(ಗಂಗಾತೀರದ ಬನ. ಕನ್ಯೆಯಾದ ಕುಂತಿದೇವಿ ಹೂವು ಮೊದಲಾದವುಗಳನ್ನು ಆಯ್ದು ಕೊಂಡು ಬರುವಳು.)

ಕುಂತಿ — ನನ್ನ ಕೆಳದಿಯರೆನ್ನ ಅಗಲೆಲ್ಲಿ ಅಡಗಿದರೊ
ನಾಕಾಣೆ. ಅರಸರಿಸಿ ಸಾಕಾಯ್ತು. ಕೇದಗೆಯ
ಮುಳ್ಳಿಡಿದ ಮಳೆಗಳಲಿ ಹುಡುಕುವನೆ, ಸರ್ಪಗಳ
ಹೆದರಿಕೆ! ಪಾದರಿಯ ಬನದಲ್ಲಿ ಹುಡುಕುವನೆ,
ದುರುದುಂಬಿಗಳ ಕಾಟ! ಚೆಂದಳಿರನುಟ್ಟಿರುವ
ಮಾಮರದ ತೋಪಿನಲಿ ಸೊಕ್ಕಿದಳಿಗಳ ಭಯ!
ಬನವೆನಿತು ಕಣ್ಗೆಡ್ಡವಾಗಿಹುದು? ಬಾಂದೊರೆಗೆ
ಕುಸುಮಾಂಜಲಿಯನೆತ್ತಿ ಭಕ್ತಿಯಲಿ ಬಾಗಿರುವ
ತಳಿರುಡೆಯ ಸಿರಿಯಿಂದ ನಳನಳಿಸಿ ಮೆರೆಯುತಿದೆ.
ಹಕ್ಕಿಗಳು ತೀತಾಂಜಲಿಯ ನಿವೇದಿಸುವಂತೆ
ಮೈಮರೆತು ಉಲಿಯುತಿವೆ. (ಮೇಲೆ ನೋಡಿ) ಆಹಾ! ದಿನೇಶನಾ
ಮುಗಿಲಿಲ್ಲದಾಗಸದಿ ಥಳಿಸುತಿಹನೆಂತು! (ತಿರುಗಾಡಿ ಚಿಂತಿಸುತ್ತಾ)
ದೂರ್ವಾಸ ಮುನಿವರನು ಕೊಟ್ಟೈದು ವರಗಳಲಿ
ಸೂರ್ಯಮಂತ್ರವು ಒಂದು. ಮುನಿವರನ ವರಗಳಲಿ
ದಿಟವಾಗಿಯೂ ಮಹಿಮೆಯಿರುವುದೇ? ನೋಡುವೆನು;
ಇದೆ ಸಮಯ. ಕೆಳದಿಯರು ಇಲ್ಲಿಲ್ಲ, ಯಾರಿಲ್ಲ,
ಏಕಾಂಗಿಯಾಗಿಹೆನು. ನಿವೇದಿಸುತೆ ಈ ಅಲರ
ಸೂರ್ಯದೇವನ ಪೂಜೆಮಾಡಿ ಅಭಿಮಂತ್ರಿಸುವೆ!
(ಪೂಜೆಮಾಡಿ ಬೇಡುವಳು)
ಎಲೆ ದಿವಾಕರನೆ, ಸೂರ್ಯನಾರಾಯಣನೆ,
ಜಗದ ಸಂರಕ್ಷಕನೆ, ಸರ್ವವಿಶ್ವದ ಕಣ್ಣೆ,
ದಿನಮಣಿಯೆ, ಬಾಲೆಯಭಿಲಾಷೆಯಂಕುರವು
ಫಲಿಸುವಂದದಿ ಮಾಡು, ಭಕ್ತಿಯಲಿ ಬೇಡುವೆನು. (ಬೆಚ್ಚಿ)
ಏನಿದೇನಿದು ಕಾಂತಿ ಮುತ್ತುತಿಹುದೀ ಬನವ!
ನೂರ್ಮಡಿಯ ಸೊಬಗಿಂದ ನಲಿಯುತಿದೆ ತರುನಿಕರ!
ಯಾರಿವನು ಥಳಿಸುತಿಹ ಕಾಂತಿಯಲಿ ಬಳಿಸಾರು
ತಿಹನು. ಯಕ್ಷನೊ? ಕಿನ್ನರನೊ? ಅಮರನೊ?
ಕಂಗಳವನನು ನೋಡಲಾರದಲೆ ಮುಚ್ಚುತಿವೆ!
(ಕೈಗಳಿಂದ ಮೊಗವನ್ನು ಮುಚ್ಚಿಕೊಂಡು ಮೊಳಕಾಲೂರಿ ನಿಲ್ಲುವಳು. ಸೂರ್ಯದೇವನು ಕೈಯಲ್ಲಿ ಶಿಶುವೊಂದನ್ನು ಹಿಡಿದು ಬಂದು ಕುಂತಿಯ ಮುಂದೆ ನಿಂತು)

