಂದ ಕೇಳಿದಳು. ವ|| ಹಾಗೆ ಕೇಳುತ್ತಾ, ಯುವರಾಜನು ಬರುತ್ತಿರುವುದನ್ನು ದೂರದಲ್ಲೆ ತಟ್ಟನೆ ನೋಡಿ, ಹೊಸದಾಗಿ ಹಿಡಿದಿರುವ ಆನೆಮರಿಯಂತೆ ಊರುಸ್ತಂಭವಿಧೃತೆಯಾಗಿ

(೧. ನಿಶ್ಚವಾದ ತೊಡೆಗಳಿಂದ ಮುಂದೆ ಹೆಜ್ಜೆಯಿಕ್ಕದವಳಾಗಿ, ತೊಡೆಗಳನ್ನು ಕಟ್ಟಿಹಾಕುವ ಕಂಭದಲ್ಲಿಕಟ್ಟಲ್ಪಟ್ಟದ್ದಾಗಿ (ಟಿ.ಚಂದ್ರಾಪೀಡನನ್ನು ಕಂಡಕೂಡಲೇ ಕಾದಂಬರಿಗೆ ಅವನನ್ನು ಎದುರುಗೊಳ್ಳುವುದಕ್ಕೆ ಹೊರಟರೂ ನಡೆಯಲಾಗಲಿಲ್ಲ ಎಂದು ಭಾವ). ೩೫. ಆಗ ಕಾದಂಬರಿಯು ಶರೀರವನ್ನು ಸ್ವಲ್ಪ ಮುರಿದು ಏಳುವಾಗ, ಚಲಿಸುವುದರಿಂದ ಮುದುರಿಕೊಂಡ ತ್ರಿವಳಿಗಳ ಮೇಲೆ ಹೊಸ ಕೂದಲಿನ ಸಾಲು ಕಂಪಿಸುತ್ತಿತ್ತು.

ವ|| ತದನಂತರಂ

ನಡುಗುತ್ತಂ ಮೇಲುದೆಂದೊರ್ಮೊದಲೆ ತೆಗೆದು ಹಾರಾಂಶುವಂ ಸಾರ್ಚುಂತಂ ಸೋ
ರ್ಮುಡಿಯಂ ಸಸ್ವೇದಹಸ್ತಾಬ್ಜದಿನೆೞೆವುತಾತ್ಮಪ್ರತಿಚ್ಛಾಯೆಯಂ ಕೆ
ಯ್ಗುಡು ನೀನೆಂಬಂದದಿಂ ನಿರ್ಮಲತರ ಮಣಿಬದ್ಧಾವನೀಭಾಗಮಂ ತ
ನ್ನೆಡೆಗೆಯ್ಯಿಂ ಮೆಲ್ಲನೊತ್ತುತ್ತೆಸವಲರ್ವಸೆಯಿಂ ಕಾಂತೆಯೆಂತಾನುಮೆೞ್ದಳ್           ೩೬

ವ|| ಆಗಳ್ ಮನುಜಮಕರಘ್ವಜನೆಯ್ದೆವಂದು ಮುನ್ನಿನಂದದೊಳೆ ಕಾದಂಬರಿಗೆ ಮಹಾಶ್ವೇತಾಪ್ರಣಾಮಪುರಸ್ಸರಮುಪದರ್ಶಿತವಿನಯನುಮಾಗಿ ಕೆಯ್ಗಳಂ ಮುಗಿವುದುಮಾಕೆಯುಂ ಕೆಯ್ಗಳಂ ಮುಗಿದು ಲಲಾಟಿಕಾಚಂದನಭರದಿನೆಱಗಿದಂತೆ ಕಿಂಚಿದವನತಮುಖಿಯಾಗಿ

ನಳಿನದಳಾಯತಾಕ್ಷಿ ಯುವರಾಜನಿಜಪ್ರತಿಬಿಂಬಮಿಲ್ಲಿ ಬಂ
ದೆಳಸಿದುದಪ್ಪೊಡಂ ಸಫಲಮೆನ್ನಯ ಜೀವನಮೆಂಬ ಮಾೞ್ಕೆಯಿಂ
ಪೊಳೆವವತಂಸಪುಷ್ಪರಜದಿಂ ಪೊರೆದಿರ್ದ ಕಪೋಲಪಟ್ಟಮಂ
ತೊಳೆದಳನಾರತಂ ಸುರಿವ ಚಂದನಶೀತಲಹರ್ಷವಾರಿಯಿಂ    ೩೭

