ಬುದ್ಧ : ಶುದ್ಧೋದನ ರಾಜನ ಮಗ. ಕ್ರಿ. ಪೂ. ೬ನೇ ಶತಮಾನದಲ್ಲಿ ಜೀವಿಸಿದ್ದ. ಇವನ ಮತ್ತೊಂದು ಹೆಸರು ಸಿದ್ಧಾರ್ಥ. ಬುದ್ಧ ಎಂದರೆ ತಿಳಿದವನು. ಜ್ಞಾನಿ ಎಂದರ್ಥವಿದೆ. ವೈಭವದ ಸುಪ್ಪತ್ತಿಯಲ್ಲಿ ಬೆಳೆದು, ರಾಜ್ಯ – ಹೆಂಡತಿ – ಮಗು – ಬಂಧು – ಬಾಂಧವರೆಲ್ಲರನ್ನೂ ತೊರೆದು ಹೊರಟ ಬುದ್ಧ ದೇವರ ಬಗ್ಗೆ ಮಾತನಾಡಲಿಲ್ಲ. ನಿಶ್ಚಿತ ಧರ್ಮದ ಬಗ್ಗೆ ಮಾತನಾಡಿದವನಲ್ಲ. ಮನುಷ್ಯನನ್ನು ಬಾದಿಸುವ ಮುಪ್ಪು, ರೋಗ ಸಾವುಗಳ ಚಿಂತಿಸಿದ. ಅವು ಮಾನವ ಬದುಕಿನಲ್ಲಿ ಅನಿವಾರ್ಯ ಎಂದು ಕಂಡುಕೊಂಡ. ಮನುಷ್ಯನ ಬದುಕು ದುಃಖಮಯ; ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ. ಈತನ ತತ್ತ್ವಗಳಿಗೆ ಬದ್ದವಾಗಿ ಮುಂದೆ ಹುಟ್ಟಿಕೊಂಡದ್ದೇ ಬೌದ್ಧಧರ್ಮ.

ಮ್ಯಾಥ್ಯೂ ಆರ್ನಾಲ್ಡ್ (೧೮೨೨೧೮೮೮) : ಈತ ಇಂಗ್ಲೆಂಡಿನ ರಗ್ಬಿ ಎಂಬಲ್ಲಿ ಹುಟ್ಟಿದ್ದ ಆಧ್ಯಾತ್ಮಿಕ ಕವಿ. ತನ್ನ ಹದಿನೆಂಟನೆಯ ವಯಸ್ಸಿಗೆ ಪ್ರಕಟಿಸಿದ ‘ಅಲರಿಕ್ ಅಟ್ ಹೋಮ್’ ಕವನ ಸಂಕಲನಕ್ಕೆ ರಗ್ಬಿಯಲ್ಲಿ ಪ್ರಶಸ್ತಿ ಪಡೆದ. ಈತನ ವಿದ್ಯಾಭ್ಯಾಸ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ; ಆ ಸಂದರ್ಭದಲ್ಲಿ ‘ದಿ ಸ್ಕಾಲರ್‌ಜಿಪ್ಸಿ’ ಮತ್ತು ‘ಥೈರಸಿಸ್’ ಎಂಬ ಎರಡು ಪ್ರಸಿದ್ಧ ಕವನಗಳನ್ನು ಪ್ರಕಟಿಸಿದ. ಕ್ರಾಮ್‌ವೆಲೆನನ್ನು ಕುರಿತು ಬರೆದ ಕವಿತೆಗೆ ನ್ಯೂಡಿಗೇಟ್ ಪ್ರಶಸ್ತಿ ಗಳಿಸಿದ.

ಅಧ್ಯಾಪಕನಾಗಿ, ಶಿಕ್ಷಣ ಸಚಿವನ ಆಪ್ತ ಕಾರ‍್ಯದರ್ಶಿಯಾಗಿ, ಶಾಲಾ ಇನ್ಸ್‌ಪೆಕ್ಟರ್‌ಆಗಿ ಸೇವೆ ಸಲ್ಲಿಸಿದ ಆರ್ನಾಲ್ಡ್ ಸಾಹಿತ್ಯ ರಚನೆಯನ್ನು ಗಂಭೀರವಾಗಿ ಪರಿಗಣಿಸಿದವನು. ಬಾಲ್ಡರ್‌ಡೆಡ್, ಸೊಹ್ರಾಬ್ ಅಂಡ್ ರುಸ್ತುಂ, ಮೆರೋಪ್, ರೆಗ್ಬಿ ಚಾಪೆಲ್,  ಎ ಸದರನ್ ನೈಟ್- ಆತನ ಕೆಲವು ಮುಖ್ಯ ಕವನಗಳು. ‘Esseys in criticism’ ಎಂಬುದು ವಿಮರ್ಶಾ ಲೇಖನಗಳ ಸಂಗ್ರಹ. ವರ್ಡ್ಸ್‌ವರ್ತ ಕಾವ್ಯದಲ್ಲಿ ನೈಜತೆಯನ್ನು ಕಾಣುವ ಮ್ಯಾಥ್ಯೂ ಆರ್ನಾರ್ಲ್ಡ್, ಆತನ ಕಾವ್ಯತತ್ತ್ವವನ್ನು ಕೇವಲ ಭ್ರಮೆಯೆಂದು ಘೋಷಿಸಿದ. ‘ಕಲ್ಚರ್‌ಅಂಡ್ ಅನಾರ್ಕಿ’ ಎಂಬುದು ಇಂಗ್ಲೆಂಡಿನ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ವಿಶ್ಲೇಷಿಸುವ ಕೃತಿ.

ಕಾವ್ಯವು ಜೀವನದ ವಿಮರ್ಶೆಯಾಗಿದ್ದ ಆರ್ನಾರ್ಲ್ಡ್‌ಗೆ ಪ್ರಪಂಚಿಕತೆಯ ವಿರುದ್ಧ ಹೋರಾಟವೇ ಕಾವ್ಯವೆಂಬ ಕಲ್ಪನೆ ಇದ್ದಿತು. ಆದ್ದರಿಂದಲೇ ಅವನ ಕಾವ್ಯದಲ್ಲಿ ಒಂದು ಬಗೆಯ ಆಧ್ಯಾತ್ಮಿಕತೆ ಇದೆ.

ವರ್ಡ್ಸ್ವರ್ತ್ (೧೭೭೦೧೮೫೦) : ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯವನ್ನು ಹುಟ್ಟುಹಾಕಿದ ನಿಸರ್ಗ ಕವಿ. ೧೭೭೦ರಲ್ಲಿ ಇಂಗ್ಲೆಂಡಿನ ಕಾಕರ್‌ಮೌತ್‌ನಲ್ಲಿ ಜನಿಸಿದ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು. ಫ್ರಾನ್ಸಿನಲ್ಲಿ ಕೆಲವು  ಕಾಲ ನೆಲೆಸಿದ್ದ ವರ್ಡ್ಸ್‌ವರ್ತ್‌ಗೆ ಅಲ್ಲಿ ತಾನು ಪ್ರೀತಿಸಿದ ಹೆಣ್ಣನ್ನು ಮದುವೆಯಾಗುವುದು ಸಾಧ್ಯವಾಗಲಿಲ್ಲ. ನಂತರ ಇಂಗ್ಲೆಂಡಿಗೆ ಮರಳಿ ರೇಸ್ ಡೌನ್ ಎಂಬ ಊರಿನಲ್ಲಿ ನೆಲೆಸಿದ. ಅದೇ ವರ್ಷ ಕೋಲ್‌ರಿಚ್‌ನ ಪರಿಚಯವಾಯಿತು. ೧೭೯೮ರಲ್ಲಿ ಇವರಿಬ್ಬರೂ ಸೇರಿ “ಲಿರಿಕಲ್ ಬ್ಯಾಲೆಡ್ಸ್” ಎಂಬ ಪ್ರಸಿದ್ಧ ಸಂಕಲನವನ್ನು ಹೊರತಂದರು. ಈ ಪುಸ್ತಕದ ದ್ವಿತೀಯ ಮುದ್ರಣಕ್ಕೆ ವರ್ಡ್ಸ್‌ವರ್ತ್‌ಬರೆದ ದಿರ್ಘ ಮುನ್ನುಡಿ ಮುಂದೆ ರೊಮ್ಯಾಂಟಿಕ್ ಕಾವ್ಯತತ್ವಕ್ಕೆ ಪೀಠಿಕೆಯಾಯಿತು. ಜನಸಾಮಾನ್ಯರ ಭಾಷೆಯಿಂದ ಮತ್ತು ಪ್ರಕೃತಿಯಿಂದ ಕವಿಯು ತನ್ನ ಕಾವ್ಯಕ್ಕೆ ಸರಕನ್ನು ನೇರವಾಗಿ ಆಯ್ದುಕೊಳ್ಳಬೇಕು; ಗದ್ಯ-ಪದ್ಯಗಳ ಭಾಷೆಯಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲವೆಂದು ಆತ ಅಲ್ಲಿ ಪ್ರತಿಪಾದಿಸಿದ್ದ. ದಿಪ್ರಿಲ್ಯೂಡ್, ಟಿಂಟರ್ನ್‌ಅಬ್ಬೆ, ಗ್ರೀನ್ ಲಿನ್ನೆಟ್, ಮೈಕೇಲ್, ಹಾರ್ಟ್ ಲೀಪ್‌ವೆಲ್, ದಿ ರೈನ್ ಬೋ, ಓಡ್ ಆನ್ ದಿ ಇಂಟಿಮೇಟನ್ಸ್ ಆಫ್ಇಮ್ಮಾರ್ಟಾಲಿಟಿ, ಟು ಡ್ಯಾಪೋಡಿಲ್ಸ್ – ಇವು ಅವನ ಕೆಲವು ಪ್ರಸಿದ್ಧ ಕವಿತೆಗಳು. ಪ್ರಕೃತಿಯ ನಿಗೂಢತೆಯನ್ನು ಶೋಧಿಸಲು ಹೊರಡುವ ವರ್ಡ್ಸ್‌ವರ್ತ್ ಪ್ರಭಾವ ಕುವೆಂಪು ಅವರ ಮೇಲೆ ದಟ್ಟವಾಗಿ ಆಗಿದೆ.

