ಧರ್ಮಸ್ಥಳಕ್ಕೆ ಯಾತ್ರೆ ಯೋಗಿದ್ದವರು ನಿನ್ನೆ ಮುತ್ತಳ್ಳಿಗೆ ಬಂದರಂತೆ ಎಂಬ ವಾರ್ತೆಯನ್ನು ಕೇಳಿದ ಪುಟ್ಟ ತನ್ನ ತಂದೆಯನ್ನು ನೋಡುತ್ತೇನೆಂದು ಹಿಗ್ಗಿ ಹೆಬ್ಬಾಗಿಲಾದನು. ತಾಯಿತೀರಿಹೋಗಿದ್ದ ಆ ಹುಡುಗನಿಗೆ ತಂದೆಯೇ ತಾಯಿಯೂ ಆದಂತಿದ್ದನು. ಅಲ್ಲದೆ ಸೇರೆಗಾರರು ರಾತ್ರಿ ಮಲಗಿ ನಿದ್ದೆಮಾಡುತ್ತಿದ್ದ ತನ್ನನ್ನು ದೊಣ್ಣೆಯಿಂದ ದನ ಹೊಡೆದಂತೆ ಹೊಡೆದಂದಿನಿಂದಲೂ ಅವನಿಗೆ ತನ್ನ ತಂದೆಯನ್ನು ಎಂದಿಗೆ ನೋಡೇನು? ಎಂದಿಗೆ ಮುಟ್ಟಿಯೇನು? ಎಂದಿದಗೆ ಮಾತಾಡಿಸಿಯೇನು? ಎಂದು ಮೊದಲಾಗಿ ಗಿರ ಹಿಡಿದಿತ್ತು. ಹೂವಯ್ಯ ಚಿನ್ನಯ್ಯ ಮೊದಲಾದವರು ಅವನ ಗಾಯಗಳಿಗೆ ಔಷಧಿಹಾಕಿ ಶುಶ್ರೂಷೆ ಮಾಡುತ್ತಿದ್ದರೂ, ಆ ಶುಶ್ರೂಷೆಯಿಂದ ದಿನೇದಿನೇ ಅವನು ಗುಣಮುಖನಾಗುತ್ತಿದ್ದದರೂ ಅವನಿಗೆ ತನ್ನ ತಂದೆಯನ್ನು ನೋಡಿ ಎಲ್ಲವನ್ನೂ ಹೇಳಿ, ಕಣ್ಣೀರು ಕರೆಯಬೇಕೆಂಬ ಹಾರೈಕೆ ಮಿಗಿಲಾಗಿತ್ತು. ಎಷ್ಟೋಸಾರಿ ತನ್ನ ತಂದೆಯನ್ನು ನೆನೆದೂ ನೆನೆದೂ ಯಾರಿಗೂ ಗೊತ್ತಾಗದಂತೆ ಮೂಲೆ ಸೇರಿ ಅಳುತ್ತಿದ್ದನು. ಆದ್ದರಂದ ಯಾತ್ರೆ ಹೋಗಿದ್ದವರು ಮುತ್ತಳ್ಳಿಗೆ ಬಂದರೆಂದು ವಾರ್ತೆ ಕೇಳಿ, ನಾಳೆ ಅಪ್ಪಯ್ಯ ಬರುತ್ತಾನೆ ಎಂದು ಅವನು ಹಿಗ್ಗಿ ಹಿಗ್ಗಿ ಹೆಬ್ಬಾಗಿಲಾದುದು.

ಆ ರಾತ್ರಿಯಲ್ಲಿ ಪುಟ್ಟನಿಗೆ ಏನೇನೊ ಕನಸುಗಳು.ಸರಿಯಾಗಿ ನಿದ್ದೆಯೆ ಬರಲಲಿಲ್ಲ. ಎಲ್ಲ ಕನಸುಗಳಿಗೂ ಅವನ ಅಪ್ಪಯ್ಯನೆ ಕೇಂದ್ರವಾದಂತಿದ್ದನು. ಒಮ್ಮೆ ಅಪ್ಪಯ್ಯ ಬಂದಂತೆಯೂ, ತಾನು ಅವನ ಬೆಚ್ಚನೆಯ ಮೈಯನ್ನು ಅಪ್ಪಿದ್ದಂತೆಯೂ, ತನಗಾದ ಮೈಗಾಯಗಳ ಕಥೆಯನ್ನು ಹೇಳುತ್ತಿದ್ದಂತೆಯೂ, ಅಪ್ಪಯ್ಯ ಕಣ್ಣೀರು ಕರೆಯುತ್ತ, ಸಮಾಧಾನ ಹೇಳುತ್ತ, ತನ್ನ ಕಣ್ಣೀರುನ್ನು ಒರಸುತ್ತಿದ್ದ ಹಾಗೆಯೂ ಕನಸು! ಮತ್ತೊಮ್ಮೆ ಅಪ್ಪಯ್ಯ ಎಲ್ಲಿಗೊ ಹೋಗಿಬಿಟ್ಟಂತೆಯೂ, ತನ್ನೊಡನೆ ಸಿಟ್ಟುಮಾಡಿಕೊಂಡು ತನ್ನನ್ನು ಹೊಡೆದು ತಳ್ಳಿದಂತೆಯೂ, ಯಾವುದೋ ಹೊಳೆಯಲ್ಲಿ ಬಿದ್ದು ತೇಲಿಹೋದಂತೆಯೂ, ಏನೇನೊ ಭಯಂಕರ ದುಸ್ವಪ್ನಗಳು! ಅಂತೂ ಬೆಳಕು ಬಿಡುವ ಮೊದಲೆ ಮೇಲೆದ್ದ ಪುಟ್ಟ ಕಾನೂರಿಗೆ ಗಾಡಿ ಬರುವುದನ್ನೇ ಕಾಯತೊಡಗಿದನು.

