ಅಗ್ರಹಾರ : ವೆಂಕಪ್ಪ ಜೋಯಿಸರ ಊರು. ತುಂಗಾ ತೀರದಲ್ಲಿರುವ ಅಗ್ರಹಾರ  ರಮಣೀಯ ಸ್ಥಳವಾಗಿತ್ತು. ಹೊಳೆಯ ದಡದಲ್ಲಿ ಚಂದ್ರಮೌಳೇಶ್ವರನ ಗುಡಿಯೂ ಅದಕ್ಕೆ ಸಮೀಪದಲ್ಲಿಯೇ ಕೈಹೆಂಚು ಹೊದಿಸಿದ್ದ ವೆಂಕಪ್ಪ ಜೋಯಿಸರ ನಾಡಹೆಂಚಿನ ಮನೆಯೂ ಇವೆ.

ಅತ್ತಿಗದ್ದೆ : ಕಾನೂರು ಅಸುಪಾಸಿನ ಹಳ್ಳಿ. ಒಮ್ಮೆ ಮಾತ್ರ ಉಲ್ಲೇಖಗೊಂಡಿದೆ. ಹೂವಯ್ಯನ ತಾಯಿ ನಾಗಮ್ಮನವರು ತಮ್ಮ ಮಗನಿಗೆ ಮದುವೆಮಾಡಿ ಕೊಳ್ಳಲು ಅತ್ತಿಗದ್ದೆ ಹಿರಿಯಣ್ಣಗೌಡರ ಮಗಳು ರಂಗಮ್ಮನನ್ನು ಪ್ರಸ್ತಾಪಿಸುತ್ತಾರೆ. ಅತ್ತಿಗದ್ದೆ ಹಿರಿಯಣ್ಣಗೌಡರು ತಮ್ಮ ಮಗಳನ್ನು ರಾಮಯ್ಯನಿಗೆ ಎರಡನೇ ಸಂಬಂಧಕ್ಕೆ ಕೊಡಲು ಪ್ರಯತ್ನಿಸುತ್ತಾರೆ.

ಆಗುಂಬೆ : ಕಾನೂರಿನಿಂದ ಧರ್ಮರ್ಸತಳಕ್ಕೆ ಆಗುಂಬೆಯ ಮಾರ್ಗವಾಗಿ ಹೋಗುತ್ತಿದ್ದದ್ದು ಕೃತಿಯಲ್ಲಿ ತಿಳಿದುಬರುತ್ತದೆ. ಚಂದ್ರಯ್ಯಗೌಡರು ಧರ್ಮಸ್ಥಳದಿಂದ ಹಿಂದಿರುಗಿ ಬಂದಾಗ ಅವರ ಜೊತೆಗಿದ್ದ ಗಾಡಿ ಹೊಡೆಯುವ ಆಳು ನಿಂಗ ಕಾಯಿಲೆಯಿಂದ ಆಗುಂಬೆಯ ಆಸ್ಪತ್ರೆಯಲ್ಲಿದ್ದಾನೆಂದು ಅವನ ಮಗ ಪುಟ್ಟನಿಗೆ ಓಬಯ್ಯ ಹೇಳುತ್ತಾನೆ. ಕೆಳಕಾನೂರು ಬಿಟ್ಟ ಓಬಯ್ಯ ತಂದೆ ಅಣ್ಣಯ್ಯಗೌಡನ ಜೊತೆ ಮೊದಲು ಮೇಗರವಳ್ಳಿಯಲ್ಲಿ ಕೆಲಸಕ್ಕಿದ್ದು ನಂತರ ಆಗುಂಬೆಯ ಬ್ರಾಹ್ಮಣ ಸಾಹುಕಾರರಲ್ಲಿ ಕೆಲಸಕ್ಕೆ ನಿಲ್ಲುತ್ತಾನೆ.

ಎಂಟೂರು : ಕಾನೂರಿನ ಮತ್ತೊಂದು ನೆರೆಯ ಹಳ್ಳಿ. ಎಂಟೂರಿನ ಶೇಷೇಗೌಡರು ಕಾನೂರು ಮನೆಯ ಹಿಸ್ಸೆಯಲ್ಲಿ ಹಿರಿಯರಾಗಿ ಭಾಗವಹಿಸುತ್ತಾರೆ.

