ಅಣ್ಣಯ್ಯಗೌಡ : ಚಂದ್ರಯ್ಯಗೌಡರ  ಗದ್ದೆ ತೋಟಗಳನ್ನು ಗಡಿ, ಗುತ್ತಿಗೆಗೆ  ಮಾಡಿಕೊಂಡು ಕೆಳಕಾನೂರಿನಲ್ಲಿ  ಒಕ್ಕಲಾಗಿದ್ದವರು. ಅವರ ಮೂವರು ಹೆಂಡತಿಯರು  ಸತ್ತಿದ್ದು ನಾಲ್ಕನೆಯ ಹೆಂಡತಿ ರೋಗಿಷ್ಠೆಯಾಗಿದ್ದಳು. ದ್ವಿತೀಯ ಪತ್ನಿಯಲ್ಲಿ ಹುಟ್ಟಿದವನೇ ಓಬಯ್ಯ. ಮೂರನೆಯ ಹೆಂಡತಿಗೂ ಹುಟ್ಟಿದ ಒಬ್ಬಳು ಏಳೆಂಟು ವಯಸ್ಸಿನ ಮಗಳಿದ್ದಳು. ಹೆಣ್ಣುಗಳಿಗೆ ತೆರವನ್ನು ತೆರಲು ಸಾಲ ಮಾಡಿ ಸುಸ್ತಾಗಿದ್ದರು.

ಮಗನಿಗೆ ಲಗ್ನ ಮಾಡಲು ಚಂದ್ರಯ್ಯಗೌಡರು ಸಾಲ ಕೊಡಲು ನಿರಾಕರಿಸಿದಾಗ ತನ್ನ ಮಗನ ನಿಂದನೆಗೆ ಗುರಿಯಾಗುತ್ತಾರೆ. ಮಗನ ಮಾತನ್ನನುಸರಿಸಿ. ಕೆಳಕಾನೂರಿನಿಂದ ಸಿಂಗಪ್ಪಗೌಡರಲ್ಲಿ ಒಕ್ಕಲಾಗಿ ಹೋಗಲು ಕೆಳಕಾನೂರಿನಿಂದ ಹೊರಡುವಾಗ ಚಂದ್ರಯ್ಯಗೌಡರಿಗೆ ಸಿಕ್ಕಿಹಾಕಿಕೊಳ್ಳುವ ಅಣ್ಣಯ್ಯಗೌಡರು ಕೊನೆಗೆ ದೇಶಾಂತರ ಹೋಗುತ್ತಾರೆ. ಪತ್ನಿ, ಮಗಳನ್ನು ಕಳೆದುಕೊಂಡು ಕೊನೆಗೆ ಅಪರಿಚಿತ ನಾಡಿನಲ್ಲಿ ಅಸುನೀಗುತ್ತಾರೆ. ಮಲೆನಾಡಿನಲ್ಲಿ ಮದುವೆಯ ಬಗ್ಗೆ ಒಂದು ಶಿಸ್ತು ಬದ್ದ ಜೀವನ ನಡೆಸದೆ, ತೆರಕ್ಕಾಗಿ ಸಾಲ ಮಾಡಿ ಸಂಸಾರದ ಶೂಲದಲ್ಲಿ ಸಿಕ್ಕಿ ಒದ್ದಾಡುವವರ ಮಾದರಿಯಂತೆ ಅಣ್ಣಯ್ಯಗೌಡರ ಕುಟುಂಬ ಬಿಂಬಿತವಾಗಿದೆ.

ಓಬಯ್ಯಗೌಡ : ಕೆಳಕಾನೂರು ಅಣ್ಣಯ್ಯಗೌಡರ ಮಗ ಸಾಕಷ್ಟು ಸ್ಥಿತಿವಂತರಾಗಿದ್ದ ಅಣ್ಣಯ್ಯಗೌಡ ಅಧಿಕ ತೆರಕೊಟ್ಟು ಮದುವೆ ಮಾಡಿಕೊಳ್ಳುತ್ತಿದ್ದುದನ್ನು ಕಂಡು ಕೋಪಗೊಂಡ ಈ ಯುವಕ ಕ್ರಮೇಣ ಎಲ್ಲ ದುಶ್ಚಟಗಳಿಗೆ ಬಲಿಯಾಗುತ್ತಾನೆ.ಗಂಗೆ ಯ ಸಹವಾಸದಿಂದ ವ್ಯಭಿಚಾರಿಯಾದ ಓಬಯ್ಯ ದುಡ್ಡಿಗಾಗಿ ಕಳ್ಳತನ ಮಾಡುತ್ತಾನೆ. ಚಂದ್ರಮೌಳೆಶ್ವರ ಸ್ವಾಮಿಯ ಗುಡಿಯ ಬಳಿಯ ಹೊಳೆಯಲ್ಲಿದ್ದ ದೇವರಮೀನನ್ನು ಕದ್ದು ಮಾರಿ ಕಳ್ಳು ಕುಡಿಯುತ್ತಾನೆ. ತಂಗಿಯ ಕೈಯಲ್ಲಿದ್ದ ಕಡಗವನ್ನು ಸಂಚಿನಿಂದ ಅಪಹರಿಸುತ್ತಾನೆ. ಯಾವುದೋ ದೂರದ ಸಂಬಂಧ ಸುಬ್ಬಮ್ಮನ ಮನಗೆದ್ದು ನೂರು ರೂಪಾಯಿ ನೋಟು ಸಾಲ ಪಡೆದ ಓಬಯ್ಯ ಮುಂದೆ ಅನೇಕ ಅವಾಂತರಗಳಿಗೆ  ಕಾರಣನಾಗುತ್ತಾನೆ. ತಾವು ಕಡಿಸಿದ್ದ ಕಳ್ಳನಾಟಾವನ್ನು ಚಂದ್ರಯ್ಯಗೌಡರು ಸಾಗಿಸುವ ಸಂಚನ್ನು ಸಿಂಗಪ್ಪಗೌಡರಿಗೆ ತಿಳಿಸುತ್ತಾನೆ.  ಸುಬ್ಬಮ್ಮನಿಂದ ಪಡೆದ ನೋಟು ಹಗರಣವಾಗಿ ಚಂದ್ರಯ್ಯಗೌಡರಿಂದ ಹೊಡೆತ ತಿಂದು ಕೆಳನೂರು ಬಿಟ್ಟು ಸೀತೆಮನೆಗೆ ಸ್ಥಳಾಂತರವಾಗುವ ನಿರ್ಧಾರ ತೆಗೆದುಕೊಳ್ಳುತ್ತಾನೆ. ಚಂದ್ರಯ್ಯಗೌಡರಿಗೆ ಸಿಕ್ಕಿಕೊಂಡು ಸರ್ವಸ್ವವನ್ನು ಕಳೆದುಕೊಂಡು ಊರು ಬಿಡುತ್ತಾನೆ. ಸೀತೆಮನೆಗೆ ಹೋಗದೆ ಮುದಿ ತಂದೆ ಹಾಗೂ ಮಲತಂಗಿಯ ಜೊತೆ ಸ್ವಲ್ಪಕಾಲ ಮೇಗರಹಳ್ಳಿಯಲ್ಲಿದ್ದಾಗ ಮಲತಂಗಿ ಸಾಯುತ್ತಾಳೆ. ಅನಂತರ ತಂದೆ-ಮಗ ಆಗುಂಬೆಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಮೈಲಿ ಬೇನೆಯಿಂದ ತಂದೆ ಸಾಯುತ್ತಾನೆ. ಮೈಲಿ ಬೇನೆಯಿಂದ ವಿಕಾರವಾದ ಓಬಯ್ಯ ಧರ್ಮಸ್ಥಳಕ್ಕೆ ಹೋಗಿದ್ದ ಚಂದ್ರಯ್ಯಗೌಡರಿಗೆ ಸಿಕ್ಕು ಕಾನೂರಿಗೆ ಹಿಂತಿರುಗಿ ನಂತರ ಹೂವಯ್ಯನ ಬಳಿ ಕೆಲಸಕ್ಕೆ ನಿಂತು ಸಮಯದ ಬದುಕು ಸಾಗಿಸುತ್ತಾನೆ. ಭೋರ್ಗರೆವ ನದಿಯೊಂದು ದಿಕ್ಕುದೆಸೆಯಿಲ್ಲದೆ ಹರಿದು ಕೊನೆಗೆ ಸಾಗರದೊಡನೆ ಸಂಗಮಿಸುವಂತೆ ಓಬಣ್ಣ ತನ್ನ ಕಟ್ಟು ಹರಿದ ಪಂಜಿನಂಥ ಬದುಕಿಗೆ ಸಾರ್ಥಕವನ್ನು ಹೂವಯ್ಯನ ಸಾನ್ನಿಧ್ಯದಲ್ಲಿ ಪಡೆಯುತ್ತಾನೆ.

