(ಹಳ್ಳಿಯ ಹೊರಗಡೆಯ ಒಂದು ಸಣ್ಣ ಬನ. ಹುಡುಗನಾದ ಕರ್ಣನು ಒಂದೆಡೆ ಕುಳಿತು ಚಿಂತಾಮಗ್ನನಾಗಿರುವನು.)

ಕರ್ಣ — ನನ್ನಾತ್ಮವೇಕಿಂತು ಚಲಿಸುವುದೊ ನಾನರಿಯೆ.
ನಮ್ಮ ಹಳ್ಳಿಯ ಬಾಂದಳವು ನನಗೆ ಕಿರಿದಾಗಿ
ತೋರುವುದು. ನಮ್ಮ ಹಳ್ಳಿಯ ಗದ್ದೆ ತೋಟಗಳು
ನನ್ನ ಸಂಚಾರಕ್ಕೆ ಸಾಲದಾಗಿಹವು.
ನಮ್ಮಹಳ್ಳಿಯ ಜೀವನದೊಳನೆಗೆ ತೃಪ್ತಿಯಿಲ್ಲ!
ಬಲಗೆ ಒಳಗಾದ ಕೇಸರಿಯಂತೆ ಎದೆಯೇಕೊ
ಹೋರಾಡಿ ಹಾರಾಡಿ ಹೊರಳುತಿದೆ. ಮೂಡಣದ
ತರುಣಾರುಣೋದಯವು ನಾನರಿಯದಾವೊದೋ
ಸಂದೇಶವನು ತಿಳುಹಿ ಕೈಬೀಸಿ ಕರೆಯುವುದು;
ತಣ್ಣೆಲರೊಳೊಲೆಯುತಿಹ ಒಂದೊಂದು ಕುಸುಮವೂ
ದೂರದಾವುದೊ ಒಂದು ಸುದ್ದಿಯನು ಹೇಳಿ
ಮೂದಲಿಸಿ ಮೋಹಿಸುದೆನ್ನನು! ಕೋಗೊಲೆಯು
ಮರಗಳಲಿ ಹಾಡುತಿರೆ ದೂರದಾವುದೊ ಮೈಮೆ
ಬೇರೆ ನುಡಿಯಲ್ಲೆನ್ನ ಕರೆದಂತೆಯಾಗುವುದು!
ಮುದ್ದಿಸುವ ತಂಬೆಲರು ಕೂಡ ಬೇರೊಂದು
ಲೋಕದಿಂದೈತಂದು ಬೇರೊಂದು ಜೀವನದ
ತೆರೆಮರೆಯ ತೆರೆಯುತಿಹ ದೂತನಂತಿಹುದೆನಗೆ!
ಕನಸುಗಳು ಕೂಡ ಬೇರೊಂದು ಚಿತ್ರವನು
ತೋರುವುವು. ನಮ್ಮ ಹಳ್ಳಿಯ ತೊರೆಯಲಾಡುವುದು
ಸ್ವಪ್ನಸಾಮ್ರಾಜ್ಯದಲಿ ಸುಳಿದಿಲ್ಲ. ಹಳ್ಳಿಗೆರೆಯರ
ಕೂಡೆ ನಾನಾಡುವುದು ಕನಸಿನಲಿ ಬಂದಿಲ್ಲ.
ಯುದ್ಧಗಳು, ಬಿಲ್ಲುಗಳು, ಬಾಣಗಳು, ನೃಪತಿಗಳು,
ಇವುಗಳೇ ನನ್ನ ಕನಸಿನ ಲೋಕ! ಏತಕೋ
ನಾನರಿಯೆ! ಈ ಮಹಾ ಧಾರಿಣೆಯ ಕರೆಯೆನಗೆ
ಬಂದಿಹುದು! ಇನ್ನು ನಾನಿಲ್ಲಿ ಕೊಟ್ಟಿಗೆಯ
ಕರುವಂತೆ ಬಂಧನದೊಳಿರಲಾರೆ, ತಾಯಿಯನು
ಒಪ್ಪಿಸುವೆ; ತಂದೆಯಾಣೆಯ ಪಡೆದು ತೆರಳುವೆನು. (ಸುಮ್ಮನಿದ್ದು)
ಅಂದೆಮ್ಮ ತೊರೆಯ ಬಳಿ ನಾನು ಕುಳಿತಿರುವಾಗ
ತೇಜಸ್ವಿಯಾದೊಬ್ಬ ವೃದ್ಧಮೂರ್ತಿಯ ಕಂಡೆ.
ಅಂದಿನಿಂದೆನ್ನಾತ್ಮ ಕದಡಿದಂತಾಗಿಹುದು.
ಎಂತಹ ಮಹಾಮೂರ್ತಿ! ಸಾಗರದ ಗಾಂಭೀರ್ಯ!
ದಿನಕರನ ತೇಜಸ್ಸು! ಹೆಗಲ ಮೇಲೊಂದು ಕೊಡಲಿ!
(ಹಿಂದಿನಿಂದ ರಾಧೆ ಮೆಲ್ಲನೆ ಬಂದು ದೂರ ನಿಲ್ಲುವಳು)
ಇಲ್ಲ, ನನಗೀ ಹಳ್ಳಿ ಸಾಲದು! ಬಿರುಗಾಳಿ
ಕದಡಿರುವ ಕಡಲಂತೆ ಹೃದಯ ಉಕ್ಕುತಿದೆ.
ದೂರದಾವುದೊ ವಾಣಿ ಗಿರಿಯಾಚೆಯಿಂದ
ಕೂಗಿ ಕರೆಯುವುದೆನ್ನ. ಕರೆದೆಡೆಗೆ ತೆರಳುವೆನು!

