ಅಂಕದ ಪಟ್ಟಿ : ಕೋಳಿಗಳ ಕಾದಾಟದ ಸ್ಪರ್ಧೆಗಾಗಿ ಸಿಗದಿತವಾಗಿರುತ್ತಿದ್ದ ಬಯಲು ಜಾಗ. ‘ಅಂಕದ ಬಯಲು’ ಎಂದೂ ಕರೆಯುತ್ತಾರೆ.

ಆರುಕಟ್ಟು : ಉಳುಮೆಯನ್ನು ಮಾಡಲು ನೇಗಿಲು ಹುಡುವುದು.

ಈಟಿ : ಪ್ರಾಣಿಗಳನ್ನು ಇರಿದು ಕೊಲ್ಲುವ ಸಾಧನ. ಇದನ್ನು ಬರ್ಚಿ ಎಂದು ಕರೆಯುತ್ತಾರೆ. ಇದರ ಮುಂದೆ ಕಬ್ಬಿಣದ ಚೂಪಾದ ತುದಿ ಇದ್ದು, ಹಿಂದಿನ ಭಾಗದಲ್ಲಿ ಮರದ ಕೋಲಿರುತ್ತದೆ. ಹಂದಿ ಮುಂತಾದ ಪ್ರಾಣಿಗಳ ಮೇಲೆ ಈ ಸಾಧನವನ್ನು ದೂರದಿಂದಲೇ ಎಸೆದು ಕೊಲ್ಲುತ್ತಾರೆ.

ಈಡು :  ಕೋವಿಗೆ ತುಂಬುವ ಮದ್ದುಗುಂಡು. ಶಿಕಾರಿ ಮಾಡುವಾಗ ಸಿಡಿಸುವ ಒಂದು ಗುಂಡಿನ ಪ್ರಮಾಣ.

ಈಡುಗಾರ : ಬೇಟೆಯ ನಿಪುಣ ಬಿಲ್ಲುಗಾರ. ಶಿಕಾರಿಗಾರ. ಬಂದೂಕಿನಿಂದ ಗಿಂಡು ಹಾರಿಸುವವ. ನುರಿತ ಬಿಲ್ಲುಹಾರ. ಕಾಡಿನಲ್ಲಿ ಓಡುವ ಪ್ರಾಣಿಯನ್ನು ಕೋವಿಯಿಂದ ಸುಟ್ಟು ಕೆಳಗುರುಳಿಸುವ ಬೇಟೆಗಾರನಿಗೆ ಕೊಡುವ ಹೆಸರು.

ಉಮ್ಮಿಗುಡ್ಡೆ : ಭತ್ತದ ಹೊಟ್ಟು. ಧಾನ್ಯಗಳ ಮೇಲಿನ ಸಿಪ್ಪೆಯ ರಾಶಿ.

ಊಳಿಡು : ನಾಯಿಗಳು ಆಕಾಶಕ್ಕೆ ಮುಖಮಾಡಿ ರಾಗವಾಗಿ ಕೂಗುವಿಕೆ. ನಾಯಿಗಳ ಬೊಳ್ಳು. ಇದನ್ನು ಅಪಶಕುನವೆಂದು ಜನ ನಂಬುತ್ತಾರೆ. ಬೇಟೆಗೆ ಹೊರಡುವಾಗ ನಾಯಿಗಳು ಊಳಿಟ್ಟರೆ ಅಂದಿನ ಬೇಟೆ ಆಗುವುದಿಲ್ಲವೆಂದು ತಿಳಿಯುತ್ತಾರೆ.

ಎರಗು : ಮುತ್ತಗೆ ಹಾಕು. ಮೇಲೆ ಬೀಳು, ಆಕ್ರಮಿಸು. ಬೆನ್ನಟ್ಟು. ಪ್ರಾಣಿಗಳು ರೊಚ್ಚಿಗೆದ್ದು ಬೇಟೆಗಾರನ ಬಳಗೆ ಬರುವುದು.

ಎಲೆಮದ್ದು : ಕಾಡಿನ ಎಲೆಗಳಿಂದ ತಯಾರಿಸಿದ ಔಷಧಿ. ಕಾಡಿನಲ್ಲಿ ಆಗುವ ಸಣ್ಣಪುಟ್ಟ ಗಾಯಗಳಿಗೆ ಬಳಸುವ ಸಸ್ಯದ ಮದ್ದು.

ಒಡ್ಡು : ಹೊಲಗದ್ದೆಗಳಿಗೆ ಪ್ರಾಣಿಗಳು ಬರದಿರಲೆಂದು ತಡೆಯಲು ಮಾಡಿದ ಮುಳ್ಳಿನ ಬೇಲಿ. ಹರಿಯುವ ನೀರನ್ನು ಯಾಪೆಗೆ ಹಾಯಿಸಲು ಮಾಡಿದ ಅಡ್ಡಗಟ್ಟೆ.

