ಚ೦ದ್ರಯ್ಯಗೌಡರು ಸಾಮಾನು ಸಮೇತ ಗಾಡಿಯನ್ನು ಹಿ೦ದಕ್ಕೆ ಹೊಡೆಯಿಸಿಕೊ೦ಡು ಹೋದಮೇಲೆ ಕೃಷ್ಣಪ್ಪನು, ದಿಕ್ಕುದಿಕ್ಕಿಗೆ ಕೈಕಾಲು ಬೀಸಿ ಬಾಯಿಗೆ ಬ೦ದ೦ತೆ ಒದರುತ್ತಿದ್ದ ಜಾಕಿಯನ್ನು ಬಹುಪ್ರಯಾಸದಿ೦ದ ಸೀತೆಮನೆಗೆ ನಡೆಸಿಕೊ೦ಡು ಹೋದನು.  ಮನೆಯಲ್ಲಿ ಎಲ್ಲರೂ ಮಲಗಿದ್ದರು. ಬೊಗಳುತ್ತಿದ್ದ ನಾಯಿಗಳನ್ನು ಗದರಿಸಿ ಸುಮ್ಮನಿರಿಸಿ, ಮಲಗಲೆ೦ದು ಜಗುಲಿಯ ಮೇಲೆ ಹಾಸಗೆ ಹಾಸುತ್ತಿದ್ದಾಗ ’ಢಾ೦’ ಎ೦ದು ಒ೦ದು ಕೋವಿಯ ಈಡು ಮೊಳಗಿ ಕೇಳಿಸಿತು.  ಕಷ್ಣಪ್ಪನ ಹೃದಯದ್ದಲ್ಲಿ ನೆತ್ತರು ಬಿಸಿಬಿಸಿಯಾಗಿ ನುಗ್ಗಿತು. ಅಷ್ಟರಲ್ಲಿಯೆ ಕಾಡಿನಿ೦ದ ರಾತ್ರಿಯ ನಿಃಶಬ್ದತೆಯನ್ನು ಕಡೆಯುವ೦ತೆ.  ಹೆಬ್ಬುಲಿಯೆ ಅಬ್ಬುರವೂ ಕೇಳಿಸಿತು.  ಮನೆಯ ನಾಯಿಗಳೆಲ್ಲ ಒಡನೆಯೆ ರೌರವವಾಗಿ ಬೊಗಳತೊಡಗಿದುವು.  ತಾವು ಕೋವಿ ಕಟ್ಟಿದ್ದು ಸಾರ್ಥಕ್ವಾಯಿತೆ೦ದು ಹಿಗ್ಗಿ ಬೆಲಗಾಗುವುಕನ್ನೆ ಕಾತರನಾಗಿ ಕಾಯುತ್ತ ಮಲಗಿ ನಿದ್ದೆಹೋದನು.

ನಿದ್ದೆಯಲ್ಲಿ ನೂರಾರು ಕನಸುಗಳು.  ಕೇಲವು ಸವಿಯಾದುವು; ಮತ್ತೆ ಕೆಲವು ಕಹಿಯಾದುವು.  ಕೆಲವು ಮನೋಹರವಾದುವು; ಮತ್ತೆ ಕೆಲವು ಭಯ೦ಕರವಾದುವು; ತನೆಗೆ ಮದುವೆಯಾಗುತ್ತಿದೆ: ಸೀತೆಯ ಕೈಹಿದಿದ್ದಾನೆ! ಏನು ಸ್ವರ್ಗವೆ ಸೊರೆಯದ೦ತಿದೆ! ಏನು? ಮದುವೆಗೆ ನೆರೆದ ಜನರ ಕೋಲಾಹಲ ! ಅಲ್ಲ !……….. ಮದುವೆಗೆ ನೆರೆದ ಜನರ ಕೋಲಾಹಲವಲ್ಲ ! ಗಾಯಗೊ೦ಡ ಹೆಬ್ಬುಲಿಯ ಅಬ್ಬರ ! ಹುಲಿ ಬಾಯ್ದೆರೆದು ಅಟ್ಟಿಬರುತ್ತಿದೆ! ಸುತ್ತಲೂ ಭಯ೦ಕರ ಅರಣ್ಯ ! ಮದುವೆಯ ಮಂಟಪ ಮಹಾರಣ್ಯವಾಗಿದೆ! ಕೃಷ್ಣಪ್ಪ ಗು೦ಡುಹೊಡೆದನು ! ಹುಲಿಗೆ ಏಟು ಬಿದ್ದರೂ ಮೈಮೇಲೆ ಹಾರುತ್ತಿದೆ ! ಅಯ್ಯೋ ಹಾರಿತು ಮೈಮೇಲೆ ! ಹಾ ! ನಖಾಘಾತ ! ಕೃಷ್ಣಪ್ಪ ನಿದ್ದೆಯಲ್ಲಿ ನರಳಿ, ದಿಗಿಲುಬಿದ್ದು ಎಚ್ಚತ್ತನು.  ಎಲ್ಲ ಮೌನವಾಗುತ್ತು.  ಬೆಳ್ದಿ೦ಗಳು ಹಾಲು ಚೆಲ್ಲಿದ೦ತೆ ಹಬ್ಬಿತ್ತು.  ಮತ್ತೊ೦ದು ಪಕ್ಕಕ್ಕೆ ಮಲಗಿದನು. ಮತ್ತೆ ಕನಸುಗಳು: ಸಾಮಾನು ಹೇರಿಕೊ೦ಡು ಗಾಡಿ ಬರುತ್ತಿದೆ! ಹುವಯ್ಯ ಜನರೊಡನೆ ಬ೦ದು ಗಾಡಿಯನ್ನು ತಡೆದಿದ್ದಾನೆ! ಕೃಷ್ಣಪ್ಪನಿಗೂ ಹೂವಯ್ಯನಿಗೂ ಮಾತುಮಾತಾಗಿ ಕೈಕೈಯಾಗುತ್ತಿದೆ ! ಸೀತೆ ನಡುವೆ ಬ೦ದು ಜಗಳವನ್ನು ನಿಲ್ಲಿಸುತ್ತಾಳೆ !….. ಆಳುಗಳು ಅಡ್ಕೆಯ ಮರಗಳನ್ನು ಕಡಿಯುತ್ತಿದ್ದಾರೆ.  ಒ೦ದು ಮರ ತನ್ನ ಮೈಮೇಲೆಯೆ ಬೀಳುತ್ತಿದೆ ! ಕೃಷ್ಣಪ್ಪ ಓಡಲು ಎಳಸುತ್ತಾನೆ ! ಆದರೆ ಆಗುವುದಿಲ್ಲ.  ಯಾರೊ ಹಿಡಿದು ಕಟ್ಟಿಹಾಕಿದ೦ತ್ತಿದೆ.  ಅಡಕೆಯ ಮರ ಬಿದ್ದೇಬೆದ್ದಿತ್ತು.  ಕೃಷ್ಣಪ್ಪ ಹಾಸಗೆಯಲ್ಲಿ ಕುಮುಟಿಬಿದ್ದು ಕಣ್ದೆರೆದನು.  ಎ೦ತಹ  ದಿವ್ಯಮೌನದ ಶಾ೦ತಿ! ಎ೦ತಹ ಪ್ರಶಾ೦ತ ನಿಶಾಕಾ೦ತನ ರಾಮಣೀಯಕ ಕಾ೦ತಿ!

