ಇದು ಚಿತ್ರರಥತನೂಜೆಯ
ಹೃದಯದಿನಗ್ಗಲಿಪ ರಾಗರಸಮೇ ತೀ
ವಿದುದು ಭುವನಮನೆನಲ್ ತೀ
ವಿದುದಾಗಳ್ ಬಹುಳ ಸಾಂದ್ರಸಾಂಧ್ಯಾರಾಗಂ          ೧೪೭

ವ|| ಮತ್ತಮಿನಿಸಾನುಬೇಗದಿಂ

ಮದನನ ಪೆರ್ಗಿಚ್ಚಿಂ ಮ
ಗ್ಗಿದ ಪೊಣರ್ವಕ್ಕಿಗಳ ಹೃದಯಸಂಕುಳದಿಂದು
ಣ್ಮಿದ ಕರ್ಬೊಗೆಯೆಂಬಿನೆಗಂ
ಪುದಿದೆತ್ತಂ ಮರ್ಬಿನುರ್ಬು ಪರ್ಬಿತ್ತಾಗಳ್      ೧೪೮

ತರತರದಿಂದೆಂಟುಂ ದಿ
ಕ್ಕರಿಗಳ್ ನೆರೆದೊಟ್ಟಿಕೊಳ್ವ ಕರಪುಷ್ಕರಶೀ
ಕರಮೇ ಪೊಣ್ಮಿದುವೆನಲಂ
ಬರದೊಳ್ ತುಱಗಿದುವು ಧವಳತಾರಾನಿಕರಂ           ೧೪೯

ವ|| ಆಗಳಾ ಕಾದಂಬರಿ ಮಾಡದಿಂದಿೞದಳಿತ್ತಲರಸಂ ಕೇಳೀಶೈಲದಿಂದವನಿತಳಕ್ಕವತರಿಸಿ

ಅದೊ ರಜನಿಯನನುರಾಗದೆ
ಹೃದಯಮನೇಱಸಿದನೆಂಬಿನಂ ಮಂಡಲಮ
ಧ್ಯದೊಳೆಸೆಯಲಾತ್ಮಲಾಂಛನ
ಮುದಯಿಸಿದಂ ರಜನಿನಾಥನುದಯಾಚಲದಿಂ           ೧೫೦

ವ|| ಅಂತು ವಿಭಾವರೀವನಿತಾವಿಲಾಸದಂತಪತ್ರನುಂ ಮದರಾಜ್ಯೆ ಕಾತಪತ್ರನುಮೆನಿಸಿದ ಕುಮುದಿನೀಬಾಂಧವನುದಯಿಸೆ

ಜಗಮಿದು ಮೌಕ್ತಿಕದಿಂದಂ
ತೆಗೆದುದೂ ದಂತದೊಳೆ ಸಮೆದುದೊ ಪಾಲ್ಗಡಲಿಂ
ದೊಗೆದುದೊ ಪೇೞೆಂಬಿನೆಗಂ
ಸೊಗಯಿಸಿದುದು ಸಾಂದ್ರಚಂದ್ರಿಕಾವಿಸ್ತಾರಂ             ೧೫೧

