ಇಂಬಳ(ಜಿಗಣೆ) : ರಕ್ತ ಹೀರುವ ಪರಾವಲಂಬಿ ಜಂತು. ಎರಡು ಮೂರು ಇಂಚು ಉದ್ದವಿರುತ್ತದೆ. ಯಾವುದೇ ಜೀವಿಯ ಚರ್ಮಕ್ಕೆ ಅಂಟಿಕೊಂಡು, ತನ್ನ ಹರಿತವಾದ ಹಲ್ಲುಗಳಿಂದ ಯಾವ ನೋವನ್ನೂ ಉಂಟುಮಾಡದೆ, ಚರ್ಮವನ್ನು ಕೊರೆದು ರಕ್ತ ಕುಡಿಯಬಲ್ಲದು. ಮಳೆಗಾಲದ ಅವಧಿಯಲ್ಲಿ ಇವು ಕಾಡಿನಲ್ಲಿ ಸಂಚರಿಸುವ ಜನರಿಗೆ ಎಲ್ಲಿಲ್ಲದ ಹಿಂಸೆ ಕೊಡುತ್ತವೆ. ಮಲೆನಾಡಿನ ಜನ ಇವುಗಳ ಕಾಟವನ್ನು ಹೊಗೆಸೊಪ್ಪಿನಿಂದಲೋ, ಸುಣ್ಣದಿಂದಲೋ ನಿವಾರಿಸಿಕೊಳ್ಳುತ್ತಾರೆ.

ಇರುವೆ :            ನಮ್ಮ ಮನೆಗಳಲ್ಲಿ, ಹೊಲಗಳಲ್ಲಿ, ರಸ್ತೆಗಳಲ್ಲಿ, ತೋಟಗಳಲ್ಲಿ ಎಲ್ಲೆಂದರಲ್ಲಿ ಕಾಣುವ ಪರಿಚಿತ ಜೀವಸಂಕುಲಗಳು. ಇವುಗಳಲ್ಲಿ ೧೫,೦೦೦ಕ್ಕಿಂತಲೂ ಹೆಚ್ಚಿನ ಜಾತಿಗಳಿವೆ. ಗಾತ್ರದ ದೃಷ್ಟಿಯಿಂದ ಎಂಟನೆ ಒಂದು ಅಂಗುಲದಷ್ಟು ಕಿರಿಯ ಇರುವೆಯಿಂದ ಹಿಡಿದು ಒಂದು ಅಂಗುಲವಷ್ಟು ಉದ್ದದ ಇರುವೆಯೂ ಇದೆ. ಇವುಗಳ ಬಣ್ಣ ಕಪ್ಪು ಅಥವಾ ಕೆಂಪು ಅಥವಾ ಕಂದು. ಕೆಲವು ಜಾತಿಯ ಇರುವೆಗಳಿಗೆ ಹಾರಾಡಲು ರೆಕ್ಕೆಗಳಿರುತ್ತವೆ. ಇವುಗಳಲ್ಲಿ ಕೆಲವಕ್ಕೆ ನಿರ್ದಿಷ್ಟ ಋತುಮಾನದಲ್ಲಿ ರೆಕ್ಕೆಗಳು ಮೂಡಿ, ಕಾಲಾಂತರದಲ್ಲಿ ರೆಕ್ಕೆಗಳನ್ನು ಕಳೆದುಕೊಂಡು ರೆಕ್ಕೆರಹಿತ ಇರುವೆಗಳಾಗುತ್ತವೆ. ಇರುವೆಗಳು ಸಂಗಜೀವಿಗಳು. ಶ್ರಮ ವಿಭಜನೆಯ ಸಾಮಾಜಿಕ ವ್ಯವಸ್ಥೆ ಹೊಂದಿರುವ ಸಮೂದಾಯವಾಸಿಗಳು. ಸಾವಿರಾರು ಅಥವಾ ಲಕ್ಷಗಟ್ಟಲೆ ಸಂಖ್ಯೆತಯಲ್ಲಿ ವಾಸಮಾಡುವ ಇರುವೆಗಳದೇ ಒಂದು ದೊಡ್ಡ ಪ್ರಪಂಚ. ಹುತ್ತಗಳಲ್ಲಿ, ಗೋಡೆಯ ಬೀರುಕುಗಳಲ್ಲಿ ಮತ್ತು ಮರಗಳಲ್ಲಿ ವಾಸಿಸುತ್ತವೆ.

ಏಡಿ(ಹುಲ್ಲೇಡಿ) : ಏಡಿಗಳಲ್ಲಿನ ಒಂದು ಬಗೆ ಇದು. ಹುಲ್ಲು ಹಾಗೂ ಜೊಂಡು ಇರುವ ಕಡೆ ವಾಸಿಸುವ ಸಣ್ಣ ಏಡಿ. ಗಾತ್ರದಲ್ಲಿ ಚಿಕ್ಕದಾಗಿದ್ದು, ತಿನ್ನಲು ಉಪಯೋಗಿಸುತ್ತಾರೆ. ಹೆಚ್ಚಾಗಿ ಮಳೆಗಾಲದ ವೇಳೆ ಗದ್ದೆಗಳಲ್ಲಿ ಕಂಡುಬರುತ್ತದೆ.

ಒಂಟಿಗ : ಗಂಡು ಹಂದಿ. ಹೆಚ್ಚಾಗಿ ಒಂಟಿಯಾಗಿ ಕಾಡಿನಲ್ಲಿ ಅಲೆಯುತ್ತದೆ. ಇದು ಹುಲಿಯನ್ನೂ ಹೆದರಿಸುತ್ತದೆ.

ಕಡವೆ : ಜಿಂಕೆಯ ಒಂದು ಪ್ರಭೇದ. ಇದನ್ನು ಸಾಂಬರ್‌ಎಂದು ಕೂಡ ಕರೆಯುತ್ತಾರೆ. ಸುಮಾರು ನಾಲ್ಕು ನಾಲ್ಕೂವರೆ ಅಡಿ ಎತ್ತರವಿರುತ್ತದೆ.  ಹಣೆಯ ಮೇಲಿನ ಕೊಂಬಿನಲ್ಲಿ ಇದಕ್ಕೆ ಆರೇಳು ಕವಲುಗಳಿರುತ್ತವೆ. ಇವುಗಳ ಮೈರೋಮ ಒರಟು. ಬಣ್ಣ ಕಂದು ಇಲ್ಲವೆ ಕಡು ಬೂದು. ಇವು ಸಸ್ಯಾಹಾರಿಗಳು. ನಮ್ಮ ದೇಶದ ಸಮುದ್ರ ಮಟ್ಟದ ಕಾಡುಗಳಿಂದ ತೊಡಗಿ, ಸಾವಿರಾರು ಅಡಿಗಳಷ್ಟು ಉನ್ನತವಾಗಿರುವ ಪರ್ವತ ಶ್ರೇಣಿಗಳಲ್ಲೂ, ಜೌಗು ಪ್ರದೇಶಗಳಲ್ಲೂ ವಾಸಿಸುತ್ತವೆ. ಕಡವೆಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಾರೆ.

