ವರಣಂಗಿತ್ತಂ ರತ್ನಾ
ಕರನಂತಾ ವರುಣನೞ್ಕಱಂದಿತ್ತಂ ಚಿ
ತ್ರರಥಂಗೆ ಕೂರ್ಮೆಯಿಂ ಚಿ
ತ್ರರಥಂ ನಿಜತನುಜೆಗಿತ್ತನಿದನವನಿಪತೀ       ೧೨೬

ವ|| ಇಂತಿದನಾ ಕಾದಂಬರೀದೇವಿ

ಹಾರಂಗಳೊಳೆಸೆವೀ ಮಣಿ
ಹಾರಂ ಮದನಾವತಾರಮೆನಿಸಿದ ನಿನ್ನಾ
ಕಾರಕೆಣೆಯಕ್ಕುಮೆಂದವ
ಧಾರಿಸಿ ತಾಂ ನಿಮಗೆ ಕುಡುವೆನೆಂಬೀ ಬಗೆಯಿಂ         ೧೨೭

ಪೊಳೆವ ಸುಧಾಸೂತಿ ನಭ
ಸ್ಥಳದೊಳ್ ಕಣಳಿಪ ತೆಱದೆ ಯುವರಾಜನುರ
ಸ್ಥಳದೊಳ್ ಮುಕ್ತಾವಳಿ ಕ
ಣ್ಗೊಳಿಸುಗುಮೆಂದೞ್ಕಱಂದಮಟ್ಟಿದಳೀಗಳ್   ೧೨೮

ಆಭರಣದ ಪೊಯಂ ತಳೆ
ವಾಭರಣಪ್ರಿಯರ ತೆಱದೆ ಸದ್ಗುಣಗಣರ
ತ್ನಾಭರಣರ್ ನಿಮ್ಮೊಂದಿಗ

ರಾಭರಣದ ಪೊಯನೇಕದಂ ಪೊತ್ತಿರ್ಪರ್     ೧೨೯

ವ|| ಆದೊಡಂ ನಿಮಗಿದು ಪ್ರೀತಿಯೆನೆ ಭಾವಿಸಲ್ವೇೞ್ಪುದಪ್ಪುದಲ್ಲದೆಯಂ

ಸಿರಿಯೊಡನೆ ಪುಟ್ಟಿತೆಂದಾ
ಹರಿ ಕೌಸ್ತುಭಮೆಂಬ ಕಲ್ಲಮುಱಯುಮನತ್ಯಾ
ದರದಿಂದೆಂದುಂ ತಾನಾ
ಗುರದೊಳ್ ತಳೆದಿರ್ಪನೇಕೆ ನೀವಱಯದುದೇ           ೧೩೦

ವ|| ಅದಱಂ ನಾರಾಯಣಂಗಂ ನಿಮಗಂ ಲಕ್ಷಿ ಗಂ ಕಾದಂಬರಿಗಂ ಕೌಸ್ತುಭಕ್ಕಂ ಶೇಷಾಭಿಧಾನಹಾರಕ್ಕಂ ವಿಶೇಷಮೇನುಮಿಲ್ಲಮಾಗಿ ಕೆಯ್ಕೊಂಡು ಕಾದಂಬರೀಪ್ರಣಯಕ್ಕೆ ನಿಮಿರ್ಕೆಯಂ ಮಾೞ್ಪುದೆಂತಾನುಂ ಕೆಯ್ಕೊಳ್ಳದಿರಲಾಕೆ ಭಗ್ನಪ್ರಣಯೆಯಾದಪ್ಪಳಪ್ಪೊಡೆ ತನ್ನಂ ಬಿಡುವಳೆಂದು

