ಬಿತ್ತರದ ಜಗತ್ತಿನಲ್ಲಿ ಮಹದ್ವ್ಯಾಪಾರಗಳು ಜರುಗುತ್ತಿರುತ್ತವೆ, ಘೋರ ಸಂಗ್ರಾಮಗಳಾಗಿ ಕಿರೀಟ ಸಿಂಹಾಸನಗಳುರುಳಿ ರಾಜ್ಯಗಳೆದ್ದು ಬಿದ್ದು ಕೌಲುಗಳಾಗಿ ಹೋಗಿ ರಾಷ್ಟ್ರ ರಾಷ್ಟ್ರಗಳ ಜೀವನಗಳಲ್ಲಿ ಮಹಾ ಪರಿವರ್ತನೆಗಳಾಗುತ್ತಿರುತ್ತವೆ. ಸಜೀವ ಜ್ವಾಲಾಮುಖಿಗಳಿಂದ ನಗರಗಳು ಭಸ್ಮವಾಗುತ್ತವೆ. ಅತಿ ಪ್ರವಾಹದಿಂದ ಪ್ರಾಂತಗಳು ಕೊಚ್ಚಿಹೋಗುತ್ತವೆ. ಲಕ್ಷಾಂತರ ಜನರು ಸಾಯುತ್ತಿರುತ್ತಾರೆ. ಮನುಷ್ಯರ ಯಂತ್ರಕೌಶಲದಿಂದ ಮರುಭೂಮಿಗಳು ನಂದನವನಗಳಾಗುತ್ತವೆ. ಕಾವ್ಯ ಕಲೆಗಳು ಅಭಿವೃದ್ಧಿ ಹೊಂದುತ್ತಿರುತ್ತವೆ. ಸತ್ತವರ ಸಂಖ್ಯೆಗಿಂತಲೂ ಹೆಚ್ಚು ಸಂಖ್ಯೆ ಹುಟ್ಟುತ್ತಿರುತ್ತಾರೆ. ಸಮುದ್ರಗಳು ಕೆರಳಿ ದ್ವೀಪಗಳು ಮುಳುಗಿ ದ್ವೀಪಗಳೇಳುತ್ತೊರುತ್ತವೆ. ಸೂರ್ಯ ಚಂದ್ರಗ್ರಹಗಳು ಅನಂತಾಕಾಶದಲ್ಲಿ ಯಾವ ಉದ್ದೇಶದಿಂದಲೋ ಏನೋ ಸುತ್ತುತ್ತಾರೆ. ಬರುಗಣ್ಣಿಗೆ ಕಾಣದೆ ಯಂತ್ರದೃಷ್ಟಿಗೆ ಮಾತ್ರ ಗೋಚರವಾಗಿರುವ ತಾರೆ ನೀಹಾರಿಕೆಗಳಲ್ಲಿ ಭಯಂಕರ ಅನಲ ವಿಪ್ಲವಗಳಾಗುತ್ತಿರುತ್ತವೆ. ಆದರೆ ಇವುಗಳು ಯಾವುದರಿಂದಲೂ ವಿಕ್ಷುಬ್ದನಾಗದೆ ತನ್ನ ಆತ್ಮಶಾಂತಿಯ  ಸಾಧನೆಯಲ್ಲಿಯೆ ತನ್ಮಯನಾಗಿರುತ್ತಾನೆ. ಹಿಮಾಲಯದ ಗುಹೆಯಲ್ಲಿ ತಪಸ್ಸುಮಾಡುವ ವೈರಾಗಿ! ಆ ವೈರಾಗಿಯಂತಿರುವ ಕೆಲವು ಸ್ಥಾನಗಳಿವೆ. ಸಹ್ಯಾದ್ರಿಶ್ರೇಣಿಗಳಲ್ಲಿ.

ಆ ಸ್ಥಾನಗಳು ಮಹಾ ಗಿರಿಭಿತ್ತಿಗಳು ಮಧ್ಯೆ ಗಂಭೀರ ನೀರವ ಕಂದರಗಳಲ್ಲಿ ನಿರಂಕುಶವಾಗಿರುತ್ತವೆ. ಕಾನೂರಿನ ಸಮೀಪದಲ್ಲಿ” ಕತ್ತಲೆಗಿರಿ” ಅವುಗಳಲ್ಲಿ ಒಂದು. ಅದರ ಹೆಸರೇ ಸ್ಥಿತಿಸೂಚಕವಾಗಿದೆ. ಕತ್ತಲೆಗಿರಿಯ ಮೇಲೆ ಮಟಮಟ ಮಧ್ಯಾಹ್ನದಲ್ಲಿ ಮಾತ್ರ ಬಿಸಿಲು ಬೀಳುತ್ತಿತ್ತು. ಆ ಬಿಸಿಲಿಗೂ ಮರಗಳ ನೆತ್ತಿಯ ಮೇಲಲ್ಲದೆ ಒಳಗೆ ಪ್ರವೇಶಮಾಡಲು ಅವಕಾಶವಿರಲಿಲ್ಲ. ಅಷ್ಟು ನಿಬಿಡವಾಗಿ, ಅಷ್ಟು ಉನ್ನತವಾಗಿ ಬೆಳೆದಿದ್ದುವು. ಅಲ್ಲಿಯ ಮರಗಳು. ಆ ಮರಗಳು ಬುಡದಲ್ಲಿ. ಎರಡು ಗಿರಿಪಕ್ಷಗಳ ಸಂಧಿಯಲ್ಲಿ ಯಾವಾಗಲೂ ನೀರು ಸ್ರವಿಸುತ್ತಿದ್ದ ಕಿರುಹಳ್ಳ ಹರಿಯುತ್ತಿತ್ತು. ನಿಜವಾಗಿಯೂ ಅದು ಹರಿಯುತ್ತಿದ್ದುದು ಮಳೆಗಾಲದಲ್ಲಿ ಮಾತ್ರ. ಬೇಸಗೆಯಲ್ಲಿ ಆ ಜಾಗವೆಲ್ಲ ತೇವವಾಗಿ ನೀರು ಸ್ರವಿಸಿ ಕೆಸರುಕೆಸರಾಗಿರುತ್ತಿತ್ತು. ಕೆವೆಡೆಗಳಲ್ಲಿ ಉಸುಬುಕಾಲಿಟ್ಟರೆ ಸೊಂಟದವರೆಗೂ ಮುಳುಗುವಂತಿತ್ತು. ಆ ಸರುವಿನಲ್ಲಿ ಲಕ್ಷೋಪಲಕ್ಷ ಜಾತಿಯ ಜೊಂಡುಹುಲ್ಲೂ,ಮುಂಡಗ, ಕೇದಗೆ, ಬೆತ್ತ, ವಾಟೆ, ಕೆಸು ಮುಂತಾದ ನೂರಾರು ವಿಧವಾದ ಜಲಪ್ರಿಯ ಸಸ್ಯಗಳೂ ಅಸ್ತವ್ಯಸ್ತವಾಗಿ ಕೊಬ್ಬಿ ಬೆಳೆದು ನಿಂತಿದ್ದುವು. ಕೆಲವೆಡೆಗಳಲ್ಲಂತೂ ನಾಯಿ ನುಸಿಯಲೂ ಕೂಡ  ಸ್ಥಳವಿರದಷ್ಟು ನಿಬಿಡವಾಗಿತ್ತಿ. ಅಲ್ಲಿಯ ಇಂಬಳ( ಜಿಗಣೆ) ಗಳಿಗೆ ಚಿರಂಜೀವತ್ವದಲ್ಲಿ ಲಭಿಸಿತ್ತು. ಬೆಟ್ಟಬೇಸಗೆಯಲ್ಲಿಯೂ ಕೂಡ, ಇತರ ಸ್ಥಳಗಳಲ್ಲಿ ಇಂಬಳಗೆಲ್ಲ ಮೃತಪ್ರಾಯವಾಗಿರುತ್ತಿದ್ದಾಗ, ಅಲ್ಲಿ ಕಾಲಿಡಲು ಸಾಧ್ಯವಿರಲಿಲ್ಲ. ವಾಟೆ ಬೆತ್ತಗಳನ್ನು ಕಡಿದು ತರಲು ಹೋಗುತ್ತಿದ್ದವರು. ಉಪ್ಪು ಸುಣ್ಣಗಳನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಹೋಗಿ ಒರಸಿ ಒರಸಿ ಅವುಗಳನ್ನು ನಿವಾರಿಸಿಕೊಳ್ಳುತ್ತಿದ್ದರು. ಆಗಲೂ ಕೂಡ ಅವು ನೆತ್ತರು ಹೀರದೆ ಬಿಡುತ್ತಿರಲಿಲ್ಲ. ತಮ್ಮ ಅಮರತೆಯಲ್ಲಿ ಅವುಗಳಿಗೆ ಅಷ್ಟು ನಂಬುಗೆ! ಕೇದಗೆ ಹೂವಿನ ಕಂಪಿಗಾಗಿಯೋ ನೀರು ನೆಳಲುಗಳ ತಂಪಿಗಾಗಿಯೋ ಅಥವಾ ಕಪ್ಪೆ ಮೊದಲಾದ ಕ್ಷುದ್ರಜೀವಿಗಳನ್ನು ನುಂಗುವ ಹೊಟ್ಟೆಯಪಾಡಿಗಾಗಿಯೋ ದಾಸರ. ಕಾಳಿಂಗ, ನಾಗರ, ಕೇರೆ ಮೊದಲಾದ ಹಾವುಗಳೂ ಅಲ್ಲಿರುತ್ತಿದ್ದುವು. ಇನ್ನು ಸೊಳ್ಳೆಗಳಿಗಂತೂ ಅದು ನೆಲೆಬೀಡಾಗಿತ್ತು. ಹಕ್ಕಿಗಳು ಆ ಎಡೆಗೆ ದಾರಿತಪ್ಪಿಯೂ ಕೂಡ ತಲೆಹಾಕುತ್ತಿರಲಿಲ್ಲ. ಬೇಸಗೆಯಲ್ಲಿ ಮಾತ್ರ ಆ ಕಾಡಿನ ಜಂತುಗಳು, ಹುಲಿಯಿಂದ ಹಿಡಿದು ಕಾಡುಕೋಳಿಯವರೆಗೂ, ಅಲ್ಲಿಗೆ ಜಲಪಾನ ಮಾಡಲು ಬರುತ್ತಿದ್ದುವು.

