ಬೆಳ್ಳಿಗ್ಗೆ ಸುಮಾರು ಎಂಟುಗಂಟೆಯ ಸಮಯ. ಓರೆಬಿಸಿಲು ಸೀತೆಮನೆ  ಸಿಂಗಪ್ಪಗೌಡರ ಮಂಗಳೂರು ಹೆಂಚಿನ ಮನೆಯ ಮುಂದಿದ್ದ ತೋಟದ ಅಡಕೆ ಮರಗಳ ಹಚ್ಚನೆ ಹಸುರಿನ ನೆತ್ತಿಗಳನ್ನು ಚುಂಬಿಸಿತ್ತು. ಬಿಸಿಲು ತೋಟದ ನಡುವೆ ತೂರಿಬಂದು ಅಡಕೆಯ ಸೊಸಿಗಳ ಹಸುರುಗರಿಗಳ ಮೇಲೆಯೂ ಬಾಳೆಯ ಮರಗಳ ಹೆಡಲುಗಳ  ಮೇಲೆಯೂ ಕೋಲುಕೋಲಾಗಿ ಬಿದ್ದು ಬಣ್ಣದ ಚಿತ್ರಗಳನ್ನು ಬರೆಯುತ್ತಿತ್ತು. ತೋಟದ ನೆಲವಂತೂ ಮೇಲುಸೊಪ್ಪು, ಮೇಲು ಸೊಪ್ಪಿನ ಜಿಗ್ಗು. ಗೊಬ್ಬರ, ಕೆಮ್ಮಣ್ಣು ಇವುಗಳಿಂದ ಕಿಕ್ಕಿರಿದು ಸರಾಗವಾಗಿ ನಡೆಯುವುದಕ್ಕೂ ಕೂಡ ಅಡಚಣೆಯಾಗುತ್ತಿತ್ತು. ಕೆಲಮಂದಿ ಆಳುಗಳು ಮುದಿಯಾಗಿದ್ದ ಅಡಕೆ ಮರಗಳನ್ನು ಕೊಡಲಿಯಿಂದ ಕಡಿದುರುಳಿಸುವ ಕಾರ್ಯದಲ್ಲಿ ತೊಡಗಿದ್ದರು. ಕಡಿಯುವ ಸದ್ದು ಧ್ವನಿಪ್ರತಿಧ್ವನಿಯಾಗಿ ಆ ಪ್ರದೇಶದವನ್ನೆಲ್ಲ ಶಬ್ದಮಯವನ್ನಾಗಿ ಮಾಡಿತ್ತು. ಆಯುಸ್ಸು ಪೂರೈಸಿದ ಆ ಮುದಿ ಅಡಕೆಯ ಮರಗಳು  ಒಂದೊಂದು ಕೊಡಲಿಯ ಪೆಟ್ಟಿಗೂ ನಡುನಡುಗಿ ಹಸುರುಗರಿಗೆದರಿದ ತಮ್ಮ ತಲೆಗಳನ್ನು ತೂಗಾಡುತ್ತಿದ್ದವು.

ಕೆಲಸ ಮಾಡುತ್ತಿದ್ದ ಆಳುಗಳಿಗೆ ತುಸು ದೂರದಲ್ಲಿ ಕೃಷ್ಣಪ್ಪ ಕುಳಿತು ಸಲಹೆಗಳನ್ನು ಕೂಗಿ ಹೇಳುತ್ತಿದ್ದನು. ಅವನ ಸುತ್ತಲೂ ನಾಲ್ಕೈದು ನಾಯಿಗಳು ನಾನಾ ಭಂಗಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವು.

ಒಂದು ಅಡಕೆಯ ಮರದ ಬುಡ ಲಟ್ ಲಟ್ ಲಟ್ ಎಂದು ಸದ್ದು ಮಾಡತೊಡಗಿತು. ಹತ್ತಿರ ಇದ್ದವರೆಲ್ಲ ಎಚ್ಚರಿಕೆಯಿಂದ ದೂರ ಸರಿದು ನಿಂತರು.

ಕೃಷ್ಣಪ್ಪ “ಅಡಕೆ ಸಸಿ ಮೇಲೆ ಬೀಳದ ಹಾಂಗೆ ನೋಡ್ಕೊಳ್ಳಿ! ಹುಷಾರ್!” ಎಂದು ಕೂಗಿಹೇಳಿ, ಕೆಳಗುರುಳಲು ಹವಣಿಸುತ್ತಿದ್ದ ಮೇಘಚುಂಬಿಯಾದ ಅಡಕೆಯ ಮರವನ್ನೇ ನೋಡುತ್ತಿದ್ದನು.

ಮರ ಲಟಿ ಲಟಿ ಲಟಿ ಎಂದು ಓರೆಯಾಗತೊಡಗಿ ಮಹಾರವದೊಡನೆ  ತೋಟವೆಲ್ಲ ಬೆಚ್ಚಿಬೀಳುವಂತೆ ನೆಲಕುರುಳಿತು. ಅಕ್ಕಪಕ್ಕದಲ್ಲಿ ನಿಂತಿದ್ದ ಅಡಕೆಯ ಮರಗಳಿಗೆ ಅದರ ದಿಂಡು ತಗಲಿ ಅವುಗಳೂ ಹಿಂದಕ್ಕೂ ಮುಂದಕ್ಕೂ ತೂಗಾಡತೊಡಗಿದುವು. ಜಾಕಿ “ಅಯ್ಯಯ್ಯೋ, ಒಂದಡಕೆಸಸಿ ತಲೆ ಮುರಿದೇ ಹೋಯ್ತು !” ಎಂದು ಕೂಗಿದನು.

“ನಿಮ್ಮ ಕೆಲಸಕ್ಕೆ ಕಲ್ಲು ಹಾಕೇ ಹೋಗ್ಲಿ! ತೆಗೆದ್ರೇನೋ ಒಂದು ಸಸೀನ?” ಎನ್ನುತ್ತ ಕೃಷ್ಣಪ್ಪ ತೆಲೆ ಮುರಿದ ಅಡಕೆಸಸಿ ಇದ್ದಲ್ಲಿಗೆ ಓಡಿದನು. ಬೇರೆ ಸಮಯದಲ್ಲಾಗಿದ್ದರೆ ಕೃಷ್ಣಪ್ಪ ಆಳುಗಳಿಗೆ ಚೆನ್ನಾಗಿ ಬೈಯುತ್ತಿದ್ದನು. ಅದರೆ ತನ್ನ ಮದುವೆಯ ಮಂಟಪದ ಚಪ್ಪರಕ್ಕಾಗಿ ಮರಗಳನ್ನು ಉಲ್ಲಾಸದಿಂದ ಉರುಳಿಸುತ್ತಿದ್ದ ಅಳುಗಳನ್ನು ಬೈಯಲು ಮನಸ್ಸು ಬರಲಿಲ್ಲ.

ಸಿಂಗಪ್ಪಗೌಡರು ಮದುವೆ ಚಪ್ಪರಕ್ಕಾಗಿ ಮರಗಳನ್ನು ಕಡಿಸಲು ಮಗನಿಗೆ ಬೆಸಸಿ, ಅಸ್ವಸ್ಥಳಾಗಿದ್ದ ಸೀತೆಯನ್ನು ನೋಡಿಕೊಂಡು ಬರಲು ಮುತ್ತಳ್ಳಿಗೆ ಹೋಗಿದ್ದರು. ಕೃಷ್ಣಪ್ಪ ಸವಿಮನಸ್ಸಿನಿಂದ ಕರ್ತವ್ಯತತ್ಪರನಾಗಿದ್ದನು.

ಇನ್ನೂ ಮೂರು ನಾಲ್ಕು ಮರಗಳೂ ಉರುಳಿರಲಿಲ್ಲ. ದನ ಕಾಯುವನೊಬ್ಬನು ಏದುತ್ತ ಓಡಿಬಂದು “ಒಂದು ದನ ಹುಲಿ ಹಿಡ್ದದೆ” ಎಂದನು.