ಕಳ್ಳಂಗಡಿ : ಮುತ್ತಳ್ಳಿಗೂ-ಕಾನೂರಿಗೂ ನಡುವೆ ಕಳ್ಳಂಗಡಿಯಿತ್ತು. ಸಾಯಂಕಾಲದಿಂದ ಆರಂಭವಾಗಿ ರಾತ್ರಿ ಒಂಬತ್ತು ಗಂಟೆಯವರೆಗೂ ವಹಿವಾಟು ನಡೆಸುತ್ತಿದ್ದ ಕಳ್ಳಂಗಡಿಯ ಖಾಯಂ ಗಿರಾಕಿಗಳೆಂದರೆ ಕಾನೂರು, ಮುತ್ತಳ್ಳಿ, ಸೀತೆಮನೆಯ ಒಕ್ಕಲುಗಳು, ಅವರ ಆಳುಗಳು. ಮದ್ಯವ್ಯಸನ ಹಚ್ಚಿಕೊಂಡ ಆಳುಗಳ ದೌರ್ಬಲ್ಯದಿಂದ ಈ ಕಳ್ಳಂಗಡಿ ಕೊಬ್ಬಿತ್ತು. ಹೂವಯ್ಯನ ಪ್ರಭಾವ ವೃದ್ಧಿಸಿದ ನಂತರವೇ ಕಾಡಿನ ನಡುವೆ ಇದ್ದ ಕಳ್ಳಂಗಡಿ ಕುಸಿದುಬಿದ್ದು ಅಲ್ಲಿ ನಾಲ್ಕಾರು ಗ್ರಾಮಗಳಿಗೆ ಅನುಕೂಲವಾಗುವ ಆಸ್ಪತ್ರೆ, ಸ್ಕೂಲು, ಪೋಸ್ಟಾಫೀಸು ತಲೆ ಎತ್ತುತ್ತವೆ. ಕಳ್ಳಂಗಡಿ ಕಾದಂಬರಿಯ ಕಾಲಘಟ್ಟದಲ್ಲಿ ಸುಧಾರಣೆಯನ್ನು ಮೈಗೂಡಿಸಿಕೊಳ್ಳುವ ಸ್ಥಳವೆನಿಸುತ್ತದೆ.

ಕಾನುಬೈಲು : ಕಾನೂರು ಮನೆಯ ಉತ್ತರ ದಿಕ್ಕಿಗೆ ಇದ್ದ ಉನ್ನತ ಗುಡ್ಡ ಗಾಡುನ ನೆತ್ತಿಯಲ್ಲಿ ಹೆಬ್ಬಂಡೆ, ಹಾಸುಬಂಡೆಗಳಿಂದ ಬಯಲಾಗಿದ್ದ ಪ್ರದೇಶವೇ ಕಾನುಬೈಲು. ಅಲ್ಲಿಂದ ನಿಂತು ನೋಡಿದರೆ ಕೃತಿಯಲ್ಲಿ ಬರುವ ಕೆಳಕಾನೂರು, ಮುತ್ತಳ್ಳಿ, ಸೀತೆಮನೆಯನ್ನಲ್ಲದೆ ಆಗುಂಬೆ ಘಾಟಿ, ಕುಂದದ ಗುಡ್ಡ, ಕುದುರೆಮುಖ, ಮೇರುತಿ ಪರ್ವತಗಳನ್ನು ನೋಡಬಹುದಿತ್ತು. ಅಲ್ಲಿನ ಸೂರ್ಯಸ್ತ,ಚಂದ್ರೋದಯ ದ್ವಿಗುಣಿತ ರಮಣೀಯವಾಗಿ ಶೋಭಿಸುತ್ತಿದ್ದರಿಂದ ರಜಾಕಾಲದಲ್ಲಿ ಊರಿಗೆ ಬಂದಾಗ ಹೂವಯ್ಯ-ರಾಮಯ್ಯರಿಗೆ ಅದೊಂದು ನಿತ್ಯ ಸಂದರ್ಶನದ ಸೌಂದರ್ಯ ಸ್ಥಾನವಾಗಿತ್ತು. ಇಂಥ ರಮಣೀಯ ಪ್ರದೇಶದಲ್ಲಿಯೇ ಹಳೇಪೈಕದ ತಿಮ್ಮನು       ಕಳ್ಳುಗೊತ್ತು ಮಾಡಿಕೊಂಡಿದ್ದು ಚಂದ್ರಯ್ಯಗೌಡರಂಥ ಶ್ರೀಮಂತ ವರ್ಗದವರಿಗೆ ಕಳ್ಳು ಕಾಯಿಸಿಕೊಡುತ್ತಿದ್ದನು. ಕಳ್ಳಂಗಡಿ ಕೆಳವರ್ಗದವರ ಕಳ್ಳು ಪಾನೀಯ ಕೇಂದ್ರವಾದರೆ. ಕಾಲುಬೈಲು ಮೇಲುವರ್ಗದವರ ಪಾನಕೇಂದ್ರವಾಗಿತ್ತು. ಪುಟ್ಟಣ್ನ ತನ್ನ ಪ್ರೀತಿಯ ನಾಯಿ ಟೈಗರ್‌ಹತ್ಯೆಗೀಡಾದಾಗ ಅದನ್ನು ಹೂಳಲು ಕಾನುಬೈಲನ್ನೆಆರಿಸಿಕೊಳ್ಳುತ್ತಾನೆ. ಹೂವಯ್ಯನ ಪ್ರಭಾವದಿಂದ ಕಳ್ಳು ಕಾಯಿಸುವ ಕಾರ್ಯ ತ್ಯಜಿಸಿದ ಹಳೇಪೈಕದ ತಿಮ್ಮ ಇಲ್ಲಿ ಒಂದು ಸುಂದರ ಮಂದಿರವನ್ನು ನಿರ್ಮಿಸಿ ಕರ್ಮಯೋಗಿಯಾಗಿ ತಪಸ್ವಿಯಂತೆ ಬಾಳುತ್ತಾನೆ.

