ಓಬಯ್ಯ ಜನ್ಮವೆತ್ತಿದಾಗ ಅಣ್ಣಯ್ಯಗೌಡರು ನೆಮ್ಮದಿಯಾಗಿ ಬಾಳುವ ಸಂಸಾರಿಯಾಗಿದ್ದರು. ಕೊಟ್ಟಿಗೆಯಲ್ಲಿ ದನಕರು, ಕಣಜದಲ್ಲಿ ಬತ್ತ, ಪೆಟ್ಟಿಗೆಯಲ್ಲಿ ಒಡವೆ ವಸ್ತು, ದೇಹದಲ್ಲಿ ಬಲ. ಹೃದಯದಲ್ಲಿ ಹರುಷ, ಹಳ್ಳಿಯವರ ಗೌರವ ಸ್ನೇಹ-ಎಲ್ಲವೂ ಅವರಿಗಿದ್ದುವು. ಓಬಯ್ಯ ಸಾಧಾರಣ ಶ್ರೀಮಂತರ ಮಕ್ಕಳಂತೆಯೆ ಬೆಳೆದನು. ತನ್ನ ತಾಯಿ ಸಾಯುವಾಗ ಅವನು ತಕ್ಕಮಟ್ಟಿಗೆ ಮನೆಯ ಕೆಲಸಗಳನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತ ತಂದೆಗೆ ಅಚ್ಚುಮೆಚ್ಚಾಗಿದ್ದನು. ಗದ್ದೆ ತೋಟಗಳು ಅವನ ಗೆಯ್ಮೆಯಿಂದಲೆ ಊರ್ಜಿತವಾಗಿದ್ದುವೆಂದು ಎಲ್ಲರೂ ಹೇಳುತ್ತಿದ್ದರು. ಎಂದು ಅಣ್ಣಯ್ಯಗೌಡರು ಎಂಟುನೂರು ರೂಪಾಯಿ ತೆರ ತೆತ್ತು ಮೂರನೆ ಮದುವೆ ಮಾಡಿಕೊಂಡರೋ ಅಂದಿನಿಂದ ಓಬಯ್ಯನ ಮನಸ್ಸು ಮುರಿಯತೊಡಗಿತು. ತಂದೆ ಮತ್ತೆ ಮದುವೆ ಮಾಡಿಕೊಳ್ಳುವುದರಲ್ಲಿ ಅವನಿಗೆ ಸಹನೆಯಿರಲಿಲ್ಲ. ಅದರಲ್ಲಿಯೂ ಎಂಟುನೂರು ರೂಪಾಯಿ ತೆರ ತೆರುವುದು ಅವನಿಗೆ ಸಂಸಾರ ವಿನಾಶಕರವಾಗಿ ತೋರಿತು. ಮಲತಾಯಿಯೊಬ್ಬಳು ಬರುವುದೂ ಅವನಿಗೆ ಅನಿಷ್ಟವಾಗಿತ್ತು. ಅಡುಗೆ ಮಾಡಿ ಹಾಕುವುದಕ್ಕೆ ಹೆಣ್ಣು ಬೇಕಾಗಿದ್ದರೆ ತನಗೇ ಏಕೆ ಒಂದು ಮದುವೆ ಮಾಡಬಾರದಾಗಿತ್ತು? ತನಗಾದರೆ ಕಡಮೆ ತೆರಕ್ಕೇ ಹೆಣ್ಣು ದೊರೆಯುತಿತ್ತಲ್ಲ!

ತಂದೆಯ ತೃತೀಯ ವಿವಾಹದ ಕಾಲದಿಂದ ಆತನ ಪರವಾಗಿಯೂ ಮನೆಗೆಲಸದಲ್ಲಿಯೂ ಉದಾಸೀನನಾಗಿದ್ದ ಓಬಯ್ಯ, ಆತನು ಒಂಬೈನೂರು ರೂಪಾಯಿ ತೆರ ತೆತ್ತು ನಾಲ್ಕನೆ ಮದುವೆ ಮಾಡಿಕೊಳ್ಳಲು, ಸಂಪೂರ್ಣ ವಿರೋಧಿಯಾಗಿ ವರ್ತಿಸಲಾರಂಭಿಸಿದನು. ಯುವಕನಾಗಿದ್ದ ತನಗೆ ಸುಲಭವಾಗಿ ಮದುವೆ ಮಾಡುವುದನ್ನು ಬಿಟ್ಟು. ವಯಸ್ಸು ಹೋದ ತಂದೆ ಅಷ್ಟೊಂದು ಹಣವನ್ನು ತೆರವಾಗಿ ತೆತ್ತು ತಾನೇ ಮದುವೆಯಾದುದು ಮಗನ ಈರ್ಷ್ಯಾಕೋಪವೈರಗಳಿಗೆ ಕಾರಣವಾಯಿತು. ತಾನು ಕಷ್ಟಪಟ್ಟು ಮುಂದಿನ ಸುಖಕ್ಕೆಂದು ದುಡಿದುದನ್ನಲ್ಲ ಅವಿವೇಕಿಯಾದ ತಂದೆ ದುಂದುವೆಚ್ಚ ಮಾಡಿದರೆ ಯಾವ ಮಗನು ತಾನೆ ಸಹಿಸಿಯಾನು? ಅಂದಿನಿಂದ ಅಣ್ಣಯ್ಯಗೌಡರಿಗೆ ಕಾನೂರು ಚಂದ್ರಯ್ಯಗೌಡರಲ್ಲಿ ಸಾಲ ಬೆಳೆಯುತ್ತ ಹೋಯಿತು. ಹುಟ್ಟುವಳಿ ಇಳಿಯುತ್ತ ಹೋಯಿತು. ಯುವಕನಾಗಿದ್ದರೂ ಮದುವೆಯಿಲ್ಲದೆ ತಂದೆಗೆ ವಿರೋಧಿಯಾಗಿದ್ದ ಮಗನು ನಾನಾವಿಧದಲ್ಲಿ ದುಂದುವೆಚ್ಚ ದುರಾಚಾರಗಳಿಗೆ ಕೈಹಾಕಿದನು. ಅಣ್ಣಯ್ಯಗೌಡರು ಮನೆಯಲ್ಲಿ ಮೊದಲಿನಿಂದಲೂ ಹೆಂಡ ಮಾಡಿಕೊಂಡು ಕುಡಿಯುತ್ತಿದ್ದರು. ಆದರೆ ಹದ್ದುಮೀರಿ ಹೋಗುತ್ತಿರಲಿಲ್ಲ. ಮನೆಯ ಮಮತೆ ಕೊನೆಗಂಡಮೇಲೆ ಓಬಯ್ಯ ಹೊರಗೆ ಹೋಗಿ ಕಳ್ಳು ಸಾರಾಯಿಗಳನ್ನು ಕುಡಿಯಲು ಮೊದಲು ಮಾಡಿದನು. ಅದರ ವೆಚ್ಚಕ್ಕಾಗಿ  ಅಡಕೆ ಬತ್ತ ಮೊದಲಾದ ಪದಾರ್ಥಗಳನ್ನು ಮನೆಯಿಂದ ಗುಟ್ಟಾಗಿ ಸಾಗಿಸುತ್ತಿದ್ದನು. ಶೇಂದಿ ಅಂಗಡಿಯಲ್ಲಿಯೂ ಹಳೆಪೈಕದ ತಿಮ್ಮನಲ್ಲಿಯೂ ಸಾಲವಾಯಿತು. ಅದನ್ನು ತೀರಿಸಲು ಒಡವೆ ವಸ್ತುಗಳನ್ನೂ ಕದ್ದೊಯ್ದನು. ಕಡೆಗೆ ಮದ್ಯಪಾನದ ಜೊತೆಗೆ ಕಾಮಿನೀಪ್ರಣಯವೂ ಅಕಸ್ಮಾತ್ತಾಗಿ ಲಭಿಸಿದುದು, ಅಭ್ಯಾಸವಾಗಿ, ಹವ್ಯಾಸವಾಗಿ ಪರಿಣಮಿಸಿತು.