ಕಪ್ಪೆ : ಮಳೆಗಾಲ ಬರುತ್ತಲೇ ತನ್ನ ಇರುವಿಕೆಯನ್ನು ಜಗತ್ತಿಗೆ ಸಾರಿ ಹೇಳುವ ಕಪ್ಪೆ ನೆಲ ಜಲಗಳೆರಡರಲ್ಲೂ ಜೀವಿಸಬಲ್ಲ ಉಭಯವಾಸಿ. ಇದರದೊಂದು ಜಾತಿ ಮರಗಳಲ್ಲಿಯೂ ವಾಸಿಸುತ್ತದೆ.

ಕಂದು, ಹಸಿರು, ಕೆಂಪು, ಬೂದು, ಹಳದಿ ಮುಂತಾದ ಆಕರ್ಷಕವಲ್ಲದ ಬಣ್ಣದ ಕಪ್ಪೆಗಳಿವೆ. ತೇವಾಂಶಭರಿತ ಕೆರೆ, ಗದ್ದೆ ಕೋಗು, ಹಳ್ಳ, ಜೌಗು ಪ್ರದೇಶಗಳು ಇದರ ವಾಸಕ್ಕೆ ಅನುಕೂಲಕರ. ಕುಪ್ಪಳಿಸುವ ಜಿಗಿಯುವ ಕಪ್ಪೆ ತನ್ನ ಅಂಟು ಸ್ರವಿಸುವ ನಾಲಿಗೆಯನ್ನು ಮುಂದಕ್ಕೆ ಚಾಚಿ ಕ್ರಿಮಿಕೀಟಗಳನ್ನು ಹಿಡಿದು ತಿನ್ನುತ್ತದೆ. ಕೆಲವು ಜಾತಿಯ ಕಪ್ಪೆಗಳು ತೀಕ್ಷ್ಣ ವಿಷಕಾರಿಗಳಾದರು ಅನೇಕ ಯೂರೋಪಿಯನ್ನರು ಕಪ್ಪೆಮಾಂಸ ಪ್ರಿಯರು. ಪ್ರಾಣಿಶಾಸ್ತ್ರದ ಪ್ರಯೋಗಾಲಯಗಳಿಗೆ ಸುಲಭ ಬಲಿಪಶು ಆಗಿರುವುದರಿಂದ, ಆಹಾರದ ವಸ್ತುವಾಗಿ ವಿದೇಶಿಯರಿಗೆ ರಪ್ತಾಗುತ್ತಿರುವುದರಿಂದ, ಕಪ್ಪೆ ಇಂದು ಅಪಾಯದ ಅಂಚಿನಲ್ಲಿರುವ ಜೀವಸಂಕುಲವಾಗಿದೆ.

ಕಣೆಹಂದಿ (ಮುಳ್ಳುಹಂದಿ)  : ಮೈತುಂಬ ಮುಳ್ಳಿನ ಕಡ್ಡಿಗಳನ್ನು ಹೊಂದಿರುವ ಒಂದು ಜಾತಿಯ ಹಂದಿ. ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಪಾಯ ಬಂದಾಗ ಪ್ರಾಣರಕ್ಷಣೆ ಮಾಡಿಕೊಳ್ಳುವ ತನ್ನ ಮೈಯನ್ನು ಶತ್ರುವಿನ ಕಡೆಗೆ ಕೊಡುವುತ್ತದೆ. ಹೀಗೆ ಮಾಡಿದಾಗ ಬಾಣದಂತೆ ಮುಳ್ಳುಗಳು ದಿಕ್ಕು ದಿಕ್ಕಿಗೆ ಪಸರಿಸುತ್ತದೆ. ಈ ಮುಳ್ಳುಗಳು ಚುಚ್ಚಿಕೊಂಡ ಪ್ರಾಣಿ ಅಥವಾ ಮನುಷ್ಯ ನಂಜಿನಿಂದ ಊದಿಕೊಂಡು ಬಳಲುತ್ತಾನೆ.

ಕರಡಿ :  ಮೈತುಂಬ ಉದ್ದವಾದ ಕಪ್ಪು ಅಥವಾ ಕಂದು ಬಣ್ಣದ ರೋಮವುಳ್ಳ ಕಾಡು ಪ್ರಾಣಿ(ಉತ್ತರ ಧ್ರುವ ಪ್ರದೇಶದ ಕರಡಿಯ ಜಾತಿ ಮಾತ್ರ ಬಿಳಿಯ ರೋಮದ್ದು). ಕರಡಿಯೂ ಮಾಂಸಹಾರಿಯೂ ಹೌದು, ಸಸ್ಯಹಾರಿಯೂ ಹೌದು. ಇದರ ನಡಿಗೆ ನಿಧಾನ. ಆನೆಯಂತೆ ಭಾರವಾಗಿದ್ದು. ನಾಲ್ಕೂ ಪಾದಗಳನ್ನು ನೆಲಕ್ಕೂರಿ ನಡೆಯುತ್ತದೆ. ಎರಡು ಕಾಲುಗಳಲ್ಲಿ ಎದ್ದು ನಿಲ್ಲಬಲ್ಲದು.

ಸಣ್ಣ ಕಿವಿ, ಸಣ್ಣ ಕಣ್ಣುಗಳಿದ್ದು, ಮುಖಭಾವ ಶಾಂತವಾಗಿರುವ ಕರಡಿಗಳು ಸಾಮಾನ್ಯವಾಗಿ ನಿಶಾಚರಿಗಳು. ಸದಾ ಒಂಟಿಯಾಗಿ ಅಲೆದಾಡುತ್ತ ಆಹಾರ ಸಂಪಾದಿಸುತ್ತವೆ. ಪಶ್ಚಿಮ ಹಿಮಾಲಯ, ಅಪ್ಘಾನಿಸ್ಥಾನ, ಬಲೂಚಿಸ್ಥಾನ, ಚೀನಾ, ಸೈಬೀರಿಯಾ ಮತ್ತು ಸಿಲೋನ್ ದೇಶಗಳಲ್ಲಿ ಇವು ಕಾಣಸಿಗುತ್ತವೆ.

