ಕೆಲವರಿರುತ್ತಾರೆ, ಅವರಿಗೆ ಜಗತ್ತನ್ನು ತಮ್ಮ ಅಭಿಲಾಷೆಯ ಅಗ್ನಿಯಲ್ಲಿ ಕರಗಿಸಿ, ಇಚ್ಛೆಯ ಎರಕದಲ್ಲಿ ಹೊಯ್ದು, ತಮ್ಮ ಇಷ್ಟದ ಜೀವನ ಮೂರ್ತಿಯನ್ನು ನಿರ್ಮಿಸಿಕೊಳ್ಳಬೇಕೆಂಬ ಉತ್ಕಟಾಕಾಂಕ್ಷೆ, ಅವರು ಪ್ರಪಂಚವನ್ನು ಅನುಸರಿಸುವುದಕ್ಕಿಂತಲೂ ಹೆಚ್ಚಾಗಿ ಪ್ರಪಂಚವೇ ತಮ್ಮ ಮನೋರಥಗಳಂತೆ ನಡೆದುಕೊಳ್ಳಬೇಕೆಂದು ಬಯಸುತ್ತಾರೆ. ಆ ಬಯಕೆ ಕೈಗೂಡದಿದ್ದರೆ ನಿಷ್ಠುರ ಪ್ರಪಂಚದಿಂದ ಹೇಗಾದರೂ ಪಾರಾಗಲು ಪ್ರಯತ್ನಿಸುತ್ತಾರೆ. ಆ ಪ್ರಯತ್ನ ಅನೇಕ ರೂಪಗಳನ್ನು ತಾಳಬಹುದು. ಕಲೆಯ ಸುರುಚಿರ ಕೃತಿಗಳಿಂದ ಹಿಡಿದು ಹಗಲುಗನಸು, ಅರೆಮರುಳು, ಹುಚ್ಚು, ಮೂರ್ಛೆ, ವೈರಾಗ್ಯ, ಆತ್ಮಹತ್ಯೆ – ಇತ್ಯಾದಿಗಳವರೆಗೂ ಆ ಪ್ರಯತ್ನದ ವ್ಯಾಪನೆಯಿದೆ. ಕಲೆ ಮತ್ತು ವೈರಾಗ್ಯಗಳಿಂದ ಲೋಕಸಂಗ್ರಹವಾಗಬಹುದು. ಅಂತೂ ಈ ಪ್ರಪಂಚದಲ್ಲಿ ಆದರ್ಶಪ್ರಪಂಚವನ್ನು ಹುಡುಕುವವರಿಗೆ ಲೋಕ, ಕಟ್ಟಕಡೆಗೆ ಗೌರವ ತೋರಿದರೂ, ಮೊದಮೊದಲು ಅವರನ್ನು ನಿಷ್ಠುರವಾಗಿ ಪೀಡಿಸುತ್ತದೆ. ಆದ್ದರಿಂದ ಆದರ್ಶದ ಹೂವಿನ ಹಾಸಗೆಗೆ ಹೋಗಲೆಳಸುವವರು ಮುಳ್ಳಿನ ಬೇಲಿಯನ್ನು ದಾಟಲು ಸಿದ್ದರಾಗಿರಬೇಕು. ಹಾಗೆ ಸಿದ್ದರಾದವರಿಗೆಲ್ಲ ಹೂವಿನ ಹಾಸಗೆ ಲಭಿಸಿಯೆ ಲಭಿಸುತ್ತದೆ ಎಂಬುದೂ ನಿಶ್ಚಯವಲ್ಲ. ಎಷ್ಟೋ ಸಾಹಸಿಗಳು ದಾರಿಯಲ್ಲಿಯೇ ಮಡಿಯಬೇಕಾಗುತ್ತದೆ. ಅಂತಹ ಕನಸು ಕಟ್ಟುವ ಸಾಹಸಿಗಳ ಗುಂಪಿಗೆ ಸೇರಿದರು, ಸೀತೆ ಮತ್ತು ಹೂವಯ್ಯ.

ಮತ್ತೆ ಕೆಲವರಿರುತ್ತಾರೆ, ಅವರಿಗೂ ಆಶೆಗಳೂ ಇಚ್ಛೆಗಳೂ ಉತ್ಕಟವಾಗಿಯೆ ಇರುತ್ತವೆ. ಆದರೆ ಅವರ ಆಕಾಂಕ್ಷೆ ವಾಸ್ತವ ಜಗತ್ತಿಗೆ ಡಿಕ್ಕಿ ಹೊಡೆದು, ತಲೆಬಾಗಿಸಿಕೊಂಡು ರಕ್ತಪಾತಮಾಡಿಸಿಕೊಳ್ಳುವುದಿಲ್ಲ. ಅದು ಕಠಿಣ ಜಗತ್ತು ಎಲ್ಲಿ ಬಾಗಿದರೆ ಅಲ್ಲಿ ಬಾಗಿ, ಎಲ್ಲಿ ತಲೆಯೆತ್ತಿದರೆ ಅಲ್ಲಿ ತಲೆಯೆತ್ತಿ, ಎಲ್ಲಿ ಇಕ್ಕಟ್ಟಾದರೆ ಅಲ್ಲಿ ಸಣ್ಣದಾಗಿ ನುಸುಳಿ, ತನ್ನ ಆಶೆ ಮತ್ತು ಇಚ್ಛೆಗಳನ್ನು ಪ್ರಪಂಚಕ್ಕೆ ಹೊಂದಿಸಿಕೊಂಡು ಬಾಳುತ್ತದೆ. ಅಂಥವರಿಗೆ ಕನಸುಕಟ್ಟುವ ಸಾಹಸಿಗಳಿಗೆ ಬಂದೊದಗುವ ಅತ್ಯುತ್ಕಟವಾದ ಹೃದಯಯಾತನೆ ಒದಗುವುದಿಲ್ಲ ; ಅವರಿಗೆ ಆದರ್ಶ ಸಿದ್ದಿಯಿಂದುಂಟಾಗುವಂತೆ ನಿರುಪಮವಾದ ಮಹತ್ತಾದ ದಿವ್ಯಾನಂದವೂ ದೊರೆಯುವುದಿಲ್ಲ. ಆದರೆ ಒಟ್ಟಿನಲ್ಲಿ ಸ್ವಪ್ನಸಾಹಸಿಗಳಿಗಿರುವ ಘನತೆಯಿರದಿದ್ದರೂ ಐಹಿಕ ಜೀವನ ದೃಷ್ಟಿಯಲ್ಲಿ ಹೆಚ್ಚು ನೆಮ್ಮದಿಯಾಗಿರುತ್ತಾರೆ. ಅಂಥವರ ಗುಂಪಿಗೆ ಸೇರಿದ್ದವರು : ಚಿನ್ನಯ್ಯ ಮತ್ತು ಪುಟ್ಟಮ್ಮ.