ಅನೇಕಸಾರಿ ಗಾಡಿ ಬಂದಂತೆ ಸದ್ದು ಕೇಳಿ, ಉತ್ಕಂಠೆಯಿಂದ ನಿರೀಕ್ಷಿಸಿ ನಿರೀಕ್ಷಿಸಿ ಸೋತು ಹತಾಶನಾಗುತ್ತಿದ್ದರೂ ಕತ್ತಲಾಗುವವರೆಗೂ ಕಾಯುವುದನ್ನು ಬಿಡಲಿಲ್ಲ. ಕತ್ತಲೆಯಾದಮೇಲೆ ಹೊರಗಿರಲು ಹೆದರಿ ಮನೆಯೊಳಗೆ ಹೋಗಿದ್ದನು. ಮೂಲೆಯಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದಾಗಲೆ ಗಾಡಿಯ ಸದ್ದು ಕೇಳಿಸಿತು. ಎದೆಯುಬ್ಬಿ ಬೀಳುವಂತೆ ಉಸಿರೆಳೆಯುತ್ತ, ಇತರರು ಲಾಟೀನು ತರುವ ಮೊದಲೆ, ಗಾಡಿ ನಿಲ್ಲುವ ಹೊರ ಅಂಗಳಕ್ಕೆ ಓಡಿದನು.

ಗಾಡಿ ನಿಂತಿತು.ಗಾಡಿ ಹೊಡೆದಯುವವನು ಎತ್ತುಗಳನ್ನು ನೊಗದಿಂದ ಕಳಚಿದನು. ಹೊಗೆ ಹಿಡಿದ ಲಾಟೀನಿನ ಮಬ್ಬಿನಲ್ಲಿ ಏನೊಂದೂ ಯಾರೊಬ್ಬರೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಗಾಡಿಯಿಂದ ಒಬ್ಬೊಬ್ಬರಾಗಿ ಜನರು ಇಳಿದರು. ಅವರ ಮಾತಿನ ಧ್ವನಿಯಿಂದ ಚಂದ್ರಯ್ಯಗೌಡರು, ರಾಮಯ್ಯ, ವಾಸು, ಪುಟ್ಟಮ್ಮ (ಅವಳನ್ನು ಮುತ್ತಳ್ಳಿಯಿಂದ ತವರುಮನೆಗೆ ಕರೆತಂದಿದ್ದರು) ಇವರೆಂದು ಗೊತ್ತಾಯಿತು. ಆದರೆ ಪುಟ್ಟನಿಗೆ ಚಿರಪರಿಚಿತವಾಗಿದ್ದ ನಿಂಗನ ಧ್ವನಿಯೇ ಕೇಳಿಸಲಿಲ್ಲ. ಅದಕ್ಕೆ ಬದಲಾಗಿ ಗಾಡಿಹೊಡೆಯುವವನ ಧ್ವನಿ ಸಂಪೂರ್ಣವಾಗಿ ಅಪರಿಚಿತವಾಗಿದೆ! ಇದೇನಿದು? ನನ್ನ ಅಪ್ಪಯ್ಯನೆಲ್ಲಿ? ಛೆ! ಗಾಡಿ ಹೊಡೆಯುವವನೇ ಅಪ್ಪಯ್ಯನಿರಬೇಕು! ಇದೇನಿದು? ಹೊಸ ನೀರು ಕುಡಿದು ಗಂಟಲು ಒಡೆದುಹೋಗಿರಬಹುದು! ಅಪ್ಪಯ್ಯನಲ್ಲದೆ ಮತ್ತೆ ಯಾರು ಬರಬೇಕು ಕಾನೂರು ಗಾಡಿ ಹೊಡೆಯುವುದಕ್ಕೆ!

ಸ್ವಲ್ಪ ದೂರವಾಗಿಯೆ ನಿಂತು ನೋಡುತ್ತಿದ್ದ ಪುಟ್ಟ ಎಲ್ಲರೂ ಮನೆಯೊಳಗೆ ಹೋದಮೇಲೆ (ಸೇರೆಗಾರ ರಂಗಪ್ಪಸೆಟ್ಟರಂತೆಯೆ ಅವರ ಜೊತೆಯಲ್ಲಿ ಗೌಡರನ್ನು ಎದುರುಗೊಂಡು ಸೀಸೀಮಾಡಲು ಬಂದಿದ್ದ ಕೆಲವರು ಗಟ್ಟದಾಳುಗಳು ಇನ್ನೂ ಅಲ್ಲಿಯೇ ಇದ್ದರು.) ಅಪ್ಪಯ್ಯಾ ಅಪ್ಪಯ್ಯಾ, ಎಂದು ಮೋಹದಿಂದ ಕರೆಯುತ್ತ ಮುಂದೆ ಹೋಗಿ, ಮಬ್ಬು ಬೆಳಕಿನಲ್ಲಿ ಗಾಡಿಯಿಂದ ಸಾಮಾನು ಸರಕುಗಳನ್ನು ಇಳಿಸುತ್ತಿದ್ದ ಗಾಡಿಯವನ ಅಂಗಿಯ ತುದಿಯನ್ನು ಹಿಡಿದೆಳೆದನು. ಗಾಡಿಯವನು ತಾನು ಗಾಡಿಯಿಂದ ಹೊರಗೆ ಅರ್ಧ ಎಳೆದಿದ್ದ ಸಾಮಾನನ್ನು ಹಾಗೆಯೆ ಹಿಡಿದುಕೊಂಡು, ಕತ್ತು ತಿರುಗಿಸಿ, ಹುಬ್ಬನ್ನು ಸುಕ್ಕುಗೈದು ನೋಡಿದನು. ಚೆನ್ನಾಗಿ ಬೆಳಕಿದ್ದಿದ್ದರೆ ಆ ಮುಖವನ್ನು ಕಂಡು ಪುಟ್ಟ ಕಿಟ್ಟನೆ ಕಿರಿಚಿಕೊಳ್ಳುತ್ತಿದ್ದನು. ಕತ್ತಲೆಯಲ್ಲಿಯೂ ಕೂಡ ಹೆದರಿ ಎರಡು ಹೆಜ್ಜೆ ಹಿಂದಕ್ಕೆ ಸರಿದು ನಿಂತನು. ಲಾಟೀನಿನ ಮಬ್ಬು ಬೆಳಕಿನಲ್ಲಿಯೂ ಕೂಡ ಮೈಲಿ ಕಜ್ಜಿಯಿಂದ ವಿಕಾರವಾಗಿದ್ದ ಆ ಮುಖದಲ್ಲಿ ಒಂದು ಕಣ್ಣು ಹೂಕೂತು ಕುರುಡಾಗಿದ್ದುದು ಗೊತ್ತಾಗುವಂತಿತ್ತು.

“ಯಾರು? ಪುಟ್ಟನೇನೊ? ನಿನ್ನಪ್ಪಯ್ಯ ಹಿಂದಿನಿಂದ ಬರ‍್ತಾನೋ. ಇವತ್ತು ಬರಲಿಲ್ಲ” ಎಂದಿತು ಗಾಡಿಯವನ ಕರ್ಕಶ ಧ್ವನಿ ಪುಟ್ಟನ ಕಿವಿಗೆ ಆ ಧ್ವನಿಯಂತೆ ಆ ಸುದ್ದಿಯೂ ಕಲ್ಲಿಗೆ ಕಲ್ಲು ತೀಡಿದಂತಿತ್ತು.

“ಇವನು ಯಾರಿವನು? ನನ್ನ ಹೆಸರು ಹಿಡಿದು ಕೂಗ್ತಿದಾನೆ?” ಎಂದು ಕ್ಷಣಕಾಲ ಆಶ್ಚರ್ಯಪಟ್ಟ ಪುಟ್ಟ ಕಣ್ಣೀರು ಕರೆಯುತ್ತ ಜಗಲಿಗೆ ಹೋದನು.

