ಉದಕಾಂತಪಾತಿವೊಲ್ ಸ್ನೇಹದಲವಮೆನಸುಂ ಪರ್ವಿ ಮದ್ಯೌವನೋದ
ನ್ಮದದೊಳ್ ತೋಱುತ್ತಮಿರ್ದಪ್ಪುದು ಕನಸಿನವೋಲೆನ್ನ ತತ್ಕಾಂಕ್ಷೆ ಕೈಸಾ
ರದುದಂ ತೋಱುತ್ತಮಿರ್ದತ್ತೆನಗೆ ಪಿರಿದುಮೀ ಚಿತ್ತದೊಂದಾಸೆ ದಲ್ ಮಾ
ಯದ ಕುಂಚಂಬೊಲಸಂಭಾವ್ಯಮನೆ ದಿಟಮೆನಲ್ ತೋಱುತಿರ್ದಪ್ಪುದೀಗಳ್        ೧೦೬

ಪಸರಿಸಿ ಮಿಥ್ಯಾಸಂಕ
ಲ್ಪಸಹಸ್ರದಿನಾಸೆವಡಿಸುತಿರ್ಪುದು ಕಿಱುವಾ ನಿಸಿಕರ್ಕಳಲ್ಲಿ ಸಾಜದೊ
ಳೆ ಸುಲಭಮೆನಿಸಿರ್ದ ಮದನಲಾಘವಮೀಗಳ್           ೧೦೭

ವ|| ಎಂದು ಭಾವಿಸುತ್ತಮಿರ್ದು

ಎನಗಿನಿತು ಚಿಂತೆಯೇಕೆ ಗ
ಡೆನಗದೆ ದಿಟಮಪ್ಪುದಾದೊಡಪ್ರಾರ್ಥಿತಮಾ
ವನಿತೆಯ ಮನಮಂ ಪ್ರಕಟಿಸಿ
ಮನೋಭವಂ ತಾನೆ ಕಳೆದಪಂ ಸಂದೆಯಮಂ          ೧೦೮

ವ|| ಎಂದವಧಾರಿಸಿ ಶಯನತಳದೊಳ್ ಕುಳ್ಳಿರ್ದು ಕನ್ಯಕೆಯರೊಡನೆ ನೆತ್ತದೊಳಂ ವೀಣಾವಾದ್ಯದೊಳಂ ಸ್ವರಸಂದೇಹವಿವಾದದೊಳಂ ಸುಭಾಷಿತಗೋಷ್ಠಿಯೊಳಂ ಪಲವುಂ ಸುಕುಮಾರಂಗಳಪ್ಪ ವಿಲಾಸಂಗಳಿಂ ಕ್ರೀಡಿಸುತ್ತಮಿರ್ದು ಪೊಱಮಟ್ಟುಪವನಾಲೋಕನ ಕುತೂಹಲಿತಮಾನಸನಾಗಿ ಕ್ರೀಡಾಪರ್ವತಮನೇಱದ ಯುವರಾಜನಂ ನೋಡಿ