ಬೆಳಿಗ್ಗೆ  ಸಿಂಗಪ್ಪಗೌಡರು ಹಿ೦ದಿನ ರಾತ್ರಿ ನಡೆದುದನ್ನೆಲ್ಲ ಕೇಳಿ ಕಿಡಿಕಿಡಿಯಾಗಿ  ಮಗನನ್ನು ಬಾಯಿಗೆ ಬ೦ದ೦ತೆ ಬಯ್ದರು.  “ಥೂ, ನಿನ್ನ ಗ೦ಡಸ್ತನಕ್ಕೆ ಬೆ೦ಕಿ ಹಾಕಿ! ಅವರಿಗೆ ಗಾಡಿ ಹೊಡೆಸಿಕೊ೦ಡು ಹೋಗೋಕೆ ಬಿಟ್ಟೆಯಾ? ಇವನು ಮತ್ತೆ ಮದುವೆಯಾಗೋ ಗ೦ಡ೦ತೆ ! ನಿನಗ್ಯಾಕೋ ಮದುವೆ? ಹೆ೦ಗಸಿಗೆ? ಮಾನ ಮಾರ್ಯದೆಯಿಲ್ಲ? ನಾನಾಗಿದ್ದರೆ ಪ್ರಾಣ ಕಳಕೊಳ್ತಿದ್ದೆ ! ನಿನಗ್ಯಾರೋ ಹೆಣ್ಣು ಕೊಡ್ತಾರೆ ? ನಪು೦ಸಕನಿಗೆ ? ಕೈಬಳೆ ತೊಟ್ಕೊ೦ಡು ಸೀರೆ ಉಟ್ಕೊಳ್ಳೋ !….”

ಕೃಷ್ಣಪ್ಪ ತ೦ದೆಯ ನಿಷ್ಠುರ ವಾಕ್ಯಗಳನ್ನು ತಲೆಬಾಗಿ ಕೇಳಿದನು.  ಪ್ರತ್ಯುತರ ಕೂಡಲಿಲ್ಲ.  ಕಣ್ಣೀರೂ ಬ೦ದಿತು.  ಮಾತು ಮಾತಿಗೂ ಮಾನಭ೦ಗವಾಗಿ ಎದೆ ಹಿ೦ಡಿದ೦ತಾಯಿತು.  ಮೂಕರೋಷವೇರಿತು.  ಅಲಿ ನಿಲ್ಲದೆ ಅಡುಗೆ ಮನೆಗೆ ಹೋಗಿ ಅವ್ವನ ಹತ್ತಿರ ಕಾಫಿ ತಿ೦ಡಿ ಕೊಡುವ೦ತೆ ಹೇಳಿದನು.  ತಾಯಿಯೊಡನೆ ಇನ್ನಾವ ಮಾತುಗಳನ್ನೂ ಆಡಲಿಲ್ಲ.

ತಿ೦ಡಿ ತಿನ್ನುತಿದ್ದ ಮಗನ ಮು೦ದೆ ತಾಯಿ ಕುಳಿತು ನಾನಾಪ್ರಕಾರವಾಗಿ ಮಾತಾಡಿಸಿದಳು.  ಮಗನು ಒ೦ದು ಮಾತನ್ನೂ ಆಡಲಿಲ್ಲ.

“ಅವರಲ್ಲದೆ ನಿನಗಿನ್ಯಾರಪ್ಪಾ ಹೇಳೋರು ? ಅದಕ್ಯಾಕೆ ಸಿಟ್ಟುಮಾಡ್ತೀಯಾ ?” ಎ೦ದಳು ತಾಯಿ.

ಕಾಫಿ ಕುಡಿದು ಹೊರಗೆ ಹೋದ ಕೃಷ್ಣಪ್ಪ ಅ೦ಗಿ ಟೋಪಿ ಹಾಕಿಕೊ೦ಡು, ಕೈಲೊ೦ದು ತೋಟಾಕೋವಿ ಹಿಡಿದು, ಮತ್ತೆ ಅಡುಗೆ ಮನೆಗೆ ಬ೦ದನು.  ಒಲೆಯ ಮೇಲುಗಡೆ ನಾಗ೦ದಿಗೆಯಲ್ಲಿಟ್ಟಿದ್ದ ತೋಟಾ ಪೆಟ್ಟಿಗೆಯನ್ನು ತೆಗೆದು ಕೆಲವು ತೋಟಾಗಳನ್ನು ಜೇಬಿಗೆ ಇಳಿಬಿಟ್ಟನು!.

“ಎತ್ತಲಾಗಿ ಹೊರಟೆಯೋ, ತಮ್ಮಾ ?” ಎ೦ದಳು ತಾಯಿ, ಮಗನು ಮಾತಾಡಲಿಲ್ಲ.

