ಮರುದಿನ ಬೆಳಿಗ್ಗೆ ಎದ್ದಾಗ ಹೂವಯ್ಯನ ಮನಸ್ಸು ನಾನಾ ಚಿಂತೆಗಳಿಂದ ಭಾರವಾಗಿತ್ತು. ಹಿಂದಿನ ರಾತ್ರಿ ರಾಮಯ್ಯ ತನಗೆ ತಿಳಿದುಬಂದಿದ್ದ ತಮ್ಮ ಮನೆಯ ಎಲ್ಲ ವಿಚಾರಗಳನ್ನೂ ಅಣ್ಣನಿಗೆ ಹೇಳಿ, ತನ್ನ ಹೃದಯವನ್ನು ಹಗುರಮಾಡಿಕೊಂಡಿದ್ದನು. ಆದರೆ ಹೂವಯ್ಯ ಬಹಳ ಹೊತ್ತು ಹಾಗಿರಲಿಲ್ಲ. ತನಗೆ ತಿಳಿಯದಿದ್ದರೂ ಅವನ ಆಗಮನದಿಂದ ಮನೆಯಲ್ಲೆಲ್ಲ ಏನೋ ಒಂದು ಉಲ್ಲಾಸ ತುಂಬಿ ತುಳುಕಾಡುತ್ತಿತ್ತು. ವಾಸುವಂತೂ ರೆಕ್ಕೆಬಂದ ಹಕ್ಕಿಯ ಮರಿಯಂತೆ ಹಾರಾಡುತ್ತಿದ್ದನು. ಅವನ ಸರಳ ಹೃದಯದ ಮುಗ್ಧ ಹರ್ಷವು ಎಂತಹ ಚಿಂತಾಭಾರವನ್ನಾದರೂ ಹಗುರಗೊಳಿಸುವಂತಿತ್ತು. ಅದೂ ಅಲ್ಲದೆ ಆ ದಿನದ ಪ್ರಾತ:ಸಮಯ ಸ್ವರ್ಗೀಯ ರಮ್ಯವಾಗಿದ್ದುದರಿಂದ ಹೂವಯ್ಯನ ಮನಸ್ಸು ಅದರ ಪ್ರಭಾವದಿಂದ ಬಹಳ ಕಾಲ ತಪ್ಪಿಸಿಕೊಳ್ಳಲಾಗಲಿಲ್ಲ.

ಸ್ನಾನ ಕಾಫಿ ತಿಂಡಿಗಳು ಪೂರೈಸಿದೊಡನೆ ಹೂವಯ್ಯ ರಾಮಯ್ಯ ವಾಸು ಪುಟ್ಟಣ್ಣ ಎಲ್ಲರೂ ಗುಂಪಾಗಿ ಮನೆಯಿಂದ ಹೊರಟರು. ನಾಯಿಗಳೂ ಹಿಂಬಾಲಿಸಿದುವು. ಅವರು ಹೋಗುವುದನ್ನೇ ಬಾಗಿಲಲ್ಲಿ ನಿಂತು ನೋಡುತ್ತಿದ್ದ ಪುಟ್ಟಮ್ಮನಿಗೆ “ಅಯ್ಯೊ ನಾನು ಗಂಡಾಗಿ ಹುಟ್ಟಬಾರದಾಗಿತ್ತೇ” ಎಂದೆನ್ನಿಸಿತ್ತು.

ಹಿಂದೆ ನಡೆದಿದ್ದ ಸೋಮನ ಕಥೆಯನ್ನು ಉಪ್ಪು ಕಾರ ಹಚ್ಚಿ ಹೇಳುತ್ತಿದ್ದ ಪುಟ್ಟಣ್ಣ ಹೆಗಲಮೇಲೆ ತೋಟಾಕೋವಿಯನ್ನು ಹೊತ್ತುಕೊಂಡಿದ್ದನು. ಎಲ್ಲರೂ ನಡುನಡುವೆ ಗಟ್ಟಿಯಾಗಿ ನಕ್ಕು ಹಾರಿ ಬೀಳುತ್ತಿದ್ದರು. ಆ ಬೆಳಗಿನ ತಿರುಗಾಟಕ್ಕೆ ಯಾರೂ ನಿಯಮಿಸದಿದ್ದರೂ, ವಾಸು ತನ್ನನ್ನು ತಾನೆ ನಿಯಮಿಸಿಕೊಂಡು, ಮಾರ್ಗದರ್ಶಿಯಾಗಿಬಿಟ್ಟಿದ್ದನು.

ಹಿಂದಿನ ದಿನ ಸಾಯಂಕಾಲ ಮುಂಗಾರು ಮಳೆ ಚೆನ್ನಾಗಿ ಸುರಿದಿದ್ದರಿಂದ ವಾಯುಮಂಡಲ ನಿರ್ಮಲವಾಗಿತ್ತು. ಆಕಾಶ ಪ್ರಸನ್ನವಾಗಿತ್ತು. ಮಳೆಯಲ್ಲಿ ಮಿಂದ ಮರಗಿಡ ಬಳ್ಳಿಗಳ ಹಸುರೆಲೆಗಳಿಗೆ ಮತ್ತಿನಿತು ಹಸುರೇರಿ ಕಾಡುಗಳೆಲ್ಲ ಕಳಕಳಿಸಿ ನಗುವಂತಿದ್ದುವು. ನೆಲದ ಹುಲ್ಲಿನಮೇಲೆಗಳಲ್ಲಿಯೂ ಬಿದಿರುಮಳೆಗಳಲ್ಲಿ ಬಳ್ಳಿಯ ಕುಡಿಕುಡಿಗಳಲ್ಲಿಯೂ ಎಲೆಗಳ ತುದಿತುದಿಗಳಲ್ಲಿಯೂ ಜೇಡರ ಬಲೆಗಳಲ್ಲಿಯೂ ನೂರು, ಸಾವಿರ, ಕೋಟಿ ಕೋಟಿ ಹನಿಗಳು ಮುನ್ನೇಸರ ಹೊಂಬಿಸಿಲಲ್ಲಿ ಬಣ್ಣ ಬಣ್ಣದ ಸಣ್ಣ ಸಣ್ಣ ರನ್ನಸೊಡರುಗಳಂತೆ ಕಿಡಿಕಿಡಿಯಾಗಿ, ಉರಿ ಉರಿಯಾಗಿ, ಮೆಲ್ಲೆಲರಲ್ಲಿ ಮಿಣುಕಿಮಿಣುಕಿ ಮಿರುಗುತ್ತಿದ್ದುವು. ಗಿಣಿ, ಪಿಕಳಾರ, ಕಾಮಳ್ಳಿ, ಕಾಜಾಣ, ಮಿಂಚುಳ್ಳಿ, ಚೋರೆ, ಕುಟುರ, ಪುರಳಿ-ಮೊದಲಾದ ಹಕ್ಕಿಗಳ ವಸಂತೋದಯ ಗಾನ ಪ್ರಾತರ್ಮೌನ ಸಮುದ್ರವನ್ನು ಮಧುರರವತರಂಗಿರವನ್ನಾಗಿ ಮಾಡಿತ್ತು. ತೊಯ್ದ ನೆಲದ ತಂಪು, ಮಿಂದ ಹಸುರಿನ ತಂಪು, ಮೃದುಗಾಳಿಯ ತಂಪುಗಳಿಂದ ಜಗವೆಲ್ಲ ತಂಪಾಗಿತ್ತು. ಜೀವಿಸುವುದಕ್ಕಿಂತಲೂ ಹೆಚ್ಚಾದ ಜೀವನದ ಗುರಿ ಮತ್ತೊಂದಿಲ್ಲ ಎಂಬಂತೆ ತೋರುತ್ತಿತ್ತು.

ಮನೆಗೆ ಸಮಿಪದಲ್ಲಿದ್ದ ಕೆರೆಯ ಬಳಿಗೆ ಹೋಗಿ, ವಾಸು ನೆಟ್ಟು ಸಾಕಿದ್ದ ಕಿತ್ತಳೆ ಗಿಡಗಳನ್ನು ನೋಡಿದರು. ಅಲ್ಲಿಂದ ಪುಟ್ಟಣ್ಣನ ತರಕಾರಿಯ ಹಿತ್ತಲಿಗೆ ಹೋಗಿ ಮುಳುಗಾಯಿ, ಹರುವೆ ಸೊಪ್ಪು, ಕೊತ್ತುಂಬರಿ ಸೊಪ್ಪು, ಮೆಣಸಿನ ಗಿಡಗಳನ್ನೂ ನೋಡಿದರು. ಹಿಂದಿನ ದಿನದ ಮಳೆಗಾಳಿಗೆ ಉರುಳಿ ಬಿದ್ದಿದ್ದ ಗಿಡಗಳಿಗೆ ಊರೆಗೋಲುಗಳನ್ನು ಕೊಟ್ಟು ನಿಲ್ಲಿಸಿದರು. ಅಲ್ಲಲ್ಲಿ ಕೆಲವು ಗಿಡಗಳ ಬುಡಗಳಲ್ಲಿ ಪುಟ್ಟಪುಟ್ಟ ಕೆರೆಗಳಂತೆ ನಿಂತಿದ್ದ ಮಳೆನೀರನ್ನು ಸಣ್ಣ ಸಣ್ಣ ಕಾಲುವೆ ಮಾಡಿ ಓಡಿಸಿದರು.

ಅಲ್ಲಿಂದ ಗುಂಪು ತೋಟಕ್ಕಿಳಿದು, ಅಡಕೆಯ ಮರಗಳ ನಡುವೆ ನಿಬಿಡವಾಗಿ ಬೆಳೆದಿದ್ದ ಬಾಳೆಯ ಪೊದೆಗಳ ಸಂದುಗೊಂದುಗಳಲ್ಲಿ ನುಸುಳಿ ಗದ್ದೆಯ ಕಡೆಗೆ ಬರುತ್ತಿತ್ತು. ಬಾಳೆಯ ಎಲೆಗಳಿಂದಲೂ ಅಡಕೆಯ. ಸೋಗೆಗಳಿಂದಲೂ ಪಟಪಟನೆ ಬೀಳುತ್ತಿದ್ದ ಹನಿಗಳಿಂದ ಎಲ್ಲರ ಬಟ್ಟೆಗಳೂ ತೊಯ್ದು ಹೋದುವು. ವಾಸು ಅಲ್ಲಲ್ಲಿ ಬಿದ್ದಿದ್ದ ಹೊಂಬಾಳೆಗಳನ್ನು ಆಯ್ದು ಪರೀಕ್ಷಿಸಿ, ಅಂದಿನ ಊಟಕ್ಕೆ ಉತ್ತಮವಾದ ಬಟ್ಟಲನ್ನು ಹುಡುಕುತ್ತಿದ್ದನು. ಉಳಿದವರು ಕಪ್ಪುಗಳನ್ನು ಹಾರಿ ಹಾರಿ ದಾಟುತ್ತ, ಅದು ಇದು ಮಾತುಕತೆಯಾಡುತ್ತ ಹೋಗುತ್ತಿದ್ದರು.

ಒಂದೆಡೆ ಬಾಳೆಯ ಪೊದರಿನ ಬುಡದಲ್ಲಿ ಕುಣಿತೋಡಿ, ಒಣಹುಲ್ಲು ಹಾಕಿ, ಯಾರಿಗೂ ತಿಳಿಯದಂತೆ ಬಾಳೆಯ ಗೊನೆಗಳನ್ನು ಕಡಿದು ಮುಚ್ಚಿಟ್ಟು, ಹಣ್ಣು ಮಾಡಿಕೊಂಡು, ಬೇಕಾದಾಗ ಬಂದು ಪಳಾರಮಾಡುವ ಅಭ್ಯಾಸವನ್ನಿಟ್ಟುಕೊಂಡಿದ್ದ ಬೇಲರ ಬೈರನ ಮಗ, ಗಂಗಹುಡುಗ, ಗುಂಪು ಬರುತ್ತಿದ್ದುದನ್ನು ನೋಡಿ, ತಿನ್ನುತ್ತಿದ್ದ ಹಣ್ಣನ್ನು ಬೇಗಬೇಗನೆ ಪೂರೈಸಿ, ಉಳಿದೆಲ್ಲವನ್ನೂ ಮೊದಲಿನಂತೆಯೆ ಬಚ್ಚಿಟ್ಟು, ಒಣಗಿ ನೇತಾಡುತ್ತಿದ್ದ ಬಾಳೆ ಎಲೆಗಳ ಮರೆಯಲ್ಲಿ ಹುದುಗಿದೆನು. ಆದರೆ ನಾಯಿಯೊಂದು, ಸರಸರ ಸದ್ದಾದುದನ್ನು ಆಲಿಸಿ, ಆ ಕಡೆ ನೋಡಿ, ಗಂಗನ ಆಕೃತಿಯನ್ನು ಕಂಡು ಬೊಗಳಿತು. ವಾಸಪ್ಪನೂ ಅತ್ತಕಡೆ ನೋಡಿದನು. ಅವನಿಗೆ ಗಂಗನು ನಿಂತಿದ್ದು ಕಾಣಿಸಲೂ ಇಲ್ಲ, ಗೊತ್ತಾಗಲೂ ಇಲ್ಲ. ಆದರೆ ಬರುತ್ತಿದ್ದವರ ಕಡೆಯೆ ಉದ್ವೇಗದಿಂದ ನೋಡುತ್ತ ನಿಂತಿದ್ದ ಗಂಗನು ವಾಸಯ್ಯ ತನ್ನನ್ನು ನೋಡಿದರೆಂದೇ ಭಾವಿಸಿ, ತಾನು ಅಡಗಿನಿಂತಿಲ್ಲ ಎಂಬುದನ್ನು ತೋರಿಸಲೆಂದು “ಹಚೀ! ಹಚೀ” ಎಂದು ನಾಯಿಯನ್ನು ಬೆದರಿಸಿದನು. ವಾಸು ಅವನು ಅವಿತಿದ್ದುದನ್ನು ತಿಳಿದು ಸಂಶಯದಿಂದ ಅಲ್ಲಿಗೆ ಹೋದನು. ಗಂಗನು ಎಲ್ಲವನ್ನೂ ಮರೆಮಾಡಿದ್ದರೂ ತಾನು ತಿಂದು ಪಕ್ಕದಲ್ಲಿ ಎಸೆದಿದ್ದ ಬಾಳೆಯ ಹಣ್ಣಿನ ಸಿಪ್ಪೆಗಳನ್ನು, ಮರೆತು, ಅಡಗಿಸಿರಲಿಲ್ಲ.

ಅದನ್ನು ಕಂಡ ವಾಸು “ಏನ್ಮಾಡ್ತಾ ಇದ್ಯೋ ಇಲ್ಲಿ?” ಎಂದು ಅಧಿಕಾರವಾಣಿಯಿಂದ ಕೇಳಿದನು.

“ಏನೂ ಇಲ್ಲಯ್ಯಾ, ಬಾಳೆ ಸರಬಲಿಗೆ, ಬಾಳೆ ಸರಬಲಿಗೆ ಬಂದಿದ್ದೆ!” ಎಂದನು ಗಂಗ.

ಗಂಗ  ಹಕ್ಕಿಯ ಗೂಡಿನಿಂದ ಮರಿಗಳನ್ನು ಕದ್ದು ತನಗೆ ಮಾಡಿದ್ದ ಮೋಸವನ್ನು ವಾಸುವಿನ್ನೂ ಮರೆತಿರಲಿಲ್ಲ.

“ಕಳ್ಳಾ ಸುಳ್ಳು ಹೇಳ್ತೀಯಾ!” ಎಂದವನೆ ನೆಲವನ್ನು ಹುಡುಕತೊಡಗಿದನು. ಕಳ್ಳನ ಗುಟ್ಟು ಕಳ್ಳನಿಗೇ ಗೊತ್ತು ಎಂಬಂತೆ ಅಂತಹ ಕೆಲಸಗಳಲ್ಲಿ ನುರಿತಿದ್ದ ವಾಸುವಿಗೆ ಬಚ್ಚಿಟ್ಟಿದ್ದ ಹಣ್ಣುಗಳನ್ನು ಕಂಡುಹಿಡಿಯುವುದೇನೂ ಕಷ್ಟವಾಗಿರಲಿಲ್ಲ.

“ಹೂವಣ್ಣಯ್ಯಾ, ರಾಮಣ್ಣಯ್ಯಾ ಇಲ್ಲಿ ಬನ್ನಿ! ಇಲ್ಲಿ ಬನ್ನಿ!” ಎಂದು ಕೂಗಿದನು.

ಆಗಲೇ ಸ್ವಲ್ಪದೂರ ಮುಂದುವರಿದಿದ್ದ ಅವರು ನಿಂತು “ಯಾಕೋ?” ಎಂದು ಕೇಳಿದರು.

“ಇಲ್ಲಿ ಬನ್ನಿ! ಇಲ್ಲಿ ಬನ್ನಿ! ಒಂದು ವಡಾಸು!” ಎಂದು ಕೂಗಿ ಹೇಳಿ “ಕಳ್ಳಸೂಳೇಮಗನೇ, ನನ್ನ ಹತ್ರ ದಗಲಬಾಜಿ ಮಾಡ್ತೀಯಾ?” ಎಂದು ಗಂಗನನ್ನು ಬೈದನು.

ಎಲ್ಲರೂ ಬಂದು ನೋಡಿದರು. ಮಾಗಿದ್ದ ಹಳದಿ ಹೊಂಬಣ್ಣದ ಬಾಳೆಯ ಹಣ್ಣುಗಳು ಹುಲ್ಲು ಹಾಸಿದ್ದ ಕುಣಿಯಲ್ಲಿ ಕುಳಿತು ಕಂಪು ಬೀರುತ್ತಿದ್ದುವು. ಗಂಗ ಕಣ್ಣೀರು ಸುರಿಸುತ್ತ ನಿಂತಿದ್ದನು. ವಿಷಯವೆಲ್ಲವನ್ನೂ ತಿಳಿದ ಮೇಲೆ ಹೂವಯ್ಯ ಅವನನ್ನು ಗದರಿಸುವ ಕೆಲಸಕ್ಕೆ ಹೋಗದೆ, ಆದಷ್ಟು ಹಣ್ಣುಗಳನ್ನು ಎಲ್ಲರಿಗೂ ಹಂಚಿಕೊಟ್ಟು, ಉಳಿದುದನ್ನು ಗಂಗನ ಕೈಯಲ್ಲಿಯೆ ಮನೆಗೆ ಕೊಂಡುವಂತೆ ಹೇಳಿ ಕೊಟ್ಟನು. ವಾಸುವಿಗೆ ಆಶಾಭಂಗವಾಯಿತು, ಗಂಗನಿಗೆ ಪೆಟ್ಟು ಬೀಳಲಿಲ್ಲವಲ್ಲಾ ಎಂದು!

ತೋಟದಲ್ಲಿದ್ದ ಪೇರಲು ಪನ್ನೇರಲು ಮರಗಳಲ್ಲಿ ಪುಟ್ಟ ಗಂಗ ಮತ್ತು ಹಕ್ಕಿಗಳ ಕಣ್ಣಿಗೆ ತಪ್ಪಿಸಿಕೊಂಡಿದ್ದ ಹಣ್ಣುಗಳನ್ನು ಕುಯ್ದು ತಿನ್ನುತ್ತ, ಹೂವಯ್ಯ ಮೊದಲಾದವರು ಗದ್ದೆಯ ಬಯಲಿಗೆ ಬರುವಷ್ಟರಲ್ಲಿಯೆ ಬೈರ, ಸಿದ್ದರು ಆರುಕಟ್ಟಿದ್ದರು. ಹಿಂದಿನ ದಿನದ ಮಳೆ ಚೆನ್ನಾಗಿ ಹುಯ್ದುದರಿಂದ ಬೇಸಗೆಯ ಬಿಸಿಲಿಗೆ ಚೆನ್ನಾಗಿ ಒಣಗಿ ಬಿರುಕು ಬಿಟ್ಟಿದ್ದ ಗದ್ದೆಗಳೆಲ್ಲ ನೀರು ಕುಡಿದು ಮೆತ್ತಗಾಗಿದ್ದುವು. ಕಾಲಿಟ್ಟರೆ ಮಣ್ಣಿನ ಮೃದುತ್ವವೂ ಶೈತ್ಯವೂ ಹರ್ಷಪ್ರದವಾಗಿತ್ತು. ಕಾಳುಗಳನ್ನು ಮೇಯುತ್ತಿದ್ದ ಹೊರಸಲು ಹಕ್ಕಿಗಳು ಪಟಪಟನೆ ಹಾರಿ ಗದ್ದೆಯ ಮೇರೆಯಲ್ಲಿದ್ದ ಮರಗಳ ಮೇಲೆ ಕುಳಿತುವು. ಪುಟ್ಟಣ್ಣ ಅವುಗಳಿಗಾಗಿ ಹೊಂಚು ಹಾಕಿಕೊಂಡು ಹೋದನು. ಹೂವಯ್ಯ ರಾಮಯ್ಯ ವಾಸು ಮೂವರೂ ಉಳುತ್ತಿದ್ದ ಗದ್ದೆಯ ಅಂಚಿಗೆ ಹೋದರು.

ಬೈರ ಕಬ್ಬಿಣದ ನೇಗಿಲು ಹಿಡಿದಿದ್ದನು. ಸಿದ್ದನದು ಮರದಿಂದ ಮಾಡಿದ್ದ ನಾಡು ನೇಗಿಲಾಗಿತ್ತು: “ಹುಮಾ, ಚಿಗಾ, ಹಮ್ ಮ್ ಮ್, ಚಿಗ ಚಿಗ ಚಿಗಾ” ಮೊದಲಾದ ಸಂಕೇತ ಪದಗಳಿಗೆ ಎತ್ತುಗಳು ಚಲಿಸಿದಂತೆಲ್ಲ ಕುಳವು ನೆಲವನ್ನು ಸೀಳಿ ಮಣ್ಣನ್ನು ಇಕ್ಕೆಲಗಳಿಗೂ ಹಾಕುತ್ತಿತ್ತು. ನೇಗಿಲ ಗೆರೆಯಸಾಲು ಹಿಂದೆ ಹಿಂದೆ ಹರಿಯುತ್ತಿತ್ತು.

“ರುಸಿ ಆಗ್ಬೇಕಂತಾ ಮಾಡೀರಂತೆ! ಹೌದ್ರೇನಯ್ಯಾ” ಎಂದು ಬೈರ ನಗುನಗುತ್ತ ಕೇಳಿದನು.

“ಹೌದು ಕಣೋ!” ಎಂದು ಹೂವಯ್ಯ ನಕ್ಕನು.

ರಾಮಯ್ಯನೂ ನಕ್ಕನು. “ಹಂಗಾರೆ ನೀವು ಮದುವೆ ಆಗಾದಿಲ್ಲೇನು?”

“ಅದೆಲ್ಲಾ ನಿನಗೇತಕ್ಕೊ?”

“ಅಲ್ಲಾ, ಸುಮ್ನೆ ಕೇಳ್ದೆ. ಯಾರ್ಯಾರೋ ಆಡ್ಕೊಳ್ತಿದ್ರು.”

“ಅದಿರಲಿ, ನೇಗಿಲು ಬಿಡು. ನಾನೂ ಹೂಡ್ತೀನಿ.”

“ಸೈ, ಬಿಡಿ! ನಿಮ್ಮ ಬಿಳಿ ಪಂಚೆ ಗೆಲಾ ಗುಡ್ಸಿದ್ರೆ ವಯ್ನಾಗ್ತದೆ!”

“ಪಂಚೆ ಎತ್ತಿಕಟ್ಟಿಕೊಳ್ತೀನೋ.”

“ಎತ್ತು ಬೆದರಿದ್ರೆ?”

“ಬೆದರೋದು ಇಲ್ಲ, ಏನೂ ಇಲ್ಲ. ಇತ್ತ ಕೊಡು.”

ಹೂವಯ್ಯ ಪಂಚೆ ಎತ್ತಿಕಟ್ಟಿಕೊಂಡು, ಅಂಚಿನಿಂದ ಕೆಳಗಿಳಿದನು. ಬೈರ ತಾನು ಹಿಡಿದಿದ್ದ ನೆಕ್ಕಿಯ ಕೋಲನ್ನು ಹೂವಯ್ಯನಿಗೆ ಕೊಟ್ಟು ನೇಗಿಲಿಂದ ದೂರ ನಿಂತನು. ರಾಮಯ್ಯನೂ ಸಿದ್ದ ಉಳುತ್ತಿದ್ದ ನೇಗಿಲನ್ನು ಹಿಡಿದು ನಿಂತನು. ಬೈರ ಉಳುವ ವಿದ್ಯೆಯ ವಿಚಾರವಾಗಿ ನಾಲ್ಕು ಉಪದೇಶದ ಮಾತು ಹೇಳಿ, “ಹುಮ” “ಚಿಗ” ರಹಸ್ಯವನ್ನು ತಿಳಿಸಿದನು:

“ನೇಗಿಲು ಬಹಳ ಒತ್ತಬ್ಯಾಡಿ. ಕುಳ ಎತ್ತಿನ ಕೊಳಗಿಗೆ ಹೊಡೀದಿದಹಾಂಗೆ ನೋಡಿಕೊಳ್ಳಿ. ಎತ್ತು ಬಲಕ್ಕೆ ಒತ್ತಬೇಕಾದ್ರೆ “ಚಿಗ, ಚಿಗ, ಚಿಗ, ಅಂತಾ ಹೇಳ್ತಾ ನೆಕ್ಕಿ ಬರ್ಲಾಗೆ ಎಡಕ್ಕೆ ತಟ್ಟಿ. ಎಡಕ್ಕೆ ಒತ್ತಬೇಕಾದ್ರೆ “ಹುಮ, ಹುಮ, ಹುಮ,” ಅಂತ ಹೇಳ್ತಾ ಬಲಕ್ಕೆ ತಟ್ಟಿ…..”

ಎಂದು ಬೈರ ಹೇಳುತ್ತಿದ್ದಂತೆ ಸಿದ್ದ “ನೋಡಿದಿರಾ, ಆಗಲೆ ಕಣ್ಣು ಮಳುಸ್ತದೆ ಪುಟ್ರಾಮ!” ಎಂದು ಬೆದರುಗಣ್ಣಿನಿಂದ ಹೂವಯ್ಯನ ಬಿಳಿ ಬಟ್ಟೆಯ ಕಡೆಗೆ ನೋಡುತ್ತಿದ್ದ ಪುಟ್ಟರಾಮ ಎಂಬ ಎತ್ತನ್ನು ಗದರಿಸಿದನು. ಅದನ್ನು ನೋಡಿ ರಾಮಯ್ಯನೂ “ಹೌದು ಕಣೋ, ಅಣ್ಣಯ್ಯ. ನಿನ್ನ ಎತ್ತು ಯಾಕೋ ಕಣ್ಣು ಕೆಂಪಗೆ ಮಾಡಿಕೊಂಡಿದೆ. ಸ್ವಲ್ಪ ಹುಷಾರಾಗಿರು!” ಎಂದನು.

ಅದಕ್ಕೆ ಹೂವಯ್ಯ “ಹಾಗೇನಾದರೂ ಜೋರು ಮಾಡಿದರೆ ನೇಗಿಲು ಬಲವಾಗಿ ಒತ್ತಿ ಹಿಡಿದರೆ ಸರಿ. ಆಟ ನಿಂತುಹೋಗ್ತದೆ!” ಎಂದನು.

ಅಂಚಿನ ಮೇಲೆಯೆ ನಿಂತಿದ್ದ ವಾಸುವೂ ಏನೋ ಮಹಾ ಅನುಭವಶಾಲಿಯಂತೆಯೂ ಸಹಾಯ ಮಾಡುವವನಂತೆಯೂ “ನಾನು ಬರ್ಲೇನು ಹೇಳು, ಹೂವಣ್ಣಯ್ಯ?” ಎಂದನು.

“ಬೇಡ, ಮಾರಾಯಾ, ತಮ್ಮ ಸವಾರಿ ಅಲ್ಲೇ ನಿಂತಿರಲಿ! ನಿನ್ನ ಕಂಡರೆ ಕಲ್ಲು ಕೂಡ ಹಾರಾಡ್ತವೆ! ಎತ್ತಿನ ಗತಿ ಏನಾಗಬೇಕು!”

“ಹ್ಞೂ! ಬೈರನ್ನೇ ಕೇಳು. ಹೋದ ವರ್ಷ ನಾನೂ ಹೂಡಿದ್ದೆ!” ಎಂದನು ವಾಸು.

“ಊಟಕ್ಕೆ ಕೂತಾಗಲೇನು?”

ಬೈರ “ಹೌದು ಕಣ್ರಯ್ಯಾ. ವಾಸಪ್ಪಯ್ಯ ತಕ್ಕಮಟ್ಟಿಗೆ ಹೂಡಾಕ್ಕೆ ಕಲ್ತಾರೆ” ಎಂದನು.

ಅಂತೂ ವಾಸು ಅಂಚಿನ ಮೇಲೆಯೆ ನಿಂತು ನೋಡಬೇಕಾಯಿತು. ಹೂವಯ್ಯ ರಾಮಯ್ಯರು ಉಳಲು ಪ್ರಾರಂಭಿಸಿದರು.

ಯಾವಾಗಲೂ ಮಾಸಲು ಬಟ್ಟೆಯ ಮಂದಿಗಳನ್ನೆ ನೋಡಿ ನೋಡಿ ಅಭ್ಯಾಸವಾಗಿದ್ದ ಆ ಎತ್ತುಗಳು ಈ ಶ್ವೇತವಸನಧಾರಿಗಳನ್ನು ಕಂಡಾಗಣಿಂದಲೂ ಬೆಚ್ಚಿದ್ದುವು. ಅವರು ನೇಗಿಲು ಹಿಡಿದು ತಮ್ಮನ್ನು ಹಿಂಬಾಲಿಸಿ ಉಳಲುತೊಡಗಿದ ಒಡನೆ ಕ್ರಮ ತಪ್ಪಿ ಸಾಗತೊಡಗಿದುವು. “ಹುಮ” “ಚಿಗ””ಹುಮ ಹುಮ ಹುಮ” “ಚಿಗ ಚಿಗ ಚಿಗ” ಎಂದು ಎಷ್ಟು ಕೂಗಿಕೊಂಡರೂ ಎತ್ತಿಗಳು ವ್ಯವಸಾಯ ವಿದ್ಯೆಯ ಪಾರಿಭಾಷಿಕ ಪದಗಳನ್ನು ಒಂದಿನಿತೂ ಲೆಕ್ಕಿಸದೆ, ಗದ್ದೆಯಲ್ಲಿ ಸಿಕ್ಕಿದ  ಕಡೆಗೆ ನುಗ್ಗತೊಡಗಿದುವು. ವಾಸು, ಬೈರ, ಸಿದ್ದರು ಹೂವಯ್ಯ ರಾಮಯ್ಯರ ಪೇಚಾಟ ಕೂಗಾಟಗಳನ್ನು ನೋಡಿ ಗಟ್ಟಿಯಾಗಿ ನಗುತ್ತಿದ್ದರು. ನಡುನಡುವೆ ಸಲಹೆಗಳನ್ನು ಕೂಗಿ ಎಸೆಯುತ್ತಿದ್ದರು. ಎತ್ತುಗಳು ಇನ್ನೂ ಬೆಚ್ಚಿ ಧಾವಿಸಿದುವು. ಗಡಿಬಿಡಿಯಲ್ಲಿ ಹೂವಯ್ಯನ ಕಬ್ಬಿಣದ ನೇಗಿಲಿನ ಹರಿತವಾದ ಕುಳದ ಬಾಯಿ ಒಂದು ಎತ್ತಿನ ಕೊಳಗಿನ ಮೇಲ್ಭಾಗಕ್ಕೆ ತಗುಲಿ, ಕತ್ತಿಯಿಂದ ಕಡಿದಂತೆ ಗಾಯವಾಗಿ, ನೆತ್ತರುಹಾರಿತು. ಅದನ್ನು ನೋಡಿದ ಹೂವಯ್ಯನಿಗೆ ಗಾಬರಿಯಾಗಿ ತನ್ನ ಬಲವನ್ನೆಲ್ಲ ವೆಚ್ಚಮಾಡಿ ನೇಗಿಲನ್ನು ನೆಲಕ್ಕೆ ಅದುಮಿದನು. ಕಬ್ಬಿಣದ ನೇಗಿಲು ಆಳವಾಗಿ ನೆಲದಲ್ಲಿ ಹೂತುಕೊಂಡದ್ದರಿಂದ ಎಳೆಯಲಾರದೆ ಎತ್ತು ನಿಂತುವು.

ಆ ಹೊತ್ತಿಗೆ ಸರಿಯಾಗಿ, ಹೊರಸಲು ಹಕ್ಕಿಗಳಿಗಾಗಿ ಹೊಂಚು ಹಾಕುತ್ತಿದ್ದ ಪುಟ್ಟಣ್ಣ ಸಮಿಪದಲ್ಲಿಯೆ ಒಂದು ಈಡು ಹಾರಿಸಿದನು.

ಇನ್ನೂ ಹತೋಟಿಗೆ ಬಾರದೆ ಗದ್ದೆಯಲ್ಲಿ ನೇಗಿಲನ್ನೂ ರಾಮಯ್ಯನನ್ನೂ ಎಳೆದುಕೊಂಡು ಓಡಾಡುತ್ತಿದ್ದ ಎತ್ತುಗಳು “ಢಾಂ” ಎಂಬ ಶಬ್ದಕ್ಕೆ ಮತ್ತಷ್ಟು ಬೆದರಿ, ರಭಸದಿಂದ ಆ ಗದ್ದೆಯನ್ನೇ ಬಿಟ್ಟು ಮತ್ತೊಂದು ಗದ್ದೆಯ ಕಡೆಗೆ ನುಗ್ಗಿದುವು. ರಾಮಯ್ಯ ಹಿಡಿದದ್ದು ಮರದ ನೇಗಿಲಾದ್ದರಿಂದ ಎಷ್ಟು ಅದುಮಿದರೂ ಅದು ಎತ್ತುಗಳನ್ನು ತಡೆದು ನಿಲ್ಲಿಸುವಷ್ಟು ಘಾತಕ್ಕೆ ನೆಲದೊಳಗೆ ಹೋಗಲಿಲ್ಲ. ಎತ್ತು ಅವನನ್ನೂ ನೇಗಿಲನ್ನೂ ಒಂದೇ ಸಮನೆ ಎಳೆದುಕೊಂಡು ಅಂಚಿನೆಡೆಗೆ ಹೋದುವು. ಇನ್ನೇನು ಮೇಲಿನ ಗದ್ದೆಯ ಅಂಚಿನಿಂದ ಕೆಳಗಿನ ಗದ್ದೆಗೆ ಹಾರಬೇಕು! ರಾಮಯ್ಯ ಇದೇ ಸಮಯವೆಂದು ಭಾವಿಸಿ, ಸುಮಾರು ಒಂದು ಅಡಿ ಎತ್ತರವಾಗಿಯೂ ಎರಡು ಅಡಿ ಅಗಲವಾಗಿಯೂ ಇದ್ದ ಅಂಚಿಗೆ ನೇಗಿಲನ್ನು ಭದ್ರಮುಷ್ಟಿಯಿಂದ ಬಲವಾಗಿ ಒತ್ತಿದನು. ವೇಗದಿಂದ ಓಡುತ್ತಿದ್ದ ಎತ್ತುಗಳು ಝಗ್ಗನೆ ನಿಂತುವು. ಆದರೆ ಒಂದೇ ಕ್ಷಣ! ಮರುಕ್ಷಣದಲ್ಲಿ ಮರದ ನೇಗಿಲು ಮುರಿದು, ಈಸು ನೊಗಗಳೊಡನೆ ಎತ್ತುತಳು ಕೆಳಗದ್ದೆಗೆ ಹಾರಿದುವು. ನೇಗಿಲಿನ ಮೇಣಿಯನ್ನು ಮಾತ್ರ ಕೈಯಲ್ಲಿ ಹಿಡಿದುಕೊಂಡು ರಾಮಯ್ಯ ಮೇಲಿನ ಗದ್ದೆಯಲ್ಲಿಯೆ ನಿಂತಿದ್ದನು!

ಯಾರೂ ಹೆಚ್ಚು ಹೊತ್ತು ನಗಲಾಗಲಿಲ್ಲ. ಅಪಾಯ ಲಘುವಾಗಿದ್ದರೆ  ವಿನೋದವಾಗುತ್ತದೆ; ಗುರುತರವಾದರೆ ವಿಷಾದವಾಗುತ್ತದೆ. ಗಾಯಗೊಂಡ ಎತ್ತಿನ ಕಾಲಿನಿಂದ ನೆತ್ತರು ಚಿಮ್ಮುತ್ತಿದ್ದದ್ದೂ ನೇಗಿಲು ಮುರಿದುಹೋದುದೂ ಬೇಸಾಯಗಾರರ ದೃಷ್ಟಿಗೆ ಲಘುಘಟನೆಗಳಾಗಿ ತೋರಲಿಲ್ಲ. ಅದರಲ್ಲಿಯೂ ಪ್ರಾರಂಭದ ದಿನದಲ್ಲಿ ನೇಗಿಲು ಮುರಿಯುವುದೆಂದರೆ ಮಹಾ ಅಪಶಕುನವೆಂದು ಅವರೆಲ್ಲರ ನಂಬುಗೆಯಾಗಿತ್ತು. ಉಲ್ಲಾಸದಿಂದ ಗಟ್ಟಿಯಾಗಿ ಮಾತಾಡುತ್ತಿದ್ದವರು ವಿಷಣ್ಣರಾಗಿ ಮೆಲ್ಲನೆ ಮಾತಾಡತೊಡಗಿದರು. ಬೈರ ಸಿದ್ದರಂತೂ ಭೀತರಾಗಿದ್ದರು: ನಡೆದ ಸಂಗತಿ ಗೌಡರಿಗೆ ತಿಳಿದರೆ ಏನು ಗತಿ, ಎಂದು.

ಬೈರ ಭಯೋದ್ವಿಗ್ನ ದ್ವನಿಯಿಂದ “ನಾ ಹೇಳ್ದೆ ಆಗ್ಲೆ, ಬ್ಯಾಡ, ಎತ್ತು ಬೆದರ್ತವೆ ಅಂತಾ!” ಎಂದನು.

ಸಿದ್ದ “ಬೆಳಗಾತ  ಎದ್ದವ್ನೇ ಯಾರ ಮಖಾ ನೋಡಿದ್ನೋ ಏನೋ. ನನ್ನ ಗಿರಾಚಾರ!” ಎಂದು ಮುರಿದ ನೇಗಿಲನ್ನು ನೆಲಕ್ಕೆಸದು, ತಲೆಯಮೇಲೆ ಕೈಹೊತ್ತುಕೊಂಡು ಕುಳಿತನು.

“ಇಲ್ಲಿಗೆ ಬರುವಾಗ್ಲೆ ದಾರೀಲಿ ಕಾಗಿ ಅಡ್ಡ ಬಂತು. ಏನೋ ಆಗ್ತದೆ ಅಂತಾನೆ ಬಂದೆ! ಆಗೇ ಬಿಡ್ತು!”

“ನಾ ಕಲ್ಲು ಎಡಗ್ದಾಗ್ಲೆ ಮನ್ಸೀಗೆ ಹೊಳೀತು, ಇವತ್ತು ನನ್ನ ಗಿರಾಚಾರ ನೆಟ್ಟಗಿಲ್ಲ ಅಂತಾ!”

ಬೈರ ಸಿದ್ದರು ಹೀಗೆ ಒಬ್ಬರಾದಮೇಲೊಬ್ಬರು ಗೊಣಗುತ್ತಿದ್ದರು. ನಡುವೆ ವಾಸುವೂ ಬಾಯಿ ಹಾಕಿ “ನಾ ಹೇಳಿದ್ದೆ ಮೊದಲೆ! ಅದಕ್ಕೇನೆ ನಾನೂ ಬರ್ಲೇನೂ ಅಂತ ಕೇಳ್ದೆ. ಹೂವಣ್ಣಯ್ಯ ಬೇಡ ಅಂತಾ ಬೈದುಬಿಟ್ಟ! ಈಗ?” ಎಂದನು.

ಅದುವರೆಗೂ ಸುಮ್ಮನಿದ್ದ ಹೂವಯ್ಯ ರಾಮಯ್ಯರಿಬ್ಬರಿಗೂ ಇವರ ಮಾತುಗಳನ್ನು ಕೇಳಿ ಸಿಟ್ಟುಬಂದಿತ್ತು. ಆಗುವುದು ಆಗಿಹೋದ ಮೇಲೆ, ಮುಂದೆ ಮಾಡಬೇಕಾದ ಕೆಲಸವನ್ನು ಬಿಟ್ಟು, ಹೀಗೆ ಮಾತಾಡುತ್ತಿದ್ದರೆ ಯಾರಿಗೆ ತಾನೆ ಮನಸ್ಸು ನೋಯುವುದಿಲ್ಲ.

ಹೂವಯ್ಯ ವಾಸು ಮಾತು ಮುಗಿಸಿದ ಕೂಡಲೆ ಅವನ ಕಡೆಗೆ ತಟಕ್ಕನೆ ತಿರುಗಿ, ಮುಖ ಕಂತರಿಸಿಕೊಂಡು “ಸಾಕು, ಸುಮ್ಮನಿರೊ! ಏನು ಬೈದನೋ ನಾನು ನಿನಗೆ? ಮಹಾ! ಎವನಿದ್ದಿದ್ದರೆ ಎಲ್ಲ ಸರಿಹೋಗ್ತಿತ್ತಂತೆ?” ಎಂದು ಗದರಿಸಿದನು.

ವಾಸು ಮುಖ ಸಪ್ಪಗೆ ಮಾಡಿಕೊಂಡು ಸುಮ್ಮನೆ ನಿಂತನು.

ರಾಮಯ್ಯ ಗಟ್ಟಿಯಾಗಿ “ಏ ಬೈರಾ, ಆರು ಬಿಟ್ಟು, ಎತ್ತು ಕೊಟ್ಟಿಗೆಗೆ ಹೊಡೆದುಕೊಂಡು ಹೋಗಿ, ಕಾಲಿಗೆ ಔಷಧಿ ಹಾಕಿ” ಎಂದು ಸಿದ್ದನ ಕಡೆ ತಿರುಗಿ “ಯಾಕೋ ತಲೇಮೇಲೆ ಕೈಹೊತ್ತುಕೊಂಡು ಕೂತೀಯ?…. ಏಳೋ!…. ಏಳ್ತೀಯೋ ಇಲ್ಲೋ?” ಎಂದು ಅಪ್ಪಣೆ ಮಾಡಿದನು.

“ಎಂಥಾ ಏಲೋದೋ ಏನೋ? ನನಗಂತೂ ಕಾಲೇ ಬರೋದಿಲ್ಲ” ಎಂದು ನೀಳ್ದನಿಯಿಂದ ಗೊಣಗುತ್ತ ಸಿದ್ದನೆದ್ದು ನಿಂತನು.

ಅಷ್ಟರಲ್ಲಿ ಪುಟ್ಟಣ್ಣ “ಹಚೀ! ಹಚೀ! ಹಚೀ! ಬಿಡೂ! ಬಿಡೂ! ಬಿಡೂ! ಕೊತ್ವಾಲ!” ಎಂದು ಅಬ್ಬರಿಸಿ ಕೂಗಿಕೊಂಡಿದ್ದು ಕೇಳಿಬಂದುಮ್ ಹೂವಯ್ಯ ರಾಮಯ್ಯ ವಾಸು ಮೂವರೂ ಆ ಕಡೆಗೆ ಓಡಿದರು.

ಪುಟ್ಟಣ್ಣ ಈಡು ಹೊಡೆದೊಡನೆಯೆ ನಾಯಿಗಳೆಲ್ಲ ಅಲ್ಲಿಗೆ ಹೋಗಿದ್ದುವು. ರೆಕ್ಕೆಗೆ ಚರೆ ತಗಲಿ ಹೊರಸಲು ಹಕ್ಕಿಯೇನೋ ಕೆಳಗೆ ಬಿತ್ತು. ಆದರೆ ಪ್ರಾಣವಿದ್ದುದರಿಂದ ಎಲ್ಲಿಯೋ ಗಿಡಬಳ್ಳಿಗಳ ಇಡುಕುರಿನಲ್ಲಿ ಅಡಗಿ ಬಿಟ್ಟಿತು. ಬೇಟೆಗಾರನೊಡನೆ ನಾಯಿಗಳೂ ಅದನ್ನು ಅರಸತೊಡಗಿದುವು.

ಸ್ವಲ್ಪಹೊತ್ತು ಹುಡುಕಾಡಿದಮೇಲೆ ಹಕ್ಕಿ ಕೊತ್ವಾಲನ ಕಣ್ಣಿಗೆ ಬಿದ್ದು, ಬಾಯಿಗೂ ಬಿದ್ದಿತು! ಹಕ್ಕಿ ಪಟಪಟನೆ ಒದ್ದಾಡಿಕೊಂಡಿತು. ನಾಯಿ ಅದನ್ನು ಬಾಯಲ್ಲಿ ಕಚ್ಚಿಕೊಂಡು ಓಡತೊಡಗಿತು. ಪುಟ್ಟಣ್ಣ ಅಬ್ಬರಿಸುತ್ತ ಬೇಟೆಯನ್ನು ಬಿಡಿಸಿಕೊಳ್ಳಲೆಂದು ನಾಯಿಯನ್ನು ಅಟ್ಟಿಕೊಂಡು ಹೋದನು. ನಾಯಿ ಓಡುತ್ತಲೇ ಹಕ್ಕಿಯನ್ನೂ ನುಂಗುತ್ತ, ಸೀಗೆಯ ಮೆಳೆಗಳಲ್ಲಿ ನುಸುಳಿ ಹೋಯಿತು. ಪುಟ್ಟಣ್ಣ ಸಿಟ್ಟಿನಿಂದ ಹಲ್ಲುಹಲ್ಲು ಕಡಿಯುತ್ತ “ನೀನು ಮನೆಗೆ ಬಾ, ಹಕ್ಕಿ ತಿಂದಿದ್ದು ಕಕ್ಕಿಸ್ತೀನಿ!” ಎಂದು ಶಪಿಸುತ್ತ ನಿಂತಿದ್ದನು.

ಹೂವಯ್ಯ ಮೊದಲಾದವರು ಬರಲು, ನಡೆದುದನ್ನೆಲ್ಲ ಹೇಳಿ “ಏನು ಮಾಡ್ಬೇಕಾಯ್ತು ಆ ನಾಯಿಗೆ? ಇದೇ ಮೊದಲನೆ ಸಲ ಅಲ್ಲ. ಎರಡು ಮೂರು ಸಲ ಹೀಂಗೆ ಮಾಡಿದೆ!” ಎಂದನು.

ವಾಸು “ಎರಡು ಮೂರು ದಿನ ಕಟ್ಟಿಹಾಕಿ ಅನ್ನ ಹಾಕ್ಬಾರ್ದು” ಎಂದು ಶಿಕ್ಷೆ ವಿಧಿಸಿದನು.

ಎಲ್ಲರೂ ಸೇರಿ ಹಕ್ಕಿಬೇಟೆಗೋಸ್ಕರ ಕೆಳಕಾನೂರಿನ ಕಡೆಗೆ ಹೋದರು.

ಇತ್ತ ಬೈರ ಗಾಯಗೊಂಡ ಎತ್ತನ್ನು ಹಿಡಿದುಕೊಂಡು ಕೊಟ್ಟಿಗೆಯ ಕಡೆಗೆ ಹೊರಟನು. ಅವನ ಹಿಂದೆ ಸಿದ್ದ ಮುರಿದ ನೇಗಿಲನ್ನು ಹೊತ್ತುಕೊಂಡು ಹೋಗುತ್ತಿದ್ದನು.

ಕಬ್ಬಿನ ಗದ್ದೆಯಲ್ಲಿ ಗಟ್ಟದಾಳುಗಳ ಮೇಲ್ವಿಚಾರಣೆ ತೆಗೆದು ಕೊಂಡು ಸೇರೆಗಾರರೊಡನೆ ಬರುತ್ತಿದ್ದ ಚಂದ್ರಯ್ಯಗೌಡರು ದೂರದಲ್ಲಿ ಬೈರ ಸಿದ್ದರು ಆರು ಬಿಟ್ಟು ಹೋಗುತ್ತಿದ್ದುದನ್ನು ಕಂಡು “ಈ ಸೂಳೇ ಮಕ್ಕಳಿಗೆ ಏನು ಮಾಡಬೇಕಾಯ್ತು? ಒಂಬತ್ತು ಗಂಟೆಗೆ ಕೆಲಸಕ್ಕೆ ಹೊರಡ್ತಾರೆ!” ಹತ್ತು ಗಂಟೆಗೆ ಕೆಲಸ ಬಿಡ್ತಾರೆ!” ಎಂದು, ಗಟ್ಟಿಯಾಗಿ ಕೂಗಿದರು: “ಏ, ಬೈರಾ! ನಿಮ್ಮ ಬಿಡಾರಕ್ಕೆ ಬೆಂಕಿ ಬೀಳಾ! ಇಷ್ಟು ಬೇಗನೆ ಆರು ಬಿಟ್ಟು ಗುಡೀಗೆ ಸಾಯ್ತಿರೇನೋ?”

ಗೌಡರ ಸ್ವರವನ್ನು ಕೇಳಿದ ಕೂಡಲೆ ಸಿದ್ದನಿಗೆ ಜಂಘಾಬಲವೇ ಉಡುಗಿ ಹೋದಂತಾಗಿ “ಬೈರಣ್ಣಾ. ಇವತ್ತು ನಮಗೆ ಗಿರಾಚಾರ ಕಾಡಿದೆ!” ಎಂದನು.

ಬೈರ ನಡೆದುದನ್ನೆಲ್ಲ ಚಾಚೂ ತಪ್ಪದೆ ವರದಿ ಹೇಳಿದನು. ಗೌಡರು ಎತ್ತಿನ ಕಾಲಿಗಾದ ಗಾಯವನ್ನೂ ಮುರಿದೆ ನೇಗಿಲನ್ನೂ ನೋಡಿ “ಮನೆಹಾಳ ಮಕ್ಕಳು!.. ನಿಮಗೆ ಯಾರೋ ಹೇಳಿದವರು ಅವರ ಕೈಗೆ ನೇಗಿಲ ಕೊಡಾಕೆ?” ಎಂದವರೆ ಬೈರನ ಕಪಾಲಕ್ಕೊಂದು. ಪಟೀರೆಂದು ಕೊಟ್ಟರು. ಮೇಲಿನ ಗದ್ದೆಯ ಅಂಚಿನ ಮೇಲೆ ನಿಂತಿದ್ದ ಸಿದ್ದ ತನಗೂ ಎಲ್ಲಿ ಏಟು ಬೀಳುತ್ತದೆಯೋ ಎಂದು ಅಂಜಿ ಹಿಂದು ಹಿಂದಕ್ಕೆ ಸರಿದು, ಕಾಲುತಪ್ಪಿ, ಹೊತ್ತ ನೇಗಿಲೊಡನೆ ಮೂರು ನಾಲ್ಕು ಅಡಿ ತಗ್ಗಾಗಿದ್ದ ಕೆಳಗಿನ ಗದ್ದೆಗೆ ದಿಸಿಲ್ಲನೆ ಉರುಳಿಬಿದ್ದನು!

ಗೌಡರು ರಂಗಪ್ಪಸೆಟ್ಟರ ಕಡೆಗೆ ತಿರುಗಿ “ಸೇರೆಗಾರ್ರೇ ಇವರಿಗೆ ಇವತ್ತು ಕೂಲಿ ಬತ್ತ ವಜಾ!” ಎಂದು ನಶ್ಯಹಾಕುತ್ತ ಹೊರಟುಹೋದರು.

“ನಾವೇನು ಮಾಡಾದು, ನೀವೇ ಹೇಳಿ, ಸೇರೆಗಾರ್ರೆ! ಅವರು ಬಂದು ಕೇಳಿದ್ರೆ ಕೊಡಾದಿಲ್ಲ ಅನ್ನಾಕ್ಕೆ  ಆಗ್ತದೆಯೇ?” ಎಂದು ಬೈರ ಕೆನ್ನೆಯುಜ್ಜಿಕೊಳ್ಳುತ್ತ ಕಣ್ಣೀರು ಕರೆದನು.

ಗದ್ದೆಯಿಂದ ಮೇಲೆದ್ದ ಸಿದ್ದ ಮೈಕೊಡವಿಕೊಳ್ಳುತ್ತ “ನಮ್ಮ ಗಿರಾಚಾರ! ಹಾಳು ಜನ್ಮಾನಾ ಬಿಸಾಕ!” ಎನ್ನುತ್ತಿದ್ದನು.

ಬೈರ ಹಿಡಿದುಕೊಂಡಿದ್ದ ಎತ್ತು ತನ್ನ ಗೋಣನ್ನು ಮಡಿಸಿ ಮೈ ನೆಕ್ಕಿಕೊಳ್ಳುತ್ತಿತ್ತು.

ಸೇರೆಗಾರರು ಕಣ್ಣುಮಿಟುಕಿಸಿ ಬೈರನ ಕಣ್ಣನ್ನೇ ನೋಡುತ್ತ ಪಿಸುಮಾತಿನಲ್ಲಿ “ಇವತ್ತೊಂದು ಸೀಸ ಕೊಡ್ತೀಯಾ?” ಎಂದರು.

ಬೈರ ಕ್ಷಣಾರ್ಧದಲ್ಲಿ ತನಗಾಗಿದ್ದ ನೋವು ಅಪಮಾನಗಳನ್ನೆಲ್ಲ ಮರೆತು ಬೇರೊಂದು ಪ್ರಪಂಚಕ್ಕೆ ಎಚ್ಚತ್ತವನಂತೆ, ಪಿಸುಮಾತಿನಲ್ಲಿಯೆ “ನೋಡ್ತೀನಿ ಏನಾಗ್ತದೋ. ಇವತ್ತು ನಮ್ಮ ಬಿಡಾರಕ್ಕೆ ನೆಂಟರು ಬರ್ತಾರಂತೆ! ಏನಾರಾಗ್ಲಿ, ಬೈಗಿನ ಹೊತ್ತು ಆ ಬಸಿರಿಮರದ ಬುಡದ ಹುಳಿಚೊಪ್ಪಿನ ಮಟ್ಟಾಗೆ ಬಂದು ನೋಡಿ!” ಎಂದನು.

ಸಾಯಂಕಾಲ. ಬಸಿರಿಮರದ ನೆಳಲು ಪೂರ್ವದ ಕಡೆಗೆ ಬೇಗಬೇಗನೆ ನೀಳವಾಗುತ್ತಿದ್ದಾಗ, ಇನ್ನೂ ದನಗಳು ಕೊಟ್ಟಿಗೆಗೆ ಬರುವ ಮೊದಲು ಸೇರೆಗಾರರು ಬೈರ ಸೂಚಿಸಿದ್ದ ಬಸಿರಿಮರದ ಬುಡದಲ್ಲಿದ್ದ ಹುಳಿಚೊಪ್ಪಿನ ಪೊದೆಗೆ ಹೋಗಿ ನೋಡಿದರು. ಹಸುರು ನೀಲಿಯ ಬಣ್ಣದ ಗಾಜಿನ ಶೀಸೆಯೊಂದೇನೋ ಅಲ್ಲಿ ಮೌನವಾಗಿ ನಿಂತಿತ್ತು. ಆದರೆ ಅದರಲ್ಲಿ ಕಳ್ಳು ಇರಲಿಲ್ಲ. ಸೆಟ್ಟರು ಬೈರನ ಮೇಲೆ ಮುನಿದುಕೊಂಡು “ಇರಲಿ, ನನ್ನ ಕೈಲೇನಾಗ್ತದೆ ಕಾಂಬ!” ಎಂದುಕೊಂಡು ಮನೆಗೆ ಬಂದರು.

ಸ್ವಲ್ಪ ಹೊತ್ತಿನ ಮೇಲೆ ಬೈರ ಸಿದ್ದರಿಬ್ಬರೂ ಆ ದಿನ ಕೆಲಸಕ್ಕೆ ಹೋಗಿದ್ದ ಇತರ ಆಳುಗಳೊಡನೆ “ಪಡಿ” ಇಸುಕೊಳ್ಳಲು ಮನೆಗೆ ಬಂದರು. (“ಮನೆ” ಎಂದರೆ ಗೌಡರ ನಿವಾಸ. ಉಳಿದವರೆಲ್ಲರ ನಿವಾಸಗಳಿಗೆ “ಬಿಡಾರ” “ಗುಡಿ” ಎಂದು ಹೆಸರು.)

ಸೇರೆಗಾರರು ಎಲ್ಲರಿಗೂ ಪಡಿಕೊಟ್ಟು, ಗೌಡರ ಅಪ್ಪಣೆಯ ಪ್ರಕಾರ, ಬೈರ ಸಿದ್ದರಿಗೆ ಕೊಡಲಿಲ್ಲ. ಅವರಿಬ್ಬರೂ ನಾನಾ ಪ್ರಕಾರವಾಗಿ ಬೇಡಿಕೊಂಡರು.

“ಹೀಂಗೆ ಮಾಡಿದ್ರೆ ಹೇಂಗೋ? ಅದಕ್ಕೆ (ತನ್ನ ಹೆಂಡತಿ ಸೇಸಿಗೆ) ಜಡ ಬಂದು ಬಿದ್ದುಕೊಂಡದೆ. ಗಂಜಿಮಾಡಿ ಹಾಕಾಕೆ ಅಕ್ಕಿಕಾಳಿಲ್ಲ ಗುಡೀಲಿ” ಎಂದನು ಬೈರ.

“ಗೌಡರ್ನೇ ಕೇಳ್ಕೊಂಡು ಬನ್ನಿ. ಹೊಟ್ಟೇಗಿಲ್ದೆ ಮಲ್ಗಾನೇನು ರಾತ್ರಿ” ಎಂದನು ಸಿದ್ದ.

“ಗೌಡರು ಮನೆಯಲ್ಲಿ ಇಲ್ಲವೋ” ಎಂದರು ಸೇರೆಗಾರರು.

ಅಷ್ಟು ಹೊತ್ತಿಗೆ ಒಳಗಿನಿಂದ ಜಗಲಿಗೆ ಬಂದ ಪುಟ್ಟಮ್ಮನನ್ನು ಕುರಿತು ಬೈರ ಅಹವಾಲು ಹೇಳಿಕೊಂಡನು.

ಪುಟ್ಟಮ್ಮ “ಸೇರೆಗಾರ್ರೇ, ಹೋಗಲಿ ಬಿಡಿ. ಇವತ್ತಿಗೆ ಕೊಟ್ಟುಬಿಡಿ. ಪಾಪದವರು!” ಎಂದಳು.

ಸೇರೆಗಾರರು ಬೆಳಗ್ಗೆ ನೇಗಿಲು ಮುರಿದುದನ್ನು ಎತ್ತಿನಕಾಲು ಗಾಯಗೊಂಡುದನ್ನೂ ಹೇಳಿ, ಚಂದ್ರಯ್ಯಗೌಡರ ಕಟ್ಟಪ್ಪಣೆಯನ್ನೂ ತಿಳಿಸಲು ಪುಟ್ಟಮ್ಮ “ಹೌದೇನ್ರೋ, ಇಂಥ ಅನ್ಯಾಯ ಮಾಡೋದೆ?” ಎಂದು ಕೇಳಿದಳು.

ಕೆಳಗೆ ನಡೆಯುತ್ತಿದ್ದ ಈ ವಾದವಿವಾದಗಳನ್ನೆಲ್ಲ ಉಪ್ಪರಿಗೆಯ ಮೇಲೆ ಓದುತ್ತ ಕುಳಿತಿದ್ದ ಹೂವಯ್ಯ ಆಲಿಸಿ, ಅಲ್ಲಿಯೆ ಕೋವಿ ಉಜ್ಜುತ್ತಿದ್ದ ಪುಟ್ಟಣ್ಣನನ್ನು ಕರೆದು, ಬೈರ ಸಿದ್ದರಿಗೆ ಕೂಲಿಕೊಟ್ಟು ಕಳುಹಿಸುವಂತೆ ಹೇಳಿದನು. ಅವನು ಕೆಳಗಿಳಿದು ಬಂದು ಸೇರೆಗಾರರಿಗೆ ಕೂಲಿಕೊಡುವಂತೆ ಹೇಳಿದನು.

ಸೇರೆಗಾರರು ಒಪ್ಪಲಿಲ್ಲ. ಬಹುಶಃ ಬೈರ ಶೀಸೆಗೆ ಕಳ್ಳು ತುಂಬಿ ಇಟ್ಟಿದ್ದರೆ ಸೆಟ್ಟರು ಅಷ್ಟೊಂದು ಮುಷ್ಕರದಿಂದ ಚಂದ್ರಯ್ಯಗೌಡರ ಆಜ್ಞೆಯನ್ನು ಪರಿಪಾಲಿಸಲು ಪ್ರಯತ್ನಿಸುತ್ತಿರಲಿಲ್ಲವೆಂದು ತೋರುತ್ತದೆ! ಸೇರೆಗಾರರು ಕೂಲಿಕೊಡಲು ಒಪ್ಪದಿರಲು ಪುಟ್ಟಣ್ಣ ತಾನೇ ಕೊಡುತ್ತೇನೆಂದು ಮುಂದುವರಿದನು. ಸೆಟ್ಟರಿಗೆ ಅಭಿಮಾನ ಭಂಗವಾದಂತಾಗಿ ಅವನನ್ನು ಅಡ್ಡಗಟ್ಟಿ “ನೀವು ಕೊಡಕೂಡದು. ಗೌಡರು ಹೇಳಿದ್ದಾರೆ!” ಎಂದು ನಿಂತರು.

“ಅಲ್ಲರೀ. ಹೂವೇಗೌಡ್ರು ರಾಮೇಗೌಡ್ರು ಎತ್ತಿನ ಕಾಲಿಗೆ ಗಾಯ ಮಾಡಿ ನೇಗಿಲು ಮುರಿದರೆ ಇವರಿಗ್ಯಾಕೆ ಪಡಿ ಕೊಡಬಾರದು?”

“ನನಗೆ ಗೊತ್ತಿಲ್ಲ. ಗೌಡರು ಹೇಳಿದ್ದಾರೆ!”

“ನನಗೆ “ಕೂಲಿ ಕೊಡು” ಅಂತಾ ಹೇಳಿದ್ದೂ ಗೌಡ್ರೇ!”

“ಯಾವ ಗೌಡರು?”

“ಯಾವ ಗೌಡ್ರಾದ್ರೇನು? ಹೂವೇಗೌಡ್ರು!”

“ಯಜಮಾನರು ಚಂದ್ರೇಗೌಡರು. ಹೂವೇಗೌಡರಲ್ಲ!”

ಪುಟ್ಟಣ್ಣ ಅಪ್ರತಿಭನಾಗಿ ನಿಂತನು. ಯಾರೊಬ್ಬರೂ ಮಾತಾಡದೆ ಒಂದೆಡೆರಡು ಕ್ಷಣಗಳು ನಿಃಶಬ್ದವಾಗಿತ್ತು. ಅಷ್ಟರಲ್ಲಿ ಏಣಿಯ ಮೆಟ್ಟಲು ದಡದಡನೆ ಸದ್ದಾಯಿತು. ಎಲ್ಲರೂ ಆ ಕಡೆಗೆ ತಿರುಗಿ ನೋಡಿದರು. ಓದುತ್ತಿದ್ದ ಗ್ರಂಥವನ್ನು ಕೈಯಲ್ಲಿ ಹಿಡಿದು ಸರೋಷಭಂಗಿಯಿಂದ ಹೂವಯ್ಯ ವೇಗವಾಗಿ ನಡೆದುಬಂದು “ಪುಟ್ಟಣ್ಣಾ, ಅಲ್ಲಿಂದೇಳು!”  ಎಂದು ಭೀಷಣಧ್ವನಿಯಿಂದ ನುಡಿದನು. ಅವನ ಕಣ್ಣು ಕಿಡಿಕಿಡಿಯಾಗಿದ್ದುದು ಆ ಬೈಗುಗಪ್ಪಿನಲ್ಲಿಯೂ ಕೂಡ ಎಲ್ಲರಿಗೂ ಗೊತ್ತಾಗುವಂತಿತ್ತು.  ಪುಟ್ಟಣ್ಣ ದೂರ ಸರಿದು ನಿಂತನು. ಸೇರೆಗಾರರೂ ಬತ್ತದ ಕಲಬಿಯ ಮೇಲಿದ್ದ ತಮ್ಮ ಕೈಯನ್ನು ಎಳೆದುಕೊಂಡು ಹಿಂಜರಿದರು. ಸದಾ ಸೌಮ್ಯನಾಗಿಯೂ ಪ್ರಸನ್ನವದನನಾಗಿಯೂ ಇರುತ್ತಿದ್ದ ಅಣ್ಣಯ್ಯನ ಆ ಉಗ್ರಾವತಾರವನ್ನು ಕಂಡು ಪುಟ್ಟಮ್ಮನಿಗೂ ಕೂಡ ದಿಗಿಲಾಯಿತು.

“ಸೇರೆಗಾರ್ರೇ, ಅವರಿಬ್ಬರಿಗೂ “ಪಡಿ” “ಕೊಡಿ” ಎಂದು ಹೂವಯ್ಯ ಗರ್ಜಿಸಿದಕೂಡಲೆ ಸೆಟ್ಟರ ಎದೆ ಧಿಗಿಲ್ಲೆಂದಿತು. ಆದರೂ ಮತ್ತೇನನ್ನೋ ಹೇಳಲೆಂದು ಪ್ರಯತ್ನಿಸುತ್ತಿದ್ದರು.

ಹೂವಯ್ಯ ಮತ್ತಷ್ಟು ರೇಗಿ ಎರಡು ಹೆಜ್ಜೆ ಮುಂಬರಿದು ಪುನಃ ಗರ್ಜಿಸಿದನುಃ “ನೀವೇನೂ ಹೇಳುವುದು ಬೇಡ! ಒಳ್ಳೆಯ ಮಾತಿನಲ್ಲಿ ಪಡಿ ಕೊಡುತ್ತೀರೋ ಇಲ್ಲವೋ?”

ಆ ಭೀಷ್ಮ ವ್ಯಕ್ತಿತ್ವದ ಮುಂದೆ ಸೇರೆಗಾರರು ಕುಗ್ಗಿಹೋಗಿ ಒಂದಿನಿತೂ ತಡಮಾಡದೆ ಸುಮ್ಮನೆ ಪಡಿ ಅಳೆದುಕೊಟ್ಟರು. ಆಮೇಲೆ “ಬಾಯಿಗೂ”ಕೊಟ್ಟರು. (ಬಾಯಿಗೆ ಕೊಡುವುದೆಂದರೆ ಎಲೆಯಡಕೆ ಹೊಗೆಸೊಪ್ಪುಗಳನ್ನು ಕೊಡುವುದು ಎಂದರ್ಥ. ಮಲೆನಾಡುಗಳಲ್ಲಿ ಜೀತದಾಳುಗಳಿಗೆ ಪ್ರತಿದಿನವೂ ಸಾಯಂಕಾಲ ಪಡಿ ಕೊಡುವಾಗ ನಾಲ್ಕೈದು ಅಡಕೆಗಳನ್ನು ಸ್ವಲ್ಪ ಹೊಗೆಸೊಪ್ಪನ್ನೂ ಕೊಡುವ ಪದ್ಧತಿ.)

ಹೂವಯ್ಯ ಸರಕ್ಕನೆ ಹಿಂತಿರುಗಿ ಏಣಿ ಮೆಟ್ಟಲುಗಳನ್ನು ದಡದಡನೆ ಹತ್ತಿ ಉಪ್ಪರಿಗೆಗೆ ಹೋದನು.

ಕಂಬಳಿಯಲ್ಲಿ ಪಡಿಯ ಬತ್ತವನ್ನು ಸುತ್ತಿ ಬೆನ್ನಿನ ಮೇಲೆ ಹಾಕಿಕೊಂಡು ಬೈರ ಹೆಬ್ಬಾಗಿಲು ದಾಟಿದನು. ಸೇರೆಗಾರರು ಅವನ ಹಿಂದೆ ಹೋಗಿ “ಅಲ್ಲವೋ, ನಿನಗೆ ಬತ್ತ ಕೊಡಬಾರದು ಅಂತ ಅಲ್ಲಾ! ಕಳ್ಳು ಇಡುತ್ತೀನಿ ಅಂದ ಗೆಣಿಯ ಮೋಸ ಮಾಡಿಬಿಟ್ಟೆಯಲ್ಲಾ” ಎಂದು ಮೆಲ್ಲನೆ ಗುಸುಗುಟ್ಟಿದರು.

“ಆಗ್ಲೇ ಕಳ್ಳು ಸೀಸಕ್ಕೆ ಹುಯ್ದಿಟ್ಟಿದ್ದೆ!” ಎಂದು ಬೈರ ಬಾಯ್ದೆರೆದು ನಿಂತನು.

“ಸುಳ್ಳು ಬೇರೆ ಹೇಳುತ್ತೀಯಲ್ಲಾ! ನಾನಾಗಲೆ ಹೋಗಿ ನೋಡಿದೆ. ಖಾಲಿ ಸೀಸೆ ಇದ್ದಿದಲ್ಲಾ.”

“ಇಲ್ಲ ಅಂತೀನಿ. ದೇವ್ರಾಣೆಗೂ ಕಳ್ಳು ಇಟ್ಟಿದ್ದೆ! ಹಾಂಗಾರೇನಾಗ್ಬೇಕು?”

ಇಬ್ಬರೂ ಮಾತಾಡುತ್ತಿದ್ದಂತೆಯೆ ಮುಚ್ಚಂಜೆಯ ಮಬ್ಬಿನಲ್ಲಿ, ಕಳ್ಳು ಕುಡಿಯುವ ದೈನಂದಿನ ಕಾರ್ಯಕ್ರಮವನ್ನು ಪೂರೈಸಿಕೊಂಡು. ಚಂದ್ರಯ್ಯಗೌಡರು ಹಳೆಪೈಕದ ತಿಮ್ಮನೊಡನೆ ಎದುರಾಗಿ ಬಂದರು.

“ಯಾರೋ ಅದೂ?” ಎಂದರು.

ಗೌಡರ ಧ್ವನಿಯಲ್ಲಿ ಮದ್ಯದ ರಭಸವೂ ರಸವೂ ರಸವೂ ಮಿಳಿತವಾಗಿದ್ದುವು. ಧ್ವನಿಯೂ ಅವರ ಮನಸ್ಸಿನಂತೆಯೆ ಕಳ್ಳಿನಲ್ಲಿ ತೇಲುವಂತಿತ್ತು.

ಬೈರ ಭಯದಿಂದ ಕ್ಷೀಣಸ್ವರನಾಗಿ “ನಾನಯ್ಯ” ಎಂದನು.

ಸಮಿಪಗತರಾದ ಗೌಡರು ಅವನ ಬೆನ್ನಿನ ಮೇಲಿದ್ದ ಕಂಬಳಿಯ ಗಂಟನ್ನು ನೋಡಿ “ಏನೋ ಅದೂ?” ಎಂದರು.

“ಬತ್ತ!”

“ಭತ್ತ! ಭತ್ತ! ನಿಮ್ಮಪ್ಪನ್ಮನೇ ಬತ್ತ!!! ಯಾರೋ ನಿನಗೆ ಬತ್ತ ಕೊಟ್ಟೀರು?” ಎಂದು ಗದರಿದ ಗೌಡರು ಸೇರೆಗಾರರನ್ನು ನೋಡಿ “ನಾ ಹೇಳಲಿಲ್ಲೇನ್ರೀ ಬತ್ತ ಕೊಡಬೇಡೀ ಅಂತಾ! ಯಾಕೆ ಕೊಟ್ರಿ ನನ್ನ ಮಾತು ಮೀರಿ?”

ಸೇರೆಗಾರರು ನಡೆದುದನ್ನೆಲ್ಲ ಸಂಕ್ಷೇಪವಾಗಿ ಹೇಳಿಬಿಟ್ಟರು. ಮದ್ಯಪಾನದಿಂದ ಆಗಲೇ ರಭಸವಾಗಿದ್ದ ಗೌಡರ ಪ್ರಕೃತಿ ರಾಕ್ಷಸವಾಯಿತು.

“ಯಾವನೋ ನಾ ಹೇಳಿದ್ದಕ್ಕೆ ಪ್ರತಿಯಾಗಿ ಹೇಳ್ದವನು? ಯಾರ ಮನೆಯೋ ಇದು. ಯಾರಪ್ಪನ್ಮನೆ ಗಂಟೋ. ಅಲ್ಲಿಟ್ಟು ಹೋಗು ಆ ಬತ್ತಾನ!…ಇಡ್ತೀಯೋ ಇಲ್ಲೊ!” ಎಂದು ಕೂಗುತ್ತ ಗೌಡರು ