ಕಾಗೆ(ಕ್ರೋ) : ಊರ ಪರಿಸರದಲ್ಲಿ ನಾಯಿ, ಜಾನುವಾರಿನಷ್ಟೇ ಪರಿಚಿತವಾದ ಪಕ್ಷಿ.

ಕಾಗೆಗಳಲ್ಲಿ ಕಾಡುಕಾಗೆ ಮತ್ತು ಊರುಕಾಗೆ ಎಂದು ಎರಡು ವಿಧ. ಕಾಡುಕಾಗೆಯ ಮೈಯಲ್ಲ ಹೊಳೆಯುವ ಕಪ್ಪು ಬಣ್ಣ. ಊರುಕಾಗೆ ಬೂದಿಬಣ್ಣ ಪ್ರಧಾನವಾದ ಹಕ್ಕಿ. ಸಂಪೂರ್ಣ ಕಪ್ಪಗಿರುವ ಕಾಡುಕಾಗೆಗಿಂತ ಗಾತ್ರದಲ್ಲಿ ಕೊಂಚ ಚಿಕ್ಕದು ಇವು ಸರ್ವಭಕ್ಷಕಗಳು.ಹಣ್ಣು, ಕೀಟಗಳು, ಚಿಕ್ಕ ಚಿಕ್ಕ ಪ್ರಾಣಿಗಳು, ಸತ್ತಪ್ರಾಣಿಗಳ ಮಾಂಸ, ಇತರೆ ಹಕ್ಕಿಗಳ ಮೊಟ್ಟೆ ಮರಿಗಳು, ಆಹಾರ ಧಾನ್ಯ, ಮನುಷ್ಯರ ತ್ಯಾಜ್ಯ ಪದಾರ್ಥಗಳು- ಹೀಗೆ ಎಲ್ಲವನ್ನೂ ತಿನ್ನುತ್ತವೆ. ಬಣ್ಣದ ವ್ಯತ್ಯಾಸವನ್ನು ಆಧರಿಸಿ ಇವುಗಳನ್ನು ನಾಲ್ಕುನಾಲ್ಕು ಉಪಜಾತಿಗಳನ್ನಾಗಿ ವರ್ಗೀಕರಿಸಲಾಗಿದೆ.

ಕಾಜಾಣ (ರಾಕೆಟ್ ಟೇಲ್ ಡ್ರೋಂಗೋ) : ನೀಲಿಗಪ್ಪಿನ ಹಕ್ಕಿ. ಬಾಲದಲ್ಲಿ ಎರಡೂ ತುದಿಯಲ್ಲಿ ಗೊಂಡೆ ಇರುವ ತಂತಿಯಂಥ ಪುಕ್ಕಗಳಿವೆ. ಹಕ್ಕಿ ಹಾರುವಾಗ ಇವು ಎರಡು ದುಂಬಿಗಳು ಹಕ್ಕಿಯನ್ನು ಹಿಂಬಾಲಿಸುತ್ತಿರುವಂತೆ ಕಾಣುತ್ತದೆ. ತಲೆಯಲ್ಲಿ ಕಪ್ಪು ಚೊಟ್ಟಿ ಇದೆ. ನಿತ್ಯ ಹರಿದ್ವರ್ಣದ ಕಾಡುಗಳಲ್ಲೂ ಮತ್ತು ಆ ವಲಯದ ತೋಟಗಳಲ್ಲೂ ಇರುತ್ತವೆ. ಕೀಟಗಳು, ಚಿಕ್ಕಪುಟ್ಟ ಹಣ್ಣುಗಳು ಮತ್ತು ಹೂವಿನ ಮಕರಂದ ಇದರ ಆಹಾರ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿಲ್ಲ. ಯಾವಾಗಲೂ ಜೋಡಿಯಲ್ಲಿ ಇರುತ್ತವೆ. ಗಟ್ಟಿಗಂಟಿನ ಹಕ್ಕಿ. ಇತರ ಹಕ್ಕಿಹಳ ಕೂಗನ್ನು ಅನುಕರಿಸುವುದರಲ್ಲಿ ನಿಪುಣ. ಮುಂಜಾನೆಯಲ್ಲೂ ಸಂಜೆಯಲ್ಲೂ ಹಾಡುವ ಕಾಜಾಣದ ಸಿಳ್ಳಿನ ರಾಗಲಾಪನೆ ಪ್ರಸಿದ್ದವಾಗಿದೆ.

ಕಾಜಾಣ ಧೈರ್ಯ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಶಾಲಿ ಹಕ್ಕಿ. ವೈರಿ ಪಕ್ಷಿಗಳು ಎಷ್ಟೇ ದೊಡ್ಡದಿರಲಿ ಅದರ ಮೇಲೆ ಎರಗುತ್ತದೆ. ಮಾರ್ಚ್‌ನಿಂದ ಜೂನ್‌ವರೆಗೆ ಎತ್ತರದ ಮರಗಳ ಕವಲುಗಳಲ್ಲಿ ಬೇರು, ನಾರು, ಹುಲ್ಲಿನಿಂದ ಬಟ್ಟಲು ಆಕಾರದ ಗೂಡು ಕಟ್ಟುತ್ತದೆ.