ಪ್ರೀತಿ ಹೆಚ್ಚಾಗಲು, ಸುಂದರವಾದ ಹಾಗೂ ಚಂಚಲವಾದ ಕಟಾಕ್ಷದಿಂದ ಬಾಗಿ ಬಾಗಿ ನನ್ನನ್ನು ನೋಡುತ್ತಿದ್ದಳು. ನಾನು ಸ್ವಲ್ಪ ನೋಡಿದರೂ ಆ ಬಳ್ಳಿಯಂತೆ ತೆಳುವಾದ ದೇಹವುಳ್ಳ ಆ ಬಾಲೆಯು ನಾಚಿಕೆಪಟ್ಟು ತನ್ನ ಶರೀರವನ್ನು ಮಂದಹಾಸವೆಂಬ ಚಿಗುರಿನಂತೆ ನವುರಾದ ಬಿಳಿಯ ಬಟ್ಟೆಯಿಂದ ಮುಚ್ಚುವಳು, ವ|| ಮತ್ತು ಆ ಸುಂದರಿಯು ನಾಚಿಕೆಯಿಂದ ಬಗ್ಗಿದ ಮುಖವುಳ್ಳವಳಾಗಿ ನನ್ನನ್ನು ನೋಡಲಾರದೆ ನನ್ನ ಪ್ರತಿಬಿಂಬವಾದರೂ ಮೂಡಲೆಂಬ ಉದ್ದೇಶದಿಂದಲೋ ಎಂಬಂತೆ ಕೆನ್ನೆಯೆಂಬ ರನ್ನಗನ್ನಡಿಯನ್ನು ನನ್ನ ಕಡೆಗೆ ತೋರಿಸಿದಳು. ಮತ್ತು ನನಗೆ ವೀಳೆಯವನ್ನು ಕೊಡಲು ಪ್ರಯತ್ನಿಸುತ್ತಿರುವಾಗ ನಡುಗುತ್ತಿರುವ ಕೆಂಪಾದ ಅಂಗೈಯನ್ನು ಕೆಂದಾವರೆಯೆಂದು ತಿಳಿದು ಮುತ್ತುವ ಮರಿದುಂಬಿಗಳ ಗುಂಪಿನಿಂದ ಕೂಡಿಕೊಂಡವಳಾಗಿ, ಹೊಂಗೆಯ ಚಿಗುರಿನ ಗೊಂಚಲನ್ನು ಹಿಡಿದು ತನ್ನ ತೊಟ್ಟಿಕ್ಕುತ್ತಿರುವ ಮುಖದ ಬೆವರನ್ನು ಬೀಸಿಕೊಳ್ಳುತ್ತಿರುವಂತೆಯೂ ಇದ್ದಳು. ಇವೆಲ್ಲ ಏನು ಎಂದು ತನ್ನಲ್ಲೆ ಆಲೋಚಿಸುತ್ತಾ ಹೀಗೆ ಹೇಳಿದನು. ೧೦೬. ನೀರಿನ ಮಧ್ಯದಲ್ಲಿ ಬಿದ್ದ ಸ್ನೇಹಲೇಶವು (ಸ್ವಲ್ಪ ಎಣ್ಣೆ) ಹರಡಿಕೊಂಡು ಹೋಗುವಂತೆ ಈ ಹರಯದ ಹೆಚ್ಚಾದ ಮದದಲ್ಲಿ ಕಾಮಿನಿಯರ ಅಲ್ಪಸ್ನೇಹವು ಹೆಚ್ಚುಹೆಚ್ಚಾಗಿ ಹರಡಿದಂತೆ ಕಾಣುತ್ತದೆ. ಅವಳನ್ನು ಪಡೆಯಬೇಕೆಂಬ ಮನೋರಥವು ಕನಸಿನಂತೆ ಅನುಭವಿಸದೇ ಇರುವುದನ್ನೂ ತೋರಿಸುತ್ತದೆ. ಹಾಗೆಯೆ ಮನಸ್ಸಿನ ದೊಡ್ಡ ಆಸೆಯು ಮಾಯದ ಕುಂಚದಂತೆ ನಡೆಯಲಸಾಧ್ಯವಾದುದನ್ನೂ ನಿಜವೋ ಎಂಬಂತೆ ಈಗ ತೋರಿಸುತ್ತದೆ. ಇದು ಖಂಡಿತ (ಟಿ). ಅವಳ ಮೇಲಿನ ಆಸೆಯಿಂದ ನಾನು ಇಲ್ಲದುದನ್ನೆಲ್ಲಾ ಊಹಿಸಿಕೊಂಡು ವೃಥಾ ಆಯಾಸಗೊಳ್ಳುತ್ತಿದ್ದೇನೆ ಎಂದು ಅಭಿಪ್ರಾಯ. ೧೦೭. ಕೀಳುಸ್ವಭಾವದ ಮನುಷ್ಯರಲ್ಲಿ ಸಹಜವಾದ ಮತ್ತು ಸರ್ವಸಾಮಾನ್ಯವಾದ ಈ ತುಚ್ಛ ಕಾಮನಿಕಾರವು ಹರಡಿಕೊಂಡು ಕೈಗೂಡದ ಸಾವಿರಾರು ಮನೋರಥಗಳನ್ನು ಹುಟ್ಟಿಸಿ ಸುಮ್ಮನೆ ಆಸೆಪಡಿಸುತ್ತದೆ. ವ|| ಎಂದು ಭಾವಿಸುತ್ತಿದ್ದು, ೧೦೮. “ನನಗೆ ಇಷ್ಟು ಚಿಂತೆಯೇಕೆ? ಅದೆಲ್ಲ ನಿಜವಾದರೆ ಮನ್ಮಥನು ನಾನು ಕೇಳಿಕೊಳ್ಳದಿದ್ದರೂ ತಾನಾಗಿಯೇ ಅವಳ ಇಂಗಿತವನ್ನು ಬಹಿರಂಗಪಡಿಸಿ ನನ್ನ ಸಂಶಯವನ್ನು ನಿವಾರಿಸುತ್ತಾನೆ.” ವ|| ಎಂದು ತೀರ್ಮಾನಿಸಿ ಹಾಸಿಗೆಯ ಮೇಲೆ ಕುಳಿತುಕೊಂಡು ಆ ಹುಡುಗಿಯರೊಡನೆ ಪಗಡೆಯಿಂದಲೂ, ವೀಣಾವಾದ್ಯದಿಂದಲೂ, ರಾಗಗಳ ವಿಷಯದಲ್ಲಿ ಉಂಟಾದ ಸಂದೇಹಗಳ ಚರ್ಚೆಯಿಂದಲೂ, ಚಾಟುವಚನಗಳ ಕೂಟದಿಂದಲೂ, ಹಲವು ಬಗೆಯ ಹಿತಕರವಾದ ತಮಾಷೆಗಳಿಂದಲೂ ವಿಹರಿಸುತ್ತಿದ್ದು, ಅಲ್ಲಿಂದ ಹೊರಟು ಉದ್ಯಾನವನವನ್ನು ನೋಡಬೇಕೆಂಬ ಕುತೂಹಲವುಳ್ಳವನಾಗಿ ಕ್ರೀಡಾಪರ್ವತವನ್ನು ಏರಿದನು. ಹಾಗೆ ಏರಿದ

ನೋಡಲೊಡಂ ಮನಂ ಬೆದ ಕಲ್ಲೆರ್ದೆಯಂ ಕಡುಪಿಂದೆ ಕಾಮನೇ
ಸಾಡೆ ಲತಾಂಗಿ ನೊಂದಿನಿಸುಮಲ್ಲಿರದಕ್ಕನ ಬರ್ಪ ಬಟ್ಟೆಯಂ
ನೋಡುವಮೇೞಮೆಂದು ಪರಿಚಾರಿಕೆಯರ್ ಬೆರಸಾಗಳೇಱದಳ್
ಮಾಡಮನದ್ರಿರಾಜಸುತೆ ತಾರನಗೇಂದ್ರಮನೇಱುವಂದದಿಂ     ೧೦೯

ವ|| ಅಂತು ಸೌಧತಳಮನೇಱ ಪರಿಮಿತ ಪರಿಜನೆಯಾಗಿರ್ದಲ್ಲಿ

ತೊಳ ತೊಳ ತೊಳಗುವ ಬೆಳ್ದಿಂ
ಗಳ ಪಕ್ಕದೆ ಪೊಳೆವ ರಶ್ಮಿಜಾಲಮಿದೆನೆ ಕೋ
ಮಳೆಯ ಸಿತಚ್ಛತ್ರದ ಕೆಲ
ದೊಳದೇನೊಪ್ಪಿದುವೊ ಧವಳಚಮರರುಹಂಗಳ್       ೧೧೦

ನೆರೆದು ಸಹಜಾಮೋದಕ್ಕೆೞ್ತಂದು ತುಂಬಿಯ ಬಂಬಲಾ
ವರಿಸಲೆನಸುಂ ತನ್ನಂ ನೀಲಾಂಬರಚ್ಛದೆಯಾಗಿ ಸುಂ
ದರಿ ಪಗಲೊಳುಂ ಚಂದ್ರಾಪೀಡಾಭಿಸಾರಣವೇಷಮಂ
ಪಿರಿದುಮೊಲವಿಂದಭ್ಯಾಸಂಗೆಯ್ವುತಿರ್ಪವೊಲೊಪ್ಪಿದಳ್          ೧೧೧