ಒಂಟಿನಳಿಗೆ : ಒಂದು ನಳಿಗೆಯನ್ನು ಹೊಂದಿದ ಕೇಪಿನ ಕೋವಿ. ಶಿಕಾರಿಯಲ್ಲಿ ಒಂಟಿನಳಿಗೆಯ ಬಿಲ್ಲುಗಾರರೇ ಹೆಚ್ಚು. ಕಾರಣ ದುಬಾರಿಯಾದ ಜೋಡುನಲ್ಲಿಯನ್ನು ಜನ ಸಾಮಾನ್ಯರಿಗೆ ಹೊಂದಲು ಕಷ್ಟವಾದ್ದರಿಂದ ಬಡವರು ತಮಗೆ ಎಟುಕುವ ಒಂಟಿನಳಿಗೆ ಕೇಪಿನ ಕೋವಿಯ ಮೊರೆಹೋಗುತ್ತಾರೆ.

ಕಂಬಳ : ಊರಿನ ಹತ್ತಿಪ್ಪತ್ತು ಕುಟುಂಬದವರು ಸಾಮುಹಿಕವಾಗಿ ಸೇರಿನ ಮಳೆಗಾಲಕ್ಕೆ ಅಥವಾ ಆ ವರ್ಷಕ್ಕೆ ಬೇಕಾದ ಕಟ್ಟಿಗೆ ಕಡಿದು ರಾಶಿ ಹಾಕುವುದು. ಮಳೆಗಾಲದಲ್ಲಿ ಬೇಟೆಯ ಪ್ರಾಣಿಯನ್ನು ಸುಡಲು ಈ ಕಟ್ಟಿಗೆಯನ್ನು ಬಳಸಲಾಗುತ್ತದೆ.

ಕಟ್ಟುಗೋವಿ : ಕಾಡು ಪ್ರಾಣಿಗಳ ಓಡಾಟವನ್ನು ಗಮನಿಸಿ ಕೋವಿಯನ್ನು ಕಟ್ಟಿ ನಳಿಗೆಯ ಗುರಿಯನ್ನು ದಾರಿಗೆ ಬಿಳುವಂತೆ ಮಾಡಲಾಗುತ್ತದೆ. ಟ್ರಿಗರ್‌ನಿಂದ ದಾರವನ್ನು ದಾರಿಗೆ ಅಡ್ಡಲಾಗಿ ಕಟ್ಟಲಾಗಿರುತ್ತದೆ. ದಾರವನ್ನು ತಾಕಿ ದಾಟುವ ಪ್ರಾಣಿಗೆ ಗುಂಡು ತಗಲುವಂತೆ ಮಾಡಲಾಗುತ್ತದೆ.

ಕಡಹಾಕು :ಮೀನು ಹಿಡಿಯುವ ವಿಧಾನ. ಘಾಟಿನ ಪದಾರ್ಥಗಳಿಂದ ನಡೆಸುವ ಮೀನು ಬೇಟೆ.

ಕಳಮಶ್ರೀ ಪೂಜೆ : ಭತ್ತದ ಗದ್ದೆಯ ಪೂಜೆ. ಭೂಮಿ, ಪೈರುಗಳಿಗೆ ನಡೆಸುವ ಆರಾಧನೆ.

ಕಳ್ಳುಗೊತ್ತು : ಕಳ್ಳು ಸೇವನೆಯ ಪ್ರತ್ಯೇಕ ಸ್ಥಳ.

ಕಾಕು : ಸೋವುಗಾರರು ಕಾಡಿನಲ್ಲಿ ಮಾಡುವ ಗದ್ದಲ. ಬೇಟೆಗಾರನು ಇನ್ನೊಬ್ಬ ಬೇಟೆಗಾರನನ್ನು ಕರೆಯುವ ಕೂಗು.

ಕೆಸರುಗದ್ದೆ : ನಾಟಿ ಮಾಡುಲು ಹದಗೊಳಿಸಿದ ಗದ್ದೆ. ಭತ್ತದ ಸಸಿಯನ್ನು ನೆಡುವ ಮೊದಲು ಗದ್ದೆಯನ್ನು ಹದಗೊಳಿಸುತ್ತಾರೆ. ಬೇಟೆ ಪ್ರಾಣಿಗಳನ್ನು ಇಂಥ ಸ್ಥಳಕ್ಕೆ ಅಟ್ಟಿ ಅಲ್ಲಿ ಅವುಗಳನ್ನು ಬೇಟೆಯಾಡುವ ಪದ್ಧತಿ.

