ಒಡವೆ ಪುಳಕಾಂಕುರಂಗಳ್
ಮೊದಲೊಳ್ ಭೂಷಣದ ರವಮೆರಡನೆಯ ಸೂೞ್ ಮು
ನ್ನಿದಿರೇೞೆ ತಾಂ ಬೞಕ್ಕಿರ
ದಿದಿರೆೞ್ದಳ್ ತರಳನಯನೆ ಸಂಭ್ರಮದಿಂದಂ ೬೫

ವ|| ಅನಂತರಮನಂಗಶರಪರವಶತೆಯಿಂ ಬಿಂದು ಬಿಡುವ ಬೆಮರನಿದಿರೆೞ್ದ ಬೞಲ್ಕೆ ಗೇಱಸಿಯುಂ ತೊಡೆ ದಡದಡಿಸೆ ನಡೆಗೆಟ್ಟು ಕಡಲುಲಿಗೆ ಬೞಸಲ್ವ ಕಳಹಂಸಮಂಡಲಕ್ಕಯಶಮಂ ಮಾಡಿಸಿಯುಂ ನಿಡುಸುಯ್ಯೆಲರಿಂ ಮೇಲುದು ತೊಲಗೆ ಚಾಮರದಲರ್ಗೆ ನಿಮಿತ್ತತೆಯನೊಡರ್ಚಿಯಂ ಅಂತಪ್ರವಿಷ್ಟ ಚಂದ್ರಾಪೀಡಸ್ಪರ್ಶಲೋಭದಿಂದಮೆನೆ ಕಡುಪಾರ್ವ ಮೆಲ್ಲೆರ್ದೆಯೊಳ್ ಕಯ್ಯನಿಕ್ಕಿ ಕುಚಯುಗಾಚ್ಛಾದನದ ಮೇಲೆ ನೆವಮಿಕ್ಕಿಯುಂ ನುಡಿಯಲುಜ್ಜುಗಮಂ ಲಜ್ಜೆ ಮಾಣಿಸೆ ಮುಖಸೌರಭಕ್ಕೆಱಗುವ ಮಱದುಂಬಿಯ ಮೇಲೆ ದೂರನುತ್ಪಾದಿಸಿಯುಂ ಕುಸುಮಾಯುಧನಿಸೆ ನೊಂದು ಸೀತ್ಕಾರಮೊಗೆಯೆ ಪೂವಲಿಗೆದಱದ ಪೊಂಗೇದಗೆಯ ಗಱಯ ಕಿಱುಮುಳ್ಗೆ ಬಱದೆ ಬೈಗುಳಂ ಮಾಡಿಯುಂ ಎಡೆವಿಡದೆ ಕೈ ನಡುಗೆ ನೆಲನುಗ್ಗಡಿಪ ಪಡೆಯಱತಿಯರಂ ನಿವಾರಿಸಿದಪ್ಪಳೆನಿಸಿಯುಂ ಇಂತು ಮದನವಿಕೃತಂಗಳಂ ಪಲತೆಱದೆ ಮಯಿಸುತ್ತಿರೆಯೆಂತಾನುಂ ತತ್ಕಾಂತೆಯೊಂದೆರಡಡಿಯನಿಡುವಲ್ಲಿ
ವನಿತಾಮಂಡನ ರತ್ನಕಾಂತಿ ಮಯಾದತ್ತೆಂದು ತದ್ಭೂಷಣ
ಧ್ವನಿ ಸಂಭಾಷಣಮೆಂದು ಕಾಂತೆ ಹೃದಯಾಂತರ್ಲಗ್ನೆ ತಾನಾಗಿರ
ಲ್ಕೆನಗಿನ್ನೇನೊಳಗಾದಳೆಂದೆಸೆವ ದೇಹಚ್ಛಾಯೆ ಮೆಯ್ಪೊರ್ದೆ ಕಾ
ಮಿನಿ ತಳ್ತಪ್ಪಿದಳೀಗಳೆಂದು ಬಗೆದಂ ಭೂಪಾಲವಿದ್ಯಾಧರಂ       ೬೬

ವ|| ಅಂತಾ ಕಾಂತೆಯೆಂತಾನುಂ ಕತಿಪಯಪದಂಗಳಂ ನಡೆದು

ಪಲವು ದಿವಸಕ್ಕೆ ಕಂಡೊಗೆ
ದೊಲವಿಂ ಬಿಗಿಯಪ್ಪಿದಳ್ ಮಹಾಶ್ವೇತೆಯನಾ
ಲಲನೆ ಮಹಾಶ್ವೇತೆಯುಮಾ
ಲಲನೆಯನನುರಾಗದಿಂದಮಪ್ಪಿದಳಾಗಳ್    ೬೭

ಆಶ್ಚರ್ಯಪಟ್ಟು, ಆ ಕಾದಂಬರಿಯೂ ಹಾಗೆಯೆ ಅವನನ್ನು ಬಿಡದೆ ನೋಡುತ್ತಿದ್ದಳು. ೬೫. ಆಗ ಅವಳ ದೇಹದಲ್ಲಿ ಮೊದಲು ರೋಮಾಂಚವು ಎದ್ದಿತು. ಆಮೇಲೆ ಒಡವೆಗಳ ಝಣಝಣಶಬ್ದವು ಎದ್ದಿತು. ಬಳಿಕ ಚಂಚಲವಾದ ಕಣ್ಣುಳ್ಳ ಕಾದಂಬರಿಯು ಸಂಭ್ರಮದಿಂದ ಆಸನವನ್ನು ಬಿಟ್ಟು ಎದ್ದಳು. ವ|| ಆಗ ಅವನನ್ನು ನೋಡಿ ಅವಳಿಗೆ ಹಲವು ಬಗೆಯ ಮದನವಿಕಾರಗಳುಂಟಾದುವು. ಅವುಗಳನ್ನು ಅವಳು ಹಲವು ಬಗೆಗಳಿಂದ ಮುಚ್ಚುತ್ತಿದ್ದಳು. ಹೇಗೆಂದರೆ ಕಾಮಪರವಶತೆಯಿಂದ ಹನಿಹನಿಯಾಗಿ ಹೊರಡುವ ಬೆವರನ್ನು ಆಗಂತುಕನನ್ನು ಸ್ವಾಗತಿಸುವುದಕ್ಕಾಗಿ ಮೇಲಕ್ಕೆ ಎದ್ದ ಆಯಾಸಕ್ಕಾಗಿ ಎಂದು ಆರೋಪಿಸಲಾಯಿತು. ಕಾಮವಿಕಾರದಿಂದ ತೊಡೆ ನಡುಗಲು ನಡಿಗೆಗೆ ಭಯವುಂಟಾಯಿತು. ಕಾಲಂದಿಗೆಯ ಧ್ವನಿಗೆ ಹತ್ತಿರಕ್ಕೆ ಬರುವ ರಾಜಹಂಸಗಳ ಮೇಲೆ ಕೆಟ್ಟ ಹೆಸರನ್ನು ಹೊರಿಸಲಾಯಿತು. ನಿಟ್ಟುಸಿರಿನ ಗಾಳಿಯಿಂದ ಮೇಲುಹೊದಿಕೆಯು ಜಾರಿಬೀಳಲು ಚಾಮರದ ಗಾಳಿಯಿಂದ ಹೀಗಾಯಿತೆಂದು ಕಾರಣವನ್ನೊಡ್ಡಲಾಯಿತು. ಅವಳ ಹೃದಯವನ್ನು ಪ್ರವೇಶಮಾಡಿರುವ ಚಂದ್ರಾಪೀಡನನ್ನು ಮುಟ್ಟಬೇಕೆಂಬ ಆಸೆಯಿಂದಲೋ ಎಂಬಂತೆ ನಡುಗುತ್ತಿರುವ ಎದೆಯ ಮೇಲೆ ಕೈಯಿಟ್ಟು ಸ್ತನಗಳನ್ನು ಮುಚ್ಚುವುದಕ್ಕಾಗಿ ಎಂದು ನೆಪವನ್ನು ಹೇಳಲಾಯಿತು. ಮಾತನಾಡಲು ಮಾಡಿದ ಪ್ರಯತ್ನವನ್ನು ನಾಚಿಕೆಯು ಅಡ್ಡಿಪಡಿಸಲು, ಬಾಯಿಯ ಸುವಾಸನೆಗೆ ಮುತ್ತುವ ಮರಿದುಂಬಿಗಳ ಮೇಲೆ ದೂರು ಹೇರಲಾಯಿತು. ಮನ್ಮಥನು ಬಾಣದಿಂದ ಹೊಡೆಯಲು ಉಂಟಾದ ನೋವಿನಿಂದ ಸೀತ್ಕಾರವುಂಟಾಗಲು ನೆಲದ ಮೇಲೆ ತಳಿದಿರುವ ಹೊಂಗೇದಗೆಯ ಗರಿಯ ಸಣ್ಣ ಮುಳ್ಳುಗಳಿಂದ ನೋವಾಯಿತೆಂದು ಅವನ್ನು ನಿಂದಿಸಲಾಯಿತು. ಒಂದೇಸಮನೆ ಕೈನಡುಗುತ್ತಿರಲು ಅದನ್ನು ಪಾದಾವಧಾನವನ್ನು ಹೇಳುವ ಪ್ರತೀಹಾರಿಯನ್ನು ತಡೆಯುತ್ತಿರುವಂತೆ ನಟಿಸಲಾಯಿತು. ಹೀಗೆ ಆಗ ಉಂಟಾದ ಕಾಮವಿಕಾರವನ್ನು ನಾನಾಬಗೆಯಿಂದ ಮುಚ್ಚುತ್ತಿರಲಾಗಿ ಆ ಕಾದಂಬರಿಯು ಹೇಗೋ ಒಂದೆರಡು ಹೆಜ್ಜೆಗಳನ್ನಿಡುತ್ತಿರುವಲ್ಲಿ. ೬೬. ಚಂದ್ರಾಪೀಡನು ಕಾದಂಬರಿಯ ಮೈಮೇಲಿನ ಒಡವೆಗಳ ಪ್ರಭೆಯನ್ನು ಕಣ್ಣಾರೆ ನೋಡುವುದಕ್ಕೆ ಪ್ರತಿಬಂಧಕವಾದ ತೆರೆಯೆಂದು ಭಾವಿಸಿದನು. ಅವಳ ಒಡವೆಗಳ ಧ್ವನಿಯನ್ನು ಅವಳೊಂದಿಗೆ ಮಾಡುವ ಸಂಭಾಷಣೆಯೆಂದು ಭಾವಿಸಿದನು. ಅವಳು ತನ್ನ ಮನಸ್ಸನ್ನು ಒಳಹೊಕ್ಕಿರುವುದನ್ನೇ ಇನ್ನೇನು ಮದುವೆಯೇ ಆಯಿತೆಂದು ಯೋಚಿಸಿದನು. ಅವಳ ಶರೀರದ ಕಾಂತಿಯು ತನ್ನ ಮೇಲೆ ಬಿದ್ದಿರಲಾಗಿ ಅವಳು ತನ್ನನ್ನು ಈಗ ಗಾಢವಾಗಿ ತಬ್ಬಿಕೊಂಡಳೆಂದೇ ಭಾವಿಸಿದನು! ವ|| ಹಾಗೆ ಆ ರಮಣಿಯು ಹೇಗೋ ಕೆಲವು ಹೆಜ್ಜೆ ನಡೆದು, ೬೭. ಕಾದಂಬರಿಯು

