ಅಡುಗೆ ಮನೆಯ ಒಲೆಯಲ್ಲಿ ಅಗ್ನಿ ತನ್ನ ಲೀಲಾಮಯ ಜಿಹ್ವೆಗಳಿಂದ ಒಲೆಯ ಮೇಲಿಟ್ಟಿದ್ದ ಕಲ್ಲುಗಡಿಗೆಯ ಮಷೀಮಯವಾಗಿದ್ದ ಬೆನ್ನನ್ನು ನೆಕ್ಕುತ್ತಿದ್ದನು. ಧರ್ಮರಾಯ, ಜನಮೇಜಯರಾಯ ಮೊದಲಾದ ಪುರಾಣಪುರುಷರ ಪುಣ್ಯ ಯಾಗಗಳಲ್ಲಿ ಪೂತ ಹವಿಸ್ಸನ್ನು ಆಸ್ವಾದಿಸಿದ್ದ ಪಾವನ ಪವನಸಖನು, ಕಲಿಯುಗದ ಮಹಿಮೆಯಿಂದಲೊ ಎಂಬಂತೆ, ಕಾನೂರು  ಸುಬ್ಬಮ್ಮನ ಕೈಗೆ ಬಿದ್ದು, ಕಲ್ಲಿಗೆಡಿಯ ಬೆನ್ನು ನೆಕ್ಕುವ ಪತಿತ ಕರ್ತವ್ಯದಲ್ಲಿ ತನ್ಮಯನಾಗಿದ್ದನು. ಸುಬ್ಬಮ್ಮ ಕೈಲಿ ಸೌಟು ಹಿಡಿದು ಒಲೆಯ ಬುಡದಲ್ಲಿ ನಿಂತಿದ್ದಳು, ಅಗ್ನಿಗೆ ಅಂಕುಶವಾಗಿ! ಗಡಿಗೆಯಲ್ಲಿ ಬೇಯುತ್ತಿದ್ದ ಮೇಲೋಗರವು ಗೊಜಗೊಜನೆ ತಕಪಕಗುಟ್ಟುತ್ತ ಆವಿಯ ಬೆಳ್ಳುಸಿರು  ಬಿಡುತ್ತಿತ್ತು.

ಸುತ್ತಣ ಜಗತ್ತಿನಲ್ಲಿ ಬೆಳಗಾಗಿದ್ದರೂ ಅಡುಗೆ ಮನೆಗೆ ಇನ್ನೂ ಮಬ್ಬು ತಪ್ಪಿರಲಿಲ್ಲ. ಏಕೆಂದರೆ ಅದಕ್ಕಿದ್ದುದು ಒಲೆಯ ಮೇಲುಗಡೆ ಒಂದೇ ಕಿಟಕಿ. ಆದರೂ ಪಾಕಶಾಲೆಯ ರೂಪುರೇಖೆ ತಕ್ಕಮಟ್ಟಿಗೆ ಪ್ರವರ್ಶಿತವಾಗಿತ್ತು. ಬಾಗುಮರಿಗೆ, ಉಪ್ಪಿನಮರಿಗೆ, ಕೈಯದ್ದುವ ಹಿತ್ತಾಳೆಯ ತಂಬಾಳೆ, ಸಿಕ್ಕದ ಮೇಲೆ ಮೆಣಸಿನಕಾಯಿಯ ಬುಟ್ಟಿ, ಮೊಸರು ಗಡಿಗೆ, ಮಜ್ಜಿಗೆ ಚರಿಗೆ, ಕಡೆಗೋಲು ಕಂಬ, ತುಪ್ಪ ಬೆಣ್ಣೆ ಮೊದಲಾದವುಗಳನ್ನು ಇಟ್ಟು ಬೀಗ ಹಾಕಿದ ಒಂದು ಕಲಿಬಿ, ಮಣೆಯ ರಾಶಿ, ಅಡುಗೆ ಮನೆಯ ಒಂದು ಅನಿವಾರ್ಯವಾದ ಅಂಗವಾಗಿ  ಒಲೆಯ ಪಕ್ಕದ ಬೆಚ್ಚನೆಯ ಮೂಲೆಯಲ್ಲಿ ತನ್ನೆರಡು ಮರಿಗಳೊಡನೆ ಪವಡಿಸಿದ್ದ ಬೆಕ್ಕು, ಅಲ್ಲಲಲ್ಲಿ ಹಾರಿ ಹಾರಿ ಕೂರುತ್ತಿದ್ದ ಮನೆ ನೊಣಗಳು, ಇತ್ಯಾದಿ. ಯಾರಾದರೂ ಪ್ರಾಕ್ತನ ವಿಮರ್ಶನ ವಿಚಕ್ಷಣರು ಆ ಅಡುಗೆಮನೆಯನ್ನು ಪ್ರವೇಶಿಸಿದ್ದರೆ ಪುರಾಣ ಪ್ರಸಿದ್ದವಾದ ಗವಿಯನ್ನೊ ಅಥವಾ ಪಾಳುಬಿದ್ದ ದೇವಾಲಯವನ್ನೊ ಮನಸ್ಸಿಗೆ ತರುತ್ತಿತ್ತು. ಅದರ ವಾತಾರಣ ಅಷ್ಟೊಂದು ಪೂರ್ವಕತೆಯಿಂದ ತುಂಬಿಕೊಂಡಿತ್ತು!