ಕೇಪಿನ ಕೋವಿ : ಮದ್ದು, ಚರೆ, ಮಸಿಗಳನ್ನು ತುಂಬಿ ಹೊಡೆಯುವ ದೇಸಿ ಬಂದೂಕು.

ಕೇಪು : ಕೋವಿಯನ್ನು ಸಿಡಿಸಲು ಬಳಸುವ ಸಿಡಿಮದ್ದಿನ ಟೋಪಿ.

ಕೊಚ್ಚು ಗೊಲ್ಟಿ : ಚಿಕ್ಕ ಅಲಗು. ಮಾಂಸ ಎಲುಬು ಕತ್ತರಿಸುವ ಸಾಧನ.

ಕೋವಿ ಕಟ್ಟುವುದು : ನೋಡಿ- ಕಟ್ಟುಗೋವಿ.

ಕೋಳಿ ಅಂಕ : ಕೋಳಿ ಹುಂಜಗಳ ಮೇಲೆ ಜೂಜು ಕಟ್ಟಿ ಆಡುವ ಆಟ. ಅಂಕದ ಹುಂಜಗಳ ಕಾಲುಗಳಲ್ಲಿ ಹರಿತವಾದ ಸಣ್ಣ ಕತ್ತಿಗಲನ್ನು ಬಿಗಿಯಾಗಿ ಕಟ್ಟುತ್ತಾರೆ. ಕಾಳಗದಲ್ಲಿ ಒಂದು ಹುಂಜ ಇನ್ನೊಂದು ಹುಂಜವನ್ನು ಕತ್ತಿಯಿಂದ ಹೊಡೆದು ಕೊಲ್ಲುತ್ತದೆ. ಗೆದ್ದಿರುವ ಎದುರಾಳಿ ಹುಂಜಕ್ಕೂ ಹಾಯಗಳಾಗಿರುತ್ತವೆ. ಕಾಳಗಕ್ಕೆ ಉತ್ತೇಜನ ನೀಡಲು ಹುಂಜಗಳಿಗೆ ಸಾರಾಯಿ ಕುಡಿಸುತ್ತಾರೆ. ಕಾಳಗದಲ್ಲಿ ಜಯಪಡೆದ ಕೋಳಿಯ ಯಜಮಾನನಿಗೆ ಸತ್ತ ಕೋಳಿಯ ಜೊತೆಗೆ ಕೋಳಿಯ ಮೇಲೆ ಕಟ್ಟಿದ ಜೂಜು ಹಣವು ಸಿಗುತ್ತದೆ. ನೋಡಲು ಬಂದ ಪ್ರೇಕ್ಷಕರು ಮೇಲು ಕಾಳಗ ಹುಂಜಗಳ ಮೇಲೆ ಹಣ ಕಟ್ಟಿ ಜೂಜಾಡುತ್ತಾರೆ. ಹಬ್ಬ, ಹುಣ್ಣಿಮೆ, ಜಾತ್ರೆಗಳ ಬಿಡುವಿನ ದಿನಗಳಲ್ಲಿ ಕೋಳಿ ಅಂಕಗಳು ನಡೆಯುತ್ತವೆ.

ಗರ್ನಾಲು : ಸಿಡಿಯುವ ಮದ್ದು. ಕಾಡಿನ ಪೊದೆಗಳಿಂದ ಓಡಿಸಲು ಸಿಡಿಸುತ್ತಾರೆ. ಈ ಸದ್ದಿಗೆ ಗಾಬರಿಗೊಂಡ ಪ್ರಾಣಿಗಳು ಬಿಲ್ಲುಗಾರರಿಗೆ ಎದುರಾಗಿ ಅವರ ಗುಂಡಿಗೆ ಬಲಿಯಾಗುತ್ತವೆ. ಸೋವುಗಾರರು ಈ ಗರ್ನಾಲುಗಳನ್ನು ಬಳಸುತ್ತಾರೆ.

ಚರೆ : ಕೋವಿಯಲ್ಲಿ ತುಂಬುವ ಸಣ್ಣ ಗುಂಡುಗಳು. ಇದನ್ನು ಸತುವಿನಿಂದ ಮಾಡಿರುತ್ತಾರೆ. ಈ ಚರೆಗಳಿಂದ ಕೇವಲ ಸಣ್ಣ ಪ್ರಾಣಿ ಮತ್ತು ಪಕ್ಷಿಗಳನ್ನು ಹೊಡೆಯಲು ಸಾಧ್ಯ.