ಸೂರ್ಯದೇವ — ಬಾಲೆ, ಕುಂತಿಯೆ, ನಿನ್ನ ಬಯಕೆಯನು ಸಲ್ಲಿಸಲು
ನೋಡಿದೋ ಬಂದಿಹೆನು. ಬೆಚ್ಚದಿರು, ಬೆದರದಿರು.
ಲೊಕದ ಚರಾಚರಂಗಳ ಜೀವಕಾಧಾರ-
ವಾಗಿರುವ ಸೂರ್ಯದೇವ ನಾನು. ಇದೆಕೋ
ನಿನ್ನ ಬಾಳಿನ ಬಯಕೆಯಂಕುರವು ಪೂತಿಹುದು.
ನಿನಗಾಗಿ ಮುದ್ದು ಕುವರನ ನಾನು ತಂದಿಹೆನು;
ಕಣ್ದೆರೆದು ನೋಡು, ಮೇಲೇಳು, ತೆಗೆದುಕೋ!
ನಿನ್ನ ಸೌಭಾಗ್ಯಕೆಣೆಯಿಲ್ಲ : ಇವನಪ್ರತಿಮ
ಸಾಹಸಿ! ಇವನೆದೆಯೊಳಮೃತಕಲಶವಿದೆ!
ಮೈಯಲಿ ದುರ್ಭೇದ್ಯವಹ ವಜ್ರ ಕವಚವಿದೆ!
ಈ ಎರಡು ಇವನೊಳಿರುವನ್ನೆಗಂ ಇವನೊಡನೆ
ಮಾರ್ಮಲೆವ ಪಟುಭಟರು ಮೂರುಲೋಕದೊಳಿಲ್ಲ.
ಮೊದಲು ನೀನೀತನನು ಕಣ್ಣಿಂದ ನೋಡದಲೆ
ಕಿವಿಯಿಂದ ಕೇಳಿರುವೆ, ಅದರಿಂದ ನೀನಿವನ
ಕರ್ಣದಿಂ ಪಡೆದಿರುವೆ. ತಿರೆಯೊಳೀತನ ಹೆಸರು
ಕರ್ಣನೆಂದೊಳ್ಜಸದಿ ಪ್ರಖ್ಯಾತವಾಗಿರಲಿ.
(ಕುಂತಿಯು ಮೆಲ್ಲನೆ ಮೇಲೆದ್ದು ಸೂರ್ಯದೇವನಿಗೆ ಕೈಮುಗಿದು, ನಾಚುತ್ತ ಕರ್ಣನನ್ನು ಪರಿಗ್ರಹಿಸುವಳು. ಸೂರ್ಯದೇವನು ಅದೃಶ್ಯನಾಗುವನು. ಕುಂತಿಯು ಮಗುವನ್ನು ಕೈಯಲ್ಲಿ ಹಿಡಿದು ನೋಡುತ್ತಾ ನಗುವಳು, ಮುದ್ದಾಡುವಳು, ನಾಚುವಳು, ಸುತ್ತಲೂ ನೋಡಿ ಬೆಚ್ಚುವಳು.)

