ಗಂಡನ ಕೋಟಲೆಗೆ ಸಹಿಸಲಾರದೆ ತವರು ಸೇರಿದ್ದ ಸುಬ್ಬಮ್ಮಗೆ ತವರು ಮನೆಯೂ ಸಾಕೋಸಾಕಾಗಿ, ಮನಸ್ಸಿನಲ್ಲಿಯೆ ಮುಂದಿನ ಸುಖದ ಹೊಂಗನಸುಗಳನ್ನು ಕಟ್ಟುತ್ತಾ, ಮರಳಿ ಗಂಡನ ಮನೆಗೆ ಬಂದಿದ್ದಳು. ಕಾನೂರುಮನೆ ತಾನು ಬಿಟ್ಟುಹೋದಾಗ ಇದ್ದುದಕ್ಕಿಂತಲೂ ಈಗ ಹೆಚ್ಚು ಪಾಳಾಗಿ, ಗಾಳಾಗಿ ತೋರಿತು. ಮನೆಯ ಬಾಳಿನ ಬಾನಿನಲ್ಲಿ ದುಃಖದ ಮೋಡವೊಂದು ದಟ್ಟವಾಗಿ ಕವಿದುಕೊಂಡಂತಿತ್ತು. ನಾಯಿಗಳು ಕೂಡ ಬೊಗಳಲೂ ಇಲ್ಲ ಬಾಲವಲ್ಲಾಡಿಸಲೂ ಇಲ್ಲ. ಪ್ರೆತಿಯೊಬ್ಬರ ಮುಖಭಾವವೂ ಚಿಂತೆಯ ಭಾವದಿಂದ ಕುಸಿದು ಕುಗ್ಗಿದಂತಿತ್ತು

ನಡುಹಗಲಿನಲ್ಲಿಯೂ ನಸುಗತ್ತಲಾಗಿರುತ್ತಿದ್ದ ಒಂದೇ ಕಿಟಕಿಯ ತಮ್ಮ ಕೋಣೆಯಲ್ಲಿ ಮಲಗಿದ್ದ ತನ್ನ ಗಂಡನಿಗೆ ಶುಶ್ರೂಷೆ ಮಾಡುತ್ತಿದ್ದ ಗಂಗೆಯನ್ನು ಕಂಡೊಡನೆ ಸುಬ್ಬಮ್ಮನ ಮನಸ್ಸು ಹಲ್ಲು ಹಲ್ಲು ಕಡಿದು ಕೊಂಡಿತು. ಆದರೆ ಅದೊಂದನ್ನೂ ಹೊರತೋರದೆ ರೋಗಿಯ ಹಾಸಗೆಯ ಬಳಿಗೆ ಹೋಗಿ, ಸ್ವಲ್ಪ ದೂರವಾಗಿ, ಸಂಕೋಚದಿಂದ,ಗೋಡೆಗೆ ಒರಗಿಕೊಂಡು ನಿಂತಳು. ಆ ಕಪ್ಪಿನಲ್ಲಿ ರೋಗಿಯ ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.

ಚಂದ್ರಯ್ಯಗೌಡರು ಬಡದನಿಯಿಂದ “ಯಾರದು?” ಎಂದರು. ಆ ದನಿಯನ್ನು ಕೇಳಿದೊಡನೆ ಸುಬ್ಬಮ್ಮಗೆ ಆಶ್ಚರ್ಯವಾಯಿತು; ಧೈರ್ಯವಾಯಿತು. ಒಂದು ತೆರನಾದ ಕನಿಕರವೂ ಉಂಟಾಯಿತು. ಅಷ್ಟು ದೀನತೆ, ಅಷ್ಟು ನೋವು, ಅಷ್ಟು ಪ್ರಾರ್ಥನೆ, ಅಷ್ಟೊಂದು ಪಶ್ಚಾತ್ತಾಪವಿತ್ತು ಆ ದನಿಯಲ್ಲಿ; ಸುಪರಿಚಿತವಾಗಿದ್ದ ದರ್ಪವಾಗಲಿ ಕ್ರೌರ್ಯವಾಗಲಿ ಒಂದಿನಿತೂ ಇರಲಿಲ್ಲ.

ಸುಬ್ಬಮ್ಮ “ನಾನು” ಎಂದವಳೆ ಬಿಕ್ಕಿಬಿಕ್ಕಿ ಅಳತೊಡಗಿದಳು.

“ಬಂದೆಯಾ? ಒಳ್ಳೇದು!” ಎಂದು ಚಂದ್ರಯ್ಯಗೌಡರು ಸುಮ್ಮನಾದರು. ಆ ಕೋಣೆಯ ಕತ್ತಲೆಯಲ್ಲಿ ಗಂಡನ ಕಣ್ಣುಗಳಿಂದ ಸುರಿಯುತ್ತಿದ್ದ ನೀರು ಸುಬ್ಬಮ್ಮಗೆ ಕಾಣಿಸಲಿಲ್ಲ.

ಸ್ವಲ್ಪ ಹೊತ್ತಾದಮೇಲೆ ಚಂದ್ರಯ್ಯಗೌಡರು ಬಿಸಿನೀರು ಸಿದ್ಧಮಾಡುವಂತೆ ಹೇಳಿ ಗಂಗೆಯನ್ನು ಹೊರಗೆ ಕಳುಹಿಸಿದರು.

ಗೌಡರು ದೀರ್ಘವಾಗಿ ನಿಟ್ಟುಸಿರುಬಿಟ್ಟು, “ಬಂದೆಯಾ? ಒಳ್ಳೇದು” ಎಂದು ಮತ್ತೊಮ್ಮೆ ನುಡಿದು “ಸ್ವಲ್ಪ ಹಿಡಿದುಕೊಳ್ತೀಯಾ ಎದ್ದು ಕೂತುಕೊಳ್ತೀನಿ” ಎಂದರು

ಅಷ್ಟು ಹೇಳಿದ್ದೆ ಸಾಕು ಎಂದು ನಿಂತಿದ್ದ ಸುಬ್ಬಮ್ಮ ಬೇಗ ಬೇಗನೆ ಶಯ್ಯೆಯ ಬಳಿಗೆ ಬಂದು ಗಂಡನನ್ನು ಹಿಡಿದು ಎಬ್ಬಿಸಿ, ದಿಂಬಿಗೆ ಒರಗಿ ಕೂತುಕೊಳ್ಳುವಂತೆ ಮಾಡಿದಳು. ಗಂಡನ ದೇಹ ಎಷ್ಟು ಶೀರ್ಣವಾಗಿದೆ ಎಂಬುದನ್ನು ಸ್ಪರ್ಶಮಾತ್ರದಿಂದಲೇ ಅರಿತು ಬಹಳ ಗಾಬರಿಗೊಂಡು ನೊಂದು “ಈಗ ಹ್ಯಾಂಗದೆ?” ಎಂದಳು.

