ಚೈತ್ರಮಾಸ ಕಳೆದು ವೈಶಾಖಮಾಸ ಪ್ರಾರಂಭವಾಗಿ ಮೊದಲನೆಯ ವಾರವೂ ಮುಗಿದಿತ್ತು. ಒಂದೆರಡು ಮಳೆ ಹನಿಹಾಕಿದ್ದರೂ ಬೇಸಗೆಯ ಬಿಸಿಲಿನ ಬೇಗೆ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಹಳ್ಳಿಗಳಲ್ಲೆಲ್ಲ “ಈ ವರ್ಸ ಕ್ಸಾಮ ಖಂಡಿತ !” ಎಂದು ಭವಿಷ್ಯತ್ತು ಹೇಳಲೂ ಪಾರಂಭಿಸಿದ್ದರು. ಪ್ರತಿವರ್ಷವೂ ಅದೇ ರೀತಿ ಭವಿಷ್ಯತ್ತು ಹೇಳುವುದು  ಅವರಿಗೆ ವಾಡಿಕೆಯಾಗಿದ್ದುದರಿಂದ ಅವರಲ್ಲಿಯೆ ಯಾರೂ ಅದನ್ನು ನಿಜವೆಂದು ನಂಬಿ ಭೀತಿಗೊಳ್ಳುವ ಅವಿವೇಕಕ್ಕೆ ಹೋಗುತ್ತಿರಲಿಲ್ಲ. ಆ ಭವಿಷ್ಯತ್ತು ಮಳೆಯ ದೇವತೆಗೆ ಎಚ್ಚರಿಕೆ ಕೊಡುವುದಕ್ಕಾಗಿದ್ದಿತೇ ಹೊರತು ವಾಯುಗುಣದ ಲಕ್ಷಣಗಳನ್ನು ವೈಜ್ಞಾನಿಕವಾಗಿ ವರ್ಣಿಸುವುದಕ್ಕಾಗಿರಲಿಲ್ಲ.

ಒಂದೆರಡು ಹುಸಿಮಳೆ ಬಂದು ಹೋಗಿ, ಭೂಮಿಯ ತೃಷೆ ಇರ್ಮಡಿಸಿದಂತೆ ‘ಉರಿ’ ಹೆಚ್ಚಿತ್ತು. ಕಾಡುಬೆಟ್ಟಗಳೆಲ್ಲ ದಟ್ಟವಾದ ಅರಣ್ಯಗಳಿಂದ ಯಾವಾಗಲೂ ಹಸುರಾಗಿದ್ದರೂ ನೆಲದಲ್ಲಿ ಹುಲ್ಲುಮೇವು ಇಲ್ಲದೆ, ಕರೆಯದಿದ್ದ ಕಾಲ್ನಡೆಗಳ ಮೈಯಲ್ಲಿ ಪಕ್ಕೆಲುಬುಗಳ ಜೋಡನೆಯ ಆಕಾರ ಪ್ರತ್ಯಕ್ಷವಾಗತೊಡಗಿತ್ತು. ತೊರೆಗಳಲ್ಲಿ ನೀರು ಹರಿಯುವುದು ನಿಂತು, ತೊರೆಯ ಜೀವನವೆ ತುಂಡುಗಡಿದಂತಾಗಿ, ಅಲ್ಲಲ್ಲಿ ಕೆಲವು ಗುಂಡಿಗಳಲ್ಲಿ ಮಾತ್ರ ನೀರು ಆಶ್ರಯಗೊಂಡಿತ್ತು. ಜನರು ಸಣ್ಣ ಸಣ್ಣ ಗುಂಡಿಗಳಲ್ಲಿ ‘ಹೊಂಡ ತೊಳಕಿ’ಯೂ, ದೊಡ್ಡ ಗುಂಡಿಗಳಿಗೆ ‘ಕಡುಹಾಕಿ’ಯೂ (ಕೆಲವು ಮರಗಳ ಕಾಯಿ, ತೊಗಟೆ ಸೊಪ್ಪುಗಳನ್ನು ಜಜ್ಜಿ ನೀರಿಗೆ ಹಾಕಿ ಕದಡುತ್ತಾರೆ. ಆ ವಿಷದಿಂದ ಮೀನು ಸತ್ತು ತೇಲುತ್ತವೆ. ಅಂತಹ ಗುಂಡಿಗಳಲ್ಲಿ ನೀರೆಲ್ಲ ಕರಗಾಗಿರುತ್ತದೆ.) ಮೀನು ಹಿಡಿಯುತ್ತಿದ್ದುದರಿಂದ ದನಕರುಗಳಿಗೆ ನೀರೂ ಸುಲಭವಾಗಿ ಸಿಕ್ಕುತ್ತಿರಲಿಲ್ಲ. ಅವು ನೀರಿಗಾಗಿ ಗುಡ್ಡದ ನೆತ್ತಿಯ ಕೆರೆಗಳಿಗೆ ಹೋಗಬೇಕಾಗಿತ್ತು.

ಆದರೆ ಅಗ್ರಹಾರದ ಪಕ್ಕದಲ್ಲಿಯೆ ತುಂಗಾನದಿ ಹರಿಯುತ್ತಿದ್ದುದರಿಂದ ಅಲ್ಲಿಯ ಜನರಿಗಾಗಲಿ ಜಾನುವಾರುಗಳಿಗಾಲಿ ನೀರಿನ ತೊಂದರೆ ಇರಲಿಲ್ಲ. ನದಿಯ ದಡದಲ್ಲಿದ್ದ ದೇವಸ್ಥಾನದ ಮುಂದೆ, ನೀರು ಮುಟ್ಟುವವರೆಗೂ ಇಳಿದು ಹೋಗುತ್ತಿದ್ದ ಸೋಪಾನ ಪಂಕ್ತಿಗಳ ಪಕ್ಕದಲ್ಲಿಯೆ, ದನಕರುಗಳ ನೀರಿಗೆ ಇಳಿದೂ ಇಳಿದೂ, ಹೆದ್ದಾರಿಯಾಗಿ ಬಿಟ್ಟಿತ್ತು. ವೆಂಕಪ್ಪಯ್ಯಜೋಯಿಸರೂ ಬೇಲಿ ಗೀಲಿ ಬಹಳ ಪ್ರಯತ್ನಪಟ್ಟಿದ್ದರೂ ಜಾನುವಾರಗಳ ತಮ್ಮ ‘ಮಾಮೂಲ’ನ್ನು ಬಿಟ್ಟುಕೊಟ್ಟಿರಲಿಲ್ಲ. ಕಟ್ಟಕಡೆಗೆ ಸೋತ ಜೋಯಿಸರು ಗೋದೇವತೆಗೆ ನೀರು ಕುಡಿಯದಂತೆ ತಡೆಗಟ್ಟಿ ಪಾಪ ಕಟ್ಟಿಕೊಳ್ಳುವುದೇತಕ್ಕೆ ಎಂದು ಸುಮ್ಮನಾಗಿ ಪುಣ್ಯ ಕಟ್ಟಿಕೊಂಡಿದ್ದರು.

ಆ ದಿನ ಶನಿವಾರ. ಬೆಳಿಗ್ಗೆ ಸುಮಾರು ಹತ್ತುಗಂಟೆಯ ಸಮಯದಲ್ಲಿ ಹಸು ಎತ್ತು ಕರು ಕೋಣ ಎಮ್ಮೆಗಳ ಹಿಂಡೊಂದು ಹೊಳೆಗಿಳಿಯಲೆಂದು ದೇವಸ್ಥಾನದ ಮುಂದೆ ಬಂದಿತು. ‘ಬಂದಿತು’ ಎಂದರೂ ಸರಿಹೋಗುತ್ತದೆ ; ‘ಹೋಗುತ್ತಿತ್ತು’ ಎಂದರೆ ಮತ್ತೂ ಸರಿಹೋಗುತ್ತದೆ. ಏಕೆಂದರೆ, ಆ ತುರು ಮಂದೆ ಚಲಿಸದಂತೆಯೆ ಚಲಿಸುತ್ತಿತ್ತು. ಎಮ್ಮೆಗಳ ಪಾಡಂತಿರಲಿ ದನಗಳು ಕೂಡ ಅಭ್ಯಾಸಬಲದಿಂದ ಮಾತ್ರ ಎಂಬಂತೆ ನಿಧಾನವಾಗಿ ಮೆಲುಕುಹಾಕುತ್ತ ಸೋಮಾರಿತನದ ಚಿತ್ರಗಳಂತೆ ನಿಧಾನವಾಗಿ ಸಾಗುತ್ತಿದ್ದುವು. ನೂರಾರು ಗೊರಸುಗಳ ಗುಂಪುಸದ್ದಲ್ಲದೆ, ದನಗಳ ‘ಅಂಬಾ’, ಕರುಗಳ ‘ಅಂಬೆ’, ಗೂಳಿಗಳ ಗುಟುರು, ಎಮ್ಮೆ ಕೋಣಗಳ ‘ವ್ಞ್ರಾರ್ಯ’ ಮೊದಲಾದ ಬೇರೆ ಬೇರೆಯ ಯಾವ ಸದ್ದೂ ಇರಲಿಲ್ಲ. ಆ ತುರುಮಂದೆಯ ವಾಸನೆಯೊಡನೆ ಮಾಸಿದ ಕೆಂಬಣ್ಣದ ದೂಳೂ ಮುಗಿಲು ಮುಗಿಲಾಗಿ ಎದ್ದು, ನಿಶ್ಚಲ ವಾಯುಮಂಡಲದಲ್ಲಿ ಭಾರವಾಗಿ ನಿಧಾನವಾಗಿ ಚಲಿಸುತ್ತಿತ್ತು. ಕೆಲವೆಡೆ, ಆ ಮುಗಿಲು ಎಷ್ಟು ದಟ್ಟವಾಗಿತ್ತೆಂದರೆ ಅದರ ಛಾಯೆ ಕೂಡ ನೆಲದ ಮೇಲೆ ಬೀಳುತ್ತಿತ್ತು.  ದೂಳ್ಮಿಗಿಲು ದಟ್ಟವಾಗಿ ಮೇಲೆದ್ದಾಗ ಅದರ ನೆರಳಿನ ದೆಸೆಯಿಂದ ಕಾಲ್ನಡೆಗಳ ಛಾಯೆಗಳೂ ಮಾಸಲು ಮಾಸಲಾಗುತ್ತಿದ್ದುವು.