ಕಾಳ : ಶ್ಯಾಮಯ್ಯಗೌಡರ ಮನೆಯ ಆಳು. ಸೀತೆಯನ್ನು ಸಿಂಗಪ್ಪಗೌಡರ ಮಗ ಕೃಷ್ಣಪ್ಪನಿಗೆ ತಂದುಕೊಳ್ಳುವ ಬಗ್ಗೆ ಆಗುತ್ತಿದ್ದ ಮಾತುಕತೆಯನ್ನು ಮೊದಲು ಸೀತೆಗೆ ಹೇಳಿದವನು.

ಕುಂಬಾರ ನಂಜ : ಚಿನ್ನಯ್ಯನ ಮೀನು ಶಿಕಾರಿಯ ಜೊತೆಗಾರ. ಆಳು. ಕಳ್ಳುಕುಡಿಯಲು ತನ್ನ ಹೆಂಡತಿಯ ಕಿವಿಯ ಆಭರಣವನ್ನು ಕಿತ್ತು ಕಳ್ಳಂಗಡಿಗೆ ಕೊಡುವ ಮದ್ಯವ್ಯಸನಿ.

ಕೃಷ್ಣಪ್ಪ : ಸೀತೆಮನೆ ಸಿಂಗಪ್ಪಗೌಡ ಮಗ. ಮುತ್ತಳ್ಳಿಯ ಸೀತೆಯ ಜೊತೆ ಲಗ್ನ ನಿಷ್ಕರ್ಷೆಯಾದಾಗ ಉಲ್ಲಸಿತನಾಗುವ ಕೃಷ್ಣಪ್ಪ ಕೆಳಕಾನೂರು ಅಣ್ಣಯ್ಯಗೌಡರ ಸಂಸಾರವನ್ನು ಸೀತೆಮನೆಗೆ ಸ್ಥಳಾಂತರಿಸಲು ವಿಫಲನಾಗುತ್ತಾನೆ. ಅಪ್ಪನ ಭರ್ತ್ಸನೆಯಿಂದ ನೊಂದು, ಕಟ್ಟಿದ್ದ ಕೋವಿಗೆ ಬದ್ದ ಹುಲಿಯನ್ನು ನೋಡಲು ಹೋಗುತ್ತಾನೆ. ಮರಿ ಹುಲಿಯ ಸಹವಾಸ ಬೇಡವೆಂದು ಜಾಕಿ ಹೇಳಿದರೂ, ತಂದೆಗೆ ತನ್ನ ಪೌರುಷವನ್ನು ತೋರಲು ಗಾಯಗೊಂಡ ಹುಲಿಯನ್ನು ಶಿಕಾರಿ ಮಾಡಲು ಹೋಗಿ ಕೊನೆಗೆ ಹುಲಿಗೆ ಬಲಿಯಾಗಿ ದಾರುಣವಾಗಿ ಸಾಯುತ್ತಾನೆ.

ಗಂಗ : ಬೈರನ ಮಗ. ಬೈರನ ಹೊಂಡ ತೊಣಕುವ ಕಾಯಕದಲ್ಲಿ ಮಗ ಜೊತೆಗಾರ. ಜೊತೆಗೆ ತನ್ನ ತಂದೆಯ ಕಣ್ತಪ್ಪಿಸಿ ಕಳ್ಳಂಗಡಿಯಲ್ಲಿ ಸ್ವತಂತ್ರವಾಗಿ ಸಾಲ ಮಾಡುವಷ್ಟು ಚಾಣಾಕ್ಷ. ಕಾನೂರು ಮನೆತನ ಪಾಲಾಗುವ    ಮುನ್ನ ನಿಂಗನು ಹೂತಿದ್ದ ಹತಾರುಗಳನ್ನು ಕಳ್ಳಂಡಿಗಡಿಯ ಚಿಕ್ಕಣ್ಣನಿಗೆ ತೋರಿಸಿಕೊಟ್ಟು ಮಂತ್ರಿಸಿದ ತೆಂಗಿನಕಾಯಿ ಮತ್ತು ದೆಯ್ಯದ ಭಯದಿಂದ ಗಂಗ ಹುಡುಗ ಸಾವನ್ನಪ್ಪುತ್ತಾನೆ.

ಗಂಗೆ : ಸೇರೆಗಾರ ರಂಗಪ್ಪಸೆಟ್ಟಿ ಘಟ್ಟದ ಕೆಳಗಿಂದ ತಂದ ಹೆಣ್ಣಾಳು. ಆಕೆ ರಂಗಪ್ಪ ಸೆಟ್ಟರ ಪ್ರೇಯಸಿ ಓಬಯ್ಯಗೌಡನನ್ನೂ ಹಾದಿ ತಪ್ಪಿಸಿದವಳು. ಚಂದ್ರಯ್ಯಗೌಡನನ್ನೂ ವಶಮಾಡಿಕೊಡವಳು. ಸುಬ್ಬಮ್ಮನನ್ನು ಮದುವೆಯಾದ ನಂತರ ಚಂದ್ರಯ್ಯಗೌಡರು ತನ್ನನ್ನು ಕಡೆಗಣಿಸುತ್ತಿದ್ದಾರೆಂದು ಭಾವಿಸಿ ಸುಬ್ಬಮ್ಮನ ಮೇಲೆ ಅಸೂಯೆ ತಾಳುತ್ತಾಳೆ. ತನ್ನ ಪ್ರಿಯಕರನನ್ನು ಮದುವೆಯಾಗಲು ಆಗದೆ, ಮುದುಕನ ಕೈಹಿಡಿದ ಗಂಗೆ ನಂತರ ಗಂಡನಿಂದ ಪ್ರಿಯಕರ ಹತನಾದ ಮೇಲೆ ರಂಗಪ್ಪಸೆಟ್ಟರೊಡಗೂಡಿ ಕಾನೂರಿಗೆ ಬರುತ್ತಾಳೆ. ಮುಗ್ದೆ ಸುಬ್ಬಮ್ಮನನ್ನು ಕೆಟ್ಟದಾರಿಗೆಳೆಯುತ್ತಾಳೆ. ಚಂದ್ರಯ್ಯಗೌಡರು ಸುಬ್ಬಮ್ಮನನ್ನು ಹೊರಕ್ಕೆ ಅಟ್ಟಿದಾಗ, ಗಂಗೆ ಚಂದ್ರಯ್ಯಗೌಡರ ಮನೆಯಲ್ಲೇ ನೆಲೆಸುತ್ತಾಳೆ. ಚಂದ್ರಯ್ಯಗೌಡರ ಸಾವಿನ ನಂತರ ಸಂಚು ಹೂಡಿ ಸುಬ್ಬಮ್ಮನ ಒಡವೆಗಳೊಡನೆ ಸೇರೆಗಾರರ ಜೊತೆ ಪರಾರಿಯಾಗುತ್ತಾಳೆ.

ಗೌರಮ್ಮ : ಮುತ್ತಳ್ಳಿ ಶ್ಯಾಮಯ್ಯಗೌಡರ ಧರ್ಮಪತ್ನಿ. ಚಿನ್ನಯ್ಯ, ಸೀತೆ ಮತ್ತು ಲಕ್ಷ್ಮಿಯರ ತಾಯಿ. ಸಂಸ್ಕ್ರತಳಾದ ಗೌರಮ್ಮನವರ, ಆಕೆಯ ಗರತಿಯ ಗಾಂಭೀರ್ಯ, ತಾಯಿಯ ಪವಿತ್ರತೆ, ನಿಸ್ವಾರ್ಥತೆ, ಸಹಿಷ್ಣುತೆ ಚಿನ್ನಯ್ಯನ ಮನಸ್ಸಿಗೆ ಹಿಡಿಸುತ್ತದ್ದವು. ತನ್ನ ಮಗಳು ಸೀತೆಯ ಮದುವೆಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯವನ್ನು ಹೇಳಲಾರದಂತೆ ಆಕೆಯ ಸುಸಂಸ್ಕ್ರತ ಗುಣ ತಡೆದಿತ್ತು.

