ಮಣಿಮಾಲಾರಂಜಿತ ಭೂ
ಷಣರುಚಿ ರುಚಿರೇಂದ್ರಚಾಪಲತೆಗಳ್ ಗಗನಾಂ
ಗಣದೊಳ್ ಪೊಳೆಯಲ್ ಸುತ್ತಂ
ಕುಣಿವುವು ನಲಿದಾಡಿ ಗೃಹಮಯೂರನಿಕಾಯಂ           ೨೧

ಕಡೆಗಣ್ ಕರ್ಣಾವತಂಸಂ ಕರತಲರುಚಿ ಲೀಲಾರವಿಂದಂ ಕುಚಂ ಕ
ನ್ನಡಿ ಪಾದಾಂಭೋಜರಾಗಂ ಮಿಸುಪಲತೆಗೆ ಮಂದಸ್ಮಿತಂ ಚಂದನಂ ಮೆ
ಲ್ನುಡಿ ವೀಣಾನಾದವಂಗಪ್ರಭೆ ಪೊಸದುಗುಲಂ ಪಕ್ವಬಿಂಬೋಷ್ಠರಾಗಂ
ಕಡುಚೆಲ್ವಾದಂಗರಾಗಂ ಚರಣನಖಮಯೂಖಾಳಿ ಪುಷ್ಪೋಪಹಾರಂ       ೨೨

ಲಲನೆಯರ್ಗಂಗರಾಗಮದು ದುರ್ವಹವಂಶುಕಭಾರವಂಗಸಂ
ಚಲತೆಗೆ ಕಾರಣಂ ಕುಸುಮಮಾಲಿಕೆಯುಂ ಪೊ ಪುಷ್ಪದಾಮ ಮೇ
ಖಲೆ ನಡೆಗಡ್ಡಿ ಕಣ್ಮಲರ್ಗೆ ಕಾಡಿಗೆ ಬಿಣ್ಣಿತು ಪಾದಪಂಕಜ
ಕ್ಕಲತೆಗೆ ಭಾರಮೆಂದೊಡಱಯೆಂ ಪೊಗೞಲ್ ಸುಕುಮಾರವೃತ್ತಿಯಂ      ೨೩

ಹಾರದ ಭಾರಮನದನೇಂ
ಸೈರಿಸುವುದೆ ತನು ಲತಾಂಗಿಯರ್ಕಳ ಕಬರೀ
ಭಾರಕ್ಕಂ ಘನಕುಚಯುಗ
ಭಾರಕ್ಕಂ ಬಳ್ಕಿ ಕರಮೆ ಬಡನಡು ನಡುಗಲ್ ೨೪

ಕಲಲೆಂದತಿಕೌತುಕದಿಂ
ದಲರ್ಗಟ್ಟುವೆಂಬದೊಂದು ಸಾಹಸಮಂತಿ
ರ್ಕಲರಾಯ್ವ ಪದದೊಳೆರಡನೆ
ಯಲರ್ಗಂ ಕೈನೀಡಿ ಸೇದೆವಡುವರ್ ಸತಿಯರ್         ೨೫

ಮುಗುಳ್ನಗೆಯ ಬೆಳಕುಗಳಿಂದ ವಸಂತಕಾಲವು ಉಂಟಾದಂತೆಯೂ, ಅಂಗೈ ಕೆಂಪಿನಿಂದ ಕೆಂದಾವರೆಗಳು ಅರಳಿದಂತೆಯೂ, ಉಗುರುಗಳ ಕಿರಣಗಳಿಂದ ಮನ್ಮಥನ ನೂರಾರು ಆಯುಧಗಳು ಸುರಿಯುವಂತೆಯೂ ಆಗಿದ್ದಿತು. ಆಲ್ಲದೆ ೨೧. ಆ ಲಲನೆಯರು ಧರಿಸಿಕೊಂಡಿದ್ದ ರತ್ನಖಚಿತವಾದ ಒಡವೆಗಳ ಕಾಂತಿಯೆಂಬ ಸುಂದರವಾದ ಕಾಮನಬಿಲ್ಲುಗಳು ಆಕಾಶಪ್ರದೇಶದಲ್ಲಿ ಹೊಳೆಯಲಾಗಿ ಮಳೆ ಬರುವುದೆಂಬ ಹರ್ಷದಿಂದ ಸಾಕುನವಿಲುಗಳ ತಂಡವು ಸುತ್ತಲೂ ನಲಿದಾಡಿ ಕುಣಿಯುತ್ತಿದ್ದುವು. ೨೨. ಆ ಕನ್ನೆವಾಡದಲ್ಲಿ ತರುಣಿಯರ ಕಡೆಗಣ್ಣೆ ಕಿವಿಯೋಲೆಯಾಗಿದ್ದಿತು. ಅಂಗೈಕಾಂತಿಯೇ ವಿನೋದಕ್ಕಾಗಿ ಹಿಡಿದುಕೊಳ್ಳುವ ಕೆಂದಾವರೆಯಾಗಿದ್ದಿತು. ಸ್ತನವೆ ಕನ್ನಡಿಯಾಗಿದ್ದಿತು. ಅಡಿದಾವರೆಯ ಕೆಂಪೆ ಪ್ರಕಾಶಿಸುವ ಅರಗಿನ ರಸವಾಗಿದ್ದಿತು. ಮಂದಹಾಸವೆ ಚಂದನವಾಗಿದ್ದಿತು. ಅವರ ಮೆಲ್ನುಡಿಯೆ ವೀಣಾಧ್ವನಿಯಾಗಿದ್ದಿತು. ಅವರ ದೇಹಕಾಂತಿಯೆ ಹೊಸ ಪಟ್ಟೆಸೀರೆಯಾಗಿದ್ದಿತು. ತೊಂಡೆಹಣ್ಣಿನಂತಿರುವ ತುಟಿಯ ಕೆಂಪೆ ಬಹಳ ರಮಣೀಯವಾದ ಲೇಪನದ್ರವ್ಯವಾಗಿದ್ದಿತು. ಕಾಲುಗುರುಗಳ ಕಾಂತಿಯ ಸಮೂಹವೇ ನೆಲದ ಮೇಲೆ ಎರಚುವ ಹೂವುಗಳ ಸಮೂಹವಾಗಿದ್ದಿತು. ೨೩. ಅಲ್ಲಿನ ಲಲನೆಯರು ಬಹಳ ಸುಕುಮಾರಿಯರು. ಅದರಿಂದಲೆ ಮೈಗೆ ಲೇಪಿಸಿಕೊಂಡಿರುವ ಸುಗಂಧಲೇಪನವನ್ನು ಕೂಡ ಹೊರುವುದು ಅವರಿಗೆ ಕಷ್ಟಕರವಾಗಿದ್ದಿತು. ಉಟ್ಟುಕೊಂಡಿರುವ ಸೀರೆಯ ತೂಕವೆ ಅಶಕ್ತಿಯಿಂದ ಉಂಟಾದ ದೇಹದ ನಡುಕಕ್ಕೆ ಕಾರಣವಾಗುತ್ತಿತ್ತು! ಹೂವಿನ ಹಾರವು ಕೂಡ ಹೊರೆಯಾಗುತ್ತಿತ್ತು! ಹೂವಿನ ಮಾಲೆಯಿಂದ ಮಾಡಿದ ಸೊಂಟದ ಡಾಬು ಕೂಡ ಭಾರವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು! ಕಣ್ಣಿಗೆ ಕಾಡಿಗೆಯು ಭಾರವಾಗಿತ್ತು! ಅಡಿದಾವರೆಗೆ ಲೇಪಿಸಿಕೊಳ್ಳುವ ಅರಗಿನ ರಸವು ದೊಡ್ಡ ಹೊರೆಯೇ ಆಗುತ್ತಿತ್ತು! ಆದ್ದರಿಂದ ಅವರ ಸೌಕುಮಾರ್ಯವನ್ನು ಹೊಗಳಲು ಸಾಧ್ಯವೇ ಇಲ್ಲ. ೨೪. ಅಲ್ಲಿನ ಬಳ್ಳಿಯಂತೆ ಶರೀರವುಳ್ಳ ಮಹಿಳೆಯರ ಕೇಶಪಾಶಗಳ ಭಾರಕ್ಕೂ ತೋರಮೊಲೆಗಳ ಭಾರಕ್ಕೂ ತೆಳುವಾದ ಸೊಂಟವು ಬಳುಕಿ ಬಹಳವಾಗಿ ನಡುಗುತ್ತಿತ್ತು. ಅಂದಮೇಲೆ ಹಾರದ ಭಾರವನ್ನು ತಾಳಲು ಈ ದೇಹಕ್ಕೆ ಸಾಧ್ಯವೇ? ೨೫. ಅಲ್ಲಿನ ರಮಣಿಯರು