ಅಲ್ಲಿ ಅನೇಕ ತಲೆಮಾರುಗಳು ತಿಂದುಂಡುಹೋಗಿದ್ದವು. ಆ ಮೂರಡಿಯ ಎತ್ತರದ ಕಡೆಗೋಲು ಕಂಬುವು ಶತಮಾನಗಳಿಗೆ ಸಾಕ್ಷಿಯಾಗಿ ನಿಂತಿತ್ತು. ಎಷ್ಟು ಜನ ಹೆಣ್ಣುಗಳು ಅದರ ಮುಂದೆ ಕುಳಿತು ಪ್ರಾತಃಕಾಲದಲ್ಲಿ ಮೊಸರು ಕಡೆದಿದ್ದಾರೆ! ಅದಕ್ಕೆ ಎಷ್ಟು ಕೋಮಲ ಕರಗಳ ಸ್ಪರ್ಶವಾಗಿದೆ! ಎಷ್ಟು ಕಂಠಗಳು, ಎಷ್ಟು ರೂಪಗಳು. ಎಷ್ಟು ವಿಧವಾದ ಸಂಭಾಷಣೆಗಳು, ಎಷ್ಟು ಕ್ಷುದ್ರ ಕಲಹಗಳು ಅದಕ್ಕೆ ತಿಳಿದಿವೆ! ವಾಸುವಿಮ ತಾಯಿ, ಚಂದ್ರಯ್ಯಗೌಡರ ತಾಯಿ, ಅವರ ಅಜ್ಜನ ತಾಯಿ, ಅವರ ಅಜ್ಜನಜ್ಜನಜ್ಜನ ತಾಯಿ- ಎಲ್ಲರೂ ಪರಿಚಿತರು ಆ ಕಡೆಗೋಲು ಕಂಬಕ್ಕೆ! ಆಕಡೆಗೋಲು ಕಂಬಕ್ಕೆ ಎಲ್ಲಿಯಾದರೂ ಮಾತಾಡುವ ಶಕ್ತಿ ಬಂದರೆ ಎಷ್ಟು ಗುಟ್ಟುಗಳು ರಟ್ಟಾಗಿಹೋಗುತ್ತವೆ! ಎಷ್ಟು ಸ್ನೇಹ ಪ್ರೇಮಗಳು ನುಚ್ಚುನೂರಾಗಿ ಮಣ್ಣುಗೂಡುತ್ತವೆ! ಎಷ್ಟು ದ್ವೇಷ ಮತ್ಸರ್ಯಗಳು ಹಾಳಾಗಿ, ಮತ್ತೆ ಸ್ನೇಹ ಶಾಂತಿಗಳು ಮೂಡುತ್ತವೆ! ಅದಕ್ಕೆಲ್ಲಿಯಾದರೂ ಬಾಯಿ ಬಂದರೆ ದೇವರೇ ಗತಿ! ರಾಮಾಯಣ ಮಹಾ ಬಾರತಗಳಿ‌ಗಿಂತಲೂ ದೊಡ್ಡ ಪುರಾಣವಾಗಿ ಹೋಗುತ್ತದೆ! ” ಅಯ್ಯೋ ನಾವು ರಾಮ, ಸೀತೆ, ಹನುಮಂತ, ರಾವಣ, ಪಂಚಪಾಂಡವರು, ಕೃಷ್ಣ, ಕೌರವ, ದ್ರೌಪದಿ ಇವರುಗಳ ಕಥೆಯೇ ಹೆಚ್ಚೆಂದು ತಿಳಿದಿದ್ದೆವಲ್ಲಾ!” ಎಂದು ವಾಲ್ಮೀಕಿ ವ್ಯಾಸಾದಿ ಕವಿವರ್ಯರೂ ನಾಚಿ ತಲೆಬಾಗ ಬೇಕಾಗುತ್ತದೆ. ಸದ್ಯಕ್ಕೆ ಅದಕ್ಕೆ ಬಾಯಿಲ್ಲ; ಅಥವಾ ಇದ್ದರೂ ಇಲ್ಲದವರಂತೆ ನಟಿಸುತ್ತಿದೆ. ಆದ್ದರಿಂದ ಅವರೆಲ್ಲರೂ ಬದುಕಿಕೊಂಡಿದ್ದಾರೆ!

“ವಾಸೂ, ನಿನ್ನೆ ನೀನು ಬೆಣ್ಣೆ ಕದ್ದಿದ್ದು ಹೇಳಲೇನು?”

ಕೆಮ್ಮಣ್ಣು ಬಳಿದಿದ್ದ ಗೋಡೆಗೆ ಒರಗಿ ಮಣೆಯ ಮೇಲೆ ಕೂತು, ನೆಲದ ಮೇಲೆ ಬಾಳೆಯ ಎಲೆಯಲ್ಲಿದ್ದ ಉಪ್ಪಿಟ್ಟನ್ನು ಅನನ್ಯ ಮನಸ್ಕನಾಗಿ ಮುಕ್ಕುತ್ತಿದ್ದ ವಾಸು ಬೆಚ್ಚಿಮುಗುಳುನಗುವಂತಿತ್ತು! ವಾಸುವಿಗೆ ದಿಗಿಲಾಯಿತು, ಯಾರು ನೋಡಿದ್ದರು ತಾನು ಬೆಣ್ಣೆ ಕದ್ದುದನ್ನು ಎಂದು! ತನಗೆ ಕೇಳಿಸಿದ್ದ ಧ್ವನಿ ತೀರಿಕೊಂಡ ಅಜ್ಜಮ್ಮನ ಧ್ವನಿಯಂತಿತ್ತು. ಅಜ್ಜಮ್ಮನೇ ಕಡೆಗೋಲು ಕಂಬದಲ್ಲಿ ಅಡಗಿಕೊಂಡು ಮಾತಾಡಿದರೆಂದು ಭಾವಿಸಿ ಮನಸ್ಸಿನಲ್ಲಿಯೆ ” ಅಜ್ಜಮ್ಮ, ನಿನ್ನ ದಮ್ಮಯ್ಯಾ! ಹೇಳಬೇಡ! ಚಿಕ್ಕಮ್ಮ ಇಲ್ಲೇ ನಿಂತಿದೆ!” ಎಂದು ಮತ್ತೆ ಉಪ್ಪಿಟ್ಟು ಮುಕ್ಕಲು ತೊಡಗಿದನು. ಉಪ್ಪಿಟ್ಟು ಕೆನ್ನೆ ಗಲ್ಲ ಮೂಗು ಎಲ್ಲವನ್ನೂ ಆವರಿಸಿತ್ತು.