ವ|| ಅಂತಾ ಚಂದ್ರಿಕೆಯೊಳ್ ನೃಪರೂಪಚಂದ್ರಂ ಕೇಳೀಶೈಲದ ತಪ್ಪಲೊಳ್ ನಡಪಾಡುತಿರ್ಪುದುಂ ಪರಿಜನಂಗಳ್

೧೪೭. ಕಾದಂಬರಿಯ ಹೃದಯದಲ್ಲಿ ತುಂಬಿಕೊಂಡು ಅಲ್ಲಿಂದ ಹೊರಹೊಮ್ಮುತ್ತಿರುವ ರಾಗದ (ಚಂದ್ರಾಪೀಡನ ಮೇಲಿನ ಪ್ರೀತಿ, ಕೆಂಪು) ಸಮುದ್ರವು ಪ್ರಪಂಚವನ್ನೆಲ್ಲಾ ತುಂಬಿಬಿಟ್ಟಿದೆಯೋ ಎಂಬಂತೆ ಬಹಳ ದಟ್ಟವಾದ ಸಂಜೆಗೆಂಪು ಹರಡಿತು. ವ|| ಮತ್ತೆ ಸ್ವಲ್ಪ ಹೊತ್ತಿನಲ್ಲಿ ೧೪೮. ಆಗ ಮನ್ಮಥನ ದೊಡ್ಡ ಬೆಂಕಿಯಿಂದ (ವಿರಹಾಗ್ನಿ) ಬೆಂದ ಚಕ್ರವಾಕಪಕ್ಷಿಗಳ ಹೃದಯಗಳಿಂದ ಏಳುತ್ತಿರುವ ದಟ್ಟವಾದ ಕತ್ತಲೆಯು ಎಲ್ಲೆಲ್ಲೂ ವ್ಯಾಪಿಸಿಕೊಂಡು ಹಬ್ಬಿತು. ೧೪೯. ಅಷ್ಟದಿಗ್ಗಜಗಳು ಕ್ರಮವಾಗಿ ಸೇರಿ ಮೈಮೇಲೆ ಸುರಿದುಕೊಳ್ಳುವ ಸೊಂಡಲಿನ ತುದಿಯಿಂದ ಹೊರಹೊಮ್ಮುವ ನೀರಿನ ಹನಿಗಳು ಹರಡಿಕೊಂಡಂತೆ ಆಕಾಶದಲ್ಲಿ ಶುಭ್ರವಾದ ನಕ್ಷತ್ರಗಳ ಗುಂಪು ಕವಿಯಿತು. ವ|| ಆಗ ಕಾದಂಬರಿಯು ಮಹಡಿಯಿಂದಿಳಿದಳು. ಈ ಕಡೆ ಚಂದ್ರಾಪೀಡನು ಕೇಳೀಶೈಲದಿಂದ ಭೂಮಿಗೆ ಇಳಿದು ೧೫೦. ಇಗೊ, ರಾತ್ರಿಯ ಮೇಲಿನ ಪ್ರೀತಿಯಿಂದ ಅದನ್ನು ತನ್ನ ಹೃದಯದಲ್ಲಿ ಸೇರಿಸಿಕೊಂಡಿದ್ದಾನೆ ಎಂಬಂತೆ ಬಿಂಬದ ಮಧ್ಯದಲ್ಲಿ ಕಪ್ಪುಮಚ್ಚೆಯು ಶೋಭಿಸುತ್ತಿರಲು ರಾತ್ರಿಗೆ ಒಡೆಯನಾದ ಚಂದ್ರನು ಉದಯಪರ್ವತದಿಂದ ಉದಯಿಸಿದನು. ವ|| ಹಾಗೆ ರಾತ್ರಿಯೆಂಬ ವನಿತೆಯ ವಿನೋದದ ದಂತದೋಲೆಯೆಂದೂ ಮನ್ಮಥನ ಚಕ್ರಾಪತ್ಯದ ಒಂದೇ ಆದ ಬಿಳಿಯ ಕೊಡೆಯೆಂದೂ ಹೇಳಿಸಿಕೊಳ್ಳುವ ಕುಮುದಿನೀಬಂಧುವೆನಿಸಿದ ಚಂದ್ರನು ಉದಯಿಸಲಾಗಿ, ೧೫೧. ಈ ಜಗತ್ತು ಮುತ್ತುಗಳಿಂದ ನಿರ್ಮಿಸಲ್ಪಟ್ಟಿದ್ದೆಯೊ ಅಥವಾ ದಂತದಿಂದ ಮಾಡಲ್ಪಟ್ಟಿದೆಯೊ, ಇಲ್ಲವೆ ಕ್ಷೀರಸಮುದ್ರದಿಂದ ಹುಟ್ಟಿದೆಯೊ ಎಂಬಂತೆ ದಟ್ಟವಾದ ಬೆಳದಿಂಗಳ ಪ್ರಸಾರವು ಮನೋಹರವಾಗಿತ್ತು. ವ|| ಹಾಗೆ ಆ ಬೆಳದಿಂಗಳಲ್ಲಿ ಚಂದ್ರಾವತಾರನಾದ ಚಂದ್ರಾಪೀಡನು ಕ್ರೀಡಾಪರ್ವತದ ತಪ್ಪಲ್ಲಿ ಸಂಚರಿಸುತ್ತಿರಲಾಗಿ ಪರಿಜನರು

ತೆರೆಗಳ್ ಮೆಲ್ಪಿಂದೆ ನೀರ್ವಿಜ್ಜಣಿಗೆಯ ತೆಱದಿಂ ಬೀಸೆ ಹಂಸದ್ವಯಂಗಳ್
ತರದಿಂ ಕಣ್ಗೆಯ್ಯೆ ನೀರ್ವಕ್ಕಿಗಳುಲಿಯೆ ದಳನ್ನೀಲನೀರೇಜಿನೀ ಬಂ
ಧುರಗಂಧೋದ್ಗಾರಿ ಲೀಲಾಸರದ ಪುಳಿನದೊಳ್ ಸಿಂಧುವಾರೋಪಹಾರಂ
ಬೆರಸೊಪ್ಪಂಬೆತ್ತುದೀ ಮುತ್ತಿನ ಪಡುಶಿಲೆಯೊಳ್ ದೇವ ಕುಳ್ಳಿರ್ಪುದೀಗಳ್           ೧೫೨

ವ|| ಎಂಬುದುಂ ಕುಳ್ಳಿರೆ ಕೇಯೂರಕಂ ಭೋಂಕನೆ ಬಂದು ದೇವಾ ಕಾದಂಬರೀದೇವಿ ನಿಮ್ಮಂ ನೋಡಲೆಂದು ಬಂದಳೆಂದು ಬಿನ್ನವಿಸಲರಸನತಿಸಂಭ್ರಮದಿನಿದಿರೆೞ್ವನ್ನೆಗಮಿತರೆ ಯಂತಲ್ಪಸಖೀಜನಪರಿವೃತೆಯುಮುಪನೀತಾ ಶೇಷರಾಜಚಿಹ್ನೆಯುಮಾಗಿ