ವ|| ಆಗಳಾ ಗಂಧರ್ವರಾಜನಂದನೆ ಮುನ್ನಿರ್ದ ಕುಸುಮಶಯನದೊಳ್ ಕುಳ್ಳಿರೆ ವಿದಗ್ಧ ವಿದ್ಯಾಧರಂ ದೌವಾರಿಕೆಯರ್ ಕೆಲದೊಳಿಕ್ಕಿದ ಮಣಿಮಯಾಸನಮಂ ಕಾಲೊಳ್ ನೂಂಕಿ ನೆಲದೊಳ್ ಕುಳ್ಳಿರ್ಪುದುಂ ಕಾದಂಬರೀದೇವಿಗೆ ಕೇಯೂರಕಂ ಪೊಡಮಟ್ಟು

ವಸುಧಾಶನ ಪರಮ
ಪ್ರಸಾದಭಾಗಿನಿಯನಡಪವಳಿತಿಯನವಧಾ
ರಿಸು ಪತ್ರಲೇಖೆಯೆಂಬುದು
ಪೆಸರೆಂದಾ ಸತಿಯನರಸಿಯಂ ಕಾಣಿಸಿದಂ   ೩೮

ವ|| ಅಂತಾ ಪತ್ರಲೇಖೆಯಂ ನೋಡಿ

ಎನಿತೊಂದು ಪಕ್ಷಪಾತಮೊ
ವನಿತೆಯರಂ ಮಾಡುವೆಡೆಯೊಳಬ್ಜಭವಂಗೆಂ
ದೆನಸುಂ ಕಾಂತೆಯ ರೂಪನೆ
ಮನದೊಳ್ ಗಂಧರ್ವಕನ್ನೆ ಭಾವಿಸುತಿರ್ದಳ್             ೩೯