“ನನ್ಹತ್ರಾನೂ ನಿ೦ಗೆ ಸಿಟ್ಟೇನೋ?” ಎ೦ದು ತಾಯಿಯ ಮರುಕದ ದನಿಯನ್ನು ಕೇಳಿ,

ಕೃಷ್ಣಪ್ಪ “ಎತ್ತಲಾಗಿಲ್ಲವ್ವಾ; ನಿನ್ನೆ ಹುಲೀಗೆ ಕೋವಿ ಕಟ್ಟಿದ್ದೆ ; ನೋಡಿಕೂ೦ಡು ಬರ್ತಿನಿ.  ರಾತ್ರೆ ಈಡು ಕೇಳ್ತು “ ಎ೦ದು ತಾಯಿಯ ಮುಖವನ್ನು ನೋಡಿದನು.  ಆಕೆಯ ಕಣ್ಣುಗಳಲ್ಲಿ ನೀರೂ ಮುಖದಲ್ಲಿ ಉದ್ವೇಗವೂ ಇದ್ದುವು.

“ನೀ ಒಬ್ಬನೆ ಹೋಗ್ತೀಯೇನೋ?”

“ ನೀ ಒಬ್ಬನೆ ಹೋಗ್ತೀನೋ ?”

“ಇಲ್ಲ ; ಜಾಕಿ ಕರಕೊ೦ಡು ಹೋಗ್ತಿನೀ,”

“ ಜೋಕೆ ಕಣಪ್ಪಾ ! ಹುಲೀ ಸಾವಾಸ ಕೆಟ್ಟಿದ್ದು!”

ಕೃಷ್ಣಪ್ಪ ಅಡುಗೆಮನೆ ದಾಟುತ್ತಿದ್ದಾಗ ಹೊಸ್ತಿಲು ನೋಡಿ ತಾಯಿ ಅವನನ್ನು ಮತ್ತೆ ಹಿ೦ದಕ್ಕೆ ಕರೆದು “ ಹುಷಾರ್ ಕಣೋ! ಹುಲಿ ಸಾವಾಸ ಕೆಟ್ಟಿದ್ದು.

ಇನ್ಯಾರನ್ಯಾರೊ ಕರಕೊ೦ಡು ಹೋಗ್ಬಾದೇ೯ನೊ” ಎ೦ದಳು.

“ನಾವೇನು ಹುಲಿ ಷಿಕಾರಿಗೆ ಹೋಗ್ತೀವೇನವ್ವಾ ? ಕೋವಿ ಕಟ್ಟಿದ್ದು ಈಡು ಹಾರ್ರು‍. ಏನಾಗಿದೆ ನೋಡ್ಕೊಂಡು ಬರೀವಷ್ಟೆ.”

ಸೂರ್ಯ ಆಗತಾನೆ ಬೆಟ್ಟಗಾಡುಗಳ ಮೇಲೆ ತನ್ನ ಕಿರಣವರ್ಷದ ಹೊಂಬನಿಗಳನ್ನು ಸೂಸತೊಡಗಿದ್ದನು. ತೀಡುತ್ತಿದ್ದ ತಂಬೆಲರಿನಲ್ಲಿ  ನೂರಾರು ವಿಧವಿಧ ಪಕ್ಷಿಗಳ ಗಾನ ತೇಲಿ ಬರುತ್ತಿತ್ತು. ಕೃಷ್ಣಪ್ಪ ತೋಟಾಕೋವಿಯನ್ನೂ ಜಾಕಿ ಕೇಪಿನ ಕೋವಿಯನ್ನೂ ಹೆಗಲ ಮೇಲೆ ಹೊತ್ತುಕೊಂಡು ಮರ ಗಿಡ ಪೊದೆ ಬಳ್ಳಿಗಳ ನಡುವೆ ನುಸಿದು ಬೆಟ್ಟವೇರುತ್ತಿದ್ದರು. ನಾಯಿಗಳು ಅವರ ಸುತ್ತಲೂ ನೂರಾರು ಮಾರು ಗಳಲ್ಲಿ ನೆಲವನ್ನು ಮೂಸಿ ಗಾಳಿ ಹಿಡಿಯುತ್ತಲೂ ಅಲ್ಲಲ್ಲಿ ನಿಂತು ಹಿಂಗಾಲೆತ್ತಿ ಪೊದೆಗಳಿಗೆ ನೀರು ಹುಯ್ಯುತ್ತಲೂ ಉತ್ಸಾಹದಿಂದ ಓಡಾಡುತ್ತಿದ್ದುವು.

ಕೋವಿಕಟ್ಟಿದ್ದು ಜಾಗಕ್ಕೆ ಹೋಗಿ ನೋಡಲು ದೃಶ್ಯವು ಭಯ ಗರ್ಭಿತ ನೀರವವಾಗಿತ್ತು. ಕೃಷ್ಣಪ್ಪ ಬೇಗಬೇಗನೆ ಗುಂಡು ಹಾರದಿದ್ದ ಕೋವಿಗಳನ್ನು ಬಿಚ್ಚಿದನು. ಇಲ್ಲದಿದ್ದರೆ ನಾಯಿಗಳು ಸೂತ್ರದ ಮೇಲೆ ಹಾದು ಸಾಯುತ್ತಿದ್ದುವು.