ಮೇಲೆ ಹೇಳಿದ ಎರಡು ಗುಂಪುಗಳಿಂದಲೂ ಹಲಕೆಲವು ಲಕ್ಷಣಗಳನ್ನು ಒಳಗೊಂಡು ಮಧ್ಯವರ್ತಿಯಾಗಿದ್ದನು ರಾಮಯ್ಯ. ಅಂತವರ ಭಾವ ಅವರಿರುವ ಸನ್ನಿವೇಶದ ಪ್ರಭಾವಕ್ಕೆ ಅನುಗುಣವಾಗಿ ಬದಲಾವಣೆ ಹೊಂದುತ್ತದೆ. ಆದ್ದರಿಂದ ಅಂಥವರನ್ನು ಅಂತು ಇಂತೆಂದು ನಂಬಿಬಿಡುವುದು ಕಷ್ಟ. ಅಸಮಭಾರದಿಂದ ತಕ್ಕಡಿಯ ಕೋಲು ತೂಗುವಂತೆ ಅವರ ಆತ್ಮ ಆಕಾಶಕ್ಕೊಮ್ಮೆ ಹಾರಿ, ಭೂಮಿಗೊಮ್ಮೆ ಬೀಳುತ್ತದೆ. ಅಂಥವರು ದುಷ್ಟರಲ್ಲ ; ಕೃತ್ರಿಮ ಜೀವಿಗಳಲ್ಲ ; ನಮ್ಮ ಕೋಪ ಅವಹೇಳನಗಳಿಗಿಂತಲೂ ಹೆಚ್ಚಾಗಿ ಕನಿಕರಕ್ಕೆ ಪಾತ್ರರಾಗುತ್ತಾರೆ. ಅವರ ಅನಿಶ್ಚಯತೆಯನ್ನು ದುರ್ಬಲತೆ ಎಂದು ಖಂಡಿಸಬಹುದು ; ಆದರೆ ಅವರನ್ನು ಪಾಪಿಗಳೆಂದು ನರಕಕ್ಕೆ ತಳ್ಳುವುದು ಸಾಧ್ಯವಿಲ್ಲ ; ಅವರು ತಮಗೂ ತೊಂದರೆ ತಂದುಕೊಳ್ಳುವುದಲ್ಲದೆ ಇತರರನ್ನೂ ಕೇಡಿಗೆ ಈಡುಮಾಡುತ್ತಾರೆ.

ಹೂವಯ್ಯನ ಸಹವಾಸ ತಪ್ಪಿದ ಮೇಲೆ ರಾಮಯ್ಯನಿಗೆ ಮೊದಲು ದುಷ್ಟವಾಗಿಯೂ ವಿಲಕ್ಷಣವಾಗಿಯೂ ತೋರುತ್ತಿದ್ದ ತನ್ನ ತಂದೆಯ ನಡತೆ ಸಾಧಾರಣವಾಗಿಯೂ ಸಮರ್ಪಕವಾಗಿಯೂ ತೋರತೊಡಗಿತು. ಸೀತೆಯ ಮೇಲಣ ಮೋಹದಿಂದ ಅಂದನಾದ ಅವನು ಹೂವಯ್ಯನಿಗೆ ವಿರೋಧವಾದ ಚಾಡಿಯ ಮಾತುಗಳನ್ನೆಲ್ಲ ರುಚಿಯಿಂದ ಕೇಳಿ ನಂಬಿದನು. ಸ್ವಾರ್ಥಮೋಹದಿಂದ ಅನುದಾರವಾಗಿದ್ದ ಅವನ ಮನಸ್ಸು ಹೂವಯ್ಯನನ್ನು ಆಷಾಢಭೂತಿ ಎಂದೂ ಭಾವಿಸತೊಡಗಿತು. ಹಿಂದೆ ಎಷ್ಟೋ ಸಾರಿ ತನ್ನ ಅಣ್ಣನ ಘನತೆಯನ್ನು ಪ್ರದರ್ಶಿಸುವಂತೆ ತೋರುತ್ತಿದ್ದ ಘಟನೆಗಳೆಲ್ಲವೂ ಈಗ ಕಪಟಗಳಾಗಿ ತೋರತೊಡಗಿದುವು. ಎಲ್ಲರೂ ಒಪ್ಪಿ ರಾಮಯ್ಯ ತಿಳಿದಿದ್ದುದು ಹಾಗೆ – ತನಗಾಗಿ ಗೊತ್ತಾಗಿದ್ದ ಹೆಣ್ಣನ್ನು ಅಪಹರಿಸಲೆಂದು ಕ್ಷುದ್ರಯುಕ್ತಿಗಳನ್ನು ಹೂಡುವಷ್ಟು ಹೀನನಾದ ಮನುಷ್ಯನೆಲ್ಲಿ ? ಉದಾತ್ತ ಸ್ವಭಾವವೆಲ್ಲಿ ? ರಾಮಯ್ಯನಿಗೆ ತನ್ನ ತಂದೆ ನಿರ್ದುಷ್ಟರಾಗಿ ತೋರಿದುದರಿಂದ ಅವರ ಉದ್ಯಮಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಿ ಅವರಿಗೆ ಬೆಂಬಲವಾದನು.

ಆದ್ದರಿಂದಲೆ ಸೀತೆ ಹೂವಯ್ಯನಿಗೆ ಬರೆದಿದ್ದ ಕಾಗದ ತನ್ನ ಕೈಗೆ ಬೀಳಲು ರಾಮಯ್ಯ ಕ್ರೂರನಾದುದು. ಅವನಿಗೆ ಆ ಕಾಗದದಲ್ಲಿ ಕಂಡುಬಂದದ್ದು ಸೀತೆಯ ದೋಷವಲ್ಲ ; ಹೂವಯ್ಯನ ಮತ್ತು ಅವನ ಪಕ್ಷದವರ ಕುಯುಕ್ತಿ. ಹೂವಯ್ಯನ ಅಥವಾ ಅವನ ಕಡೆಯವರ ಪಿತೂರಿಯಿಂದಲ್ಲದೆ ಸೀತೆಯಂಥಾ ಸರಳ ಹೃದಯದ ಹಳ್ಳಿಯ ಹುಡುಗಿ ಎಂದಾದರೂ ಅಂತಹ ಪ್ರಣಯ ಪತ್ರವನ್ನು ಬರೆಯುವ ಸಾಹಸಕ್ಕೆ ಕೈಹಾಕಿಯಾಳೆ ? ಇವರೆಲ್ಲರೂ ಸೇರಿ ಅರಿಯದ ಹುಡುಗಿಯ ಮನಸ್ಸನ್ನು ಕೆಡಿಸಲು ಪ್ರಯತ್ನಿಸಿದ್ದಾರೆ !