ವ|| ಅದಲ್ಲದೆಯುಂ

ಚಮರರುಹಾಗ್ರಮಂ ಪಿಡಿದು ಬಿರ್ಚುತಮಿರ್ಪ ಸಿತಾತಪತ್ರದಂ
ಡಮನವಲಂಬಿಸಿರ್ಪಡಪದಾಕೆಯ ಮುಯ್ಪಿನ ಮೇಲೆ ಹಸ್ತಯು
ಗ್ಮಮನೊಸೆದಿಕ್ಕುತಿರ್ಪ ಮದಲೇಖೆಯನೞ್ಕಱನಪ್ಪುತಿರ್ಪ ಗೆ
ಯ್ತಮವೆನಿತಾನುಮುಣ್ಮಿದುವವಳ್ಗಿದಿರೊಳ್ ನೃಪರೂಪಚಂದ್ರನಾ           ೧೧೨

ವ|| ಅದಲ್ಲದೆಯುಂ

ಕೆಳದಿಯನಾಗಳ್ ಕಣ
ತ್ಪಳದಿಂದಂ ಮೋದೆ ತಪ್ಪಿಸಲ್ ಪರಿವಳ ಬೆ
ನ್ನೊಳೆ ಪರಿವಳಿರದೆ ನಗುತಂ
ನಳಿನಾನನೆ ಲೀಲೆಯಿಂದಮೊಂದೆರಡಡಿಯಂ           ೧೧೩

ವ|| ಅಂತು ಪಲತೆಱದೆ ನೆಗೞುತ್ತಮಿರ್ದಳಲ್ಲಿ

ಯುವರಾಜನನ್ನು ನೋಡಿ, ೧೦೯. ಅವನನ್ನು ನೋಡುವುದಕ್ಕೂ ಮನಸ್ಸು ಹೆದರುತ್ತಿತ್ತು. ಕಲ್ಲೆದೆಯ ಕಾಮನು ಇವಳ ಮೇಲೆ ಉಗ್ರವಾಗಿ ಬಾಣಗಳನ್ನು ಬಿಡುತ್ತಿದ್ದನು. ಆಗ ಬಳ್ಳಿಯಂತೆ ದೇಹವುಳ್ಳ ಆ ಕಾದಂಬರಿಯು ನೊಂದು ಸ್ವಲ್ಪಹೊತ್ತು ಅಲ್ಲಿರದೆ ಮಹಾಶ್ವೇತೆಯು ಬರುವ ದಾರಿಯನ್ನು ನೋಡೋಣ ಏಳಿ ಎಂದು ಪರಿಚಾರಿಕೆಯರಿಂದ ಕೂಡಿ, ಪಾರ್ವತಿಯು ಕೈಲಾಸಪರ್ವತವನ್ನು ಹತ್ತುವಂತೆ ಆ ಮಹಲಿನ ಮಹಡಿಯನ್ನು ಹತ್ತಿದಳು. ವ|| ಹಾಗೆ ಮಹಡಿಯನ್ನು ಏರಿ ಮಿತವಾದ ಪರಿಜನರೊಂದಿಗೆ ಕೂಡಿಕೊಂಡಿರುವಲ್ಲಿ, ೧೧೦. ಅತ್ಯಕವಾಗಿ ಪ್ರಕಾಶಿಸುತ್ತಿರುವ ಶುಭ್ರವಾದ ಚಂದ್ರಮಂಡಲದ ಪಕ್ಕದಲ್ಲಿ ಹೊಳೆಯುತ್ತಿರುವ ಕಾಂತಿಗಳ ಸಮೂಹವೆಂಬಂತೆ ಆ ಸುಕುಮಾರಿಗೆ ಹಿಡಿದಿರುವ ಬಿಳಿಯ ಕೊಡೆಯ ಪಕ್ಕಗಳಲ್ಲಿ ಶುಭ್ರವಾದ ಚಾಮರಗಳು ಎಷ್ಟು ಸೊಗಸಾಗಿದ್ದುವೋ ೧೧೧. ಅವಳ ಶರೀರದ ಸಹಜವಾದ ಸುವಾಸನೆಗೆ ಆಸೆಪಟ್ಟು ಬಂದ ದುಂಬಿಗಳ ಗುಂಪು ಇವಳನ್ನು ಮುತ್ತಿಕೊಂಡುವು. ಆಗ ಅವಳು ನೀಲವಸ್ತ್ರವನ್ನು ಹೊದ್ದುಕೊಂಡಿರುವಂತೆ ಕಾಣುತ್ತಿದ್ದಳು. ಅದರಿಂದ ಆ ಸುಂದರಿಯು ಹಗಲಿನಲ್ಲೂ ಚಂದ್ರಾಪೀಡನನ್ನು ಕುರಿತು ಅಭಿಸರಣಮಾಡುವ ವೇಷವನ್ನು ಬಹಳ ಆಸಕ್ತಿಯಿಂದ ಅಭ್ಯಾಸಮಾಡುತ್ತಿರುವಂತೆ ಶೋಭಿಸುತ್ತಿದ್ದಳು. ವ|| ಅದಲ್ಲದೆ ಆಗ ಚಂದ್ರಾಪೀಡನು ನೋಡುತ್ತಿರುವಂತೆಯೆ ಅವಳು ಬಗೆಬಗೆಯ ಲೀಲೆಗಳನ್ನು ಆಡುತ್ತಿದ್ದಳು. ೧೧೨. ಚಾಮರದ ತುದಿಯನ್ನು ಒಮ್ಮೆ ಹಿಡಿದುಕೊಳ್ಳುತ್ತಿದ್ದಳು. ಒಮ್ಮೆ ಬಿಚ್ಚಿ ಹಿಡಿದಿರುವ ಬಿಳಿಯ ಕೊಡೆಯ ದಂಡವನ್ನು ಹಿಡಿದುಕೊಳ್ಳುತ್ತಿದ್ದಳು. ಒಮ್ಮೆ ಅಡಪವಳಿತಿಯ ಹೆಗಲ ಮೇಲೆ ತನ್ನ ಎರಡು ಕೈಗಳನ್ನೂ ಪ್ರೀತಿಯಿಂದ ಇಡುತ್ತಿದ್ದಳು. ಮತ್ತೊಮ್ಮೆ ಮದಲೇಖೆಯನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಿದ್ದಳು. ವ|| ಅದಲ್ಲದೆ ೧೧೩. ಆಗ ಕಾದಂಬರಿಯು ಗೆಳತಿಯನ್ನು ತನ್ನ ಕಿವಿಯ ನೈದಿಲೆಯಿಂದ ಹೊಡೆಯಲು ಹೊರಟಳು. ಅವಳು ತಪ್ಪಿಸಿಕೊಂಡು ಓಡಿದಳು. ಆಗ ನಗುತ್ತಾ ವಿನೋದದಿಂದ ಅವಳ ಬೆನ್ನು ಹಿಂದೆ ಬಿಡದೆ ಒಂದೆರಡು ಹೆಜ್ಜೆಯನ್ನಿಕ್ಕುವಳು. ವ|| ಹಾಗೆ ಅಲ್ಲಿ ಹಲವು