ಚಂದ್ರಯ್ಯಗೌಡ : ಕಾನೂರು ಮನೆತನದ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಗತಿಸಿದ ಮೇಲೆ ಈತನೇ ಮನೆಯ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಗತಿಸಿದ ಮೇಲೆ ಈತನೇ ಮನೆಯ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಸಾಯುವಾಗ ಅವರಿಗೂ ಚಂದ್ರಯ್ಯಗೌಡರಿಗು ಮನಸ್ತಾಪವಿತ್ತು. ಹಾಗಾಗಿ ಅಣ್ಣನ ಮಗ ಹೂವಯ್ಯ ಮತ್ತು ಅತ್ತಿಗೆ ನಾಗಮ್ಮನವರ ಬಗ್ಗೆ ಅನಾದರ. ಮೊದಲ ಇಬ್ಬರು ಹೆಂಡತಿಯರು ಗತಿಸಿದ ಮೇಲೆ ನೆಲ್ಲುಹಳ್ಳಿಯ ಸುಬ್ಬಮ್ಮನನ್ನು ಮೂರನೆಯ ಹೆಂಡತಿಯಾಗಿ ತಂದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಚಂದ್ರಯ್ಯಗೌಡರು ಎರಡನೇ ಮದುವೆಯಾಗಿ ಹೆಣ್ಣು ನೋಡಲು ಮಂಡಗದ್ದೆಗೆ ಹೋಗಿದ್ದುದು ತಿಳಿದುಬರುತ್ತದೆ. ತುಂಗಾನದಿಯನ್ನು ದಾಟುವಾಗ ಗುತ್ತಿ(ಕುಳವಾಡಿ ಸಣ್ಣ)ಯನ್ನು ತನ್ನ ಜೊತೆಯಲ್ಲಿ ಕಾನೂರಿಗೆ ಕರೆತರುವ ಪ್ರಸ್ತಾಪವೂ ಇದೆ. ಅಸೂಯೆ, ದಾರ್ಷ್ಟ್ಯ ಮತ್ತು ಮುಂಗೋಪದಿಂದ ಇಡೀ ಮನೆತನವನ್ನೇ ಒಡೆದು ಛಿದ್ರಮಾಡಿ ಬಿಡುವ ಚಂದ್ರಯ್ಯಗೌಡರು ಇಡೀ ಕಾನೂರು ಮನೆತನದ ಅಲ್ಲೋಲ ಕಲ್ಲೋಲಗಳಿಗೆ ಅವರೇ ನೇರವಾಗಿ ಕಾರಣರಾಗುತ್ತಾರೆ. ಮದ್ಯವ್ಯಸನಿಯೂ, ಕ್ರೂರುಯೂ, ವಿಷಯ ಲಂಪಟನೂ ಆದ ಚಂದ್ರಯ್ಯಗೌಡ ಸಾಯುವ ಮುನ್ನ ಹೂವಯ್ಯನ ಪ್ರಭಾವಕ್ಕೆ ಸಿಲುಕಿ ಪಶ್ಚಾತ್ತಾಪ ಪಡುತ್ತಾನೆ.

ಚಿನ್ನಯ್ಯ : ಮುತ್ತಳ್ಳಿ ಶ್ಯಾಮಯ್ಯಗೌಡರ ಮಗ ಚಿನ್ನಯ್ಯ ಸ್ವಲ್ಪಮಟ್ಟಿಗೆ ಓದಿದವನು. ಸರಳ ಸ್ವಭಾವದವನಾದ ಆತನಿಗೆ ಹೂವಯ್ಯ-ರಾಮಯ್ಯರಲ್ಲಿ ಗಢ ಸ್ನೇಹ. ಹೂವಯ್ಯ-ರಾಮಯ್ಯನವರು ಮೈಸೂರಿನಿಂದ ಬರುತ್ತಾರೆಂದು ತಿಳಿದು ಬೈಲುಕರೆಯಲ್ಲಿ ಮೀನು ಶಿಕಾರಿಗೆ ಹೊರಡುತ್ತಾನೆ. ಸ್ವಲ್ಪ ಪಟ್ಟಣದ ನಾಗರಿಕತೆಯನ್ನು ಮೈಗೂಡಿಸಿಕೊಂಡ ಚಿನ್ನಯ್ಯ ಕಾನೂರು ಚಣದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗಳು ಪುಟ್ಟಮ್ಮನನ್ನು ಮದುವೆಯಾಗುತ್ತಾನೆ.

ಜಾಕಿ : ಸೀತೆಮನೆ ಸಿಂಗಪ್ಪಗೌಡರ ಮನೆಯ ನಂಬಿಕಸ್ತ ಆಳು. ವಿವೇಚನೆ ಕಡಿಮೆ. ಬಲಿಷ್ಠನೂ, ಧೂರ್ತನೂ, ಪುಂಡನೂ ಆಗಿದ್ದ ಜಾಕಿಗೆ ಜಗಳ ಕಾಯುವುದು ತುಂಬಾ ಪ್ರಿಯವಾದ ಕೆಲಸ. ಮಹಾ ಕುಡುಕ, ಕಟುಕ. ಅವನ ಕೆಚ್ಚೆದೆಗೆ ಅಜ್ಞಾನ ಅಸಂಸ್ಕ್ರತಿಗಳೇ ಮೂಲಾಧಾರ. ಕ್ರಿಶ್ಚಿಯನ್‌ಧರ್ಮಕ್ಕೆ ಮತಾಂತರಗೊಡಿದ್ದರೂ ಈತನ ರಾಕ್ಷಸೀಭಾವ ಕಡಿಮೆಯಾಗಿರಲಿಲ್ಲ. ಇದೇ ದುಡುಕು ಸ್ವಭಾವ ಪುಟ್ಟಣ್ಣನ ನಾಯಿ ಟೈಗರ್‌ನ ಸಾವಿಗೆ ಕಾರಣಭವಾಗುತ್ತದೆ. ಹುಲಿಯ ಶಿಕಾರಿಗೆ ಹೋದ ಕೃಷ್ಣಪ್ಪನ ಜೊತೆ ಅವನು ಹುಲಿಯ ಹೊಡೆತಕ್ಕೆ ಸಿಕ್ಕು ಚಿಕಿತ್ಸೆಗೂ ಬದುಕಲಾಗದೆ ಸಾಯುತ್ತಾನೆ.

ನಾಗಮ್ಮ : ಕಾನೂರು ಸುಬ್ಬಯ್ಯಗೌಡರ ಹೆಂಡತಿ. ಹೂವಯ್ಯನ ತಾಯಿ. ಮಗನಿಗಾಗಿ ಜೀವ ಹಿಡಿದುಕೊಂಡು ಬದುಕಿದ ನಾಗಮ್ಮನಿಗೆ ಚಂದ್ರಯ್ಯಗೌಡರ ಮಕ್ಕಳಾದ ರಾಮಯ್ಯ, ವಾಸು, ಪುಟ್ಟಮ್ಮನವರ ಬಗ್ಗೆ ವಿಶೇಷ ಮಮತೆ.ಚಂದ್ರಯ್ಯಗೌಡರ ಕುಟಿಲೋಪಾಯಗಳನ್ನು ಬಲ್ಲ ಆಕೆಗೆ ಚಂದ್ರಯ್ಯಗೌಡರನ್ನು ಧರ್ಮಸ್ಥಳಕ್ಕೆ ಕರೆದೊಯ್ಯುವ ನಿಂಗ ವಾಪಸ್ಸು ಬರುವಾಗ ಕಾಯಿಲೆಯಿಂದ ಸಾಯುತ್ತಾನೆ. ನಿಂಗನ ಮಗ ಪುಟ್ಟನನ್ನು ಓಬಯ್ಯ ಆದರಿಸುತ್ತಾನೆ.

