ಇಂದಿಗೆ ನಾಲ್ವತ್ತೈದು ವರ್ಷಗಳು ಹಿಂದೆ ರಚಿತವಾಗಿದ್ದ ದೃಶ್ಯ ಮಹಾರಾಜಾ ಕಾಲೇಜು ಯೂನಿಯನ್ಹೊರಡಿಸುತ್ತಿದ್ದಯೂನಿಯನ್ ಮ್ಯಾಗಜೀನ್ನಲ್ಲಿ ಅಚ್ಚಾಗಿದ್ದು ಭೂಗತವಾಗಿ ಹೋಗಿತ್ತು. ದಿವಂಗತ ಪ್ರಧಾನ ನ್ಯಾಯದೀಶ ಶ್ರೀ ಹೊಂಬೇಗೌಡರು ಅನೇಕ ವರ್ಷಗಳ ತರುವಾಯ ಶ್ರೀ ರಾಮಾಯಣ ದರ್ಶನಂ ಪ್ರಕಟವಾದ ಕಾಲದಲ್ಲಿ ನನ್ನನ್ನು ಸಂಧಿಸಿದಾಗ ದೃಶ್ಯದ ಕಡೆ ನನ್ನ ಗಮನ ಸೆಳೆದು ಅದನ್ನು ಬಹಳವಾಗಿ ಹೊಗಳಿದ್ದರು. ಅಲ್ಲದೆ. ಅವರು ವಿದ್ಯಾರ್ಥಿಯಾಗಿದ್ದಾಗ ಬಾಯಿಪಾಠ ಮಾಡಿದ್ದ ಅದರ ಕೆಲಭಾಗಗಳನ್ನು ನೆನಪಿನಿಂದಲೆ ಹೇಳಿ, ಅದನ್ನು ಹುಡುಕಿ ಪ್ರಕಟಿಸುವಂತೆ ಹೇಳಿದ್ದರು. ‘ನೆನಪಿನ ದೋಣಿಯಲ್ಲಿಬರೆಯುತ್ತಿರುವಾಗ ಹಳೆಯ ಹಸ್ತಪ್ರತಿಗಳಲ್ಲಿ ಅದು ಸಿಕ್ಕಿದ್ದು ಈಗ ಪ್ರಕಟವಾಗುತ್ತಿದೆ. ದೃಶ್ಯದ ಬಹುಭಾಗ ಭಾವ ಮತ್ತು ಭಾಷೆಗಳೆರಡರಲ್ಲಿಯೂ ಕುಮಾರವ್ಯಾಸ ಮಹಾಕವಿಗೆ ಋಣಿಯಾಗಿರುವುದನ್ನು ಯಾರಾದರೂ ಗುರುತಿಸಬಹುದಾಗಿದೆ.

(ಬೈಗಿನ ಹೊತ್ತು. ಗಂಗೆಯ ದಡದ ಬಳಿಯ ಬನದಲ್ಲಿ ಶ್ರೀಕೃಷ್ಣನೂ ಕರ್ಣನೂ ತಿರುಗಾಡುತ್ತಾ ಬರುವರು.)

ಶ್ರೀಕೃಷ್ಣ (ಬಾಂದಳದ ಕಡೆ ತುಸುಹೊತ್ತು ದಿಟ್ಟಿಸಿ ಪಡುವಲ ದೆಸೆಯನ್ನು ನೋಡಿ)
ಕರ್ಣ, ಸಂಜೆಯ ಚೆಲುವೆನಿತು ಮೋಹಿಪುದು ಮನವ!
ನೋಡು, ಬೈಗಿನ ನೇಸರಸ್ತಗಿರಿಯಂಚಿನಲಿ
ಹೇಮಧೂಮವ ಹರಡಿ ತೊಳಗುತಿಹನೆಂತು!
ಬನದ ಚೆಂದಳಿರೆಲ್ಲ ಬೈಗುಗೆಂಪೊಳು ಮುಳುಗಿ
ನಗುತಲಿದೆ, ನಲಿಯುತಿದೆ; ತಲೆದೂಗಿ ಆಡುತಿದೆ!
ನೊರೆಯ ಮಗುಡವನಾಂತ ಗಂಗೆಯ ತರಂಗಗಳು
ಎಳೆಮಕ್ಕಳಂದದಲಿ ಸಂತಸವು ಮಿಗಿಲಾಗೆ
ತೊದಳಾಡಿ ಕುಣಿಯುತಿಹವೆಂತು! ನೋಡಲ್ಲಿ,
ಮಳಲರಾಶೀಯೊಳಿರುವ ಬಿಂಗಗಳು, ನೇಸರಿನ
ಬೆಳಕ ಬರುಬಿಂಬಿಸುತ ಮಿರುಗುತಿಹವೆಂತು!
ಸಗ್ಗದ ಸೊಬಗು ತಿರೆಗೆ ಇಳಿದಂತೆ ತೋರುವುದು!