ಜಗಲಿಯಲ್ಲಿ, ಕೆಸರುಹಲಗೆಯಮೇಲೆ ಹಾಸಿದ್ದ ಚಾಪೆಯ ಮೇಲೆ ಲ್ಯಾಂಪಿನ ಕೆಂಬೆಳಕಿನಲ್ಲಿ ಮುಂಡಿಗೆಗೆ ಒರಗಿಕೊಂಡು,ಚಂದ್ರಯ್ಯಗೌಡರು ವಿಶ್ರಮಿಸಿಕೊಳ್ಳುತ್ತ, ಪ್ರಯಾಣದ ಪೆಟ್ಟಿಗೆಯಿಂದ ಬಟ್ಟೆಗಳನ್ನು ಇತರ ಸಾಮಾನುಗಳನ್ನೂ ತೆಗೆಯುತ್ತಿದ್ದ ರಾಮಯ್ಯ ಮತ್ತು ವಾಸು ಇವರೊಡನೆ ಮಾತಾಡುತ್ತಿದ್ದವರು, ದೂರ ನಸುಗತ್ತಲೆಯಲ್ಲಿ ಮುಂಡಿಗೆಯ ಹಿಂದೆ ನಿಂತು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪುಟ್ಟನನ್ನು ಅತ್ಯಂತವಿಶ್ವಾಸಪೂರ್ವಕವಾದ ಧ್ವನಿಯಿಂದ ಬಳಿಗೆ ಕರೆದರು. ಗೌಡರ ಧ್ವನಿ ಸಕರುಣವಾಗಿದ್ದರೂ ಹಿಂದಿನ ಅವರ ಕಠಿನ ಪ್ರಕೃತಿಯ ಪರಿಚಯವಿದ್ದ ಪುಟ್ಟ ಬಳಿಸಾರಲು ಅಂಜಿ, ಅಲ್ಲಿಯೆ ಮತ್ತೂ ಹೆಚ್ಚಾಗಿ ಅಳುತ್ತ ನಿಂತನು. ಗೌಡರು ತಮ್ಮ ಕಿರಿಮಗನಿಗೆ ’ಹೋಗೋ, ಅವನ್ನ ಇಲ್ಲಿ ಕರಕೊಂಡು ಬಾರೋ’ ಎಂದು ಹೇಳಲು, ವಾಸುವೂ ಅತ್ಯಂತ ಸಹಾನುಭೂತಿಯಿಂದ ಪುಟ್ಟನ ಬಳಿಗೆ ಹೋಗಿ,ಮೃದುವಾದ ಮಾತುಗಳಿಂದ ಅವನನ್ನು ಸಂತೈಸುತ್ತ, ಕೈಹಿಡಿದು ತಂದೆಯ ಬಳಿಗೆ ಕರೆತಂದನು. ಚಂದ್ರಯ್ಯಗೌಡರು, ನೋಡುತ್ತಿದ್ದ ಸೇರೆಗಾರರು ಗಂಗೆ ಮೊದಲಾದವರಿಗೆ ಆಶ್ಚರ್ಯವಾಗುವಷ್ಟರಮಟ್ಟಿಗೆ, ಪುಟ್ಟನ ಕೈಹಿಡಿದು ಪಕ್ಕದಲ್ಲಿ ಕೂರಿಸಿಕೊಂಡು, ಕೂರ್ಮೆಯ ಮುದ್ದು ಮಾತುಗಳನ್ನಾಡಿ ಸಂತೈಸುತ್ತ, ಅವನ ಮೈಗಾಯಗಳನ್ನು ಮುಟ್ಟಿನೋಡಿ ಉಪಚಾರಮಾಡಿದರು. ನೋಡುತ್ತಿದ್ದವರಿಗೆ ಕಲ್ಲಾಗಿ ಹೋಗಿದ್ದ ಚಂದ್ರಯ್ಯಗೌಡರು ಬೆಣ್ಣೆಯಾಗಿ ಹಿಂತಿರುಗಿದ್ದಂತೆ ತೋರಿತು. ಸೇರೆಗಾರರನ್ನು ಕುರಿತು, ತಾವಿಲ್ಲದಿದ್ದಾಗ ಮನೆಯಲ್ಲಿ ಅವರು ನಡೆಸಿದ ದುರ್ವ್ಯಾಪಾರಗಳಿಗಾಗಿ ಕೆಲವು ಕಠಿನ ವಾಕ್ಯಗಳನ್ನಾಡಿದರೂ ಅದರಲ್ಲಿ ಹಿಂದಿರುತ್ತಿದ್ದ ರೌದ್ರವಿರಲಿಲ್ಲ. ನೋಟಕ್ಕೆ ಹೆಚ್ಚು ಕೃಶರಾಗಿ ಕಂಡುಬರುತ್ತಿದ್ದ ಅವರು ಸ್ವಭಾವದಲ್ಲಿಯೂ ಕರ್ಕಶತೆಯನ್ನು ಬಿಟ್ಟಿರುವಂತೆ ಕಂಡುಬಂದಿತು.ಸುಬ್ಬಮ್ಮನಮೇಲೆ ಚಾಡಿ ಹೇಳಿ ತಮ್ಮ ಪೂರ್ವದ ಪ್ರಶಸ್ತಿಯನ್ನು ಸಂಪಾದಿಸಬೇಕೆಂದಿದ್ದ ರಂಗಪ್ಪಸೆಟ್ಟರಿಗೆ ಸ್ವಲ್ಪ ಆಶಾಭಂಗವಾಯಿತು. ಯಾತ್ರೆ ಹೋದ ಮಾತ್ರದಿಂದ ಗೌಡರು ಇಷ್ಟರಮಟ್ಟಿಗೆ ಸಾತ್ವಿಕರಾಗುತ್ತಾರೆಂದು ಗಂಗೆ ಕನಸಿನಲ್ಲಿಯೂ ಭಾವಿಸಿರಲಿಲ್ಲ. ಆದರೇನು? ತನ್ನ ಸ್ತ್ರೀತ್ವದ ಮುಂದೆ ಧರ್ಮಸ್ಥಳದ ಯಾತ್ರೆಯಿಂದೇನಾಗುತ್ತದೆ? ನೋಡುತ್ತೇನೆ ಎಂದುಕೊಂಡಳು.