ಸ್ವಲ್ಪ ದೂರದಲ್ಲಿ ತರಕಾರಿ ಹೆಚ್ಚುತ್ತ ಕುಳಿತಿದ್ದ ನಾಗಮ್ಮನವರು ತಾವು ಮೆಲ್ಲಗೆ ಕೇಳಿದ ಪ್ರಶ್ನೆಗೆ ವಾಸು ಬೆಚ್ಚಿದುದನ್ನು ಕಂಡು, ಮುಗುಳು ನಕ್ಕು, ಕನಿಕರದಿಂದ ಸುಮ್ಮನಾದರು. ಅಣ್ಣಂದಿರಂತೆಯೆ ಕ್ರಾಪು ಬಿಡುತ್ತೇನೆಂದು ಅವನ ತಲೆಯಲ್ಲಿ ಕೂದಲು ಪಟಾಲಂ ಅವನ ಎಡಗಡೆಯ ನುಣ್ಗದಪು ಮತ್ತು ಕಿವಿಗಳನ್ನು, ಜೇನುಹುಟ್ಟಿಯನ್ನು ಹೆಜ್ಜೇನು ಹುಳುಗಳು ಮುತ್ತುವಂತೆ ಮುತ್ತಿದ್ದವು. ಗುಂಡಿಗಳೆಲ್ಲಾ ಗಡಿಪಾರಾಗಿದ್ದ ಅವನ ಷರಟು “ಆ” ಎಂದು ಬಾಯ್ದೆರೆದುಕೊಂಡು ಬೀದಿಯ ಹುಚ್ಚನಂತೆ ಅಸ್ತವ್ಯಸ್ತವಾಗಿತ್ತು. ಅದರ ಮೇಲಿದ್ದ ಕೊಳೆಯ ಭಾರವು ಒಂದು ಘಟ್ಟಿ ಸಾಬೂನಿಗೆ ಬೆವರು ಕೀಳಿಸುವಂತಿತ್ತು. ಅವನುಟ್ಟಿದ್ದ ಅಡ್ಡಪಂಚೆಯೂ ಷರಟಿನ ಸಂಗಾತಿಯಾಗುವುದಕ್ಕೆ ಯೋಗ್ಯವಾಗಿಯೆ ಇತ್ತು. ನಾಗಮ್ಮವನರಿಗೆ ಅವನನ್ನು ಕಂಡು ಮುದ್ದು ಸೂಸಿತು. ತರಕಾರಿಯನ್ನು ಕೈಯಲ್ಲಿಯೆ ಹಿಡಿದು ಅವನನ್ನೇ ನೋಡ ತೊಡಗಿದರು.

ವಾಸು ಎಲೆಯ ಮೇಲಿದ್ದ ಉಪ್ಪಿಟ್ಟನ್ನು ಪೂರೈಸಿ “ಚಿಕ್ಕಮ್ಮಾ, ಮತ್ತಿಷ್ಟು ಉಪ್ಪಿಟ್ಟು!” ಎಂದನು.

ಸುಬ್ಬಮ್ಮ ಸಿಡುಕಿನಿಂದ “ಏನು ಹೊಟ್ಟೇನೋ ನಿನ್ದು? ಉಪ್ಪಿಟ್ಟಿಲ್ಲ!” ಎಂದು ಸೌಟಿನಿಂದ ಗಡಿಗೆಯಲ್ಲಿ ಬೇಯುತ್ತಿದ್ದ ಪದಾರ್ಥವನ್ನು ತಿರುವತೊಡಗಿದಳು.

ವಾಸು ಹತಾಶನಾಗಿ ಹನಿಗಣ್ಣಾಗಿ ತನ್ನೆದುರು ನೆಲದ ಕಡೆಗೆ ನೋಡಿದನು. ಆಗತಾನೆ ಬಿಸಿಲು ಕಿಟಕಿಯ ಸರಳುಗಳನ್ನು ದಾಟಿ ಬಂದು ಪಟ್ಟೆಪಟ್ಟೆಯಾಗಿ ಬಿದ್ದಿತ್ತು. ಹಾಗೆಯೆ ಕಿಟಕಿಯ ಕಡೆಗೆ ನೋಡಿದನು. ಹೊರಗಡೆ ಹೊಂಬಿಸಿಲು ಹಲಸಿನ ಮರದ  ತಳಿರಿನ ಮೇಲೆ ನಲಿದಾಡುತ್ತಿತ್ತು. ದೂರದ ಕಾಡುಮರಗಳ ಹಸುರು ಅವನನ್ನು ಕರೆಯುವಂತೆ ತೋರಿತು. ಅಷ್ಟರಲ್ಲಿ ಕಾಡಿನಿಂದ ಒಂದು ಈಡಿನ ಸದ್ದೂ ಕೇಳಿಸಿತು. ಅಂದು ಅವನು ಮಾಡಬೇಕಾಗಿದ್ದ ಸಾಹಸ ಕರ್ತವ್ಯಗಳೆಲ್ಲ ನೆನಪಿಗೆ ಬಂದುವು. ಹೂವಣ್ಣಯ್ಯ ರಾಮಣ್ಣಯ್ಯ ಬರುತ್ತಾರೆ; ಅವರಿಗೆ ಕಲ್ಲುಸಂಪಗೆ ಹಣ್ಣು. ಬೆಮ್ಮಾರಲ ಹಣ್ಣು ತರಬೇಕು. ತಾನು ಹಿಂದಿನ ದಿನ ಒಡ್ಡಿದ್ದ ಉರುಳಿನಲ್ಲಿ ಹಕ್ಕಿ ಸಿಕ್ಕಿಬಿದ್ದಿದೆಯೋ ಏನೋ ನೋಡಬೇಕು. ಆ  ಹುಳಿಚೊಪ್ಪಿನ ಮಟ್ಟಿನಲ್ಲಿ ಪಿಕಳಾರನ ಹಕ್ಕಿಯ ಮೊಟ್ಟೆಗಳು ಏನಾಗಿವೆಯೋ ನೋಡಬೇಕು. ಬೈರನ ಮಗ ಗಂಗ ಹುಡುಗನ ಹತ್ತಿರ ಕೊಳಲು ಮಾಡಲು ಹೇಳಿದುದು ಎಲ್ಲಿಯವರೆಗೆ ಸಾಗಿದೆಯೋ ವಿಚಾರಿಸಿಬೇಕು. ನಿನ್ನೆ ರಬ್ಬರು ಬಿಲ್ಲಿನಿಂದ ಹೊಡೆದ ಹಕ್ಕಿಯೊಂದು ಪೊದೆಗೆ ಬಿದ್ದು, ಎಷ್ಟು ಅರಸಿದರೂ ಸಿಕ್ಕಲಿಲ್ಲವಾದ್ದರಿಂದ, ಅದನ್ನೂ ಪತ್ತೆ ಮಾಡಬೇಕು. ಯೋಚಿಸಿದಂತೆಲ್ಲ ಪಟ್ಟಿ ಉದ್ದವಾಗುತ್ತ ಹೋಯಿತು. ಹಟಮಾಡಿ ಉಪ್ಪಿಟ್ಟು ಈಸಿಕೊಳ್ಳಲು ಹೊತ್ತಿರಲಿಲ್ಲ. ಕಣ್ಣೀರುದುರುತ್ತಿರಲು ಸಿಟ್ಟಿನಿಂದ ಲೋಟದಲ್ಲಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದು, ಲೋಟವು ಸದ್ದಾಗುವಂತೆ ನೆಲಕ್ಕೆ ಬಡಿದು” ಇದ್ರಪ್ಪನ್ಮನೇ ಗಂಟು! ಹಡ್ಬೇಮುಂಡೆ!…” ಎಂದು ನಾನಾವಿಧವಾಗಿ ಗೊಣಗುಟ್ಟಿ ಬಯ್ಯುತ್ತ. ಅಡುಗೆಮನೆಗೆ ಬರುತ್ತಿದ್ದ ಅವನ ಪುಟ್ಟಕ್ಕಯ್ಯನು ಏನಾಯಿತೆಂದು ಕೇಳಿದರೂ ನಿಲ್ಲದೆ, ಉತ್ತರ ಹೇಳದೆ, ರಭಸದಿಂದ ಹೊರಗೆ ನುಗ್ಗಿದನು.