ಪಶುಶವ ಹಿಂದಿನ ದಿನ ಇದ್ದಂತೆಯೆ ಬಿದ್ದಿತ್ತು. ನೊಣಗಳು ಮಾತ್ರ ಹೆಚ್ಚಾಗಿ ಹಾರಾಡುತ್ತಿದ್ದುವು. ಸ್ವಲ್ಪ ದುರ್ವಾಸನೆಯೂ ಹುಟ್ಟಿತ್ತು. ಹುಲಿಗೆ ಗುಂಡಿನೇಟು ಬಿದ್ದಿದೆ ಎಂಬುದೇನೊ ಅಲ್ಲಿ ಬಿದ್ದಿದ್ದ ರಕ್ತದಿಮದಲೂ ಬಣ್ಣಗೂದಲುಗಳಿಂದಲೂ ಗೊತ್ತಾಯಿತು. ಆದರೆ ಹುಲಿ ಅಲ್ಲೆಲ್ಲಿಯೂ ಸಮಿಪದಲ್ಲಿ ಸತ್ತಿರಲಿಲ್ಲ. ಅದಕ್ಕೆ ಬಲವಾದ ಗಾಯವಾಗಿದ್ದಿತೆ ಹೋರತು ಪ್ರಾಣಾಪಾಯವಾಗಿರಲಿಲ್ಲ. ನಾಯಿಗಳಲ್ಲಿ ಕೆಲವಂತೂ ಹುಲಿಯ ವಾಸನೆ ಸಿಕ್ಕಿ ಬೆದರುಗಣ್ಣಾಗಿನೋಡಹತ್ತಿದುವು.

“ಈಗೇನು ಮಾಡಾನೋ, ಜಾಕಿ?”ಎಂದನು ಕೃಷ್ಣಪ್ಪ.

“ಮಾಡೂದೇನು? ಮನೀಗೇ ಹೋಗಾನ. ಗಾಯದ ಹುಲೀ ಸಾವಾಸ ಬ್ಯಾಡ. ಮುಂಡಗದ್ದೇಲಿ ಒಬ್ಬ ದೋರೆ (ಯೂರೋಪಿಯನ್) ಗಾಯದ ಹುಲಿ ಹೊಡ್ಯಾಕೆ ಹೋಗಿ ಹಿಂದಕ್ಕೆ ಬರಲ್ಲೇ ಇಲ್ಲಂತೆ!”

ಪುಟ್ಟಣ್ಣನಂತಹ ಅನುಭವಶಾಲಿಗಳಾಗಿದ್ದರೆ ಹೆಚ್ಚು ಜನರ ಸಹಾಯ ಧೈರ್ಯಗಳಿಲ್ಲದೆ ಗಾಯದ ಹುಲಿಯನ್ನು ಅರಸುವ ಸಾಹಸಕ್ಕೆ ಎಂದಿಗೂ ಕೈ ಹಾಕುತ್ತಿರಲಿಲ್ಲ. ಆದರೆ ಕೃಷ್ಣಪ್ಪ ಕೆಚ್ಚೆದೆಯ ತರುಣ. ಅಲ್ಲದೆ ಆ ದಿನ ಬೆಳಿಗ್ಗೆ ಅವನ ತಂದೆ ಅವನನ್ನು ಹೇಡಿ, ನಪುಂಸಕ, ಹೆಂಗಸು ಎಂದು ಮೊದಲಾಗಿ ಬೈದಿದ್ದು, ಅವನಲ್ಲಿ ಇನ್ನೂ ರೋಷವಡಗಿರಲಿಲ್ಲ. ತಾನು ಸಾಹಸಿ, ಸೀತೆಯನ್ನು ಆಳಲು ಸಮರ್ಥನಾದ ಗಂಡು ಎಂಬುದನ್ನು ನಿದರ್ಶಿಸಬೇಕೆಂದು ಅವನ ಅಂತರಂಗದಲ್ಲಿ ಅವನಿಗೇ ಅರಿಯದಂತೆ ಹುರುಡು ಮೊಳೆಯುತ್ತಿತ್ತು.

“ಮನೆಗೆ ಹೋಗಾದೆ ಸೈಯ್ಯಾ! ಎಷ್ಟು ರಕ್ತ ಬಿದ್ದ ಹುಲಿ ಇಷ್ಟೋತ್ತನಕ ಬದುಕಿರೋದು ಸುಳ್ಳು! ಸ್ವಲ್ಪ ದೂರ ಹೋಗಿ ಹುಡುಕಿ ನೋಡಾನ. ನಾಯಿ ಇವೆ! ನಿನಗ್ಯಾಕೆ ಹೆದರಿಕೆ? ನನ್ನ ಹಿಂದೇನೇ ಬಾ.”

ಜಾಕಿ ಭಯಪ್ರೇರಿತ ವಿವೇಕದಿಂದ “ಬ್ಯಾಡ ಮಾರಾಯ್ರಾ, ಗಾಯದ ಹುಲಿ ಹುಡಿಕ್ಕೊಂಡು ಹೋಗೋದೂ ಒಂದೇ, ನಾಗರಹಾವಿನ ಹೆಡೆ ಹಿಡಿಯೋದೂ ಒಂದೇ! ಮತ್ತೆ ಬೈಸಿಕೊಳ್ತೀರಿ ಗೌಡ್ರ ಕೈಲಿ” ಎಂದನು.

“ಹಾಂಗಾದರೆ ನೀನಿಲ್ಲೇ ನಿಂತಿರು. ನಾ ನಾಯಿ  ಕರಕೋಂಡು ಹೀಂಗೆ ಹೋಗಿ ಬರತ್ತೀನಿ” ಎಂದು ಕೃಷ್ಣಪ್ಪ ಮೇಲುದನಿಯಿಂದ “ಬಾ, ಕ್ರೂ” ಎಂದು ನಾಯಿಗಳನ್ನು ಜೊತೆಗೆ ಕರೆದುಕೊಂಡು ರಕ್ತದ ಜಾಡಿನಲ್ಲಿ ಮುಂದುವರಿದನು. ಜಾಕಿ ನಿಲ್ಲಲಿಲ್ಲ; ಮನಸ್ಸಿಲ್ಲದ ಮನಸ್ಸಿನಿಂದ ಅವನ ಹಿಂದೆಯೆ ನಡೆದನು.

ಇಬ್ಬರೂ ಹೆಜ್ಜೆ ಹೆಜ್ಜೆಗೂ ನಿಂತು ಮೇಯೆಲ್ಲ ಕಣ್ಣಾಗಿ ನೋಡುತ್ತ, ನಾಯಿಗಳಿಗೆ ಮೃದುಧ್ವನಿಯಲ್ಲಿ ಉತ್ತೇಜನವೀಯುತ್ತ, ಹಳುವಿನಲ್ಲಿ ನುಸಿಯತೊಡಗಿದರು. ನಾಯಿಗಳೂ ಬೆದರಿ ಬೆದರಿ ಬಹಳ ಜಾಗರೂಕತೆಯಿಂದ ಮನುಷ್ಯರಿಗೆ ಸ್ವಲ್ಪ ದೂರದಲ್ಲಿಯೆ ಸಂಚರಿಸುತ್ತಿದ್ದುವು.

