ಬಿಸಿಲು ಬಿರುಸಾಗಿತ್ತು.  ಗಾಳಿ ಮೆಲ್ಲಗೆ ಬೀಸುತ್ತಿದ್ದರೂ ಅದರಿಂದ ಬೇಗೆ ಕಡಮೆಯಾಗುತ್ತಿರಲಿಲ್ಲ. ಮರದ ನೆಳಲು ಬುಡದಲ್ಲಿ ಬಳಲಿ ಮಲಗಿ ದಣಿವಾರಿಸಿ ಕೊಳ್ಳುತ್ತಿತ್ತು. ಆಕಾಶದ ನೀಲದಲ್ಲಿ ಮುಗಿಲು ಮುದ್ದೆ ಮುದ್ದೆಯಾಗಿ ತೇಲುತ್ತಿತ್ತು. ಮಲೆಗಾಡುಗಳು ತೆರೆ ತೆರೆಯಾಗಿ ನಿರ್ಲಕ್ಷಧೀರತೆಯಿಂದ ದಿಗಂತ ವಿಶ್ರಾಂತವಾಗಿದ್ದವು. ಕಾನೂರಿನಿಂದ ನಿರ್ವಿಣ್ಯ ಮಾನಸರಾಗಿ ಹೊರಟ ಅಣ್ಣಯ್ಯಗೌಡರ ಮುದಿದೇಹ ಆಯಾಸದಿಂದ ನಡೆಯಲಾರದಾಯಿತು. ಕೂತುಕೊಳ್ಳಬೇಕೆಂಬ ಮನಸ್ಸನ್ನೂ ಎರಡು ಮೂರು ಸಾರು ನಿವಾರಿಸಿ, ದೊಣ್ಣೆಯೂರಿಕೊಂಡು ಬಾಗಿ ಬಾಗಿ ನಡೆದರು. ಒಣಗಿ ಬರುತ್ತಿದ್ದ ಗಂಟಲನ್ನು ಎಂಜಲು ನುಂಗಿ ನುಂಗಿ ತೋಯಿಸಿದರು. ಬಹಳ ದಿನಗಳಿಂದಲೂ ರೋಗಗ್ರಸ್ಥೆಯಾಗಿ ಮಲಗಿದ್ದ ತಮ್ಮ ಹೆಂಡತಿಯ ಬಳಿಗೆ ಬೇಗ ಹೋಗಬೇಕೆಂದು ಅವರ ಮನಸ್ಸು ತುಡಿಯುತ್ತಿತ್ತು. ಅದರಲ್ಲಿಯೂ ದಾರಿಯಲ್ಲಿ ಕಾಗೆ ಕರೆದುದನ್ನು ಕೇಳಿ ಅವರಿಗೆ ಗಾಬರಿಯಾಗಿತ್ತು. ಆದರೆ ಶರೀರದ ಆಯಾಸ ಆತ್ಮದ ಸಾಹಸೇಚ್ಛೇಗಳಿಗಿಂತಲೂ ಪ್ರಬಲವಾದುದರಿಂದ ಒಂದು ಬಸಿರಿ ಮರದ ಬುಡದಲ್ಲಿ ಕುಳಿತರು. ನಿಟ್ಟುಸಿರುಬಿಟ್ಟರು. ತಲೆಯ ಮೇಲಿದ್ದ ಕೆಂಪುವಸ್ತ್ರವನ್ನು ತೆಗೆದು ಬೆವರನ್ನೊರಸಿ ಬೀಸಿಕೊಂಡರು. ಬೀಸುತ್ತಿದ್ದ ಕೆಂಬಟ್ಟೆಯನ್ನು ಕಂಡು ಮರದ ಎಲೆಗಳಲ್ಲಿ ಕುಳಿತಿದ್ದ ಕೆಲವು ಉರುಳಿ ಹಕ್ಕಿಗಳು ಕಿರುದನಿಗೈಯುತ್ತ ಹಾರಿಹೋದುವು.

