ಎರಡುಂ ಬಂಚಂಗಳಿಂದಿಂಚರಮೊಸರ್ವಿನೆಗಂ ಕಿನ್ನರದ್ವಂದ್ವಮೊತ್ತು
ತ್ತಿರೆ ನಾನಾ ಭಂಗಿಂಯಿಂ ನಾರದತನಯೆ ನಯಂಬೆತ್ತುದೆಂಬಂತೆ ಪಾಡು
ತ್ತಿರೆ ಪುಣ್ಯೋಪೇತಮಂ ಭಾರತಮನೆಸೆವ ಪೌರಾಣಿಕರ್ ಪಕ್ಕದೋದು
ತ್ತಿರೆ ಕೇಳುತ್ತಿರ್ದ ಕಾದಂಬರಿಯನವನಿಪಂ ದೂರದೊಳ್ ಕಂಡನಾಗಳ್   ೧೬೭

ವ|| ಅಂತು ಬಂದು

ಲಲನೆಯ ವಕ್ತ್ರಕಾಂತಿ ದೊರೆಕೊಳ್ಗೆನಗೆಂದಮೃತಾಂಶು ಭಕ್ತಿಯಿಂ
ಬಲವರುತಿರ್ದನೋ ಪಿರಿದುಮೆಂಬಿನೆಗಂ ನವಕರ್ಣಪೂರದೊಂ
ದಲೆದ ಶಿರೀಷಮಂಜರಿಯನೀಕ್ಷಿಸಿ ಪಾವಸೆಗೆತ್ತು ತೃಷ್ಣೆಯಿಂ
ಬಲವರುತಿರ್ದುದಂಗನೆಯನುನ್ಮುಖ ಬಾಲಮರಾಳಮಂಡಳಂ ೧೬೮

ಪೊಳೆವ ಸುಲಿಪಲ್ಲ ನುಣ್ಬೆಳ
ಗೆಳಸಿದ ತಾಂಬೂಲಬದ್ಧ ಕೃಷ್ಣಿಕೆಯಿಂ ಕ
ಣ್ಗೊಳಿಪ ನಿಜಾಧರಮಂ ಕೋ
ಮಳೆ ನೋಡುತ್ತಿರ್ದಳಮಳಮಣಿದರ್ಪಣದೊಳ್         ೧೬೯

ವ|| ಅಂತಿರ್ದಳನೆಯ್ದೆವಂದು ಸುಧಾವೇದಿಕೆಯೊಳಿಕ್ಕಿದಾಸನಮನಲಂಕರಿಸಿ ಕಿಱದು ಬೇಗಮಿರ್ದು ಮಹಾಶ್ವೇತೆಯಂ ಮಂದಸ್ಮಿತವದನನಾಗಿ ನೋೞ್ಪುದುಂ ವಿದಿತಾಭಿಪ್ರಾಯೆಯಾಗಿ ಕಾದಂಬರಿಯನಿಂತೆಂದಳ್

