ಕೃಷ್ಣಪ್ಪನ ಭಯಂಕರ ಮರಣವಾರ್ತೆ ಹಳ್ಳಿಹಳ್ಳಿಗಳಲ್ಲಿಯೂ ಹಬ್ಬಿ, ಅನೇಕರಿಗೆ ಬೇಟೆಯ ವಿಚಾರದಲ್ಲಿ ಜುಗುಪ್ಸೆ ಹುಟ್ಟುವಂತೆ  ಮಾಡಿತು. ದಿನ ಬೆಳಗಾಯಿತೆಂದರೆ ಕೋವಿ ಹಿಡಿದುಕೊಂಡು ಕಾಡು ಹತ್ತುತ್ತಿದ್ದ ಮೃಗಯಾವ್ಯಸನಿಗಳು ಕೂಡ ಹೆದರಿ ಕಾಡಿಗೆ ಹೋಗುವುದನ್ನು ಕಡಮೆ ಮಾಡಿದರು. ತಾಯಿ ತಂದೆಗಳು ಮಕ್ಕಳಿಗೂ ಸತಿಯರು ಪತಿಯರಿಗೂ ಕೃಷ್ಣಪ್ಪನಿಗಾದ ಘೋರ ಘಟನೆಯನ್ನು ದೃಷ್ಟಾಂತವಾಗಿ ವಿವರಿಸಿ, ಬೇಟೆಗೆ ಹೋಗುವುದೇ ಬೇಡ ಎಂದು ನಿರೋಧಿಸಿದರು. ಎಲ್ಲಿ ಕೇಳಿದರೂ ಅದೇ ವಾರ್ತೆ; ಎಲ್ಲಿ ಆಲಿಸಿದರೂ ಅದೇ ವರ್ಣನೆ; ಎಲ್ಲರ ಬಾಯಲ್ಲಿಯೂ ಅದೇ ಮಾತು. ಹೆಂಗಸರು ಅಡುಗೆ ಮಾಡುತ್ತ, ಬತ್ತ ಕುಟ್ಟುತ್ತ, ತರಗು ಕಟ್ಟಿಗೆಗಳನ್ನು ಒಟ್ಟುಮಾಡುತ್ತ ಕೃಷ್ಣಪ್ಪನ ತಾಯಿತಂದೆಯರ ಶೋಕವನ್ನೇ ಕುರಿತು ಶೋಕಪೂರ್ಣವಾಗಿ ಮಾತಾಡುತ್ತಿದ್ದರು.  ಹಿರಿಯರಾದ ಗಂಡಸರು ಕೃಷ್ಣಪ್ಪನಿಗೆ ಬೇಟೆಯಲ್ಲಿ ಅತ್ಯಾಸೆಯಿದ್ದುದು ತಪ್ಪೆಂದೂ, ಎಂದಾದರೊಂದು ದಿವಸ ಹಾಗಾಗುತ್ತದೆಂಬುದು ಅವರಿಗೆ ಮೊದಲೇ ಗೊತ್ತಿತ್ತೆಂದೂ, ಬಾಳಲು  ಮನಸ್ಸಿರುವವರು ಯಾರಾದರೂ ಗಾಯದ ಹುಲಿಯ ಹಿಂದೆ ಹೋಗುತ್ತಾರೆಯೇ ಎಂದೂ, ಸಿಂಗಪ್ಪಗೌಡರಿಗೆ ಆ ವಯಸ್ಸಿನಲ್ಲಿ ಅಂಥ ಕಷ್ಟ ಬರಬಾರದಾಗಿತ್ತೆಂದೂ ವ್ಯಾಖ್ಯಾನ ಟೀಕೆಗಳನ್ನು ಮಾಡಿದರು. ರಕ್ತಪುಷ್ಟಿಯುಳ್ಳ ತರುಣರು ಹೆಚ್ಚು ವಿಮರ್ಶೆಗೆ ಹೋಗದೆ, ಕೃಷ್ಣಪ್ಪನ ಕೆಚ್ಚೆದೆಯನ್ನೂ ಸಾಹಸವನ್ನೂ ಜಾಕಿಯ ಸ್ವಾಮಿಭಕ್ತಿಯನ್ನೂ ಕೋವಿ ಕಟ್ಟಿದ ರೀತಿಯನ್ನೂ, ಹುಲಿ ಹಾರಿದ ರೀತಿಯನ್ನೂ, ಕೃಷ್ಣಪ್ಪ ಬದುಕಿದ್ದರೆ ಇಷ್ಟರಲ್ಲಿ ಮದುವಣಿಗನಾಗುತ್ತಿದ್ದನೆಂಬುದನ್ನೂ, ಹೆಣ್ಣಿನ ಪುಣ್ಯವೇ ಪುಣ್ಯವಾಗಿರುತ್ತಿತ್ತು ಎಂಬುದನ್ನೂ ಸಾಲಂಕಾರಿಕವಾಗಿ ಸ್ವಾರಸ್ಯವಾಗಿ ವರ್ಣಿಸಿವರ್ಣಿಸಿ ರಸಾಸ್ವಾದನೆ ಮಾಡಿದರು. ಚಿಕ್ಕ ಬಾಲಕರಂತೂ ಎಲ್ಲರ ಬಾಯಿಕಡೆಗೂ ಬಾಯಿ ತೆರೆದು ಆಲಿಸಿ ಆಲಿಸಿ, ಎಲ್ಲರಾಡಿದುದನ್ನೂ ತಮ್ಮ ಮನಬಂದಂತೆ ಮಿಶ್ರಮಾಡಿ, ತಮ್ಮದೇ ಒಂದು “ಭಾರತ ಕಥೆ” ಕಟ್ಟಿಬಿಟ್ಟರು.

