ಕನ್ನಡದ ಆದ್ಯ ಸಾಮಾಜಿಕ ಕಾದಂಬರಿಗಳಲ್ಲಿ ೧೯೩೩ ರಲ್ಲಿ ಪ್ರಕಟವಾದ ಆನಂದಕಂದರ ‘ಸುದರ್ಶನ ಕೂಡ ಒಂದು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಕಾದಂಬರಿಗೆ ಇದೇ ನಾಂದಿ ಹಾಡಿತು. ಒಂದು ಸಂಸಾರಕ್ಕೆ ಸೇರಿದ ಕೆಲವು ಜನರ ಸ್ವಲ್ಪ ದಿನಗಳ ಚಿತ್ರವು ಸ್ಫುಟವಾಗಿ ಮೂಡಿಬಂದಿದೆ. ಈ ಕಾದಂಬರಿಯ ಕಾಲಾವಧಿಯೂ ಕಡಿಮೆ. ಕೇವಲ ನಾಲ್ಕು ತಿಂಗಳಿನದಾಗಿದೆ. ಉಷಾ-ಸುದರ್ಶನರು ಈ ಕಾದಂಬರಿಯ ಕೇಂದ್ರ ಬಿಂದುಗಳು.

ಆಕಸ್ಮಿಕವಾಗಿ ಸುದರ್ಶನ-ಉಷಾ ಜಹಗೀರದಾರರ ಮನೆಯಲ್ಲಿ ಇರುವ ಪ್ರಸಂಗ ಬರುತ್ತದೆ. ಪರಸ್ಪರ ಅನುರಕ್ತರು. ಇದೇ ಕಾಲಕ್ಕೆ ಜಹಗೀರದಾರರ ತಂಗಿಯ ಮಗಳು ಪ್ರಭಾಳೂ ಇತ್ತ ಬರುತ್ತಾಳೆ. ಜಹಗೀರದಾರರಿಗೆ ಸುದರ್ಶನನ ವಯಸ್ಸಿನ ಮಗ ಗಿರಿಧರ. ಸ್ವಾಭಾವಿಕವಾಗಿ ಪ್ರಭಾಳ ಒಲವು ಸೋದರಮಾವ ಗಿರಿಧರನಲ್ಲಿ. ಆದರೆ ಸಂಗೀತ ಪ್ರೇಮಿಯಾದ ಗಿರಿಧರನ ಮನಸ್ಸು ಉಷಾಳಲ್ಲಿ. ಉಷಾ ಸುದರ್ಶನನಲ್ಲಿ ಅನುರಕ್ತಳಾದ ವಿಷಯ ಅರಿತು, ಗಿರಿಧರ ಸುದರ್ಶನ ತಮ್ಮ ಮನೆ ಬಿಟ್ಟು ಹೋಗುವಂತೆ ವಾತಾವರಣ ನಿರ್ಮಿಸುತ್ತಾನೆ. ನಿರಾಶೆಗೊಂಡ ಸುದರ್ಶನ‘ದೀನಾನಂದ’ನೆಂಬ ಹೆಸರಿನಲ್ಲಿ ಸಮಾಜ ಸೇವೆಗೆ ತೊಡಗುತ್ತಾನೆ. ಉಷಾ ಕೂಡ ಆ ಮನೆಬಿಟ್ಟು ತನ್ನ ಮನೆ ಸೇರಿದಾಗ. ಆಕಸ್ಮಿಕವಗಿ ದೀನಾನಂದ ಭೇಟಿಯಾಗುತ್ತಾನೆ. ಸಮಾಜ ಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡ ದೀನಾನಂದನಾದ ಸುದರ್ಶನನು ವಿವಾಹಕ್ಕೆ ಒಪ್ಪುವುದಿಲ್ಲ. ಇತ್ತ ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಡಕ್ಕೆ ಪ್ರಭಾಳನ್ನು ಲಗ್ನವಾದ ಗಿರಿಧರ, ಮದುವೆಯ ಸಮಾರಂಭದಲ್ಲಿ ನರ್ತನಕ್ಕಾಗಿ ಬಂದ ಆವಂತಿಗೆ ಮಾರು ಹೋಗಿ ಪ್ರಭಾಳನ್ನು ದುಃಖಕ್ಕೀಡು ಮಾಡುತ್ತಾನೆ-ಇದು ಕಾದಂಬರಿಯ ಸಾರ.