ಕಡೆದಾಗ ಎಲ್ಲ ಹೊಸಹೊಸ ಉತ್ಕೃಷ್ಟವಸ್ತುಗಳೂ ಹೊರಕ್ಕೆ ಬಂದುಬಿಟ್ಟವು. ಇದೊಂದು ಹಾರ ಮಾತ್ರ ಅಲ್ಲೇ ಉಳಿದಿತ್ತು. ಆದ್ದರಿಂದಲೇ ಇದಕ್ಕೆ ಶೇಷವೆಂಬ ಹೆಸರು ಒಪ್ಪುತ್ತದೆ. ೧೨೬. ಎಲೈ ಅರಸನೆ, ಈ ಶೇಷವೆಂಬ ಮುಕ್ತಾಹಾರವನ್ನು ಸಮುದ್ರರಾಜನು ವರುಣನಿಗೆ ಕೊಟ್ಟನು. ಹಾಗೆಯೆ ವರುಣನು ಪ್ರೀತಿಯಿಂದ ಚಿತ್ರರಥನಿಗೆ ಕೊಟ್ಟನು. ಚಿತ್ರರಥನು ಪ್ರೀತಿಯಿಂದ ತನ್ನ ಮಗಳಾದ ಕಾದಂಬರಿಗೆ ಕೊಟ್ಟನು. ವ|| ಹೀಗೆ ತನಗೆ ಬಂದ ಹಾರವನ್ನು ಕಾದಂಬರೀದೇವಿಯು ೧೨೭. ಹಾರಗಳಲ್ಲೆಲ್ಲಾ ಶ್ರೇಷ್ಠವಾದ ಈ ಹಾರವು ಮನ್ಮಥನ ಅವತಾರವೆನಿಸಿರುವ ನಿನ್ನ ಶರೀರಕ್ಕೆ ಅನೂರೂಪವಾಗುವುದೆಂದು ನಿಶ್ಚಯಿಸಿ, ತಾನು ನಿಮಗೆ ಇದನ್ನು ಕೊಡಬೇಕೆಂಬ ಇಚ್ಛೆಯಿಂದ ೧೨೮. ಪ್ರಕಾಶಿಸುವ ಚಂದ್ರನು ಆಕಾಶಪ್ರದೇಶದಲ್ಲಿ ಕಂಗೊಳಿಸುವ ರೀತಿಯಿಂದ ಯುವರಾಜನ ವಕ್ಷಸ್ಥಳದಲ್ಲಿ ಈ ಮುಕ್ತಾವಳಿಯು ಕಂಗೊಳಿಸಲೆಂದು ಪ್ರೀತಿಯಿಂದ ಕೊಟ್ಟು ಕಳುಹಿಸಿದ್ದಾಳೆ. ೧೨೯. ಒಡವೆಗಳ ಭಾರವನ್ನು ಹೊರುವ ಆಭರಣ ಪ್ರಿಯರಂತೆ ಸದ್ಗುಣಗಳ ಸಮೂಹವೆಂಬ ರತ್ನಗಳೇ ಆಭರಣವಾಗಿರುವ ನಿಮ್ಮಂತಹವರು ಒಡವೆಗಳ ಆ ಭಾರವನ್ನು ಏಕೆ ಹೊರುತ್ತಾರೆ? ಟಿ. ಗುಣವಂತರಿಗೆ ಗುಣಗಳೇ ಆಭರಣ; ಬೇರೆ ಆಭರಣವೇ ಬೇಕಿಲ್ಲ ಎಂದು ಅಭಿಪ್ರಾಯ. ವ.. ಆದರೂ ನಿಮಗಿದು ಇಷ್ಟವೆಂದೇ ತಿಳಿದುಕೊಳ್ಳಬೇಕು. ಅದಲ್ಲದೆ ೧೩೦. ಶ್ರೀಮನ್ನಾರಾಯಣನು ಕೌಸ್ತುಭವೆಂಬ ಕಲ್ಲಿನ ಚೂರನ್ನು ಅತ್ಯಾದರದಿಂದ ಯಾವಾಗಲೂ ತನ್ನ ಎದೆಯ ಮೇಲೆ ಧರಿಸಿರುತ್ತಾನೆ. ಇದೇಕೆ ಎಂದರೆ? ಅದನ್ನು ಮಡದಿಯಾದ ಲಕ್ಷಿ ದೇವಿಯು ತಾನು ಕ್ಷೀರಸಮುದ್ರದಿಂದ ಹುಟ್ಟಿ ಹೊರಕ್ಕೆ ಬರುವಾಗ ತನ್ನ ಜೊತೆಯಲ್ಲಿ ಹುಟ್ಟಿದ ಅದನ್ನೂ ತಂದಿದ್ದಾಳೆ. ಇದು ನಿಮಗೆ ತಿಳಿಯದೇ ಇದೆಯೆ? ವ|| ಆದ್ದರಿಂದ ನಾರಾಯಣನಿಗೂ ನಿಮಗೂ ಲಕ್ಷಿ ಗೂ ಕಾದಂಬರಿಗೂ, ಕೌಸ್ತುಭರತ್ನಕ್ಕೂ ಶೇಷಹಾರಕ್ಕೂ ಏನೂ ಭೇದವಿಲ್ಲ! ಆದ್ದರಿಂದ ಇದನ್ನು ಸ್ವೀಕರಿಸಿ ಕಾದಂಬರಿಯ

ತರಳಿಕೆಯ ಕೆಯ್ಯೊಳಟ್ಟಿದ
ಳರಸ ಮಹಾಶ್ವೇತೆ ತಾನೆ ಬೇಂದನೆನು
ತ್ತಿರಸಲ್ಲದೆಂದು ಮುತ್ತಿನ
ಸರಮನದಂ ಕೊರಲೊಳಾಕೆ ಕಟ್ಟಿದಳಾಗಳ್             ೧೩೧