ವ|| ಮತ್ತಮತ್ತಿತ್ತ ಪುಗುತರ್ಪಲ್ಲಿ ಲವಲಿಕೆಯಂ ಕೇತಕೀಧೂಳಿಯೊಳಾಲವಾಲಮಂ ಸಮೆಯಲುಂ ಸಾಗರಿಕೆಯಂ ಗಂಧೋದಕ ಕನಕದೀರ್ಘಿಕೆಗಳೊಳ್ ರನ್ನದ ಮಳಲ್ಗಳಂ ಸುರಿಯಲುಂ ಮೃಣಾಳಿಕೆಯಂ ಕೃತ್ರಿಮಕಮಲಿನಿಯೊಳಾಡುವ ಜಕ್ಕವಕ್ಕಿಗಳ ಮೇಲೆ ಕುಂಕುಮರಜಮಂ ಕೆದಱಲುಂ ಮಕರಿಕೆಯಂ ಗಂಧಪಾತ್ರಂಗಳೊಳ್ ಕರ್ಪೂರರಸಮೂಡಿ ವಾಸಿಸಲುಂ ರಜನಿಕೆಯಂ ತಮಾಲವೀಯನಮರ್ದ ಕತ್ತಲೆಯೊಳ್ ಮಾಣಿಕದ ಸೊಡರ್ಗಳಂ ಬೆಳಗಲುಂ ಕುಮುದಿಕೆಯಂ ಗಿಳಿ ಪಾಯದಂತು ದಾಡಿಮೀಫಲಂಗಳ ಮೇಲೆ ಮುತ್ತಿನ ಝಂಪಾಳಂಗಳಂ ಕವಿಯಲುಂ ನಿಪುಣಿಕೆಯಂ ಮಣಿಸ್ತಂಭಂಗಳೊಳ್ ರಂಜಿಸುವ ಸಾಲಭಂಜಿಕೆಯ ಕುಚಂಗಳೊಳ್ ಕುಂಕುಮರಸದಿಂ ಪತ್ರಭಂಗಂಗಳಂ ಚಿತ್ರಿಸಲುಂ ಉತ್ಪಲಿಕೆಯಂ ಕದಳೀಗೃಹಮರಕತವೇದಿಯಂ ಕಮಲದಳಂಗಳಿಂ ತೊಡೆಯಲುಂ ಕೇಸರಿಕೆಯಂ ವಕುಳಕುಸುಮಮಾಲಾಮಂಟಪಂಗಳಿಂ ಮದಿರಾರಸದಿಂ ಸಿಂಪಿಸಲುಂ ಮಾಲತಿಕೆಯಂ ಕಾಮದೇವಗೃಹದೋಲಗಶಾಲೆಯಂ ಸಿಂಧೂರರೇಣುಗಳಿಂ ಬೆಳರ್ಗೆಂಪಂ ಮಾಡಲುಂ ನಳಿನಿಕೆಯಂ ಭವನಕಲಹಂಸಂಗಳ್ಗೆ ಕಮಲಮಧುರಸವನೆಱ ಯಲುಂ ಕದಳಿಕೆಯಂ ಧಾರಾಗೃಹಕ್ಕೆ ಗೃಹಮಯೂರಂಗಳನೊಯ್ಯಲುಂ ಕಮಲಿನಿಯಂ ಜಕ್ಕವಕ್ಕಿಗಳಂ ಮೃಣಾಳ ಕ್ಷೀರರಸಮಂ ಕುಡಿಯಿಸಲುಂಚೂತಲತಿಕೆಯಂ ಪಂಜರದ ಗಂಡುಕೋಗಿಲೆಗಳ್ಗೆ ಚೂತಾಂಕುರದ ಕುಟುಕನಿಕ್ಕಲುಂ ಪಲ್ಲವಿಕೆಯಂ ಭವಹರಿಣಂಗಳ್ಗೆ ಮರೀಚಪಲ್ಲವದಳಂಗಳಂ ನೀಡಲುಂ ಲವಂಗಿಕೆಯಂ ಚಕೋರಪಂಜರಂಗಳೊಳ್ ಪಿಪ್ಪಲೀತಂಡುಲಂಗಳ ಕುಟುಕಂ ಸೂಸಲುಂ ಮಧುಕರಿಕೆಯಂ ಪೂದೊಡಿಗೆಯಂ ಮಾಡಲುಂ ಮಯೂರಿಕೆಯಂ ಕಿನ್ನರಮಿಥುನಂಗಳಂ ಸಂಗೀತಶಾಲೆಗೆ ಕಳುಪಲುಂ ಕಂದಳಿಕೆಯಂ ಜೀವಂಜೀವಕ ಮಿಥುನಂಗಳಿಂ ಕ್ರೀಡಾಪರ್ವತಮನೇಱಸಲುಂ ಹರಿಣಿಕೆಯಂ ಶುಕಸಾರಿಕೆಗಳನೋದಿಸಲುಂ ಪೆಸರ್ವೆಸರೊಳೆ ಕರೆದು ಪೇೞ್ವ ಮನೋಹರಾಲಾಪಂಗಳಂ ಕೇಳುತ್ತಂ ಪೋಗೆವೋಗೆ