ವ|| ಅನಂತರಂ ಮಹಾಶ್ವೇತೆ ಕಾದಂಬರಿಯನಿಂತೆಂದಳ್ ಚಂದ್ರಾಪೀಡನೆಂಬೀ ಮಹಾನುಭಾವಂ ಭಾರತವರ್ಷದ ರಾಜನುಂ ತುರಗಖುರಮುಖೋಲ್ಲೇಖದತ್ತ ಚತುಸ್ಸಮುದ್ರ ಮುದ್ರನುಂ ಕ್ಷಪಿತ ಪ್ರಜಾಪೀಡನುಮೆನಿಸಿದ ತಾರಾಪೀಡನರೇಂದ್ರಂಗೆ ನಂದನನುಂ ನಿಜಭುಜ ಶಿಲಾಸ್ತಂಭವಿಶ್ರಾಂತ ವಿಶ್ವವಿಶ್ವಂಭರಾಪೀಡನುಮೆನಿಸಿ ದಿಗ್ವಿಜಯಪ್ರಸಂಗದಿಂ ಬೞಸಂದೀ ಪ್ರದೇಶಕ್ಕೆ ಬಂದನಲ್ಲದೆಯುಂ ಪರಿತ್ಯಕ್ತ ಸಕಲಸಂಗೆಯಾಗಿ ಕಲ್ಲೆರ್ದೆಯಳೆನಿಸಿದೆನ್ನಂ ಕಾಣಲೊಡನೆ ಸ್ವಭಾವಸರಳತೆಯನಪ್ಪುಕೆಯ್ದು ನಿಜಗುಣದಿಂ ನಿಷ್ಕಾರಣಬಂಧುವುಂ ನಿರ್ನಿಮಿತ್ತಮಿತ್ತನುಮೆನಿಸಿದನಂತು ಮಲ್ಲದೆಯುಂ

ಒದವಿದ ದಾಕ್ಷಿಣ್ಯಕ್ಕಂ
ವಿದಗ್ಧವೃತ್ತಿಗಮಪಾರಗಾಂಭೀರ್ಯಕ್ಕಂ
ಮೊದಲೆನಿಸಿದ ಸಕಲಗುಣಾ
ಸ್ಪದರಂ ಜಗದೊಳಗೆ ಪಡೆವುದಸದಳಮಲ್ತೇ ೬೮

ವ|| ಅದುಕಾರಣದಿಂ ಪ್ರಜಾಪತಿಯ ರೂಪನಿರ್ಮಾಣಕೌಶಲಮುಮಂ ಎಡೆವಱಯದೆ ನಿಂದ ಲಕ್ಷಿ ಯ ವಿವೇಕಮುಮಂ ವಸುಂಧರೆಯ ಸದ್ಭರ್ತೃತಾಸುಖಮುಮಂ ಮರ್ತ್ಯಲೋಕದ ಸಫಲತೆಯುಮಂ ಕಲಾಕಲಾಪದ ಮೇಳಾಪಕಮುಮಂ ಸೌಭಾಗ್ಯದ ಭಾಗ್ಯಮುಮಂ ಮನುಷ್ಯರ ಗ್ರಾಮ್ಯತೆಯುಮಂ ನೀನುಂ ಕಾಣ್ಬೆಯೆಂದೆಂತಾನುಮಿಲ್ಲಿಗೊಡಗೊಂಡು ಬಂದೆಂ

ಅರಸನನಾಂ ಕಂಡಱಯೆಂ
ಪರಿಚಯಮಿಲ್ಲೆನ್ನೊಳೆಂದು ಮಿಗೆ ತಾಂ ನಾಣ್ಚು
ತ್ತಿರದಿಂದೆನ್ನೊಳದೆಂತಂ
ತಿರೆ ನೀಂ ನೆಗೞ್ವುದು ನಿರಂತರಂ ಕಮಲಮುಖೀ       ೬೯

ವ|| ಎಂದು ಮಹಾಶ್ವೇತೆ ಕಾದಂಬರಿಗಱಪುವುದುಂ ಚಂದ್ರಾಪೀಡನುಂ ಕಯ್ಗಳಂ ಮುಗಿಯೆ ಸರ್ವಾಂಗಪುಳಕಮಂ ತಳೆದು

ಪಿರಿದೊಂದೞ್ಕಱ ಳೊಲ್ದು ನೋೞ್ಪವಳ ದೀರ್ಘಾಪಾಂಗದೇಶಕ್ಕೆ ಚ
ಚ್ಚರಮಾಗಳ್ ಪರಿತಂದ ಸೇದೆಯೊದವಲ್ ಘರ್ಮೊದಬಿಂದೂತ್ಕರಂ
ಸುರಿವುತ್ತಿರ್ಪುದು ಕಣ್ಣಪಾಪೆಗೆಲೆ ನೋಡೆಂಬಂದದಿಂ ಸ್ನೇಹನಿ
ರ್ಭರವಾ ಕಾಂತೆಗೆ ಭೋಂಕೆನಲ್ ಸುರಿದುವಾನಂದಾಶ್ರುಬಿಂದೂತ್ಕರಂ ೭೦