ಅವನು ಒಮ್ಮೆ ಕಾನೂರಿನ ಬಳಿಯ ಕಾಡಿನಲ್ಲದ್ದ ಒಂದು ಹಣ್ಣಿನ ಮರಕ್ಕೆ ” ಮರಸು” ಕೂರಲು ಹೋಗಿದ್ದನು. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಕಾರ್ಮುಗಿಲೆದ್ದು ಆಕಾಶವನ್ನೆಲ್ಲಾ ತುಂಬಿತು. ಬೆಳ್ದಿಂಗಳು ಸಂಪೂರ್ಣವಾಗಿ ಕಣ್ಮರೆಯಾಯಿತು. ಬಿರುಗಾಳಿ ಬೀಸಿತು. ಸಿಡಿಲು ಮಿಂಚು ಜೋರಾಯಿತು. ಮಳೆ ಬರುತ್ತದೆಂದು ಹೆದರಿ ಮರದ ಮೇಲಿದ್ದ ಅಟ್ಟಣೆಯಿಂದ ಕೆಳಗಿಳಿದು ಮನೆಯ ಕಡೆಗೆ ಹೊರಟನು. ಸ್ವಲ್ಪದೂರ ನಡೆಯುವುದರೊಳಗೆ ದೊಡ್ಡ ದೊಡ್ಡ ಹನಿಗಳು ಪಟಪಟನೆ ಬೀಳತೊಡಗಿದುವು, ಎರಡು ಫರ್ಲಾಂಗುಗಳ ದೂರದಲ್ಲಿ ಕಾನೂರು ಸೇರೆಗಾರ ರಂಗಪ್ಪಸೆಟ್ಟರ ಗಟ್ಟದಾಳುಗಳ ಬಿಡಾರಗಳಿದ್ದುದು ನೆನಪಿಗೆ ಬಂದು, ಆಕಡೆಗೆ ವೇಗವಾಗಿ ನಡೆದನು. ಅಷ್ಟರಲ್ಲಿ ಮಳೆ ಉನ್ಮತ್ತ ರಭಸದಿಮದ ಆಲಿಕಲ್ಲುಗಳನ್ನು ಬೀರುತ್ತ ಸುರಿಯತೊಡಗಿತು. ಓಬಯ್ಯ ಕೋವಿಯನ್ನು ಹೆಗಲಮೇಲೆ ಹೊತ್ತುಕೊಂಡು ಓಡಿದನು. ಎಲ್ಲ ಬಿಡಾರಗಳಿಂದಲೂ ಸ್ಲಲ್ಪದೂರ ಪ್ರತ್ಯೇಕವಾಗಿ, ಪ್ರಶಸ್ತವಾಗಿದ್ದ ಒಂದು ಬಿಡಾರದಲ್ಲಿ ದೀಪ ಉರಿಯುತ್ತಿದ್ದುದು ಅವನ ಕಣ್ಣಿಗೆ ಬಿದ್ದು, ಅದರೊಳಗೆ ನುಗ್ಗಿದನು.

ಅದು ಸೇರೆಗಾರ ರಂಗಪ್ಪಸೆಟ್ಟರ ಪ್ರೇಯಸಿ ಗಂಗೆಯ ಬಿಡಾರವಾಗಿತ್ತು. ಸೆರೆಗಾರರು ಸಾಧಾರಣವಾಗಿ ರಾತ್ರಿಗಳನ್ನೆಲ್ಲ ಆ ಬಿಡಾರದಲ್ಲಿಯೆ ಕಳೆಯ ಬೇಕಾಗಿದ್ದುದರಿಂದ ಗಂಗೆಗೆ ಇತರ ಆಳುಗಳಿಗಿಂತಲೂ ಹೆಚ್ಚಾಗಿ ಎಂದರೆ, ಎರಡು ಅಂಕಣದಷ್ಟು ಅಗಲದ ಬಿಡಾರವನ್ನು ಉಳಿದೆಲ್ಲರ ಬಿಡಾರಗಳಿಗಿಂತಲೂ ಒಂದಿಷ್ಟು ಚೆನ್ನಾಗಿ ಕಟ್ಟಿಸಿಕೊಟ್ಟಿದ್ದರು.

ಸಾಲಂಕೃತಳಾದ ಗಂಗೆ ಸೇರೆಗಾರರಿಗಾಗಿ ಕಾಯುತ್ತಿದ್ದಳು. ಏಕೆಂದರೆ ಅವರ ಊಟಗೀಟಗಳೆಲ್ಲ ಚಂದ್ರಯ್ಯಗೌಡರ ಮನೆಯಲ್ಲಿಯೆ ನಡೆಯುತ್ತಿತ್ತು. ಅವರ ಮನೆಯೆ ಸೇರೆಗಾರರಿಗೆ ಮುಖ್ಯವಾಸವೂ ಆಗಿತ್ತು. ಗಂಗೆಯ ಬಿಡಾರ ರಾತ್ರಿಯ ” ಉಪವಾಸ” ಮಾತ್ರವಾಗಿತ್ತು. ಸೆಟ್ಟರು ರಾತ್ರಿಯೂಟ ಪೂರೈಸಿಕೊಂಡು ಗೌಡರೊಡನೆ ಮಾತುಕತೆಯಾಡಿದ ಮೇಲೆ ಉಳಿದ ಬಿಡಾರಗಳಲ್ಲಿ ಆಳುಗಳೆಲ್ಲರೂ ನಿದ್ದೆ ಹೋದ ತರುವಾಯ ಸದ್ದಲ್ಲದೆ ಗಂಗೆಯ ಬಿಡಾರಕ್ಕೆ ಬರುವುದು ವಾಡಿಕೊಯಾಗಿತ್ತು. ಆ ದಿನವೂ ಗಂಗೆ ತನ್ನೂಟ ಮುಗಿದಮೇಲೆ ” ವಾಸಕಸಜ್ಜಿಕೆ” ಯಾಗಿ ಕಾಯುತ್ತಿದ್ದಳು. ಮೋಡ ಮುತ್ತಿ, ಸಿಡಿಲು ಮಿಂಚು ತೊರಲು ಅವಳಿಗೆ ಗಾಬರಿಯಾಯಿತು. ಪ್ರಿಯನು ಬರುತ್ತಾನೋ ಇಲ್ಲವೋ ಎಂದು. ಅಷ್ಟರಲ್ಲಿಯೆ ಮಳೆಯೂ ಭರದಿಂದ ಸುರಿಯತೊಡಗಿತು. ಆಕೆ ಆಸೆಗಟ್ಟು ನಿಟ್ಟುಸಿರುಬಿಟ್ಟಳು. ಅಷ್ಟರಲ್ಲಿ ಯಾರೋ ಹೊರಗಡೆ ಬಿಡಾರದ ತಡಿಕೆಯ ಬಾಗಿಲನ್ನು ತಟ್ಟಿದರು, ಉತ್ಕಂಠಿತೆಯಾದ ಗಂಗೆ ಬಾಗಿಲು ತೆರೆದು ನಿಕ್ಕುಳಿಸಿ ನೋಡುತ್ತಾಳೆ ಸೇರೆಗಾರರಲ್ಲ; ಕೆಳಕಾನೂರು ಅಣ್ಣಯ್ಯಗೌಡರ ಮಗ ಓಬಯ್ಯಗೌಡರು! ಗಂಗೆ ಹಾಕಿದ ಚಾಪೆಯ ಮೇಲೆ ಓಬಯ್ಯ ಕುಳಿತು, ಓಡಿಬಂದ ಆಯಾಸವನ್ನು ಪರಿಹರಿಸಿಕೊಂಡು, ಮುಖದಮೇಲಿದ್ದ ಹನಿಗಳನ್ನು ಒರಸಿ ಕೊಂಡನು; ಗಂಗೆ ಪ್ರಶ್ನೆಗೆ ಉತ್ತರವಾಗಿ ತಾನು ಅಲ್ಲಿಗೆ ಬಂದುದಕ್ಕೆ ಕಾರಣವನ್ನೂ ಹೇಳಿದನು. ಹೊರಗಡೆ ಮಳೆ, ಗಾಳಿ, ಮಿಂಚು, ಸಿಡಿಲು ಭಯಂಕರವಾಗಿತ್ತು. ಗಂಗೆ ಸೆಟ್ಟರ ಆಗಮನದ ಆಸೆಯನ್ನು ಸಂಪೂರ್ಣವಾಗಿ ತೊರೆದುಬಿಟ್ಟಳು. ಓಬಯ್ಯ ಬಂದುದೂ ಆಕೆಗೆ ಸುಕೃತವಾಗಿಯೆ ತೋರಿತು. ಗಂಗೆಯ ಕಣ್ಣಿಗೆ ಯುವಕನು ಅಕ್ಷತವಾದ ರಸಾಲಫಲದಂತೆ ಕಾಣಿಸಿದನು. ಪ್ರಣಯ ವಿದಗ್ಧಯಾಗಿದ್ದ ಆಕೆಗೆ ಮುಗ್ದನಾದೊಬ್ಬ ಯುವಕನನ್ನು ತನ್ನ ಬಲೆಗೆ ಬೀಳುವಂತೆ ಮಾಡುವುದು ಅಷ್ಟೇನೂ ಸಾಹಸವಾಗಿ ಕಾಣಲಿಲ್ಲ. ಓಬಯ್ಯನೂ ಅಷ್ಟೇನೂ ವೈರಾಗ್ಯದ ಸ್ಥಿತಿಯಲ್ಲಿರಲಿಲ್ಲ.