ವ|| ಅಂತು ಕಟ್ಟೆ ಬೆಱಗಾಗಿ ವಿನಯರತ್ನಾಕರನಿಂತೆಂದಂ

ಮದಲೇಖೆ ಬಲ್ಲೆ ನೀಂ ಕೆಯ್ಕೊಳಿಸಲೆಮಗೆ ಮಾತಾಡಸಲ್ಲೆಂಬವೋಲ್ ತೋ
ಱದೆ ನೀಂ ನಿನ್ನೊಂದು ವಾಕ್ಕೌಶಲಗುಣಮನಿದಂ ನಿಮ್ಮ ಸೌಜನ್ಯಜಾಲಂ
ಪುದಿರ್ದತ್ತೆನ್ನನಾನಿನ್ನೆನಗೊಡೆಯನೆ ಚಿತ್ತಕ್ಕೆವಂದಂತುಟೇ ಮಾ
ೞ್ಪುದು ದಲ್ ಕಾದಂಬರೀದೇವಿಯ ಗುಣಪಣದಿಂ ಮಾಱುವೋದೆನ್ನನೀಗಳ್          ೧೩೨

ವ|| ಎಂದಿಂತು ಮೊದಲಾಗಿ ಕಾದಂಬರೀಸಂಬಂಧಂಗಳಪ್ಪ ನುಡಿಯಂ ನುಡಿದು ಪಿರಿದುಬೇಗಮಿರ್ದು ಮದಲೇಖೆಯಂ ಕಳುಪಿ

ಮದಲೇಖೆಯುಮಿತ್ತಲ್ ಪೋ
ಪುದುಮೊಯ್ಯನೆ ಕೇಳಿಶೈಲಮಂ ಚಂದನಹಾ
ರ ದುಕೂಲಧವಳನೇಱದ
ನುದಯೋದ್ಗತಚಂದ್ರನಂತೆ ನೃಪಕುಲಚಂದ್ರಂ          ೧೩೩

ವ|| ಆಗಳಾ ನೃಪರೂಪಚಂದ್ರನಂ ಗಂಧರ್ವರಾಜನಂದನೆ ನೋಡಲೆಂದುತ್ಸಾರಿತ ಚ್ಛತ್ರಚಾಮರಚಿಹ್ನೆಯುಂ ನಿಷಿದ್ಧಾಷೇಷಪರಿಜನೆಯುಂ ತಮಾಲಿಕಾದ್ವಿತೀಯೆಯುಮಾಗಿ ಸೌಧ ಶಿಖರಮನೇಱ

ಕಾಂತೆ ನಿಜಕರಸರೋರುಹ
ಮಂ ತಂದು ಕಟೀತಟಕ್ಕೆ ಮುಯ್ಪಿಂಗೆ ಸೆಱಂ
ಗಂ ತೆಗೆದು ಚಿತ್ರಿಸಿದ ಪೆ
ಣ್ಣಂತಿರೆ ಕಣ್ಣಾಲಿ ಬೀೞೆ ನೋಡುತ್ತಿರ್ದಳ್       ೧೩೪

ನಳಿನದಳನಯನೆ ತನಗಾ
ಗುಳಿವರೆ ಕರತಳದೆ ವದನಮಂ ಮುಚ್ಚುತವ
ಗ್ಗಲಿಸಿ ಪೊಱಮಡುವ ಗೋತ್ರ
ಸ್ಖಲನೆಯ ಭಯದಿಂದೆ ಮುಚ್ಚಿದಂತೆವೊಲಿರ್ದಳ್        ೧೩೫