ಇಲ್ಲಿ ನಿರ್ದಿಷ್ಟವಾಗಿ ರೂಪಗೊಂಡ ಪಾತ್ರಗಳು, ಕಥಾ ನಿರೂಪಣೆಯ ಸಹಜ ಗತಿ, ಆನಂದಕಂದರ ಭಾಷಾ ಶೈಲಿ, ದೇಶಿನುಡಿಯ ನಯ-ಲಯಗಳು, ಈ ಕಾದಂಬರಿಯ ವೈಶಿಷ್ಟ್ಯಗಳಾಗಿ ನಿಂತಿವೆ. ಕನ್ನಡದ ಆದ್ಯ ಸಾಮಾಜಿಕ ಕಾದಂಬರಿ ಎಂಬ ಹೆಗ್ಗಳಿಕೆಯ ಜತೆ, ಇತರ ಎಲ್ಲ ಗುಣಗಳಿಂದ ಮಹತ್ತ್ವ ಪಡೆದ ಕೃತಿಯಿದು.

ಅನಂತರ ಮರುವರ್ಷ ಪ್ರಕಟವಾದ ಕಾದಂಬರಿ ‘ರಾಜಯೋಗಿ’ವಿಜಯನಗರದ ಇತಿಹಾಸವನ್ನು ಪ್ರತಿನಿಧಿಸುವ ಕೃತಿ. ಈ ಕಾದಂಬರಿಗೆ ಮೂಲ ಆಕರ ಪೋರ್ತುಗಿಜ್‌ ಪ್ರವಾಸಿಯಾದ ‘ಫರ್ನವೋಸುನೀಜ್‌’ ಇವರ ವಿಸ್ತೃತ ವರದಿಯಲ್ಲಿ ದೊರೆತಿರುವ ಒಂದು ಐತಿಹಾಸಿಕ ಪ್ರಸಂಗ ಹಾಗೂ ‘ಸೋರ್ಸಿಸ್‌ ಆಫ್‌ ವಿಜಯನಗರ ಹಿಸ್ಟ್ರಿ’ ಎಂಬ ಗ್ರಂಥದಲ್ಲಿಯ ವಿರೂಪಾಕ್ಷರಾಯನ ಕಾಲದ ಶಾಸನ. ಇತರ ಕಾವ್ಯ. ನಾಟಕಗಳ ಬೇರೆ ಬೇರೆ ಭಾಗಗಳು ವಸ್ತುವಿನ ಬೆಳವಣಿಗೆಗೆ ಸಹಾಯ ನೀಡಿವೆ ಎಂದು ಕಾದಂಬರಿಕಾರರು ಹೇಳಿಕೊಂಡಿದ್ದಾರೆ.