ಇದನ್ನೆಲ್ಲ ನೋಡುತ್ತ ಕುಳಿತಿದ್ದ ನಾಗಮ್ಮನವರ ಮೈ ಬೆಂಕಿಯಾಗಿತ್ತು. ಪುಟ್ಟಮ್ಮ ಒಳಗೆ ಬರಲು ಅವಳೊಡನೆ  ನಡೆದುದನ್ನೆಲ್ಲ ಖಾರವಾಗಿ ಸ್ವಲ್ಪ ಗಟ್ಟಿಯಾಗಿಯೆ ಹೇಳಿದರು.

ವಾಸು ಬೈದುದು ಸುಬ್ಬಮ್ಮನಿಗೆ ಕೇಳಿಸಿ. ಆಕೆಯ ಮನಸ್ಸಾಗಲೆ ಅಗ್ನಿಪರ್ವತವಾಗಿತ್ತು. ನಾಗಮ್ಮನವರು ಹೇಳಿ ಮುಗಿಸಿದ ಕೂಡಲೆ ಮಾತಿನ ಮಳೆ ಸುರಿಯತೊಡಗಿತು. ನಡುನಡುವೆ ಬೈಗಳದ ಆಲಿಕಲ್ಲುಗಳೂ ಗುಂಡುಗಳಂತೆ ಸಿಡಿಯುತ್ತಿದ್ದವು.

“ಗಂಡನ್ನ ಕಳಕೊಂಡ ಮುಂಡೇರ ಹಣೇಬರವೇ ಹಿಂಗೆ… ಅವರ ಕಣ್ಣು ಇಂಗೆಹೋಗಲಿ….. ಸುಳ್ಳುಸುಳ್ಳು ಹೇಳಾದು, ಚಾಡಿ ಹೇಳಾದು…… ಅವರ ನಾಲಗೆ ಬಿದ್ದೇಹೋಗಲು…. ನಾನೀ ಹಾಳುಮನೆಗೆ ಯಾಕೆ ಬಂದೆನೋ, ದೇವರ ಕಣ್ಣಿಗೆ ಒರಲೆ ಹಿಡಿದು ಹೋಗಾಕೆ! ಗಂಜಿ ಕುಡ್ಕುಂಡಿರ್ತಿದ್ದೆ…. ಅವರ ಬಾಯಿಗೆಲ್ಲ ಹುಳ ಬಿದ್ದು ಹೋಗಾಕೆ….. ಏನು ಉರಿಸ್ತಾರೋ…. ಏನು ಉರೀತಾರೋ….. ಇಬ್ಬರನ್ನು ತಿಂದ ಮಾರಿ ಮೂರ್ನೇಯವಳನ್ನೂ ತಿನ್ನಾಕೆ ನೋಡ್ತದೆ…. ಮುಖಕ್ಕೆ ಬೆಂಕಿ ಹಾಕ ….. ಹುಡುಗರು ಮಕ್ಕಳೆಲ್ಲಾ ನನ್ನ ಮೇಲೆ ಎತ್ತಿಕಟ್ಟಿ ಬಾಯಿಗೆ ಬಂದ್ಹಂಗೆ ಬಯ್ಸೋದೆ!…..”

“ಯಾರೇ ಎತ್ತಿಕಟ್ಟಿದ್ದು? ಯಾವಾಗ್ಲೆ?”

“ಅವನ ಕಡೆಗೆ ಕಣ್ಣು ಮಿಸುಗಿದ್ದು ನನಗೆ ಕಾಣಲಿಲ್ಲೇನೋ?”

“ಬಾಯಿಗೆ ಬಂದ್ಹಂಗೆ ಬಯ್ತಿಯಾ? ದಿಂಡೆ ಬಸವಿ!”

“ಯಾರೇ ದಿಂಡೆ ಬಸವಿ? ಹಾದರಗಿತ್ತಿ!”