“ಯಾವಾಗಲೋ ಹಿಡ್ದಿದ್ದು?” ಎಂದು ಕೃಷ್ಣಪ್ಪ ಕೇಳಿದನು.

“ನಿನ್ನೆ ಬೈಗಿನ ಹೊತ್ತು ಅಂತಾ ಕಾಣ್ತದೆ. ರಾತ್ರಿ ಕೊಟ್ಟಿಗೀಗೇ ಬರಲಿಲ್ಲ.”

“ಅಂತೂ ನಿಮ್ಮ ದೆಸೆಯಿಂದ ದನಾ ಒಂದೂ ಉಳಿಯೋ ಹಾಂಗಿಲ್ಲ. ಏನು  ದನಾ ಕಾಯ್ತೀರೋ ಏನೋ? ದೇವರಿಗೇ ಗೊತ್ತು”.

ಕೃಷ್ಣಪ್ಪನಿಗೆ ಬೇಟೆ ಎಂದರೆ ಹುಚ್ಚು ಅನೇಕ ಪ್ರಾಣಿಗಳನ್ನು ಬೇಟೆಯಾಡಿ ಕೊಂದಿದ್ದನು. ಆದರೆ ಹುಲಿಯನ್ನು ಕೊಲ್ಲುವ ಸುಯೋಗವಿನ್ನೂ ಲಭಿಸಿರಲಿಲ್ಲ. ಆದ್ದರಿಂದ ‘ಹುಲಿ ದನಾ ಹಿಡಿದಿದೆ’ ಎಂಬ ಸುದ್ದಿಯನ್ನು ಕೇಳಿ, ಒಂದು ಕಾಲ್ನಡೆ ಹೋದುದಕ್ಕಾಗಿ ವ್ಯಸನವಾದರೂ, ಹುಲಿಯನ್ನು ಷಿಕಾರಿ ಮಾಡುವ ಅವಕಾಶ ದೊರೆತುದಕ್ಕಾಗಿ ಒಳಗೊಳಗೆ ಹಿಗ್ಗಿದನು. ಕೆಲಸ ಮಾಡುತ್ತಿದ್ದ ಆಳುಗಳಿಗೆ ಅಡಕೆಯ ಮರಗಳನ್ನು ಕಡಿಯುವಂತೆ ಹೇಳಿ, ಜಾಕಿ ಓಬಯ್ಯ ಇಬ್ಬರನ್ನೂ ಜೊತೆಗೆ ಕರೆದುಕೊಂಡು ಕೋವಿಗಳೊಡನೆ ‘ಬಡು’ (ದನದ ಹೆಣ) ಬಿದ್ದಲ್ಲಿಗೆ ಹೊರಟನು. ನಾಯಿಗಳನ್ನು ಜೊತೆಗೆ ಬರಗೊಡಲಿಲ್ಲ.

ದನ ಕಾಯುವನನ್ನು ಮೂವರನ್ನು ಕರೆದುಕೊಂಡು ಕಾಡು ಹತ್ತಿದನು. ಸ್ವಲ್ಪ ದೂರ ಹೋದಮೇಲೆ “ಅಯ್ಯಾ ಇಲ್ನೋಡಿ” ಎಂದು ಹುಲಿ ದನವನ್ನು ಹಿಡಿದ ಸ್ಥಳವನ್ನು ತೋರಿದನು. ಹುಲಿ ಹಸುವನ್ನು ಹಿಡಿದಾಗ ನಡೆದಿದ್ದ ಹೋರಾಟದಿಂದ ನೆಲದ ಹುಲ್ಲೆಲ್ಲ ನುಗ್ಗುನುರಿಯಾಗಿ ಜಜ್ಜಿಹೋಗಿತ್ತು. ಸಣ್ಣ ಸಣ್ಣ ಪೊದೆಗಳೂ ಕೂಡ ಮುರಿದಿದ್ದುವು. ಸೆಗಣಿ ನೀರುನೀರಾಗಿ ಬಿದ್ದಿತ್ತು. ಚೆಲ್ಲಿದ್ದ ನೆತ್ತರು ಹೆಪ್ಪುಗಟ್ಟಿ ಇನ್ನೂ ಹಸಿಹಸಿಯಾಗಿತ್ತು.

“ಇಲ್ಲೆ ನೆತ್ತರು ಕುಡ್ಕೊಂಡು ಆಮೇಲೆ ಕಚ್ಚಿಕೊಂಡು ಹೋಗ್ಯಾದೆ” ಎಂದನು ಓಬಯ್ಯ.

“ಹುಲಿಯೇನು ಸಣ್ಣದಲ್ಲ! ಇಲ್ಲಿ ನೋಡಿ ಅದರ ಹೆಜ್ಜೆ!” ಎಂದು ಜಾಕಿ ಅಷ್ಟೇನೂ ಸ್ಪಷ್ಟವಲ್ಲದ ಪದಚಿಹ್ನೆಯನ್ನು ತೋರಿದನು.

ನೆಲ ಗಟ್ಟಿಯಾಗಿದ್ದುದರಿಂದ ಹೆಜ್ಜೆ ಸ್ಫುಟವಾಗಿರಲಿಲ್ಲ.

“ಅದರ ಚಮಡ ಸುಲೀದೆ ಬಿಡ್ಬಾರ್ದು” ಎಂದು ಕೃಷ್ಣಪ್ಪ ಜಾಡು ಹುಡುಕುತ್ತ ಮುಂಬರಿದನು. ಹುಲಿ ಹಸುವನ್ನು ಎಳೆದುಕೊಂಡು ಹೋಗಿದ್ದ ಜಾಡು ಸುಲಭವಾಗಿ ಗೊತ್ತಾಗುವಂತಿತ್ತು.

ಜಾಡು ಹಿಡಿದು ಮುಂದೆ ಹೋಗುತ್ತಿರಲು, ಬತ್ತಿಹೋಗಿದ್ದ ಒಂದು ಕಿರುತೊರೆಯ ಪಾತ್ರ ಸಿಕ್ಕಿತು ಅದರಲ್ಲಿ ನೀರು ಒಂದು ಹನಿಯೂ ಇರದಿದ್ದರೂ ಮರಳು ಬೇಕಾದಷ್ಟಿತ್ತು. ಆ ಮರಳಿನಲ್ಲಿ ಹುಲಿ ಹಸುವನ್ನು ಎಳೆದುಕೊಂಡು ಹೋಗಿದ್ದ ಗುರುತು, ಸಾರಿ ಹೇಳುವಷ್ಟರಮಟ್ಟಿಗೆ ಸ್ಪಷ್ಟವಾಗಿತ್ತು. ಅದುವರೆಗೆ ಚೆನ್ನಾಗಿ ಕಾಣಿಸದಿದ್ದ ಹುಲಿಯ ಹೆಜ್ಜೆ ಆ ಮರಳಿನಲ್ಲಿ ಚೆನ್ನಾಗಿ ಕಾಣಿಸುತ್ತಿತ್ತು.

“ಇಲ್ಲಿ ನೋಡಿ, ಒಂದೊಂದು ಉಗುರು ಎಂದರೆ ಒಂದೊಂದು ನಿಂಬೇಕಾಯಿ ಗಾತ್ರ ಇದೆ!”

“ಇಲ್ಲಿ ನೋಡ್ರೋ! ಒಂದು ಸಣ್ಣ ಹೆಜ್ಜೆ ಬೇರೆ ಇದೆ! ಮರೀ ಹುಲಿ ಅಂತಾ ಕಾಣ್ತಾದೆ.”

ತಾಯಿ ಹೆಬ್ಬುಲಿಯ ಹೆಜ್ಜೆಯೊಂದಿಗೆ ತುಸು ಬಳಿಯಲ್ಲಿ ಅದರ ಮರಿಯ ಹೆಜ್ಜೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

“ಮಾರಾಯ್ರಾ, ಇದರ ಸಹವಾಸ ಬ್ಯಾಡ. ಮರೀ ಹುಲಿ!” ಎಂದ ಓಬಯ್ಯನ ಕಡೆಗೆ ಸಿಟ್ಟಿನಿಂದಲೂ ತಿರಸ್ಕಾರದಿಂದಲೂ ನೋಡಿದ ಕೃಷ್ಣಪ್ಪ “ನಿನ್ನ ತಲೆ! ಮರೀ ಹುಲಿ ಆದ್ರೇನಂತೆ! ಕೋವಿ ಈಡು ಬಡಿಯೋದಿಲ್ಲೇನು? ನಿಂಗೆ ಹೆದರಿಕೆಯಾದ್ರೆ ಮನೀಗ್ಹೋಗು!” ಎಂದನು.

“ಹೆದರಾಕೆ ನಾನೇನು ಹೆಂಗ್ಸೇನು? ಮರೀ ಹುಲಿ ಸ್ವಲ್ಪ ಅಪಾಯ ಅಂತಾ ಹೇಳ್ದೆ ಅಷ್ಟೇ!” ಎಂದು ಓಬಯ್ಯ ಎಲ್ಲರಿಗಿಂತಲೂ ಮುಂದಾಗಿ ಧೈರ್ಯ ಪ್ರದರ್ಶನಕ್ಕಾಗಿ ನಡೆದನು.

ಕಾಡಿನ ಅಂಚಿನಲ್ಲಿ ಹಸುವನ್ನು ಹಿಡಿದಿದ್ದ ಹೆಬ್ಬುಲಿ ಅದನ್ನು ನಡುಗಾಡಿಗೆ ಎಳೆದೊಯ್ದು, ಹಿಂಗಾಲು ಮತ್ತು ಹಿಂದೊಡೆಗಳನ್ನು ತಿಂದು, ಉಳಿದುದನ್ನು ಮರಹಸಿವೆಯ ತೃಪ್ತಿಗಾಗಿ ಹಳುವಿನಲ್ಲಿ ಹುದುಗಿಟ್ಟಿತ್ತು.

ಅದನ್ನು ನೋಡಿದ ಕೃಷ್ಣಪ್ಪ ಸುತ್ತಣ ಹೆಮ್ಮರಗಳನ್ನು ಸಂವೀಕ್ಷಿಸಿ “ಇವತ್ತು ರಾತ್ರೆ ಮರಸೀಗೆ ಕೂತ್ರೆ ಹುಲೀಗೆ ಒಂದು ಗುಂಡು ತಗಲಿಸಬಹುದು ― ಆ ಮರದಲ್ಲಿ ಒಬ್ಬ, ಅಲ್ಲೊಬ್ಬ, ಓ ಅಲ್ಲೊಬ್ಬ. ಹುಲಿ ಬಂದರೆ ಬಹುಶಃ ಈ ದಿಕ್ಕಿನಿಂದ ಬರಬಹುದು. ಬಂದೇ ಬರ್ತದೆ!  ಬರದೇ ಎಲ್ಲಿಗೆ ಹೋಗ್ತದೆ. ಅದರಲ್ಲಿಯೂ ಮರೀ ಹುಲಿ, ಕತ್ತಲೆ ಆಗಬೇಕಾದ್ರೆ ಬಂದ್ರೂ ಬಂತೆ!

ಜಾಕಿಯೂ ಮರಗಳನ್ನೂ ನೋಡಿ “ಹೌದೂ?….. ಈ ಮರಗತ್ತಲೇಲಿ ಹುಲೀಗೆ ಗುಂಡು ತಗಲಿಸೋದಾದ್ರೂ ಹ್ಯಾಂಗೆ? ತಿಂಗಳ ಬೆಣಕೇನೂ ಸೊಲ್ಪಾನೂ ಬರಾದಿಲ್ಲ ಅಂತಾ ಕಾಣ್ತದೆ”

ಆ ದಿನ ಕತ್ತಲೆಯಾದ ಮೇಲೆ ಕೆಳಕಾನೂರಿನಿಂದ ಸಾಮಾನು ಸರಕು ದನ ಕರುಗಳನ್ನು ಸೀತೆಮನೆಗೆ ಸಾಗಿಸಬೇಕೆಂದಿದ್ದ ಓಬಯ್ಯ “ಅದೆಲ್ಲಿ? ಆಗದ ಹೋಗದ ಮಾತು ― ಸುಮ್ಮನೆ ಕೋವಿ ಕಟ್ಟಿದ್ರೆ ಸಾಕು; ಬೆಳಗಾಗಬೇಕಾದ್ರೆ ಲೌಡಿ ಹಲ್ ಚಿಲ್ಡ್ ಹೋಗಿರ್ತಾಳೆ!” ಎಂದನು.

ಕೃಷ್ಣಪ್ಪನಿಗೆ ಮತ್ತೆ ಮುನಿಸಾಗಿ “ನಿಮಗೆಲ್ಲ ಮೈಗಳ್ತನ! ಉಂಡ್ರಿ, ಮಲಗಿದ್ರಿ! ನಿಮಗೆ ಬರೊಕೆ ಆಗೋದಿಲ್ಲೇನು ಹೇಳಿ, ನಾನೊಬ್ಬನೇ ಬರ್ತೀನಿ. ಕತ್ತಲಾದ್ರೇನಂತೆ? ಹಾಂಗಾದ್ರೇನು ತಿಂಗಳ ಬೆಳಕು ಸವಲ್ಪವೂ ಬರೋದಿಲ್ಲೇನು? ಒಂದು ವೇಳೆ ಕತ್ತಲೇನೆ ಆದ್ರೂ ಹುಲೀಗೆ ಹೋಡೆಯೋಕೆ ಏನು ತೊಂದ್ರೆ? ಹೋದೊರ್ಷ ನಾನು ನಮ್ಮ ತೋಟದ ಮೇಲ್ಗಡೆ ಕಾಡಿನಲ್ಲಿ ಒಂದು ಚಿರತೆ ಹೊಡೆದಾಗ ಬೆಳ್ದಿಂಗಳಿತ್ತೇನು? ಕದ್ದಿಂಗಳಾಗಿತ್ತು. ಕತ್ತಲೇಲಿ ಅದರ ಕಣ್ಣೇನು ಪಳೆಗುಡೀತ ಹೋಳೀತಿತ್ತು. ಅದನ್ನೇ ನೋಡಿ ಗುರಿ ಹೊಡೆದಿದ್ದೆ. ಗುಂಡು ಸಮಾ ತಲೀಗೆ ಬಿದ್ದಿತ್ತು” ಎಂದು ಮರಗತ್ತೆಲೆಯಲ್ಲಿಯೂ ಕೂಡ ಹುಲಿಯನ್ನು ಹೊಡೆಯಲು ಸಾಧ್ಯವೆಂಬುದನ್ನು ಹೇಳಿದಮೇಲೆ ಜಾಕಿ ಮರಸು ಕೂರಲು ಬೇಕಾಗಿದ್ದ ಅಟ್ಟಣೆಗಳನ್ನು ಕಟ್ಟುವ ಮಾತ್ತೆತ್ತಿದನು.

ಓಬಯ್ಯ “ಇವತ್ತು ರಾತ್ರಿ ಗಾಡಿ ಮೇಲೆ ಕೆಳಕಾನೂರಿಂದ ಸಾಮಾನು ಸಾಗಿಸೋಕೆ ಹೇಳಿದ್ರು ಸಿಂಗಪ್ಪಗೌಡ್ರು, ಆಮೇಲೆ ಬಂದು ಮರಸುಕೂರೋಕೆ ಆಗ್ತದೇನು?” ಎಂದು ಕೃಷ್ಣಪ್ಪನ ಕಡೆಗೆ ನೋಡಿದನು.

“ಅಗೋಳ್ರಪ್ಪಾ! ಇದೊಂದು ಬೇರೆ ಇದೆಯಲ್ಲಾ!” ಎಂದನು ಜಾಕಿ.