ಗೌಡರು ಪುಟ್ಟನೊಡನೆ ಆತನ ತಂದೆಯ ವಿಚಾರವಾಗಿ ಏನೊಂದು ಮಾತುನ್ನೂ ಹೇಳಲಿಲ್ಲ. ಆ ಪ್ರಸ್ತಾಪದ ಕಡೆಗೆ ಸ್ವಲ್ಪವೂ ಸುಳಿಯಲಿಲ್ಲ. ಅದಕ್ಕೆ ಬದಲಾಗಿ ಬೇರೆ ಏನೇನೋ ಮಾತುಗಳನ್ನಾಡಿ ಅವನಿಗೆ ವಾಸುವಿನಿಂದ ಒಂದು ಹೊಸ ಅಂಗಿ ಮತ್ತು ಪಂಚೆಯನ್ನು ಇನಾಮಾಗಿ ಕೊಡಿಸಿದರು. ಆ ಸಂತೋಷದಲ್ಲಿ ಪುಟ್ಟ ತನ್ನ ದುಃಖವನ್ನು ತಕ್ಕಮಟ್ಟಿಗೆ ಮರೆತನು.

ಆದರೆ ಮಧ್ಯರಾತ್ರಿ, ಎಲ್ಲರೂ ಮಲಗಿದ್ದಾಗ, ಎಲ್ಲೆಲ್ಲಿಯೂ ಪಸರಿಸಿದ್ದ ಕತ್ತಲೆಯ ನಿಃಶಬ್ದದತೆಗೆ ಸುರಿಯುತ್ತಿದ್ದ ಜಡಿಮಳೆಯಿಂದ ಮಾತ್ರ ಭಂಗ ಬರುತ್ತಿದ್ದಾಗ, ಕೆಟ್ಟ ಕನಸೊಂದರಿಂದ ಎಚ್ಚೆತ್ತು ಹಾಸಗೆಯಮೇಲೆ ಎದ್ದು ಕುಳಿತ ಪುಟ್ಟ ರೋದಿಸತೊಡಗಿದನು. ಆ ಮಳೆಯ ಸದ್ದಿನಲ್ಲಿ ಅದು ಯಾರೊಬ್ಬರಿಗೂ ಕೇಳಿಸುವಂತಿರಲಿಲ್ಲ.

ಮರುದಿನ ಬೆಳಗ್ಗೆ ಪುಟ್ಟ ತನ್ನ ತಂದೆಯ ವಿಚಾರವೇನೆಂದು ತಿಳಿಯುವುದಕ್ಕಾಗಿ ಹಿಂದಿನ ರಾತ್ರಿ ತಾನು ನೋಡಿದ್ದ, ಮೈಲಿಕಜ್ಜಿ ಮುಖದ ಒಕ್ಕಣ್ಣು ಕುರುಡಿನ ವಿಕಾರರೂಪದ ಗಾಡಿಯವನ ಬಳಿಗೆ ಹೋದನು. ಪುಟ್ಟ ಅವನನ್ನು ಮಾತನಾಡಿದುವ ಮೊದಲೆ ಆ ಗಾಡಿಯವನು “ಏನೋ ಪುಟ್ಟಾ ನನ್ನ ಗುರುತು ಹತ್ತಲಿಲ್ಲವೇನೊ ನಿನಗೆ?” ಎಂದನು.

ಪುಟ್ಟ ಮಿಕಿಮಿಕಿ ಮುಖದ ಕಡೆ ನೋಡುತ್ತಾ ನಿಂತನು.

“ಕೆಳಕಾಕನೂರು ಅಣ್ಣಯ್ಯಗೌಡರ ಮಗ ಓಬಯ್ಯಗೌಡರು ಗೊತ್ತಿತ್ತೇನು ನಿನಗೆ?”

“ಗೊತ್ತು” ಎನ್ನುತ್ತಾ ಪುಟ್ಟ ಬೆಪ್ಪುಬೆರಗಾಗಿ “ಅವನ ಮುಖವನ್ನೇ ದುರುದುರನೆ ನೋಡತೊಡಗಿದನು. ಏನೋ ಒಂದು ಬಹುದೂರದ ಪರಿಚಯರೇಖೆ ಅವನ ಸ್ಮೃತಿಯಲ್ಲಿ ಮೂಡುತ್ತಿದ್ದ ಹಾಗಿತ್ತು.

“ನಾನೇ ಓಬಯ್ಯಗೌಡ್ರೂ ಕಣೋ” ಎಂದು ಚಿಂದಿಗಳನ್ನೆ ಸೇರಿಸಿ ಹೊಲಿದು ಮಾಡಿದ್ದ ಅಂಗಿಯ ಆ ಗಾಡಿಯವನು ಬೆಳ್ಳನೆ ನಕ್ಕನು.

ಮುಖವನ್ನೆ ನೋಡುತ್ತಿದ್ದ ಪುಟ್ಟ “ಸುಳ್ಳು ಹೇಳ್ತೀರಿ!”ಎಂದು ತಾನೂ ನಸುನಕ್ಕನು.

“ಹೌದು ಕಣೋ, ಬೇಕಾದರೆ ನಿನ್ನ ವಾಸಯ್ಯನ್ನೇ ಕೇಳು” ಎಂದು ಆ ಗಾಡಿಯವನು ಅಲ್ಲಿಗೆ ಬರುತ್ತಿದ್ದ ವಾಸುವಿನ ಕಡೆಗೆ ನೋಡಿ, “ಪುಟ್ಟಗೆ ನನ್ನ ಗುರುತು ಸಿಕ್ಕಲೇ ಇಲ್ಲ. ಹೇಳಿದರೂ ನಂಬಾದಿಲ್ಲ!” ಎಂದನು.