ಕಾಡುಕೋಣ ಕಾಟಿ : ದೊಡ್ಡು (ಹೆಣ್ಣು). ಪಶ್ಚಿಮ ಘಟ್ಟದ ಕಾಡುಗಳಲ್ಲಿ ಆನೆಗಳ ನಂತರದ ಗಾತ್ರದಲ್ಲಿ ಅತೀ ದೊಡ್ಡ ಪ್ರಾಣಿಗಳು ಗೊರಸುವಾದಿಗಳ ಗುಂಪಿಗೆ ಸೇರಿವೆ. ಬೇಟೆಗಾರರು ಮಾಂಸಕ್ಕಾಗಿ ಕೊಲ್ಲುವುದಿಲ್ಲ. ಬೇಟೆಯ ಮೋಜಿಗಾಗಿ ಕೊಲ್ಲುತ್ತಾರೆ. ಕಾಟಿಯ ಕೊಂಬನ್ನು ಬೀಟೆಯ ಹಲಗೆಗೆ ಜೋಡಿಸಿ ಪ್ರದರ್ಶನ ಕಲಾವಸ್ತುವಾಗಿ ರೂಪಿಸುತ್ತಾರೆ. ಇದು ಅಂತಸ್ತಿನ ಪ್ರದರ್ಶನವೂ ಆಗಿದೆ.

ಕಾಡುಕೋಳಿ : ಕಡಿನಲ್ಲಿ ವಾಸಿಸುವ ಕೋಳಿ. ಊರುಕೋಳಿಯನ್ನು ಹೋಲುತ್ತದೆ. ಆದರೆ ತುಂಭಾ ಚುರುಕು ಬುದ್ಧಿ. ಈ (ಪಕ್ಷಿ) ಕೋಳಿಯನ್ನು ಸಾಮಾನ್ಯವಾಗಿ ಬೇಟೆಗಾರರು ಸೂರ್ಯೋದಯದ ಮುನ್ನ ಬೇಟೆಯಾಡುತ್ತಾರೆ.

ಕಾರೇಡಿ : ಕಪ್ಪನೆಯ ಮೇಲು ಪದರನ್ನು ಹೊಂದಿರುವ ಏಡಿ. ಬಹಳ ದೊಡ್ಡದಾಗಿದ್ದು, ತನ್ನ ಎರಡು ಕೊಂಬುಗಳಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತದೆ. ತನ್ನ ಎರಡು ಕೊಂಬುಗಳಿಂದ ಆಹಾರಗಳನ್ನು ಬಾಯಿಗೆ ಹಾಕಿಕೊಳ್ಳುತ್ತದೆ. ದೊಡ್ಡ ದೊಡ್ಡ ಬೀಲವನ್ನು ಕೊರೆದು ವಾಸಿಸುತ್ತದೆ.

ಕುರ್ಕ(ಚಿರತೆ) : ಬೆಕ್ಕಿನ ಜಾತಿಗೆ ಸೇರಿದ ಒಂದು ಮಾಂಸಹಾರಿ ಪ್ರಾಣಿ. ಇದು ನಾಯಿಗಳನ್ನು ಬೇಟೆಯಾಡುತ್ತದೆ. ಯಾರಿಗೂ ತಿಳಿಯದ ಹಾಗೇ ಮನೆಗೆ ಬಂದು ನಾಯಿ, ಕುರಿ, ಕರು, ಮೇಕೆಗಳನ್ನು ಸದ್ದಿಲ್ಲದೆ ಹೊತ್ತುಕೊಂಡು ಹೋಗುತ್ತವೆ. ಸಾಂದರ್ಭಿಕವಾಗಿ ನರಭಕ್ಷಕನಾಗುವುದುಂಟು.

ಕುರಿ : ಜಿಂಕೆಗಳ ಕುಲಕ್ಕೆ ಸೇರಿದ ವನ್ಯ ಜೀವಿ. ಇದೀಗ ಸಾಕುಪ್ರಾಣಿಯಾಗಿ ಮಾತ್ರ ಉಳಿದಿದೆ. ಮಂದೆಗಳಲ್ಲಿ ಅಲೆಯುವ, ಮಂದೆಗಳಲ್ಲೇ ಮೇಯುವ ಈ ಕುರಿಗಳನ್ನು ಸಾಕುವ ಪರಿಪಾಠ ಸಾವಿರಾರು ವರ್ಷಗಳಷ್ಟು ಹಿಂದಿನದು. ಮಾಂಸಕ್ಕಾಗಿ ಮತ್ತು ಉಣ್ಣೆಗಾಗಿ ಇವುಗಳನ್ನು ಸಾಕಲಾಗುತ್ತದೆ.

ಕೆಂಜಿಗ : ಕೆಂಪುಬಣ್ಣದ ದೊಡ್ಡ ಇರುವೆ. ಚಟ್ನಿಗಾಗಿ ಈ ಇರುವೆಯನ್ನು ಬೇಟೆಯಾಡಿ ಬಳಸುತ್ತಾರೆ.

ಕೊಚ್ಚಲಿ : ಇದು ಒಂದು ಬಗೆಯ ಮೀನು.

ಕೋಳಿ : ಹಕ್ಕಿಗಳಲ್ಲಿ ಕೋಳಿಗಳದೇ ಒಂದು ಪ್ರತ್ಯೇಕ ವರ್ಗ. ಹೆಣ್ಣು ಕೋಳಿಯನ್ನು ಹೇಂಟೆ ಎಂದೂ, ಗಂಡು ಕೋಳಿಗಳನ್ನು ಹುಂಜ ಎಂದೂ ಕರೆಯುತ್ತಾರೆ. ಇವು ನೋಡಲು ಹಕ್ಕಿಗಳಂತೆಯೇ ಇದ್ದರೂ ಗಾತ್ರದಲ್ಲಿ ದೊಡ್ಡ (ಹೇಂಟೆ, ಹುಂಜ)ದಾಗಿರುತ್ತವೆ. ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದರೆ ಹಕ್ಕಿಗಳಂತೆ ಗೂಡು ಕಟ್ಟುವುದಿಲ್ಲ. ಸಾಕು ಪ್ರಾಣಿಯಾಗಿ ಇವುಗಳನ್ನು ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಕೋಳಿಗಳಲ್ಲಿ ಹಲವು ಉಪಜಾತಿಗಳಿವೆ. ಇವು ಕಾಳುಗಳನ್ನು, ಹುಳಹುಪ್ಪಟೆಗಳನ್ನು . ಸಣ್ಣ ಸಣ್ಣ ಮೀನುಗಳನ್ನು ತಿನ್ನುತ್ತವೆ.