ಮಹಾಶ್ವೇತೆಯನ್ನು ಬಹಳ ದಿನಗಳಾದ ಮೇಲೆ ಭೇಟಿಯಾಗಿರುವುದರಿಂದ ಉಂಟಾಗಿರುವ ಅತಿಶಯಸ್ನೇಹದಿಂದ ಗಟ್ಟಿಯಾಗಿ ತಬ್ಬಿಕೊಂಡಳು. ಮಹಾಶ್ವೇತೆಯೂ ಕೂಡ ಆಗ ಅವಳನ್ನು ಸ್ನೇಹದಿಂದ ತಬ್ಬಿಕೊಂಡಳು. ವ|| ಬಳಿಕ ಮಹಾಶ್ವೇತೆಯು ಕಾದಂಬರಿಯನ್ನು ಕುರಿತು ಹೀಗೆ ಹೇಳಿದಳು: “ಚಂದ್ರಾಪೀಡನೆಂಬ ಈ ಮಹಾನುಭಾವನು ಭಾರತವರ್ಷದ ಮಹಾರಾಜನಾದ, ಕುದುರೆಗಳ ಗೊರಸಿನ ತುದಿಯಿಂದ ನೆಲವನ್ನು ಕೆರೆಯುವಿಕೆಯಿಂದ ನಾಲ್ಕು ಸಮುದ್ರಗಳ ತೀರದಲ್ಲಿ ತನ್ನ ದಿಗ್ವಿಜಯದ ಚಿಹ್ನೆಯನ್ನು ಕೆತ್ತಿರುವ (ನಾಲ್ಕು ಸಮುದ್ರಗಳ ಮಧ್ಯದಲ್ಲಿರುವ ಭೂಮಿಯನ್ನೆಲ್ಲಾ ಗೆದ್ದುಕೊಂಡಿರುವ), ಪ್ರಜೆಗಳ ಕಷ್ಟಗಳನ್ನು ನಿವಾರಿಸುವ ತಾರಾಪೀಡನೆಂಬ ಮಹಾರಾಜನ ಮಗನು. ಅಲ್ಲದೆ ತನ್ನ ಭುಜಗಳೆಂಬ ಕಲ್ಲುಕಂಭದಲ್ಲಿ ಅನಾಯಾಸವಾಗಿ ಇರುವ ಸಮಸ್ತ ಜಗತ್ತೆಂಬ ಆಭರಣವುಳ್ಳವನು (ಅನಾಯಾಸವಾಗಿ ಭೂಮಂಡಲವನ್ನು ಆಳುತ್ತಿರುವವನು). ಇವನು ದಿಗ್ವಿಜಯಪ್ರಸಂಗದಿಂದ ಈ ಸ್ಥಳಕ್ಕೆ ದಯಮಾಡಿಸಿದ್ದಾನೆ. ಅಲ್ಲದೆ ಸರ್ವಸಂಗಪರಿತ್ಯಾಗ ಮಾಡಿರುವ ಕಲ್ಲೆದೆಯವಳಾದ ನನ್ನನ್ನು ಕಂಡಕೂಡಲೆ ನೈಜವಾದ ಸರಳಸ್ವಭಾವವನ್ನು ತಾಳಿ ತನ್ನ ಗುಣಗಳಿಂದ ನನಗೆ ಅಕಾರಣಬಂಧುವೂ ಅಕಾರಣಮಿತ್ರನೂ ಆಗಿದ್ದಾನೆ. ಅದಲ್ಲದೆ, ೬೮. ಮಿಗಿಲಾದ ದಾಕ್ಷಿಣ್ಯಕ್ಕೂ, (ಎಲ್ಲರಲ್ಲೂ ಒಳ್ಳೆಯತನವನ್ನು ತೋರಿಸುವಿಕೆ) ಜಾಣತನಕ್ಕೂ, ಅತಿಶಯವಾದ ಗಾಂಭೀರ್ಯಕ್ಕೂ ಮೊದಲನೆಯವನೆನಿಸಿಕೊಂಡಿರುವ ಸಮಸ್ತಗುಣಗಳಿಂದ ಪರಿಪೂರ್ಣವಾಗಿರುವ ಜನರನ್ನು ಪ್ರಪಂಚದಲ್ಲಿ ಪಡೆಯುವುದು ಅಸಾಧ್ಯವಲ್ಲವೆ? ವ|| ಆ ಕಾರಣದಿಂದ ಬ್ರಹ್ಮನಿಗೆ ಸೌಂದರ್ಯನಿರ್ಮಾಣದಲ್ಲಿರುವ ಪ್ರವೀಣತೆಯನ್ನೂ, ಇವನಲ್ಲಿ ಅವಿಚ್ಛಿನ್ನವಾಗಿ ನೆಲಸಿರುವ ಲಕ್ಷಿ ಯ ವಿವೇಕವನ್ನೂ, ಇವನಿಂದ ಭೂಮಿಗೆ ದೊರೆತ ಒಳ್ಳೆಯ ಒಡೆಯನನ್ನು ಪಡೆದ ಸುಖವನ್ನೂ, ಇವನಿಂದ ಭೂಲೋಕವು ಪಡೆದಿರುವ ಕೃತಾರ್ಥತೆಯನ್ನೂ, ಕಲೆಗಳ ಸಮೂಹವೆಲ್ಲ ಒಂದೇ ಕಡೆ ಸೇರಿರುವುದನ್ನೂ, ಇವನಲ್ಲಿರುವ ಸೌಭಾಗ್ಯದ ಸಮೃದ್ಧಿಯನ್ನೂ, ಮನುಷ್ಯರ ನಾಗರಿಕತೆಯನ್ನೂ ನೀನೂ ನೋಡಬೇಕೆಂದು ಇವನನ್ನು ಪ್ರಯತ್ನಪೂರ್ವಕವಾಗಿ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ೬೯. ಎಲೈ, ಕಮಲದಂತೆ ಮುಖವುಳ್ಳವಳೆ, ಈ ರಾಜನನ್ನು ನಾನು ಇದುವರೆಗೂ ನೋಡಿಯೇ ಇಲ್ಲ. ಹಾಗೂ ಇವನ ಪರಿಚಯವೂ ನನಗಿಲ್ಲ ಎಂದು ಹೆಚ್ಚಾಗಿ ನಾಚಿಕೆ ಪಡದೆ ಈಗ ನೀನು ನನ್ನಲ್ಲಿ ಹೇಗೆ ಇದ್ದೀಯೋ ಅದೇ ರೀತಿ ಇವನಲ್ಲೂ ಯಾವಾಗಲೂ ಇರಬೇಕು.” ವ|| ಎಂದು ಮಹಾಶ್ವೇತೆಯು ಕಾದಂಬರಿಗೆ ತಿಳಿಸಲಾಗಿ ಚಂದ್ರಾಪೀಡನು ಕೈಮುಗಿದನು. ಆಗ ಅವಳ ಶರೀರವೆಲ್ಲವೂ ರೋಮಾಂಚನವನ್ನು ಪಡೆಯಿತು. ೭೦. ಆಗ ಕಾದಂಬರಿಯು ಅವನನ್ನು ಆದರದಿಂದ ಪ್ರೀತಿಸಿ

ಚರಣಾಂಗುಷ್ಠದೆ ನೆಲನಂ
ಬರೆವೀ ನೆವದಿಂದೆ ತನಗೆ ಬರೆತೆಗೆದಳೊ ಪೇ
ೞರಸನನೆನಲವಳ ನಖಾಂ ತರದೊಳ್ ಪೊಳೆದತ್ತು ರೂಪು ಭೂಪೋತ್ತಮನಾ      ೭೧

ನಡೆನೋಡುವ ಕನ್ನಿಕೆಯರ
ಕಡೆಗಣ್ಣಂ ಸಾರ್ದು ಪರಿವ ಕರಿಯಾಲಿಗಳೊ
ಗ್ಗಡಿಸಿದವತಂಸ ಮಧುಕರ
ದೊಡನಾಡುವ ಮಧುಕರಂಗಳೆನಿಸಿದುವಾಗಳ್          ೭೨