ತಮ್ಮ ಹೃದಯದಲ್ಲಿ ಸೂರ್ಯನನ್ನೇ ನೆನೆಸಿಕೊಳ್ಳುತ್ತಿದ್ದುವು. ಇದರಿಂದ ಸೂರ್ಯನು ಅವುಗಳ ಹೃದಯ ಇದ್ದಂತಾಯಿತು. ಇದರಿಂದ ಚಕ್ರವಾಕಪಕ್ಷಿಗಳ ಹೃದಯದಲ್ಲಿದ್ದ ರಾಗವು (ಕೆಂಪು, ಅನುರಾಗ) ಅಂಟಿಕೊಂಡಿದೆಯೊ ಎಂಬಂತೆ ಕೆಂಬಣ್ಣವನ್ನು ತಾಳಿದ ಜಗನ್ಮಂಡಲಾಪತಿಯಾದ ಸೂರ್ಯನ ಬಿಂಬವು ಉದಯಪರ್ವತದಿಂದ ಉದಯಿಸಿತು. ವ|| ಆಗ ಚಂದ್ರಾಪೀಡನು ಮುಖವನ್ನು ತೊಳೆದುಕೊಂಡು ಸಂಧ್ಯಾವಂದನೆಯನ್ನು ಮಾಡಿ, ವೀಳೆಯವನ್ನು ಮೆದ್ದು “ಕೇಯೂರಕ, ಕಾದಂಬರಿಯು ಎಲ್ಲಿದ್ದಾಳೆ? ಎದ್ದಿದ್ದಾಳೋ ಇಲ್ಲವೋ? ಎಂಬುದನ್ನು ನೋಡಿಕೊಂಡು ಬಂದು ನನಗೆ ತಿಳಿಸು” ಎಂದು ಹೇಳಿದನು. ಅವನು ಹೋಗಿ “ಸ್ವಾಮಿ ಮಂದರಪ್ರಾಸಾದವೆಂಬ ಮಹಲಿನ ಕೆಳಭಾಗದ ಸುಣ್ಣ ಬಳಿದು ಶುಭ್ರವಾಗಿರುವ ವೇದಿಕೆಯಲ್ಲಿ ಮಹಾಶ್ವೇತೆಯ ಜೊತೆಯಲ್ಲಿದ್ದಾಳೆ” ಎಂದು ಅರಿಕೆಮಾಡಲು, ಚಂದ್ರಾಪೀಡನು ಕಾದಂಬರಿಯ ಬಳಿಗೆ ಬಂದನು. ಅಲ್ಲಿ ಅನೇಕ ಸಂನ್ಯಾಸಿನಿಯರ ಗುಂಪು ಸುತ್ತುವರಿದಿರಲು ರಾಣೀವಾಸದ ಹಿರಿಯರೊಂದಿಗೆ ಆದರದಿಂದ ಮಾತುಕತೆ ನಡೆಸುತ್ತ ಮಹಲಿನ ಕೆಳಗಣ ಸುಣ್ಣ ಬಳಿದ ಕಟ್ಟೆಯಲ್ಲಿ ಗಂಧರ್ವರಾಜನ ವೃದ್ಧರಾದ ನೆಂಟರಿಷ್ಟರನ್ನು ಬೆತ್ತ ಕುರ್ಚಿಯಲ್ಲಿ ಕುಳ್ಳಿರುವುದೇ ಮೊದಲಾದ ಸತ್ಕಾರಗಳಿಂದ ಮನ್ನಣೆ ಮಾಡುತ್ತಿದ್ದ ಮಹಾಶ್ವೇತೆಯ ಹಿಂಭಾಗದಲ್ಲಿ ೧೬೭. ಕಿನ್ನರದಂಪತಿಗಳು ಎರಡು ಕೊಳಲುಗಳನ್ನು ಮಧುರಸ್ವರವು ಹೊರಡುವಂತೆ ಬಾರಿಸುತ್ತಿರಲು, ನಾರದನ ಸಾಕುಮಗಳಾದ ಭದ್ರೆಯೆಂಬುವಳು ನಾನಾ ರೀತಿಗಳಿಂದ ಮಧುರವಾಗಿ ಹಾಡುತ್ತಿರಲು, ಪಕ್ಕದಲ್ಲಿ ಪುರಾಣಿಕರು ಪುಣ್ಯಕರವಾದ ಮಹಾಭಾರತವನ್ನು ಓದುತ್ತಿರಲು, ಕೇಳುತ್ತಿದ್ದ ಕಾದಂಬರಿಯನ್ನು ಚಂದ್ರಾಪೀಡನು ದೂರದಲ್ಲೆ ಕಂಡನು, ವ|| ಹಾಗೆ ಬಂದು ೧೬೮. ಕಾದಂಬರಿಯು ಕಿವಿಯಲ್ಲಿ ಬಾಗೆ ಹೂವಿನ ಗೊಂಚಲನ್ನು ಧರಿಸಿಕೊಂಡಿದ್ದಳು, ಅದು ಅಲುಗಾಡುತ್ತಿತ್ತು. ಅದನ್ನು ಪಾಚಿಯೆಂದು ತಿಳಿದು ತಿನ್ನಬೇಕೆಂಬ ಆಸೆಯಿಂದ ಮುಖವನ್ನು ಮೇಲಕ್ಕೆತ್ತಿಕೊಂಡಿರುವ ಮರಿಹಂಸಗಳ ಗುಂಪು ಸುತ್ತುವರಿದಿದ್ದುವು. ಅದನ್ನು ನೋಡಿದರೆ ಕಾದಂಬರೀದೇವಿಯ ಮುಖದ ಕಾಂತಿಯು ತನಗೆ ದೊರಕಬೇಕೆಂದು ಚಂದ್ರನು ಭಕ್ತಿಯಿಂದ ಅವಳಿಗೆ ಸರಿಯಾಗಿ ಪ್ರದಕ್ಷಿಣೆ ಮಾಡುತ್ತಿರುವನೋ ಎಂಬಂತೆ ಕಾಣುತ್ತಿತ್ತು. ೧೬೯. ಆ ಕೋಮಲಾಂಗಿಯು ಹೊಳೆಯುತ್ತಿರುವ ಶುಭ್ರವಾದ ಹಲ್ಲಿನ ನಯವಾದ ಕಾಂತಿಯು ವ್ಯಾಪಿಸಿರುವ, ತಾಂಬೂಲಚರ್ವಣದಿಂದ ಉಂಟಾದ ಕಪ್ಪಿನಿಂದ ರಂಜಿಸುವ ತನ್ನ ತುಟಿಯನ್ನು ನಿರ್ಮಲವಾದ ರನ್ನಗನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು. ವ|| ಹಾಗೆ ಇದ್ದ ಅವಳನ್ನು ಸಮೀಪಿಸಿ ಆ ಸುಣ್ಣ ಬಳಿದ ಕಟ್ಟೆಯ ಮೇಲೆ ಹಾಕಿದ ಆಸನವನ್ನು ಅಲಂಕರಿಸಿ ಸ್ವಲ್ಪಕಾಲವಿದ್ದು, ಮಹಾಶ್ವೇತೆಯನ್ನು ಮುಗುಳನಗೆಯಿಂದ ನೋಡಲಾಗಿ, ಅವನ