ಕುಂತಿ — ಬನದರಳುಗಳ ದೇಸಿ ಮೈಯಾಂತ ತೆರದಿಂದೆ
ರಾಜಿಸುವದೀ ಕುಮಾರನ ಪೆಂಪು. ನಳನಳಿಪ
ಕೆಂದಳಿರ ಕೋಮಲತೆ ರೂಪವೆತ್ತಂದದಲಿ
ಮೆರೆಯುತಿಹುದೀ ಕುಮಾರನ ಸೊಬಗು. ಬಾಂದೊರೆಯ
ವೀಚಿಗಳ ನಲ್ಮೆಯೋ ಎಂಬಂತೆ ನಲಿಯುತಿದೆ
ನನ್ನ ಕಂದನ ಮೊಗವು. ತಿಳಿಯಾಳದಾಗಸದ
ನೈರ್ಮಲ್ಯದಂತೆ ಮನಮೋಹಿಪವು ಕಣ್ಣುಗಳು : (ಮುತ್ತಿಡುವಳು)
(ತೆರೆಯಲ್ಲಿಕೆಳದೀ, ಎಲ್ಲಿರುವೆ?” ಎಂದು ಸಖಿಯರ ಮಾತು ಕೇಳಿಸುವುದು)
ಅಯ್ಯೊ, ಈಗೇನು ಮಾಡುವುದು? ಕಂದನನೆಲ್ಲಿ ಅಡಗಿಸಲಿ? ಕೆಳದಿಯರು ಬಂದು ನೋಡಿದರೆ ಏನು ಹೇಳುವರು? ಅಯ್ಯೋ ಮುಂದನರಿಯದೆ ಅಪರಾಧ ಮಾಡಿದೆನಲ್ಲಾ. ಕಂದನನ್ನು ಮನೆಗೆಂತು ಕೊಂಡುಹೋಗಲಿ? ತಂದೆತಾಯಂದಿರು ಏನನ್ನುವರು? ಲೋಕಾಪವಾದಕ್ಕೆ ಗುರಿಯಾಗುವೆನಲ್ಲಾ! ಕುಂತಿ ಭೋಜನ ಮಗಳು ಕನ್ನೆತನದಲ್ಲಿ ಕೂಸನ್ನು ಹೆತ್ತಳು ಎಂದು ಲೋಕವೇ ನಿಂದಿಸುವುದಲ್ಲಾ! ಹೇ ಸೂರ್ಯದೇವ, ನಿನಗೆ ಸಾವಿರ ನಮಸ್ಕಾರ! ನನ್ನ ಕಂದನ ಮರಳಿ ಹಿಂದಕ್ಕೆ ತೆಗೆದುಕೋ! ಹುಡುಗಾಟದಿಂದ ತಪ್ಪುಮಾಡಿದೆನು. ತರಳತನದ ಅಪರಾಧವನ್ನು ಕ್ಷಮಿಸು; ಬಾ! (ಮಗುವನ್ನು ನೋಡಿ ಕಂಬನಿ ಸುರಿಸುತ್ತಾ) ಎಲೆ ಕಂದ, ನಿನ್ನಂತಹ ಕುಮಾರನನ್ನು ಪಡೆದ ತಾಯಿಗೆ ಸಮ್ಮಾನವಲ್ಲದೆ ದುಮ್ಮಾನವಿರಬಾರದು. ಆದರೂ ಕನ್ನೆತನದಲ್ಲಿ ನಿನ್ನನು ಹೆತ್ತು ನಿನಗೆ ಮಹದಪರಾಧ ಮಾಡಿದೆನು. ನನ್ನನ್ನು ಮನ್ನಿಸು, ಕಂದ! ಇನ್ನೇನು ಮಾಡಲಿ? ಅಪರಾಧಕ್ಕೆ ತಕ್ಕ ಪ್ರಾಯಶ್ಚಿತ್ತವಾವುದು? ಮನೆತನಕ್ಕೆ ಅಪಕೀರ್ತಿಯನ್ನು ತಂದೆನಲ್ಲಾ. ಹೇ ಮುನಿವರನೆ, ನೀನು ದಾನಮಾಡಿದ ರತ್ನವು ಮರುಳಾದ ನನಗೆ ಕೆಂಗೆಂಡವಾಯ್ತೇ? ಅಪಮಾನಕಿಂತ ಸಾವೇ ಲೇಸು. (ಗಂಗೆಯನ್ನು ನೋಡಿ) ಸುರನರರ ಪಾಪಗಳ ತೊಳೆಯುತ್ತ ಹರಿಯುತಿಹ ದಿವಿಜ ನದಿಯೇ, ನನ್ನ ಕಂದನ ಮುಡಿದು ನಿನಗೆನ್ನನರ್ಪಿಸುವೆ. ನನ್ನ ಪಾಪವನು ಪರಿಹರಿಸಿ ಪಾವನೆಯನ್ನಾಗಿ ಮಾಡು. ಹೇ ಸೂರ್ಯದೇವ, ನನ್ನ ತಪ್ಪನು ಮನ್ನಿಸು. ಪರಮ ತೇಜಸ್ವಿಯೂ, ಕರುಣಾಶಾಲಿಯೂ ಆದ ಓ ಋಷಿ ತಿಲಕನೆ, ನನಗೆ ಆಶೀರ್ವಾದ ಮಾಡು. ದೇವಿ, ಗಂಗಾಮಾತೆಯೆ, ಇದೋ ಪಾಪಿಯನು ಸ್ವೀಕರಿಸು!
(ಗಂಗೆಯ ತಡಿಗೆ ಹೋಗಿ ಕೂಸಿನೊಡನೆಯೆ ಹಾರಲೆಳಸುವಳು. ಗಂಗಾಮಾತೆಯು ಮೈ ದೋರಿ ಆಕೆಯನ್ನು ತಡೆಯುವಳು.)