ವ|| ಅನಂತರಂ ಪರಿಜನಂ ಸಂಭ್ರಮಂಬೆರಸು ತಂದು ಶಯನತಳಶಿರೋಭಾಗದೊಳಿಕ್ಕಿದ ಧವಳಾಂಶುಕ ಪ್ರಚ್ಛದಚ್ಛನ್ನ ಹೇಮಪದಾಂಕಿತಾಸನದೊಳರಸಂ ಕುಳ್ಳಿರೆ ಕಾದಂಬರಿ ಮಹಾಶ್ವೇತೆಯೊಡನೆ ನಿಜಪರ್ಯಂಕದೊಳ್ ಕುಳ್ಳಿರ್ಪುದುಂ ಮಹಾಶ್ವೇತೆಯ ಕಣ್ಣಱದು ವೇಣುರವಂಗಳುಮಂ ವೀಣಾನಾದಂಗಳುಮಂ ಗೀತಸ್ವನಂಗಳುಮಂ ಮಾಗಯರ ಜಯಶಬ್ದಂಗಳುಮಂ ಪ್ರತೀಹಾರಿಯರ್ ನಿವಾರಿಸುತ್ತಮಿರ್ದರನ್ನೆಗಂ

ಪ್ರಿಯದಿಂ ಕಾಂತೆ ಮಹಾಶ್ವೇ
ತೆಯ ಕಾಲಂ ತಾನೆ ಕರ್ಚಿ ಪದಪಿಂದೆ ನಿಜ
ಪ್ರಿಯಸಖಿಯೆನಿಸಿದ ಮದಲೇ
ಖೆಯೆಂಬಳಿಂ ನೃಪನ ಕಾಲ್ಗಳಂ ಕರ್ಚಿಸಿದಳ್             ೭೩

ವ|| ಆಗಳಾ ಕಾದಂಬರಿಯೊಡನೆ ಕುಳ್ಳಿರ್ದ ಮಹಾಶ್ವೇತೆ

ಕರದಿಂದಂ ಕರ್ಣಭೂಷಾರುಚಿರುಚಿರಮೆನಿಪ್ಪಂಸವಂ ಮುಟ್ಟುತಂ ಷ
ಟ್ಚರಣವ್ಯಾಲೋಲ ಕಣೋತ್ಪಲಮನಮರೆ ಸೈತಿಕ್ಕುತಂ ಸಂಚಲಚ್ಚಾ
ಮರಸಂಜಾತಾನಿಲಾಂದೋಳನ ಚಲದಳಕಾನೀಕಮಂ ಮೆಲ್ಲನಂದೋ
ಸರಿಸುತ್ತಂ ತಂಗಿ ಪೇೞ್ ಭವ್ಯವೆ ನಿನಗೆನಲಾ ಕಾಂತೆ ನಾಣ್ಚುತ್ತಮಾಗಳ್            ೭೪

ನೋಡುತ್ತಿದ್ದಳು. ಅವಳ ನೀಳವಾದ ಕಡೆಗಣ್ಣಿನ ಎಡೆಗೆ ಕಣ್ಣುಗುಡ್ಡೆಯು ಬಂದಿತು. ಬೇಗನೆ ಬಹಳ ದೂರ ಬಂದಿದ್ದರಿಂದ ಅದಕ್ಕೆ ಬಹಳ ಆಯಾಸವುಂಟಾಗಲು ಬೆವರುಹನಿಗಳು ಆ ಕಣ್ಣುಗುಡ್ಡೆಯಿಂದ ಸುರಿಯುತ್ತಿವೆ ನೋಡಿ ಎಂಬಂತೆ ಆ ಕಾದಂಬರೀದೇವಿಗೆ ತಟ್ಟನೆ ಅತಿಶಯವಾದ ಪ್ರೀತಿಯುಂಟಾಗಲು ಅವಳ ಕಣ್ಣಿನಿಂದ ಆನಂದಬಾಷ್ಪದ ಹನಿಗಳು ಸುರಿಯತೊಡಗಿದವು. ೭೧. ಕಾದಂಬರಿಯು ನಾಚಿಕೆಯಿಂದ ಕೂಡಿಕೊಂಡು ಕಾಲಿನ ಹೆಬ್ಬೆರಳಿನ ತುದಿಯಿಂದ ನೆಲವನ್ನು ಗೀರುತ್ತಿದ್ದಳು. ಆಗ ಈ ನೆಪದಿಂದ ಚಂದ್ರಾಪೀಡನನ್ನು ತನ್ನ ಹತ್ತಿರಕ್ಕೆ ಬರುವಂತೆ ಮಾಡಿದ್ದಾಳೋ ಎಂಬಂತೆ ಅವಳ ಉಗುರಿನಲ್ಲಿ ಚಂದ್ರಾಪೀಡನ ಆಕಾರವು ಪ್ರತಿಬಿಂಬಿಸಿ ಹೊಳೆಯುತ್ತಿತ್ತು. ೭೨. ಚಂದ್ರಾಪೀಡನನ್ನು ಚೆನ್ನಾಗಿ ನೋಡುತ್ತಿರುವ ಅಲ್ಲಿನ ಕನ್ನಿಕೆಯರ ಕಡೆಗಣ್ಣನ್ನು ಸೇರಿ ಚಲಿಸುತ್ತಿರುವ ಕಪ್ಪುಗುಡ್ಡೆಗಳು ಅವರು ಕಿವಿಯಲ್ಲಿ ಮುಡಿದುಕೊಂಡಿರುವ ಹೂವಿಗೆರಗುವ ದುಂಬಿಗಳ ಜೊತೆಯಲ್ಲಿ ಸೇರಿಕೊಂಡು ಆಡುತ್ತಿರುವ ದುಂಬಿಗಳಂತೆ ಕಾಣುತ್ತಿದ್ದುವು. ವ|| ಬಳಿಕ ಪರಿಜನರು ಸಡಗರದಿಂದ ತಂದು ಹಾಸಿಗೆಯ ತಲೆಯೆಡೆಯಲ್ಲಿ ಇರಿಸಿದ ಬಿಳಿಯ ಪಾಸುಬಟ್ಟೆಯಿಂದ ಮುಚ್ಚಿರುವ, ಚಿನ್ನದ ಕಾಲುಗಳಿಂದ ಕೂಡಿಕೊಂಡಿರುವ ಪೀಠದಲ್ಲಿ ಚಂದ್ರಾಪೀಡನು ಕುಳಿತುಕೊಂಡಿರಲಾಗಿ, ಕಾದಂಬರಿಯು ಮಹಾಶ್ವೇತೆಯೊಡನೆ ತನ್ನ ಮಂಚದ ಮೇಲೆ ಕುಳಿತುಕೊಂಡಿರಲಾಗಿ ಮಹಾಶ್ವೇತೆಯ ಕಣ್ಣುಸನ್ನೆಯನ್ನು ತಿಳಿದು ಕೊಳಲಿನ ಧ್ವನಿಗಳನ್ನೂ ವೀಣಾನಾದಗಳನ್ನೂ ಸಂಗೀತಧ್ವನಿಯನ್ನೂ ಮಂಗಳಪಾಠಿಕೆಯರ ಜಯಶಬ್ದಗಳನ್ನೂ ಬಾಗಿಲುಕಾಯುವ ಹೆಂಗಸರು ನಿಲ್ಲಿಸುತ್ತಿದ್ದರು. ಅಷ್ಟರಲ್ಲಿ ೭೩. ಕಾದಂಬರಿಯು ಪ್ರೀತಿಯಿಂದ ಮಹಾಶ್ವೇತೆಯ ಕಾಲನ್ನು ಸಡಗರದಿಂದ ತೊಳೆದು, ತನ್ನ ನಚ್ಚಿನ ಗೆಳತಿಯಾದ ಮದಲೇಖೆಯೆಂಬುವಳಿಂದ ಚಂದ್ರಾಪೀಡನ ಕಾಲನ್ನು ತೊಳೆಯಿಸಿದಳು. ವ|| ಆಗ ಆ ಕಾದಂಬರಿಯೊಡನೆ ಕುಳಿತಿದ್ದ ಮಹಾಶ್ವೇತೆಯು ೭೪. ಕಾದಂಬರಿಯ ಕರ್ಣಾಭರಣದ ಕಾಂತಿಯು ಹರಡಿರುವ ಹೆಗಲನ್ನು ಕೈಯಿಂದ ಮುಟ್ಟುತ್ತಲೂ, ದುಂಬಿಗಳಿಂದ ಜಾರಿಸಲ್ಪಟ್ಟಿರುವ ಕಿವಿಯಲ್ಲಿ ಮುಡಿದುಕೊಂಡಿರುವ ನೈದಿಲೆಯನ್ನು ಕೂರುವಂತೆ ನೇರ್ಪಡಿಸುತ್ತಲೂ, ಆಡುತ್ತಿರುವ ಚಾಮರಗಳ ಗಾಳಿಯ ಚಲನೆಯಿಂದ ಅಲುಗಾಡುತ್ತಿರುವ ಮುಂಗುರುಳುಗಳನ್ನು ಮೆಲ್ಲನೆ ಸರಿಪಡಿಸುತ್ತಲೂ ‘ತಂಗಿ ನಿನಗೆ ಕ್ಷೇಮವೆ?’ –  ಎಂದು ಕೇಳಿದಳು. ಆಗ ಕಾದಂಬರಿಯು

