ಅಡಿಕೆ : ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ. ಮಲೆನಾಡಿನಲ್ಲಿ ಬತ್ತದ ಗದ್ದೆ, ಅಡಿಕೆ ತೋಟಗಳು ಭೂ ದೃಶ್ಯಕ್ಕೆ ಅಪೂರ್ವವಾದ ಶೋಭೆ ತರುತ್ತವೆ. ಒಂದು ಅಡಿ ವ್ಯಾಸದ, ಆಕಾಶಕ್ಕೆ ನೇರವಾಗಿ ಸುಮಾರು ನೂರು ಅಡಿಯವರೆಗೂ ಬೆಳೆಯುತ್ತದೆ. ತುದಿಯಲ್ಲಿ ಅಡಿಕೆಯ ಗರಿಗಳು ಮತ್ತು ಹಣ್ಣಿನ ಗೊನೆ ಬಿಡುತ್ತದೆ. ಅಡಿಕೆ ಕಾಯಿಗಳು ಹಣ್ಣಾದಾಗ ಕೊಯ್ಲು ಮಾಡಿ ಅವುಗಳನ್ನು ಸಂಸ್ಕರಿಸುವ ಕಾರ್ಯ ಮಲೆನಾಡ ರೈತರ ಪ್ರಮುಖ ವೃತ್ತಿ. ತಾಂಬೂಲ ಮತ್ತು ಶುಭಕಾರ್ಯಗಳಿಗೆ ಅಡಿಕೆ ಬಳಕೆಯಾಗುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಅರೇಕಾ ಕ್ಯಾಟಚು.

ಆಲದಮರ : ಇದೊಂದು ವಿಶಾಲವಾಗಿ ಬೆಳೆಯುವ ಮರ. ರಸ್ತೆಯ ಬದಿಯಲ್ಲಿ ಹೇರಳವಾಗಿ ಬೆಳೆಯುವ ಇದು ಮಲೆನಾಡಿನ ಕಾಡುಗಳಲ್ಲಿಯೂ ಕಾಣಸಿಗುತ್ತದೆ. ಇದರ ತೋರವಾದ ರೆಂಬೆಗಳಿಗೆ ಬೆಂಬಲ ನೀಡಲು ಬೆಳೆಯುವ ಬಿಳಲುಗಳಿಂದ ಮರಕ್ಕೆ ಅಪೂರ್ವವಾದ ಶೋಭೆ ಬರುತ್ತದೆ. ಗೋಲಿಗಾತ್ರದ ಸಂಯುಕ್ತ ಫಲದ ಕೆಂಪು ಹಣ್ಣು ಬಿಡುವ ಇದು ಹಕ್ಕಿಗಳನ್ನು ಆಕರ್ಷಿಸುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಫೈಕಸ್ ಬೆಂಗಾಲೆನ್ಸಿಸ್.

ಕದಳ : ಬಾಳೆಗಿಡ. ಬಹುಜನಪ್ರಿಯ ಹಣ್ಣನ್ನು ಬಿಡುವ ಗಿಡ. ಹಿತ್ತಲಿನಲ್ಲಿಯೂ, ತೋಟದಲ್ಲಿಯೂ ಬೆಳೆಸುತ್ತಾರೆ. ಗಿಟಗಳನ್ನು ಬೀಜದಿಂದ ಬೆಳೆಸುವುದಿಲ್ಲ. ಬಾಳೆಯ ತಾಯಿಗಿಡ ಹೊರಹಾಕುವ ಕಂದುಗಳು ಗಿಡಗಳಾಗಿ ಬೆಳೆಯುತ್ತವೆ. ಇದರ ಲಂಬವಾಗಿ ನಿಲ್ಲುವ ಕಾಂಡವು ಎಲೆಗಳ ತೊಟ್ಟಿನ ಸುರುಳಿಯಿಂದಾಗುತ್ತದೆ. ಅದುಮಿದ ಕಾಂಡದ ಭಾಗ ಭೂಮಿಯಲ್ಲೇ ಇರುತ್ತದೆ. ಅನೇಕ ತಳಿಗಳಿವೆ. ಸಸ್ಯಶಾಸ್ತ್ರೀಯ ಹೆಸರು: ಮ್ಯೂಸಪ್ಯಾರಡಿಸಿಯಾಕ.

ಕಲ್ಲುಸಂಪಿಗೆ : ಹುಳಿಮಿಶ್ರಿತ ಸಿಹಿ ಹಣ್ಣುಗಳನ್ನು ಬಿಡುತ್ತದೆ. ಈ ಮರ ಮುಳ್ಳಿನಿಂದ ಕೂಡಿರುತ್ತದೆ. ಪ್ರಾಣಿ ಪಕ್ಷಿಗಳಿಗೆ ಇದರ ಹಣ್ಣು ಆಹಾರವಾಗುತ್ತದೆ. ಮರಸು ಬೇಟೆಗೆ ಇಂತಹ ಹಣ್ಣಿನ ಮರಗಳನ್ನು ಆಯ್ಕೆಮಾಡಿಕೊಳ್ಲುತ್ತಾರೆ.

ಕಿತ್ತಳೆ : ನಿಂಬೆಗಿಂತಲೂ ದೊಡ್ಡದಾದ ಸಡಿಲ ಸಿಪ್ಪೆಯ ಆಕರ್ಷಕ ವರ್ಣದ ಹಣ್ಣುಗಳನ್ನು ಬಿಡುವ ಮರ. ನಿಂಬೆ ಜಾತಿಗೆ ಸೇರಿದ ಈ ಮರ ಕೊಡಗು, ಮಲೆನಾಡಿನಲ್ಲಿ ಬೆಳೆಯುತ್ತದೆ. ಕೆಂಪು ವರ್ಣಕ್ಕೆ ಸಮೀಪದ ಇದರ ಉಜ್ಜಲ ವರ್ಣಕ್ಕೆ ಕಿತ್ತಳೆ ಬಣ್ಣ ಎಂದೆ ಹೆಸರು. ಸಿಹಿಯಾದ ಹಣ್ನುಗಳನ್ನು ನೀಡುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಸಿಟ್ರಸ್ ರೆಟಿಕ್ಯುಲೇಟ.