“ಹಾಳಾಗಿ ಹೋಗ್ಲಿ! ― ಮತ್ತೇನ್ಮಾಡಾನ ಹೇಳಿ!” ಎಂದನು ಕೃಷ್ಣಪ್ಪ.

ಓಬಯ್ಯ “ಕೋವಿ ಕಟ್ಟಿದರೆ ಏನಾಗ್ತದೆ?” ಎಂದನು.

ಕೃಷ್ಣಪ್ಪ “ಆಗೋದೇನೂ…..” ಎಂದು ಅರ್ಧದಲ್ಲಿಯೆ ಅಸಮಾಧಾನದಿಂದ ನಿಲ್ಲಿಸಿದನು.

ಜಾಕಿ “ಎರಡುಮೂರು ಕಡೆ ಕೋವಿ ಕಟ್ಟಾನ. ಒಂದಕ್ಕೆ ತಪ್ಪಿಸಿಕೊಂಡ್ರೆ ಮತ್ತೊಂದಕ್ಕೆ ನುಗ್ಗಲಿ!”

ಕಡೆಗೂ ಮರಗಳ ಮೇಲೆ ಅಟ್ಟಣೆ ಕಟ್ಟಿ ರಾತ್ರಿ ಮರಸುಕೂರುವ ಆಲೋಚನೆಯನ್ನು ತ್ಯಜಿಸಿ ಮೂವರೂ ಮನೆಗೆ ಹಿಂತಿರುಗಿ ಬಂದರು. ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಪಶುಶವವಿದ್ದ ಜಾಗಕ್ಕೆ ಹೋಗಿ ಕೋವಿ ಕಟ್ಟಿದರು.

* * *

ಸಾಯಂಕಲ ಕತ್ತಲಾಗುತ್ತಿದ್ದಾಗ ಎತ್ತಿನ ಗಾಡಿಯೊಂದು ಸೀತೆಮನೆಯಿಂದ ಹೊರಟು ಕೆಳಕಾನೂರಿಗೆ ಹೋಗುವ ಹೆದ್ದಾರಿಯಲ್ಲಿ ಹೋಗುತ್ತಿತ್ತು. ಚಕ್ರಗಳು ಉರುಳುವ ಸದ್ದಲ್ಲದೆ ಬೇರೆ ಸದ್ದಿರಲಿಲ್ಲ. ಎತ್ತುಗಳ ಕೊರಳಲ್ಲಿ ಗಂಟೆಯ ಸರಗಳಿರಲಿಲ್ಲ. ಗಾಡಿ ಹೊಡೆಯುವವನು ಶಬ್ದವಾಗಬಾರದೆಂದು ಪ್ರಯತ್ನಪೂರ್ವಕವಾಗಿಯೆ ಅವುಗಳನ್ನು ಬಿಚ್ಚಿ ಮನೆಯಲ್ಲಿಟ್ಟಿದ್ದನು. ಕೀಲುಗಳು ಹೆಚ್ಚು ಸದ್ದಾಗಬಾರದೆಂದು ಬೇಕಾದಷ್ಟು ಗಾಡಿಯೆಣ್ಣೆ ಹಾಕಿದ್ದನು.

ಸ್ವಲ್ಪ ಹೊತ್ತಿನಲ್ಲಿಯೆ ಹಿಂದಿನಿಂದ ಮತ್ತೆ ಮೂವರು ಬಂದು ಗಾಡಿ ಹತ್ತಿದರು. ಎಲ್ಲರೂ ತಮ್ಮತಮ್ಮಳೊಗೆ ಪಿಸುಮಾತಾಡಿಕೊಳ್ಳುತ್ತಿದ್ದರು. ಆ ಕಾಡುರಸ್ತೆಯಲ್ಲಿ ಅವರ ಮಾತುಗಳನ್ನು ಆಲಿಸಲು ಬೇರೆ ಯಾರು ಇರದಿದ್ದರೂ ಅವರು ಗುಟ್ಟಾಗಿ ಮಾತಾಡಿಕೊಳ್ಳುತ್ತಿದ್ದದನ್ನು ನೋಡಿದರೆ ಯಾವುದೋ ಕಳ್ಳಕೆಲಸಕ್ಕೆ ಹೊರಟಿದ್ದಾರೆಂದು ಗೊತ್ತಾಗುತ್ತಿತ್ತು. ಗಾಡಿ ನೆಟ್ಟಗೆ ನಡೆದು ಕೆಳಕಾನೂರು ಅಣ್ಣಯ್ಯಗೌಡರ ಹುಲ್ಲುಮನೆಯ ಅಂಗಳದಲ್ಲಿ ನಿಂತಿತು. ಓಬಯ್ಯ ಕೆಳಗೆ ನೆಗೆದು ಪಿಸುದನಿಯಲ್ಲಿ “ಕೃಷ್ಣಪ್ಪಗೌಡ್ರೇ, ಒಳಗೆ ಬನ್ನಿ” ಎಂದನು. ಕೃಷ್ಣಪ್ಪನೂ ಗಾಡಿಯಿಂದಿಳಿದು ಓಬಯ್ಯನೊಡನೆ ಒಳಗೆ ಹೊದನು. ಗಾಡಿಯವನು ಎತ್ತುಗಳ ಕೊರಳು ಬಿಚ್ಚಿ ಮೂಕಿಯನ್ನು ನೆಲಕ್ಕಿಟ್ಟಮೇಲೆ ಜಾಕಿ ಅವನನ್ನು ಕುರಿತು “ಚಂದ್ರೇಗೌಡರ ಮನೆ ಇಲ್ಲಿಗೆ ಎಷ್ಟು ದೂರ ಆಗ್ತದೋ?” ಎಂದು ಕೇಳಿದನು.

ಗಾಡಿ ಹೊಡೆಯುವವನು “ಹೆಚ್ಚಿಲ್ಲ, ಒಂದು ಅಡಕೆ ಅಗಿಯೋ ಅಷ್ಟುದೂರ ಇರಬೇದು” ಎಂದು ಎತ್ತುಗಳಿಗೆ ಗಾಡಿಯಲ್ಲಿದ್ದ ಒಣಗಿದ ನೆಲ್ಲುಹುಲ್ಲನ್ನು ಹಾಕಿದನು. ಅವು ಸಶಬ್ದವಾಗಿ ಅದನ್ನು ಮೇಯತೊಡಗಿದವು.

ಅಣ್ಣಯ್ಯಗೌಡರು ಹೊರಗೆ ಬಂದು ಕರೆಯಲು ಗಾಡಿ ಹೊಡೆಯುವವನೂ ಜಾಕಿಯೂ ಅವರ ಹಿಂದೆ ಹೋದರು. ಜಗಲಿಯಲ್ಲಿ ಒಂದು ಹರಳೆಣ್ಣೆಯ ಹಣತೆಯ ಬೆಳಕಿನಲ್ಲಿ ಓಬಯ್ಯ ಕೃಷ್ಣಪ್ಪನಿಗೆ ಕಳ್ಳು ಬೊಗ್ಗಿಸುತ್ತ ಉಪಚಾರ ಮಾಡುತ್ತಿದ್ದನು. ಉಳಿದವರು ಅಲ್ಲಿಗೆ ಬರಲು ಅವರಿಗೂ ನೀಡಿದನು. ಎಲ್ಲರೂ ಚೆನ್ನಾಗಿ ಹೀರಿದರು.