ಕರ್ಣ — ಹೌದು, ಕಮಲಾಕ್ಷ, ಕರ್ತನಂತೆಯೆ ಸೃಷ್ಟಿ!
ಕವಿಯಂತೆಯೇ ಕವಿತೆ! ಮನದಂತೆಯೇ ದೃಷ್ಟಿ!

ಶ್ರೀಕೃಷ್ಣ — ಬಾ, ಮಿತ್ರ, ಈ ಶಿಲೆಯ ಕಾಲ್ಮಣೆಯ ಮೇಲ್ಕುಳಿತು
ಸಂಧಾನ ಕಾರ್ಯದಲಿ ಬಂದಂತ ಬಳಲಿಕೆಯ
ಪರಿಹರಿಸಿ ಕೊಳ್ಳೋಣ! ನಿನಗಾಗಿ ನನ್ನೆದೆಯು
ದುಃಖದಲಿ ಮುಳುಗಿ ತೇಲಾಡುತಿದೆ. ಅದರಿಂದ
ನಿನ್ನೊಡನೆ ಕೆಲವು ಮಾತುಗಳಾಡಬೇಕೆಂದು
ನಿರ್ಣಯಿಸಿ, ಉಳಿದೆಲ್ಲರನು ಕಳುಹಿ, ನಿನ್ನನ್ನು
ಕರೆತಂದೆ. ನೀನರಿಯದಿರುವ ಗುಟ್ಟೊಂದಿಹುದು,
ಅದನು ನಿನಗಿಂದರುಹುವೆನು, ಕೇಳು! (ಶ್ರೀಕೃಷ್ಣನು ಕಲ್ಲಿನ ಕಾಲ್ಮಣೆಯ ಮೇಲೆ ಕುಳಿತು ಕೊಳ್ಳುವನು, ಕರ್ಣನು ದೂರ ನಿಲ್ಲುವನು.)
ಬಾ, ಕರ್ಣ; ಕುಳಿತೊಕೋ, ದೂರ ನಿಲ್ಲುವೆ ಏಕೆ?

ಕರ್ಣ — ದೇವ, ನಿಮ್ಮೊಡನೆ ಕುಳಿತುಕೊಳ್ಳುವುದೆನಗೆ
ತರವಲ್ಲ ಸೂತಪುತ್ರನು ನಾನು. ನಿಮಗೆ ನಾ
ಎಣೆಯಲ್ಲ : ನೀವು ಯದುಕುಲ ಸಾರ್ವಭೌಮರು!
ನನಗೀ ತೃಣಾಸನವೆ ಸಾಕು! (ಕರ್ಣನು ಹುಲ್ಲಿನ ಮೇಲೆ ಕುಳಿತು ಕೊಳ್ಳಲೆಳಸುವನು. ಶ್ರೀಕೃಷ್ಣನು ಮೇಲೆದ್ದು ಅವನ ಕೈಹಿಡಿದು)

ಶ್ರೀಕೃಷ್ಣ — ಏನಿದೇನಿದು, ಕರ್ಣ?
ಏನಿದೇನಿದು, ದಿವಾಕರತನಯ, ಕೌಂತೇಯ,
ಶಶಿವಂಶ ಮೌಳಿ, ಧರ್ಮಜಾಗ್ರಜ, ವೀರ
ಪಾರ್ಥಿವನೆ? ನೀನು ರಾಮಂಗೆಣೆಯು! ಅಂಗಪತಿ,
ನೀನೆನಗೆ ಪೂಜ್ಯನಾಗಿರುವೆ. ನನ್ನೀಯನು
ನೀನರಿಯೆ. ಬಾ, ಕುಳಿತುಕೋ! (ಕರ್ಣನನ್ನು ಶೀಲಾಸನದ ಮೇಲೆ ಕೂರಿಸಿ, ತಾನೂ ಕುಳಿತುಕೊಳ್ಳುವನು.)

ಕರ್ಣ (ಆಲೋಚನಾ ಮಗ್ನನಾಗಿ) ದೇವ, ಮುರಹರ,
ದಾನವಾಂತಕ, ಬೆಸಸು; ವಂಶವಿಹೀನನನು
ನಿಮ್ಮಡಿಗಳೊಡನೆ ಸಮಾನಿಸುವರೇ? ಸಾಕು,
ಪರಿಹಾಸ್ಯದಲಿ ನುಡಿವುದೇಕೆ?