ನಾಗಮ್ಮನವರಿಗೆ ಸಹಿಸಲಸಾಧ್ಯವಾಯಿತು. ಸುಬ್ಬಮ್ಮ ಆ ರೀತಿ ಮೇರೆ ಮೀರಿ ಎಂದೂ ಬೈದಿರಲಿಲ್ಲ. ಮುಂದೇನು ಮಾಡುತ್ತಿದ್ದರೋ ಏನೋ?  ಅಷ್ಟರಲ್ಲಿ ಎಲ್ಲವನ್ನೂ ಆಲಿಸುತ್ತಿದ್ದ ಪುಟ್ಟಮ್ಮ ” ದೊಡ್ಡಮ್ಮ, ಸುಮ್ಮನಿರೆ! ಆ ನಾಯಿ ಕೈಲಿ ಏನು ಮಾತು?” ಎಂದಳು.

“ಯಾರೇ ನಾಯಿ? ಬಜಾರಿ!” ಎಂದು ಎದ್ದು ನಿಂತಳು.

ಚಿಕ್ಕಂದಿನಿಂದಲೂ ಕಷ್ಟಮಾಡಿ ಬೆಳೆದಿದ್ದ ಸುಬ್ಬಮ್ಮ ಪುಟ್ಟಮ್ಮನಿಗಿಂತಲೂ ಬಲಿಷ್ಠೆಯಾಗಿದ್ದರೂ ಶ್ರೀಮಂತ ಕನ್ಯೆಯ ವ್ಯಕ್ತಿತ್ವಕ್ಕೆ ಅಳುಕಿ ಗೊಣಗುತ್ತ ಹಿಂದಕ್ಕೆ ಹೋದಳು.

ಅಷ್ಟರಲ್ಲಿ ಕಲ್ಲುಗಡಿಗೆಯಲ್ಲಿದ್ದ ಪಲ್ಯ ಹೊತ್ತಿಹೋಗಿತ್ತು. ಸುಬ್ಬಮ್ಮ ಆ ಕೋಪದಲ್ಲಿ ಗಡಿಗೆಯನ್ನು ಒಲೆಯ ಮೇಲಿಂದೆತ್ತಿ ನೆಲದ ಮೇಲೆ ಸ್ವಲ್ಪ ಜೋರಾಗಿಯೆ ಇಟ್ಟಳು. ಅನೇಕ ವರ್ಷಗಳಿಂದ ಬಾಳಿಕೊಂಡು ಬಂದಿದ್ದ ಆ ಕಲ್ಲುಗಡಿಗೆ ಕಾನೂರು ಮೇಲೆ ಹರಿಯತೊಡಗಿತು. ಸುಬ್ಬಮ್ಮನ ಕೋಪ ಭಯಾನುತಾಪಗಳಿಗೆ ತಿರುಗಿ, ಮೇಲೋಗರವನ್ನು ಬೇಗಬೇಗನೆ ಬೇರೆಯ ಪಾತ್ರೆಗೆ ಸುರಿಯತೊಡಗಿದಳು.

ಇನ್ನೂ ತರಕಾರಿ ಹೆಚ್ಚುತ್ತಲೆ ಇದ್ದ ನಾಗಮ್ಮನವರಿಗೆ ಪುಟ್ಟಮ್ಮ” ಅಯ್ಯೋ, ಹೋಯ್ತಲ್ಲೇ, ದೊಡ್ಡಮ್ಮ! ಮುತ್ತಿನಂಥ ಗಡಿಗೆ!” ಎಂದಳು.

“ಹೋದರೆ ಹೋಯ್ತು, ಬಿಡು. ಎಲ್ಲ ಹಾಳಾಗಿ ಹೋಗ್ಲಿ. ನಿನಗೇನು? ನೀನೇನು ಈಮನೆಯಲ್ಲಿ ಸಾಸ್ವಿತವೇ?” ಎಂದು ನಾಗಮ್ಮ ತಿರುಗಿ ನೋಡದೆ ತಮ್ಮ ಕೆಲಸಕ್ಕೆ ಕೈ ಹಾಕಿದರು.

ಪುಟ್ಟಮ್ಮ ಸುಮ್ಮನಿರಲಾರದೆ” ಅದರ ಓಡಿನಲ್ಲೇ ತಲೇ ಕೆರಿಬೇಕು ಹಿಡ್ಕೊಂಡು” ಎಂದು ಹಲ್ಲು ಕಡಿದಳು.

“ನಿನ್ನಜ್ಜ ಬರ್ಬೇಕು” ಎಂದಳು ಸುಬ್ಬಮ್ಮ.

“ನನ್ನಜ್ಜ ಹೇತು ಬಂದಲ್ಲಿ ನಿಂಗೆ ಕೂತು ಬರಾಕೆ ಯೊಗ್ಯತೆಯಿಲ್ಲೇ!… ತಡೀ….. ಅಪ್ಪಯ್ಯನಿಗೆ ಹೇಳಿ ಮಾಡಿಸ್ತೀನಿ.”

“ಅಪ್ಪಗಾರೂ ಹೇಳು! ಅಜ್ಜಗಾರೂ ಹೇಳು” ಎಂದು ಬಿಟ್ಟಳು ಸುಬ್ಬಮ್ಮ.

“ಹೇಸಿಗೆಗೆ ಕಲ್ಲುಹಾಕಿದ್ಹಾಂಗೆ ಮಾಡ್ತೀಯಲ್ಲಾ! ಸುಮ್ಮನಿರ್ತೀಯೆ ಇಲ್ವೆ?” ಎಂದರು ನಾಗಮ್ಮ, ಪುಟ್ಟಮ್ಮನನ್ನು ನಿರ್ದೇಶಿಸಿ.

“ಬಾಯಾಗೆ ಯಾವಾಗ್ಲೂ ಹೇಸಿಗೆಯೇ” ಎಂದಳು ಸುಬ್ಬಮ್ಮ.