ಚಂದ್ರಿಕೆಯಿಂದಂ ದ್ರವಿಯಿಪ
ಚಂದ್ರೋಪಲದಂತೆ ನಿನ್ನ ಗುಣಗಣದಿಂದಂ
ಚಂದ್ರಮುಖಿ ನಾಂದನಾಗಿ ನ
ರೇಂದ್ರಂ ನುಡಿಯಲ್ಕಮಱಯದಿರ್ದಪನೀಗಳ್            ೧೭೦

ಅಱಯದೆ ಪೋದೆಡೆಯಂ ಬಿಡ
ದಱಸುತ್ತೆಂತಿರ್ಪನೆನುತಮುಮ್ಮಳದಿಂದಂ
ಪೆಱಗಿರ್ದ ರಾಜಲೋಕಂ
ಮಱುಗದೆ ಮಾಣದು ಕುಮಾರನಂ ಕಾಣ್ಬೆನೆಗಂ          ೧೭೧

ಕಮಲಿನಿಗೆ ಕಮಲಬಂಧುಗೆ
ಕುಮುದಿನಿಗಾ ಕುಮುದಿನೀಶ್ವರಂಗೆಂತೀಗಳ್
ತಮಗಂತಿರ್ಪೆಡೆಗಳ್ ದೂ
ರಮಾದೊಡಂ ಪ್ರೀತಿ ಮಾಣದಾಕಲ್ಪಾಂತಂ   ೧೭೨