ಅಂತೂ ಮೊದಮೊದಲು ಹಸಿ ಹೊಸನೆತ್ತಿರಿನಂತಿದ್ದ ಆ ವಾರ್ತೆ ದಿನ ಕಳೆದಂತೆ ಬರಬರುತ್ತ ಮಾಸಿ ಮೊಲ್ಲಗೆ ಹಳಸತೊಡಗುವುದರಲ್ಲಿಯೇ ಮತ್ತೊಂದು ಸುದ್ದಿ ಹಳ್ಳಿಗರ ಮನಸ್ಸನ್ನಾಕ್ರಮಿಸಿ, ಕಾಡುಬೆಂಕಿಯಂತೆ ಒಬ್ಬರಿಂದೊಬ್ಬರಿಗೆ ನೆಗೆನೆಗೆದು ಹರಡಿಕೊಂಡಿತು! ಚಂದ್ರಯ್ಯ ಗೌಡರಿಗೂ ಹೂವಯ್ಯ ಗೌಡರಿಗೂ ಮನಸ್ತಾಪ ಬಂದಿದೆಯಂತೆ; ಹೂವಯ್ಯಗೌಡರು ಮೈಸೂರಿಗೆ ಹೋಗುವುದಿಲ್ಲವಂತೆ; ಓದು ನಿಲ್ಲಿಸುತ್ತಾರಂತೆ; ಕಾನೂರು ಮನೆ ಪಾಲಾಗುತ್ತದಂತೆ; ನಾಗಮ್ಮ ಹೆಗ್ಗಡಿತಿಯವರು ಒಬ್ಬರಾದುದರಿಂದ ಹೂವಯ್ಯಗೌಡರು ತಮ್ಮ ಹಿಸ್ಸೆಗೆ ಬಂದ ಜಮೀನನ್ನು ತಾವೇ ಸಾಗುವಳಿ ಮಡಿಸುತ್ತಾರಂತೆ! ಹಿಂದಿನಿಂದಲೂ ನಾಡಿಗೊಂದು ಭೂಷಣವಾಗಿ ನಡೆದುಕೊಂಡು ಬಂದಿದ್ದ ದೊಡ್ಡ ಕುಟುಂಬ ಈಗ ಒಡೆಯುತ್ತದಂತೆ! ಮುತ್ತಳ್ಳಿ ಶ್ಯಾಮಯ್ಯಗೌಡರು, ಬಾಳೂರು ಸಿಂಗಯ್ಯಗೌಡರು, ನೆಲ್ಲಹಳ್ಳಿ ಪೆದ್ದೇಗೌಡರು, ಬೈದೂರು ಬಸವೇಗೌಡರು- ಎಲ್ಲರೂ ಸೇರಿ ಪಂಚಾಯಿತಿ ಮಾಡಿ ಹಿಸ್ಸೆಯಗದಂತೆ ಸಮಾಧಾನಮಾಡಲು “ಬಾ’ಳಪರ‍್ಯತ್ನಪಟ್ಟರಂತೆ.” ಆದರೆ ಚಂದ್ರಯ್ಯಗೌಡರು “ಖಂಡಿತ ಆಗಾದಿಲ್ಲಾ! ನನಗೂ ಅವನಿಗೂ ಸರಿಹೋಗಾದಿಲ್ಲಾ! ಮಳೆ ಹಿಡಿಯಾಕೆ ಮೊದಲೇ ಹಿಸ್ಸೆ ಆಗೇಬೇಕು” ಅಂತಾ ಹಟ ಹಿಡಿದಿದ್ದಾರಂತೆ. ಮುಂದಿನ ವಾರವೋ ಆ ಮುಂದಿನ ವಾರಮೋ ” ಹಿಸ್ಸೆ ಆಗಿ ಪಾರಿಕತ್ತಾಗ್ತದಂತೆ!”