ಎಳವೆ ಸುತ್ತಿದಂತೆ ಮಿಱುಗುತ್ತಿರೆ ಕೇದಗೆಯೋಲೆ ಚಂದ್ರನೊ
ಳ್ವೆಳಗವೊಲೊಪ್ಪಿ ತೋ ದುಗುಲಂ ತನುವೊಳ್ಪೊಳೆಯಲ್ಕೆ ಚಂದನಂ
ತೊಳಗುವದೊಂದು ಹಾರಮಮರಲ್ ಕೊರಲೊಳ್ ನಿಜಕಾಂತಿ ಸುತ್ತಲುಂ
ಬಳಸೆ ಲತಾಂಗಿ ಚಂದ್ರನದೇವತೆಯಂತೆವೊಲಾದಮೊಪ್ಪಿದಳ್             ೧೫೩

ವ|| ಅಂತು ಮದಲೇಖಾದತ್ತಹಸ್ತಾವಲಂಬೆಯಾಗಿ ಕಾದಂಬರೀದೇವಿ ಬಂದು ನಿಜ ಪ್ರೀತಿಯಂ ತೋಱಲೆಂದು ಪರಿಜನದಂತೆ ನೆಲದೊಳ್ ಕುಳ್ಳಿರೆ ಚಂದ್ರಾಪೀಡದೇವನುಂ ಮೌಕ್ತಿಕ ಶಿಲಾತಳದೊಳ್ ಕುಳ್ಳಿರಿಮೆಂದು ಮದಲೇಖೆ ಪಿರಿದುಮಾಶ್ವಾಸಿಸೆಯುಮಾಗಳ್ ನೆಲದೊಳ್ ಕುಳ್ಳಿರ್ದು ಗಂಧರ್ವರಾಜನಂದನೆಯನಿಂತೆಂದಂ

ನೋಡಲೊಡಂ ಕೃತಾರ್ಥರೆನಿಪಾಳ್ಗಳೊಳೇನವಕಾಶಮುಂಟೆ ಮಾ
ತಾಡುವೊಡಿಂತನುಗ್ರಹಿಸುವಲ್ಲಿಗೆ ತಕ್ಕುದದಾವ ಭಂಗಿಯಿಂ
ನೋಡುವೊಡೆನನ್ನೊಳಿಲ್ಲ ಗುಣಲೇಶಮುಮೀ ತೆಱದಿಂದನುಗ್ರಹಂ
ಮಾಡುವುದರ್ಕೆ ದೇವಿಯರದೊಂದು ಋಜುತ್ವಮೆ ಮುಖ್ಯಕಾರಣಂ         ೧೫೪

ವಿಭವದೆ ನೆಗೞ್ದನ್ವಯದೊಂ
ದಭಿಮಾನಮದೇವುದೆಂದು ಪೊಸ ಸೇವಕರೊಳ್
ರಭಸದೆ ನಿಜಸೌಜನ್ಯ
ಪ್ರಭಾವಮಂ ಮೆವಿರಲ್ಲದೇಂ ಪೆಱತುಂಟೇ     ೧೫೫

