gಬಿಡದಡರಿ ಕೊರ್ಬಿಕುಚಯುಗ
ವೆಡೆಗಿಱದಿರೆ ಮುದ್ದುಮೊಗಮನೆಂದುಂ ನೋಡಲ್
ಪಡೆಯದೆ ಬಡವಾದಂತಿರೆ
ಬಡನಡು ಸೊಗಯಿಸುವುದಾ ಸರೋಜಾನನೆಯಾ      ೪೨

ವಿರಚಿಸಿ ಸುಕುಮಾರತೆಯಂ
ಪಿರಿದುಂ ಬೆರಳಿಂದವಂಟಿ ನೋಡಿದನೋ ಪೇ
ೞರವಿಂದೋದ್ಭವನೆನಲಾ
ತರುಣಿಯ ಗಂಭೀರ ನಾಭಿಮಂಡಲಮೆಸೆಗುಂ            ೪೩

ಅನುರೂಪಮಪ್ಪಿನಂ ತ್ರಿಭು
ವನವಿಜಯಪ್ರಶಸ್ತಿ ವರ್ಣಾವಳಿಯಂ
ಮನಸಿಜನೆ ಬರೆದನೆನಲಾ
ವನಿತೆಯ ನವರೋಮರಾಜಿ ರಂಜಿಸಿ ತೋರ್ಕುಂ       ೪೪

ಮೊಗಸಿದಪುದೆತ್ತಲುಂ ಬಿಗಿ
ದೊಗೆದ ಕುಚಾಭೋಗವೆಂದು ಚುಬುಕಮನಾದಂ
ನೆಗಪಿದಪುವೆಂಬಿನಂ ತ
ಳ್ತೊಗೆದುವು ಘನಕುಚೆಯ ರುಚಿರಹಾರ ಕರಂಗಳ್      ೪೫

ತೊಳಗುವ ಕರ್ಣಾಭರಣಂ
ಗಳನಿೞದ ಮಯೂಖಮಾಲೆ ಲಾವಣ್ಯರಸೋ
ಜ್ವಳ ಮೃದುಮೃಣಾಳಲತೆಯೆನ
ಲೆಳೆಯಳ ನಳಿತೋಳ್ಗಳೇಂ ಮನಂಗೊಳಿಸಿದುವೋ    ೪೬

ಸುರಿದಪುವೊ ರತ್ನವಲಯದ
ಭರದಿಂದೆ ಬೞಲ್ದು ಬೆಮರನೆನಲೆಳವೆಳಗಂ
ಸುರಿವ ನಖನಿಕರದಿಂದಂ
ಕರಮೆಸೆದುವು ಕಮಳಮುಖಿಯ ಕರಕಮಲಂಗಳ್      ೪೭