ಕಾಮಳ್ಳಿ (ಹಿಲ್ ಮೈನಾ) : ಮೈನಾಗಿಂತಕೊಂಚ ದೊಡ್ಡದಾದ ಗಾಢ ನೀಲಿಗಪ್ಪಿನ ಹಕ್ಕಿ. ರೆಕ್ಕೆಯ ಮೇಲೆ ಬಿಳಿ ಪಟ್ಟಿ ಎದ್ದು ಕಾಣುತ್ತಿದ್ದು, ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ. ಕುತ್ತಿಗೆ ಹತ್ತಿರ ಹೊಳೆಯುವ ಕಿತ್ತಲೆ ಬಣ್ಣದ ಚರ್ಮ ಆಭರಣದಂತಿರುತ್ತದೆ. ಕೊಕ್ಕು ಮತ್ತು ಕಾಲುಗಳು ಹಳದಿ ಬಣ್ಣ. ಹೆಣ್ಣು ಗಂಡುಗಳಲ್ಲಿ ವ್ಯತ್ಯಾಸವಿರುವುದಿಲ್ಲ. ತುಂಬ ಗಲಾಟೆಗಾರ ಹಕ್ಕಿ. ಕಾಡುಗಳಲ್ಲಿ ಮಂಗಟ್ಟೆ ಹಕ್ಕಿ, ಮನಿಯಾಡಲು ಹಕ್ಕಿಗಳ ಜೊತೆ ಹಣ್ಣಿನ ಮರಗಳಲ್ಲಿ ಗಲಾಟೆ ಮಾಡುತ್ತಾ ಹಣ್ಣು ತಿನ್ನುತ್ತಿರುತ್ತದೆ.  ಕಾಮಳ್ಳಿ   ಹಕ್ಕಿಗಳು ಸೂರ್ಯೋ‍ದಯ ಸೂರ್ಯಸ್ತದ ಸಮಯದಲ್ಲಿ ಮರಗಳ ಬೋಳು ಕೊಂಬೆಗಳಲ್ಲಿ ಕುಳಿತು ಹಕ್ಕಿಗಳು ಗಟ್ಟಿಯಾಗಿ ನೀಳ ಸಿಳ್ಳಿನ ರಾಗಾಲಾಪನೆ ಮಾಡುತ್ತಿರುತ್ತವೆ. ಮಾರ್ಚಿನಿಂದ ಅಕ್ಟೋಬರ್‌ವರೆಗೆ ಮರಗಳ ಪೊಟ್ಟರೆಗಳಲ್ಲಿ ಹುಲ್ಲು ಹತ್ತಿ ಇತ್ಯಾದಿಗಳಿಂದ ಗೂಡು ಮಾಡುತ್ತವೆ.

ಕುಟುರ (ಬ್ಯಾರ್ಬೆಟ್) : ಕನ್ನಡ ನಾಡಿನಲ್ಲಿ ನಾಲ್ಕು ಜಾತಿಯ ಕುಟುರಗಳಿವೆ. ಮೈನಾ ಹಕ್ಕಿಗಿಂತ ಕೊಂಚ ಚಿಕ್ಕದಾದ ಎರಡು ಕುಟುರ. ಸಂಕುಲಗಳನ್ನು ಒಂದೇ ಹೆಸರಿನಿಂದ ‘ಸೊಪ್ಪು ಕುಟುರ’ (Large Green Barbet Small green Barbet)ಎಂದು ಕರೆಯುತ್ತಾರೆ. ಇವೆರಡಕ್ಕೂ ಅಂಥ ಪ್ರಧಾನ ವ್ಯತ್ಯಾಸಗಳಿಲ್ಲ.ಕೊಂಚ ದೊಡ್ಡ ಗಾತ್ರದ ಕುಟುರಕ್ಕೆ ರೆಕ್ಕೆ, ಬಾಲದಪುಕ್ಕ ಎಲ್ಲ ಹಸಿರು ಬಣ್ಣ. ಹಳದಿ ಬಣ್ಣದ ಕೊಕ್ಕು ಮತ್ತು ಕಣ್ಣಿನ ಸುತ್ತ ಹಳದಿ ಬಣ್ಣದ ಉಂಗುರ ಇರುತ್ತದೆ. ಇನ್ನೊಂದು ಸ್ವಲ್ಪ ಚಿಕ್ಕದಾದ ಸೊಪ್ಪು ಕುಟುರ. ಇದು ಕೂಡ ಪ್ರಧಾನವಾಗಿ ಹಸಿರು ಬಣ್ಣದ ಹಕ್ಕಿ. ಆದರೆ ಇದರ ತಲೆ ನೆತ್ತಿ ಮಾಸಲು ಕಪ್ಪು ಬಣ್ಣ. ಇದರ ಕಪಾಲದಲ್ಲಿ ಬಿಳಿಯ ಮೆಚ್ಚೆ ಇರುತ್ತದೆ.

ಉಳಿದೆರಡು ಕುಟುರಗಳು ಗುಬ್ಬಚ್ಚಿ ಗಾತ್ರದ ಹಕ್ಕಿಗಳು. ಚಿಕ್ಕ ಗಾತ್ರದ ಈ ಹಕ್ಕಿಗಳನ್ನು ‘ಚಿಟ್ಟುಕುಟುರ’ ಎಂದು ಕರೆಯುತ್ತಾರೆ. ಇವುಗಳಲ್ಲಿಯೂ ಪರಸ್ಪರ ವ್ಯತ್ಯಾಸ ತುಂಬ ಕಡಿಮೆ. ಒಂದರ ಕೊರಳು ಕೆಂಪು ಬಣ್ಣ ಇನ್ನೋಂದರ ಕೊರಳು ನೀಲಿ ಬಣ್ಣ. ಸೊಪ್ಪು ಕುಟುರಗಳು ಮಲೆನಾಡಿನಲ್ಲಿ ಕುಟ್ರೋ ಕುಟ್ರೋ ಎಂದು ಗಟ್ಟಿಯಾಗಿ ಕೂಗುತ್ತಿರುತ್ತವೆ. ಚಿಟ್ಟುಕುಟುರಗಳು ಕೂಗುವುದು ಟೊಂಕ್ ಟೊಂಕ್ ಎಂದು ಕಮ್ಮಾರನು ಕಬ್ಬಿನ ಕುಟ್ಟಿದಾಗ ಸದ್ದು ಬರುವಂತೆ. ಕುಟುರಗಳು ಪೊಟರೆಗಳಲ್ಲಿ ಗೂಡು ಮಾಡಿಕೊಳ್ಳುತ್ತವೆ. ಇವು ಸಂಘಜೀವಿಗಳಲ್ಲ. ಹಣ್ಣು ತಿನ್ನುವ ಹಕ್ಕಿಗಳು. ಆಗಾಗ್ಗೆ ಹುಳು ಹುಪ್ಪಟೆಗಳನ್ನೂ ತಿನ್ನುತ್ತವೆ.