ಒಮ್ಮೆ ನಾಯಿಯೊಂದು ಬೆಚ್ಚಿಬಿದ್ದುದನ್ನು ಕಂಡು ಕೃಷ್ಣಪ್ಪ ತನ್ನ ಬೆನ್ನು ಮುಟ್ಟಿಕೊಂಡೆ ಬರುತ್ತಿದ್ದ ಜಾಕಿಗೆ “ಯಾಕೋ? ನಾಯಿ ಬೆಚ್ಚಿಬೀಳ್ತದೆ? ಇಲ್ಲೇ ಎಲ್ಲಾದರೂ ಸತ್ತುಬಿದ್ದಿದೆಯೋ?” ಎಂದು ನಾಯಿಗಳಿಗೆ ಮೆಲ್ಲಗೆ “ಛೂ! ಛೂ! ಹಿಡಿ! ನುಗ್ಗು” ಎಂದು ಕೈ ಚುಟಿಗೆ ಹೊಡೆದು ಮುಂದಿನ ಹಳುವನ್ನು ತೋರಿಸಿದನು.

ನಾಯಿಗಳು ಸ್ವಲ್ಪ ಮುಂಬರಿದು ಮತ್ತೆ ನಿಂತವು. ಕೃಷ್ಣಪ್ಪ ಕೋವಿಯನ್ನು ಸಿದ್ಧಮಾಡಿಕೊಂಡು ಎರಡು ಹೆಜ್ಜೆ ಮುಂದೆ ನಡೆದು, ಮುಂದಿನ ಹಳುವನ್ನೂ ತನ್ನ ಮುಖವನ್ನೂ ಸರದಿಯ ಮೇಲೆ ನೋಡುತ್ತಿದ್ದ ನಾಯಿಗಳನ್ನು ನೋಡಿ “ಛೂ! ನಡಿ! ನುಗ್ಗು! ಪಾಟ್ ರೈಟ್ !” ಎಂದನು.

ಪಾಟ್ ರೈಟ್  ಎಂಬ ನಾಯಿ ಒಳ್ಳೆಯ ಬೇಟೆ ನಾಯಿ. ಆದರೆ ಹುಲಿಯ ವಿಷಯದಲ್ಲಿ ಮಾತ್ರ ಆಳುಕುತ್ತಿತ್ತು. ಕಾರಣವೇನೆಂದರೆ, ಒಂದು ಸಾರಿ ರಾತ್ರಿ ಅದು ಮನೆಯ ಬಳಿ ನಿದ್ದೆಯಲ್ಲಿ ಮಲಗಿದ್ದಾಗ ದೊಡ್ಡ ಚಿರತೆಯೊಂದು ಅದನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿತ್ತು. ಪಾಟ್ ರೈಟ್  ಅದರೊಡನೆ ಹೋರಾಡಿ ತಪ್ಪಿಸಿಕೊಂಡಿತ್ತು. ಆಮೇಲೆ ಅದಕ್ಕೆ ಹುಲಿ ಚಿರತೆಗಳು ವಿಚಾರದಲ್ಲಿ ಹೆದರಿಕೆ ನಿಂತುಬಿಟ್ಟಿತು.

ಯಜಮಾನನು ತನ್ನ ಹೆಸರನ್ನು ಹೆಳಿ “ಛೂ! ನುಗ್ಗು” ಎನ್ನಲು ಪಾಟ್ ರೈಟ್  ಒಂದೇ ಮನಸ್ಸುಮಾಡಿ ಮುಂದುವರಿಯಿತು. ಒಡನೆಯೆ ಬಳಿಯಿದ್ದ ದಟ್ಟವಾದ ಪೊದೆಯಿಂದ ಸಣ್ಣ ಗರ್ಜನೆ ಕೇಳಿಸಿದಂತಾಯಿತು. ಕೃಷ್ಣಪ್ಪ ಜಾಕಿ ಇಬ್ಬರೂ ಕೂದಲು ನೆಟ್ಟಗಾಗಿ ಎರಡು ಹೆಜ್ಜೆ ಹಿಂದಕ್ಕೆ ಹಾರಿಹೋಗಿ ನಿಂತರು! ನಾಯಿಗಳೂ ಬೆಚ್ಚಿ ಬೆದರಿ ಹುಳುವಿನಲ್ಲಿ ದಡದಡನೆ ಹಿನ್ನುಗ್ಗಿ, ನಿಂತು, ತೀಕ್ಷ್ಣ ವಾಗಿ ಬೊಗಳಲಾರಂಭಿಸಿದುವು. ಕೃಷ್ಣಪ್ಪ ಎಷ್ಟು ಉತ್ತೇಜನ ಕೊಟ್ಟರೂ ಒಂದಾದರೂ ಮುಂಬರಿಯಲಿಲ್ಲ. ಹುಲಿ ಅಲ್ಲಿದ್ದುದಂತೂ ನಿಶ್ಚಯವಾಯಿತು.

ಸೊಂಟಕ್ಕೆ ಗುಂಡು ತಗುಲಿ ಯಾತನೆಯಿಂದ ಬಿದ್ದಿದ್ದ ಹುಲಿ ನಾಯಿಗಳನ್ನೂ ಮನುಷ್ಯರ ಸಾಮಿಪ್ಯವನ್ನೂ ಅರಿತು ಪ್ರತಿಹಿಂಸೆಗಾಗಿ ರೋಷಭೀಷಣವಾಗುತ್ತಿತ್ತು.