ಶ್ರೀಕೃಷ್ಣ — ಹೇ ಕರ್ಣ,
ಮಾನನಿಧಿ, ನನ್ನಾಣೆ, ನನ್ನಿಯನೆ ನುಡಿಯುತಿಹೆ!
ಪರಿಹಾಸ್ಯಕಿದು ಸಮಯವಲ್ಲ. ಹರಿಯೊಂದು
ಕುರಿಯೊಡನೆ ಸೇರಿ, ತಾ ಕುರಿಯೆಂದು ತಿಳಿವಂತೆ,
ನೀನರಿಯೆ ನಿನ್ನತುಳ ವಂಶವನು. ರವಿಸುತನೆ,
ನೀನು ನಮ್ಮೆಲ್ಲರ ಹವಣೆ? ನೇಸರಿನ ಬಳಿ ನಿನದು;
ರಾಮನಿಗೆ ನೀನೆಣೆಯು!

ಕರ್ಣ — ಭಗವಂತ, ನೀ ನುಡಿವ
ಮಾತುಗಳ ಬಗೆಯರಿಯೆ. ಬರಿದೆ ಕಾದುವುದೇಕೆ?
ಮಾಯಾವಿ, ನಿನಗೆ ನಾನಂಜುವೆನು.

ಶ್ರೀಕೃಷ್ಣ — ಕಲಿಕರ್ಣ,
ಈ ಧರೆಯೊಳೀಗ ನಿನಗೆಣೆಯಾರು? ಸತ್ಯವನು
ತಿಳಿದವರು ನಾವೈದು ಮಂದಿ : ನಾ ಬಲ್ಲೆ,
ಕುಂತಿ ಬಲ್ಲಳು, ಮತ್ತೆ ದುರ್ಯ್ಯೋಧನನು ಬಲ್ಲ;
ನಿನ್ನ ತಂದೆ ಸೂರ್ಯನರಿತಿಹನು; ಸರ್ವವನು
ತಿಳಿದಿರುವ ನಿನ್ನನುಜ ಸಹದೇವನಿಗೆ ಗೊತ್ತು.
ಮತ್ತಾರು ತಿಳಿದಿಲ್ಲ. ಕುಂತಿದೇವಿಯು ಪಡೆದ
ಐದು ಮಂತ್ರಂಗಳಲಿ ಜನಿಸಿದವರೊಳು ನೀನೆ
ಮೊದಲಿಗನು. ಸೂರ್ಯದೇವನೆ ನಿನ್ನ ತಂದೆ.
ನಿನ್ನ ಬಳಿ ಧರ್ಮಜನು ಹುಟ್ಟಿದನು; ಅವನ ಬಳಿ
ಕಲಿಭೀಮ; ಅವನ ಬಳಿ ಕಲಿಪಾರ್ಥನುದಿಸಿದನು.
ನಕುಲ ಸಹದೇವರೈದನೆ ಮಂತ್ರದಲಿ, ಮಾದ್ರಿ
ಬಸಿರಿನಲಿ ಜನಿಸಿದರು.

ಕರ್ಣ (ಆಶ್ಚರ್ಯದಿಂದಲೂ, ಕುತೂಹಲದಿಂದಲೂ)
ಕೌತುಕದ ಸುದ್ದಿಯಿದು,
ಮುರವೈರಿ. ಕುಂತಿದೇವಿಯ ಬಸಿರಿನಲಿ ಬಂದ
ನಾನು ಸೂತಜನಾದುದೆಂತು? ಕೌರವನ ಗೆಳೆತನವ
ತಪ್ಪಿಸಲು ಭೇದದಲಿ, ನಿನ್ನ ಕಲ್ಪನೆ ಕಡೆದ
ಕತೆಯಂತೆ ತೊರುವುದು!

ಶ್ರೀಕೃಷ್ಣ — ಹಾಗಲ್ಲ, ರವಿತನಯ;
ನಿನ್ನಭ್ಯುದಯಕೆಳಸಿ ನನ್ನಿಯನು ಹೇಳಿದೆನು.
ಕನ್ನೆತನದಲ್ಲಿ ಕುಂತಿ ದೂರ್ವಾಸ ಮುನಿವರನ
ಮಂತ್ರ ಬಲವನು ಪರೀಕ್ಷಿಸಲೆಂದು, ಹರಿಯುತಿಹ
ಈ ದಿವಿಜನದಿಗೈತಂದು ಮಂತ್ರವನು ಉಚ್ಚರಿಸೆ,
ಹುಡುಗಾಟವೆಂದರಿಯದಲೆ ಸೂರ್ಯದೇವನು ಬಂದು
‘ಲಲನೆಯಾಸೆಯು ಸಲ್ಗೆ’ ಎಂದು ಮರೆಯಾದನು!
ಲೋಕಾಪವಾದಕ್ಕೆ ಬೆದರಿ ಲಲನೆ ನಿನ್ನಂ
ಕೈಯ್ಯೆಡೆಯಾಗಿತ್ತಳೀ ಗಂಗೆಯಂಕದಲಿ!
ಅಲ್ಲಿಂದ ಸೂತನೊಯ್ದನು ನಿನ್ನ ರಾಧೆಯೆಡೆಗೆ,
ಅದರಿಂದ ರಾಧೇಯನಾಗಿರುವೆ! ನನ್ನಿಯಿದು;
ನನ್ನಾಣೆ, ಸೂರ್ಯದೇವನ ಆಣೆ, ಗಂಗೆಯಾಣೆ!