ರಾಮಯ್ಯನಿಗೆ ಸೀತೆ ತನ್ನನ್ನು ಪ್ರೀತಿಸುವಳೆಂಬುದರಲ್ಲಿ ಸ್ವಲ್ಪವೂ ಸಂದೇಹವಿರಲಿಲ್ಲ. ಅವನು ನೆನೆದ ಪ್ರತಿಯೊಂದು ಸನ್ನಿವೇಶವೂ ತನ್ನ ಪರವಾದ ಸೀತೆಯ ಅನುರಾಗವನ್ನೇ ಸಮರ್ಥಿಸುತ್ತಿತ್ತು. ಅವನ ಮೋಹವಂಚಿತ ದೃಷ್ಟಿಗೆ ಸರಳಸ್ನೇಹ ಪ್ರಣಯಪ್ರೇಮದಂತೆ ತೋರಿದುದರಲ್ಲಿ ಆಶ್ಚರ್ಯವೇನಿಲ್ಲ. ಅಂತೂ ಸೀತೆಯನ್ನು ಈ ಮಹಾ ಪಿತೂರಿಯಿಂದ ಹೇಗಾದರೂ ಪಾರುಮಾಡಿ ತನ್ನ ವಧುವನ್ನಾಗಿ ಮಾಡಿಕೊಂಡು ರಕ್ಷಿಸಬೇಕಾದ್ದು ತನ್ನ ಪರಮ ಕರ್ತವ್ಯವೆಂದು ರಸಾವಿಷ್ಟನಾಗಿ, ಸೀತೆಯನ್ನು ಎಚ್ಚರಿಕೆಯಿಂದ  ಕಾಯುವಂತೆ ಚಿನ್ನಯ್ಯನಿಗೆ ಗುಟ್ಟಾಗಿ ಕಾಗದ ಬರೆದನು. ಆದರೆ ಸೀತೆಯ ಕಾಗದದ ವಿಚಾರವನ್ನು ಮಾತ್ರ ಯಾರೊಡನೆಯೂ ಪ್ರಸ್ತಾಪಿಸಲಿಲ್ಲ. ತಾನೂ ಅದನ್ನು ಆದಷ್ಟು ಶೀಘ್ರವಾಗಿ ಮರೆತು ಬಿಡುತ್ತೇನೆ ಎಂದು ಹಾರೈಸಿದನು.

ನಿಂಗ ತಂದುಕೊಟ್ಟ ರಾಮಯ್ಯನ ಗುಟ್ಟಿನ ಕಾಗದವನ್ನು ನೋಡಿ ಚಿನ್ನಯ್ಯ ಗಾಬರಿಗೊಂಡನು. ಒಕ್ಕಣೆಯ ಅಸ್ಫುಟತೆ, ಎಚ್ಚರಿಕೆಯ ಅನಿರ್ದಿಷ್ಟತೆ ಇವುಗಳಿಂದ ಅವನು ಮತ್ತೂ ಕಂಗಾಲಾದನು. ಆದರೆ ತನ್ನ ಉದ್ವೇಗವನ್ನು ಆದಷ್ಟು ನಿಗ್ರಹಿಸಿಕೊಂಡು ಯಾರೊಡನೆಯೂ ಆ ಮಾತನ್ನೆತ್ತಲಿಲ್ಲ. ಗಲಭೆಯೆಬ್ಬಿಸುವುದು ಅವನಿಗೆ ನಾಚಿಕೆಗೇಡಾಗಿ ಕಂಡಿತು. ತಂಗಿಯನ್ನು ಎಚ್ಚರಿಕೆಯಿಂದ ಕಾಯುವ ಜವಾಬ್ದಾರಿಯೆಲ್ಲ ತನ್ನೊಬ್ಬನ ಮೇಲೆಯೇ ಬಿದ್ದುದರಿಂದ ಅವನು ಕಣ್ಣಿನ ಮೇಲೆ ಕಣ್ಣಾಗಿ ಆಕೆಯ ಮಾತು ಕತೆ ಸುಳಿವುಗಳನ್ನೆಲ್ಲ ಪರೀಕ್ಷಿಸತೊಡಗಿದನು.

ತನ್ನ ತಂಗಿಗೆ ಹೂವಯ್ಯನನ್ನೇ ಮದುವೆಯಾಗಬೇಕೆಂಬ ಗೀಳು ಹಿಡಿದಿರುವುದೊ ರಾಮಯ್ಯನನ್ನು ಮದುವೆಯಾಗುವುದರಲ್ಲಿ ಸಂಪೂರ್ಣ ದ್ವೇಷವಿರುವುದೂ ಚಿನ್ನಯ್ಯನಿಗೆ ಗೊತ್ತಿತ್ತು. ಆಕೆಯ ಇಷ್ಟವನ್ನು ನೆರವೇರಿಸಲು ತನ್ನ ಕೈಲಾದಮಟ್ಟಿಗೂ ಪ್ರಯತ್ನಿಸಿದ್ದನು. ಆದರೆ ತನಗಿಂತಲೂ ಪ್ರಬಲವಾದ ಶಕ್ತಿಗಳನ್ನು ಎದುರಿಸುವ ಸಾಹಸಕ್ಕೆ ಹೋಗದೆ ‘ಹಣೆಯ ಬರಹ’ಕ್ಕೆ ತಲೆಬಾಗಿದ್ದನು. ಅದೂ ಅಲ್ಲದೆ, ಈ ವೈವಾಹಿಕ ಸಂಧಾನದಲ್ಲಿ ತನಗೆ ಅನಿಷ್ಟವಾದುದರ ಜೊತೆಗೆ ಅಭೀಷ್ಟವಾದುದೂ ಸೇರಿದ್ದುದರಿಂದ, ಅನಿಷ್ಟವಾದುದನ್ನು ಪರಿಹರಿಸುವ ಉದ್ಯಮದಲ್ಲಿ ಅಭೀಷ್ಟವೆಲ್ಲಿ ಕೈತಪ್ಪುತ್ತದೆಯೋ ಎಂದು ಹಿಂಜರಿದಿದ್ದನು. ಏಕೆಂದರೆ , ಚಿನ್ನಯ್ಯನ ಹೃದಯ ಅತಿ ಕೋಮಲವಾಗಿತ್ತು.