ಚಾಟರಿಬಿಲ್ಲು : ಹಕ್ಕಿ ಬೇಟೆಯಲ್ಲಿ ಬಳಸುವ ಒಂದು ಸಾಧನ. ರಬ್ಬರ್‌ಪಟ್ಟಿಗಳನ್ನು ಬಳಸಿ (ಕ್ಯಾಟರ್‌ಬಿಲ್ಲು) ನಿರ್ಮಿಸಿದ ಉಪಕರಣ. ಇದನ್ನು ರಬ್ಬರ್‌ಬಿಲ್ಲು ಎಂತಲು ಕರೆಯುತ್ತಾರೆ.

ಚೊಗರು ಹಾಕು : ಅಡಿಕೆಗೆ ಹಾಕುವ ಕಡು ಪದಾರ್ಥ. ಕೆಂಪಗಿನ  ಒಗರು ರಸಾಯನ.

ಜಿಗ್ಗು : ಮರದ ಒಣಪುರಳೆ. ಗಿಡಗಳ ಸಣ್ಣ ಸಣ್ಣ ಒಣಗಿದ ಕಟ್ಟಿಗೆಗಳು.

ಜೇನು ಬೇಟೆ : ಜೇನನ್ನು ಹುಡುಕಿ ಕಿಳುವುದು. ಮತ್ತು ಅದರ ತುಪ್ಪವನ್ನು ಸಂಗ್ರಹಿಸುವುದು. ಜೇನುನೊಣಗಳ ಹಾರುವ ಚಲನವಲನಗಳನ್ನು ಗಮನಿಸಿ ಅವುಗಳ ಗುಡನ್ನು ಪತ್ತೆಹಚ್ಚುತ್ತಾರೆ. ಬೇಟೆಗಾರರ ತಂಡ ಹುಲ್ಲು, ಬಕೆಟು, ಸಣ್ಣ ಕತ್ತಿ, ಬೆಂಕಿ ಪೆಟ್ಟಿಗೆ, ಕಂಬಳಿ, ಕೊಪ್ಪೆ, ಕೊಡಲಿ ಹಾಗೂ ಉದ್ದನೆಯ ಗಳ ಹಿಡಿದು ಜೇನು ಗುಡಿನ ಸಮೀಪ ತೆರಳುತ್ತಾರೆ. ಹಗಲಿನ ಬೇಟೆಗಿಂತ ರಾತ್ರಿಯಲ್ಲಿ ಬೇಟೆ ಹೆಚ್ಚು ಸೂಕ್ತವಾಗಿರುತ್ತದೆ. ಕಾರಣ ರಾತ್ರಿಯಲ್ಲಿ ಜೇನು ಹುಳುಗಳಿಂದ ಬೇಟೆಗಾರನಿಗೆ ಅಪಾಯ ಕಡಿಮೆ. ಈ ಬೇಟೆಯಲ್ಲಿ ಒಬ್ಬರಿಂದ ಐದರವರೆಗೆ ಬೇಟೆಗಾರರು ಇರುತ್ತಾರೆ.

ಜೈನೆಡೆ : ಜೈನ ದೇವತೆಗಳಿಗಾಗಿರುವ ನೈವೇದ್ಯ. ಬಲಿ ಹರಕೆಗಳಲ್ಲಿ ತೆಗೆದಿರಿಸುತ್ತದ್ದ ಸಸ್ಯಾಹಾರಿ ಪದಾರ್ಥ.

ತುಂಡು : ಮಾಂಸದ ಸಣ್ಣ ಸಣ್ಣ ಚುರುಗಳು. ಹಸಿಗೆ ಮಾಡುವಾಗ ಇಡಿಯಾದ ಪ್ರಾಣಿಯನ್ನು ಹೀಗೆ ತುಂಡು ತುಂಡುಗಳನ್ನಾಗಿ ಮಾಡುತ್ತಾರೆ.

ತೆರೆ : ಕನ್ಯಾಶುಲ್ಕ. ಮದುವೆ ಮಾಡಿಕೊಳ್ಳುವ ಹುಡುಗಿಯ ಮನೆಯವರಿಗೆ ವರನ ಮನೆಯವರು ನೀಡಬೇಕಾಗಿದ್ದ ಹಣ.

ತೋಟ : ತೋಟ ಕೋವಿಗೆ ಹಾಕುವ ಸಿದ್ದವಾದ ಮದ್ದು. ದಪ್ಪವಾದ ಕಾಗದದ ಸಿಲಿಂಡರಿನಲ್ಲಿ ಮದ್ದುತುಂಬಿ, ಒಂದು ಭಾಗದಲ್ಲಿ ಹಿತ್ತಾಳೆ ತಲೆ ಅಥವಾ ಟೋಪಿ ಇರುತ್ತದೆ. ಈ ಹಿತ್ತಾಳೆ ಟೋಪಿಯ ಮಧ್ಯ ಕೇಪಿನ ಸ್ಥಳವಿರುತ್ತದೆ. ತೋಟ ಕೋವಿಗೆ ಹಾಕಿ ಬಾರ್‌ಮಾಡಿದಾಗ ಗುಂಡು ಹಾರುತ್ತದೆ.