ಅಶರೀರವಾಣಿ — ಹೇ ಕರ್ಣ, ಕೌಂತೇಯ, ರವಿತನಯ, ಅಂಗಪತಿ,
ವಾಶುದೇವನ ನುಡಿಯು ಸತ್ಯ! ಸತ್ಯ! ಸತ್ಯ!
(ಕರ್ಣನು ಶಿಲಾಸನದಿಂದ ತಟ್ಟಕ್ಕನೆ ಎದ್ದು ದೂರಹೋಗಿ, ಮೊಗದಿರುಹಿ, ಚಿಂತಿಸುತ್ತ. ಕಂಬನಿಯ ಕರೆಯುತ್ತ ಹರಿಯುವ ಗಂಗೆಯನ್ನೆ ನೋಡುತ್ತ)

ಕರ್ಣ (ಸ್ವಗತ) ಅಯ್ಯೋ, ಕುರುಪತಿಯೆ, ಕೇಡಾದುದೇ ನಿನಗೆ?
ನಿಜವನೆನಗರುಹಿ ಕೈಮುರಿದೆನ್ನ ಕೊಂದನೀ
ಕಮಲಾಕ್ಷ. ಜಗವೆಲ್ಲ ಸೂತಪುತ್ರನು ಎಂದು
ಧಿಕ್ಕರಿಸಿ ನೂಂಕುತಿರೆ, ಅಂಗರಾಜ್ಯವನಿತ್ತು
ನೀನೆನ್ನ ಕ್ರತ್ರಿಯನ ಮಾಡಿರುವೆ. ನನ್ನನೇ
ನೆಚ್ಚಿರುವೆ; ನಿನ್ನ ಜೀವದ ಜೀವ ನಾನೆಂದು
ಬಗೆದಿರುವೆ. ಒಡಲೆರಡು ಆಸುವೊಂದು ಎಂಬಂತೆ
ನೀನೆನ್ನ ಪೊರೆದಿರುವೆ. ವಜ್ರಕವಚವ ಮೀರ್ದ
ಅಂಗರಕ್ಷೆಯು ಇಂದು ಹುಡಿಯಾಯ್ತೆ? ಮುರವೈರಿ
ಫಲುಗುಣರ ಸಾವಳಿದು ಹೋಯ್ತೆ? ಕೇಡಾಯ್ತೆ
ನನ್ನ ನೆಚ್ಚಿದ ನಿನಗೆ? ಕೌರವೇಂದ್ರನೆ, ನಿನ್ನ
ಮಕುಟಮಣಿ ಸಡಿಲಿದುದೆ? ಭಾರತವು ನಮ್ಮವರ
ಭಾಗಕ್ಕೆ ಬಯಲಾಯ್ತೆ? ಹಾ ಕೃಷ್ಣ, ದನುಜಹರ,
ನಿನ್ನ ಚಕ್ರದ ಮಾನವಿಂದುಳಿಸಿಕೊಂಡೆಯಾ?
ಕ್ರೂರಸತ್ಯವನರುಹಿ ಕೊಲೆಗಾರನಾದೆಯಾ?