ಕುಂಬಳಕಾಯಿ (ಗಿಡ)ಬಳ್ಳಿ : ಇದೊಂದು ದೊಡ್ಡ ಬಳ್ಳಿ. ಕೂದಲಿರುವ ಅಗಲವಾದ ಎಲೆಯುಳ್ಳ, ಹಳದಿ ಹೂವು ಬಿಡುವ ಸೊಂಪಾಗಿ ಹಬ್ಬುವ ಬಳ್ಳಿ. ಹೆಣ್ಣು ಮತ್ತು ಗಂಡು ಹೂವುಗಳು ಪ್ರತ್ಯೇಕವಾಗಿರುತ್ತವೆ.ಮೃದು ತಿರುಳಿನ, ಗುಂಡಾಕೃತಿಯ ದೊಡ್ಡಹಣ್ಣುಗಳನ್ನು ಬಿಡುತ್ತದೆ. ತರಕರಿಯಾಗಿ ಜನಪ್ರಿಯ.ಸಸ್ಯಶಾಸ್ತ್ರೀಯ ಹೆಸರು: ಕುಕರ‍್ ಬಿಟ ಮೊಸ್ಚಾಟ.

ಕೆಸು(ಕಸ) : ಇದೊಂದು ಗೆಡ್ಡೆ, ಕಾಂಡವಿಲ್ಲ.ಗಡ್ಡೆ ಆರು ಇಂಚು ವ್ಯಾಸದವರೆಗೂ ಬೆಳೆಯುತ್ತದೆ. ಕೆಸುವಿನ ಸೊಪ್ಪು ಒಂದು ಬಗೆಯ ಸಾರಿನ ಸೊಪ್ಪು. ಎಲೆಗಳು ಆನೆಯ ಕಿವಿಯಂತೆ ಇರುತ್ತವೆ. ಬೇಯಿಸದೆ ತಿಂದರೆ ನಾಲಿಗೆ, ತುಟಿ ಕೆರೆತ ಉಂಟಾಗುತ್ತದೆ. ಇದರಿಂದ ಪತ್ರೊಡೆ ಎಂಬ ತಿಂಡಿ ಮಾಡುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಕೊಲೊಕೇಸಿಯಾ ಆಂಟಿಕೋರಂ.

ಕೆಂಪುದಾಸವಾಳ : ಅಲಂಕಾರಿಕ ಗಿಡ. ಉಜ್ಜಲವರ್ಣದ ಕೆಂಪು ಹೂಗಳನ್ನು ಬಿಡುತ್ತದೆ. ಮನೆಯ ಹಿತ್ತಲು, ಮುಂಭಾಗದ ಅಂಗಳ, ಕೈತೋಟದ ಬೇಲಿಗಳಲ್ಲಿ ಬೆಳೆಸುತ್ತಾರೆ. ಕೆಂಪು ಹೂವಲ್ಲದೆ ಬಿಳಿ ಬಣ್ಣದ ಹೂ ಬಿಡುವ ತಳಿಯೂ ಉಂಟು. ಸಸ್ಯಶಾಸ್ತ್ರೀಯ ಹೆಸರು: ಹೈಬಿಸ್ಯಾಸ್ ರೋಸಾಸೈನೆನ್ಸಿಸ್.

ಕೇದಗೆ : ಕೆಳಕಾಂಡದಿಂದ ಬೇರುಬಿಟ್ಟು  ಬಿಳಿಲು ಬೇರುಬಿಟ್ಟು ಮರಗಾಲಿನಂತೆ ಊರಿನಿಲ್ಲುವ ಕೇದಗೆ ಮರಗಳು ಹೊಳೆ, ಹಳ್ಳದ ಗುಂಟ ಬೆಳೆಯುತ್ತವೆ. ಎಲೆಗಳಿಗೆ ತೊಟ್ಟಿಲ್ಲ. ಗರಿಯ ಅಗ್ರ, ಅಂಚು ಮತ್ತು ನಡುಭಾಗದಲ್ಲಿ ಮುಳ್ಳಿರುತ್ತವೆ. ಕೇದಗೆಯ ಗಂಡುಹೂವಿನ ಬಣ್ಣ ಬಿಳಿ ಮತ್ತು ಅತಿ ಪರಿಮಳ ಯುಕ್ತವಾದದ್ದುಹಾಗಾಗಿ ನಾಗರ ಹಾವುಗಳು ವಾಸಿಸುತ್ತವೆಂಬ ಪ್ರತೀತಿ. ಕೇದಗೆ ಹೂವು ಹೆಣ್ಣು ಮಕ್ಕಳಿಗೆ ಅಚ್ಚು ಮೆಚ್ಚು. ಹೂವಿನಿಂದ ಪರಿಮಳದ ಎಣ್ಣೆ ತೆಗೆಯುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಪಂಡಾನಸ್ ಟೆಕ್ಟೊರಿಸ್.

ಕೊತ್ತಂಬರಿ ಸೊಪ್ಪು : ಕೈತೊಟ ಮತ್ತು ಹಿತ್ತಲಿನಲ್ಲಿ  ಬೆಳೆಸುತ್ತಾರೆ. ವಾರ್ಷಿಕ ಸಸ್ಯ. ಅದರ ಎಲೆ ಮತ್ತು ಬೀಜಗಳು ಸುವಾಸನೆಯುಕ್ತವಾಗಿರುವುದರಿಂದ ಸಾಂಬಾರು ಪದಾರ್ಥವಾಗಿ ಬಳಕೆಯಾಗುತ್ತದೆ. ತುದಿಯಲ್ಲಿ ಛಿದ್ರಗೊಂಡ ಎಲೆಗಳು ಹಾಗೂ ಛತ್ರಿಯಾಕಾರದ ಪುಷ್ಪಮಂಜರಿಯಿಂದ ಸುಲಭವಾಗಿ ಗುರುತಿಸಬಹುದು. ಸಸ್ಯಶಾಸ್ತ್ರೀಯ ಹೆಸರು: ಕೊರಿಯಾಂಡ್ರಮ್ ಸಟೈವಮ್.

ಖರ್ಜೂರದಮರ (ಉತ್ತತ್ತಿಮರ) : ಅರಬಿಸ್ತಾನದಿಂದ ಬಂದ ಮರ. ನಮ್ಮ ದೇಶದಲ್ಲಿ ಅಲ್ಲಲ್ಲಿ ಬೆಳೆಸಿದ್ದಾರೆ. ಇದು ಸಹ ತಾಳೆವರ್ಗ ಸೇರಿದ್ದು. ಶುಷ್ಕ ವಾತಾವರಣದಲ್ಲಿ ಬೆಳೆಯುತ್ತದೆ. ಸುಮಾರು ನೂರು ಅಡಿ ಎತ್ತರಕ್ಕೆ ಬೆಳೆಯಬಲ್ಲದು. ಮರದ ತುದಿಯಲ್ಲಿ  ಗರಿಗಳು ಮತ್ತು ಗೊನೆಗಳನ್ನು ಬಿಡುತ್ತವೆ. ಹಣ್ಣು ಖರ್ಜೂ. ಒಣಗಿಸಿದ ಹಣ್ಣು ಉತ್ತುತ್ತೆ. ಒಣ ಹಣ್ಣಾಗಿ ಪ್ರಸಿದ್ಧ. ಸಸ್ಯಶಾಸ್ತ್ರೀಯ ಹೆಸರು: ಫೀನಿಕ್ಸ್ ಡಾಕ್ಟೈಲಿಫೆರ.