ರಾತ್ರಿ ಎಲ್ಲರೂ ಮಲಗುವವರೆಗೂ ಕೆಲಸ ಮಾಡುವ ಮತ್ತು ಮಾಡಿಸುವ ನೆವದಿಂದ ಚಿನ್ನಯ್ಯ ಅತ್ತಯಿತ್ತ ತಿರುಗಾಡುತ್ತ ತನ್ನ ತಂಗಿಯ ಕಡೆಗೆ ಕಣ್ಣಿಟ್ಟಿದ್ದನು. ಎಲ್ಲರೂ ಮಲಗಿದ ಮೇಲೆ ಸೀತೆ ಮಲಗಿದ್ದ ಕೋಣೆಗೆ ಸಮೀಪವಾಗಿ ಹಾಸಗೆ ಹಾಸಿಕೊಂಡು ಮಲಗಿದನು. ರಾಮಯ್ಯ ಎಚ್ಚರಿಸಿದ್ದನೇ ಹೊರತು ಕಷ್ಟಬರುವ ರೀತಿಯನ್ನಾಗಲಿ ಅಪಾಯದ ಸ್ವಭಾವವನ್ನಾಗಲಿ ತಿಳಿಸಿರಲಿಲ್ಲವಾದುದರಿಂದ, ಚಿನ್ನಯ್ಯ ನಾನಾ ಭಯಂಕರ ಕಲ್ಪನೆಗಳ ದೆಸೆಯಿಂದ ಬೆವರುತ್ತ, ನಿಃಶಬ್ದ ರಾತ್ರಿಯಲ್ಲಿ ಒಂದೊಂದು ಸದ್ದನ್ನೂ ಕಿವಿಗೊಟ್ಟು ಆಲಿಸುತ್ತ ಮಲಗಿದ್ದನು.

ಸಿಗರೇಟಿನ ಮೇಲೆ ಸಿಗರೇಟು ಹೊತ್ತಿ ಹೊತ್ತಿ ಹೊಗೆಯಾಗಿ ಹಬ್ಬಿ, ಚಿನ್ನಯ್ಯ ಮಲಗಿದ್ದ ಕೊಟಡಿಯ ವಾಯುಮಂಡಲವೆಲ್ಲ ಸಾಂದ್ರವಾಗುತ್ತಿತ್ತು. ಹಾಗೆಯೆ ಅವನ ಮನಸ್ಸೂ ಚಿಂತೆಗಳಿಂದ ಸಾಂದ್ರವಾಗಿತ್ತು. ಮನಸ್ಸಿಗೆ ಗೊತ್ತು, ಗುರಿ, ದಿಕ್ಕು, ದೆಸೆ ಏನೂ ಇದ್ದಂತೆ ತೋರಲಿಲ್ಲ ; ಸುಂಟರಗಾಳಿಗೆ ಸಿಕ್ಕಿದ ತರಗೆಲೆ ಎತ್ತ ಅಂದರೆ ಅತ್ತ ಗಾಳಿ ದಬ್ಬಿದ ಕಡೆ ನುಗ್ಗುವಂತೆ, ಸೀತೆಗೆ ಏನು ಅಪಾಯ ಬರಬಹುದು ? ಹೂವಯ್ಯ, ಸಿಂಗಪ್ಪಮಾವ ಇವರೆಲ್ಲ ಸೇರಿ ಏನಾದರೂ ಪಿತೂರಿ ಹೂಡಿದ್ದಾರೆಯೆ ?…. ಸೀತೆಯನ್ನು ಇಲ್ಲಿಂದ ಸಾಗಿಸಲು ಆಲೋಚಿಸಿದ್ದಾರೆಯೆ ?….. ಛೇ ! ಎಲ್ಲಿಯ ಮಾತು ! ಭೂತ ದೆಯ್ಯಗಳ ಚೇಷ್ಟೆಯ ವಿಚಾರವಾಗಿ ವೆಂಕಪ್ಪಯ್ಯನವರೇನಾದರೂ ತಿಳಿಸಿದರೆ ?…. ಅಥವಾ ಸೀತೆ ಒಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವ ಯತ್ನ ಮಾಡುತ್ತಾಳೆಯೆ ? – ಆ ಆಲೋಚನೆ ಎಷ್ಟು ಹಾಸ್ಯಾಸ್ಪದವಾಗಿ ಹುಸಿಯಾಗಿ ಕಂಡಿತೆಂದರೆ ಚಿನ್ನಯ್ಯ ಕಿಲಕ್ಕನೆ ನಕ್ಕುಬಿಟ್ಟನು – ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆಯೆ ? ನೇಣು ! ಬಾವಿ ! ಕೆರೆ ! ವಿಷ ! ಎಲ್ಲಿಯಾದರೂ ಉಂಟೆ ? ಸೀತೆಯಿಂದ ಅದೊಂದೂ ಸಾಧ್ಯವಿಲ್ಲ ! ಇಷ್ಟವಿದ್ದರೂ ಸಾಧ್ಯವಿಲ್ಲ ! ನನಗೆ ಗೊತ್ತಿಲ್ಲವೇ ಸೀತೆ ?

ಆಲೋಚಿಸುತ್ತ ಅವನ ಮನಸ್ಸು ಸಂಚರಿಸಿತು. ಮದುವೆ ಚಪ್ಪರ, ಹಿತ್ತಿಲಬೇಲಿ, ತಾನು ಮದುವೆಗೆ ಹೊಲಿಸಬೇಕಾಗಿದ್ದ ಬಟ್ಟೆ, ಬೆಳಗಿನ ಜಾವ ಬೆಳಕು ಬಿಡಬೇಕಾದರೆ ಕಾಡುಕೋಳಿ ಹೊಡೆಯುವುದಕ್ಕೆ ಹೋಗಿ ಆಳುಗಳೆಲ್ಲ ಕೆಲಸಕ್ಕೆ ‘ರೆಡಿ’ ಆಗಬೇಕಾದರೆ ಮೊದಲು ಬಂದುಬಿಡಬೇಕು, ಹಾಳು, ಕೋವಿಯ ಬಲದ ನಳಿಗೆ ಸರಿಯಾಗಿ ಈಡೇ ಆಗುವುದಿಲ್ಲ !” ಎಂತದಪ್ಪಾ ಇದು ಬೆನ್ನು ಕಡಿಯುತ್ತದೆ ? ತಿಗಣೆಯೋ ? ಇರು….ಆಞಯ್ !”

ಚಿನ್ನಯ್ಯ ಸಿಗರೇಟನ್ನು ಬಾಯಲ್ಲಿ ಕಚ್ಚಿಕೊಂಡೇ ಹಾಸಗೆಯ ಮೇಲೆ ಎದ್ದು ಕುಳಿತು, ಎರಡು ಕೈಯಿಂದಲೂ, ಕಗ್ಗತ್ತಲೆಯಲ್ಲಿ ಏನೂ ಕಾಣಿಸದಿದ್ದರೂ, ಹಾಸಗೆಯ ಮೇಲುಬಟ್ಟೆಯನ್ನು ಚೆನ್ನಾಗಿ ಸವರಿ ಮತ್ತೆ ಮಗ್ಗುಲಾದನು.