ಮೊದಲು ಮೆಲ್ಲಗೆ ಪಿಸುಮಾತಾಡುತ್ತಿದ್ದವರು ಕ್ರಮೇಣ ಸ್ವಲ್ಪ ಗಟ್ಟಿಯಾಗಿ ಮಾತಾಡತೊಡಗಿದರು. ಕಡೆಕಡೆಗೆ ಗಟ್ಟಿಯಾಗಿ ನಗಲೂ ಆರಂಭಿಸಿದರು. ಇನ್ನೂ ಹೆಚ್ಚಾಗಿ ಕಳ್ಳು ಕೊಡಿಯಲು ಬಿಟ್ಟರೆ ಆ ದಿನದ ಕೆಲಸ ಕೆಡುವುದೆಂದು ತಿಳಿದ ಅಣ್ಣಯ್ಯಗೌಡರು ತಮ್ಮ ಮಗಳನ್ನು ಕರೆದು ಕಳ್ಳಿನ ಕೊಡವನ್ನು ಒಳಗೊಯ್ಯುವಂತೆ ಹೇಳಿದರು. ಆದರೆ ಜಾಕಿ ಹುಚ್ಚನಂತೆ ನಗುತ್ತ “ಬಾಳ ಲಾಯ್ಖಾಗಿದೆ ಕಣ್ರೋ ಕಳ್ಳು! ಇನ್ನೊಂದೀಟು ಕೊಡಿ! ರಾತ್ರೆಲ್ಲ ನಿದ್ದೆಗೆಡ್ಬೇಕಲ್ಲಾ!” ಎಂದು ಕೊಡಕ್ಕೆ ಕೈಹಾಕಿ ಕಸಿದುಕೊಂಡು ಬೊಗಸಿ ಬೊಗಸಿ ಕುಡಿಯುತೊಡಗಿದನು.

ಕಳ್ಳಿನ ಕೊಡದ ತಳಭಾಗದ ಕಡೆಹನಿ ಮುಗಿಯುವವರೆಗೂ ಜಾಕಿ ಮೇಲೆಳಲಿಲ್ಲ. ತರುವಾಯ ಮೇಲೆದ್ದು ತೂರಾಡುತ್ತ ಗಾಡಿಗೆ ಸರಕು ಸಾಮಾನು ತುಂಬುತ್ತಿದ್ದ ಇತರರಿಗೆ ನೆರವಾದನು. ಅನೇಕಸಾರಿ ಅವನ ಸಹಾಯ ಅಡಚಣೆಯಾಗಿ ಪರಿಣಮಿಸುತ್ತಿತ್ತು.

ಗಾಡಿಗೆ ಸಾಮಾನು ಭರ್ತಿಯಾದ ಮೇಲೆ ಅಣ್ಣಯ್ಯಗೌಡರು ಎಲೆಯಡಕೆ ಅಗಿಯುತ್ತಾ ಅದರ ರಸ ಕೆಳಗೆ ಬೀಳದಂತೆ ಮುಖವನ್ನು ಸ್ವಲ್ಪ ಮೇಲಕ್ಕೆ ನೆಗಹಿ, “ಣೀವು ಉಂಡಾರಿ ಹೋಗ್ಭಣ್ಣಿ, ಮುಟ್ಟೊಂಡಾರಿಗೆ ಸಾಮಣೆಲ್ಲ ಮುಗಿಟಡೆ. ಆಮೇಳೆ ಜಾಣುವಾರು ಹೊಡಕೊಂಡ್ಹೋಗ್ಬೈಡು” ಎಂದರು.

ಅಂಗಳದಲ್ಲಿ ಕಂಬಳಿಯ ಮೇಲೆ ಕುಳಿತು ಆಕಾಶ ನೋಡುತ್ತಿದ್ದ ಜಾಕಿ “ತಿ….. ತಿ….ತಿ೦ಗಳ ಬೆಣಕು ಏನು ಪಸ೦ದಾಗಿದೆ” ಎ೦ದು ಮೊದಲೇ ತುಟಿ ಮೀರಿ ಕೋರೆದಾಡೆಗಳ೦ತಿದ್ದ ಹಲ್ಲುಗಳನ್ನು ಮತ್ತಷ್ಟು ಪ್ರದರ್ಶಿಸಿ ನಗತೊಡಗಿದನು.

“ಗಾಡಿ ಹಿ೦ದಕ್ಕೆಒ೦ದರಡ್ಮೂರು ಜಾನ್ವಾರು ಕಟ್ಟಿಬೆಡಾನ ಈಗ್ಲೆ.  ಈಗ್ಲೆ ಹೋದಷ್ಟು ಹೋಗ್ಲಿ.  ಆಮೇಲೆ ಸುಲಭಾಗ್ತದೆ” ಎ೦ದನು ಕೃಷ್ಣಪ್ಪ.

“ಹೌದಪ್ಪಯ್ಯಾ, ಅದೂ ಒ೦ದು ಹುನಾರೇ!” ಎ೦ದು ಓಬಯ್ಯಕೊಟ್ಟಿಗೆಗೆ ಹೋಗಿ ಮೂರು ದನಗಳನ್ನು ತ೦ದು ಅವುಗಳನ್ನು ತ೦ದು ಅವುಗಳ ಕೊರಳ ಕಣ್ಣಿಗಳನ್ನು ಉದ್ದಮಾಡಿ ಗಾಡಿಯ ಗೊಟಕ್ಕ ಕಟ್ಟಿದನು.

ಗಾಡಿ ಸೀತೆಮನೆಯ ಕಡೆಗೆ ಹೊರಟಿತು. ಪರ್ವತ ಕ೦ದರ ಕಾನನಗಳೆಲ್ಲ ಬಳ್ದ೦ಗಳಲ್ಲಿ ಮಿ೦ದು ಮೂರ್ಛೆಹೋದ೦ತೆಯೋ ಅಥವಾ ಸಮಾಧಿ ಮಗ್ನವಾದ೦ತೆಯೋ ಮೌನವಾಗಿದ್ದುವು.  ತೇನೆ ಹಕ್ಕಿಗಳ ಉಲಿಯೂ ಕಾನೂರಿನ ನಾಯಿಗಳ ಕೂಗಾತವನ್ನು ಕೇಳಿ ಆಗಾಗ ಪ್ರತ್ಯುತ್ತರವಾಗಿ ಕೂಗುತ್ತಿದ್ದ ಅಣ್ಣಯ್ಯಗೌಡರ ಕ೦ತ್ರಿನಾಯಿಯ ಬೊಗಳುವಿಕೆಯೂ ಗಾಡಿಯ ಹಿ೦ದೆ ಹೋಗುತ್ತಿದ ಕೃಷ್ಣಪ್ಪ ಒಬ್ಬಯ್ಯ ಜಾಕಿಯರಿಗೆ ತಮ್ಮ ದಿಗ್ವಿಜಯದ ಜಯಧ್ವನಿಯಂತೆ ಕೇಳಿಸುತ್ತಿದ್ದುವು.  ಸ್ವಲ್ಪ ಹೊತ್ತಿನಲ್ಲಿ ಗಾಡಿಯೂ ಗಾಡಿಯ ಸದ್ದೂ ಕಾನನಾ೦ತರದಲ್ಲಿ ಮರೆಯಾದುವು.

ಆದರೂ ಅಣ್ಣಯ್ಯಗೌಡರ ಕಂತ್ರಿನಾಯಿ ಬೊಗಳುವುದನ್ನು ಬಿಡಲಿಲ್ಲ.  ಅಣ್ಣಯ್ಯಗೌಡರು ಆಲಿಸುತ್ತಾರೆ : ಕಾನೂರಿನಲ್ಲಿ ನಾಯಿಗಳ ಬೊಬ್ಬೆ ಎದ್ದಿದೆ ! ಚೆನ್ನಾಗಿ ಕೇಳಿಸುತ್ತಿದೆ!