ಗಂಗಾಮಾತೆ — ಮಾಣು, ಮಾಣೆಲೆ ಬಾಲೆ, ದುಡುಕದಿರು, ಕೆಡಿಸದಿರು,
ನಿನ್ನ ಬಾಳಿನ ಬೆಳಕ. ನಿನ್ನ ಕೈಲಿಹ ಮಹಾ
ಜ್ಯೋತಿಯನು ಕತ್ತಲೆಗೆ ಶರಣು ಮಾಡದಿರು.
ಜೀವನದ ಲತೆ ಚಿಗುರಿ ಹೂವಾಗಿ ಕಾಯಾಗಿ
ಹಣ್ಣಾಗುವಾ ಮುನ್ನ ಬೇರ್ಗೊಯ್ದು ಬಿಸುಡದಿರು.
ನಿನ್ನ ಚಿಂತೆಯ ನಾನು ನೀಗುವೆನು, ಭಯವೇಕೆ?

ಕುಂತಿ (ತಲೆಬಾಗಿ) ನಮಿಸುವೆನು, ಮಾತಾಯಿ ಲೋಕಾಪವಾದಕ್ಕೆ
ಗುರಿಯಾಗುವಾ ಕಾಲ ಬಂದಿರುವುದೆನಗೆ!
ತರಳತನದಿಂದ ಮುನಿವರನಿತ್ತ ವರಬಲವ-
ನರಿಯದೆ ದುರುಪಯೋಗ ಪಡಿಸಿಹೆನು. ತಪ್ಪಿದೆನು;
ಹೇಗಾದರೂ ಮಾಡಿ ಲೋಕಾಪವಾದಕ್ಕೆ
ಗುರಿಯಾಗುದಂತೆ ದಾರಿಯ ತೋರು, ಮಾತಾಯಿ!

ಗಂಗಾಮಾತೆ — ನಾನೆಲ್ಲ ಅರಿತೆಹೆನು; ನಾನೆಲ್ಲ ನೋಡಿದೆನು;
ನಿನ್ನ ಮಾನವನುಳುಹಿಕೊಳೆ ಯತ್ನಿಸುವೆಯಾದರೆ (ಕರ್ಣನನ್ನು ತೊರಿಸಿ)
ಈ ಮಹಾತ್ಮನ ಜೀವಮಾನವನು ಕೆಡಿಸಿದಂ-
ತಾಗುವುದು. ಜಗದಲ್ಲಿ ಹಿಂದೆ ಎಂದೆಂದಿಗೂ
ತಾಯಿಯರು ಎಸಗದಿಹ ಪಾಪಕ್ಕೆ ಪಕ್ಕಾಗುವೆ;
ಮುಂದೆ ನೀನದಕಾಗಿ ಪರಿತಪಿಸಲೇ ಬೇಕು;
ಸ್ವಾರ್ಥತೆಗೆ ತಕ್ಕ ಪ್ರಾಯಶ್ಚಿತ್ತ ದೊರಕುವುದು
ವಿಧಿನಿಯಮ, ಅದನು ಮೀರುವರಾರು ಇಲ್ಲ!
ನಿನ್ನ ಕಂದನನೆನಗೆ ಕೆಯ್ಯೆಡೆಯಾಗಿ ಕೊಡು;
ನಾನೀತನನು ಸಾಕಿ, ಸಲಹುವಂತೆಸಗುವೆನು.
(ಕುಂತಿಯು ಕರ್ಣನನ್ನು ದಿಟ್ಟಿಸಿ ನೋಡುತ್ತ, ಕಂಬನಿ ತುಂಬಿ ಮುದ್ದಿಸುತ್ತ)

ಕುಂತಿ — ಎಲೆ ಮುದ್ದು ಮಗನೆ, ನನ್ನ ತಪ್ಪನು ಕ್ಷಮಿಸು!
ಮಾತಾಯಿ, ತೆಗೆದುಕೋ ನನ್ನ ಜೀವನನಿದೋ
ನಿನ್ನ ಕೈಯಲ್ಲಿಡುವೆ. (ಕೊಡುವಳು) ಎನ್ನ ಬಾಳಿನ ಕಣ್ಣೆ,
ಹರಿಗಿಂತ ಮಿಗಿಲಾದ ಸಂರಕ್ಷಕರು ಯಾರು?
ಗಂಗೆಗಿಂತಲು, ಕಂದ, ಮಿಗಿಲಾದ ತಾಯಿಯರು
ಯಾರಿಹರು? ಗಂಗೆಯನು ತಾಯಾಗಿ ಪಡೆದಿರುವ
ನೀನೆ ಧನ್ಯನು, ಕಂದ. ಸಲಹಲಾರದೆ ನಿನ್ನನೀ
ಪರಿಯೊಳಗಲುತಿಹೆ ನಾನೆ ಪಾಪಿಯು, ಕಂದ!
ಮಾತಾಯಿ, ನಿನಗೆ ನಾನೆಂದೂ ಚಿರಋಣಿ!
(ತೆರೆಯಲ್ಲಿಸಖೀ, ಕುಂತಿ, ಎಲ್ಲಿರುವೆ? ಹೊತ್ತಾಯ್ತು, ಹೋಗೋಣ ಬಾಬೇಗಎಂಬ ಸದ್ದು ಕೇಳುವುದು)
ಮಾತಾಯಿ, ಸಖಿಯರೆನ್ನರು ಕರೆಯುತಿಹರದೋ,
ಕೇಳುವೆನು, (ಕರ್ಣನನ್ನೆ ಹಿಂತಿರುಗಿ ನೋಡುತ್ತಾ ಹೋಗುವಳು, ಮತ್ತೆ ಓಡಿಬಂದು)
ತೊರೆಯಮ್ಮಾ, ಮತ್ತೊಮ್ಮೆ ಕಂದನನು
ಕಣ್ದಣಿಯೆ ನೋಡಿ, ಮನದಣಿಯೆ ಮುದ್ದಿಸುವೆ….
(ಮಗುವನ್ನು ತೆಗೆದುಕೊಂಡು ನೋಡಿ, ಮುದ್ದಿಸಿ, ಕೊಟ್ಟು ಹೋಗುವಳು)