ಗುಲಾಬಿ : ಸುಂದರವಾದ ಹೂವನ್ನು ಬಿಡುವ ಗುಲಾಬಿ ಸಣ್ಣ ಪೊದೆಯಾಗಿ ಬೆಳೆಯುತ್ತದೆ. ಗಿಡದಲ್ಲಿ ಮುಳ್ಳುಗಳಿರುತ್ತವೆ. ವಿವಿಧ ವರ್ಣದ, ಗಾತ್ರದ ಹೂಗಳನ್ನು ಬಿಡುತ್ತದೆ. ಮನೆಯ ಅಂಗಳದಲ್ಲಿ, ತೋಟದಲ್ಲಿ ಅಲಂಕಾರದ ಹೂವಿನ ಸಲುವಾಗಿ ಮತ್ತು ಅತ್ತರಿಗಾಗಿ ಹಾಗೂ ಗುಲ್ಕನ್ ತಯಾರಿಕೆಗಾಗಿ ಬೆಳೆಸುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ರೋಸಾ ಸಂಕುಲಗಳು.

ತಿಂಗಳವರೆ ಕಾಯಿಗಿಡ : ಮನೆಯ ಹಿತ್ತಲಿನಲ್ಲಿ ಬೆಳೆಸುವ ತರಕಾರಿಗಿಡ. ಹಲಸಂದೆ, ಅವರೆ ಜಾತಿಗೆ ಸೇರಿದ್ದು.

ತುಳಸಿಗಿಡ : ಇದನ್ನು ಪವಿತ್ರಗಿಡವೆಂದು ಭಾವಿಸಿ ಅಂಗಳದಲ್ಲಿ, ಕುಂಡವಿಟ್ಟು ಇಲ್ಲವೆ ತುಳಸಿಪೀಠ ಕಟ್ಟಿ ಬೆಳೆಸುತ್ತಾರೆ. ಒಂದರಿಂದ ಎರಡು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು, ಕಾಯಿ, ಬೀಜಗಳು ಸುವಾಸನೆ ಬೀರುತ್ತವೆ. ಎಲೆಗಳನ್ನು ಎಣ್ಣೆ ತೆಗೆಯಲು ಹಾಗೂ ಔಷಧಿಗಾಗಿ ಬೆಳೆಸುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಆಸುಮಮ್ ಸ್ಯಾಂಕ್ಟಮ್.

ತೆಂಗು : ಮನೆಯ ಮುಂದೆ, ಹಿತ್ತಲು ಮತ್ತು ತೋಟದಲ್ಲಿ ಬೆಳೆಸುವ ಮರ. ನಲವತ್ತರಿಂದ ಎಂಬತ್ತು ಅಡಿ ಎತ್ತರಕ್ಕೆ ಬೆಳೆಯತ್ತದೆ. ತುದಿಯಲ್ಲಿ ಛತ್ರಿಯಂತೆ ಗರಿಗಳು ಬಿಚ್ಚಿಕೊಳ್ಳುತ್ತವೆ. ತೆಂಗಿನಕಾಯಿ ಶುಭ ಸಮಾರಂಭ, ಎಣ್ಣೆ ತಯಾರಿಕೆ ಮತ್ತು ಅಡುಗೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಮಲೆನಾಡಿನಲ್ಲಿ ಅಡಿಕೆ ತೋಟಗಳಂತೆ ತೆಂಗಿನ ತೋಟಗಳು ಇರುತ್ತವೆ. ಇದರ ಮರಮುಟ್ಟು, ಗರಿ, ಕಾಯಿಯ ನಾರು,ಚಿಪ್ಪು ಮತ್ತು ಇತರೆ ಭಾಗಗಳೆಲ್ಲವೂ ಬಳಕೆಗೆ ಬರುವುದರಿಂದ ಕಲ್ಪವೃಕ್ಷವೆನ್ನುತ್ತಾರೆ. ಪುಷ್ಪಮಂಜರಿಯ ರಸದಿಂದ ಸೇಂದಿ ಇಳಿಸುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಕೋಕೋಸ್ ನ್ಯೂಸಿಫೆರಾ.

ಧೂಪದಮರ : ಮಲೆನಾಡಿನ ಕಾಡುಗಳಲ್ಲಿ ಸುಮಾರು ೧೫೦ ಅಡಿಗೂ ಎತ್ತ ಬೆಳೆಯುವ ದೊಡ್ಡ ಮರ. ಎಲೆಯೂದುರಿಸುವುದಿಲ್ಲ. ಯಾವಾಗಲೂ ಹಸುರಾಗಿರುತ್ತದೆ. ಅದರ ಎಳೆಯ ರೆಂಬೆಗಳು ಕಂದುಬಣ್ಣದಿಂದ ಕೂಡಿದ್ದು ಕೂದಲುಗಳಿರುತ್ತದೆ. ರೆಕ್ಕೆ ಇರುವ ಬೀಜಗಳನ್ನು ಇಡುತ್ತಾರೆ. ಮರದಿಂದ ರಾಳ ಪಡೆಯುತ್ತಾರೆ. ಕಾಂಡದಿಂದ ದೋಣಿ ತಯಾರಿಸುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಡಿಪ್ಟಿರೋಕಾರ್ಪಸ್ ಬೌರ್ಡಿಲೋನಿ.

ನಂದಿಮರ : ಎಲೆಯುದುರಿಸುವ ಕಾಡುಗಳಲ್ಲಿ ಬೃಹತ್ತಾಗಿ ಬೆಳೆಯುವ, ದೊಡ್ಡ ಕಾಂಡದ, ಅಮೂಲ್ಯವಾದ ಚೌಬೀನೆ ನೀಡುವ ಮರ. ಐವತ್ತರಿಂದ ನೂರು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಬೀಜಗಳಿಗೆ ರೆಕ್ಕೆಯಿರುತ್ತವೆ. ಸಸ್ಯಶಾಸ್ತ್ರೀಯ ಹೆಸರು: ಲೆಜರ್‌ಸ್ಟ್ರೀಮಿಯ ಲ್ಯಾನ್ಸಿಯೋಲೇಟ.