೧೫೨. “ಅಲೆಗಳು ನೀರಿನಲ್ಲಿ ಅದ್ದಿದ ಬೀಸಣಿಗೆಯಂತೆ ಮೆಲ್ಲನೆ ಬೀಸುತ್ತಿವೆ. ಹಂಸದಂಪತಿಗಳು ಕ್ರಮವಾಗಿ ನಿದ್ರೆ ಮಾಡುತ್ತಿವೆ. ಚಕ್ರವಾಕ ಪಕ್ಷಿಗಳು ವಿರಹವ್ಯಥೆಯಿಂದ ಕೂಗಿಕೊಳ್ಳುತ್ತಿವೆ. ಈಗ ಅರಳಿರುವ ನೀಲಕಮಲಗಳ ಮನೋಹರವಾದ ಸುವಾಸನೆಯನ್ನು ಬೀರುತ್ತಿರುವ ಈ ಕ್ರೀಡಾಸರೋವರದ ಮರಳಿನ ಮೇಲೆ ತಳೆದಿರುವ ಲಕ್ಕಿಹೂವುಗಳಿಂದ ಕೂಡಿ ಮನೋಹರವಾದ ಮುತ್ತಿನ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳಬೇಕು ಸ್ವಾಮಿ” ವ|| ಎಂದು ಹೇಳಲು ಚಂದ್ರಾಪೀಡನು ಕುಳಿತುಕೊಂಡನು. ಆಗ ಕೇಯೂರಕನು ತಟ್ಟನೆ ಬಂದು “ಸ್ವಾಮಿ ಕಾದಂಬರೀದೇವಿಯು ನಿಮ್ಮನ್ನು ನೋಡಬೇಕೆಂದು ಬಂದಿದ್ದಾಳೆ” ಎಂದು ಅರಿಕೆಮಾಡಲು ಚಂದ್ರಾಪೀಡನು ಬಹಳ ಸಂಭ್ರಮದಿಂದ ಮೇಲಕ್ಕೆದ್ದನು. ಕಾದಂಬರಿಯು ಸಾಮಾನ್ಯ ಕನ್ನಿಕೆಯಂತೆ ಕೆಲವೇ ಮಂದಿ ಗೆಳತಿಯರಿಂದ ಕೂಡಿಕೊಂಡವಳಾಗಿ, ರಾಜಚಿಹ್ನೆಗಳನ್ನೆಲ್ಲಾ ತೆಗೆದಿಟ್ಟು ೧೫೩. ಕೇದಗೆಹೂವಿನ ಓಲೆಯು ಎಳೆಯಚಂದ್ರನು ಸುತ್ತಿಕೊಂಡಿರುವಂತೆ ಕಿವಿಯಲ್ಲಿ ಸೋಭಿಸುತ್ತಿರಲು, ಉಟ್ಟ ಪಟ್ಟೆಸೀರೆಯು ಚಂದ್ರನ ಬೆಳದಿಂಗಳಂತೆ ಶೋಭಿಸುತ್ತಿರಲು, ಲೇಪಿಸಿಕೊಂಡಿರುವ ಗಂಧವು ಶರೀರದಲ್ಲಿ ಹೊಳೆಯುತ್ತಿರಲು, ಪ್ರಕಾಶಿಸುವ ಒಂದು ಹಾರವು ಕೊರಳಲ್ಲಿ ಒಪ್ಪುತ್ತಿರಲು, ದೇಹದ ಪ್ರಭೆಯು ಸುತ್ತಲೂ ವ್ಯಾಪಿಸಿರಲು ಬಳ್ಳಿಯಂತೆ ದೇಹವುಳ್ಳ ಕಾದಂಬರಿಯು ಚಂದ್ರಮಂಡಲದ ಅದೇವತೆಯಂತೆ ಬಹಳ ಚೆನ್ನಾಗಿ ಶೋಭಿಸುತ್ತಿದ್ದಳು. ವ|| ಹಾಗೆ ಮದಲೇಖೆಯು ಹಸ್ತಲಾಘವವನ್ನು ಕೊಡುತ್ತಿರಲು ಕಾದಂಬರೀದೇವಿಯು ಬಂದು ತನ್ನ ಪ್ರೀತಿಯನ್ನು ತೋರಿಸುವುದಕ್ಕಾಗಿ ಪರಿಜನರಂತೆ ನೆಲದ ಮೇಲೆ ಕುಳಿತುಕೊಂಡಳು. ಚಂದ್ರಾಪೀಡನು ಮುತ್ತಿನ ಹಾಸುಗಲ್ಲಿನ ಮೇಲೆ ಕುಳಿತುಕೊಳ್ಳಿ ಎಂದು ಮದಲೇಖೆಯು ಎಷ್ಟು ಹೇಳಿದರೂ ಕೇಳದೆ ನೆಲದ ಮೇಲೆ ಕುಳಿತುಕೊಂಡು ಕಾದಂಬರಿಯನ್ನು ಕುರಿತು ಹೀಗೆ ಹೇಳಿದನು. ೧೫೪. “ದರ್ಶನವಾದರೆ ಸಾಕು ತಾವು ಕೃತಾರ್ಥರಾದೆವೆಂದು ಭಾವಿಸುವ ಸೇವಕರಿಗೆ ಮಾತನಾಡಲು ತಾನೆ ಅವಕಾಶವೆಲ್ಲಿದೆ? ಯಾವ ರೀತಿಯಿಂದ ವಿಚಾರಮಾಡಿದರೂ ಈ ರೀತಿ ಅನುಗ್ರಹಿಸುವುದಕ್ಕೆ ಯೋಗ್ಯವಾದ ಗುಣಲೇಶವೂ ನನ್ನಲ್ಲಿಲ್ಲ. ಈ ರೀತಿಯಿಂದ ಅನುಗ್ರಹ ಮಾಡುವುದಕ್ಕೆ ತಮ್ಮ ಒಂದು ಸರಳ ಸ್ವಭಾವವೇ ಮುಖ್ಯ ಕಾರಣವು. ೧೫೫. ಐಶ್ವರ್ಯದಿಂದ ಪ್ರಸಿದ್ಧಿಗೊಂಡ ದೊಡ್ಡ ಗಂಧರ್ವವಂಶದಲ್ಲಿ ಹುಟ್ಟಿರುವೆನೆಂಬ ಅಹಂಕಾರವು ನನಗೇಕೆ?

ಎಂದು ಭಾವಿಸಿ ಈ ಹೊಸ ಸೇವಕನಲ್ಲಿ ಬೇಗನೆ ನಿಮ್ಮ ಒಳ್ಳೆಯತನದ ಪ್ರಭಾವವನ್ನು ಮೆರೆಸುತ್ತಿರುವಿರಲ್ಲದೆ ಬೇರೆ ಏನೂ ಇಲ್ಲ.