ಒದವಿದ ನಿರ್ಭರಯವ್ವನ
ಮದದಿಂ ಮೆಯ್ಮ ದು ಕಂಭಮೆಂದು ಮಣಿಸ್ತಂ
ಭದ ರುಚಿಯನಲಘುಕುಚಭಾ
ರದೆ ಜೋಲ್ದು ಮಲಂಗಿ ನಗಿಸಿದರ್ ಕೆಳದಿಯರಂ        ೨೬

ಕಲಿತುಕೊಳ್ಳಬೇಕೆಂಬ ಕುತೂಹಲದಿಂದ ಹೂವನ್ನು ಕಟ್ಟಬೇಕೆಂದು ಹೊರಟರೆ ಅದೊಂದು ಸಾಹಸದ ಸಂಗತಿಯೇ ಸರಿ. ಅದಿರಲಿ, ಹೂವನ್ನು ಕೊಯ್ಯುವಾಗ ಹೇಗೋ ಒಂದು ಹೂವನ್ನು ಕೊಯ್ದು ಎರಡನೆಯ ಹೂವನ್ನು ಕೊಯ್ಯಲು ಕೈನೀಡಿದರೂ ಬಹಳ ಆಯಾಸಗೊಳ್ಳುತ್ತಾರೆ. ವ|| ಮತ್ತೆ ಅತ್ತಿತ್ತ ಮುಂದುವರಿಯುತ್ತಿರಲು ಲವಲಿಕೆಯೆಂಬುವಳನ್ನು ಕೇದಗೆಯ ಧೂಳುಗಳಿಂದ ಪಾತಿಯನ್ನು ಮಾಡಲೂ, ಸಾಗರಿಕೆಯನ್ನು ಚಿನ್ನದ ಕಟ್ಟೆ ಕಟ್ಟಿರುವ ಗಂಧೋದಕದ ಬಾವಿಗೆ ರತ್ನದ ಪುಡಿಗಳ ಮರಳನ್ನು ಸುರಿಯುವುದಕ್ಕೂ, ಮೃಣಾಳಿಕೆಯನ್ನು ಅಲ್ಲಿ ಕಟ್ಟಿರುವ (ಕೃತ್ರಿಮ) ತಾವರೆಗೊಳದಲ್ಲಿ ಕ್ರೀಡಿಸುತ್ತಿರುವ ಚಕ್ರವಾಕಪಕ್ಷಿಗಳ ಮೇಲೆ ಕುಂಕುಮದ ಪುಡಿಯನ್ನು ಉದುರಿಸುವುದಕ್ಕೂ, ಮಕರಿಕೆಯನ್ನು ಗಂಧದ ಪಾತ್ರೆಗೆ ಕರ್ಪೂರಮರದ ರಸವನ್ನು ಲೇಪಿಸಿವಾಸನೆ ಕಟ್ಟುವುದಕ್ಕೂ ರಜನಿಕೆಯನ್ನು ಕತ್ತಲೆ ಕವಿದಿರುವ ಹೊಂಗೆಮರದ ಸಾಲಿನಲ್ಲಿ ಮಾಣಿಕ್ಯದೀಪಗಳನ್ನು ಬೆಳಗುವುದಕ್ಕೂ, ಕುಮುದಿಕೆಯನ್ನು ಗಿಣಿಗಳು ಎರಗದಂತೆ ದಾಳಿಂಬೆಹಣ್ಣುಗಳ ಮೇಲೆ ಮುತ್ತಿನ ಮುಸುಕನ್ನು ಮುಚ್ಚುವುದಕ್ಕೂ, ನಿಪುಣಿಕೆಯನ್ನು ರತ್ನದ ಕಂಭಗಳ ಮೇಲೆ ರಂಜಿಸುವ ಪುತ್ಥಳಿಗಳ ಕುಚಗಳಲ್ಲಿ ಕುಂಕುಮದ್ರವದಿಂದ ಚಿತ್ರಗಳನ್ನು ಬರೆಯುವುದಕ್ಕೂ, ಉತ್ಪಲಿಕೆಯನ್ನು ಬಾಳೆಮರದ ಪೊದರಿನಲ್ಲಿರುವ ಪಚ್ಚೆಯ ಜಗಲಿಯನ್ನು ಕಮಲದಳಗಳಿಂದ ಗುಡಿಸುವುದಕ್ಕೂ, ಕೇಸರಿಕೆಯನ್ನು ಕೇಸರಮಾಲಿಕೆಯಿಂದ ಅಲಂಕೃತವಾಗಿರುವ ಮಂಟಪಗಳನ್ನು ಮಧ್ಯದಿಂದ ಸಿಂಪಡಿಸುವಂತೆಯೂ, ಮಾಲತಿಕೆಯನ್ನು ಮನ್ಮಥದೇವಾಲಯದ ಓಲಗಶಾಲೆಯನ್ನು ಚಂದ್ರದ ಪುಡಿಗಳಿಂದ ಪಾಟಲವನ್ನಾಗಿ (ಶ್ವೇತರಕ್ತ) ಮಾಡುವುದಕ್ಕೂ, ನಳಿನಿಕೆಯನ್ನು ಸಾಕಿರುವ ಹಂಸಪಕ್ಷಿಗಳಿಗೆ ತಾವರೆಬಂಡನ್ನು ಕುಡಿಸುವುದಕ್ಕೂ, ಕದಳಿಕೆಯನ್ನು ಸ್ನಾನದ ಮನೆಗೆ ಸಾಕುನವಿಲುಗಳನ್ನು ಒಯ್ಯುವದಕ್ಕೂ, ಕಮಲಿನಿಯನ್ನು ಚಕ್ರವಾಕಪಕ್ಷಿಗಳಿಗೆ ತಾವರೆದಂಟಿನ ರಸವನ್ನು ಕುಡಿಸುವುದಕ್ಕೂ, ಚೂತಲತಿಕೆಯನ್ನು ಪಂಜರದಲ್ಲಿರುವ ಗಂಡುಕೋಗಿಲೆಗಳಿಗೆ ಮಾವಿನ ಚಿಗುರಿನ ಗುಟುಕನ್ನು ಕೊಡುವುದಕ್ಕೂ, ಪಲ್ಲವಿಕೆಯನ್ನು ಸಾಕುಜಿಂಕೆಗಳಿಗೆ ಮೆಣಸಿನ ಚಿಗುರನ್ನು ತಿನ್ನಿಸುವುದಕ್ಕೂ, ಲವಂಗಿಕೆಯನ್ನು ಚಕೋರಪಕ್ಷಿಗಳ ಪಂಜರಗಳಲ್ಲಿ ಹಿಪ್ಪಲಿಬಿತ್ತಗಳ ಕುಟುಕನ್ನು ಎರಚುವುದಕ್ಕೂ, ಮಧುಕರಿಕೆಯನ್ನು ಹೂವಿನಿಂದ ಆಭರಣಗಳನ್ನು ಮಾಡುವುದಕ್ಕೂ, ಮಯೂರಿಕೆಯನ್ನು ಕಿನ್ನರದಂಪತಿಗಳನ್ನು ಸಂಗೀತಶಾಲೆಗೆ ಕಳುಹಿಸುವುದಕ್ಕೂ, ಕಂದಳಿಕೆಯನ್ನು ಚಕೋರದಂಪತಿಗಳನ್ನು ಕ್ರೀಡಾಪರ್ವತಕ್ಕೆ ಹತ್ತಿಸುವುದಕ್ಕೂ, ಹರಿಣಿಕೆಯನ್ನು ಗಿಳಿ ಮತ್ತು ಮೈನಾಹಕ್ಕಿಗಳಿಗೆ ಮಾತು ಕಲಿಸುವುದಕ್ಕೂ ಹೆಸರಿಸಿ ಕರೆದು ಹೇಳುವ ಮನೋಹರವಾದ ಮಾತುಗಳನ್ನು ಕೇಳುತ್ತಾ