ಗಿರಲು : ಹಳ್ಳಗುಂಡಿ ಹಾಗೂ ಕರೆಯಂಥ ಸಿಹಿ ನೀರಿನಲ್ಲಿ ಬದುಕುವ ಒಂದು ಬಗೆಯ ಮೀನು. ಸುಮಾರು ಒಂದು ಅಡಿಯಷ್ಟು ಉದ್ದದ ನುಣ್ಣನೆಯ, ಬಿಳಿಬಣ್ಣದ ಮೀನು. ಬಾಯಿ ಆಯತಾಕಾರವಾಗಿದ್ದು, ಕಿವಿರಿನ ಹಿಂಭಾಗದ ರೆಕ್ಕೆಗಳಲ್ಲಿ ಬಲವಾದ ಮುಳ್ಳುಗಳಿರುತ್ತವೆ.

ಅವಲುಮೀನು : ಸಿಹಿನೀರಿನಲ್ಲಿ ಮುಖ್ಯವಾಗಿ ಹೊಳೆ, ಹಳ್ಳ ಮತ್ತು ಕೆರೆಗಳಲ್ಲಿ ಸಿಗುವ ದೊಡ್ಡ ಗಾತ್ರದ ಮೀನು. ಸುಮಾರು ಒಂದೂವರೆ ಮೊಳದುದ್ದ ಬೆಳೆಯಬಲ್ಲದು. ಗುಲಗಂಜಿಯಂಥಹ ಕೆಂಪನೆಯ ಕಣ್ಣುಗಳು. ಮಲೆನಾಡಿನಲ್ಲಿ ಇದು ಜನಪ್ರಿಯ ಮೀನು.

ಚಿಟ್ಟೆ : ಕೀಟ ಜಗತ್ತಿನಲ್ಲಿ ಅತ್ಯಂತ ವರ್ಣಮಯವಾದ ವರ್ಗವೆಂದರೆ ಚಿಟ್ಟೆ ಅಥವಾ ಪಾತರಗಿತ್ತೆಗಳು. ಕೀಟಗಳ ಪೈಕಿ ಚಿಟ್ಟೆಗಳು ಮನುಷ್ಯನ ಗಮನವನ್ನು ಹೆಚ್ಚು ಸೆಳೆದಿವೆ. ಇತರ ಕೀಟಗಳಿಗಿಂತ ತುಸು ಎದ್ದು ಕಾಣುವ ದೇಹ ಮತ್ತು ಅನೇಕ ವರ್ಣ ಸಂಯೋಜನೆಯ ವಿಶಾಲವಾದ ರೆಕ್ಕೆ, ಚಂಚಲದ ಹಾರಾಟ, ಹೂವಿನ ಮೇಲೆ ಕುಳಿತು ಮಕರಂದ ಹೀರುವ ದೃಶ್ಯ ಮನುಷ್ಯನನ್ನು ಸಹಜವಾಗಿಯೇ ಆಕರ್ಷಿಸಿವೆ. ಉಷ್ಣವಲಯದ ಕಾಡುಗಳಲ್ಲಿ ಹೂಬಿಡುವ ವಿವಿಧ ಬಗೆಯ ಮರಗಳು ಮತ್ತು ಹೆಚ್ಚಿನ ಸೂರ್ಯನ ಬೆಳಕು ಇರುವುದರಿಂದಚಿಟ್ಟೆಗಳ ಸಂತತಿ ಹೆಚ್ಚಿರುತ್ತದೆ. ಸಹಜವಾಗಿಯೇ ಹಸಿರು ಹಾಗೂ ವಿವಿಧ ವರ್ಣಗಳ ಹೂಗಳ ಹಿನ್ನಲೆಯಲ್ಲಿ ಹಾರಾಡುವ         ವೈವಿಧ್ಯಮಯ ಬಣ್ಣ. ಆಕಾರದ ಚಿಟ್ಟೆಗಳು ಸೊಬಗಿಗೇ ನೆರೆಯನ್ನು ಉಂಟುಮಾಡುತ್ತದೆ.

ಚಿರತೆ : ಬೆಕ್ಕೆನ ಜಾತಿಯದು. ಹಳದಿ ಬಣ್ಣದ ಚರ್ಮದ ಮೇಲೆ ಕಪ್ಪು ಕಪ್ಪು ಬೊಟ್ಟುಗಳಿರುವುದರಿಂದ ಇದನ್ನು ‘ಚಿಟ್ಟೆ ಹುಲಿ’ ಎಂತಲೂ ಕರೆಯೂತ್ತಾರೆ. ಆಕಸ್ಮಿಕವಾಗಿ ಪೂರ ಕಪ್ಪು ಬಣ್ಣದ ಚಿರತೆಗಳು ಕೂಡ ಹುಟ್ಟುತ್ತವೆ. ಇವು ಮಾಂಸಹಾರಿಗಳು. ದಟ್ಟವಾದ ಕಾಡುಗಳಲ್ಲಿ, ಕುರುಚಲು ಕಾಡುಗಳಲ್ಲಿ ಮತ್ತು ಮರುಭೂಮಿಗಳಲ್ಲಿ ರಾತ್ರಿ ಹೊತ್ತು ಅಳುಕಿಲ್ಲದೆ. ಅಲೆದಾಡುತ್ತವೆ. ಒಂದು ಬಲಿತ ಚಿರತೆ ಒಂಬತ್ತು ಅಡಿ ಉದ್ದವಾಗಿರುತ್ತದೆ. ಇದು ಮರ ಹತ್ತಬಲ್ಲದು. ನೀರಿನಲ್ಲಿ ಈಜಬಲ್ಲದು. ಹುಲಿಯ ಚರ್ಮದಂತೆಯೇ ಚಿರತೆಯ ಚರ್ಮಕ್ಕೂ ಅಪಾರ ಬೇಡಿಕೆಯಿದೆ. ಆದ್ದರಿಂದ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳಲ್ಲಿ ಇದು ಒಂದು.

ಜಿಂಕೆ : ಕವಡೆಯಂತೆಯೇ ಜಿಂಕೆಯೂ ಹರಿಣಗಳ ಜಾತಿಗೆ ಸೇರಿದ ಪ್ರಾಣಿ. ಕೆಂಚು ರೋಮಗಳ ನಡುವೆ ಬಿಳಿಯ ಬಿಟ್ಟುಗಳ ಸಾಲು ಇರುವುದರಿಂದ ಇದನ್ನು ‘ಚಿತ್ರಾಂಗ’ ಎಂದೂ ಕರೆಯುತ್ತಾರೆ.  ಗಂಡು ಜಿಂಕೆಗಳ ನೆತ್ತಿಯ ಮೇಲೆ ಕವಲುಗೊಂಬುಗಳಿದ್ದರೆ, ಹೆಣ್ಣು ಜಿಂಕೆಗಳಿಗೆ ಕೊಂಬುಗಳಿರುವುದಿಲ್ಲ. ಕರ್ನಾಟಕದ ನಾಗರಹೊಳೆ ಮತ್ತು ಬಂಡಿಪುರದ ರಕ್ಷಿತ ಕಾಡುಗಳಲ್ಲಿ ಜಿಂಕೆಗಳು ಹಿಂಡು ಹಿಂಡಾಗಿ ವಾಸಿಸುತ್ತವೆ. ಇವು ಸಸ್ಯಾಹಾರಿಗಳು.