“ಸರಿ ! ಈ ರಾಮಯ್ಯನಿಗೆ ಕಸುಬಿಲ್ಲ ! ಏನೇನೋ ಪುಕ್ಕಲು ? ಮದುವೆಗೆ ಮೊದಲೇ ಹೆಣ್ಣಿನಮೇಲೆ ಇಷ್ಟೊಂದು ಅಕ್ಕರೆ !”

ಮಧ್ಯರಾತ್ರಿಯ ಮೇಲಾಗಿದೆ ! ಚಿನ್ನಯ್ಯ ಆಲಿಸಿದನು : ಜಗಲಿ, ಕಿರುಜಗಲಿ ಮತ್ತು ಅಂಗಳಗಳಲ್ಲಿ ಮಲಗಿದ್ದ ಆಳುಗಳ ಉಸಿರಾಡುವಿಕೆ ರಾತ್ರಿಯ ನೀರವತೆಯಲ್ಲಿ ಛಂದೋಬದ್ದವಾಗಿ ಕೇಳಿಬರುತ್ತಿತ್ತು. ನಡುವೆ ಗೊರಕೆಗಳ ಸದ್ದೂ ಸೇರಿತ್ತು. ಚಿನ್ನಯ್ಯ ಸಿಗರೇಟು ಸೇದುವುದನ್ನು ನಿಲ್ಲಿಸಿ, ಕಣ್ಣು ಮುಚ್ಚಿಕೊಂಡರೂ ಎಚ್ಚರವಾಗಿರಲು ಪ್ರಯತ್ನಿಸುತ್ತ ಸೇದುವುದನ್ನು ನಿಲ್ಲಿಸಿ, ಕಣ್ಣು ಮುಚ್ಚಿಕೊಂಡರೂ ಎಚ್ಚರವಾಗಿರಲು ಪ್ರಯತ್ನಿಸುತ್ತ ಮಲಗಿದ್ದನು. ಆದರೆ ಸ್ವಲ್ಪ ಹೊತ್ತಿನಲ್ಲಿಯೆ ಅವನ ಪ್ರಜ್ಞೆ ಮಂಜುಮಂಜಾಗತೊಡಗಿ ಇನ್ನೇನು ಜಾಗ್ರದವಸ್ಥೆಯ ಹೊಸ್ತಿಲನ್ನು ದಾಟಬೇಕು ಎನ್ನುವಷ್ಟರಲ್ಲಿ ಭೀಷಣವಾದ ಚೀತ್ಕಾರ ಧ್ವನಿಯೊಂದು ಕತ್ತಲೆಯ ನಿಃಶಬ್ದತೆಯನ್ನು ಪರಪರನೆ ಹರಿದು ಎದೆನೆತ್ತರು ಹೆಪ್ಪುಗಡುವಂತೆ, ಕೇಳಿಸಿತು, ಚಿನ್ನಯ್ಯ ಆ ಧ್ವನಿ ಸೀತೆಯದೆಂದು ತಟಕ್ಕನೆ ನಿಶ್ಚಯಿಸಿ, ಕಿಡಿಬಿದ್ದ ಸಿಡಿಮದ್ದಿನಂತೆ ಹಾಸಗೆಯಿಂದ ನೆಗೆದದ್ದು “ಸೀತೆ ! ಸೀತೆ !” ಎಂದು ಗಾಬರಿಯಿಂದ ಕೂಗುತ್ತ ಕರೆಯುತ್ತ ಓಡಿದನು, ಸೀತೆ ಮಲಗಿದ್ದ ಕೊಟಡಿಗೆ !

ಮೂರು ದಿಗಳಿಂದಲೂ ತನ್ನ ಕಾಗದಕ್ಕೆ ಹೂವಯ್ಯಬಾವನಿಂದ ಯಾವ ವಿಧವಾದ ಪ್ರತ್ಯುತ್ತರವೂ ಬಾರದಿದ್ದುದರಿಂದ ಸೀತೆಯ ಕೋಮಲ ಮನಸ್ಸಿಗೆ ದೊಡ್ಡ ಆಘಾತವಾದಂತಾಯಿತು. ಇದ್ದಕಿದ್ದಹಾಗೆ ಆಕೆಗೆ ಜಗತ್ತು ಶೂನ್ಯವಾಗಿಯೂ ಭಯಾನಕವಾಗಿಯೂ ತೋರತೊಡಗಿತು. ಯಾರನ್ನು ಶಿಶುಸದೃಶ್ಯವಾದ ಸರಳ ಹೃದಯದಿಂದ ತನ್ನ ಜೀವನದ ದೇವತೆಯೆಂದು ಆಕೆ ಭಾವಿಸಿದ್ದಳೋ ಆತನೇ ತನ್ನನ್ನು ತಿರಸ್ಕರಿಸಿದ ಮೇಲೆ ಬೇರೆ ಗತಿಯೇನು ? ಸೀತೆಗೆ ತಾಯಿ, ತಂದೆ, ಅಣ್ಣ, ತಂಗಿ, ಬಂಧು ಬಾಂಧವರೆಲ್ಲರೂ ತನ್ನ ಕ್ರೂರ ವೈರಿಗಳಂತೆ ಕಾಣಲಾರಂಭಿಸಿದರು. ಭಯಂಕರ ಸನ್ನಿವೇಶದಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ ? ತಾನು ಓದಿದ್ದ ಕಥೆಗಳಲ್ಲಿದ್ದ ಹುಡುಗಿಯರ ಸಾಹಸ ಸಾಧ್ಯವಾಗುವಂತೆ ತೋರಲಿಲ್ಲ. ಓಡಿಹೋಗುವುದಾದರೂ ಎಲ್ಲಿಗೆ ? ಹೇಗೆ ? ಒಂದು ವೇಳೆ ಹೂವಯ್ಯ ‘ಹುಂ’ ಎಂದಿದ್ದರೆ ಅವನೊಡನೆ ಎಲ್ಲಿಗೆಂದರಲ್ಲಗೆ ಹೊರಡಲು ಸಿದ್ಧವಾಗುತ್ತಿದ್ದಳು ! ಏನು ಕಷ್ಟ ಒದಗಿದರೂ ಸಹಿಸುತ್ತಿದ್ದಳು ! ಮಾನಗೀನ ದಯೆದಾಕ್ಷಿಣ್ಯಗಳನ್ನೆಲ್ಲ ಮೂಲೆಗೊತ್ತಿ ಇನಿಯನನ್ನು ಹಿಂಬಾಲಿಸುತ್ತಿದ್ದಳು ! ಆದರೆ ಹೂವಯ್ಯನೂ ಕೈಬಿಟ್ಟಮೇಲೆ ? ರಾಮಯ್ಯನಿಗೂ ತನಗೂ ಮದುವೆಯಾಗುತ್ತದೆ ಎಂಬುದನ್ನು ನೆನೆದಾಗಲೆಲ್ಲ ಸೀತೆ ಮೂರ್ಛೆ ಹೋಗುವಷ್ಟರಮಟ್ಟಿಗೆ ಉದ್ವಿಗ್ನೆಯಾಗುತ್ತಿದ್ದಳು ; ಹತಾಶೆಯಿಂದ ಕೈ ಕಾಲು ಬಿದ್ದು ಹೋಗುವಂತಾಗುತ್ತಿತ್ತು ;  ಕಣ್ಣೂ ಮನಸ್ಸೂ ಮಂಜಾಗುತ್ತಿತ್ತು. ಆಕೆಯ ಸುತ್ತಲಿದ್ದ ಯಾರೊಬ್ಬರಿಗಾಗಲಿ ಆಕೆಯ ಪುಟ್ಟ ಹೃದಯದಲ್ಲಿ ಆಗುತ್ತಿದ್ದ ವಿಪ್ಲವ ಅರ್ಥವಾಗುವಂತಿರಲಿಲ್ಲ.