ಅದರಿಂದ ಅವಳ ದೇಹವನ್ನು ಮನ್ಮಥನು ಹಿಂಡಿ ಹಿಸುಕುತ್ತಿರುವನೋ ಎಂಬಂತೆ ಕಾಣುತ್ತಿತ್ತು. ವ|| ಅನಂತರ ೩೬. ಏಳುವ ಸಡಗರದಲ್ಲಿ ಉತ್ತರೀಯವು ಅಲುಗಾಡುತ್ತಿದ್ದುದರಿಂದ ಅದನ್ನು ಬಿಟ್ಟು ಹಾರದ ಕಾಂತಿಯನ್ನೇ ಎದೆಗೆ ಆವರಣವನ್ನಾಗಿ ಮಾಡಿಕೊಳ್ಳುತ್ತಾ, ಸಡಿಲವಾದ ತುರುಬನ್ನು ಬೆವರಿನಿಂದ ಕೂಡಿದ ಬಲಗೈಯಿಂದ ಸರಿಯಾಗಿ ಕಟ್ಟಿಕೊಳ್ಳುತ್ತಾ, ತನ್ನ ಪ್ರತಿಬಿಂಬವನ್ನೇ “ನೀನು ನನಗೆ ಕೈಗೊಟ್ಟು ಎತ್ತು” ಎಂದು ಪ್ರಾರ್ಥಿಸುವಂತೆ ಬಹಳ ಸ್ವಚ್ಛವಾದ ರತ್ನನಿರ್ಮಿತವಾದ ನೆಲವನ್ನು ತನ್ನ ಎಡಗೈಯಿಂದ ಮೆಲ್ಲನೆ ಒತ್ತುತ್ತಾ ಹೂವಿನ ಹಾಸಿಗೆಯಿಂದ ಕಾದಂಬರಿಯು ಬಹಳ ಪ್ರಯಾಸದಿಂದ ಮೇಲಕ್ಕೆದ್ದಳು. ವ|| ಆಗ ನರರೂಪವನ್ನು ತಾಳಿದ ಮನ್ಮಥನಂತಿರುವ ಚಂದ್ರಾಪೀಡನು ಹತ್ತಿರಕ್ಕೆ ಬಂದು, ಹಿಂದಿನಂತೆಯೇ ವಿನಯವನ್ನು ತೋರ್ಪಡಿಸುತ್ತಾ, ಮೊದಲು ಮಹಾಶ್ವೇತೆಗೆ ನಮಸ್ಕಾರ ಮಾಡಿ ಬಳಿಕ ಕಾದಂಬರಿಗೆ ಕೈಮುಗಿದನು. ಆಗ ಅವಳೂ ಕೈಮುಗಿದು, ಹಣೆಗೆ ಹಾಕಿಕೊಂಡಿರುವ ಚಂದನತಿಲಕದ ಭಾರದಿಂದ ಬಗ್ಗಿರುವಳೋ ಎಂಬಂತೆ ಸ್ವಲ್ಪ ತಗ್ಗಿದ ಮುಖವುಳ್ಳವಳಾಗಿ, ೩೭. ತಾವರೆಯಂತೆ ವಿಶಾಲವಾದ ಕಣ್ಣುಳ್ಳ ಕಾದಂಬರಿಯು ಯುವರಾಜನ ಪ್ರತಿಬಿಂಬವಾದರೂ ಇಲ್ಲಿ ಮೂಡಿದರೆ ನನ್ನ ಜೀವಮಾನವೇ ಸಾರ್ಥಕವಾಯಿತೆಂಬ ಒಂದು ಆಭಿಪ್ರಾಯದಿಂದಲೋ ಎಂಬಂತೆ ಕಿವಿಯಲ್ಲಿ ಮುಡಿದುಕೊಂಡಿದ್ದ ಹೂವಿನ ಪುಡಿಯಿಂದ ಕೂಡಿಕೊಂಡಿದ್ದ ಹೊಳೆಯುತ್ತಿರುವ ತನ್ನ ಕೆನ್ನೆಯನ್ನು ನಿರಂತರವಾಗಿ ಸುರಿಯುತ್ತಿರುವ ಗಂಧೋದಕದಂತೆ ತಂಪಾದ ಆನಂದಬಾಷ್ಪದಿಂದ ತೊಳೆಯುತ್ತಿದ್ದಳು. ವ|| ಆಗ ಗಂಧರ್ವ ರಾಜಕುಮಾರಿಯಾದ ಕಾದಂಬರಿಯು ತಾನು ಮೊದಲು ಮಲಗಿದ್ದ ಹಾಸಿಗೆಯ ಮೇಲೆ ಎದ್ದು ಕುಳಿತುಕೊಂಡಳು. ರಸಿಕಾಗ್ರೇಸರನಾದ ಚಂದ್ರಾಪೀಡನು ದ್ವಾರಪಾಲಕಳು ಹತ್ತಿರದಲ್ಲಿ ಹಾಕಿದ ರತ್ನಪೀಠವನ್ನು ಕಾಲಿನಿಂದ ನೂಕಿ ನೆಲದ ಮೇಲೆ ಕುಳಿತುಕೊಂಡನು. ಬಳಿಕ ಕೇಯೂರಕನು ಕಾದಂಬರೀದೇವಿಗೆ ನಮಸ್ಕರಿಸಿ, ೩೮. “ಇವಳು ಚಂದ್ರಾಪೀಡ ಮಹಾರಾಜನ ಪರಮಾನುಗ್ರಹಕ್ಕೆ ಪಾತ್ರಳಾದ ಸಂಚಿಯೂಳಿಗದವಳು. ಇವಳ ಹೆಸರು ಪತ್ರಲೇಖೆಯೆಂದು ತಿಳಿಯುವುದು” ಎಂದು ಅವಳನ್ನು ಕಾದಂಬರೀದೇವಿಗೆ ತೋರಿಸಿದನು. ವ|| ಹಾಗೆ ಪತ್ರಲೇಖೆಯನ್ನು ನೋಡಿ, ೩೯. “ಬ್ರಹ್ಮನು ಹೆಂಗಸರನ್ನು ಸೃಷ್ಟಿಮಾಡುವಾಗ ಅದೆಷ್ಟು ಪಕ್ಷಪಾತವನ್ನು ತೋರಿಸಿದ್ದಾನೆ” ಎಂದು ಕಾದಂಬರಿಯು ಆ ಪತ್ರಲೇಖೆಯ ಸೌಂದರ್ಯವನ್ನೇ ತನ್ನ ಮನಸ್ಸಿನಲಿ