ಸುದ್ದಿ ಕೆಲವರಿಗಂತೂ ಕೃಷ್ಣಪ್ಪನ ಘೋರ ಮರಣಕ್ಕಿಂತೂ ಹೆಚ್ಚಾದ ಕಳವಳಕ್ಕೆ ಕಾರಣವಾಯಿತು. ಕಾನೂರು ಮತ್ತು ಅದರ ನೆರೆಯ ಹಳ್ಳಿಗಳಲ್ಲಂತೂ ಒಂದು ಸಣ್ಣ ಮರಿಕ್ರಾಂತಿಯೆ ಕಾಲಿಡುವಂತೆ ತೋರುತ್ತಿತ್ತು. ಅದರಲ್ಲಿಯೂ ಕಾನೂರು ಚಂದ್ರಯ್ಯಗೌಡರ ಒಕ್ಕಲುಗಳಿಗೂ ಮತ್ತು ಕೂಲಿಯಾಳುಗಳಿಗೂ ಪುಡಿಸಾಲ ಕೊಟ್ಟಿದ್ದ ಇತರರ ಒಕ್ಕಲು ಮತ್ತು ಕೂಲಿಯಾಳುಗಳಿಗೆ, ಬ್ಯಾಂಕು ಪಾಪರೇಳುತ್ತದೆ ಎಂಬ ಸುದ್ದಿಯನ್ನು ಕೇಳಿದ ವರ್ತಕರಿಗಾಗುವ ತಲ್ಲಣಕ್ಕಿಂತಲೂ ಇಮ್ಮಡಿಯಾದ ತಲ್ಲಣವುಂಟಾಯಿತು. ಯಾವ ಯಾವ ಆಳುಗಳು ಯಾವ ಯಾವ ಒಕ್ಕಲುಗಳು ಯಾರ ಯಾರ ಹಿಸ್ಸೆಗೆ ಹೋಗುತ್ತಾರೋ? ಏನೇನಾಗುತ್ತದೆಯೋ? ತಮ್ಮ ದುಡ್ಡು ಮುಳುಗಿಹೋಗುತ್ತದೆಯೋ ಏನೋ? ಹೀಗೆಂದು ಮೊದಲೇ ತಿಳಿದಿದ್ದರೆ ಸಾಲ ಕೊಡುವ ’ಪಂಚೇತಿ’ಗೆ ಹೋಗುತ್ತಲೇ ಇರಲಿಲ್ಲ; ಹೇಗಾದರೂ ಮಾಡಿ ಹಿಸ್ಸೆಯಾಗುವುದಕ್ಕೆ ಮೊದಲೇ ಸಾಲ ವಸೂಲ್ಮಾಡಿಕೊಂಡುಬಿಟ್ಟರೆ ಇನ್ನು ಜನ್ಮಜನ್ಮಾಂತರಕ್ಕೂ ಈ ಸಾಲ ಕೊಡುವ ಗೋಳು ಬೇಡ; ಎಂದು ಮೊದಲಾಗಿ ಚಿಂತಿಸಿ ಕಾರ್ಯೋನ್ಮುಖರಾದರು.

ಹಾಗೆ ಕಾರ್ಯೋನ್ಮುಖರಾದವರಲ್ಲಿ ಕಳ್ಳಂಗಡಿಯವನೇ ಮೊದಲನೆಯವ ನಾಗಿದ್ದನು. ಅವನಿಗೆ ಕಾನೂರಿನಲ್ಲಿ ಇತರ ಹಳ್ಳಿಗಳಲ್ಲಿ ಇದ್ದಂತೆಯೆ ಅನೇಕ ಸಾಲದ ಕುಳಗಳಿದ್ದರು. ಅವರಲ್ಲಿ ಡೊಳ್ಳುಹೊಟ್ಟೆಯ ಬಾಡುಗಳ್ಳ ಸೋಮನೂ ಬೇಲರ ಬೈರ, ಅವನ ಹೆಂಡತಿ ಸೇಸಿ, ಅವನ ಮಗ ಗಂಗಹುಡುಗ ಇವರು ಮೂವರೂ, ಬೇಲರ ಸಿದ್ದನೂ, ಗಾಡಿದ ಹೋಡೆಯುವ ನಿಂಗನೂ, ಸೇರೆಗಾರ ರಂಗಪ್ಪಸೆಟ್ಟರ ಕಡೆಯ ಗಟ್ಟದಾಳುಗಳೂ ಸೇರಿದ್ದರು.