ಪೂಜೆಗೆ ಎಲ್ಲವನ್ನೂ ಅಣಿಮಾಡಿಕೊಂಡು, ದೇವಸ್ಥಾನದ ಮುಂಭಾಗದ ಒಂದು ಮುಂಡಿಗೆಗೆ ಒರಗಿ ನಿಂತು, ಕಾನೂರು ಮತ್ತು ಮುತ್ತಳ್ಳಿಗಳಿಂದ ಬರಬೇಕಾಗಿದ್ದ ಗಾಡಿಗಳನ್ನು ನಿರೀಕ್ಷಿಸುತ್ತಿದ್ದ ವೆಂಕಪ್ಪಯ್ಯನವರು, ದನದ ಹಿಂಡು ಮುಂಬರಿದು ಹೊಳೆಗಿಳಿದ ಮೇಲೆ ನಿಡುಸುಯ್ದು, ಉತ್ತರದಿಕ್ಕಿನ ಗದ್ದೆ ಬಯಲುಗಳಾಚೆ ಇದ್ದ ಕಾಡಿನ ಕಡೆಗೆ ನೋಡಿದರು. ಕಾಡಿನಿಂದ ಮೇಲೆ ಬಿಳಿಮುಗಿಲು ವಿರಳವಾಗಿದ್ದ ನೀಲಾಕಾಶಕ್ಕೆ ಎದುರಾಗಿ ಕರಿಯ ಚುಕ್ಕಿಗಳು ಚಲಿಸುತ್ತಿದ್ದುದು ಅವರ ಕಣ್ಣಿಗೆ ಬಿತ್ತು. ಕಾನೂರಿನಿಂದ ತಮಗೆ ದಾನವಾಗಿ ಬಂದಿದ್ದ ದನದ ಹೆಣಕ್ಕಾಗಿ ರಣಹದ್ದುಗಳು ಹಾರಾಡುತ್ತಿದ್ದುದು ಗೋಚರಿಸಿದೊಡನೆ ವೆಂಕಪ್ಪಯ್ಯನವರು ನಡುಗಿ “ಅಯ್ಯೋ, ಗೋಹತ್ಯವೂ ಆಗಿಹೋಯಿತೇ ?” ಎಂದು ನರಳಿ ದೇವಸ್ಥಾನದ ಒಳಗೆ ನೋಡಿ “ನಮ್ಮಪ್ಪಾ, ನೀನೆ ಕಾಪಾಡಬೇಕು” ಎಂದು ಕೈಮುಗಿದರು.

ಜೋಯಿಸರು ಒಂದು ವಾರದ ಹಿಂದೆ ಕಾನೂರಿಗೆ ಹೋಗಿ, ಚಂದ್ರಯ್ಯಗೌಡರು ತಮ್ಮ, ತಮ್ಮ ಮಗನ ಮತ್ತು ಸೊಸೆಯ ಅನಿಷ್ಟ ಪರಿಹಾರಕ್ಕಾಗಿ (ವೆಂಕಪ್ಪಯ್ಯನವರೆ ಅದನ್ನೂ ಸೂಚಿಸಿದ್ದರು) ಕೊಟ್ಟ ಹಸುವೊಂದನ್ನು ಅದೆ ಕರುವಿನೊಡನೆ ದಾನವಾಗಿ ಸ್ವೀಕರಿಸಿದ್ದರು. ಮರುದಿನ ತಾಯಿದನವನ್ನೂ ಕರುವನ್ನೂ ಅಗ್ರಹಾರಕ್ಕೆ ಕಳುಹಿಸಿಕೊಡುವಂತೆ ಹೇಳಿ, ಜೋಯಿಸರು ಹಿಂತಿರುಗಿದ್ದರು. ಮರುದಿನ ದಾನದ ಹಸು ಬರಲಿಲ್ಲ. ನಾಳೆ ಬರಬಹುದೆಂದು ಜೋಯಿಸರು ಸುಮ್ಮನಾದರು. ಆದರೆ ಆ ದಿನವೂ ಮಧ್ಯಾಹ್ನದವರೆಗೂ ಅದು ಬಾರದಿದ್ದುದನ್ನು ನೋಡಿ, ಜೋಯಿಸರು ತಾವೇ ಕಾನೂರಿಗೆ ಹೋಗಿ ವಿಚಾರಿಸಿದರು. ಆ ಹಸು ಆಳುಗಳೆಷ್ಟು ಪ್ರಯತ್ನಿಸಿದರೂ, ಕಾನೂರಿನ ಎಲ್ಲೆಯನ್ನು ದಾಟಲೊಲ್ಲದೆ ಹೋಯಿತೆಂದೂ, ಬಿದ್ದುಕೊಂಡಿತೆಂದೂ, ಹೊಡೆದರೂ ಬಡಿದರೂ ದರದರನೆ ಎಳೆದರೂ ಮೇಲಕ್ಕೇಳದೆ ಹೋಯಿತೆಂದೂ ಗೊತ್ತಾಯಿತು.

ಸೇರೆಗಾರರ ತಾವು ಮಾಡಿದ ಮೆಹನತ್ತೆಲ್ಲವನ್ನೂ ಜೋಯಿಸರ ಎದೆ ಹೆದರುವಂತೆ ವರ್ಣಿಸಿದರು.

ಹಳೆ ಪೈಕದ ತಿಮ್ಮ “ಸ್ವಾಮಿ, ನನಗಂತೂ ಬಾಲ ಮುರ್ದು ಮುರ್ದು ಸಾಕಾಯ್ತು ! ಬಾಲೆಲ್ಲಾ ತುಂಡು ತುಂಡಾದ್ರೂ ಏಳ್ಬೇಕಲ್ಲಾ ಅದು ? ನನ್ನ ಹೇಳಿಕೆ : ಏನೋ ದೆಯ್ಯದ ಕಾಟಾನೆ ಇರ್ಬೇಕು !” ಎಂದನು.

ಜೋಯಿಸರೊಡನೆ ದನವನ್ನು ಸಾಗಿಸಲು ಮತ್ತೆ ಪ್ರಯತ್ನಿಸಿದರು. ಆಗಲಿಲ್ಲ. ಹಸುವನ್ನು ಎಳೆಯುವುದು, ಹೊಡೆಯುವುದು, ಬಾಲ ಮುರಿಯುವುದು, ಕಣ್ಣಿಗೆ ಜೀರಿಗೆ ಮೆಣಸಿನಕಾಯಿ ತಿಕ್ಕುವುದು, ಇದನ್ನೆಲ್ಲಾ ನೋಡಿ ವೆಂಕಪ್ಪಯ್ಯನವರು, “ಅದು ಬರದೇ ಇದ್ದರೂ ಚಿಂತೆಯಿಲ್ಲ. ಹೊಡೆದು ಕೊಲ್ಲಬೇಡಿ ” ಎಂದು ಹೇಳಿ ಹಿಂತಿರುಗುತ್ತಿರಲು, ಗೌಡರು “ನಾನು ನಾಳೆ ಗಾಡಿಮೇಲೆ ಹೇರಿ ಕಳಿಸ್ತೀನಿ. ಇವತ್ತಿಗೆ ನೀವು ಹೋಗಿ” ಎಂದರು.