ಅಣ್ಣಯ್ಯಗೌಡರ ಮನಸ್ಸಿನಲ್ಲಿ ಅಶಾಂತಿಯ ಕ್ರಾಂತಿ ಪ್ರಾರಂಭವಾಗಿತ್ತು. ಅವರ ಸ್ಥಿತಿ ಮರುಭೂಮಿಯಲ್ಲಿ ಕಣ್ಣು ಕಟ್ಟಿ ಬಿಟ್ಟವನಂತೆ ಇತ್ತು. ಚಂದ್ರಯ್ಯಗೌಡರು ಸಾಲ ಕೊಡುವುದಿಲ್ಲ. ಮುಂದೇನು ಗತಿ? ಮಗನೂ ತನ್ನನ್ನು ಬಿಟ್ಟು ಹೋದರೆ ತನಗಾರು ದಿಕ್ಕು? ರೋಗಿಯಾದ ಹೆಂಡತಿಗೂ ವೃದ್ಧನಾದ ತನಗೂ ದುರ್ಬಲೆಯಾದ ಪುಟ್ಟ ಮಗಳೊಬ್ಬಳೆ ಶುಶ್ರೂಷೆ ಮಾಡಬಲ್ಲಳೆ? ಉಳುವವರಾರು? ಬಿತ್ತುವವರಾರು?…. ಅಯ್ಯೋ ದೇವರೇ, ಕಡೆಗಾಲದಲ್ಲಿ ಎಂತಹ ಕಷ್ಟ ಕೊಟ್ಟೆ! …ತನ್ನ ಜೀವನದ ಚಿತ್ರಗಳೆಲ್ಲ ಕಣ್ಣುಮುಂದೆ ಸುಳಿದುವು. ಮುದುಕನ ಹೃದಯ ಶೋಕದಿಂದ ವಿದೀರ್ಣವಾಯಿತು. ಪ್ರಕೃತಿ ಪ್ರಪಂಚವಲ್ಲದೆ ಬೇರೆ ಯಾರೂ ಅಲ್ಲಿರಲಿಲ್ಲ. ಎಳಮಕ್ಕಳಂತೆ ಬಿಕ್ಕಿಬಿಕ್ಕಿ ಅಳತೊಡಗಿದರು…. ನಾರಾಯಣಾ ನಿನಗೂ ಕೇಳಿಸದೇ? ಮುದುಕನು ನಿನಗೆ ಎಷ್ಟು ಸಾರಿ ಮುಡಿಪು ಕಟ್ಟಿದ್ದಾನೆ? ತಿರುಪತಿ ಧರ್ಮಸ್ಥಳಗಳಿಗೆ ಹೇಳಿಕೊಂಡಿದ್ದಾನೆ….. ವೆಂಕಪ್ಪಯ್ಯನವರಿಂದ ಚಂದ್ರಮೌಳೇಶ್ವರನಿಗೆ ಹಣ್ಣು ಕಾಯಿ ಕಾಣಿಕೆಗಳನ್ನು ಅರ್ಪಿಸಿದ್ದಾನೆ!… ಅವರಿಂದಲೇ ನಿಮಿತ್ತ ಕೇಳಿಸಿ ಚೀಟಿ ವಿಭೂತಿ ತಂದಿದ್ದಾನೆ!….. ದೆವ್ವ, ಭೂತ, ಜಕ್ಕಣಿ, ಪಂಜ್ರೋಳ್ಳಿ ಮೊದಲಾದ ಅಂತರಬೆಂತರಗಳಿಗೆಲ್ಲ ಕೋಳಿಗಳನ್ನು ಬಲಿ ಕೊಟ್ಟಿದ್ದಾನೆ….. ತನಗೆ ತಿಳಿದಿದ್ದ ಗಿಡಮೂಲಿಕೆ ಕಷಾಯಗಳನ್ನೂ ಮಾಡಿದ್ದಾನೆ…. ಕೆಲವರೇನೋ ಹೇಳಿದರು; ಆಸ್ಪತ್ರೆಗೆ ಹೋಗಿ ಡಾಕ್ಟರಿಂದ ಔಷಧಿ ತೆಗೆದುಕೊಂಡು ಬಾ ಎಂದು ; ಕರೆದುಕೊಂಡು ಹೋಗಿ ಡಾಕ್ಟರಿಗೆ ತೋರಿಸು ಎಂದು….. ಮುದುಕನು ಯೋಚಿಸಿದನು. ಆಸ್ಪತ್ರೆ ಡಾಕ್ಟರುಗಳಿಂದೇನಾಗುತ್ತದೆ? ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರ ಮಂತ್ರತಂತ್ರಗಳಿಂದಲೂ ತಿರುಪತಿ ಧರ್ಮಸ್ಥಳಗಳ ದೇವರುಗಳಿಂದಲೂ ತನ್ನ ಹಳ್ಳಿಯ ವೈದ್ಯದಿಂದಲೂ( ತಾನು ಎಷ್ಟು ಜನರಿಗೆ ಮದ್ದು ಕೊಟ್ಟಿಲ್ಲ! ಎಷ್ಟು ಜನರು ಬದುಕಿಕೊಂಡಿಲ್ಲ!) ಭೂತ ಜಕ್ಕಣಿಗಳಿಂದಲೂ ಆಗದ ಕಾರ್ಯ ಆಸ್ಪತ್ರೆ ಡಾಕ್ಟರುಗಳಿಂದೇನಾಗುತ್ತದೆ? ಎಷ್ಟೋ ಜನರಿಗೆ ತಾನೇ ಉಪದೇಶ ಮಾಡಿಲ್ಲವೇ ಆಸ್ಪತ್ರೆಗೆ ಹೋಗಬೇಡಿ ಎಂದು? ” ಅಪ್ಪ ಅವ್ವ ಸತ್ರೆ ಆಸ್ಪತ್ರೆ!” ಎಂಬ ಗಾದೆಯಿಲ್ಲವೇ? ವೇದ ಸುಳ್ಳಾದರೂ ಗಾದೆ ಸುಳ್ಳಾಗದು!…. ಎಲ್ಲಾ ಕರ್ಮದ ಫಲ. ಹಿಂದಿನ ಜನ್ಮದಲ್ಲಿ ಬೆನ್ನಿಗೆ ಹತ್ತಿದುದು ಸುಮ್ಮನೆ ಹೋಗುತ್ತದೆಯೆ?…. ಮತ್ತೆ ಮುದುಕನಿಗೆ ತನ್ನ ನಾಲ್ಕು ಮದುವೆಗಳ ನೆನಪಾಯಿತು. ಒಂದು ಸಾರಿ ತಾನು ಮಾಡಿದ್ದು ತಪ್ಪು ಎನ್ನಿಸಿತು…. ಆದರೆ ಮತ್ತೆ ಮದುವೆ ಮಾಡಿಕೊಳ್ಳುವುದರಲ್ಲಿ ತಪ್ಪೇನು! ಸಂಸಾರ ಸಾಗುವುದು ಹೇಗೆ? ಎಂದು ತನ್ನನ್ನು ತಾನೇ ಸಮರ್ಥಿಸಿಕೊಂಡನು….. ಯೋಚಿಸುತ್ತಿದ್ದ ಹಾಗೆಯೆ ಸಮೀಪದ ಒಂದು ಮರದಲ್ಲಿ ಕಾಗೆ ಮತ್ತೆ “ಕಾ ಕಾ ಕಾ” ಎಂದು ಕರೆಯತೊಡಗಿತು. ಮುದುಕನು ಬೆಚ್ಚಿ ಬಿದ್ದು ನೋಡಿದನು. ಹಸುರೆಲೆಗಳ ನಡುವೆ ಒಂದು ಕಂದುಬಣ್ಣದ ದಪ್ಪ ಕೊಂಬೆಯ ಮೇಲೆ ಕಾಗೆ ಕರ್ರಗೆ ಕುಳಿತು ಕೂಗುತ್ತಿತ್ತು. ನೋಡುತ್ತಾನೆ; ಸುಡುಗಾಡಿನ ಕಡೆಗೇ ಮುಖ ಹಾಕಿಕೊಂಡಿದೆ! “ನಿನ್ನ ಗಂಟಲು ಕಟ್ಟೇಹೋಗ” ಎಂದು ಮುದುಕನು ಶಪಿಸುತ್ತ ಮೇಲೆದ್ದು, ತಲೆಗೆ ಕೆಂಪು ವಸ್ತ್ರವನ್ನು ಸುತ್ತಿಕೊಂಡು, ದೊಣ್ಣೆಯೂರಿ ಬಾಗಿ ಮುಂದುವರಿದನು. ಬಿಸಿಲು ಮತ್ತಷ್ಟು ಪ್ರಖರವಾಗಿದ್ದಂತೆ ತೋರಿತು. ಆ ಮಟಮಟ ಮಧ್ಯಾಹ್ನದ ಜಗತ್ತಿನಲ್ಲಿ ನಿರ್ಜನತೆಯ ಭೀಷಣ ಮೌನ “ನೀನು ನಿರ್ಗರಿಕ ” ಎಂದು ಬೆರಳು ತೋರಿ ಹಾಸ್ಯಮಾಡುವಂತಿತ್ತು.