ಹೊರಗೆ ದೇಶಾಂತರ ಓಡಿಹೋಗಲಾರದ ಆಕೆ ತನ್ನೊಳಗೆ ತಾನು ಓಡಿ ಹೋಗುವ ಉಪಾಯವನ್ನು ಹುಡುಕಬೇಕಾಯಿತು. ಆದರೆ ಆ ಉಪಾಯ ಹೊಳೆದುದು ಆಕೆಯ ಎಚ್ಚತ್ತ ಚಿತ್ತಕ್ಕಲ್ಲ, ಗುಪ್ತ ಚಿತ್ತಕ್ಕೆ.

ಆ ದಿನ ಬೈಗಿನಲ್ಲಿ ಕಪ್ಪಾಗುವವರೆಗೂ ಕಾದಿದು, ಹೂವಯ್ಯನಾಗಲಿ, ಆತನ ಇತರ ಯಾವ ವಿಧವಾದ ಪ್ರತಿನಿಧಿಯಾಗಲಿ, ಬಾರದಿರಲು, ತನ್ನ ಪ್ರಣಯ ಪತ್ರದಲ್ಲಿ ಬರೆದಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿದಳು. ಸಾವೆಂದರೆ ಹೆದರುತ್ತಿದ ಆ ಹುಡುಗಿ ಸಾವೊಂದೇ ತನಗೆ ಪಾರಾಗುವ ಮಾರ್ಗವೆಂದು ನಿಶ್ಚಯಿಸಬೇಕಾದರೆ ಬಾಳು ಆಕೆಗೆ ಎಷ್ಟು ಭಯಂಕರವಾಗಿ ಕಂಡಿರಬೇಕು ? ಆತ್ಮಹತ್ಯೆ ಮಾಡಿಕೊಳ್ಳಲು ನಿಶ್ಚಯಿಸಿದ ಮೇಲೆ ಸಾವು ಭಯಂಕರವಾಗಿ ಕಾಣಿಸಲಿಲ್ಲ ; ಬಾಳಿನ ಕೋಟಲೆ ಮತ್ತು ಹತಾಶೆಗಲಿಂದ ತನ್ನನ್ನು ಪಾರು ಮಾಡುವ ನೆಚ್ಚಿನ ಸಖಿಯಂತೆ ಭಾಸವಾಯಿತು.

ಎಲ್ಲರೂ ಮಲಗಿದಮೇಲೆ, ಮನೆಗೆ ಹತ್ತಿರವಾಗಿದ್ದ ನಡೆದು, ರಾಮಕ್ಕ ಮಾಡಿದಂತೆ ಮಾಡುತ್ತೇನೆ ಎಂದು ದೃಢಮಾಡಿಕೊಂಡಳು. ಕೆಲವು ವರ್ಷಗಳ ಹಿಂದೆ, ತಾನು ಇನ್ನೂ ಬಹಳ ಸಣ್ಣ ಹುಡುಗಿಯಾಗಿದ್ದಾಗ, ಕಾಳನ ತಾಯಿ ರಾಮಕ್ಕ, ಆಗ ತಾನರಿಯಲಾರದ ಯಾವುದೋ ಕಾರಣಕ್ಕಾಗಿ, ಆ ಕೆರೆಯಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದುದನ್ನು ಸೀತೆ ಮರೆತಿರಲಿಲ್ಲ.

ಆ ರಾತ್ರಿ ಸೀತೆ ಎಲ್ಲರಿಗಿಂತಲೂ ಮೊದಲೆ ಊಟಮಾಡಿ ತಲೆನೋವು ಎಂಬ ನೆವದಿಂದ ಮಲಗಿದಲು. ಲಕ್ಷ್ಮಿ ತನಗೂ ‘ಅಕ್ಕಯ್ಯಗೆ ಆದ್ಹಾಂಗೆ ಆಗ್ಯದೆ’ ಎಂದು ಸೀತೆ ಮಲಗಿದ್ದ ಹಾಸಗೆಯಲ್ಲಿಯೆ ಪಾಲುಕೊಂಡಳು. ಬೇರೆ ಹಾಸಗೆಯಲ್ಲಿ ಅವಳನ್ನು ಮಲಗಿಸಿಕೊಂಡು ಸೀತೆ ಮಾಡಿದ ಪ್ರಯತ್ನ ವ್ಯರ್ಥವಾಯಿತು.

ಸೀತೆ ನಿದ್ದೆ ಮಾಡಲಿಲ್ಲ. ಮದುವೆ ಚಪ್ಪರ ಮೊದಲಾದ ಕಾರ್ಯಗಳಲ್ಲಿ ತೊಡಗಿದ್ದರೆ ಕೂಗು, ಕರೆ, ನಗು, ಕೇಕೆ – ಇವುಗಳೆಲ್ಲ ನಿಂತು. ಊಟದ ಗಲಿಬಲಿಯೂ ಎಲೆಯಡಕೆ ವಿನಿಯೋಗದ ಗಡಿಬಿಡಿಯೂ ಮುಗಿದು ಎಲ್ಲರೂ ಮಲಗಿ ನಿಃಶಬ್ದವಾಗುವುದನ್ನೇ ಎದುರುನೋಡುತ್ತಿದ್ದಳು. ತಾಯಿ ಗೌರಮ್ಮನವರು ಒಳಗಿನ  ಕೆಲಸಗಳಲ್ಲಿ ತೊಡಗಿ ತಲೆತುರಿಸಲು ಪುರಸತ್ತಿಲ್ಲದಿದ್ದರೂ ನಡುವೆ ಒಂದು ಸಾರಿ ಬಂದು ಮಗಳ ಹಣೆಗೆ ಅಮೃತಾಂಜನ ತಿಕ್ಕಿ ಹೋಗಿದ್ದರು. ಅವರು ಮತ್ತೊಂದು ಸಾರಿ, ಮಲಗುವ ಮೊದಲು ಬಂದು ಕರೆದಾಗ ಸೀತೆ ಹೋಗಿದ್ದರು. ಅವರು ಮತ್ತೊಂದು ಸಾರಿ, ಮಲಗುವ ಮೊದಲು ಬಂದು ಕರೆದಾಗ ಸೀತೆ ಎಚ್ಚರವಾಗಿದ್ದರೂ ಗಾಢನಿದ್ರೆಯಲ್ಲಿರುವಂತೆ ನಟಿಸಿದ್ದಳು. ಅವರು ಸುಖವಾಗಿ ನಿದ್ದೆಮಾಡುತ್ತಿದ್ದಾಳೆ ಎಂದು ನೆಮ್ಮದಿಯಾಗಿ ಹೋಗಿ ಮಲಗಿದರೋ ಇಲ್ಲವೋ ನಿದ್ದೆ ಹತ್ತಿತ್ತು.