ಕತ್ತಲೆಗಿರಿಯ ಸರುವಿನ ಇರವು ಅದರ ವಾತಾವರಣ ಪ್ರಭಾವದಿಂದಲೆ ಗೊತ್ತಾಗುತ್ತಿತ್ತು. ಬೇಟೆಗಾರರಾದರೂ ಆ ಎಡೆಯನ್ನು ಸಮೀಪಿಸಿದರೆ, ಮೊದಲು ಶೀತವಲಯವನ್ನು ಪ್ರವೇಶಿಸಿದಂತೆ ಕುಳಿರಾಗುತ್ತಿತ್ತು. ಆಮೇಲೆ ಯಾವುದೋ ಒಂದು ಮಹಾಗುಹೆಯನ್ನು ಹೋಗುವಂತೆ ಬೆಳಕು ಕಡಿಮೆಯಾಗಿ ಬನದ ಮಬ್ಬುಗತ್ತಲೆ ದಟ್ಟ್ಯೆಸುತ್ತಿತ್ತು. ಮೌನವೂ ನಿರ್ಜನತಾಭಾವವೂ ನಿಶ್ಚಲತೆಯೂ ಬರಬರುತ್ತಾ ಅತಿಶಯವಾಗಿ, ಮನಸ್ಸು “ಬೆಕೋ” ಎನ್ನಲು ತೊಡಗಿ, ಯಾವುದೋ ಒಂದು ವೈಶಾಚಿಕವಾದ ಅಮರ್ತ್ಯಪ್ರಪಂಚಕ್ಕೆ ಹೋದಂತಾಗಿ,  ಭೀಕರತೆ ನಾಳನಾಳಗಳಲ್ಲಿಯೂ ಹಸರಿಸಿ, ರಕ್ತದ ಒಂದೊಂದು ಬಿಂದುವಿನಲ್ಲಿಯೂ ಚಳಿಗೆ ಚಳಿ ಹಿಡಿಸುತ್ತಿತ್ತು. ಮೌನವಂತೂ ಶಬ್ದದ ಅಭಾವ ಮಾತ್ರವಾಗಿರದೆ ಕಿವಿಗೆ ಕೇಳಿಸುವಂತೆ ಸಭಾವಾಗಿರುತ್ತಿತ್ತು. ಬನಗತ್ತಲೆಯ ಮಂದತಮ ಪ್ರಭೆಯ ಮಾಯಾ ಪ್ರಭಾವದಿಂದ ಅಲ್ಲಿದ್ದ ಗಿಡಮರಗಳೆಲ್ಲ ಗಂಭೀರ ಸ್ವಪ್ನ ಮುದ್ರಿತವಾದಂತೆ ಪ್ರೇತವತ್ತಾಗಿ ತೋರುತ್ತಿದ್ದುವು. ಮಣ್ಣಿನಲ್ಲಿ ಹೂಳಿಟ್ಟ ಹೆಣವು ಕೊಳೆತು ಕರಗಿ ಹುಳುಗಳು ಮಿಜಿಮಿಜಿಯಾಡುವ ಸಮಯದಲ್ಲಿ ಜೀವವು ಮರಳಿದರೆ ಅದಕ್ಕೆ ಎಂತಹ ಮುಜುಗರದ ಅನುಭವವಾಗಬಹುದೋ ಅಂತಹ ಅನುಭವವಾಗುತ್ತಿತ್ತು. ಅಲ್ಲಿಗೆ ಹೋದ ಬೇಟೆಗಾರನಿಗೆ. ಅಂತೂ ಸಾಧಾರಣವಾಗಿ ಆ ಪಾತಾಳ ನತಕಕ್ಕೆ ಯಾರೂ ಹೋಗುತ್ತಿರಲಿಲ್ಲ.

