ಆ ದಿನ ಸಾಯಂಕಾಲ ರಾಮಯ್ಯ ತಂದೆಯ ಇಷ್ಟದಂತೆ ಅವರೊಡನೆ ಕಾನೂರಿಗೆ ಬಂದನು.

ರಾತ್ರಿ ಊಟಕ್ಕೆ ಕುಳಿತಿದ್ದಾಗ ಅಪರಿಚಿತ ತರುಣ ಸ್ರೀಯೊಬ್ಬಳು ಬಡಿಸುತ್ತಿದ್ದುದನ್ನು ಕಂಡು, ಆಕೆ ಯಾರಿರಬಹುದೆಂದು ಬೆರಗಾದನು.

ಪುಟ್ಟಣ್ಣನೂ ಸೇರೆಗಾರರೂ ಚಂದ್ರಯ್ಯಗೌಡರಿಗೆ ಆ ದಿನ ಸಿಂಗಪ್ಪಗೌಡರ ಕಡೆಯವರಿಂದ ತಮಗೆ ಏನಾಯಿತೆಂಬುದನ್ನು ಭಾವಾಕ್ರೋಶಗಳಿಂದ ವರ್ಣಿಸುತ್ತಿದ್ದರು. ಚಂದ್ರಯ್ಯಗೌಡರೂ ರೇಗಿ ನಡುನಡುವೆ, ಹಾಗೆ ಮಾಡಬೇಕಾಗಿತ್ತು, ಹೀಗೆ ಮಾಡಬೇಕಾಗಿತ್ತು ಎಂದು ಹೇಳುತ್ತಿದ್ದರು. ಕಡೆಗೆ ಸಿಂಗಪ್ಪಗೌಡರನ್ನು ನಿರ್ದೇಶಿಸಿ “ಅವನಿಗೆ ಮಾಡಿಸ್ತೀನಿ. ಕಳ್ಳನಾಟಾ ಕಡಿಸಿದ್ದನ್ನೆಲ್ಲ ಕಕ್ಕಿಸ್ತೀನಿ. ಸರ್ಕಾರವೆಲ್ಲ ಹಾಳಾಗಿ ಹೋಯ್ತೇನು ನೋಡಿಬಿಡ್ತೀನಿ” ಎಂದು ಮೊದಲಾಗಿ ಆರ್ಭಟಿಸಿದರು.

ರಾತ್ರಿ ಉಪ್ಪರಿಗೆ ಮೇಲೆ ಮಲಗಿದ್ದಾಗ ರಾಮಯ್ಯ ಆಲೋಚಿಸತೊಡಗಿದನು.

ಮನೆಗೆ ಬಂದ ತುಸು ಹೊತ್ತಿನಲ್ಲಿಯೆ ರಾಮಯ್ಯನಿಗೆ ತಮ್ಮ ಮನೆಗಿಂತಲೂ ಮುತ್ತಳ್ಳಿಯೆ ಹೆಚ್ಚು ಸಂತೋಷಕರವಾಗಿದ್ದಂತೆ ತೋರಿತು. ವಾಸು, ಪುಟ್ಟಮ್ಮ, ಹೂವಯ್ಯ, ನಾಗಮ್ಮ ಇವರೆಲ್ಲ ಇದ್ದಿದ್ದರೆ ಬಹುಃಶ ಹಾಗೆ ತೋರುತ್ತಿರಲಿಲ್ಲವೆಂದು ಕಾಣುತ್ತದೆ.  ತಂದೆಯೊಡನೆ ಮೈಸೂರು, ಕಾಂಗ್ರೆಸ್ಸು, ಸ್ವರಾಜ್ಯದ ಚಳವಳಿ ಇತ್ಯಾದಿಗಳ ವಿಚಾರವಾಗಿ ಮಾತಾಡಲೆಳಸಿದನು. ಆದರೆ ಅವರಿಗೆ ಗೃಹಕೃತ್ಯ ಕೋರ್ಟು ವ್ಯವಹಾರಗಳಲ್ಲಿ ಇದ್ದಷ್ಟು ಪರಿಶ್ರಮವಾಗಲಿ, ಆಸಕ್ತಿಯಾಗಲಿ, ಸಹಾನುಭೂತಿಯಾಗಲಿ ರಾಮಯ್ಯಾ ಆಡಿದ ದೂರದ ವಿಚಾರಗಳಲ್ಲಿರಲಿಲ್ಲ. ಅಲ್ಲದೆ ಅವುಗಳ ವಿಷಯದಲ್ಲಿ ಖಂಡನೆ ತಿರಸ್ಕಾರಗಳನ್ನೂ ಪ್ರದರ್ಶಿಸಿ, ಬಿಳಿಯಬಟ್ಟೆ, ಖಾದಿಯ ಟೋಪಿ, ಕಾಲು ಮುಚ್ಚುವ ಉದ್ದಪಂಚೆಗಳನ್ನು ಅವಹೇಳನ ಮಾಡಿದರು. ನೈರ್ಮಲ್ಯವೂ “ಷೋಕಿ”ಯೇ ಎಂಬುದು ಅವರ ದೃಢವಾದ ಅಭಿಪ್ರಾಯವಾಗಿತ್ತು.

ರಾಮಯ್ಯ ಪುಟ್ಟಣ್ಣನೊಡನೆ ಷಿಕಾರಿ ನಾಯಿ ಬಂದೂಕುಗಳನ್ನು ಕುರಿತು ಮಾತಾಡಿ, ಕಳೆದ ತಿಂಗಳುಗಳಲ್ಲಿ ಅವನು ಮಾಡಿದ್ದ ಸಾಹಸಗಳ ವರ್ಣನೆಯನ್ನು ಕೇಳಿ ಸಂತೋಷಪಟ್ಟನು. ಟೈಗರು ಜಾಕಿಯ ಧೂರ್ತ ಕ್ರೌರ್ಯದಿಂದ ಮಡಿದುದನ್ನು ಕೇಳಿ ವ್ಯಸನಪಟ್ಟನು. ಏನಾದರೂ ಅವನ ಮನಸ್ಸಿನ ವಿಷಣ್ಣತೆ ಮಾದುಹೋಗಲಿಲ್ಲ. ಮೈಸೂರಿನಲ್ಲಿ ಇದ್ದಾಗ ಮನೆಯನ್ನು ನೆನೆದು ಸಂತೋಷಪಟ್ಟಂತೆ ಮನೆಯಲ್ಲಿದ್ದು ಸಂತೋಷಪಡಲಾಗಲಿಲ್ಲ.

ಸುತ್ತಲೂ ಕಗ್ಗತ್ತಲೆ ಕವಿದಿತ್ತು. ಎದುರಿಗಿದ್ದ ಬೆಟ್ಟ ಕಾಡುಗಳೆಲ್ಲ ಮಸಿಯ ಮುದ್ದೆಯಾಗಿದ್ದುವು. ಆಕಾಶದಲ್ಲಿ ಮಿಣುಕುತ್ತಿದ್ದ ನಕ್ಷತ್ರಗಳು ಅವನ ಏಕಾಂತಭಾವವನ್ನು ದ್ವಿಗುಣಿತ ನಿರ್ವಿಣ್ಣವಾಗಿ ಮಾಡಿದ್ದುವು. ಹಾಸಿಗೆಯ ಮೇಲೆ ಬೆಚ್ಚನೆ ಮಲಗಿದ್ದ ರಾಮಯ್ಯನು ವಿಚಾರಪೀಡಿತನಾದನು. ಬಡಿಸುತ್ತಿದ್ದ ಹೆಂಗಸು ಯಾರಿರನಹುದು? ತಮ್ಮ ಮನೆಗೆ ನಂಟನಾಗಿ ಮಾತ್ರ ಬಂದವರಾಗಿದ್ದರೆ ಅಡುಗೆಮನೆಯಲ್ಲಿ ಬಹಳ ಕಾಲದ ಬಳಕೆ ಇರುವವಳಂತೆ ಪರಿಚರ್ಯೆ ಮಾಡಲಾಗುತ್ತಿರಲಿಲ್ಲ ! ಅಡುಗೆಮಾಡಲು ಸಂಬಳಕ್ಕೆ ಗೊತ್ತುಮಾಡಿದ್ದ ಹೆಂಗಸಾಗಿದ್ದರೆ ಉಡುಗೆ ತೊಡುಗೆಗಳಲ್ಲಿ ಅಷ್ಟು ನಾಜೋಕಿರುತ್ತಿರಲಿಲ್ಲ ! ಪುಟ್ಟಣ್ಣನೇನಾದರೂ ಹೊಸದಾಗಿ ಮದುವೆಯಾಗಿದ್ದಾನೆಯೆ ? ಇರಲಿಕ್ಕಿಲ್ಲ. ಹಾಗಿದ್ದರೆ ಅವನೇ ಹೇಳುತ್ತಿದ್ದನು. ಅವನನ್ನು ನೋಡಿದರಂತೂ ಆ ಊಹೆ ಸರ್ವಥಾ ತಪ್ಪು ಎಂದು ತೋರುತ್ತದೆ. ಹೀಗೆ ವಿಧವಿಧವಾಗಿ ಆಲೋಚಿಸುತ್ತ ಇದ್ದಕ್ಕಿದ್ದ ಹಾಗೆ ರಾಮಯ್ಯನ ಎದೆಯಲ್ಲಿ ರಕ್ತ ಸಂಚಾರ ವೇಗವಾಯಿತು. “ಛೆ-ಅದೆಂದಿಗೂ ಆಗಿರಲಿಕ್ಕಿಲ್ಲ” ಎಂದು ತನ್ನ ಮನಸ್ಸಿನಲ್ಲಿ ಮೂಡಿದ್ದ ಆಲೋಚನೆಯನ್ನು ನಿರಸನಮಾಡಲೆಳಸಿದನು. ತೊಲಗಿಸಲು ಯತ್ನಿಸಿದಂತೆಲ್ಲ ಆ ಆಲೋಚನೆ ಪ್ರಬಲತರವಾಯಿತು. ಮೆಲ್ಲನೆ ಸಮಂಜಸವಾಗ ತೊಡಗಿತು. ಕಡೆಕಡೆಗೆ ನಿಶ್ಚಯವಾಗಿಯೂ ತೋರಿತು. ಆದರೂ ರಾಮಯ್ಯ ಅದನ್ನು ನಂಬಲಿಲ್ಲ ; ನಂಬಲು ಇಷ್ಟಪಡಲೂ ಇಲ್ಲ. ಅಂತಹ ಆಲೋಚನೆಗಾಗಿ ತನ್ನನ್ನು ತಾನೆ ಹಳಿದು ಕೊಂಡನು. ಆದರೂ ಅವನೆದೆ ಅದೆಲ್ಲಿ ನಿಜವಾಗಿ ಬಿಡುವುದೋ ಎಂದು ಕಾತರವಾಗಿತ್ತು. ಹಾಸಿಗೆಯ ಮೇಲೆ ಎದ್ದು ಕುಳಿತು “ಅದು ನಿಜವಾಗದಿರಲಿ” ಎಂದು ಭಗವಂತನನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಿದನು. ಅಷ್ಟು ಅಸಹ್ಯವಾಗಿ ವಿಕಟವಾಗಿ ತೋರಿತು, ಆ ಹೆಂಗಸು ತನ್ನ ತಂದೆ ತನಗರಿಯದಂತೆ ಮದುವೆಯಾದವಳು ಎಂಬ ಆಲೋಚನೆ.