ಜೇಡ (ಸಾಲಗೆ) : ಸಂಧಿಪದಿ ವರ್ಗಕ್ಕೆ ಜೇಡ ನಾಲ್ಕು ಜೊತೆ ಕಾಲುಗಳುಳ್ಳ ಜೀವಿ. ಜೇಡಗಳ ಬದುಕು ಅವು ಉತ್ಪತ್ತಿಮಾಡುವ ರೇಷ್ಮೆಯೊಂದಿಗೆ ಮಿಳಿತಗೊಂಡಿದೆ. ಅವು ರೇಷ್ಮೆ ದಾರವನ್ನು ಸದಾ ಉತ್ಪತ್ತಿ ಮಾಡುತ್ತವೆ. ಹಾಗಾಗಿ ಅವು ರೇಷ್ಮೆಗ್ರಂಥಿ ಮತ್ತು ಅದನ್ನು ನೂಲುವ ಅಂಗಗಳೊಂದಿಗೇ ಜನಿಸುತ್ತವೆ. ಅವು ಸಾಯುವವರೆಗೆ ಅಗತ್ಯವಾದಷ್ಟು ರೇಷ್ಮೆಯನ್ನು ಉತ್ಪಾದಿಸುವ ಸಾಮರ್ಥ್ಯ ಆ ಗ್ರಂಥಿಗಳಿಗಿದೆ. ತನ್ನ ಆಹಾರಕ್ಕಾಗಿ ಇತರೆ ಕೀಟಗಳನ್ನು ಹಿಡಿಯಲು ಜೇಡ ರಚಿಸುವ ಬಲೆ ಕಲಾತ್ಮಕವಗಿರುತ್ತದೆ.

ತೋಳ (wolf) : ನಾಯಿಗಳ ಜಾತಿಗೆ ಸೇರಿದ ಒಂದು ಕಾಡು ಪ್ರಾಣಿ. ತುಂಬಿದ ಎದೆ, ಮೊನಚಾದ ಕಿವಿಗಳು, ಓಡಾಟಕ್ಕೆ ಅನಿವಾರ‍್ಯವಾದ ಬಲವಾದ ಕಾಲುಗಳು ಇದ್ದು, ಮೈಯು ಕಂದು ಬಣ್ಣದ ದಟ್ಟ ರೋಮಗಳಿಂದ ಕೂಡಿರುತ್ತದೆ.ಇವು ಮಾಂಸಾಹಾರಿಗಳು. ತಮಗಿಂತಲೂ ದೊಡ್ಡದಾದ ಜಿಂಕೆ,  ಸಾರಂಗಗಳ ಹಿಂಡನ್ನು ಸುತ್ತುವರಿದು, ಹಿಂಡಿನ ಒಂದೆರಡು ಪಶುಗಳನ್ನು ಪ್ರತ್ಯೇಕಿಸಿ ಬೇಟಿಯಾಡಿ ತಿನ್ನುತ್ತವೆ.

ದಡ್ಡೆ : ಹೆಣ್ಣು ಹಂದಿ. ಮರಿಹಾಕಿದ ಹಂದಿ. ಇಂಥ ಪ್ರಾಣಿಗಳನ್ನು ಬೇಟೆಯಾಡುವಾಗ ತುಂಬಾ ಎಚ್ಚರವಹಿಸುತ್ತಾರೆ. ಅರೆ ಪೆಟ್ಟಾದರೆ ಬೇಟೆಗಾರನ ಜೀವಕ್ಕೆ ಆಪತ್ತು. ಸೋವುಗಾರರು ದಡ್ಡೆ ಹಂದಿಯಿಂದ ತಪ್ಪಿಸಿಕೊಳ್ಳುಲು ಮರ ಹತ್ತುತ್ತಾರೆ.

ನಾಯಿ(ಶುನಕ) : ನಾಯಿಗಳು ಗ್ರಾಮೀಣ ಪರಿಸರದಲ್ಲಿ ಜಾನುವಾರು, ಕುಕ್ಕುಟ. ಕಾಗೆ, ಹಲ್ಲಿ, ಜಿರಲೆಯಷ್ಟೇ ಸುಲಭವಾಗಿ ಕಾಣಸಿಗುತ್ತವೆ. ಇವು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತವೆ. ಮಲೆನಾಡುನಲ್ಲಿ ಬೇಟೆಗಾಗಿಯೇ ನಾಯಿಗಳನ್ನು ವಿಶೇಷವಾಗಿ ಸಾಕುತ್ತಾರೆ. ಅವುಗಳ ಜೊತೆ ಆತ್ಮೀಯತೆ. ಮಮತೆ ಬೆಳೆಸಿಕೊಳ್ಳುತ್ತಾರೆ. ಅದರಲ್ಲೂ ಚೆನ್ನಾಗಿ ಷಿಕಾರಿ ಮಾಡುವ ನಾಯಿಗಳನ್ನು ಬಂಧುವಿನಂತೆ ನೋಡಿಕೊಳ್ಳುತ್ತಾರೆ. ಬೇಟೆಗಾರನಿಗೆ.ತನ್ನ ನಾಯಿಯ ಸಾವು ಸಹಿಸಗಾಗದ ನೋವು ತರುತ್ತದೆ. ಹಾಗಾಗಿ ನಾಯಿ ಒಂದು ಪ್ರಾಣಿಯಾಗಿರದೆ ಸಾಮಾಜಿಕ ವ್ಯಕ್ತಿತ್ವ ಪಡೆಯುತ್ತದೆ. ಮಲೆನಾಡಿನ ಮನೆಗಳು ನಾಯಿಯಿಲ್ಲದಿದ್ದರೆ ಅರ್ಪೂಣವೆನಿಸಿಕೊಳ್ಳುತ್ತವೆ.

ಬರ್ಕ : ಕುರಿಯನ್ನು ಹೋಲುವ ಆಕಾರದಲ್ಲಿ ಚಿಕ್ಕದಾದ ಜಿಂಕೆ ಜಾತಿಗೆ ಸೇರಿದ ಪ್ರಾಣಿ.