ಇನಿಸುಂ ದಾಕ್ಷಿಣ್ಯಮುಮಂ
ಮನದೊಳ್ ಭಾವಿಸದೆ ಭೃತ್ಯನೆನೆ ಧನ್ಯನೆನಿಂ
ತಿನಿತಾದರಮೇಕೆಯೊ ಪರಿ
ಜನದೊಳ್ ಬೆಸಕೆಯ್ದು ಬರ್ದುಕಿಮೆಂಬೊಂದೆಡೆಯೊಳ್           ೧೫೬

ಪರರ್ಗುಪಕರಿಪೆಡೆಗಳ್ಗುಪ
ಕರಣಂ ತನು ತೃಣದ ತೆಱದೆ ಲಘುಜೀವಿತಮೆಂ
ಬೆರಡುಂ ಪಾವುಡಮಿಂತೀ
ಬರವಿಂಗೆನಲೆನಗೆ ಲಜ್ಜೆಯಾದಪುದೀಗಳ್      ೧೫೭

ಅವಿರ್ಪೆವು ತನುವಿದೆ ಮೇಣ್
ಜೀವಿತಮಿರ್ದಪ್ಪುದವಯವಂಗಳುಮಿವೆ ಮೆ
ಚ್ಚಾವುದನಾತ್ಮೀಕರಿಪರೊ
ದೇವಿಯರಿಂದೀಗಳಿವಳದುವೆ ಕೃತಾರ್ಥಂ     ೧೫೮

ವ|| ಎಂದು ನುಡಿಯೆ ಮದಲೇಖೆ ಮಾರ್ಕೊಂಡು ನೀವಿನ್ನು ಕೀೞ್ಪಟ್ಟು ನುಡಿಯೆ ಕಾದಂಬರೀದೇವಿ ಖೇದಿಸುವಳೆಂದು ಮತ್ತಮಿಂತೆಂದಳ್

ಇದನಿಂತಿನಿತಂ ನೀವೆ
ನ್ನದೊಡೇಂ ಗಂಧರ್ವರಾಜನಂದನೆ ಕೈಕೊ
ಳ್ಳದ ಕೆಮ್ಮನೆ ಮತ್ತುಪಚಾ
ರದ ನುಡಿ ಸಂದೇಹಬುದ್ಧಿಯಂ ಪುಟ್ಟಿಸದೇ     ೧೫೯

ವ|| ಎಂದು ನುಡಿಯೆ ಕಾದಂಬರೀದೇವಿ ಕೃತಪ್ರಸ್ತಾವೆಯಾಗಿ

ಅವನೀಪಾಲಕಚಕ್ರವರ್ತಿ ವಿಭು ತಾರಾಪೀಡನೆನ್ನಂ ವಿಳಾ
ಸವತೀದೇವಿಯದೆನ್ನಳಾರ್ಯ ಶುಕನಾಸಂ ತಾನದೆನ್ನಂ ಮಹೀ
ಭುವನಂ ನೋಡುವಡೆಂತುಟಲ್ಲಿಗೆನಿತಾವುಜ್ಜೆ ನಿಯಂತಿರ್ಪುದೊ
ಪ್ಪುವುದೇ ಭಾರತವರ್ಷಮೆಂದು ಬೆಸಗೊಂಡಳ್ ಕಾಂತೆ ಭೂಕಾಂತನಂ   ೧೬೦

ವ|| ಎಂದಿವು ಮೊದಲಾಗಿ ಪಲವುಮಂ ಬೆಸಗೊಳುತ್ತಂ ಪಿರಿದುಬೇಗಮಿರ್ದು ಕಾದಂಬರಿ ಕೇಯೂರಕನುಮಂ ಪರಿಜನಮುಮನರಸನ ಸಾರೆಯಿರವೇೞ್ದು ತನ್ನ ಕನ್ನೆಮಾಡಕ್ಕೆ ಪೋಗಿ ಶಯನತಳಮನಲಂಕರಿಸಿದಳಿತ್ತ ಕೇಯೂರಕನಡಿಯೊತ್ತೆ ಮುನ್ನಿರ್ದೆಡೊಯೊಳೆ ಯುವರಾಜನಿರ್ದು