ಪ್ರೀತಿಯನ್ನು ವಿಸ್ತರಿಸಬೇಕು. ಒಂದುವೇಳೆ ನೀವು ತೆಗೆದುಕೊಳ್ಳದೆ ಅವಳು ಪ್ರಣಯಭಂಗವನ್ನು ಹೊಂದಿದರೆ ತನ್ನ ಪ್ರಾಣವನ್ನು ಬಿಡುತ್ತಾಳೆ ಎಂದು ೧೩೧. ಮಹಾಶ್ವೇತೆಯು ತಾನೆ ತರಳಿಕೆಯ ಕೈಯಲ್ಲಿ ಈ ಹಾರವನ್ನು ಕೊಟ್ಟುಕಳುಹಿಸಿದ್ದಾಳೆ. ಎಲೈ ರಾಜನೆ, ಇದು ಬೇರೆ ಯಾವುದೋ ಎಂದುಕೊಂಡು ಇರುವುದು ಸರಿಯಲ್ಲ” ಎಂದು ಆ ಮುತ್ತಿನಸರವನ್ನು ಆಗ ಅವಳು ಚಂದ್ರಾಪೀಡನ ಕೊರಳಿಗೆ ಕಟ್ಟಿದಳು. ವ|| ಹೀಗೆ ಕಟ್ಟಲಾಗಿ ಆಶ್ಚರ್ಯಪಟ್ಟ ವಿನಯಗುಣಕ್ಕೆ ಸಮುದ್ರದಂತಿರುವ ಚಂದ್ರಾಪೀಡನು ಹೀಗೆ ಹೇಳಿದನು. ೧೩೨. “ಮದಲೇಖೆ, ನಾನು ಇದನ್ನು ಸ್ವೀಕರಿಸುವಂತೆ ಮಾಡಲು ಚೆನ್ನಾಗಿ ತಿಳಿದುಕೊಂಡಿದ್ದೀಯೆ. ನಾನು ಮಾತನಾಡುವುದೇ ಸರಿಯಲ್ಲ ಎನ್ನುವಂತೆ ನಿನ್ನ ವಾಕ್ಚಾತುರ್ಯಗುಣವನ್ನು ತೋರಿಸಿಬಿಟ್ಟಿರುವ. ನಿಮ್ಮ ಒಳ್ಳೆಯತನವೆಂಬ ಬಲೆಯು ನನ್ನನ್ನು ಆವರಿಸಿಕೊಂಡಿದೆ. ಇನ್ನು ನನ್ನ ವಿಷಯದಲ್ಲಿ ನಾನೇ ಸ್ವತಂತ್ರನಲ್ಲ. ಕಾದಂಬರೀದೆವೀಯ ಗುಣವೆಂಬ ಹಣಕ್ಕೆ ಮಾರಿಕೊಂಡಿರುವ ನನ್ನನ್ನು ನಿಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಅಪ್ಪಣೆ ಮಾಡಬಹುದು” ವ|| ಇವೇ ಮೊದಲಾದ ಕಾದಂಬರೀದೇವಿಗೆ ಸಂಬಂಧಪಟ್ಟ ಮಾತನ್ನು ಹೇಳಿ, ಸ್ವಲ್ಪಕಾಲವಿದ್ದು ಮದಲೇಖೆಯನ್ನು ಕಳುಹಿಸಿದನು. ೧೩೩. ಮದಲೇಖೆಯು ಹೊರಟುಹೋಗಲಾಗಿ ಈ ಕಡೆ ರಾಜವಂಶಕ್ಕೆ ಚಂದ್ರನಂತಿರುವ ಚಂದ್ರಾಪೀಡನು ಗಂಧ, ಹಾರ, ಪಟ್ಟೆವಸ್ತ್ರಗಳ ಧಾರಣೆಯಿಂದ ಶುಭ್ರವಾದ ಶರೀರವುಳ್ಳವನಾಗಿ ಉದಯಕಾಲದಲ್ಲಿ ಏಳುತ್ತಿರುವ ಚಂದ್ರನಂತೆ ಕ್ರೀಡಾಪರ್ವತವನ್ನು ಮೆಲ್ಲ ಮೆಲ್ಲನೆ ಹತ್ತಿದನು. ವ|| ಆಗ ಕಾದಂಬರಿಯು ಚಂದ್ರಾಪೀಡನನ್ನು ನೋಡಬೇಕೆಂದು ಛತ್ರಿ, ಚಾಮರ ಮೊದಲಾದ ರಾಜಚಿಹ್ನೆಗಳನ್ನು ಬಿಟ್ಟು, ಪರಿಜನರೆಲ್ಲರನ್ನೂ ಹಿಂಬಾಲಿಸದಂತೆ ನಿವಾರಿಸಿ ತಮಾಲಿಕೆಯೊಬ್ಬಳೊಂದಿಗೆ ಮಹಲಿನ ತುದಿಯನ್ನು ಹತ್ತಿ ೧೩೪. ಆ ಸುಂದರಿಯು ತನ್ನ ಕರಕಮಲವನ್ನು ಸೊಂಟದ ಮೇಲಿಟ್ಟು, ಭುಜದ ಮೇಲೆ ಸೆರಗನ್ನು ಎಳೆದು ಚಿತ್ರಿಸಿದ ಹೆಣ್ಣಿನಂತೆ ಕಣ್ಣು ಸೋಲುವವರೆಗೂ ನೋಡುತ್ತಿದ್ದಳು. ೧೩೫. ಕಮಲದಂತೆ ಕಣ್ಣುಳ್ಳ ಆಕೆಯು ತನಗೆ ಆಕಳಿಕೆ

ನಱುಸುಯ್ಯೆಲರಿಂಗೆಱಗುವ
ಮಱದುಂಬಿಗಳಂ ಸೆಱಂಗಿನಿಂ ಸೋವುತುಮಾ
ತೆಱದೊಳೆ ಯುವರಾಜನನ
ೞ್ಕಱಂದಡಿಗಡಿಗೆ ಕಾಂತೆ ಕರೆವಂತಿರ್ದಳ್     ೧೩೬