“ಖಂಡಿತ ಬ್ಯಾಡ, ಕೃಷ್ಣಪ್ಪಗೌಡ್ರೆ; ಮನೀಗೆ ಹೋಗಿ ಜನ ಸೇರಿಸಿಕೊಂಡು ಬರಾನ” ಎಂದನು ಜಾಕಿ.

“ನಿನ್ನ ಹಾಂಗಿದ್ದವರೇ ಅಷ್ಟೇ ಆಮೇಲೂ ಒರೋದು? ಅವರು ಬಂದು ಮಾಡೋದು ಇಷ್ಟೇ! ಹುಲಿಗೆ ಬಲವಾಗಿ ಏಟು ಬಿದ್ದಿರಬೇಕೋ! ಯಾವುದಾದರೂ ಕಂಡೀಲಿ ಇನ್ನೊಂದು ಉಂಡು ಹೊಡೆದರೆ ನೆಗೆದುಬಿದ್ದು ಹೋಗ್ತದೆ” ಎಂದು ಕೃಷ್ಣಪ್ಪ ಮೆಲ್ಲಗೆ ಮುಂಬರಿದನು. ಜಾಕಿ ಅಲ್ಲಿಯೆ ನಿಂತು ನೋಡುತ್ತಿದ್ದನು ಅತಿ ಕಾತರತೆಯಿಂದ!

ಜಾಕಿ ನೋಡುತ್ತಿದ್ದ ಹಾಗೆ ಕೃಷ್ಣಪ್ಪನ ಬಾಗಿದ ದೇಹ ಹಳುವಿನಲ್ಲಿ ಮರೆಯಾಯಿತು. ತಾನು ಒಂದೆರಡು ಹೆಜ್ಜೆ ಮುಂದುವರಿದು ಅವನನ್ನು ಹಿಂಬಾಲಿಸಲೆಳಸಿದನು. ಆದರೆ ಎದೆಯಾಗಲಿಲ್ಲ. ಮತ್ತೆ ನಿಂತು ನಾಯಿಗಳಿಗೆ “ಛೂ! ಛೂ! ನುಗ್ಗು! ಹಿಡಿ!” ಎಂದನು.

ಇದ್ದಕ್ಕಿದ್ದಹಾಗೆ ನೆತ್ತರು ಹೆಪ್ಪುಗಡುವಂತೆ, ಕೈಕಾಲು ಮರಗಟ್ಟುವಂತೆ, ಪ್ರಜ್ಞೆತಪ್ಪುವಂತೆ ಹೆಬ್ಬುಲಿಯ ಮಹಾಭೀಷಣದಬ್ಬರ ಅರಣ್ಯಮೌನವನ್ನು ನುಚ್ಚು ನೂರಾಗುವಂತೆ ಅಪ್ಪಳಿಸಿ, ಜಾಕಿಯನ್ನು ನಡುಗಿಸಿತು. ಹಳುವಿನಲ್ಲಿ ದೊಡ್ಡ ಪ್ರಾಣಿ ಭರದಿಂದ ಚಲಿಸುವಂತೆ ಸದ್ದಾಯಿತು. ಹುಳುವೂ ರಭಸದಿಂದ ಅಲುಗಾಡಿತು. ನಾಯಿಗಳು ಗಂಟಲು ಬಿರಿಯುವಂತೆ ಕೂಡತೊಡಗಿದುವು. ಒಡನೊಡನೆ “ಠಳ್” ಎಂದು ತೋಟಾ ಬಂದೂಕು ಹಾರಿದ ಶಬ್ದವೂ “ಅಯ್ಯೋ ಜಾಕೀ!” ಎಂಬ ಕೃಷ್ಣಪ್ಪನ ಆರ್ತನಾದವೂ ಕೇಳಿಸಿದುವು. ಜಾಕಿ ಮರುಳಮರಿದವನಂತೆ ನಡುಗುತ್ತ ಕೂಗುತ್ತ ಆರ್ತನಾದ ಕೇಳಿಬಂದ ತಾಣಕ್ಕೆ ನುಗ್ಗಿದನು.

ನೋಡುತ್ತಾನೆ: ಹುಳುವಿನಲ್ಲಿ ಕೆಳಗುರುಳಿದ್ದ ಕೃಷ್ಣಪ್ಪನ ಮೇಲೆ ಭೀಷಣಾಕೃತಿಯ ಹೆಬ್ಬುಲಿ! ಜಾಕಿಗೆ ತಲೆ ಕದಡಿಹೋಯಿತು. ವಸ್ತುಗಳೆಲ್ಲ ಬರಿಯ ಬಣ್ಣಗಳಾಗಿ ಕಣ್ಣಿನೆದುರು ಸುಳಿಯತೊಡಗಿದುವು. ಹಸುರು, ಹಳದಿ, ಕಪ್ಪು, ಕೆಂಪು, ಬಿಳಿ ! ಹಳುವಿನ ಹಸುರು; ಹುಲಿಯ ಮೈಪಟ್ಟೆಗಳ ಹಳದಿ, ಕಪ್ಪು; ರಕ್ತದ ಕೆಂಪು; ಹಲ್ಲು ಮತ್ತು ದಾಡೆಗಳ ಬಿಳಿ! ಜಾಕಿಯನ್ನು ಕಂಡ ಹುಲಿ ಒಂದೇ ನೆಗೆತಕ್ಕೆ ಅವನ ಮೇಲೆ ಹಾರಿತು. ಜಾಕಿಗೆ ಮೈಮೇಲೆ ಕುದಿನೀರು ಎರಚಿದಂತಾಗಿ, ಕಣ್ಣು ಕತ್ತಲೆಗಟ್ಟಿ, ಏತಕ್ಕೋ ಏನೋ ಕೈಲಿದ್ದ ಕೋವಿಯನ್ನೆತ್ತಿ ಗುಂಡು ಹಾರಿಸಿದನು. ಅಷ್ಟರಲ್ಲಿ ತನ್ನ ಮೈಗೆ ಏನೋ ತಾಗಿದಂತಾಗಿ ಮೂರ್ಛೆಯಿಂದ ಕೆಳಗುರುಳಿದನು. ಕೋವಿನ ಈಡು ಕೇಳಿ ಆವೇಶಬಲದಿಂದ ನಾಯಿಗಳೆಲ್ಲ ನುಗ್ಗಿ ಬಂದು ಹುಲಿಯ ಮೇಲೆ ಬಿದ್ದವು. ಹುಲಿ ಜಾಕಿಯ ಪಕ್ಕದಲ್ಲಿ ಸತ್ತು ಬಿದ್ದಿತು. ಅದಕ್ಕೆ ಕೃಷ್ಣಪ್ಪ ಹಾರಿಸಿದ ಗುಂಡೂ ಜಾಕಿ ಹಾರಿಸಿದ ಗುಂಡೂ ಎರಡೂ ತಗುಲಿದ್ದುವು. ಆದ್ದರಿಂದ ಅದು ಹಾರಿದ್ದ ವೇಗಕ್ಕೆ ಜಾಕಿಯ ಮೈ ಪರಚಿ ಗಾಯವಾಗಿತ್ತೇ ಹೊರತು ಅವನು ಸಾಯಲಿಲ್ಲ.