೧೫೬. ಮನಸ್ಸಿನಲ್ಲಿ ಸ್ವಲ್ಪವೂ ಸಂಕೋಚಪಡದೆ ನಾನು ನಿಮ್ಮ ಆಳು ಎಂದು ಹೇಳಿಕೊಳ್ಳುವುದರಿಂದಲೇ ನಾನು ಕೃತಾರ್ಥನಾಗುತ್ತೇನೆ. ಹೀಗಿರುವಲ್ಲಿ ನಮ್ಮ ಸೇವಕರಲ್ಲಿ ನೀವೂ ಸೇರಿ ಬದುಕಿಕೊಳ್ಳಿ ಎಂದು ಅಪ್ಪಣೆ ಮಾಡುವ ಬದಲು ನನಗೆ ಇಷ್ಟು ಉಪಚಾರವೇಕೆ? ೧೫೭. ಪರೋಪಕಾರ ಮಾಡುವ ಕಾಲದಲ್ಲಿ ಸಾಧನವಾದ ಶರೀರ ಮತ್ತು ಹುಲ್ಲಿನಂತೆ ಅಲ್ಪವಾದ ಪ್ರಾಣ, ಇವೆರಡನ್ನೂ ಈ ನಿಮ್ಮ ಆಗಮನಕ್ಕೆ ಕಾಣಿಕೆಯಾಗಿ ಒಪ್ಪಿಸಿದ್ದೇನೆ ಎಂದು ಅರಿಕೆಮಾಡಲು ನನಗೆ ನಾಚಿಕೆಯಾಗುತ್ತದೆ. ೧೫೮. ನಾನು ಇದ್ದೇನೆ. ಈ ಶರೀರವಿದೆ ಮತ್ತು ಪ್ರಾಣವಿದೆ. ಅವಯವಗಳೂ ಇವೆ. ಈಗ ಇವುಗಳಲ್ಲಿ ಯಾವುದನ್ನು ದೇವಿಯರು ಮೆಚ್ಚಿ ಅಂಗೀಕರಿಸುತ್ತಾರೋ ಅದೇ ಸಾರ್ಥಕವಾಗುತ್ತದೆ.” ವ|| ಎಂದು ಹೇಳಲಾಗಿ ಮದಲೇಖೆಯು ಆ ಮಾತನ್ನು ತಡೆದು “ನೀವು ಇನ್ನು ಹೀಗೆ ನಿಮ್ಮನ್ನು ಕೀಳಾಗಿ ಭಾವಿಸಿ ಮಾತನಾಡಿದರೆ ಕಾದಂಬರೀದೇವಿಯು ಬೇಜಾರುಪಡುತ್ತಾಳೆ” ಎಂದು ಹೇಳಿ ಮತ್ತೆ ಹೀಗೆ ಹೇಳಿದಳು. ೧೫೭. “ಇಷ್ಟು ಮಾತನ್ನು ನೀವು ಹೇಳದಿದ್ದರೆ ಏನು ಕೊರತೆ? ಕಾದಂಬರೀದೇವಿಗೆ ಇದೇನೂ ಬೇಕಿಲ್ಲ ಸುಮ್ಮನೆ ಉಪಚಾರದ ಮಾತು ಸಂದೇಹ ಬುದ್ಧಿಯನ್ನುಂಟುಮಾಡುವುದಿಲ್ಲವೆ?” ವ|| ಎಂದು ಹೇಳಲಾಗಿ ಕಾದಂಬರೀದೇವಿಯು ಅವಕಾಶಮಾಡಿಕೊಂಡು ೧೬೦. “ಪ್ರಪಂಚವನ್ನೆಲ್ಲಾ ಕಾಪಾಡುವ ಚಕ್ರವರ್ತಿಯಾದ ತಾರಾಪೀಡಮಹಾರಾಜನು ಹೇಗಿದ್ದಾನೆ? ಮಹಾರಾಣಿಯಾದ ವಿಲಾಸವತೀದೇವಿಯು ಹೇಗಿದ್ದಾಳೆ? ಮಂತ್ರಿಯಾದ ಶುಕನಾಸನು ಹೇಗಿದ್ದಾನೆ? ಭೂಮಿಯು ನೋಡುವುದಕ್ಕೆ ಹೇಗಿದೆ? ಉಜ್ಜಯನಿಯು ಇಲ್ಲಿಗೆ ಎಷ್ಟು ದೂರದಲ್ಲಿದೆ? ಹೇಗಿದೆ? ಭಾರತವರ್ಷವು ಚೆನ್ನಾಗಿದೆಯೆ?” ಎಂದು ಕೇಳಿದಳು. ವ|| ಇವೇ ಮೊದಲಾದ ಹಲವು ವಿಚಾರಗಳನ್ನು ಕೇಳುತ್ತಾ ಬಹಳ ಹೊತ್ತು ಇದ್ದು, ಕಾದಂಬರಿಯು ಕೇಯೂರಕನನ್ನೂ ಪರಿಜನರನ್ನೂ ಚಂದ್ರಾಪೀಡನ ಹತ್ತಿರವೇ ಇರುವಂತೆ ಹೇಳಿ ತನ್ನ ಅಂತಪುರಕ್ಕೆ ಹೋಗಿ ಹಾಸಿಗೆಯನ್ನು ಅಲಂಕರಿಸಿದಳು (ಮಲಗಿದಳು). ಈ ಕಡೆ ಕೇಯೂರಕನು ಕಾಲನ್ನು ಒತ್ತುತ್ತಿರಲಾಗಿ,