ವಾಸುವೂ ಓಬಯ್ಯನೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ಇಬ್ಬರೂ ಸೇರಿ ಹೇಳಿದ ಕಥೆಯಿಂದ ಪುಟ್ಟನಿಗೆ ’ನಿಂಗನಿಗೆ ಕಾಯಿಲೆಯಾದ್ದರಿಂದ ಅವನು ಆಗುಂಬೆಯ ಆಸ್ಪತ್ರೆಯಲ್ಲಿದ್ದಾನೆ’ ಎಂಬುದು ಮಾತ್ರಗೊತ್ತಾಯಿತು. ಜೊತೆಗೆ ಓಬಯ್ಯನ ದಾರುಣ ದುಃಖದ ವೃತ್ತಾಂತವೂ ಕಣ್ಣೀರು ತಂದಿತು. ತನ್ನ ಕಥೆಯನ್ನು ಹೇಳುತ್ತ ಹೇಳುತ್ತ ಓಬಯ್ಯನೂ ಕಂಬನಿಗರೆಯತೊಡಗಿದನು. ಕಠಿನ ದೇಹದ ಆ ಕ್ರೂರ ಮುಖದಿಂದ ಕರುಣಧಾರೆ ಇಳಿಯುತ್ತಿದ್ದುದನ್ನು ಕಂಡು ಕೋಮಲ ಹೃದಯದ ಮಕ್ಕಳಿಬ್ಬರೂ ಕಣ್ಣೊರಸಿಕೊಳ್ಳುತ್ತಲೇ ಕಥೆ ಕೇಳಿದರು.