ವ|| ಅದಱಂದರಸಂಗೆ ಪೋಗಲ್ವೇೞ್ಕುಮೆಂದು ನುಡಿಯೆ ಕಾದಂಬರಿಯಿಂತೆಂದಳ್

ತವಗಿಂ ಪೆಱತೇಂ ಸ್ವಾ
ನವೆನಿಪ ಪರಿಜನದೊಳೆನ್ನ ಮನದೊಳ್ ಬೇಂ
ಬವಳಾನಲ್ಲಣಮದಱಂ
ದವಕ್ಕ ಮತ್ತಾರ್ಗೆ ಪೇೞ್ದಪಿರೌ         ೧೭೩

ವ|| ಎಂದು ನುಡಿದು ಗಂಧರ್ವಕುಮಾರರಂ ಕರೆದರಸನಂ ಬೀಡಿಂಗೆಯ್ದಿಸಿಮೆಂದು ಪೇೞೆ ವಿದಗ್ಧವಿದ್ಯಾಧರನೆೞ್ದು ಮಹಾಶ್ವೇತೆಗೆ ನಮಸ್ಕಾರಂಗೆಯ್ದು ಕಾದಂಬರಿಗೆ ಕೆಯ್ಗಳಂ ಮುಗಿದು

ಪಿರಿದು ನುಡಿಯೇವುದೆನಗಿಂ
ಪರಿಜನದೊಳಗೊರ್ವನೆಂದು ದೇವಿಯರೆನ್ನಂ
ಪರಿಭಾವಿಪುದೆಂಬಿದನುಸಿ
ರ್ದರಸಂ ಪೊಱಮಟ್ಟನಾಗಳಂತಪುರಮಂ    ೧೭೪

ವ|| ಅಂತು ಪೊಱಮಡೆ

ಬರತೆಗೆದುದೊ ನೃಪನ ಗುಣೋ
ತ್ಕರಮೊನೆ ಕಳುಪಲ್ಕೆ ಕಡೆಯ ಬಾಗಿಲ್ವಾಡಂ
ಬರೆಗಂ ಬಂದುದು ಕಾದಂ
ಬರಿ ಪೊಱತಾಗಖಿಳ ಕನ್ಯಕಾನಿಕುರುಂಬಂ    ೧೭೫