ರಾಧೆ — ಕಂದ, ಏನನಾಲೋಚಿಸುತ ಕುಳಿತಿರುವೆ ಇಲ್ಲಿ. ಕೆಲವು ದಿವಸಗಳಿಂದ ನಿನ್ನ ರೀತಿಯೆ ಬೇರೆಯಾಗಿದೆ. ಏಕಾಂಗಿಯಾಗಿರುವೆ, ಏನೇನೊ ಯೋಚಿಸುವೆ. ಮೈ ಸ್ವಸ್ಥವಿಲ್ಲವೇನು?

ಕರ್ಣ (ಹಿಂತಿರುಗಿ ತಾಯಿಗೆ ವಂದಿಸಿ ಎದ್ದುನಿಂತು) ಅಮ್ಮ, ಮೈಯೇನೊ ಸ್ವಸ್ಥವಾಗಿಯೆ ಇದೆ, ನೀನೇನೂ ಹೆದರಬೇಡ.

ರಾಧೆ — ಮತ್ತೇನು?

ಕರ್ಣ — ಅಮ್ಮಾ, ಈಚೀಚೆಗೆ ನನ್ನ ಚಿತ್ತದಲ್ಲಿ ಎನೋ ಅಶಾಂತಿ.

ರಾಧೆ — ಯಾಕೆ, ಮಗೂ?

ಕರ್ಣ — ಅಮ್ಮಾ, ನೀನಿಲ್ಲಿ ಕುಳಿತುಕೊ. ಆಮೇಲೆ ಎಲ್ಲಾ ಹೇಳುವೆನು. (ರಾಧೆ ಅರೆಯ ಮೇಲೆ ಕುಳಿತುಕೊಳ್ಳುವಳು. ಕರ್ಣನು ಕೆಳಗೆ ಕುಳಿತು ಆಕೆಯ ತೊಡೆಯ ಮೇಲೆ ಕೈಯಿಟ್ಟು ಕೊಳ್ಳುವನು. ರಾಧೆ ಅವನನ್ನು ಮುದ್ದಿಸಿ)

ರಾಧೆ — ಕಂದ, ನೀನೆಮ್ಮ ಜೀವದ ಜೀವ. ನಿನಗಿನಿತು ಅಶಾಂತಿಯುಂಟಾದರೂ ನನ್ನೆದೆ ಹಾರುವುದು. ನೀನಿಂತು ಏಕಾಂಗಿಯಾಗಿ ತಿರುಗುವುದನ್ನೂ, ಒಬ್ಬನೆ ಒಂದು ಕಡೆ ಕುಳಿತು ಆಲೋಚಿಸುವುದನ್ನೂ ಕಂಡು ನನಗೇಕೊ ಹೆದರಿಕೆ ಉಂಟಾಗಿದೆ, ಮಗು, ನಿನಗೇನು ಬೇಕೋ ಹೇಳು. ಮನಸ್ಸಿನಲ್ಲಿ ಅಶಾಂತಿಗೆ ಏನು ಕಾರಣ?