ಕಾನೂರು : ಕಾನೂರು ಹೆಗ್ಗಡತಿ’ ಕೃತಿಯ ಪ್ರಮುಖ ಘಟನೆಗಳೆಲ್ಲ ಜರುಗುವುದು ಕಾನೂರಿನಲ್ಲಿ. ಕಾನೂರಿನ ಚಂದ್ರಯ್ಯಗೌಡರ ಮಂಗಳೂರು ಹೆಂಚಿನಮನೆ ಕಾದಂಬರಿಯ ಎಲ್ಲ ಘಟನೆಗಳಿಗೂ ಸಾಕ್ಷಿಯಾಗುತ್ತದೆ. ಆ ದೊಡ್ಡ ಮನೆಯ ಪೂರ್ವ-ಉತ್ತರ ಪ್ರದೇಶಗಳಿಗೆ ಕಾಡು- ಬೆಟ್ಟಗಳು ಕಡಿದಾಗಿ ಅಬೇಧ್ಯ ಕೋಟೆ ರಚಿಸಿದ್ದರೆ ದಕ್ಷಿಣ ದಿಕ್ಕಿನಲ್ಲಿ ಕಾನೂರು ಮನೆತನದ ತೋಟ ಗದ್ದೆಗಳು, ಒಕ್ಕಲು ಮತ್ತು ಆಳುಗಳ ಹುಲ್ಲುಮನೆ, ಬಿಡಾರ, ಕಣ, ಕೊಟ್ಟಿಗೆ, ಹಟ್ಟಿಗಳಿದ್ದವು.  ಕಾನೂರಿನ ಚಂದ್ರಯ್ಯಗೌಡರ ಮನೆ ಆಧುನಿಕತೆ ಮತ್ತು ಪ್ರಾಚೀನತೆಯೆರಡರ ಮಿಶ್ರಣ. ಮನೆಗೆ ಹಳೆಯ ಮರಗಳನ್ನು ಬಳಸಿದ್ದರೆ, ಛಾವಣಿಗೆ ಹೊಸ ಮಂಗಳೂರು ಹೆಂಚುಗಳನ್ನು ಹೊದಿಸಲಾಗಿತ್ತು. ಅಂಗಳದಲ್ಲಿ ತುಲಸಿ ಪೀಠ, ಜಗಲಿಯ ಮೇಲೆ ಹೆಗ್ಗಡಿಯಾರದ ಪಕ್ಕದಲ್ಲಿ ರಾಷ್ಟ್ರೀಯತೆಯ ಪ್ರಭಾವ ಮಲೆನಾಡಿನ ಮೂಲೆಯನ್ನು ಸ್ಪರ್ಶಿಸಿದ್ದರ ಕುರುಹಾಗಿ ರವಿವರ್ಮನ ದೇವತೆಗಳ ಚಿತ್ರ, ತಿರುಪತಿಯ ಬಣ್ಣದ ಚಿತ್ರಗಳ ಜೊತೆಗೇ, ಒಬ್ಬಿಬ್ಬರು ದೇಶಭಕ್ತರ ಪಟಗಳು ಮತ್ತು ಭಾರತಾಂಬೆಯ ಚಿತ್ರಪಟವೂ ಇತ್ತು.ಕಾನೂರು ಮನೆ ಪ್ರಾಚೀನ ಮೂಢನಂಬಿಕೆ ಮತ್ತು ಆಧುನಿಕತೆಯ ಸುಧಾರಣೆಯ ನಡುವಣ ಸಂಘರ್ಷದ ಕೇಂದ್ರವಾಗುತ್ತದೆ. ಸಂಪ್ರದಾಯ ಮೌಢ್ಯ ಮತ್ತು ಆಧುನಿಕ ಶಿಕ್ಷಣದ ಮುಖಾಮುಖಿಗೆ ಅದು ತೆರೆದುಕೊಳ್ಳುತ್ತದೆ.ಚಂದ್ರಯ್ಯಗೌಡರ ಸಂಕುಚಿತ ಬುದ್ಧಿ, ವೆಂಕಪ್ಪ ಜೋಯಿಸರ ಕುಟಿಲ ತಂತ್ರಗಾರಿಕೆ ಮತ್ತು ಆಧುನಿಕತೆ ಪರ ನಿಲ್ಲುವ ಹೂವಯ್ಯ ಇವುಗಳ ನಡುವಿ ಘರ್ಷಣೆಯಲ್ಲಿ ಮನೆ ಒಡೆಯುತ್ತದೆ. ಈ ಮನೆಯ ಸಂಸ್ಕೃತಿಗಿಂತ ಭಿನ್ನವಾದ ಹಿನ್ನಲೆಯಿಂದ ಬರುವ ಸುಬ್ಬಮ್ಮನ ತೊಳಲಾಟಗಳೂ ಕಾನೂರು ಮನೆಯಲ್ಲಿ ಅನುರಣಿಸುತ್ತದೆ.