ಕಾದಂಬರಿಯಲ್ಲಿ ‘ವರ್ಡ್ಸ್‌ವರ್ತ್- ಮ್ಯಾಥ್ಯೂ ಆರ್ನಾಲ್ಡ್’ ಎಂಬ ಅಧ್ಯಾಯ ಬರುತ್ತೆ. ಅಲ್ಲಿ ಇವರಿಬ್ಬರ ಕಾವ್ಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಜಗತ್ತು-ಮನುಷ್ಯ-ಆದರ್ಶ- ವೈಫಲ್ಯ-ವಾಸ್ತವ-ಆಧ್ಯಾತ್ಮಗಳನ್ನು ಕುರಿತು ಹೂವಯ್ಯ ಮತ್ತು ರಾಮಯ್ಯ ಚರ್ಚಿಸುತ್ತಾರೆ.

ಭಗವದ್ಗೀತೆ : ಮಹಾಭಾರತದ ಕುರುಕ್ಷೇತ್ರಯುದ್ಧದ ಸಂದರ್ಭದಲ್ಲಿ ಕೃಷ್ಣ- ಅರ್ಜುನರ ನಡುವೆ ನಡೆಯಿತೆನ್ನುವ ಸಂವಾದ. ಭೀಷ್ಮ ಪರ್ವದಲ್ಲಿ ಇಪ್ಪತೈದನೆಯ ಅಧ್ಯಾಯದಿಂದ ನಲವತ್ತೆರಡನೆಯ ಅಧಾಯದವರೆಗೆ ಹದಿನೆಂಟು ಅಧ್ಯಾಯಗಳಲ್ಲಿ ಇದು ಹರಡಿಕೊಂಡಿದೆ. ಮಹಾಭಾರತದ ಒಂದು ಭಾಗದವರೂ ಸ್ವತಂತ್ರ ಕೃತಿಯೆನಿಸಿಕೊಂಡಿದೆ. ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನರ ನಡುವಿನ ಸಮವಾದವನ್ನು ವಸ್ತುವಾಗುಳ್ಳ ಕೃತಿಯಿದು. ಆ ಪದವೇ ಸೂಚಿಸುವಂತೆ. ಇದು ಭಗವಂತನ ಗೀತೆ. ವೇದೋಪನಿಷತ್ತುಗಳ ಸಾಲಿನಲ್ಲಿ ನಿಲ್ಲುವಂತದ್ದು.

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಭಾರತೀಯ ಸಾಹಿತ್ಯದಲ್ಲಿ ‘ಗೀತೆ’ಯನ್ನು ಕುರಿತು ಅಸಂಖ್ಯ ವ್ಯಾಖ್ಯಾನಗಳು, ಟೀಕುಗಳು ಪ್ರಕಟವಾಗಿವೆ. ಅಂತೆಯೇ ಗೀತೆಯನ್ನು ಕುರಿತು ಬಂದಿರುವ ಸಾಹಿತ್ಯ. ಒಂದು ಗ್ರಂಥಭಂಡಾರವೇ ಆಗುತ್ತದೆ.