ಅಡುಗೆ ಮಾಡುತ್ತಿದ್ದ ಕೃಷ್ಣಪ್ಪನ ಮಾತೆ ಈಡಿನ ಸದ್ದು ಕೇಳಿ ಕರುಳು ಮರುಗಿದಂತಾಗಿ, ಜಗಲಿಗೆ ಓಡಿ ಬಂದು, ಗಂಡನ ಹತ್ತಿರ ಉದ್ವೇಗದಿಂದ “ತಮ್ಮ ಹುಲಿ ಹೊಡಿಯಾಕೆ ಹೋಗಿದ್ದ! ಎರಡು ಈಡು ಕೇಳಿಸ್ತು! ಏನಾಯ್ತೊ ಏನೋ! ಜನ ಕರಕೊಂಡು  ಹೋಗಿ ನೋಡಿ” ಎಂದಳು.

ಸಿಂಗಪ್ಪಗೌಡರಿಗೂ ಹಠಾತ್ತಾಗಿ ಭಯವಾಗಿ ಕೆಲವು ಜನರನ್ನು ಕರೆದುಕೊಂಡು ಬೇಗ ಬೇಗನೆ ಕಾಡಿನ ಕಡೆಗೆ ಓಡಿ ನಡೆದರು.

ಸ್ವಲ್ಪ ಹೊತ್ತಿನ ಮೇಲೆ ಜಾಕಿಗೆ ಪ್ರಜ್ಞೆಯಾಯಿಉತ. ನೋಡುತ್ತಾನೆ: ಹುಲಿ ಪಕ್ಕದಲ್ಲಿ ಬಿದ್ದಿದೆ, ನಾಯಿ ಕೂಗುತ್ತಿವೆ. ಕೃಷ್ಣಪ್ಪ ಅಲುಗಾಡದೆ ಬಿದ್ದಿದ್ದಾನೆ. ತನ್ನ ಮೈಯೆಲ್ಲ ಹುಲಿಯುಗುರುಗಳು ಗಾಯದಿಂದ ಕೆಂಪಾಗಿದೆ; ರಕ್ತಮಯವಾಗಿದೆ; ಭಯಾನಕವಾಗಿದೆ, ಏಳಲು ಪ್ರಯತ್ನಿಸಿದನು; ಆಗಲಿಲ್ಲ. ಕೈಯೂರಿಕೊಂಡು ಮೆಲ್ಲನೆ ಕೃಷ್ಣಪ್ಪನ ಬಳಿಗೆ ಅಂಬೆಗಾಲಿಟ್ಟುಕೊಂಡು ಸರಿದನು.

ಕೃಷ್ಣಪ್ಪನ ಶವ ರಕ್ತದಲ್ಲಿ ಅದ್ದಿ ಹೋಗಿತ್ತು. ಮುಖದ ಗುರುತು ಕೂಡ ಸಿಕ್ಕದಷ್ಟು ಗಾಯವಾಗಿತ್ತು. ಹುಲಿಯುಗುರಿನಿಂದ ಒಂದು ಕಣ್ಣೂ ಬೆದಕಿ ಅದರ ಪಾಪೆ ಹೊರಗೆ ಬಂದಿತ್ತು. ತಲೆ ಎರಡು ಮೂರೆಡೆಗಳಲ್ಲಿ ಕೊಡಲಿಯಿಂದ ಕಡಿದಂತಾಗಿದ ರಕ್ತಮಿಶ್ರವಾದ ಬಿಳಿಮೆದುಳು ಕರಿಯ ಕೂದಲುಗಳ್ಲಲಿ ಹೊರಮೊಮ್ಮಿತ್ತು. ಎಡಗೈ ಕೋವಿಯನ್ನಿನ್ನೂ ಬಲವಾಗಿಯೆ ಹಿಡಿದಿಕೊಂಡಂತ್ತಿತ್ತು. ಆ ಭಯಾನಕ ಭೀಭತ್ಸ ದೃಶ್ಯವನ್ನು ಕಂಡ ಜಾಕಿಗೆ ಅಳುವುದಕ್ಕೂ ಕೂಡ ಆಗಲಿಲ್ಲ, ಮರವಟ್ಟನು.