ಕುರುಡುಗಪ್ಪಟೆ : (ಕಾಮನ್ ಇಂಡಿಯನ್ ನೈಟ್ ಝೂರ್‌) ನುಣುಪಾದ ಪುಕ್ಕಗಳ ಕಂದು ಬಣ್ಣದ ಮೈನಾ ಗಾತ್ರದ ಹಕ್ಕಿ. ಬೆನ್ನ ಮೇಲೆ ಕಪ್ಪು ಪಟ್ಟೆಗಳಿದ್ದು, ಹಾರುವಾಗ ರೆಕ್ಕೆ ಮೇಲಿರುವ ಬಿಳಿ ಪಟ್ಟಿ ಎದ್ದು ಕಾಣುತ್ತದೆ. ಹೆಚ್ಚಾಗಿ ಕಲ್ಲುಗಳಿಂದ ಕೂಡಿರುವ ಕುರುಚಲು ಕಾಡುಗಳಲ್ಲಿ ಮತ್ತು ಕೃಷಿ ಭೂಮಿಯ ಬಳಿ ಇದ್ದು, ಈ ಹಕ್ಕಿಗಳು ನಸುಕಿನ ಹೊತ್ತಿನಲ್ಲಿ ಹಾರಾಡುತ್ತಾ ಕೀಟಗಳನ್ನು ಹಿಡಿಯುತ್ತವೆ. ಗಾಬರಿಯಾದಾಗ ಹಾರಿ ಕೊಂಚ ದೂರದಲ್ಲೆಮತ್ತೆ ನೆಲದ ಮೇಲೆ ಕುಳಿತುಕೊಳ್ಳುತ್ತವೆ. ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ನೆಲದ ಮೇಲೆ ಸಣ್ಣ ಗುಳಿ ಮಾಡಿ ಮೊಟ್ಟೆಗಳನ್ನಿಡುತ್ತವೆ.

ಕೋಗಿಲೆ : (ಕೋಯಲ್, ಕಕ್ಕೂ) ಕಾಗೆಯ ಗಾತ್ರದ, ಆದರೆ ಕೊಂಚ ತೆಳ್ಳಗಿರುವ ಉದ್ದಬಾಲದ ಹಕ್ಕಿ. ಕಣ್ಣು ದಾಳಿಂಬೆ ಬಣ್ಣ. ಗಂಡುಹಕ್ಕಿ ಕಾಗೆಯಂತೆಯೇ ಕಪ್ಪಗಿರುತ್ತದೆ. ಹೆಣ್ಣು ಹಕ್ಕಿ ಕಂದು ಬಣ್ಣಕ್ಕಿದ್ದು ಮೈಮೇಲೂ ರೆಕ್ಕೆಗಳ ಮೇಲೂ ಬಿಳಿಯ ಚುಕ್ಕಿಗಳಿರುತ್ತವೆ. ದಟ್ಟವಾದ ಮರಗಳಿದ್ದಲ್ಲಿ ವಾಸಿಸುವ ಕೋಗಿಲೆಯ ಕೂಗು ಎಲ್ಲರಿಗೂ ಪರಿಚಿತ.

ಕೋಗಿಲೆ ಗೂಡು ಮಾಡದೆ ಬೇರೆ ಹಕ್ಕಿಗಳ ಗೂಡುಗಳಲ್ಲಿ ಮೊಟ್ಟೆಯಿಡುವ ಪರತಂತ್ರ ಜೀವಿ. ಮರಿಮಾಡುವ ಕಾಲದಲ್ಲಿ ಮಾತ್ರ ಕೂಗುವುದು. ಮಿಕ್ಕ ಸಂದರ್ಭಗಳಲ್ಲಿ ಮೌನಿ. ಕಾಡುಗಳಲ್ಲಿ, ತೋಟಗಳಲ್ಲಿ, ಉದ್ಯಾನ ವನಗಳಲ್ಲಿ ಎಲ್ಲ ಕಡೆ ಇರುತ್ತದೆ. ಕೀಟಗಳು, ಚಿಕ್ಕ ಪುಟ್ಟ ಹಲ್ಲಿ, ಹಾವುದಾಣಿಗಳು. ಹಕ್ಕಿ ಮೊಟ್ಟೆ ಮರಿಗಳು, ಹಣ್ಣುಗಳು ಇತ್ಯಾದಿಗಳನ್ನು ತಿನ್ನುತ್ತದೆ. ಎಪ್ರಿಲ್‌ನಿಂದ ಅಗಸ್ಟವರೆಗೆ ಸೂಕ್ತ ಹಕ್ಕಿಗಳ ಗೂಡುಗಳನ್ನು ಪತ್ತೆಮಾಡಿ ಮೊಟ್ಟೆ ಇಡುತ್ತದೆ.