ಕುರವಳ್ಳಿ : ತೀರ್ಥಹಳ್ಳಿಯ ಬಳಿ ತುಂಗಾನದಿಯನ್ನು ಕಲ್ಲುಸಾಗರದ ಮೂಲಕ ದಾಟಿ ಬಂದಾಗ ಮೊದಲು ಸಿಗುವುದು ಕುರುವಳ್ಳಿ. ತುಂಗಾನದಿಯನ್ನು ಗಾಡಿಯ ಮೂಲಕ ದಾಟಲಾಗದ ಕಾರಣ ಈ ಹಳ್ಳಿಯ ಅರಳಿ ಕಟ್ಟೆಯ ಬುಡದಲ್ಲಿ ಗಾಡಿಯನ್ನು ನಿಲ್ಲಿಸುತ್ತಾರೆ. ಕುರುವಳ್ಳಿ ಕಿರುಪೇಟೆಯ ಹಾದಿಯ ಮೂಲಕವೇ ಕಾನೂರಿಗೆ ಹೋಗುವ ಹಾದಿಯಿದೆ.

ಕೂಳುರು : ಈ ಸ್ಥಳದ ವಿವರಗಳು ಕಾದಂಬರಿಯಲ್ಲಿ ಹೆಚ್ಚು ದೊರೆಯುವುದಿಲ್ಲ. ಸೀತೆ ವಿಸ್ಮೃತಿ ಹೊಂದಿದಾಗ ಆಕೆಯ ತಾಯಿ ಗೌರಮ್ಮ ಮಗಳ ಆರೋಗ್ಯಕ್ಕೆ ಪ್ರಾರ್ಥಿಸಿ ಕೂಳುರಿಗೆ ಕಳುಹಿಸಿ ಪ್ರಸಾದ ತರಿಸುವುದಾಗಿ ಹೇಳುತ್ತಾಳೆ. ಕೂಳುರು ದೇವಾಲಯದ ಪ್ರಸಾದ ಕೆಡುಕನ್ನು ಒಡಿಸಿ ಒಳಿತನ್ನು ಮಾಡಬಹುದೆಂಬ ನಂಬಿಕೆ ಪ್ರಚಲಿತವಾಗಿತ್ತು.

ಕೆಳಕಾನೂರು : ಕಾನೂರಿಗೆ ಸುಮಾರು ಒಂದು ಮೈಲಿ ದೂರವಿದ್ದ ಕೆಳಕಾನೂರು ಮನೆ ಕಾನೂರು ಮನೆ ಕಾನೂರು ಮನೆತನಕ್ಕೆ ಸೇರಿದ ಆಸ್ತಿ. ಅಣ್ಣಯ್ಯಗೌಡರು ಚಂದ್ರಯ್ಯಗೌಡರ ಗದ್ದೆ ತೋಟವನ್ನು ಇಲ್ಲಿ ಗಡಿ ಹುತ್ತಿಗೆಗೆ ಮಾಡಿಕೊಂಡು ಒಕ್ಕಲಾಗಿದ್ದರು. ಅವರ ಮೂವರು ಹೆಂಡತಿಯರು ಸತ್ತ ನಂತರ ನಾಲ್ಕನೆಯವಳನ್ನು ಮದುವೆಯಾಗಿದ್ದರು. ದ್ವಿತೀಯ ಪತ್ನಿಯಲ್ಲಿ ಹುಟ್ಟಿದವ ಓಬಯ್ಯ. ಚಂದ್ರಯ್ಯಗೌಡರಲ್ಲಿ ಮಾಡಿದ ಸಾಲ ತೀರಿಸಲಾಗದ್ದರ ಜೊತೆಗೆ ಓಬಯ್ಯನ ಅವಿವೇಕವೂ ಸೇರಿ ಅಣ್ಣಯ್ಯಗೌಡರು ಕೆಳಕಾನೂರನ್ನು ತ್ಯಜಿಸಬೇಕಾಗುತ್ತದೆ. ಕಾನೂರು ಮನೆ ಪಾಲಾದ ನಂತರ ಹೂವಯ್ಯನು ತಾಯಿಯೊಡನೆ ಬಂದು ಕೆಳಕಾನೂರಿನಲ್ಲಿ ನೆಲೆಸುತ್ತಾನೆ.

ಕೊಪ್ಪ : ‘ಕಾನೂರು ಹೆಗ್ಗಡತಿ’ ಕೃತಿಯಲ್ಲಿಯ ಬಹುತೇಕ ಪ್ರದೇಶವೆಲ್ಲ ತೀರ್ಥಹಳ್ಳಿ ಕೊಪ್ಪದ ನಡುವೆ ಬರುವ ಪ್ರದೆಶವಾಗಿದೆ. ಚಂದ್ರಯ್ಯಗೌಡರು ಮಾಡುವ ಧರ್ಮಸ್ಥಳ ಯಾತ್ರೆ ಈ ಭೌಗೋಳಿಕ ಪರಿಮಿತಿಯನ್ನು ದಾಟುತ್ತದೆ.ತೀರ್ಥಹಳ್ಳಿಯಂತೆಯೇ ಕೊಪ್ಪ ಸಹ ಆಧುನಿಕತೆ ಮೈಗೂಡಿಸಿಕೊಂಡಿದ್ದಕ್ಕೆ, ಕೊಪ್ಪದ ಕಡೆಯಿಂದ ಬೈಸಿಕಲ್ಲೊಂದು ಪ್ರವೇಶಿಸುವ ದೃಶ್ಯದಲ್ಲಿ ಸೂಚನೆ ಸಿಗುತ್ತದೆ.