ಗಂಗೆ ಓಬಯ್ಯನು ಕುಳಿತಿದ್ದ ಚಾಪೆಯ ಮೇಲೆಯೆ ಒಂದು ಪಕ್ಕದಲ್ಲಿ ಕುಳಿತು ಮಾತುಕತೆಯಾಡತೊಡಗಿದಳು. ಅವಳ ಕಣ್ಣು ಹುಬ್ಬು ತುಟಿ ಕೆನ್ನೆಯಾಗಿ ಶರೀರವೆಲ್ಲವೂ ಪತಂಗವನ್ನೆ ಮೋಹಿಸುವ ಲೀಲಾಮಯ ಜ್ವಾಲೆಯಂರೆ ಚಂಚಲ ಮೋಹಕವಾಯಿತು. ಆದರೆ ಓಬಯ್ಯನ ಭಾವದಲ್ಲಿ ಮೊದಮೊದಲು ಯಾವ ವಕ್ರತೆಯೂ ಇರಲಿ‌ಲ್ಲ. ಮಳೆ ನಿಲ್ಲುವವರೆಗೂ ಮಾತಾಡಬೇಕೆಂದು ಮಾತ್ರ ಮಾತಾಡುತ್ತಿದ್ದನು. ಆದರೆ ಗಂಗೆ ಮಾಯೆ ತುಂಬು ಯೌವನದ ಯುವಕನನ್ನು ಬಹಳ ಹೊತ್ತು ಮುಗ್ಧವಾಗಿರಲು ಬಿಡಲಿಲ್ಲ. ಅವಳು ಆ ಮಾತು ಈ ಮಾತು ತೆಗೆದು  ಓಬಯ್ಯನ ಮದುವೆ ಮಾತು ತೆಗೆದಳು. ಉದಾಸಭಾವದಿಂದ ಮಾತಾಡುತ್ತಿದ್ದ ಓಬಯ್ಯನು ಭಾವಪೂರ್ವಕವಾಗಿ ಮಾತಾಡತೊಡಗಿದನು. ಅವರು ಮಾತಾಡುತ್ತಿದ್ದ ವಿಷಯವು ಸಿಡಿಮದ್ದಿನಂತೆ ಅವರ ಮದ್ಯೆ ಇತ್ತು. ಗಂಗೆ ಓಬಯ್ಯರು ಬೆಂಕಿಯ ಬತ್ತಿಗಳಂತೆ ಆಚೆಗೂ ಈಚೆಗೂ ಕುಳಿತಿದ್ದರು. ಮಾತಾಡುತ್ತ ಆಡುತ್ತ ಇದ್ದಕ್ಕಿದ್ದಹಾಗೆ ಓಬಯ್ಯನ ಮುಖಕ್ಕೆ ನೆತ್ತರೇರಿತು; ಎದೆ ಬೆಚ್ಚಿತು ಮೈಬೆವರಿತು. ಅವನಿಗೂ ಅದರ ಅರ್ಥವಾಯಿತು. ಅದುವರೆಗೂ ಇರದಿದ್ದ ಭಾವವೋಂದು ಅವನ ಮನಸ್ಸಿನಲ್ಲಿ ಮಿಂಚಿತು. ವಿಚಕ್ಷಣಳಾದ ಗಂಗೆಗು ಅದು ತಿಳಿಯದೆ ಹೋಗಲಿಲ್ಲ. ಒಂದೆರಡು ಮಾತಾಡಿ, ತಡಿಕೆಯ ಒಳಗೆ ಹೋಗಿ, ಕಾಯಿಸಿ ಹದಮಾಡಿದ್ದ ಸಿಹಿಯಾದ ನೊರೆಗಳ್ಳನ್ನು ತಂದುಕೊಟ್ಟಳು. ಓಬಯ್ಯನಿಗೂ ಮಳೆಯಲ್ಲಿ ತೊಯ್ದು ಚಳಿಯಾಗಿದ್ದುದರಿಂದ, ಚೆನ್ನಾಗಿ ಹೀರಿಬಿಟ್ಟನು. ಆಮೇಲೆ ಎಲೆಯಡಕೆ ನೀಡಿದಳು ಅದನ್ನೂ ಸ್ವೀಕರಿಸಿದನು. ಮಳೆಯಲ್ಲಿ ಮನೆಗೆ ಹೋಗುವುದು ಸಾಧ್ಯವಿಲ್ಲ, ಅಲ್ಲಿಯೇ ಮಲಗುವುದು ಲೇಸು ಎಂದಳು. ಓಬಯ್ಯ ಅದಕ್ಕೂ ಸಮ್ಮತಿಸಿದನು. ಅವನಿಗಿನ್ನೂ ತನ್ನ ಸಮ್ಮತಿಯ ಅರ್ಥವೂ ಪರಿಣಾಮವೂ ಸಂಪೂರ್ಣವಾಗಿ ಮನಸ್ಸಿಗೆ ಹೊಳೆದಿರಲಿಲ್ಲ.

ಬಿಡಾರದ ತಡಿಕೆಯ ಬಾಗಿಲು ಹಾಕಿತು. ದೀಪವಾರಿತು. ಹೊರಗಡೆ ಮುಂಗಾರು ಮಳೆಯೂ ಗಾಳಿಯೂ ಮಿಂಚು ಸಿಡಿಲುಗಳೂ ಹುಚ್ಚೆದ್ದು ತಾಂಡವಗೈಯುತ್ತಿದ್ದುವು. ಬೆಳಿಗ್ಗೆ ಮುಂಜಾನೆ ಗಂಗೆಯ ಬಿಡಾರದಿಂದ ಹೊರಬಿದ್ದ ಓಬಯ್ಯ ಹಿಂದಿನ ದಿನದ ಹುಡುಗನಾಗಿರಲಿಲ್ಲಿ. ಅವನಿಗೆ ನವಾನುಭವದ ಮಧುರ ಪ್ರಪಂಚವೋಂದು ಪ್ರತ್ಯಕ್ಷವಾಗಿತ್ತು. ಆಗ ಅವನಿಗೆ ಅರ್ಥವಾಯಿತು, ತನ್ನ ತಂದೆ ಅಪಾರ ಧನ ವ್ಯಯಮಾಡಿ ನಾಲ್ಕು ಮದುವೆಗಳಾದುದೇಕೆ ಎಂದು! ಅಂದಿನಿಂದ ಅವನ ವೆಚ್ಚ ಇಮ್ಮಡಿಯಾಯಿತು. ದಿನದಿಂದ ದಿನಕ್ಕೆ ಅಧೋಗತಿಗಿಳಿಯುತ್ತ ಹೋದನು.