ನಿಂಗ : ಕಾನೂರು ಮನೆತನದ ಆಳು. ಗಾಡಿಯನ್ನು ಹೊಡೆಯುವವನು. ‘ಗಾಡಿಯಾಳು ನಿಂಗ’ ಎಂದೇ ಪರಿಚಿತ. ರಾಮಯ್ಯ ಮತ್ತು ಹೂವಯ್ಯನನ್ನು ಕಾನೂರಿಗೆ ಕರೆತರುವ ಹಾದಿಯಲ್ಲಿ ಎತ್ತುಗಳು ಕೆರೆಗೆ ಎಳೆದಾಗ ಆತ ಗಾಡಿ ನಿಲ್ಲಿಸಲು ವಿಫಲನಾಗಿ ಗಾಡಿ ಉರುಳುತ್ತದೆ. ಈ ಘಟನೆ ಕಾದಂಬರಿಯ ಮುಂದಿನ ಎಲ್ಲಾ ಅಲ್ಲೋಲ-ಕಲ್ಲೋಲಗಳಿಗೆ ಮುನ್ನುಡಿಯಂತಿದೆ.  ಚಂದ್ರಯ್ಯಗೌಡರನ್ನು ಧರ್ಮಸ್ಥಳಕ್ಕೆ ಕರೆದೊಯ್ಯುವ ನಿಂಗ ವಾಪಸ್ಸು ಬರುವಾಗ ಕಾಯಿಲೆಯಿಂದ ಸಾಯುತ್ತಾನೆ. ನಿಂಗನ ಮಗ ಪುಟ್ಟನನ್ನು ಓಬಯ್ಯ ಆದರಿಸುತ್ತಾನೆ.

ಪುಟ್ಟ : ಚಂದ್ರಯ್ಯಗೌಡರ ಗಾಡಿಯಾಳು, ನಿಂಗನ ಮಗ. ಕಾನೂರಿನ ಮನೆಯಲ್ಲಿ ವಾಸುವಿನ ಜೊತೆಗಾರ. ಚಂದ್ರಯ್ಯಗೌಡರ ಜೊತೆ ಧರ್ಮಸ್ಥಳಕ್ಕೆ ಹೋಗಿ ಹಿಂದಕ್ಕೆ ಬರುವಾಗ ಈತನ ತಂದೆ ನಿಂಗ ಕಾಯಿಲೆಯಿಂದ ಅಸು ನೀಗುತ್ತಾನೆ. ಆಮೇಲೆ ಪುಟ್ಟ ಓಬಯ್ಯನ ಪ್ರೀತಿಯಲ್ಲಿ ಬೆಳೆಯುತ್ತಾನೆ. ಸೀತೆಗೆ ಚಂದ್ರಯ್ಯಗೌಡರು ದೆವ್ವ ಬಿಡಿಸಲು ಶಿಕ್ಷೆ ವಿಧಿಸಿದಾಗ ಪುಟ್ಟ ಅವಳು ಕೆಳಕಾನೂರಿನ ಹೂವಯ್ಯನ ಮನೆಗೆ ಹೋಗಲು ನೆರವು ನೀಡುತ್ತಾನೆ. ಹಾಗೆಯೇ ಸುಬ್ಬಮ್ಮನಿಗೆ ಗಂಗೆಯ ಕಣ್ತಪ್ಪಿಸಿ ತನ್ನ ಒಡವೆಗಳನ್ನು ಸಾಗಿಸಲು ಪುಟ್ಟನೇ ನೆರವು ನೀಡುತ್ತಾನೆ. ಪುಟ್ಟನ ಕೃತ್ಯಕ್ಕೆ ಸೇರೆಗಾರರು ಅವನನ್ನು ಮೂರ್ಛೆ ಬರುವಂತೆ ಹೊಡೆದು ಸತ್ತನೆಂದು ಭಾವಿಸಿ ಹೂಳಲು ಸಂಚುಮಾಡಿದಾಗ ಹೂವಯ್ಯನಿಂದ ಬದುಕುಳಿಯುತ್ತಾನೆ.ಸೀತೆಯ ಪ್ರಯತ್ನದಿಂದ ಮುಂದೆ ಅಕ್ಷರಸ್ಥನಾಗಿ ಕೆಳಕಾನೂರಿನ ಒಕ್ಕಲಾಗಿ‘ಸಣ್ಣ ಪುಟ್ಟಣ್ಣ’ನಾಗಿ ಬೆಳೆಯುತ್ತಾನೆ.

ಪುಟ್ಟಣ್ಣ : ಕಾನೂರು ಚಂದ್ರಯ್ಯಗೌಡರ ಮನೆಯಲ್ಲಿದ್ದ ಪುಟ್ಟಣ್ಣ ಅವರಿಗೆ ಸಂಬಂಧಿಯಲ್ಲ. ಕಾದಂಬರಿಯ ಬಹುಮುಖ್ಯ ಪಾತ್ರಗಳಲ್ಲೊಬ್ಬ. ಮದುವೆಯಾಗದೆ, ಮನೆ ಮಠ ಯಾವುದರ ಹಂಗಿಲ್ಲದೆ ತನ್ನ ನಾಯಿ-ಟೈಗರ್‌ಜೊತೆ ಕಾಡು ಮೇಡು ಅಲೆಯುತ್ತಾ ಬೇಟೆಯಲ್ಲಿ ಪಳಗಿದ್ದವನು. ಕೋವಿ ಕೆಲಸ, ಕಬ್ಬಿಣದ ಕೆಲಸ, ಬಡಗಿ ಕೆಲಸ, ಬೆತ್ತದ ಕೆಲಸ-ಹೀಗೆ ಹತ್ತಾರು ಕಸುಬು ತಿಳಿದಿದ್ದರೂ ಎಂದಿಗೂ ಅವುಗಳನ್ನು ಸಂಪಾದನೆಗೆ ಬಳಸಿಕೊಂಡವನಲ್ಲ. ಹೂವಯ್ಯ ನಿಂದ ‘ಕಾಡು ಫಕೀರ’ ಎಂದು ಕರೆಸಿಕೊಂಡವನು. ಎಲ್ಲಾ ಘಟನೆಗಳನ್ನು ನಿರ್ಲಿಪ್ತವಾಗಿ ಕಾಣುವ ಪುಟ್ಟಣ್ಣ ತನ್ನ ನಾಯಿ ಸತ್ತಾಗ ದುಃಖಿಸುತ್ತಾನೆ. ಕಾನೂರು ಮನೆ ಪಾಲಾದಾಗ ಹೂವಯ್ಯನ ಜೊತೆಯಲ್ಲಿಯೇ ನೆಲೆ ನಿಲ್ಲುತ್ತಾನೆ. ಅಂತಿಮವಾಗಿ ಹೂವಯ್ಯನ ಪ್ರಭಾವದಿಂದ ಬೇಟೆಯನ್ನು ಬಿಡಲು ಯತ್ನಿಸಿದರೂ ಸಫಲನಾಗದೆ ಕೊನೆಗೆ ಕಾನೂರು ವಾಸಪ್ಪಗೌಡ(ವಾಸು)ರಲ್ಲಿ ನೆಲೆಯಾಗುತ್ತಾನೆ.

ಪುಟ್ಟಮ್ಮ : ಚಂದ್ರಯ್ಯಗೌಡರ ಎರಡನೇ ಹೆಂಡತಿಯ ಮಗಳು.  ವಾಸುವಿನ ಅಕ್ಕ. ಮುತ್ತಳ್ಳಿ ಶ್ಯಾಮಯ್ಯಗೌಡರ ಮಗ ಚಿನ್ನಯ್ಯನು ಈಕೆಯನ್ನು ಮದುವೆಯಾಗುತ್ತಾನೆ. ಅವಳಿಗೆ ರಮೇಶ, ಲಲಿತ ಮತ್ತು ಮಾಧು ಎಂಬ ಮೂವರು ಮಕ್ಕಳು.