ಗದ್ದೆ ಕಾಡುಗಳ ಮಧ್ಯೆ ತಮ್ಮ ಕಿರಿದಾದ ಹುಲ್ಲುಮನೆ ಕಂಡುಬರಲು ಅಣ್ಣಯ್ಯಗೌಡರು ಆದಷ್ಟು ಪ್ರಯತ್ನದಿಂದ ಬೇಗಬೇಗನೆ ಕಾಲುಹಾಕಿದರು. ಅರಣ್ಯದಲ್ಲಿ ಬಿದ್ದಿರುವ ಅನಾಥ ಶವದಂತೆ ಆ ಹುಲ್ಲುಮನೆ ನಿಶ್ಚಲ ನೀರವವಾಗಿತ್ತು. ಮನುಷ್ಯಜೀವ ಸಂಚಾರದ ಗುರುತು ಕೂಡ ಕಾಣುತ್ತಿರಲಿಲ್ಲ. ತನ್ನ ಗೋರಿಯನ್ನು ಸೇರಿಕೊಳ್ಳಲು ಹೋಗುವ ಹಗಲು ಪಿಶಾಚಿಯಂತೆ ಅಣ್ಣಯ್ಯಗೌಡರು ನಡೆಯುತ್ತಿರಲು ಮನೆಯಿಂದ ರೋದನ ಧ್ವನಿ ಕೇಳಿಸಿತು! ಅವರ ಜಂಘಾಬಲ ಉಡುಗಿದಂತಾಯಿತು. ಮತ್ತೆ ಸ್ವಲ್ಪ ನಡೆದರು. ಗೋಳು ತಮ್ಮ ಮಗಳದೆಂದು ಗೊತ್ತಾಯಿತು. ನೀಳವಾಗಿ ನಿಡುಸುಯ್ದು” ನಾರಾಯಣಾ!” ಎಂದರು. ದೇವರ ನಾಮ ತಮ್ಮ ಕಿವಿಗೂ ಕೇಳಿಸಲಿಲ್ಲ. ಕಣ್ಣೀರು ಬೆವರಿನೊಂದಿಗೆ ಸೇರಿ ಹರಿಯುತ್ತಿತ್ತು. ತಿಪ್ಪೆಯ ರಾಶಿಯಲ್ಲಿ ಕೆದರುತ್ತಿದ್ದ ಕೋಳಿಗಳನ್ನೂ ಹೊರಗೆ  ಆ ಮನೆಯ ಸ್ಥಿತಿಸೂಚಕವಾಗಿ ಮೂರ್ಛೆಹೋದಂತೆ ನಿದ್ದೆಮಾಡುತ್ತ ಬಿದ್ದಿದ್ದ ಕರಿಯ ನಾಯಿಯನ್ನೂ ಗಣನೆಗೆ ತಾರದೆ ದಾಟಿ ಒಳಗೆ ನುಗ್ಗಿದರು. ಹೊಸ್ತಿಲು ದಾಟುವಾಗ ಬಹಳ ತಗ್ಗಾಗಿದ್ದ ಬಾಗಿಲಿನ ಮೇಲುಕಟ್ಟು ತಲೆಗೆ ತಾಗಿತು.

ಆವೋತ್ತು ಬೆಳಿಗ್ಗೆ ಅಣ್ಣಯ್ಯಗೌಡರು ಕಾನೂರಿಗೆ ಹೊರಟಾಗ ಮನೆಯಲ್ಲಿ ಅವರ ಮಗ ಓಬಯ್ಯನಿದ್ದನು. ತಂದೆಮಕ್ಕಳಿಗೆ ಈಚೀಚೆಗೆ ಸರಿಯಾದ ಮಾತು ಕತೆ ಇರಲಿಲ್ಲವಾದ್ದರಿಂದ ಅಣ್ಣಯ್ಯಗೌಡರು ತಮ್ಮ ಮಗಳನ್ನು ಸಂಬೋಧೀಸುವ ನೆವದಿಂದ ತಾನು ಕಾನೂರಿಗೆ ಹೋಗಿ ಬರುತ್ತೇನೆಂದೂ ಮನೆಗೆಲಸವನ್ನೂ ರೋಗಿಯನ್ನೂ ನೋಡಿಕೊಳ್ಳಬೇಕೆಂದೂ ಮಗನಿಗೆ ಕೇಳಿಸುವಂತೆ ಗಟ್ಟಿಯಾಗಿ ಹೇಳಿ ಹೊರಟುಹೋದರು. ಅವರ ಮಗಳು, ಅರಿಯದ ಹುಡುಗಿ, ತನ್ನ ತಾಯಿಯ ಬಳಿ ಕೂತಿದ್ದಳು. ತಾಯಿ  ವಾಂತಿ ವಾಕರಿಕೆ ತಲೆನೋವು ಜ್ವರಗಳಿಂದ ನರಳುತ್ತಿದ್ದಳು. ಆ ಹುಡುಗಿಯೂ ಕೂಡ ಆರೋಗ್ಯವಾಗಿರಲಿಲ್ಲ. ಪದೇ ಪದೇ ಚಳಿಜ್ವರ ಬರುತ್ತಿದ್ದು, ಜ್ವರದ ಗಡ್ಡೆ ಬೆಳೆದು, ಸರಿಯಾದ ಆಹಾರವಾಗಲಿ ಗಾಳಿಯಾಗಲಿ ಶುಶ್ರೂಷೆ ಸುಖಗಳಾಗಲಿ ಇಲ್ಲದೆ ಕಲ್ಲಿನ ತಳದಲ್ಲಿ ಬಳೆಯುವ ಹುಲ್ಲಿನ ಕಣದಂತೆ ಇದ್ದಳು. ಬಾಲ್ಯ ಸಹಜವಾದ ಆಟ ಕುಣಿತ ಮೆರೆತಗಳನ್ನು ಅವಳು ಹುಟ್ಟಿದಂದಿನಿಂದಲೂ ಕಂಡಿರಲಿಲ್ಲ. ಸಮೀಪದಲ್ಲಿ ಯಾವ ನೆರೆಮನೆಯೂ ಇರದಿದ್ದುದರಿಂದ ಅವಳ ಭಾಗಕ್ಕೆ ಮಕ್ಕಳ ಕೂಟವೂ ಕಥಾವಾರ್ತೆಯಾಗಿತ್ತು. ಹೀಗಾಗಿ ಅವಳ ದೇಹದ ಬೆಳವಣಿಗೆಯಂತೆ ಆತ್ಮದ ಬೆಳವಣಿಗೆಯೂ ಸ್ವಾಭಾವಿಕವಾದ ಸನ್ನಿವೇಶದ ಅಭಾವದಿಂದ ಕುಬ್ಜವಾಗಿತ್ತು. ಅವಳ ತಂದೆ ಬಹಳ ಮುದುಕನಾಗಿದ್ದುದರಿಂದಲೂ ನೂರಾರು ಚಿಂತೆ ತಾಪತ್ರಯಗಳಿಂದ ನೋಯುತ್ತಿದ್ದುದರಿಂದಲೂ ಮಗಳನ್ನಾಡಿಸುವ ಅಥವಾ ಒಡಗೂಡಿ ಆಡುವ ಗೋಜಿಗೆ ಹೋಗಿರಲಿಲ್ಲ. ಕೆಲಸ ಕೈತುಂಬ ಇರುತ್ತಿದ್ದ ಆಕೆಯ ತಾಯಿ ಮೊಲೆಯನ್ನು ಕೂಡ ಅವಸರ ಅವಸರವಾಗಿ ಊಡಿದ್ದಳು. ತಾಯಿಗಾದರೂ ತಾಯಿಯ ಸುಖ ಲಭಿಸಿರಲಿಲ್ಲ. ಮಗಳಿಗೆ ಮಗುವಿನ ನಲ್ಮೆಯೂ ಲಭಿಸಿರಲಿಲ್ಲ. ಅಣ್ಣನಾದ ಓಬಯ್ಯ ತಂದೆ ಮಲತಾಯಿಯರನ್ನು ಕಾಣುತ್ತಿದ್ದಂತೆಯೆ ಮಲತಂಗಿಯನ್ನೂ ಕಾಣುತ್ತಿದ್ದನು. ಹೀಗಾಗಿ ಆ ಬಾಲೆ ತಂದೆತಾಯಿಗಳೊಡನೆ ಒಂದು ರೀತಿಯಲ್ಲಿ “ಅನಾಥೆ”ಯಾಗಿ ಬೆಳೆಯುತ್ತಿದ್ದಳು.