ರಾತ್ರಿ ಕಾಡಿನಲ್ಲೆಲ್ಲ ತಿರುಗಿ ಹೊಟ್ಟೆತುಂಬಿದ್ದ ಒಂಟಿಗೆ ಹೋರಿ ಹಂದಿಯೊಂದು ಆ ದಿನ ಪ್ರಾತಃಕಾಲ ಕತ್ತಲೆಗಿರಿಯ ಸರುವಿಗೆ ಬಿಜಯ ಮಾಡಿ ಮಗ್ಗಲು ಬಿದ್ದಿತ್ತು ಎಂದರೆ ಬಿಸಿಲ ಬೇಗೆಗೆ ಕೋಣಗಳು ಕೆಸರಿನಲ್ಲಿ ಬಿದ್ದು ಹೊರಳಾಡುವಂತೆ ಹೊರಳಾಡುತ್ತಿತ್ತು. ಮನುಷ್ಯನಿಗೆ ನರಕಸದೃಶ್ಯವಾಗಿದ್ದ ಆ ಜಾಗ ಮಹಾಕಾಯದ ಆ ವನ ವರಾಹನಿಗೆ ಸ್ವರ್ಗದ ನಂನದ ಜಲಕ್ರೀಡಾಸ್ಥಾನವಾಗಿತ್ತು. ಪ್ರಾಣಿ ಹೊರಳಿ ಹೊರಳಿ, ಅದರ ಮೈತುಂಬ ಬೂದು ಬಣ್ಣದ ಕೆಸರು ಅಂಟಿ, ಕೂದಲೂ ಕಾಣದಷ್ಟು ನುಣುಪಾಗಿತ್ತು. ಮುಸುಡಿಯನ್ನು ಕೆಸರಿಗೆ ಅದ್ದಿ ಅದ್ದಿ ಕಣ್ಣು ಕೋರೆಗಳು ವಿನಾ ಉಳಿದ ತಲೆಯಲ್ಲಿ ಮಣ್ಣಿನಲ್ಲಿ ಮಾಡಿಟ್ಟ ಹಾಗಿತ್ತು. ಅಪಾಯದ ದೃಷ್ಟಿಯಿಂದ ಭಯಂಕರವಾಗಿದ್ದರೂ ನೋಟಕ್ಕೆ ಹಾಸ್ಯಾಸ್ಪದವಾಗಿತ್ತು. ಕೆಸರಿನಲ್ಲಿ ಹೊರಳಿ ತೃಪ್ತಿಯಾದಮೇಲೆ ಪ್ರಾಣಿ ಸುಮ್ಮನೆ ಬಿದ್ದುಕೊಂಡಿತು. ಮೆಲ್ಲಗೆ ಕಣ್ಣು ಮುಚ್ಚಿತು. ಕಪ್ಪೆಗಳು ಹಾರಿ ಸದ್ದುಮಾಡಿದಾಗ ಕಣ್ದೆರೆದು ನೋಡುತ್ತ ಮರಳಿ ಎವೆ ಮುಚ್ಚುತ್ತಿತ್ತು. ಸ್ವಲ್ಪ ಹೊತ್ತು ನಿದ್ದೆ ಮಾಡಿತು. ಇದ್ದಕ್ಕಿದ್ದಂತೆ ದೂರದಲ್ಲಿ ಜನರು ಮಾತಾಡುವ ಸದ್ದು ಕೇಳಿಸಿತು. ಹಂದಿ ಜಾಗರೂಕವಾಗಿ ಆಲಿಸಿತು. ಮತ್ತೆ ಯಾವ ಅಪಾಯವನ್ನೂ ನಿರೀಕ್ಷಿಸದೆ ಉದಾಸೀನವಾಯಿತು. ಮತ್ತೆ ಜನರು ಮಾತಾಡುವ ಸದ್ದು ಸಮೀಪವಾದಂತೆ ತೋರಿತು. ಇದ್ದಕ್ಕಿದ್ದ ಹಾಗೆ ಸುತ್ತಮುತ್ತಲೂ ಹಳುವಿನಲ್ಲಿ ಸಣ್ಣ ಪ್ರಾಣಿಗಳು ಓಡಾಡುವ ಸದ್ದಾಯಿತು. ಹಿಂದುಗಡೆ ನಾಯಿಯೊಂದು ತೀಕ್ಷ್ಣವಾಗಿ ಬಗುಳಿತು. ಮೊದಲು ಮೊದಲು, ಮದಿಸಿನ ವರಾಹ ಅದನ್ನು ಲೆಕ್ಕಿಸಲಿಲ್ಲ. ಆದರೆ ನಾಯಿ ನಾಲ್ಕೈದು ಸಾರಿ ಒಂದೇ ಸಮನೆ ಕಾಡಿನ ಮೌನಕ್ಕೆ ಬಾಣವೆಸೆದಂತೆ ಕೂಗಲು, ಹಂದಿ ಮೈ ರೋಮಗಳನ್ನು ಹುರಿಮಾಡಿಕೊಂಡು ಮೇಲೆದ್ದು ಹೀಂತಿರುಗಿ ನಿಂತಿತು. ಅಷ್ಟರಲ್ಲಿ ಮೊದಲನೆ ನಾಯಿಯ ಕೂಗನ್ನು ಕೇಳಿ ನಾಲ್ಕೈದು ನಾಯಿಗಳು ಹಾರಿ ನುಗ್ಗಿಬಂದು ಹಂದಿಯ ಸುತ್ತಲೂ ಸ್ವಲ್ಪ ದೂರದಲ್ಲಿ ನಿಂತು ಬಗುಳಿದುವು. ಹಂದಿ ಅಲ್ಲಿಂದ ಕಾಲುಕೀಳಲು ಹವಣಿಸುತ್ತಿದ್ದಂತೆಯೆ ಮತ್ತೂ ಎರಡು ಮೂರು ನಾಯಿಗಳು ನುಗ್ಗಿಬಂದುವು. ನಾಯಿಗಳು ನಾಲ್ದೆಸೆಗಳಿಂದಲೂ ಅದರ ಮೈಮೇಲೆ ಬೀಳಹೋಗಲು ಆ ಒಂಟಿಗ ಒಂದು ಸಾರಿ ಕಾಡು ನಡುಗುವಂತೆ ಭಯಂಕರವಾಗಿ ಹೂಂಕರಿಸಿ ಮುಂದೆ ನುಗ್ಗಿತು. ಅಲ್ಲಿದ್ದ ನಾಯಿಗಳು ಚಿಮ್ಮಿ ನೆಗೆದು ತಪ್ಪಿಸಿಕೊಂಡು, ಮತ್ತೆ ಅದನ್ನು ತಡೆದು ನಿಲ್ಲಿಸಿ, ಕೂಗತೊಡಗಿದುವು. ಆದರೂ ಹಂದಿ ಮತ್ತೆ ನಾಲ್ಕು ಹೆಜ್ಜೆ ಮುಂದೆ ನುಗ್ಗಿತು. ನಾಯಿಗಳು ಅದರ ಕೋರೆಗೆ ಸಿಕ್ಕದೆ ತಪ್ಪಿಸಿಕೊಂಡು ಪುನಃ ಅದನ್ನು ತಡೆದು ಕೂಗತೊಡಗಿದುವು.ಕಾಡಿನ ಮೌನ ಹಂದಿಯ ಹೂಂಕಾರ ಮತ್ತು ನಾಯಿಯ ಕೂಗುಗಳಿಂದ ಸಮ್ಮಥಿತವಾಯಿತು. ಅಷ್ಟರಲ್ಲಿ ಮನುಷ್ಯರ ಕೂಗು ಕೇಳಿಸಿ, ಹಂದಿ ಅಲ್ಲಿ ನಿಂತರೆ ಕ್ಷೇಮವಲ್ಲವೆಂದು ಒಂದೇ ರಭಸದಿಂದ ಕಾಲುಕಿತ್ತು ನುಗ್ಗಿತು. ಈ ಸಾರಿ ಎಲ್ಲಿಯೂ ನಿಲ್ಲದೆ ಓಡಿಬಿಡಬೇಕೆಂದು ಮನಸ್ಸು ಮಾಡಿತ್ತು.ನಾಯಿಗಳಿಗೆ ಹೆದರಿಯಲ್ಲ ಮನುಷ್ಯರಿಗೆ ಹೆದರಿ. ಹಂದಿ ಹತ್ತು ಇಪ್ಪತ್ತು ಮಾರು ಓಡಿತ್ತು. ಹಿಂದುಗಡೆಯಿಂದ ಬಗುಳುತ್ತ ಬರುತ್ತಿದ್ದ ನಾಯಿಗಳಲ್ಲಿ ಒಂದು ಅದರ ಬೆನ್ನಿನ ಮೇಲೆ ಹಾರಿ ಕಚ್ಚಿತು. ಸ್ವಸರಂಕ್ಷಣೆಗಾಗಿಯೂ  ಪ್ರತಿಭಟನೆಗಾಗಿಯೂ ಪ್ರತಿ ಹಿಂಸೆಗಾಗಿಯೂ ಕೆರಳಿದ ಹಂದಿ ಗರಕ್ಕನೆ ಹಿಂದಿರುಗಿ ಹೂಂಕರಸುತ್ತ ನಾಯಿಗಳ ಕಡೆಗೆ ರಭಸದಿಂದ ನುಗ್ಗಿತು. ಅದು ಹಿಂತಿರುಗಿದ ವೇಗಕ್ಕೆ ಅದರ ಬೆನ್ನು ಕಚ್ಚಿದ ನಾಯಿ ಕವಣೆಕಲ್ಲೆಸೆದಂತೆ ಒಂದುಮಾರು ಚಿಮ್ಮಿ ಬಿದ್ದು, ಮರಕ್ಕೆ ಮೈ ತಗುಲಿ ನೋವಿನಿಂದ ಕೂಗಿಕೊಂಡಿತು. ಇತರ ನಾಯಿಗಳು ಯುಕ್ತಿಯಿಂದ ನೆಗೆದು ತಪ್ಪಿಸಿಕೊಂಡುವು. ಹಂದಿಅದೇ ಮುಖವಾಗಿ ಮತ್ತೆ ಓಡಿತು. ಮತ್ತೆ ನಾಯಿಗಳೂ ಗಟ್ಟಿಯಾಗಿ ಬಗುಳುತ್ತ ಹಿಂಬಾಲಿಸಿದು ಹೀಗೆ ಆ ಒಂಟಿಗ ಹಂದಿ ನಿಲ್ಲಲೂಆರದೆ ಓಡಲೂಆರದೆ ನಾಯಿಗಳ ಪೀಡನೆಗೆ ಸಿಕ್ಕಿ ಹೂಂಕರಸುತ್ತ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಳುವಿನಲ್ಲಿ ತೊಳಲುತ್ತಿತ್ತು. ಬೇಟೆಯಲ್ಲಿ ಪಳಗಿದ್ದ ಆ ನಾಯಿಗಳು ಹಂದಿಯನ್ನು ಹೋಗಗೊಡದೆಯೂ ಅದರಿಮದ ತಿವಿಸಿಕೊಳ್ಳದೆಯೂ ಅದನ್ನು ತಡೆದು, ಮನುಷ್ಯರಿಗೆ ” ಹಂದಿ ತಡೆದಿದ್ದೇವೆ” ಎಂದು ಸೂಚನೆ ಕೊಡುವಂತೆ ಬಗುಳುತ್ತಿದ್ದವು. ಸ್ವಲ್ಪ ಹೊತ್ತಿಗೆ ಮುಂಚೆ ” ಸತ್ತ ಶವ” ದಂತೆ ನಿಃಶಬ್ದವಾಗಿದ್ದ ಆ ” ಕತ್ತಲೆಗಿರಿಯ ಸರು” ಈಗ ಕಾಕುಹಾಕುವ ಹುಚ್ಚನಂತೆ ಶಬ್ದಮಯವಾಗಿತ್ತು.