ಮರುದಿನ ಅಗ್ರಹಾರದಲ್ಲಿ ಜೋಯಿಸರ ಮನೆಯಮುಂದೆ ಕಮಾನಿಲ್ಲದ ಗಾಡಿ ಬಂದು ನಿಂತಿತು. ಗಾಡಿಯಲ್ಲಿ ದನವನ್ನು ಕಾಲು ಮೇಲೆ ಮಾಡಿ ಕಟ್ಟಿ ತಂದಿದ್ದರು. ಮುದ್ದಾದ  ಅದರ ಎಳೆಗರು ಗಾಡಿಯ ಒಂದು ಮೂಲೆಯಲ್ಲಿ ಕರುಗಳು ಮಲಗುವಂತೆ ಮಲಗಿ, ಹಸಿವೆಯಿಂದ ತಾಯಿಯ ಮೊಲೆಗಾಗಿ ಕೂಗಿಕೊಳ್ಳುತ್ತಿತ್ತು. ಗಾಡಿಯ ಜೊತೆಯಲ್ಲಿ ಸೇರೆಗಾರರು, ಹಳೆಪೈಕದ ತಿಮ್ಮ, ಬೇಲರ ಸಿದ್ದ, ಇನ್ನಿಬ್ಬರು ಗಟ್ಟದಾಳುಗಳಿದ್ದರು.

ನಿಂಗ ಗಾಡಿ ನಿಲ್ಲಿಸಿ, ಕೊರಳು ಬಿಚ್ಚಿದನು. ಹತ್ತಾರು ಮನೆಗಳಿದ್ದ ಆ ಸಣ್ಣ ಅಗ್ರಹಾರದ ಬ್ರಾಹ್ಣಣರೂ ಬ್ರಾಹ್ಮಣ ಮಹಿಳೆಯರೂ ಮಕ್ಕಳೂ ಜೋಯಿಸರ ಮನೆಗೆ  ಹೊಸದಾಗಿ ಬಂದಿದ್ದ ದಾನದ ದನವನ್ನೂ ಅದರ ಹೆಂಗರುವನ್ನೂ ನೋಡಲು, ಒಬ್ಬೊಬ್ಬರಿಗಾಗಿ ಬಂದು ನೆರೆದರು.

ಗಟ್ಟದಾಳೊಬ್ಬನು ಕರುವನ್ನು ಕೆಳಗಿಳಿಸಿದನು. ಸೇರೆಗಾರರು ಗೋವನ್ನು ಕೆಳಗಿಳಿಸಲೆಂದು, ಕಟ್ಟಿದ್ದ ಅದರ ನಾಲ್ಕು ಕಾಲುಗಳನ್ನೂ ಬಿಚ್ಚಿದರು. ಆದರೆ ಕಾಲುಗಳು ವಿಸ್ತರಿಸಲಿಲ್ಲ ! ಸೆಟ್ಟರಿಗೆ ಗಾಬರಿಯಾಗಿ ನೋಡುತ್ತಾರೆ : ಹೊಟ್ಟೆ ಉಬ್ಬರಿಸಿದೆ. ಕಣ್ಣು ಮೆಳ್ಳೆಯಾಗಿದೆ. ಉಸಿರೂ ಆಡುವುದಿಲ್ಲ. ಎಳೆಗರುವಿನ ತಾಯಿ ಸತ್ತುಹೋಗಿತ್ತು !

ದೂರದಿಂದಲೆ, ಆಕಳು ಗಾಡಿನಲ್ಲಿ ಕಾಲು ಮೇಲಾಗಿದ್ದ ರೀತಿಯನ್ನು ನೋಡಿ “ಅಯ್ಯಯ್ಯೊ” ಎಂದುಕೊಂಡು ವಿಷಾದದಿಂದ ಓಡಿಬಂದಿದ್ದ ವೃದ್ಧ ಬ್ರಾಹ್ಮಣ ಮಂಜಭಟ್ಟರು ” ಮುಟ್ಹಾಳು ಮುಂಡೇಮಕ್ಕಳಿರಾ, ಯಾರಾದರೂ ಗೋವನ್ನು ಹೀಗೆ ಗಾಡಿಮೇಲೆ ಹಾಕಿಕೊಂಡು ತರುತ್ತಾರೆಯೇನ್ರೊ ? – ಅಯ್ಯಯ್ಯೋ, ಗೋಹತ್ಯವಾಯ್ತಲ್ರೋ ! ನಮ್ಮ ಅಗ್ರಹಾರದಲ್ಲಿ …..” ಎನ್ನುತ್ತಿರಲು “ಇಲ್ರಯ್ಯಾ, ಅದು ಅಲ್ಲೇ ದಾರೀಮೇಲೆ ಪರಾಣಬಿಟ್ಟಿರಬೇಕು” ಎಂದು ಸಿದ್ದ ಮಂಜಭಟ್ಟರ ಭಯವನ್ನು ಪರಿಹರಿಸಲೆಂಬಂತೆ ಮಾತಾಡಿದನು.

ಮಂಜಭಟ್ಟರು ದುಃಖಕೋಪಗಳಿಂದ “ಥೂ ನೀಚ, ಮಾತಾಡಬೇಡ” ಎಂದರು.

“ನಾ ಹೇಳ್ದೆ. ಹಿಂಗೆ ಕಾಲು ಮೇಲಾಗಿ ಹಾಕಾದು ಬ್ಯಾಡ ಅಂತಾ. ನನ್ನ ಮಾತು ಎಲ್ಲಿ ಕೇಳ್ತಾರೆ ಈ ಸೇರೆಗಾರು ?” ಎಂದು ತಿಮ್ಮ ಸೆಟ್ಟರ ಕಡೆಗೆ ನೋಡಿದನು.

ಒಬ್ಬರಮೇಲೊಬ್ಬರು ತಪ್ಪು ಹೊರಿಸಿ, ಎಳಗರುವನ್ನು ಜೋಯಿಸರಿಗೆ ಕೊಟ್ಟು, ದನದ ಹೆಣವನ್ನು ಗದ್ದೆಯಾಚೆಗೆ ಹಾಕಿಸಿ, ಸೇರೆಗಾರರು ದಾರಿಯುದ್ದಕ್ಕೂ ವಾರ್ತೆಯನ್ನು ಹಬ್ಬಿಸುತ್ತ ಕಾನೂರಿಗೆ ಗಾಡಿಬಿಟ್ಟಿದ್ದರು.

ಅಗ್ರಹಾರದಲ್ಲಿ ಆ ತಬ್ಬಲಿ ಕರುವನ್ನು ನೋಡಿ ನೋಡಿ ಕಣ್ಣೀರು ಹಾಕದಿದ್ದವರೇ ಇರಲಿಲ್ಲ.

ಇದನ್ನೆಲ್ಲ ನೆನೆದೇ ಜೋಯಿಸರು ದೇವಾಲಯದ ಮೂರ್ತಿಯ ಕಡೆಗೆ ನೋಡಿ, “ನಮ್ಮಪ್ಪಾ, ನೀನೇ ಕಾಪಾಡಬೇಕು” ಎಂದು ಕೈಮುಗಿದುದು.

ಜೋಯಿಸರು ಗುಡಿಯೊಳಗೆ ಹೋಗಿ, ದೀಪದ ಬತ್ತಿಯನ್ನು ಸ್ವಲ್ಪ ಮುಂದು ಮಾಡಿ ಮತ್ತೆ ಹೊರಗೆ ಬಂದು, ದಾರಿಯ ಕಡೆ ನೋಡಿದರು. ಸುಡುಬಿಸಿಲಿನಲ್ಲಿ, ದದ್ದುಹಿಡಿದು ನೋಟಕ್ಕೆ ಅಸಹ್ಯವಾಗಿದ್ದ ನಾಯಿಯೊಂದು ನಾಲಗೆ ಚಾಚಿಕೊಂಡು ತನ್ನ ನೆರಳಿನಮೇಲೆ ಕುಂಟಿಕೊಂಡು ಬರುತ್ತಿದ್ದು, ಬೀದಿಯ ನಡುವೆ ನಿಂತು ಸುತ್ತಲೂ ನೋಡಿತು. ಮತ್ತೆ ತನ್ನ ಹಿಂಭಾಗದ ಎಡೆಗಾಲಿನಿಂದ ಕುತ್ತಿಗೆಯ ಮೇಲೆ ಎಡಗಿವಿಯ ಹಿಂಭಾಗವನ್ನು ಪರಪರನೆ ಹಲ್ಲುಚಿಲಿಯುವಂತೆ ಕರೆದುಕೊಳ್ಳತೊಡಗಿತು. ಅದಕ್ಕೆ ಕೊನೆಯಿರುತ್ತೊ ಇಲ್ಲವೊ ! ಆದರೆ ಪಕ್ಕದ ಮನೆಯೊಂದರಲ್ಲಿ ಯಾರೊ ಎಂಜಲೆಲೆ ಬಿಸಾಡಿದರು ! ಜಡವಾಗಿ, ಕೆಲಸಕ್ಕೆ ಬಾರದಂತೆ ತೋರುವ, ಕರಿಮುದ್ದೆಯ ಕೋವಿಮಸಿಗೆ ಕಿಡಿ ಮುಟ್ಟಿದರೆ ಸರಕ್ಕನೆ ಮಹಾಚಟುವಟಿಕೆಯಿಂದ ಸಿಡಿಯುವಂತೆ, ಎಂಜಲೆಲೆಯನ್ನು ಕಂಡ ನಾಯಿಯ ಸೋಮಾರಿತನವೇ ವಿವರ್ತಗೊಂಡು ತೇಜಸ್ವಿಯಾಯಿತು ! ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅದು ಅಲ್ಲಿರಲಿಲ್ಲ. ಎಂಜಲೆಲೆಯ ರಣಾಂಗಣದಲ್ಲಿ ಕಚ್ಚಾಟದ ಸದ್ದು ಮಾತ್ರ ಕೇಳಿಸುತ್ತಿತ್ತು.