ತೋಟ ಹಾಕುವುದು : ಡೈನಮೈಟ್‌ಮದ್ದು ಬಳಸಿ ಮಾಡುವ ಮೀನ ಬೇಟೆ.

ತೋಟಾಕೋವಿ : ಸುಧಾರಿಸಿದ ತಂತ್ರಜ್ಞಾನದಿಂದ ಮಾಡಿದ ಬಂದೂಕು. ಸಿದ್ದ ತೋಟಗಳನ್ನು ಬಳಸುವ ಕೋವಿ. ಇದರಲ್ಲಿ ಎರಡು ಬಗೆಗಳಿವೆ. ಒಂಟಿನಳಿಗೆ ಹಾಗೂ ಚೋಡಿ ನಳಿಗೆ. ಆಯಾಯ ಕೋವಿಗಳಿಗೆ ಆಯಾಯಾ ನಂಬರಿನ ಸಿದ್ದ ತೋಟಗಳು ಸಿಗುತ್ತವೆ. ಚರೆತೋಟ, ಕಡಕಿನ ತೋಟ, ಗುಂಡಿನ ತೋಟಗಳೆಂಬ ಸಿದ್ದ ಮದ್ದುಗಳಿವೆ. ಸಣ್ಣ ಪ್ರಾಣಿಗಳನ್ನು ಚರೆ ತೋಟದಿಂದಲೂ, ದೊಡ್ಡ ಪ್ರಾಣಿಗಳನ್ನು ಕಡಕಿನ ತೋಟ ಹಾಗೂ ಗುಂಡಿನ             ತೋಟದಿಂದಲು ಹೊಡೆಯುತ್ತಾರೆ. ಈ ಕೋವಿಗಳಿಗೆ  ಸಿದ್ದ ತೋಟಾಗಳನ್ನು ಯಾವಾಗ ಬೇಕಾದರು ಸುಲಭವಾಗಿ ಹಾಕಿಕೊಳ್ಳ ಬಹುದು.

ದಾಡೆ : ಕೋರೆ ಹಲ್ಲು. ಹಂದಿಗಳ ದವಡೆಯಿಂದ ಉದ್ದವಾಗಿ ತಂದಿರುವ ಕೋರೆಹಲ್ಲು. ಅಪಾಯ ಬಂದಾಗ ಈ ಕೋರೆ ಹಲ್ಲಿನಿಂದ ಶತ್ರುಗಳನ್ನು ತಿವಿದು ಬಿಡುತ್ತದೆ. ಇದರ ಹೊಡೆತಕ್ಕೆ ಹುಲಿಯೂ ಹೆದರಿ ಓಡುತ್ತದೆ.

ದ್ಯಯ್ಯದ ಬನ : ಭೂತದ ಕಾಡು. ಮನೆಯ ಸುತ್ತಣ ಕಾಡಿನಲ್ಲಿ ಮರಗಳ ಬುಡದಲ್ಲಿನ ಕಲ್ಲುಗಳೇ ಈ ಭೂತದ ಬನಗಳಾಗಿರುತ್ತವೆ. ಮಲೆನಾಡಿನಲ್ಲಿ ಪ್ರತಿವರ್ಷ ಹರಕೆ ತೀರಿಸುತ್ತಾರೆ. ಇದು ಜನಪದರು ವೃಕ್ಷರಕ್ಷಣೆಗೆ ಮಾಡಿಕೊಂಡ ಒಂದು ಆಚರನಾತ್ಮಕ ನಿಯಮ. ಇಂಥಹ ಮರಗಳ ಸಮೂಹ ಅಥವಾ ಕಾಡನ್ನು ಯಾರೂ ನಾಶಮಾಡುವುದಾಗಲಿ, ಕಡಿಯುವುದಾಗಲಿ ಮಾಡುವುದಿಲ್ಲ. ಹಾಗೆ ಮಾಡಿದರೆ ಅವರಿಗೆ ಕೇಡಾಗುತ್ತದೆಂದು ನಂಬುತ್ತಾರೆ. ಹಾಗೆಯೇ ಇಲ್ಲಿ ಮೂಢನಂಬಿಕೆಯ ಕ್ರಿಯಾಚರಣೆಗಳೂ ನಡೆಯುವುದಿದೆ.

ದೊಂದಿ : ಬೇಟೆಯಲ್ಲಿ ಬೆಳಕಿಗಾಗಿ ಬಳಸುವ ಸಾಧನ. ಅಡಿಕೆ ಅಥವಾ ಬಿದಿರು ದಬ್ಬೆಗಳಿಂತ ಮಾಡಿದ ಪಂಜು ಸುರುಕಿ ಬೇಟೆ ಹಾಗೂ ಮೀನು ಬೇಟೆಯಲ್ಲಿ ಬೆಳಕಿಗಾಗಿ ಬಳಸುತ್ತಾರೆ.