ಸಿಂಗಪ್ಪಗೌಡರು ಕಡಿಸಿದ್ದ ಕಳ್ಳನಾಟಾಗಳನ್ನು ಕದ್ದು ಸಾಗಿಸಲೆಂದು ಕಾನೂರಿನಿಂದ ಹೊರಟಿದ್ದ ಸಾಹಸಿಗಳ ದಂಡು ” ಕತ್ತಲೆಗಿರಿಯ ಸರು” ವಿಗೆ ಸಮೀಪದಲ್ಲಿ ಹೋಗುತ್ತಿದ್ದಾಗ, ಜೊತೆಯಲ್ಲಿ ಬರುತ್ತಿದ್ದ ನಾಯಿಗಳು ಇದ್ದಕ್ಕಿದ್ದಂತೆ ನೆಲವನ್ನು ಮೂಸಿ ” ಗಾಲಿ ಹಿಡಿ” ಯುತ್ತ ಹೆಚ್ಚು ವೇಗದಿಂದಲೂ ಉತ್ಸಾಹ ಉದ್ವೇಗಗಳಿಂದಲೂ ಹಳುವಿನಲ್ಲಿ ಹುಡುಕು ನೋಟದಿಂದ ತಿರುಗತೊಡಗಿದುವು! ನಾಯಿಗಳಿಗೆ ಯಾವುದೋ ಪ್ರಾಣಿಯ ” ಗಾಳಿ ಸಿಕ್ಕಿದೆ” ಎಂದು ಎಲ್ಲರಿಗೂ ಗೊತ್ತಾಯಿತು. ಎಲ್ಲರೂ ನೆಲದ ಕಡೆ ನೋಡ ಹತ್ತಿದರು. ಹಳೆಪೈಕದ ತಿಮ್ಮ ” ಇಲ್ಲಿ ನೋಡಿ ಪುಟ್ಟೇಗೌಡ್ರೇ, ಹಂದಿ ಹೆಜ್ಜೆ! ಇವತ್ತು ಬೆಳಿಗ್ಗೆ ಹೋಗ್ಯಾದೆ!” ಎಂದನು, ಪುಟ್ಟಣ್ಣನೊಡನೆಎಲ್ಲರೂ ಅಲ್ಲಿಗೆ ಹೋಗಿ ನೋಡಿದರು. ಸೇರೆಗಾರರು ಸಾಕ್ಷಾತ್ ಹಂದಿಯನ್ನೇ ಕಂಡವರಂತೆ ಹರ್ಷಿತರಾಗಿ” ಏನು ಮಾಡುವ?” ಈ ಕೆಲಸವೊಂದು ಇಲ್ಲದಿದ್ದರೆ ಒಂದು ಷಿಕಾರಿ ಕಾಂಬುದಿತ್ತು! ಹೌದಾ ‌ಗೌಡ್ರೇ?” ಎಂದರು.

ಗಟ್ಟದಾಳೊಬ್ಬನು ” ಕಾಣಿನಿ ಇಲ್ಲಿ, ಮುಸುಡಿ ಊರಿತ್ತು” ಎಂದು ಸ್ವಲ್ಪ ದೂರದಲ್ಲಿ ಮತ್ತೊಂದೆಡೆ ಬಾಗಿದನು.