ಸೀತೆ ಹಾಸಗೆಯ ಮೇಲೆ ಮಲಗಿ ಕಣ್ಣುಬಿಟ್ಟುಕೊಂಡು ಕತ್ತಲೆಯನ್ನೇ ನೋಡುತ್ತ ನೆನೆದೂ ಕಣ್ಣೀರು ಸುರಿಸಿದಳು….. ಆ ಕೆರೆ ! ಆ ಕತ್ತಲೆ ! ಹಾವು !….. ನೀರು ಹಾವು ಎಂದರೂ ಆಕೆಗೆ ಪ್ರಾಣ ಹಾರುತ್ತಿತ್ತು !…. ಸೀತೆಯ ಎದೆ ಎಷ್ಟೋ ಸಾರಿ ಝಗ್ಗೆಂದಿತು !….. ಸಾವು ಭಯಂಕರವಾಗಿ ಕಂಡು, ‘ನೋಡೋಣ, ಹೂವಯ್ಯ ಬಾವ ನಾಳೆಯಾದರೂ ಬರಬಹುದು’ ಎಂದು ಕುರುಡಾಸೆ ಪಡತೊಡಗಿದಳು…. ಮತ್ತೆ ತನಗೂ ರಾಮಯ್ಯನಿಗೂ ಆಗುವ ಬಲಾತ್ಕಾರದ ಮದುವೆಯನ್ನು ನೆನೆದು, ಸೇದುವ ಬಾವಿಗೆ  ಕಾಲು ಜಾರಿದವನು ದಡದ ಗಿಡವನ್ನು ಅಮರಿ ಹಿಡಿಯುವಂತೆ ಬಾಳಿನ ಬಾವಿಗೆ  ಕಾಲುಜಾರಿದಳು ಸಾವಿನ ಕಾಲನ್ನು ಭದ್ರವಾಗಿ ಹಿಡಿದಳು !…. ಹಾಸಗೆಯ ಮೇಲೆ ಎದ್ದು ಕೂತಳು. ಪಕ್ಕದಲ್ಲಿ ಲಕ್ಷ್ಮಿ ಮುಗ್ಧವಾಗಿ ಮಲಗಿದ್ದುದು ಕಣ್ಣಿಗೆ ಕಾಣಿಸದಿದ್ದರೂ ಮನಸ್ಸಿಗೆ ಕಾಣಿಸಿ, ಏತಕ್ಕೋ ಏನೋ, ಸ್ವಲ್ಪ ತಡೆದು ಹೊರಡುತ್ತೇನೆಂದು ಸೀತೆ ಮತ್ತೆ ಮಲಗಿದಳು. ಮಲಗುತ್ತಿದ್ದಾಗ ಲಕ್ಷ್ಮಿಯ ತಲೆಯ ಮೃದುವಾದ ಎಳೆಗೂದಲು ಸೀತೆಯ ಕೆನ್ನೆಗೆ ಸೋಂಕಿತು ! ಸೀತೆ ಎಷ್ಟೋ ಸಾರಿ ಆ ಮುದ್ದು ತಲೆಗೂದಲಿಗೆ ಎಣ್ಣೆ ಹಾಕಿ, ಬಾಚಿ, ಬೈತಲೆ ತೆಗೆದು ಅಲಂಕರಿಸಿದ್ದಳು ! ಆ ಮುದ್ದಾದ ನುಣ್ಗುರುಳಿನ ಸೋಂಕು ಧರ್ಮಶಾಸ್ತ್ರದ ಸಾವಿರ ನೀತಿಬೋಧೆಗಿಂತಲೂ ಹೆಚ್ಚು ವಿರೋಧವಾಗಿತ್ತು ಆತ್ಮಹತ್ಯೆಗೆ.

ಸೀತೆ ಈಗ ಹೋಗುತ್ತೇನೆ, ಈಗ ಹೋಗುತ್ತೇನೆ ಎಂದು ಆಲೋಚಿಸುತ್ತಿದ್ದಾಗಲೆ ಜಗಲಿಯ ಗಡಿಯಾರದಲ್ಲಿ ಗಂಟೆ ಹೊಡೆಯತೊಡಗಿತು. ಸೀತೆ ಬಹಳ ಕುತೂಹಲದಿಂದ, ಇಷ್ಟದಿಂದ ಎಣಿಸಿದಳು ! ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು, ಹತ್ತು, ಹನ್ನೊಂದು, ಹನ್ನೆರಡು ! ಆಹ, ಗಡಿಯಾರ ಇನ್ನೂ ಹೀಗೆ ಬೆಳಗಾಗುವ ತನಕವೂ ಗಂಟೆ ಹೊಡೆಯುತ್ತಲೇ ಇದ್ದಿದ್ದರೆ ! ಗಂಟೆ ಹೊಡೆಯುವುದನ್ನು ನಿಲ್ಲಿಸಿದ್ದರಿಂದ ಸೀತೆಯ ಅಂತಃಕರಣಕ್ಕೆ ಗಡಿಯಾರವೂ ನಿಷ್ಕರುಣಿಯಾಗಿ ತೋರಿತು. ಅಷ್ಟರಲ್ಲಿ ಯಾರೋ ಹೊರಗಡೆ ಕೆಮ್ಮಿದರು ! ಸೀತೆ ನೆವಸಿಕ್ಕಿ ಸಮಾಧಾನದಿಂದ ಇನ್ನೊಂದು ಸ್ವಲ್ಪ ಹೊತ್ತಾದ ಮೇಲೆ ಎಲ್ಲರೂ ಚೆನ್ನಾಗಿ ನಿದ್ದೆಮಾಡುತ್ತಾರೆ. ಆಮೇಲೆ ಹೊರಡುತ್ತೇನೆ ಎಂದು ಕತ್ತಲೆಯ ಕಡೆಗೆ ನೋಡುತ್ತ ಮಲಗಿದಳು.