ಕೆಳಕಾನೂರು ಅಣ್ಣಯ್ಯಗೌಡರೂ ಓಬಯ್ಯನೂ ಸೇರಿ ಸೀತೆಮನೆ ಸಿಂಗಪ್ಪಗೌಡರೊಡನೆ ಒಳಸಂಚು ನಡೆಯಿಸಿ, ಸಿಂಗಪ್ಪಗೌಡರ ಗಾಡಿಯ ಮೇಲೆಯೆ ತಮ್ಮ ಸಾಮಾನು ಸರಕುಗಳನ್ನೆಲ್ಲ ಚಂದ್ರಯ್ಯಗೌಡರಿಗೆ ತಿಳಿಯದಂತೆ ರಾತ್ರಾ ರಾತ್ತಿ ಸಾಗಿಸಿ, ಸಾಲಕ್ಕೆ ಮೋಸಮಾಡಿ ಒಕ್ಕಲು ಹೋಗಲು ಪ್ರಯತ್ನಿಸಿದುದೂ, ಸಿಂಗಪ್ಪಗೌಡರು ಕಳ್ಳನಾಟ ಕದ್ದಿಟ್ಟಿದ್ದ ಜಾಗವನ್ನು ಪತ್ತೆಮಾಡಿ ರೇಂಜರಿಗೆ ಅವರನ್ನು ಹಿಡಿದುಕೊಡಲೆಂದು ಅದೇ ರಾತ್ರಿ ಚಂದ್ರಯ್ಯಗೌಡರು ಸಪರಿವಾರವಾಗಿ ಹೊರಟು, ದಾರಿಯಲ್ಲಿ ಮೋಸಮಾಡಿ ಒಕ್ಕಲು ಹೋಗುತ್ತಿದ್ದವರನ್ನು ಹಿಡಿದು, ಹಿಂದಕ್ಕೆ ಕರೆತಂದು, ಅವರ ಸಾಮಾನು ಸರಕು ಜಾನುವಾರುಗಳನ್ನು ತಮ್ಮ ಸಾಲಕ್ಕೆ ಮುರಿಹಾಕಿಕೊಂಡು, ಮುದಿ ತಂದೆಯನ್ನೂ, ಮಗನನ್ನೂ ಅರಿಯದ ಬಡಕಲು ಹುಡುಗಿ ಓಬಯ್ಯನ ಮಲತಂಗಿಯನ್ನೂ ಊರುಬಿಡಿಸಿ ಅಟ್ಟಿದ ವಿಷಯ ನಮಗೆ ಹಿಂದೆಯೆ ಗೊತ್ತಾಗಿದೆ. ಆಮೇಲೆಯೂ ಅಣ್ಣಯ್ಯಗೌಡರು ಸಿಂಗಪ್ಪಗೌಡರ ಒಕ್ಕಲಾಗಿ, ಅವರ ಆಶ್ರಯದಲ್ಲಿರಬೇಕೆಂದು ಮನಸ್ಸನ್ನೇನೊ ಮಾಡಿದ್ದರು. ಆದರೆ ಅವರ ದುರದೃಷ್ಟದಿಂದ ಮರುದಿನವೆ ಸಿಂಗಪ್ಪಗೌಡರಿಗೆ ಮಹಾದುಃಖ ಬಂದೊದಗಿತು. ಮದುವೆ ನಿಶ್ಚಯವಾಗಿದ್ದ ಅವರ ಮಗ ಕೃಷ್ಣಪ್ಪ ಕೋವಿಕಟ್ಟಿ ಗಾಯವಾಗಿದ್ದ ಹುಲಿಯನ್ನು ಹುಡುಕಲು ಜಾಕಿಯೊಡನೆ ಹೋಗಿ, ಅದರ ಬಾಯ್ಗೆ ಸಿಕ್ಕಿ ಸತ್ತು ಹೋದನು. ಆ ದಾರುಣಯಾತನೆಯಿಂದ ಹುಚ್ಚುಹುಚ್ಚಾಗಿದ್ದ ಸಿಂಗಪ್ಪಗೌಡರನ್ನು ಮಾತಾಡಿಸುವುದಕ್ಕೂ ಧೈರ್ಯವಾಗದೆ ಅಣ್ಣಯ್ಯಗೌಡರು ಓಬಯ್ಯನನ್ನೂ ಕ್ಷಯಹಿಡಿದಂತೆ ಕೃಶವಾಗಿದ್ದ ತಮ್ಮ ಕಿರಿಮಗಳನ್ನೂ ಕರೆದುಕೊಂಡು ಆಶ್ರಯ ಹುಡುಕುತ್ತ ಮುಂಬರಿದರು. ಆಶ್ರಯ ದೊರೆಯುವುದಂತಿರಲಿ, ಹೊಟ್ಟೆಗೆ ಸಿಕ್ಕುವುದೂ ಒಮ್ಮೊಮ್ಮೆ ಬಹು ಪ್ರಯಾಸವಾಯಿತು. ಅಲ್ಲಿ ಇಲ್ಲಿ ಅಲೆದು ಒಂದು ತಿಂಗಳ ಮೇಲೆ ಮೇಗರವಳ್ಳಿಗೆ ಹೋಗಿ, ಅಲ್ಲಿ ಒಬ್ಬ ಹೆಗ್ಗಡೆಯವರ ಮನೆಯಲ್ಲಿ ಸಂಬಳಕ್ಕೆ ನಿಂತರು. ಜಿಪುಣರೆಂದು ಪ್ರಸಿದ್ಧರಾಗಿದ್ದರೂ ಅವರು ಓಬಯ್ಯನನ್ನು ತಿಂಗಳಿಗೆ ಒಂದು ರೂಪಾಯಿನ ಸಂಬಳದಂತೆ ಕೆಲಸಕ್ಕೆ ನೀಮಿಸಿಕೊಂಡರು. ಅಣ್ಣಯ್ಯಗೌಡರಿಗೆ ಕೆಲಸಕ್ಕೆ ಬಂದ ದಿನ ಪಡಿ ಕೊಡಲು ಮಾತ್ರ ಒಪ್ಪಿದರು. ಅಂತೂ ಅಲ್ಲಿ ಮಳೆಗಾಲ ಕಳೆಯುವುದೇ ಕಷ್ಟವಾಯಿತು. ಆ ಹೆಗ್ಗಡೆಯವರು ಸಂಬಳ ಕೊಡುವ ವಿಚಾರದಲ್ಲಿ ಬಹಳ ಜಿಪುಣರಾಗಿದ್ದರೂ ಕೆಲಸ ತೆಗೆದುಕೊಳ್ಳುವುದರಲ್ಲಿ ಅತ್ಯಂತ ಉದಾರಿಯಾಗಿದ್ದರು. ಹುಡುಗರು ಮುದುಕರು ಎಂಬ ಪಕ್ಷಪಾತವಿಲ್ಲದೆ ಎಲ್ಲರಂದಲೂ ಬೆನ್ನುಮುರಿ ಕೆಲಸ ಮಾಡಿಸುತ್ತಿದ್ದರು. ಅಷ್ಟು ಮಾಡಿದರೂ ಪ್ರತಿ ಸಾಯಂಕಾಲವೂ ಬೈಗುಳ ತಪ್ಪುತ್ತಿರಲಿಲ್ಲ. ಕುಡಿಯುವುದರಲ್ಲಿ ಹೆಗ್ಗಡೆಯವರ ಮುಂದೆ ಚಂದ್ರಯ್ಯಗೌಡರು ಯಃಕಶ್ಚಿತರಾಗಿದ್ದರು!

ಒಂದು ತಿಂಗಳು ಕಳೆದಿತ್ತೋ ಇಲ್ಲವೋ ಓಬಯ್ಯನ ಮಲತಂಗಿಗೆ ಜರ ಷುರುವಾಯಿತು. ’ಔಸ್ತಿ, ಚೀಟಿಬುತ್ತಿ’ ಏನೇನು ಮಾಡಿದರೂ ಗುಣವಾಗಲಿಲ್ಲ. ದನದ ಕೊಟ್ಟಿಗೆಗೆ ಸೇರಿದ್ದ ಗಾಡಿಕೊಟ್ಟಿಗೆಯಲ್ಲಿ ಅವರಿಗೆ ಬಿಡಾರ ಮಾಡಿಕೊಟ್ಟಿದ್ದರಿಂದ ಯಾವಾಗಲೂ ತೇವ ತಪ್ಪುತ್ತಿರಲಿಲ್ಲ. ದಿನವೂ ಅಡುಗೆ ಮಾಡುತ್ತಿದ್ದ ಒಲೆಯ ಮೇಲೆ ಕೂಡ ಹಳು ಬೆಳೆಯುತ್ತಿತ್ತು! ಗಂಜಲ, ಸೆಗಣೆ, ಕೆಸರು, ಮುರು ಇವುಗಳ ದುರ್ವಾಸನೆ ಗುಮ್ಮೆಂದು ಮುತ್ತಿರುತ್ತಿತ್ತು. ಸೊಳ್ಳೆಗಳಂತೂ ಹೇಳತೀರದು!….. “ಮೊದಲು ’ಜರ, ಜರ’ ಎಂದು ’ಹೇಳಿದ್ರೆಪ್ಪಾ’. ಕಡೆಗೆ ’ರೇಷ್ಮೆ ಕಾಯಿಲೆ’ ಅಂದರು…. ಅಂತೂ ಕಡೆಗೆ ಏನು ಮಾಡಿದರೂ ಬದುಕಲೇ ಇಲ್ಲ. ಸತ್ತೇಹೋ’ತು.”