ಗಂಗಾಮಾತೆ — ನೀನು ಮಾಡುವುದೇನು, ಕುಂತಿ? ವಿಧಿಲೀಲೆಯಿದು!
ಮುಂದೆ ಬರುವಾ ಮಹಾಭಾರತದ ನಾಟಕಕೆ
ನಾಂದಿಯನು ಬರೆಯುತಿದೆ ಬಿದಿ. ನಾವೆಲ್ಲ
ಸೂತ್ರಧಾರನ ಕೈಲಿ ಬೊಂಬೆಗಳು. ಪಾತ್ರಗಳ
ವಹಿಸುವರು. ಕುಣಿಸಿದಂತೆಯೆ ಕುಣಿಯುತಿರುವೆವು.
(ಒಂದು ಕಡೆಗೆ ನೋಡಿ)
‘ಓಹೋ ಮೀಗುಲಿಗನಿಲ್ಲಿಯೇ ಬರುತಿಹನು;
ಈ ಮಗುವನಿಲ್ಲಿಟ್ಟು ಮರೆಯಾಗಿ ನೋಡುವೆನು,
ಸೂತನೀತನ ಕಂಡು ಕೊಂಡೊಯ್ದರೊಳ್ಳೆಯದೆ!
(ಮಗುವನ್ನು ಅಲ್ಲಿಟ್ಟು ಮರೆಯಾಗುವಳು. ಸೂತನು ಬಲೆಯನ್ನು ಹಿಡಿದು ಪ್ರವೇಶಿಸುವನು)

ಸೂತ — ಏನು ದುರ್ದಿನವಪ್ಪಾ? ಎಷ್ಟು ಪ್ರಯತ್ನಿಸಿದರೂ ಒಂದು ಮೀನಾದರೂ ಸಿಕ್ಕ ಬೇಕಲ್ಲಾ! ಗಂಗಾದೇವಿಗೆ ಕೈಮುಗಿದು, ಅಡ್ಡಬಿದ್ದು ಸುಮ್ಮನೆ ಬಳಲಿಹೋದೆ. ಇನ್ನು ಬರಿಯ ಕೈಯಲ್ಲಿ ಮನೆಗೆ ಹೋದರೆ ರಾಧೆ ಸುಮ್ಮನಿರುವುದಿಲ್ಲ. ಈಗಾಗಲೆ ಬಹಳ ಹೊತ್ತಾಗಿದೆ. ಇಷ್ಟು ಹೊತ್ತು ಅಲೆದು ಏನೂ ಇಲ್ಲದೆ ಹೋದರೆ ನನಗೆ ಸುಖವಿಲ್ಲ. ಏನು ಮಾಡಲಿ?
(ಅತ್ತ ಇತ್ತ ನೋಡುತ್ತಾ ಮುಂದೆ ಬಂದು ಶಿಶುವನ್ನು ನೋಡಿ ಬೆಚ್ಚುವನು)
ಇದೇನಿದು? ಯಾರ ಮಗುವಿದು? (ಸುತ್ತ ನೊಡಿ) ಯಾರೂ ಇಲ್ಲಿಲ್ಲ. ಈ ರೀತಿ ಹೆತ್ತ ಮಗುವನ್ನು ಮರೆತುಹೋಗುವ ತಾಯಿ ಎಂತಹಳಪ್ಪಾ! (ಕೂಗಿ ಕರೆಯುವನು) ಅಮ್ಮಾ! ಅಮ್ಮಾ! — ಇದೇನನ್ಯಾಯ? ಹೆತ್ತ ಮಗುವನ್ನು ಬಿಸಾಡಿ ಹೋಗುವುದು? (ಹತ್ತಿರ ಬಂದು ನೋಡಿ) ಅಯ್ಯೋ ಮಗುವೋ ರನ್ನದ ಗೊಂಬೆ ಇದ್ದಂತೆ ಇದೆ! ಯಾರಿಗೆ ಮನಸ್ಸು ಬಂತಪ್ಪಾ ಇಂಥಾ ಶಿಶುವನ್ನು ಬಿಟ್ಟು ಹೋಗುವುದಕ್ಕೆ? ಅರಸು ಮಕ್ಕಳು ಕೂಡ ಹೀಗಿರುವುದಿಲ್ಲ. (ಮಗುವನ್ನು ಎತ್ತಿಕೊಳ್ಳುವನು) ಎಂಥಾ ಸುದಿನವಪ್ಪಾ! ನನ್ನ ರಾಧೆ ಮಕ್ಕಳಿಲ್ಲ, ಮಕ್ಕಳಿಲ್ಲ ಎಂದು ಸುಮ್ಮನೆ ದಿನವೂ ನನ್ನ ಬೈಯ್ತಾಳೆ. ಈ ಮಗುವನ್ನು ಅವಳಿಗೆ ಕೊಟ್ಟು ಇನ್ನು ಮುಂದೆ ಬೈಗುಳವನ್ನಾದರೂ ತಪ್ಪಿಸಿಕೊಳ್ತೇನೆ! (ದೂರ ನೋಡಿ) ಅಗೋ ಅವಳೂ ಇಲ್ಲಿಗೇ ಬಂದೇ ಬಿಟ್ಟಳು. (ರಾಧೆ ಪ್ರವೇಶಿಸುತ್ತಾ)