ಕಾದಂಬರೀದೇವಿಯ ನಿರಹಂಕಾರಮುಮಂ ಮಹಾಶ್ವೇತೆಯ ನಿಷ್ಕಾರಣವತ್ಸಲತೆಯುಮಂ ಮದಲೇಖೆಯ ಸುಜನತೆಯುಮಂ ಪರಿಜನದ ಮಹಾನುಭಾವತೆಯುಮಂ ಗಂಧರ್ವ ರಾಜಲೋಕದ ಸಮೃದ್ಧತೆಯುಮಂ ಕಿಂಪುರಷವಿಷಯದ ರಮ್ಯತೆಯುಮಂ ಮನದೊಳ್ ಭಾವಿಸುತ್ತಿರ್ಪನ್ನೆಗಂ

ಇರುಳೋರಂತಿರೆ ಕಾದಂ
ಬರಿಯನೆ ನೋಡುತ್ತಮಿರ್ದು ಝೊಂಪಿಸೆ ನಿದ್ರಾ
ತುರನಾಗಿ ಪೞ್ಕೆಸಾರ್ವಂ
ತಿರೆ ಸಾರ್ದಂ ಚಂದ್ರನಪರವೇಲಾವನಮಂ   ೧೬೧

ಇನಿಸುಂ ನಿಲಲಾಱದೆ ಕಾ
ಮಿನಿಯರ ಕಣೋತ್ಪಲಪ್ರಹಾರದ ನಿಸ್ತೇ
ಜನದಿಂ ತನುವಾದಂತಿರೆ
ತನುವಾದುವು ಕೂಡೆ ಸೆಜ್ಜೆವನೆಗಳ ಸೊಡರ್ಗಳ್        ೧೬೨

ಬೆಳಗಾಯ್ತೆಂಬೊಂದೞಲ
ಗ್ಗಳಿಸಲ್ ಪೊಸವೇಟಕಾರ್ತಿಯರ ಬಿಸುಸುಯ್ಯೊಳ್
ಬೆಳಗಿದುದೆಂಬಿನಮಾ
ಗಳದೇಂ ಕೊರಗಿದದೊ ಕುಮುದಿನೀವಿಸ್ತಾರಂ            ೧೬೩

ಬಗೆಯದೆ ವಿರಹಿಗಳಂ ಮಿಗೆ
ತೆಗೆದೆಚ್ಚು ಬೞಲ್ದ ಮಧುಸಖನ ಸುಯ್ಯೆಲರ್ವೊಲ್
ಸೊಗಯಿಸಿ ಪೊತ್ತಲರ್ಗಂಪಂ
ನೆಗೆದು ತಣ್ಣೆಲರದಿನಿಸು ತೀಡಿತ್ತಾಗಳ್          ೧೬೪

ಅರಸನನೀಕ್ಷಿಸಿ ಮದನಾ
ತುರೆಯಾದಂತಿರುಳೊಳಾವಗಂ ಕುಮುದದೊಳಾ
ದರದೊಳಿರಲ್ಕವು ಕೊರಗಲ್
ಸಿರಿ ಪಂಕಜದಲ್ಲಿ ಮೆಯ್ಯನಿಕ್ಕಿದಳಾಗಳ್       ೧೬೫

ವ|| ತದನಂತರಂ

ಅದೆ ಜಕ್ಕವಕ್ಕಿಗಳ ಹೃದ
ಯದ ರಾಗಂ ಪುದಿದುದೆನಿಸಿ ಕೆಂಪಂ ಕೆಯ್ಕೊಂ
ಡುದಯಾದ್ರಿಯಿಂದಮುದಯಿಸಿ
ದುದು ಬಿಂಬಂ ಚಕ್ರವಾಕಚಕೇಶ್ವರನಾ          ೧೬೬