ಸಂಗಮವಂಶದ ವಿರೂಪಾಕ್ಷರಾಯನು ಅನ್ಯಾಯವಾಗಿ ವಿಜಯನಗರ ಸಿಂಹಾಸನವನ್ನು ಆಕ್ರಮಿಸಿಕೊಂಡು, ಆಡಳಿತದತ್ತ ಗಮನವೀಯದೆ ವಿಷಯಲಂಪಟನಾಗಿ, ರಾಜ್ಯಕ್ಕೆ ಒಂದು ಕುತ್ತಾಗಿ ಪರಿಣಮಿಸುತ್ತಿರುವಲ್ಲಿ ಈ ಸಾಮ್ರಾಜ್ಯವನ್ನು ಮುಳುಗಿಸುವ ಕುತಂತ್ರಗಳು ಸ್ವಾಭಾವಿಕವಾಗಿ ನಡೆಯುತ್ತವೆ. ಇಂಥ ವಿಷಮ ಪ್ರಸಂಗದಲ್ಲಿ ರಾಜಪುತ್ರ ರಾಜಶೇಖರ ಯಾವ ರಾಜಕೀಯ ಗೊಡವೆಗೆ ಹೋಗದೆ ತನ್ನಷ್ಟಕ್ಕೆ ತಾನಿರುತ್ತಾನೆ. ಕೆಲವು ಜನ ಹಿತಚಿಂತಕರು ರಾಜಶೇಖರ ಮನಸ್ಸನ್ನು ಪರಿವರ್ತಿಸಿ ರಾಜ್ಯದ ವಸ್ತುಸ್ಥಿತಿಯನ್ನು ತೋರಿಸಿ ಕೊಟ್ಟಾಗ, ಆತ ತನ್ನ ಭಾವನಾ ಪ್ರಪಂಚದಿಂದ ಹೊರಬಂದು, ಕ್ಷಾತ್ರತೇಜಸ್ಸನ್ನು ಮೈಗೂಡಿಸಿಕೊಂಡು, ಮಹಮದೀಯ ಕನ್ಯೆಯನ್ನು ವಿವಾಹವಾಗಲು ಸಿದ್ಧನಾದ ಚಿಕ್ಕಪ್ಪ ವಿರೂಪಾಕ್ಷರಾಯನನ್ನು ಸಂಹರಿಸುತ್ತಾನೆ. ಇದರಿಂದ ರಾಜ್ಯದಲ್ಲಿ ತಲೆದೋರಿದ್ದ ಅಶಾಂತಿ ಮಾಯವಾಗುತ್ತದೆ. ಈ ರಾಜಶೇಖರನ ಪಾತ್ರಸೃಷ್ಟಿಯಲ್ಲಿ ಕಾದಂಬರಿಕಾರರು ಸತ್ವಗುಣ ಪ್ರಧಾನವಾದ ವ್ಯಕ್ತಿಯನ್ನು ರಜೋಗುಣದ ಕಡೆಗೆ ತಿರುಗುವಂತೆ ಮಾಡಿದ್ದು, ಅವರ ಕೌಶಲ್ಯಕ್ಕೆ ಉದಾಹರಣೆಯಾಗಿದೆ.

ರಾಜಶೇಖರನು ತನ್ನ ಚಿಕ್ಕಪ್ಪನನ್ನು ಕೊಂದ ಪ್ರಸಂಗದಿಂದಲೇ ‘ಅಶಾಂತಿಪರ್ವ’ ಕಾದಂಬರಿ(೧೯೩೫) ಪ್ರಾರಂಭವಾಗುತ್ತದೆ. ವಿಜಯನಗರ ಇತಿಹಾಸದಲ್ಲಿ ಬರುವ ರಾಜಶೇಖರ, ಪೆದ್ದಣ್ಣ, ಸಾಳುವ ನರಸಿಂಹನಾಯಕ ಈ ಪಾತ್ರಗಳ ಪರಿಧಿಯಲ್ಲಿ ಕಾದಂಬರಿಕಾರರು ‘ಅಶಾಂತಿ-ಪರ್ವ’ ಕಥೆಯನ್ನು ಹೆಣೆದಿದ್ದಾರೆ. ಇಲ್ಲಿ ಸುತ್ತಲಿಂದಲೂ ಅಶಾಂತಿಯು ತಾನೇ ತಾನಾಗಿ ಬರುವಂತೆ ಸಾಂಕೇತಿಕವಾಗಿ ಚಿತ್ರಿಸಿದ್ದಾರೆ. ವಿರೂಪಾಕ್ಷರಾಯನ ಕೊಲೆಯಾದ ಬಳಿಕ ರಾಜಶೇಖರ ಸಿಂಹಾಸನವನ್ನೇರುವುದಿಲ್ಲ. ಅವನಿಗೆ ಆ ಆಸೆಯೂ ಇಲ್ಲ. ಅದರಿಂದ ಪೆದ್ದರಾಯನು ದೊರೆಯಾಗಬೇಕೆಂದು ನಿರ್ಧಾರವಾಗುತ್ತದೆ. ಈ ಮಧ್ಯೆ ದಳಪತಿಯ ಮಗಳು ರತ್ನಾಂಬಿಕೆ ರಾಜ್ಯಕ್ಕೆ ಕಂಟಕವಾಗಿದ್ದ ವಿರೂಪಾಕ್ಷರಾಯನನ್ನು ಕೊಂದವರನ್ನು ವರಿಸುವದಾಗಿ ಪ್ರತಿಜ್ಞೆ ಮಾಡಿರುತ್ತಾಳೆ. ಬಾಲ್ಯದ ಗೆಳೆಯ ಪೆದ್ದಣ್ಣನಿಗೆ ಆಕೆಯನ್ನು ವರಿಸುವ ತವಕ. ರತ್ನಾಂಬಿಕೆಯ  ಮನಸ್ಸು ರಾಜಶೇಖರನತ್ತ ತಿರುಗಿರುತ್ತದೆ. ಅನಂತರ ಪೆದ್ದನಾಯಕನು ದಂಡನಾಯಕನಾದ ಸಾಳುವ ನರಸಿಂಹ ನಾಯಕನ ಮಗಳಾದ ಕಮಲಾಂಬಿಕೆಯಲ್ಲಿ ಒಲವು ತೋರುತ್ತಾನೆ. ಆದರೆ ಆಕೆಯ ವಿವಾಹ ತುಳುವ ನರಸಿಂಹನೊಡನೆ ನಿಶ್ಚಯವಾಗುತ್ತದೆ. ಮತ್ತೊಂದೆಡೆ ಪೆದ್ದರಾಯನ ಬಾಲ್ಯಸ್ನೇಹಿತ ಈಶ್ವರ ನಾಯಕ, ದಂಡನಾಯಕನಾದ ವೃದ್ಧ ಸಾಳುವ ನರಸಿಂಹನಾಯಕನ ಅಧಿಕಾರವನ್ನು ಪಡೆಯಬೇಕೆಂಬ ಹಂಬಲ. ಅದಕ್ಕಾಗಿ ಆತ ನಿತ್ಯ ಪೆದ್ದರಾಯನ ದುಂಬಾಲು ಬಿದ್ದಿರುತ್ತಾನೆ. ಹೀಗೆ ಹಲವು ಕಡೆಯಿಂದ ಅರಮನೆಯಲ್ಲಿ ‘ಅಶಾಂತಿ ಪರ್ವ’ ನಿರ್ಮಾಣವಾಗಿರುತ್ತದೆ.

ಈ ರೀತಿ ಒಳಗೊಳಗೆ ಅಶಾಂತಿಯ ಕಿಡಿಗಳು ಹೊತ್ತಿಕೊಳ್ಳುತ್ತಿರುವಲ್ಲಿ ರಾಜ್ಯಾಭಿಷೇಕ ಸಮಾರಂಭದ ಸಿದ್ಧತೆ ನಡೆಯುತ್ತದೆ. ಪೆದ್ದರಾಯ ತನ್ನ ಅಣ್ಣನಾದ ರಾಜಶೇಖರನ ಮಾತು ಮೀರಿ ಈಶ್ವರ ನಾಯಕನನ್ನು ದಂಡನಾಯಕನನ್ನಾಗಿ ನೇಮಿಸುತ್ತಾನೆ.  ಇದರ ಫಲವಾಗಿ ಮೋಸದಿಂದ ರಾಜಶೇಖರನ ಕೊಲೆಯಾಗುತ್ತದೆ. ರತ್ನಾಂಬಿಕೆಗೆ ಹುಚ್ಚು ಹಿಡಿಯುತ್ತದೆ. ಇದನ್ನೆಲ್ಲ ಕಂಡು ರೋಸಿಹೋದ ಪೆದ್ದನಾಯಕ ಎಲ್ಲಿಯೋ ಕಣ್ಮರೆಯಾಗುತ್ತಾನೆ. ಹೀಗೆ ವಿಷಾದದಲ್ಲಿ ಕಾದಂಬರಿ ಮುಗಿಯುತ್ತದೆ. ಐತಿಹಾಸಿಕ ಕಾದಂಬರಿಗೆ ಬೇಕಾದ ಭಾಷೆ, ಶೈಲಿ, ಸನ್ನಿವೇಶಗಳು ಕೃತಿಯನ್ನು ರೋಚಕವನ್ನಾಗಿ ಮಾಡಿವೆ.