ಬಾಳೂರು : ಮಲೆನಾಡ ಒಕ್ಕಲಿಗ ಮುಖಂಡರಲ್ಲೊಬ್ಬರು. ಇವರು ಒಕ್ಕಲಿಗರಲ್ಲಿರೂಢಿಯಾಗಿದ್ದ ಮದ್ಯಪಾನವನ್ನು ತ್ಯಜಿಸಲು ವ್ಯವಸ್ಥೆಯಾಗಿದ್ದ ಸಭೆಯಲ್ಲಿ ಉಪನ್ಯಾಸ ಮಾಡಿದವರು. ಆದರೆ ಅದಕ್ಕೆ ಸಂಬಂಧಿಸಿದ ‘ಮಾನ ಸಿಂಗೇಗೌಡರು:ಪತ್ರಕ್ಕೆ’ ರುಜು ಹಾಕಲು ನಿರಾಕರಿಸಿದವರು. ತಮಗೆ ಹೆಂಡ ಕಳ್ಳು ಬಿಡುವ ಬಗ್ಗೆ ನಂಬಿಕೆಯೂ ಇಲ್ಲ. ಇಷ್ಟವೂ ಇಲ್ಲವೆಂದು ಹಳೆಯ ರೂಢಿಗೆ ಅಂಟಿಕೊಂಡವರು.

ಬೈರ : ಚಂದ್ರಯ್ಯಗೌಡರ ಜೀತದಾಳು. ಬೇಲರವನು. ತನ್ನ ವಂಶದ ಕುಲಕಸಬು ಅಲ್ಲದಿದ್ದರೂ ಕದ್ದು ಬಗನಿಯನ್ನು ಕಟ್ಟುವುದರಲ್ಲಿ; ಹೊಂಡ ತೊಣಕಿ ಮೀನು, ಏಡಿಗಳನ್ನು ಹಿಡಿಯುವುದರಲ್ಲಿ ನಿಷ್ಣಾತ. ಬಗನಿ ಮರಕ್ಕೆ ಮಾರ್ಕ್ ಹಾಕಲು ಬಂದವರಿಗೆ ಸಿಕ್ಕಿ ಬೀಳುವ ಬೈರ ಆತನಿಗೆ ಪಂಗನಾಮ ಹಾಕುತ್ತಾನೆ.

ಮಾಧು : ಚಿನ್ನಯ್ಯ ಪುಟ್ಟಮ್ಮನ ಎರಡನೇ ಮಗ.

ರಮೇಶ : ಮುತ್ತಳ್ಳಿ ಚಿನ್ನಯ್ಯ ಮತ್ತು ಪುಟ್ಟಮ್ಮನ ಮಗ. ವೆಂಕಪ್ಪ ಜೋಯಿಸರು ‘ಕರಿಯಣ್ಣ’ ಎಂದು ಇಟ್ಟಿದ್ದ ಹೆಸರನ್ನು ತಿರಸ್ಕರಿಸಿ, ಸೀತೆ ವೆಂಕಟಾಚಾರ್ಯರ ಕಾದಂಬರಿಯ ಪಾತ್ರದ ‘ರಮೇಶ’ ಎಂಬ ಹೆಸರನ್ನಿಡುತ್ತಾಳೆ.

ರಾಮಯ್ಯ : ಕಾನೂರು ಚಂದ್ರಯ್ಯಗೌಡರ ಮೊದಲನೇ ಹೆಂಡತಿಯ ಮಗ. ಹೂವಯ್ಯನೊಡನೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದವನು ಅವನ ಜೊತೆಗೇ ಕಾನೂರಿಗೆ ಬರುತ್ತಾನೆ. ರಾಮಯ್ಯನೂ ತಂದೆಯ ಇಚ್ಛೆಯಂತೆ ವಿದ್ಯಾಭ್ಯಾಸ ಬೀಡಬೇಕಾಗುತ್ತದೆ. ತಂದೆಯ ತಂತ್ರದಿಂದ ಹೂವಯ್ಯನನ್ನು ದ್ವೇಷಿಸುವ ರಾಮಯ್ಯ ಸೀತೆಯನ್ನು ಮದುವೆಯಾಗುತ್ತಾನೆ. ಆದರೆ ಮದುವೆ ತಂದೊದಗಿಸುವ ಕಾರ್ಪಣ್ಯಗಳಿಂದ ಜರ್ಝರಿತನಾಗುತ್ತಾನೆ. ತನ್ನ ಕಣ್ಣು ಮುಂದೆಯೇ ಕಾನೂರು ಮನೆತನ ಪತನವಾಗುತ್ತಿರುವುದನ್ನು ಕಂಡ ದುರ್ಬಲ ಮನಸ್ಸಿನ ರಾಮಯ್ಯ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಲಕ್ಷ್ಮಿ : ಸೀತೆಯ ತಂಗಿ. ಕಾನೂರು ಚಂದ್ರಯ್ಯಗೌಡರ ಮಗ ವಾಸುವನ್ನು ಮದುವೆಯಾಗಿ ಕಾನೂರಿನಲ್ಲೇ ನೆಲೆಸುತ್ತಾಳೆ.ಬಾಲಕಿಯರಲ್ಲಿ ಕಾಣುವ ಸಹಜ ತುಂಟತನ, ಮುಗ್ದತೆಯಿಂದ ಲಕ್ಷ್ಮಿಯ ಪಾತ್ರ ಬಿಂಬಿತವಾಗಿದೆ.

ಲಲಿತ : ಚಿನ್ನಯ್ಯ ಪುಟ್ಟಮ್ಮನ ಮಗಳು.

ಸಿಂಗಪ್ಪಗೌಡ : ಸೀತೆ ಮನೆಯ ಸಿಂಗಪ್ಪಗೌಡರು ಹೂವಯ್ಯನ ಸಂಬಂಧಿ. ಹೂವಯ್ಯನ ತಾಯಿಯ ತಂಗಿಯನ್ನು ಮದುವೆಯಾಗಿರು ಸಿಂಗಪ್ಪಗೌಡರು ಹೂವಯ್ಯನಿಗೆ ಕಕ್ಕಯ್ಯ.ಚಂದ್ರಯ್ಯಗೌಡ ಮತ್ತು ಸಿಂಗಪ್ಪ ಗೌಡರಿಗೆ ಒಂದು ಕಾಲಕ್ಕೆ ನೆಂಟಸ್ತಿಕೆ, ಗೆಳೆತನವಿದ್ದರೂ, ಕಾದಂಬರಿಯ ಆರಂಭದ ಹೊತ್ತಿಗೆ ಇಬ್ಬರಿಗೂ ಕೂಲಿಯಾಳಿನ ಸಂಬಂಧದಲ್ಲಿ ಮನಸ್ತಾಪ ವೇರ್ಪಟ್ಟಿರುತ್ತದೆ. ಹಾಗಾಗಿ ಅವರಿಬ್ಬರೂ ಆಗಾಗ್ಗೆ ಘರ್ಷಣೆಗೆ ಇಳಿಯುತ್ತಾರೆ. ಚಂದ್ರಯ್ಯಗೌಡರ ಇಚ್ಛೆಗೆ ವಿರುದ್ಧ ತಮ್ಮ ಮಗ ಕೃಷ್ಣಪ್ಪನಿಗೆ ಮುತ್ತಳ್ಳಿಯ ಸೀತೆಯನ್ನು ತಂದುಕೊಳ್ಳಲು ತಂತ್ರ ಹೆಣೆಯುತ್ತಾರೆ. ಮಗನ ಸಾವಿನ ನಂತರ ಹೂವಯ್ಯನ ಪರವಾಗಿ ನಿಲ್ಲುತ್ತಾರೆ. ಭಾರತ, ರಾಮಾಯಣವನ್ನು ಓದುವ ಸರಸ ಪ್ರಕೃತಿಯವರಾದ ಸಿಂಗಪ್ಪಗೌಡರಿಗೆ ಹೂವಯ್ಯ, ರಾಮಯ್ಯನನ್ನು ಕಂಡರೆ ವಿಶೇಷವಾದ ಅಕ್ಕರೆಯಿದ್ದರೂ, ಚಂದ್ರಯ್ಯಗೌಡರ ವಿರುದ್ಧ ಸಮಯಾವಕಾಶ ಸಿಕ್ಕಾಗೆಲೆಲ್ಲ ಇಕ್ಕಟ್ಟಿಗೆ ಸಿಕ್ಕಿಸಲು ಪ್ರಯತ್ನಿಸುತ್ತಾರೆ.