ಬಸವನ ಹುಳು :  ಬರನ್ನುನ ಮೇಲೆ ಸುರುಳಿ ಸುತ್ತಿದ ಚಿಪ್ಪನ್ನು ಹೊತ್ತು ಅಲೆಯುವ ಹುಳು. ಸಮುದ್ರದಲ್ಲಿಯೂ, ಸಿಹಿ ನೀರಿನ ನದಿಯಲ್ಲಿಯೂ, ನೆಲದ ಮೇಲೆಯೂ ವಾಸಿಸುತ್ತದೆ. ನೀರಿನಲ್ಲಿ ವಾಸಿಸುವ ಹುಳುಗಳಲ್ಲಿ ಕೆಲವು ತಮ್ಮ ಕಿವಿರುಗಳಿಂದ ಉಸಿರಾಡಿಸಿದರೆ, ಕೆಲವು ನೇರವಾಗಿ ಉಸಿರಾಡುತ್ತವೆ. ಇವುಗಳ ಬೆನ್ನಿನ ಮೇಲಿರುವ ಚಿಪ್ಪಿನಲ್ಲಿ ಶ್ವಾಸಕೋಶವಿದೆ. ರಕ್ತಶುದ್ದೀಕರಣ ಮಾಡುವ ರಕ್ತ ನಾಳವೂ ಇವೆ. ಆ ರಕ್ತವನ್ನು ಶರೀರಕ್ಕೆ ತಳ್ಳಿಕೊಳ್ಳುವ ಹೃದಯವೂ ಇದೆ. ಈ ಹುಳುಗಳಲ್ಲಿ ಗಂಡು ಮತ್ತು ಹೆಣ್ಣುಗಳಿವೆ. ಇವು ಸಸ್ಯಾಹಾರಿಗಳು. ಗಿಡಗಳ ಸೊಪ್ಪು, ತೊಗಟೆಗಳನ್ನು ಅರೆದು ತಿನ್ನುತ್ತವೆ. ಈ ಹುಳುಗಳಲ್ಲಿ ಎರೆಹುಳುಗಳನ್ನೋ, ತಮ್ಮಂತಿರುವ ಇತರ ಬಸವನ ಹುಳುಗಳನ್ನೋ ತಿನ್ನುವ ಜಾತಿಗಳೂ ಇವೆ.

ಬೆಕ್ಕು : ಕಾಡು ಬೆಕ್ಕು ಮತ್ತು ಊರು ಬೆಕ್ಕು ಎಂದು ಇದರಲ್ಲಿ ಎರಡು ವಿಧ. ಕಾಡು ಬೆಕ್ಕುಗಳೇ ಊರಿನ ಬೆಕ್ಕುಗಳಿಗೆ ಮೂಲ. ಮನುಷ್ಯ ಪಳಗಿಸಿದ ನಂತರ ನಾಡಿನ ಪರಿಸರದಲ್ಲೇ ಬದುಕುವ ಇವುಗಳ ಶರೀರ ಮೂತಿಯಿಂದ ಬಾಲದವರೆಗೆ ಎರಡುವರೆ ಅಡಿ ಉದ್ದವಿದ್ದರೆ, ಬರಿಯ ಬಾಲವೇ ಒಂಬತ್ತು ಇಂಚು ಇರುತ್ತದೆ. ಇದರ ಮೈಕಟ್ಟು ಗಟ್ಟಿಮುಟ್ಟಾಗಿದ್ದು, ಶರೀರವನ್ನು ಬೇಕಾದಂತೆ ತಿರುವಬಲ್ಲದು. ಅದು ತನ್ನ ಮೈಯ ರೋಮವನ್ನು ನೆಕ್ಕಿ ನೆಕ್ಕಿ ಚೊಕ್ಕಟವಾಗಿಟ್ಟು ಕೊಳ್ಳುವಂತೆ,ತನ್ನ ಕಾಲಿನ ಉಗುರುಗಳನ್ನು ಒರಟಾದ ನೆಲಕ್ಕೆ ತಿಕ್ಕಿ ತೀಡಿ ಹರಿತವಾಗಿಡಬಲ್ಲದು. ಮರಗಳನ್ನೇರುವ, ಗೋಡೆಯಿಂದ ಗೋಡೆಗೆ ಹಾರುವ ಇದು ಚಿರತೆ ಮತ್ತು ಹುಲಿಯ ಕುಲಕ್ಕೆ ಸೇರಿದ್ದಾಗಿದೆ. ಅನ್ನ, ಹಾಲೂ, ಮೊಸರು ಮತ್ತು ಮಾಂಸಗಳನ್ನು ತಿನ್ನುತ್ತದೆ. ಇಲಿಗಳನ್ನು ಹಿಡಿಯಲೆಂದೇ ಅನೇಕರು ಬೆಕ್ಕನ್ನು ಸಾಕುತ್ತಾರೆ. ಇನ್ನು ಕರಲವರು ಮುದ್ದಿಗಾಗಿ ಸಾಕುತ್ತಾರೆ. ಬೆಕ್ಕಿನ ಮಾಂಸವನ್ನು ತಿನ್ನುವ ಜನರು ಇದ್ದಾರೆ.

ಮಿಕ : ಒಂದು ಜಾತಿಯ ಕಾಡು ಹಂದಿ. ಹೆಚ್ಚಾಗಿ ರೈತನ ಬೆಳೆಗೆ ನುಗ್ಗುತ್ತದೆ.