ಚಿಕ್ಕೂರು : ಚಿಕ್ಕೂರು ತೋಟವನ್ನು ತಾವೇ ಸ್ವಯಂಶ್ರಮದಿಂದ ಸಂಪಾದಿಸಿದ್ದೆಂದು ಘೋಷಿಸುವುದರಿಂದ, ಅದು ಕಾನೂರಿಗೆ ಹತ್ತಿರದ ಪ್ರವೇಶವೆಂದು ತರ್ಕಿಸಬಹುದು. ಅಥವಾ ಇದೊಂದು ತೋ       ಟದ ಹೆಸರಾಗಿರಲೂಬಹುದು.

ತಿರುಪತಿ : ತಿರುಪತಿಯ ವೆಂಕಟರಮಣಸ್ವಾಮಿ ಮಲೆನಾಡಿನ ಅನೇಕ ಜನರಿಗೆ ಆರಾಧ್ಯದೈವ. ಇದು ಕಾನೂರು ಪರಿಸರಕ್ಕೆ ಅತಿ ದೂರದ ಯಾತ್ರಾಸ್ತಳ. ಗೌರಮ್ಮ ನಂಥವರು ಮಗಳಿಗೆ ಒಳಿತಾಗಲು ಇಂಥ ದೂರದ ದೇವರುಗಳಿಗೂ ಹರಿಸಿಕೊಳ್ಳುತ್ತಾರೆ.

ತೀರ್ಥಹಳ್ಳಿ : ‘ಕಾನೂರು ಹೆಗ್ಗಡತಿ’ ಕೃತಿಯ ಆರಂಭದಲ್ಲೇ ತೀರ್ಥಹಳ್ಲಿಯ ಉಲ್ಲೇಖವಿದೆ. ಇದು ಮಲೆನಾಡಿನ ಪ್ರಮುಖ ನಗರ ಕೇಂದ್ರ.ತೀರ್ಥಹಳ್ಳಿಗೆ ಹೊಂದಿಕೊಂಡಂತೆ ಹರಿವ ತುಂಗಾನದಿಗೆ ಅಡ್ಡಲಾಗಿರುವ ಕಲ್ಲುಸಾರದ ಮಾರ್ಗವಾಗಿಯೇ ಮೈಸೂರಿನಲ್ಲಿ ಓದುತಿದ್ದ ಹೂವಯ್ಯ ರಾಮಯ್ಯನವರು ಮಲೆನಾಡಿನ ಜಗತ್ತಿಗೆ ಮರುಪ್ರವೇಶ ಮಾಡುತ್ತಾರೆ. ಕಾನೂರಿನಂಥ ತುಂಗಾನದಿಯ ‘ಆಚೆಗಿನ’ ಮಲೆನಾಡ ಜಗತ್ತಿಗೂ ‘ಈಚೆಗಿನ’ ಹೊರಜಗತ್ತಿಗೂ ತೀರ್ಥಹಳ್ಳಿ ಸಂಪರ್ಕ ಕಲ್ಪಿಸುವ ಕೇಂದ್ರವಾಗಿತ್ತು. ಪುಟ್ಟಣ್ಣ ಗಾಡಿಯ ಬಳಿ ಬರುವುದು ತಡವಾಗುವುದಕ್ಕೆ ತೀರ್ಥಹಳ್ಳಿಯಲ್ಲಿ ಹೋಟಲಿಗೆ ಹೋಗಿರುವ ಕಾರಣವನ್ನು ರಾಮಯ್ಯ ತರ್ಕಿಸುತ್ತಾನೆ. ಕಾದಂಬರಿಯ ಕಾಲದ ವೇಳೆಗೆ ತೀರ್ಥಹಳ್ಳಿಗೆ ಆಧುನಿಕತೆ ಪ್ರವೇಶಿಸಿದ್ದರ ಸೂಚನೆ ಇಲ್ಲಿ ಸಿಗುತ್ತದೆ. ತೀರ್ಥಹಳ್ಳಿಯಲ್ಲಿ ಮುತ್ತಳ್ಳಿ ಶ್ಯಾಮಯ್ಯಗೌಡರ ಮಗ ಕಲಿತ ಅನೇಕ ವಿದ್ಯೆಗಳಲ್ಲಿ ಸಿಗರೇಟು ಸೇದುವುದು ಸೇರಿದೆ. ಚಂದ್ರಯ್ಯಗೌಡರು ತಂಟೆಕೋರ ಮಗ ವಾಸುವನ್ನು ತೀರ್ಥಹಳ್ಳಿಯ ಶಾಲೆಗೆ ಹಾಕುವುದಾಗಿ ಹೇಳುವುದರಿಂದ ಮಲೆನಾಡಿನ ಜನರಿಗೆ ಅದೊಂದು ವಿದ್ಯಾಕೇಂದ್ರವೂ ಆಗಿತ್ತೆಂಬ ಸೂಚನೆ ದೊರೆಯುತ್ತದೆ.