ಗಿಳಿ : (ಲಾರ್ಜ್ ಇಂಡಿಯನ್ ಪ್ಯಾರಕೀಟ್)ಕೊಕ್ಕಿನ ತುದಿ ಚೂಪಾಗಿರುವ ನೀಳಬಾಲದ ಹಕ್ಕಿ. ಪ್ರಧಾನವಾಗಿ ಎಲೆ ಹಸಿರುಬಣ್ಣದ ಈ ಹಕ್ಕಿಗೆ ಕುಂಕುಮಗೆಂಪಿನ ಹರಿತವಾಗಿರುವ ಬಲವಾದ ಕೊಕ್ಕುಗಳಿವೆ. ಕುಳಿತಾಗ, ಹಣ್ಣುತಿನ್ನುವಾಗ, ಹಾರುವಾಗ ಕೂಗುತ್ತಾ ಗಲಾಟೆಮಾಡುತ್ತವೆ. ಇವು ಸಮುದಾಯವಾಸಿಗಳು. ಕೆಲವು ಬಾರಿ ದೊಡ್ಡ ಗುಂಪುಗಳಲ್ಲಿ ಹಣ್ಣಿನ ತೋಟಗಳಿಗೆ ನುಗ್ಗಿ ಬೆಳೆಗೆ ಹಾನಿಮಾಡುತ್ತದೆ. ಸಾಕು ಪಕ್ಷಿಯಾಗಿ ಶತಮಾನಗಳಿಂದ ಈ ಹಕ್ಕಿ ಪ್ರಸಿದ್ಧವಾಗಿದೆ. ಪುರಾಣಗಳಲ್ಲಿ ಮತ್ತೆ ಮತ್ತೆ ಕಾಣಿಸುತ್ತದೆ. ಮಾತು ಕಲಿತು ಸಂದರ್ಭಕ್ಕೆ ತಕ್ಕಂತೆ ಪುನರಾವರ್ತನೆ ಮಾಡುತ್ತವೆ. ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಮರಗಳ ಪೊಟ್ಟರೆಗಳಲ್ಲಿ ಗೂಡು ಮಾಡುತ್ತದೆ.

ಗೂಬೆ (ಔಲ್) : ಗುಬೆಗಳಲ್ಲಿ ವಿವಿಧ ಗಾತ್ರ ಮತ್ತು ರೂಪಗಳುಳ್ಳ ಪಕ್ಷಿಗಳಿವೆ. ಮುಖ ಚಪ್ಪಟೆಯಾಗಿದ್ದು, ಕಣ್ಣಿನ ಸುತ್ತಲು ವೃತ್ತಾಕಾರದ ಅಂಚಿರುತ್ತದೆ. ಅಲ್ಲಿಂದ ಮೇಲಕ್ಕೆ ಅದರ ಕಿವಿಯಂತೆ ಕಾಣಿಸುವ ಕೂದಲಿನ ಗೊಂಚಲಿರುತ್ತದೆ. ರೆಕ್ಕೆ ಬೂದು ಬಣ್ಣ ಇಲ್ಲವೆ ಬೂದುಗಂದು ಬಣ್ಣ. ಈ ಗೂಬೆಗಳು ರಾತ್ರಿ ವೇಳೆ ಬೇಟೆಗೆ ಬರುತ್ತವೆ. ಕತ್ತಲಲ್ಲಿ ಹಾರಾಡುತ್ತ ಇದ್ದು, ಗಾಳಿಯಲ್ಲಿ ಅಲೆದಾಡುವ ಕ್ರಿಮಿಕಿಟಗಳನ್ನು ಹಿಡಿದು ತಿನ್ನುತ್ತವೆ. ಇಲಿ, ಮೋಲಗಳ ಜಾತಿಯ ಕಿರಿಯ ಪ್ರಾಣಿಗಳು ಇವುಗಳ ಮೆಚ್ಚಿನ ಆಹಾರ.

ನಮ್ಮ ಕಣ್ಣಿಗಿಂತಲೂ ಇವುಗಳ ಕಣ್ಣು ಐವತ್ತು ಆಥವಾ ನೂರು ಪಟ್ಟು ಸೂಕ್ಷ್ಮ. ಇವುಗಳ ಕನ್ಣುಗಳು ದೊಡ್ಡವು. ಇವುಗಳ ಪಾಪೆಗಲೂ ದೊಡ್ಡವು. ಈ ಗೂಬೆಯ ಶ್ರವಣ ಶಕ್ತಿ ಕೂಡ ಅಧಿಕ.

ಇವು ಮರಗಳ ಪೊಟರೆಗಳಲ್ಲೋ, ಬಿಲಗಳಲ್ಲೋ ವಾಸಿಸುತ್ತವೆ. ಅಲ್ಲೇ ತಮ್ಮ ಮೊಟ್ಟೆಯಿರಿಸಿ, ಮರಿಗಲನ್ನು ಪಾಲಿಸುವುದೂ ರೂಢಿ. ಸಂಜೆ ಹೊತ್ತು ತಮ್ಮ ಗೂಡಿನಿಂದ ಹೊರಬಿದ್ದು, ಮರಗಳಲ್ಲೋ ತಂತಿ ಸರಿಗೆಗಳ ಮೇಲೆಯೋ ಕುಳಿತುಕೊಂಡು, ಕರ್ಕಶ ಧ್ವನಿ ಹೊರಡಿಸುತ್ತಿರುತ್ತವೆ. ಇವುಗಳ ಒಂದು ಜಾತಿಯನ್ನು ಭಾರತೀಯರು ‘ಶಕುನದ ಹಕ್ಕಿ’ (ಔಲೆಟ್) ಎಂದು ಕರೆಯುತ್ತಾರೆ.