ಮುಂದೆ ಹೋಗುತ್ತಿರಲಾಗಿ, ೨೬. ಕೆಲವು ಹೆಂಗಸರು ಗಾಢವಾದ ತಾರುಣ್ಯದ ಮದವೇರಲು ಪರವಶರಾಗಿ ರತ್ನದ ಕಂಭಗಳ ಕಾಂತಿಯನ್ನೇ ಕಂಭವೆಂದು ಭ್ರಮಿಸಿ ದೊಡ್ಡದಾದ ಸ್ತನಗಳ ಭಾರದಿಂದ ಬಾಗುತ್ತಾ ತಬ್ಬಿಕೊಂಡು ಗೆಳತಿಯರನ್ನೆಲ್ಲ ನಗಿಸಿದರು.

ಪಳುಕಿನ ಭಿತ್ತಿಯೊಳ್ ಪೊಳೆವುತಿರ್ದ ನಿಜಪ್ರತಿಬಿಂಬದೊಳ್ ಮನಂ
ಗೊಳೆ ನುಡಿದೇಕೆ ಪೇೞೆ ನಗಿಸುವಯ್ ವಸನಾಂಚಲಮೆಂದು ಮೌಕ್ತಿಕಾ
ವಳಿಗಳ ಕಾಂತಿಯಂ ತೆಗೆದಿದೇನೆ ಬೞಲ್ವೆ ಗವಾಕ್ಷರಂಧದೊ
ಳ್ವೆಳಗನಿನಾಂಶುವೆಂದು ಬಗೆದೇಕೆ ಕರಾಬ್ಜಮನಡ್ಡವೊಡ್ಡುವಯ್    ೨೭

ಪಿರಿದುಂ ಬೞಲ್ಕೆಯಿಂ ಚಾ
ಮರಮದು ಕರದಿಂದೆ ನುಣ್ಚೆಯುಂ ನಖಕಿರಣೋ
ತ್ಕರಮನೆ ಚಾಮರಮೆಂದೆಲೆ
ಸರೋಜಮುಖಿ ಬೀಸಿ ನಗಿಸಿದಯ್ ಕೆಳದಿಯರಂ        ೨೮

ವ|| ಎಂದಿವು ಮೊದಲಾಗಿ ಪರಿಹಾಸಜಲ್ಪಿಂತಂಗಳಂ ಕೇಳುತ್ತಂ ಪೋಗಲುಪವನಲತೆಗಳಿಂದುದಿರ್ದಲರಧೂಳಿಯಿಂ ಪುೞಲ್ಗಟ್ಟಿದಂತೆಯುಂ ಕೋಗಿಲೆಗಳೆಡೆವಿಡದುಗುರಮೊನೆಯೊಳಳ್ಲಿಱಯೆ ಸುರಿವ ಸಹಕಾರಫಲರಸದ ಸೋನೆಗಳಿಂದ ದುರ್ದಿನಂ ಮಸಗಿದಂತೆಯುಂ ವಕುಳದ ಮರಂಗಳೆಲರಲೆಪದಿಂ ಕೆದಱದ ಸೀಧುಧಾರಾಪ್ರಸರದಿಂ ತುಂತುರ್ಮಸಗಿದಂತೆಯುಂ ಪೂವಲಿಗೆದರ್ದ ಸಂಪಗೆಯೆಸಳ ಪ್ರಸರದಿಂ ಸುವರ್ಣದ್ವೀಪದಂತೆಯುಂ ಎಡೆಯಾಡುವೆಳವೆಂಡಿರ ಮೆಲ್ಲಡಿಗಳಲತೆಗೆಗಳಿಂ ರಾಗಸಾಗರಂ ಕವಿದಂತೆಯುಂ ಅಂಗರಾಗಾಮೋದಂಗಳಿಂ ಪಾರಿಜಾತಜನ್ಮದಿನಂತೆಯುಂ ತೊಳಗುವ ಮುತ್ತಿನ ತೊಡವುಗಳ ಬೆಳಗುಗಳಿಂ ಬೆಳ್ದಿಂಗಳಾದಂತೆಯುಂ ಕೃಷ್ಣಾಗರುಪತ್ರಭಂಗಂಗಳಿಂ ನೀಲಾಯಮಾನಮುಂ ಕರ್ಣಪೂರಾಶೋಕಪಲ್ಲವಂಗಳಿಂ ಲೋಹಿತಾಯಮಾನಮುಂ ಚಂದನಲೇಪಂಗಳಿಂ ಧವಳಾಯಮಾನಮುಂ ಶಿರೀಷಕುಸುಮಾಭರಣಂಗಳಿಂ ಹರಿತಾಯಮಾನಮುಮಪ್ಪ ಮಾರ್ಗಮಂ ನೋಡುತ್ತೆ ಬರ್ಪನ್ನೆಗಮಲ್ಲಿ