ಒಂದು ದಿನ ಕತ್ತಲೆಯಾಗುತ್ತಿದ್ದಾಗ ಕಳ್ಳಂಗಡಿಯವನು ಸೋಮನ ಬಿಡಾರಕ್ಕೆ ಬಂದನು. ಆ ಸುದ್ದಿಯನ್ನು ಇತರರಿಂದ ಕೇಳಿ ತಿಳಿದ ಸೋಮ ರಾತ್ರಿ ಬಹಳ ಹೊತ್ತಾಗುವವರೆಗೂ ಬಿಡಾರಕ್ಕೆ ಹೋಗದೆ ಹೊರಗಡೆ ಅವಿತುಕೊಂಡಿದ್ದನು. ಕಳ್ಳಂಗಡಿಯವನು ಸೋಮನನ್ನು ಅವನ ಬಿಡಾರದವರೆದುರು ಬಾಯಿಗೆ ಬಂದ ಹಾಗೆ ಶಪಿಸಿ, ಮರುದಿನ ಮತ್ತೆ ಬರುವುದಾಗಿ ಹೇಳಿ ಹೊರಟು ಹೋದನು. ಅವನು ಹೋದ ಸುದ್ದಿಯನ್ನು ಕೇಳಿ ಸದ್ಯಕ್ಕೆ ಗೆದ್ದೆ ಎಂದು ಹಿಗ್ಗುತ್ತ, ಸೋಮ ಬಿಡಾರಕ್ಕೆ ಬಂದು ಇನ್ನೂ ಚಾಪೆಯ ಮೇಲೆ ಕೂತಿರಲಿಲ್ಲ; ಅಷ್ಟರಲ್ಲಿ ಹೊರಗಡೆ ಪೊದೆಯಲ್ಲಿ ಅವಿತು ನಿರೀಕ್ಷಿಸುತ್ತಿದ್ದ ಕಳ್ಳಂಗಡಿಯವನ್ನು ಬಿಡಾರವನ್ನು ಪ್ರವೇಶಿಸಿ, “ನನ್ನ ಅಡಕೆ ಕತ್ತರಿ ಇಲ್ಲಿ ಬಿಟ್ಟು ಹೋಗಿದ್ದೆ” ಎಂದು ಹುಡುಕುವವನಂತೆ ನಟಿಸಿ ಸೋಮನನ್ನು ಕಂಡು “ಇಷ್ಟ್ಹೊತ್ತನಕ ಎಲ್ಲಿ ಹೋಗಿದ್ಯೊ? ಕಾದು ಕಾದು ಸಾಕಾಯ್ತಲ್ಲ ನನಗೆ! ನನ್ನ ಲಾಲ ತೀರಿಸ್ತೀಯೊ ಇಲ್ಲೊ, ಒಳ್ಳೇ ಮಾತಿಗೆ ಹೇಳು!” ಎಂದು ಸೋಮನೆದುರು ಚಾಪೆಯ ಮೇಲೆ ಕೂತುಬಿಟ್ಟನು. ತನ್ನ ಉಪಾಯಕ್ಕೆ ಮೀರಿದ ಉಪಾಯಗಾರನನ್ನು ಕಂಡು ಸೋಮ ಬೆಪ್ಪಾಗಿ “ಮಾರಾಯ, ಇಷ್ಟು ದಿನ ತಡೆದ, ಇನ್ನೆರಡು ದಿನಗಳ ಮಟ್ಟಿಗೆ ತಡೆ. ನಿನ್ನ ರುಣ ನಾನು ಯಾಕೆ ಇಟ್ಟುಕೊಳ್ಳಲಿ? ತೀರಿಸಿಹೋಪ” ಎಂದನು.

“ಅದೆಲ್ಲಾ ಇರಲಿ. ಯವಾಗಲೂ ನೀನು ನೀಂಗೇ ಹೇಳಾದು. ಇನ್ನು ಆಗೋದಿಲ್ಲ ಹಣಾ ನಿಲ್ಸಾಕೆ! ಗೌಡರ ಮನೇನೂ ಹಿಸ್ಸೆ ಆಗ್ತದಂತೆ?”

“ಆದರೇನಂತೆ ನನ್ನ ದುಡ್ಡು ನಾನು ಕೊಡುವುದಲ್ದಾ?”

“ಅದೆಲ್ಲಾ ಇರಲಿ. ಮೊದಲು ಕೊಟ್ಟು ಆಮೇಲೆ ಮಾತಾಡು.”

ಅಂತೂ ಬಹಳ ಹೊತ್ತು ಚರ್ಚೆಯಾಗಿ ಸೋಮ “ನಾಳೆ ಖಂಡಿತ ಕೊಡುತ್ತೀನಿ” ಎಂದು ಹೇಳಿದ ಮೇಲೆ ಕಳ್ಳಂಗಡಿಯವನು ಅಲ್ಲಿಂದ ಎದ್ದು ಹೋದನು.