ವನವಾಸಾಯಾಸದಿನ
ಕ್ಕನಿಂತಿರಲ್ ಮನೆಯೊಳಿರ್ದೆನಾನೆಂದು ಕರಂ
ಮನದೊಳ್ ತೊೞಲುತ್ತಂ ತಾಂ
ಮನವೊಲ್ಲದೆ ತನಗೆ ಸೇವಮೆಂದೆನುತೊರೆದಳ್         ೭೫

ವ|| ಆಗಳುಪಜಾತಶೋಕೆ ಮಹಾಶ್ವೇತಾಮುಖನಿರೀಕ್ಷಣೆಯಾಗಿಯುಮಾರೋಪಿತ ಚಾಪನಪ್ಪ ಕುಸುಮಚಾಪಂಗೆ ಪಕ್ಕುಮಾಡಿದ ಚಂದ್ರಾಪೀಡನಪಾಂಗವಿಕ್ಷೇಪ ತರಳತರ ತಾರಶಾರೋದರ ನಯನಂಗಳಿಂದಡಿಗಡಿಗೆ ನೋಡುತ್ತಿಮಿರ್ದು

ಸುರುಚಿರ ಸಾಲಭಂಜಿಕೆ ಬೆಮರ್ತುರದೊಳ್ ಪೊಳೆಯುತ್ತಿರಲ್ಕೆ ಮ
ತ್ಸರಿಸಿದಳಂಗನಾಜನಘನಸ್ತನದೊಳ್ ಪ್ರತಿಬಿಂಬಿಸುತ್ತಿರಲ್
ಪುರುಡಿಸಿದಳ್ ಮನೋಹರನನೀಕ್ಷಿಸಲಿತ್ತಪುವಿಲ್ಲ ಹರ್ಷದಿಂ
ದಿರದುಗುತರ್ಪ ಬಾಷ್ಪಮೆನಗೆಂದು ಲತಾಂಗಿಯೞಲ್ದು ಬಾಡಿದಳ್          ೭೬

ವ|| ಅನಂತರಂ ತಾಂಬೂಲಪ್ರದಾನೋದ್ಯತೆಯಾದ ಕಾದಂಬರೀದೇವಿಯಂ ಮಹಾಶ್ವೇತೆಯಿಂತೆಂದಳ್

ಭುವನಾಶ್ವರಸುತನಭಿ
ನವಾಗತಂ ಮಾನ್ಯನಪ್ಪನಾರಾಧ್ಯನೆ ದಲ್
ನವಗೆಲ್ಲತೆಱದಿನದಱಂ
ದವೀವುದರಸಂಗೆ ಮುನ್ನಮೀ ತಂಬುಲಮಂ ೭೭

ವ|| ಎಂದು ನುಡಿಯೆ

ಆನಕ್ಕ ನಾಣ್ಚುವೆಂ ಪಿಡಿ
ನೀನೆ ನೃಪಂಗಿಕ್ಕು ತಂಬುಲಮನಱವೆನೆ ಪೇ
ೞೇನುಮನಾನೆಂದತಿಲ
ಜ್ಜಾನತಮುಖಿಯಾಗಿ ಕಾಂತೆ ಮೆಲ್ಲನೆ ನುಡಿದಳ್        ೭೮

ವ|| ಅಂತು ನುಡಿಯೆ ಮಹಾಶ್ವೇತೆ ಮತ್ತಮಾಗ್ರಹಿಸೆ ತಂಬುಲಂಗೊಡಲುಜ್ಜುಗಂಗೆಯ್ದು

ಬೆಮರಿಂ ಮುೞುಗಿದಪೆಂ ಸಂ
ಭ್ರಮದಿಂ ಬಿೞ್ದಪ್ಪೆನರಸ ಕೈಗುಡು ನೀಂ ಬೇ
ಗಮೆನಿಪ್ಪ ತೆಱದೆ ತಾಂಬೂ
ಲಮಿಳಿತಮಂ ಕಾಂತೆ ನೀಡಿದಳ್ ನಿಜಕರಮಂ          ೭೯