ರಾಧೆ — ಇದೇನು ನಿಮ್ಮ ಆಟ! ಊಟಮಾಡದೆ ನಿಮಗಾಗಿ ಕಾದು ಕಾದು ಸಾಕಾಯ್ತು! ಎಷ್ಟು ಗಾಡಿ ಮೀನು ಸಿಕ್ಕಿತು? (ಸೂತನು ನಗುತ್ತಾ ಮಗುವನ್ನು ತೋರಿಸುವನು) ಇದು ಯಾರ ಮಗು? ಯಾರ್ಯಾರ ಮಕ್ಕಳನ್ನೋ ಎತ್ತಿಕೊಂಡು! ಇದೇನು ಕೆಲಸ? ನಿಮಗೇನು ಅರುಳೋ ಮರುಳೋ? ಮಕ್ಕಳಾಡಿಸುವುಕ್ಕೇನು ನೀವು ದಿನಾ ಬಲೆ ತೆಗೆದುಕೊಂಡು ಬರುವುದು? ಈಗ ಗೊತ್ತಾಯಿತು! ಮೀನಿಲ್ಲ! ಮೀನಿಲ್ಲ! ಗಂಗಮ್ಮನಲ್ಲಿ ಮೀನೇ ಇಲ್ಲ! ಹೀಗೆ ಯಾವಳ ಮಗುವನ್ನೋ ಆಡಿಸುತ್ತಾ ಕೂತುಕೊಂಡರೆ ಮೀನು ಸಿಕ್ಕುವುದು ಹೇಗೆ?

ಸೂತ — ಹೇಳು, ಹೇಳು, ಇನ್ನೂ ಹೇಳು!

ರಾಧೆ — ಏನು ಹೇಳುವುದು? ಹೇಳಿದ್ದು ಸಾಲದೆ, ಮರ್ಯಾದೆ ಇದ್ದರೆ?

ಸೂತ — ಅಲ್ಲ ಕಣೇ,

ರಾಧೆ — ಏನು ಅಲ್ಲಕಣೇ? ಸಾಕು, ಬೇಗ ಬನ್ನಿ, ಮಗುವನ್ನು ಕೊಟ್ಟು!

ಸೂತ — ಯಾರಿಗೆ ಕೊಡಲಿ? ನೀನೆ ತೆಗೆದುಕೋ!

ರಾಧೆ — ನಿಮಗೆ ಸ್ವಲ್ಪವೂ ನಾಚಿಗೆಯಿಲ್ಲ, ಯಾರು ಕೊಟ್ಟರೋ ಅವರಿಗೆ ಕೊಡಿ.

ಸೂತ — ಅಯ್ಯೋ ರಾಧೆ, ಇದ್ಯಾಕೆ, ಹೀಂಗಾಡ್ತಿಯಾ, ಯಾರೂ ಕೊಡಲಿಲ್ಲ ಕಾಣೆ, ಇಲ್ಲಿಯೆ ಬಿದ್ದಿತ್ತು!

ರಾಧೆ — ಬಿದ್ದಿತ್ತು! ಆಕಾಶದಿಂದ ಬಿತ್ತೇನೊ?