ಮರುದಿನ ಬೆಳಗ್ಗೆ ರಾಮಯ್ಯನ ಮನಸ್ಸಿಗೆ ಮನೆಯವರೆಲ್ಲರೂ ಯಾವುದೋ ಒಂದು ಗುಟ್ಟನ್ನು ಮುಚ್ಚುಮರೆ ಮಾಡಿರುವಂತೆ ಭಾಸವಾಗತೊಡಗಿತು. ಪ್ರತಿಯೊಬ್ಬರ ಮಾತು, ನೋಟ, ನಡತೆ ಎಲ್ಲವೂ ಅದನ್ನೇ ಸಮರ್ಥಿಸುವಂತಿದ್ದುವು. ಕಾಫಿ ತಿಂಡಿ ಪೂರೈಸಿದ ಒಡನೆಯೆ ಪುಟ್ಟಣ್ಣನನ್ನು ಉಪ್ಪರಿಗೆಗೆ ಕರೆದು, ತನಗಿದ್ದ ಆಶಂಕೆಯ ವಿಚಾರವಾಗಿ ಪ್ರಶ್ನಿಸಿದನು. ಕೆಳಗೆ ಜಗಲಿಯಲ್ಲಿದ್ದ ಯಜಮಾನರಿಗೆ ಕೇಳಿಸದಂತೆ ಮೆಲ್ಲನೆ ಮಾತಾಡಿದರು.

“ಆ ಹೊಸಬಿ ಯಾರೋ ? ”

“ಯಾವ ಹೊಸಬಿ ?”

“ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದೆಯಲ್ಲಾ ಅದು.”

ಪುಟ್ಟಣ್ಣ ಸ್ವಲ್ಪ ನಕ್ಕು “ಅಯ್ಯೋ ಇದ್ಯಾಕೆ ಹೀಂಗೆ ಕೇಳ್ತೀರಿ ? ನಿಮ್ಮ ಚಿಕ್ಕಮ್ಮ” ಎಂದನು.

“ಚಿಕ್ಕಮ್ಮ !…. ಯಾರ ಮನೆ, ಹೇಳು?”

“ನೆಲ್ಹಳ್ಳಿಯಿಂದ ನಿಮ್ಮಪ್ಪಯ್ಯನಿಗೆ ತಂದಿದ್ದು !”

“ಆ ಹೊಸಬಿ ಅಪ್ಪಯ್ಯನ ಹೆಂಡತಿಯೇ ! ”

ಯಾವುದು ಆಗಬಾರದೆಂದು ಭಗವಂತನನ್ನು ಪ್ರಾರ್ಥಿಸಿದ್ದನೋ ಅದೇ ಆಗಿಹೋಗಿದೆ ! ರಾಮಯ್ಯನಿಗೆ ಬಹಳ ದುಃಖವಾಗಿ ಅವನ ಪ್ರಯತ್ನವನ್ನು ಮಿರಿ ಕಣ್ಣೀರು ಬಳಬಳನೆ ಉದುರಿದುವು. ಮೊದಲು “ಹೊಸ ಚಿಕ್ಕಮ್ಮ”ನನ್ನು ತಂದ ಚಂದ್ರಯ್ಯಗೌಡರ ಕಾರ್ಯವನ್ನು ಪ್ರಶಂಸಿಸುವ ರೀತಿಯಲ್ಲಿ ಮಾತಾಡುತ್ತಿದ್ದ ಪುಟ್ಟಣ್ಣನು ರಾಮಯ್ಯನ ಕಣ್ಣೀರನ್ನು ನೋಡಿ ಅನುಕಂಪದಿಂದ ವ್ಯತಿರಿಕ್ತವಾಗಿ ಮಾತಾಡತೊಡಗಿದನು. ಅವನ ಧ್ವನಿ ಬಹಳ ಮೆಲ್ಲಗಾಯಿತು.

“ನಿಮಗೆ ಕಾಗದ ಬರಲಿಲ್ಲೇನು ?”

ರಾಮಯ್ಯ ತಲೆದೂಗಿ “ಇಲ್ಲ” ಎಂದನು.

“ನಾವೆಲ್ಲ ಬಡುಕೊಂಡೆವು, ನಿಮ್ಮಿಬ್ಬರನ್ನೂ ಕರೆಸಿ ಅಂತಾ. ನಮ್ಮ ಮಾತು ಎಲ್ಲಿ ಕೇಳ್ತಾರೆ?”

“ಕರೆಸದಿದ್ದದ್ದೇ ಒಳ್ಳೇದಾಯ್ತು” ಎಂದು ರಾಮಯ್ಯ ಸುಯ್ದನು.