ಅದ್ದೇ ಸಮಯದಲ್ಲಿ ಅಣ್ಣಯ್ಯಗೌಡರು ಕಾನೂರಿಗೆ ಹೋಗಿ ನೋಡಿದ್ದರೆ ವಿಸ್ಮಿತರಾಗುತ್ತಿದ್ದರು: ಚ೦ದ್ರಯ್ಯಗೌಡರು, ರಾಮಯ್ಯ, ಪುಟ್ಟಣ್ಣ, ಸೇರೆಗಾರರು, ಹಳೇಪೈಕದ ತಿಮ್ಮ, ಬೈರ, ಸಿದ್ದ ಮೂದಲಾದ ಬೇಲರು, ಸೋಮನೇ ಮೊದಲಾದ ಗಟಿದಾಳುಗಳು ಎಲ್ಲರೂ ದ೦ಡು ಕಟ್ಟಿಕೊ೦ಡು ಅದೆಲ್ಲಿಗೋ ಹೊರಡಲು ಸಿದ್ಧರಾಗಿದ್ದಾರೆ! ಅವರ ಜೊತೆಯಲಿ ಕಾಡಿನ ಇಲಾಖೆಯ ಅಧಿಕಾರಿಯಾದ ’ಗಾರ್ಡ’ನೂ ಇದ್ದಾನೆ! ಬೆಳ್ದಿ೦ಗಳಲ್ಲಿ ಬೇಟೆಗೆ ಹೊರಟಿದಾರೆಯೇ ಎ೦ದರೆ ಹಾಗೆ ತೋರುವುದಿಲ್ಲ.  ಏಕೆ೦ದರೆ ಪ್ರಯತ್ನಪೂರ್ವಕವಾಗಿ ನಾಯಿಗಳು ತಮ್ಮೊಡನೆ ಬರದ೦ತೆ ಅಟ್ಟುತ್ತಿದ್ದಾರೆ.  ಚ೦ದ್ರಯ್ಯಗೌಡರು ಗಾಡಿ ನಿ೦ಗನಿಗೆ “ನಾಯಿನೆಲ್ಲ ಒಳಗೆ ಕೂಡೋ ಇವತ್ತು” ಎ೦ದು ಅಪ್ಪಣೆ ಮಾಡುತ್ತಿದ್ದಾರೆ.  ಪುಟ್ಟನೂ ವಾಸುವೂ ಗಲಭೆಮಾಡುತ್ತಿದ್ದ ನಾಯಿಗಳಿಗೆ ಹಗ್ಗ ಸರಮಣಿಗಳನ್ನು ಹಾಕಿ ಕಟ್ಟಿ, ಕ೦ಬಗಳಿಗೆ ಬಿಗಿಯುತ್ತಿದ್ದಾರೆ!  ಕೆಲವರು ಉದ್ದವಾದ ಕಬಿಣದ ಹಾರೆಗೋಲುಗಳನ್ನೂ ಮಾತ್ತೆ ಕೆಲವರು ಗುದ್ದಲಿಗಳನ್ನೂ ಹೊತ್ತುಕೊ೦ಡಿದ್ದಾರೆ.  ಪುಟ್ಟಣ್ಣನೊಬ್ಬನ ಕೈಯಲ್ಲಿ ಮಾತ್ರ ಒ೦ದು ಜೋಡು ನಳಿಗೆಯ ತೋಟಾಕೋವಿಯಿದೆ!

ಸಿ೦ಗಪ್ಪಗೌಡರು ಲೈಸನ್ಸಿಲ್ಲದೆ ತಾವು ಕಡಿಸಿದ್ದ ಕಳ್ಳನಾಟಾಗಳನ್ನು ಚ೦ದ್ರಯ್ಯಗೌಡರು ತಮ್ಮ ಮೇಲ  ಫಿರಾಯಾದು ಮಾಡಿಯಾರು ಎಂಬ ಭೀತಿಯಿಂದಲೂ ದೂರದರ್ಶಿತೆಯಿಂದಲೂ ತಮ್ಮ ಗದ್ದೆಯಂಚಿನಲ್ಲಿ ಮನೆಯಿಂದ ದೂರವಾಗಿ ಹರಿಯುತ್ತಿದ್ದ ಒ೦ದು ತೊರೆಯ ಉಸುಬಿನಲ್ಲಿ ಹೂಳಿಸಿಟ್ಟಿದ್ದರು.  ಆದ್ದರಿ೦ದಲೆ ಚ೦ದ್ರಯ್ಯಗೌಡರು ಕೂಟ್ಟಿದ್ದ ಅರ್ಜಿಯ ಪ್ರಕಾರ ತೀಥ೯ಹಳ್ಳಿಯ ಫಾರೆಸ್ಟ ರೇ೦ಜರು ಒಬ್ಬ ’ಗಾರ್ಡ್’ ನನ್ನು ಸೀತೆಮನೆಗೆ ಅಜಮಾಯಿಸಿಮಾಡಲು ಕಳುಹಿದಾಗ ಅವನಿಗೆ  ಕಳ್ಳನಾಟಾಗಳ ಯಾವ ಕುರುಹೂ ದೊರೆತಿರಲಿಲ್ಲ. ’ಗಾರ್ಡ’ನು ಚ೦ದ್ರಯ್ಯಗೌಡರಿಗೆ.  ಆ ವಿಷಯವನ್ನು ತಿಳಿಸಲು ಅವರು ಕಳ್ಳ ನಾಟಾಗಳನ್ನು ಪತ್ತೆಹಚ್ಚಿಕೊಡುವುದಾಗಿ ಭರವಸೆಯಿತ್ತು ಪುಟ್ಟಣ್ಣನನ್ನು ಬೇಹಿನ ಮೇಲೆ ಕಳುಹಿದರು.  ಅವನು ಸುದ್ದಿಗಳಿಗೆಲ್ಲ ಮಾರ್ಕೆಟ್ಟಿನ೦ತ್ತಿದ್ದ ಕಳ್ಳ೦ಗಡಿಗೆ ಹೋಗಿ, ಅ೦ಗಡಿಯ ಹೋಗಿ, ಅ೦ಗಡಿಯ ಯಜಮಾನನನ್ನು ಪುಸಲಾಯಿಸಿ ಕೇಳಿದನು.  ಕಳ್ಲ೦ಗಡಿಯವನಿಗೆ ಓಬಯ್ಯನ ಮೇಲೆ ಸಿಟ್ಟಿತ್ತು.  ಅದೂ ಅಲ್ಲದೆ ಚ೦ದ್ರಯ್ಯಗೌಡರಿ೦ದ ಓಬ್ಬಯ್ಯ ತನಗೆ ಕೊಡಬೇಕಾಗಿದ್ದ ಹಣವೂ ಲಭಿಸಬಹುದೆ೦ಬ ಆಸೆಯೂ ಎತ್ತು.  ಏಕೆ೦ದರೆ ಓಬಯ್ಯ ಅವರ ಒಕ್ಕಲಲ್ಲವೆ?  ಅಗಡಿಯವನು ತನಗೆ ತಿಳಿದುಬ೦ದಿದ್ದ ಸ೦ಗತಿಗಳನ್ನೆಲ್ಲ ಹೇಳಿದನು.  ಆದರೆ ನಾಟಾಗಳನ್ನು ಯಾವ ಸ್ಥಳಗಳಲ್ಲಿ ಹೂಳಿಟ್ಟಿದ್ದಾರೆ ಎ೦ಬುದು ನಿಷ್ಕ್ರುಷ್ಟವಾಗಿ ಗೊತ್ತಾಗಲಿಲ್ಲ.  ಅ೦ತೂ ಹಳ್ಳದ ಕೆಸರಿನಲ್ಲಿ ಹೂತಿಟ್ಟಿದಾರೆ ಎ೦ಬುದೇನೋ ಗೊತ್ತಾಯಿತು.  ಅದನ್ನೇ ಪತ್ತೆಹಚ್ಚಲು ಚ೦ದ್ರಯ್ಯಗೌಡರು ಆ ದಿನ ರಾತ್ರಿ ಪರಿವಾರಸಮೇತರಾಗಿ ಗುಟ್ಟಾಗಿ ಹೊರಟ್ಟಿದ್ದರು.