‘ಮಲ್ಲಿಕಾರ್ಜುನ’(೧೯೬೧) ವಿಜಯನಗರ ಇತಿಹಾಸವನ್ನು ಕುರಿತಾದ ಮತ್ತೊಂದು ಕಾದಂಬರಿ. ಶಾಲಿವಾಹನ ಶಕ ೧೩೬೮ರಲ್ಲಿ ರಾಜ ಗದ್ದುಗೆಯನ್ನೇರಿದ ಮಲ್ಲಿಕಾರ್ಜುನನ ಕಥೆ ಇದಾಗಿದೆ. ರಾಜ್ಯದಲ್ಲಿ ರಾಜಕೀಯ ಅಸಂತುಷ್ಟಿಯಿಂದ ಗುಂಪುಗಾರಿಕೆ ಬೆಳೆದು, ಜನತೆಯಲ್ಲಿಯ ಸ್ವಾಭಿಮಾನದ ಅಭಾವ ಕಂಡು ದಂಡನಾಯಕ ಲಕ್ಕಣ್ಣ ದಂಡೇಶನು, ತಿಮ್ಮನಾಯಕನಿಗೆ ತನ್ನ ಪದವಿ ವಹಿಸಿಕೊಟ್ಟು ತಾನು ಕಲ್ಮಠ ಪ್ರಭುದೇವರೊಂದಿಗೆ ಸಾಮಾಜಿಕ-ಸಾಂಸ್ಕೃತಿಕ ಜನಜಾಗೃತೆಯಲ್ಲಿ ತೊಡಗುತ್ತಾನೆ. ಮಲ್ಲಿಕಾರ್ಜುನನ ಆಡಳಿತ ಸರಾಗವಾಗಿ ಸಾಗಲು ಲಕ್ಕಣ್ಣದಂಡೇಶ, ಸಾಳುವ ನರಸಿಂಹ ಮತ್ತು ಚಂದಲೆ ಬದ್ಧಕಂಕಣರಾಗುತ್ತಾರೆ. ಆದರೂ ರಾಜ್ಯದಲ್ಲಿ ತೆರೆಮರೆಯಲ್ಲಿ ಜರುಗಿದ ವಿದ್ವಂಸಕ ಘಟನೆಗಳು, ಪರರಾಜ್ಯದ ದಾಳಿಗಳು, ಸ್ವಾಮಿನಿಷ್ಠ ಸೇವಕರ ಪ್ರಯತ್ನದಿಂದ ಯಶಪಡೆಯುವುದಿಲ್ಲ. ರಾಣಿ ದೇವಲದೇವಿಯ ಅಪಹರಣದ ಸಂಚು, ವಿರೂಪಾಕ್ಷನ ಕೊಲೆಯ ಸಂಚುಗಳು ವಿಫಲಗೊಳ್ಳುತ್ತವೆ. ರಾಜ್ಯದ ಮೇಲೆ ಏರಿಬಂದ ಬಹಮನಿಸುಲ್ತಾನ ಕೂಡ ಸೋತು ಪಲಾಯನ ಮಾಡಬೇಕಾಗುತ್ತದೆ. ಮಲ್ಲಿಕಾರ್ಜುನ ಸುಲಭವಾಗಿ ಸುಲ್ತಾನನ ಮೇಲೆ ಜಯಗಳಿಸುತ್ತಾನೆ. ಈ ಗೆಲುವಿನ ಸಮಾಚಾರ ತಿಳಿದು, ಮಲ್ಲಿಕಾರ್ಜುನನ್ನು ರಕ್ಷಿಸಲು ಹೋಗಿ ಗಾಯಗೊಂಡಿದ್ದ ಚಾಂಚಲೆ ಸಂತೋಷದಿಂದ ಸಾವನ್ನಪ್ಪುತ್ತಾಳೆ. ಇಲ್ಲಿಗೆ ಕಾದಂಬರಿಯ ಕೊನೆಯಾಗುತ್ತದೆ.