ಶ್ರೀಕೃಷ್ಣ (ಮುಗುಳ್ನಗೆಯಿಂದ)
ಕೌಂತೇಯ, ಏನ ಚಿಂತಿಸುವೆ? ಬಾ ಕುಳಿತುಕೋ.
ರವಿವಂಶದವನೆಂದು, ಶಶಿವಂಶದವನೆಂದು,
ಪಾಂಡುನಂದನನೆಂದು, ಕುಂತಿಯ ತನುಜನೆಂದು,
ಮೇದಿನಿಗೆ ದಿಟದರಸ ನೀನೆಂದು ತಿಳಿಸಿದೆನು;
ಕೊರತೆಯೇನದರಲ್ಲಿ? ಮೇದಿನಿಗೆ ನೀನೊಡೆಯ;
ಧರ್ಮರಾಯನು ಅಲ್ಲ; ಕುರುರಾಯನೂ ಅಲ್ಲ.
ಇದುವರೆಗೆ ಕೌರವನ ಬಾಯ್ದಂಬುಲಕ್ಕೆ
ನೀನು ಕಿಂಕರನಂತೆ ಕೈಯೊಡ್ಡಿದುದೆ ಸಾಕು!
ಇನ್ನು ಪಾಂಡವರೊಡನೆ ಸೇರಿ ಸಾಮ್ರಾಜ್ಯವಾಳು;
ನಿನ್ನ ತಾಯಿಯ ಹಡೆದ ಹೊಟ್ಟೆಯ ಯಾತನೆಯ
ಪರಿಹರಿಸು. ನನ್ನೊಡನೆ ಬಾ; ನಿನಗೆ ಮಣಿಯವರು
ಪಾಂಡವರು. ಧರ್ಮಜನು ನಮಿಸುವನು; ಫಲಗುಣನು
ನಿನ್ನಾಜ್ಞೆಯಂತಿಹನು! ಭಕ್ತಿಯಲಿ ಕಲಿಭೀಮ
ಎರಗುವನು ಪದತಳಕೆ! ಮೇಲೆ ಚಿಂತೆಯದೇಕೆ?
ನಿನಗೆ ಹಸ್ತಿನಪುರದ ಪಟ್ಟವನು ಕಟ್ಟುವೆನು;
ಗದ್ದುಗೆಯೊಳಿರೆ ನೀನು, ಪಾಂಡವರು ಕೌರವರು
ನಿನ್ನನೋಲೈಸುವರು. ಕಾಣಿಕೆಯನೊಪ್ಪಿಪರು
ಮಾದ್ರ ಮಾಗದ ಯಾದವಾದಿಗಳು ನಿನಗೆ!
ಹೆಚ್ಚೇನು? ನಾನೆ ಕಿಂಕರನಾಗಿ ನಡೆಯುವೆನು!

ಕರ್ಣ (ನಸು ಸಿಟ್ಟಿನಿಂದ ಮತ್ತ ಶೋಕದಿಂದ)
ಎಲೆ ಮುರಾಂತಕ, ಸಾಕು! ಕೊರಳ ಕೊಯ್ಯುವ ನುಡಿಗೆ
ಪೂರ್ಣವಿರಾಮವ ಹಾಕು! ಹಿಂದೆ ಗೋಕುಲದಲ್ಲಿ
ಕೊಳಲಿನಿನಿದನಿಯಿಂದ ಹುಡುಗಿಯರ ಮೋಹಿಸಿದ
ವಿದ್ಯೆಯನು ಮೆರೆಯದಿರು ನನ್ನಲ್ಲಿ. ಕೇಡನ್ನು
ಬಗೆಯದಿರು ಕುರಪತಿಗೆ; ನೆಲದ ನೆಪದಿಂದೆನ್ನ
ಮರಳು ಮಾಡುವೆನೆಂದು ತಿಳಿಯದಿರು. ಧರ್ಮದಲಿ
ನೆಲೆಮನೆಯ ಕಟ್ಟಿರುವ ಕಡುಗಲಿಯು ಎಂದಿಗೂ
ದ್ರೋಹಿಯಾಗನು ತನ್ನ ಸಾಕಿ ಸಲುಹಿದ ಪತಿಗೆ!

ಶ್ರೀಕೃಷ್ಣ — ಹೇ ಕರ್ಣ, ದುಡುಕಿ ನುಡಿಯದೆ ವಿಚಾರವ ಮಾಡು.
ನಾನು ನಿನ್ನಪದೆಸೆಯ ಬಯಸುವವನಲ್ಲ.
ಸೂರ್ಯನಿಗೆ ಮಗನಾಗಿ, ಪಾಂಡವಾಗ್ರಜನಾಗಿ,
ಕೌಂತೇಯನಾಗಿ, ಶಶಿಕುಲ ಲಲಾಮನೆ ಆಗಿ,
ಕಲಿಯಾಗಿ, ಅಸಮಬಲವಾಗಿ ಕೌರವನ
ಸಭೆಯಲ್ಲಿ ಜೀಯ ಎಂದು ನೀನಿರುವುದತಿಕಷ್ಟ!
ನೀನು ನನ್ನೊಡನೆ ಬಾ; ಪಾಂಡವರ ಒಡಗೂಡು;
ಮೇಲೆ ನಿನಗೆಣೆಯಾರು? ಕಡಲು ಬಳಸಿದ ತಿರೆಗೆ
ಚಕ್ರೇಶನಾಗುವಾ ಸೌಭಾಗ್ಯ ನಿನಗಹುದು!
ನಿನ್ನೆಡದ ಮೈಯಲ್ಲಿ ಕೌರವರು, ಬಲದಲ್ಲಿ
ಪಾಂಡುನಂದನರು ನಿನ್ನನುಮತಿಯ ನಡೆಸುತ್ತ
ಸೇವೆಯನು ಮಾಡುವರು. ನೀನರಸನಾದರೆ
ವೈರವಿತ್ತಂಡಕ್ಕೆ ಬಳಿಕಿಲ್ಲ. ಕಾಳೆಗದ
ಕೊಲೆ ನಿಂತು, ರಾಜ್ಯದಲ್ಲಿ ಶಾಂತಿ ನೆಲೆಸುವುದು.
ಇಂದು ಈ ಎಡೆಯಲ್ಲಿ, ಈ ಗಂಗೆಯೆಡೆಯಲ್ಲಿ,
ನಿನ್ನ ಕೈಯಲಿ ಮಹಾಭಾರತದ ಕೀಲಿಹುದು.
ನೆತ್ತರಿನ ಹೊಳೆ ಹರಿಯುವಂತೆ ಮಾಡುವುದು,
ಅದನು ತಡೆಯುವುದೆಲ್ಲ, ನಿನ್ನ ಕೈಯಲ್ಲಿಹುದು!
ಸಲೆ ವಿಚಾರಿಸಿ ನೋಡು!