ಅರ್ಧಗಂಟೆ ಕಳೆದಿರಲಿಲ್ಲ. ಸೀತೆಗೆ ಮೆಲ್ಲನೆ ಹಾಸಗೆಯಿಂದ ಎದ್ದಳು. ಎಲ್ಲೆಲ್ಲಿಯೂ ಸಂಪೂರ್ಣ ನಿಃಶಬ್ದ. ಸೀತೆಗೆ ಆತ್ಮಹತ್ಯೆಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದಕ್ಕಾಗಿಯೇ ಎಂಬಂತೆ ಜಗತ್ತು ಎಚ್ಚರತಪ್ಪಿ ಮಲಗಿತ್ತು. ಬಾಗಿಲುಗಳು ಕೂಡ ಶಬ್ದ ಮಾಡಲಿಲ್ಲ. ಮಲಗಿದ್ದ ನಾಯಿಗಳೂ ತಲೆಯೆತ್ತಿ ನೋಡಲಿಲ್ಲ. ಸೀತೆ ಬಿರುಬಿರನೆ ಕೆರೆಯ ಕಡೆಗೆ ನಡೆದಳು. ಕಾಲಿಗೆ ಮುಳ್ಳು ಚುಚ್ಚಲಿಲ್ಲ. ಕಲ್ಲು ತಡೆಯಲಿಲ್ಲ.

ಎಷ್ಟು ಬೇಗನೆ ಕೆರೆಯ ದಡಕ್ಕೆ ಬಂದುಬಿಟ್ಟಿದ್ದಾಳೆ !

ಸೀತೆಗೆ ತನ್ನ ಸಾಹಸವನ್ನು ಕಂಡು ತನಗೇ ಆಶ್ಚರ್ಯವಾಯಿತು ! ಅಷ್ಟು ಧೈರ್ಯ, ಸ್ಥೈರ್ಯ, ಸಾಮರ್ಥ್ಯ, ಚಿತ್ತದಾರ್ಢ್ಯಗಳು ತನ್ನಲ್ಲಿವೆ ಎಂಬುದು ಅದುವರೆಗೂ ಆಕೆಗೆ ತಿಳಿದಿರಲಿಲ್ಲ. ಸಾಯುವ ಮೊದಲು ಆತ್ಮದ ಶಕ್ತಿಯೆಲ್ಲ ಪ್ರಕಾಶಿತವಾಗಿದ್ದಂತೆ ತೋರಿತು.

ಇನ್ನೇನು ಕೆರೆಗೆ ಹಾರಬೇಕು ! ಸೀತೆ ಹಿಂಜರಿದು ನಿಂತಳು.

ಹೂವಯ್ಯಬಾವ ಹೇಳಿಕೊಟ್ಟ ದೇವರ ಪ್ರಾರ್ಥನೆ ! ಸೀತೆ ಆ ಕತ್ತಲೆಯಲ್ಲಿ ಸಾವಿರಾರು ನಕ್ಷತ್ರಗಳಿಂದ ಖಚಿತವಾಗಿದ್ದ ಆಕಾಶದ ಕಡೆಗೆ ತಲೆಯೆತ್ತಿ ಕೈ ಮುಗಿದು ಪ್ರಾರ್ಥಿಸಿದಳು ! ಏನನ್ನು ಪ್ರಾರ್ಥಿಸಿದಳು ! ಸೋಜಿಗ ! ಈ ಮದುವೆ ಹೇಗಾದರೂ ತಪ್ಪಿಹೋಗಿ ಹೂವಯ್ಯಬಾವವನ್ನೇ ಮದುವೆಯಾಗುವಂತೆ ಕೃಪೆ ಮಾಡು ಎಂದು ಪ್ರಾರ್ಥಿಸಿದಳು ! ಕೆರೆಗೆ ಹಾರುತ್ತಿದ್ದಾಳೆ ! ಇನ್ನೆಲ್ಲಿಯ ಮದುವೆ ?

ಪ್ರಾರ್ಥನೆ ಮುಗಿದು, ಸೀತೆ ತನ್ನೆಡೆಗೆ ಓಡಿಬರುತ್ತಿದ್ದ ಕೃಷ್ಣನನ್ನು ಕಂಡು ಹೆದರಿ ಸೋದ್ವಿಗ್ನಹೃದಯೆಯಾಗಿ ಹಾರಿದಳು ! ನೀರು ಚಪಲ್ಲನೆ ಸೀರಿತು ! ಆದರೆ ಕೆರೆಯೊಳಗಿದ್ದ ಏನೋ ಒಂದು ಪದಾರ್ಥ ಆಕೆಯ ಎದೆಗೆ ಬಲವಾಗಿ ತಗುಲಿದಂತಾಯಿತು ! ಅಥವಾ ಗಿದ್ದಿನೇನು ? ಬಹುಶಃ ನೀರಿನಲ್ಲಿ ನೆನೆಯಲು ಹಾಕಿದ್ದ ನೇಗಿಲುಗಳಿರಬೇಕು ! ಸೀತೆಗೆ ಮಾಹಾಯಾತನೆಯಾಗಿ ಕಿಟ್ಟನೆ ಚೀರಿದಳು.

ಆ ಕೂಗನ್ನು ಕೇಳಿಯೇ ಚಿನ್ನಯ್ಯ ಆಕೆ ಮಲಗಿದ್ದಲ್ಲಿಗೆ ಓಡಿ ಬಂದದ್ದು ! ಬೇಗನೆ ದೀಪಹೊತ್ತಿಸಿ ನೋಡಿದರೆ, ಸೀತೆ ಹಾಸಗೆಯ ಮೇಲೆ ನಿಷ್ಪಂದವಾಗಿ ಪ್ರಜ್ಞೆಯಿಲ್ಲದೆ ಮಲಗಿದ್ದಾಳೆ ! ಲಕ್ಷ್ಮಿಯ ಕೈ ಆಕೆಯ ಎದೆಯ ಮೇಲೆ ಬಿದ್ದಿದೆ. ಮತ್ತು …. ಲಕ್ಷ್ಮಿ, ತನ್ನ ಕನಸಿನ ಪ್ರಪಂಚದಲ್ಲಿ ದನದ ಕೊಟ್ಟಿಗೆಯ ಆಚೆ ರತ್ನಗಂಧಿ ಗಿಡದ ಬುಡದಲ್ಲಿ, ಉಚ್ಚೆಹೊಯ್ದುಬಿಟ್ಟಿದ್ದಾಳೆ !