ಎಂಬಂತೆಯೂ ಲಲಿತಕಾಂತಿಯಿಂದ ಶೋಭಿಸುತ್ತಿತ್ತು. ೪೨. ತಾವರೆಯಂತೆ ಮುಖವುಳ್ಳ ಕಾದಂಬರಿಯ ಸ್ತನಗಳೆರಡೂ ಬಿಡದೆ ಬೆಳೆದು ಕೊಬ್ಬಿ ಇಕ್ಕಟ್ಟಾಗಿ ಸೇರಿ ಇವಳ ಎದೆಯನ್ನೆಲ್ಲಾ ಆಕ್ರಮಿಸಿಕೊಂಡಿರುವುದಿಂದ ಮುದ್ದುಮೊಗವನ್ನು ನೋಡಲು ಎಂದೂ ಅವಕಾಶವಿಲ್ಲವಲ್ಲ ಎಂಬ ಚಿಂತೆಯಿಂದ ಕ್ಷೀಣವಾದಂತಿರುವ ಅವಳ ಕೃಶವಾದ ಸೊಂಟವು ಬಹಳ ಸೊಗಸಾಗಿದ್ದಿತು. ೪೩. ಬ್ರಹ್ಮನು ಸೃಷ್ಟಿಮಾಡುವಾಗ ಬಹಳ ಹೆಚ್ಚಾದ ಕೋಮಲತೆಯನ್ನು ಇವಳಲ್ಲಿ ಸೇರಿಸಿ, ಅದು ಸರಿಯಾಗಿ ಅಳವಟ್ಟಿದೆಯೋ ಇಲ್ಲವೋ ಎಂದು ನೋಡಲು ಬೆರಳಿನಿಂದ ಅದುಮಿ ನೋಡಿದನೋ ಎಂಬಂತೆ ಆ ತರುಣಿಯ ಅಳವಾದ ಹೊಕ್ಕುಳ ಗುಳಿಯು ಶೋಭಿಸಿತು. ೪೪. ಆ ತರುಣಿಯ ಹೊಸದಾಗಿ ಮೂಡುತ್ತಿರುವ ಬಾಸೆಯು ಮನ್ಮಥನು “ಇವಳು ಬಹಳ ಅರ್ಹತೆಯನ್ನು ಪಡೆದಿದ್ದಾಳೆ” ಎಂದು ವಿಜಯಪ್ರಶಸ್ತಿವಾಕ್ಯಗಳನ್ನು ಬರೆದಿರುವನೋ ಎಂಬಂತೆ ರಂಜಿಸುತ್ತಿತ್ತು. ೪೫. ಎದೆಯ ಮೇಲೆ ಗಟ್ಟಿಯಾಗಿ ಮೇಲಕ್ಕೆದ್ದಿರುವ ಇವಳ ದಪ್ಪವಾದ ಸ್ತನಗಳ ಭಾರವು ಮುಖವನ್ನು ತಗ್ಗುವಂತೆ ಮಾಡಿಬಿಟ್ಟಿದೆ, ಇದನ್ನು ಮೇಲಕ್ಕೆತ್ತಬೇಕು ಎಂಬ ಉದ್ದೇಶದಿಂದ ಗಲ್ಲವನ್ನು ಮೇಲಕ್ಕೆ ಎತ್ತುತ್ತಿರುವಂತೆ ತೋರಮೊಲೆಯ ಕಾದಂಬರಿಯ ಸುಂದರವಾದ ಹಾರದ ಕಿರಣಗಳೆಂಬ ಕೈಗಳು ಶೋಭಿಸಿದುವು. ಟಿ. ಯಾರಾದರೂ ಮುಖವನ್ನು ತಗ್ಗಿಸಿಕೊಂಡಿದ್ದರೆ ಅದನ್ನು ಮೇಲಕ್ಕೆ ಎತ್ತಲು ಗಲ್ಲವನ್ನು ಹಿಡಿದು ಎತ್ತುತ್ತಾರೆ. ಕೊರಳಿನಲ್ಲಿರುವ ಹಾರದ ಮೇಲುಮುಖವಾದ ಕಿರಣವನ್ನು ಗಲ್ಲವನ್ನೆತ್ತುವ ಕೈಯೆಂದು ವರ್ಣಸಿದ್ದಾನೆ. ೪೬. ಪ್ರಕಾಶಿಸುತ್ತಿರುವ ಓಲೆಗಳಿಂದ ಕೆಳಮುಖವಾಗಿ ಇಳಿಯುತ್ತಿರುವ ಕಾಂತಿಗಳಂತೆಯೂ ಮತ್ತು ಲಾವಣ್ಯವೆಂಬ ನೀರಿನಲ್ಲಿ ಬೆಳೆದಿರುವ ಶುಭ್ರವಾಗಿಯೂ, ಮೃದುವಾಗಿಯೂ ಇರುವ ತಾವರೆದಂಟಿನಂತೆಯೂ ಇರುವ ಆ ಬಾಲಿಕೆಯ ಕೋಮಲವಾದ ತೋಳುಗಳು ಮನೋಹರವಾಗಿದ್ದುವು. ೪೭. ಆ ಕಮಲಮುಖಿಯಾದ ಕಾದಂಬರಿಯ ಕರಕಮಲಗಳು ಕೋಮಲವಾದ ಕಾಂತಿಯನ್ನು ಸೂಸುತ್ತಿರುವ ಉಗುರುಗಳಿಂದ ಚೆನ್ನಾಗಿ ಶೋಭಿಸುತ್ತಿದ್ದುವು. ಹಾಗೆ ಕಾಂತಿಯನ್ನು ಹೊರಚೆಲ್ಲುವ ಉಗುರುಗಳಿಂದ ಕೂಡಿದ ಕೈ ರತ್ನದ ಬಳೆಗಳ ಭಾರದಿಂದ ಬಳಲಿ ಬೆವರನ್ನು ಸುರಿಸುತ್ತಿರುವಂತೆ

ನವಯವ್ವನ ರಾಗರಸಾ
ರ್ಣವದೊಳ್ ತಳತಳಿಸಿ ಪೊಳೆವುತಿರ್ದುವು ಮುತ್ತುಂ
ಪವಳಮುಮೆನೆ ಕಣ್ಗೊಳಿಪುವು
ಯುವತಿಯ ಸುಲಿಪಲ್ಲುಮೆಸೆವ ಬಿಂಬಾಧರಮುಂ        ೪೮