ಆನಂದಕಂದರು ವಿಜಯನಗರದ ಸಮಗ್ರ ಇತಿಹಾಸವನ್ನಾಧರಿಸಿ ಸುಮಾರು ೧೫-೨೦ ಕಾದಂಬರಿಗಳನ್ನು ಬರೆಯಲು  ಅಪೇಕ್ಷಿಸಿದ್ದರು. ಆದರೆ ಅವರ ಅನಾರೋಗ್ಯ ಅದಕ್ಕೆ ಅವಕಾಶ ಕೊಡಲಿಲ್ಲ. ಆದರೂ ಅವರು ಬರೆದ ಈ ಮೂರು ವಿಜಯನಗರದ ಕಥೆಯನ್ನೊಳಗೊಂಡ ಕಾದಂಬರಿಗಳು ಕನ್ನಡ ಐತಿಹಾಸಿಕ ಕಾದಂಬರಿಗಳಲ್ಲಿ ತಮ್ಮದೇ ಆದ ವಿಶಿಷ್ಟ ಮಾರ್ಗ ಕಂಡು ಕೊಂಡಿವೆ. ಈ ಮೊದಲು ಗಳಗನಾಥರು ಬರೆದು ವಿಜಯನಗರ ಕುರಿತಾದ ಕಾದಂಬರಿಗಳಲ್ಲಿ ಕಲ್ಪಕತೆ ಆಧಿಕ್ಯವನ್ನು ಪಡೆದಿದ್ದರೆ, ಆನಂದಕಂದರು ಐತಿಹಾಸಿಕ ತಥ್ಯಕ್ಕೆ ಒತ್ತುಕೊಟ್ಟು, ಅದರ ಜತೆ ಕಥಾ ನಿರೂಪಣೆಯಲ್ಲಿಯೂ ತಮ್ಮದೇ ದಾರಿ ನಡೆದು ಇವುಗಳಿಗೆ ಸಾಮರ್ಥ್ಯ ನೀಡಿದ್ದಾರೆ. ಇತಿಹಾಸಕ್ಕೆ ಅಪಚಾರವಾಗದಂತೆ ಪ್ರಾಮಾಣಿಕವಾಗಿ ಕಥೆ ಹೆಣೆದಿದ್ದಾರೆ. ವಿಜಯನಗರ ಕಾಲದ ವೈಭವ, ಸಾಹಸ, ಸಂಸ್ಕೃತಿ, ಜನಜೀವನ, ಅಂದಿನ ಪರಿಸರ ಯಥಾವತ್ತಾಗಿ ಮೂಡಿ ಬಂದಿವೆ. ನಿರೂಪಣೆಯ ಜತೆ ಜೀವನದರ್ಶನದಲ್ಲಿಯೂ ಆನಂದಕಂದರ ಇತಿಹಾಸ ಪ್ರಜ್ಞೆ ಜಾಗೃತವಾಗಿಯೇ ಇರುವುದೊಂದು ವೈಶಿಷ್ಟ್ಯ.