‘ಕಾನೂರಿನಲ್ಲಿ ದೆಯ್ಯದ ಹರಕೆ’ ಎಂಬ ಅಧ್ಯಾಯದಲ್ಲಿ, ಹೂವಯ್ಯನು ಉಪ್ಪರಿಗೆಯಲ್ಲಿ ಕುಳಿತು ಭಗವದ್ಗೀತೆ ಓದುತ್ತಿರುತ್ತಾನೆ. ಇತ್ತ ಅವನು ಗೀತೆಯ ಒಂದೊಂದೇ  ಶ್ಲೋಕ ಓದುತ್ತ ದೇವರು- ಅಹಿಂಸೆ-ಭಕ್ತಿ-ಆಧ್ಯಾತ್ಮದ ಬಗ್ಗೆ ಚಿಂತಿಸುತ್ತಿದ್ದರೆ, ಅತ್ತ ಹೊರಗೆ ಅಂಗಳದಲ್ಲಿ ಭೂತಬಲಿಗಾಗಿ ನೇರೆದ ಜನಸಂದಣಿಯ ಗದ್ದಲ ಮುಗಿಲು ಮುಟ್ಟಿರುತ್ತದೆ.

ಪುರಾಣಕಥೆಗಳು : ವಾಯುಪುರಾಣ, ಭಾಗವತಪುರಾಣ, ಪದ್ಮ ಪುರಾಣ ಮತ್ಸ್ಯ ಪುರಾಣ ಮುಂತಾದ ಹದಿನೆಂಟು ಪ್ರಸಿದ್ಧ ಪುರಾಣಗಳಿವೆ. ಇವುಗಳ ನಡುವೆಯೇ ಸೀತಾ- ರಾಮ, ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿ, ಸಾವಿತ್ರಿ-ಸತ್ಯವಂತರ ಕಥೆಗಳೂ ಕೂಡ ಪುರಾಣ ಎನ್ನಿಸಿಕೊಂಡಿದೆ.

ಉಪನಿಷತ್ತುಗಳು : ಬ್ರಹ್ಮ, ಆತ್ಮ, ಮೋಕ್ಷ, ಸಮರಸ, ಕರ್ಮ, ಪುನರ್ಜನ್ಮ, ಉಪಾಸನಾ, ಜ್ಞಾನ, ಬ್ರಹ್ಮ- ಜೀವ-ಜಗತ್ತುಗಳ ನಡುವಿ ಸಂಬಂಧಗಳನ್ನು ಕುರಿತ ಜ್ಞಾನವಾಹಿನಿಗಳು; ವೇದಗಳಿಗೆ ಪೂರಕವಾಗಿ ಬರುತ್ತವೆ. ಇಸಾ, ಕೇನಾ, ಕಥಾ, ಪ್ರಶ್ನ, ಮುಂಡಕ, ಮುಂಡೊಕ್ಯ, ಐತ್ತರೇಯ, ತೈತ್ತರೀಯ, ಚಾಂದೋಗ್ಯ ಮತ್ತು ಬ್ರಹದಾರಣ್ಯಕ ಎಂಬುವು ಕೆಲವು ಪ್ರಮುಖ ಉಪನಿಷತ್ತುಗಳು; ದಶೋಪನಿಷತ್ತುಗಳೆಂದು ಪ್ರಸಿದ್ಧವಾಗಿವೆ.