ನಿಂಬೆ : ಸಿಟ್ರಸ್ ಜಾತಿಗೆ ಸೇರಿದ ನಿಂಬೆ ಗಿಡ  ಹಳದಿ ಬಣ್ನದ ಸುವಾಸನಾಯುಕ್ತ. ಹುಳಿ ರಸದ ಹಣ್ಣುಗಳನ್ನು ನೀಡುತ್ತದೆ. ಈ ಜಾತಿಯ ಸಸ್ಯಗಳ ಎಲೆಗಲ ಅಡಿಯಲ್ಲಿ ರೆಕ್ಕೆಯಿರುತ್ತದೆ. ಪುದೆಯಾದ ಗಿಡದಲ್ಲಿ ಮುಳ್ಳುಗಳಿರುತ್ತವೆ. ತೋಟದಲ್ಲಿ, ಹಿತ್ತಲಿನಲ್ಲಿ ಹಣ್ಣಿಗಾಗಿ ಬೆಳೆಸುತ್ತರೆ. ಹಣ್ಣು ಅಡುಗೆ ಮನೆಯಲ್ಲಿ ಬಹುಪಯೋಗಿ. ಸಸ್ಯಶಾಸ್ತ್ರೀಯ ಹೆಸರು: ಸಿಟ್ರಸ್ ಆರಂಟಿಪೋಲಿಯಾ.

ನೂಲೆಗೆಣಸು : ಇದೊಂದು ಬಳ್ಳಿ. ಮಲೆನಾಡಿನ ಕಾಡುಗಳಲ್ಲಿ ನೂಲೆಗೆಣಸಿನ ಮುಳ್ಳು ಮುಳ್ಳು ಬಳ್ಳಿಗಳುಇತರೆ ಗಿಡ, ಮರ. ಪೊದೆಗಳಿಗೆ ಹಬ್ಬಿದ್ದು ಬೇರು ಗೆಣಸಾಗಿ ಪರಿವರ್ತಿತವಾಗಿರುತ್ತದೆ. ಗೆಣಸು ಭೂಮಿಯಲ್ಲಿ ಅರ್ಧ ಅಡಿಯಷ್ಟು ದಪ್ಪವಾಗಿ ನಾಲ್ಕೈದು ಅಡಿ ಉದ್ದವಾಗಿರುತ್ತದೆ. ಅದನ್ನು ಬೇಯಿಸಿ ಸಿಪ್ಪೆ ಸುಲಿದರೆ. ಬೆಣ್ಣೆಯಂತೆ ಬೆಳ್ಳಗೆ ಮೃದುವಾಗಿರುತ್ತದೆ.

ನೇರಲೆಮರ : ಎಲೆಯುದುರಿದ ದೊಡ್ಡ ಮರ. ಜೌಗು ಪ್ರದೇಶ ಅಥವಾ ತಂಪಾದ ಪ್ರದೇಶಗಳಲ್ಲಿ ಸೊಂಪಾಗಿ ಬೆಳೆಯುತ್ತದೆ. ಹಣ್ಣುಗಳ ಹೊರ ಹೊದಿಕೆ ಕಡುನೀಲಿ ಅಥವಾ ಕಪ್ಪಾಗಿದ್ದು ತಿರುಳು ಮಾಂಸಲವಾಗಿರುತ್ತದೆ.ದೊಡ್ಡ ಬೀಜ. ಚೌಬೀನೆಯಾಗಿಯೂ ಮರ ಉಪಯೋಗ. ಸಸ್ಯಶಾಸ್ತ್ರೀಯ ಹೆಸರು: ಸಿಜಿಗಿಯಂ ಕ್ಯುಮಿನಿ.

ಪನ್ನೇರಲು ಮರ : ನೇರಳೆ ಜಾತಿಗೆ ಸೇರಿದ ಪನ್ನೇರಲು ನೇರಳೆಯಷ್ಟು ದೊಡ್ಡ ಮರವಲ್ಲ. ನಿಬಿಡವಲ್ಲದ ಸಣ್ಣ ರೆಂಬೆ ಕೊಂಬೆಗಳಿಂದ ಕೂಡಿದ ಪೊದೆ. ಇದನ್ನು ಮನೆಯಂಗಳದಲ್ಲಿ ಹಣ್ಣಿನ ಸಲುವಾಗಿ ಬೆಳೆಯುತ್ತಾರೆ. ಪನ್ನಿರಿನಂತೆ ಸುವಾಸನೆಯುಳ್ಳ ಹಸಿರು ಬಣ್ಣದ ಬಹುರುಚಿ. ಸಸ್ಯಶಾಸ್ತ್ರೀಯ ಹೆಸರು: ಸಿಜಿಗಿಯಂ ಜಾಂಬೋಸ್.

ಪೇರಲುಮರ : ಇದನ್ನು ಸೀಬೆ, ಚೇಪೆ,ಆಮರೂದ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದನ್ನು ಉತ್ತಮ ರುಚಿಯ ಸೀಬೆ ಹಣ್ಣಿಗಾಗಿ ಮನೆಯಲ್ಲೂ, ತೋಟದಲ್ಲೂ ಬೆಳೆಸುತ್ತಾರೆ. ಗಡುಸಾದ ಎಲೆ ನುಣುಪಾದ ಕಾಂಡ,ರೆಂಬೆ, ಕೊಂಬೆಗಳು ಅಷ್ಟೇನೂ ಎತ್ತರಕ್ಕೆ ಬೆಳೆಯದ ಮರ. ಅನೇಕ ತಳಿಗಳಿವೆ. ಸಸ್ಯಶಾಸ್ತ್ರೀಯ ಹೆಸರು: ಸಿಡಿಯಂ ಗ್ವಾಜವ.