“ಹ್ಯಾಂಗಿರೋದು? ಇದ್ದ್ಹಾಂಗೆ ಇದೆ!” ಎಂದು ಗೌಡರು ದುಃಖ ಧ್ವನಿಯಿಂದ ಹೇಳಿ, ಕಣ್ಣೀರು ಸುರಿಸುತ್ತ “ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚತ್ತ ಮಾಡಿಕೊಳ್ತಿದ್ದೀನಿ” ಎಂದರು.

ಮುಖದ ಮೇಲೆ ಬಿದ್ದಿದ್ದ ನಸುಬೆಳಕಿನಲ್ಲಿ ಕಂಬನಿಗಳು ಮಿರುಗುತ್ತಿದ್ದುದು ಸುಬ್ಬಮ್ಮಗೆ ಕಾಣಿಸಿತು. ಆಕೆಯೂ ಅತ್ತಳು.

ಮುಖದಮೇಲೆ ಗಡ್ಡ ಮೀಸೆಗಳು ಹೊದೆಯಾಗಿ ಬೆಳೆದು, ತಲೆ ಕೂದಲೆಲ್ಲ ಕೆದರಿಕೊಂಡು, ಬಡಕಲಾಗಿ, ವಿಕಾರವಾಗಿ ಕಾಣಿಸುತ್ತಿದ್ದ ಗಂಡನನ್ನು ನೋಡಿ ನೋಡಿ ಮತ್ತೂ ಅತ್ತಳು. ತಾನು ಕಟ್ಟಿದ್ದ ಕನಸಿನ ಚಿತ್ರಕ್ಕೂ ವಾಸ್ತವಕ್ಕೂ ಸ್ವರ್ಗ ನರಕಗಳ ತಾರತಮ್ಯವಿತ್ತು.

ಅದುವರೆಗೆ ಆಕೆಯ ಪ್ರೀತಿಯಲ್ಲಿದ್ದ ಪ್ರಣಯದ ಭಾವ ಗಾಳಿಯಿಲ್ಲದ ದೀಪದಂತೆ ಉಸಿರುಕಟ್ಟಿ ನಂದಿಹೋಯಿತು. ತಾಯಿ ಕಷ್ಟದಲ್ಲಿರುವ ಮಗವನ್ನು ಕಂಡು ಮನಕರಗುಂತೆ, ಸರಿಯಾಗಿರುವವರು ರೋಗದಿಂದ ನರಳುತ್ತಿರುವ ಯಾರನ್ನಾದರೂ ಕಂಡು ಅನುಕಂಪಿಸುವಂತೆ, ಸುಬ್ಬಮ್ಮಗೆ ಗೌಡರ ಮೇಲೆ ಕನಿಕರವುಕ್ಕಿತು.

ಅಂದಿನಿಂದ ಸುಬ್ಬಮ್ಮ ಹಗಲಿರುಳೂ ಗಂಡನ ಪಕ್ಕದಲ್ಲಿ ಕುಳಿತು ಶುಶ್ರೂಷೆಮಾಡತೊಡಗಿದಳು. ರೋಗ ಹೆಚ್ಚಾಗುತ್ತಿದ್ದರೂ ಚಂದ್ರಯಹ್ಯಗೌಡರೇನೊ ಹೆಚ್ಚು ಹೆಚ್ಚು ಹರ್ಷಚಿತ್ತರಾಗಲಾರಂಭಿಸಿದರು.

ಗಂಗೆಯ ವಿಚಾರವಾಗಿ ಸುಬ್ಬಮ್ಮ ತಟಸ್ಥಭಾವದಿಂದಿದ್ದಳು. ಗಂಡನೊಡನೆ ಆಗಲಿ, ಇತರರೊಡನೆ ಆಗಲಿ, ಆ ಪ್ರಸ್ತಾಪವನ್ನಾಗಲಿ ಹಿಂದೆ ನಡೆದಿದ್ದ ಇನ್ನಾವ ಪ್ರಸ್ತಾಪವನ್ನಾಗಲಿ ಎತ್ತಲಿಲ್ಲ. ಆದರೂ ಗೌಡರಲ್ಲಿ ಒಂದು ವಿಚಿತ್ರ ಪರಿವರ್ತನೆ ತಲೆದೋರಿ ಪ್ರಬಲವಾಯಿತು. ಅವರುಮೊದಲು ಮೊದಲು ಗಂಗೆಯ ವಿಚಾರವಾಗಿ ಉಚಾಸೀನರಾಗುತ್ತಾ ಬಂದು ಕಡೆಕಡೆಗೆ ಅವಳನ್ನು ತಿರಸ್ಕರಿಸತೊಡಗಿದರು. ನೆವಗಳನ್ನು ತಂದೊಡ್ಡಿ ಆಕೆ ತಾವು ಮಲಗಿದ್ದ ಕೋಣೆಗೆ ಕಾಲಿಡಬಾರದೆಂದು ಕಟ್ಟಪ್ಪಣೆ ಮಾಡಿಬಿಟ್ಟರು. ಜೊತಿಗೆ ಸುಬ್ಬಮ್ಮನನ್ನು ದೇವತೆಯಂತೆ ಭಾವಿಸತೊಡಗಿದರು. ಆಕೆ ಮಾಡುತ್ತಿದ್ದ ಶುಶ್ರೂಷೆಗೆ ಮನಸೋತು, ದಿನ ದಿನವೂ ಆಕೆಯನ್ನು ಒಲವಿನಿಂದ ನಿಡಿದಾಗಿ ನೋಡಿ, ಆನಂದದಿಂದ ಕಣ್ಣೀರಿಡದೆ ಇರುತ್ತಿರಲಿಲ್ಲ. ಕೆಲವು ಸಾರಿ ಸುಬ್ಬಮ್ಮನೊಡನೆ ಚಿಕ್ಕ ಮಕ್ಕಳ ಹಾಗೆ ಏನೇನೊ ಆಲಾಪಿಸುತ್ತಿದ್ದರು.

“ನನ್ನ ಕಾಯಿಲೆ ಗುಣಾದ ಕೂಡ್ಲೆ ನಾವು ಬ್ಯಾರ ಹೋಗಾನ. ಇವರ ಸಾವಾಸನೆ ನಮಗೆ ಬ್ಯಾಡ. ಇಬ್ಬರೇ ಇದ್ದುಬಿಡಾನ ನಾನು ನೀನು!… ಒಂದು ಸಣ್ಣ ಹಂಚಿನಮನೆ ಕಟ್ಟಿಕೊಂಡ್ರೆ ಸಾಲ್ದೇನು?… ಆ ತ್ವಾಟದಾಚೆ ದಿಬ್ಬ ನೋಡೀಯಲ್ಲಾ ನೀನು? ಆ ಜಾಗ ಲಾಯ್ಕಾಗ್ತದೆ…. ಎಂಕಪ್ಪಯ್ಯ ಜೋಯಿಸರಕೈಲಿ ಜಾಗ ನೋಡಿಸಬೇಕು… ಈ ಮನೇಲಿ ರೇಜಿಗೆ ತಪ್ಪದು!… ಯಾರೋ ನಮ್ಮ ಮೇಲೆ ಮಾಟ ಮಾಡಿರಬೇಕು. ಇಲ್ಲದಿದ್ರೆ ನಾ ನಿನ್ನ ಮನೆ ಬಿಟ್ಟು ಓಡಿಸ್ತಿದ್ದೆನೆ?…”