ವನಿತೆ ಮನೋಹರನಂ ತಾ
ನನುರಾಗದೆ ನೋಡುತಿರ್ಪ ತನ್ನುಮನಾತಂ
ಮನಮೊಸೆದು ನೋಡುತಿರ್ಪುದ
ಱನಾಗಳಣಮಱದಳಿಲ್ಲ ಪೊೞನ ಪವಣಂ      ೧೧೪

ವ|| ಆಗಳೊರ್ವ ಪಡಿಯಱತಿ ಮಹಾಶ್ವೇತೆ ಬಂದಳೆಂದು ಬಿನ್ನವಿಸೆ ಮಾಡದಿಂದಿೞದು ಮಹಾಶ್ವೇತಾನುರೋಧದಿಂದಮೆಂತಾನುಂ ಮಜ್ಜನ ಭೋಜನಾದಿ ದಿವಸವ್ಯಾಪಾರಮಂ ಮಾಡಿದಳಿತ್ತ ಚಂದ್ರಾಪೀಡನುಂ ಕ್ರೀಡಾಪರ್ವತದಿಂದಿೞದು ಸ್ನಾನದೇವತಾರ್ಚನ ಭೋಜನಾದಿ ದಿವಸವ್ಯಾಪಾರಮಂ ತೀರ್ಚಿ ತದನಂತರ ಕೃತಕಾಚಲದ ತಪ್ಪಲಲ್ಲಿ

ಹರಿಣೀರೋಮಂಥಪೇನಪ್ರಸೃತಕಣಲವಾಸಾರದಿಂ ನಾಂದು ಯೋಷಿ
ಚ್ಚರಣಾಲಕ್ತಾಂಶುವಿಂ ಕೆಂಪಡರ್ದು ಲತೆಯ ಬಾಳ್ಚೊಂಪದಿಂದೊಪ್ಪಿ ಪುಷ್ಪೋ
ತ್ಕರರೇಣುಸ್ತೋಮದೊಳ್ ತಳ್ತಚಲಿತ ಯಮುನಾವಾರಿವಿಸ್ತಾರಮಂ ಮಾಂ
ಕರಿಸಲ್ ಸಾಲ್ದಿರ್ದ ಹಾರೀತಕ ಹರಿತಶಿಲಾಪಟ್ಟದೊಳ್ ಭೂಪನಿರ್ದಂ     ೧೧೫

ವ|| ಅಂತಾ ಸಮಯದೊಳ್

ಬಿಸಿಲೆಲ್ಲಂ ಬಿಸನಾಳಜಾಳಕದಿನಾಗಳ್ ಕೂಡೆ ಪೀರ್ತಂದುದಾ
ಗಸಮೆಲ್ಲಂ ಸುಧೆಯಿಂದೆ ಲೇಪಿಸಿದುದುರ್ವೀಚಕ್ರಮೆಲ್ಲಂ ಪಯ
ಪ್ರಸರಾಪೂರದೆ ತೇಂಕಿದತ್ತು ದೆಸೆಯೆಲ್ಲಂ ಚಂದನಾಸಾರದಿಂ
ಮುಸುಕಿತ್ತಂಬಿನಮೊಂದು ಬೆಳ್ವೆಳಗು ಪರ್ವಿತ್ತೆಯ್ದೆ ರೋದೋಂತಮಂ    ೧೧೬

ವ|| ಅಂತು ಪಸರಿಸುವ ಬೆಳಗಿನ ಬಳಗಮಂ ನೋಡಿ

ಪರಿಭಾವಿಸಲಾರ್ಗಂ ತಾ
ನರಿದಾಯ್ತೊರ್ಮೊದಲೆ ಚಂದ್ರನುದಯಿಸಿದನೊ ಪೇೞ್
ಸುರಸಿಂಧುಗಗನಮಂ ಶ್ರೀ
ಕರನಿಕರದೆ ಸಂಪಿಸುತ್ತೆ ಧರೆಗಿೞದಪುದೋ    ೧೧೭