ವೇದಗಳು : ಋಗ್ವೇದ, ಯಜುರ್ವವೇದ, ಸಾಮವೇದ ಮತ್ತು ಅಥರ್ವವೇದ; ಚತುರ್ವೇದಗಳೆಂದು ಹೆಸರಾಗಿವೆ. ಇವುಗಳಲ್ಲಿ ಋಗ್ವೇದ ಅತ್ಯಂತ ಹಳೆಯದು ಮತ್ತು ಮಹತ್ವದ್ದು. ವಿಶ್ವದ ಸೃಷ್ಟಿ, ಜೀವ, ಹುಟ್ಟು-ಸಾವು, ಸ್ವರ್ಗ,ನರಕ ಮುಂತಾದ ಗಂಭೀರ ವಿಷಯಗಳನ್ನು ಕುರಿತದ್ದಾಗಿದೆ. ಯಜರ್ವವೇದವು ಒಂದು ಗದ್ಯ ಕೃತಿ. ಯಜ್ಞಯಾಗಾದಿಗಳ ವಿವರಗಳನ್ನು ಕೊಡುತ್ತದೆ. ಸಾಮವೇದ ೧೫೪೯ ನಾದವಾಯ ಪ್ರಾರ್ಥನೆಗಳಿಂದ             ಕೂಡಿದ್ದು, ಅದನ್ನು ಸಂಗೀತ ವೇದವೆಂದು ಕರೆಯುತ್ತಾರೆ. ಕೊನೆಯದಾದ ಅಥರ್ವವೇದ ಪದ್ಯ-ಗದ್ಯ ಮಿಶ್ರಿತಕೃತಿ. ವಿವಾಹ, ಅಂತ್ಯಸಂಸ್ಕಾರ, ವಾಸ್ತುಶಿಲ್ಪ, ರಾಜನ ಆಯ್ಕೆಯ ವಿಧಾನ, ಯುದ್ಧ ಕಲೆಗಳು, ಚಾದೂಗಾರಿಕೆ, ಮಾನವ ರೋಗಗಳು, ಔಷದಿಗಳು, ಬ್ರಹ್ಮನ್, ಮೋಕ್ಷ, ಕರ್ಮ, ಪುನರ್ಜನ್ಮ, ಸೃಷ್ಟಿ- ರೂಢಿಗತ ನಂಬಿಕೆಗಳು ಮತ್ತು ಅತಿಮಾನುಷ ಶಕ್ತಿಗಳನ್ನು ಕುರಿತು ಹೇಳುತ್ತದೆ.

ಕ್ರಿ.ಪೂ. ೨೫೦೦ರಿಂದ ಕ್ರಿ.ಪೂ. ೧೦೦೦ ವರ್ಷಗಳ ನಡುವೆ ಬೇರೆ ಬೇರೆ ಕಾಲಮಾನದಲ್ಲಿ ವೇದಗಳು ರಚಿತವಾಗಿ ವ್ಯವಸ್ಥಿತ ರೂಪು ಪಡೆದವು. ಭಾರತದ ಅತ್ಯಂತ ಪ್ರಾಚೀನ ಕೃತಿಗಳಿವು

ವಿಷವೃಕ್ಷ : ವೆಂಕಟಾಚಾರ್ಯರು ಕನ್ನಡಕ್ಕೆ ಅನುವಾದಿಸಿರುವ ಬಂಕಿಮಚಂದ್ರರ ಪ್ರಸಿದ್ಧ ಬಂಗಾಳಿ ಕಾದಂಬರಿ. ಬಂಗಾಳಿಯಲ್ಲಿ ಎಂತೋ ಅಂತೆಯೇ ಕನ್ನಡದಲ್ಲಿಯೂ ಹೆಚ್ಚು ಜನಪ್ರಿಯತೆ ಪಡೆಯಿತು. ಇದು ಬಂಕಿಮಚಂದ್ರರ ಮೊದಲ ಸಾಮಾಜಿಕ ಕಾದಂಬರಿ.

ಗೋಲ್ಡನ್ ಟ್ರೆಜರಿ : ಫ್ರಾನ್ಸಿಸ್ ಟರ್ನರ್‌ಪಾಲ್‌ಗ್ರೇವ್ ಸಂಕಲಿಸಿದ ಕಾವ್ಯಸಂಪುಟ. ೧೬ನೇ ಶತಮಾನದಿಂದ ೧೯ನೇ ಶತಮಾನದವರೆಗಿನ ಅನೇಕ ಉತ್ತಮ ಕವಿತೆಗಳನ್ನು ಇದು ಒಳಗೊಂಡಿದೆ. ಒಟ್ಟು ೨೮೦ ಕವನಗಳಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ೧೮೮೫ ರಿಂದ ೧೮೯೫ ರವರೆಗೆ ಪ್ರಾಧ್ಯಾಪಕನಾಗಿದ್ದ ಪಾಲ್‌ಗ್ರೇವ್ ತನ್ನ ಆಯ್ಕೆಯಲ್ಲಿ ಭಾವಗೀತೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾನೆ. ಇದು ಇಂಗ್ಲಿಷ್ ಕಾವ್ಯವನ್ನು ಪ್ರಚುರಪಡಿಸುವಲ್ಲಿ           ಮಹತ್ವದ ಕೆಲಸ ಮಾಡಿತು. ಶತಮಾನಗಳಿಗೂ ಮಿಕ್ಕು ಇಂಗ್ಲಿಷ್ ಕಾವ್ಯದ ಮುಖ್ಯ ಆಕರ ಗ್ರಂಥವೆನಿಸಿತು. ಪಟ್ಯಪುಸ್ತಕವಾಗಿತ್ತು.