* * *

ತಂಗಿಯ ಕೈಕಡಗವನ್ನು ಈಸಿಕೊಂಡು ಮನೆಯಿಂದ ಹೊರಟ ಓಬಯ್ಯ ನೆಟ್ಟದೆ ಸೀತೆಮನೆಗೆ ಹೋದನು. ತೀರ್ಥಹಳ್ಳಿಗೆ ಹೋಗಿದ್ದ ಸಿಂಗಪ್ಪಗೌಡರು ಇನ್ನೂ ಹಿಂತಿರುಗಲಿಲ್ಲ ಎಂದು ಗೊತ್ತಾಗಿ, ಅಲ್ಲಿಯೇ ಊಟ ಕತ್ತರಿಸಿ, ಹಗಲು ನಿದ್ದೆ ಮಾಡಿಕೊಂಡು. ಅಗ್ರಹಾರಕ್ಕೆ ಹೋರಟನು. ಬಿಸಿಲಿನಲ್ಲಿ ಬಾಯಾರಿಕೆಯಾಗಲು ಕಳ್ಳಂಗಡಿಯ ನೆನಪಾಯಿತು. ಅಂಗಡಿಯವನಲ್ಲಿ ಸಾಲವಾಗಿದ್ದುದರಿಂದಲೂ ಸಾಲ ತೀರಿಸದೆ ಕಳ್ಳು ಕೊಡುವುದಿಲ್ಲವೆಂದು ಹಿಂದೆ ಹೇಳಿದ್ದುದರಿಂದಲೂ ಸಾಲಕ್ಕೆ ತಗಾದೆ ಮಾಡುತ್ತಿದ್ದುದರಿಂದಲೂ ಓಬಯ್ಯನು ಅಲ್ಲಿಗೆ ಹೋಗಲು ಹಿಂಜರಿದನು. ಜೇಬಿನಲ್ಲಿದ್ದ ಬೆಳ್ಳಿಯ ಕಡಗದ ನೆನಪು ಬಂದು ಅವನ ಕಣ್ಣು ನವಪ್ರಭೆಯಿಂದ ಮಿಂಚಿತು. ಆದರೆ ದೇವರ ಕಾಣಿಕೆ ಎಂದು ಹೆದರಿ ಹಿಂಜರಿದನು. ಅವನು ಪತಿತನಾಗಿದ್ದನೇ ಹೊರತು ಇನ್ನೂ ಧೂರ್ತನಾಗಿರಲಿಲ್ಲ. ಭೀತಿಯ ಸಹಾಯದಿಂದ ಪ್ರಲಫಭವನ್ನು ಗೆದ್ದು ಅಗ್ರಹಾರಕ್ಕೆ ಹೋದನು.

ಅಗ್ರಹಾರ ತುಂಗಾತೀರದಲ್ಲಿದ್ದು, ನೋಡಲು ಒಂದು ರಮಣೀಯ ಸ್ಥಾನವಾಗಿತ್ತು. ಎದುರಿಗೆ ನಿರ್ಮಲವಾಗಿ ಗಗನ ಪ್ರತಿಬಿಂಬಕವಾಗಿದ್ದ ತುಂಗೆಯ ನೀಲಿ ನೀರಿನಹೊನಲು, ನುಣ್ಣನೆಯ ಬಿಳಿ ಮಳಲರಾಶಿಯೂ, ಹೊಳೆಯ ನಡುವೆ ಅಲ್ಲಲ್ಲಿ ಮೇಲೆದ್ದು ನೀರಿನಲ್ಲಿ ಬಿದ್ದಿರುವ ಆನೆಗಳಂತೆ ತೋರುವ ಹೆಬ್ಬಂಡೆ ಕಿರುಬಂಡೆಗಳೂ, ಹೊಳೆಯ ಅಂಚಿನಿಂದ ಪ್ರಾರಂಭವಾಗಿ ನೀಲಾಕಾಶದ ದಿಗಂತದವರೆಗೂ ಹಬ್ಬಿದಂತೆ ತೋರುತ್ತಿದ್ದ  ಹಸುರಾದ ಅರಣ್ಯ ಶ್ರೇಣಿಯೂ ಅಗ್ರಹಾರವನ್ನು ಮನೋಹರ ದೃಶ್ಯವನ್ನಾಗಿ ಮಾಡಿದ್ದುವು. ಹೊಳೆಯ ದಡದಲ್ಲಿಯೆ ಚಂದ್ರಮೌಳೇಶ್ವರನ ಗುಡಿಯೂ, ಅದಕ್ಕೆ ಸಮೀಪದಲ್ಲಿಯೆ ಕೈಹೆಂಚು ಹೊದ್ದಿಸಿದ್ದ ವೆಂಕಪ್ಪಯ್ಯಜೋಯಿಸರ ಮನೆಯೂ ಎದ್ದುವು. ಮನೆಯ ಹೊರಭಾಗ ಚೊಕ್ಕಟವಾಗಿಯೂ, ರಂಗವಲ್ಲಿಯಿಂದ ಶೋಭಿತವಾಗಿಯೂ, ಬ್ರಾಹ್ಮಣರ ಮನೆ ಎಂದೆನಿಸಿಕೊಳ್ಳುವುದಕ್ಕೆ ಯೋಗ್ಯವಾಗಿಯೂ ಇತ್ತು. ಬೇಲಿಯ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಸೀರೆಗಳನ್ನೂ ಪಂಚೆಗಳನ್ನೂ ಹರಡಿದ್ದರು.

ಅಂಗಳದಲ್ಲಿ ಆಡುತ್ತಿದ್ದ ಇಬ್ಬರು ಹುಡುಗರು ಓಬಯ್ಯನನ್ನು ಕಂಡೊಡನೆಯೆ ಶೂದ್ರನು ಬಂದನೆಂದು ಆಟವನ್ನು ಬಿಟ್ಟು ದೂರ ಹೋಗಿ ನಿಂತರು. ಓಬಯ್ಯ ಅವರನ್ನು ಮಾತಾಡಿಸಿದನು. ವೆಂಕಪ್ಪಯ್ಯನವರು ಮನೆಗೆ ಬಂದಿಲ್ಲವೆಂದು ಗೊತ್ತಾಯಿತು. ಓಬಯ್ಯು ನೀರಡಿಕೆಯಾಗುತ್ತದೆ ಎಂದು ಹೇಳಿದ್ದರಿಂದ, ಒಬ್ಬ ಹುಡುಗನು ಚೊಂಬಿನಲ್ಲಿ ತಣ್ಣೀರನ್ನೂ ಒಂದು ಸಣ್ಣ ಬಾಳೆಯ ಕೀತಿನಲ್ಲಿ ಕೆಂಬಣ್ಣದ ಜೋನಿಬೆಲ್ಲವನ್ನೂ ತಂದು ದೂರ ನಿಂತನು. ಓಬಯ್ಯ ಹತ್ತು ಹೆಜ್ಜೆ ಹಿಂದಕ್ಕೆ ಸರಿದು ನಿಲ್ಲಲು. ಹುಡುಗನು ಮುಂದಕ್ಕೆ ಬಂದು ಚೊಂಬನ್ನೂ ಎಲೆಯನ್ನೂ ಅಂಗಳದಲ್ಲಿ ಇಟ್ಟು, ಮತ್ತೆ ಹಿಂದಕ್ಕೆ ಹೋದನು. ಇನ್ನೊಬ್ಬ ಹುಡುಗನು” ಕಚ್ಚಿಕೊಂಡು ಕುಡಿಯಬೇಡೋ, ಎತ್ತಿ ಕೊಂಡು ಕುಡಿ”ಎಂದನು. ಓಬಯ್ಯ ನಡುನಡುವೆ ಬೆಲ್ಲವನ್ನು ತಿನ್ನುತ್ತ ಚೊಂಬನ್ನು ಎತ್ತಿಕೊಂಡೇ ನೀರು ಕುಡಿದನು. ಪಾತ್ರೆಯನ್ನು ಎತ್ತಿ ಕುಡಿಯುವ ಅಭ್ಯಾಸವಿಲ್ಲದುದರಿಂದ ನೀರು ಮುಖದ ಮೇಲೆಯೂ ಅಂಗಿಯ ಮೇಲೆಯೂ ಬಿದ್ದು ಹರಿದುಹೋಯಿತು. ಬ್ರಾಹ್ಮಣ ಬಾಲಕರು ಅದನ್ನು ನೋಡಿ ಜುಗುಪ್ಸೆ ತಾಳಿದರು. ಶೂದ್ರರ ವಿಚಾರದಲ್ಲಿ ಅವರಿಗೆ ಹಿರಿಯರು ಕಲಿಸಿದ್ದ ತಿರಸ್ಕಾರ ಮತ್ತಿನಿತು ಹೆಚ್ಚಾಯಿತು.