ಇಂಗಿತವನ್ನು ತಿಳಿದುಕೊಂಡ ಮಹಾಶ್ವೇತೆಯು ಕಾದಂಬರಿಯನ್ನು ಕುರಿತು ಹೀಗೆ ಹೇಳಿದಳು. ೧೭೦. “ಎಲೈ ಚಂದ್ರಮುಖಿ, ಬೆಳದಿಂಗಳಿಂದ ದ್ರವಿಸುವ ಚಂದ್ರಕಾಂತಶಿಲೆಯಂತೆ ನಿನ್ನ ಗುಣಗಣದಿಂದ ಕರಗಿದ ಮನಸ್ಸುಳ್ಳ್ಳವನಾಗಿ ಚಂದ್ರಾಪೀಡನು ಈಗ ಮಾತನಾಡಲಾರದವನಾಗಿದ್ದಾನೆ. ೧೭೧. ಹಿಂದಿರುವ ಸಾಮಂತರಾಜರ ಸಮೂಹವು ಇವನು ಹೋಗಿರುವ ಸ್ಥಳವನ್ನು ತಿಳಿಯದೆ ಹುಡುಕುತ್ತ ಏನಾದನೋ ಎಂಬ ದುಗುಡದಿಂದ ಇವನನ್ನು ಕಾಣುವವರೆಗೂ ಸಂತಾಪಗೊಳ್ಳದೆ ಇರುವುದಿಲ್ಲ. ೧೭೨ ತಾವರೆ ಬಳ್ಳಿಗೂ ತಾವರೆಗೆಳೆಯನಾದ ಸೂರ್ಯನಿಗೂ, ನೈದಿಲೆಬಳ್ಳಿಗೂ ನೈದಿಲೆಯೆರೆಯನಾದ ಚಂದ್ರನಿಗೂ ಹೇಗೋ ಹಾಗೆಯೆ ಈಗ ನಿಮ್ಮಿಬ್ಬರಿಗೂ ಈಗಿನ ಸ್ಥಿತಿಯಲ್ಲಿ ದೂರವಾದರೂ ಪ್ರೀತಿ ಮಾತ್ರ ಕಲ್ಪಪರ್ಯಂತ ತಪ್ಪುವುದಿಲ್ಲ” ವ|| ಅದರಿಂದ ಅರಸನು ಹೋಗಬೇಕೆಂದು ಹೇಳಲಾಗಿ ಕಾದಂಬರಿಯು ಹೀಗೆ ಹೇಳಿದಳು. ೧೭೩. “ಚಂದ್ರಾಪೀಡಮಹಾರಾಜನಿಗೆ ಅನವಾಗಿರುವ ಅವನ ಸೇವಕಳಾಗಿರುವ ನನ್ನ ವಿಷಯದಲ್ಲಿ ನಿಮಗೆ ನಾನು ಇನ್ನು ಬೇರೆ ಹೇಳಬೇಕಾದದ್ದೇನಿದೆ? ನನ್ನ ಮನಸ್ಸಿನಲ್ಲಿ ನಾನು ನನಗೂ ಅವನಿಗೂ ಭೇದವನ್ನು ಸ್ವಲ್ಪವೂ ಎಣಿಸತಕ್ಕವಳಲ್ಲ. ಅದರಿಂದ, ಅಕ್ಕ. ಈ ಮಾತನ್ನು ನೀವು ಯಾರಿಗೆ ಹೇಳುತ್ತೀರಿ?” ವ|| ಎಂದು ಹೇಳಿ ಗಂಧರ್ವಕುಮಾರನನ್ನು ಕರೆದು “ಅರಸನನ್ನು ಅವನ ಶಿಬಿರಕ್ಕೆ ಕಳುಹಿಸಿ ಬನ್ನಿ” ಎಂದು ಹೇಳಲಾಗಿ, ನಿಪುಣಾಗ್ರೇಸರನಾದ ಚಂದ್ರಾಪೀಡನು ಎದ್ದು ಮಹಾಶ್ವೇತೆಗೆ ನಮಸ್ಕಾರಮಾಡಿ, ಕಾದಂಬರಿಗೆ ಕೈಮುಗಿದು ೧೭೪. “ನನಗೆ ಇನ್ನು ಹೆಚ್ಚುಮಾತು ಏತಕ್ಕೆ? ದೇವಿಯರು ನನ್ನನ್ನು ನಿಮ್ಮ ಪರಿಜನರಲ್ಲಿ ಒಬ್ಬನೆಂದು ಭಾವಿಸಿಕೊಳ್ಳಬೇಕು” ಎಂದು ಹೇಳಿ ಚಂದ್ರಾಪೀಡನು ಅಂತಪುರದಿಂದ ಹೊರಟನು. ವ|| ಹಾಗೆ ಹೊರಡಲಾಗಿ ೧೭೫. ಚಂದ್ರಾಪೀಡನ ಗುಣಸಮೂಹದಿಂದ ಆಕರ್ಷಿಸಲ್ಪಟ್ಟಂತೆ ಕಾದಂಬರಿಯೊಬ್ಬಳನ್ನು ಬಿಟ್ಟು ಅಂತಪುರದ ಹುಡುಗಿಯರ ಗುಂಪಷ್ಟೂ