ನಾಚಿಕಪಡುತ್ತ ೭೫. ವನವಾಸದ ಆಯಾಸದಿಂದ ಅಕ್ಕನು ಹೀಗಿರಲಾಗಿ ನಾನು ಮನೆಯಲ್ಲಿ ಸುಖವಾಗಿದ್ದೇನಲ್ಲ ಎಂದು ಬಹಳಮಟ್ಟಿಗೆ ಮನಸ್ಸಿನಲ್ಲಿ ವ್ಯಥೆಪಡುತ್ತ ಉತ್ತರಕೊಡಲು ಮನಸ್ಸು ಬರದಿದ್ದರೂ ಹೇಗೋ ಕಷ್ಟದಿಂದ ಕ್ಷೇಮವೆಂದು ಹೇಳಿದಳು. ವ|| ಆಗ ದುಖಾಕ್ರಾಂತೆಯಾಗಿ ಮಹಾಶ್ವೇತೆಯ ಮುಖವನ್ನು ನೋಡುತ್ತ ಮತ್ತು ಹೆದೆಯೇರಿಸಿದ ಬಿಲ್ಲುಳ್ಳ ಕಾಮನಿಗೆ ತನ್ನನ್ನು ಗುರಿಮಾಡಿದ ಚಂದ್ರಾಪೀಡನನ್ನು ಕಡೆಗಣ್ಣಿನ ಪ್ರೇರಣೆಯಿಂದ ಅತ್ಯಂತ ಚಂಚಲವಾದ ಕಣ್ಣುಗುಡ್ಡೆಯುಳ್ಳ ಬೇರೆ ಬೇರೆ (ಕಪ್ಪು, ಬಿಳುಪು) ಬಣ್ಣಗಳಿಂದ ಕೂಡಿದ ಕಣ್ಣುಗಳಿಂದ ಅಡಿಗಡಿಗೆ ನೋಡುತ್ತ ಇದ್ದು ೭೬. ಚಂದ್ರಾಪೀಡನ ಬೆವರಿದ ಎದೆಯಲ್ಲಿ (ಸಭಾಮಂಟಪದಲ್ಲಿದ್ದ) ಸುಂದರವಾದ ಪುತ್ಥಳಿಯು ಪ್ರತಿಬಿಂಬಿಸಿ ಹೊಳೆಯುತ್ತಿರಲು ಅಷ್ಟಕ್ಕೇ ಅವಳಿಗೆ ಕೋಪವುಂಟಾಯಿತು. ಅಲ್ಲಿದ್ದ ಹೆಂಗಸರ ತೋರಮೊಲೆಗಳಲ್ಲಿ ಚಂದ್ರಾಪೀಡನು ಪ್ರತಿಬಿಂಬಿಸಿರಲು ಅವಳಿಗೆ ಅಸೂಯೆಯುಂಟಾಯಿತು! ಸಂತೋಷದಿಂದ ಒಂದೇಸಮನೆ ಹರಿಯುತ್ತಿರುವ ಕಣ್ಣೀರು ಸುಂದರನಾದ ಚಂದ್ರಾಪೀಡನನ್ನು ನೋಡಲು ತನಗೆ ಅವಕಾಶವನ್ನೇ ಕೊಡುವುದಿಲ್ಲವೆಂದು ಬಳ್ಳಿಯಂದದ ದೇಹವುಳ್ಳ ಕಾದಂಬರಿಯು ದುಖಿಸಿ ಕಳೆಗುಂದಿದಳು. ವ|| ಬಳಿಕ ತನಗೆ ವೀಳೆಯನ್ನು ಕೊಡಲು ಹೊರಟ ಕಾದಂಬರಿದೇವಿಯನ್ನು ಕುರಿತು ಮಹಾಶ್ವೇತೆಯು ಹೀಗೆ ಹೇಳಿದಳು. ೭೭. “ಈಗ ಇಲ್ಲಿಗೆ ಹೊಸದಾಗಿ ಬಂದಿರುವ, ಚಕ್ರವರ್ತಿಯ ಮಗನಾದ ಈತನು ನಮಗೆ ಎಲ್ಲಾ ಬಗೆಯಿಂದಲೂ ದಿಟವಾಗಿಯೂ ಮಾನ್ಯನು ಮತ್ತು ಪೂಜ್ಯನು. ಆದ್ದರಿಂದ ಮೊದಲು ಈ ಅರಸನಿಗೆ ನೀನು ತಾಂಬೂಲವನ್ನು ಕೊಡು” ವ|| ಎಂದು ಹೇಳಲಾಗಿ ೭೮. “ಅಕ್ಕ, ನನಗೆ ನಾಚಿಕೆಯಾಗುತ್ತದೆ. ಹಿಡಿ, ನೀನೆ ಈ ಅರಸನಿಗೆ ತಾಂಬೂಲವನ್ನು ಕೊಡು. ನನಗೇನು ಗೊತ್ತಿದೆ? ಹೇಳು” ಎಂದು ಬಹಳ ನಾಚಿಕೆಯಿಂದ ತಗ್ಗಿಸಿದ ಮುಖವುಳ್ಳವಳಾಗಿ ಕಾದಂಬರಿಯು ಮೆಲ್ಲನೆ ಹೇಳಿದಳು. ವ|| ಹಾಗೆ ಹೇಳಲಾಗಿ ಮಹಾಶ್ವೇತೆಯು ಮತ್ತೆ ಮತ್ತೆ ನಿರ್ಬಂಧಮಾಡಿದಳು. ಆಗ ತಾಂಬೂಲವನ್ನು ಕೊಡಲು ಪ್ರಯತ್ನಿಸಿ ೭೯. “ನಾನು ಬೆವರಿನಲ್ಲಿ

ವ|| ಆಗಳ್ ವಿಜಯಗಜಕುಂಭಾಸಾಲನದೊಳೊಂದಿದ ಸಿಂದೂರದಿಂ ರಂಜಿಪಂತೆ ಬೆಳರ್ಗೆಂಪನಾೞ್ದತಿರಭಸದಿಂ ಮುಂದುಱುಳಿವರಿವಂತೆ ನಖಮಯೂಖಂಗಳ್ ನಿಮಿರೆ ಸೋಂಕು ವಾಸೆಯೊಳನುರಕ್ತಂಗಳಾಗೆ ಪಂಚೇಂದ್ರಿಯವೃತ್ತಿಗಳೆ ಬೇ ಬೇ ರೂಪಂದಳೆದುವೆನಿಪಂ ಗುಳಿಗಳಿಂ ಮನಂಗೊಳಿಸುವ ಕರಕಮಲಂಗಳಂ ಚಂದ್ರಾಪೀಡಂ ನೀಡೆ

ಎನಸುಂ ಮುಂದೆ ನಖಾಂಶು ನಿಳ್ಕೆ ನೃಪಹಾಸ್ತಾನ್ವೇಷಣಂಗೆಯ್ವವೊಲ್
ನಿನಗೆನ್ನಂ ಬಿಡದುಣ್ಮಿದೀ ಬೆಮರೆ ಕೈನೀರಾಗಿರಲ್ ತೋರ್ಕೆಗೊ
ಟ್ಟನನಂಗಂ ಪಿಡಿ ನಿನ್ನ ಕೈಯೆಡೆಯನೊಂದಿರ್ದಪ್ಪುದಿನ್ನೆನ್ನ ಜೀ
ವನಮೆಂಬಂದದಿನಿಕ್ಕಿದಳ್ ನಡುಗುತಂ ತನ್ವಂಗಿ ತಾಂಬೂಲಮಂ          ೮೦

ವ|| ಅನಂತರಂ ಮಹಾಶ್ವೇತೆಗಂ ತಾಂಬೂಲಂಗೊಟ್ಟಳನ್ನೆಗಂ

ಸುರುಳನೆ ಸುತ್ತಿದಂತೆ ಕೊರಲೊಳ್ ಮಿಱುಗುತ್ತಿರೆ ಮೂಱುರೇಖೆಗಳ್
ಮರಕತಕಾಂತಿಯಂ ತಳೆದು ನುಣ್ಗಱಗಳ್ ಮಿನುಗಲ್ಕೆ ವಿದ್ರುಮಾಂ
ಕುರದವೊಲೊಪ್ಪೆ ಚಂಚುಪುಟಮೊಯ್ಯನೆ ಬಂದುದು ಕನ್ಯಕಾಸಭಾಂ
ತರದೊಳಗೊಂದು ಶಾಡ್ವಲಿತ ಹರ್ಮ್ಯಮಣಿಪ್ರವರಾಂಶುಕಂ ಶುಕಂ        ೮೧

ವ|| ಅಂತು ಮಂದಗತಿಯಿಂ ಬರ್ಪರಗಿಳಿಯ ಮುಂದೆ

ವಿಕಸಿತ ನೀಲನೀರಜದಳಂಬೊಲಿರಲ್ ಗಱ ಚಂಚು ಚಾರುಚಂ
ಪಕಮುಕುಳಂಬೊಲೊಪ್ಪೆ ಚರಣಂ ನವಕೇಸರದೊಂದು ದೇಸಿಯಂ
ಪ್ರಕಟಿಸೆ ಪೂವಿನಿಂ ಸಮೆದ ಪಕ್ಕಿಯಿದೆಂಬಿನಮಾಗಳೊಂದು ಸಾ
ರಿಕೆ ಪರಿತಂದುದಗ್ಗಲಿಪ ತಾಪದೆ ಗದ್ಗದಕಂಠೆಯಾಗುತಂ          ೮೨

ವ|| ಅಂತು ಪರಿತಂದು ಕಾದಂಬರೀಪಾದಾಸನ್ನೆಯಾಗಿ

ಬೆಸನಕ್ಕಾಗರಮಾದಳೀಕಸೊಬಗಿಂ ಕೂರ್ತಂದದಿಂ ಮತ್ತೆ ಪ
ತ್ತಿಸಲೆಂದಾಟಿಸಿ ಬಂದಪಂ ಬಱದೆಯುಂ ಬೂತಾಟವಿನ್ನೇಕೆ ಮಾ
ಣಿಸು ಬನ್ನಕ್ಕೆಡೆಯಾದನೀ ವಿಹಗನಿಂ ನಿನ್ನಾಣೆ ನೀನಿನ್ನುಪೇ
ಕ್ಷಿಸಿದಂದೆನ್ನಯ ಜೀವಮಂ ಬಿಡದಿರೆಂ ಗಂಧರ್ವರಾಜಾತ್ಮಜೇ   ೮೩