ಮನಸಿಜಕಾಂತಾ ಪರಿವಾ
ದಿನಿಯ ಕನದ್ರತ್ನಕೋಣಮೋ ಪೇೞಮಿದೆಂ
ಬಿನೆಗಂ ಕಣ್ಗೊಳಿಸಿದುದಾ
ವನರುಹಲೋಚನೆಯ ರುಚಿರ ನಾಸಾವಂಶಂ            ೪೯

ಕಿವಿಗವತಂಸಂ ಪೆಱವೇ
ಕಿವೆ ನೀಳ್ದಪುವೆಂಬಿನಂ ಮುಖಶ್ರೀಗೆ ನಿವಾ
ಸವೆನಿಪ್ಪಿಂಗಡಲೆಂಬುದು
ಕುವಲಯಲೋಚನೆಯ ರುಚಿರ ಲೋಚನಯುಗಳಂ    ೫೦

ಪುದಿದಿರ್ದ ಚೆಲ್ವು ಕಣ್ದೆ
ದುದು ಮನ್ಮಥಗಂಧಸಿಂಧುರಂ ತಿಲಕಿತಮಾ
ದುದೆನಲ್ ಮೃಗಮದತಿಲಕಾಂ
ಕದಿನೆಸೆದುದು ಮಿಱುಪ ಪೆನೊಸಲ್ ಕೋಮಲೆಯಾ    ೫೧

ನಿಮಿರ್ದುವು ಕರ್ಣೊತ್ಪಲದಿಂ
ದಮೆ ಮಧುರಧಾರೆಗಳೆನಿಪ್ಪ ಪಾಲೆಗಳೊಳದೇ
ನಮರ್ದೆಸೆದುದೊ ಮಿಸುಗುವ ಪ
ತ್ರಮಕರ ಮಾಣಿಕ್ಯಕುಂಡಲಂ ಕಾಮಿನಿಯಾ     ೫೨

ಮದಿರಾರಸದಿಂದಂ ಬಾ
ರ್ಚಿದರೋ ಪೇೞೆನಿಸಿ ಪೊಳೆವ ತಲೆದುಡಿಗೆಯ ರ
ನ್ನದಿನೊಸರ್ವ ರಾಗರುಚಿಯಂ
ಪುದಿದೆಸೆದುದು ಕೇಶಪಾಶಮಾ ಕಾಮಿನಿಯಾ            ೫೩

ಒಸೆದೊಲವಿಂದೆ ತನ್ನುರಮನೇಱಸಿದೊರ್ವಳೆ ಲಕ್ಷಿ ಯೆಂಬ ಸಂ
ತಸದೊಳೆ ಬೀಗುವಂಬುರುಹನಾಭನ ಗರ್ವಮನೀಗಳಿಂತೆ ಮಾ
ಣಿಸುವೆನೆನುತ್ತನೇಕ ಶತಲಕ್ಷ ಗಳಂ ಕಮಳಾಯತಾಕ್ಷಿ ಪು
ಟ್ಟಿಸುವವೊಲಿರ್ದಳೊರ್ಮೆಯೆ ನಿಜಪ್ರತಿಬಿಂಬಕದಂಬಕಂಗಳಿಂ   ೫೪