ಬಗೆಯ ಆಟಗಳನ್ನಾಡುತ್ತಿದ್ದಳು. ೧೧೪. ಆಗ ಕಾದಂಬರಿಯು ಆ ಸುಂದರಾಂಗನನ್ನು ಅನುರಾಗದಿಂದ ನೋಡುತ್ತಿದ್ದಳು. ಇವಳನ್ನು ಅವನೂ ಮನಸಾರೆ ಪ್ರೀತಿಯಿಂದ ನೋಡುತ್ತಿದ್ದನು. ಅದರಿಂದ ಆಗ ಅವಳಿಗೆ ಅಲ್ಲಿ ಎಷ್ಟು ಹೊತ್ತು ಕಳೆಯಿತೆಂಬ ಲೆಕ್ಕವೇ ಗೊತ್ತಾಗಲಿಲ್ಲ. ವ|| ಆಗ ಒಬ್ಬಳು ಬಾಗಿಲು ಕಾಯುವವಳು ಬಂದು ಮಹಾಶ್ವೇತೆ ಬಂದಳೆಂದು ಅರಿಕೆ ಮಾಡಲಾಗಿ ಕಾದಂಬರಿಯು ಮಹಡಿಯಿಂದ ಕೆಳಕ್ಕಿಳಿದುಬಂದಳು. ಮಹಾಶ್ವೇತೆಯ ನಿರ್ಬಂಧದಿಂದ ಹೇಗೋ ಸ್ನಾನ, ಊಟ ಮೊದಲಾದ ಹಗಲಿನ ಕೆಲಸಗಳನ್ನು ಮುಗಿಸಿದಳು. ಈ ಕಡೆ ಚಂದ್ರಾಪೀಡನು ಕ್ರೀಡಾಪರ್ವತದಿಂದ ಇಳಿದು ಸ್ನಾನ, ದೇವರಪೂಜೆ, ಭೋಜನ ಮೊದಲಾದ ಹಗಲಿನ ಕೆಲಸವನ್ನು ಮುಗಿಸಿ ಆಮೇಲೆ ಕೃತಕಪರ್ವತದ ತಪ್ಪಲಿನಲ್ಲಿ ೧೧೫. ಹೆಣ್ಣುಜಿಂಕೆಗಳ ಮೆಲುಕಿನ ನೊರೆಯಿಂದ ಹೊರಡುತ್ತಿರುವ ಹುಂಡುಗಳ ಮಳೆಯಿಂದ ತೊಯಿದಿರುವ, ಹೆಂಗಸರು ಕಾಲಿಗೆ ಲೇಪನಮಾಡಿಕೊಂಡಿರುವ ಅರಗಿನ ಕಾಂತಿಯಿಂದ ಕೆಂಬಣ್ಣವನ್ನು ತಾಳಿರುವ, ಬಳ್ಳಿಯ ಹಸುರು ಗೊಂಚಲಿನಿಂದ ಶೋಭಿಸುತ್ತಿರುವ, ಹೂವುಗಳ ಧೂಳಿನ ಗುಂಪಿನಿಂದ ಕೂಡಿಕೊಂಡಿರುವ, ನಿಶ್ಚಲವಾದ ಹಾಗೂ ವಿಸ್ತಾರವಾದ ಯಮುನಾಜಲವನ್ನು ತಿರಸ್ಕರಿಸಲು ಸಮರ್ಥವಾದ (ಯಮುನಾನದಿಯ ನೀರಿನ ಬಣ್ಣವನ್ನು ಹೊಂದಿರುವ) ಹಾರೀಕಪಕ್ಷಿಯಂತೆ (ಹಸುಬನ ಹಕ್ಕಿ) ಹಸುರಾದ ಮರಕತಮಣಿಯ ಹಾಸರೆಯ ಮೇಲೆ ಚಂದ್ರಾಪೀಡನು ಕುಳಿತುಕೊಂಡಿದ್ದನು. ವ|| ಆ ಕಾಲದಲ್ಲಿ ೧೧೬. ಬಿಸಿಲೆಲ್ಲ ತಾವರೆಯ ದಂಟೆಂಬ ನಾಳದಿಂದ ಕುಡಿಯಲ್ಪಟ್ಟಂತೆ ಮುಚ್ಚಿಹೋಯಿತು. ಆಕಾಶವೆಲ್ಲ ಸುಣ್ಣದಿಂದ ಬಳಿಯಲ್ಪಟ್ಟಂತೆಯೂ, ಭೂಮಂಡಲವೆಲ್ಲ ಹಾಲಿನ ದೊಡ್ಡ ಪ್ರವಾಹದಿಂದ ತೇಲಿಸಲ್ಪಟ್ಟಂತೆಯೂ (ತುಂಬಲ್ಪಟ್ಟಂತೆಯೂ), ದಿಕ್ಕೆಲ್ಲವೂ ಶ್ರೀಗಂಧದ ರಸದ ಮಳೆಯಿಂದ ಮುಚ್ಚಿಹೋದಂತೆಯೂ ಕಾಣುವ ಒಂದು ಬಿಳುಪಾದ ಕಾಂತಿಯು ಭೂಮ್ಯಾಕಾಶಗಳನ್ನು ಬಹಳವಾಗಿ ಹರಡಿತು. ವ|| ಹಾಗೆ ಹರಡುತ್ತಿರುವ ಕಾಂತಿಯ ಪುಂಜವನ್ನು ನೋಡಿ ೧೧೭. ಈಗ ಅಕಸ್ಮಾತ್ತಾಗಿ ಒಂದೇ ಸಲ ಚಂದ್ರನು ಹುಟ್ಟಿಬಿಟ್ಟನೋ, ದೇವಗಂಗಾನದಿಯು ಆಕಾಶವನ್ನು ತುಂತುರುಗಳ ಸಮೂಹದಿಂದ ಸಿಂಪಡಿಸುತ್ತಾ ಭೂಮಿಗೆ ಇಳಿದುಬರುತ್ತಿದೆಯೋ,

ವ|| ಎಂದತಿಕುತೂಹಲಂಬೆರಸು ಬೆಳಗಿನ ಬರ್ಪ ದೆಸೆಯಂ ನೋೞನಮಾಗಳಿರ್ಪಿಂ ಪೊರೆದ ದುಗುಲದಿಂ ಬಾಸಣಿಸಿ ಚಂದನಾನುಲೇಪದಿಂ ತೀವಿದ ಸಿಪ್ಪಂ ಪಿಡಿದು ಕಯ್ಗೊಟ್ಟು ನಡೆವ ಪಡಿಯಱತಿಯುಂ ಮಾಲತೀಕುಸುಮಮಾಲಿಕೆಯಂ ಪಿಡಿದ ತಮಾಳಿಕೆಯುಂ ಸುಯ್ಯೆಲರಿಂ ಪಾಱದಪುವೆನಿಪ ದುಕೂಲಂಗಳಂ ಪಿಡಿದು ನೆಲನನುಗ್ಘಡಿಪ ಕೇಯೂರಕನುಮೊಡವರೆ ಕನ್ಯಕಾ ಪರಿವೃತೆಯುಂ ಛತ್ರಚಾಮರವಿರಾಜಿತೆಯುಮಾಗಿ ಮದಲೇಖೆ ಬರುತಿರ್ದಳಾಕೆಯ ಕೆಲದೊಳ್ ಬರ್ಪ ತರಳಿಕೆಯ ಕಯ್ಯ ಸಿತಾಂಶುಕಾಚ್ಛಾದಿತ ರತ್ನಮಯ ಪಟಲಕದೊಳ್

ಪೊಳೆವೆಳದಿಂಗಳೊಳ್ಮುಱಗಳಿಂ ಸುರಸಿಂಧುವ ಶೀಕರಂಗಳಿಂ
ಜಳನಿಯಲ್ಲಿ ಮಾರ್ಪೊಳೆವ ತಾರೆಗಳಿಂ ಸಮೆದಂತೆ ಶಾರದಂ
ಗಳ ಜಸದೇೞ್ಗೆ ಲಕ್ಷಿ ಯ ಮುಗುಳ್ನಗೆ ಜೊನ್ನದ ಬಾ ೞ್ಕೆ ರತ್ನಸಂ
ಕುಳದದೈವಮೆಂದೆಸೆದುದುಜ್ವಳ ಮೌಕ್ತಿಕಹಾರಮಂಡಲಂ        ೧೧೮