ಸಿದ್ದ : ಚಂದ್ರಯ್ಯಗೌಡರ ಮನೆಯ ಆಳು. ಬೇಲರವನು. ರಾಮಯ್ಯ-ಹೂವಯ್ಯರು ನೇಗಿಲು ಹಿಡಿದು ಹೊಲ ಉಳಲು ಬೈರ ಸಿದ್ದರ ನೇಗಿಲು-ಎತ್ತುಗಳನ್ನೆ ಹಿಡಿದುಕೊಳ್ಳುತ್ತಾರೆ. ಹೂವಯ್ಯನ ಎತ್ತಿಗೆ ಗಾಯವಾಗಿ, ರಾಮಯ್ಯ      ಹಿಡಿದ ನೇಗಿಲು ಮುರಿದಾಗ ಸಿದ್ದ ಗಾಬರಿಯಾಗುತ್ತಾನೆ. ಕಾನೂರು ದುರಂತಕ್ಕೆ ಈ ಘಟನೆ ಮುನ್ನುಡಿಯಂತಿರುತ್ತದೆ. ಕಿಲಿಸ್ತರ ಮಾರ್ಕನಿಗೆ ಪಂಗನಾಮ ಹಾಕಲು ಬೈರನ ತಲೇ ಗಡ್ಡ ಮೀಸೆಯನ್ನು ನುಣ್ಣಗೆ ಬೋಳಿಸುವವನೇ ಸಿದ್ದ.

ಸೀತೆ : ಮುತ್ತಳ್ಳಿ ಶ್ಯಾಮಯ್ಯಗೌಡ ಮತ್ತು ಗೌರಮ್ಮನವರ ಮಗಳು. ಹೂವಯ್ಯನಿಗಿಂತಲೂ ಐದಾರು ವರ್ಷ ಚಿಕ್ಕವಳಾದ ಸೀತೆಗೆ ಹೂವಯ್ಯ ಆರಾಧ್ಯಮೂರ್ತಿ. ಹೂವಯ್ಯ ಭಾವನನ್ನೇ ಮದುವೆಯಾಗೂತ್ತೇನೆ ಎಂದು ಗೋಡೆಯ ಮೇಲೆ ಬರೆದಿದ್ದ ಸೀತೆಯನ್ನು ಹೂವಯ್ಯ ಸಹ ಮೆಚ್ಚಿಕೊಂಡಿದ್ದನು ಗಾಡಿಯಿಂದ ಉರುಳಿ ಪೆಟ್ಟಾದಾಗ ಸೀತೆಯ ಸನಿಹದಲ್ಲೇ ಕಾಲಕಳೆದ ಹೂವಯ್ಯ ಆಕೆಯನ್ನು ತೀವ್ರವಾಗಿ ಪ್ರೀತಿಸತೊಡಗಿದ. ಸನ್ನಿವೇಶದ  ಒತ್ತಡ ಆಕೆಗೆ ಸೀತೆಮನೆ ಸಿಂಗಪ್ಪಗೌಡರ ಮಗ ಕೃಷ್ಣಪ್ಪನ ಜೊತೆ ಮದುವೆ ನಿಶ್ಚಯವಾಗುತ್ತದೆ. ಆದರೆ ಹುಲಿಗೆ ಸಿಕ್ಕು ಕೃಷ್ಣಪ್ಪ ಮೃತನಾದನಂತರ ಚಂದ್ರಯ್ಯಗೌಡರ ಸಂಚಿನಿಂದ ಅವರ ಮಗ ರಾಮಯ್ಯನ ಜೊತೆ ವಿವಾಹವಾಗುತ್ತದೆ. ತಾನು ಮನಸಾರೆ ಪ್ರೀತಿಸಿದ ಹೂವಯ್ಯನನ್ನು ಮದುವೆಯಾಗಲಾರದೆ ಮಾನಸಿಕ ವೇದನೆಯಿಂದ ತೊಳಲುವ ಸೀತೆ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ.ರಾಮಯ್ಯನ ಸಾವಿನ ನಂತರ ಸೀತೆ ತನ್ನ ತಂಗಿ ಲಕ್ಷ್ಮಿಯ ಜೊತೆಯಲ್ಲೆ ಕಾನೂರಿನಲ್ಲಿ ನೆಲೆಸಿ ಹೂವಯ್ಯನ ಆಧ್ಯಾತ್ಮಿಕ ಸಂಗಾತಿಯಾಗುತ್ತಾಳೆ.

ಸುಬ್ಬಮ್ಮ : ನೆಲ್ಲುಹಳ್ಳಿ ಪೆದ್ದೇಗೌಡರ ಮಗಳು ‘ಸುಬ್ಬಿ’ ಚಂದ್ರಯ್ಯಗೌಡರ ಕೈಹಿಡಿದು ಕಾನೂರು ಸುಬ್ಬಮ್ಮ ಹೆಗ್ಗಡತಿಯಾದವಳು. ಬಡ ಕುಟುಂಬದಿಂದ ಮೂರನೆಯ ಹೆಂಡತಿಯಾಗಿ ಬಂದ ಕಿರಿಯ ವಯಸ್ಸಿನ ಸುಬ್ಬಮ್ಮ ಹೊಸ ಬಗೆಯ ಬದುಕಿಗೆ ಹೊಂದಿಕೊಳ್ಳಲಾಗದೆ ಕಾದಂಬರಿಯುದ್ದಕ್ಕೂ ಚಡಪಡಿಸುತ್ತಾಳೆ. ಒಂದು ಬಗೆಯ ಕೀಳರಿಮೆ; ತನ್ನ ತವರು ಮನೆಗಿಂತಲು ಉತ್ತಮ ಸ್ಥಿತಿಯ ಮನೆಗೆ ಬಂದರೂ ಹೊಂದಿಕೊಳ್ಳಲಾಗದ ತಳಮಳ; ಈಡೇರಲಾರದ ಆಸೆಗಳು; ವಯಸ್ಸಾದ ಗಂಡನ ಸಂಶಯದಿಂದ ತೊಳಲಾಡುವ ಸುಬ್ಬಮ್ಮ ಕೊನೆಗೆ ಸೇರೆಗಾರ ರಂಗಪ್ಪಸೆಟ್ಟಿಯ ಲೈಂಗಿಕ ವಾಂಛೆಗೆ ಬಲಿಯಾಗುತ್ತಾಳೆ. ತನ್ನ ತಪ್ಪಿನ ಅರಿವಾಗಿ, ಸರಿಪಡಿಸಿಕೊಳ್ಳಲಾಗದ ಹಂತ ಮುಟ್ಟಿದ ಸುಬ್ಬಮ್ಮ ಅಂತಿಮವಾಗಿ ದಾರುಣವಾಗಿ ಅಸುನೀಗುತ್ತಾಳೆ.