“ಎಲ್ಲರೂ ಮುತ್ತಳ್ಳಿ ಶ್ಯಾಮೇಗೌಡರಾದಿಯಾಗಿ ಹೇಳಿದರು -” ಈ ಸಂಬಂಧ ಬೇಡ, ನಿಮಗೆ ಹೇಳಿಸಿದ್ದಲ್ಲ” ಎಂದು. ಯಾರ ಮಾತನ್ನೂ ಮನಸ್ಸಿಗೆ ಹಾಕಿಕೊಳ್ಳಲಿಲ್ಲ ಅವರು. ಹಿಡಿದದ್ದು ಒಂದೇ ಹಟ ಮಾಡಿಬಿಟ್ಟರು…. ಈಗ ನೋಡಿ ಮನೇಲೆಲ್ಲ ಜಗಳ. ಮೂರು ಹೊತ್ತೂ ರೇಜಿಗೆ. ನಿಮ್ಮ ತಂಗಿಗೂ ಅವರಿಗೂ ಹುಯ್ದಕ್ಕಿ ಬೇಯೋದಿಲ್ಲ. ನಾಗಮ್ಮನೋರಿಗೂ ಕೂಡ ಕಂಡಾಬಟ್ಟೆ ಹೇಳ್ತಾರೆ. ಹೀಂಗೆ ಆದರೆ ಮನೇ ಪಾಲಾಗದೇ ಸೈ ಅಂತಾ ಕಾಣ್ತದೆ.” ರಾಮಯ್ಯ ಮತ್ತೆ ಮಾತಾಡಲಿಲ್ಲ. ಸುಮ್ಮನೆ ಚಿಂತಿಸುತ್ತ ಕುಳಿತನು. ತೀರಿಹೋದ ಅವನ ತಾಯಿಯ ಶೋಕಪೂರ್ಣವಾದ ಆಕೃತಿ ಕಲ್ಪನೆಯ ಕಣ್ಣೆದುರಿನಲ್ಲಿ ನಿಂತು ಕಂಬನಿಗರೆಯುತ್ತಿತ್ತು. ಆಕೆಯ ಸೌಜನ್ಯಸ್ನೇಹಗಳು ಅವನ ಮನಸ್ಸಿಗೆ ಬಂದು, ಮರೆಯಾಗಿ ಮರೆತುಹೋದಂತಿದ್ದ ಮಾತೃಪ್ರೇಮವನ್ನು ನೆನೆದು ನಿರರ್ಗಳವಾಗಿ ಕಣ್ಣೇರು ಸುರಿಸತೊಡಗಿದನು. ಅವನದು ಸ್ವಾಭಾವಿಕವಾಗಿ ಕೋಮಲ ಪ್ರಕೃತಿ. ದೃಢಚಿತ್ತ ದವನಲ್ಲ. ಚಿಕ್ಕಂದಿನಿಂದಲೂ ತಂದೆಯ ವಿಷಯದಲ್ಲಿ ಬೆಳೆದುಬಂದಿದ್ದ ಭೀತಿ ಅವನನ್ನು ಹೆದರೆದೆಯಾಗಿ ಮಾಡಿತ್ತು. ಅವನಲ್ಲಿದ್ದ ಉದಾತ್ತ ಹೃದಯಕ್ಕೆ ತಕ್ಕ ಮನೋಬಲವೂ ಇದ್ದಿದ್ದರೆ, ಸಂಸಾರದಲ್ಲಿ ಮುಂದೆ ಪ್ರಾಪ್ತವಾಗುವ ಹೃದಯವಿದ್ರಾವಕವಾದ ಅನಾಹುತಗಳು ನಡೆಯುತ್ತಿರಲಿಲ್ಲ. ಹೂವಯ್ಯನಲ್ಲಿ ಅವನಿಗಿದ್ದ ಗೌರವ ಪ್ರೀತಿಗಳಿಗೂ ಅದೇ ಕಾರಣವೆಂದು ತೋರುತ್ತದೆ. ತನ್ನಲ್ಲಿಲ್ಲದ ಹೃದ್ಬಲ, ಮನಃಸ್ಥೈರ್ಯ, ದೃಢಚಿತ್ತತೆಗಳು ಅವನಲ್ಲಿದ್ದುದರಿಂದ ಅವನನ್ನು ಆದರ್ಶಮೂರ್ತಿಯೆಂದು ಭಾವಿಸಿ ಆರಾಧಿಸುತ್ತಿದ್ದನು. ಜಗಲಿಯಿಂದ ಚಂದ್ರಯ್ಯಗೌಡರು “ಓ ಪುಟ್ಟಣ್ಣ!” ಎಂದು ಕರೆದರು. ಅವನು ಸಡಿಲವಾಗಿದ್ದ ಏಣಿಯ ಮೆಟ್ಟಲುಗಳು ಸದ್ದಾಗುವಂತೆ ಇಳಿದು ಬರಲು “ರಾಮು ಎಲ್ಲೋ ?” ಎಂದು ಕೇಳಿದರು. “ಇಲ್ಲಿದ್ದೇನೆ, ಬಂದೇ” ಎಂದು ರಾಮಯ್ಯ ಬೇಗಬೇಗನೆ ಕಣ್ಣೇರೊರಸಿಕೊಂಡು ಮನಸ್ಸಮಾಧಾನ ಮಾಡಿಕೊಳ್ಳುತ್ತ ಇಳಿದು ಬಂದನು. ಚಂದ್ರಯ್ಯಗೌಡರಿಗೆ ಅವನ ಮುಖಭಾವ ಗೊತ್ತಾದರೂ ಗೊತ್ತಾಗದವರಂತೆ ನಟಿಸಿ “ಕಬ್ಬಿನ ಹಿತ್ತಲಿಗೆ ಹೋಗೋಣ ಬನ್ನಿ” ಎಂದು ಅವರಿಬ್ಬರೊಡಗೂಡಿ ಹೆಬ್ಬಾಗಿಲು ದಾಟಿದರು. ನಿದ್ರೆ, ಮೈಕೆರೆದುಕೊಳ್ಳುವುದು, ನೊಣಗಳನ್ನು ಮೇಲೆ ಕೂರದಂತೆ ಅಟ್ಟುವುದು, ಒಂದರೊಡನೊಂದು ಆಟವಾಡುವುದು ಹೀಗೆ ನಾನಾ ಸ್ವಕೀಯ ಕಾರ್ಯದಲ್ಲಿ ಮಗ್ನವಾಗಿದ್ದ ನಾಯಿಗಳು ಒಂದರ ಹಿಂದೊಂದು ಎದ್ದು ನಡೆದು ಅವರನ್ನು ಹಿಂಬಾಲಿಸಿದುವು. ದೃಶ್ಯಗಳೆಲ್ಲವೂ ಹೆಚ್ಚು ಕಡಿಮೆ ತಾನು ಮೈಸೂರಿಗೆ ಹೋದಾಗ ಹೇಗೆ ಇದ್ದುವೋ ಹಾಗೆಯೇ ಇದ್ದುವು. ಅದೇ ಅಂಗಳ, ಅದೇ ಕಣ, ಅಂಗಳವನ್ನು ಕಣದಿಂದ ವಿಭಾಗಿಸಿದ್ದ ಅದೇ ಒಂದಾಳು ಎತ್ತರದ ಕಲ್ಲು ಕಟ್ಟಣೆ, ಕಲ್ಲುಕಟ್ಟಣೆಯ ಮೇಲೆ ಆಗ ಹಸುರಾಗಿದ್ದು ಈಗ ಬೇಸಗೆಯ ಬಿಸಿಲಿಗೆ ಒಣಗಿ ನಿಂತಿದ್ದ ಅದೇ ಹಳು, ಕಣದಲ್ಲಿ ಅದೇ ಹುಣಿಸೆಯ ಮರ, ಅದೇ ದೊಡ್ಡ ಬಸರಿಯ ಮರ, ಬಲ ಭಾಗದಲ್ಲಿ ಅದೇ ತೋಟ, ಬಾಳೆಯ ಮರಗಳ ಅದೇ ಹಸುರೆಲೆಗಳು ಇತ್ಯಾದಿ! ಅಂದಿನಂತೆಯೆ ಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ ! ಅಂದಿನಂತೆಯೆ ಮರಗಳ ಬಲೆನೆಳಲು! ಆದರೆ ರಾಮಯ್ಯನ ಮನಸ್ಸಿಗೆ ಜಗತ್ತು ಹಿಂದಿದ್ದಂತೆ ಸರಳ ಸುಂದರವಾಗಿರಲಿಲ್ಲ. ಅವನ ಮನಸ್ಸು ವಿಷಾದಪೂರ್ಣವಾಗಿತ್ತು. ಕಬ್ಬಿನಗದ್ದೆಯಲ್ಲಿ ಆಳುಗಳು ನೆರೆದಿದ್ದರು. ಸೇರೆಗಾರರು ಅವರಿಗೆ ಕೆಲಸ ಹೇಳುತ್ತಿದ್ದರು. ಸುಮಾರು ಒಂದೂವರೆ ಎರಡು ಅಡಿಗಳಷ್ಟು ಎತ್ತರ ಬೆಳೆದಿದ್ದ ಕಬ್ಬಿನ ಗರಿಯೋಲೆಗಳ ಮೇಲೆ ಬಿದ್ದಿದ್ದ ಬಿಸಿಲು ಕೂಡ ಹಸುರಾದಂತೆ ತೋರುತ್ತಿತ್ತು. ನಡುವೆ ಅಲ್ಲಲ್ಲಿ ಗಟ್ಟದ ತಗ್ಗಿನ ಗಂಡು ಮತ್ತು ಹೆಣ್ಣಾಳುಗಳು ಹಾಳೆಯ ಕುಲಾವಿಗಳಿಂದಲೂ ಕಾರೊಡಲುಗಳಿಂದಲೂ ನಿಂತು, ಒಬ್ಬರೊಡನೊಬ್ಬರು ತುಳು ಭಾಷೆಯಲ್ಲಿ ಗಳಪುತ್ತಿದ್ದರು. ಗೌಡರು ಬರುತ್ತಿದ್ದುದನ್ನು ದೂರದಲ್ಲಿ ಕಂಡ ಆಳುಗಳೂ ಸೇರೆಗಾರರೂ ಕಾರ್ಯಸನ್ನಾಹದಲ್ಲಿಯೆ ನಿಮಗ್ನರಾಗಿದ್ದಂತೆ ತೋರಿಸಿಕೊಂಡರು. ಸೇರೆಗಾರರು ಕನ್ನಡದಲ್ಲಿ ಗಟ್ಟಿಯಾಗಿ ಅಪ್ಪಣೆಮಾಡತೊಡಗಿದರು. “ಏ ಬಗ್ರಾ, ಇಲ್ಲಿ ತಗೊಂಡು ಬಾರೋ ಹಾರೇನ…. ಗುತ್ತೀ, ಅಲ್ಲೇನು ಮಾಡ್ತೀಯೋ ಥೂ! ಖಳ್ಳ !…. ಸುಬ್ಬೀ, ಕಾಡೀ, ಏನ್ಮಾಡ್ತೀರೇ ಎಲ್ಲಾ… ಸದಿಯಾ, ಆ ಕಂಡಿ ಮುಚ್ಚಿ ಬಾ ಇಲ್ಲಿ….” ಮೊದಲಾದ ಆಜ್ಞೆ ಭರ್ತ್ಸನೆಗಳಿಂದ ಕಬ್ಬಿನ ಹಿತ್ತಲು ಸಜೀವ ಸಶಬ್ದ ಸಚಲವಾಗಿಬಿಟ್ಟಿತು. ಅಷ್ಟರಲ್ಲಿ ಗೌಡರೂ ಅಲ್ಲಿಗೆ ಬಂದು ಅಂಚಿನಿಂದ ಅಂಚಿಗೆ ನಡೆದುಹೋಗಿ, ಕೆಲಸವನ್ನೆಲ್ಲ ಪರೀಕ್ಷೆಮಾಡಿ ಸೂಚನೆ ಕೊಡತೊಡಗಿದರು. ತಲೆಗೆ ಕೆಂಪುವಸ್ತ್ರಾವನ್ನು ಸುತ್ತಿಕೊಂಡಿದ್ದ ಸೇರೆಗಾರರು ಕೆಲವುಸಾರಿ ಅವರ ಹಿಂದೂಗಡೆಯೂ ಕೆಲವು ಸಾರಿ ಅಕ್ಕಪಕ್ಕದಲ್ಲಿಯೂ ಚಟುವಟಿಕೆಯಿಂದ ಸುತ್ತಾಡುತ್ತ, ತಮ್ಮ ಸ್ವಾಮಿಭಕ್ತಿಯನ್ನೂ ಕರ್ತವ್ಯನಿಷ್ಠೆಯನ್ನೂ ಪ್ರದರ್ಶಿಸಿದರು. ರಾಮಯ್ಯನ ಹಿಂದುಗಡೆಯಿದ್ದ ಪುಟ್ಟಣ್ಣನು ಹಿಂದಿನ ವರ್ಷ ಕಬ್ಬು ತಿನ್ನಲು ಬರುತ್ತಿದ್ದ ಒಂಟಿಗ ಹಂದಿಯೊಂದನ್ನು ಕೋವಿ ಕಟ್ಟಿ ಕೆಡಹಿದ ಸಂಗತಿಯನ್ನು ಹೇಳಿ, ವ್ಯೂಹ ವರ್ಣನೆ ಮಾಡುತ್ತಿದ್ದನು. ಸ್ವಲ್ಪ ಹೊತ್ತಿನಲ್ಲಿ ಗುದ್ದಲಿಗಳ ಕಪ್ಪು ಕೆತ್ತುವ ಶಬ್ದ ಪ್ರಾರಂಭವಾಗಿ ಮಾತು ನಿಂತುಹೋಯಿತು. ಗೌಡರು ಎತ್ತರವಾಗಿದ್ದ ಒಂದು ಅಂಚಿನ ಹಸುರು ಹುಲ್ಲಿನಲ್ಲಿ ಸೇರೆಗಾರರು ಹಾಸಿಕೊಟ್ಟ ಕರಿಕಂಬಳಿ ಮೇಲೆ ಕಾಮಗಾರಿಯನ್ನು ನೋಡುತ್ತ ಕುಳಿತರು. ನಾಯಿಗಳು ತಮ್ಮ ಸ್ವಭಾವಕ್ಕನುಗುಣವಾಗಿ ಅಲ್ಲಿ ಇಲ್ಲಿ ಸುತ್ತಿ ಕಬ್ಬಿನ ಗದ್ದೆಯಲ್ಲಿಯೇ “ಹಳನುಗ್ಗಿ”ದ್ದುವು. ಇದ್ದಕ್ಕಿದ್ದ ಹಾಗೆ ಒಂದು ನಾಯಿ ತೀಕ್ಷ್ಣವಾಗಿ ಬಗುಳುತ್ತ ಕಬ್ಬಿನ ಗರಿಗಳು ಮೇಲೆ ಕೆಳಗೆ ಹಾರಾಡಿ ಸದ್ದಾಗುವಂತೆ ಏನನ್ನೋ ಅಟ್ಟಿಸಿಕೊಂಡು ಹೋಯಿತು. ಇತರ ನಾಯಿಗಳೂ ಅದೇ ದಿಕ್ಕಿಗೆ ಓಡಿದುವು. ಯಾರಿಗೂ ಪ್ರಾಣಿ ಯಾವುದೆಂದು ಗೊತ್ತಾಗಲಿಲ್ಲ. ಗೌಡರು ಎದ್ದು ನಿಂತು ನೋಡಿದರು. ಆಳುಗಳು ಹತಾರುಗಳನ್ನು ಹಿಡಿದು ನೆಟ್ಟನೆ ನಿಂತು ನೋಡಿದರು. ಪುಟ್ಟಣ್ಣ ರಾಮಯ್ಯರೂ ನೋಡುತ್ತಿದ್ದರು. ನಾಯಿಗಳು ಕಬ್ಬಿನ ಗದ್ದೆಯನ್ನು ದಾಟಿ ಪಕ್ಕದಲ್ಲಿಯೆ ಬಯಲಾಗಿದ್ದ ನೆಲ್ಲುಗದ್ದೆಗೆ ನುಗ್ಗಿದುವು. ಆಗ ಕಾಣಿಸಿಕೊಂಡಿತು, ಬಾಣದ ವೇಗದಿಂದ ಬಳುಕಿ ಚಿಮ್ಮಿ ಹಾರಿ ಓಡುತ್ತಿದ್ದ ಒಂದು ಮೂಲ! ಪುಟ್ಟಣ್ಣ “ಅಯ್ಯಯ್ಯೋ, ಕೋವಿ ತರಲಿಲ್ಲಲ್ಲಾ!” ಎಂದವನೇ “ಛೂ ! ಹಿಡೀ! ಹಿಡ್ಕಾ ! ಹಿಡೀ! ಹಿಡೀ!” ಎಂದು ಅಬ್ಬರಿಸಿ ಕೂಗುತ್ತ ಮುಂದೆ ನುಗ್ಗಿ, ಕಬ್ಬಿನಗದ್ದೆಯ ಬೇಲಿಯನ್ನು, ಗೌಡರು ಓಡುತ್ತಿದ್ದ ಮೊಲವನ್ನೂ ಅಟ್ಟುತ್ತಿದ್ದ ನಾಯಿಗಳನ್ನೂ ಹಿಂಬಾಲಿಸುತ್ತಿದ್ದ ಪುಟ್ಟಣ್ಣನನ್ನೂ ನೋಡುತ್ತ ನಿಂತಿದ್ದ ಆಳುಗಳಿಗೆ ” ಏನ್ನೋಡ್ತೀರೋ, ಬದ್ನೇಕಾಯಿ, ನಿಮ್ಮ ಕೆಲ್ಸಾ ಬಿಟ್ಕೊಂಡು!” ಎಂದು ಗದರಿಸಲು, ಮತ್ತೆ ಗುದ್ದಲಿ ಮಣ್ಣುಗಳ ಗುದ್ದಾಟ ಕೇಳಿಸತೊಡಗಿತು. ತಂದೆ ಕರೆದರು. ಶಶಪ್ರಸಂಗದಿಂದ ಪ್ರಸನ್ನಪ್ರಾಯನಾಗಿದ್ದ ರಾಮಯ್ಯ ಮತ್ತೆ ವಿಷಣ್ಣನಾಗಿ ಅವರ ಬಳಿಗೆ ಬಂದು ಒಂದು ಮಾರು ದೂರದಲ್ಲಿ ಕುಳಿತನು. “ಬಂದವರು ನೆಟ್ಟನೆ ಮನೆಗೆ ಬರಬೇಕೋ, ನೆಂಟರ ಮನೆ ಕೂಳು ಹೆರಕ್ತಾ ಕೂತುಬಿಡಾದೇನು?” ಎಂದರು