ಬಗನಿಮರ : ಮಲೆನಾಡಿನಲ್ಲಿ ಸೇಂದಿ ಅಥವಾ ಕಳ್ಳು ನೀಡುವ ಪ್ರಮುಖ ಮರ. ಇದು ತಾಳೆಯ ಜಾತಿಗೆ ಸೇರಿದೆ. ಘಟ್ಟ ಪ್ರದೇಶದಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ನಲವತ್ತರಿಂದ ಐವತ್ತು ಅಡಿ ಎತ್ತರಕ್ಕೆ ನೆಟ್ಟಗೆ ಬೆಳೆಯುತ್ತದೆ. ತುದಿಯಲ್ಲಿ ಗರಿ ಹಾಗೂ ಪುಷ್ಪಮಂಜರಿಯಿರುತ್ತದೆ. ಗೊನೆಯಿಂದ ಸರದಂತೆ ಹೂ – ಕಾಯಿಗಳನ್ನು ಕಚ್ಚುತ್ತದೆ. ಗಿಡದ ಪುಷ್ಪ ಮಂಜರಿಯನ್ನು ಕತ್ತರಿಸಿ ಮಡಕಿ ಕಟ್ಟಿ ಕಳ್ಳು ಇಳಿಸುತ್ತಾರೆ. ಇದು ಹಳೆಪೈಕದವರ ವೃತ್ತಿ. ಗಿಡದ ರಸದಿಂದ ಬೆಲ್ಲವನ್ನೂ ತಯಾರಿಸ ಬಹುದು. ಮಲೆನಾಡಿನ ಸಾಂಸ್ಕೃತಿಕ ಬದುಕಿನಲ್ಲಿ ಬಗನಿಮರಕ್ಕೆ ಮಹತ್ವದ ಸ್ಥಾನವಿದೆ. ನೆಂಟರನ್ನು ಉಪಚರಿಸಲು ಕಳ್ಳು ನೀಡೆಕೆ ಸಾಮಾನ್ಯ ಸಂಪ್ರದಾಯ. ಗಂಡಸರು, ಹೆಂಗಸರು ಸೇವನೆ ಮಾಡುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಕ್ಯಾರಿಯೋಟ ಉರೆನ್ಸ್.

ಬಸರಿಮರ : ಆಲದ ಜತಿಗೆ ಸೇರಿದ ಬಸರಿ ರಸ್ತೆಯ ಪಕ್ಕದಲ್ಲಿ. ಕಾಡಿನಲ್ಲಿ ದೊಡ್ಡಮರವಾಗಿ ಬೆಳೆಯುತ್ತದೆ. ಕೆಂಪುಹಣ್ಣು ಬಿಡುತ್ತದೆ. ಕಾಂಡ ನಯವಾಗಿದ್ದು ಏರುವವರಿಗೆ ತೊಡಕಾಗುತ್ತದೆ. ಆಲದಂತೆ ಬಿಳಲುಗಳೂ ಇರುತ್ತವೆ. ಇದರ ಎಲೆಯನ್ನು ಜಾನುವಾರು ತಿನ್ನುತ್ತವೆ. ಮಲೆನಾಡಿನ ಕಾಡುಗಳಲ್ಲಿ. ರಸ್ತೆಯ ಪಕ್ಕದಲ್ಲಿ ವಿಶೇಷವಗಿ ಕಂಡುಬರುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಫೈಕಸ್ ಇನ್ ಫೆಕ್ಟೂರಿಯ.

ಬಿದಿರು : ಶುಷ್ಕ ಹಾಗೂ ತೇವಾಂಶಭರಿತ ಕಾಡುಗಳು, ಹಳ್ಳ ಝರಿಗಳ ಪಕ್ಕ ಸೊಂಪಾಗಿ ಬೆಳೆಯುವ ಬಿದಿರು ಕಾಡಿನ ಸಸ್ಯಾಹಾರಿಗಳಿಗೆ ಉಪಯುಕ್ತ ಆಹಾರ ಒದಗಿಸುತ್ತದೆ. ಹುಲ್ಲಿನಕುಟುಂಬಕ್ಕೆ ಸೇರಿದ ಬಿದಿರು, ಕಾಡುಗಳಲ್ಲಿ ವ್ಯಾಪಕವಾಗಿ ಬೆಳೆದು ಅಬೇಧ್ಯ ಕೋಟೆ ನಿರ್ಮಿಸುತ್ತದೆ. ಹಿಂದೆ ಇದನ್ನು ‘ಕಳೆ’ ಎಂದೇ  ತಿಳಿಯುತ್ತಿದ್ದರು. ನಲವತ್ತು ವರ್ಷಕ್ಕೊಮ್ಮೆ ಬೀಜಬಿಟ್ಟು ಸಾಯುತ್ತದೆ. ಬಿದಿರು ಬೀಜ ಬಿಡುವುದಕ್ಕೂ ಕ್ಷಾಮಕ್ಕೂ ಸಂಬಂಧ ಕಲ್ಪಿಸುತ್ತಾರೆ. ರೈತರಿಗೆ ಬಿದಿರು ಮರಮುಟ್ಟಾಗಿ, ಕೃಷಿ ಉಪಕರಣಗಳಿಗೆ ಕಚ್ಚಾಮಾಲಾಗಿ ಅನೇಕ ಬಗೆಯ ಉಪಯೋಗಕ್ಕೆ ಬರುತ್ತದೆ. ಕಾಗದ, ರೇಯಾನ್ ತಯಾರಿಕೆಯಲ್ಲೂಬಿದಿರು ಬಳಕೆಯಾಗುತ್ತದೆ. ಬಿದಿರಿನಲ್ಲಿ ಹೆಬ್ಬಿದಿರು, ಕಿಬ್ಬಿದಿರು, ಮುಳ್ಳುಬಿದಿರು, ಅಂಡಬಿದಿರು ಎಂಬ ಮುಂತಾದ ಸ್ಥಳೀಯ ಸಂಕುಲಗಳಿವೆ. ಮುಖ್ಯವಾಗಿ ಸಂಕುಲಗಳು ಬ್ಯಾಂಬೂಸ ಅರುಂಡಿನೇಸಿಯ (ಹೆಬ್ಬಿದಿರು): ಡೆಂಡ್ರೋಕೆಲಮಸ್ ಸ್ಟ್ರಿಕ್ಟಸ್ (ಕಿಬ್ಬಿದಿರು)