ಸೋಮ ರಾತ್ರಿ ಮೂರು ಮೂರುವರೆ ಗಂಟೆಯಲ್ಲೆದ್ದು ಬಿಡಾರದ ಬಾಗಿಲನ್ನು ಮೆಲ್ಲನೆ ತೆರೆದು ಹೊರಟನು. ಬೆಳ್ದಿಂಗಳಿನಲ್ಲಿ ಮೆಲ್ಲಗೆ ನಡೆದು ಹಳೆಪೈಕದ ತಿಮ್ಮನ ಹುಲ್ಲುಮನೆಯ ಬಳಿಗೆ ಬಂದನು. ತಿಮ್ಮನ ನಾಯಿ ಬೊಗಳುತ್ತ ಬಳಿಗೆ ಬಂದು, ತನಗೆ ಪರಿಚಿತನಾಗಿದ್ದವನನ್ನು ಕಂಡು ಬಾಲವಳ್ಳಾಡಿಸಿತು. ಸೋಮ ಸದ್ದಿಲ್ಲದೆ ಕೋಳಿಯೊಡ್ಡಿಯ ಬಳಿಗೆ ಹೋಗಿ, ಅದರ ಬಾಗಿಲು ತೆರೆದು, ಒಡ್ಡಿಯೊಳಗೆ ಕೈಹಾಕಿ, ಕೈಯಂದಾಜಿನ ಮೇಲೆ ಒಂದು ದೊಡ್ಡ ಹುಂಜವನ್ನು ಹೊರಗೆಳೆದನು. ಕೋಳಿಗಳು ಕೊರ‍್ ಕೊರ‍್ ಎಂದು ಸ್ವಲ್ಪ ಸದ್ದು ಮಾಡಿದುವು. ಆದರೆ ಆ ಸದ್ದು ಗಾಢನಿದ್ರೆಯಲ್ಲಿದ್ದವರನ್ನು ಎಚ್ಚರಗೊಳಿಸುವಷ್ಟು ಗಟ್ಟಿಯಾಗಿರಲಿಲ್ಲ. ಸೋಮ ಒಡ್ಡಿಯ ಬಾಗಿಲನ್ನೂ ಹಾಕದೆ ಹುಂಜವನ್ನು ಬಗಲಿನಲ್ಲಿ ಬೆಚ್ಚಗೆ ಅವುಚಿಕೊಂಡು, ಅದರ ಕುತ್ತಿಗೆಯನ್ನು ಉಸಿರಾಡಬೇಕು ಕೂಗಬಾರದು ಅಷ್ಟರಮಟ್ಟಿಗೆ ಒತ್ತಿ ಹಿಡಿದುಕೊಂಡು, ನೆಟ್ಟಗೆ ಕಳ್ಳಂಗಡಿಗೆ ನಡೆದುಹೋದನು.

ಅಂತಹ ಕಳ್ಳವ್ಯಾಪಾರಗಳಿಂದಲೆ ಹೆಚ್ಚಾಗಿ ಹಣ ಸಂಪಾದನೆ ಮಾಡುತ್ತಿದ್ದ ಕಳ್ಳಂಗಡಿಯವನು ಮರುದಿನ ಸೋಮನನ್ನು ಸಾಲಕ್ಕಾಗಿ ಪೀಡಿಸಲಿಲ್ಲ.

ಬೆಳಿಗ್ಗೆ ಹಳೆಪೈಕದ ತಿಮ್ಮ ಒಡ್ಡಿಯ ಬಾಗಿಲು ತೆರೆದಿದ್ದುದನ್ನೂ ಹುಂಜ ಮಾಯವಾಗಿದ್ದುದನ್ನೂ ನೋಡಿ ಯಾರೋ ಕೋಳಿ ಕದ್ದಿದ್ದಾರೆಂದು ಕೂಗೆಬ್ಬಿಸಿದನು. ಸೋಮನೂ ಇತರರೂ ಅಲ್ಲಿಗೆ ಬಂದು ಯಾರು ಕದ್ದಿರಲಾರರೆಂದೂ ಹುಲಿಬೆಕ್ಕು ಮಾಡಿದ ಕೆಲಸವಿರಬೇಕೆಂದೂ ನಾನಾ ರೀತಿಯಾಗಿ ವಾದಿಸಿ ಬೋಧಿಸಿ ಸಮಾಧಾನಮಾಡಿದರು. ತಿಮ್ಮನ ಹೆಂಡತಿ ತನ್ನದ ಕೊಬ್ಬಿದ ಹುಂಜಕ್ಕಾಗಿ ಅತ್ತು ಕರೆದು, ಹುಲಿಬೆಕ್ಕನ್ನು ಬಾಯಿ ಸೋಲುವವರೆಗೂ ಶಪಿಸಿದಳು.