ತಂದೆ ಹೋದ ಸ್ವಲ್ಪ ಹೊತ್ತಿನಲ್ಲಿ ಓಬಯ್ಯ ತನ್ನ ಮಲತಂಗಿಯನ್ನು ಅಡುಗೆ ಮನೆಗೆ ಕರೆದು ಒಲೆ ಹೊತ್ತಿಸುವಂತೆ ಅಪ್ಪಣೆ ಮಾಡಿದನು. ಆ ಹುಡುಗಿಗೆ ಅಣ್ಣನೆಂದರೆ ಹುಲಿಯನ್ನು ಕಂಡಷ್ಟು ಭಯ. ಎಷ್ಟೋ ಸಾರಿ ಮುಖ ಮೋರ ನೋಡದೆ ಹೊಡೆಯುತ್ತಿದ್ದುದರಿಂದ ಅಣ್ಣನ ಮಾತಿಗೆ ಬದಲು ಮಾತಾಡದೆ ಕೆಲಸ ಮಾಡುತ್ತಿದ್ದಳು.

“ನಾನು ಹಟ್ಟಿಗೆ ಹೋಗಿ ದನ ಬಿಟ್ಟು ಬರ್ತೇನೆ. ಗಂಜಿ ಮಾಡಿಡು” ಎಂದು ಕಣ್ಣು ದೊಡ್ಡಗೆ ಮಾಡಿ ಹೇಳಿ, ಓಬಯ್ಯ ಹೊರಟುಹೋದನು.

ಹುಡುಗಿ ಒಲೆ ಹೊತ್ತಿಸುವ ಸಾಹಸಕ್ಕೆ ಕೈ ಹಾಕಿದಳು.  ಆದರೆ ಕಟ್ಟಿಗೆ ಇರಲಿಲ್ಲ. ಹೊರಗೆ ಹೋಗಿ ” ಜಿಗ್ಗು” ಕಡ್ಡಿಗಳನ್ನು ಆಯತೊಡಗಿದಳು. ಆಯುತ್ತಿದ್ದಾಗ ತಾಯಿ ವಾಂತಿ ಮಾಡಿಕೊಂಡ ಸದ್ದು ಗಟ್ಟಿಯಾಗಿ ಕೇಳಿಸಿತು. ಓಡಿಹೋಗಿ ನೋಡುತ್ತಾಳೆ;  ತಾಯಿ ಹಾಸಿಗೆಯ ಮೇಲೆ ಕೂತಿದ್ದಾಳೆ. ಬಟ್ಟೆಯಲ್ಲ ವಾಂತಿಮಯವಾಗಿದೆ. ದುರ್ಗಂಧ ಆ ಮನೆಯ ಒಳಗಿದ್ದ ಕತ್ತಲೆಯನ್ನೂ ಹೊರಗಟ್ಟುವಂತಿದೆ! ಮಗಳಿಗೆ ಅಸಹ್ಯವಾಗಲಿ ಜುಗುಪ್ಸೆಯಾಗಲಿ ಉಂಟಾಲಿಲ್ಲ. ಅಭ್ಯಾಸದಿಂದ ಅವಳಿಗೆ ಎಲ್ಲದರಲ್ಲಿಯೂ ಸಹಿಷ್ಣುತೆಯುಂಟಾಗಿತ್ತು. ತಾಯಿಯ ಕೆದರಿದ ತಲೆ, ಬತ್ತಿದ ಕೆನ್ನೆ, ನಿಸ್ತೇಜವಾಗಿದ್ದ ಕಣ್ಣುಗಳು, ಜೀರ್ಣಶೀರ್ಣವಾಗಿದ್ದ ದೇಹ, ಇವುಗಳನ್ನು ನೋಡಿ ಅವಳಿಗೆ ಕನಿಕರ ಹೆದರಿಕೆ ಒಂದೇ ತಡವೆ ಉಂಟಾದುವು. ತುಟಿ ಕಂಪಿಸಿದುವು. ಕಂಬನಿ ಸುರಿದುವು. ತಾಯಿಗೆ ಮಾತಾಡುವ ಬಲವೂ ಇರಲಿಲ್ಲ. ಕರುಣಾಪೂರ್ಣ ದೃಷ್ಟಿಯಿಂದ ಮಗಳ ಮುಖವನ್ನೇ ದುರುದುರು ನೋಡಿದಳು. ಆಕೆಯ ದೃಷ್ಟಿ ಅಲೌಕಿಕವಾಗಿತ್ತು. ಬಿಸಿಯಾದ ಕಂಬನಿ ಬಳಬಳನೆ ಹರಿದು ಜ್ವರತಪ್ತ ಕಪೋಲಗಳನ್ನು ತೋಯಿಸಿದುವು. ಏನಾದರೂ ಕುಡಿಯುವುದಕ್ಕೆ ಬೇಕೆಂದು ಕೈಸನ್ನೆಯಿಂದ ಸೂಚಿಸಿದಳು. ಹುಡುಗಿ ಓಡಿಹೋಗಿ ಒಂದು ಸಣ್ಣ ಮಡಕೆಯಲ್ಲಿ ನೀರು ತಂದಳು. ಬಲ್ಲವರಾಗಿದ್ದರೆ ಅಂತಹ ರೋಗದ ವಿಷಮಾವಸ್ಥೆಯಲ್ಲಿ ತಣ್ಣೀರನ್ನು ಎಂದಿಗೂ ಕುಡಿಯಲು ಕೊಡುತ್ತಿರಲಿಲ್ಲ. ನೀರು ಕೂಡ ನಿರ್ಮಲವಾದುದಾಗಿರಲಿಲ್ಲ. ಅವರು ಬಾವಿಯಾಗಿ ಉಪಯೋಗಿಸುತ್ತಿದ್ದ ಗದ್ದೆಯ ಹೊಂಡದ್ದು. ಆ ಹೊಂಡದಲ್ಲಿ ಬಟ್ಟೆ ಒಗೆಯುವುದರಿಂದ ಮೊದಲುಗೊಂಡು ಎಲ್ಲ ಶೌಚರ್ಯಗಳೂ ನಡೆಯುತ್ತಿದ್ದುದರಿಂದ ಹಾವಸೆ ಹಬ್ಬಿ ನೀರು ಹಸುರುಗಟ್ಟಿತ್ತು. ಒಮ್ಮೊಮ್ಮೆ ಹಗಲು ಬಿಸಿಲಿನಲ್ಲಿ ಎಮ್ಮೆಗಳೂ ಅದರಲ್ಲಿ ಬಿದ್ದು ಹೊರಳಾಡುತ್ತಿದ್ದುದರಿಂದ ಅದರಲ್ಲಿ ಸೆಗಣಿ ವಾಸನೆಯೂ ತುಂಬಿದ್ದಿತು.