ಬೆತ್ತ : ಬಹುಪಯೋಗಿ ಬೆತ್ತ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ. ಇದು ತೆಂಗಿನ ಜಾತಿಗೆ ಸೇರಿದ್ದರೂ ಕಾಂಡವು ಸಣ್ಣದಾಗಿರುವುದರಿಂದ ಹಬ್ಬುವ ಲಕ್ಷಣ ಪಡೆದಿದೆ. ಮರ ಪೊದೆಗಳ ಸಂದಿನಿಂದ ತಲೆಯೆತ್ತಿ ನಿಲ್ಲುತ್ತದೆ. ಮೈತುಂಬಾ ಮುಳ್ಳುಗಳಿರುವುದರಿಂದ ಜಾನುವಾರುಗಳ ಬಾಯಿಗೆ ಆಹಾರವಾಗದು. ಬೆತ್ತದಲ್ಲಿ ಹಲವಾರು ಸಂಕುಲಗಳಿವೆ. ಪಶ್ಚಿಮಘಟ್ಟಗಳಲ್ಲಿ ನಾಗಬೆತ್ತ, ನೀರುಬೆತ್ತ, ಹಾಲುಬೆತ್ತ, ಹಂದಿಬೆತ್ತ, ನಾಯಿರಿಬೆತ್ತ ಮುಂತಾದ ಹದಿಮೂರಕ್ಕೂ ಹೆಚ್ಚು ಸಂಕುಲಗಳಿವೆ.ಇವೆಲ್ಲವೂ ಕೆಲಾಮಸ್ ಎಂಬ ಜಾತಿಗೆ ಸೇರಿವೆ. ಬೆತ್ತದಿಂದ ಪೀಠೋಪಕರಣ ತಯಾರಿಸುತ್ತಾರೆ. ಮಕ್ಕಳಿಗೆ ಹೆದರಿಸಲು ಆಳುಗಳಿಗೆ ಹೊಡೆಯಲು ಬೆತ್ತದ ದೊಣ್ಣೆಯನ್ನು ಬಳಸುವುದುಂಟು.

ಬೆಮ್ಮಾರಲ : ಒಂದು ಜಾತಿಯ ಮುಳ್ಳಿನ ಗಿಡ. ಬಿಳಿಯ ಹಣ್ಣು ಬಿಡುತ್ತದೆ. ಹಣ್ಣುಗಳು ಬಹಳ ರುಚಿಯಾಗಿರುತ್ತವೆ. ಮನುಷ್ಯರೂ ಮೊದಲೂಗೊಂಡಂತೆ ಪ್ರಾಣಿಪಕ್ಷಿಗಳು ಈ ಹಣ್ಣುಗಳನ್ನು ತಿನ್ನುತ್ತವೆ.

ಭತ್ತ : ಹುಲ್ಲಿನ ಜಾತಿಗೆ ಸೇರಿದ ಭತ್ತ ಪ್ರಮುಖ ಆಹಾರ ಬೆಳೆ. ಗದ್ದೆಗಳಲ್ಲಿ ಬೆಳಯುತ್ತದೆ. ಅಧಿಕ ನೀರನ್ನು ಬೇಡುತ್ತದೆ. ಒಂದೂವರೆಯಿಂದ ಮೂರು ಅಡಿಯವರೆಗೆ ಬೆಳೆಯುವ ವಿವಿಧ ತಳಿಗಳಿವೆ. ಮೂರರಿಂದ ನಾಲ್ಕು ತಿಂಗಳೊಳಗೆ ಕಟಾವಿಗೆ ಬರುತ್ತದೆ. ಹಸುರು ಕಾಯಿಗಳು ಕ್ರಮೇಣ ಕಂದು, ಬಂಗಾರ ವರ್ಣದ ತೆನೆಗಳಾಗಿ ರೂಪುಗೊಳ್ಳುತ್ತವೆ. ಭತ್ತದ ಹುಲ್ಲನ್ನು ಬಣವೆಯಾಗಿ ಮನೆಯ ಗಿತ್ತಲಿನಲ್ಲಿ ಶೇಖರಿಸುತ್ತಾರೆ. ಬೆಂಕಿಬಿದ್ದರೆ ಆರಿಸುವುದು ಕಷ್ಟ. ಸಸ್ಯಶಾಸ್ತ್ರೀಯ ಹೆಸರು: ಒರೈಜಾ ಸಟೈವ.

ಮಂಗನಬಳ್ಳಿ : ವೈಟೇಸಿ ಕುಟುಂಬಕ್ಕೆ ಸೇರಿದ ಸಸ್ಯಗಳೆಲ್ಲವೂ ಬಳ್ಳಿಗಳು. ಮಂಗನಬಳ್ಳಿ ಅಡರುವ ಬಳ್ಳಿ. ಕುಡಿ ಎಲೆಯು ದೊಡ್ಡ ಗಿಡಗಳ ಕಾಂಡ, ಎಲೆತೊಟ್ಟಿಗೆ ಸುತ್ತಿಕೊಂಡು ಬಳ್ಳಿ ಅಡರಿ ಏರುತ್ತದೆ. ಇದರ ಕಾಂಡ ಮಾಂಸಲ ಮತ್ತು ಗಂಟು ಗಂಟು. ಸಸ್ಯಶಾಸ್ತ್ರೀಯ ಹೆಸರು: ವೈಟಿಸ್ ಕ್ವಾಡ್ರಾಂಗ್ಯುಲಾರಿಸ್. ಬಳ್ಳಿ ನಾಲ್ಕುಮೂಲೆಯಲ್ಲೂ ಚೌಕಾಕೃತಿ ಪಡೆದಿರುವುದರಿಂದ ಆ ಹೆಸರು.

ಮಾವಿನಮರ : ಹಣ್ಣುಗಳ ರಾಜನೆನಿಸಿದ ಮಾವು ಭಾರತದ ಮೂಲದ್ದು. ಅನೇಕ ತಳಿಗಳಿವೆ. ಸುಮಾರು ಒಂದು ಸಾವಿರ ಒಳಪ್ರಭೇದಗಳವೆ. ಹಾಗಾಗಿ ಭಾರತದ ಎಲ್ಲಾ ಭೌಗೋಳಿಕ ಪ್ರದೇಶದಲ್ಲಿ ಒಂದಲ್ಲ ಒಂದು ಪ್ರಭೇದ ಕಾಣಸಿಗುತ್ತದೆ. ತೋರಣಕ್ಕೆ ಮಾವಿನ ಎಲೆ; ಪದರ ಹಲಗೆ, ಪ್ಯಾಕಿಂಗ್ ಹಲಗೆಗೆ ಮಾವಿನ ಚೌಬೀನೆ; ಕಾಯಿಗಳು ಉಪ್ಪಿನ ಕಾಯಿಗೆ ಹಾಗೂ ರಸ, ಸ್ಕ್ವಾಷ್ ತಯಾರಿಕೆಗೆ ಹಣ್ಣು ಬಳಕೆಯಾಗುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಮ್ಯಾನ್ನಿಫೆರ ಇಂಡಿಕಾ.