ಸೇರೆಗಾರ ರಂಗಪ್ಪಸೆಟ್ಟಿ : ಗಟ್ಟದ ಕೆಳಗಿನ ರಂಗಪ್ಪಸೆಟ್ಟಿ ಚಂದ್ರಯ್ಯಗೌಡರ ಸೇರೆಗಾರ. ಕೂಲಿಯಾಳುಗಳನ್ನು ಗಟ್ಟದ ಮೇಲಕ್ಕೆ ತಂದು ಚಂದ್ರಯ್ಯಗೌಡರಲ್ಲಿ ಸೇರೆಗಾರನಾಗಿ ಕೆಲಸ ಮಾಡಿಸುವವನು. ತಾನು ತಂದ ಹೆಣ್ಣಾಳು ಗಂಗೆಯೊಡನೆ ಸಂಬಂಧವಿಟ್ಟುಕೊಂಡವನು. ಚಂದ್ರಯ್ಯಗೌಡರು ಗಂಗೆಯೊಡನೆ ಕೂಡುವಂತೆ ಜಾಲ ಹೆಣೆದವರು. ಸುಬ್ಬಮ್ಮನ ಮೇಲೆ ಮೋಹಗಳ್ಳುವ ರಂಗಪ್ಪಸೆಟ್ಟಿ ನಾನಾ ವಿಧಗಳಿಂದ ಕೊನೆಗೂ ಆಕೆಯನ್ನು ಒಲಿಸಿಕೊಳ್ಳುತ್ತಾನೆ. ಹೂವಯ್ಯನ ವಿರುದ್ಧ ಚಾಡಿ ಹೇಳಿ ಚಂದ್ರಯ್ಯಗೌಡರ ಮನಸ್ಸು ದ್ವೇಷಕ್ಕೆ ತಿರುಗುವಂತೆ ಮಾಡುವಲ್ಲಿ ಸಫಲನಾಗುತ್ತಾನೆ. ಸುಬ್ಬಮ್ಮನ ಕಳ್ಳ ಬಸುರಿಗೆ ಕಾರಣವಾಗಿ ಆಕೆಯ ಒಡವೆಗಳನ್ನೆಲ್ಲ ದೋಚಿ ಗಂಗೆಯೊಡನೆ ಗಟ್ಟದ ಕೆಳಕ್ಕೆ ರಾತ್ರೋರಾತ್ರಿ ಪರಾರಿಯಾಗುತ್ತಾನೆ. ಸುಬ್ಬಮ್ಮ ಹಾಗೂ ಕಾನೂರು ಮನೆತನದ ದುರಂತಕ್ಕೆ ಸೇರೆಗಾರ ರಂಗಪ್ಪಸೆಟ್ಟಿಯ ಪಾಲು ಹೆಚ್ಚಿನದು.

ಸೇಸಿ : ಬೈರನ ಹೆಂಡತಿ.ಗಂಗನ ತಾಯಿ.

ಸೋಮ : ಡೊಳ್ಳು ಹೊಟ್ಟೆಯ ಸೋಮ ಗಟ್ಟದ ಕೆಳಗಿನ ಆಳು. ಚಂದ್ರಯ್ಯಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸೋಮನಿಗೆ ಮಾಂಸ(ಬಾಡು) ಎಂದರೆ ಪ್ರಾಣ. ಅದಕ್ಕಾಗಿ ಎನನ್ನೂ ಮಾಡಬಲ್ಲ ಸಾಹಸಿ. ಮಾಂಸದಲ್ಲಿದ್ದ  (ಸೋಮಯ್ಯಸೆಟ್ಟಿ) ಅತೀಯಾಸೆಯನ್ನು ಅಡಗಿಸಿಕೊಳ್ಳುವಷ್ಟು ಸಂಯಮವಿರದಿದ್ದುದರಿಂದ ಅನೇಕ ಹಾಸ್ಯ ಪ್ರಸಂಗಗಳಿಗೆ ತುತ್ತಾಗುತ್ತಾನೆ.ಕಳ್ಳಂಗಡಿಯವನ ಸಾಲ ತಿರಿಸಲು ಹಳೆಪೈಕದ ತಿಮ್ಮನ ಹುಂಜವನ್ನು ಕದ್ದು ಸಿಕ್ಕಿಹಾಕಿಕೊಳ್ಳುತ್ತಾನೆ. ಕಾನೂರು ಮನೆತನದ ಪಾಲಾದಾಗ ಚಂದ್ರಯ್ಯಗೌಡರಲ್ಲಿ ಆಳಾಗಿ ಉಳಿಯುವ ಆತ ಹೂವಯ್ಯ ಸಾಕಿದ್ದ ಹೋತ ‘ಬಲೀಂದ್ರ’ನನ್ನು ಕದಿಯಲು ಹೋಗಿ ಗೊಬ್ಬರದ ಗುಂಡಿಯಲ್ಲಿ ಬೀಳುತ್ತಾನೆ. ಕೊನೆಗೆ ಹೂವಯ್ಯನಲ್ಲಿ ಆಳಾಗಿ ಬಂದು ನಿಂತು ಸೋಮಯ್ಯ ಸೆಟ್ಟಿಯಾಗಿ ನಾಗರಿಕತೆಯೆಡೆಗೆ ಮುಂದುವರಿಯತ್ತಾನೆ.

ವಾಸು : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗ. ಸುಬ್ಬಮ್ಮನ ವಿರುದ್ಧ ಕೋಪದಿಂದ ಕುದಿಯುವ ವಾಸು ಒಂದು ಬಗೆಯ ನಿಸರ್ಗ ಆರಾಧಕ. ಗಾಡಿಯಾಳು ನಿಂಗನ ಮಗ ಪುಟ್ಟ, ಬೇಲರ ಬೈರನ ಮಗ ಗಂಗನೊಡನೆ ಕಾಡು ತಿರುಗುವ ಹವ್ಯಾಸ. ಹೂವಯ್ಯನ ಬಗ್ಗೆ ಪ್ರೀತಿ. ಮನೆ ಪಾಲಾಗುವಾಗ ವಾಸು ವಿಚಿತ್ರವಾಗಿ ಮೂರ್ಛೆ ಹೋಗುತ್ತಾನೆ. ಮುಂದೆ ಮುತ್ತಳ್ಳಿ ಶ್ಯಾಮಯ್ಯಗೌಡರ ಎರಡನೆಯ ಮಗಳು ಲಕ್ಷ್ಮಿಯನ್ನು ಮದುವೆಯಾಗಿ ವಾಸಪ್ಪಗೌಡನೆನಿಸುತ್ತಾನೆ.

ವೆಂಕಪ್ಪ ಜೋಯಿಸ : ತುಂಗಾತೀರದ ಅಗ್ರಹಾರದ ಜೋಯಿಸರು. ಮಲೆನಾಡಿನ ಜನರ ಮೌಢ್ಯವೇ ಇವರ ಬದುಕಿಗೆ ಬಂಡವಾಳ ಅವರ ಮುಖ್ಯ ಕಸುಬು ದೇವಸ್ಥಾನದ ಪೂಜೆಯಾದರು ಹಲವಾರು ಕಸುಬುಗಳನ್ನು ಬಲ್ಲವರು. ಮುಖ್ಯವಾಗಿ ಮೌಢ್ಯವನ್ನು ಹೆಚ್ಚಿಸುವಂಥ ನಿಮಿತ್ತ ನೋಡುವುದು, ಭವಿಷ್ಯ ಹೇಳುವುದು, ಜಾತಕ ಬರೆಯುವುದು, ಭೂತಗಳಿಗೆ ಹಣ್ಣುಕಾಯಿ ಕೊಡುವುದು, ಮಂತ್ರದಿಂದ ದೆವ್ವ ಭೂತ ಬಿಡಿಸುವುದು, ಹಿಡಿಸುವುದು ಇತ್ಯಾದಿ. ತನ್ನ ತಂದೆ ಸುಬ್ಬಯ್ಯಗೌಡರು ಶ್ಲೇಷ್ಮ ಜ್ವರದಿಂದ ನರಳುತ್ತಿದ್ದಾಗ ತಣ್ಣೀರು ಮುಟ್ಟಿಸಿ ಪೂಜೆ ಮಾಡಿಸಿ ವಿಷಮಗೊಂಡಿದ್ದರಿಂದಲೇ ಅವರು ಸತ್ತರೆಂದು ಹೂವಯ್ಯನಿಗೆ ಜೋಯಿಸರ ಬಗ್ಗೆ ತಿರಸ್ಕಾರ. ಓದಿ ಬಂದ ಹೂವಯ್ಯ ತನ್ನ ವ್ಯವಹಾರಗಳಿಗೆ ಅಡ್ಡಗಾಲು ಹಾಕುವುದನ್ನು ಇಷ್ಟಪಡದ ಜೋಯಿಸರು ಚಂದ್ರಯ್ಯಗೌಡನನ್ನು ಅವನ ವಿರುದ್ಧ ಎತ್ತಿಕಟ್ಟುತ್ತಾರೆ. ಸೀತೆಯನ್ನು ಹೂವಯ್ಯನಿಗೆ ಕೊಡುವುದನ್ನು ತಪ್ಪಿಸುವಲ್ಲಿ ಸಹಕಾರ ನೀಡುವ ಅವರು ರಾಮಯ್ಯನ ಜೊತೆ ಮದುವೆ ಮಾಡುವಾಗ ವಿಹ್ವಲನಾದ ಆತನು ತಾಳಿ ಕಟ್ಟಲು ಹಿಂದೆ ಮುಂದೆ ನೋಡಿದಾಗ ತಾವೇ ಕಟ್ಟಿ ಮದುವೆ ಶಾ‌ಸ್ತ್ರ ಮುಗಿಸುತ್ತಾರೆ. ಸೀತೆಗೆ ದೆವ್ವ ಬಿಡಿಸಲು ನಾನಾ ವಿಧವಾದ ಕ್ರೂರ ತಂತ್ರಗಳನ್ನೂ ಇವರು ಬಳಸುತ್ತಾರೆ. ಜನರ ಮೌಢ್ಯವನ್ನು ವೃದ್ಧಿಸಿ ಅದನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವ ನಿಷ್ಣಾತಿ ವೆಂಕಪ್ಪ ಜೋಯಿಸರಲ್ಲಿ ಕಾಣಬಹುದು.