ವೆಂಕಪ್ಪಯ್ಯನವರು  ಸಿಕ್ಕುದಿದ್ದುದರಿಂದ ಚಂದ್ರಮೌಳೇಶ್ವರನಿಗೆ ಕಾಣಿಕೆಯರ್ಪಿಸಿ ಪೂಜೆಮಾಡಿಸಲು ಸಾಧ್ಯವಾಗದೆ ಓಬಯ್ಯನು ದೇವಾಲಯದ ಬಳಿಗೆ ಹೋಗಿ ಹೊರಗಡೆಯಿಂದಲೆ ದೇವರಿಗೆ ಕೈಮುಗಿದನು. ಅಲ್ಲಿಂದ ಸೋಪಾನಗಳನ್ನಿಳಿದು ಹೊಳೆಯ ಬುಡಕ್ಕೆ ಹೋದನು. ಅಲ್ಲಿ ತಿಂಡಿ ಹಾಕಿ ಸಾಕಿದ್ದ ದೊಡ್ಡ ಸಣ್ಣ ಮೀನುಗಳು ನೂರಾರು ಕಾಣಿಸಿಕೊಂಡುವು. ಬ್ರಾಹ್ಮಣರು ಮಾತ್ರವೇ ಉಪಯೋಗಿಸುತ್ತಿದ್ದ ಆ ಘಟ್ಟದಲ್ಲಿ ಮೀನುಗಳಿಗೆ ಯಾವ ಅಪಾಯವೂ ಇರದಿದ್ದುರಿಂದಲೂ, ದೇವರ ಮೀನುಗಳಾಗಿ ಆಗಾಗ ಅಲ್ಲಿಗೆ ಬಂದವರೆಲ್ಲ ಅಕ್ಕಿ, ಬಾಳೆಹಣ್ಣು, ತೆಂಗಿನಕಾಯಿಯ ಚೂರುಗಳು, ಮೊದಲಾದ ಪದಾರ್ಥಗಳನ್ನು ಹಾಕುತ್ತಿದ್ದುದರಿಂದಲೂ ಆ ಸ್ಥಳದಲ್ಲಿ ಸಾವಿರಾರು ಮೀನುಗಳು ಬಹಳ ಸಲಿಗೆಯಿಂದ ಇದ್ದುವು. ದೇವರ ಮೀನುಗಳೆಂದು ಶೂದ್ರರಾರೂ  ಅವುಗಳ ತಂಟೆಗೇ ಹೋಗುತ್ತಿರಲಿಲ್ಲ. ಅಲ್ಲಿಯ ಮೀನುಗಳನ್ನು ಕೊಯ್ದು ಪಲ್ಯ ಮಾಡಿದರೆ ಸಗಣಿಯಾಗಿಬಿಡುತ್ತದೆ ಎಂದು ಅನೇಕರು  ಹೇಳಿಕೊಳ್ಳುತ್ತಿದ್ದರು. ಅದು ಓಬಯ್ಯನಿಗೂ ಗೊತ್ತಿತ್ತು. ಅವನು ನೀರಿನ ಬಳಿಗೆ ಹೋಗಲು ಅನೇಕ ಮೀನುಗಳು ಯಾರೋ ತಿಂಡಿ ಹಾಕಲು ಬಂದರೆಂದು ಭಾವಿಸಿ ಓಡಿಬಂದುವು. ಕೆಲವು ಮೀನುಗಳಂತೂ ನಾಲ್ಕೈದು ಅಡಿ ಉದ್ದವಾಗಿ ಒಂದೆರಡು ಅಡಿ ಅಗಲವಾಗಿದ್ದವು. ಸುತ್ತ ನೋಡಿದಾಗ ಓಬಯ್ಯನ ಕಣ್ಣಿಗೆ ಯಾರೂ ಕಾಣಿಸಲಿಲ್ಲ. ಎಲೆಯಡಕೆಯ ಜೇಬಿನಿಂದ ಹೊಗೆಸೊಪ್ಪನ್ನು ತೆಗೆದು ಸುಣ್ಣದೊಂದಿಗೆ ಸೇರಿಸಿ ತಿಕ್ಕಿ ಒಂದು ಗುಳಿಗೆ ಮಾಡಿ ನೀರಿಗೆ ಎಸೆದನು. ಇಪ್ಪತ್ತು ಮೂವತ್ತು ಮೀನುಗಳು ಯಾವುದೋ ತಿಂಡಿ ಎಂಬ ಭ್ರಾಂತಿಯಿಂದ ಅದಕ್ಕೆ ಎರಗಿದುವು. ಅಗ್ರಹಾರದ ಪ್ರಜೆಗಳಂತೆ ಹೊಟ್ಟೆಬಾಕವಾಗಿದ್ದ ಆ ಮತ್ಸ್ಯಗಳಿಗೆ ಭಕ್ಷ್ಯಾಭಕ್ಷ್ಯ ವಿವೇಕವಿಚಾರ ಪ್ರಾಯಶಃ ಮರೆತು ಹೋಗಿದ್ದಿತೋ ಏನೋ! ಓಬಯ್ಯ ಹೊಗೆಸೊಪ್ಪನ್ನು ಎಸೆದ ಒಂದೆರಡು ನಿಮಿಷಗಳಲ್ಲಿ ಒಂದು ಸಾಧಾರಣಗಾತ್ರದ ಮೀನು ಹೊಟ್ಟೆಮೇಲಾಗಿ ಬಡಬಡನೆ ಒದ್ದಾಡಿಕೊಂಡು ಚಿಮ್ಮಿ ದಡಕ್ಕೆ ಬಿದ್ದಿತು. ತಲೆವಸ್ತ್ರವನ್ನು ತೆಗೆದು ಬಿಚ್ಚಿ, ಬೇಗಬೇಗನೆ ಆ ಮೀನನ್ನು ಅದರಲ್ಲಿ ಸುತ್ತಿ, ಬಗಲಿಗೆ ಹಾಕಿಕೊಂಡು, ಕಳ್ಳಹಾದಿಯಲ್ಲಿ ಹೊರಟನು. ಬಗಲಲ್ಲಿದ್ದ ಮೀನು ಪ್ರಾಣಸಂಕಟದಿಂದ ಕ್ಷಣಕ್ಷಣಕ್ಕೂ ನಿಮಿರುತ್ತಿತ್ತು. ಅದು ನಿಮಿರಿದಂತೆಲ್ಲ ಓಬಯ್ಯನು ಬಲವಾಗಿ ಅದುಮುತ್ತಿದ್ದನು. ಸ್ವಲ್ಪದೂರ  ನಡೆಯುವುದರೊಳಗೆ ಪ್ರಾಣಿ ತಟಸ್ಥವಾಯಿತು. ಹೊತ್ತು ಬೈಗಾಗುತ್ತಿತ್ತು.