ಎರಡುಂ ಪಕ್ಕದೊಳೋಲಗಕ್ಕೆ ಪದಪಿಂ ಬಂದಿರ್ದ ಕಾಂತಾಜನೋ
ತ್ಕ ರತ್ನಾಭರಣಪ್ರಭಾಪ್ರಸರವಾದಂ ತಳ್ತು ತದ್ವೀಕಾಂ
ತರದೊಳ್ ಪೆರ್ಬೋನಲಂದದಿಂ ಪರಿಯೆ ಕಂಡಂತಾ ಪ್ರಭಾಪೂರದೊಳ್
ಭರದಿಂ ತಾನಿದಿರೀಸುವಂತೆ ನಡೆದಂ ಭೂಪಾಲವಿದ್ಯಾಧರಂ    ೨೯

೨೭. ಎಲೈ ಗೆಳತಿ, ಸಟಿಕದ ಗೋಡೆಯಲ್ಲಿ ಪ್ರತಿಬಿಂಬಿಸಿದ್ದ ತನ್ನ ಪ್ರತಿಬಿಂಬವನ್ನೇ ಬೇರೆ ಹೆಂಗಸೆಂದು ತಿಳಿದುಕೊಂಡು ಚೆನ್ನಾಗಿ ಮಾತನಾಡಿಸಿ ಏಕೆ ಎಲ್ಲರನ್ನೂ ನಗಿಸುತ್ತೀಯೆ? ಮೇಲುಹೊದಿಕೆಯ ಸೆರಗೆಂದು ಭ್ರಮಿಸಿ ಮುತ್ತಿನ ಸರಗಳ ಕಾಂತಿಯನ್ನೇ ಹೊದೆಯಲು ಪ್ರಯತ್ನಪಟ್ಟು ಇದೇಕೆ ಶ್ರಮಪಡುತ್ತಿದ್ದೀಯೆ? ರತ್ನದ ಕಿಟಕಿಗಳ ಜಾಲದಿಂದ ಪ್ರಭೆಯನ್ನೇ ಸೂರ್ಯನ ಬಿಸಿಲೆಂದು ಭ್ರಮಿಸಿ ನಿನ್ನ ಕರಕಮಲವನ್ನು ಅದನ್ನು ತಡೆಯುವುದಕ್ಕಾಗಿ ಏಕೆ ಅಡ್ಡವೊಡ್ಡುತ್ತೀಯೆ? ೨೮. ಎಲೈ ತಾವರೆಯಂತೆ ಮುಖವುಳ್ಳವಳೆ, ಬಹಳ ಹೆಚ್ಚಾದ ಬಳಲಿಕೆಯಿಂದ ಚಾಮರವು ಕೈಯಿಂದ ಜಾರಿಬಿದ್ದರೂ ನಿನ್ನ ಉಗುರುಗಳ ಕಾಂತಿಯನ್ನೇ ಚಾಮರವೆಂದು ಬೀಸಲು ಪ್ರಯತ್ನಿಸುತ್ತ ಏಕೆ ಗೆಳತಿಯರನ್ನು ನಗಿಸುತ್ತಿರುವೆ? ವ|| ಹೀಗೆ ಇವೇ ಮೊದಲಾದ ಹಾಸ್ಯದ ಹರಟೆಗಳನ್ನು ಕೇಳುತ್ತ ಹೋಗುತ್ತಿರಲಾಗಿ ಉದ್ಯಾನವನದ ಬಳ್ಳಿಗಳಿಂದ ಉದುರಿರುವ ಹೂವಿನ ಪುಡಿಗಳಿಂದ, ಮರುಳುಗಳಿಂದ ಕೂಡಿಕೊಂಡಿರುವಂತೆಯೂ, ಕೋಗಿಲೆಗಳು ಒಂದೆ ಸಮನೆ ಉಗುರಿನ ತದಿಗಳಿಂದ ಚುಚ್ಚಲಾಗಿಸುರಿಯುತ್ತಿರುವ ಸಿಹಿಮಾವಿನ ಹಣ್ಣಿನ ರಸದ ಸೋನೆಗಳಿಂದ ಮಳೆಗಾಲದ ದಿನವು ವಿಜೃಂಭಿಸಿದಂತೆಯೂ ಗಾಳಿಯ ಬೀಸುವಿಕೆಯಿಂದ ಹರಡಿರುವ ವಕುಳವೃಕ್ಷದ ಮದ್ಯದ ಧಾರೆಗಳ ಪ್ರಸಾರದಿಂದ ತುಂತುರುಮಳೆಯು ವ್ಯಾಪಿಸಿದಂತೆಯೂ, ಅಲ್ಲಿನ ನೆಲಗಟ್ಟುಗಳಲ್ಲೆಲ್ಲಾ ತಳೆದಿರುವ ಸಂಪಿಗೆಯ ಎಸಳುಗಳ ಹರಡುವಿಕೆಯಿಂದ ಚಿನ್ನದ ನಡುಗಡ್ಡೆಯಂತೆಯೂ, ಓಡಾಡುತ್ತಿರುವ ತರುಣಿಯರ ಮೃದುವಾದ ಕಾಲುಗಳ ಅರಗಿನರಸದ ವ್ಯಾಪನೆಯಿಂದ ಕೆಂಪುಸಮುದ್ರವೇ ಆವರಿಸಿದಂತೆಯೂ, ಸುಗಂಧಲೇಪನದ್ರವ್ಯದ ಸುವಾಸನೆಗಳಿಂದ ಪಾರಿಜಾತವೃಕ್ಷದ ಹುಟ್ಟಿದ ದಿನದಂತೆಯೂ, ಪ್ರಕಾಶಿಸುತ್ತಿರುವ ಮುತ್ತಿನ ಒಡವೆಗಳ ಬೆಳಕಿನಿಂದ ಬೆಳದಿಂಗಳುಂಟಾದಂತೆಯೂ, ಹೆಂಗಸರ ಕೆನ್ನೆ ಮೊದಲಾದೆಡೆಗಳಲ್ಲಿ ಬರೆಯಲ್ಪಟ್ಟಿರುವ ಚಿತ್ರವಿಶೇಷಗಳಿಂದ ನೀಲವರ್ಣವನ್ನು ಪಡೆದಂತೆಯೂ, ಕಿವಿಗೆ ಆಭರಣವಾಗಿ ಮಾಡಿಕೊಂಡಿರುವ ಅಶೋಕದ ಚಿಗುರುಗಳಿಂದ ಕೆಂಬಣ್ಣವನ್ನು ಹೊಂದಿದಂತೆಯೂ, ಚಂದನಲೇಪನಗಳಿಂದ ಬಿಳಿಯ ಬಣ್ಣವನ್ನು ಪಡೆದಂತೆಯೂ, ಬಾಗೆಯ ಹೂವಿನ ಆಭರಣಗಳಿಂದ ಹಸುರುಬಣ್ಣವನ್ನು ಹೊಂದಿದಂತೆಯೂ ಇರುವ ದಾರಿಯನ್ನು ನೋಡುತ್ತಾ ಬರುತ್ತಿರುವಲ್ಲಿ, ಟಿ. “ವಕುಳದ….. ತುಂತುರ್ಮಸಗಿದಂತೆಯು” ಉತ್ತಮಸ್ತ್ರೀಯರು ಮದ್ಯವನ್ನು ಬಾಯಲ್ಲಿಟ್ಟುಕೊಂಡು ಉಗುಳಿದರೆ ವಕುಳವೃಕ್ಷವು ಚಿಗುರುವುದೆಂಬ ಕರಿಸಮಯದಂತೆ ಇಲ್ಲಿನ ವಕುಳವೃಕ್ಷದಲ್ಲಿ ಹೆಂಗಸರು ಉಗುಳಿದ ಮದ್ಯವಿದ್ದು ಅದು ಗಾಳಿಯಿಂದ ಕೆಳಕ್ಕೆ ಉದುರುತ್ತಿತ್ತೆಂದು ಅಭಿಪ್ರಾಯ. ೨೯. ದಾರಿಯ ಇಕ್ಕೆಲದಲ್ಲೂ ಸಡಗರದಿಂದ ಊಳಿಗಕ್ಕೆ ಬರುತ್ತಿರುವ ಮಹಿಳಾಸಮೂಹದ ರತ್ನಾಭರಣದ ಪ್ರಭೆಯ ಪ್ರಸಾರವು ಒಟ್ಟುಗೂಡಿ, ಆ ದಾರಿಯ ಮಧ್ಯದಲ್ಲಿ ದೊಡ್ಡ ಪ್ರವಾಹದಂತೆ