ಬೇಲರ ಬೈರನೂ, ತಾನು ಮತ್ತೆ ಬಗಿನಿ ಕಟ್ಟಿ ಕಳ್ಳುಮಾರಿ ಸಾಲ ತೀರಿಸುವುದಾಗಿ ಮಾತು ಕೊಟ್ಟು, ಕಳ್ಳಂಗಡಿಯವನನ್ನು ಸಮಾಧಾನಪಡಿಸಿದನು. ಅವನ ಹೆಂಡತಿ ಸೇಸಿಯೂ ತಾನು ’ಸರಿಪಾಲಿಗೆ’ ಸಾಕಿದ್ದ ಒಂದೆರಡು ಹೇಂಟೆಗಳ ಮರಿಗಳನ್ನು ಕಳ್ಳಂಗಡಿಯವನಿಗೇ ಮೀಸಲಾಗಿಟ್ಟು, ಸಾಕಿ, ದೊಡ್ಡದು ಮಾಡಿ, ಕೊಡುವುದಾಗಿ ಅಂಗಲಾಚಿ ಬೇಡಿಕೊಂಡು ಪಾರಾದಳು. ಗಂಗ ಹುಡುಗ ಮಾತ್ರ ಕಳ್ಳಂಗಡಿಯವನ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ತಿರುಗುತ್ತಿದ್ದನು. ಅವನು ಕಳ್ಳಂಗಡಿಯವನಿಗೆ ತಾನು ಕೊಡಬೇಕಾಗಿದ್ದ ಸಾಲದ ವಿಚಾರವಾಗಿ ತನ್ನ ಅಪ್ಪನಿಗೆ ತಿಳಿಯದಂತೆ ಸಂಚುಮಾಡಿಕೊಂಡಿದ್ದನು. ಅನೇಕ ಸಾರಿ ಅವರವರು ಬೆಳೆದಿದ್ದ ಹಿತ್ತಲು ಕೊಪ್ಪಲುಗಳಿಂದ ತರಕಾರಿ, ಬದನೆಕಾಯಿ, ಬಾಳೆಗೊನೆ, ಕುಂಬಳಕಾಯಿ, ತಿಂಗಳವರಕಾಯಿ ಇತ್ಯಾದಿಗಳನ್ನು ಕದ್ದು ಸಾಲ ತೀರಿಸಿದ್ದನು. ಕೆಲವು ಸಾರಿ ಗೌಡರ ಮನೆಯಿಂದ ಕತ್ತಿ ಗುದ್ದಲಿ ಮೊದಲಾದ ಹತಾರುಗಳನ್ನೂ ಕದ್ದು ಕಳ್ಳಂಗಡಿಗೆ ಸಾಗಿಸಿದ್ದನು. ಹೆಂಡ ಕುಡಿಯುವ ಚಪಲತೆ ಅವನನ್ನು ಅಷ್ಟು ಚಿಕ್ಕಂದಿನಲ್ಲಿಯೆ ಚೌರ್ಯದಲ್ಲಿ ಪ್ರವೀಣನನ್ನಾಗಿ ತರಬಿಯತ್ತು ಮಾಡಿದ್ದಿತು.

ಹುಡುಗ ತನ್ನ ಕಣ್ಣಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದ್ದಾನೆಂದು ತಿಳಿದಕೂಡಲೆ ಕಳ್ಳಂಗಡಿಯವನಿಗೆ ರೇಗಿ, ಆ ವಿಚಾರವನ್ನು ಬೈರನಿಗೆ ತಿಳಿಸಿದನು. ಅದನ್ನು ಕೇಲಿದ ಕೂಡಲೆ ಬೈರನಿಗೆ ಸಿಡಿಲು ಬಡಿದಂತಾಯಿತು.  ತನ್ನ ಮಗನು ತನಗಿಂತಲೂ ಗಟ್ಟಿಗನಾಗಿ, ಕಳ್ಳಂಗಡಿಯಲ್ಲಿ ಸ್ವತಂತ್ರವಾಗಿ ಸಾಲಮಾಡಿದ್ದಾನೆಂದು ಅವನು ಕನಸಿನಲ್ಲಿಯೂ ಊಹಿಸಿರಲಿಲ್ಲ. ತನ್ನ ಮಗನನ್ನು  ಹಿಡಿದುಕೊಂಡು ಬಂದು ಕಳ್ಳಂಗಡಿಯವನೆದುರು ಚೆನ್ನಾಗಿ ಹೊಡೆದನು. ಹಾಗೆ ಮಾಡುವುದರಿಂದ ಅಂಗಡಿಯವನಿಗೆ ತೃಪ್ತಿಯಾಗಿ ಸುಮ್ಮನೆ ಹೋಗುವನೆಂದು ತಿಳಿದಿದ್ದನು. ಆದರೆ ಅದು ತಪ್ಪಾಯಿತು. ಅಂಗಡಿಯವನು ಸಾಲವನ್ನು ಕೇಳದೆ ಬಿಡಲಿಲ್ಲ. ಬೈರನಿಗೆ ರೇಗಿ “ಸಣ್ಣ ಸಣ್ಣ ಹುಡುಗರು ಮಕ್ಕಳಿಗೆಲ್ಲ ಸಾಲ ಕೊಡಾಕೆ ಹೇಳ್ದೋರು ಯಾರು ನಿಮಗೆ? ನೀವೆ ಏನಾದರೂ ಮಾಡಿ ಸಾಲ ವಸೂಲ್ಮಾಡಿಕೊಳ್ಳಿ. ನನ್ಹತ್ರ ಹೆಳ್ಬ್ಯಾಡಿ” ಎಂದುಬಿಟ್ಟನು.