ಕಾದು ಕಾದು ಬೇಸರವಾಗಿ ಜೋಯಿಸರು ಒಳಗೆ ಹೋದಮೇಲೆ ಎರಡು ಗಾಡಿಗಳು ಬಂದು ಗುಡಿಯ ಮುಂದೆ ನಿಂತುವು. ಜೋಯಿಸರು ತಮ್ಮ ಕಾತರತೆಯನ್ನು ಪ್ರದರ್ಶಿಸಬಾರದೆಂದು ಚಂದ್ರಯ್ಯಗೌಡರ ಪರಿಚಿತಧ್ವನಿ ಕರೆಯುವವರೆಗೂ ಹೊರಗೆ ಹೋಗಲಿಲ್ಲ.

ಆಮೇಲೆ ಬಂದು “ಇದೇನು ಇಷ್ಟು ತಡವಾಯಿತು ?” ಎಂದರು.

ಗಂಡಸರೆಲ್ಲರೂ ಜೋಯಿಸರಿಗೆ ನಮಸ್ಕಾರ ಮಾಡಿದರು. ಹೆಂಗಸರೆಲ್ಲ ತಾವು ಉಟ್ಟುಕೊಂಡು ಬಂದಿದ್ದ ಬೆಲೆಯುಳ್ಳ ಸೀರೆಗಳು ಗಾಡಿಯಲ್ಲಿ ಕೂತಿದ್ದಾಗ ಮುದುರಿಹೋಗಿದ್ದುದರಿಂದ ಅವುಗಳ ನಿರಿಯನ್ನು ನೀವಿ ಸರಿಮಾಡಿಕೊಳ್ಳುವುದರಲ್ಲಿದ್ದರು.

‘ಏನು ಮಾಡಾದು ಹೇಳಿ. ಹೊರಡಾದೇ ಹೊತ್ತಾಯ್ತು ! ಬಹಳ ತೊಂದರೆ ಕೊಟ್ಟುಬಿಟ್ಟಳು ನಾ ಬರೋದಿಲ್ಲ, ನಾ ಒಲ್ಲೆ !’ ಅಂತಾ” ಎಂದು ಹೆಂಗಸರ ಗುಂಪಿನ ಕಡೆಗೆ ಸೀತೆಯನ್ನು ನಿರ್ದೇಶಿಸಿ ನೋಡಿದರು.

ಶ್ಯಾಮಯ್ಯಗೌಡರ ಮುಖದ ಮೇಲೆ ಪಟ್ಟೆಪಟ್ಟೆಯಾಗಿದ್ದ ಸುಟ್ಟ ಗಾಯದ ಕಲೆಗಳನ್ನು ನೋಡುತ್ತಿದ್ದ ವೆಂಕಪ್ಪಯ್ಯನವರು ಹೆಂಗಸರಿದ್ದ ಕಡೆಗೆ ತಿರುಗಿ ಸೀತೆಯನ್ನೇ ನಿರ್ದೇಶಿಸಿ ನೋಡಿ, ” ಚಂದ್ರಮೌಳೇಶ್ವರನ ಕೃಪೆಯಿಂದ ಎಲ್ಲವೂ ಸರಿಯಾಗ್ತದೆ. ಅವರನ್ನೆಲ್ಲ ಬರಹೇಳು ಒಳಗೆ ” ಎಂದು ಗುಡಿಯೊಳಗೆ ಹೋದರು.

ದೇವಸ್ಥಾನ ನಿಃಶಬ್ದವಾಗಿತ್ತು ; ಸ್ವಲ್ಪ ಕತ್ತಲೆಯೂ ಆಗಿತ್ತು. ತಳ ತಳನೆ ಹೊಳೆಯುತ್ತಿದ್ದ ಹಿತ್ತಾಳೆಯ ದೀಪದ ಕಂಭದ ನೆತ್ತಿಯಲ್ಲಿ ಉರಿಯುತ್ತಿದ್ದ ಸೊಡರುಗಳ ಬೆಳಕು ತಂಪಾಗಿ ಹೊರಗಡೆಯ ಉರಿಬಿಸಲಿನ ಮರುಭೂಮಿಗೆ ನಂದನವನದಂತಾಗಿ ಆಪ್ಯಾಯಮಾನವಾಗಿತ್ತು. ಹೂವು, ಗಂಧ, ಕರ್ಪೂರ ಮೊದಲಾದವುಗಳ ಪರಿಮಳ ದೇವರ ಕೃಪೆಯಂತೆ ಸರ್ವವ್ಯಾಪಿಯಾಗಿತ್ತು.

ಶ್ಯಾಮಯ್ಯಗೌಡರು ಪೇಟ ಕೋಟುಗಳನ್ನು ಕಳಚಿ, ದೂರವಿಟ್ಟು, ತಮ್ಮ ಸ್ಥೂಲ ಶರೀರವನ್ನು ನಿಧಾನವಾಗಿ ನೆಲಕ್ಕೆಚಾಚಿ, ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಚಂದ್ರಯ್ಯಗೌಡರೂ, ಅವರಾದಮೇಲೆ ಚಿನ್ನಯ್ಯ ರಾಮಯ್ಯರೂ ಶ್ಯಾಮಯ್ಯಗೌಡರನ್ನು ಅನುಸರಿಸಿದರು. ಗಂಡಸರಿಗೆ ತುಸು ದೂರದಲ್ಲಿದ್ದ – ಗೌರಮ್ಮನವರು, ಸೀತೆ, ಲಕ್ಷ್ಮಿ ಪುಟ್ಟಮ್ಮ ಮತ್ತು ಇನ್ನಿಬ್ಬರು ನೆಂಡತಿಯರು – ಹೆಂಗಸರ ಗುಂಪು ಅಡ್ಡಬಿದ್ದು ನಮಸ್ಕಾರ ಮಾಡಲಿಲ್ಲ. ನಿಂತಿದ್ದ ಹಾಗೆಯೇ ಕೈಮುಗಿದರು. ದೇವರ ವಿಗ್ರಹವನ್ನೂ ಅಲಂಕಾರಗಳನ್ನೂ ಎವೆಯಿಕ್ಕದೆ ನೋಡುತ್ತಿದ್ದ ವಾಸು, ಇತರರು ಅಡ್ಡಬೀಳುವುದನ್ನು ಲೆಕ್ಕಿಸಲಿಲ್ಲ.

“ಅಡ್ಡಬಿದ್ದೇನೊ ?” ಎಂದು ಕೇಳಿದರು ಚಂದ್ರಯ್ಯಗೌಡರು.

ವಾಸು ಎಚ್ಚತ್ತವನಂತೆ ತಿರುಗಿ “ಆ” ಎಂದನು.

“ಅಡ್ಡಬಿದ್ದೇನೊ ಅಂತೀನಿ !” ಎಂದು ಪಿಸುದನಿಗೈದು, ಗದರಿಸಿ ಚಂದ್ರಯ್ಯಗೌಡರು ದುರುದುರನೆ ನೋಡಿದರು.

ಗುಡಿಯೊಳಗೆ ಯಾರೂ ಗಟ್ಟಿಯಾಗಿ ಮಾತಾಡುತ್ತಿರಲಿಲ್ಲ.

ವಾಸು ಒಂದು ಸಾರಿ ರಾಮಯ್ಯನ ಕಡೆಗೆ ನೋಡಿ, ದೇವರಿಗೆ ಅಡ್ಡಬಿದ್ದನು.