ಗೌಡರು. ಮೊದಲೇ ಖಿನ್ನನಾಗಿದ್ದ ರಾಮಯ್ಯ ಮತ್ತೂ ಖಿನ್ನನಾಗಿ ತಪ್ಪನ್ನೊಪ್ಪಿ ಕೊಳ್ಳುವವನಂತೆ ಮೃದು ಧ್ವನಿಯಿಂದ “ಅಣ್ಣಯ್ಯನಿಗೆ ಬೆನ್ನು ನೋವಾಗಿತ್ತು. ಹೇಗೆ ಬರೋದು?” ಎಂದನು. “ಅಣ್ಣಯ್ಯನಿಗೆ ಬೆನ್ನು ನೋವಾದ್ರೆ ತಮ್ಮಯ್ಯ ಮಾಡೋದೇನಲ್ಲಿ?” ರಾಮಯ್ಯ ಮಾತಾಡಲಿಲ್ಲ. ಕೈಯ್ಯಲ್ಲೊಂದು ಕಬ್ಬಿನ ಗರಿ ಹಿಡಿದುಕೊಂಡು ಸೀಳುತ್ತ, ಅದರ ಕಡೆಗೆ ತಲೆಬಾಗಿ ನೋಡುತ್ತಿದ್ದನು. “ನಿಮ್ಮ ಸಾಮಾನೆಲ್ಲ ತಂದೀರೇನು?” “ಇಲ್ಲ. ಹೋಟೆಲ ರೂಮಿನಲ್ಲೇ ಇಟ್ಟು ಬಂದಿದ್ದೇವೆ.” “ಯಾಕೆ? ತರಬಾರದಾಗಿತ್ತೇನು?” “ಮತ್ತೆ ಹೊತ್ತುಕೊಂಡು ಹೋಗೋರು ಯಾರು ಅಂತ ತರಲಿಲ್ಲ.” “ಹೊತ್ತುಕೊಂಡು ಹೋಗೋದೂ ಇಲ್ಲ, ಗಿತ್ತುಕೊಂಡು ಹೋಗೋದೂ ಇಲ್ಲ ! ಸಾಕು ನೀವು ಓದಿ ಪ್ಯಾಸುಮಾಡಿದ್ದು. ನೀವು ಅಮಲ್ದಾರಿಕೇ ಮಾಡೋದು ಅಷ್ಟರೊಳಗೇ ಇದೆ! ನೆಲಾ ಗುಡಿಸುವಂತೆ ಬಿಳೀ ಪಂಚೆ ಉಟ್ಕೊಂಡು ಷೋಕಿ ಮಾಡಿಬಿಟ್ಟರೆ ಎಲ್ಲಾ ಬಂತು! ಆ ವೆಂಕಪ್ಪಯ್ಯ ಹೇಳ್ಧ್ಹಾಂಗೆ ಮಣ್ಣು ಕೆರೆಯೋಜಾತಿ ಕೈಗೆ ಲೇಖಣಿ ಕೊಟ್ಟರೆ ಇನ್ನೇನಾಗ್ತದೆ. ಸಾಮಾನ್ನೆಲ್ಲ ತರಿಸಿಬಿಡಿ ರೈಲು ಮೇಲೆ.” ರಾಮ್ಯಯ್ಯನಿಗೆ ಕುರುವಿನ ಮೇಲೆ ಬೊಕ್ಕೆ ಬಂದಂತಾಯಿತು. ಅಪ್ರತಿಭನಾದನು. ಏನು ಹೇಳಬೇಕೋ ಗೊತ್ತಾಗಲಿಲ್ಲ. ತಂದೆ ಹೊಸ ಹೆಣ್ಣಿನೊಡನೆ ಹೊಸ ಕ್ರೌರ್ಯವನ್ನು ಸಂಪಾದಿಸಿದ್ದಂತೆ ತೋರಿತು. ಇಷ್ಟು ಬೇಗ ಇಂತಹ ಮಾತುಗಳನ್ನು ಕೇಳಲು ಅವನು ಸಿದ್ಧನಾಗಲಿಲ್ಲ. ಕಡೆಗೆ ಅತ್ತ ನೋಡಿ, ಎಂಜಲು ನುಂಗಿ “ಅಣ್ಣಯ್ಯ ಇನ್ನೂ ಓದಬೇಕು ಅಂತಿದ್ದಾನೆ” ಎಂದನು. “ಊಞ್! ನೀವು ಓದ್ತಾ ಷೋಕಿ ಮಾಡ್ತಾ ಪ್ಯಾಟೆ ತಿರುಗ್ತಾ ಇರಿ. ನಾನಿಲ್ಲಿ ಗೊಬ್ಬರ ಹೊತ್ತು, ಗೆಯ್ದು ದುಡ್ಡು ಕಳಿಸ್ತಾ ಇರ್ತೀನಿ!….. ಅವನು ಏನಾದ್ರೂ ಮಾಡ್ಲಿ!…. ಅವನ ಪಾಲು ಅವನು ತಹೊಂಡು ಮೈಸೂರಿಗಾದ್ರೂ ಹೋಗ್ಲಿ, ಮದ್ರಾಸಿಗಾದ್ರೂ ಹೋಗ್ಲಿ!…. ಅವನ ಅವ್ವನ ದೂರಂತೂ ನಾ ಕೇಳಲಾರೆ…. ಹೋದೋರ್ಹತ್ರ ಪಾಲುಮಾಡಿಕೊಡ್ಲಿ ಅಂತ ಹೇಳ್ತದಂತೆ…. ಕೇಳಿ ಕೇಳಿ ನನಗಂತೂ ತಲೆ ರೇಜಿಗೆ ಹಿಡಿದುಹೋಗೆದೆ…. ಅದನ್ನಂತೂ ಕಂಡತೆ ಆಗೋದಿಲ್ಲ..(“ಅದು ಎಂದರೆ ಅವರ ಹೆಂಡತಿ ಸುಬ್ಬಮ್ಮ ಎಂಬುದನ್ನು ರಾಮಯ್ಯನಿಗೆ ಹೊಸದಾಗಿ ತಿಳಿಸಬೇಕಾಗಿರಲಿಲ್ಲ. ಚಂದ್ರಯ್ಯಗೌಡರೂ ಕೂಡ ತಮ್ಮ ಮದುವೆಯ ವಿಚಾರ ಮಗನಿಗೆ ಗೊತ್ತಾಗಿರಬೇಕು ಎಂದು ನಿಸ್ಸಂಕೋಚವಾಗಿ ಮಾತಾಡಿದರು.)…. ದಿನ ಬೆಳಗಾದರೆ ಅಡಿಗೆ ಮನೇಲಿ ಗುದ್ದಾಟ…. ಜಗಲೀಲಿ ಯಾರಾದ್ರೂ ಅಪ್ಪಂತೋರು ಬಂದು ಕೂತಿದ್ರಂತೂ…. ಏ ಬಗ್ರಾ, ಗಿಡಾನೇ ಕಡಿದೇನೋ! ಥೂ, ಕಳ್ಳಸೂಳೇಮಗನೇ” ಎಂದು ಗೌಡರು ಆಳೊಬ್ಬನನ್ನು ಬೈದರು. ನೀಲಿಯ ಬಾನಿನಲ್ಲಿ ಕೆಲವು ಬಿಳಿಯ ಬಣ್ಣದ ತುಂಡುಮುಗಿಲು ನಿಶ್ಚಲಪ್ರಾಯವಾಗಿದ್ದುವು. ಪ್ರಾತಃಕಾಲದ ಎಳ ಬಿಸಿಲು ಒಯ್ಯೊಯ್ಯನೆ ಬೆಳೆಬಿಸಿಲಾಗಿ ಅಲೆಯಲೆಯಾಗಿ ದೃಷ್ಟಿ, ಸೀಮಾ ಪರ್ಯಂತ ಪ್ರಸರಿಸಿದ್ದ ಮಹಾರಣ್ಯ ಭೂಧರಗಳ ಮೇಲೆ ಸ್ವಚ್ಛಂದವಾಗಿ ವಿಹರಿಸುತ್ತಿತ್ತು. ರಾಮಯ್ಯ ಆ ಮಹಾ ದೃಶ್ಯವನ್ನು ಕಣ್ಣಿನಿಂದ ಮಾತ್ರ ನೋಡುತ್ತ, ವ್ಯಸನಾಕ್ರಾಂತನಾಗಿ ಅನ್ಯಮನಸ್ಕನಾಗಿದ್ದನು. ಅತ್ತ ಪುಟ್ಟಣ್ಣ ಮೊಲ ಮತ್ತು ನಾಯಿಗಳ ಹಿಂದೆ ಓಡಿಯೋಡಿ ಸಾಕಾಗಿ ಏದುತ್ತ ನಿಂತನು. ಮೊಲವೂ ನಾಯಿಗಳೂ ಗದ್ದೆಯ ಬಯಲನ್ನು ದಾಟಿ ಕುರುಚಲು ಕಾಡನ್ನು ಪ್ರವೇಶಿಸಿದುವು. ಬಹಳ ಹೊತ್ತಾದರೂ ನಾಯಿಗಳು ಹಿಂದಕ್ಕೆ ಬಾರದಿರಲು ಪುಟ್ಟಣ್ಣ “ಕ್ರೂ ಕ್ರೂ” ಎಂದು ಗಟ್ಟಿಯಾಗಿ ಕೂಗಿ ಕರೆದನು. ತುಸು ಹೊತ್ತಿನಲ್ಲಿ ಡೈಮಂಡು ಬಾಯಿ ತೆರೆದು, ಲಾಲಾಜಲ ಸ್ರವಿಸುತ್ತಿದ್ದ ಕೆಂಪು ನಾಲಗೆಯನ್ನು