ಚ೦ದ್ರಯ್ಯಗೌಡರೂ ಅವರ ಪರಿವರವೂ ಸೀತೆಮನೆಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ನಡೆದಿರಲು ಮು೦ದೆ ಯಾವನೋ ಒಬ್ಬ ವ್ಯಕ್ತಿ ದಾರಿಯ ಪಕ್ಕದಿ೦ದ ಮತ್ತೂ೦ದು ಪಕ್ಕಕ್ಕೆ ಸರ್ಪಗಮನದ೦ತೆ ವಕ್ರವಾಗಿ ತೂರಾಡಿ ನಡೆಯುತ್ತಿದ್ದುದು ಕಣ್ಗೆ ಬಿತ್ತು.  ಚ೦ದ್ರನ ಬೆಳಕು ಉಜ್ವವವಾಗಿದ್ದು, ಕೆ೦ಪು ಹೆದ್ದಾರಿಯ ಮೇಲೆ ಮಸಿ ಚೆಲ್ಲಿದ೦ತೆ  ಅಲ್ಲಲ್ಲಿ ಬಿದ್ದಿದ್ದ ಮರಗಳ ನೆರಲಿನಲ್ಲಿ ಆ ಮನುಷ್ಯ ವ್ಯಕ್ತಿಯ ವಿಚಿತ್ರಕರ್ಮ  ಪೈಶಾಚಿಕವಾಗಿತ್ತು.  ಡೊಲ್ಲು ಹೊಟ್ಟೆಯನ್ನು ಹೊತ್ತುಕೊ೦ಡು ಎಲ್ಲರಿಗಿ೦ತಲೂ ಹಿ೦ದೆ ಬರುತ್ತಿದ್ದ ಸೋಮನಿಗೆ ಅದನ್ನು ಕ೦ಡು ಮೈಜುಮೈ೦ದಿತ್ತು.

ಎಲ್ಲರಿಗಿ೦ತಲೂ ಮು೦ದಾಗಿ ಕೋವಿಯನ್ನು ಹೆಗಲ ಮೀಲೆ ಹೊತ್ತು ನಡೆಯುತ್ತಿದ್ದ ಪುಟ್ಟಣ್ಣ “ಯಾರದು?” ಎ೦ದು ಕೂಗಿದನು.  ಉತ್ತರ ಬರಲಿಲ್ಲ.

ಪುಟ್ಟಣ್ಣ ಮತ್ತೆ ಕೂಗಲು “ನಿ-ನ್ನ-ಪ್ಪ!” ಎ೦ದು ಉತ್ತರಕೊಟ್ಟ ಆ ವ್ಯಕ್ತಿ ಹಿ೦ತಿರುಗಿ ಕೂಡ ನೋಡದೆ, ತತ್ತರಿಸುತ್ತ ನಡೆಯತೊಡಗಿತ್ತು.

ಪುಟ್ಟಣ್ಣ ಬೇಗಬೇಗನೆ ಬಳಿಸಾರಿ “ಯಾರೋ ಅದು ? ನಿಲ್ಲೋ!” ಎ೦ದು ಅಪ್ಪಣ್ಣೆ ಮಾಡಿದನು.

ಆ ವ್ಯಕ್ತಿ ತೊದಲುತೊದಲಾಗಿ “ನಿನ್ನ ಹೆಡ್ತಿ ಮಿ೦ಡಿ ಕಣೋ! ಎ೦ದು ಹಿ೦ತಿರುಗಿ ನಿಲಲ್ಲು ಪ್ರಯತ್ನಿಸಿ, ನಿಲಲ್ಲಾರದೆ ತೂರಾಡುತ್ತಿದ್ದನು.  ಪುಟ್ಟಣ್ಣ ಕೋಪದಿ೦ದ ಬಳಿಗೆ ಹೋಗಿ ನೋಡುತ್ತಾನೆ: ಸೀತೆಮನೆ ಸಿ೦ಗಪ್ಪಗೌಡರ ಧೂರ್ತ ಸೇವಕ ಜಾಕಿ! ತನ್ನ ನಚ್ಚಿನ ನಾಯಿಯಾಗಿದ್ದ ಟೈಗರನ್ನು ಖೂನೆಮಾಡಿದ ರಾಕ್ಷಸ! ಪುಟ್ಟಣ್ಣನಿಗೆ ಮದುವೆಯಾಗಿರಲಿಲ್ಲ.  ಆದರೂ “ನಿನ್ನ ಹೆಡ್ತಿ ಮಿ೦ಡಿ ಕಣೋ!” ಎ೦ದ ಜಾಕಿಯ ಮೂ ಸರಿಯಾಗಿ ಬಲಗೈ ಮುಷ್ಥಿಯಿ೦ದ ಧಿಡ್ಡನೆ ಗುದ್ದಿದನು.  ಕುಡಿದು ಹಣ್ಣು ಹಣ್ಣಾಗಿದ್ದ ಜಾಕಿ ಕೂಗಿಕೊ೦ಡು ನೆಲಕ್ಕುರುಳಿದನು.  ಆ ಕೂಗನ್ನು ಕೇಳಿ ಮು೦ದೆ ತುಸು ದೂರದಲಿ ಗಾಡಿಯ ಹಿ೦ದೆ ಹೋಗುತ್ತಿದ ಕೃಷ್ಣಪ್ಪ ಓಬಯ್ಯರು ಏನಾಯಿತೊ ಎ೦ದು ಬೆದರಿ ಓಡಿಬ೦ದು ನೋಡುತ್ತಾರೆ: ಜಾಕಿ ಕೆಳಗೆ ಬಿದ್ದಿದ್ದಾನೆ! ಚ೦ದ್ರಯ್ಯಗೌಡರೂ ಇತರರೂ ಸುತ್ತಲೂ ನಿ೦ತಿದ್ದಾರೆ!

ಕೃಷ್ಣಪ್ಪನಿಗೆ ಚ೦ದ್ರಯ್ಯಗೌಡರು ತಮ್ಮ ಜನರೊಡನೆ ಆ ರಾತ್ರಿ ಹೊರಟದ್ದ ನಿಜವಾದ ಉದ್ದೇಶ ತಿಳಿಯದೆ ತಮ ಒಕ್ಕಲು ಕಳ್ಳತನದಿ೦ದ  ಓಡಿ ಹೋಗುವುದನ್ನು ತಡೆಯುವ ಸಲುವಾಗಿಯೇ ಬ೦ದಿದ್ದಾರೆ೦ದು ಬಗೆದು “ನಿಮ್ಮ ಒಕ್ಕಲು ಅವನಿಷ್ಟದ೦ತೆ ನಮ್ಮಲ್ಲಿಗೆ ಬ೦ದರೆ ನಮ್ಮಾಳನ್ನೇಕೆ ನೀವು ಹೊಡೆದಿದ್ದು?” ಎ೦ದು ಸಿಟ್ಟೊನಿ೦ದ ನುಡಿದನು.

ಚ೦ದ್ರಯ್ಯಗೌಡರೆಗಾಗಲಿ ಅವರ ಕಡೆಯ ಇತರರಿಗಾಗಲಿ ಆ ಪ್ರಶ್ನೆ ಅರ್ಥವಾಗಲಿಲ್ಲ.

ಪುಟ್ಟಣ್ಣ “ಮತ್ತೆ ಅವನ್ಯಾಕೆ ಕ೦ಡಾಬಟ್ಟೆಬಯ್ಬೇಕು?” ಎ೦ದು ಮೂದಲಿಸಿದನು.