ಜೋಯಿಸರು ಎಲ್ಲರಿಗೂ ಕುಳಿತುಕೊಳ್ಳುವಂತೆ ಬೆಸಸಿ, ಪೂಜೆಗೆ ಅಣಿಮಾಡತೊಡಗಿದರು. ಯಾರೊಬ್ಬರೂ ಮಾತಾಡದೆ ಗುಡಿ ಸಂಪೂರ್ಣವಾಗಿ ಮೌನವಾಗಿತ್ತು. ಪೂಜಾರಿಯ ಮಂತ್ರಘೋಷ ಅದನ್ನು ಮತ್ತೂ ಹೆಚ್ಚಿಸಿತ್ತು. ವಾಸು ಲಕ್ಷ್ಮಿಯರನ್ನುಳಿದು ಉಳಿದವರೆಲ್ಲರೂ ತಮತಮಗೆ ಸಹಜವಾದ ಚಿಂತೆಗಳಲ್ಲಿ  ಮಗ್ನರಾಗಿದ್ದರು. ಆ ಮೌನದಲ್ಲಿ ಭಕ್ತಿಗಿಂತಲೂ ಹೆಚ್ಚಾಗಿ ಭೀತಿಯೂ, ಕಷ್ಟದಿಂದ ಪಾರಾಗಬೇಕೆಂಬ ಪ್ರಾರ್ಥನೆಯೂ, ಆರ್ತಬುದ್ಧಿಯೂ ತುಂಬಿದ್ದುವು.

ಆದಕಾರಣವೆ ಹಲ್ಲಿಯೊಂದು ಲೊಚಗುಟ್ಟಿದಾಗ ಒಬ್ಬೊಬ್ಬರು ಬೆಚ್ಚಿಬಿದ್ದು ತಲೆಯೆತ್ತಿ ನೋಡಿದರು.

ಸ್ತ್ರೀಯರ ಗುಂಪಿನಲ್ಲಿ ಕುಳಿತೂ ಕುಳಿತೂ ಲಕ್ಷ್ಮಿಗೆ ಬೇಜಾರಾಗಿ ಮೆಲ್ಲಗೆ ತೆವಳಿಕೊಂಡು ವಾಸುವಿದ್ದಲ್ಲಿಗೆ ಬಂದಳು. ವಾಸು ಕಣ್ಣುಸನ್ನೆಯಿಂದ ಗಲಾಟೆಮಾಡದೆ ಸುಮ್ಮನಿರಬೇಕೆಂದು ಸೂಚಿಸಿದನು. ಆದರೂ ಲಕ್ಷ್ಮಿ ಮೆಲ್ಲಗೆ ಏನನ್ನೋ ಕೇಳಿದಳು. ವಾಸು ಎಡಗಡೆಗೆ ಬಾಗಿ ಅವಳ ಬಾಯಿ ಕಿವಿಯಿಟ್ಟು ಆಲಿಸಿದನು. ಮಾತಿನಿಂದಲೂ ಹೆಚ್ಚಾಗಿ ಲಕ್ಷ್ಮಿಯ ಬೆಚ್ಚನೆಯ ಉಸಿರೆ ಕಿವಿಗೆ ತಾಗಿರುವುದರಿಮದ ಏನೂ ಅಭಿಪ್ರಾಯವಾಗಲಿಲ್ಲ.

ವಾಸು “ಸುಮ್ಮನಿರೇ ! ಅಪ್ಪಯ್ಯ ಬಯ್ತಾರೆ !” ಎಂದನು.

ಲಕ್ಷ್ಮಿ ಮತ್ತೆ ಮಂಡಿಯೂರಿ ಕುಳಿತು, ಎತ್ತರವಾಗಿ, ವಾಸುವಿನ ಕಿವಿಯ ಬಳಿ “ಬಾಳೇಹಣ್ಣು ನಮಗೇ ಕೊಡ್ತಾರೇನು ?” ಎಂದು ಕೇಳಿದಳು.

ಲಕ್ಷ್ಮಿಯ ಮನಸ್ಸಿಗೆ ‘ವಾಸಬಾವ’ ಅನಾವಶ್ಯಕವಾಗಿ ಬಹಳ ಎತ್ತರವಾಗಿ ಬೆಳೆದಿದ್ದಂತೆ ತೋರಿತು. ತಾನು ಮಂಡಿಯೂರಿ ನಿಂತಿದ್ದರೂ ಕುಳಿತಿದ್ದ ವಾಸುವಿನ ಕಿವಿ ಬಾಯಿಗೆ ನಿಟುಕುವುದಿಲ್ಲ !

ಆದರೆ ಈ ಸಾರಿ ವಾಸುವಿನ ಲಕ್ಷ್ಮಿಯ ಪ್ರಶ್ನೆ ಕೇಳಿಸಿತ್ತು.

“ಹೌದು ಕಣೇ !” ಎಂದು ಪಕ್ಕಕ್ಕೆ ತಿರುಗಿ ತಂದೆಯ ಕಡೆಗೆ ಹೆದರಿ ನೋಡಿ, ಮತ್ತೆ ದೇವರ ಕಡೆ ನೋಡುತ್ತ ಕುಳಿತನು.

ಲಕ್ಷ್ಮಿ ಮತ್ತೆ ಅವನ ಕಿವಿಯಲ್ಲಿ “ದೇವರು ಹೆಂಗಸೇನು ?” ಎಂದು ಕೇಳಿದಳು.

“ಅಲ್ಲ ಕಣೇ ಗಂಡಸು !” ಎಂದನು ವಾಸು.

“ಅಲ್ಲ ; ಹೆಂಗಸು !” ಎಂದಳು ಲಕ್ಷ್ಮಿ ತುಸು ಮುನಿದು.

“ದೇವರು ಎಲ್ಲಾದರೂ ಹೆಂಗಸಾಗ್ತಾನೇನೆ ?” ಎಂದು ವಾಸುವೂ ಪಿಸುದನಿಯಲ್ಲಿಯೆ ಸಿಡುಕಿ ನುಡಿದನು.

ಪೂಜೆಯ ಘಂಟಾಧ್ವನಿ ಪ್ರಾರಂಭದೊಡನೆ ಎಲ್ಲರೂ ಉಟ್ಟ ಬಟ್ಟೆ ಬರಬರನೆ ಸದ್ದಾಗುವಂತೆ ತಟಕ್ಕನೆ ಎದ್ದುನಿಂತರು. ಘಂಟಾನಾದದ ಮಧ್ಯೆ ಒಡವೆ ಬಳೆಗಳ ಸದ್ದೂ ಕೇಳಿಸಿತು. ವಾಸುವೂ, ಅವನನ್ನು ಹಿಡಿದುಕೊಂಡು ಲಕ್ಷ್ಮಿಯೂ ಎದ್ದು ನಿಂತರು.

ಪೂಜೆ ಪೂರೈಸಿ ಪ್ರಸಾದ ವಿನಿಯೋಗವಾಗುತ್ತಿದ್ದಾಗ ನವರು ಮಂತ್ರಘೋಷವನ್ನು ನಿಲ್ಲಿಸಿ, ಮಾತಾಡತೊಡಗಿದರು : ಶಾಸ್ತ್ರ ದೇವರು, ಧರ್ಮ, ಮಂತ್ರವಿಧಿ, ಪತಿವ್ರತಾಧರ್ಮ, ಪತ್ನಿಗೆ ಪತಿಯೇ ದೈವ ಮೊದಲಾದವುಗಳನ್ನು ಕುರಿತು.

ರಾಮಯ್ಯನಿಗೆ ಒಂದು ವರ್ಷದ ಹಿಂದೆ ಮೂಡರೂ ಆಚಾರ ಭ್ರಾಂತರು ಆಗಿ ಕಂಡುಬಂದಿದ್ದ ವೆಂಕಪ್ಪಯ್ಯಜೋಯಿಸರು ಈಗ ಮೇಧಾವಿಗಳೂ ಪಂಡಿತರೂ ಧರ್ಮವೀರರೂ ಆಗಿ ತೋರಿಬಂದರು. ಏಕೆಂದರೆ ಜೋಯಿಸರು ಇತರರ ಕಡೆಗೆ ನೋಡುತ್ತ ಹೇಳುತ್ತಿದ್ದರೂ ಸೀತೆಯನ್ನೆ ನಿರ್ದೇಶಿಸಿ ಉಪದೇಶಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿತ್ತು. ಅಲ್ಲದೆ ಆ ಉಪದೇಶ ರಾಮಯ್ಯನಿಗೂ ಅನುಕೂಲವಾಗಿತ್ತು ! ಅದು ಅವನ ಕರ್ತವ್ಯಗಳನ್ನು ಕುರಿತು ಹೇಳದ ಹಕ್ಕುಬಾಧ್ಯತೆಗಳನ್ನೇ ಪ್ರಸ್ತಾಪಿಸಿ, ವಾದಿಸುವಂತಿತ್ತು !