ಹೀಗೆಲ್ಲಾ ಮಾತಾಡಿ ಸುಬ್ಬಮ್ಮನ ಕೈಯನ್ನು ತೆಗೆದು ಹಿಡಿದು ತಮ್ಮ ಗಡ್ಡ ಮೀಸೆಗಳ ನಡುವೆ ಮುಖದ ಮೇಲೆ ಆಡಿಸಿಕೊಳ್ಳುತ್ತಿದ್ದರು. ಅಂತಹ ಸಮಯಗಳಲ್ಲಿ ಸುಬ್ಬಮ್ಮಗೆ ಅವರು ಗಡ್ಡ ಮೀಸೆ ಬಂದ ಕೈಕೂಸಿನಂತೆ ತೋರುತ್ತಿದ್ದರು!

ಗಂಗೆಯಾದರೊ ಅನ್ಯರೀತಿಯಾಗಿ ಭಾವಿಸಿದಳು, ಸುಬ್ಬಮ್ಮನ ಪಿತೂರಿಯೆ ಚಂದ್ರಯ್ಯಗೌಡರುತನ್ನನ್ನು ತಿರಸ್ಕರಿಸಲು ಮುಖ್ಯ ಕಾರಣವೆಂದು!  ಅಂತೂ ಸುಬ್ಬಮ್ಮ ಬಂದು ಮೂರು ನಾಲ್ಕು ತಿಂಗಳೊಳಗಾಗಿ ಅವಳು ಕಾನೂರು ಮನೆಯಲ್ಲಿ ವಾಸಿಸುವುದನ್ನೂ ಬಿಟ್ಟು ಮೊದಲಿನಂತೆ ತನ್ನ ಬಿಡಾರದಲ್ಲಿ ಇರತೊಡಗಿದಳು. ಜೇನು ಸೋರಿಹೋದ ಹಲ್ಲೆಯಂತೆ ನೀರಸರಾಗಿದ್ದ  ಚಂದ್ರಯ್ಯಗೌಡರಲ್ಲಿ ಆಕೆಗೆ ತಕ್ಕಷ್ಟು ಬೇಸರವೂ ಹುಟ್ಟಿದ್ದಿತೆಂದು ತೋರುತ್ತದೆ.

ಚಂದ್ರಯ್ಯಗೌಡರು ಗಂಗೆಯ ವಿಚಾರದಲ್ಲಿ ಮಾತ್ರವೆ ಅಲ್ಲದೆ ಸೇರೆಗಾರರನ್ನು ಬಹಳ ಬಿಗಿಯಿಂದ ನೋಡತೊಡಗಿದರು. ಅವರನ್ನೂ ಮುಖನೋಡದಂತೆ ಓಡಿಸಿಬಿಡುತ್ತಿದ್ದರೋ ಏನೋ! ಆದರೆ ದಿನವೂ ಸಾಯಂಕಾಲ ಅವರು ಹಳಿಪೈಕದ ತಿಮ್ಮನಿಂದ ಕಳ್ಳು ತಂದುಕೊಡುತ್ತಿದ್ದರು. ಕೀಳು ಜಾತಿಯ ತಿಮ್ಮ ಮನೆಯೊಳಕ್ಕೆ ಬರುವಂತಿರಲಿಲ್ಲ. ಗೌಡರ ಕಾಯಿಲೆಯ ದೆಸೆಯಿಂದ ಹೊರಕ್ಕೆ ಹೋಗುವಂತಿರಲಿಲ್ಲ. ಅಲ್ಲದೆ ರೋಗದ ಪ್ರಾರಂಭದಲ್ಲಿ ರಾಮಯ್ಯ ಆಸ್ಪತ್ರೆಯಿಂದ ಔಷಧಿಗಳನ್ನು ತರಿಸಿಕೊಟ್ಟು, ಪಥ್ಯ ಹೇಳಿದಾಗ, ಡಾಕ್ಟರು ಕಳ್ಳುಕುಡಿಯಬಾರದೆಂದು ಹೇಳಿದ್ದಾರೆ ಎಂದಿದ್ದರೂ, ಗೌಡರು ಸೇರೆಗಾರರ ಸಹಾಯದಿಂದ ತಮಗೆ ಬೇಕಾದಷ್ಟನ್ನು ತರಿಸಿಕೊಂಡು ಗುಟ್ಟಾಗಿ ಕುಡಿಯುತ್ತಿದ್ದರು. ನಾಲಗೆಗೆ ರುಚಿಸದಿದ್ದ ಔಷಧಿಗಳನ್ನು ಗುಟ್ಟಾಗಿ ಹೊರಗೆಸೆಯಿಸುತ್ತಿದ್ದರು. ಅದು ರಾಮಯ್ಯನಿಗೆ ಹೇಗೋ ಗೊತ್ತಾಗಿ ತಂದೆಯನ್ನು ಬಾಯಿಗೆ ಬಂದಂತೆ ಅಂದನು. ತಂದೆಗೂ ಮಗನಿಗೂ ಮೊದಲೇ ಹೊಗೆಯುತ್ತಿದ್ದ ಮನಸ್ತಾಪ ಮತ್ತೂ ಹೆಚ್ಚಾಯಿತು.