ಶೋಭಿಸುತ್ತಿತ್ತು. ೪೮. ಹೊಸ ಹರೆಯದಲ್ಲಿ ಉಂಟಾಗುವ ಅನುರಾಗವೆಂಬ ಸಮುದ್ರದಲ್ಲಿ ಮುತ್ತುಗಳೂ ಹವಳಗಳೂ ತಳತಳಿಸಿ ಹೊಳೆಯುತ್ತಿರುವುವೋ ಎಂಬಂತೆ ಶೋಭಿಸುವ ಆ ತರುಣಿಯ ಶುಭ್ರವಾದ ಹಲ್ಲುಗಳೂ, ತೊಂಡೆಹಣ್ಣಿನಂತಿರುವ ತುಟಿಗಳೂ ಕಂಗೊಳಿಸುತ್ತಿದ್ದುವು. ೪೯. ಕಮಲದಂತೆ ಕಣ್ಣುಳ್ಳ ಆ ಕಾದಂಬರಿಯ ಸುಂದರವಾದ ಮೂಗು ಮನ್ಮಥನ ಮಡದಿಯಾದ ರತಿದೇವಿಯ ವೀಣೆಯ ರತ್ನಮಯವಾದ ವಾದನದಂಡಮೋ ಎಂಬಂತೆ ಕಂಗೊಳಿಸುತ್ತಿತ್ತು. ೫೦. ಕನ್ನೆ ದಿಲೆಯಂತೆ ಕಣ್ಣುಳ್ಳ ಕಾದಂಬರಿಯ ಸುಂದರವಾದ ಕಣ್ಣುಗಳು “ಕಿವಿಗೆ ಬೇರೆ ಆಭರಣವೇತಕ್ಕೆ? ಇವೇ ನೀಳವಾಗಿ ಕಿವಿಯವರೆಗೂ ವ್ಯಾಪಿಸಿ ಕಿವಿಗೆ ಆಭರಣವಾಗಿವೆಯಲ್ಲ” ಎಂದು ಹೇಳುವಂತೆಯೂ, ಮುಖಕಾಂತಿಯೆಂಬ ಲಕ್ಷಿ ಗೆ ವಾಸಸ್ಥಾನವಾದ ಕ್ಷೀರಸಮುದ್ರವೋ ಎಂಬಂತೆಯೂ ಶೋಭಿಸುತ್ತಿದ್ದುವು. ೫೧. ಕೋಮಲೆಯಾದ ಕಾದಂಬರಿಯ ಪ್ರಕಾಶಿಸುವ ಚಂದ್ರನಂದದ ಹಣೆಯು, ತುಂಬಿದ್ದ ಸೌಂದರ್ಯವು ಕಣ್ಣು ತೆರೆದುಕೊಂಡಿದೆಯೊ! ಎಂಬಂತೆಯೂ, ಮನ್ಮಥನೆಂಬ ಮದ್ದಾನೆಯು ಮದನರೇಖೆಯ ಗುರುತಿನಿಂದ ಕೂಡಿಕೊಂಡಿರುವಂತೆಯೂ ಕಸ್ತೂರೀತಿಲಕದಿಂದ ಶೋಭಿಸುತ್ತಿತ್ತು. ೫೨. ಕಾದಂಬರಿಯ ಪ್ರಕಾಶಿಸುವ ಓಲೆ, ಮಕರಾಭರಣ, ಮಾಣಿಕ್ಯಕುಂಡಲಗಳಿಂದ ಅಲಂಕೃತವಾದ ಕಿವಿಯ ಹೊರಭಾಗವು ಮುಡಿದಿರುವ ಕನ್ನೆ ದಿಲೆಗಳಿಂದ ಕೆಳಕ್ಕೆ ಹರಿಯುತ್ತಿರುವ ಹೂವಿನರಸದ ಧಾರೆಗಳಿಂದ ಕೂಡಿಕೊಂಡಿರುವಂತೆ ಶೋಭಿಸಿತು. ೫೩. ಆ ಸುಂದರಿಯ ಕೇಶಪಾಶವು ತಲೆಯಲ್ಲಿ ಧರಿಸಿಕೊಂಡಿರುವ ಚೂಡಾಮಣಿಯಿಂದ ಹೊರಹೊಮ್ಮುತ್ತಿರುವ ಕೆಂಬೆಳಗಿನಿಂದ ಕೂಡಿಕೊಂಡು ಮದ್ಯರಸವನ್ನು ಹಾಕಿ ಚಾಚಿದ್ದಾರೋ ಎಂಬಂತೆ ಶೋಭಿಸುತ್ತಿತ್ತು. ೫೪. ಲಕ್ಷಿ ಯೊಬ್ಬಳನ್ನು ತನ್ನ ವಕ್ಷಸ್ಥಳದಲ್ಲಿ ಹಿಗ್ಗಿ

ಹರನೊರ್ವಂ ಮನ್ಮಥನುಮ
ನಿರದುರುಪಿದನೆಂದದರ್ಕೆ ಮುಳಿದಂತೆವೊಲೆ
ಲ್ಲರ ಹೃದಯಂಗಳೊಳೋರಂ
ತಿರೆ ಮನ್ಮಥಶತಮನಾಕೆ ಪುಟ್ಟಿಸುತಿರ್ದಳ್   ೫೫

ಎಳವೆಯೊಂದನೆ ತಲೆಯೊಳ್
ತಳೆದನನಿೞಕೆಯ್ಯಲೆಂದು ಲೀಲಾಸ್ಮಿತದಿಂ
ದೆಳವೆ ಯ ಬಳಗಮಂ ಕೋ
ಮಳೆ ದೆಸೆದೆಸೆಗಂದು ಪಸರಿಪಂತೆವೊಲೆಸೆದಳ್        ೫೬

ಪರಿಚಿತ ಚಕ್ರವಾಕಮಿಥುನಂಗಳನೊಯ್ಯನೆ ನಿದ್ರೆಗೆಯ್ಸುವಳ್
ವಿರಹದೆ ನಿದ್ರೆಯಂ ಪಡೆದುವಿಲ್ಲಿರುಳಲ್ಲಿಯುಮಿಂತಿವೆಂದು ತಾ
ವರೆಯ ರಜಂಗಳೆಂಬ ಪೊಸಮುಣ್ಮಳಲಿಂದೆ ಪುೞಲ್ಗಳಂ ಮನೋ
ಹರ ಕೃತಕಪ್ರವಾಹಿನಿಯೊಳಂಗನೆ ಮಾಡಿಸುತಿರ್ದರ್ಥಿಯಿಂ      ೫೭