ಧರ್ಮಸ್ಥಳ : ಮಲೆನಾಡಿನ ಜನರಿಗೆ ಗಟ್ಟದ ಕೆಳಗಿನ ಧರ್ಮಸ್ಥಳ ಒಂದು ಪ್ರಮುಖ ಧಾರ್ಮಿಕಕೇಂದ್ರ. ಅದು ಮೌಢ್ಯ ಬಿತ್ತುವ ಕೇಂದ್ರವೆಂದು ನಂಬುವ ಕೃತಿಕಾರರು ಅದಕ್ಕೆ ಅನೇಕ ಸಮರ್ಥನೆಗಳನ್ನು ನೀಡುತ್ತಾರೆ. ಸಂಕಟ ಬಂದಾಗ, ಪ್ರಮುಖವಾಗಿ ದೈಹಿಕವಾಗಿ ರೋಗಬಂದಾಗ ಅನೇಕ ಪಾತ್ರಗಳು ಧರ್ಮಸ್ಥಳದ ಮಂಜುನಾಥ, ಭೂತಗಳಿಗೆ ಹರಿಸಿಕೊಂಡು ಕಾಣಿಕೆ ಅರ್ಪಿಸಲು ಸಂಕಲ್ಪಿಸುತ್ತವೆ. ಮೈಮೇಲೆ ಬರುವ ದೆವ್ವಗಳಿಗೆ ಭಯ ಹುಟ್ಟಿಸಲು ಈ ದೇವಸ್ಥಾನದ ದೇವರ ಹಸರನ್ನು ಹೇಳುತ್ತಾರೆ. ಚಂದ್ರಯ್ಯಗೌಡರು ತಮ್ಮ ಅನಾರೋಗ್ಯ ಸುಧಾರಣೆಗೆ ಅಂತಿಮವಾಗಿ ಧರ್ಮಸ್ಥಳಕ್ಕೆ ಯಾತ್ರೆ ಹೊರಡುತ್ತಾರೆ.

ನೆಲ್ಲುಹಳ್ಳಿ : ನೆಲಲುಹಳ್ಳಿಯು ಪೆದ್ದೆಗೌಡರ ಊರು. ಈ ಕುಟುಂಬದವರು ಕಾನೂರು ಮನೆತನಕ್ಕೆ ಹೋಲಿಸಿದರೆ ಅಸಂಸ್ಕೃತರೂ, ಬಡವರೂ ಆಗಿರುತ್ತಾರೆ. ಚಂದ್ರಯ್ಯಗೌಡರ ಮೂರನೆಯ ಹೆಂಡತಿಯಾಗಿ ಸುಬ್ಬಮ್ಮನನ್ನು ಮದುವೆ ಮಾಡಿಕೊಡಲು ಒಪ್ಪುತ್ತಾರೆ.

ಬಾವಿಮಕ್ಕಿ : ಚಂದ್ರಯ್ಯಗೌಡರು ಸ್ವಯಾರ್ಜಿತವಾಗಿ ಗಳಿಸಿದ್ದ ಈ ಜಮೀನಿ – ಗದ್ದೆ ತನಗೇ ಸೇರಬೇಕೆಂದು ಹೇಳುವುದರಿಂದ ಕಾನೂರಿಗೆ ಸಮೀಪದಲ್ಲಿದೆಯೆಂದು ತಿಳಿಯಬಹುದು.

ಬಾಳೂರು : ಕಾನೂರಿನ ಆಸುಪಾಸಿನ ಹಳ್ಳಿ. ಅದು ಕಾನೂರಿನಿಂದ ಇರುವ ದುರ, ದಿಕ್ಕು ಇತ್ಯಾದಿ ವಿವಿರಗಳು ಕಾದಂಬರಿಯಲ್ಲಿ ದೊರೆಯುವುದಿಲ್ಲ . ಬಾಳೂರಿನ ಸಿಂಗೇಗೌಡರ ಮನೆತನ ಮಲೆನಾಡಿನ ಒಕ್ಕಲಿಗರಲ್ಲಿ ಪ್ರಸಿದ್ದವಾಗಿತೆಂದು ತಿಳಿದು ಬರುತ್ತದೆ. ಮಲೆನಾಡ ಒಕ್ಕಲಿಗರಲ್ಲಿ ಮದ್ಯಪಾನ ತ್ಯಜಿಸಲು ನಡೆದ ಆಂದೋಲನದಲ್ಲಿ ಸಿಂಗೇಗೌಡರು ಭಾಗಿಯಾದರೂ ಮದ್ಯಪಾನ ವರ್ಜಿಸುವ ಮಾನಪತ್ರಕ್ಕೆ ಸಹಿ ಹಾಕಲಿಲ್ಲ. ಹೆಂಡ,ಕಳ್ಳು ಬಿಡಲು ಅವರಿಗೆ ಇಷ್ಡವೂ ಇರಲಿಲ್ಲ.