ಕರ್ಣ — ಅಮ್ಮಾ, ನನ್ನ ಮನಸ್ಸಿನಲ್ಲಿ ಕನಸಿನ ಚಿತ್ರಗಳಂತೆ ಏನೇನೋ ನೋಟಗಳು ಇದ್ದಕ್ಕಿದ್ದ ಹಾಗೆ ಸುಳಿಯುವುವಲ್ಲಾ ಏಕೆ?

ರಾಧೆ — ಏನು ಚಿತ್ರಗಳು?

ಕರ್ಣ — ಅಮ್ಮಾ, ಏನೇನೋ ಚಿತ್ರಗಳು! ಅವುಗಳ ಅರ್ಥವೇ ನನಗೆ ಗೊತ್ತಾಗುವುದಿಲ್ಲ, ಕೆಲವು ಸಾರಿ ನಾನು ಯಾವುದೋ ಒಂದು ಮಹಾಯುದ್ಧರಂಗದಲ್ಲಿ ರಾಜಾಧಿರಾಜರುಗಳ ನಡುವೆ ಕಾದುವಂತೆ ತೋರುವುದು. ಕೆಲವು ಸಾರಿ ಯಾವನೋ ಒಬ್ಬ ಮಹಾತ್ಮನಲ್ಲಿ ಶಸ್ತಾಸ್ತ್ರಗಳ ಅಭ್ಯಾಸಮಾಡುವಂತೆ ಕಾಣುವುದು. ಕೆಲವು ಸಾರಿ ರತ್ನಖಚಿತವಾದ ಕಿರೀಟವನ್ನು ಧರಿಸಿರುವ ಯಾವನೋ ಒಬ್ಬ ಮಹಾಚಕ್ರ ವರ್ತಿಯೊಡನೆ ಸರಸದಿಂದ ಕೈಹಿಡಿದು ಆಡುವಂತೆ ಕಾಣುವುದು. ಹೀಗೆಯೇ ಇನ್ನೂ ಅನೇಕ ಚಿತ್ರಗಳು. ಹೊಳೆಯುವುವು!

ರಾಧೆ (ಸ್ವಲ್ಪ ಹೊತ್ತು ಚಿಂತಿಸಿ, ಸ್ವಗತ) ಕಂದಾ, ನೀನಾವ ಮಹಾ ಪುಣ್ಯ ಪುರುಷನ ಮಗನೋ ನಾ ಕಾಣೆ. ನಿನ್ನ ಮಹಾ ಆತ್ಮಕ್ಕೆ ನಮ್ಮ ಬಡ ಜೀವನದ ಕಳವಳಗಳು ಸಾಕಾಗುವುವೇ? (ಬಹಿರಂಗ) ಮಗೂ, ಅವೆಲ್ಲಾ ಬರಿಯ ಚಿತ್ರಗಳು! ಹುಡುಗರಿಗೆ ಸಹಜ! ನಿನಗೆ ನಾನು ಹೇಳಿದ ಚಕ್ರವರ್ತಿಗಳು ರಾಜರು ಯದ್ಧಗಳು ಇವುಗಳ ವಿಚಾರವಾದ ಕತೆಗಳು ನಿನ್ನ ಮನಸ್ಸಿನಲ್ಲಿ ಚಿತ್ರದಂತೆ ಸುಳಿದಾಡುವುವು. ಅಷ್ಟೇ ಹೊರತು ಮತ್ತೇನೂ ಇಲ್ಲ!

ಕರ್ಣ — ಅಷ್ಟೇ ಅಲ್ಲಮ್ಮಾ; ನನ್ನೆದೆಗೆ ಈ ನಮ್ಮ ಗ್ರಾಮದ ವಿಸ್ತಾರವೆ ಸಾಕಾದಂತೆ ತೋರುವುದಿಲ್ಲ. ದಿನದಿನಕ್ಕೂ ಹೃದಯ ಬೆಳದಂತೆ ತೋರುವುದು. ಕೆಲವು ಸಾರಿ ನೀರಿನೊಳಗೆ ಮುಳುಗಿ ಉಸಿರಾಡದವನಂತೆ ನನಗೆ ಇಲ್ಲಿಯ ಜೀವಿತದೆ ಬಹಳ ಆಯಾಸಕರವಾಗಿ ತೋರುವುದು. ಕೆಲವು ಸಾರಿ ಯಾರೋ ದೂರದ ದಿಗಂತದ ಮಬ್ಬಿನಲ್ಲಿ ನಿಂತು ನನ್ನನ್ನು ಕೈಬೀಸಿ ಕರೆದಂತೆ ತೋರುವುದು.