ವ|| ಮತ್ತಮೆಡೆಯಾಡುವೆಳವೆಂಡಿರ ನೂಪುರದ ನುಣ್ಚರಕ್ಕೆಳಸಿ ಪರಿವ ವಲ್ಲಭಹಂಸನಂ ಮೃಣಾಳಲತೆಯ ಸಂಕಲೆಯೊಳಿಕ್ಕೆಂದು ಹಂಸಪಾಲಿಕೆಯಂ ಬೆಸಸುತ್ತಮಾಭರಣದೊಳಗುರ್ಚಿದ ಪಚ್ಚೆಯ ಪಸರಿಸಿದ ಪಸುರಂ ಪಸುರೆಲೆಗೆತ್ತೆಳಸುವ ವಲ್ಲಭ ಹರಿಣಶಾಬಕಂಗಳ್ಗೆ ಕೆಳದಿಯರ ಕಯ್ಯಲ್ಲಿರ್ದ ಯವಾಂಕುರಂಗಳಂ ನೀಡುತ್ತಂ ದೇವಿ ನೀಂ ನಡಪಿದೆಳಲತೆ ನನೆದೋಱತೆಂದು ಬಿನ್ನವಿಸಿದ ಬಾಲಕಿಯರನಾಭರಣಪ್ರದಾನಾತಿಸನ್ಮಾನಂಗಳಿಂ ಸಂತೋಷಂಬಡಿಸುತಿರ್ದಳಂತುಮಲ್ಲದೆಯುಂ

ನಱುಸುಯ್ಗೆ ತುಂಬಿಗಳ್ ಬಂ
ದೆಱಗೆ ಕರಾಂಬುಜದೆ ಕಮಳಮುಖಿ ಸೋವುತ್ತುಂ
ಮಿಱುಗುವ ನೀಲದ ಬಟ್ಟಿಂ
ತಿಱಕಲ್ಗಳನಾಡುವಂತೆ ಕಣ್ಗೆಸೆದಿರ್ದಳ್         ೫೮