ಎಲರಲೆಪದಿಂದೆ ಮೇಲುದು
ತೊಲಗಲ್ ಸಂಭ್ರಮಿಸಿ ಭುಜಲತಾಯುಗದಿಂ ಪೆ
ರ್ಮೊಲೆಯುಂ ಮುಚ್ಚುತುಮಾ ಕೋ
ಮಲೆ ಸನ್ನೆಯಿನಪ್ಪಿದಪ್ಪಳೆನೆ ಸೊಗಯಿಸುಗುಂ           ೧೩೭

ಸೊಗಯಿಪ ಸೋರ್ಮುಡಿಯಿಂದ
ಲ್ಗುಗುವಲರಂ ತೀವಿ ಕೆಯ್ಯೊಳಾಘ್ರಾಣಿಸುತಂ
ಮೃಗನಯನೆ ಕಾಣ್ಕೆಯೊಳೆ ಕೆ
ಯ್ಮುಗಿದಪ್ಪಳ್ ಭೂಭುಜಂಗೆನಲ್ ಕರಮೆಸೆದಳ್        ೧೩೮

ಕೊರಲೊಳ್ ಸೊಗಯಿಪ ಹಾರಮ
ನೆರಡುಂ ಸುಟ್ಟುಂಬೆಯಿಂದವಡಿಗಡಿಗಾಗಳ್
ತಿರುಪುತ್ತಂ ನಿಜಹೃದಯಾಂ
ತರದುತ್ಕಲಿಕೆಯನೆ ತೋಱುವಂತೆವೊಲೆಸೆದಳ್         ೧೩೯

ಕೆದಱದ ಪೂವಲಿಯಲರಂ
ಮದಿರೇಕ್ಷಣೆ ನಡೆಯೊಳೆಡಪಿ ಬಿಡೆ ನಡುಗುತ್ತಂ
ಮದನನಲರ್ಗಣ ಯ ಕೋಲಿಂ
ದೊದವಿದ ವೇದನೆಯನಿದಿರ್ಗೆ ತೋರ್ಪವೊಲಿರ್ದಳ್   ೧೪೦

ಉಡೆನೊಲ್ ಸಡಿಲ್ದು ಮೇಗಾ
ಲ್ದುಡಿಗೆಯ ಕುಸುರಿಯೊಳೆ ತೊಡರೆ ಕಾಮಿನಿ ಮಿಡುಕಲ್
ಪಡೆಯದೆ ಯುವರಾಜಂಗಾ
ಗಡೆ ಕಾಮನೆ ಕಟ್ಟಿಯೊಪ್ಪುಗೊಟ್ಟವೊಲಿರ್ದಳ್            ೧೪೧