ಕಳ್ಳಂಗಡಿಯವನು ಗಂಗನನ್ನು ಹಿಡಿದುಕೊಂಡು ಸಾಲ ಕೊಡುತ್ತೀಯೋ ಇಲ್ಲವೋ ಎಂದು ಜೋರು ಮಾಡಿದನು. ಗಂಗ ಅವನನ್ನು ಬಾ ಎಂದು ಕಾನೂರು ಮನೆಯ ಸಮೀಪದಲ್ಲಿದ್ದ ಒಂದು ಕಾಡಿಗೆ ಕರೆದುಕೊಂಡು ಹೋಗಿ, ಮಣ್ಣು ಇನ್ನೂ ಹಸಿಹಸಿಯಾಗಿದ್ದ ಒಂದು ಸ್ಥಳವನ್ನು ತೋರಿದನು. ಇಬ್ಬರೂ ಸೇರಿ ಅಗೆದು ನೋಡಲು ನಾಲ್ಕಾರು ಕೆಲಸದ ಕತ್ತಿಗಳು, ಎರಡು ಹಿತ್ತಾಳೆ ಚೊಂಬುಗಳು, ಒಂದು ಹಾರೆ, ಒಂದು ಗುದ್ದಲಿ, ಕೆಲವು ನೇಗಿಲ ಕುಳಗಳು ಸಿಕ್ಕಿದುವು.

“ಯಾರೋ ಹುಗಿದಿಟ್ಟಿದ್ದು ಇವನ್ನೆ?” ಎಂದು ಕಳ್ಳಂಗಡಿಯವನು ಕೇಳಿದನು.

“ಗಾಡಿ ನಿಂಗಯ್ಯ ಕಣ್ರೋ!”

“ನಿಂಗೆ ಹ್ಯಾಂಗೆ ಗೊತ್ತಾಯ್ತು?”

“ನಾ ಚಿಟ್ಟುಕೋಳಿಗೆ ಸೆಬೆ ಒಡ್ಡಿದ್ದೆ. ನೋಡ್ಕೊಂಡು ಹೋಗಾನಾ ಅಂತ ಬಂದೆ. ನಿಂಗಯ್ಯ ಇಲ್ಲಿ ಮಣ್ಣು ಅಗೀತಿದ್ರು. ನಾನು ಅಡಕ್ಕೊಂಡು ನೋಡ್ದೆ!”

“ನೀ ನೋಡಿದ್ದು ಅವರೀಗೆ ಗೊತ್ತೇನು?”

“ಇಲ್ಲ”

“ಹಾಂಗಾದ್ರೆ ಸುಮ್ಮನಿರು. ಯಾರಿಗೂ ಹೇಳ್ಬೇಡ. ನಿಂಗೆಷ್ಟು ಬೇಕೋ ಅಷ್ಟು ಕಳ್ಳು ಕೊಡ್ತೀನಿ.”

“ದೇವ್ರಾಣೆಗೂ ನಾ ಯಾರು ಹತ್ರಾನೂ ಪರ್ಸ್ತಾಪ ಎತ್ತಾದಿಲ್ಲ” ಎಂದು ಗಂಗಹುಡುಗ ಹಿಗ್ಗಿ ಹಿರಿಹಿರಿಯಾಗಿ ಹೇಳಿದನು.

ಅಂಗಡಿಯವನು ತಾನು ಕೆಲವು ಸಾಮಾನು ಹೊತ್ತುಕೊಂಡು, ಗಂಗನ ಹತ್ತಿರ ಕೆಲವನ್ನು ಹೊರಿಸಿಕೊಂಡು ಅಂಗಡಿಗೆ ಹೋದನು. ಅವತ್ತು ಗಂಗನಿಗೆ ಒಣಗಿದ ಮೀನು ಮತ್ತು ಕಳ್ಳು ಹೆಂಡಗಳ ಹುಟ್ಟಿದ ಹಬ್ಬವಾಯಿತು!

ಗಾಡಿ ಹೊಡೆಯುವ ನಿಂಗ ಆ ಸಾಮಗ್ರಿಗಳನ್ನು ಹೂತಿಟ್ಟುದೇನೊ ನಿಜ. ಆದರೆ ಅವು ಕಳವು ಮಾಲಾಗಿರದೆ ಅವನವೇ ಆಗಿದ್ದುವು. ಅವನು ತನ್ನ ಹೆಂಡತಿ ಬದುಕಿದ್ದಾಗ ಬೇರೆ ಸಂಸಾರ ಹೂಡಿದ್ದ ಕಾಲದಲ್ಲಿ ಆ ಸಾಮಗ್ರಿಗಳನ್ನೆಲ್ಲಿ ಸ್ವತಃ ಸಂಪಾದಿಸಿದ್ದನು. ಹೆಂಡತಿ ತೀರಿಕೊಂಡ ಮೇಲೆ ಒಕ್ಕಲುತನವನ್ನು ಬಿಟ್ಟು ಮನೆಯ ಆಳಾಗಿ ಗಾಡಿಹೊಡೆಯಲು ನಿಂತನು. ಆದರೂ ತನ್ನ ಸಾಮಾನುಗಳನ್ನು ಮನೆಯ ಅಟ್ಟದ ಒಂದು ಮೂಲೆಯಲ್ಲಿ ಜೋಪಾನಗೊಳಿಸಿದ್ದನು. ಈಗ ಮನೆ ಪಾಲಾಗುವ ಗಲಾಟೆಯಲ್ಲಿ ತನ್ನ ವಸ್ತುಮೊಡವೆಗಳೂ ಎಲ್ಲಿ ಹಂಚಿಕೆಗೆ ಸೇರಿಬಿಡುತ್ತವೆಯೋ ಎಂಬ ಭಯದಿಂದ ಅವುಗಳನ್ನು ಅಲ್ಲಿ ಇಲ್ಲಿ ಹೂಳಿಡತೊಡಗಿದನು.