ಪ್ರೀತಿಯಿಂದ ಇಟ್ಟುಕೊಂಡಿರುವೆನೆಂಬ ಸಂತೋಷದಿಂದ ಹೆಮ್ಮೆ ಪಡುತ್ತಿರುವ ಶ್ರೀಮನ್ನಾರಾಯಣನ ಅಹಂಕಾರವನ್ನು ಈಗಲೆ ಅಡಗಿಸುತ್ತೇನೆಂದು ಆ ಕಮಲದಂತೆ ವಿಶಾಲವಾದ ಕಣ್ಣುಳ್ಳ ಕಾದಂಬರಿಯು ಒಮ್ಮೆಲೆ ತನ್ನ ಪ್ರತಿಬಿಂಬಗಳ ಸಮೂಹದಿಂದ ಅನೇಕ ನೂರುಗಟ್ಟಲೆ ಲಕ್ಷಿ ಗಳನ್ನು ಒಟ್ಟಿಗೆ ಹುಟ್ಟಿಸುವಂತೆ ಕಾಣುತ್ತಿದ್ದಳು. ೫೫. ಒಬ್ಬ ಪರಮೇಶ್ವರನು ಸುಮ್ಮನಿರದೆ ಮನ್ಮಥನನ್ನು ಸುಟ್ಟು ಹಾಕಿದುದಕ್ಕೆ ಕೋಪಿಸಿಕೊಂಡು ಆ ಕಾದಂಬರಿಯು ಎಲ್ಲರ ಹೃದಯದಲ್ಲೂ ನೂರಾರು ಮನ್ಮಥರನ್ನು ಒಂದೇ ರೀತಿಯಲ್ಲಿ ಹುಟ್ಟಿಸುತ್ತಿದ್ದಳು. ೫೬. ಒಬ್ಬನೇ ಬಾಲಚಂದ್ರನನ್ನು ತಲೆಯಲ್ಲಿ ಧರಿಸಿರುವ ಚಂದ್ರಶೇಖರನನ್ನು ಕೀಳುಮಾಡಬೇಕೆಂಬ ಆಶಯದಿಂದಲೋ ಎಂಬಂತೆ ಆ ಕೋಮಲೆಯು ತನ್ನ ಬೆಡಗಿನ ನಗೆಯಿಂದ ಬಾಲಚಂದ್ರರ ಗುಂಪನ್ನೇ ದಿಕ್ಕು ದಿಕ್ಕುಗಳಲ್ಲೂ ಹರಡುತ್ತಿರುವಂತೆ ಶೋಭಿಸುತ್ತಿದ್ದಳು. ೫೭. ಇವು ರಾತ್ರಿ ಪರಸ್ಪರ ಅಗಲಿಕೆಯಿಂದ ನಿದ್ರೆಯನ್ನೇ ಮಾಡಿಲ್ಲವಲ್ಲ ಎಂಬ ಕನಿಕರದಿಂದ ಸುಂದರವಾದ ಕ್ರೀಡಾನದಿಯಲ್ಲಿ ತಾವರೆಯ ಹುಡಿಗಳೆಂಬ ಹೊಸದಾದ ಮತ್ತು ನುಣುಪಾದ ಮಳಲುಗಳನ್ನು ಹಾಕಿ ಮಳಲುದಿಣ್ಣೆಯನ್ನು ಏರ್ಪಡಿಸಿ, ಅಲ್ಲಿ ತನಗೆ ಸಲಿಗೆಯಾಗಿರುವ ಚಕ್ರವಾಕದಂಪತಿಗಳನ್ನು ನಿದ್ರೆಮಾಡಿಸುತ್ತಿದ್ದಳು. ವ|| ಮತ್ತು ಓಡಾಡುತ್ತಿರುವ ಕನ್ನೆಯರ ಕಾಲ್ಗಡಗದ ಇಂಪಾದ ಸ್ವರದಿಂದ ಸೆಳೆಯಲ್ಪಟ್ಟು ಅವರ ಹಿಂದೆ ಹಿಂದೆಯೇ ಓಡಾಡುತ್ತಿರುವ ಮುದ್ದಿನ ಹಂಸವನ್ನು ತಾವರೆಯ ಬಳ್ಳಿಯೆಂಬ ಸಂಕೋಲೆಯಿಂದ ಕಟ್ಟಿಹಾಕು ಎಂದು ಹಂಸಗಳನ್ನು ನೋಡಿಕೊಳ್ಳುವ ಊಳಿಗದವಳಿಗೆ ಅಪ್ಪಣೆ ಮಾಡುತ್ತಿದ್ದಳು. ಕನ್ನೆವಾಡದ ಹೆಂಗಸರ ಒಡವೆಗಳಿಂದ ಹೊಮ್ಮುತ್ತಿರುವ ಪಚ್ಚೆಮಣಿಯ ಹರಡುತ್ತಿರುವ ಹಸಿರುಪ್ರಭೆಯನ್ನು ಹಸುರೆಲೆಯೆಂದು ಭ್ರಮಿಸಿ ತಿನ್ನಲು ಆಸೆಪಡುವ ಮುದ್ದಿನ ಮರಿಜಿಂಕೆಗೆ ಕೆಳದಿಯರ ಕೈಯಲ್ಲಿದ್ದ ಯವಧಾನ್ಯದ ಮೊಳಕೆಗಳನ್ನು ತಿನ್ನಿಸುತ್ತಿದ್ದಳು. ಅಮ್ಮ! ನೀವು ನೆಟ್ಟು ಬೆಳೆಸುತ್ತಿದ್ದ ಎಳೆಬಳ್ಳಿಯು ಇಂದು ಹೂ ಬಿಟ್ಟಿದೆ ಎಂದು ಅರಿಕೆ ಮಾಡಿದ ಊಳಿಗದ ಹುಡಿಗಿಯರಿಗೆ ಒಡವೆಗಳನ್ನು ಮೆಚ್ಚುಗೊಟ್ಟು ಸಂತೋಷಪಡಿಸುತ್ತಲೂ ಇದ್ದಳು. ಅದಲ್ಲದೆ ೫೮. ಅವಳ ಸುವಾಸನೆಯಿಂದ ಕೂಡಿದ ಉಸುರಿಗೆ ದುಂಬಿಗಳು ಬಂದು ಮುತ್ತುತ್ತಿದ್ದುವು. ಅವುಗಳನ್ನು ತನ್ನ ತಾವರೆಗೈಯಿಂದ ಓಡಿಸುತ್ತಿದ್ದಳು. ಆಗ ಅವಳು ಹೊಳೆಯುವ ನೀಲಮಣಿಯ ಗೋಲಿಗಳಿಂದ ಆಣೆಕಲ್ಲಾಟವನ್ನು ಆಡುತ್ತಿರುವಂತೆ