ಅರಿಯದ ಮಗಳು ಕೊಟ್ಟಳು; ಜ್ವರಪೀಡಿತಳಾಗಿ ಅರಿವುಗೆಟ್ಟ ತಾಯಿ ಕುಡಿದಳು. ಕುಡಿದವಳು ಹಾಗೆಯೇ ವಾಂತಿಮಯವಾಗಿದ್ದ ಹಾಸಿಗೆಯ ಮೇಲೆ ಮಲಗಿದಳು. ಹುಡುಗಿ ಕೈಲಾದಮಟ್ಟಿಗೆ ವಾಂತಿಯನ್ನೆಲ್ಲಾ ಬಳಿದು. “ಅವ್ವಾ! ಅವ್ವಾ!” ಎಂದು ಕರೆದಳು. ತಾಯಿ ಅಳುಮೊಗವಾಗಿ ಕಣ್ಣೀರುಗರೆಯುತ್ತ ಮಾತಾಡಲು ಪ್ರಯತ್ನಿಸಿದಳು. ಮಗಳು ಅವಳ ಮೊಗದೆಡೆಗೆ ಕಿವಿಯೊಡ್ಡಿದಳು. ತಾಯಿ ಮಗಳನ್ನು ಶೀರ್ಣವಾದ ತನ್ನ ಕೈಗಳಿಂದ ತಬ್ಬಿ ಬಿಕ್ಕಿಬಿಕ್ಕಿ ಅತ್ತಳು. ಆ ನಿರ್ಜನ ನೀರವದಲ್ಲಿ ಹುಡುಗಿಗೆ ಹೆದರಿಕೆಯಾಗಿ “ಅಣ್ಣಯ್ಯಾ “ಅಣ್ಣಯ್ಯ” ಎಂದು ಕೂಗಿಕೊಂಡಳು. ಓಬಯ್ಯ ಹೊರಗಿನಿಂದ ಓಡಿಬಂದು ನೋಡಿದಾಗ ಮಲತಾಯಿ ಎಂದಿನಂತೆಯೆ ಪವಡಿಸಿದ್ದಳು. ಸುಮ್ಮನೆ ಗಲಭೆ ಮಾಡಿದುದಕ್ಕಾಗಿ ತಂಗಿಯನ್ನು ಗದರಿಸಿ, ಚಂದ್ರಮೌಳೇಶ್ವರನಿಗೆ ಮುಡಿಪು ಕಟ್ಟಲೆಂದು ಅವಳ ಕೈಯಲ್ಲಿದ್ದ ಒಂದು ಬೆಳ್ಳಿಯ ಕಡಗವನ್ನು ಕೇಳಿದನು. ಹುಡುಗಿ ಕೊಟ್ಟಳು. ಅದನ್ನು ಒಂದು ಸಾರಿ ರೋಗಿಗೆ ಪ್ರದಕ್ಷಿಣೆ ಬರಿಸಿ, ಅಗ್ರಹಾರಕ್ಕೆ ಹೋಗಿ ವೆಂಕಪ್ಪಯ್ಯನವರಿಂದ ಪೂಜೆ ಮಾಡಿಸುತ್ತೇನೆಂದು ಹೇಳಿ. ಜೇಬಿಗೆ ಹಾಕಿಕೊಂಡನು.

ಓಬಯ್ಯ ತಂಗಿಯ ಕೈಲಿ ಬೆಂಕಿ ಹೊತ್ತಿಸುವಂತೆ ಹೇಳಿ ತಾನು ಗಂಜಿಮಾಡಲು ಸನ್ನಾಹಮಾಡುತ್ತಿದ್ದನು. ಹುಡುಗಿ ಒಲೆಯನ್ನು ಊದಿ ಊದಿ ಸೋತು ಹೋದಳು. ಹೊಗೆಯದ್ದು ಕಣ್ಣು ಮೂಗನ್ನೆಲ್ಲ ತುಂಬಿತು. ಕಣ್ಣು ಕೆಂಪಾಗಿ ನೀರು ಧಾರಾಕಾರವಾಗಿ ಸುರಿಯತೊಡಗಿತು. ಮೂಗಿನಿಂದ ಸಿಂಬಳದ ನೀರು ಹರಿಯತೊಡಗಿತು. ಹುಡುಗಿ ಸಿಂಬಳ ಸುರಿಯುತ್ತ, ನೆಲಕ್ಕೂ ಒಲೆತೋಳಿಗೂ ತನ್ನ ಕೊಳಕು ಚಿಂದಿ ಸೀರೆಗೂ ಒರೆಸಿಕೊಳ್ಳುತ್ತ ಮತ್ತೆಮತ್ತೆ ಊದಿದಳು. ಆದರೆ ಅಗ್ನಿ ದೇವನಿಗೆ ಬದಲಾಗಿ ಧೂಮಷಿಶಾಚಿಯ ಆವಿರ್ಭವಿಸುತ್ತಿತ್ತು.! ಹುಡುಗಿ ಒಂದು ಸಾರಿ ಸಿಟ್ಟಿನಿಂದ ಒಲೆಗೆ ಉಗುಳಿದಳು. ಕಡೆಗೆ ಮೆಲ್ಲಗೆ ಅಳತೊಡಗಿದಳು. ಓಬಯ್ಯ ಅವಳಿಗೆ, ಹೊಗೆ  ಹಾಕಿದ್ದಕ್ಕಾಗಿ, ಧಕ್ಕನೆ ಒಂದು ಗುದ್ದು ಗುದ್ದಿ, ದೂರ ತಳ್ಳಿ, ತಾನೆ ಬೆಂಕಿಮಾಡಿ ಗಂಜಿಗೆ ಎಸರು ಇಟ್ಟನು, ಹುಡುಗಿ ಮೂಲೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

ಓಬಯ್ಯ ತಾನೇ ಬಡಿಸಿಕೊಂಡು ಗಂಜಿಯುಂಡಮೇಲೆ ತಂಗಿಗೆ ” ನಿನ್ನವ್ವಗಷ್ಟು ಹಾಕು! ನೀನುಂಡು, ಅಪ್ಪಯ್ಯಗಷ್ಟಿಡು” ಎಂದು ಹೇಳಿ ಮನೆಯಿಂದ ಹೊಟು ಹೋದನು.

ಹುಡುಗಿ ತಾಯಿಯ ಬಳಿ ಸ್ವಲ್ಪ ಗಂಜಿಯನ್ನು ತೆಗೆದುಕೊಂಡು ಹೋದಳು ತಾಯಿ ಕಣ್ಣು ಮುಚ್ಚಿ ನಿದ್ರೆ ಮಾಡುತ್ತಿದ್ದಳು. ಹುಡುಗಿಗೆ ಭಯವಾಗಿ ಹಿಂದಕ್ಕೆ ಬಂದು, ಒಂದು ಎಲೆಗೆ ಗಂಜಿ ಸುರಿದು ಉಣತೊಡಗಿದಳು. ಕರಿಯ ನಾಯಿಯೂ ಬಂದು ಎಲೆಯಮುಂದೆ ಜೊಲ್ಲು ಸುರಿಸುತ್ತ ಕೂತುಕೊಂಡಿತು, ಹುಡುಗಿ ಅದಕ್ಕೂ ನೆಲದ ಮೇಲೆ ಸ್ವಲ್ಪ ಗಂಜಿ ಹಾಕಿದಳು. ಪ್ರಾಣಿ ನಾಲಗೆ ನೀಡಿ ನೀಡಿ ಲೊಚಗುಡುತ್ತ ಗಂಜಿಯನ್ನೆಲ್ಲ ನೆಕ್ಕಿತು. ಹುಡುಗಿಗೆ ನಾಯಿಗಿಂತ ಹೆಚ್ಚಿನ ಸಂಗಾತಿ ಇರಲಿಲ್ಲ. ಓಬಯ್ಯನ ಸಂಗಕ್ಕಿಂತಲೂ ನಾಯಿಯ ಸಂಗವೆ ಎಷ್ಟೋ ಸುಖಕರವೂ ಧೈರ್ಯಕರವೂ ಆಗಿತ್ತು.