“ಹೌದು ಕಣ್ರೋ, ದೆಯ್ಹಂದೀ! ಅದ್ರ ಹೆಜ್ಜೇನೋಡಿ! ದನಿನ ಹೆಜ್ಜೆ ಇದ್ಹಾಂಗದೆ!” ಎಂದನು ಬೈರ.

ಅಷ್ಟರಲ್ಲಿ ಕತ್ತಲೆಯಗಿರಿಯ ಸರುವಿನಲ್ಲಿ ನಾಯಿ ಬಗುಳಿತು. ಎಲ್ಲರೂ ಬೆಚ್ಚಿ ಅವಕ್ಕಾಗಿ ಕಣ್ಣರಳಿಸಿ ಕಿವಿಗೊಟ್ಟು ಆಲಿಸುತ್ತ ನಿಂತರು. ಕಾಡಿನ ಮೇಲೆ ಬಿದ್ದು ಹಸುರುಗಟ್ಟಿದ್ದ ಪೂರ್ವಹ್ನದ ಬಿಸಿಲಿನಲ್ಲಿ ಮರಗಳ ದಟ್ಟವಾದ ಕರಿನೆಳಲು ನೆಲದಮೇಲೆ ಮಸಿ ಹೊಯ್ದಂತೆ ಅಲ್ಲಲ್ಲಿ ಬಿದ್ದಿತ್ತು. ಹತ್ತಿರದಲ್ಲಿಯ ಹಾರಾಡಿ ಹಾಡುತ್ತಿದ್ದ ಪಿಕಳಾರ ಹಕ್ಕಿಗಳ ಕೂಗು ಕೇಳಿಸಿತು.

ನಾಯಿ ಒಂದು ಸಾರಿ ಕೂಗಿತು, ಎರಡು ಸಾರಿ ಕೂಗಿತು. ಬೌ ವೌ ವೌ!”

“ಟೈಗರಲ್ಲವೇನೋ?” ಎಂದು ಪಿಸುಮಾತಿನಲ್ಲಿ ಕೇಳಿದನು ಪುಟ್ಟಣ್ಣ.

“ಹೌದು ಕಣ್ರೋ” ಎಂದು ಮೆಲ್ಲನೆ ಸಮ್ಮತಿಸಿದನು ಹಳೆ ಪೈಕದ ತಿಮ್ಮ.

“ಸುಮ್ನೆ ಕೂಗಾಕಿಲ್ಲ ನೋಡಿ ಅದೂ! ಹಂದಿ ಕಂಡ್ರೇ ಸೈ ಹಾಂಗೆ ಕೂಗಾದು!” ಎಂದನು ಬೈರ.

ಅಷ್ಟರಲ್ಲಿ “ಬೌ ವೌವೌ!” ” ಕಯ್ಞ ಕಯ್ಞ!” ಮೊದಲಾಗಿ ನಾಯಿಗಳ ನಾನಾ ಸ್ವರಗಳು ಕೇಳಿಬಂದುವು. ತಿಮ್ಮನ ಹೃದಯ ಬಾಯಿಗೆ ಬಂದಂತಾಗಿ ಪುಟ್ಟಣ್ಣನನ್ನು ನಿರ್ದೇಶಿಸಿ ಗಟ್ಟಿಯಾಗಿದ್ದ ಪಿಸುಮಾತಿನಲ್ಲಿ “ಹಂದಿ ತಡ್ಡಾವೆ ಕಣ್ರೋ! ಓಡ್ರೋ!” ಎನ್ನುತ್ತಿದ್ದಾಗಲೆ ಹಂದಿಯ ಭಯಂಕರ ಹೂಂಕಾರ ನಾಯಿಗಳ ಬೊಬ್ಬೆಯನ್ನು ಮೀರಿ ಕೇಳಿಸಿತು! ಪುಟ್ಟಣ್ಣ ಸ್ವಲ್ಪವೂ ತಡಮಾಡದೆ “ಕತ್ತಲೆಗಿರಿಯ ಸರು”ವಿಗೆ ನುಗ್ಗಿದನು. ತಿಮ್ಮ “ಅಯ್ಯೋ ನಾನು ಕೋವಿ ಬಿಟ್ಟು ಬಂದೆನಲ್ಲಾ!” ಎಂದುಕೊಂಡು ನಿಂತಲ್ಲಿ ನಿಲ್ಲದೆ ಅತ್ತಿತ್ತು ಓಡಾಡತೊಡಗಿದನು. ಗಟ್ಟದಾಳುಗಳಂತೂ “ಇಲ್ಲಿ ಬಾರೋ” ಅಲ್ಲಿ ಹೋಗೋ” ಎಂದು ಕೂಗುತ್ತ ಸುಲಭವಾಗಿ ಹತ್ತಲು ಮರಗಳಿವೆಯೇ ಎಂದು ನೋಡತೊಡಗಿದರು.

ಪುಟ್ಟಣ್ಣ ನಾಯಿಯ ಕೂಗು ಕೇಳಿಬರುತ್ತಿದ್ದ ಕಡೆಗೆ ದಟ್ಟವಾದ ಹಳುವಿನಲ್ಲಿ ಕಣ್ಣುಮುಚ್ಚಿಕೊಂಡು ನುಗ್ಗಿದನು. ಅವನ ಮನಸ್ಸೆಲ್ಲ ಹಂದಿಯ ಮೇಲಿತ್ತು. ಕೆಲವಡೆಗಳಲ್ಲಿ ನೆಟ್ಟಗೆ ಹೋಗಲಾರದೆ ನೆಲದವರೆಗೂ ಬಾಗಿ ನುಸಿಯಬೇಕಾಗಿತ್ತು. ಬಳ್ಳಿ ಗಿಡ ಹೋದರು ಮರಗಳು ಹೆಜ್ಜೆಹೆಜ್ಜೆಗೂ ತಡೆಗಟ್ಟಿ ನಿಂತಿದ್ದುವು. ಇಂಬಳಗಳು ಹತ್ತಿ ನೆತ್ತರು ಹೀರತೊಡಗಿದ್ದುದೂ ಅವನ ಗಮನಕ್ಕೆ ಬರಲಿಲ್ಲ. ನೂಲು ಆ ಟೋಪಿಯಾಗಿ ಅವತಾರ ಎತ್ತಿದಂದಿನಿಂದಲೂ ನೀರು ಕಾಣದೆ,ಎಣ್ಣೆಯ ಜಿಡ್ಡು ಹಿಡಿದು ಮೇಣಗಪ್ಪಟವಾಗಿದ್ದ ಅವನ “ಹಾಸನದ ತೋಪಿ” ಯ ಸಂದಿಗೊಂದಿಗಳಲ್ಲಿ ಗಿಡುಹಿಡಿದು ಹೊರಹೊಮ್ಮಿದ ಕೂದಲು ಕೆದರಿಕೊಂಡಿತ್ತು. ನಡುನಡುವೆ ಕಳಚಿಬೀಳಲು ಅಣುವಾಗುತ್ತಿದ್ದ “ತೋಪಿ”ಯನ್ನು ತಲೆಗೆ ಒತ್ತಿಕೊಂಡು ಬಹು ಕ್ಲೇಶದಿಂದ ಆದರೂ ವೇಗದಿಂದ ಮುಂದುವರಿದನು. ಶಬ್ದದಿಂದ ಹಂದಿ ನಾಯಿಗಳನ್ನು ಬೆದರಿಸಿ ಅತ್ತ ಇತ್ತ ನುಗ್ಗುತ್ತಿದ್ದುದು ಅವನಿಗೆ ಗೊತ್ತಾಯಿತು. ಹೂಂಕಾರದಿಂದ ಅದು ದೊಡ್ಡ ಒಂಟಿಗನಿರಬೇಕೆಂದೂ ಊಹಿಸಿದನು.