ವ|| ಅದಂ ಕಂಡು

ಎಲೆ ಚಂದ್ರಾತಪರುಚಿಯಂ
ಗೆಲೆವಂದೀ ಧವಳಿಮಕ್ಕೆ ಕಾರಣವೀ ನಿ
ರ್ಮಳತರತಾರಹಾರಮಿಂತೀ
ಗಳೆಂದು ಬಗೆದಂ ನರೇಂದ್ರನಂದನನಾಗಳ್ ೧೧೯

ವ|| ಅಂತು ಬಗೆಯುತ್ತುಮಿರ್ದು

ಮದಲೇಖೆಯ ಬರವಂ ಕಂ
ಡಿದಿರೇೞ್ವುದುಮಾಕೆ ವಿನಯದಿಂ ತನ್ನ ಪದಾ
ಬ್ಜದ ಮೇಲೆ ಮುೞ್ಗಲೊದವಿದ
ಪದಪಿಂ ತೆಗೆದೆತ್ತಿ ನೃಪಸುತಂ ಮನ್ನಿಸಿದಂ    ೧೨೦

ವ|| ಅಂತು ಮದಲೇಖೆಯಂ ಪರ‍್ಯಂಕದೊಳ್ ಕುಳ್ಳಿರಮೇೞ್ದು ನೃಪರೂಪಚಂದ್ರಂ ಸಿಂಹಾಸನದೊಳ್ ಕುಳ್ಳಿರ್ಪುದುಮಾ ಕಾಂತೆ ತಾನೆೞ್ದು ಮಲಯಜಾನುಲಿಪ್ತದೇಹನುಮಂ ಮಾಲತೀಕುಸುಮದಾಮಶೇಖರನುಮಂ ಮಾಡಿ ದುಕೂಲಂಗಳನುಡೆ ಕೊಟ್ಟು ಹಾರಮಂ ಪಿಡಿದುಕೊಂಡಿಂತೆಂದಳ್

ಇದೇನೆಂದು ಯಾರಿಗೂ ನಿರ್ಣಯಿಸಲು ಅಸಾಧ್ಯವಾಗಿದೆ. ವ|| ಎಂದು ಬಹಳ ಕುತೂಹಲದಿಂದ ಕೂಡಿ ಬೆಳಕು ಬರುವ ಕಡೆಯನ್ನು ನೋಡಲು ಆಗ ಒದ್ದೆಯಾಗಿರುವ ಪಟ್ಟೆಬಟ್ಟೆಯಿಂದ ಮುಚ್ಚಿ ಗಂಧಲೇಪನವನ್ನೊಳಗೊಂಡ ಕರಂಡಕವನ್ನು ಹಿಡಿದು ಕೈಹಿಡಿದುಕೊಂಡು ಬರುವ ಬಾಗಿಲುಕಾಯುವವಳೂ, ಮಾಲತೀಪುಷ್ಪದ ಮಾಲಿಕೆಯನ್ನು ಹಿಡಿದಿರುವ ತಮಾಲಿಕೆಯೂ, ಉಸುರಿನ ಗಾಳಿಯಿಂದಲೂ ಹಾರಿಬಿಡುತ್ತದೆಯೋ ಎಂಬಂತಿರುವ ಪಟ್ಟೆವಸ್ತ್ರಗಳನ್ನು ಹಿಡಿದು ಹಸ್ತಲಾಘವವನ್ನು ಕೊಡುತ್ತಿರುವ ಕೇಯೂರಕನೂ ಜೊತೆಯಲ್ಲಿ ಬರಲಾಗಿ ಕನ್ನಿಕೆಯರಿಂದ ಕೂಡಿಕೊಂಡವಳಾಗಿ ಛತ್ರಚಾಮರ ವಿರಾಜಮಾನಳಾಗಿ ಮದಲೇಖೆಯು ಬರುತ್ತಿದ್ದಳು. ಆಕೆಯ ಪಕ್ಕದಲ್ಲಿ ಬರುತ್ತಿರುವ ಕೈಯಲ್ಲಿರುವ ಬಿಳಿಯಬಟ್ಟೆಯಿಂದ ಮುಚ್ಚಿರುವ ರತ್ನನಿರ್ಮಿತವಾದ ಪೆಟ್ಟಿಗೆಯಲ್ಲಿ ೧೧೮. ಒಂದು ಪ್ರಕಾಶಮಾನವಾದ ಮುತ್ತಿನಸರವು ಶೋಭಿಸುತ್ತಿತ್ತು. ಅದು ಪ್ರಕಾಶಿಸುವ ಬೆಳದಿಂಗಳ ಉತ್ತಮವಾದ ಚೂರುಗಳಿಂದಲೂ, ದೇವಗಂಗಾನದಿಯ ನೀರುಹನಿಗಳಿಂದಲೂ, ಸಮುದ್ರದಲ್ಲಿ ಪ್ರತಿಬಿಂಬಿಸಿರುವ ನಕ್ಷತ್ರಗಳಿಂದಲೂ ಮಾಡಿಸಿರುವಂತೆ ಕಾಣುತ್ತಿತ್ತು. ಅದುಶರತ್ಕಾಲದ ಮೇಘಗಳ ಕೀರ್ತಿಸಮೃದ್ಧಿಯಂತೆಯೂ, ಲಕ್ಷಿ ದೇವಿಯ ಮಂದಹಾಸದಂತೆಯೂ, ಬೆಳದಿಂಗಳ ಜೀವನವೆಂಬಂತೆಯೂ ರತ್ನಸಮೂಹಕ್ಕೆ ಅದೇವತೆಯಂತೆಯೂ ವಿರಾಜಿಸುತ್ತಿತ್ತು. ವ|| ಅದನ್ನು ನೋಡಿ, ೧೧೯. ‘ಎಲಾ ಈಗ ಹೀಗೆ ಬೆಳದಿಂಗಳ ಕಾಂತಿಯನ್ನು ಗೆದ್ದಿರುವ ಈ ಬಿಳುಪಿಗೆ ಕಾರಣವು ಈ ನಿರ್ಮಲವಾದ ಹಾರವೇ ಸರಿ’ ಎಂದು ಆ ರಾಜಕುಮಾರನು ಆಲೋಚಿಸಿದನು ವ|| ಹಾಗೆ ಆಲೋಚಿಸುತ್ತಿದ್ದು ೧೨೦. ಮದಲೇಖೆಯ ಆಗಮನವನ್ನು ಕಂಡು ಇದಿರೇಳಲು ಅವಳು ವಿನಯದಿಂದ ಇವನ ಪಾದಕಮಲಗಳಿಗೆ ಎರಗಿದಳು. ರಾಜಕುಮಾರನು ಅವಳನ್ನು ಸ್ನೇಹದಿಂದ ಮೇಲಕ್ಕೇಳಿಸಿ ಗೌರವಿಸಿದನು. ವ|| ಹಾಗೆ ಮದಲೇಖೆಯನ್ನು ಮಂಚದ ಮೇಲೆ ಕುಳಿತುಕೊಳ್ಳುವಂತೆ ಹೇಳಿ ಚಂದ್ರಾಪೀಡನು ಸಿಂಹಾಸನದಲ್ಲಿ ಕುಳಿತುಕೊಳ್ಳಲಾಗಿ ಆ ಮದಲೇಖೆಯು ಎದ್ದು ಚಂದ್ರಾಪೀಡನ ಶರೀರಕ್ಕೆ ಶ್ರೀಗಂಧದ ಲೇಪನವನ್ನು ಮಾಡಿ, ಮಾಲತೀಕುಸುಮದ ಸರವನ್ನು ತಲೆಗೆ ಮುಡಿಸಿ, ರೇಷ್ಮೆವಸ್ತ್ರಗಳನ್ನು ಉಟ್ಟುಕೊಳ್ಳಲು ಕೊಟ್ಟು

