ಹಳೆಯ ಮೈಸೂರು ಸಂಸ್ಥಾನದ ಸಂಗೀತ ವಿದ್ವಾಂಸರುಗಳಲ್ಲಿ ಅಗ್ರಸ್ಥಾನ ಗಳಿಸಿದ್ದ ಆಸ್ಥಾನ ವಿದ್ವಾನ್‌ ವಾಸುದೇವಾಚಾರ್ಯರು ಸಂಗೀತ ಸಾಹಿತ್ಯಗಳೆರಡರಲ್ಲೂ ಪಾಂಡಿತ್ಯ  ಗಳಿಸಿದ್ದವರು. ಕಿರು ವಯಸ್ಸಿನಲ್ಲಿಯೇ ಸಂಸ್ಕೃತ ಸಂಗೀತ ವ್ಯಾಸಂಗವನ್ನು ಆರಂಭಿಸಿದ್ದ ಇವರು ಕೀರ್ತಿಶೇಷರಾದ ವೀಣೆ ಶೇಷಣ್ಣ ವೀಣೆ ಸುಬ್ಬಣ್ಣ ಇವರುಗಳ ಸಮಕಾಲೀನರು. ಸಂಗೀತದಲ್ಲಿ ಹೆಚ್ಚಿನ ಪರಿಶ್ರಮ ಪಡೆಯಲು ರಾಜರ ನೆರವಿನಿಂದ ಶ್ರೀ ತ್ಯಾಗರಾಜರ ಪರಂಪರೆಗೆ ಸೇರಿದ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ರವರನ್ನು ಆಶ್ರಯಿಸಿದರು. ಸಂಗೀತದ ಲಕ್ಷ್ಯ-ಲಕ್ಷಣಗಳೆರಡರಲ್ಲೂ ಪ್ರಾವೀಣ್ಯತೆ ಗಳಿಸಿದರು.

ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರತಿಭಾವಂತ ವಾಗ್ಗೇಯಕಾರರಾಗಿ ಪರಿಗಣಿತರಾಗಿರುವ ಶ್ರೀಯುತರು ಅಷ್ಟೇ ಪ್ರಭಾವಶಾಲಿ ಗಾಯಕರೆಂದು ದಕ್ಷಿಣಾದ್ಯಂತ ಕೀರ್ತಿ ಗಳಿಸಿದ್ದರು. ಮಧ್ಯಮ ಕಾಲದ ತಾನ ವಿನಿಕೆಯಲ್ಲಿ ಸಿದ್ಧಹಸ್ತರೆಂಬ ಖ್ಯಾತಿಗೆ ಪಾತ್ರರಾಗಿದ್ದವರು.

ಮೈಸೂರು ತಿರುವಾಂಕೂರು ರಾಜರ ಆಸ್ಥಾನಗಳಲ್ಲಿ ಮನ್ನಣೆ ಪಡೆದಿದ್ದ ವಾಸುದೇವಾಚಾರ್ಯರು ಮದರಾಸಿನ ಮ್ಯೂಸಿಕ್‌ ಅಕಾಡೆಮಿಯ ವಾರ್ಷಿಕ ವಿದ್ವಾಂಸರ ಸಮ್ಮೇಳನಾಧ್ಯಕ್ಷರಾಗಿ ‘ಸಂಗೀತ ಕಲಾನಿಧಿ’ ಎಂಬ ಪ್ರಶಸ್ತಿಯಿಂದಲೂ ಭೂಷಿತರಾಗಿದ್ದರು. ರಾಜ್ಯದ ಹಾಗೂ ಕೇಂದ್ರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಇವರಿಗೆ ಸಂದಿದ್ದುವು. ಕೇಂದ್ರದ ‘ಪದ್ಮಭೂಷಣ’ ಗೌರವ ಗಳಿಸಿದ ಕಲಾವಿದರುಗಳಲ್ಲಿ ಆಚಾರ್ಯರು ಪ್ರಥಮ ಪಂಕ್ತಿಗೆ ಸೇರಿದವರು.

ವಾಗ್ಗೇಯಕಾರರಾಗಿ ಆಚಾರ್ಯರ ಕೀರ್ತಿ ಅದ್ವಿತೀಯ. ಅನೇಕ ಸುಪ್ರಸಿದ್ಧ ಹಾಗೂ ಅಪರೂಪದ ರಾಗಗಳಲ್ಲಿ ಪ್ರಭಾವೀ ಕೃತಿಗಳನ್ನು ರಚಿಸಿದರು. ತಮ್ಮ ಕಡೆಯ ದಿನಗಳನ್ನು ಶ್ರೀಮತಿ ರುಕ್ಮಿಣಿದೇವಿ ಅರುಂದೇಲ್‌ ಅವರ ಪ್ರಖ್ಯಾತ ಅಡಿಯಾರ್ ಕಲಾಕ್ಷೇತ್ರದಲ್ಲಿ(ಮದರಾಸು) ಕ್ರಯಿಸಿದ ಆಚಾರ್ಯರು ‘ರಾಮಾಯಣ ನೃತ್ಯರೂಪಕ’ ಮಾಲಿಕೆಗೆ ಸಂಗೀತವನ್ನು ಆಳವಡಿಸಿ ಅವುಗಳು ಅಮರ ಕಲಾ ಕೃತಿಗಳಾಗಲು ಕಾರಣರಾದ ಮಹಾನುಭಾವರು. ೧೭-೦೫-೧೯೬೧ರಲ್ಲಿ ಶಾರದೆಯ ಸಿರಿಮಡಿಲಲ್ಲಿ ಚಿರ ವಿಶ್ರಾಂತಿ ಪಡೆದರು.