ಅರಗಿಳಿಗಳ ರವಮಂ ಪಂ
ಜರದೊಳಗಿರ್ದೊಸಗೆವೇೞ್ದು ಮಾಣಿಸೆನುತ್ತುಂ
ಚರಣಗ್ರಾಹಿಣಿಯಂ ಸುಂ
ದರಿ ಲೀಲಾಂಬುಜದಿಂದ ನಸುನಗುತ್ತಂ ಪೊಯ್ದಳ್      ೫೯

ವ|| ಮತ್ತಂ ಮಹಾಶ್ವೇತೆಯತ್ತಣಿಂ ಬಂದ ನೃಪರೂಪಚಂದ್ರಮನ ರೂಪಾತಿಶಯಗುಣಂಗಳಂ ಬಿನ್ನವಿಸುತಿರ್ದ ಕೇಯೂರಕನ ಮೊಗವಂ ನೋಡಿ

ಬರವಿದು ಚೋದ್ಯಮಾರ ತನಯಂ ಪೆಸರಾವುದು ರೂಪದೆಂತುಟೋ
ಹರೆಯಮದಿನ್ನೆಗಂ ತಡೆದೆ ನೀಂ ನುಡಿಯಾದುದೆ ನಿನ್ನೊಳಾತನೊಳ್
ಪರಿಚಯಮೆಂತು ಸಂಗಳಿಸಿತಿಲ್ಲಿಗೆ ಬಂದಪನೇ ಎನುತ್ತಮಾ
ತರುಣಿ ನಿರಂತರಂ ಬೆಸಗೊಳುತ್ತಿರಲಾ ಮನುಜೇಂದ್ರಚಂದ್ರನಂ            ೬೦

ವ|| ಎಂದು ಮಗುೞೆ ಮಗೞೆ ಬೆಸಗೊಳುತ್ತಿರ್ದ ಗಂಧರ್ವರಾಜನಂದನೆಯನತಿ ದೂರದೊಳ್ ವಿಸ್ಮಿತಾಂತರಂಗನಾಗಿ ನೋಡಿ

ಇವಳಂ ನೋಡಲ್ ಪಡೆದೆ
ನ್ನ ವಿಲೋಚನಮಾವ ನೋಂಪಿಯಂ ನೋಂತುವೊ ಮಾ
ಯ್ದ ವಿಧಾತ್ರನೇಕೆ ವಿರಚಿಸ
ನೊ ವಿಲೋಚನಮಯಮೆನಲ್ ಮದಿಂದ್ರಿಯಚಯಮಂ           ೬೧

ಇವಳಂ ಸಮೆದಂದಬ್ಜೋ
ದ್ಭವಕರಸಂಸ್ಪರ್ಶಖೇದದಿಂದಾದಂ ಸಂ
ಭವಿಸಿದ ಬಾಷ್ಪಾಂಬುಗಳಿಂ
ಕುವಲಯ ಕುಮುದಂಗಳಾದುವಾಗಲೆವೇೞ್ಕುಂ          ೬೨

ಬಗೆಯೊಳ್ ಪಿರಿದುಂ ಕೌತುಕ
ಮೊಗೆಯಲ್ಕನ್ಯೋನ್ಯಮೊಲ್ದು ನೋಡುತ್ತಿರ್ಪ
ನ್ನೆಗಮೊರ್ಮೊದಲಿರ್ವರ ದಿ
ಟ್ಟಿಗಳುಂ ಸಮದಿಟ್ಟಿಯಾದುವಂತಾಕ್ಷಣದೊಳ್           ೬೩

ವ|| ಅಂತು ನೋಡಿ

ಈತಂ ಕೇಯೂರಂ ಪೇ
ೞiತಂ ಪುಗುತರ್ಪನೆಂದೆನುತ್ತಂ ತದ್ರೂ
ಪಾತಿಶಯಕ್ಕಚ್ಚರಿವ
ಟ್ಟಾ ತರುಣಿಯುಮಂತೆ ಬಿಡದೆ ನೋಡುತ್ತಿರ್ದಳ್        ೬೪