ಮನಮೊಲ್ದೀ ಮಧುರೋಕ್ತಿಗಾರೆಳಸರೀ ಮೆಲ್ಪಿಂಗದಾರ್ ಮೆಚ್ಚರೀ
ವಿನಯಕ್ಕಾರೊಳಗಾಗರೀ ರುಜುಗುಣಕ್ಕಾರ್ ಕೂರರೀ ನಿನ್ನ ಪೆಂ
ಪಿನ ಬಿಣ್ಪಿಂಗಮದಾರ್ ಮರುಳ್ಗೆಳಸರೀ ಸನ್ಮೂರ್ತಿಗರ್ ನೆಟ್ಟನಾ
ಳ್ತನದೊಳ್ ನಿಲ್ಲದರೀ ಮನೋಹರತೆಗಾರ್ ಸೋಲರ್ ಮಹೀವಲ್ಲಭಾ     ೧೨೧

ಭುವನತ್ರಯಾಂತರಾಳ
ಪ್ರವಿದಿತ ನಿಜಮಹಿಮನೆನಿಪ ನಿನಗೇನಂ ಮಾ
ಡುವೆನಂತವೆಲ್ಲಮಾವಗ
ಮವಿನಯಮೆಂಬಂತೆ ತೋಱುತಿರ್ದಪುವೀಗಳ್          ೧೨೨

ಮೊದಲೊಳ್ ಸಂಭಾಷಣಂಗೆಯ್ವುದೆ ವಲಮಿಱಕೆಯ್ವಂದಮೆಂದಾದರಂಗೆ
ಯ್ವುದಹಂಕಾರಂ ಸ್ತವಂಗೆಯ್ವುದದೆಮಗೆ ದಲ್ ಗೌರವಂ ಬಿನ್ನಪಂಗೆ
ಯ್ವುದೆ ದಾಷ್ಟ ಂ ಸೇವೆಯುಂ ಚಾಪಲಮುಪಕರಣಂ ಕೃತ್ರಿಮಂ ಪ್ರೀತಿಯಂ ಮಾ
ೞ್ಪುದನಾತ್ಮಜ್ಞತ್ವಮಾಮೀವುದೆ ವಿಭವದ ಗರ್ವಂಬೊಲಾದಪ್ಪುದೀಗಳ್     ೧೨೩

ಹೃದಯಮನೊಪ್ಪುಗೊಂಡ ನಿಮಗಿಂ ಮಗುೞ್ದುಕುಡುವೊಂದು ವಸ್ತುವಾ
ವುದೊ ಗಡ ಜೀವಿತೇಶ್ವರರೆನಿಪ್ಪವರ್ಗಂ ಪ್ರತಿಪಾದ್ಯಮಪ್ಪುದಾ
ವುದೊ ಬರವಿಂದೆ ಮಾಡಿದುಪಕಾರಮನಿನ್ನದನೇತಱಂದೆ ನೀ
ಗಿದಪೆನೊಯೆಂದು ಚಿತ್ರರಥನಂದನೆ ತೋಱಸಿದಪ್ಪಳೞ್ಕಱಂ     ೧೨೪

ತನ್ನ ನಿಜಜೀವಿತಮುಮಂ
ತನ್ನುಮನಿರದಿತ್ತು ತೊಳ್ತುತನಮಂ ತಾಂ ಕೊಂ
ಡುಂ ನೆಯಳ್ ಸುಜನರ್ಗಿ
ನ್ನಿನ್ನನ್ನರ್ಗೇನ ಮಾಡಿಯುಂ ತಣಿವುಂಟೇ      ೧೨೫