ಈ ಮಧ್ಯೆ ವಿನೋಕರವಾದರೂ ವಿಷಾದಕ್ಕೆ ಕಾರಣವಾದ ಒಂದು ಸಂಗತಿ ಜರುಗಿತು. ಜೋಯಿಸರು ಹೂವು, ಗಂಧ, ತೀರ್ಥಗಳನ್ನು ಹಂಚಿದಮೇಲೆ ಪಂಚಾಮೃತವನ್ನು ಹಂಚಿದರು. ಆದರೆ ಅದನ್ನೂ ಇತರ ಪ್ರಸಾದಗಳಂತೆ ಕೊಂಚ ಕೊಂಚವೇ ಕೊಟ್ಟರು ! ವಾಸುವಿನ ಪಕ್ಕದಲ್ಲಿದ್ದ ಲಕ್ಷ್ಮಿ ಅವನು ಮಾಡಿದಂತೆ ಮಾಡುತ್ತಿದ್ದಳು. ಹೂವನ್ನು ತಲೆಗೆ ಸಿಕ್ಕಿಸಿಕೊಂಡಳು (ವಾಸುವಿಗೆ ರಾಮಣ್ಣಯ್ಯ ಹೊಸದಾಗಿ ಬಿಟ್ಟಿದ್ದ ಜುಟ್ಟಿನ ಪುಯೋಗದ ಗುಟ್ಟು ಆಗತಾನೆ ಗೊತ್ತಾಯಿತು) ; ಗಂಧವನ್ನು ಹಣೆಗೆ ಬಳಿದುಕೊಂಡಳು. ತೀರ್ಥವನ್ನು ಸಶಬ್ದವಾಗಿ ಕುಡಿದಳು – ಹಾಗೆಯೆ ಪಂಚಾಮೃತವನ್ನು ಬಾಯಿಗೆ ಹಾಕಿಕೊಂಡಳು. ಹಾಕಿಕೊಂಡದ್ದೇ ತಡ ಸಂತೋಷದಿಂದ ಕಣ್ಣರಳಿತು ! ಎಷ್ಟು ಸಿಹಿ ! ದೇವರ ಪ್ರಸಾದವನ್ನು ಬಿಟ್ಟರೆ ಇನ್ನಿಲ್ಲ ! ಕಾಲ ಮಿಂಚಿದ ಮೇಲೆ ವ್ಯರ್ಥವಲ್ಲವೆ ?

ಲಕ್ಷ್ಮಿ ಮತ್ತೆ ಬೇಗಬೇಗನೆ ಕೈನೀಡಿ, ಬಹಳ ಎತ್ತರದ ಮೇಲಿದ್ದ ಭಟ್ಟರ ಕಿವಿಗೆ ಕೇಳಿಸುತ್ತದೆಯೊ ಇಲ್ಲವೊ ಎಂದಳುಕಿ ಗಟ್ಟಿಯಾಗಿ “ಇನ್ನೊಂದು ಸೊಪ್ಪಾ !” ಎಂದು ಕೇಳಿದಳು. ‘ಸೊಪ್ಪ’ ಎಂದರೆ ‘ಸ್ವಲ್ಪ’ ಎನ್ನುವುದರ ತದ್ಭವ !

“ಯಾರದು ?” ಎಂದು ಗದರಿದರು ಚಂದ್ರಯ್ಯಗೌಡರು.

“ಈ ಹುಡುಗಿಗೇ !” ಎಂದು ದುರುಗುಟ್ಟಿದರು ಗೌರಮ್ಮನವರು.

“ಸುಮ್ಮನವರೇ” ಎಂದನು ಚಿನ್ನಯ್ಯ.

ಹೀಗೆ ಎಲ್ಲರೂ ದುರುಗುಟ್ಟಿ ಚೀಮಾರಿ ಮಾಡಿದುದರಿಂದ ಲಕ್ಷ್ಮಿಗೆ ಅವಮಾನವೂ ಖೇದವೂ ಉಂಟಾಗಿ, ಸರಕ್ಕನೆ ಸೀತೆಯ ಹಿಂದೆ ಹೋಗಿ, ಆಕೆಯ ಸೀರೆಯನ್ನು ತಬ್ಬಿಹಿಡಿದು ಅವಿತುಕೊಂಡಳು. ಅದುವರೆಗೂ ಮೌನವಾಗಿದ್ದ ಸೀತೆ ಕಿಲಕ್ಕನೆ ನಕ್ಕಳು ! ಸೀತೆ ಸೂಚನೆ ಕೊಟ್ಟಳೊ ಎಂಬಂತೆ ವಾಸುವೂ, ತಡೆದಿದ್ದ ನಗುವನ್ನು ಹೊಸಬಟ್ಟೆ ಹರಿದಂತೆ ಸದ್ದುಮಾಡಿ ಹೊರಗೆಹಾಕಿ, ನಗತೊಡಗಿದನು. ನಿಜವಾಗಿಯೂ ಹಾಸ್ಯಪೂರ್ಣವಾಗಿತ್ತು ಆ ಸನ್ನಿವೇಶ ! ಆದರೆ ದೊಡ್ಡವರಾರೂ ನಗಲಿಲ್ಲ. ಚಂದ್ರಯ್ಯಗೌಡರು ವಾಸುವಿನ ತಲೆಗೆ ಪಟ್ಟನೆ ತಟ್ಟಿ ಹಲ್ಲುಕಚ್ಚಿ ಹೆದರಿಸಿದರು. ವಾಸು ತಲೆಯುಜ್ಜಿಕೊಳ್ಳುತ್ತ ಸುಮ್ಮನಾದನು.

ಸೀತೆಯಂತಹ ಮದುಮಗಳು ಇಷ್ಟೊಂದು ಜನರೆದುರು, ಗಂಡಸರೆದುರು, ಗಂಡನೆದುರು, ದೇವರೆದುರು, ತಮ್ಮೆದುರು ನಾಚದೆ ನಗಬೇಕಾದರೆ ಕೃಷ್ಣಪ್ಪನ ದೆಯ್ಯವೇ ಕಾರಣವಾಗಿರಬೇಕೆಂದು ಚಂದ್ರಯ್ಯಗೌಡರು ಊಹಿಸಿದರು. ಹಾಗೆಯೇ ಊಹಿಸಿದ್ದ ಜೋಯಿಸರೂ ಕೃಷ್ಣಪ್ಪನ ದೆಯ್ಯವನ್ನು ಕುರಿತು “ಪರನಾರಿಯನ್ನು ಮುಟ್ಟಬಾರದು…. ಚಂದ್ರಮೌಳೇಶ್ವರನ ಮುಂದೆ ನೀನು ಬಂದು ಹೀಗೆಲ್ಲಾ ಮಾಡಿ ನರಕಕ್ಕೆ ಬೀಳುತ್ತೀಯಾ ! ನಿನಗೆ ಏನು ಬೇಕೊ ಹೇಳು ; ಎಲ್ಲಾ ಕೊಡಿಸುತ್ತೇನೆ ! ಪಾಪ, ಆ ಹುಡುಗಿಯನ್ನೇಕೆ ಪೀಡಿಸುತ್ತೀಯಾ ? ಒಳ್ಳೆಯ ಮಾತಿಗೆ ನೀನು ಹೋಗದಿದ್ದರೆ ಆಮೇಲೆ ಕಠಿನ ರೀತಿಯಿಂದ ಓಡಿಸಬೇಕಾಗುತ್ತದೆ….. ” ಎಂದು ಗಟ್ಟಿಯಾಗಿ ಅಧಿಕಾರವಾಣಿಯಿಂದ ಉಪನ್ಯಾಸ ಮಾಡಿ, ತಿರುಗಿ “ಹೌದೊ ಅಲ್ಲವೊ ? ನೀನೇ ಹೇಳು ಚಂದ್ರಯ್ಯ !” ಎಂದು ಪ್ರಶ್ನಿಸಿದರು.

“ಇನ್ನುಮೇಲೆ ಮತ್ತೆ ಮತ್ತೆ ಹಿಂಗೇ ಬಂದು ತೊಂದ್ರೆ ಕೊಟ್ರೆ ಕಠಿಣಶಿಕ್ಷೇನೇ ವಿಧಿಸಬೇಕಾಗ್ತದೆ !” ಎಂದು ಚಂದ್ರಯ್ಯಗೌಡರೂ ಜೋಯಿಸರ ಮಾತನ್ನು ಸಮರ್ಥಿಸಿ, ಸೀತೆಯ ಕಡೆಗೆ ದೊಡ್ಡ ಕಣ್ಣು ಮಾಡಿ ನೋಡಿದರು.

ಅವರು ಹೇಳಿ ಮುಗಿಸಿ, ಸೀತೆಯ ಕಡೆಗೆ ನೋಡಿದ್ದರೊ ಇಲ್ಲವೊ, ವಾಸು, ಬಾಯಿಮುಚ್ಚಿ ಹಿಡಿದುಕೊಂಡು ಎಷ್ಟು ಪ್ರಯತ್ನಿಸಿದರೂ ಸಾಗದೆ, ಕಿಸಕಿಸಕಿಸನೆ ನಗಲಾರಂಭಿಸಿದನು. ಅವನ ನಗುವಿಗೆ ಲಕ್ಷ್ಮಿಯ “ಇನ್ನೊಂದು ಸೊಪ್ಪ !”ವು ಇನ್ನೂ ಕಚಗುಳಿಯಿಡುತ್ತಲೆ ಇತ್ತು !