ವ|| ಆಗಳಾ ಕನ್ನಿಕೆಯರಂ ಮಗುೞ ಕೇಯೂರಕಂ ಸಾರ್ಚಿದಿಂದ್ರಾಯುಧಮನೇಱ ಗಂಧರ್ವರಾಜಕುಮಾರರೊಡನೆ ಹೇಮಕೂಟದಿಂ ಪೊಱಮಟ್ಟು ಪೋಗುತ್ತಮಿರ್ದು

ಅಗಲಲಸಹ್ಯಮೆಂದು ಪೆಱಗೀಬೞಸಲ್ವಳೆ ಮುಂದೆ ಬಂದಳೀ
ತೆಗೆವೊಡೆ ಚಿತ್ತ್ತದುತ್ಕಲಿಕೆಯಿಂ ನಭಕೀ ನೆಗೆತಂದಳಾಗಳುಂ
ಮೊಗಮನೆ ನೋಡಲೆಂದುರದೊಳೀ ನೆಲಸಿರ್ದಪಳೆಂದೆನುತ್ತಮಾ
ಮೃಗಶಿಶುನೇತ್ರೆಯಂ ಬಿಡದೆ ಭಾವಿಸಿದಂ ನೃಪರೂಪಚಂದ್ರಮಂ           ೧೭೬

ವ|| ಅಂತು ಪೊಗೆವೋಗೆ ಮಹಾಶ್ವೇತಾಶ್ರಮದಚ್ಛೋದಸರೋವರದ ತೀರದೊಳಿಂದ್ರಾಯುಧದ ಪಜ್ಜೆವಿಡಿದು ಬಂದು ಬಿಟ್ಟಿರ್ದ ನಿಜಸ್ಕಂಧಾವಾರಮಂ ಕಂಡಾ ಗಂಧರ್ವ ಕುಮಾರರಂ ಮಗುೞ ಕಟಕಜನಮಾನಂದಮುಮತಿಕೌತುಕಮುಂ ಕಯ್ಗಣ್ಮೆ ತನತನಗೆ ಪೊಡಮಡುತ್ತಿರಲರ ಮನೆಯಂ ಪೊಕ್ಕು ವೈಶಂಪಾಯನನುಂ ಪತ್ರಲೇಖೆಯುಂ ಬೆರಸು ಸಕಲ ರಾಜಲೋಕಮಂ ಮನ್ನಿಸಿ ತನ್ನ ಪೋದ ಬಂದ ವೃತ್ತಾಂತಮೆಲ್ಲಮಂ ಪೇೞುತ್ತಮಾ ಪಗಲಂ ಕಳೆದು

ತರಳಾಕ್ಷಿಯನಾ ಕಾದಂ
ಬರಿಯಂ ರಣರಣಕ ವಿಕಲಹೃದಯದಿನೋರಂ
ತಿರೆ ಚಿಂತಿಸುತ್ತಮಿರ್ದಾ
ಯಿರುಳನದೆಂತಾನುಮವನಿಪಾಲಂ ಕಳೆದಂ             ೧೭೭