ರಾಧೆ — ಮಗೂ, ನಿನಗೆ ಏನು ಬೇಕಾದರೂ ಕೊಡಲು ನಾನು ಸಿದ್ಧಳಾಗಿರುವೆ. ಬಾಲ್ಯವು ತಾರುಣ್ಯದ ಸೋಪಾನವನ್ನು ಏರುವಾಗ ಹೀಗೆಲ್ಲಾ ಆಗುವುದು ವಿಚಿತ್ರವಲ್ಲ.

ಕರ್ಣ — ಅಮ್ಮಾ, ನನಗೆ ಇನ್ನೇನೂ ಬೇಕಾಗಿಲ್ಲ. ನನಗೆ ಬಿಲ್ಲಂಬುಗಳ ವಿದ್ಯೆಯನ್ನು ಕಲಿಯ ಬೇಕೆಂದು ಕುತೂಹಲ. ಅದಕ್ಕೆ ನಿನ್ನ ಮತ್ತು ತಂದೆಯ ಅಪ್ಪಣೆಯಾದರೆ ಸಾಕು. ಹೋಗಿ ಯಾವ ಗರುವನ್ನಾದರೂ ಆಶ್ರಯಿಸಿ ವಿದ್ಯೆಯನ್ನು ಕಲಿತು ಹಿಂತಿರುಗಿ ಇಲ್ಲಿಗೇ ಬರುವೆನು. ಅಮ್ಮಾ ನಿನ್ನನ್ನು ನಾನೆಂದಿಗೂ ಮರೆಯುವುದಿಲ್ಲ; ಕೈಬಿಡುವುದಿಲ್ಲ.

ರಾಧೆ — ಮಗೂ, ನಿನ್ನಿಷ್ಟಕ್ಕೆ ಅಡ್ಡಬರುವ ತೊಂದರೆಗಳನ್ನು ನೀನರಿಯೆ. ನಾವು ಬೆಸ್ತರ ಜಾತಿಯವರು. ಶಸ್ತ್ರ ಶಾಸ್ತ್ರಾಚಾರ್ಯರೆಲ್ಲಾ ಬ್ರಾಹ್ಮಣರು. ನೀನು ಬೆಸ್ತರವನೆಂದು ತಿಳಿದರೆ ಅವರು ನಿನಗೆಂದಿಗೂ ವಿದ್ಯೆ ಬೋಧಿಸಲಾರರು. ಅಲ್ಲದೆ ಅಸಹಾಯನಾಗಿ ಹೊರಗೆ ಹೋಗಲು ನೀನಿನ್ನೂ ಸಣ್ಣವನು.

ಕರ್ಣ — ಅಮ್ಮಾ, ಅದರ ಚಿಂತೆ ನಿನಗೇಕೆ? ಗುರುಗಳಿಗೆ ನಾನು ಯೋಗ್ಯನೆಂದು ತೋರಿದರೆ, ನನ್ನ ಭಕ್ತಿಗೆ ಮೆಚ್ಚಿ ವಿದ್ಯಾಭ್ಯಾಸ ಮಾಡಿಸದಿರರು. ಆ ಯೋಗ್ಯತೆಯನ್ನು ತೋರಿಸಿ, ಅವರನ್ನು ಮೆಚ್ಚಿಸಿ, ಅವರ ಪ್ರೀತಿಗೆ ಪಾತ್ರನಾಗುವುದು ನನ್ನ ಕೈಯಲ್ಲಿದೆ. ನಾನಿನ್ನೂ ಸಣ್ಣವನು ಎಂದೇಕೆ ನಿನಗೆ ಕಳವಳ? ನಾನು ಸಣ್ಣವನಾದ ಮಾತ್ರದಿಂದ ಸಾಹಸಿಯಲ್ಲವೇ? ನಿನ್ನೊಪ್ಪಿಗೆಯು ಸಿಕ್ಕರೆ ಸಾಕು. ನಿನ್ನ ಆಶೀರ್ವಾದ ಒಂದಿದ್ದರೆ ನನ್ನ ಬಯಕೆಯಲ್ಲಾ ಕೈಗೂಡಿಯೇ ಕೂಡುವುದು.