ಯುಂಟಾಗಲು ಕೈಯಿಂದ ಬಾಯನ್ನು ಮುಚ್ಚಿಕೊಳ್ಳುತ್ತಿದ್ದಳು. ಇದರಿಂದ ಬಾಯಿತಪ್ಪಿ ಚಂದ್ರಾಪೀಡನ ಹೆಸರೆ ಬಹಳಮಟ್ಟಿಗೆ ಹೊರಬರುತ್ತದೆಯೆಂಬ ಹೆದರಿಕೆಯಿಂದ ಬಾಯಿಮುಚ್ಚಿಕೊಂಡಿರುವಂತೆ ಕಾಣುತ್ತಿದ್ದಳು. ಟಿ. ಯಾರ ಹೆಸರನ್ನಾದರೂ ಹೇಳಬೇಕಾದಾಗ ತಾನು ಮನಸ್ಸಿನಲ್ಲಿ ಸದಾ ಚಿಂತಿಸುತ್ತಿರುವವರ ಹೆಸರನ್ನು ತಟ್ಟನೆ ಹೇಳಿಬಿಡುವುದಕ್ಕೆ ಗೋತ್ರಸ್ಖಲನವೆಂದು ಹೆಸರು. ೧೩೬. ಆ ಸುಂದರಿಯು ಸುವಾಸನೆಯಿಂದ ಕೂಡಿರುವ ತನ್ನ ಉಸಿರಿಗೆ ಮುತ್ತುತ್ತಿರುವ ಮರಿದುಂಬಿಗಳನ್ನು ಸೀರೆಯ ಸೆರಗಿನಿಂದ ಓಡಿಸುತ್ತ ಆ ಭಂಗಿಯಿಂದಲೇ ಯುವರಾಜನನ್ನು ಪ್ರೀತಿಯಿಂದ ಬಾರಿಬಾರಿಗೂ ಕರೆಯುತ್ತಿರುವಂತೆ ಕಾಣುತ್ತಿದ್ದಳು. ೧೩೭. ಆ ಕೋಮಲೆಯು ಗಾಳಿ ಬೀಸಿ ತನ್ನ ಮೇಲುಹೊದಿಕೆಯು ಜಾರಿ ಹೋಗಲು ಆತುರವಾಗಿ ತನ್ನ ಬಳ್ಳಿದೋಳುಗಳಿಂದ ದಪ್ಪ ಮೊಲೆಗಳನ್ನು ಮುಚ್ಚಿಕೊಳ್ಳುತ್ತಿದ್ದಳು. ಇದರಿಂದ ಚಂದ್ರಾಪೀಡನಿಗೆ ತನ್ನನ್ನು ಬಂದು ತಬ್ಬಿಕೊಳ್ಳುವಂತೆ ಸನ್ನೆ ಮಾಡುತ್ತಿರುವವಳಂತೆ ಶೋಭಿಸುತ್ತಿದ್ದಳು. ೧೩೮. ಜಿಂಕೆಯಂತೆ ಕಣ್ಣುಳ್ಳ ಆ ಕಾದಂಬರಿಯು ತನ್ನ ಸುಂದರವಾದ ಹಾಗೂ ನೀಳವಾದ ಕೇಶಪಾಶದಿಂದ ಕೆಳಕ್ಕೆ ಉದುರುವ ಹೂವುಗಳನ್ನು ಬೊಗಸೆಗೈಯಲ್ಲಿ ತುಂಬಿಕೊಂಡು ಮೂಸಿ ನೋಡುತ್ತಿದ್ದಳು. ಇದರಿಂದ ಅವಳು ಕಂಡಕೂಡಲೆ ಆ ಅರಸನಿಗೆ ಕೈಮುಗಿಯುತ್ತಿದ್ದಾಳೋ ಎಂಬಂತೆ ಬಹಳ ಚೆನ್ನಾಗಿ ಶೋಭಿಸಿದಳು. ೧೩೯. ಅವಳು ತನ್ನ ಕೊರಳಿನಲ್ಲಿ ಶೋಭಿಸುವ ಹಾರವನ್ನು ತನ್ನ ಎರಡು ಬೆರಳುಗಳಿಂದ ಬಾರಿ ಬಾರಿಗೂ ತಿರುಗಿಸುತ್ತಿದ್ದಳು. ಇದರಿಂದ ಅವಳು ತನ್ನ ಹೃದಯಾಂತರಾಳದಲ್ಲಿರುವ ಚಂದ್ರಾಪೀಡನ ಮೇಲಿರುವ ಉತ್ಕಟೇಚ್ಛೆಯನ್ನು ತೋರಿಸುತ್ತಿರುವಂತೆ ಶೋಭಿಸಿದಳು. ೧೪೦. ಮದವನ್ನುಂಟುಮಾಡುವ ಕಣ್ಣುಳ್ಳ ಆ ಕಾದಂಬರಿಯು ನೆಲಗಟ್ಟಿನಲ್ಲಿ ಎರಚಿರುವ ಹೂವುಗಳನ್ನು ನಡೆಯುವಾಗ ಎಡವಿ ಭಯದಿಂದ ಹೆಚ್ಚಾಗಿ ನಡುಗುತ್ತಿದ್ದಳು. ಇದರಿಂದ ಮನ್ಮಥನ ಹೂವಿನ ಬಾಣವೆಂಬ ದಂಡದಿಂದ ಉಂಟಾದ ವೇದನೆಯನ್ನು ಎದುರಿಗೆ ತೋರಿಸುವಂತೆ ಇದ್ದಳು. ೧೪೧. ಅವಳ ಉಡಿದಾರವು ಜಾರಿ ಕಾಲಿನ ಆಭರಣದಲ್ಲಿ ಸಿಕ್ಕಿಕೊಂಡಿತು. ಆಗ ಆ ಸುಂದರಿಯು ಅಲ್ಲಾಡುವುದಕ್ಕೆ ಆಗದಂತೆ ಇರಲು ಮನ್ಮಥನು ಅವಳನ್ನು ಕಾಲುಕಟ್ಟಿ ಕೊಂಡೊಯ್ದು ಯುವರಾಜನಿಗೆ

ವ|| ಅದಲ್ಲದೆಯುಂ

ತಡರಿಸುತ್ತಿರಲ್ಕೆ ತೊಡೆ ಜೋಲೆ ಸಡಿಲ್ದುಡೆ ಬೀೞ್ದ ಮೇಲುದಂ
ಬಿಡದೆ ಕುಚಕ್ಕೆ ತರ್ಪಿನೆಗಮಿತ್ತೊಳಮುಯ್ಪಿನ ಮೇಲೆ ಬಿರ್ಚೆ ಸೋ
ರ್ಮುಡಿ ಚಿದಱುತ್ತೆ ಕೆಯ್ಯೊಳದನಂಗನೆ ಸಾವಗಿಸಲ್ ವಳಿತ್ರಯಂ
ಕಿಡುವಿನೆಗಂ ತೆಱಂದಿರಿದು ಸಂಭ್ರಮದಿಂ ಮಗೊಡು ನೋಡಿದಳ್          ೧೪೨