ಹುಡುಗಿ ಹೊರ ಅಂಗಳಕ್ಕೆ ಬಂದು ಎಲೆಯನ್ನು ಬಿಸಾಡಿದಳು, ಕೆಲವು ಕೋಳಿಗಳು ಅಲ್ಲಿಗೆ ನುಗ್ಗಿ ಅನ್ನದ ಅಗುಳುಗಳನ್ನು ಕುಕ್ಕಿ ಕುಕ್ಕಿ ತಿನ್ನತೊಡಗಿದುವು. ಗದ್ದೆಯಲ್ಲಿ ಕುಳಿತಿದ್ದ ಕೆಲವು ಹೊರಸಲು ಹಕ್ಕಿಗಳು ಹಾರಿದುವು. ಅಲ್ಲಲ್ಲಿ ಕೆಲವು ಕಾಲ್ನಡೆಗಳು ಮೇಯುತ್ತಿದ್ದವು. ಆಕಾಶ, ಅರಣ್ಯ,ಪರ್ವತ, ಗದ್ದೆ, ಬಯಲು, ಸಮಸ್ತ ಜಗತ್ತೂ ನಿಶ್ಚಿಂತೋದಾಸವಾಗಿತ್ತು. ಹುಡುಗಿ ಬಹಳ ಹೊತ್ತು ನಿಂತು ನೋಡಿದಳು. ಗಾಳಿ ಬೆಳಕು ಜೀವಗಳಿಂದ ಹೊರಗಡೆ ಜಗತ್ತು ಮನೋಹರವಾಗಿತ್ತು. ಮತ್ತೂ ನಿಂತು ನೋಡಿದಳು; ತಂದೆಯ ಆಗಮನದ ಸುಳಿವು ಎಲ್ಲಿಯೂ ಗೋಚರಿಸಲಿಲ್ಲ. ಕಡೆಗೆ ಗದ್ದೆಯಲ್ಲಿದ್ದ ಹೊಂಡದ ಬಾವಿಗೆ ಹೋಗಿ ಕೈ ಬಾಯಿ ತೊಳೆದುಕೊಂಡು ಹಿಂತಿರುಗಿ ಬಂದು ತಾಯಿಯನ್ನು ಮುಟ್ಟಿ ಅಲ್ಲಾಡಿಸಿ” ಅವ್ವಾ! ಅವ್ವಾ!” ಎಂದು ಕರೆದಳು. ಹಿಂದೆ ಯಾವ ಮಾತೆಯ ಸ್ಪರ್ಶವು ಪರಮ ಹರ್ಷಕರವಾಗಿತ್ತೋ ಅದು ಇಂದು ಮಗಳಿಗೆ ಭಯಾನಕವಾಗಿತ್ತು. ತಾಯಿ ಮೆಲ್ಲನೆ ಎವೆದೆರೆದಳು. ಆ ಕಣ್ಣುಗಳ ಬಿಳುಪನ್ನು ಕಂಡು ಹುಡುಗಿ ಹೆದರಿ ಚೀರಿದಳು. ಅವಳಿಗೆ ಜೀವ ಸೂಚನೆಯೂ ಮೃತ್ಯುವಿನಂತೆಯೇ ಭೀಕರವಾಗಿತ್ತು. ತಾಯಿ ಮತ್ತೆ ಕಣ್ಣು ಮುಚ್ಚಿದಳು. ಹುಡುಗಿ ಶೋಕಕ್ಕಿಂತಲೂ ಅತಿಶಯವಾಗಿ ಭಯದಿಂದ ರೋದಿಸತೊಡಗಿದಳು. ಸ್ವಲ್ಪಕಾಲ ಅತ್ತು. ಮತ್ತೆ ಸುಮ್ಮನಾದಳು. ಒಂದೆರಡು ಸಾರಿ ಬಾಗಿಲಿಗೆ ಬಂದು ಹೊರಗೆ ನೋಡಿದಳು. ತಂದೆಯ ಸುಳಿವು ಎಲ್ಲಿಯೂ ಕಾಣಿಸಲಿಲ್ಲ. ಮತ್ತೆ ಒಳಗೆ ಹೋಗಿ ತನ್ನ ಸಾಮರ್ಥ್ಯವನ್ನೆಲ್ಲ ವೆಚ್ಚಮಾಡಿ ಕ್ರಂದಿಸಲಾರಂಭಿಸಿದಳು. ರೋದನ ಧ್ವನಿ ಮೌನಕ್ಕಿಂತಲೂ ಹಿತಕರವಾಗಿತ್ತು. ಹೆಚ್ಚು ಧೈರ್ಯಕೊಡುವಂತಿತ್ತು.

ಅಣ್ಣಯ್ಯಗೌಡರು ಪ್ರವೇಶಿಸಲು ಹುಡುಗಿ ಜೋರಾಗಿ ಅಳತೊಡಗಿದಳು. ಮುದುಕನಿಗೆ ಎದೆಹಾರಿ ರೋಗಿಯ ಬಳಿಗೆ ಹೋದನು. ಅಣ್ಣಯ್ಯಗೌಡರು ಹಳ್ಳಿಯ ವೈದ್ಯರಾಗಿದ್ದು, ಅನೇಕ ಸಾರಿ ರೋಗಿಗಳ ಮರಣ ಶಯ್ಯೆಯ ಬಳಿ ನಿಂತಿದ್ದರು. ಅಂತಹ ಸಮಯಗಳಲ್ಲಿ ಇತರರಿಗೆ ಧೈರ್ಯ ಹೇಳುತ್ತಿದ್ದರು. ಆದರೆ ಇಂದು ಹಾಗಿರಲಿಲ್ಲ. ಮುದುಕನ ಹೃದಯವು ಸಂಸಾರದ ಅಸಂಖ್ಯ ನಿಷ್ಕರಣ ಆಘಾತ ಘರ್ಷಣೆಗಳಿಂದ ತರಗಲೆಯಂತೆ ಝರ್ಝರಿತವಾಗಿತ್ತು. ಜಳ್ಳಾಗಿತ್ತು. ಮುದುಕನೂ ಅಳತೊಡಗಿದನು. ರೋಗಿ ಮೆಲ್ಲನೆ ಕಣ್ದೆರೆದು ನೋಡಿದಳು. ಜೀವವಿದೆಯೆಂದು ತಿಳಿದಕೂಡಲೆ ಅಣ್ಣಯ್ಯಗೌಡರು ಅಳುವುದನ್ನುಳಿದು ಕಾರ್ಯಸಾಧನೆಗೆ ಕೈಹಾಕಿದರು. ತಣ್ಣಗಾಗುತ್ತಿದ್ದ ಕೈಕಾಲುಗಳಿಗೆ ಬಿಸಿಬೂದಿಯುಜ್ಜಿದರು. ರೋಗಿಯ ಬಾಯ್ದೆರೆದು ಮದ್ದು ಹಿಂಡಿದರು. ಮಗಳಿಗೆ ಹಾಲು ತರಲು ಹೇಳಿದರು. ಆದರೆ ಆ ದಿನ ಅವರಿಗಿದ್ದ ಒಂದೇ ಹಸುವಿನ ಹಾಲನ್ನೂ ಕರೆದಿರಲಿಲ್ಲ. ಓಬಯ್ಯನು ದನಗಳನ್ನೆಲ್ಲ ಮೇಯಲು ಕಾಡಿಗೆ ಅಟ್ಟಿಬಿಟ್ಟಿದ್ದನು. ಕಡೆಗೆ ಗಂಜಿಯ ನೀರನ್ನೇ ಸ್ವಲ್ಪ ಸ್ವಲ್ಪವಾಗಿ ಬಾಯಿಗೆ ಬಿಟ್ಟರು. ರೋಗಿ ಕುಡಿದಳು. ಈಗಲೋ ಆಗಲೋ ಪ್ರಾಣ ಹೋಗುತ್ತದೆ ಎಂಬುದೇನೋ ಮುದುಕನಿಗೆ ಗೊತ್ತಾಯಿತು. ಮಗನೆಲ್ಲಿ? ಎಂದು ಕೇಳಲು ಹುಡುಗಿ ಎಲ್ಲವನ್ನೂ ಹೇಳಿ ತನ್ನ ಕಡಗವಿಲ್ಲದ ಬರಿಗೈಯನ್ನು ತೋರಿದಳು. ಮುದುಕನು ನಿಡುಸುಯ್ದು ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತುಬಿಟ್ಟನು.