ಕರ್ಣ (ಸ್ವಗತ) ಪೊರೆದೆನ್ನ ಮಿತ್ರನನು
ಕೈಬಿಡುವುದನುಚಿತವು. ಕನಸಿನಲ್ಲಿಯು ನಾನು
ಅದನೆಣಿಸಲಾರೆ. ಕೊಲುವೆನೆಂದರೆ ಪಾಂಡು
ನಂದನರು ಒಡನೆಹುಟ್ಟಿದರೆಂಬ ಸತ್ಯವನು
ನಾನರಿತೆ. ಕೊಲ್ಲದಿರೆ ಕೌರವಗೆ ಗತಿಯಿಲ್ಲ.
ಭೇದದಲಿ ಹೊಕ್ಕಿರಿದನೇ ಹರಿಯು?
(ಬಹಿರಂಗವಾಗಿ) ಮುರವೈರಿ,
ನನ್ನ ಜನನವನರುಹಿ ಕಂಗಳನು ಕಿತ್ತಿರುವೆ.
ಕೌರವೇಂದ್ರನ ಕೊಂದೆ! ಕೊಂದೆ! ಕೊಂದೆ!
ಹೊರೆದ ದಾತಾರಂಗೆ ಶತ್ರುಗಳ ತಲೆಗಳನು
ತರಿದೊಪ್ಪಿಸುವ ಭರದೊಳಿರ್ದೆನು. ನೀನೆನ್ನ
ಕೈಮುರಿದು ಕೌರವೇಂದ್ರನ ಕೊಂದೆ! ಮಾತಿನಲಿ
ಜಯಸಿರಿಯನೆಳೆದಿರುವೆ ನಿನ್ನೆಡೆಗೆ! ಅರಸುತನ
ಬೇಕಿಲ್ಲ. ಸಿರಿಗೆ ಸೋಲುವನಲ್ಲ. ಪಾಂಡವರ,
ಕೌರವರ ಬೆಸಕೆಯ್ಸಿಕೊಳ್ಳುವುದು ಬೇಡೆನೆಗೆ!
ಕೌರವೇಂದ್ರನನುಳಿದು ಇನ್ನಾಪ್ತರೆನಗಿಲ್ಲ.
ಕುರುಪತಿಯ ಕಿಂಕರನು ನಾನಲ್ಲ, ಹೇ ಕೃಷ್ಣ ,
ಗೆಳೆಯನಹೆ! ಕುರುಪತಿಗೆ ಕರ್ಣನೆಂದರೆ ಜೀವ
ಉಬ್ಬುವುದು. ನಾನೆ ನೆಲಕೊಡೆಯನೆಂದರಿತಿಹನು.
ನೋಡಿ ದಣಿಯನು ನನ್ನ; ನಿಚ್ಚವುಚಿತವ ಮಾಡಿ
ದಣಿಯನು. ಬಿರುದ ಹೊಗಳಿಸಿ ಹಾಡಿ ದಣಿಯನು.
ಕೌರವೇಂದ್ರನನೆಂತು ಮರೆಯುವೆನು? ಕಷ್ಟದಲಿ
ಮಾನನಿಧಿಯನ್ನೆಂತು ತೊರೆಯುವೆನು?

ಶ್ರೀಕೃಷ್ಣ (ಎದ್ದುನಿಂತು ಅತ್ತ ಇತ್ತ ತಿರುಗಾಡುತ್ತಾ ದರ್ಪವಾಣಿಯಿಂದ)
ಕಾಳೆಗವ
ನೆನೆ, ಕರ್ಣ, ಕೌರವ ವಿನಾಶವನು ನೆನೆ, ಕರ್ಣ.
ಪಾರ್ಥನೆಚ್ಚಂಗುಗಳ ಸರಿಯಲ್ಲಿ, ಕೆರಳಿದಾ
ಕಲಿಭೀಮನುರುಗದಾಘಾತದಲಿ, ನೆಲಕುರುಳಿ
ಪುಡಿಯೊಡನೆ ಸೇರುವಾ ಕುರುದಳವ ನೆನೆ, ಕರ್ಣ.
ಕೌರವನ ದುರ್ಗತಿಯ ನೆನೆ, ಕರ್ಣ, ಕಡೆಯಲ್ಲಿ,
ನಿನ್ನಳಿವ ನೆನೆ, ಕರ್ಣ.