ಬೈದೂರು : ಕಾನೂರು ಆಸುಪಾಸಿನಲ್ಲಿರುವ ಮತ್ತೊಂದು ಹಳ್ಳಿ. ಅಲ್ಲಿನ ಬಸವೇಗೌಡರು ಸುತ್ತಲಿಗೆ ಪ್ರಸಿದ್ದರಾಗಿದ್ದವರು. ಆ ಹಿರಿಯರು ಕಾನೂರು ಮನೆ ಹಿಸ್ಸೆಯ ವಿಚಾರದಲ್ಲಿ ಭಾಗಿಯಾಗಿದ್ದರು.

ಬೈಲುಕೆರೆ : ಮುತ್ತಳ್ಳಿಗೆ ಸಮೀಪದ ಬೈಲುಕೆರೆ ಕಾದಂಬರಿಯ ಆರಂಭದಲ್ಲಿ ಬರುತ್ತದೆ. ಚಿನ್ನಯ್ಯನು ಮೀನು ಸಿಕಾರಿ ಮಾಡುವ ಸ್ಥಳ.

ಮುತ್ತಳ್ಳಿ : ತೀರ್ಥಹಳ್ಳಿ ಕೊಪ್ಪ ಸರ್ಕಾರಿ ರಸ್ತೆಯಲ್ಲಿ, ಮುತ್ತಳ್ಳಿಯು ತೀರ್ಥಹಳ್ಳಿಗೆ ಸುಮಾರು ಮೂರು-ಮೂರುವರೆ ಮೈಲಿಯ ದೂರದಲ್ಲಿದೆ. ಮುತ್ತಳ್ಳಿಯ ಶ್ಯಾಮಯ್ಯಗೌಡರ ಹೆಂಚಿನಮನೆ ಮರಗಳ ಮರೆಯಲ್ಲಿದ್ದರೂ ರಸ್ತೆಗೆ ಕಾಣುವಂತಿತ್ತು. ಉಳಿದವು ಶ್ಯಾಮಯ್ಯಗೌಡರ ಒಕ್ಕಲುಗಳ ಹುಲ್ಲಿನ ಮನೆಗಳು ಮತ್ತು ಕೂಲಿಯಾಳುಗಳ ಗುಡಿಸಲುಗಳು.

ಮೇಗ್ರಳ್ಳಿ : ಬಹುಶಃ ಇದು ಮೇಗರವಳ್ಳಿಯ ಗ್ರಾಮರೂಪವಿರಬೇಕು. ಮೇಗರವಳ್ಳಿ ಈಗಲೂ ತೀರ್ಥಹಳ್ಳಿ ಕೊಪ್ಪ ರಸ್ತೆರಲ್ಲಿರುವ ಊರು. ಕಾದಂಬರಿ ನಡೆದ ಕಾಲಕ್ಕೂ ಅದು ದೊಡ್ಡ ಊರೇ ಆಗಿದ್ದಿತು. ಮೇಗ್ರಳ್ಳಿಯ ನಾಗಪ್ಪ ಹೆಗ್ಗಡೆಯ ಸಹ ಕಾನೂರು ಮನೆ ಹಿಸ್ಸೆ ಘಟನೆಯಲ್ಲಿ ಭಾಗಿಯಾಗುತ್ತಾರೆ. ಓಬಯ್ಯ ಮತ್ತು ಅವನ ತಂದೆ ಕೆಳಕಾನೂರು ಬಿಟ್ಟ ನಂತರ, ಹಿಂದಿನ ಯೋಜನೆಯಂತೆ ಸೀತೆಮನೆಗೆ ಹೋಗದೆ ಮೇಗರವಳ್ಳಿಯ ದೊಡ್ಡ ಹೆಗ್ಗಡೆಯವರೊಬ್ಬರ ಮನೆಯಲ್ಲಿ ಸಂಬಳಕ್ಕೆ ನಿಲ್ಲುತ್ತಾರೆ.