ವ|| ಅಂತಾ ಸಂಭ್ರಮದೊಳ್

ಪೊಳೆಯುತ್ತಂ ತಾರಹಾರಂ ಬರಿಗೆವರೆ ಕಟಾಕ್ಷಾಂಶುವಿಂದೊಂದಿ ಕಣ
ತ್ಪಳಮಾಗಳ್ ಪುಂಡರೀಕಕ್ಕೆಣ ಯೆನಿಸಿ ವಿಲಕ್ಷಸ್ಮಿತಾಲೋಕದಿಂ ಪ್ರ
ಜ್ವಲಿಸಲ್ ತನ್ನೊಂದು ಗಂಡಸ್ಥಳಮೊಸೆದು ಮೊಗಂ ಸಾರ್ಚಿನಾನಾ ರಸಂ ಕ
ಣಳಿಪನ್ನಂ ಮೂರ್ತಿನಾರಾಯಣನೃಪನನವಳ್ ಮೆಚ್ಚಿ ನೋಡುತ್ತಮಿರ್ದಳ್            ೧೪೩

ಬೆಳಗೆಲ್ಲಂ ಪೋಗೆ ವಿಯ
ತ್ತಳದೊಳ್ ಬೆಳರ್ಗೇಂಪು ಪಸರಿಸುತ್ತಿರಲಪರಾ
ಚಲಶಿಖರದತ್ತಲೊಯ್ಯನೆ
ತಳರ್ದಂ ರಾಜೀವಜೀವಿತೇಶ್ವರನಾಗಳ್       ೧೪೪

ಮೞುಗದು ಗಡಿನ್ನುಮೆನುತಂ
ಮುಳಿಸಿಂ ಕಾಮಿನಿಯರೀಕ್ಷಿಸುತ್ತಿರೆ ನುಣ್ಗೆಂ
ಪೆಳಸಿದುದೆನೆ ಬಿಂಬಂ ಕೆಂ
ಪೆಳಸಿರ್ದುದು ಚಕ್ರವಾಕಚಕ್ರೇಶ್ವರನಾ          ೧೪೫

ಪಸುರೆಸೆದುದು ಪದ್ಮಿನಿ ಬೆ
ಳ್ಪೆಸೆದುದು ಕುಮುದಿನಿ ನಿಶಾಮುಖಂ ನಸುಗರ್ಪಿಂ
ದೆಸೆದುದು ಪಡುವಣದೆಸೆ ಕೆಂ
ಪೆಸೆದುದು ದಿವಸಾವಸಾನಮಪ್ಪುದುಮಾಗಳ್            ೧೪೬