ಪುಟ್ಟಣ್ಣ ಬಹಳ ಎಚ್ಚರಿಕೆಯಿಂದ ಹಳುವಿನಲ್ಲಿ ನುಸುಳಿ ನಡೆದು ಬಿದ್ದಿತು. ಸೂಕರಗಳ ಸಮರ ರಂಗಕ್ಕೆ ಬಳಿಯಾದನು! ಹಂದಿಯೂ ಅವನ ಕಣ್ಣಿಗೆ ಬಿದ್ದಿತು. ಅದನ್ನು ಸುಡಲು ಬಂದೂಕನ್ನು ಸರಕ್ಕನೆ ನೆಗಹಿದನು. ಆದರೆ ಸುತ್ತಲೂ ಮುತ್ತಿದ್ದ ನಾಯಿಗಳು ಮನುಷ್ಯನ ಸಾಮೀಪ್ಯವನ್ನರಿತು ಧೈರ್ಯಗೊಂಡು, ಪ್ರಾಣಿಯನ್ನು ನಾಲ್ದೆಸೆಗಳಿಂದಲೂ ಮೇಲ್ವಾಯ್ದು ಪೀಡಿಸಲು ಪ್ರಾರಂಭಮಾಡಿದುದರಿಂದ ಕೈ ತಡೆದನು. ಏಕೆಂದರೆ, ಅನೇಕ ಬೇಟೆಗಾರರು ಅಂತಹ ಸಮಯಗಳಲ್ಲಿ ವಿವೇಚನೆ ಸಾಲದ ಹೋಗಿ ಹಂದಿಯಜೊತೆಗೆ ನಾಯಿಗಳನ್ನೂ ಕೊಂದುದುಂಟು. ಅವನು ಸರಿಯಾದ ಸಮಯಕ್ಕಾಗಿ ಹವಣಿಸುತ್ತಿದ್ದಾಗಲೆ ಹಂದಿಗೂ ಮನುಷ್ಯನ ಸುಳಿವು ಸಿಕ್ಕಿ, ಒಂದು ಬಾರಿ, ಪರಾರಿಯಾಗಲು ರಭಸದಿಂದ ಓಡಿತ್ತು. ಆಗ ನಾಯಿಗಳು ಸ್ವಲ್ಪಹಿಂದೆ ಬಿದ್ದ ಹೊತ್ತನ್ನೆ ಕಾದು, ಮರ ಗಿಡ ಪೊದೆಗಳ ಮಧ್ಯೆ ಅಲ್ಲಲ್ಲಿ ಮಿಂಚಿ ಮುಂಚುತ್ತಿದ್ದ ಹಂದಿಗೆ ಪುಟ್ಟಣ್ಣ ಒಂದು ಗುಂಡು ಹೊಡೆದನು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿಯೆ ಮತ್ತೊಂದು ಈಡೂ ಹಾರಿತ್ತು. ಈಡು ಹಾರಿದ ಸದ್ದನ್ನು ಕೇಳಿದ ನಾಯಿಗಳಂತೂ ರಣಭೇರಿಯನ್ನು ಆಲಿಸಿದ ಸೈನಿಕರಂತೆ ಮೃಗಯಾವೇಶದಿಂದ ಸೂಕರನನ್ನು ಹಿಂಬಾಲಿಸಿದುವು, ಪುಟ್ಟಣ್ಣನೂ ಬೆನ್ನಟ್ಟಿದನು. ಆದರೆ ಆ ದಟ್ಟ ಹಳುವಿನಲ್ಲಿ ಹಿಂಬಾಲಿಸಲು ಸಾಧ್ಯವಾಗದೆ, ಸ್ವಲ್ಪದೂರ ಓಡಿದವನು. ಏದುತ್ತ ಹಾಗೆಯೆ ನಿಂತುಬಿಟ್ಟನು. ಹಂದಿ ನಾಯಿಗಳ ಸದ್ದು ಬರಬರುತ್ತು ದೂರದೂರವಾಗಿ ಕಿವಿಮರೆಯಾಯಿತು.

ಹಂದಿಗೆ ಈಡು ಹೊಡೆದಲ್ಲಿಗೆ ಬಂದು, “ಗುಂಡಿನ ಹುಯಿಲು” ನೋಡಿ, ನೆತ್ತರು ಗಿತ್ತರು ಬಿದ್ದಿದೆಯೋ ಏನೋ ಎಂದು ಹಳುವನ್ನೂ ನೆಲವನ್ನೂ ಪರೀಕ್ಷೀಸಿದನು. ಒಂದೆಡೆ ಎಲೆಗಳ ಮೇಲೆ ರಕ್ತ ಸೋರಿತ್ತು. ಗುಂಡು ತಗುಲಿದೆ ಎಂಬುದೇನೋ ನಿಶ್ಚಯವಾಯಿತು. “ಹೋಯ್!” ಎಂದು ಗಟ್ಟಿಯಾಗಿ ಕೂಗಿ ಕರೆದನು. “ಹೊಯ್!” ಎಂದು ದೂರದಿಂದ ತಿಮ್ಮನ ಮಾರುತ್ತರ ಬಂದಿತು. ಕಾಡು ನೀರವವಾಗಿತ್ತು. “ಇಲ್ಲಿ ಬಾರೋ” ಎಂದನು.