ಕರ್ಣ (ತಿರಸ್ಕರಿಸುವಂತೆ ನಗುತ್ತಾ, ಎದ್ದುನಿಂತು)
ಮಧುಸೂದನಾ, ಏನು
ಹುಡುಗರನು ಹೆದರಿಸುವ ತಾಯಿಯೊಲು ನುಡಿಯುತಿಹೆ!
ಸಮರದಲಿ ನನಗಂಜಿಕೆಯೆ? ಭೀಮನುರುಗದಾ
ಘಾತಕ್ಕೆ ಅಳುಕುವನೆ? ಫಲುಗುಣನ ಸರಳುಗಳ
ಸುರಿಮಳೆಗೆ ಬೆದರೆ ನಾನೇನು ತರಗೆಲೆಯೆ?
ಸಾವಿಗಂಜಲು ನಾನು ಹೇಡಿಯೇ! ಹೇ ಕೃಷ್ಣ,
ಮುಳಿದು ನಿಂತರೆ ನಾನು ನಿನ್ನ ಕಲಿಪಾರ್ಥನೆಲ್ಲಿ
ನಿನ್ನ ಭಿಮನು ಎಲ್ಲಿ? ಚಕ್ರಧರ, ನೀನೆಲ್ಲಿ?
(ಎರಡು ಹೆಜ್ಚೆ ತಿರುಗಾಡಿ ಸ್ವಲ್ಪ ಶೋಕಧ್ವನಿಯಲ್ಲಿ)
ಒಡನೆ ಹುಟ್ಟಿದರೆಂದು ನನ್ನಿಯನು ಹೇಳಿ
ಪಾಂಡುಸುತರನು ಕಾದೆ! ನನ್ನೊಡೆಯನನು ಕೊಂದೆ!
ಪಾಂಡುನಂದನರೊಡನೆ ನಾ ಸೇರಲಾರೆ!
ಸಲಹಿದ ಕೃತಜ್ಞೆತೆಗೆ, ಕುರುಪತಿಯ ಸಲುವಾಗಿ,
ರಣಭೂಮಿಯಲ್ಲೆನ್ನ ಕಾಯವನು ಬಲಿದಾನ
ಮಾಡುವೆನು. ನಿನ್ನ ನೆಚ್ಚಿನ ಧೀರರೈವರನು
ಸಾಯಿಸೆನು, ರಾಜೀವಸಖನಾಣೆ! (ರವಿಯನ್ನು ದಿಟ್ಟಿಸುತ್ತಾನೆ.)

ಶ್ರೀಕೃಷ್ಣ — ಮಹಾದಾನಿ,
ಹೇ ದಯಾಸಾಗರನೆ, ಭೇದದಲಿ ನಾನಿರಿದೆ
ಎಂದೇಕೆ ಚಿಂತಿಸುವೆ? ನಿಜವನೊರೆಯದಿರೆ
ನನಗೆ ಗುಣವಲ್ಲೆಂಬ ಕತದಿಂದ ಹೇಳಿದೆನು?
ತಪ್ಪೇನು? — ನಮ್ಮೆಡೆಗೆ ನೀ ಬಂದರೊಳ್ಳೆಯದು;
ಬಾರದಿದ್ದರೆ, ಕರ್ಣ, ಮಂದಮತಿ ಕೌರವಗೆ
ಮಧುರವಚನದೆ ಬುದ್ಧಿಯನು ತಿಳುಹಿ, ರಾಜ್ಯವನು
ತಮ್ಮಂದಿರಿಗೆ ಕೊಡಿಸು. ಹಿತದ ಹಾದಿಯಿದು.
ನಿನ್ನ ಗೆಳೆಯನು ಕೌರವೇಶ್ವರನು; ನೀನೆಂದ
ಮಾತುಗಳ ಹಿಂದುಗಳೆಯನು ಅವನು. ನೀನೆಳಸೆ
ಸಂಧಿ ಸುಲಭವು; ಕಾರ್ಯಸಾಧನೆಯಾಗುವುದು.