ರಾಮಾಭಿರಾಮಮಂ ಜಗ
ತೀಮಂಡನಮಂ ಮಣಿಪ್ರಭಾಪ್ರೇಂಖಿತ ರ
ಥ್ಯಾಮಂಡನಮಂ ಕಂಡಂ
ಶ್ರೀಮಂಟಪಮಂ ವಿಚಿತ್ರ ರತ್ನಾತಪಮಂ       ೩೦

ವ|| ಆ ಮಣಿಮಯಮಂಟಪಮಧ್ಯಭಾಗದೊಳನೇಕ ಕನ್ಯಕಾಪರಿಜನವೃತೆಯಾಗಿ

ಪೊಳೆಯುತ್ತಿರ್ಪ ಮಹಾವರಾಹವದನೋದ್ಯದ್ದಂಷ್ಟ್ರಮಂ ನೆಮ್ಮಿ ನಿಂ
ದಳೊ ಭೂಕಾಂತೆಯೆನಲ್ಕೆ ನೀಲವಸನಪ್ರಚ್ಛನ್ನಪರ್ಯಂಕಮಂ
ಡಳದೊಳ್ ಬೆಳ್ಪೆಸೆದಿರ್ದ ಕೌಳುಡೆಯನೊಂದಂ ನೆಮ್ಮಿ ಕುಳ್ಳಿರ್ದ ಕೋ
ಮಳೆಯಂ ದೂರದೆ ನೋಡಿ ಕಂಡನರಸಂ ಕಾದಂಬರೀದೇವಿಯಂ         ೩೧

ಉರಗನಿಕಾಯ ದಿಕ್ಪತಿನಿಕಾಯ ನಿಲಿಂಪನಿಕಾಯಮೆಲ್ಲಮಾ
ದರದೊಳೆ ತಮ್ಮ ತಮ್ಮನಿಳಯಕ್ಕಿರದೊಯ್ದಪರೊಲ್ದು ಕನ್ನೆಯಂ
ಪಿರಿದುಮೆನಲ್ಕೆ ಹರ್ಮ್ಯಮಣಿಕುಟ್ಟಿಮಭಿತ್ತಿಸಮೂಹಮಂಟಪೋ
ಪರಿಮತಲಂಗಳೊಳ್ ಸೊಗಯಿಸಿರ್ದುದು ರೂಪಮೃತಾಂಶುವಕ್ತ್ರೆಯಾ    ೩೨

ಮಂಡಪದುಪರಿಮತಲದೊಳ್
ಕಂಡರಿಸಿದ ಖಚರಮಂಡಲಂ ಪದೆದಬಲಾ
ಮಂಡಲಮಂ ಗಗನಕ್ಕೊಡ
ಗೊಂಡೊಯ್ದುಪುದೀಗಳೆಂಬಿನಂ ಸೊಗಯಿಸುಗುಂ       ೩೩

ಭುವನತ್ರಯಮಂ ನೋಡ
ಲ್ಕವತರಿಸಿದುದಾಗವೇೞ್ಕುಮೀ ಕಾಂತೆಯನೆಂ
ಬವೊಲೆಸೆದು ತೋಱದುದು ಮಣಿ
ಭವನಾಂತರದೊಳ್ ವಿಚಿತ್ರಚಿತ್ರಪ್ರಕರಂ       ೩೪

ಹೃದಯದೊಳಗಿಟ್ಟುಕೊಂಡುದೊ
ಪದಪಿಂ ಕಾಮಿನಿಯನೆನೆ ಮಣಿಸ್ತಂಭಸಮೂ
ಹದೊಳೆಲ್ಲಮೆಯ್ದೆ ಮಾರ್ತೊಳ
ಗಿದುದಾಗಳ್ ರೂಪು ಚಿತ್ರರಥನಂದನೆಯಾ   ೩೫

ಹರಿಯುತ್ತಿರಲು ಆ ಕಾಂತಿಯ ಪ್ರವಾಹದಲ್ಲಿ ತಾನು ವೇಗದಿಂದ ಈಜಾಡುವಂತೆ ಆ ಚಂದ್ರಾಪೀಡನು ಮುಂದೆ ಹೋದನು.