ಚಂದ್ರಯ್ಯಗೌಡರಿಗೆ ರೇಗಿ ಅವನ ಕಿವಿಯನ್ನು ಚೆನ್ನಾಗಿ ಹಿಂಡಿ, ಬೆನ್ನಿನಮೇಲೆ ಗುದ್ದಿ, “ನಿನ್ನ ಉಪಟಳ ಹೆಚ್ಚಾಯ್ತು ! ತಡೀ ನಿನ್ನ ಈ ವರ್ಷ ತೀರ್ಥಹಳ್ಳಿಗೆ ಓದಕ್ಕೆ ದಬ್ತೀನಿ !” ಎನ್ನುತ್ತಾ ಗುಡಿಯ ಹೊರಗೆ ದಬ್ಬಿದರು. ವಾಸು ಅಳುತ್ತ ಹೊರಗೆ ಹೋದನು.

ಜೋಯಿಸರು ಬಾಯಲ್ಲಿ “ಬೇಡ ! ಬೇಡ !” ಎಂದು ಹೇಳುತ್ತಿದ್ದರೂ ಮನಸ್ಸಿನಲ್ಲಿ “ಹಾಗೆ ಮಾಡದಿದ್ದರೆ ಹುಡುಗರು ಕೆಟ್ಟುಹೋಗ್ತಾರೆ” ಎಂದುಕೊಂಡರು.

ಪೂಜೆ ಮುಗಿದ ಮೇಲೆ ಮೊದಲೇ ನಿರ್ಣಯವಾಗಿದ್ದಂತೆ ಎಲ್ಲರೂ ಜೋಯಿಸರ ಮನೆಗೆ ಭೋಜನಕ್ಕೆ ಹೋದರು.

ಶೂದ್ರ ಅತಿಥಿಗಳಿಗೆ ಸಂಪ್ರದಾಯದಂತೆ ಕಿರುಜಗಲಿಯಲ್ಲಿ ಎಲೆ ಹಾಕಿ ಬಡಿಸಿದರು. ಊಟವೇನೊ ಬಹಳ ರುಚಿಕರವಾಗಿತ್ತು. ಹುಗ್ಗಿ, ಪಾಯಸ, ಹೋಳಿಗೆ ಇತ್ಯಾದಿಯಾದ ವಿಶೇಷಗಳೂ ಉಂಡು ತಣಿಯುವಷ್ಟು ಇದ್ದುವು. ವಾಸುವಿನ ಕಣ್ಣುಗಳಲ್ಲಿ ನೀರು ಸುರಿಯುತ್ತಿದ್ದರೂ ಅವನ ನಾಲಗೆಯೂ ನೀರು ಕರೆಯುವುದರಲ್ಲಿ ಹಿಂಬೀಳಲಿಲ್ಲ. ಅಳುತ್ತಳುತ್ತಲೆ ರಭಸದಿಂದಲೂ ಊಟ ಮಾಡಿದನು. ಸ್ವಲ್ಪ ಹೆಚ್ಚುಕಡಮೆ ಗಂಡಸರೆಲ್ಲ ಪಟ್ಟಾಗಿಯೆ ಹೊಡೆದರು. ಆದರೆ ಬ್ರಾಹ್ಮಣರ ಮನೆಯಲ್ಲಿ ಗಂಡಸರೊಡನೆ ಊಟಕ್ಕೆ ಕುಳಿತಿದ್ದ ಶೂದ್ರ ಮಹಿಳೆಯರು ನಾಚಿಕೆ ದಾಕ್ಷಿಣ್ಯಗಳಿಂದ ಚೆನ್ನಾಗಿ ಊಟಮಾಡಲಾಗಲಿಲ್ಲ. ಊಟವೂ ಅವರಿಗೊಂದು ಕವಾತಿನಂತೆ ಕಂಡುಬಂದಿತು. ವೆಂಕಪ್ಪಯ್ಯ ಜೋಯಿಸರ ಹೆಂಡತಿ ಅತ್ಯಾದರದಿಂದ ಉಪಚಾರದ ಮಾತುಗಳನ್ನು ಹೇಳುತ್ತಿದ್ದರೂ. ಏನೊ ಒಂದು ಅನ್ಯತೆಯ ಭಾವ ಮನಸ್ಸಿಗೆ ತೋರಿ, ಮೂರು ಮಕ್ಕಳ ತಾಯಾಗಿದ್ದ ಗೌರಮ್ಮನವರೂ ಕೂಡ ಸರಿಯಾಗಿ ತಲೆಯೆತ್ತಿ ನೋಡದೆ ಊಟಮಾಡಿದರು.

ಮಾತಾಡುತ್ತಾ ಆಡುತ್ತ ಶ್ಯಾಮಯ್ಯಗೌಡರು ಜೋಯಿಸರೊಡನೆ ಅಗ್ರಹಾರದಲ್ಲಿದ್ದ ಇತರ ಬ್ರಾಹ್ಮನರೊಬ್ಬರೂ ಪೂಜೆಗೆ ಬರೆದಿದ್ದುದಕ್ಕೆ ಕಾರಣ ಕೇಳಿದರು.

ಜೋಯಿಸರು “ಮಂಜಭಟ್ಟರಿಗೆ ಕಾಲು ಗಾಯವಾಗಿ ಬಾತು ಕೊಂಡಿದಯಂತೆ…. ಸಿಂಗಾ ಜೋಯಿಸರಿಗೆ ನಿನ್ನೆ ಸ್ವಲ್ಪ ಹೆಚ್ಚಾಗಿ ‘ಹೊರಗಡೆ’ಯಾಗಿ ಬಹಳ ನಿಃಶಕ್ತಿಯಂತೆ…..” ಎಂದು ಮೊದಲಾಗಿ ನೆವಗಳನ್ನು ಹೇಳಿದರು. ಆದರೆ ನಿಜವಾದ ಸಂಗತಿಯನ್ನು ಮಾತ್ರ ಬಹಿರಂಗಪಡಿಸಲಿಲ್ಲ : ವೆಂಕಪ್ಪಯ್ಯ ಜೋಯಿಸರು ಮುತ್ತಳ್ಳಿಯ ಮದುವೆಯಲ್ಲಿ ಶೂದ್ರಕನ್ಯೆಯ ಕುತ್ತಿಗೆಗೆ ತಾಳಿಕಟ್ಟಿದರು ಎಂಬ ವಾರ್ತೆ ಹಬ್ಬಿದಮೇಲೆ ಅಗ್ರಹಾರದ ಬ್ರಾಹ್ಮಣರು ಅವರಿಂದ ದೂರವಾಗತೊಡಗಿದ್ದರು. ಪೌರೋಹಿತ್ಯ, ನಿಮಿತ್ತ ನೋಡುವುದು, ತಂತ್ರ ಮಂತ್ರ ಕಟ್ಟುವುದು ಇತ್ಯಾದಿಯಾದ ಧಾರ್ಮಿಕ ಕಾರ್ಯಗಳಲ್ಲಿ ತಮಗೆ ಅವಕಾಶವೀಯದಂತೆ ವೆಂಕಪ್ಪಯ್ಯನವರೊಬ್ಬರೆ ಸಂಪಾದಿಸುತ್ತಿದ್ದುದನ್ನು ಕಂಡು ಕೆಲವರಿಗೆ ಬಹಳ ಕಾಲದಿಂದಲೂ ಅವರಮೇಲೆ ಹೊಟ್ಟೆಕಿಚ್ಚು ಹುಟ್ಟಿತ್ತು. ಈಗ ಸಂದರ್ಭವೊದಗಿ, ಶೂದ್ರ ಕನ್ಯೆಯ ಕುತ್ತಿಗೆಗೆ ತಾಳಿ ಕಟ್ಟಿದರೆಂದೂ ಅವರನ್ನು ದೂರಮಾಡಿದ್ದರು. ವೆಂಕಪ್ಪಯ್ಯನವರು ತಾವು ತಾಳಿ ಕಟ್ಟಲಿಲ್ಲವೆಂದೂ, ಕೆಳಗೆ ಬಿದ್ದಿದ್ದುದನ್ನು ಎತ್ತಿ ವರನ ಕೈಯಿಂದಲೇ ಕಟ್ಟಿಸಿದೆನೆಂದೂ ಹೇಳಿದರೂ ಹೆಚ್ಚು ಸಾರ್ಥಕವಾಗಲಿಲ್ಲ.