ಮುಳುಗಿಹೋಗಿದ್ದೇನೆ. ಭಯದಿಂದ ಬಿದ್ದುಬಿಡುತ್ತೇನೆ. ದೊರೆಯೆ, ನೀನು ಬೇಗ ನನ್ನ ಕೈಯನ್ನು ಹಿಡಿದುಕೊ” ಎಂಬ ರೀತಿಯಿಂದ ಆಕೆಯು ವೀಳೆಯದಿಂದ ಕೂಡಿದ ತನ್ನ ಕೈಯನ್ನು ಚಂದ್ರಾಪೀಡನ ಕಡೆಗೆ ನೀಡಿದಳು. ವ|| ಆಗ ಯುದ್ಧದಲ್ಲಿ ಜಯಸಾಧನೆಗಾಗಿ ಉಪಯೋಗಿಸುವ ಆನೆಯ ಕುಂಭಸ್ಥಳವನ್ನು ತಟ್ಟುವುದರಿಂದ ಅಂಟಿಕೊಂಡಿರುವ ಚಂದ್ರನಿಂದ ಪ್ರಕಾಶಿಸುವಂತೆ ಬಿಳುಪುಮಿಶ್ರಿತವಾದ ಕೆಂಬಣ್ಣವನ್ನು ಹೊಂದಿರುವ ಉಗುರಿನ ಕಿರಣಗಳು ಮುನ್ನುಗ್ಗುವಂತೆ ಚಾಚಿಕೊಂಡಿರಲು, ಅವಳನ್ನು ಮುಟ್ಟಬೇಕೆಂಬ ಆಸೆಯಿಂದ ಪ್ರೀತಿಯನ್ನಿಟ್ಟಿರುವ ಪಂಚೇಂದ್ರಿಯಗಳೆ ಬೇರೆ ಬೇರೆ ಬೆರಳಿನ ರೂಪವನ್ನು ಪಡೆದಿವೆಯೊ ಎಂಬಂತಿರುವ ಬೆರಳುಗಳಿಂದ ಮನೋಹರವಾದ ತನ್ನ ಕರಕಮಲವನ್ನು ಚಂದ್ರಾಪೀಡನು ನೀಡಲಾಗಿ ೮೦. ಕಾದಂಬರಿಯು ತನ್ನ ಉಗುರಿನ ಕಾಂತಿಗಳು ಬಹಳಮಟ್ಟಿಗೆ ಮುಂದೆ ಮುಂದೆ ಚಾಚುತ್ತಿರಲಾಗಿ ಚಂದ್ರಾಪೀಡನ ಕೈ ಎಲ್ಲಿದೆಯೆಂದು ಹುಡುಕುತ್ತಿರುವಂತೆಯೂ, ಒಂದೇಸಮನೆ ಹೊರಡುತ್ತಿರುವ ಬೆವರೆ ಕೈನೀರಾಗಿರಲು ಮನ್ಮಥನು ನನ್ನನ್ನು ನಿನಗೆ ಕಾಣಿಕೆಯಾಗಿ. ಒಪ್ಪಿಸಿದ್ದಾನೆ, ಹಿಡಿದುಕೊ, ಇನ್ನು ನನ್ನ ಪ್ರಾಣವು ನಿನ್ನ ಕೈಯಲ್ಲಿದೆ ಎಂದು ಇರಿಸುವಂತೆಯೂ ನಡುಗುತ್ತಾ ಚಂದ್ರಾಪೀಡನಿಗೆ ವೀಳೆಯವನ್ನು ಕೊಟ್ಟಳು. ವ|| ಬಳಿಕ ಮಹಾಶ್ವೇತೆಗೂ ವೀಳೆಯವನ್ನು ಕೊಟ್ಟಳು. ಅಷ್ಟರಲ್ಲಿ ೮೧. ಕೊರಳಿನಲ್ಲಿ ಗುಂಡಾಗಿಸುತ್ತಿದಂತೆ ಮೂರುಗೆರೆಗಳು ಪ್ರಕಾಶಿಸುತ್ತಿರಲು, ನುಣುಪಾದ ಗರಿಗಳು ಪಚ್ಚೆಯ ಕಾಂತಿಯನ್ನು ಹೊಂದಿ ರಂಜಿಸುತ್ತಿರಲು, ಕೊಕ್ಕು ಹವಳದ ಮೊಳಕೆಯಂತೆ ಶೋಭಿಸುತ್ತಿರಲು, ಹಸಿರು ಹುಲ್ಲಿನಿಂದ ಕೂಡಿರುವ ಅರಮನೆಯ ಶ್ರೇಷ್ಠವಾದ ರತ್ನದಂತೆ ಕಾಂತಿಯುಳ್ಳ ಒಂದು ಗಿಳಿಯು ಕನ್ಯಕಾಂತಪುರದ ಸಭಾಂಗಣಕ್ಕೆ ಮೆಲ್ಲನೆ ಬಂದಿತು. ಟಿ. ಮೂಲದಲ್ಲಿ ಹರ್ಮ್ಯ ಎಂಬಲ್ಲಿ “ರಮ್ಯ” ಎಂದಿರಬಹುದು ವ|| ಹಾಗೆ ಮಂದಗತಿಯಿಂದ ಬರುತ್ತಿರುವ ಅರಗಿಳಿಯ ಮುಂದೆ ೮೨. ಅರಳಿದ ಕನ್ಮೆ ದಿಲೆಯ ಎಸಳಿನಂತೆ ಗರಿಯು ಇರಲಾಗಿ, ಕೊಕ್ಕು ಸುಂದರವಾದ ಸಂಪಿಗೆಯ ಮೊಗ್ಗಿನಂತೆ ಶೋಭಿಸಲು, ಕಾಲು ಹೊಸದಾಗಿ ಅರಳಿರುವ ವಕುಳಕುಸುಮದ ಚೆಲುವನ್ನು ಪ್ರಕಟಿಸುತ್ತಿರಲು ಹೂವುಗಳಿಂದ ಮಾಡಿದ ಹಕ್ಕಿಯೋ ಎಂಬಂತೆ ಶೋಭಿಸುವ ಒಂದು ಮೈನಾಹಕ್ಕಿಯು ಅತಿಶಯವಾದ ಸಂತಾಪದಿಂದ ಗದ್ಗದಕಂಠವುಳ್ಳವಳಾಗಿ ಆಗ ಅಲ್ಲಿಗೆ ಬಂದಿತು. ವ|| ಹಾಗೆ ಬಂದು ಕಾದಂಬರಿಯ ಪಾದಗಳೆಡೆಯನ್ನು ಸೇರಿ ೮೩. “ಗಂಧರ್ವರಾಜಕುಮಾರಿ, ಇವನು ಕೆಟ್ಟ ಚಾಳಿಗೆ ಮನೆಯಾದ ಸುಳ್ಳು ಒಲವಿನಿಂದ ನನ್ನನ್ನು ಪ್ರೀತಿಸಿರುವಂತೆ

ವ|| ಎಂದು ನುಡಿಯೆ ಕಾದಂಬರಿ ಮಂದಸ್ಮಿತವದನೆಯಪ್ಪುದುಮವಿದಿತ ವೃತ್ತಾಂತೆಯಪ್ಪ ಮಹಾಶ್ವೇತೆಯಿದೇತಱಂ ನುಡಿದಪ್ಪುದೆಂದು ಮದಲೇಖೆಯಂ ಬೆಸಗೊಳ್ವುz ಮಾಕೆಯಿಂತೆಂದಳ್

ಪರಿಹಾಸನೆಂಬುದಾಯಿ
ರ್ಪರಗಿಳಿ ಕಾಳಿಂದಿಯೆಂಬುದೀ ಸಾರಿಕೆಯಿಂ
ತೆರಡಕ್ಕಂ ಕಡುಕೂರ್ಮೆಯಿ
ನರಸಿಯೆ ತಾಂ ಮಾಡಿದಳ್ ವಿವಾಹೋತ್ಸವಮಂ      ೮೪

ವ|| ಅಂತು ಪರಸ್ಪರಾನುರಾಗಮನಪ್ಪುಕೆಯ್ದು ಸುಖದಿಂದಮಿರಲಿಂದು ಬೆಳಗಪ್ಪಾಗಳ್ ಕಾದಂಬರೀದೇವಿಯ ತಾಂಬೂಲಕರಂಕವಾಹಿನಿಯಪ್ಪ ತಮಾಲಿಕೆಯೊಡನೀ ಶುಕನೇಕಾಂತದೊಳೇ ನಾನುಮಂ ಗೞಪುತ್ತಿರ್ದುದಂ ಕೇಳ್ದು