ಆನಂದಕಂದರ ಕೊನೆಯ ಕಾದಂಬರಿ ‘ಮಗಳ ಮದುವೆ’ ಮೊದಲ ಸಲ ೧೯೫೦ ರಲ್ಲಿ ಪ್ರಕಟವಾಗಿ ಮರುವರ್ಷ ಮುಂಬಯಿ ಸರಕಾರದ ೨ ಸಾವಿರ ರೂ. ಬಹುಮಾನ ಪಡೆಯಿತು. ಈಗ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರತಿಸಲ ವಿವಿಧ ಪ್ರಕಾರದ ಪುಸ್ತಕಗಳಿಗೆ ಬಹುಮಾನ ನೀಡುವಂತೆ, ಆಗ ಮುಂಬಯಿ ಕರ್ನಾಟಕ ಪ್ರದೇಶಗಳ ಕೃತಿಗಳಿಗೆ ಮುಂಬಯಿ ಸರಕಾರವೇ ಬಹುಮಾನ ನೀಡುತ್ತಿತ್ತು. ಇದು ಆನಂದಕಂದರು ಮೊದಲ ಸಾಮಾಜಿಕ ಕಾದಂಬರಿ ‘ಸುದರ್ಶನ’ ಬರೆದ ಬಳಿಕ ೧೮ ವರ್ಷಗಳನಂತರ ಬರೆದ ಇನ್ನೊಂದು ಸಾಮಾಜಿಕ ಕಾದಂಬರಿಯಾಗಿದೆ. ತುಂಬ ವಾಸ್ತವಪ್ರಜ್ಞೆಯ ಪರಿಣಾಮಕಾರಕ ಕೃತಿ. ಇದರ ಕಥಾವಸ್ತುಕೂಡ ಸ್ವಾತಂತ್ಯ್ರಪೂರ್ವಕಾಲದ ರಾಜಕೀಯ ಚಳುವಳಿಯ ಜತೆ ಉತ್ತರ ಕರ್ನಾಟಕದ ಜನ ಜೀವನವನ್ನು ಕುರಿತದ್ದಾಗಿದೆ.

ಸಬ್‌ರಿಜಿಸ್ಟ್ರಾರ್ ಕಛೇರಿಯ ಗುಮಾಸ್ತ ಗೋಪಾಲರಾಯರ ಮಗಳು ಕಾವೇರಿ, ಮದುವೆಯ ವಯಸ್ಸಿಗೆ ಬಂದ ಯುವತಿ. ಅಂತ ಆಧುನಿಕಳಲ್ಲದ ಈಕೆಯ ವಧು ಪರೀಕ್ಷೆ ಈಗಾಗಲೇ ೧೮ ಸಲ ಮುಗಿದಿದ್ದು, ೧೯ ನೆಯ ಸಲಕ್ಕಾಗಿ ವೆಂಕಣ್ಣನೆಂಬ ತರುಣ ತನ್ನ ಗೆಳೆಯರೊಡನೆ ಬಂದಿರುತ್ತಾನೆ. ರತ್ನಾಕರನೆಂಬ ಆದರ್ಶವಾದಿ ದೇಶಪ್ರೇಮಿ ಯುವಕ ಅವರ ಜತೆಯಾಗಿರುತ್ತಾನೆ. ಔಪಚಾರಿಕವಾಗಿ ವಧು ಪರೀಕ್ಷೆ ಮುಗಿದು, ಈ ಬಾರಿಯೂ ಕಾವೇರಿ ವಧು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುತ್ತಾಳೆ.