ತಿಮ್ಮನು ಹಂದಿ ಬಿದ್ದಿದೆ ಎಂದೇ ನಿಶ್ಚಯಿಸಿ ಓಡೋಡುತ್ತ ಬಂದನು. ಏಕೆಂದರೆ, ಪುಟ್ಟಣ್ಣನು ಇಟ್ಟ ಗುರಿ ತಪ್ಪದು ಎಂದು ಅನುಭವದಿಂದ ಎಲ್ಲರಿಗೂ ತಿಳಿದಿತ್ತು. ಅದೊಂದು ವಿಧವಾದ ಮೂಢ ನಂಬಿಕೆಯೂ ಆಗಿಬಿಟ್ಟಿತ್ತು. ಹಿಂದಿನಿಂದ ಸೇರೆಗಾರರೂ ಬೈರನೂ” ಹೋ!….. ಹೋ!.” ಎಂದು ಕರೆದು ಗೊತ್ತುಹಚ್ಚುತ್ತ ಬಂದರು. ಅಂಜುಬುರುಕರಾದ ಗಟ್ಟದಾಳುಗಳಲ್ಲಿ ಕೆಲವರು ಹಂದಿಯ ಆರ್ಭಟ, ನಾಯಿಗಳ ಬೊಬ್ಬೆ, ಬಂದೂಕಿನ ಢಂಕಾರಗಳನ್ನು ಕೇಳಿ, ಗಾಯದ ಹಂದಿ ಎಲ್ಲಿ ತಮ್ಮ ಕಡೆಗೇ ನುಗ್ಗುತ್ತದೆಯೋ ಎಂದು ಹೆದರಿ, ಆಗಲೇ ವೃಕ್ಷಾಲಿಂಗನ ಕಾತರರಾಗಿದ್ದರು. ಅವರಲ್ಲಿ ಡೊಳ್ಳುಹೊಟ್ಟೆಯ ಸೋಮನಂತೂ ದಪ್ಪವಾದ ಒಂದು ನಂದಿಯ ಮರವನ್ನೇ ತಬ್ಬಿ, ಹತ್ತಲೆಳಸಿ, ಸಲಸಲವೂ ಜಾರುತ್ತಿದ್ದನು. ಜಾರಿದಂತೆಲ್ಲ  ಅವನ ಭಯೋದ್ವೇಗಗಳು ಹೆಚ್ಚಿ, ಮತ್ತಷ್ಟು ಗಡಿಬಿಡಿಯಿಂದ ಮರವನ್ನು ಹತ್ತಲೆಳಸಿ, ಮತ್ತಷ್ಟು ರಭಸದಿಂದ ಜಾರಿ ಬೀಳುತ್ತಿದ್ದನು. ಅಲ್ಲಿದ್ದವರೆಲ್ಲರೂ ಭಯಗ್ರಸ್ತರಾಗಿದ್ದುದರಿಂದ ಯಾರೂ ನಗಲಿಲ್ಲ ಅವರವರ ಪಾಡು ಅವರವರಿಗಾಗಿತ್ತು. ನಾಯಿಗಳ ಬೊಬ್ಬೆಯೂ ಹಂದಿಯಬ್ಬರವೂ ನಿಂತು ಪುಟ್ಟಣ್ಣನ ಕರೆಯೂ ತಿಮ್ಮನ” ಓ” ಕೊಳ್ಳುವಿಕೆಯೂ ಕೇಳಿಸಲು, ಗಟ್ಟದಾಳುಗಳಿಗೆ ಹೋಗಲಿದ್ದ ಜೀವ ಬಂದಂತಾಗಿ, ಮೆಲ್ಲಮೆಲ್ಲನೆ ಪುಟ್ಟಣ್ಣ ಕರೆಯುತ್ತಿದ್ದಲ್ಲಿಗೆ ಹರಿದು ನಡೆದರು.

ಎಲ್ಲರೂ ಸೇರಿ ಗುಂಡಿನ ಹುಯಿಲನ್ನು ಹುಡುಕಿದರು. ಮೊದಲನೆ ಈಡು ಕಡಕಿನ ತೋಟಾದಾದ್ದರಿಂದ ಒಂದೆರಡು ಕಡಕುಗಳು ಗಿಡಗಳಿಗೆ ತಗುಲಿದ್ದುದು ಕಂಡುಬಂದಿತು. ಎರಡನೆ ಈಡು ಗುಂಡಿನದು. ಎಷ್ಟು ಅರಸಿದರೂ ಗುಂಡು ಯಾವ ಗಿಡಕ್ಕಾಗಲಿ ಮರಕ್ಕಾಗಲಿ ಬಡಿದಂತೆ ಕಾಣಲಿಲ್ಲ. ಬಹಳ ಹೊತ್ತು ಪರೀಕ್ಷೆ ಮಾಡಿದ ತರುವಾಯ ಗುಂಡು ಹಂದಿಗೆ ತಗುಲಿದೆ, ಆದರೆ ಅಪಾಯದ ಸ್ಥಳಕ್ಕೆ ಏಟುಬೀಳಲಿಲ್ಲವಾದ್ದರಿಂದ ಪ್ರಾಣಿ ಓಡಿಹೋಗಿದೆ ಎಂದು ನಿರ್ಧರಿಸಿದರು.

ಅಲ್ಲಿ ಚೆಲ್ಲಿದ್ದ ರಕ್ತವನ್ನು ನೋಡಿದ ಹಾಗೆಲ್ಲ ಸೋಮನಂತೂ ಬಾಯಿ ಬಾಯಿ ಬಿಟ್ಟು ಬೇಗುತ್ತಿದ್ದನು. ಅವನಿಗೆ ಮಾಂಸವೆಂದರೆ ಜೀವಕ್ಕಿಂತಲೂ ಬೆಲ್ಲವಾಗಿತ್ತು. ಅವನ ಡೊಳ್ಳಿಗೆ ನಿಜವಾದ ಕಾರಣ ಜ್ವರಗಡ್ಡೆಯಾಗಿದ್ದರೂ ಹಳ್ಳಿಯವರೆಲ್ಲ ಅವನು ತಿನ್ನುತ್ತಿದ್ದ ಮಾಂಸದ ಪ್ರಮಾಣವೇ ಅದಕ್ಕೆ ಕಾರಣವೆಂದು ಹೇಳುತ್ತಿದ್ದರು. ಅವನಿಗೂ ಕೂಡ  ತನಗೆ ಮಾಂಸದಲ್ಲಿದ್ದ ಅತ್ಯಾಶೆಯನ್ನು ಅಡಗಿಸಿಟ್ಟುಕೊಳ್ಳುವಷ್ಟು ಸಂಯಮ ಶಕ್ತಿಯಿರಲಿಲ್ಲ. ಹಿಂದೆ ಒಂದು ಸಾರಿ ಬೆಟೇಯಲ್ಲಿ ದೊಡ್ಡ ಕಡವೆಯೊಂದನ್ನು ಕೊಂದು ಹಸುಗೆ ಮಾಡುತ್ತಿದ್ದಾಗ, ಅವನ ಪಾಲಿಗೆ ಬಂದ ಮಾಂಸ ಸಾಲದೆಹೋಗಿ ಇನ್ನೊಬ್ಬನ ಪಾಲಿನಿಂದಲೂ ಒಂದಷ್ಟನ್ನು ಕದ್ದು, ಎಲ್ಲರ ನಿಂದೆಗೂ ಹಾಸ್ಯಕ್ಕೂ ಗುರಿಯಾಗಿದ್ದನು.

“ಈಗೇನು ಮಾಡೋದು, ಹೇಳಿ” ಎಂದನು ಪುಟ್ಟಣ್ಣ.

“ಸ್ವಲ್ಪ ದೂರ ಹೋಗಿ ನೋಡುವ. ನಾಯಿ ಬರಲಿಲ್ಲ” ಎಂದರು ಸೇರೆರಗಾರರು.

“ಹೌದು ಕಣ್ರಾ, ಅಲ್ಲೆಲ್ಲಾದ್ರೂ ಸತ್ತುಬಿದ್ದಿದ್ರೆ? ಒಂದು ಹಂದೀನೆ ದಂಡಾಗ್ತದಲ್ಲಾ! ಅದ್ರ ಜೀವ  ಉಳಿದ್ಹಾಂಗು ಆಗ್ಲಿಲ್ಲ, ನಮಗೆ ಸಿಕ್ಕಿದ್ಹಾಂಗೂ ಆಗ್ಲಿಲ್ಲ!”  ಎಂದನು ಬೈರ.