ಮುಂದೆ ಯಾರೂ ಮಾತಾಡಲಿಲ್ಲ. ಅವರವರ ಕೆಲಸದಲ್ಲಿ ತೊಡಗಿದರು. ಕಡೆಗೋಲು ಕಂಬವು ಅಕ್ಷರಶಃ ಸಾಕ್ಷೀಭೂತವಾಗಿ ನಿಂತಿತ್ತು. ಕಿಟಕಿಯಿಂದ ಬಂದು ನೆಲದ ಮೇಲೆ ಬಿದ್ದಿದ್ದ ಪಟ್ಟೆ ಬಿಸಿಲಿನಲ್ಲಿ ನೊಣಗಳು ನಾದಮಾಡಿ ಹಾರಿ ಹಾರಿ ಬಿಸಿಲು ಕಾಯಿಸುತ್ತಿದ್ದುವು. ಬೆಕ್ಕು ಮೂಲೆಯಲ್ಲಿ ಎದ್ದು ಕುಳಿತು ಮೈ ನೆಕ್ಕಿಕೊಳ್ಳುತ್ತಿತ್ತು. ಅದರ ಎರಡು ಮರಿಗಳು ವಾಸು ತಿಂದು ಚೆಲ್ಲಿದ್ದ ಉಪ್ಪಿಟ್ಟಿನ ಚೂರುಗಳನ್ನು ನೆಕ್ಕುತ್ತಿದ್ದವು. ಅದರಲ್ಲೊಂದು ಮರಿ ಸ್ನೇಹಪೂರ್ವಕವಾಗಿ ಬಾಲವನ್ನು ನೆಗಹಿಮಿಯಾವ್ ಎನ್ನುತ್ತ ಸುಬ್ಬಮ್ಮನ ಬಳಿಗೆ ಹೋಗಲು, ಕೋಪದಿಂದಿದ್ದ ಅವಳು ಝಾಡಿಸಿ ಒದ್ದ ಏಟಿಗೆ ಘ್ಹುಕ್ ಎಂಬ ಶಬ್ದದೊಡನೆ ಒಲೆಯ ಮೂಲೆಗೆ ಹಾರಿ ಹೋಗಿ ಗೋಡೆಗೆ ತಗುಲಿ ಬಿದ್ದಿತು.

ಅಷ್ಟರಲ್ಲಿ ಹಿತ್ತಲು ಕಡೆಯ ಬಾಗಿಲಲ್ಲಿ ಯಾರೊ” ಅಮ್ಮಾ! ಅಮ್ಮಾ!” ಎಂದು ಕರೆದರು.

ಯಾರೂ ಉತ್ತರ ಕೊಡಲಿಲ್ಲ. ಕರೆದವಳು ಬೇಲರ ಬೈರನ ಹೆಂಡತಿ ಸೇಸಿ ಎಂದೇನೋ ಎಲ್ಲರಿಗೂ ಗೊತ್ತಾಯಿತು.

ಸೇಸಿ ಮತ್ತೆ ಗಟ್ಟಿಯಾಗಿ” ಅಮ್ಮಾ! ಅಮ್ಮಾ! ಯಾರ‍್ರೋ ಒಳಗೆ?” ಎಂದು ಕೂಗಿದಳು. ಉತ್ತರ ಬರದಿರಲು ಕಿಟಕಿಯ ಬಳಿ ಬಂದು ಕೂಗಿದಳು.

ಒಲೆಯ ಬಳಿ ಇದ್ದ ಸುಬ್ಬಮ್ಮ” ಯಾರೇ ಅದು?” ಎಂದು ಸಿಡುಕಿದಳು.

“ನಾನ್ರೋ, ಸೇಸಿ. ಅಕ್ಕಿ ಬೀಸಾಕೆ ಹೇಳಿ ಕಳ್ಸಿದ್ರಿ”.

“ಯಾರೂ ಸಾಯ್ಲಿಲ್ಲ ಇಲ್ಲಿ, ಕಡುಬು ನುರಿಯಾಕೆ!” ಎಂದಳು ಸುಬ್ಬಮ್ಮ, ಸೇಸಿಗೆ ಅರ್ಥವಾಗಲಿಲ್ಲ.

“ತಂಗಳು ಹಾಕ್ತೀನಿ ಅಂದಿದ್ರು” ಎಂದಳು ಮೆಲ್ಲಗೆ.

“ಯಾರೇ ಹೇಳಿದ್ದು?”

“ನಾಗಮ್ಮೋರು.”

ಹೂವಯ್ಯ ರಾಮಯ್ಯ ಬರುತ್ತಾರೆಂದು ಕೇಳಿ, ನಾಗಮ್ಮನವರು ರೊಟ್ಟಿ ಮಾಡಲೋಸುಗ ಹಿಟ್ಟು ಬೀಸಿಕೊಡಲು ಸೇಸಿಗೆ ಹೇಳಿಕಳುಹಿಸಿದ್ದರು.

“ನಂಗೊತ್ತಿಲ್ಲ! ಯಾರು ಏನಾದ್ರೂ ಸಾಯ್ಲಿ! ಅನ್ನಾನೂ ಇಲ್ಲ; ಗಿನ್ನಾನೂ ಇಲ್ಲ!”

ಪುಟ್ಟಮ್ಮ ರಭಸದಿಂದ” ಸೇಸೀ” ಎಂದು ಕೂಗಿದಳು.

“ಆಞ” ಎಂದಳು ಕಿಟಕಿಯ ಹೊರಗೆ ಸೇಸಿ.

“ಅನ್ನ ಕೊಡ್ತೀನಿ ನಿಲ್ಲು!”

“ಹೂನ್ರವ್ವಾ!”