ನಲ್ಲಿ : ನಳಿಕೆ. ನಳಗೆ ಅಪರ್ಭಂಶ. ಪ್ರಾಣಿಗಳ ಕಾಲುಗಳ ಮೂಳೆಗಳು. ಕೋವಿಯ ಕಬ್ಬಿಣದ ನಳಿಗೆ.

ನಾಟಾ : ಮರದ ದಿಮ್ಮಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಕತ್ತರಿಸಿ ತಂದಿರಿಸಿಕೊಂಡ ಮರದ ತುಂಡುಗಳು.

ನಾಮ ಪೆಟ್ಟಿಗೆ : ನಾಮ, ದುಂಡೆ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಮಾಡಿದ ಬೆತ್ತದ ಪೆಟ್ಟಿಗೆ.

ನಾಯಿಪಾಲು : ಬೇಟೆಯಲ್ಲಿ ಒಳಗೊಂಡ ನಾಯಿಗಳ ಮಾಲಿಕರಿಗೆ ನೀಡುವ ಬೇಟೆಯ ಪ್ರಾಣಿಯ ಮಾಂಸದ ಪಾಲು. ಇದು ಸೋವುಗಾರರಿಗೆ ನೀಡುವ ಪಾಲಿನಷ್ಟೆ ಇರುತ್ತದೆ. ಬೇಟೆಗೆ ಬರುವ ಪ್ರತಿಯೊಬ್ಬ ಸೋವುಗಾರನೂ ಒಂದೋಂದು ನಾಯಿಯನ್ನು ಹೊಂದಿರುತ್ತಾನೆ. ಅಪವಾದವೆನ್ನುವಂತೆ ನಾಯಿ ಇಲ್ಲದ ಸೋವುಗಾರರು ಬೇಟೆಯಲ್ಲಿರುತ್ತಾರೆ.

ನೆಲಈಡು : ಬಿಲ್ಲುಗಾರ ಕೈತಪ್ಪಿನಿಂದ ನೆಲಕ್ಕೆ ಹೊಡೆದ ಈಡು. ಬೇಟೆಯಲ್ಲಿ ನೆಲ ಈಡು ಹೊಡೆದ ಬೇಟೆಗಾರನು ಉಳಿದ ಬೇಟೆಗಾರರಿಂದ ಅವಮಾನಿತನಾಗುತ್ತಾನೆ.

ಪಕಾರ ಮಾಡು : ಮಾಂಸದಡುಗೆಯನ್ನು ಸಾಂಕೇತಿಕವಾಗಿ ಸೂಚಿಸುವುದು. ಸಸ್ಯಾಹಾರಿಗಳೆದುರು ಮಾಂಸಹಾರಿಗಳು ಬಳಸುವ ಸಂಕೇತ.

ಪಡಿ : ದುಡಿಮೆಯ ಪ್ರತಿಫಲ. ಭತ್ತ, ಅಕ್ಕಿ ಮುಂತಾದ ಧಾನ್ಯ ರೂಪದಲ್ಲಿ ನೀಡುವ ಕೂಲಿ.

ಬಗನಿಕತ್ತಿ : ಬಗನಿಕಳ್ಳು ಇಳಿಸುವವನು ಉಪಯೋಗಿಸುವ ಸಣ್ಣ ಕತ್ತಿ.

ಬಗಲಿ : ಕೋಳಿಯಂಕದ ತೀರ್ಪುಗಾರ, ಕೋಳಿ ಜೂಜಿಗೆ ಎರಡು ಹುಂಜಗಳು ಸಮಾನ ಬಲವಾಗಿರುವುದನ್ನು ತೀರ್ಮಾನಿಸುವವನು. ಜೂಜು ನೆಡೆಸುವವನು.

ಬೆರಕಿ ಸೊಪ್ಪಿನ ಪಲ್ಯ : ವಿವಿಧ ಬಗೆಯ ಸೊಪ್ಪುಗಳನ್ನು ಮಿಶ್ರಣಮಾಡಿ ತಯಾರಿಸುವ ಪಲ್ಯ.