ಸೂತ — ಆಕಾಶದಿಂದ ಬಿತ್ತೋ? ಭೂಮಿಯಿಂದ ಬಿತ್ತೊ? ನನಗೆ ಗೊತ್ತಿಲ್ಲ. ಅಂತೂ ಇಲ್ಲಿತ್ತು.

ರಾಧೆ — ಇದೇನು ಹುಡುಗಾಟ ಮಾಡ್ತೀರೋ ಏನು?

ಸೂತ — ನಿನ್ನ ದೆಸೆಯಿಂದ ಹುಡುಗಾಟದ ಕಾಲ ಹೋಯ್ತು ಕಣೇ! ಹುಡುಗಾಟ ಗಿಡುಗಾಟ ಒಂದೂ ಅಲ್ಲ. ನಿಜವಾಗಿಯೂ ಇಲ್ಲಿ ಬಿದ್ದಿತ್ತು. ಮಕ್ಕಳಿಲ್ಲ, ಮಕ್ಕಳಿಲ್ಲ, ಅಂತ ದಿನಾ ಬಡುಕೊಳ್ತೀಯಲ್ಲಾ, ಅದಕ್ಕೇ ನಿನಗಾದರೂ ಕೊಡೋಣ ಅಂತ ಎತ್ತಿ ಎತ್ತಿಕೊಂಡೆ. ಬಾ ತೆಗೆದುಕೋ. (ರಾಧೆ ಹತ್ತಿರ ಬಂದು ನೋಡಿ)

ರಾಧೆ — ಅಯ್ಯೋ ಇದಾವುದೋ ರಾಜರ ಮಗು. ನಮಗೇಕಪ್ಪಾ ಇದರ ಸಹವಾಸ? ಆಮೇಲೆ ನಮ್ಮ ತಲೆಗೆ ಬಂದೀತು.

ಸೂತ — ಕೂಗಿದೆ, ಕರೆದೆ. ಯಾರೂ ಇಲ್ಲ. ನಾನು ಬರದೆ ಇದ್ದಿದ್ದರೆ ಮಗು ಮಣ್ಣು ಪಾಲಾಗುತಿತ್ತು. ಪಾಪ! ಇದಕ್ಕೆ ಯಾರೂ ಗತಿಯಿಲ್ಲ. ನಾವಾದರೂ ಸಾಕೋಣ.
(ರಾಧೆ ಬಂದು ಮಗುವನ್ನು ಎತ್ತಿಕೊಂಡು)

ರಾಧೆ — ಅಯ್ಯೋ, ಈ ಸುಖ ನಾನು ಕನಸಿನಲ್ಲಿಯೂ ಕಂಡಿರಲಿಲ್ಲ. (ಮಗುವನ್ನು ಮುದ್ದಿಸುವಳು) ದೇವರೇ ಕೊಟ್ಟ!

ಸೂತ — ನಡೆ ಹೊಗೋಣ. ಮನೆಯಲ್ಲಿ ಇಂದು ಹಬ್ಬ ಮಾಡಬೇಕು. (ಇಬ್ಬರೂ ಹೋಗುವರು. ಗಂಗಾಮಾತೆ ಹೊರಗೆ ಬಂದು)

ಗಂಗಾಮಾತೆ — ನೀನೆ ಧನ್ಯನು, ಸೂತ, ಪುಣ್ಯವಂತಳು ರಾಧೆ!
ನಿನ್ನ ಬಲೆಗಿನ್ನೆಂದೂ ಮೀನುಗಳ ಬದಲಾಗಿ
ರತ್ನಗಳು ಸಿಗುವಂತೆ ಮಾಡುವೆನು! ಮುಂದೆಂದೂ
ನಿನ್ನ ಬಲೆ ಕಾಮಧೇನುವಿನಂತೆ ಬೇಕಾದ
ಬಯಕೆಗಳ ಸಲ್ಲಿಸಲಿ! ಕಲ್ಪತರುವಿನ ತರದಿ
ಬೇಕು ಬೇಕಾದ ವಸ್ತುಗಳ ದಯಪಾಲಿಸಲಿ!

(ಪರದೆ ಬಿಳುವುದು)