ಮೊದಲಿದ್ದ ಸ್ಥಳದಲ್ಲೆ ಯುವರಾಜನಿದ್ದು ಕಾದಂಬರೀದೇವಿಯ ನಿರಹಂಕಾರತೆಯನ್ನೂ ಮಹಾಶ್ವೇತೆಯ ಅಕಾರಣಮಮತೆಯನ್ನೂ ಮದಲೇಖೆಯ ಒಳ್ಳೆಯತನವನ್ನೂ ಪರಿಜನರ ಉದಾರಸ್ವಭಾವವನ್ನೂ ಗಂಧರ್ವಲೋಕದ ಸಮೃದ್ಧಿಯನ್ನೂ ಕಿಂಪುರುಷವರ್ಷದ ರಮಣೀಯತೆಯನ್ನೂ ಮನಸ್ಸಿನಲ್ಲೇ ಆಲೋಚಿಸುತ್ತಿರಲಾಗಿ, ೧೬೧. ಚಂದ್ರನು ರಾತ್ರಿ ಒಂದೇ ಸಮನೆ ಕಾದಂಬರಿಯನ್ನೇ ನೋಡುತ್ತಿದ್ದು ತೂಕಡಿಕೆ ಬರಲಾಗಿ ನಿದ್ರೆ ಮಾಡಬೇಕೆಂಬ ತವಕದಿಂದ ಹಾಸಿಗೆಯನ್ನು ಸೇರುವಂತೆ ಪಶ್ಚಿಮ ಸಮುದ್ರತೀರದ ಕಾಡನ್ನು ಸೇರಿದನು. ೧೬೨. ಕಾಮಿನಿಯರು ರಾತ್ರಿ ತಮ್ಮಕಿವಿಯ ಆಭರಣವಾದ ಕನ್ನೆ ದಿಲೆಯಿಂದ ಹೊಡೆಯಲು ತೇಜೋಭಂಗವಾದುದರಿಂದ ಸ್ವಲ್ಪವೂ ತಡೆದುಕೊಳ್ಳಲಾರದೆ ಕೃಶವಾದಂತೆ ಶಯನಗೃಹದ ದೀಪಗಳು ಸಣ್ಣಗಾದುವು. ೧೬೩. ಅಯ್ಯೋ, ಬೆಳಗಾಗಿ ಹೋಯಿತಲ್ಲ ಎಂದು ಅಳಲು ಹೆಚ್ಚಾಗಲು ಹೊಸದಾಗಿ ದಾಂಪತ್ಯಸುಖಕ್ಕೆ ಕಾಲಿಟ್ಟ ಕಾಮಿನಿಯರು ಬಿಸಿ ನಿಟ್ಟುಸಿರುಬಿಡುತ್ತಿರಲು ಅದರಿಂದ ಆವರಿಸಲ್ಪಟ್ಟಂತೆ ಕನ್ನೆ ದಿಲೆಗಳ ಗುಂಪು ಬಾಡಿತು. ೧೬೪. ಸ್ವಲ್ಪವೂ ಯೋಚಿಸದೆ ವಿರಹಿಗಳ ಮೇಲೆ ಹೆಚ್ಚಾಗಿ ಬಾಣಗಳನ್ನು ಬಿಟ್ಟು ಬಿಟ್ಟು ಆಯಾಸಗೊಂಡ ಮನ್ಮಥನ ನಿಟ್ಟುಸಿರಿನಂತೆ ಅಂದವಾದ ಹೂವಿನ ವಾಸನೆಯನ್ನು ಧರಿಸಿವ್ಯಾಪಿಸಿ ತಂಗಾಳಿಯು ಸಣ್ಣನಾಗಿ ಬೀಸುತ್ತಿತ್ತು.

೧೬೫. ಚಂದ್ರಾಪೀಡನನ್ನು ನೋಡಿ ಕಾಮಪೀಡಿತಳಾದ ಲಕ್ಷಿ ಯು ವಿರಹತಾಪವನ್ನು ತಂಪಿಸಿಕೊಳ್ಳಲು ರಾತ್ರಿಯೆಲ್ಲಾ ಕನ್ನೆ ದಿಲೆಯಲ್ಲಿ ಆಸಕ್ತಿಯಿಂದಿದ್ದು ಈಗ ಅವು ಬಾಡಿಹೋಗಲು ಕಮಲಕ್ಕೆ ಬಂದು ಸೇರಿದಳು. ವ|| ಆಮೇಲೆ ೧೬೬. ರಾತ್ರಿಯಲ್ಲೆಲ್ಲಾ ಚಕ್ರವಾಕಪಕ್ಷಿಗಳು

ವ|| ಆಗಳ್ ಚಂದ್ರಾಪೀಡಂ ಪ್ರಕ್ಷಾಳಿತಮುಖಕಮಲನುಂ ಕೃತಸಂಧ್ಯಾವಂದನನುಂ ಗೃಹೀತತಾಂಬೂಲನುವಾಗಿ ಕೇಯೂರಕ ಕಾಂಬರಿಯೆಲ್ಲಿ ರ್ದಳುಪ್ಪವಡಿಸಿದಳಿಲ್ಲೆಂಬುದಂ ನೋಡಿ ಬಂದ ಱಪುವುದೆಂಬುದುಮವಂ ಪೋಗಿಬಂದು ದೇವ ಮಂದರಪ್ರಾಸಾದದ ಕೆಳಗಣ ಸೌಧತಳವೇದಿಕೆಯೊಳ್ ಮಹಾಶ್ವೇತೆವೆರಸಿರ್ದಪಳ್ ಎಂದು ಬಿನ್ನಪಂಗೆಯ್ಯಲೊಡಂ ಗಂಧರ್ವ ರಾಜನಂದನೆಯಲ್ಲಿಗೆ ಬರ್ಪನ್ನೆಗಮನೇಕ ಪರಿವ್ರಾಜಿಕಾಸಮಾಜಂ ಸುತ್ತಮೋಲಗಿಸುತ್ತಿರಲಂತ ಪುರಾಭ್ಯರ್ಹಿತರೊಳಾದರಂಬೆರಸು ಸಂಭಾಷಿಸುತ್ತಂ ಸೌಧತಳವೇದಿಕೆಯೊಳ್ ಗಂಧರ್ವರಾಜ ಬಾಂಧವವೃದ್ಧರಂ ವೇತ್ರಾಸನಾದಿ ದಾನದಿಂ ಸನ್ಮಾನಿಸುತ್ತಮಿರ್ದ ಮಹಾಶ್ವೇತೆಯ ಪೆಱಗೆ