ಮುತ್ತುಗದ ಮರ : ಅಗಲ ಎಲೆಯ ಅಂಕುಡೊಂಕಿನ ಕಾಂಡದ ಸಾಧಾರಣ ಎತ್ತರದ ಮರ. ಇದರ ಎಲೆಗಳನ್ನು ಪತ್ರಾವಳಿ ಮಾಡಲು ಬಳಸುತ್ತಾರೆ. ಮುತ್ತುಗ ತನ್ನ ಉಜ್ಜಲ ವರ್ಣದ ಹೂಗಳಿಗೆ ಪ್ರಸಿದ್ಧಿ. ಬೇಸಿಗೆಯ ಕಾಲಕ್ಕೆ ಎಲೆಯುದುರಿಸಿ ನಿಲ್ಲುವ ಮೈತುಂಬ ಎದ್ದು ಕಾಣುವ ಕೆಂಪು ಹೂಗಳನ್ನು ಮುಡಿದು ನಿಲ್ಲುತ್ತದೆ. ಬೇಸಿಗೆಯ ಝಳದಲ್ಲಿ ಎಲೆಯುದುರುಸಿ ಬೋಳಾದ ಕಡಿನಲ್ಲಿ ಉರಿಯುವ ಜ್ಯೋತಿಯಂತೆ ದೂರಕ್ಕೆ ಎದ್ದು ಕಾಣುತ್ತದೆ. ಹಾಗಾಗಿ ಇದಕ್ಕೆ ‘ಫ್ಲೇಮ್ ಆಫ್ ದಿ ಫಾರೆಸ್ಟ್’(ಅರಣ್ಯದ ಜ್ವಾಲೆ) ಎಂಬ ಹೆಸರಿದೆ. ಸಸ್ಯಶಾಸ್ತ್ರೀಯ ಹೆಸರು: ಬ್ಯುಟಿಯಾ ಫ್ರಾಂಡೋಸ.

ಮುಳುಗಾಯಿ : ಜನಪ್ರಿಯ ತರಕಾರಿ. ಇದನ್ನು ಬಿಡುವ ಸಸ್ಯ ಒಂದು ವಾರ್ಷಿಕ ಗಿಡ. ಇದರಲ್ಲಿ ಅನೇಕ ತಳಿಗಳಿವೆ. ಮುಳುಗಾಯಿಯಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರುಮಾಡುತ್ತಾರೆ. ಕೃತಿಯ ಕಾಲಕ್ಕೂ ಇದು ಜನಪ್ರಿಯ (ಬದನೆಕಾಯಿ) ತರಕಾರಿಯಾಗಿರುವುದು ತಿಳಿದುಬರುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಸೊಲಾನಮ್ ಮೆಲಾಂಜಿನ.

ಮೇಣಸಿನಗಿಡ : ಸುಮಾರು ಎರಡು ಅಡಿಗಿಂತಲು ಹೆಚ್ಚು ಎತ್ತರಕ್ಕೆ ಬೆಳೆವ ಜನಪ್ರಿಯ ಸಾಂಬಾರ ಜಿನಿಸನ್ನು ನೀಡುವ ಗಿಡ. ಮಲ್ಲಿಗೆಯಂತೆ ಬಿಳಿಹೂ ಮುಡಿಯುತ್ತದೆ. ಹಸಿರುಕಾಯಿಗಳು ಹಣ್ಣಾದಾಗ ಕೆಂಪುವರ್ಣಕ್ಕೆ ತಿರುಗುತ್ತದೆ. ಇವು ಖಾರದ ಕಚ್ಚಾಪದಾರ್ಥಗಳು. ಹಿತ್ತಲಿನಲ್ಲಿ ಮತ್ತು ತೋಟದಲ್ಲಿ ಬೆಳೆಯುತ್ತಾರೆ. ಅನೇಕ ತಳಿಗಳಿವೆ. ಸಸ್ಯಶಾಸ್ತ್ರೀಯ ಹೆಸರು: ಕ್ಯಾಪ್ಸಿಕಮ್ ಆನಮ್.

ಲಾಂಟಾನ : ಇದು ಹೊರದೇಶದಿಂದ ಬಂದು ಕಳೆಯಾಗಿ ಹಬ್ಬುತ್ತಿರುವ ಸಸ್ಯ. ರೋಜವಾರ ಅಂಟ್ರೋಣಿ, ಹೇಸಿಗೆ ಕಂಟಿ ಇತ್ಯಾದಿ ಹೆಸರುಗಳಿವೆ. ಕೆಂಪು ಇಲ್ಲವೆ ಬಿಳಿ ಹೂಗಳನ್ನು ಬಿಡುತ್ತದೆ. ಎಳೆಗಳಿಗೆ ವಾಸನೆಯಿದೆ. ಕಪ್ಪುಬಣ್ಣದ ಉಣ್ಣೆಯಂಥ ಮಾಂಸಲ ಹಣ್ಣು ಬಿಡುತ್ತದೆ. ಸೊಂಪಾಗಿ ಪೊದೆಯಾಗುವ ಇದು ವ್ಯಾಪಕವಾಗಿ ವಂಶಾಭಿವೃದ್ಧಿಯಾಗುತ್ತದೆ. ಸಸ್ಯಶಾಸ್ರೀಯ ಹೆಸರು:  ಲಂಟಾನ ಕ್ಯಾಮರ.

ವಾಟೆ : ಹುಲ್ಲು ಕುಟುಂಬಕ್ಕೆ ಸೇರಿದ ವಾಟೆ ಗುಂಪುಗುಂಪಾಗಿ ಹತ್ತರಿಂದ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಇದೊಂದು ಜೊಂಡು. ಪ್ರತಿವರ್ಷ ಹೂ ಬಿಡುತ್ತದೆ. ಆದರೆ ಸಾಯುವುದಿಲ್ಲ. ಬುಟ್ಟಿ ಮತ್ತು ಚಾಪೆ ಮಾಡಲು ಇದರ ಕಾಂಡವನ್ನು ಬಳಸುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಓಕ್ಲಾಂಡ ರೀಡೈ.

ವೀಳ್ಯದೆಲೆ : ಬಹುವಾರ್ಷಿಕ ಬಳ್ಳಿ. ಅಡಕೆ ಮರಕ್ಕೆ ಹಬ್ಬಿಸುತ್ತಾರೆ. ಗಿಣ್ಣುಗಳಿರುವ ಬೇರುಗಳಿಂದಲೇ ಅದು ಅಡರಿ ಏರುತ್ತದೆ. ಅನೇಕ ತಳಿಗಳಿವೆ. ಹೃದಯಾಕಾರದ ಇದರ ಮೃದು ಎಲೆಗಳನ್ನು ಅಡಕೆ, ಸುಣ್ಣ ಮತ್ತು ಪರಿಮಳದ ವಸ್ತುಗಳೊಂದಿಗೆ ಮೆಲ್ಲುತ್ತಾರೆ. ಮಲೆನಾಡಿನಲ್ಲಿ‘ಬಾಯಿಗೆ ಕೊಡುವ’ ವಸ್ತುವಿನಲ್ಲಿ ಇದು ಅತ್ಯಗತ್ಯ. ಶುಭಸಂದರ್ಭದಲ್ಲಿ ಬಳಕೆ ಯಾಗುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಪೈಪರ್‌ಬೀಟಲ್.