೩೦. ಅಲ್ಲಿ ಸುಂದರರಮಣಿಯರಿಂದ ಕೂಡಿ ರಮ್ಯವಾಗಿರುವ ಲೋಕಕ್ಕೆ ಅಲಂಕಾರಪ್ರಾಯವಾದ ರತ್ನಗಳ ಪ್ರಭೆಯಿಂದ ತಳತಳಿಸುತ್ತಿರುವ ಆ ಬೀದಿಗೆ ಅಲಂಕಾರಪ್ರಾಯವಾದ ವಿಚಿತ್ರ ರತ್ನಪ್ರಭೆಯಿಂದ ಶೋಭಿಸುವ ಒಂದು ಶೋಭಾಕರವಾದ ಮಹಲನ್ನು ಕಂಡನು. ವ|| ಆ ರತ್ನಮಯವಾದ ಮಹಲಿನ ಮಧ್ಯಭಾಗದಲ್ಲಿ ಅನೇಕ ಕನ್ನಿಕೆಯಿಂದ ಸುತ್ತುವರಿಯಲ್ಪಟ್ಟವಳಾಗಿ, ೩೧. ಹೊಳೆಯುತ್ತಿರುವ ಆದಿವರಾಹನ ಮುಖದಲ್ಲಿ ಮೇಲಕ್ಕೆದ್ದಿರುವ ದಾಡೆಯನ್ನು ಒರಗಿಕೊಂಡು ಭೂದೇವಿಯೇ ನಿಂತಿದ್ದಾಳೋ ಎಂಬಂತೆ ಕಪ್ಪುಬಟ್ಟೆಯನ್ನು ಹೊದಿಸಿರುವ ಮಂಚದಲ್ಲಿ ಶುಭ್ರವಾದ ದಿಂಬೊಂದನ್ನು ಒರಗಿ ಕುಳಿತುಕೊಂಡಿರುವ ಕೋಮಲಾಂಗಿಯಾದ ಕಾದಂಬರೀದೇವಿಯನ್ನು ಚಂದ್ರಾಪೀಡನು ದೂರದಿಂದಲೇ ನೋಡಿದನು. ೩೨. ಆ ಮಂಟಪದ ಕೆಳಗೆ ರತ್ನನಿರ್ಮಿತವಾದ ನೆಲಗಟ್ಟಿನಲ್ಲಿ ಅವಳ ರೂಪವು ಪ್ರತಿಬಿಂಬಿಸಲು ಪಾತಾಳಲೋಕದ ನಾಗರುಗಳೂ, ಸುತ್ತಲೂ ರತ್ನದ ಗೋಡೆಗಳಲ್ಲಿ ಪ್ರತಿಬಿಂಬಿಸಿರಲು, ‘ದಿಕ್ಪಾಲಕರುಗಳೂ, ರತ್ನದ ಮೆಲಾವಣಿಯಲ್ಲಿ ಪ್ರತಿಬಿಂಬಿಸಿರಲು ದೇವತೆಗಳ ಗಡಣವೂ ಈ ಕನ್ಯೆಯನ್ನು ಆದರದಿಂದ ತಮ್ಮ ತಮ್ಮ ಮನೆಗಳಿಗೆ ಬಹುಶ ಬಿಡದೆ ಕರೆದುಕೊಂಡುಹೋಗುತ್ತಿದ್ದಾರೆ ಎಂಬಂತೆ ಆ ಚಂದ್ರಮುಖಿಯಾದ ಕಾದಂಬರಿಯ ಆಕಾರವು ಶೋಭಿಸುತ್ತಿತ್ತು. ೩೩. ಆ ಮಂಟಪದ ಮೇಲುಭಾಗದಲ್ಲಿ ದೇವತೆಗಳ ಗುಂಪನ್ನು ಕೆತ್ತಿದ್ದರು. ಅದು ದೇವತೆಗಳು ಆಸೆಯಿಂದ ಆ ಕಾದಂಬರಿಯನ್ನು ಅಲ್ಲಿರುವ ಮಹಿಳೆಯರೊಂದಿಗೆ ಆಕಾಶಕ್ಕೆ ಈಗ ಎತ್ತಿಕೊಂಡು ಹೋಗುತ್ತಾರೋ ಎಂಬಂತೆ ಶೋಭಿಸುತ್ತಿತ್ತು. ೩೪. ಆ ರತ್ನಮಯವಾದ ಮಹಲಿನಲ್ಲಿ ಜಗತ್ತಿನ ಅನೇಕ ಬಗೆಯ ಸಜೀವ ನಿರ್ಜೀವ ವಸ್ತುಗಳನ್ನೆಲ್ಲ ಚಮತ್ಕಾರವಾಗುವಂತೆ ಚಿತ್ರಿಸಿದ್ದರು. ಇದು ಆ ಕನ್ಯಾರತ್ನವನ್ನು ನೋಡುವುದಕ್ಕಾಗಿ ಮೂರು ಲೋಕವೂ ಇಳಿದು ಬಂದಿರಬೇಕೆಂಬಂತೆ ಕಾಣುತ್ತಿತ್ತು. ೩೫. ಅಲ್ಲಿದ್ದ ರನ್ನಗಂಬಗಳಲ್ಲಿ ಕಾದಂಬರಿಯ ಆಕಾರವು ಪ್ರತಿಬಿಂಬಿಸಿತ್ತು.

ಕೂಡೆ ಮಣಿಭೂಷಣಧ್ವನಿ
ಗಾಡುವ ಸೋಗೆಗಳ ಪರೆದ ಪೀಲಿಯ ಕಣ್ಣಿಂ
ಮಾಡುವೆ ಕನ್ಯಕೆಯಂ ನಡೆ
ನೋಡಲ್ ಕಣ್ದೆದುದೆಂಬಿನಂ ಸೊಗಯಿಸುಗುಂ           ೩೬

ರಮಣೀರತ್ನಮನಾಗಳೆ
ಎಮೆಯಿಕ್ಕದೆ ನೋೞ್ಪ ಬಯಕೆಯಿಂ ಪಡೆದರೊ ತಾ
ಮೆಮೆಯಿಕ್ಕದ ಕಣ್ಗಳನೆನ
ಲೆಮೆಯಿಕ್ಕದೆ ನೋಡುತಿರ್ದುದಬಲಾನೀಕಂ       ೩೭

ಪಿರಿದುಂ ನಖವಿವರದೆ ನೆ
ತ್ತರನೆತ್ತಂ ಕಾರಿದಪುವೊ ಮೆಲ್ಲಡಿಗಳ್ ಬಿ
ತ್ತರಿಸಿದಪುವೊ ವಿದ್ರುಮರಸ
ತರಂಗಿಣಿಯನೆನಿಸಿ ಕೆದಱದುವು ಕೆಂಬೆಳಗಂ             ೩೮

ಚರಣಾಲಕ್ತಕರಾಗಪಾಟಲಿತ ಲಾವಣ್ಯಾಂಬುಧಾರಾಳಿಯೋ
ಚರಣಾಂಭೋರುಹಯುಗ್ಮನಿರ್ಗಳಿತ ರಾಗೋದ್ಯನ್ಮಯೂಖಾಳಿಯೋ
ಚರಣಾಲಕರಣಸುರದ್ರುಚಿರ ಮಾಣಿಕ್ಯಾಂಶುಲೇಖಾಳಿಯೋ
ಪಿರಿದುಂ ತಾನೆನಲೇಂ ಪದಾಂಗುಳಿಗಳೊಪ್ಪಂಬೆತ್ತುವೋ ಕಾಂತೆಯಾ    ೩೯