ಒದವಿದ ಪುರುಡಿಂದಂ ನೋ
ಡದು ನುಡಿಯದು ಪೊರ್ದದೆನಿತು ಕಾಲ್ವಿಡಿದೊಡಮೊ
ಲ್ಲದು ಕಿನಿಸಿ ಕಡುಪಿನಿಂದಂ
ನದುಗಿದಪುದು ತಿಳಿಯದೆಂತುಮಾರ್ ತಿಳುಪಿದೊಡಂ ೮೫

ವ|| ಎಂಬುದುಮವಂ ಕೇಳ್ದು ನರೇಂದ್ರನಂದನಂ ಮಂದಸ್ಮಿತವದನನಾಗಿ

ಪರಿಹಾಸಕನೆಂದೆಂಬೊಂ
ದರಗಿಳಿ ಸೋಲ್ತರಸಿಯಡಪದಾಕೆಗೆ ಪಿರಿದುಂ
ವಿರಹದೆ ಬೆಂದಪುದೆಂಬುದು
ಪರೆದತ್ತೆಲ್ಲೆಡೆಯೊಳಂ ಪರಂಪರೆಯಿಂದಂ     ೮೬

ಪರಿಹರಿಸಿ ಕಳತ್ರಮನೀ
ಪರಿಹಾಸಂ ಲಜ್ಜೆಗೆಟ್ಟು ಮಾಣದೆ ಮತ್ತಂ
ಪರಿತರೆಯುಂ ಬಾರಿಸರೆನೆ
ಪಿರಿದುಂ ದೇವಿಯರುಪೇಕ್ಷೆಯಾಗಲೆವೇೞ್ಕುಂ ೮೭

ಲೋಲಂಗೀ ವಿಹಗಂಗೀ
ಬಾಲೆಯನೀ ಮುಗ್ಧೆಯಂ ವಿಚಾರಿಸದೆಯುಮಿಂ
ತಾಲೋಕಿಸದೆಯುಮೀವುದೆ
ಕಾಳಿಂದಿಗೆ ದೇವಿ ಕೂರರಾಗಲೆವೇೞ್ಕುಂ       ೮೮

ತೋರ್ಪಡಿಸುತ್ತಾ ನಾನು ಬೇಡವೆಂದರೂ ಬಿಡದೆ ನನ್ನನ್ನು ಸೇರಿಕೊಳ್ಳಬೇಕೆಂದು ಅಪೇಕ್ಷಿಸಿ ಬಂದಿದ್ದಾನೆ. ವ್ಯರ್ಥವಾದ ಬೂಟಾಟಿಕೆಯು ಇನ್ನೇಕೆ? ಇವನು ನನ್ನ ಹತ್ತಿರಕ್ಕೆ ಬರದಂತೆ ಮಾಡು. ಈ ಹಕ್ಕಿಯಿಂದ ಬಹಳ ಕಷ್ಟಕ್ಕೆ ಗುರಿಯಾಗಿಬಿಟ್ಟೆ. ನಿನ್ನಾಣೆ, ನೀನು ಇನ್ನು ಉದಾಸೀನಮಾಡಿದರೆ ನಾನು ಪ್ರಾಣವನ್ನು ಕಳೆದುಕೊಳ್ಳದೆ ಇರುವುದಿಲ್ಲ” ವ|| ಎಂದು ಹೇಳಲಾಗಿ ಕಾದಂಬರಿಯು ಮುಗುಳ್ನಗೆಯನ್ನು ಬೀರುತ್ತಿರಲು ಈ ಸಮಾಚಾರವೇನೆಂದು ತಿಳಿಯದೆ ಮಹಾಶ್ವೇತೆಯು ಈ ಸಾರಿಕೆಯು ಏಕೆ ಹೀಗೆ ಹೇಳುತ್ತಿದೆ? ಎಂದು ಮದಲೇಖೆಯನ್ನು ಕೇಳಲಾಗಿ ಆಕೆ ಹೀಗೆ ಹೇಳಿದಳು. ೮೪. “ಈ ಅರಗಿಳಿಯ ಹೆಸರು ಪರಿಹಾಸನೆಂದು. ಈ ಸಾರಿಕೆಯ ಹೆಸರು ಕಾಳಿಂದಿ. ನಮ್ಮ ರಾಜಕುಮಾರಿಯೇ ಇವೆರಡಕ್ಕೂ ಬಹಳ ಮಮತೆಯಿಂದ ವಿವಾಹೋತ್ಸವವನ್ನು ನೆರವೇರಿಸಿದಳು. ವ|| ಹಾಗೆ ಪರಸ್ಪರ ಪ್ರೀತಿಯನ್ನು ಪಡೆದು ಸುಖದಿಂದ ಇರುತ್ತಿರಲು ಇಂದು ಬೆಳಗ್ಗೆ ಕಾದಂಬರೀದೇವಿಯ ಸಂಚಿಯವಳಾದ ತಮಾಲಿಕೆಯೆಂಬುವಳೊಡನೆ ಈ ಗಿಳಿಯು ಏಕಾಂತದಲ್ಲಿ ಏನನ್ನೋ ಹರಟುತ್ತಿದ್ದುದನ್ನು ಕೇಳಿ ೮೫. ಹೊಟ್ಟೆಕಿಚ್ಚುಂಟಾಗಲು ಆ ಗಿಳಿಯನ್ನು ನೋಡುವುದಿಲ್ಲ! ಮಾತಾಡಿಸುವುದಿಲ್ಲ! ಹತ್ತಿರಕ್ಕೆ ಹೋಗುವುದಿಲ್ಲ! ಕಾಲು ಹಿಡಿದರೂ ಒಪ್ಪುವುದಿಲ್ಲ! ಕೋಪಿಸಿಕೊಂಡು ಹಟದಿಂದ ಮುಖ ತಿರುಗಿಸುತ್ತದೆ! ಯಾರು ಎಷ್ಟು ಸಮಾಧಾನವನ್ನು ಹೇಳಿದರೂ ಪ್ರಸನ್ನವಾಗುವುದಿಲ್ಲ ವ|| ಎಂದು ಹೇಳಿದ ಮಾತುಗಳನ್ನು ಕೇಳಿ ರಾಜಪುತ್ರನು ಮಂದಹಾಸದಿಂದ ಕೂಡಿದ ಮುಖವುಳ್ಳವನಾಗಿ ೮೬. “ಪರಿಹಾಸಕನೆಂಬ ಒಂದು ಅರಗಿಳಿಯು ಕಾದಂಬರೀದೇವಿಯ ಸಂಚಿಯ ಊಳಿಗದವಳನ್ನು ಮೋಹಿಸಿ ಮಿಗಿಲಾದ ವಿರಹವ್ಯಥೆಯಿಂದ ಬೆಂದುಹೋಗುತ್ತಿದೆ ಎಂಬ ಸಂಗತಿಯು ಕರ್ಣಪರಂಪರೆಯಿಂದ ಎಲ್ಲಾ ಕಡೆಯಲ್ಲೂ ಹರಡಿಕೊಂಡಿದೆ. ೮೭. ಈ ಪರಿಹಾಸಕನು ನಾಚಿಕೆಯಿಲ್ಲದೆ ತನ್ನ ಹೆಂಡತಿಯನ್ನು ಮೊದಲು ಬಿಟ್ಟು, ಈಗ ಮತ್ತೆ ಬಿಡದೆ ಇಲ್ಲಿಗೆ ಬರಲಾಗಿ ಅವನನ್ನು ತಡೆಯುವುದಿಲ್ಲವೆಂದರೆ ಆಗ ಕಾದಂಬರೀದೇವಿಯರಿಗೆ ಬಹಳ ಉದಾಸೀನವುಂಟಾಗಿರಬೇಕು.

೮೮. ಚಪಲಸ್ವಭಾವದ ಈ ಹಕ್ಕಿಗೆ ಎಳೆಯವಯಸ್ಸಿನ, ಏನೂ ತಿಳಿಯದ ಕಾಳಿಂದಿಯನ್ನು ವಿಚಾರಮಾಡದೆ ಹಿಂದುಮುಂದು