* * *

ಅಣ್ಣಯ್ಯಗೌಡರು ತಮ್ಮನ್ನು ಬೀಳ್ಕೊಂಡಮೇಲೆ ಕಾನೂರು ಚಂದ್ರಯ್ಯಗೌಡರು ಸ್ವಲ್ಪ ಹೋತ್ತು ಲೆಕ್ಕಪತ್ರ ನೋಡುತ್ತಿದ್ದು, ಆ ಮೇಲೆ ಬಚ್ಚಲು ಮನೆಗೆ ಹೋಗಿ ಮಿಂದು ಬಂದರು. ಅವರ ಮನಸ್ಸು  ಸ್ವಲ್ಪ ಕಲಕಿಹೋಗಿತ್ತು. ಮುದುಕನ ಗೋಳನ್ನು ಕಂಡು ಅವರಿಗೆ ಎದೆಯಲ್ಲಿ ಕನಿಕರವುಂಟಾಗಿತ್ತು. ಆದರೆ ಅದನ್ನು ಪ್ರಯತ್ನಪೂರ್ವಕವಾಗಿ ದಮನಮಾಡಿದ್ದರು. ಅದೊಂದು ಕಡೆ ಅವರ ಒಳ ಮನಸ್ಸಿನಲ್ಲಿ ಕುದಿಯುತ್ತಿತ್ತು. ವೆಂಕಪ್ಪಯ್ಯಜೋಯಿಸರೊಡನೆ ತಾವು ಮಾತಾಡುತ್ತಿದ್ದಾಗ ಅಡುಗೆ ಮನೆಯಲ್ಲಿ ನಡೆದಿದ್ದ ಕದನದ ಕೋಲಾಹಲವು ಮತ್ತೊಂದು ಕಡೆ ಪೀಡಸುತ್ತಿತ್ತು. ಹೆಂಡತಿಯ ಚಾಡಿಯನ್ನು ಪ್ರತಿ ರಾತ್ರಿಯೂ ಕೇಳಿ ಕೇಳಿ, ಅವರ ದೃಷ್ಟಿಗೆ ನಾಗಮ್ಮವನರು ವಿಷಸರ್ಪಿಣಿಯಂತೆ ತೋರುತ್ತಿದ್ದರು. ಆದರೆ ಹೂವಯ್ಯನ ಮೇಲೆ ಗೌಡರಿಗಿದ್ದ ಒಂದು ವಿಧವಾದ ಭಯ ಗೌರವದಿಂದಲೂ, ನಾಗಮ್ಮನವರು ಅಣ್ಣನ ಹೆಂಡತಿ ಎಂಬ ದಾಕ್ಷಿಣ್ಯದಿಂದಲೂ. ಲೋಕಾಪವಾದದ ಭೀತಿಯಿಂದಲೂ, ಏನನ್ನೂ ಮಾಡಲಾರದೆಯೂ ಮಾಡಲೊಲ್ಲದೆಯೂ ಸುಮ್ಮನಿದ್ದರು.

ಇಂತಹ ಮನಸ್ಸಿನಲ್ಲಿ ಅವರು ಮಣೆಯ ಮೇಲೆ ಕುಳಿತು ನಾಮಧಾರಣೆ ಮಾಡುತ್ತಿದ್ದಾಗ ಪುಟ್ಟಮ್ಮ ಜಗಲಿಗೆ ಬಂದು ಬೆಳಿಗ್ಗೆ ನಡೆದುದೆಲ್ಲವನ್ನೂ ಚಿಕ್ಕಮ್ಮನಿಗೆ ವಿರೋಧವಾಗುವ ರೀತಿಯಲ್ಲಿ ವರ್ಣಿಸಿ ಹೇಳಿದಳು. ಗೌಡರಿಗೆ ಅಡುಗೆಯ ಮನೆಯ ಜಗಳಗಳೇನೂ ಅಪೂರ್ವವಾದುವಾಗಿರಲಿಲ್ಲ. ಆದರೆ ಇಂದು ಅಗ್ರಹಾರದ ಜೋಯಿಸರು ವೆಂಕಪ್ಪಯ್ಯವನರ ಮುಂದೆ ತಮಗೆ ಅವಮಾನವಾಯಿತಲ್ಲಾ ಎಂದು ಆಗಲೇ ಕಾವುಏರಿದ್ದ ಎದೆ ಕಿಡಿಕಿಡಿಯಾಯಿತು. ಸದ್ಯಕ್ಕೆ ಹತ್ತಿರವಿದ್ದ ಪುಟ್ಟಮ್ಮನನ್ನೇ ನಿರ್ದೇಶಿಸಿ ಎಲ್ಲರಿಗೂ ತಗಲುವಂತೆ ಗಟ್ಟಿಯಾಗಿ ಬೈದರು. ಪುಟ್ಟಮ್ಮ ಕಣ್ಣೀರು ಸುರಿಸುತ್ತ ದೊಡ್ಡಮ್ಮನ ಬಳಿಗೆ ಹೋದಳು.

ಗೌಡರು ಅಡುಗೆ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಳ್ಳುವಾಗಲೆ ಒಲೆಯ ಬಳಿ ಒದ್ದೆಯಾಗಿದ್ದ ಕೆಸರೆದ್ದಿದ್ದ ನೆಲವು ಅವರ ಕಣ್ಣಿಗೆ ಬಿತ್ತು. ಮದುವೆಯಾದದಿಂನಿಂದ ಹೊಸ ಹೆಂಡತಿಯ ಮೇಲೆ ಕ್ರೂರವಾಗಿ ವರ್ತಿಸಿರಲಿಲ್ಲ. ಆದರೆ ಎಷ್ಟಾದರೂ ದೊಡ್ಡವರ ಮನೆಯಲ್ಲಿಯೆ ಹುಟ್ಟಿ ಬೆಳೆದಿದ್ದ ಅವರಿಗೆ, ಹಿಂದೆ ಎರಡು ಸಾರಿಯೂ ದೊಡ್ಡ ಮನೆತನದ ಹೆಣ್ಣುಗಳನ್ನೇ ತಂದು ಮದುವೆಯಾಗಿ ಅವರ ಶೀಲ ಆಚಾರಗಳ ಮೇಲ್ಮೆಯನ್ನು ಅನುಭವಿಸಿದ್ದ ಅವರಿಗೆ, ಸುಬ್ಬಮ್ಮನ ವರ್ತನೆ ಅನೇಕ ಸಾರಿ ಸರಿಬಿದ್ದಿರಲಿಲ್ಲ. ಆ ಸಿಟ್ಟಿನ ಪುಡಿಗಳೆಲ್ಲಾ ಸೇರಿ ತಾಳ್ಮೆಯ ಪೊಟ್ಟಣದಲ್ಲಿ ಮೆಲ್ಲಗೆ ಸಿಡಿಮದ್ದಾಗಿತ್ತು.