ತೇನೆ ಹಕ್ಕಿ (ಟಿಟಿಭ) : (ರೆಡ್ ವ್ಯಾಟಲ್ಡ್ ಲಾಪ್‌ವಿಂಗ್) ಪಾರಿವಾಳದಷ್ಟು ದೊಡ್ಡದಾದ ಪಕ್ಷಿ. ದೇಹಕ್ಕಿಂತ ಉದ್ದವಾದ ಕಾಲುಗಳಿರುತ್ತವೆ. ಬೆನ್ನು ರೆಕ್ಕೆಗಳೆಲ್ಲ ಕೆಂಪು ಮಿಶ್ರಿತ ಹೊಂಬಣ್ಣ. ಹೊಟ್ಟೆ ಬಿಳಿ ಬಣ್ಣ. ಬಿಳಿ ಪಟ್ಟೆಯೊಂದು ಕಣ್ಣಿನ ಹಿಂಭಾಗದಿಂದ ಹೊರಟು ಕುತ್ತಿಗೆ ಮತ್ತು ಭುಜಗಳ ಮೇಲೆ ಬಂದು ಹೊಟ್ಟೆಯ ಬಿಳುಪಿಗೆ ತಾಗಿರುತ್ತದೆ. ಹೆಣ್ಣು ಗಂಡುಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಚದುರಿದ ಚಿಕ್ಕ ಗುಂಪುಗಳಲ್ಲಿ ಹೊಳೆಯ ಪಕ್ಕದ ಬಯಲಿನಲ್ಲಿ, ಕಾಡಿನ ನಡುವಿರುವ ಬಯಲುಗಳಲ್ಲಿ, ಉತ್ತ ಹೊಲಗಳಲ್ಲಿ ಮೇವು ಹೆರಕುತ್ತವೆ. ಅವು ವಾಸಿಸುವ ಪರಿಸರಕ್ಕೆ ಅಪರಿಚಿತರು ಪ್ರವೇಶ ಮಾಡಿದ ತಕ್ಷಣವೇ ಅಪಾಯದ ಕೂಗು ಹಾಕುತ್ತವೆ. ಇವು ಕಿಟಾಹಾರಿಗಳು. ಗೊಬ್ಬರದಹುಳು, ಬಸವನ ಹುಳು, ಹಲ್ಲಿ, ಹಾವಿನ ಮರಿಗಳು ಇತ್ಯಾದಿಗಳನ್ನು ತಿನ್ನುತ್ತವೆ. ಏಪ್ರಿಲ್‌ನಿಂದ ಮೇವರೆಗೆ ಮರಿ ಮಾಡುತ್ತದೆ. ಮೊಟ್ಟೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಮರಿಗಳು ಓಡುತ್ತವೆ. ನೆಲದ ಮೇಲೆ ಕುಳಿಮಾಡಿ ಸುತ್ತಲಿನ ಬಣ್ಣಕ್ಕೆ ಹೊಂದಿಕೊಳ್ಳುವ ಮೊಟ್ಟೆಗಳನ್ನಿಡುತ್ತವೆ. ಗಾಬರಿಯಾದಾಗ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿ ಅನಂತರ ವಿಟ್ಟಿಟಿಟಿವ್ ಎಂದು ಕೂಗುತ್ತಾ ಹಾರುತ್ತವೆ.

ನವಿಲು :            (ಕಾಮನ್ ಪೀ ಫೌಲ್) ಭಾರತದ ರಾಷ್ಟ್ರಿಯ ಪಕ್ಷಿ. ಸಾಹಿತ್ಯದಲ್ಲಿ, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿಗಳಲ್ಲಿ ಹಾಸುಹೊಕ್ಕಾಗಿದೆ. ಇದರ ಪ್ರಧಾನ ಲಕ್ಷಣವೆಂದರೆ ಗಂಡು ಪಕ್ಷಿಗಳ ಉದ್ದದ ಬಾಲದ ಪುಕ್ಕಗಳು. ಕಡು ನೀಲಿ ಬಣ್ಣದ ನಡುವೆ ಹಳದಿ ಕೆಂಪು ಕಣ್ಣುಗಳಿರುವ ಇವು ಆಭರಣದಂತೆ ಕಾಣುತ್ತವೆ. ಅದ್ಬುತ ವರ್ಣವಿನ್ಯಾಸದ ಈ ನೀಳ ಪುಕ್ಕಗಳನ್ನು ಬೀಸಣಿಗೆಯ ರೀತಿ ಬಿಚ್ಚಿಕೊಂಡು ಗಂಡು ನವಿಲುಗಳು ಹೆಣ್ಣನ್ನಾಕರ್ಷಿಸಲು ನರ್ತಿಸುತ್ತವೆ. ಇವು ಸ್ವಾಭಾವಿಕವಾಗಿ ದಟ್ಟ ಕಾಡುಗಳಲ್ಲಿ ನದಿ ಸರೋವರಗಳ ಪಕ್ಕ ಗುಂಪಿನಲ್ಲಿ ಇರುತ್ತವೆ. ಹಾರಾಡುವುದು ಕಡಿಮೆ. ಹಾರಿದರೆ ಸಾಕಷ್ಟು ದೂರ ಹಾರಬಲ್ಲವು. ಕಾಳುಗಳು, ಎಲೆಗಳ ಚಿಗುರು, ಹಾವು, ಓತಿಕ್ಯಾತ, ಕೀಟಗಳು ಇದರ ಆಹಾರ. ಜನವರಿಯಿಂದ ಅಕ್ಟೋಬರ್‌ವರೆಗೆ ಮೊಟ್ಟೆ ಇಡುವ ಕಾಲ. ದಟ್ಟ ಪೊದೆಗಳಲ್ಲಿ ನೆಲಮಟ್ಟದಲ್ಲಿ ಹಲ್ಲು, ಕಡ್ಡಿಗಳಿಂದ ಗೂಡು ರಚಿಸುತ್ತದೆ.