ಒಲೆಯ ಬಳಿ ಒಂದು ಬೋಗುಣಿಯಲ್ಲಿ ಕಳೆದ ರಾತ್ರಿ ಉಳಿದಿದ್ದ ಅನ್ನವನ್ನು ನಾಯಿಗಳಿಗಾಗುತ್ತದೆ ಎಂದು ಸುಬ್ಬಮ್ಮ ಇಟ್ಟಿದ್ದಳು. ಆ ಲೆಕ್ಕದ ಮೇಲೆಯೆ ಆವೋತ್ತು ಎಸರಿಗೆ ಕಡಿಮೆ ಅಕ್ಕಿ ಹಾಕಿದ್ದಳು. ಪುಟ್ಟಮ್ಮ ಸರಸರನೆ ಹೋಗಿ ಆ ಬೋಗುಣಿಯನ್ನು ಎತ್ತಿಕೊಂಡು ಹಿತ್ತಲು ಕಡೆಗೆ ಹೊರಟಳು. ಸಮಾಧಾನದ ಸಮಯವಾಗಿದ್ದರೆ ಸುಬ್ಬಮ್ಮ ಅನ್ನವನ್ನು ನಾಯಿಗಾಗಿಟ್ಟಿದೆ ಎಂದು ಹೇಳುತ್ತಿದ್ದಳು. ಪುಟ್ಟಮ್ಮ ಅದನ್ನು ಸೇಸಿಗೆ ಕೊಡಲು ಹಟಮಾಡುತ್ತಲೂ ಇರಲಿಲ್ಲ. ಸೇಸಿಗೆ ಅನ್ನವಿಲ್ಲವೆಂದು ಹೇಳಿಕಳುಹಿಸಬಹುದಾಗಿತ್ತು. ಆದರೆ ಈಗಿನ ಸ್ಥಿತಿಯೇ ಬೇರೆಯಾಗಿತ್ತು. ಸುಬ್ಬಮ್ಮ ದಡದಡನೆ ಓಡಿಬಂದು. ಕಸಿದುಕೊಳ್ಳಲು ಬೋಗುಣಿಗೆ ಕೈ ಹಾಕಿದಳು. ಪುಟ್ಟಮ್ಮ ಕಸುವಿನಿಂದ ಎಳೆದು ಜಗ್ಗಿದಳು. ಬೋಗುಣಿ ದಢಾರನೆ ಕೆಳಗೆ ಬಿದ್ದು, ಸೆಗಣಿ ಬಳಿದಿದ್ದ ಕರಿಯ ನೆಲದ ಮೇಲೆ ತಾಮ್ರವರ್ಣದ ಕೇಸಕ್ಕಿಯನ್ನದ ರಾಶಿ ಕೆದರಿಬಿದ್ದಿತು. ಪುನಃ ಬೈದಾಟವಾಗಿ ಸುಬ್ಬಮ್ಮ ಹಿಂದಕ್ಕೆ ಹೋದಳು. ಪುಟ್ಟಮ್ಮ ಬಿದ್ದ ಅನ್ನವನ್ನೆಲ್ಲ ಮತ್ತೆ ಬೋಗುಣಿಗೆ ಹಾಕಿಕೊಂಡು, ಹಿತ್ತಲಕಡೆ ಬಾಗಿಲಲ್ಲಿ ಕಾಯುತ್ತಿದ್ದ ಸೇಸಿಯ ಬಳಿ ಇಟ್ಟು, ಸಿಟ್ಟಿನಲ್ಲಿ ಮಾತಾಡದೆ ಹಿಂದಕ್ಕೆ ಬಂದಳು. ಸೇಸಿಗೆ ಪಾಕಶಾಲೆಯಲ್ಲಾದ ಘೋರಯುದ್ಧ ಸದ್ದು ಶಾಪಗಳಿಂದ ಗೊತ್ತಾಗಿತ್ತು. ಜಗಳದ  ಕೂಳನ್ನು ತೆಗೆದುಕೊಳ್ಳಲು ಬೆದರಿ, ಅದನ್ನಲ್ಲಿಯೆ ಬಿಟ್ಟು. ತನ್ನ ಬಿಡಾರಕ್ಕೆ ಸೋಜಿಗಪಡುತ್ತ ಹೋದಳು. ಯಜಮಾನರ ಅಡುಗೆ ಮನೆಯಲ್ಲಿ ಅಷ್ಟೊಂದು ಕಾವು ಏರಿತ್ತೆಂದು ಆಕೆ ಊಹಿಸಿರಲಿಲ್ಲ.