ಸೌತೆ : ಹಬ್ಬುವ ಬಳ್ಳಿ. ಅಗಲವಾದ ಎಲೆಗಳು, ಹಳದಿ ಹೂಗಳನ್ನು ಬಿಡುತ್ತದೆ. ಹಿತ್ತಲಿನಲ್ಲಿ, ಕೈತೋಟದಲ್ಲಿ ಬೆಳೆಸಿ ಬೇಲಿಗೆ ಹಬ್ಬಿಸುತ್ತಾರೆ. ಸೋರೆಕಾಯಿಗಿಂತ ಚಿಕ್ಕದಾದ ಕಾಯಿಗಳನ್ನು ಬಿಡುತ್ತದೆ. ಹಸಿ ತರಕಾರಿಯಾಗಿ ಜನಪ್ರಿಯ. ಸಸ್ಯಶಾಸ್ತ್ರೀಯ ಹೆಸರು: ಕುಕುಮಿಸ್ ಮೆಲೊ.

ಹರುವೆಸೊಪ್ಪು :   ಇದನ್ನು ಚಿಕ್ಕರಿವೆ ಎಂದೂ ಕರೆಯೂತ್ತಾರೆ. ಸೊಪ್ಪಿನ ಮಡಿಗಳಲ್ಲಿ ತರಕಾರಿಗಾಗಿ ಬೆಳೆಯುತ್ತಾರೆ. ಎರಡು ಅಂಗುದಿಂದ ಎರಡು ಅಡಿಯವರೆಗೂ ಬೆಳೆಯಬಹುಬು. ವರ್ಷಕ್ಕೆ ಒಂದೇ ಬೆಳೆ. ಸಸ್ಯಶಾಸ್ತ್ರೀಯ ಹೆಸರು:ಅಮರಾಂತಸ್ ಗ್ಯಾಂಜೆಟಿಕಸ್.

ಹಲಸಿನಮರ : ಛತ್ರಿಯಾಕಾರದಲ್ಲಿ ಬೆಳೆಯುವ ದಪ್ಪ ಕೊಂಬೆಗಳುಳ್ಳ ದೊಡ್ಡ ಮರ. ದುಂಡಾಕಾರದ ಎಲೆಗಳು.ಎಲೆಗಳನ್ನು ಕಿತ್ತಾಗ, ತೊಗಟೆಯನ್ನು ಎಡೆದಾಗ ಕೆನೆ ಬಣ್ಣದ ಹಾಲು ಸೋರುತ್ತದೆ. ಮೈಮೇಲೆ ಮುಳ್ಳಿರುವ ಆಯತಾಕಾರ ಅಥವಾ ದುಂಡನೆಯ ಸಂಯುಕ್ತ ಫಲ ಬಿಡುತ್ತದೆ. ಒಳಗಡೆ ಹಣ್ಣಾದಾಗ  ಹಳದಿ ಬಣ್ಣದ ತೊಳೆಗಳಿರುತ್ತವೆ. ಒಂದೇ ಮರದಲ್ಲಿ ಗಂಡು – ಹೆಣ್ಣು ಹೂಗಳಿರುತ್ತವೆ. ಹಳದಿ ಬಣ್ಣದ ಉತ್ತಮ ಛೌಬೀನೆ ದೊರೆಯುತ್ತದೆ. ಕಾಡಿನಲ್ಲಿಯೂ ಬೆಳೆಯುತ್ತದೆ. ರೈತರು ತಮ್ಮ ಹೊಲಗಳಲ್ಲಿಯೂ ಬೆಳೆಸುತ್ತಾರೆ. ಸಸ್ಯಶಾಸ್ತ್ರೀಯ ಹೆಸರು: ಅರ್ಟೊಕಾರ್ಪಸ್ ಇಂಟಿಗ್ರಿ ಪೋಲಿಯಾ.

ಹಾಲವಾಣದಮರ : ಸುಮಾರು ೬೦ ಅಡಿ ಎತ್ತರಕ್ಕೆ ಬಡಳೆಯಬಲ್ಲ ಮಿದು ಕಟ್ಟಿಗೆಯ ಮರ. ಮೈತುಂಬ ಮುಳ್ಳುಗಳು. ಬೇಸಗೆಯಲ್ಲಿ ಉಜ್ಜಲ ಕಡುಗೆಂಪು ವರ್ಣದ ಹೂಗಳನ್ನು ಮುಡಿದು ನಿಲ್ಲತ್ತದೆ. ಮಕರಂದಕ್ಕಾಗಿ ಹಕ್ಕಿಗಳು ಹೂಗಳಿಗೆ ಭೇಟಿ ನೀಡುತ್ತವೆ. ಕಟ್ಟಿಗೆಯನ್ನು ಆಟದ ಸಾಮಾನು ಮತ್ತು ಕಾಗದಕ್ಕೆ ಬಳಸುತ್ತಾರೆ. ಬಹು ವೇಗವಾಗಿ ಸಹ ಬೆಳೆಯುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಎರಿತ್ರಿನಾ ಇಂಡಿಕಾ.

ಹುಣಸೆಮರ : ಛತ್ರಿಯಾಕಾರದಲ್ಲಿ ಬೃಹತ್ತಾಗಿ ಬೆಳೆವ ಹುಣಸೆಮರ ಹುಳಿಮಿಶ್ರಿತ ಮಧುರ ಹಣ್ಣನ್ನು ನೀಡುತ್ತದೆ. ಬಹುವಾರ್ಷಿಕ ಮರ. ಹುಣಿಸೆಹಣ್ಣು ಭಾರತದ ಅಡುಗೆ ಮನೆಯಲ್ಲಿ ಜನಪ್ರಿಯ. ಉತ್ತಮ ಉರುವಲು ಕೊಡುತ್ತದೆ. ಸಸ್ಯಶಾಸ್ತ್ರೀಯ ಹೆಸರು: ಟ್ಯಾಮರಿಂಡಸ್ ಇಂಡಿಕ.