ಪಿಕಳಾರ : (ಬುಲ್ ಬುಲ್) ಪಿಕಳಾರ ಮಲೆನಾಡಿನ ಅತ್ಯಂತ ಜನಪ್ರಿಯ ಹಕ್ಕಿ. ಗಾತ್ರದಲ್ಲಿ ಗುಬ್ಬಚ್ಚಿಗಿಂತ ಕೊಂಚ ದೊಡ್ಡದಾಗಿರುತ್ತದೆ. ಬಾಲದ ಪುಕ್ಕಗಳು ನೇರವಾಗಿರುತ್ತವೆ. ಕೊಕ್ಕು ತುದಿಯಲ್ಲಿ ಕೊಕ್ಕೆಯಂತೆ ಬಾಗಿರುತ್ತದೆ. ಕೊಕ್ಕಿನ ಬುಡದಲ್ಲಿ ಮೀಸೆಯಂಥ ಕೂದಲುಗಳಿರುತ್ತವೆ. ಈ ಜಾತಿಯ ಹಲವು ಹಕ್ಕಿಗಳಿಗೆ ತಲೆಯ ಮೇಲೆ ಕೋಳಿ ಚೊಟ್ಟಿಯಂತೆ ಜುಟ್ಟಿರುತ್ತದೆ. ಹೆಣ್ಣು ಗಂಡುಗಳೆರಡಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ದಟ್ಟವಾಗಿರುವ ಪೊದೆಗಳಲ್ಲಿ ಗೂಡು ಕಟ್ಟುತ್ತವೆ. ಈ ಹಕ್ಕಿಗಳು ಕೇವಲ ಮೊಟ್ಟೆ ಇಟ್ಟು ಮರಿ ಮಾಡುಲಷ್ಟೆ ಗೂಡುಗಳನ್ನು ಉಪಯೋಗಿಸುವುದು. ರಾತ್ರಿ ಮಲಗುವುದೆಲ್ಲ ಮರಗಳ ಕೊಂಬೆಯ ಮೇಲೆ.

ಗಲಾಟೆಕೋರ ಹಕ್ಕಿಗಳಿವು. ಅಪಾಯಕಾರಿ ಪ್ರಾಣಿಗಳಾಗಲೀ ಕಂಡಕೂಡಲೆ ಮೊದಲು ಕಿರುಚಿ ಗಲಾಟೆ ಮಾಡುವುವು. ರಕ್ಷಣೆ ದೊರೆತಲ್ಲಿ ಮನೆ ಹತ್ತಿರವೇ ಹಾರಾಡುತ್ತವೆ. ಕೀಟಗಳನ್ನು ಸಣ್ಣ ಹಣ್ಣುಗಳನ್ನು ತಿನ್ನುತ್ತವೆ.

ಪುರುಳಿ ಹಕ್ಕಿ : ಮೈನಾ ಅಥವಾ ಗೊರವಂಕ. ಉರುಳಿ, ಉಳ್ಳಿ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಪಿಕಳಾರ ಮತ್ತು ಪಾರಿವಾಳ ನಡುವಿನ ಗಾತ್ರದ ಮನುಷ್ಯನಿಗೆ ಚಿರಪರಿಚಿತವಾದ ಹಕ್ಕಿ. ಮೊದಲ ಉಳುಮೆಯ ಕಾಲದಲ್ಲಿ ಭೂಮಿಯಿಂದ ಮೇಲಕ್ಕೆ ಬರುವ ಕೀಟ, ಮರಿಗಳನ್ನು ಹೆಕ್ಕಲು ಉಳುವ ಹಸುಗಳನ್ನು, ನೇಗಿಲ ಗೆರೆಗಳನ್ನು ಹಿಂಬಾಲಿಸುತ್ತವೆ. ಕಪ್ಪು ಮಿಶ್ರಿತ ಕಂದುಬಣ್ಣದ, ಹಳದಿ ಕೊಕ್ಕು, ಕಾಲಿನ, ಕಣ್ಣಿನ ಸುತ್ತಲೂ ನಗ್ನ ಚರ್ಮವಿರುವ ಹಕ್ಕಿ. ಜೋಡಿಯಲ್ಲಿ ಅಥವಾ ಹಿಂಡಿನಲ್ಲಿ ಆಹಾರ ಹೆಕ್ಕುತ್ತವೆ. ಹಣ್ಣು, ಹುಳು, ಕಾಳು, ಕೀಟ, ಅಡುಗೆ ಮನೆಯ ವೃರ್ಥಪದಾರ್ಥ ಹೀಗೆ ಸರ್ವಭಕ್ಷಕ ಹಕ್ಕಿ. ಇದು ಹಾರುವಾಗ ರೆಕ್ಕೆಯ ಇಕ್ಕೆಲಗಳಲ್ಲಿ ಇರುವ ಬಿಳಿಯ ಪಟ್ಟಿ ಎದ್ದು ಕಾಣುತ್ತದೆ.

ಮಡಿವಾಳ : (ಮ್ಯಾಗ್‌ಪೈ ರಾಬಿನ್) ಮನುಷ್ಯ ವಾಸಕ್ಕೆ ತೀರಾ ಸಮೀಪವಾಗಿ ಹೊಂದಿಕೊಂಡಿರುವ ಕಾಡಿನ ಹಕ್ಕಿ ಬಾಲ ಎತ್ತಿಕೊಂಡಿರುತ್ತದೆ. ಗಾತ್ರದಲ್ಲಿ ಪಿಕಳಾರಕ್ಕಿಂತ ಕೊಂಚ ದೊಡ್ಡದು. ಕಪ್ಪು ಬಣ್ಣದ ಚುಕ್ಕೆಗಳಿರುವ ಬೂದು ಬಣ್ಣ ಇರುತ್ತದೆ. ಕುರುಚಲು ಕಾಡುಗಳಲ್ಲಿ ಹಳ್ಳಗಳ ಬದಿ ಇದ್ದು, ಮುಂಜಾವಿನಲ್ಲಿ ಮಧುರವಾದ ಸಿಳ್ಳನ ರಾಗಾಲಾಪನೆ ಮಾಡುತ್ತದೆ. ಕೀಟ್‌ಆಹಾರಿಯಾದ ಇದು ನೆಲದ ಮೇಲೆ ಹರಿದಾಡುವ ಕೀಟಗಳನ್ನು ಹೆರಕುವುದೇ ಹೆಚ್ಚು, ಏಪ್ರಿಲ್‌ನಿಂದ ಜೂನ್‌ವರೆಗೆ ಕಲ್ಲುಬಂಡೆಗಳ ಬಿರುಕುಗಳಲ್ಲಿ ಆಥವಾ ಮನೆಗಳ ಸೂರಿನ ಸಂದುಗೊಂದುಗಳಲ್ಲಿ ಹುಲ್ಲು, ನಾರು ಇತ್ಯಾದಿಗಳಿಂದ ಬಟ್ಟಲಾಕಾರದ ಗೂಡು ಮಾಡುತ್ತದೆ.