ಕರ್ಣ — ಕಾಲ ಮಿಂಚಿತು, ಕೃಷ್ಣ. ಸಂಧಿಯ ಮಾತೇಕೆ?
ಮಸೆದುದಿತ್ತಂಡಕ್ಕೆ ಮಚ್ಚರವು. ಕೋಪಾಗ್ನಿ
ಹೊಗೆಯುತಿದೆ. ಕೇಸುರಿಗಳೇಳದೆಯೆ ಮಾಣದು.
ಅಲ್ಲದೆಯೆ ನಾನೀಗ ಕುರುಪತಿಗೆ ಮಂತ್ರವನು
ಬೆಸಸಿದೊಡೆ ಸಂದೇಹಕಾಸ್ಪದವು. ಕೆಚ್ಚೆದೆಯ
ಕಟ್ಟಾಳು ಸಂಧಿಕಾರ್ಯಕೆ ತೊಡಗೆ, ಬೀರಕೇ
ಕುಂದುಕವು. ಕಾಳೆಗಕೆ ಬೆದರಿದನು ಕಲಿಕರ್ಣ
ಎಂದೆಲ್ಲ ಪರಿಹಾಸ್ಯ ಮಾಡುವರು, ತರವಲ್ಲ.
ಹೋಗಿಬರುವೆನು, ಕೃಷ್ಣ, ಪಡುವೆಟ್ಟದಂಚಿನಲಿ
ಮುಳುಗಿದನು ದಿನಮಣಿಯು. ಸಂಧಿಯಳಿದಿಹ ದಿನವು;
ನಾನಿಲ್ಲಿ ತಳುವಿದೊಡೆ ಸಂಶಯವು ಮೂಡುವುದು
ನಮ್ಮವರ ಮನದಲ್ಲಿ. ಹುತ್ತದೆಡೆ ರಜ್ಜುವಿರೆ
ಕತ್ತಲಲಿ ಹಾವಹುದು. ಕಳುಹಬೇಹುದು ಎನ್ನ.
(ಕರ್ಣನು ನಮಸ್ಕಾರ ಮಾಡುವನು, ಕೃಷ್ಣನು ಹರಸುವನು. ಕರ್ಣನು ತೆರಳುವನು.)

ಶ್ರೀಕೃಷ್ಣ — ಎಲೆ ದಿವಾಕರತನಯ, ಕೌಂತೇಯ, ಧನ್ಯಾತ್ಮ,
ಈ ಜಗದೊಳಿಂದು ನಿನ್ನನ್ನರತಿವಿರಳ!
ಕೌರವರ ಹಿಂಡಿನಲಿ, ಪಾಂಡವರ ಗುಂಪಿನಲಿ,
ಯಾದವರ ಬಳಗದಲಿ, ಮೇಣುಳಿದ ಅರಸರಲಿ,
ನಿನ್ನ ಹೋಲುವರೊಬ್ಬರೂ ಇಲ್ಲ! ಭಾರತದ
ಸಂಗ್ರಾಮರಂಗದಲಿ ನಿನ್ನ ನೆತ್ರಹೊಳೆಯೆ
ದಿವಿಜನದಿಯಾಗುವುದು. ಪಾಪಗಳು ಕೊಚ್ಚುವುದು!
ನನ್ನಿಯಲಿ, ಚಾಗದಲಿ, ಬೀರದಲಿ, ಭಕ್ತಿಯಲಿ,
ಕರುಣೆಯಲಿ, ನೇಹದಲಿ ಮೊತ್ತಮೊದಿಲಗ ನೀನು,
ತುತ್ತತುದಿಯೂ ನೀನೆ! ನಿನ್ನ ಜನನವ ನಿನು
ತಿಳಿಯದಿರೆ, ನಾಬಲ್ಲೆ, ಪಾಂಡವರಿಗಿನ್ನೊಮ್ಮೆ
ಮುಂದೆ ಎಂದೆಂದಿಗೂ ವನವಾಸವೇ ತುದಿಯ
ಗತಿಯಾಗುತಿತ್ತು. ನಿನ್ನ ಕತೆಯನು ಕೇಳಿ
ಕಂಬನಿಯ ಕರೆಯುವರು : ಅತ್ಯಂತ ದುಃಕತಮ,
ಅತ್ಯಂತ ಧನ್ಯತಮವಾಗಿಹುದು ನಿನ್ನೀ
ಜೀವಮಾನದ ಯಾತ್ರೆ! ಅಸಮನೈ ನೀನು!
ನನ್ನಲೀಲೆಗೆ ನೀನೆ ಮೂಲೆಗಲ್ಲಾಗಿರುವೆ.
ನನ್ನ ಲೀಲೆಯ ಮೈಮೆ ನಿನ್ನಿಂದ ಹೆಚ್ಚಿಹುದು.
ಕರ್ಣನಿಗೆ ಶತ್ರುವಾಗಲಿ ಮಿತ್ರನಾಗಿರಲಿ
ಹೆಮ್ಮೆಗದು ಕಾರಣವು! ನಿನಗಿದೋ ಮಣಿಯುವೆನು!

(ಪರದೆ ಬೀಳುವುದು)