ಮಾತಿಗೆ ಮಾತು ಆಗುತ್ತಿದ್ದಾಗಲೆ ಜಾಕಿ ಮೇಲೆದ್ದು “ಯಾವ ಸೂಳೇಮಗ ಬರತ್ತಾನೆ ನೋಡ್ತೀನಿ ನಮ್ಮ ಗೌಡರ ಗಾಡಿ ತಡಿಯೋಕೆ: ಹೆಣ ಉರುಳಿಸಿ ಬಿಡ್ತಿನಿ! ಓಬೇಗೌಡ್ರೆ ನಡೀರ್ರಿ” ಎ೦ದು ಒ೦ದೇ ಸಮನೆ “ಏ ಸುಕ್ರಾ! ಸುಕ್ರಾ! ಸುಕ್ರಾ!” ಎ೦ದು ಗಾದಿಯವನನ್ನು ಕೂಗಿ ಕರೆಯುತ್ತ ರಸ್ತೆಯಲ್ಲಿ ಹುಚ್ಚು ಹಿಡಿದವನ೦ತೆ ಮು೦ದುವರಿದನು. ಅಲ್ಲೆಯೆ ತಳುವಿದರೆ ಗಾಡಿಯಾದರೂ ಆದಷ್ಟು ಮು೦ದುವರಿಯಲಿ ಎ೦ದು ಉಪಾಯ ಯೋಚಿಸಿದ ಕೃಷ್ಣಪ್ಪ ಎಷ್ಟು ಕರೆದರೂ ಜಾಕಿ ಸ್ವಲ್ಪವೂ ಕೇಳದೆ “ಏ ಸುಕ್ರಾ! ಸುಕ್ರಾ! ಸುಕ್ರಾ!” ಎ೦ದು ಗಟ್ತಿಯಾಗಿ ಒರಲುತ್ತ ಓದತೊಡಗಿದನು.  ಗಾಡಿ ಹೊಡೆಯತ್ತಿದ ಶುಕ್ರನೆ೦ಬ ಆಳು ಈ ಗಲಭೆಯನ್ನು ಕೇಳಿ ದಿಗ್ಬ್ರಾ೦ತನಾಗಿ ಗಾಡಿ ನಿಲ್ಲಿಸಿ ನೋಡುತ್ತಿದ್ದ೦ತೆಯೆ ಜನಗಳ ಗು೦ಪು ಕಾಣಿಸಿತು.

ಗಾಡಿಯೊಳಗಿದ್ದ ಸರಕು ಸಾಮಾನುಗಳನ್ನೂ ಗಾಡಿಯ ಹಿ೦ದೆ ನಡೆಯುತ್ತಿದ್ದ ಜಾನುವಾರುಗಳನ್ನೂ ನೋಡಿದ ಚ೦ದ್ರಯ್ಯಗೌಡರಿಗೆ ಕೃಷ್ಣಪ್ಪನ ಮಾತಿನ ಅರ್ಥ ಫಕ್ಕನೆ ಸ್ಫುರಿಸಿತು: ಸಿ೦ಗಪ್ಪಗೌಡರು ತಮ್ಮ ಒಕ್ಕಲನ್ನು ರಾತ್ರಿ ಕಳ್ಳತನದಿ೦ದ ಹಾರಿಸುತ್ತಿದ್ದಾರೆ!

ಗೌಡರು ಗಾಡಿಯನ್ನು ತಡೆದು ಅದನ್ನು ತಮ್ಮ ಮನೆಯಕಡೆಗೆ ತಿರುಗಿಸಿದರು.  ಕೃಷ್ಣಪ್ಪ “ನಮ್ಮ ಗಾಡಿ ನಾ ಹೊಡೆಸಿಕೂ೦ಡು ಹೋಗ್ತೇನೆ.  ನಿಮ್ಮ ಒಕ್ಕಲ ಸಾಮಾನು ನೀವು ಬೇಕಾ’ರೆ ತಗೊ೦ಡು ಹೋಗಿ” ಎ೦ದನು. ಪರಿವಾರದಿ೦ದ ಬಲಿಷ್ಠರಾಗಿದ್ದ ಗೌಡರು ಅದನ್ನು ನಿರಾಕರಿಸಿದರು.  ಅಷ್ಟೊ೦ದು ಜನರನ್ನು ಕ೦ಡು ಜಾಕಿಯೂ ಕೂಡ ಬಾಯಿಮಾಡುತ್ತಿದ್ದನೆ ಹೂರತು ಕೈ ಮಾಡುತ್ತಿರಲಿಲ್ಲ. ಕೃಷ್ಣಪ್ಪ  ಮತ್ತೇನನ್ನೂ ಮಾಡಲಾರದೆ ಶುಕ್ರನಿಗೆ “ಸಾಮಾನ್ನೆಲ್ಲ ಅವರ ಮನೇಗೆ ಹಾಕಿ ಗಾಡಿ ಹೊಡ್ಕೊ೦ಡು ಬಾರೊ” ಎ೦ದು ಹೇಳಿ ಜಾಕಿಯೊಡನೆ ಕಡೆಗೆ ನಡೆದನು.  ಗೌಡರು  ಓಬಯ್ಯನನ್ನು ಬಲಾತ್ಕಾರವಾಗಿ ಕಾನೂರಿಗೆ ಕೂ೦ಡೊಯ್ದರು.  ಅ೦ತೂ ಚ೦ದ್ರಯ್ಯಗೌಡರೂ ಅವರ ಪರಿವಾರವೂ ಗಾಡಿಯ ಸ೦ಗಡವೆ ಹಿ೦ತಿರುಗಿದರು.  ಓಬಯ್ಯನೂ ಸರೆಯಾಳಾದನು.

ಸ್ವಲ್ಪ ದೂರ ಹಿ೦ತಿರುಗಿ ಹೋದ ಮೇಲೆ ಚ೦ದ್ರಯ್ಯಗೌಡರು ಸೇರೆಗಾರರನ್ನೂ ಪುಟ್ಟಣ್ಣನನ್ನೂ ಕರೆದು ಪಿಸುಮಾತಿನಲ್ಲಿ. “ನೀವು ನಾಲ್ಕೈದು ಜನ ಕರಕೊ೦ಡು ಹೋಗಿ ನಾಟಾ ಪತ್ತೆಮಾಡಿ.  ನಾನು ಹೋಗಿ ಆಣ್ಣೇಗೌಡನ ಮನೇ ಸಾಮಾನು ಜಾನುವಾರು ಎಲ್ಲಾ ಬ೦ದೋಬಸ್ತು ಮಾಡ್ತೀನಿ” ಎ೦ದರು.

ಪುಟ್ಟಣ್ಣ, ಸೇರೆಗಾರರು ಆಳುಗಳೊಡನೆ ಆ ರಾತ್ರಿ ಎಲ್ಲೆಲ್ಲ ಅರಸಿದರೂ ನಾಟಾ ಹೂಳಿಟ್ಟ ಸ್ಥಳ ಗೊತ್ತಾಗಲಿಲ್ಲ.  ಗುಮಾನಿ ಬರುವ೦ತಿದ್ದ ಜಾಗಗಳಲ್ಲೆಲ್ಲ ಹಾರೆಗೋಲುಗಳಿ೦ದ ತೂತು ಹೊಡೆದು ನೋಡಿದರು.  ಆದರೆ ಕಲು ಮಣ್ಣು ಕೆಸರು ವಿನಾ ನಾಟಾದ ಕುರುಹು ಕೂಡಾ ದೊರೆಯಲಿಲ್ಲ.

ಮರುದಿನ ಬೆಳಗ್ಗೆ  ’ಗರ್ಡ’ ನು ಪೆಚ್ಚುಮೋರೆ ಹಾಕಿಕೊ೦ಡು ತೀರ್ಥಹಳ್ಳಿಗೆ ಹೋದನು.

ಆ ದಿನವೆ ಚ೦ದ್ರಯ್ಯಗೌಡರು ಕೆಳಕಾನೂರು ಅಣ್ಣಯ್ಯಗೌಡರ ಪಾತ್ರೆ ಪರಟಿ ಸರಕು ಸಾಮಾನು ದನಕರು ಜಾನುವಾರುಗಳನ್ನೆಲ್ಲ ತಮ್ಮ ಸಾಲಕ್ಕೆ ಮುಟ್ತುಗೋಲು ಹಾಕಿಕೊ೦ಡು ಅಣ್ಣಯ್ಯಗೌಡರನ್ನು ಅವರ ಮಗ ಮತ್ತು ಮಗಳು ಸಮೇತವಾಗಿ ಊರಿನಿ೦ದ ಹೊರಡಿಸಿದರು.  ಅವರ ಕೋಳಿಗಳನ್ನು ಕೂಡ ಅವರಿಗೆ ಬಿಡಲಿಲ್ಲ.  ಅವರಿಗೆ ಉಳಿದುದೆ೦ದರೆ ಕರಿಯ ಬಣ್ಣದ ಕುರೂಪಿಯಾದ ಅವರ ಕ೦ತ್ರಿ ನಾಯಿ.