ರಾಧೆ — ನೀನು ಕಣ್ಮರೆಯಾದರೇ ನನ್ನ ಜೀವವು ತಲ್ಲಣಿಸುವುದು. ನಿನ್ನನ್ನಗಲಿ ನಾನು ಹೇಗೆ ಸುಖದಿಂದಿರಲಿ?

ಕರ್ಣನನ್ನ ಕಲ್ಯಾಣದ ಮೇಲೆ ಕಣ್ಣಿಟ್ಟು, ನೀನು ನನ್ನನ್ನು ಕಳುಹಿಸಲಾರೆಯಾ, ಅಮ್ಮಾ?

ರಾಧೆ (ಕಂಬನಿತುಂಬಿ)  ಮಗೂ ನೀನಾರ ಬಳಿಗೆ ಹೋಗುವೆ? ನಿನಗೆ ಯಾರ ಪರಿಚಯವಿದೆ.

ಕರ್ಣ — ನನಗೊಬ್ಬ ಮಹಾಪುರುಷನ ಗುರುತಿದೆ.

ರಾಧೆ — ಯಾರು?

ಕರ್ಣ — ಕೆಲವು ದಿನಗಳ ಹಿಂದೆ ನಾನು ಹಳ್ಳಿಯಾಚೆಯ ತೊರೆಯ ಬಳಿ ಕುಳಿತು ನೀರಿ ನಲ್ಲಾಡುವ ಮೀನುಗಳನ್ನು ನೋಡುತ್ತಾ ಇದ್ದೆ. ಆಗ ಒಬ್ಬ ಮಹರ್ಷಿಯು ತನ್ನ ಶಿಷ್ಯರೊಂದಿಗೆ ಅಲ್ಲಿಗೆ ಬಂದನು. ನನ್ನನ್ನು ನೋಡಿ ಬಳಿಗೆ ಬಂದು ಮಾತಾಡಿಸಿದನು.

ರಾಧೆ — ಏನೆಂದು?

ಕರ್ಣ — ನನ್ನ ಊರು, ಜಾತಿ, ತಂದೆತಾಯಿಗಳು ಇವುಗಳ ವಿಚಾರವನ್ನೆಲ್ಲಾ ಕೇಳಿದನು. ಎಲ್ಲವನ್ನೂ ಹೇಳಿದೆನು. ಕಡೆಗೆ ಆತನು “ಬಾಲಕನೆ, ನಿನ್ನ ಮುಖಕಾಂತಿ ಮಹಾ ವೀರಪುರುಷನನ್ನು ಸೂಚಿಸುತ್ತದೆ” ಎಂದು ಹೇಳಿ ನನ್ನ ಜೀವನದ ಅಲ್ಪಸಂಪೂರ್ಣತೆರೆಯಲ್ಲಿ ಅತೃಪ್ತಿ ಎಂಬ ವಿಲಯಾಗ್ನಿಯ ಕಿಡಿಯನ್ನಿಟ್ಟು ಶಿಷ್ಯರೊಡನೆ ಮರಗಳ ಮರೆಯಲ್ಲಿ ಮರೆಯಾದನು. ಅಂದಿನಿಂದ ನನ್ನ ಜೀವನದ ದೃಷ್ಟಿಯೆ ಬೇರೆಯಾಗಿ ಹೋಗಿದೆ. ಎಲ್ಲಿ ಕುಳಿತರೂ ಆ ಮಹಾಪುರುಷನ ಚಿತ್ರವೇ ಕಾಣುವುದು. ನಿದ್ದೆಯಲ್ಲಿಯೂ ಅವನ ರೂಪವೇ ಆಗಾಗ್ಗೆ ಮೈದೋರಿ ನನ್ನನ್ನು ಕರೆಯುವುದು. ನಾನು ಆತನಲ್ಲಿಗೆ ಹೋದರೆ ನನ್ನನ್ನು ಪ್ರೇಮದಿಂದ ಸ್ವೀಕರಿಸುವನೆಂದು ನನ್ನ ನಂಬಿಕೆ.

ರಾಧೆ — ಕಂದ, ನಿನ್ನ ಬಯಕೆಯ ಹೊಳೆಯನ್ನು ನಾನು ಬತ್ತಿಸುವುದಿಲ್ಲ. ನಿನ್ನಿಷ್ಟದಂತೆ ನಡೆಯಲು ನಿನಗೆ ನೆರವಾಗುವೆ. ನಿನ್ನ ತಂದೆಯ ಆಶೀರ್ವಾದವನ್ನು ಪಡೆದು ನೀನು ಶೀಗ್ರದಲ್ಲಿಯೆ ಹರಡಬಹುದು.