ಆ ವಿರೋಧಕ್ಕೆ ರಾಮಭಟ್ಟರೆಂಬುವರೆ ಮುಖ್ಯ ನೇತೃತ್ವವಾಗಿದ್ದರು. ಅವನು ಇದೇ ಸುಸಮಯವೆಂದು ಸೀತೆಮನೆ ಸಿಂಗಪ್ಪಗೌಡರೊಡನೆ ಹೆಚ್ಚು ಬಳಕೆಯನ್ನು ಬೆಳೆಸಿ, ತಾವೇ ಒಂದು ಪ್ರತ್ಯೇಕ ಶೂದ್ರಪಕ್ಷವನ್ನು ನಿರ್ಮಿಸಿ ಅದಕ್ಕೆ ಪುರೋಹಿತರಾಗಲು ಹವಣಿಸಿ ಸಾಹಸಮಾಡುತ್ತಿದ್ದರು.

ಅನೇಕ ಜನರಿದ್ದುದರಿಂದ ವೆಂಕಪ್ಪಯ್ಯನವರು ಇದನ್ನೆಲ್ಲಾ ಹೇಳಲು ಹಿಂಜರಿದರು. ಅವರು ಹೇಳದಿದ್ದುದಕ್ಕೆ ಮತ್ತೊಂದು ಕಾರಣವೇನೆಂದರೆ, ಸೀತೆಯ ಸಾನ್ನಿಧ್ಯ ! ಆಕೆಯೆ ಎಲ್ಲಿಯಾದರೂ ಸತ್ಯವನ್ನು ಹೇಳಿಬಿಟ್ಟರೆ ! ಅವಳ ಹುಚ್ಚು ಜೋಯಿಸರಿಗೆ ಅರ್ಥಗರ್ಭಿತವಾಗಿತ್ತು !

ಜೋಯಿಸರು ವಿಷಯವನ್ನು ಬದಲಾಯಿಸಿ, ಯಾತ್ರೆ ಹೊರಡುವುದನ್ನು ಕುರಿತು ಮಾತಾಡತೊಗಿದರು. ಮುತ್ತಳ್ಳಿ ಮತ್ತು ಕಾನೂರು ಮನೆತನಗಳಿಗೆ ಹಿಡಿದಿದ್ದ ಶನಿಯನ್ನು ಬಿಡಿಸುವುದಕ್ಕೆ ಜೋಯಿಸರು ಧರ್ಮಸ್ಥಳಕ್ಕೆ ಯಾತ್ರೆ ಹೋಗುವ ಉಪಾಯವನ್ನು ಈ ಮೊದಲೆ ಸೂಚಿಸಿದ್ದರು. ಶ್ಯಾಮಯ್ಯಗೌಡರೂ ಚಂದ್ರಯ್ಯಗೌಡರೂ ಅದಕ್ಕೆ ಸಮ್ಮತಿಸಿದರು.

ಯವಾಗ ಹೊರಡಬೇಕು ? ಯಾರು ಯಾರು ಹೋಗಬೇಕು ? ಯಾವ ಯಾವ ಕ್ಷೇತ್ರಗಳಲ್ಲಿ ಏನೇನು ಮಾಡಬೇಕು ? ಇವುಗಳನ್ನೆಲ್ಲ ಕುರಿತು ಭೋಜನ ಮುಗಿಸಿ, ತಾಂಬೂಲ ಹಾಕಿಕೊಂಡು, ಬೀಳ್ಕೊಳ್ಳುವವರೆಗೂ ಮಾತಾಡಿದರು.

ಮಳೆ ಹಿಡಿಯುವುದರೊಳಗೆ ಹಿಂದಕ್ಕೆ ಬರಬೇಕಾಗಿದ್ದರಿಂದ ಒಂದು ವಾರದಲ್ಲಿಯೆ ಹೊರಡಬೇಕೆಂದೂ, ಮುತ್ತಳ್ಳಿಯಿಂದ ಶ್ಯಾಮಯ್ಯಗೌಡರು ಗೌರಮ್ಮನವರು ಇಬ್ಬರು ಮಾತ್ರ ಹೊರಟರೆ ಸಾಕೆಂದೂ, ಕಾನೂರಿನಿಂದ ಚಂದ್ರಯ್ಯಗೌಡರು ರಾಮಯ್ಯ ಸೀತೆ (ಈಗವಳು ಕಾನೂರಿನವಳಷ್ಟೆ !) ಮೂವರೂ ಹೋಗಲೇಬೇಕೆಂದೂ ಸದ್ಯಕ್ಕೆ ನಿರ್ಣಯವಾಯಿತು.

ಜೋಯಿಸರಿಗೆ ಕೊಡಬೇಕಾಗಿದ್ದ ದಕ್ಷಿಣೆಯನ್ನು ಕೊಟ್ಟು, ಗಾಡಿ ಹತ್ತುತ್ತಿದ್ದಾಗ ಚಂದ್ರಯ್ಯಗೌಡರು “ವಾಸೂ ! ವಾಸೂ !” ಎಂದು ಕರೆದರು. ಬ್ರಾಹ್ಮಣ ಶೂದ್ರರೆಂಬ ಕೃತಕ ತಾರತಮ್ಯವನ್ನು ಮರೆತು, ಬಾಲಸಹಜವಾದ ಕ್ರೀಡಾಭಾವದಿಂದ, ಜೋಯಿಸರ ಮಕ್ಕಳೊಡನೆ ಕಲೆತು ಸ್ವಲ್ಪ ದೂರದಲ್ಲಿದ್ದ ಹಲಸಿನ ಮರದ ನೆಳಲಿನಲ್ಲಿ ಆಟವಾಡುತ್ತಿದ್ದ ವಾಸು ‘ಓ’ಕೊಂಡು ಲಕ್ಷ್ಮಿಯನ್ನು ಎತ್ತಿ ಸೊಂಟದಮೇಲೆ ಕೂರಿಸಿಕೊಂಡು ವೇಗವಾಗಿ ಬಂದನು. ಜೋಯಿಸರ ಮಕ್ಕಳೂ ಅವನೊಡನೆಯೆ ಬಂದು ಗಾಡಿಯ ಬಳಿ ನೋಡುತ್ತ ನಿಂತರು.

ಲಕ್ಷ್ಮಿಯ ಲಂಗದ ತುಂಬ ದೂಳಾಗಿದ್ದುದನ್ನು ಕಂಡು, ಸೀತೆ “ಏನೇ ಇದು ಮೈತುಂಬಾ ಮಣ್ಣು ” ಎನ್ನುತ್ತಾ ಕೊಡವಿದಳು.

ಗಾಡಿಯಮೇಲೆ ಬತ್ತಿ ಕೂತಿದ್ದ ವಾಸು, ಫಕ್ಕನೆ ಏನನ್ನೋ ಜ್ಞಾಪಿಸಿಕೊಂಡು, ಮುತ್ತಳ್ಳಿಯ ನಂಜನಾಗಲೇ ಎತ್ತುಕಟ್ಟಿ ಗಾಡಿಕತ್ತರಿಯ ಮೇಲೆ ನೆಗೆಯಲು ಸಿದ್ಧನಾಗಿ ನಿಂತಿದ್ದರಿಂದ, ತನ್ನಷ್ಟೇ ವಯಸ್ಸಾಗಿದ್ದ ಜೋಯಿಸರ ಮಗನನ್ನು ಕುರಿತು “ಸಣ್ಣ ಜೋಯಿಸರೆ, ಇಲ್ಲಿ ಬನ್ನಿ ! ಇಲ್ಲಿ ಬನ್ನಿ !” ಎಂದು ಕರೆದು, ಗಂಡಸರೆಲ್ಲ ಕೂತಿದ್ದ ಕಾನೂರಿನ ಗಾಡಿಗೆ ಕೇಳಿಸಬಾರದೆಂದು, ಮೆಲ್ಲಗೆ ಉಸುರಿದನು.

ಸಣ್ಣ ಭಟ್ಟರು ಹಲಸಿನಮರದ ಬುಡಕ್ಕೆ ಓಡಿಹೋಗಿ, ಓಡಿ ಬಂದು, ವಾಸುವಿನ ಕೈಗೆ ಸಣ್ಣಗೆ ದುಂಡಾದ ಒಂದು ಕರಿಯ ಕಲ್ಲುಹರಳನ್ನು ಕೊಟ್ಟರು ! ಅದು ಜೋಯಿಸರ ಮಗ ಹೊಳೆಯ ಮರಳುದಿಣ್ಣೆಯಲ್ಲಿ ಬಹು ದಿನಗಳ ಹಿಂದೆ ಸಂಪಾದಿಸಿ ಇಟ್ಟುಕೊಂಡಿದ್ದು, ಆ ದಿನ ವಾಸುವಿಗೆ ಕೊಟ್ಟಿದ್ದ ಸ್ನೇಹಗಾಣಿಕೆಯಾಗಿತ್ತು.