ಶೋಭಿಸುತ್ತಿದ್ದಳು. ೫೯. ಪಂಜರದೊಳಗಿರುವ ಅರಗಿಳಿಗಳ ಧ್ವನಿಯನ್ನು ಒಳ್ಳೆಯ ಸುದ್ದಿಯನ್ನು ಅವುಗಳಿಗೆ ತಿಳಿಸಿ ನಿಲ್ಲ್ಲಿಸುವಂತೆ ಮಾಡು ಎಂದು ಹೇಳಿ ನಸುನಗುತ್ತಾ ಕಾಲು ಅಮುಕುವ ಊಳಿಗದವಳನ್ನು ಕಾದಂಬರಿಯು ತನ್ನ ಕೈಯಲ್ಲಿದ್ದ ಕ್ರೀಡಾಕಮಲದಿಂದ ಹೊಡೆದಳು. ವ|| ಮತ್ತು ಮಹಾಶ್ವೇತೆಯ ಕಡೆಯಿಂದ ಬಂದ ರಾಜಕುಮಾರನ ರೂಪಾತಿಶಯವನ್ನೂ ಗುಣಗಳನ್ನೂ ಅರಿಕೆಮಾಡುತ್ತಿದ್ದ ಕೇಯೂರಕನ ಮುಖವನ್ನು ನೋಡಿ ೬೦. “ಅವನ ಬರುವಿಕೆಯು ಆಶ್ಚರ್ಯಕರವಾಗಿದೆ. ಅವನು ಯಾರ ಮಗ? ಅವನ ಹೆಸರೇನು? ಆಕಾರವನ್ನು ನೋಡಿದರೆ ಎಷ್ಟು ವಯಸ್ಸಿನವನಂತೆ ಕಾಣುತ್ತಿದ್ದನು? ಎಷ್ಟು ಕಾಲ ನೀನು ಅಲ್ಲಿದ್ದೆ? ನಿಮ್ಮಬ್ಬರಿಗೂ ಮಾತುಕತೆ ನಡೆಯಿತೆ? ಮಹಾಶ್ವೇತೆಗೆ ಅವನ ಪರಿಚಯವು ಹೇಗೆ ಉಂಟಾಯಿತು? ಇಲ್ಲಿಗೆ ಬರುತ್ತಾನೆಯೆ?” ಇವೇ ಮೊದಲಾದ ಚಂದ್ರಾಪೀಡನಿಗೆ ಸಂಬಂಸಿದ ವಿಷಯಗಳನ್ನು ಕಾದಂಬರಿಯು ಒಂದೇಸಮನೆ ಕೇಳುತ್ತಿದ್ದಳು. ವ|| ಹೀಗೆ ಮತ್ತೆ ಮತ್ತೆ ಕೇಳುತ್ತಿದ್ದ ಗಂಧರ್ವರಾಜಪುತ್ರಿಯಾದ ಕಾದಂಬರಿಯನ್ನು ದೂರದಲ್ಲೆ ಆಶ್ಚರ್ಯದಿಂದ ಕೂಡಿ ನೋಡಿ, ೬೧. ನನ್ನ ಕಣ್ಣು ಈಗ ಇವಳನ್ನು ನೋಡಲು ಯಾವ ತಪಸ್ಸನ್ನು ಮಾಡಿದ್ದಿತೊ? ಕೆಟ್ಟ ಬ್ರಹ್ಮನು ನನ್ನ ಇಂದ್ರಿಯಗಳನ್ನೆಲ್ಲ ಬರಿಯ ಕಣ್ಣುಗಳನ್ನಾಗಿಯೇ ಏತಕ್ಕೆ ಮಾಡಲಿಲ್ಲವೋ? ೬೨. ಬ್ರಹ್ಮನು ಇವಳನ್ನು ಸೃಷ್ಟಿಸುವಾಗ ಅವನ ಕೈಯ ಮುಟ್ಟುವಿಕೆಯಿಂದ ಇವಳಿಗೆ ಬಹಳ ನೋವಾಗಿ ಅದರಿಂದ ಕಣ್ಣೀರು ಬಂದು, ಆ ಕಣ್ಣೀರುಗಳಿಂದಲೇ ಕನ್ನೆ ದಿಲೆ, ಕೆಂದಾವರೆಗಳು ಹುಟ್ಟಿರಬೇಕು! ೬೩. ಮನಸ್ಸಿನಲ್ಲಿ ಬಹಳ ಆಶ್ಚರ್ಯವುಂಟಾಗಲು ಚಂದ್ರಾಪೀಡನೂ ಕಾದಂಬರಿಯೂ ಒಬ್ಬರನ್ನೊಬ್ಬರು ಬಹಳ ಕೂತೂಹಲದಿಂದ ನೋಡುತ್ತಿದ್ದರು. ಆಗ ಏಕಕಾಲದಲ್ಲಿ ಇಬ್ಬರ ದೃಷ್ಟಿಗಳೂ ಒಟ್ಟಿಗೆ ಸೇರಿದುವು.

ವ|| ಹಾಗೆ ನೋಡಿ, ೬೪. ಕೇಯೂರಕನು ಹೇಳಿದ ಪುರುಷನೇ ಬಂದಿರಬೇಕು ಎಂದು ಯೋಚಿಸುತ್ತ ಅವನ ಸೌಂದರ್ಯಾತಿಶಯಕ್ಕೆ