ವ|| ಅದಱನಿಂಗಡಲ ಕಡೆಪದೊಳೊಗೆದ ನೂತ್ನರತ್ನಂಗಳೊಳೀ ಹಾರವೇ ಶೇಷಮಪ್ಪುದಱಂ ಶೇಷವೆಂಬ ಪೆಸರೆಸೆಯ

ಹಾರವನ್ನು ಹಿಡಿದುಕೊಂಡು ಹೀಗೆ ಹೇಳಿದಳು. ೧೨೧. “ಎಲೈ ಮಹಾರಾಜನೆ, ಮನಸ್ಸಿಗೆ ಪ್ರೀತಿಯನ್ನುಂಟುಮಾಡುವ ಈ ನಿನ್ನ ಮೃದುಭಾಷಣಕ್ಕೆ ಯಾರು ತಾನೆ ಇಷ್ಟಪಡುವುದಿಲ್ಲ? ಈ ಮೃದುಸ್ವಭಾವಕ್ಕೆ ಯಾರು ತಾನೆ ಮೆಚ್ಚುವುದಿಲ್ಲ? ಈ ನಿನ್ನ ನಮ್ರತೆಗೆ ಯಾರು ತಾನೆ ವಶವಾಗುವುದಿಲ್ಲ? ಈ ಸರಳಸ್ವಭಾವಕ್ಕೆ ಯಾರು ತಾನೆ ಪ್ರೀತಿಸುವುದಿಲ್ಲ? ನಿನ್ನ ಗೌರವಾತಿಶಯಕ್ಕೆ ಯಾರು ತಾನೆ ಆಕರ್ಷಿತರಾಗುವುದಿಲ್ಲ? ನಿನ್ನ ಶ್ರೇಷ್ಠವಾದ ಈ ಆಕಾರಕ್ಕೆ ಯಾರು ತಾನೆ ದಾಸರಾಗುವುದಿಲ್ಲ? ಈ ನಿನ್ನ ಸೌಂದರ್ಯಕ್ಕೆ ತಾನೆ ಸೋಲುವುದಿಲ್ಲ? ೧೨೨. ಮೂರು ಲೋಕಗಳಲ್ಲೂ ಸುಪ್ರಸಿದ್ಧವಾದ ಪ್ರಭಾವವುಳ್ಳ ನಿನಗೆ ಏನನ್ನು ಮಾಡಿದರೂ ಅವೆಲ್ಲವೂ ಶುದ್ಧ ಅವಿನಯವೆಂಬಂತೆ ನಮಗೀಗ ತೋರುತ್ತದೆ. ೧೨೩. ಈಗ ಮೊದಲು ತಮ್ಮೊಂದಿಗೆ ಮಾತನಾಡುವುದೇ (ನಮಗೆ ಮಾತನಾಡಲು ಯೋಗ್ಯತೆಯಿಲ್ಲದಿರುವುದರಿಂದ) ತಿರಸ್ಕಾರಮಾಡುವ ರೀತಿಯಾಗುತ್ತದೆ. ತಮಗೆ ಆದರ ಮಾಡಿದರೆ ಅದು (ಸರಿಸಮಾನತೆಯಿಲ್ಲದುದರಿಂದ) ನಮ್ಮ ಅಹಂಕಾರವನ್ನು ತೋರ್ಪಡಿಸಿಕೊಂಡಂತಾಗುತ್ತದೆ. ತಮ್ಮನ್ನು ಸ್ತೋತ್ರ ಮಾಡುವುದೆಂದರೆ (ಸ್ತೋತ್ರಮಾಡಲು ಶಕ್ತಿ ಇಲ್ಲದುದರಿಂದ) ದಿಟ್ಟಕ್ಕೂ ಅದು ಗರ್ವವೇ ಆಗುತ್ತದೆ. ತಮಗೆ ವಿಜ್ಞಾಪನೆ ಮಾಡಿಕೊಳ್ಳುವುದೆಂದರೆ (ಅಷ್ಟು ಧೈರ್ಯವೂ ಇಲ್ಲದುದರಿಂದ) ದಿಟ್ಟತನವಾಗಿಬಿಡುತ್ತದೆ. ಸೇವೆಯು (ಅದಕ್ಕೂ ಯೋಗ್ಯತೆಯಿಲ್ಲದಿರುವುದರಿಂದ) ಚಪಲಬುದ್ಧಿಯನ್ನು ತೋರಿಸುತ್ತದೆ. ಹಾಗೆಯ ಉಪಕಾರವೆಂಬುದು (ತಮಗೆ ಯಾವ ಉಪಕಾರದ ಅವಶ್ಯಕತೆಯಿಲ್ಲದುದರಿಂದ) ಮೋಸವೆನಿಸುತ್ತದೆ. ತಮ್ಮೊಂದಿಗೆ ಸ್ನೇಹ ಮಾಡುವುದು (ಸಮಾನತೆಯಿಲ್ಲದುದರಿಂದ) ತನ್ನ ಯೋಗ್ಯತೆಯನ್ನು ತಾನು ತಿಳಿದುಕೊಳ್ಳದಿರುವಿಕೆಯಾಗುತ್ತದೆ. ತಮಗೆ ಏನನ್ನಾದರೂ ಕೊಡುವುದೆಂದರೆ ನಮ್ಮ ಐಶ್ವರ್ಯದ ಅಹಂಕಾರವನ್ನು ತೋರ್ಪಡಿಸಿಕೊಂಡಂತಾಗುತ್ತದೆ. ೧೨೪. ನನ್ನ ಹೃದಯವನ್ನೇ ಕೊಂಡೊಯ್ದಿರುವ ನಿಮಗೆ ಇನ್ನು ನಾನು ಮತ್ತೆ ಕೊಡುವ ವಸ್ತು ಯಾವುದಿದೆಯೋ? ಜೀವಿತೇಶ್ವರನೆನಿಸಿದವರಿಗೂ ಒಪ್ಪಿಸುವುದು ಯಾವುದಿದೆ? ನಿಮ್ಮ ಆಗಮನದಿಂದ ಮಾಡಿದ ಉಪಕಾರವನ್ನು ನಾನು ಯಾವ ಪ್ರತ್ಯುಪಕಾರದಿಂದ ತೀರಿಸುತ್ತೇನೋ ಎಂದು ಕಾದಂಬರೀದೇವಿಯು ತಮ್ಮಲ್ಲಿ ಪ್ರೀತಿಯನ್ನು ತೋರಿಸಿದ್ದಾಳೆ. ೧೨೫. ಆ ಕನ್ಯೆಯು ತನ್ನ ಪ್ರಾಣವನ್ನೂ ತನ್ನನ್ನೂ ನಿಮಗೆ ಒಪ್ಪಿಸಿ ನಿಮ್ಮ ಸೇವಾವೃತ್ತಿಯನ್ನು ಅಂಗೀಕರಿಸಿಯೂ ತೃಪ್ತಳಾಗಿಲ್ಲ. ನಿಮ್ಮಂತಹ ಸತ್ಪುರುಷರಿಗೆ ಏನು ಮಾಡಿದರೆ ತಾನೆ ತೃಪ್ತಿಯುಂಟಾಗುತ್ತದೆ? ವ|| ಆದ್ದರಿಂದ ಕ್ಷೀರಸಮುದ್ರವನ್ನು