ಸೀತೆಯನ್ನು ಕಳುಹಿಸುವುದಿಲ್ಲವೆಂದು ಮುತ್ತಳ್ಳಿಯವರು ಹೇಳಿದಮೇಲೆ ಚಂದ್ರಯ್ಯಗೌಡರು ಮತ್ತೊಂದು ಮದುವೆ ಮಾಡಿಕೊಳ್ಳುವಂತೆ  ರಾಮಯ್ಯನಿಗೆ ದಿನವೂ ಕಾಟ ಕೊಡುತ್ತಿದ್ದರು. ಆ ವಿಚಾರದಲ್ಲಿ ತಂದೆಗೂ ಮಗನಿಗೂ ಅನೇಕ ವೇಳೆ ಬಿಸಿಮಾತುಗಳಾಗಿದ್ದುವು. ಗೌಡರಿಗೆ ರೋಗ ಹಿಡಿಯದಿದ್ದಿದ್ದರೆ, ಹೆಣ್ಣುಕೇಳಿ ಮಗನ ಮದುವೆಗೆ ಹಲವು ಪ್ರಯತ್ನಗಳನ್ನು ಮಾಡಿಯೆ ಮಾಡುತ್ತಿದ್ದರು. ಆದರೆ ರಾಮಯ್ಯನ ಪುಣ್ಯಕ್ಕೊ ಎಂಬಂತೆ ಅವರು ಹಾಸಗೆ  ಹಿಡಿದುಬಿಟ್ಟರು. ಆದರೂ ಸಮಯ ಸನ್ನಿವೇಶಗಳೊಂದನ್ನೂ ಗಣನೆಗೆ ತಾರದೆ, ಯಾರಿದ್ದಾರೆ ಯಾರಿಲ್ಲ ಎಂಬುದೊಂದನ್ನೂ ನೋಡದೆ, ಮಗನ ಮದುವೆಯ ವಿಚಾರವಾಗಿ ಮಾತಾಡುತ್ತಿದ್ದರು. ಕಾಯಿಲೆ ನೋಡಲು ಬಂದವರೊಡನೆಯೆಲ್ಲಾ ಮಗನನ್ನು ಹೇಗಾದರೂ ಮಾಡಿ ಮದುವೆಗೊಪ್ಪಿಸಿ ಎಂದು ಬೇಡುತ್ತಿದ್ದರು. ಅವಕಾಶ ಸಿಕ್ಕಿದಾಗೆಲ್ಲಾ ರಾಮಯ್ಯನನ್ನು  ಅವನ ಮುಂದೆಯೇ ಬಾಯಿಗೆ ಬಂದಂತಾಡುತ್ತಿದ್ದರು. ಕೆಲವು ಮಾತುಗಳಂತೂ ರಾಮಯ್ಯನ ಹೃದಯದ ನರಗಳನ್ನು ಚುಚ್ಚಿ ನೋಯಿಸುತ್ತಿದ್ದುವು. ರಾಮಯ್ಯನ ಹೆಂಡತಿಯನ್ನು ಅವನ ಕಣ್ಣು ಮುಂದೆಯೇ ಮತ್ತೊಬ್ಬನಿಗೆ ಕೂಡಿಕೆ ಮಾಡಿಕೊಡುತ್ತಾರೆಂದೂ, ಬೆನ್ನ ಹಿಂದೆ ಹುಟ್ಟಿದ ತಂಗಿಯನ್ನು ಅವಳ ಗಂಡನ ಮನೆಯವರು ಸೆರೆಯಲ್ಲಿಟ್ಟಿದ್ದರೂ ಮಲತಾಯಿಯ ಮಗಳೆಂಬ ಹೊಟ್ಟೆಕಿಚ್ಚಿನಿಂದ ತುಟಿಪಿಟಕ್ಕೆನ್ನದೆ ಸುಮ್ಮನಿರುವ ರಾಮಯ್ಯನನ್ನು ಹೇಡಿಯೆಂದೂ (ಸೀತೆಯ ವಿಷಾದ ಪ್ರಸಂಗ ನಡೆದ ತರುವಾಯ ಚಿನ್ನಯ್ಯ ಪುಟ್ಟಮ್ಮನನ್ನು ತವರುಮನೆಗೆ ಹೋಗಕೂಡದೆಂದೂ ತಡೆದಿದ್ದನು.) ಅವರ ಮೇಲಿನ ಹಟಕ್ಕಾದರೂ ಮತ್ತೊಂದು ಹೆಣ್ಣನ್ನು ಮದುವೆಯಾಗಿ ಆಳದಿರುವವನು ಶಿಖಂಡಿ ಎಂದು ಹೇಳಿ ಹೇಳಿ ಮಗನ ಜೀವವನ್ನು ಹಿಂಡಿಬಿಟ್ಟಿದ್ದರು.

ಕ್ರಮೇಣ ರಾಮಯ್ಯ ತಂದೆ ಮಲಗಿದ್ದ ಕೋಣೆಗೆ ಹೋಗುವುದನ್ನೆ ಕಡಿಮೆಮಾಡಿಬಿಟ್ಟನು. ಆಮೇಲೆ ದಿನಕ್ಕೊಂದು ಸಾರಿ ಮಾತ್ರ ಅಲ್ಲಿ ಹೊರಗಿನವರು ಯಾರು ಇಲ್ಲದಿದ್ದಾಗ ಹೋಗಿ ನೋಡಿಕೊಂಡು ಬರುತ್ತಿದ್ದನು. ಸುಬ್ಬಮ್ಮ ಮನೆಗೆಬಂದು ಚಂದ್ರಯ್ಯಗೌಡರಿಗೆ ಆಕೆಯ ಗೀಳು ಹಿಡಿದಮೇಲೆ ಆ ಕೋಣೆಗೆ ಹೋಗುವುದನ್ನೆ ಬಿಟ್ಟು, ಹೊರಗಿನಿಂದಲೆ ವಿಚಾರಿಸಿಕೊಳ್ಳತೊಡಗಿದನು.

ನಿಜವಾಗಿಯೂ ಅದಕ್ಕೆ ಮುಖ್ಯಕಾರಣ ರಾಮಯ್ಯನ ತಾತ್ಸಾರವಾಗಿರಲಿಲ್ಲ; ಗೌಡರಿಗೆ ಹೆಂಡತಿಯ ಸಂಗ ಹೊರತೂ ಉಳಿದ ಯಾರ ಗೊಡವೆಯೂ ಬೇಡವಾಗುತ್ತ ಬಂದುದರಿಂದ, ಅವರನ್ನು ನೋಡಲು ಹೋದವರ ಮೇಲೆಲ್ಲಾ ನಿರ್ನಿಮಿತ್ತವಾಗಿ ಸಿಡಿದುಬೀಳುತ್ತಿದ್ದರು. ಅವರಿಗೆ ಸುಬ್ಬಮ್ಮನೊಬ್ಬಳೆ ಸರ್ವ ಪ್ರಪಂಚವೂ ಆಗಿಬಿಟ್ಟಿದ್ದಳು. ಕಡೆ ಕಡೆಗೆ, ಪಿಶಾಚಿ ಹಿಡಿದಂತೆ ಅವರನ್ನು ಹಿಡಿದಿದ್ದ, ಮಗನ ಮದುವೆಯ ವಿಚಾರವನ್ನೂ ಕೂಡ ಕೈಬಿಟ್ಟರು. ಮುತ್ತಳ್ಳಿಯವರನ್ನೂ ಹೂವಯ್ಯನನ್ನೂ ಹಿಂದಿನಂತೆ ಬಾಯಿಗೆ ಬಂದಂತೆ ನಿಂದಿಸುವ ಹಾವ್ಯಾಸವನ್ನು ಬಿಟ್ಟರು. ಆದರೆ ಒಂದು ವಿಚಾರ ಮಾತ್ರ ಅವರೆದೆಗೆ ಬಲವಾಗಿ ನಾಟಿದಂತಿತ್ತು; ಪುಟ್ಟಮ್ಮನನ್ನು ಹೆತ್ತ ತಂದೆಯ ಕಾಯಿಲೆ ನೋಡುವುಕ್ಕಾಗಿಯಾದರೂ ತವರುಮನೆಗೆ ಕಳುಹಿಸದಿದ್ದದ್ದು.