ವ|| ಆಗಳನುರಾಗದಿಂ ದೀತಿಗಳ್ ಬೆರಸು ದಿವಸಕರನದೃಶ್ಯನಪ್ಪುದುಂ

ಒಪ್ಪಿಸುತ್ತಾನೋ ಎಂಬಂತೆ ಕಾಣುತ್ತಿತ್ತು. ವ|| ಅದಲ್ಲದೆ ೧೪೨. ಕಾದಂಬರಿಯು ಚಂದ್ರಾಪೀಡನನ್ನು ಮರೆಯಲ್ಲಿ ಬಹಳ ಸಂಭ್ರಮದಿಂದ ನೋಡುತ್ತಿದ್ದಳು. ಅವಳ ತೊಡೆ ನಡುಗಿ ತಡವರಿಸುತ್ತಿತ್ತು. ಅವಳು ಉಟ್ಟ ಸೀರೆ ಜೋಲಾಡುತ್ತಿತ್ತು. ಮೇಲುಹೊದಿಕೆಯು ಬಿದ್ದು ಬಿದ್ದು ಹೋಗುತ್ತಿದ್ದು ಅದನ್ನು ಮತ್ತೆ ಮತ್ತೆ ಸ್ತನಗಳಿಗೆ ಮುಚ್ಚುತ್ತಿದ್ದಳು. ನೀಳವಾದ ಕೇಶಪಾಶವು ಬಿಚ್ಚಿ ಹೆಗಲಿನ ಮೇಲೆ ಚದುರಲು ಅದನ್ನು ಸರಿಪಡಿಸುತ್ತಿದ್ದಳು. ತ್ರಿವಳಿಗಳು ಕಾಣಿಸಿಕೊಳ್ಳದಂತೆ ಅವಕಾಶ ಮಾಡಿಕೊಂಡು ಶರೀರವನ್ನು ನಿಗುರಿಸಿ ನಿಗುರಿಸಿ ಉದ್ದ ಮಾಡುತ್ತಿದ್ದಳು. ಹೀಗೆ ಬಹಳ ಸಡಗರದಿಂದ ನೋಡುತ್ತಿದ್ದಳು. ವ|| ಆ ಸಡಗರದಲ್ಲಿ ೧೪೩. ಮುಕ್ತಾಹಾರವು ಪ್ರಕಾಶಿಸುತ್ತ ಪಕ್ಕಕ್ಕೆ ಸರಿಯಲು, ಕಟಾಕ್ಷದ ಕಾಂತಿಯಿಂದ ಕೂಡಿಕೊಂಡು ಕಿವಿಯ ಮೇಲಿರುವ ಕನ್ನೆ ದಿಲೆಯು ಆಗ ಬಿಳಿಯ ತಾವರೆಗೆ ಸಮಾನವೆನಿಸಲು, ನಾಚಿಕೆಯಿಂದ ಉಂಟಾದ ಕಿರಿನಗೆಯ ಬೆಳಕಿನಿಂದ ತನ್ನ ಒಂದು ಕೆನ್ನೆಯು ಬೆಳಗುತ್ತಿರಲಾಗಿ, ಮುಖವನ್ನು ತಿರುಗಿಸಿ ತಿರುಗಿಸಿ ನಾನಾ ಬಗೆಯ ರಸಗಳು ಕಂಗೊಳಿಸುತ್ತಿರಲಾಗಿ ಪ್ರತ್ಯಕ್ಷ ನಾರಾಯಣನಂತಿರುವ ಅರಸನನ್ನು ಕಾದಂಬರಿಯು ಪ್ರೀತಿಸಿ ನೋಡುತ್ತಿದ್ದಳು. ೧೪೪. ಹಗಲಿನ ಪ್ರಕಾಶವು ಹೋಯಿತು. ಆಕಾಶದಲ್ಲಿ ಬಿಳುಪುಮಿಶ್ರಿತ ಕೆಂಬಣ್ಣವು ಹರಡುತ್ತಿತ್ತು. ಕಮಲಗಳಿಗೆ ಪ್ರಾಣಪ್ರಿಯನಾದ ಸೂರ್ಯನು ಮೆಲ್ಲನೆ ಅಸ್ತಾಚಲದ ಶಿಖರದ ಕಡೆಗೆ ಹೊರಟನು. ೧೪೫. ಇದು ಇನ್ನೂ ಮುಳುಗುವುದೇ ಇಲ್ಲವಲ್ಲ! ಎಂದು ಕೋಪದಿಂದ ಕಾಮಿನಿಯರು ನೋಡುತ್ತಿರಲು, ಸಿಟ್ಟಿನಿಂದ ಉಂಟಾದ ಅವರ ಕಣ್ಣಿನ ಸುಂದರವಾದ ಕೆಂಪು ಬಂದು ಸೇರಿಕೊಂಡಿತೋ ಎಂಬಂತೆ ಸಕಲ ಜಗನ್ಮಂಡಲಕ್ಕೂ ಚಕ್ರವರ್ತಿಯಾದ ಸೂರ್ಯನ ಬಿಂಬವು ಕೆಂಬಣ್ಣವನ್ನು ಪಡೆಯಿತು. ೧೪೬. ಸಾಯಂಕಾಲವಾಗಲು ಕಮಲದ ಬಳ್ಳಿಯೂ ಕೆಂಬಣ್ಣದ ಕಮಲಗಳೂ ಮುಚ್ಚಿಕೊಳ್ಳಲು ಹಸುರುಬಣ್ಣವನ್ನು ಮಾತ್ರ ಪಡೆಯಿತು. ಕುಮುದಲತೆಯು ಅರಳಿದ ಬಿಳಿಯ ಹೂವುಗಳಿಂದ ಬಿಳುಪನ್ನು ಪಡೆದು ಶೋಭಿಸಿತು. ಪ್ರದೋಷಕಾಲವು ತಿಳಿಗಪ್ಪಿನಿಂದ ಶೋಭಿಸಿತು. ಪಶ್ಚಿಮದಿಕ್ಕು ಕೆಂಬಣ್ಣವನ್ನು ತಾಳಿತು. ವ|| ಆಗ ಅನುರಾಗದಿಂದ (ಕೆಂಪು, ಪ್ರೀತಿ) ಕೂಡಿಕೊಂಡವನಾಗಿ ಕಿರಣಗಳೊಂದಿಗೆ ಸೂರ್ಯನು ಅದೃಶ್ಯನಾಗಲಾಗಿ