ಮರಸುಬೇಟೆ : ಬೇಟೆಯ ವಿಧಾನಗಳಲ್ಲಿ ಒಂದು. ಮರಗಿಡಗಳ ರೆಂಬೆಗಳನ್ನು ಮರೆಮಾಡಿಕೊಂಡು ಮಾಡುವ ಬೇಟೆ. ಮರೆಯಲ್ಲಿ ಕುಳಿತು ಮಾಡುವ ಬೇಟೆ. ರಾತ್ರಿ ವೇಳೆ ಮಾತ್ರ ಈ ಬೇಟೆಯನ್ನು ಮಾಡುತ್ತಾರೆ. ಈ ಬೇಟೆಯಲ್ಲಿ ಒಬ್ಬನೇ ಬೇಟೆಗಾರನಿರುತ್ತಾನೆ. ಹಗಲಿನ ವೇಳೆ ಬೇಟೆಗಾರರು ಕಾಡನ್ನು ಸುತ್ತಿ ಸುಳಿದು ಪ್ರಾಣಿಗಳು ಹಣ್ಣಿನ ಮರಕ್ಕೆ ಬರುವ ಸ್ಥಳಗಳನ್ನು ಗುರುತಿಸಿಕೊಳ್ಳುತ್ತಾನೆ. ಆ ಹಣ್ಣಿನ ಮರದ ಮೇಲೆ ಗೂಡೊಂದನ್ನು ನಿರ್ಮಿಸಿಕೊಳ್ಳುತ್ತಾನೆ. ಸಂಜೆಯ ನಂತರ ತಾನೊಬ್ಬನೆ ಹಣ್ಣಿನ ಮರಕ್ಕೆ ನಡೆದು ಮರದ ಮೇಲಿನ ಗೂಡಿನಲ್ಲಿ ಅಡಗುತ್ತಾನೆ. ಮರದ ಕೆಳಗೆ ಬರುವ ಪ್ರಾಣಿಗಳನ್ನು ತನ್ನ ಕೋವಿಯಿಂದ ಸುಡುತ್ತಾನೆ.

ಮೆಟ್ಟುಗತ್ತಿ : ಕಾಲಿನಲ್ಲಿ ಮೆಟ್ಟಿ ಅಡಕೆ ಸುಲಿಯಲು ಬಳಸುವ ಈಳಿಗೆಯಂತಹ ಸಾಧನ.

ಮೇಗಾಳಿ : ಬೇಟೆಯಲ್ಲಿ ಬೇಟೆಗೆ ಗುರುಯಾದ ಪ್ರಾಣಿಯ  ಕಡೆಯಿಂದ ಬೇಟೆಗಾರನ ಕಡೆಗೆ ಬೀಸುವ ಗಾಳಿ. ನಿಪುಣ ಬೇಟೆಗಾರನು ಮೇಗಾಳಿಯನ್ನು ಗ್ರಹಿಸಿ ಅದು ಯಾವ ಪ್ರಾಣಿ ಎಂದು ತಿಳಿಯಬಲ್ಲನು. ಅಪಾಯದ ಮೃಗವಾದರೆ ಮುಂಜಾಗೃತೆ ಕ್ರಮಿಸುವವನು.

ಮೇಲು ಜೂಜು : ಜೂಜಾಡುವವರಲ್ಲದೆ ಇತರರು ಯಾವ ಪಕ್ಷ ಗೆಲ್ಲುತ್ತದೆಂದು ಕಟ್ಟುವ ಬಾಜಿ. ಜೂಜುಗಾರರು ಎದುರಾಳಿಯಲ್ಲದೆ. ಇತರರ ಜೊತೆಯಲ್ಲಿ ಕಟ್ಟುವ ಪಣ.

ಸಮಗೋಲು : ಇದನ್ನು ಸಬ್ಬಲ್ಲು, ಹಾರೆಗೋಲು ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಚಿಪ್ಪಿನಹಂದಿ, ಮುಳ್ಳುಹಂದಿ, ಮುಮಗುಸಿ, ಉಡ, ಇತ್ಯಾದಿ ಪ್ರಾಣಿಗಳನ್ನು ಹಿಡಿಯುವಾಗ ಅವುಗಳ ಅವುಗಳ ಬಿಲಗಳನ್ನು ಅಗೆಯಲು, ಗೆಡ್ಡೆ ಗೆಣಸುಗಳನ್ನು ಅಗೆಯಲು ಈ ಆಯುಧವನ್ನು ಬಳಸುತ್ತಾರೆ.

ಸಿದ್ದೆಗುಮ್ಮ : ಬೆಂಕಿ ಕೆಂಡಕ್ಕೆ ಮೆಣಸಿನಕಾಯಿಯ ಹೊಗೆಯ ಹಾಕಿ ತಪ್ಪಿತಸ್ಥರ ತಲೆಯನ್ನು ಹಿಡಿದು ಹೊಗೆಯನ್ನು ಸೇವೆಸುವಂತೆ ಮಾಡುವ ಶಿಕ್ಷಾ ವಿಧಾನ ಬಾಲಕರಿಗೆ, ಶಾಲೆಗೆ ಹೋಗಲು ನಿರಾಕರಿಸಿವವರಿಗೆ ವಿಶೇಷವಾಗಿ ನೀಡುವ ಶಿಕ್ಷೆ.