ಬೇಸಗೆಯ ರಜಾಕ್ಕೆ ಮನೆಗೆ ಬಂದಿದ್ದ ವಾಸುವಿನೊಡನೆ “ನಿನ್ನ ಅಕ್ಕಯ್ಯನ್ನ ಕರಕೊಂಡುಬಂದು ತೋರಿಸ್ತೀಯಾ ಒಂದು ಸಾರಿ? ನೋಡಬೇಕೂ ಅಂತ ನಂಗೆ  ಬಾಳ ಆಸೆಯಾಗ್ತದೆ” ಎಂದು ಹೇಳಿ ಅಳುತ್ತಿದ್ದರಂತೆ. ಸದಾ ಗಂಟು ಮೋರೆ ಹಾಕಿಕೊಂಡಿರುತ್ತಿದ್ದ ರಾಮಯ್ಯನನ್ನು ಮಾತಾಡಿಸಿ ರೇಗಿಸುವ ಗೋಜಿಗೆ ಹೋಗದೆ ವಾಸು ಕೆಳಕಾನೂರಿಗೆ ಹೋಗಿ ಹೂವಯ್ಯನೊಡನೆ ಅದನ್ನು ಹೇಳಿದ್ದನು. ಅವನು ಚಿನ್ನಯ್ಯನಿಗೆ ರೋಗದಿಂದ ನರಳುತ್ತಿದ್ದ, ಮಗಳನ್ನು ನೋಡಲಾಶಿಸುವ ತಂದೆಯನ್ನು ಕಾಣಲು ಕಾತರೆಯಾಗಿರುವ ಮಗಳನ್ನು ತಡೆಯವುದು ಮಹಾ ಪಾಪವೆಂದು ಎಷ್ಟು ಹೇಳಿದರೂ ಕೇಳದೆ, ಅವನು ತನ್ನ ಹಿಡಿದ ಹಟವನ್ನೇ ಸಾಧಿಸಿಬಿಟ್ಟಿದ್ದನು….

ವಾಸು ಬೇಸಗೆ ರಜಾ ಮುಗಿಸಿಕೊಂಡು ಮತ್ತೆ ತಿರ್ಥಹಳ್ಳಿಗೆ ಓದಲು ಹೋದನು. ಹಿಂದೆ ಮನೆ ಬಿಟ್ಟುಗೋಗುತ್ತಿದ್ದಾಗ ಕಣ್ಣೀರು ಸುರಿಸುತ್ತಿದ್ದವನು ಈ ಸಾರಿ ಸಂತೋಷದಿಂದಲೆ ಹೋದನು. ಅವನಿಗೆ ಕಾನೂರು ಮನೆ ರೇಜಿಗೆಯ ಗೂಡಾಗಿ ಕಾಣುತ್ತಿತ್ತು. ಆದ್ದರಿಂದಲೆ ಅವನು ಬೇಸಗೆಯ ರಜದೆಲ್ಲೆಲ್ಲಾ ಸಮಯ ಸಿಕ್ಕಿದರೆ ಸಾಕೆಂದು ಕೆಳಕಾನೂರಿಗೆ ಹೋಗಿ ಹೂವಯ್ಯನೊಡನೆ ಕಾಲ ಕಳೆಯುತ್ತಿದ್ದದ್ದು.

ಚಿಂತೆ ಹಿಡಿದ ರಾಮಯ್ಯ ಯಾಂತ್ರಿಕವಾಗಿ ಮನೆಗೆಲಸಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರೂ ಸಂಪೂರ್ಣವಾಗಿ ಉದಾಸೀನನಾಗುತ್ತಿದ್ದನು. ಕೆಲವು ಸಾರೆ ಚಿಂತೆಮಾಡುವುದನ್ನೂ ಬಿಟ್ಟು ಶೂನ್ಯಚಿತ್ತನಾಗಿ ಮಂಕುಹಿಡಿದವನಂತೆ ಉಪ್ಪರಿಗೆಯ ಮೂಲೆಯಲ್ಲಿ ಬಹಳ ಹೊತ್ತಿನವರೆಗೂ ಕುಳಿತುಬಿಡುತ್ತಿದ್ದನು.

ವೆಂಕಪ್ಪಯ್ಯ ಜೋಯಿಸರೂ ಮತ್ತು ಇತರ ಕೆಲವು ಹಳ್ಳಿಯ ಅಳಲೆಕಾಯಿ ಪಂಡಿತರೂ ತಮಗೆ ಇಷ್ಟವಾದಾಗ ಬಂದೂ ಬಂದೂ ಗೌಡರ ರೋಗನಿವಾರಣೆಗಾಗಿ ಪ್ರಯತ್ನಿಸಿ ಸಂತೃಪ್ತರಾಗಿ ಹೋಗುತ್ತಿದ್ದರು. ರಾಮಯ್ಯ ಅದಾವುದನ್ನೂ ಗಮನಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ.

ತಿಂಗಳಮೇಲೆ ತಿಂಗಳು ಕಳೆದುಹೋಗುತ್ತಿತ್ತು. ಗೌಡರ ರೋಗ ಪ್ರಬಲವಾಗುತ್ತಲೇ ಇತ್ತು. ರೋಗ ಪ್ರಬಲವಾದಂತೆ ಅವರು ಭಯಗೊಂಡ ಮಗು ತಾಯಿಯನ್ನು ಹೆಚ್ಚು ಹೆಚ್ಚಾಗಿ ಬಿಗಿಹಿಡಿಯುವಂತೆ ಸುಬ್ಬಮ್ಮನನ್ನು ಬಿಗಿಹಿಡಿದರು. ಮೂರುಹೊತ್ತೂ ಸುಬ್ಬಮ್ಮ ಅವರ ಬಳಿ ಇರಬೇಕಾಗಿತ್ತು. ಆಕೆ ಹೊರಗೆ ಹೋಗಿ ಬರುವುದು ಒಂದಿನಿತು ತಡವಾದರೆ ಕೂಗಲಾರದ ಗಂಟಲಿನಿಂದ ಗಟ್ಟಿಯಾಗಿ ಕೂಗಿಕೊಂಡು ಮಕ್ಕಳಂತೆ ಚೀತ್ಕಾರಮಾಡುತ್ತಿದ್ದರು. ಬರಬರುತ್ತಾ ಅವರ ಆಕೃತಿಯೂ ಸಂಕುಚಿತವಾಗುತ್ತಿತ್ತು.