ಹಿತ್ತಲು ಕಡೆ ಅಂಗಳದಲ್ಲಿ ಡೊಳ್ಳೇರಿ ಬಿದ್ದಿದ್ದ ನಾಯಿಮರಿಗಳು ಪುಟ್ಟಮ್ಮ ಬೋಗುಣಿ ಹೊತ್ತುಕೊಂಡು ಹೋಗುತ್ತಿದ್ದುದನ್ನು ಕಂಡು ಆಕೆಯ ಹಿಂದೆ ಬಾಲವಲ್ಲಾಡಿಸುತ್ತ ಹೋಗಿ ಅನ್ನಕ್ಕೆ ದೂರವಾಗಿ ನಿಂತಿದ್ದುವು. ಅಥವಾ ಕುಣಿಯುತ್ತಿದ್ದುವು. ಸೇಸಿ ಕಣ್ಮರೆಯಾಗುವುದರಲ್ಲಿಯೆ ಆ ಮರಿಗಳು ಬೋಗುಣಿಗೆ ಬಾಯಿ ಹಾಕಿದುವು. ಅವುಗಳು ಕೂಳು ಮುಕ್ಕುತ್ತಿದ್ದುದನ್ನು ಕಂಡಿದ್ದರೆ ಬಕಾಸುರನೂ ನಾಚುತ್ತಿದ್ದನು. ಕಾಲ ವಿಳಂಬವಾದರೆ ಅನ್ನ ಮಾಯವಾಗುತ್ತದೆ ಎಂದು ಕಾಲವನ್ನೇ ವಂಚಿಸುವ ರೀತಿಯಲ್ಲಿ ಅವು ಕೂಳುಣ್ಣುವುದರಲ್ಲಿ ತನ್ಮಯವಾಗಿದ್ದವು. ಬಾಲಗಳು ಆನಂದದಿಂದ ಕುಣಿಯುತ್ತಿರಲು. ಹೊಟ್ಟೆಗಳು ಮುಂಗಾರು ಮಳೆಯಲ್ಲಿ ಹೊಳೆಗಳು ನೆರೆಯೇರುವಂತೆ ಕ್ಷಣಕ್ಷಣಕ್ಕೂ ಉಬ್ಬುತ್ತಿದ್ದುವು. ಪಕ್ಕದಲ್ಲಿದ್ದ ಕೊಚ್ಚೆಯಲ್ಲಿ ಮೇಯುತ್ತಿದ್ದ ಕೆಲವು ಕೋಳುಗಳೂ ನಾಯಿಮರಿಗಳನ್ನು ಲೆಕ್ಕಿಸದೆ ಬಂದು, ಬೋಗುಣಿಯಿಂದ ಅನ್ನಾಹಾರ ಮಾಡತೊಡಗಿದವು. ನಾಯಿಮರಿಗಳಿಗೆ ಹೊರಗಿನ ಪ್ರಜ್ಞೆಯೆ ಇದ್ದಂತೆ ತೋರಲಿಲ್ಲ. ತಾನು ಕೋಳಿಯನ್ನು ಅಟ್ಟುವಷ್ಟರಲ್ಲಿಯೆ ಮತ್ತೊಂದು ಮರಿ ಅನ್ನವನ್ನು ಮುಗಿಸಿಬಿಟ್ಟರೆ, ಎಂದು ಭಾವಿಸಿ ಪ್ರತಿಯೊಂದು ಮರಿಯೂ ಸ್ಪರ್ಧೆ ಹೂಡಿತ್ತು! ಆ ನಾಯಿಮರಿ ಮತ್ತು ಕೋಳಿಗಳ ಗಲಭೆ ಸ್ವಲ್ಪ ದೂರದಲ್ಲಿದ್ದ ಟೈಗರಿಗೆ ಕೇಳಿಸಿ, ಕುತೂಹಲ ಪರಿಹಾರಾರ್ಥವಾಗಿ ಎದ್ದು ಬಂದಿತು. ನೋಡುತ್ತದೆ; ಅನ್ನಸ್ವರ್ಗದ ಹೆಬ್ಬಾಗಿಲು ತೆರೆದುಬಿದ್ದಿದೆ! ಬೀಗವಿಲ್ಲ, ಕಾವಲಿಲ್ಲ! ಸರಿ, ಒಂದೇ ಏಟಿಗೆ ಹಾರಿಬಂದು ಕೋಳಿಗಳನ್ನು ಅಟ್ಟಿ, ನಾಯಿಮರಿಗಳನ್ನು ಗುರ‍್ರೆಂದು ದೂರ ತಳ್ಳಿ, ಬೋಗುಣಿಗೆ ಬಾಯಿ ಹಾಕಿತು. ಆದರೆ ನಾಯಿಮರಿಗಳು ಬಿಡಬೇಕಲ್ಲಾ! ಮತ್ತೆ ಮತ್ತೆ ಮೇಲ್ವಾಯ್ದು ಬಂದು ಬೋಗುಣಿ ಬಾಯಿ ಹಾಕಿದುವು. ಟೈಗರಿಗೆ ರೇಗಿ ಚೆನ್ನಾಗಿ ಕಚ್ಚಿ ಓಡಿಸಿತು. ಮರಿಗಳ ಆರ್ತನಾದವನ್ನು ಕೇಳಿ ರೂಬಿ, ಡೈಮಂಡು, ರೋಜಿ, ಟಾಪ್ಸಿ. ಕೊತ್ವಾಲ ಎಲ್ಲವೂ ಬಂದು, ನೋಡಿ, ಬೋಗುಣಿಗೆ ನುಗ್ಗಿದುವು. ದೊಂಬಿಗಾರಂಭವಾಯಿತು. ಬೋಗುಣಿ ತಲೆಕೆಳಗಾಗಿ ಉರುಳಿ ಅನ್ನ ಊರೆಲ್ಲ ಹಬ್ಬಿತು. ನಾಯಿಗಳಿಗಿಂತಲೂ ಕೋಳಿಗಳಿಗೆ ಅನುಕೂಲ ಹೆಚ್ಚಾಗಿ ಅವೂ ನುಗ್ಗಿದುವು. ಟೈಗರಿಗೂ ಡೈಮಂಡಿಗೂ ರೋಜಿಯ ಪ್ರಣಯ ವಿಚಾರವಾಗಿ ಮೊದಲೆ ವೈಮನಸ್ಸಿದ್ದುದರಿಂದ ಎರಡಕ್ಕೂ ಪ್ರಬಲವಾದ ದ್ವಂದ್ವ ಯುದ್ಧ ಪ್ರಾರಂಭವಾಗಿ, ಗಲಾಟೆ ಮನೆಯ ಮೂಲೆ ಮೂಲೆಗೂ ಕೇಳಿಸಿತು. ನಾಯಿಮರಿಯೊಂದು ಕದನವಾಡುತ್ತಿದ್ದ ದೊಡ್ಡ ನಾಯಿಗಳ ಕಾಲು ತುಳಿತಕ್ಕೆ ಸಿಕ್ಕಿ ಕೊಚ್ಚೆಗೆ ಧೊಪ್ಪೆಂದು ಬಿದ್ದಿತು. ಕರಿಯ ಬಣ್ಣದ ಕೆಸರು ಸದರ ಮೈ, ಮುಖ, ಕಣ್ಣು ,ಕಿವಿ ಎಲ್ಲದಕ್ಕೂ ಮೆತ್ತಿಕೊಂಡಿತು. ಅದೇ ಸಮಯದಲ್ಲಿ ಕೊಚ್ಚೆಗೆ ಬಿದ್ದಿದ್ದ ಅನ್ನವನ್ನು ಆಯುತ್ತಿದ್ದ ಹುಂಜನೊಂದು ತಸ್ಮಾತಾಗಿಯೋ ಅಕಸ್ಮಾತಾಗಿಯೋ ಮರಿಯ ಕಣ್ಣನ್ನು ಬಲವಾಗಿ  ಕುಟುಕಿತು. ಮರಿ ಅತಿ ದಾರುಣವಾದ ನೋವಿಂದ ಎಡೆಬಿಡದೆ ಅರಚಿಕೊಳ್ಳತೊಡಗಿತು.