ಮುತ್ತಳ್ಳಿಗೂ ಕಾನೂರಿಗೂ ಮಧ್ಯೆ ಒಂದು ಕಳ್ಳಂಗಡಿಯಿತ್ತು. ಅಲ್ಲಿಗೆ ಸುಮಾರು ಏಳೆಂಟು ಮೈಲಿಗಳ ದೂರದಿಂದಲೂ ಗಿರಾಕಿಗಳು ಬರುತ್ತಿದ್ದರು. ಸಾಯಂಕಾಲದಿಂದ ಪ್ರಾರಂಭವಾಗಿ ರಾತ್ರಿ ಎಂಟು ಒಂಬತ್ತು ಗಂಟೆಯವರೆಗೂ ಆ ” ಕಾಡುಮಜ್ಜಿಗೆಯ ಹೋಟೆಲಿನಲ್ಲಿ” ಜನಸಂದಣಿಯೂ ಗಲಭೆಯೂ ಹರಟೆ ಹೊಡೆದಾಟಗಳೂ ತಪ್ಪುತ್ತಿರಲಿಲ್ಲ. ಆ ಅಂಗಡಿಯವನು ಕಳ್ಳಿಗೆ ಮತ್ತು ಬರುವುದಕ್ಕಾಗಿ ಏನೇನೋ ಗಿಡಮೂಲಿಕೆಗಳನ್ನೂ  ಸೇರಿಸುತ್ತಿದ್ದುದರಿಂದ ಅವನ ಕಳ್ಳು ಎಂದರೆ ಜನರು  ಬಿದ್ದು ಸಾಯುತ್ತಿದ್ದರು. ಗಿರಾಕಿಗಳಲ್ಲಿ ಮುಖ್ಯರಾದವರೆಂದರೆ ಕಾನೂರು ಚಂದ್ರಯ್ಯಗೌಡರ ಆಳುಗಳು, ಮುತ್ತಳ್ಳಿ ಶ್ಯಾಮಯ್ಯಗೌಡರ ಆಳುಗಳು. ಸೀತೆಮನೆ ಸಿಂಗಪ್ಪಗೌಡರ ಆಳುಗಳು. ಒಕ್ಕಲುಗಳಲ್ಲಿಯೂ ಅನೇಕರು ಅಲ್ಲಿಗೆ  ಆಗಾಗ ಬಂದು ಹೋಗುವ ಪದ್ಧತಿಯಿತ್ತು. ಆಳುಗಳಂತೂ ತಮ್ಮ ಹೊಟ್ಟೆಗೆ ಅನ್ನವಿಲ್ಲದಿದ್ದರೂ ತಮ್ಮ ಹೆಂಡಿರು ಮಕ್ಕಳಿಗೆ ಕೂಳಿಲ್ಲದಿದ್ದರೂ ಲೆಕ್ಕಿಸದೆ ದಿನಗೂಲಿಯ ಬತ್ತವನ್ನು ಕಳ್ಳಂಗಡಿಗೆ ಸುರಿದು ಉನ್ಮತ್ತರಾಗಿ ಹಿಂದಿರುಗುತ್ತಿದ್ದರು. ಕೆಲವು ಸಾರಿ ಕತ್ತಿ ಹಾರೆ ಗುದ್ದಲಿ ಮೊದಲಾದ ಸಾಮಾನುಗಳನ್ನು ಕದ್ದು ತಂದುಕೊಟ್ಟು ಕಳ್ಳು ಹೆಂಡಗಳನ್ನು ಕುಡಿಯುತ್ತಿದ್ದರು.

ಅಗ್ರಹಾರದಿಂದ ದೇವರ ಮೀನನ್ನು ಬಗಲಿಗೆ ಹಾಕಿಕೊಂಡು ಹೊರಟ ಓಬಯ್ಯ ಕಳ್ಳಂಗಡಿಯಿದ್ದ ಹಾದಿಯಿಂದಲೆ ಹೋಗಲು ಮನಸ್ಸು ಮಾಡಿದನು. ಏಕೆಂದರೆ, ಅದು ಸಮೀಪದ ಹಾದಿಯಾಗಿತ್ತು. ಒಂದು ವೇಳೆ ಗುರುತಿನವರು ಯಾರಾದರೂ ಅಲ್ಲಿದ್ದರೆ ಏನಾದರೂ ಸ್ವಲ್ಪ ಪ್ರಯೋಜನವಾಗಬಹುದೆಂದು ಆತನಿಗೊಂದು ದೂರದಾಸೆಯೂ ಇತ್ತು. ಅವನು ಕಳ್ಳಂಗಡಿಯ ಬಳಿಗೆ ಬರುವಷ್ಟರಲ್ಲಿ ಬೈಗು ಕಪ್ಪಾಗಿತ್ತು. ಹುಲ್ಲಿನ ಮಾಡು ಬಹಳ ಕೆಳಕ್ಕೆ ಬಾಗಿದ್ದ ಅಂಗಡಿಯ ಒಳಭಾಗದಲ್ಲಿ ದೀಪ ಹೊತ್ತಿಸಿದ್ದುದು ಅಲ್ಲಿದ್ದ  ಕೆಂಬೆಳಕಿನಿಂದ ಗೊತ್ತಾಗುತ್ತಿತ್ತು. ಅಂಗಡಿಯ ಒಳಗೆ ಹೊರಗೂ ಹಲವು ಜನರು ನೆರೆದಿದ್ದರು. ಒಳಗೆ ಮೇಲುಜಾತಿಯವರು, ಹೊರಗೆ ಕೀಳು ಜಾತಿಯವರು. ಅಂಗಡಿಯವನು ತನ್ನ ಮಗನೊಂದಿಗೆ ಮಧ್ಯವಿನಿಯೋಗದ ಕಾರ್ಯದಲ್ಲಿ ತೊಡಗಿದ್ದನು. ಅವನ ಹೆಂಡತಿಯೂ ಗಿರಾಕಿಗಳಿಗಾಗಿ ಒಳಗಡೆ ಮಾಂಸ, ಉಪ್ಪುಮೀನು, ಮೊಟ್ಟೆ ಮೊದಲಾದ ವ್ಯಂಜನಗಳನ್ನು ಬೇಯಿಸುತ್ತಿದ್ದಳು ಎಂಬುದು ಕಳ್ಳು ಹೆಂಡತಿಗಳ ವಾಸನೆಯೊಂದಿಗೆ ಸೇರಿಬರುತ್ತಿದ್ದ ಚಾಕಣದ ಕಂಪಿನಿಂದ ತಿಳಿಯುತ್ತಿತ್ತು.

ಅಲ್ಲಿ ಸೇರಿದ್ದವರಿಗೆಲ್ಲರಿಗೂ ಓಬಯ್ಯನ ಗುರುತಿತ್ತು. ಓಬಯ್ಯನಿಗೂ ಅನೇಕರ ಗುರುತು ಸಿಕ್ಕಿತು. ಕೆಲವರು ಅಂಗಳದಲ್ಲಿ ಗುಂಪುಗುಂಪಾಗಿ ಕುಳಿತು ಉಪ್ಪುಮೀನು ಮತ್ತು ಮಾಂಸದ ತುಂಡುಗಳನ್ನು ಕಚ್ಚಿ ಎಳೆದು ಜಗಿಯುತ್ತ, ನಡುನಡುವೆ ಹೆಂಡ ಕುಡಿದು ಹರಟೆ ಹೊಡೆದು ಕೇಕೆಹಾಕಿ ನಗುತ್ತಿದ್ದರು. ಒಳಗಡೆ ಕೆಲವರು ಕಳ್ಳು ಕುಡಿಯುವುದರಲ್ಲಿಯೂ ಇಸ್ಪೀಟು ಆಡುವುದರಲ್ಲಿಯೂ ತನ್ಮಯರಾಗಿದ್ದರು. ಮುತ್ತಳ್ಳಿಯ ನಂಜನು ತಾನೊಬ್ಬನೆ ಪ್ರತ್ಯೇಕವಾಗಿ ಒಂದು ಕಾಲು ಮಣೆಯ ಮೇಲೆ ಕುಳಿತು ಎಡದ ಕೈಯಲ್ಲಿ ಕರಟಿದ ಚಿಪ್ಪಿನಲ್ಲಿದ್ದ ಹುರಿಮಾಂಸವನ್ನು ತಿನ್ನುತ್ತ ಎದುರಿಗಿದ್ದ ಹೆಂಡದ ಮೊಗೆಯನ್ನೇ ಎವೆಯಿಕ್ಕದೆ ನಿಟ್ಟಿಸುತ್ತ, ನಡುನಡುವೆ ಹಲ್ಲಿಗೆ ಅಡಚಣೆಯಾದ ಎಲುಬಿನ ಚೂರುಗಳನ್ನು ಬೈಗುಳದೊಂದಿಗೆ ನೆಲಕ್ಕೆ ಉಗುಳುತ್ತಿದ್ದನು. ಅವನು ಕಳ್ಳಿನ ಮೊಗೆಯನ್ನು ನೋಡುತ್ತ ತಿನ್ನುತ್ತಿದ್ದಾಗ ದವಡೆ ಮಾತ್ರ ಚಲಿಸುತ್ತಿತ್ತು. ತನ್ನ ಬಿಡಾರದಲ್ಲಿ ಮಾಡಿಬಂದಿದ್ದ ಅನಾಹುತವನ್ನು ಅವನ ಮನಸ್ಸು ಇನ್ನೂ ಮೆಲುಕು ಹಾಕುತ್ತಿತ್ತು. ಅವನಾಗಲೇ ಎರಡು ಮೊಗೆ ಕುಡಿದು ಮೂರನೆ ಮೊಗೆಗೆ ಸಿದ್ಧನಾಗುತ್ತಿದ್ದನು. ಅವನು ಓಬಯ್ಯನ ಕಡೆ ನೋಡಿದಾಗ ಕಣ್ಣು ತೇಲುಗಣ್ಣಾಗಿ ಕ್ರೂರವಾಗಿದ್ದುವು. ಬತ್ತಲೆಯಾಗಿದ್ದ ಹೊಟ್ಟೆ ಊದಿಕೊಂಡಿತ್ತು. ಓಬಯ್ಯನು ಅವನನ್ನು ಮಾತಾಡಿಸಲಿಲ್ಲ. ಅವನೇ ಮೊದಲು ಪ್ರಾರಂಭಿಸಿದನು.