ಇದೇ ಪ್ರಸಂಗಕ್ಕಾಗಿ ಬಂದ ಕುಮುದಾ ಎಂಬ ನೆರೆಯ ತರುಣಿ ಎಲ್ಲರಿಗೆ ಚಹ ಕೊಡಲು ಹೊರ ಬಂದಾಗ, ವೆಂಕಣ್ಣ ಹಾಗೂ ಅವನ ಗೆಳೆಯರ ದೃಷ್ಟಿ ಆಕೆಯ ಮೇಲೆ ಬೀಳುತ್ತದೆ. ಕುಮುದಾ ಕಪ್ಪಿಗೆ ಚಹ ಸುರಿಯುತ್ತಿರುವಲ್ಲಿ ಅದು, ರತ್ನಾಕರನ ಕಾಲಮೇಲೆ ಬಿದ್ದು, ಅದನ್ನು ಒರೆಸಿಕೊಳ್ಳಲು ಕುಮುದಾ ರತ್ನಾಕರನಿಗೆ ತನ್ನ ಕರವಸ್ತ್ರ ನೀಡುತ್ತಾಳೆ. ಆ ಕರವಸ್ತ್ರ ರತ್ನಾಕರನ ಹತ್ತಿರವೇ ಉಳಿಯುತ್ತದೆ. ಮುಂದೆ ವೆಂಕಣ್ಣ ಕುಮುದಾಳನ್ನು ವರಿಸಲು ಶತಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ. ರತ್ನಾಕರನ ಪ್ರಯತ್ನದಿಂದ ಕಾವೇರಿಯ ವಿವಾಹ ವೆಂಕಣ್ಣನ ಅಣ್ಣ ರಾಗಣ್ಣನ ಜತೆಯಾಗುತ್ತದೆ. ಅದೇ ಲಗ್ನಮಂಟಪದಲ್ಲಿ ರತ್ನಾಕರನ ಬಂಧನವಾಗಿ, ಆತ ಒಂದು ಹೆಣ್ಣಿನ ಬಾಳನ್ನು ದಡಕ್ಕೆ ಹಚ್ಚಿದ ಸಂತೋಷದಲ್ಲಿ ಸೆರೆಮನೆ ಸೇರುತ್ತಾನೆ. ಇದಿಷ್ಟು ಕಥಾ ಹಂದರ.

ಕಾದಂಬರಿಯಲ್ಲಿ ಬರುವ ವಿವಿಧ ವ್ಯಕ್ತಿಗಳ ಪಾತ್ರಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಸ್ವಾತಂತ್ಯ್ರ ಆಂದೋಲನ, ಮಧ್ಯಮ ವರ್ಗದ ಹೆಣ್ಣಿನ ವಿವಾಹ ಸಮಸ್ಯೆ, ಆದರ್ಶ, ಅಸಹಾಯಕತೆ ಇವೆಲ್ಲವುಗಳ ಹಿನ್ನೆಲೆಯಲ್ಲಿ ಲೇಖಕರೇ ಹೇಳುವಂತೆ ‘ಉತ್ತರ ಕರ್ನಾಟಕದ ಜನಜೀವನದ ವಿವಿಧ ಮಾದರಿಗಲನ್ನು ‘ಸೂಕ್ಷ್ಮವಾಗಿ ಪರಿಚಯಿಸಿದ್ದಾರೆ. ಆನಂದಕಂದರು ಹಳ್ಳಿ-ಪಟ್ಟಣಗಳ ಎರಡೂ ಸಂಸ್ಕೃತಿಗಳನ್ನು, ಜನಜೀವನವನ್ನು ಅರಿತವರು. ಈ ಕಾದಂಬರಿಯಲ್ಲಿ ಈ ಎರಡೂ ಬಗೆಯ ಗಾಢವಾದ ಚಿತ್ರಣವನ್ನು ಕಾಣಬಹುದಾಗಿದೆ. ನವೋದಯಕಾಲದ ಸಾಮಾಜಿಕ ಕಾದಂಬರಿಗಳಲ್ಲಿ ‘ಮಗಳ ಮದುವೆ’ ಒಂದು ಮಹತ್ವದ ಕೃತಿಯಾಗಿದೆ.