ಕಾಜಂಬರಿಯ ಪ್ರಥಮ ಸಂದರ್ಶನ

ಸಮಾಪ್ತ

ಅವನನ್ನು ಕಳುಹಿಸಿಕೊಡುವುದಕ್ಕಾಗಿ ಹೊರಬಾಗಿಲವರೆಗೂ ಬಂದುತ್ತು. ವ|| ಆಗ ಆ ಕನ್ನಿಕೆಯರನ್ನು ಹಿಂದಕ್ಕೆ ಕಳುಹಿಸಿ, ಕೇಯೂರಕನು ತಂದು ನಿಲ್ಲಿಸಿದ ಇಂದ್ರಾಯುಧವನ್ನು ಹತ್ತಿ ಗಂಧರ್ವರಾಜಕುಮಾರರೊಂದಿಗೆ ಹೇಮಕೂಟದಿಂದ ಹೊರಟುಹೋಗುತ್ತಿದ್ದು ೧೭೬. “ಇಗೋ ಬಿಟ್ಟಿರಲು ಸಾಧ್ಯವೇ ಇಲ್ಲವೆಂದು ನನ್ನನ್ನೇ ಹಿಂಬಾಲಿಸುತ್ತಿದ್ದಾಳೆ. ಇಗೋ, ನನ್ನನ್ನು ಹೋಗಬೇಡವೆಂದು ತಡೆಯುವುದಕ್ಕಾಗಿ ಮುಂದೆ ಬಂದಿದ್ದಾಳೆ. ಇದೋ, ಮನಸ್ಸಿನ ಕುತೂಹಲದಿಂದ ಆಕಾಶಕ್ಕೆ ಹಾರಿ ಬಂದಿದ್ದಾಳೆ. ಯಾವಾಗಲೂ ಮುಖವನ್ನೇ ನೋಡಿಕೊಂಡಿರಬೇಕೆಂದು ವಕ್ಷಸ್ಥಳದಲ್ಲೇ ನೆಲೆಸಿದ್ದಾಳೆ” ಎನ್ನುತ್ತಾ ಎಳೆಯ ಜಿಂಕೆಯಂತೆ ಕಣ್ಣುಳ್ಳ ಕಾದಂಬರಿಯನ್ನು ಚಂದ್ರಾವತಾರನಾದ ಚಂದ್ರಾಪೀಡನು ಚಿಂತಿಸುತ್ತಿದ್ದನು. ವ|| ಹಾಗೆ ಹೋಗುತ್ತಾ ಹೋಗುತ್ತಾ ಮಹಾಶ್ವೇತಾಶ್ರಮದಲ್ಲಿರುವ ಅಚ್ಛೋದ ಸರೋವರದ ದಡದಲ್ಲಿ ಇಂದ್ರಾಯುಧದ ಹೆಜ್ಜೆಯನ್ನು ಅನುಸರಿಸಿ, ಬಂದು ಬೀಡುಬಿಟ್ಟಿದ್ದ ತನ್ನ ಪಾಳಯವನ್ನು ಕಂಡು ಆ ಗಂಧರ್ವಕುಮಾರರನ್ನು ಹಿಂದಕ್ಕೆ ಕಳುಹಿಸಿದನು. ಶಿಬಿರದ ಜನರೆಲ್ಲರೂ ಸಂತೋಷ ಮತ್ತು ಆಶ್ಚರ್ಯವು ಹೆಚ್ಚುತ್ತಿರಲು ತಾವು ತಾವಾಗಿ ನಮಸ್ಕರಿಸುತ್ತಿದ್ದರು. ಬಳಿಕ ಬಿಡದಿಯನ್ನು ಸೇರಿ ವೈಶಂಪಾಯಮ ಮತ್ತು ಪತ್ರಲೇಖೆಯೊಂದಿಗೆ ಕೂಡಿಕೊಂಡು ಸಾಮಂತರಾಜರನ್ನು ಗೌರವಿಸಿ, ತಾನು ಹೋಗಿ ಬಂದ ವೃತ್ತಾಂತವೆಲ್ಲವನ್ನೂ ಹೇಳುತ್ತಾ ಆ ಹಗಲನ್ನು ಕಳೆದನು. ೧೭೭. ಚಂದ್ರಾಪೀಡನು ಚಂಚಲನೇತ್ರೆಯಾದ ಕಾದಂಬರಿಯನ್ನು ವಿರಹವ್ಯಥೆಯಿಂದ ಬೇಸತ್ತ ಮನಸ್ಸಿನಿಂದ ಒಂದೇ ಸಮನೆ ಚಿಂತಿಸುತ್ತಾ ಆ ರಾತ್ರಿಯನ್ನು ಹೇಗೋ ಕಳೆದನು.

ಕಾದಂಬರಿಯ ಪ್ರಥಮ ಸಂದರ್ಶನ

ಮುಗಿಯಿತು