‘ಕಾನೂರು ಹೆಗ್ಗಡತಿ’ ಕಾದಂಬರಿಯಲ್ಲಿ ವರ್ಡ್ಸ್‌ವರ್ತ್ ಮತ್ತು ಆರ್ನಾರ್ಲ್ಡ್‌ರ ಕಾವ್ಯವನ್ನು ಹೂವಯ್ಯ ಮತ್ತು ರಾಮಯ್ಯ ‘ಗೋಲ್ಡನ್ ಟ್ರೆಜರಿ’ಯನ್ನು ಮುಂದಿಟ್ಟುಕೊಂಡು ಚರ್ಚಿಸುತ್ತಾರೆ.

ರಾಮಾಯಣಮಹಾಭಾರತ : ವಾಲ್ಮೀಕಿ-ವ್ಯಾಸರಿಂದ ರಚಿತವಾದ ಮಹಾಕಾವ್ಯಗಳು. ಭಾರತದ ಉದ್ದಗಲಕ್ಕೂ ಇವುಗಳ ಹಲವು ಪಾಠಗಳು ಪ್ರಚಲಿತದಲ್ಲಿದ್ದು, ಈ ಕೃತಿಗಳನ್ನು ಆಧರಿಸಿ ಪ್ರಾದೇಶಿಕ ಭಾಷೆಗಳಲ್ಲಿ ಅನೇಕ ಸಾಹಿತ್ಯ ಕೃತಿಗಳು ಹುಟ್ಟಿಕೊಂಡಿವೆ. ರಾಮಾಯಣವು ತ್ರೇತಾಯುಗದ ಹರಹನ್ನು ಪಡೆದುಕೊಂಡಿದ್ದರೆ ಮಹಾಭಾರತವು ದ್ವಾಪರಯುಗದ ಹರರನ್ನು ಪಡೆದುಕೊಂಡಿದೆ. ಆ ಎರಡೂ ಯುಗಗಳ ಕಥೆಯನ್ನು ಹೇಳುವ ರಾಮಾಯಣ-ಮಹಾಭಾರತಗಳು ‘ಕಲಿಯುಗ’ವೆನ್ನುವ ನಮ್ಮ ವರ್ತಮಾನದಲ್ಲೂ ಸೃಜನಶೀಲಗೊಳ್ಳುತ್ತಿವೆ. ಕಾದಂಬರಿಯಲ್ಲಿ ಸಿಂಗಪ್ಪಗೌಡರು ರಾಮಾಯಣ-ಮಹಾಭಾರತಗಳನ್ನು ಓದಿ ಹೇಳುವುದರ ಮುಲಕವೇ ಹೂವಯ್ಯ-ರಾಮಯ್ಯರಿಗೆ ಪ್ರಿಯವಾದದ್ದನ್ನು ಕಾಣಬಹುದು. ನಾಲಗೆಯಿಂದ ನಾಲಗೆಗೆ ಹರಿದು ಬರುತ್ತಿದ್ದ ಈ ಮಹಾಕಾವ್ಯಗಳು ಬರಹರೂಪಕ್ಕೆ ಇಳಿದದ್ದು ತೀರಾ ಇತ್ತೀಚೆಗೆ.

ಜೈಮಿನಿ ಭಾರತ : ೧೬ನೇ ಶತಮಾನದಲ್ಲಿ ಲಕ್ಷ್ಮೀಶನಿಂದ ರಚಿತವಾದದ್ದು. ರಾಮಾಯಣ-ಮಹಾಭಾರತಗಳಂತೆಯೇ ಹೆಚ್ಚು ಶ್ರೋತೃಗಳನ್ನು ಪಡೆದಿದ್ದ ಕೃತಿ. ೩೪ ಸಂಧಿಗಳಲ್ಲಿ ಅಡಕವಾಗಿದೆ. ಜನಪ್ರಿಯ ಕಾವ್ಯ. ‘ಹೆಗ್ಗಡತಿ’ಯಲ್ಲಿ ಸಿಂಗಪ್ಪಗೌಡರು ಓದಿ ಹೇಳುತ್ತಿದ್ದ ಕಾವ್ಯಗಳಲ್ಲಿ ಲಕ್ಷ್ಮೀಶನ ‘ಜೈಮಿನಿ ಭಾರತ’ವೂ ಒಂದು.