ಸಿಂಗಪ್ಪಗೌಡರು ರೋದನದ ಪ್ರವಾಹದಲ್ಲಿ ಮುಳುಗಿ ತೇಲಿ ಮಗನ ಶವವನ್ನು ವ್ಯಾಘ್ರನಖದ ವಿಷವೇರಿ ಸಹಿಸಲಾರದ ನೋವಿನಿಂದ ಭಯಂಕರವಾಗಿ ನರಳುತ್ತಿದ್ದ ಜಾಕಿಯನ್ನು ಹೊರಿಸಿಕೊಂಡು ಮನೆಗೆ ಬಂದರು. ತಾಯಿ  ಎದೆ ಬಿರಿಯುವಂತೆ ಹೋ ಎಂದು ಅಳುತ್ತ, ಎದೆ ತಲೆ ಹೊಟ್ಟೆಗಳನ್ನು ಬಡಿದುಕೊಳ್ಳುತ್ತ, ತಲೆಕೂದಲನ್ನು ಕಿತ್ತುಕೊಳ್ಳುತ್ತ, ಮುಖವನ್ನು ಪರಚಿಕೊಳ್ಳುತ್ತ ರಕ್ತಮಯವಾಗಿದ್ದ ಮಗನ ಛಿದ್ರಶವದ ಮೇಲೆ ಬಿದ್ದುಬಿದ್ದು ಹೊರಳಾಡತೊಡಗಿದಳು. ಆಳುಗಳೂ ನೆರೆಹೋರೆಯವರೂ ಮನೆಯವರೂ ಎಲ್ಲರೂ ಸೇರಿ, ಸೀತೆಮನೆ ರೋದನದ ರೌರವ ನರಕವಾಗಿ ಪರಿಣಮಿಸಿತು.

ಸಾಯಂಕಾಲದೊಳಗೆ ಸುದ್ದಿಹಬ್ಬಿ, ಮುತ್ತಳ್ಳಿಯಿಂದ ಶ್ಯಾಮಯ್ಯಗೌಡರೂ ಚಿನ್ನಯ್ಯನೂ ಕಾನೂರಿನಿಂದ ಚಂದ್ರಯ್ಯಗೌಡರೂ ರಾಮಯ್ಯ ಹೂವಯ್ಯ ಮೊದಲಾದವರೂ ಇನ್ನೂ ಇತರ ಹಳ್ಳಿಗಳಿಂದ ಇತರ ಬಂಧುಗಳೂ ಸೀತೆಮನೆಯಲ್ಲಿ ನೆರೆದರು. ಬಂದವರೆಲ್ಲರೂ ಆ ರುದ್ರದೃಶ್ಯವನ್ನೂ ತಂದೆ ತಾಯಿಗಳ ಅತಿದಾರುಣವಾದ ಶೋಕವನ್ನೂ ನೋಡಿ ಅತ್ತು ಅತ್ತು ಬೆಂಡಾದರು. ಯಾರು ಏನು ಹೇಳಿದರೂ ಕೃಷ್ಣಪ್ಪನ ತಾಯಿ ಪುತ್ರಶವವನ್ನು ಕೈಬಿಡಲಿಲ್ಲ. ಆಕೆಯ ಸೀರೆಯೆಲ್ಲ ಮಗನ ನೆತ್ತರಿನಲ್ಲಿ ತೊಯ್ದುಹೋಗಿತ್ತು!

ಅದನ್ನೆಲ್ಲಾ ನೋಡಿದ ಹೂವಯ್ಯನ ಮನದಲ್ಲಿ ಕೆಲವು ದಿನಗಳಿಂದ ಮೂಡಿದ್ದ ನಿರಾಶಾಭಾವ ಮತ್ತೂ ಪ್ರಬಲತರವಾಯಿತು. ಹಿಂದೆ ಅವನ ದೃಷ್ಟಿಗೆ ಸೌಂದರ್ಯದ ಬೀಡಾಗಿ ತೋರುತ್ತಿದ್ದ ವಿಶ್ವವು ಕ್ರೂರ ಪಿಶಾಚಿಯ ಕರ್ಮಶಾಲೆಯಂತೆ ಕುರೂಪವಾಗಿ ತೋರತೊಡಗಿತು. ಸರ್ವಂ ಕ್ಷಣಿಕಂ ಕ್ಷಣಿಕಂ, ಸರ್ವಂ ದುಃಖಂ ದುಃಖಂ, ಸರ್ವಂ ಶೂನ್ಯಂ ಶೂನ್ಯಂ, ಎಂಬುದಾಗಿ ಆತನೋದಿದ್ದ ಬೌದ್ಧಮತದ ಮೂಲ ಸಿದ್ಧಾಂತಗಳು ಇಂದು ಸತ್ಯವಾಗಿ ಪ್ರತ್ಯಕ್ಷವಾಗಿ ತೋರಿದುವು. ಹಿಂದೆ ಆ ಕ್ಷಣಿಕವಾದವನ್ನೂ ದುಃಖವಾದವನ್ನೂ ಶೂನ್ಯವಾದವನ್ನೂ ಕೈಲಾಗದೆ ಸೋತವರ ಅಥವ ಚಿರರೋಗಿಗಳ ಸಿದ್ಧಾಂತಗಳೆಂದು ತಿರಸ್ಕರಿಸಿ ನಗುತ್ತಿದ್ದನು. ಮೊದಲು ತಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ “ದೇವನಿಹನು ವ್ಯೋಮದಲ್ಲಿ, ಎಲ್ಲ ಕ್ಷೇಮ ಭೂಮಿಯಲ್ಲಿ!” ಎಂಬರ್ಥದ ಆಶಾವಾದಿ ಬ್ರೌನಿಂಗ್ ಕವಿಯ ಪದ್ಯದ ಚರಣಗಳು ಎಷ್ಟು ಜಳ್ಳು ಎಂಬುದು ಸಾಕ್ಷಾತ್ತಾಗಿ ಗೋತ್ತಯಿತು.

ಜಾಕಿಯನ್ನು ಗಾಡಿಯ ಮೇಲೆ ಹಾಕಿ ತೀರ್ಥಹಳ್ಳಿಯ ಆಸ್ಪತ್ರೆಗೆ ಕಳುಹಿಸಿದರು. ಅವನ ಶುಶ್ರೂಷೆಗೆ ಪುಟ್ಟಣ್ಣನೇ ಗಾಡಿಯ ಜೊತೆ ಹೋದನು. ಜಾಕಿಯ ದುರದೃಷ್ಟಕ್ಕೆ ತಕ್ಕಹಾಗೆ ದಾರಿಯಲ್ಲಿ. ಮುಗಿಲೆದ್ದು ಮಿಂಚೆಸೆದು ಗುಡುಗಿ ಸಿಡಿಲೆರಗಿ ಮುಂಗಾರು ಮಳೆ ದನಗೋಳಾಗಿ ಸುರಿಯಿತು.