ನಡೂ ಮಳೆಗಾಲದಲ್ಲಿ ಚಂದ್ರಯ್ಯಗೌಡರ ಮೈಗೆ ಬಾಕು ಬಂದಿತು. ಸುಬ್ಬಮ್ಮ ಗಂಡನನ್ನು ಕುರಿತು, ತಾಯಿ ಕಂದಗೆ ಹೇಳುವಂತೆ, ಕಳ್ಳು ಕುಡಿಯುವುದು ಬೇಡವೆಂದು ಎಷ್ಟು ಹೇಳಿದರೂ ಅವರು ಕೇಳಲಿಲ್ಲ. ಕಡೆಗೆ ಸುಬ್ಬಮ್ಮ ಹಳೆಪೈಕದ ತಿಮ್ಮನಿಗೂ ಸೇರೆಗಾರರಿಗೂ ಕಳ್ಳು ತರಬಾರದೆಂದು ಹೇಳಿಬಿಟ್ಟಳು. ಗೌಡರು ರೇಗಿಕೊಂಡು೮ ಆಹಾರವನ್ನೂ ಹೆಂಡತಿಯೊಡನೆ ಮಾತನ್ನೂ ಬಿಟ್ಟರು. ಸುಬ್ಬಮ್ಮ ಕಣ್ಣೀರು ಕರೆಯುತ್ತಾ ಎಷ್ಟು ದಮ್ಮಯ್ಯ ಹೇಳಿದರೂ ಸಫಲವಾಗಲಿಲ್ಲ. ಕಡೆಗೆ, ಏನಾದರಾಗಲಿ ದೇವರೇ ಗತಿಯೆಂದು, ಎಂದಿನಂತೆ ಕಳ್ಳು ತರಿಸಿಕೊಡಲಾರಂಭಿಸಿದಳು. ಗೌಡರು ಕಳ್ಳನ್ನೂ ಕುಡಿಯುತ್ತಿದ್ದರು. ಆಹಾರವನ್ನೂ ಕೊಂಚಮಟ್ಟಿಗೆ ಸ್ವೀಕರಿಸುತ್ತಿದ್ದರು. ಆದರೆ ಹೆಂಡತಿಯೊಡನೆಯಾಗಲಿ ಇನ್ನಾರೊಡನೆಯಾಗಲಿ ಮಾತಾಡುತ್ತಿರಲಿಲ್ಲ.

ಒಂದೆರಡು ದಿನಗಳು ಹೀಗೆ ಕಳೆದ ತರುವಾಯ, ಸುಬ್ಬಮ್ಮ ಗಂಡನ ಕಾಲು ಹಿಡಿದುಕೊಂಡು ತನ್ನ ಮೇಲೆ ಸಿಟ್ಟುಮಾಡಬಾರದೆಂದೂ ಮಾತಾಡಬೇಕೆಂದೂ ಬೇಡಿಕೊಂಡಳು. ಗೌಡರು ಮಾತಾಡಲು ಯತ್ನಿಸಿದರೂ ಆಗಲಿಲ್ಲ. ಆಗ ಸುಬ್ಬಮ್ಮನೆಗೆ ಗೊತ್ತಾಯಿತು, ಗಂಡನಿಗೆ ನಾಲಿಗೆ ಬಿದ್ದುಹೋಗಿದೆ ಎಂದು! ಅಯ್ಯೋ, ಇಷ್ಟೆಲ್ಲ ಮಾಡಿದರೂ ಗಂಡನ ಕೊನೆಯ ಮಾತು ಜಗಳದಲ್ಲಿ ಪರ್ಯವಸಾನವಾಯಿತೆ ಎಂದು ಸುಯ್ದು ಶೋಕಿಸಿದಳು.

ಕಾನೂರು ಚಂದ್ರಯ್ಯಗೌಡರಿಗೆ ಕಾಯಿಲೆ ಜೋರಾಗಿದೆ ಎಂದು ಸುದ್ದಿ ಹಬ್ಬಿತು. ಅನೇಕರು ಬಂದು ಬಂದು ಕಡೆಯ ಸಾರಿ ನೋಡಿಕೊಂಡು ಹೋಗತೊಡಗಿದರು. ಆದರೆ ಮುತ್ತಳ್ಳಿಯಿಂದ ಯಾರೂ ಬರಲಿಲ್ಲ. ಮನೆಯ ಹೆಣ್ಣು ಮಗಳು ಪುಟ್ಟಮ್ಮನನ್ನೂ ಕೂಡ ಕಳುಹಿಸಲಿಲ್ಲ. ಪುಟ್ಟಮ್ಮ ಅತ್ತು ಬೇಡಿದಾಗ ಚಿನ್ನಯ್ಯ ’ನೀನು ಹೋದರೆ ಹಿಂದಕ್ಕೆ ಬರೋದೆ ಬೇಡ! ಎಂದು ಗದರಿಸುತ್ತಿದ್ದನಂತೆ!

ಆದರೂ ಚಂದ್ರಯ್ಯಗೌಡರು ಸಾಯಲಿಲ್ಲ . ಇಂದು ನಾಳೆ ನಾಡಿದ್ದು ಆಚೆ ನಾಡಿದ್ದು ಅದರಾಚೆನಾಡಿದ್ದು ಎಂದು ಕಾಲವನ್ನೂ ಮುಂದು ಮುಂದಕ್ಕೆ ತಳ್ಳುತ್ತಿದ್ದರು.

ಗದ್ದೆ ಕೊಯಿಲು ಪೂರೈಸಿ ಸುಮಾರು ಒಂದು ತಿಂಗಳು ಕಳೆದಿದ್ದಿರಬಹುದು. ಒಂದು ಸಂಜೆ; ಕಾನೂರುಮನೆಯಲ್ಲಿ ಕೋಣೆಯೊಳಗೆ ಹಾಸಗೆಯ ಮೇಲೆ ಶವಸದೃಶವಾಗಿ ಮೂಕವಾಗಿ ಮಲಗಿದ್ದ ಚಂದ್ರಯ್ಯಗೌಡರ ಪಕ್ಕದಲ್ಲಿ, ತಲೆಯ ಬಳಿ, ಗೋಡೆಗೊರಗಿ ನಸು ತಲೆಬಾಗಿ ದೀರ್ಘಚಿಂತಾ ಮಗ್ನಳಾಗಿ ಕುಳಿತಿದ್ದ ಸುಬ್ಬಮ್ಮನ ಹೊರತೂ ಬೇರೆ ಯಾರೂ ಇರಲಿಲ್ಲ. ಅಷ್ಟು ದೊಡ್ಡಮನೆ ನಿರ್ಜನವಾಗಿ ನಿಃಶಬ್ದವಾಗಿ ಪಾಳಾಗಿ ಗಾಳಾಗಿತ್ತು.

ಹೊರಗೆ ಎಲ್ಲಿಯೋ ಹೋಗಿದ್ದ ನಿಂಗನ ಮಗ ಪುಟ್ಟ ಇದ್ದಕ್ಕಿದ್ದ ಹಾಗೆ ಕೋಣೆಯೊಳಕ್ಕೆ ಓಡಿಬಂದು “ಅಮ್ಮ ಯಾರೋ ಬರ‍್ತಿದ್ದಾರೆ. ಗಡ್ಡ ಬಿಟ್ಕೊಂಡಾರೆ” ಎಂದು ಸಡಗರದಿಂದ ಹೇಳಿದನು. ಹುಡುಗನ ಕಣ್ಣಿನಲ್ಲಿಯೂ ದನಿಯಲ್ಲಿಯೂ ಅಷ್ಟೊಂದು ಉದ್ವೇಗವಿದ್ದುದನ್ನು ಕಂಡು ಸುಬ್ಬಮ್ಮನೂ ಸ್ವಲ್ಪ ಕುತೂಹಲಿತೆಯಾಗಿ ಮೇಲೆದ್ದು ಕೋಣೆಯ ಬೆಳಕಂಡಿಯಿಂದ ಹೊರಗೆ ನೋಡಿದಳು.