ಹೊರಗೆ ಚಾಚಿಕೊಂಡು, ಏದುತ್ತ ಓಡಿ ಬಂದಿತು. ಅದರ ಹಿಂದೆ ರೂಬಿ, ಟಾಪ್ಸಿ, ರೋಜಿ, ಕೊತ್ವಾಲ, ಡೂಲಿ ಒಂದೊಂದಾಗಿ ಕಾಣಿಸಿಕೊಂಡುವು. ಅವುಗಳನ್ನು ನೋಡಿದ ಕೂಡಲೆ ಪುಟ್ಟಣ್ಣನಿಗೆ ಗೊತ್ತಾಯಿತು, ಷಿಕಾರಿ ಬಿಕಾರಿಯಾಗಿದೆ ಎಂದು. ಪುಟ್ಟಣ್ಣ ನಾಯಿಗಳೊಡನೆ ಹಿಂತಿರುಗಿ ಮನೆಗೆ ಬರುತ್ತಿದ್ದಾಗ, ಗಟ್ಟದಾಳುಗಳ ಬಿಡಾರಗಳಿದ್ದ ಸ್ಥಳಕ್ಕೆ ಸಮಿಪದಲ್ಲಿ ಹಳೆಪೈಕದ ತಿಮ್ಮನು ಸಾಕಿದ್ದ ಕೆಲವು ಹೋತಗಳೂ ಆಡುಗಳೂ ಮರಿಗಳೂಡನೆ ಸೊಪ್ಪು ಮೇಯುತ್ತಿದ್ದುವು. ಎತ್ತರವಾಗಿದ್ದ ಕರಿಯ ಬಣ್ಣದ ಹೋತನೊಂದು ಹಿಂಗಾಲುಗಳ ಮೇಲೆ ನಿಂತು, ಮುಂಗಾಲುಗಳನ್ನು ಕೆಳಗೆ ಬಾಗಿದ್ದ ಒಂದು ಮರದ ಕೊಂಬೆಗೆ ಚಾಚಿ ಸೊಪ್ಪು ಮೇಯುತ್ತಿದ್ದುದು ದೂರದಿಂದಲೆ ಪುಟ್ಟಣ್ಣನ ಕಣ್ಣಿಗೆ ಬಿದ್ದಿತ್ತು. ಮೊಲವನ್ನಟ್ಟಿ ಬೇಟೆ ಸಿಕ್ಕದೆ ರೇಗಿದ್ದ ನಾಯಿಗಳು ಮೇಕೆಗಳಿದ್ದ ದಿಕ್ಕಿಗೆ ರಭಸದಿಂದ ನುಗ್ಗಿದುವು. ಅವು ಅರಚುತ್ತ ಚಲ್ಲಾಪಿಲ್ಲಿಯಾಗಿ ಓಡಿದುವು. ಓಡಲಾರದ ಮರಿಯೊಂದು ಶುನಕ ಸೇನೆಗೆ ಸುಲಭ ಗುರಿಯಾಯಿತು. ಪುಟ್ಟಣ್ಣ ನಾಯಿಗಳನ್ನು ಗದರಿಸುತ್ತ ಕುರಿಮರಿಯ ರಕ್ಷಣೆಗಾಗಿ ಓಡಿದನು. ಮರಿ ಅಲ್ಲಿ ನುಗ್ಗಿ ಇಲ್ಲಿ ನುಸಿದ ಒಂದೆರಡು ನಿಮಿಷಗಳವರೆಗೆ ತಪ್ಪಿಸಿಕೊಂಡಿತು. ಅದು ತಪ್ಪಿಸಿಕೊಂಡಂತೆಲ್ಲ ನಾಯಿಗಳಿಗೆ ಜಿದ್ದು ಹೆಚ್ಚಿದಂತಾಗಿ ಮತ್ತಷ್ಟು ರೋಷ ರಭಸಗಳಿಂದ ಬೆನ್ನಟ್ಟಿ ಅದನ್ನು ಹಿಡಿದೇ ಬಿಟ್ಟುವು. ಕುರಿಮರಿ ಒಂದು ಸಾರಿ ಕರುಣಾಕರವಾಗಿ ಅರಚಿಕೊಂಡು ನೆಲಕ್ಕೆ ಬಿದ್ದು ಮೌನವಾಯಿತು. ಪುಟ್ಟಣ್ಣನು ಓಡಿ ಭದ್ರಮುಷ್ಟಿಯಿಂದಲೆ ನಾಯಿಗಳನ್ನು “ಘುಕ್” “ಕ್ಞೈ” ಎನ್ನುವಂತೆ  ಗುದ್ದಿ ಅಟ್ಟಿದಾಗ ನೊರೆಯ ಬಿಳಿಯ ಮುದ್ದು ಮರಿ ಹುಲ್ಲು ನೆಲದ ಮೇಲೆ ಲಿಬಿ ಲಿಬಿ ಒದ್ದಾಡುತ್ತಿತ್ತು. ಅದರ ತೊಗಲು ಕತ್ತಿನ ಬಳಿಯೂ ಹಿಂಗಾಲಿನಲ್ಲಿಯೂ ನೆತ್ತರು ಹಿಡಿದು ಕೆಂಪಾಗಿತ್ತು. ಮುದ್ದಿನ ಮುದ್ದೆಯಂತಿದ್ದ ಕುರಿಮರಿಯ ಶೋಚನೀಯ ಸ್ಥಿತಿಯನ್ನು ಕಂಡು ಪುಟ್ಟಣ್ಣನ ಎದೆ ಕರಗಿ ನೀರಾಯಿತು. “ಅಯ್ಯೋ ನಿಮ್ಮ ಕುರ್ಕ ಹೊತ್ತುಕೊಂಡು ಹೋಗ!” ಎಂದು ಹಲ್ಲು ಕಚ್ಚಿ ನಾಯಿಗಳನ್ನು ಶಪಿಸುತ್ತ, ಮರಿಯನ್ನು ಮೆಲ್ಲಗೆ ಎತ್ತಿಕೊಂಡನು. ಅದರ ಮೃದುವಾದ ನುಣುಪಾದ ಚರ್ಮ ಕೈ ಸೋಂಕಿದ ಕೂಡಲೆ, ಪುಟ್ಟಣ್ಣನಲ್ಲಿ ದರ್ಶನದಿಂದ ಉಂಟಾಗಿದ್ದ ಕನಿಕರ ಸ್ಪರ್ಶದಿಂದ ಇಮ್ಮಡಿಯಾಯಿತು. ನೀರು ಕುಡಿಸಿ ಮರಿಗೆ ಶುಶ್ರೂಷೆ ಮಾಡುವ ಸಲುವಾಗಿ ಬಳಿಯಿದ್ದ ಗಟ್ಟದವರ ಬಿಡಾರಗಳಿಗೆ ಹೋದನು. ಆಳುಗಳೆಲ್ಲ ಕೆಲಸಕ್ಕೆ ಹೋಗಿದ್ದುದರಿಂದ ತಟ್ಟಿಯ ಬಾಗಿಲುಗಳನ್ನು ಮುಚ್ಚಿ ಬಿಗಿದು ಕಟ್ಟಿದ್ದರು. ಹಿಂದಿನ ದಿನ ತೋಳಿಗೆ ಪೆಟ್ಟು ಬಿದ್ದುದರಿಂದ ಸೋಮನು ಕೆಲಸಕ್ಕೆ ಹೋಗದಿದ್ದುದು ಪುಟ್ಟಣ್ಣನಿಗೆ ಕಬ್ಬಿನ ಗದ್ದೆಯಲ್ಲಿಯೆ ತಿಳಿದಿತ್ತು. ಅವನ ಬಿಡಾರಕ್ಕೆ ಹೋದನು. ಬಾಗಿಲು ತೆರೆದಿತ್ತು. ಒಳಗೆ ಯಾವುದೊಂದು ಸದ್ದೂ ಕೇಳಿಸಲಿಲ್ಲ. “ಸೋಮಾ! ಸೋಮಾ!” ಎಂದು ಕರೆದನು. ಉತ್ತರ ಬರಲಿಲ್ಲ. ಎತ್ತಿಕೊಂಡಿದ್ದ ಕುರಿಮರಿಯೊಡನೆ ಪುಟ್ಟಣ್ಣ ಮೈಕುಸಿದು ತಲೆ ಬಾಗಿ, ಬಾಗಿಲು ದಾಟಿದನು. ಬಿಸಿಲಿನಿಂದ ಬಂದಿದ್ದ ಅವನ ಕಣ್ಣಿಗೆ ಒಳಗೆ ಅರೆಗತ್ತಲೆ ಕವಿದಂತಾಯಿತು. ಹಳೆಯ ಕೊಳಕು ಚಿಂದಿ ಬಟ್ಟೆಗಳ ವಾಸನೆಯೂ, ತೆಂಗಿನೆಣ್ಣೆಯ ವಾಸನೆಯೂ ಹೊಗೆಯ ಮತ್ತು ಹುರಿದ ಹಂದಿ ಮಾಂಸದ ವಾಸನೆಯೊಂದಿಗೆ ಮಿಳಿತವಾಗಿ ಮೂಗಿಗೆ ಬಡಿದುವು. ಏನೋ ಗೊರ್ ಗೊರ್ ಸದ್ದು ಕೇಳಿಸಿದಂತಾಗಿ “ಸೋಮಾ! ಸೋಮಾ!” ಎಂದನು. ಉತ್ತರವಾಗಿ ಗೊರ್ ಗೊರ್ ಸದ್ದು ಕೇಳಿಸಿತಲ್ಲದೆ ಯಾರೂ “ಓ” ಕೊಳ್ಳಲಿಲ್ಲ. ಅಷ್ಟರಲ್ಲಿ ಕಣ್ಣು ಕಾಣುವಂತಾಗಿ, ಮೂಲೆಯಲ್ಲಿದ್ದ ಒಲೆಯ ಬಳಿ ನೆಲದ ಮೇಲೆ ಸೋಮನು ಗೊರ್ ಗೊರ್ ಎನ್ನುತ್ತ ಬಿದ್ದಿದ್ದದ್ದು ಗೋಚರವಾಗಿ, ಪುಟ್ಟಣ್ಣ ಸ್ತಂಭಿತನಾದನು! ಕುರಿಮರಿಯನ್ನು ಕೆಳಗಿಟ್ಟು ಸೋಮನ ಶರೀರದ ಮೇಲೆ ಬಾಗಿದನು. ಅವನ ಕಣ್ಣು ಮೆಳ್ಳೆಯಾಗಿತ್ತು. ಬಾಯಿ ತೆರೆದಿದ್ದು, ಬಹಳ ಕಷ್ಟದಿಂದ ಉಸಿರು ಗೊರಾಗೊರಾ ಎಂದು ಆಡುತ್ತಿತ್ತು. ಹೊಟ್ಟೆ ಊದಿಕೊಂಡಿತ್ತು. ಆಗ ನಿಶ್ಚಲವಾಗಿದ್ದರೂ ಸುತ್ತಲೂ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸಾಮಾನುಗಳ ಅವ್ಯವಸ್ಥೆಯಿಂದ ಅವನು ಬಹಳ ಒದ್ದಾಡಿಕೊಂಡಿದ್ದುದು ಗೊತ್ತಾಗುತ್ತಿತ್ತು. ಮೊದಮೊದಲು ಅವನ ಆ ಸ್ಥಿತಿಗೆ ಕಾರಣ ಹೊಳೆಯದೆ ಪುಟ್ಟಣ್ಣ ಭೀತೋದ್ವಿಗ್ನನಾಗಿದ್ದರೂ ಒಂದೆರಡು ಕ್ಷಣಗಳಲ್ಲಿಯೆ ಅಲ್ಲಿ ತೆರೆದು ಬಿದ್ದಿದ್ದ ಹಂದಿಯ ಹುರಿದ ಮಾಂಸದ ಮಣ್ಣಿನ ಪಾತ್ರೆಯಿಂದ ಗುಟ್ಟು ಮನಸ್ಸಿಗೆ ಮಿಂಚಿ, ಒಡನೆಯೆ ಉದ್ಯಮಶೀಲನಾದನು. ಬೇಗಬೇಗನೆ ಸೋಮನನ್ನು ಎತ್ತಿ ಕೂರಿಸಿ, ಕತ್ತಿನ ಕೆಳಗೆ ಬೆನ್ನಿನ ಮೇಲೆ, ಬಲವಾಗಿ ಒಂದು ಗುದ್ದು ಗುದ್ದಿದನು. ಬಿಲ್ಲನ್ನು ಎಳೆದ ಕೂಡಲೆ ಬಂದೂಕಿ ನಿಂದ ಗುಂಡು ಹಾರುವಂತೆ ಸೋಮನ ವದನಹ್ವರದಿಂದ ಲಾಲಾಜಲದಿಂದ ಲೋಳಿಯಾಗಿ ಸ್ವಲ್ಪ ಮಾಂಸಾವೃತವಾಗಿದ್ದ ಎಲುಬಿನ ತುಂಡೊಂದು ಜಲಕ್ಕನೆ ಹೊರನೆಗೆದು ಸದ್ದು ಮಾಡುತ್ತ ನೆಲದ ಮೇಲೆ  ಉರುಳಿಹೋಯಿತು. ಸೋಮನು ದೀರ್ಘಶ್ವಾಸೋಚ್ಛ್ವಾಸಗಳನ್ನು ಬಿಡುತ್ತ, ಸತ್ತು ಬದುಕಿದವನಂತೆ ಪುಟ್ಟಣ್ಣನ ಕಡೆಗೆ ನೋಡುತ್ತ ಕುಳಿತನು. ಆ ದಿನ ಬೆಳಿಗ್ಗೆ ಆಳುಗಳೆಲ್ಲರೂ ಗಂಜಿಯುಂಡು ಕೆಲಸಕ್ಕೆ ಹೋದಮೇಲೆ ಸೋಮನೊಬ್ಬನೇ ಬಿಡಾರದಲ್ಲಿ ತೋಳಿಗೆ ಬಟ್ಟೆ ಕಟ್ಟಿಕೊಂಡು ಮಲಗಿದ್ದನು. ಹೊತ್ತು ಕಳೆಯುವುದು ಪ್ರಯಾಸವಾಗಿ ಒಂದೆರಡು ಸಾರಿ ಎಲೆಯಡಕೆ ಹಾಕಿಕೊಂಡನು. ನಾಲ್ಕಾರು ಸಾರಿ ಹೊರಗೆ ತಲೆಹಾಕಿ ಎಂಜಲು ಉಗುಳಿದನು. ಹೊಗೆಸೊಪ್ಪು ಮಿಶ್ರವಾಗಿದ್ದ ತಾಂಬೂಲ ಚರ್ವಣವನ್ನು ಕಡೆಯ ಸಾರಿ ಉಗುಳಿ ಹಿಂತಿರುಗುತ್ತಿದ್ದಾಗ ಅವನ ಕಣ್ಣು ಒಲೆಯ ಮೇಲಿದ್ದ ಒಂದು ಮಣ್ಣಿನ ಪಾತ್ರೆಯ ಮೇಲೆ ಬಿತ್ತು. ಅದರೊಳಗೆ ಹಿಂದಿನ ದಿನ ಹೊಡೆದಿದ್ದ ಹಂದಿಯ ಹುರಿಮಾಂಸವಿತ್ತು, ಬಾಡುಗಳ್ಳ ಸೋಮನಿಗೆ ಬಾಯಲ್ಲಿ ನೀರಿನ ಚಿಲುಮೆ ಚಿಮ್ಮಿತು. ಬೆಳಗ್ಗೆ ಇತರರ ಜೊತೆಯಲ್ಲಿ ಗಂಜಿಯುಣ್ಣುತ್ತಿದ್ದಾಗ ನಂಚಿಕೊಳ್ಳಲು ವ್ಯಂಜನವಾಗಿ ಹಂಚಿದ್ದ ಹಂದಿಯ ಮಾಂಸ ಅವನಿಗೆ ಸಾಕಾಗಿರಲಿಲ್ಲ. ಸಾಂಯಕಾಲದ ಊಟಕ್ಕೂ ಸ್ವಲ್ಪವಿರಲಿ ಎಂದು ಎಲ್ಲರೂ ಒಪ್ಪಿ, ಉಳಿದುದನ್ನು ಬೆಂಕಿಯಾರಿದ್ದ ಒಲೆಯಮೇಲೆ ಮಡಕೆಯಲ್ಲಿಟ್ಟಿದ್ದರು. ಅದರಲ್ಲಿ ಸ್ವಲ್ಪ ತಿಂದರೆ ಇತರರಿಗೇನು ಗೊತ್ತಾಗುತ್ತದೆ? ಎಂದು ಯೋಚಿಸಿ ಸೋಮನು ಉಪ್ಪು ಹಾಕಿ ಹುರಿದಿದ್ದ ಮಾಂಸವನ್ನು ಒಂದೊಂದು, ಎರಡೆರಡು ಕಡೆ ಕಡೆಗೆ ಮೂರುಮೂರು ತುಂಡುಗಳನ್ನಾಗಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿ ತಿನ್ನತೊಡಗಿದನು. “ಸ್ವಲ್ಪ ತಿಂದರೆ ಇತರಿರಗೇನು ಗೊತ್ತಾಗುತ್ತದೆ” ಎಂದು ಪ್ರಾರಂಭಿಸಿದ್ದನು. ಸ್ವಲ್ಪವನ್ನೇ ತಿಂದಿದ್ದರೆ ಇತರಿರಗೇನೂ ಗೊತ್ತಾಗುತ್ತಿರಲಿಲ್ಲ; ನಿಶ್ಚಯ. ಆದರೆ ಅವನ “ಸ್ವಲ್ಪ”ಕ್ಕೆ ನಿಷ್ಕೃಷ್ಟವಾದ ಮೇರೆಯಿರಲಿಲ್ಲ. ಆದ್ದರಿಂದ ಸ್ವಲ್ಪ ಹೊತ್ತಿನಲ್ಲಿಯೇ “ಸ್ವಲ್ಪ” “ಸ್ವಲ್ಪ”ವಾಗಿ ಮಡಕೆಯಲ್ಲಿದ್ದ ಮಾಂಸ ಅರ್ಧಕ್ಕೆ ಮಿರಿ ಮಾಯವಾಗಿತ್ತು. ಬಕಾಸುರನಿಗೋಸ್ಕರವಾಗಿದ್ದ ಬಂಡಿಯನ್ನವನ್ನು ತಿಂದು ಜೀರ್ಣಿಸಿಕೊಂಡ ಭೀಮಸೇನ ನಮ್ಮ ಸೋಮನನ್ನು ನೋಡಿದ್ದರೆ ಕಣ್ಣರಳಿಸಿ ಬಾಯ್ದೆರೆದು ಅಪ್ರತಿಭನಾಗಿ ಸೋಲನ್ನೂಪ್ಪಿಕೊಳ್ಳುತ್ತಿದ್ದನೋ ಏನೋ! ಅರ್ಧ ಖರ್ಚಾದುದನ್ನು ನೋಡಿ, ಎಲ್ಲಿ ಸಿಕ್ಕಿಬೀಳುತ್ತೇನೆಯೋ ಎಂದು ಸೋಮನಿಗೆ ದಿಗಿಲಾಯಿತು. ಆದರೆ ಹೆಚ್ಚಾಗಿ ತಿನ್ನುವ ಹಕ್ಕು ತನಗಿದೆ; ತಾನಲ್ಲವೇ ಜಾಕಿಯಿಂದ ಹಂದಿಯನ್ನು ಬಿಡಿಸಿಕೊಳ್ಳಲು ಮೊದಲು ಮುಂಬರಿದವನು?  ಅಲ್ಲದೆ ಟೈಗರಿನ ಪಾಲನ್ನೂ ಕಷ್ಟಪಟ್ಟು ಕಾನುಬೈಲಿಗೆ ಹತ್ತಿಹೋಗಿ ಪುಟ್ಟಣ್ಣನ ಅಪ್ಪಣೆ ಪಡೆದು ಇಸುಕೊಂಡು ಬಂದವನೂ ತಾನೇ! ಎಲ್ಲರಂತೆಯೇ ಪಾಲೇನು ತನಗೂ? ಅದೆಲ್ಲಿಯ ಮಾತು! ಎಂದು ಆಲೋಚಿಸಿದ ಸೋಮ ಮತ್ತೆ ಶುರುಮಾಡಿದನು! ಮೊದಲು ಮಾಂಸದ ತುಂಡುಗಳನ್ನು ಆಲೋಚಿಸಿದ ಸೋಮ ಮತ್ತೆ ಶುರುಮಾಡಿದನು!  ಮೊದಲು ಮಾಂಸದ ತುಂಡುಗಳನ್ನು ಚೆನ್ನಾಗಿ ಅಗಿದು ತಿನ್ನುತ್ತಿದ್ದವನು ಆಮೇಲೆ ಬಾಯಲ್ಲಿ ಒಂದಿಷ್ಟು ಅಲ್ಲಾಡಿಸಿ ನುಂಗತೊಡಗಿದನು. ಆಗ ಅವನಲ್ಲಿದ್ದುದು ಹಸಿವೆಯೂ ಆಗಿರಲಿಲ್ಲ; ರುಚಿಪ್ರಿಯತೆಯೂ ಆಗಿರಲಿಲ್ಲ; ಲೋಭಮಾತ್ರವಾಗಿತ್ತು. ಅದೇ ಸಮಯದಲ್ಲಿಯೇ ನಾಯಿಗಳ ಕೂಗಾಟವೂ ಪುಟ್ಟಣ್ಣನ ತಾರಸ್ವರವೂ ಕೇಳಿಸಿ, ಸೋಮನು ಏಕೋ ಏನೋ ಗಾಬರಿಯಿಂದ, ತುಂಡುಗಳನ್ನು ಮುಕ್ಕತೊಡಗಿದನು. ಎಲುಬಿಲ್ಲದ ತುಂಡುಗಳನ್ನೇ ಬಾಯಿಗೆ ಹಾಕಿಕೊಳ್ಳುತ್ತಿದ್ದವನು ಹೊರಗಡೆ ಸದ್ದನ್ನು ಕೇಳಿದ ಕೂಡಲೆ ಯಾರು ಎಲ್ಲಿ ಬಂದುಬಿಡುತ್ತಾರೆಯೊ ಎಂಬ ಭಯದಿಂದ ವಿವೇಚನೆ ತಪ್ಪಿ ಮಾಂಸಾವೃತವಾಗಿದ್ದ ಒಂದು ದಪ್ಪ ಎಲುಬನ್ನು ನುಂಗಿಬಿಟ್ಟನು. ಆದರೆ ಅದು ಸುರಕ್ಷಿತವಾಗಿ ಜಠರ ಪ್ರವೇಶ ಮಾಡದೆ ದಾರಿಯಲ್ಲಿಯೆ ಕೀಟಲೆಮಾಡತೊಡಗಿ ಮುಂಬರಿಯಲಿಲ್ಲ. ಸೋಮನು ಅದನ್ನು ಮುಂದಕ್ಕೆ ತಳ್ಳಲು ಪ್ರಯತ್ನಮಾಡಿದನು. ಅದು ಮತ್ತೂ ಭದ್ರವಾಗಿ ಗಂಟಲಿನಲ್ಲಿ ಸಿಕ್ಕಿಕೊಂಡಿತು. ಉಸಿರಾಡಲು ಕಷ್ಟವಾಗಿ, ಅದನ್ನು ಹೊರಗೆ ಹಾಕಲು ಮಾಡಿದ ಸಾಹಸವೂ ವ್ಯರ್ಥವಾಗಿ ಒದ್ದಾಡಿದನು. ಯಾರನ್ನಾದರೂ ಕೂಗಬೇಕೆಂದು ಮಾಡಿದ ಪ್ರಯತ್ನವೂ ವಿಫಲವಾಯಿತು. ಮೊದಲು ಯಾರೂ ಬಿಡಾರದೊಳಗೆ ಬರದಿರಲಿ ಎಂದು ಎಷ್ಟು ಹಾರೈಸಿದ್ದನೋ ಈಗ ಅಷ್ಟೇ ಕಾರತೆಯಿಂದ ಯಾರಾದರೂ ಬರಲಿ ಎಂದು ಕಣ್ಣು ಕಣ್ಣು ಬಿಡುತ್ತಿದ್ದನು. ಒಂದೆರಡು ನಿಮಿಷಗಳಲ್ಲಿಯೇ ಕಣ್ಣು ಕತ್ತಲೆಗಟ್ಟಿ, ಮನಸ್ಸೂ ಮಬ್ಬಾಗಿ, ಒದ್ದಾಟ ನಿಂತಿತು. ಆದ್ದರಿಂದಲೆ ಪುಟ್ಟಣ್ಣನ ಕರೆಯನ್ನಾಗಲಿ ಆಗಮನ ಪ್ರವೇಶಗಳನ್ನಾಗಲಿ ಅವನು ಅರಿಯದೆ ಇದ್ದದ್ದು. ಪುಟ್ಟಣ್ಣನ ಗುದ್ದಿಗೆ ಎಲುಬು ಹೊರಕ್ಕೆ ನೆಗೆದ ತರುವಾಯ ಸೋಮ ಚೇತರಿಸಿಕೊಂಡನು. “ಅಯ್ಯೋ, ನಿನ್ನ ಹೊಟ್ಟೆಗೆ ಬೆಂಕಿ ಹಾಕ! ಬಾಡಿಗಾಗಿ ಪ್ರಾಣಾನೂ ಬಿಟ್ಟಿದ್ದೆಯಲ್ಲೋ!” ಪುಟ್ಟಣ್ಣನ ಭರ್ತ್ಸನೆಗೆ ಸೋಮ ಮಾತಾಡದೆ ನೆಲದಮೇಲೆ ದೂರ ಹಾರಿ ಬಿದ್ದಿದ್ದ ಎಲುಬಿನ ತುಂಡನ್ನು ಮುತ್ತಿದ್ದ ನೊಣಗಳನ್ನೇ ನೋಡುತ್ತ ನಿಧಾನವಾಗಿ “ಅಲ್ಲಾ ಕಾಣಿ, ಪುಟ್ಟೇಗೌಡ್ರೆ, ನೀವು ಆ ಹಂದಿ ಹೊಡೀಬಾರದಿತ್ತು… ಅದು ದೆಯ್ಯದ ಹಂದಿ ಅಂಬುದಾಗಿ ಕಾಣುತ್ತದೆ” ಎಂದನು.ಆ ಹಂದಿಯ ದೆಸೆಯಿಂದ ಆಗಿದ್ದ ಅನಾಹುತಗಳನ್ನೆಲ್ಲ ನೆನೆದ ಸೋಮ ಅದರ ಮೇಲೆ ಯಾವುದೋ ಸವಾರಿ ಮಾಡುತ್ತಿದ್ದಿರಬೇಕೆಂದು ನಿರ್ಧರಿಸಿದ್ದನು. ಜಾಕಿಗೆ, ತನಗೆ, ಟೈಗರಿಗೆ, ಪುಟ್ಟಣ್ಣನಿಗೆ ಎಲ್ಲರಿಗೂ ಆ ಪಿಶಾಚಿಯ ಕಾರಣದಿಂದಲೇ ತೊಂದರೆಯಾಗಿದ್ದಿರಬೇಕೆಂದು ಅವನಿಗೆ ನಂಬುಗೆ ಬಂದುಬಿಟ್ಟಿತ್ತು. ಪುಟ್ಟಣ್ಣನಿಗೆ ನಗು ತಡೆಯಲಾಗಲಿಲ್ಲ. ಕಣ್ಣೀರು ಹೊರಡುವತನಕ ಅಳ್ಳೆಹಿಡಿದು ನಕ್ಕುಬಿಟ್ಟನು. ಅದನ್ನು ನೋಡಿ ಸೋಮನ ನಂಬಿಕೆ ಮತ್ತಷ್ಟು ಪ್ರಬಲವಾಯಿತು! ಪುನಃ ಪುಟ್ಟಣ್ಣ ಕುರಿಮರಿಯ ಬಳಿಗೆ ಬಂದಾಗ ಅದು ಸತ್ತು ನಿಮಿರಿ ನೆಟ್ಟಗಾಗಿತ್ತು.