ಮರುಕುಟಿಗ : (ವುಡ್‌ಪೆಕರ್‌) ಸುಮಾರು ಏಳಕ್ಕೂ ಹೆಚ್ಚು ಜಾತಿಯ ಮರುಕುಟಿಗ ಹಕ್ಕಿಗಳಿವೆ.

ಗಾತ್ರದಲ್ಲಿ ಮತ್ತು ಬಣ್ಣದಲ್ಲಿ ವ್ಯತ್ಯಾಸವಿದ್ದು, ಸಾಮಾನ್ಯವಾಗಿ ಎಲ್ಲ ಹಕ್ಕಿಗಳ ಕೊಕ್ಕೂ ಉದ್ದಕ್ಕೆ ಚುಪಾಗಿ ಕಲ್ಲಿನಷ್ಟು ಗಟ್ಟಿಯಾಗಿದ್ದು, ಅದರಿಂದ ಹಳೆಯ ಒಣಗಿದ ಮರಗಳನ್ನು ಕೊಂಬೆಗಳನ್ನು ಕುಕ್ಕಿ ಗೆದ್ದಲು ಮತ್ತು ಕಾಂಡ ಕೊರೆಯುವ ಹುಳುಗಳನ್ನು ತಮ್ಮ ನೀಳ ನಾಲಿಗೆಯಿಂದ ಹಿಡಿದು ತಿನ್ನುತ್ತವೆ. ಮರವನ್ನು ತಮ್ಮ ಬಾಲದ ಆಧಾರದ ಮೇಲೆ ಕುಪ್ಪಳಿಸಿ ಕುಪ್ಪಳಿಸಿ ಹತ್ತುತ್ತದೆ. ಕಟಕಟ ಶಬ್ದ ಮಾಡುತ್ತಾ ಇವು ಅಸಾಧ್ಯ ವೇಗದಲ್ಲಿ ಕೊಕ್ಕಿನಿಂದ ಕುಟುಕಿ ಮರ ಕೊರೆದು ಗೂಡು ಮಾಡುತ್ತವೆ. ಕೆಲುವು ವೇಳೆ ಹೂವಿನ ಮಕರಂದಕ್ಕೂ ಬರುತ್ತವೆ. ಹಣ್ಣನ್ನೂ ಅಪರೂಪಕ್ಕೆ ತಿನ್ನುತ್ತವೆ. ಹಾರುತ್ತಾ ಟ್ರೀಟಿಟಿಟಿ ಎಂದು ಗಡಗಹಿಸಿ ನಕ್ಕಂತೆ ಕೂಗುತ್ತವೆ. ಮರಕುಟುಕಗಳಿಗೆ ತಲೆಯ ಮೇಲೆ ಕೆಂಪು ಚೊಟ್ಟಿ ಇರುತ್ತದೆ. ಕೆಲವಕ್ಕೆ ಇರುವುದಿಲ್ಲ. ಈ ಹಕ್ಕಿಯ ಕೆಲವು ಜಾತಿಗಳು ಅಪಾಯದ ಅಂಚಿನಲ್ಲಿವೆ.

ಮುಂಗಟ್ಟೆಹಕ್ಕಿ : ಹದ್ದನ್ನು ಹೊಲುವ ಒಂದು ಪಕ್ಷಿ. ಅದರ ಕೊಕ್ಕಿನ ಮೇಲೆ ಚಾವಣಿಯಾಕಾರದ ಕೊಂಬಿದೆ. ಹೆಚ್ಚಾಗಿ ಹಣ್ಣಿನ ಮರಗಳಲ್ಲಿ ಗುಂಪುಗುಂಪಾಗಿ ಕಾಣಸಿಗುತ್ತವೆ. ಇವುಗಳ ದೊಡ್ಡ ಸ್ವರದ ಕೇಕೆಯಿಂದ ಬೇಟೆಗಾರರು ಗುರುತಿಸಿ ಬಿಲ್ಲು ಬಂದೂಕುಗಳಿಂದ ಬೇಟೆಯಾಡುತ್ತಾರೆ. ವಂಶಾಭಿವೃದ್ಧಿ ಕಾಲದಲ್ಲಿ ಹೆಣ್ಣು ಮರದ ಪೊಟರೆಯಲ್ಲಿ ಮೊಟ್ಟೆಯಿಟ್ಟು ಕಾವಿಗೆಕೂರುತ್ತದೆ. ಗಂಡು ಗೂಡಿನ ಬಾಯನ್ನು ಬಲವಾದ ತೆರೆ ನೇಯ್ದು             ಆಹಾರ ನೀಡಲು ತನ್ನ ಕೊಕ್ಕು ಹೋಗುವಷ್ಟು ರಂಧ್ರವನ್ನು ಮಾಡುತ್ತದೆ. ಗಂಡು ಆ ಕಿಟಕಿಯ ಮುಲಕ ಆಹಾರ ನೀಡುತ್ತದೆ. ಗಂಡು ಬೇಟೆಗಾರನಿಗೆ ಬಲಿಯಾದರೆ ಹೆಣ್ಣು ಮರಿಗಳೊಡನೆ ಪೊಟರೆಯಲ್ಲೇ ಅಸುನೀಗಬೇಕಾಗುತ್ತದೆ.