“ಹೌದೂ! ಇವತ್ತಿನ ಕೆಲಸಕ್ಕೆ ಹೊತ್ತಾದರೆ? ಗೌಡರು ನಮ್ಮನೇನು ಸುಮ್ಮನೆ ಬಿಡೋದಿಲ್ಲ” ಎಂದು ಪುಟ್ಟಣ್ಣ ಕೆಲಸದ ನೆನಪು ಮಾಡಿಕೊಡಲು ಎಲ್ಲರ ಮುಖವೂ ಪೆಚ್ಚಾಗಿ ನಿರುತ್ಸಾಹಿಗಳಾದರು.

ತಿಮ್ಮ “ಹಾಳ್ಹಂದಿ! ಇವತ್ತೇ ದಾರಿಗಡ್ಡ ಬರಾದೇ? ಗೌಡ್ರಾದ್ರೂ ಮನೇಲಿದ್ದಿದ್ರೆ ಕೇಳ್ ಬೈದಾಗಿತ್ತು.ನಾಳೆ ನಾಟಾ ಹೊರ್ತೀವಿ ಅಂತಾ. ಹಾಳಾಗಿ ಹೋಗ್ಲಿ, ಹೋಗಾನ ಬನ್ನಿ, ನಾಯಿ ಕರೀರಿ” ಎಂದನು ಹತಾಶಭಾವದಿಂದ.

ಎಲ್ಲರೂ ಮನಸ್ಸಿನಿಂದ ಒಪ್ಪಿಗೆಯನ್ನು ನಟಿಸಿದರು. ಪುಟ್ಟಣ್ಣ “ಕ್ರೂ! ಕ್ರೂ!” ಎಂದು ಗಟ್ಟಿಯಾಗಿ ನಾಯಿ ಕರೆಯತೊಡಗಿದನು.

ರಕ್ತವನ್ನೇ ಅಭೀಷ್ಟಕ ದೃಷ್ಟಿಯಿಮದ ನೋಡುತ್ತಿದ್ದ ಸೋಮನ ಎದೆಯಲ್ಲಿ ಸಂತಾಪದುರಿಯೆದ್ದು. ಕನಿಕರ ಹುಟ್ಟುವಂತೆ ಅಗಲವಾಗಿ ಬಾಯಿತೆರೆದು “ಅಯ್ಯಯ್ಯೋ ಒಡೆಯ, ಆ ಹಂದಿ ಬಿಟ್ಟುಹೋಪುದೇ? ಕಾಣಿನಿ ರಯ್ತ (ರಕ್ತ ಎಂಬುದಕ್ಕೆ) ಹ್ಯಾಂಗೆ ಕೋಡಿ ಹರಿದಿತ್ತು! ಹಂದಿ ಅಲ್ಲೇ ಸತ್ತು ಬಿದ್ದಿರಬೇಕು! ಒಂದು ಸ್ವಲ್ಪ ದೂರ ಹೋಗಿ ನೋಡಿಕೊಂಡು ಹೋಗುವ” ಎಂದು ಒದರಿದನು.

ಎಲ್ಲರ ಮನಸ್ಸೂ ಹಾಗೆಯೇ ಇತ್ತು. ಆದರೂ ಸೋಮನ ದಾಕ್ಷಿಣ್ಯಕ್ಕೋ ಎಂಬಂತೆ ರಕ್ತದ ಜಾಡನ್ನು ಹುಡುಕಿಕೊಂಡು ಹೊರಟರು. ನೆತ್ತರು ಕೆಲವೆಡೆಗಳಲ್ಲಿ ಹೆಚ್ಚಾಗಿ ಸೋರಿತ್ತು. ಮತ್ತೆ ಸ್ವಲ್ಪದೂರ ಏನೂ ಸೋರಿರಲಿಲ್ಲ. ಹಂದಿ ಓಡಲಾರದೆ ನಿಂತು ನಿಂತು ಹೋಗಿದೆ ಎಂಬುದೂ ತಿಳಿಯಿತು. ಅದು ನಿಂತೆಡೆಗಳಲ್ಲಿ ರಕ್ತ  ಸೋರಿ ಹೆಪ್ಪುಗಟ್ಟಿತ್ತು. ಹೀಗೆ ಮುಂದೆ ಮುಂದೆ ಹೋಗುತ್ತಿದ್ದಾಗಲೆ ಒಂದು ಈಡು ಕೇಳಿಸಿತು.

ಪುಟ್ಟಣ್ಣ “ಹೋಯ್, ನಮ್ಮ ಹಂದಿಗೇ ಯಾರಾದರೂ ಹೊಡೆದರೋ?” ಎಂದನು. ಅಷ್ಟರಲ್ಲಿ ನಾಯಿಗಳ ಕೂಗಾಟದ ಸದ್ದೂ ಬಹುದೂರದಲ್ಲಿ ಕೇಳಿಸಿತು ಹಾಗಾಯಿತು.

ಎಲ್ಲರೂ ಈಡು ಕೇಳಿಸಿತು ಕಡೆಗೆ ವೇಗವಾಗಿ ಧಾವಿಸಿದರು. ಮುಂದುವರಿದಂತೆ ನಾಯಿಗಳ ಕೂಗು ಹೆಚ್ಚು ಹೆಚ್ಚು ಸ್ಪಷ್ಟವಾಗಿ ಕೇಳಿ ಬಂದಿತು. ಮತ್ತೆಷ್ಟು ಬೇಗಬೇಗನೆ ನಡೆದರು.

ಸ್ವಲ್ಪದೂರ ಹೋದಮೇಲೆ ನಾಯಿಗಳ ಕೂಗು ಕೇಳಿಸಲಿಲ್ಲ; ಮನುಷ್ಯರ ಮಾತು ಕೇಳಿಸಿತು, ಸೇರೆಗಾರರು ಸುತ್ತಮುತ್ತಲೂ ತಿರುಗಿ ನೋಡಿ” ಹೋಯ್, ಪುಟ್ಟೇಗೌಡರೆ, ನಾಟಾ ಕಡಿದಲ್ಲಿಗೇ ಬಂದಿದ್ದೇವೆ” ಎಂದರು.

ಹೋಗಿ ನೋಡುತ್ತಾರೆ; ಸೀತೆಮನೆ ಸಿಂಗಪ್ಪಗೌಡರ ಮಗ ಕೃಷ್ಣಪ್ಪನೂ, ಅವರ ಆಳು ಕಿಲಿಸ್ತರ ಜಾತಿಯೂ, ಹತ್ತಿಪ್ಪತ್ತು ಜನಗಳೊಂದಿಗೆ ನಾಟಾ ರಕ್ಷಣೆಗೆ ಸಿದ್ಧರಾಗಿ ನಿಂತಿದ್ದಾರೆ! ಇವರ ನಾಯಿಗಳು ಅವರ ಸುತ್ತಲೂ, ನಡೆದ ಚೋರತನವನ್ನೋ ಅಥವಾ ಡಕಾಯಿತಿಯನ್ನೋ ಸೂಚಿಸಲೆಂಬಂತೆ, ಕಾತರತೆಯಿಮದ ಸುತ್ತಾಡುತ್ತಿವೆ! ಪುಟ್ಟಣ್ಣನನ್ನು ಕಂಡೊಡನೆ ಟೈಗರು ಓಡಿಬಂದು ಮೈಮೇಲೆ ಹಾರಿ ಹಾರಿ ಸಂತೋಷ ಪ್ರದರ್ಶನಮಾಡಿತು.