ಮೈಸೂರು : ಮೈಸೂರು ಕಾದಂಬರಿಯಲ್ಲಿ ನಡೆಯುವ ಘಟನೆಯ ಕಾಲಕ್ಕೆ ಉನ್ನತ ವಿದ್ಯಾಭ್ಯಾಸದ ಕೇಂದ್ರವಾಗಿತ್ತು. ಕಾದಂಬರಿಯು ಇಪ್ಪತ್ತನೇ ಶತಮಾನದ ಆರಂಭದ ದಶಕದಲ್ಲಿನ ಬದುಕನ್ನು ಚಿತ್ರಿಸುವುದರಿಂದ ಮೈಸೂರಿನಲ್ಲಿ ವಿದ್ಯಾಭ್ಯಾಸದ ಸುಧಾರಣೆಯ ಗಾಳಿ ಬೀಸಿರುವುದನ್ನು ಊಹಿಸಬಹುದು. ಕಾದಂಬರಿಯಲ್ಲಿ ಮೈಸೂರಿನಲ್ಲಿ ಪ್ರಸ್ತಾಪ ನೇರವಾಗಿ ಬಾರದಿದ್ದರೂ, ಹೂವಯ್ಯನ ನೆನಕೆಯಲ್ಲಿ ಮರುಕಳಿಸುತ್ತದೆ. ಅದರ ಜೊತೆಗೆ ಚಾಮುಂಡಿಬೆಟ್ಟ, ಅರಮನೆ, ಕುಕ್ಕನಹಳ್ಳಿ ಕೆರೆ, ಅಠಾರ ಕಚೇರಿ, ಹೈಸ್ಕೂಲು, ಕಾಲೇಜು, ಜನಸಂದಣಿಯ ಚಿತ್ರಗಳೂ ಬರುತ್ತವೆ. ಪ್ರಮುಖವಾಗಿ ಮೈಸೂರು ಶಿಕ್ಷಣಕೇಂದ್ರವಗಿರುವುದು ಚಿತ್ರಿತಗೊಂಡಿದೆ.

ಸಿದ್ದರ ಮಠ : ಸಿದ್ದರ ಮಠವು ಕಾದಂಬರಿಯಲ್ಲಿ ಒಮ್ಮೆ ಮಾತ್ರ ಉಲ್ಲೇಖಗೊಡಿದೆ. ಸಿದ್ದರ ಮಠದ ಪ್ರಸಾದ ಸಂಕಟದಲ್ಲಿರುವವರಿಗೆ ಒಳಿತು ಮಾಡಬಹುದೆಂಬ ನಂಬಿಕೆ ಕೃತಿಯಲ್ಲಿನ ಪಾತ್ರಗಳಲ್ಲಿದೆ.

ಸಿಬ್ಬಲುಗುಡ್ಡೆ : ಕುವೆಂಪು ಅವರ ಅನೇಕ ಕೃತಿಗಳಲ್ಲಿ ಸಿಬ್ಬಲುಗುಡ್ಡೆ ಪ್ರದೇಶ ಕಾಣಿಸಿಕೊಳ್ಳುತ್ತದೆ. ಸಹ್ಯಾದ್ರಿಯ ಬುಡದಲ್ಲಿರುವ ರಮಣೀಯ ದೃಶ್ಯ. ‘ದೇವರು ರುಜು ಮಾಡಿದನು’ ಕವನದಲ್ಲಿಯೂ ಅದರ ಉಲ್ಲೇಖವಿದೆ. ‘ಕಾನೂರು ಹೆಗ್ಗಡತಿ’ ಕೃತಿಯಲ್ಲಿ ಶ್ಯಾಮಯ್ಯಗೌಡರ ಮಗಳು ಸೀತೆ, ರಾಮಯ್ಯನೊಡನೆ ಮದುವೆ ನಿಶ್ಚಯವಾದಾಗ ಹೆದರಿ ವಿಸ್ಮೃತಿಗೊಳಗಾದಾಗ, ತಾಯಿ ಗೌರಮ್ಮನವರು ಮಗಳ ಆರೋಗ್ಯಕ್ಕಾಗಿ ಹರಿಸಿಕೊಳ್ಳುವ ದೇವತಾಸ್ಥಳಗಳಲ್ಲಿ ಸಿಬ್ಬಲುಗುಡ್ಡೆಯೂ ಒಂದು. ಸಿಬ್ಬಲುಗುಡ್ಡೆ ಕಾನೂರು ಹೆಗ್ಗಡತಿ ನಡೆಯುವ ಪರಿಸರದಲ್ಲಿಯೇ ಬರುತ್ತದೆ.

ಸೀತೆಮನೆ : ತೀರ್ಥಹಳ್ಳಿ ಕೊಪ್ಪದ ದಾರಿಯಲ್ಲಿರುವ ಕಾನೂರಿಗೆ ಸಮೀಪದಲ್ಲೇ ಸೀತೆಮನೆಗೆ ದಾರಿ ಅಗಚುತ್ತದೆ. ಕಾನೂರಿಗೆ ಸಮೀಪದ ಸೀತೆಮನೆಯ ಯಜಮಾನರು ಸಿಂಗಪ್ಪಗೌಡರು.

ಸೋಮೇಶ್ವರ : ಕಾನೂರಿನಿಂದ ಆಗುಂಬೆಯನ್ನು ದಾಟ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ಸಿಗುವ ಊರು. ಪುಟ್ಟನ ತಂದೆ ಗಾಡಿಯಾಳು ನಿಂಗ, ಚಂದ್ರಯ್ಯಗೌಡರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ವಾಪಸ್ಸು ಬರುವಾಗ ವಾಂತಿಬೇಧಿಯಿಂದ ಸೋಮೇಶ್ವರದಲ್ಲಿ ಅಸು ನೀಗುತ್ತಾನೆ.