ಮಿಂಚುಳ್ಳಿ : (ಕಿಂಗ್ ಫಿಷರ್‌) ಮಿಂಚುಳ್ಳಿ ಹಕ್ಕಿಗಳಲ್ಲಿ ನಾಲ್ಕೈದು ಜಾತಿಗಳಿವೆ. ಬಿಳಿ ಮಿಂಚುಳ್ಳಿ, ಹೆಮ್ಮಿಂಚುಳ್ಳಿ, ಕಿರುಮಿಂಚುಳ್ಳಿ, ಗದ್ದೆ ಮಿಂಚುಳ್ಳಿ ಎಂದು ಮುಂತಾಗಿ. ಗಾತ್ರ ಮತ್ತು ಬಣ್ಣದ ದೃಷ್ಟಿಯಿಂದ ಬೇರೆಬೇರೆಯಾಗಿದ್ದು, ಒಂಟಿಯಾಗಿ ಹಳ್ಳ ಕೆರೆಗಳ ಪಕ್ಕದಲ್ಲಿ ಕುಳಿತಿರುತ್ತವೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಚುರುಕಾಗಿ ಹಾರಾಡುವ ಇವು ಹಾರುವಾಗ ಚೀ ಚೀ ಎಂದು ಕೂಗುತ್ತಾ ಹಾರುತ್ತವೆ.

ಮಿಂಚುಳ್ಳಿ ನೀರಿನ ಹಕ್ಕಿ. ಎತ್ತರದ ಜಾಗದಲ್ಲಿ ನೀರು ನೋಡುತ್ತಾ ಕುಳಿತಿದ್ದು ಮೀನು ಮೇಲೆ ಬರುತ್ತಲೂ ಒಮ್ಮೆಲೇ ಅದರ ಮೇಲೆ ಎರಗಿ ಹಿಡಿಯುತ್ತದೆ. ಮೀನು, ಏಡಿ, ಕಪ್ಪೆ ಇತ್ಯಾದಿಗಳನ್ನು ಹಿಡಿದು ತಿನ್ನುತ್ತದೆ.

ರಣಹದ್ದು : ಒಂದು ಮಾಂಸಾಹಾರಿ ಪಕ್ಷಿ. ಸತ್ತುಬಿದ್ದ ಪ್ರಾಣಿಗಳನ್ನು ದೂರದಿಂದಲೇ ಗುರುತಿಸಿ ಬಕ್ಷಿಸುತ್ತದೆ. ನಿಸರ್ಗದ ಜಾಡಮಾಲಿ.

ಹೊರಸಲಕ್ಕಿ : (ಚೋರೆ) (ಸ್ವಾಟೆಡ್ ಡವ್) ಆಕಾರದಲ್ಲಿ ಪಾರಿವಾಳವನ್ನು ಹೋಲುವ ಹಕ್ಕಿ. ಕೆಂಪು ಮಿಶ್ರಿತ ಕಂದು ಬಣ್ಣದ ರೆಕ್ಕೆ ಮತ್ತು ಬೆನ್ನಿನ ಮೇಲೆ ಕಪ್ಪು ಚುಕ್ಕಿಗಳಿರುತ್ತವೆ. ರೆಕ್ಕೆಗಳ ತುದಿಯಲ್ಲಿ ಬೂದಿ ಬಣ್ಣದ ಪಟ್ಟೆ ಇರುತ್ತದೆ. ಗಮಡು ಹೆಣ್ಣುಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಕಾಡಿನ ನಡುವಿರುವ ಮೈದಾನಗಳಲ್ಲೂ, ಗಾಡಿ ದಾರಿ ಮತ್ತು ಕುಯ್ದ ಗದ್ದೆಗಳಲ್ಲೂ,ಜೋಡಿಗಳಲ್ಲಿ ಇಲ್ಲವೆ ಚಿಕ್ಕ ಗುಂಪುಗಳಲ್ಲಿ ಮೇಯುತ್ತಿರುತ್ತವೆ. ಬೇಗನೆ ಬೆದರುತ್ತವೆ. ಕಾಳುಗಳನ್ನು ಧಾನ್ಯಗಳನ್ನು ತಿನ್ನುವ ಹಕ್ಕಿಗಳು. ರಕ್ಷಣೆ ಕೊಟ್ಟರೆ ಸಾಕಿದ ಹಕ್ಕಿಗಳಂತೆಯೇ ಉದ್ಯಾನಗಳಿಗೂ ಮನೆಗಳ ಬಳಿಗೂ ಬಂದು ಮೇಯುತ್ತವೆ. ಬಹಳ ವೇಗವಾಗಿ ಹಾರುವ ಈ ಹಕ್ಕಿಗಳು ನೆಲ ಬಿಡುಬೇಕಾದರೆ ಪಟಪಟ ರೆಕ್ಕೆ ಸದ್ದಾಗುವಂತೆ ಬಡಿಯತ್ತವೆ. ಮಧ್ಯಾನ್ಹ ಕೊಂಬೆಗಳ ಮೇಲೆ ಕುಳಿತು ಕುರ‍್ರೂರೂ ಎಂದು ಕೂಗುತ್ತವೆ. ಮರಿಗಳ ಕವಲಿನಲ್ಲಿ ಕಡ್ಡಿಯಿಂದ ಅಸ್ತವ್ಯಸ್ತವಾಗಿ ಗೂಡು ಕಟ್ಟುತ್ತವೆ.

ಹ್ಯಾಟೆ : (ಹೇಂಟೆ) ಹೆಣ್ಣು ಕೋಳಿ. ಮೊಟ್ಟೆ ಇಡುವ ವಯಸ್ಸಿನ ಕೋಳಿ.