ಕರ್ಣ (ಒಂದು ಕಡೆಗೆ ನೋಡಿ) ಅಮ್ಮಾ ನೋಡಲ್ಲಿ! ನಮ್ಮ ತಂದೆ ಇತ್ತಲಾಗಿಯೆ ಬರುತ್ತಿರುವನು.
(ರಾಧೆಯೂ ಕರ್ಣನೂ ಎದ್ದುನಿಲ್ಲುವರು. ಸೂತನು ಬಲೆಯನ್ನು ಹೆಗಲ ಮೇಲಿಟ್ಟುಕೊಂಡು ಒಂದು ಕೈಯಲ್ಲಿ ಒಂದು ಮಹಾ ಧನುಸ್ಸನ್ನೂ ಮತ್ತೊಂದರಲ್ಲಿ ಬಾಣಗಳಿಂದ ತುಂಬಿದ ನಿಷಂಗನನ್ನೂ ಹಿಡಿದುಕೊಂಡು ಪ್ರವೇಶಿಸುವನು. ತಾಯಿಯು ದೂರನಿಲ್ಲುವಳು. ಕರ್ಣನು ಅವನಿಗೆ ಅಡ್ಡಬೀಳುವನು. ಸೂತನು ಉಸ್ಸೆಂದು ತನ್ನ ಹೊರೆಗಳನ್ನು ಕೆಳಗೆ ಹಾಕುವನು)

ಕರ್ಣ — ಅಪ್ಪಾ, ಬಹಳ ಆಯಾಸ ಪಟ್ಟಿದ್ದೀಯ! ಬಾ, ಇಲ್ಲಿ ಕೂತುಕೊಂಡು ಸ್ವಲ್ಪ ವಿಶ್ರಮಿಸಿಕೊ. (ಸೂತನು ಕುಳಿತುಕೊಳ್ಳುವನು.)

ಸೂತ — ಅಯ್ಯೋ ಆ ಬಿಲ್ಲು ಬತ್ತಳಿಕೆಗಳನ್ನು ಹೊತ್ತು ನನಗೆ ಸಾಕಾಯಿತು.

ರಾಧೆ — ಬಿಲ್ಲು ಬತ್ತಳಿಕೆಗಳನ್ನು ಏಕೆ ತಂದಿರಿ? ಯಾರು ಕೊಟ್ಟರು?

ಸೂತ — ಇನ್ಯಾರು ಕೊಡಬೇಕು? ಗಂಗಮ್ಮ ಬಲೆಹಾಕಿ ಎಳೆಯಲು ಈ ಬಿಲ್ಲು ಬತ್ತಳಿಕೆ ಬಂದುವು. ಬಹಳ ಪ್ರಯಾಸದಿಂದ ಹೊತ್ತುಕೊಂಡು ಬಂದೆ.

ಕರ್ಣ — ಅಪ್ಪಾ, ಅವುಗಳನ್ನು ನಾನು ತೆಗೆದುಕೊಳ್ಳುತ್ತೇನೆ.

ಸೂತ — ಅಯ್ಯೋ ಮಗೂ, ನಿನಗೇನು ಮರುಳೇ? ನಾನೇ ತಿಣಿಕಿ ತಿಣಿಕಿ ಎತ್ತಿಕೊಂಡು ಬಂದೆ. ನೀನೆತ್ತ ಬಲ್ಲೆಯಾ?

ಕರ್ಣ — ಹಾಗಾದರೆ ನೋಡುವೆನು.
(ಕರ್ಣನು ಹೋಗಿ ಬಿಲ್ಲು ಬತ್ತಳಿಕೆಗಳನ್ನು ನಿರಾಯಾಸವಾಗಿ ಎತ್ತಿಕೊಂಡು, ಬತ್ತಳಿಕೆಯನ್ನು ಭುಜದ ಮೇಲೆ ಸಿಕ್ಕಿಸಿಕೊಂಡು ಯೋಧನಂತೆ ನಿಲ್ಲುವನು.)
ಏನಪ್ಪಾ? ಹಗುರವಾಗಿದೆಯಲ್ಲಾ!