ಮೀನು : ಬೆನ್ನೆಲುಬಿನ ಪ್ರಮೂಖ ಜಲಚರ. ಮನುಷ್ಯನ ಮೆಚ್ಚಿನ ಮಾಂಸಹಾರ. ಸಮುದ್ರಗಳಲ್ಲಿ, ಸಿಹಿ ನೀರಿನ ನದಿಗಳಲ್ಲಿ, ಹಳ್ಳಕೊಳ್ಳಗಳಲ್ಲಿ, ನೀರಿರುವ ಎಲ್ಲೆಡೆಗಳಲ್ಲಿ ವಾಸಿಸುತ್ತದೆ. ಬಾಯಿಯ ಮುಗ್ಗಲಿನಲ್ಲಿರುವ ಕಿವಿರುಗಳಿಂದ ಉಸಿರಾಡುತ್ತದೆ. ಇದರ ದೇಹವು ದೋಣಿಯ ಆಕಾರದಲ್ಲಿದ್ದು, ಶರೀರದ ಮಗ್ಗಲು, ಬೆನ್ನು, ಹೊಟ್ಟೆ ಮತ್ತು ಬಾಲಗಳಲ್ಲಿರುವ ತೆಳ್ಳನೆಯ ರೆಕ್ಕೆಗಳಿಂದ ನೀರಿನಲ್ಲಿ ಸುಲಭವಾಗಿ ಈಜಬಲ್ಲದು.ಸುಮಾರು ಮೂವತ್ತು ಸಾವಿರಕ್ಕಿಂತಲು ಅಧಿಕ ಸಂಖ್ಯೆಯ ಜಾತಿಗಳನ್ನು ಮೀನಿನಲ್ಲಿ ಗುರುತಿಸಲಾಗಿದೆ. ಮೀನು ಮನುಷ್ಯನ ಆಹಾರ ಪೂರೈಕೆಯ ಸಂಪನ್ಮೂಲಗಳಲ್ಲೊಂದು. ಮೀನು ಹಿಡಿಯುವ, ಬೇಟೆಯಾಡುವ ಅನೇಕ ವಿಧಾನಗಳಿವೆ. ಈ ಮೀನುಗಳಲ್ಲಿ ಹೆಚ್ಚಿನವು ಮಾಂಸಾಹಾರಿಗಳು. ಕೆಲವು ಸಸ್ಯಾಹಾರಿಗಳು. ಇನ್ನು ಕೆಲವು ಮಿಶ್ರಹಾರಿಗಳು. ನೀರಿನಿಂದ ಹೊರಗೆ ಮೀನು ಹೆಚ್ಚುಕಾಲ ಬದುಕಲಾರದು.

ಮುಸಿಯ : ಕಪ್ಪು ಮುಖಚ ಕೋತಿ. ಸಿಂಗಳೀಕವೆಂದು ಕರೆಯುತ್ತಾರೆ. ದೊಡ್ಡ ಕಪಿಯಾದ ಇದರ ಹಸಿ ರಕ್ತವನ್ನು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದೆಂದು ಬೇಟೆಗಾರರು ಹೇಳುತ್ತಾರೆ.

ಮೇಕೆ : ಮಾಂಸಕ್ಕಾಗಿ ಸಾಕುವ ಪ್ರಾಣಿ. ಎಲ್ಲ ರೀತಿಯ ಸೊಪ್ಪುಸೆದೆ ತಿಂದು ಬದುಕಬಲ್ಲದು. ಕುರಿಗಿಂತ ಹೆಚ್ಚು ಎತ್ತರವಾಗಿ, ಬಲಿಷ್ಠವಾಗಿ ಬೆಳೆಯುತ್ತದೆ. ದೇವರಿಗೆ, ಭೂತಕ್ಕೆ ಬಲಿಕೊಡುವ ಪ್ರಾಣಿಗಳಲ್ಲಿ ಮೇಕೆಯೂ ಒಂದು. ತನಗಿರುವ ತಿನ್ನುವ ಅಗಾಧ ಸಾಮರ್ಥ್ಯದಿಂದಾಗಿ ಮೇಕೆ ಅರಣ್ಯನಾಶದಲ್ಲಿ ಮುಖ್ಯ ಪಾತ್ರವಹಿಸುತ್ತಿದೆ.

ಮೊಸಳೆ : ಹಲ್ಲಿಯ ಆಕಾರದ ಬೃಹತ್ ಸರೀಸೃಪಗಳಲ್ಲೊಂದು, ನದಿ, ನದಿ ಮುಖದ ಚೌಗು ಪ್ರದೇಶಗಳಲ್ಲೂ, ಕೆರೆ, ಸರೋವರಗಳಲ್ಲೂ ವಾಸಿಸುತ್ತದೆ. ಹತ್ತರಿಂದ ಇಪ್ಪತ್ತು, ಮೂವತ್ತು ಅಡಿಗಳಷ್ಟು ಉದ್ದವಿರುತ್ತದೆ. ಮೈತುಂಬ ಜಿಗುಟಾದ ಮುಳ್ಳುಮುಳ್ಳಿನ ಚರ್ಮ, ಬೂದು, ಬೂದು ಹಸಿರು ಅಥವಾ ಬೂದುಹಂದು ಬಣ್ಣದ್ದು. ಹಾವುಗಳಂತೆ ಶೀತ ರಕ್ತದ ಪ್ರಾಣಿ. ಇದು ಹೆಚ್ಚಾಗಿ ನೀರಿನಲ್ಲಿ ವಾಸ ಮಾಡುತ್ತದೆ. ಮೀನು, ಕಪ್ಪೆ,             ನೀರುನಾಯಿ, ಜಲಪಕ್ಷಿಗಳು ಇದರ ಆಹಾರ. ಮೊಸಳೆಯ ಕುಲ ಭೂಮಿಯ ಮೇಲೆ ಕಾಣಿಸಿಕೊಂಡು ನೂರು ಮಿಲಿಯನ್ ವರ್ಷಗಳಾದುವು ಎಂದು ಹೇಳಗಾಗುತ್ತದೆ.

ಸಗಣಿಹುಳು : ಗಟ್ಟಿ ಕವಚದ ಕಪ್ಪು ಬಣ್ಣದ ಜೀರುಂಡೆ ಜಾತಿಯ ಹುಳು. ವಿವಿಧ ಪ್ರಾಣಿಗಳ ಹಿಕ್ಕೆಗಳ ಮೇಲೆ ಬದುಕು ಸಾಗಿಸುತ್ತದೆ. ಜಾನುವಾರುಗಳ ಸಗಣಿಯನ್ನು ಉಂಡೆಕಟ್ಟಿ ಸಾಗಿಸುತ್ತದೆ. ತಮ್ಮ ಗಡಸು ದೇಹದಿಂದಾಗಿ ಇತರೆ ಪಕ್ಷಿ ಅಥವಾ ಬೇಟೆಗಾರನ ಭಯ ಅವಕ್ಕಿಲ್ಲ. ಹಾಗಾಗಿ ಅವು ಹಗಲುಹೊತ್ತಿನಲ್ಲಿಯೇ ಸಗಣಿಯನ್ನು ಉಂಡೆಮಾಡಿ ಒಯ್ಯುವುದನ್ನು ಕಾಣಬಹುದು.

ಸಲಗ : ಗಂಡು ಹಂದಿ, ಗಂಡು ಪ್ರಾಣಿ.