ಮನೆ ಹಿಸ್ಸೆಯಾಗುತ್ತದೆ ಎಂಬುದನ್ನು ಕೇಳಿ ಆಳು ಒಕ್ಕಲುಗಳೆಲ್ಲ ಹೀಗೆ ನಾನಾ ವ್ಯೂಹಸನ್ನಾಹಗಳಲ್ಲಿ ತೊಡಗಿದ್ದಾಗ ಮನೆಯ ಜನರೇನು ಸುಮ್ಮನಿರಲಿಲ್ಲ. ಅವರೂ ತಮ್ಮ ತಮ್ಮ ಸೊಂತ ಒಡವೆ ವಸ್ತುಗಳನ್ನು ಮಾತ್ರವಲ್ಲದೆ ಎಲ್ಲರ ಪಾಲಿಗೂ ಸೇರಬೇಕಾಗಿದ್ದವುಗಳನ್ನೂ ಭದ್ರಪಡಿಸಿಕೊಳ್ಳುವುದರಲ್ಲಿ ತೊಡಗಿದ್ದರು. ಸುಬ್ಬಮ್ಮ, ನಾಗಮ್ಮ ಇವರು ತಮ್ಮ ಮದುವೆಯ ಕಾಲದಲ್ಲಿ ಬಳುವಳಿಯಾಗಿ ತವರುಮನೆಯವರು ಕೊಟ್ಟವುಗಳೆಂದು ಹೇಳಿಕೊಂಡು ಅನೇಕ ಪಾತ್ರೆ ಪದಾರ್ಥಗಳನ್ನು ತಮ್ಮ ತಮ್ಮ ಸ್ವಂತ ಕೋಣೆಗಳಲ್ಲಿ ತುಂಬಿಕೊಂಡರು. ಅವರನ್ನು ಅನುಸರಿಸಿ ಪುಟ್ಟಮ್ಮ, ವಾಸು  ಇಬ್ಬರೂ ತಮಗೆ ಬೇಕಾದ ವಸ್ತುಗಳನ್ನು ‘ಸ್ವಂತ’ ಮಾಡಿಕೊಂಡರು. ಚಂದ್ರಯ್ಯಗೌಡರೂ, ಸೇರೆಗಾರ ರಂಗತಪ್ಪಸೆಟ್ಟರೊಡನೆ ಗುಟ್ಟಾಗಿ ಮಾತಾಡಿ, ಹಿಸ್ಸೆಯೆಲ್ಲ ಪೂರೈಸಿದ ಕೆಲವು ದಿನಗಳ ಮೇಲೆ ತಮಗೇ ವಾಪಸು ಕೊಡಬೇಕೆಂದು ಸಂಚುಮಾಡಿಕೊಂಡು. ಮನೆಯ ಆಸ್ತಿಗೆ ಸೇರಿದ್ದ ಕೆಲವು ಬೆಲೆಯುಳ್ಳ ಚಿನ್ನದಾಭರಣಗಳನ್ನೂ ಕೆಲವು ಎತ್ತು ದನಕರುಗಳನ್ನೂ ಅತ್ಯಂತ ಅಲ್ಪ ಕ್ರಯಕ್ಕೆ ಮಾರಿದರು.

ಈ  ಗಡಿಬಿಡಿಯಲ್ಲಿ ಚಂದ್ರಯ್ಯಗೌಡರ ಮನಸ್ಸೆಲ್ಲಾ ಹಿಸ್ಸೆಯ ಕ್ರಮದ ಕಡೆಗೂ, ತಾನು ‘ಸ್ವಯಾರ್ಜಿತ’ವಾಗಿ ಸಂಪಾದಿಸಿದ್ದೆಂದು ವಾದಿಸಿ ಯಾವ ಯಾವ ಉತ್ತಮವಾದ ಗದ್ದೆತೋಟಗಳನ್ನು ಲಬಟಾಯಿಸಿಕೊಳ್ಳಬೇಕೆಂಬ ಹಂಚಿಕೆಯ ಕಡೆಗೂ, ಹೇಗಾದರೂ ಮಾಡಿ ಗಟ್ಟಿಮುಟ್ಟಾದ ಜೀತದಾಳುಗಳನ್ನೆಲ್ಲ ತನ್ನ ಹಿಸ್ಸೆಗೆ ಸೇರಿಸಿಕೊಳ್ಳಬೇಕೆಂಬುದರ ಕಡೆಗೂ ಹೋಗಿದ್ದುದರಿಂದ ಸುಬ್ಬಮ್ಮನಿಗೆ ಅನುದಿನವೂ ಒದಗುತ್ತಿದ್ದ ಕೋಟಲೆ ಸ್ವಲ್ಪ ಕಡಮೆಯಾಗಿತ್ತು.