ಇಳೆಯಂ ಪೊಸನುಣ್ಬೆಳಗಿನ
ಬಳಗದೆ ಬಾಸಣಿಸುರ್ತಿರ್ದುವಗ್ಗಲಿಸಿ ಧರಾ
ತಳತರಳತಾರಕಾವಳಿ
ಗಳಿವೆನಲಾ ಚಂದ್ರಮುಖಿಯ ಚರಣನಖಂಗಳ್          ೪೦

ಪದೆದಪ್ಪಿದುದೊ ಪೆಱರ್ ನೋ
ಡದಂತು ಮುಸುಕಿದುದೊ ಪುಳಕಮಂ ಸೋಂಕಿಂ ತಾ
ಳ್ದಿದುದೆನೆ ನುಣ್ಗದಿರ್ಗಳಿನೆಸೆ
ದುದು ಮಣಿಮಯ ಕಾಂಚಿ ಜಘನದೊಳ್ ಘನಕುಚೆಯಾ          ೪೧

ಇದು ಅವು ಪ್ರೀತಿಯಿಂದ ಅವಳನ್ನು ತಮ್ಮ ತಮ್ಮ ಹೃದಯದಲ್ಲಿ ಅಡಗಿಸಿಕೊಂಡಿವೆಯೋ ಎಂಬಂತೆ ತೋರುತ್ತಿತ್ತು. ೩೬. ಅಲ್ಲಿನ ಹೆಂಗಸರ ರತ್ನಾಭರಣಧ್ವನಿಯನ್ನು ಕೇಳಿ ಮಹಲಿನ ನವಿಲುಗಳು ಆನಂದದಿಂದ ಜಾಗರವಾಡುತ್ತಿದ್ದುವು. ಆಗ ಬಿಚ್ಚಿದ ನವಿಲುಗರಿಯ ಕಣ್ಣುಗಳು ಆ ಮಹಲು ಕಾದಂಬರಿಯನ್ನು ಚೆನ್ನಾಗಿ ನೋಡಲು ಕಣ್ಣು ತೆರೆದಿದೆಯೋ ಎಂಬಂತೆ ಶೋಭಿಸುತ್ತಿತ್ತು. ೩೭. ಊಳಿಗದ ಹೆಂಗಸರು ಲೋಕೋತ್ತರ ಸುಂದರಿಯಾದ ಆ ಕಾದಂಬರಿಯನ್ನು ನೋಡಬೇಕೆಂಬ ಹೆಬ್ಬಯಕೆಯಿಂದ ತಾವು ರೆಪ್ಪೆ ಹೊಡೆಯದ ಕಣ್ಣುಗಳನ್ನು ಪಡೆದರೋ ಎಂಬಂತೆ ಅವಳನ್ನು ರೆಪ್ಪೆ ಹೊಡೆಯದೆ ನೋಡುತ್ತಿದ್ದರು. ೩೮. ಅವಳ ಮೃದುವಾದ ಕಾಲುಗಳು ಉಗುರಿನ ರಂಧ್ರಗಳಿಂದ ರಕ್ತವನ್ನು ಹೆಚ್ಚಾಗಿ ಸುರಿಸುತ್ತಿವೆಯೋ ಎಂಬಂತೆಯೂ, ಹವಳದ ರಸದ ಹೊಳೆಯನ್ನೇ ಹರಿಸುತ್ತಿವೆಯೋ ಎಂಬಂತೆಯೂ ಕೆಂಬೆಳಗನ್ನು ಹರಡುತ್ತಿದ್ದುವು. ೩೯. ಅವಳ ಕಾಲು ಬೆರಳುಗಳು ಕಾಲಿಗೆ ಬಳಿದುಕೊಂಡಿರುವ ಅರಗಿನ ರಸದ ಕೆಂಪಿನಿಂದ ಕೆಂಪುಬಣ್ಣವನ್ನು ತಳೆದಿರುವ ಲಾವಣ್ಯವೆಂಬ ನೀರಿನ ಧಾರಾಸಮೂಹವೋ ಎಂಬಂತೆಯೂ, ಪಾದಕಮಲದಿಂದ ಹೊರಡುತ್ತಿರುವ ಕೆಂಬಣ್ಣದ ಏರುತ್ತಿರುವ ಕಾಂತಿಗಳ ಸಮೂಹವೋ ಎಂಬಂತೆಯೂ, ಕಾಲಿನ ಆಭರಣಗಳ ಪ್ರಕಾಶಮಾನವಾದ ಹಾಗೂ ರಮ್ಯವಾದ ಮಾಣಿಕ್ಯಮಣಿಯ ಕಾಂತಿಯ ಗುಂಪೋ ಎಂಬಂತೆಯೂ ಬಹಳಮಟ್ಟಿಗೆ ಅಂದವಾಗಿದ್ದುವು. ೪೦. ಆ ಚಂದ್ರಮುಖಿಯ ಕಾಲಿನ ಉಗುರುಗಳು ಭೂಮಿಯನ್ನು ಹೊಸದಾದ ಹಾಗೂ ನುಣಪಾದ ಕಾಂತಿಯ ರಾಶಿಯಿಂದ ಹೆಚ್ಚಾಗಿ ಮುಚ್ಚುತ್ತಿದ್ದುವು. ಮತ್ತು ಅವು ತಳತಳಿಸುವ ಭೂಮಿಗೆ ಇಳಿದುಬಂದಿರುವ ನಕ್ಷತ್ರಗಳ ಸಾಲೋ ಎಂಬಂತೆಯೂ ಕಾಣುತ್ತಿದ್ದುವು. ೪೧. ಆ ತೋರಮೊಲೆಯ ತರುಣಿಯ ಸೊಂಟದಲ್ಲಿರುವ ರತ್ನಮಯವಾದ ಡಾಬು ಸೊಂಟವನ್ನು ಪ್ರೀತಿಯಿಂದ ತಬ್ಬಿಕೊಂಡಿದೆಯೋ ಎಂಬಂತೆಯೂ, ಇತರರು ಅದನ್ನು ನೋಡಿಯಾರೆಂಬ ಅಸೂಯೆಯಿಂದ ಮುಚ್ಚಿದೆಯೋ ಎಂಬಂತೆಯೂ, ಅದರ ಸ್ಪರ್ಶದಿಂದುಂಟಾದ ಸುಖದಿಂದ ರೋಮಾಂಚವನ್ನು ಪಡೆದಿದೆಯೋ