“ಅಲ್ಲಾ ನೀವೇ ಹೇಳ್ರೋ. ನನ್ದೇನ್ ತಪ್ಪು? ನಾ ಮಾಡಿಸಿ ಕೊಟ್ಟಿದ್ನ ನಾ ಕೇಳಿದ್ರೆ ಅವಳ್ದೇನ ಜೋರು! ಏನ್ರೋ! ಹೇಳ್ರೋ ನೀವೆ! ಚೆನ್ನಾಗಿ ಹಿಡ್ಕೊಂಡು ಗುದ್ದೀ ಗುದ್ದೀ ಗುದ್ದಿ ಹಾಕ್ದೆ, ಅವಳಕ್ಕಾನ್ನಾ…ಹ! ಹ! ಹ! ” ಎಂದವನು ಚಿನ್ನದ ಬುಗುಡಿಯೊಂದನ್ನು ಸೊಂಟದ ಪಂಚೆಯಿಂದ ಎಂಜಲು ಕೈಯಲ್ಲಿ ತೆಗೆದು ತೋರಿಸಿದನು. ನಂಜನ ನೆತ್ತಿಗೆ ಮತ್ತೇರಿ ಬರುತ್ತಿತ್ತು.

ಆ ದಿನ ಬೆಳಗ್ಗೆ ಚಿನ್ನಯ್ಯನೊಡನೆ ಮೀನು ಬೇಟೆಯಾಡಲು ಹೋಗಿ ಕಾನೂರು ಗಾಡಿಯ ಹಿಂದೆ ಅಪರಾಹ್ಣದಲ್ಲಿ ಮನೆಗೆ ಬಂದ ನಂಜನು ಸಾಯಂಕಾಲವಾಗಲು ಕಳ್ಳಂಗಡಿಗೆ ಹೊರಟನು. ಕೈಯಲ್ಲಿ ದುಡ್ಡಾಗಲಿ ದವಸವಾಗಲಿ ಇರಲಿಲ್ಲ. ಹೆಂಡತಿಯ ಕಿವಿಯಲ್ಲಿದ್ದ ಬುಗುಡಿಯನ್ನು ಕೇಳಿದನು. ಅವಳು ಕೊಡುವುದಿಲ್ಲ ಎಂದು ಹೇಳಲು ಅವಳನ್ನು ಚೆನ್ನಾಗಿ ಹೊಡೆದು. ಆಭರಣವನ್ನು ಕಿವಿ ಹರಿಯುವಂತೆ ಎಳೆದು ಕಸಿದುಕೊಂಡು ಕಳ್ಳಿನ ಅಂಗಡಿಗೆ ಬಂದಿದ್ದನು. ಅದನ್ನೇ ಕುರಿತು ಅವನು ಓಬಯ್ಯನೊಡನೆ ಹೇಳಿದ್ದು.

ಅಷ್ಟರಲ್ಲಿ ಅಲ್ಲಿಗೆ ಬಂದ ಅಂಗಡಿಯವನು ನಂಜನ ಕೈಯಲ್ಲಿದ್ದ ಬುಗುಡಿಯನ್ನು ತೆಗೆದುಕೊಂಡು ಹೋಗಿ ಪೆಟ್ಟಿಗೆಗೆ ಹಾಕಿದನು. ನಂಜನು ಅದನ್ನು ಗಣನೆಗೆ ತಾರದೆ ಮೊಗೆಯಲ್ಲಿದ್ದ ಮಧ್ಯವನ್ನು ಚೆನ್ನಾಗಿ ಹೀರಿ, ತುಟಿಯನ್ನು ಚಪ್ಪರಿಸುತ್ತಾ, ನಾ ದುಡ್ದಿದ್ದು ನಾ ಕುಡ್ದಿದ್ದು! ಹಹಹ! ” ಎಂದು ಚುರುಕಾಗಿ ರಭಸದಿಂದ ಹೇಳಿದನು. ಒಳ್ಳೆಯ ಕಳ್ಳಿಗೂ ಕಳ್ಳು ಬೆರಸಿದ ಕಲಗಚ್ಚು ನೀರನ್ನು ತಂದು ಹೊಯ್ದನು. ನಂಜನಿಗೆ ಒಳ್ಳೆಯ ಕಳ್ಳಿಗೂ ಕಳ್ಳು ಬೆರಸಿದ ಕಲಗಚ್ಚಿಗೂ ವ್ಯತ್ಯಾಸ ಕಂಡುಹಿಡಿಯುವಷ್ಟು ಪ್ರಜ್ಞೆ ಇರಲಿಲ್ಲ. ಏನನ್ನೋ ಅಸ್ಪಷ್ಟವಾಗಿ ಒರಲುತ್ತ ತಿಂದು ಕುಡಿಯುವ ಕೆಲಸಕ್ಕೆ ಕೈಬಾಯಿ ಹಾಕಿದನು. ಅವನ ಹೊಟ್ಟೆಯ ಮೇಲೆಲ್ಲಾ ಹೆಂಡ ಸೋರಿ ಪಂಚೆ ಒದ್ದೆಯಾಗಿತ್ತು.

ಓಬಯ್ಯನನ್ನು ಯಾರೂ ಅತಿಥಿಯಾಗಿ ಸ್ವೀಕರಿಸಲಿಲ್ಲ. ಜೊತೆಗೆ ಅಂಗಡಿಯವನೂ ಕೊಟ್ಟ ಸಾಲವನ್ನು ತೀರಿಸದೆ ಒಂದು ಹನಿಯನ್ನೂ ಕೊಡುವುದಿಲ್ಲವೆಂದು ಹೇಳಿಬಿಟ್ಟನು. ಓಬಯ್ಯನಿಗೆ ಕಳ್ಳು ಮಾಂಸಗಳ ಕಂಪು ಕಮನೀಯವಾಗಿತ್ತು. ಆ ಗಾಳಿಯನ್ನು ಆದಷ್ಟು ಪ್ರಾಣಾಯಾಮ ಮಾಡಿದನು. ತೃಷ್ಣೆ ಬರಬರುತ್ತ ಅತಿಯಾಯಿತು. ಮೆಲ್ಲಗೆ ಕಂಕುಳದಲ್ಲಿ ಸುತ್ತಿಟ್ಟುಕೊಂಡು ಮೀನನ್ನು ತೆಗೆದು ಅಂಗಡಿಯವನಿಗೆ ಕೊಟ್ಟು ಅದಕ್ಕೆ ಬದಲಾಗಿ ಕಳ್ಳು ಕೊಡುವಂತೆ ಅಂಗಲಾಚಿದನು. ಅದು ಅಗ್ರಹಾರದ ದೇವರ ಮೀನು ಎಂಬ ಸಂಗತಿಯನ್ನು ಮಾತ್ರ ತಿಳಿಸಲಿಲ್ಲ. ಅಂಗಡಿಯವನು ಮೀನನ್ನು ಸ್ವೀಕರಿಸಿ, ಸ್ವಲ್ಪ ಕಳ್ಳನ್ನು ಬದಲಾಗಿ ಕೊಡಿಸಿದನು. ಅದನ್ನು ಕುಡಿದ ಮೇಲಂತೂ ಓಬಯ್ಯನಿಗೆ ಮತ್ತಷ್ಟು ಕುಡಿಯಬೇಕೆಂಬ ಹುಚ್ಚು ಮಿತಿಮೀರಿ, ಜೇಬಿನಲ್ಲಿದ್ದ ದೇವರ ಕಾಣಿಕೆಯ ಬೆಳ್ಳಿಯ ಕಡಗವನ್ನೂ ಬಯಲಿಗೆಳೆದನು. ಅದನ್ನು ಅಡವಾಗಿ ತೆಗೆದುಕೊಂಡು ಕಳ್ಳು ಕೊಡಬೇಕೆಂದೂ, ಹಿಂದಿನಿಂದ ಹಣ ಕೊಟ್ಟು ಬಿಡಿಸಿಕೊಳ್ಳುತ್ತೇನೆಂದೂ ಅಂಗಡಿಯವನಿಗೆ ತಿಳಿಸಿದನು. ಅಂಗಡಿಯವನು ಸಂತೋಷದಿಂದ ತೆಗೆದು ಕೊಂಡನು. ಹಣ ಕೊಟ್ಟು ಬಿಡಿಸಿಕೊಳ್ಳುತ್ತೇನೆ ಎಂಬುದ ಬರಿಯ ಮಾತೆಂದು ಅವನಿಗೂ ಅನುಭವದಿಂದ ಚೆನ್ನಾಗಿ ಗೊತ್ತಾಗಿತ್ತು.