ಮಲತಂಗಿ ಸತ್ತ ಕೆಲದಿನಗಳಲ್ಲಿಯೆ ಓಬಯ್ಯ ಹೆಗ್ಗಡೆಯವರ ಕಾಟವನ್ನು ಸಹಿಸಲಾರದೆ ಮುದಿತಂದೆಯನ್ನು ಕರೆದುಕೊಂಡು ಆಗುಂಬೆಗೆ ಹೋದನು. ಅಲ್ಲಿ ಒಬ್ಬ ಬ್ರಾಹ್ಮಣ ಸಾಹುಕಾರರಲ್ಲಿ ಕೆಲಸಕ್ಕೆ ಸೇರಿಕೊಂಡನು. ಜೀವನ ನೆಮ್ಮದಿಯಾಗಿ ಸಾಗುತ್ತಿತ್ತು.

“ಆದರೆ, ನಮ್ಮಗಿರಾಚಾರ!” ಆ ಊರಿಗೆ ಮಾರಿ ಬಂದುಬಿಟ್ಟಳು. ಎಲ್ಲೆಲ್ಲಿಯೂ ಮೈಲಿ ಹಬ್ಬಿತು. “ಅಯ್ಯೋ ದೇವ್ರೆ, ಆ ಗೋಳು ನೋಡೋ ಹಾಂಗಿರ‍್ಲಿಲ್ಲಾ!” ಅಣ್ಣಯ್ಯಗೌಡರಿಗೂ ಮೈಲಿಎದ್ದಿತು. ಮೈಮೇಲೆ ಸೂಜಿಮೊನೆ ಊರಲೂ ಜಾಗವಿಲ್ಲದಂತೆ ಬೊಕ್ಕೆಗಳದ್ದು ಚರ್ಮವೇ ಕರಗಿಹೋಯಿತು… ಅವರನ್ನು ಸುಡುಗಾಡಿನಲ್ಲಿ ಹೂಳಿ ಬರುವಷ್ಟರಲ್ಲಿಯೆ ಓಬಯ್ಯನಿಗೂ ಜ್ವರ ಕಾಣಿಸಿಕೊಂಡಿತು. ಅವನಿಗೂ ಮೈಲಿಯಾಯಿತು. ಪ್ರಜ್ಞೆ ತಪ್ಪಿತು. ಯಾರು ಶುಶ್ರೂಷೆ ಮಾಡಿದರೊ ಏನೊ ಒಂದೂ ಅವನಿಗೆ ಗೊತ್ತಿರಲಿಲ್ಲ. “ಅಂತೂ ನಂಗೆ ಪರ್ಜ್ಞೆ ಬಂದಾಗ ಒಂದು ತರಾ ಹುಚ್ಚು ಹಿಡ್ದಿತ್ತಂತೆ.” ಮೈಲಿಯ ದೆಸೆಯಿಂದಲೆ ಓಬಯ್ಯನಿಗೆ ಒಕ್ಕಣ್ಣಾಯಿತು; ಮುಖ ಮೋರೆ ವಿಕಾರವಾಯಿತು!… ಧರ್ಮಸ್ಥಳಕ್ಕೆ ಯಾತ್ರೆ ಹೋಗಿ ಹಿಂತಿರುಗಿ ಬರುತ್ತ ಚಂದ್ರಯ್ಯಗೌಡರ ಗಾಡಿಯವನಿಗೆ ಕಾಹಿಲೆ ಜೋರಾಗಲು, ಅವನನ್ನು ಆಗುಂಬೆಯಲ್ಲಿ ಬಿಟ್ಟು, ಸಂತೋಷದಿಂದ ಬರುತ್ತೇನೆಂದು ಒಪ್ಪಿಕೊಂಡ ಓಬಯ್ಯನನ್ನು ಗಾಡಿಯವನನ್ನಾಗಿ ಮತ್ತೆ ಕಾನೂರಿಗೆ ಕರೆತಂದರು.

ಓಬಯ್ಯ ಕಣ್ಣೀರು ಕರೆಯುತ್ತ ಕಥೆ ಹೇಳಿದನು. ಮಕ್ಕಳಿಬ್ಬರೂ ಕಣ್ಣೀರು ಸುರಿಸುತ್ತ ಕಥೆ ಕೇಳಿದರು.