ಸಿನುಗು : ಜಿಡ್ಡುವಾಸನೆ. ಮಳೆಯಲ್ಲಿ ನೆನೆದಾಗ ನಾಯಿ ಮುಂತಾದ ಪ್ರಾಣಿಗಳ ಮೈಯಿಂದ ಬರುವ ವಾಸನೆ.

ಸೌದೆ ಕೊಟ್ಟಿಗೆ : ಮಳೆಗಾಲದಲ್ಲಿ ಬೇಕಾಗುವ ಉರುವಲನ್ನು ಸಂಗ್ರಹಿಸಿಡುವ ಸ್ಥಳ.

ಹಸಿಗೆ : ಬೇಟೆಯ ಪ್ರಾಣಿಯನ್ನು ಸುಟ್ಟು ಮಾಂಸಮಾಡುವಿಕೆ. ಬೇಟೆಯಲ್ಲಿ ಬೇಟೆಯಾದ ಪ್ರಾಣಿಗಳನ್ನು ನೀರಿನ ಸ್ಥಳಕ್ಕೆ ಹೊತ್ತೊಯ್ದು ಬೆಂಕಿ ಹಾಕಿ ಸುಟ್ಟು ಶಚಿ ಮಾಡಲಾಗುತ್ತದೆ. ನಂತರ ಬೇಟೆಯ ನಿಯಮದಂತೆ ಮಾಂಸ ಮಾಡಿ ಹಂಚಿಕೊಳ್ಳುತ್ತಾರೆ.

ಹುಲಿಬೇಟೆ : ಬೇಟೆಯಲ್ಲಿ ಬೇಟೆಗಾರರು ಹುಲಿಯನ್ನು ಬೇಟೆಯಾಡುವುದು. ಈ ಬೇಟೆಯಲ್ಲಿ ಪಾಲುಗೊಂಡ ಬೇಟೆಗಾರನಿಗೆ ಉನ್ನತ ಮಾನ ಮರ್ಯಾದೆ ಸಿಗುತಿತ್ತು. ಹುಲಿ ಬೇಟೆಯ ಬಗೆಗೆ ಅನೇಕ ಸಾಹಸದ ಕತೆಗಳಿರುವಂತೆ ದಂತಕತೆಗಳಿವೆ.

ಹೊಲಸಿನ ಒಲೆ : ಮಾಂಸ, ಮೀನು ಇತ್ಯಾದಿ ಪ್ರಾಣಿಗಳನ್ನು ಬೇಯಿಸಲು ಮಾತ್ರ ಬಳಸುವ ಒಲೆ. ಪ್ರತಿನಿತ್ಯ ಅಡುಗೆ ಮಾಡುವ ಒಲೆಯಲ್ಲಿ ಮಾಂಸವನ್ನು ಬೇಯಿಸುವಂತಿಲ್ಲ. ಕೆಲವು ಕಡೆ ಅಡುಗೆ ಮನೆಯಲ್ಲಿಯೇ ನಿತ್ಯ ಬಳಸುವ ಒಲೆಗಳಿಂದ ಸ್ವಲ್ಪದೂರ ಮೂಲೆಯಲ್ಲಿ ಒಂದು ಒಲೆಯನ್ನು ಮಾಡಿಕೊಂಡಿರುತ್ತಾರೆ. ಇದನ್ನು ಹೊಲಸಿನ ಒಲೆ ಎನ್ನುತ್ತಾರೆ.

ಹೊಂಡಕೊಣಕು :            ಬೇಸಿಗೆಯ ಕಾಲದಲ್ಲಿ ಹರಿಯುವ ನೀರು ನಿಂತ ಮೇಲೆ ಹೊಂಡಗಳ ನೀರನ್ನು ತುಳುಕಿಸಿ ಮೀನು. ಸಿಗಡಿ ಏಡಿಗಳನ್ನು ಹಿಡಿಯುವ ವಿಧಾನ.

ಹೊಗೆದಟ್ಟಿ : ಅಡಕೆಯನ್ನು ಬೇಯಿಸುವ ಮುನ್ನ ಒಣಗಿಸುವ ವಿಧಾನ ಚೆಂಗರಿನ ನೀರಿನಲ್ಲಿ ಕುದಿವ ಅಡಕೆಯನ್ನು ಶುಷ್ಕಗೊಳಿಸುವ ಕ್ರಿಯೆ.

ಹೊಲಸು : ಮಾಂಸದ ಪದಾರ್ಥ ಅಥವಾ ಅಡುಗೆ.