ಸೊಳ್ಳೆ : ರಕ್ತ ಹೀರಿ ಅನೇಕ ಕಾಯಿಲೆಗಳನ್ನು ತರುವ ಕೀಟ. ಚರಂಡಿಗಳಲ್ಲಿ, ನಿಂತ ನೀರುಗಳಲ್ಲಿ ವಾಸಿಸುತ್ತವೆ. ಅಲ್ಲಿಯೇ ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಸೊಳ್ಳೆಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ಜಾತಿಗಳಖಿವೆ. ಕೆಲವು ಜಾತಿಯ ಸೊಳ್ಳೆಗಳ ಕಡಿತದಿಂದ ಮಲೆರಿಯಾ ರೋಗವು ಹಬ್ಬುತ್ತದೆ.

ಹಲ್ಲಿ : ಮೊಸಳೆಯಂತೆ ‘ಉರಗ’ ಜಾತಿಗೆ ಸೇರಿದ್ದು. ನಯವಾದ ಗೋಡೆಯ ಮೇಲೆ ಜಾರದಂತೆ ಓಡಾಡುವ ಕೌಶಲ್ಯ ಇದಕ್ಕಿದೆ. ಇಲಿ, ಜಿರಲರಯಂತೆ ಇದು ಗ್ರಹವಾಸಿ. ಗೋಡೆಗಳ ಮೇಲೆ ಓಡಾಡುತ್ತಿರುತ್ತದೆ. ಹಲ್ಲಿಯ ಕೂಗಿಗೂ ಶಕುನಕ್ಕೂ ನಂಟಿದೆ. ಸೊಳ್ಳೆ, ಜಿರಲೆ, ದೀಪದ ಹುಳುಗಳನ್ನು ತಿನ್ನುವ ಇದರ ಚರ್ಮ ಪಾರಿದರ್ಶಕವಾಗಿರುತ್ತದೆ.

ಹಾವುಗಳು : (ದಾಸರ, ಕಾಳಿಂಗ, ನಾಗರ, ಕೇರೆ) ಉಷ್ಣವಲಯದ ಕಾಡುಗಳಲ್ಲಿ ಹಾವುಗಳು ಸಹ ವಿಶೇಷವಾಗಿ ಕಾಣಸಿಗುತ್ತವೆ. ವಿಷಯುಕ್ತ ಹಾವುಗಳಾದ ಕಾಳಿಂಗ, ನಾಗರ ಹಾವುಗಳು ಕಚ್ಚಿದರೆ ಬಹುಬೇಗನೆ ಸಾಯುತ್ತಾರೆ. ಕಾಡುಗಳಲ್ಲಲ್ಲದೆ. ಹೊಲ, ತೋಟ, ಗದ್ದೆಗಳಲ್ಲೂ ಹಲವಾರು ಜಾತಿಯ ಹಾವುಗಳು ಜೀವಿಸುತ್ತವೆ. ಇಲಿಗಳನ್ನು ತಿಂದು ಬದುಕುವ ವಿಷವಿಲ್ಲದ ಕೇರೆ ಹಾವು ರೈತನ ಮಿತ್ರನೆಂದೇ ಕರೆಯುತ್ತಾರೆ. ದಾಸರ (ಹೆಬ್ಬಾವು)          ವಿಷವಿರದ ಹಾವಾದರೂ ತನ್ನ ಬೃಹತ್ ಗಾತ್ರದಿಂದ ಹೆದರಿಕೆ ತರುತ್ತವೆ. ಒಟ್ಟಿನಲ್ಲಿ ಮಲೆನಾಡ ಜನರ ಬದುಕಿನಲ್ಲಿ ಹಾವುಗಳು ಹಾಸುಹೊಕ್ಕಾಗಿವೆ.

ಹುಲಿ : ಬೆಕ್ಕಿನ ಕುಟುಂಬದಲ್ಲೇ ಅತ್ಯಂತ ಪ್ರಸಿದ್ಧವಾದ ಪ್ರಾಣಿ. ಮನುಷ್ಯರಲ್ಲಿ ಭಯಹುಟ್ಟಿಸುವ ಅಷ್ಟೇ ಬಲಶಾಲಿಯಾದ ಆದರೆ ಸುಂದರವಾದ ಪ್ರಾಣಿ. ಭಾರತದ ಕಾಡುಗಳಲ್ಲಿ ಕಳೆದ ಶತಮಾನದ ಪೂರ್ವರ್ಧದಲ್ಲಿ ಹೇರಳ ಸಂಖ್ಯೆಯಲ್ಲಿದ್ದವು. ಅತ್ಯಂತ ಬಲಶಾಲಿಯಾದರು ಸಂಕೋಚ ಸ್ವಭಾವದ ಹುಲಿ ಅಜ್ಞಾತವಾಗಿ ಬದುಕಲು ಬಯಸುತ್ತದೆ. ಗಂಡು ಹೆಣ್ಣು ವಂಶಾಭಿವೃದ್ಧಿ ಸಮಯದಲ್ಲಿ ಮಾತ್ರ ಹತ್ತಿರಕ್ಕೆ ಬರುತ್ತವೆ. ರಾತ್ರಿಯ ವೇಳೆ ಸಸ್ಯಾಹಾರಿ ಪ್ರಾಣಿಗಳನ್ನು ವಿಶೇಷವಾಗಿ ಜಿಂಕೆ ಕಡವೆಗಳನ್ನು ಬೇಟೆಯಾಡುವ ಹುಲಿ ನರಭಕ್ಷಕನಾದರೆ ಉಪಟಳಕಾರಿಯಾಗಿ ಪರಿಣಮಿಸುತ್ತದೆ. ಹಿಂದಿನ ರಾಜರಿಗೆ, ಬ್ರಿಟಿಷ್ ದೊರೆ ಅಧಿಕಾರಿಗಳಿಗೆ ಹುಲಿ ಬೇಟೆ ಅತ್ಯಂತ ಮೋಜಿನ ಕ್ರೀಡೆಯಾಗಿತ್ತು. ಸಾಹಸದ ಪ್ರತೀಕವಾಗಿತ್ತು. ಕಳೆದ ಶತಮಾನದ ಪೂರ್ವರ್ಧದಲ್ಲಿ ಸುಮಾರು ೪೦,೦೦೦ ಸಂಖ್ಯೆಯಲ್ಲಿದ್ದ ಹುಲಿಗಳು ನಿರಂತರ ಬೇಟೆ, ಹ್ರಸ್ವಗೊಂಡ ಅರಣ್ಯಪ್ರದೇಶದಿಂದ ೧೯೭೦ ರ ವೇಳೆಗೆ ೨ ಸಾವಿರಕ್ಕೂ ಕಡಿಮೆಯಾದವು. ಈಗ ವಿನಾಶದಂಚಿನಲ್ಲಿರುವ ಪ್ರಾಣಿಯ ಪಟ್ಟಿಗೆ ಸೇರಿದೆ.