ವಾಜ್ಞ್ಮಯಮಾತ್ರವಾಗಿದ್ದ ಅಂಗಡಿಯ ವಾತಾವರಣ ಬರಬರುತ್ತ ಶಬ್ದಮಯವಾಗುತ್ತ ಬಂದಿತು. ಇತ್ತ ಕಳ್ಳು ಹೆಂಡಗಳು ಖಾಲಿಯಾದಂತೆಲ್ಲ ಅತ್ತ ಮಾನವರು ಮೃಗಗಳಾಗುತ್ತ ಹೋದರು. ಅಶ್ಲೀಲವಾದ ಮಾತುಗಳೂ ಬೈಗುಳಗಳೂ ಕಾರ್ಯಗಳೂ ಸ್ವಂಚ್ಛಂದವಾಗಿ ಉಪಕ್ರಮವಾದುವು. ಓಬಯ್ಯನೂ ಚೆನ್ನಾಗಿ ಕುಡಿದು ಹಣ್ಣಾದನು. ನಂಜನು ಉಟ್ಟ ಪಂಚೆಯನ್ನು ಬಿಚ್ಚಿ ತಲೆಗೆ ಸುತ್ತಿಕೊಂಡು ವಿಕಾರವಾಗಿ ಕೇಕೆ ಹಾಕುತ್ತ, ಅಸಹ್ಯವಾದ ಹಾಡುಗಳನ್ನು ಒರಲುತ್ತ, ಹೊರಬಿದ್ದನು. ಅಂಗಳದಲ್ಲಿ ಹೊಡೆದಾಟವು ಆರಂಭವಾಯಿತು. ಆಗ ರಾತ್ರಿ ಎಂಟು ಗಂಟೆಯಾಗಿತ್ತು. ಹಗಲಿನಲ್ಲಿ ಮುನಿಯಂತೆ ಮೌನವಾಗಿದ್ದ ಕಳ್ಳಿನ ಅಂಗಡಿ ಆ ರಾತ್ರಿ ನಿಶಾಚರನಂತೆ ಭಯಾನಕ ಬೀಭತ್ಸರಗಳಿಂದ ತುಂಬಿಹೋಯಿತು.

ಅಷ್ಟರಲ್ಲಿ ಹೊರಗಡೆಯಿಂದ ಯಾರೋ ಇನ್ನಿಬ್ಬರು ಅಸ್ಪೃಶ್ಯರು ಬಂದು ಹೆಂಡ ಕೇಳಿದರು.

ಅಂಗಡಿಯವನು “ಏನೋ ಬೈರಾ, ಇಷ್ಟು ಹೊತ್ತಿನಾಗೆ?” ಎಂದನು. ಬಂದಿದ್ದವರು ಕಾನೂರು ಚಂದ್ರಯ್ಯಗೌಡರ ಆಳುಗಳು; ಬೇಲರ ಬೈರ ಮತ್ತು ಸಿದ್ದ.”

“ಇವತ್ತು ಹೊತ್ತಾಗಿಹೋಯ್ತು ಕಣ್ರಾ. ಕೆಳಕಾನೂರು ಅಣ್ಣೇಗೌಡರ ಹೆಡ್ತಿಗೆ ಸೂಡು ಕಡ್ಡು ಮೈ ನೋವಾಗಿತ್ತು. ಒಂದೊಂದ್ರುಪಾಯಿ ಕೊಟ್ರು; ಹಾಂಗೆ ಬಂದ್ಯು ಇಲ್ಲಿಗೆ” ಎಂದನು ಸಿದ್ದ.

“ಏನಾಗಿತ್ತೋ ಅವರಿಗೆ?” ಎಂದು ಕೇಳಿದನು ಅಂಗಡಿಯವನು.

“ಏನೋ ಆಗಿತ್ತಂತೆ…. ಕಳ್ಳು ಕೊಡ್ರಾ” ಎಂದನು ಬೈರ. ಅವನಿಗೆ ಹೆಂಡ ಮುಖ್ಯವಾಗಿತ್ತೆ ಹೊರತು ಮರಣಕ್ಕೆ ಕಾರಣಗೀರಣಗಳು ಮುಖ್ಯವಾಗಿರಲಿಲ್ಲ.

“ಓಬೇಗೌಡ್ರೇ ಕೇಳಿದರೇನೋ?” ಎಂದು ಅಂಗಡಿಯವನು ಹೊಸ ಗಿರಾಕಿಗಳಿಗೆ ಸರಬರಾಯಿ ಮಾಡಲು ತೊಗಿದನು.

ಓಬಯ್ಯನಿಗೆ ಸಿದ್ದನ ಮಾತೇನೋ ಕೇಳಿಸಿತು. ಆದರೆ ಅದರ ಸಂಪೂರ್ಣ ಪ್ರಭಾವವನ್ನು ಗ್ರಹಿಸುವ ಪ್ರಜ್ಞೆ ಅವನಲ್ಲಿರಲಿಲಲ. “ಅಯ್ಯೋ ಹೊಯ್ತೇನೋ!” ಎಂದು ಗಟ್ಟಿಯಾಗಿ ಅಳತೊಡಗಿದನು. ಆ ಅಳುವಿನಲ್ಲಿ ಉನ್ಮಾದವಿತ್ತೇ ಹೊರತು ಶೋಕವಿರಲಿಲಲ. ಮದ್ಯದಿಂದ ಉತ್ಪನ್ನವಾಗಿದ್ದ ಉನ್ಮಾದ ಹೊರಹೊಮ್ಮಲು ದಾರಿ ಹುಡುಕುತ್ತಿತ್ತು. ಅದಕ್ಕೊಂದು ಕಾಲುವೆ ಲಭಿಸಿದಂತಾಯಿಷ್ಟೆ!

ಓಬಯ್ಯ ಮತ್ತಿನಿಂದ ತತ್ತರಿಸುತ್ತ ಮೇಲೆದ್ದನು. ಅಂಗಳಕ್ಕೆ ಇಳಿಯುವಾಗ ಉರುಳಿಬಿದ್ದನು. ಮತ್ತೆ ತೂರಾಡುತ್ತ ಎದ್ದು ನಿಂತು. ರೋದನಗೈಯುತ್ತಲೆ ನಡೆದು ಕತ್ತಲೆಯ ಕರ್ಬಸಿರಿನಲ್ಲಿ ಕರಗಿ ಕಣ್ಮರೆಯಾದನು. ಅಲ್ಲಿದ್ದವರಿಗೆ ತಲೆನೆಟ್ಟಗಿದ್ದಿದ್ದರೆ ಅವನನ್ನು ಆ ಸ್ಥಿತಿಯಲ್ಲಿ ಮನೆಗೆ ಹೋಗಗೊಡುತ್ತಿರಲಿಲ್ಲ. ಆದರೆ ಕಳ್ಳಂಗಡಿಯಲ್ಲಿ ಕುಡಿತ ಕುಣಿತ ಗಲಭೆ ಹೋರಾಟಗಳ ಹೊಳೆ ನೆರೆಯೇರಿತ್ತು.