ಬರುತ್ತಿದ್ದ ವ್ಯಕ್ತಿ ಹೂವಯ್ಯನೆಂದು ಒಡನೆಯೆ ಗೊತ್ತಾಗಿ, ಪುಟ್ಟನಿಗೆ, “ಒಳಗೆ ಕರಕೊಂಡು ಬಾರೊ” ಎಂದು ಹೇಳಿ, ಒಂದು ಚಾಪೆ ಹಾಸಿದಳು.

ತಾಯಿ ಸತ್ತು ಹೋದಮೇಲೆ ಹೂವಯ್ಯ ಮೊದಲಿಗಿಂತಲೂ ಹೆಚ್ಚು ಗಂಭೀರನೂ ಮೌನಿಯೂ ಆಗತೊಡಗಿದನು. ಸೀತೆ ಕೆಳಕಾನೂರಿನಲ್ಲಿರುವ ತನಕ ಹಗಲಿರುಳೂ ಆಕೆಯ ಶುಶ್ರೂಷೆ ಮಾಡುತ್ತಿದ್ದನು. ಅವಳ ಸಾನ್ನಿಧ್ಯ ಸೇವೆಗಳಿಂದ ಅವನಿಗೆ ತಾಯಿಯನ್ನು ಕಳೆದುಕೊಂಡ ದುಃಖಭಾರ ಬೆನ್ನು ಮುರಿಯುವಷ್ಟು ಅಸಹನೀಯವಾಗಿರಲಿಲ್ಲ. ಆದರೆ ಸೀತೆ ಮುತ್ತಳ್ಳಿಗೆ ಹೋದಮೇಲೆ ಆತನ ರೀತಿ ಬೇರೆಯಾಯಿತು. ತನ್ನ ದುಃಖವನ್ನಾಗಲಿ ಚಿಂತೆಯನ್ನಾಗಲಿ ಯಾರೊಬ್ಬರಿಗೂ ಪ್ರದರ್ಶಿಸದೆ ಗುಟ್ಟಾಗಿ ಮೆಲಕುಹಾಕುತ್ತಿದ್ದನು. ಮನೆಗೆಲಸಗಳಲ್ಲಿಯೂ ಇತರ ಕಾರ್ಯಗಳಲ್ಲಿಯೂ ಪ್ರಯತ್ನಪೂರ್ವಕವಾಗಿ ಎಂದಿನಂತಿರುವಂತೆ ನಟಿಸುತ್ತಿದ್ದನು. ಆದರೂ ದಿನದಿನಕ್ಕೂ ಹೆಚ್ಚು ಹೆಚ್ಚು ಕೃಶವಾಗುತ್ತಿದ್ದ ದೇಹವೂ ಕ್ಷೌರವಿಲ್ಲದೆ ನೀಳ ನೀಳವಾಗಿ ಬೆಳೆಯುತ್ತಿದ್ದ ಗಡ್ಡಮೀಸೆ ಕೂದಲುಗಳೂ ಆತನ ಮನಃಸ್ಥಿತಿಯನ್ನೂ ಆತ್ಮಾನುಭವಗಳನ್ನೂ ಘೋಷಿಸಿ ಚಿತ್ರಿಸುತ್ತಿದ್ದುವು.

ಹೂವಯ್ಯ ಕೋಣೆಯೊಳಕ್ಕೆ ಬಂದು ಸುಬ್ಬಮ್ಮ ಇಷ್ಟದಂತೆ ಆಕೆ ಹಾಸಿದ್ದ ಗೀಕಿನ ಚಾಪೆಯ ಮೇಲೆ ಕೂತುಕೊಂಡನು. ಹರಳೆಣ್ಣೆಯ ದೀಪದ ಕೆಂಬೆಳಕಿನಲ್ಲಿ ಚಂದ್ರಯ್ಯಗೌಡರನ್ನು ನೋಡಿ ಅವನಿಗೆ ಬೆರಗೂ ನೋವೂ ಕನಿಕರ ಮರುಕಗಳೂ ಒಮ್ಮಯೆ ಉಂಟಾದುವು.

’ಆ ಅಂದಿನ ದರ್ಪದ ಚಂದ್ರಯ್ಯಗೌಡರೆಲ್ಲಿ? ಹಾಸಗೆಯ ಮೇಲೆ ಸುರುಟಿಕೊಂಡು ಗೇಣುದ್ದವಾಗಿರುವ ಈ ಕನಿಕರದ ಪದಾರ್ಥವೆಲ್ಲಿ?’ ಎನ್ನಿಸಿತವನಿಗೆ.

“ಚಿಕ್ಕಯ್ಯಾ, ಈಗ ಹೇಗಿದ್ದೀರಿ” ಎಂದು, ಸ್ವಲ್ಪ ಗಟ್ಟಿಯಾಗಿಯೆ, ರೋಗಿಯ ಗಮನವನ್ನು ಸೆಳೆಯಲೆಂದು ಕೇಳಿದನು. ಆದರೆ ಮರುಕ್ಷಣದಲ್ಲಿಯೆ ತಾನು ಹಾಕಿದ್ದ ಪದ್ಧತಿಯ ಪ್ರಶ್ನೆಗೆ ತಾನೆ ನಾಚಿಕೊಂಡನು. ಅಷ್ಟು ಹಾಸ್ಯಾಸ್ಪದವಾಗಿ ಕಂಡಿತು ತಾನು ಹಾಕಿದ್ದ ಪ್ರಶ್ನೆ ಆ ವಾಸ್ತವತೆಯ ಸಮ್ಮುಖದಲ್ಲಿ.

ರೋಗಿ ಮೆಲ್ಲಗೆ ತಲೆ ತಿರುಗಿಸಿ ನೋಡಿದನು. ಆ ದೃಷ್ಟಿ ಅತ್ಯಂತ ನಿರ್ಭಾವವಾಗಿತ್ತು.

“ನನ್ನ ಗುರುತು ಸಿಕ್ಕಲಿಲ್ಲೇನು, ಚಿಕ್ಕಯ್ಯ? ನಾನು ಹೂವಯ್ಯ” ಎಂದು ಹೂವಯ್ಯ ಇನ್ನೂ ಸ್ವಲ್ಪ ಮುಂದಕ್ಕೆ ಸರಿದನು.