ಶಂಕರಯ್ಯ : ಸೀತೆಮನೆ ಸಿಂಗಪ್ಪಗೌಡರ ಮಗ.

ಶ್ಯಾಮಯ್ಯಗೌಡರು : ಮತ್ತಳ್ಳಿ ಮನೆತನದ ಯಜಮಾನರು ಚಿನ್ನಯ್ಯ, ಸೀತೆ, ಲಕ್ಷ್ಮಿಯ ತಂದೆ. ಸಿಂಗಪ್ಪಗೌಡರ ತಂತ್ರದಂತೆ ಸೀತೆಯನ್ನು ಮೊದಲು ಕೃಷ್ಣಪ್ಪನಿಗೆ ಮದುವೆ ಮಾಡಿಕೊಳ್ಳಲು ಒಪ್ಪಿ ನಂತರ ಆತ ಹುಲಿಗೆ ಬಲಿಯಾದಾಗ ಚಂದ್ರಯ್ಯಗೌಡರ ಮಗ ರಾಮಯ್ಯನಿಗೆ ಮದುವೆ ಮಾಡಿಕೊಡಲು ಒಪ್ಪುತ್ತಾರೆ. ಮಗಳ ಭವಿಷ್ಯಕ್ಕಿಂತ ಚಂದ್ರಯ್ಯಗೌಡರಲ್ಲಿರುವ ಸಾಲ ಪಡೆಯುವ ಬಯಕೆಯೇ ಈ ನಿರ್ಧಾರಕ್ಕೆ ಕಾರಣ. ಚಂಚಲ ಸ್ವಭಾವ. ಗಟ್ಟಿ ನಿರ್ಧಾರವಿಲ್ಲದ ವ್ಯಕ್ತಿ. ಪಾನನಿಷೇಧಕ್ಕೆ ಸಂಬಂಧಿಸಿದ ಮಾನಪತ್ರಕ್ಕೆ ರುಜು ಹಾಕಿಯೂ ಚಟವನ್ನು ಬಿಡಲಾರದೆ ತಿರುಪತಿಗೆ ತಪ್ಪು ಕಾಣಿಕೆ ಕಟ್ಟಿ ಕುಡಿಯುವುದನ್ನು ಮುಂದುವರೆಸುತ್ತಾರೆ.

ಹಳೆ ಪೈಕದ ತಿಮ್ಮ : ಚಂದ್ರಯ್ಯಗೌಡರ ಒಕ್ಕಲಾದ ಹಳೆಪೈಕದ ತಿಮ್ಮ ಬಗನಿಕಟ್ಟಿ ಕಳ್ಳು ಇಳಿಸುವ ಕುಲಕಸುಬಿನಲ್ಲಿ ನಿಷ್ಣಾತ. ಚಂದ್ರಯ್ಯಗೌಡರಿಗೆ ಬಗನಿ ಸರಬರಾಜು ಮಾಡುತ್ತಾ ಅವರ ವಿಶ್ವಾಸ ಸಂಪಾದಿಸಿದ್ದ ಕಾನೂರಿನ ಕಾನುಬೈಲಿನ ಕಳ್ಳುಗೊತ್ತಿಯಲ್ಲಿ ಕಳ್ಳುಕಾಯಿಸುವುದು ಅವನ ಕಾಯಕ. ಮುಂದೆ ಹೂವಯ್ಯನ ಪ್ರಭಾವದಿಂದಾಗಿ, ಕಳ್ಳುಕಾಯಿಸುತ್ತದ್ದ ಎತ್ತರವಾದ ಕಾನುಬೈಲಿನಲ್ಲಿ ಒಂದು ಸುಂದರ ಮಂದಿರವನ್ನು ನಿರ್ಮಿಸಿ ಕರ್ಮಯೋಗಿಯಾಗಿ ವಾಸಿಸುತ್ತಾನೆ.

ಹೂವಯ್ಯ : ಕಾನೂರು ಚಂದ್ರಯ್ಯಗೌಡರ ಅಣ್ಣ ದಿವಂಗತ ಸುಬ್ಬಯ್ಯಗೌಡರು ಮತ್ತು ನಾಗಮ್ಮನವರ ಏಕೈಕ ಪುತ್ರ. ಮೈಸೂರಿನಲ್ಲಿ ಓದುತ್ತಿದ್ದ ಹೂವಯ್ಯ ಬೇಸಿಗೆ ರಜೆಗೆ ಕಾನೂರಿಗೆ ಬಂದ ನಂತರ ಬದಲಾದ ಪರಿಸ್ಥಿತಿಯ ಹಿನ್ನಲೆಯಲ್ಲಿ ಓದನ್ನು ಅರ್ಧಕ್ಕೇ ನಿಲ್ಲಿಸಿ ಕಾನೂರಿನಲ್ಲಿ ನಿಲ್ಲಬೇಕಾಗುತ್ತದೆ. ಚಿಕ್ಕಪ್ಪ ಚಂದ್ರಯ್ಯಗೌಡನ ಈರ್ಷ್ಯೆ ತಾಳಲಾರದೆ ಪಾಲು ತೆಗೆದುಕೊಂಡು ಕಳಕಾನೂರಿನಲ್ಲಿ ನೆಲೆಯೂರುತ್ತಾನೆ. ತನ್ನ ಮನೋವೃತ್ತಿಯಿಂದಾಗಿ ಆತ ಕಾದಂಬರಿಯ ಉಳಿದೆಲ್ಲ ಪಾತ್ರಗಳಿಗಿಂತ ಭಿನ್ನವಾಗಿ ನಿಲ್ಲುತ್ತಾನೆ.  ಹೂವಯ್ಯ ತನ್ನ ಸುಶಿಕ್ಷಿತತೆ, ಆಧ್ಯಾತ್ಮಿಕತೆ ಮತ್ತು ಕ್ರಿಯಾಶೀಲತೆಯಿಂದ ಸುತ್ತಲಿನವರ ಬದುಕನ್ನು ಉತ್ತಮಗೊಳಿಸಲು ಪ್ರಭಾವ ಬೀರುತ್ತಾನೆ. ತಾನು ಪ್ರೀತಿಸಿದ ಮುತ್ತಳ್ಳಿ ಶ್ಯಾಮಯ್ಯಗೌಡರ ಮಗಳು ಸೀತೆಯನ್ನು ಮದುವೆಯಾಗಲಾರದೆ ನಿರಾಶೆಗೊಂಡರು ಕೊನೆಗೆ ಜೀವನ ಪ್ರೀತಿ ಆತನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಹೂವಯ್ಯನ ಪ್ರಯತ್ನದಿಂದ ಮಲೆನಾಡಿನ ಅನೇಕ ಹಳ್ಳಿಗಳು ನಾಗರಿಕತೆಯೆಡೆಗೆ ಹೆಜ್ಜೆ ಹಾಕುತ್ತವೆ. ಆಳುಗಳು ತಮ್ಮ ಅನಾಗರಿಕ ಬದುಕಿನಿಂದ ನಾಗರಿಕ ಬದುಕಿನೆಡೆಗೆ ಮುನ್ನಡೆಯುತ್ತಾರೆ. ‘ಕಾನೂರು ಹೆಗ್ಗಡತಿ’ ಕಾದಂಬರಿಯ ನಾಯಕ ನಿಸ್ಸಂದೇಹವಾಗಿ ಹೂವಯ್ಯನೇ ಆಗಿದ್ದಾನೆ.