ಸೂತ (ಬೆರಗಾಗಿ)
ಇದೇನಿದು? ಮಗುವು ಎತ್ತಬಲ್ಲ ಬಿಲ್ಲು ನನಗೇಕೆ ಭಾರವಾಯಿತು. ಆ ಬಿಲ್ಲನ್ನು ಇಲ್ಲಿ ಕೊಡು ನೋಡೋಣ. (ಕರ್ಣನು ಬಿಲ್ಲನ್ನು ಕೊಡುವನು. ಸೂತನು ಅದನ್ನು ಎತ್ತಲಾರದೆ ಕೆಳಕ್ಕೆ ಹಾಕಿ) ಅಯ್ಯೊ ಇದೇನು? ಮೊದಲಿಗಿಂತಲೂ ಬ್ರಹ್ಮಾಂಡ ಭಾರವಾಗಿದೆಯಲ್ಲಾ. ಮಗೂ, ನಿಜವಾಗಿಯೂ ನಿನಗೆ ಭಾರವಿಲ್ಲವೆ?

ಕರ್ಣ — ನಿಜವಾಗಿಯೂ ಭಾರವಿಲ್ಲವಪ್ಪಾ. ನೋಡು (ಪುನಃ ಎತ್ತಿಲೊಳ್ಳುವನು)

ಸೂತ — ಮಗೂ, ನನಗೆ ಬಗೆ ಹರಿಯುವುದಿಲ್ಲ. ನಿನ್ನೀ ಶಕ್ತಿಯು ಅತಿಮಾನುಷವಾಗಿದೆ.

ಕರ್ಣ — ಅಪ್ಪಾ, ನಾನೊಂದು ಬಾಣವನ್ನು ಹೂಡಿ ಹೊಡೆದು ನೋಡಲೆ!

ರಾಧೆ — ಅಯ್ಯೋ, ಬೇಡ, ಮಗೂ. ಬಿಲ್ಲುಗಾರಿಕೆ ನಿನಗೆ ತಿಳಿಯದು. ಏನಾದರೂ ಅಪಾಯವಾದೀತು.

ಕರ್ಣ — ನಿನಗೇಕಮ್ಮಾ ಹೆದರಿಕೆ?
(ರಾಧೆಯೂ ಸೂತನೂ ಒಬ್ಬರನ್ನೊಬ್ಬರು ನೋಡುವರು. ಕರ್ಣನು ಬಿಲ್ಲಿಗೆ ಅಂಬನ್ನು ಹೂಡಿ ಸೇದಿ ಎಳೆಯುವನು.)

ಸೂತ — ಸಾಕು! ಸಾಕು, ಮಗೂ ಹೆಚ್ಚು ಏಳೆಯಬೇಡ!
(ಕರ್ಣನು ಕಿವಿಯವರೆಗೂ ಎಳೆದು ಒಂದು ಬಾಣವನ್ನು ಬಿಡುತ್ತಾನೆ.)

ರಾಧೆ — ಅಯ್ಯೊ, ಅಲ್ಲಿ ನೋಡಿ! ಆ ಮರದ ದೊಡ್ಡ ಕೊಂಬೆ ಮುರಿದು ಬಿತ್ತು.

ಸೂತ (ಸಂತೋಷದಿಂದ ಕರ್ಣನನ್ನು ಅಪ್ಪಿಕೊಂಡು) ಕಂದಾ, ನೀನೆನ್ನ ಜೀವನದ ರತ್ನ!

ರಾಧೆ — ಅವನು ಬಿಲ್ಲು ವಿದ್ಯೆ ಕಲಿಯಲು ಹೋಗುತ್ತಾನಂತೆ.

ಸೂತ — ಅದಕ್ಕೆ ನನ್ನ ತಡೆಯೇನು? ಅವನು ಕಲಿಯದಿದ್ದರೆ ಇನ್ಯಾರು ಕಲಿಯುವರು?

ಕರ್ಣ (ಸಂತೋಷದಿಂದ)
ಅಪ್ಪಾ, ಈ ಬಿಲ್ಲು ಬತ್ತಳಿಕೆಗಳನ್ನೂ ತೆಗೆದುಕೊಂಡು ನಾಳೆಯೇ ಹರಡುವೆನು.

ಸೂತ — ಆಗಲಿ ಮಗೂ. ಮನೆಗೆ ಹೋಗಿ ಎಲ್ಲವನ್ನೂ ಆಲೋಚಿಸೋಣ.

(ಎಲ್ಲರೂ ಹೊರಡುವರು)

(ಪರದೆ ಬೀಳುವುದು.)