ನಿರ್ಭಾವವಾಗಿದ್ದ ರೋಗಿಯ ಕಣ್ಣುಗಳಲ್ಲಿ ತಟಕ್ಕನೆ ಭಾವಸಂಚಾರವಾಯಿತು. ಚಂದ್ರಯ್ಯಗೌಡರು ಹೂವಯ್ಯನನ್ನು ಎವೆಯಿಕ್ಕದೆ ನೋಡತೊಡಗಿದರು. ಅವರೆದೆ ಮೇಲಕ್ಕೂ ಕೆಳಕ್ಕೂ ಏರಿಳಿಯುತ್ತಿತ್ತು. ಮೊದಲು ನಿಃಶಬ್ದವಾಗಿದ್ದ ಉಸಿರಾಟ ಈಗ ಕೇಳಿಸತೊಡಗಿತ್ತು. ಹೂವಯ್ಯ ನೋಡಿತ್ತಿದ್ದ ಹಾಗೆಯೇ, ಸ್ವಲ್ಪ ಕಾಲಕ್ಕೆ ಮೊದಲು ಸತ್ತಹಾಗಿದ್ದ ಆ ಕಣ್ಣಗಳಿಂದ ಜೀವಪೂರ್ಣವಾದ ಬೆಚ್ಚನೆಯ ಕಣ್ಣೀರು ಬಳ ಬಳ ಬಳನೆ ಸೋರತೊಡಗಿ, ಹೊದೆಯಾಗಿ ಬೆಳೆದಿದ್ದ ಗಡ್ಡಮೀಸೆಗಳಲ್ಲಿ ಹೀರಿಹೋಗ ತೊಡಗಿತು. ಏನನ್ನೊ ಮಾತಾಡಲು ಪ್ರಯತ್ನಿಸಿದರು; ಆಗಲಿಲ್ಲ. ಕಡೆಗೆ ಎಲುಬು ಚರ್ಮ ಮಾತ್ರವಾಗಿದ್ದ ತಮ್ಮ ಬಲಗೈಯನ್ನು ಹೂವಯ್ಯನಕಡೆಗೆ, ಪ್ರೀತಿಯ ದುಃಖದ ಪಶ್ಚಾತ್ತಾಪದ ಕ್ಷಮಾಪಣೆಯ ಗೌರವದ ಪ್ರಾರ್ಥನೆಯ ಕಾಲುವೆಯೆ ಹರದುದೋ ಎಂಬಂತೆ ಸಪ್ರಯತ್ನವಾಗಿ ನೀಡಿದರು! ಹೂವಯ್ಯನೂ ರಕ್ತಮಾಂಸಗಳಿಂದ ಕೂಡಿ ಸುಪುಷ್ಟವಾಗಿದ್ದ ತನ್ನ ಸಶಕ್ತ ಸಜೀವ ಹಸ್ತದಿಂದ ಆ ಪ್ರೇತಹಸ್ತವನ್ನು ಅನಂತ ಕ್ಷಮೆಯಿಂಲೂ ಪ್ರೀತಿಯಂದಲೂ ಎದೆಗರಗಿ ಹಿಡಿದುಕೊಂಡು ಉಕ್ಕಿಬರುತ್ತಿದ್ದ ಅಸಂಖ್ಯ ಭಾವಗಳ ಆವೇಗವನ್ನು ತಡಿಯಲಾರದೆ ಸುಮ್ಮನೆ ಕಣ್ಣೀರಿಡತೊಡಗಿದನು. ಬಾಗಿ ಕುಳಿತಿದ್ದ ಅವನ ಕಣ್ಣಿನ ಹನಿಗಳು ಆ ಪ್ರೇತಹಸ್ತದಮೇಲೆ ಬೆಚ್ಚಗೆ ಬಿದ್ದುವು.

ಅದನ್ನು ನೋಡುತ್ತಿದ್ದ ಸುಬ್ಬಮ್ಮನೂ ಕಂಬನಿಗರೆಯತೊಡಗಿದಳು. ಆಕೆಯ ಹೃದಯದಲ್ಲಿ ಮಹಾಯಾತನೆಯ ಬಾಣದ ಮೊನೆಗೆ ಮಹಾನಂದದ ಮಾಧುರ್ಯದ ಹದವಾಗುತ್ತಿದ್ದ ಹಾಗಿತ್ತು.

ಕೆಲ ಹೊತ್ತಿನಮೇಲೆ ಹೂವಯ್ಯ ’ಹೋಗಿಬರುತ್ತೇನೆ’ ಎಂದು ಮೇಲೆದ್ದಾಗ, ಚಂದ್ರಯ್ಯಗೌಡರು ತಮ್ಮೆರಡು ಕೈಗಳನ್ನು ಹಣೆಗಿಟ್ಟು ನಮಸ್ಕಾರ ಮಾಡಿಬಿಟ್ಟರು! ಹೂವಯ್ಯನಿಗೆ ಅದನ್ನು ನೋಡಿ ಬೆಪ್ಪು ಹೊಡೆದಂತಾಗಿ, ತಾನೂ ಪ್ರತಿ ನಮಸ್ಕಾರ ಮಾಡಿ, ಅವರನ್ನು ಬೀಳ್ಕೊಟ್ಟನು.

ಹೊರಗೆ ಬಂದು ಸುಬ್ಬಮ್ಮಗೆ ಧೈರ್ಯ ಹೇಳಿ ಕೆಳಕಾನೂರಿನ ಕಡೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ನಿರಾಶೆಯಿಂದ ನಿಟ್ಟುಸಿರು ಬಿಟ್ಟನು! “ರಾಮಯ್ಯ ತಂದೆಯ ವಿಚಾರದಲ್ಲಿ ಇಷ್ಟೊಂದು ಉದಾಸೀನನಾಗಿದ್ದಾನಲ್ಲಾ! ಏಕೆ ಹೀಗಾಗಿ ಬಿಟ್ಟಿದ್ದಾನೆ?” ಎಂದುಕೊಂಡನು.

ಎಂಟು ದಿನಗಳ ಮೇಲೆ, ಒಂದು ದಿನ ಬೆಳಿಗ್ಗೆ ಹತ್ತು ಹತ್ತೂವರೆ ಗಂಟೆಯ ಹೊತ್ತಿನಲ್ಲಿ, ಪುಟ್ಟಣ್ಣ ಸೋಮ ಬೈರ ಇವರೊಡನೆ ಹೂವಯ್ಯ ತೋಟದಲ್ಲಿ ಕೆಲಸಮಾಡುತ್ತಿದ್ದಾಗ ಕಾನೂರು ಮನೆಯಿಂದ ಗುಢುಂ ಗುಢುಂ ಗುಢುಂ ಎಂದು ಕದನಿಗಳ ಸದ್ದು, ಕಣಿವೆ ನಡುಗಿ, ಬೆಟ್ಟಗಳು ಮರುದನಿ ಬೀರುವಂತೆ ಕೇಳಿಸಿತು.

“ಹೌದಾ ಕಾಣಿ! ಕಾನೂರು ಗೌಡರು ಹೋದ್ರಂಬುದಾಗಿ ಕಾಣ್ತದೆ!” ಎಂದು ಸೋಮ ಹೆಗ್ಗಣ್ಣುಮಾಡಿ ಖಿನ್ನಮುಖಿಯಾದನು.