ಊಟ ಮಾಡಲು ಪ್ರಾರಂಭಿಸಿದಾಗಲೆ ಅವರ ಮುಖ ಕ್ರೂರವಾಗಿತ್ತು. ಮೇಲೋಗರ ಸೀದುಹೋಗಿದ್ದುದು ಗೊತ್ತಾದಮೇಲಂತೂ ಕರ್ಕಶವಾಯಿತು.

ಬಡಿಸುತ್ತಿದ್ದ ಹೆಂಡತಿಯನ್ನು ನೋಡಿ ” ಏ! ಯಾಕೆ? ಮೇಲೋಗರ ಹೊತ್ತಿಹೋಗಿದೆಯಲ್ಲಾ?” ಎಂದು ಭಯಂಕರವಾಗಿ ಕೂಗಿದನು. ಆ ಪ್ರಶ್ನೆ ಮುಂದಿನ ಕಾರ್ಯಕ್ಕೆ ನೆವಮಾತ್ರವಾಗಿತ್ತು. ಸುಬ್ಬಮ್ಮ ಇನ್ನೂ ಉತ್ತರ ಹೇಳಲು ಪ್ರಾರಂಭಿಸಿರಲಿಲ್ಲ. ಚಂದ್ರಯ್ಯಗೌಡರು ಮೇಲೆದ್ದು ನಾಗಂದಿಗೆಯ ಸಂದಿಯಲ್ಲಿ ಬೆಕ್ಕನ್ನು ಹೆದರಿಸಿ ಓಡಿಸಲೆಂದು ಇಟ್ಟಿದ್ದ ಒಂದು ದಪ್ಪನೆಯ ನೆಕ್ಕಿಯ ಕೋಲನ್ನು ಎಂಜಲು ಕೈಯಿಂದಲೆ ಸೆಳೆದುಕೊಂಡು ಹೆಂಡತಿಗೆ ರಪ್ಪ ರಪ್ಪನೆ ರಕ್ಕಸವಾಗಿ ಹೊಡೆಯತೊಡಗಿದರು. ಸುಬ್ಬಮ್ಮ ” ದಮ್ಮಯ್ಯ! ಎಂದು ಚೀರಿದಳು. ಅವಳು ಚೀರಿದಷ್ಟೂ ಹೆಚ್ಚಾಗಿಯೇ ದೆಬ್ಬೆಗಳು ಬೀಳತೊಗಿದುವು. ಒಂದು ನಿಮಿಷದಲ್ಲಿ ಆ ನೆಕ್ಕಿಯ ಕೋಲೂ ಕೆಲವು ಕೈ ಬಳೆಗಳು ಹುಡಿಯಾದವು. ಎಡಗೈಯಿಂದ ಹೆಂಡತಿಯ ತುರುಬು ಹಿಡಿದುಕೊಂಡು ಬಲಗೈಯಿಂದ ಗುದ್ದ ತೊಡಗಿದರು.  ನಾಗಮ್ಮ ಪುಟ್ಟಮ್ಮ ಇಬ್ಬರಿಗೂ ಸುಬ್ಬಮ್ಮನ ಸಹಾಯಕ್ಕೆ ಬರಲು ಮನಸ್ಸಾಗಿದ್ದರೂ ಗೌಡರ ಭೀಷಣ ಕ್ರೋಧಕ್ಕೆ ಹೆದರಿ, ದೂರ ಬೆಪ್ಪಾಗಿ ನಿಂತಿದ್ದರು. ಅಷ್ಟರಲ್ಲಿ ಕಾಡಿನಿಂದ ಹಿಂತಿರುಗಿ ಬಂದಿದ್ದ ಸೇರೆಗಾರ ರಂಗಪ್ಪಸೆಟ್ಟರು ಅಡುಗೆ ಮನೆಯಲ್ಲಾಗುತ್ತಿದ್ದ ಸದ್ದನ್ನು ಕೇಳಿ ಒಳಗೆ ನುಗ್ಗಿ ಬಂದು, ಗೌಡರಿಗೆ ಕೈಮುಗಿದು ” ಬೇಡ ನನ್ನೊಡೆಯ!” ಎಂದು ಬೇಡತೊಡಗಿದರು. ಹಿತ್ತಲುಕಡೆಯಿಂದ ಆಗತಾನೆ ಒಳಗೆಬಂದು ವಾಸುವೂ ತನ್ನ ದೊಡ್ಡಮ್ಮ ಅಕ್ಕಯ್ಯರೊಡನೆ ನಿಂತು, ಏಕೋ ಏನೋ ಅಳತೊಡಗಿದನು. ಪುಟ್ಟಮ್ಮನೂ ಅಳುತ್ತಿದ್ದಳು. ವಾಸು ಒಂದೇ ಒಂದು ಕ್ಷಣ ನಿಂತಿದ್ದನೋ ಏನೋ!  ತಂದೆಯ ಬಳಿಗೆ ಓಡಿ” ಬೇಡ ಅಪ್ಪಯ್ಯಾ! ಬೇಡ ಅಪ್ಪಯ್ಯಾ! ಎಂದು ಅಳತೊಡಗಿದನು. ಸುಬ್ಬಮ್ಮನಿಗಂತೂ ಒರಲುವ ಶಕ್ತಿಯೂ ಉಡುಗಿಹೋಗಿತ್ತು.

ಪರಕೀಯರಾದ ಸೇರೆಗಾರರು ಬಂದುದರಿಂದಲೂ, ಪ್ರೀತಿಯ ಮಗನ ಆರ್ತನಾದದಿಂದಲೂ, ಕೈಸೋತುದರಿಂದಲೂ ಗೌಡರು ಹಿಂದಕ್ಕೆ ಸರಿದು, ಏದುತ್ತ ನಿಂತರು. ಅವರ ತುಟಿ ನಡುಗುತ್ತಿದ್ದವು. ಎದೆ ಉಬ್ಬಿಯುಬ್ಬಿ ಬೀಳುತ್ತಿತ್ತು. ಕಣ್ಣುಗಳರಳಿ ಕೆಂಪಾಗಿದ್ದುವು. ಗಂಡನು ತುರುಬು ಕೆದರಿದ್ದ ತಲೆಗೂದಲನ್ನು ಬಿಟ್ಟೊಡನೆ ಸುಬ್ಬಮ್ಮ ನೆಲಕ್ಕುರುಳಿದಳು!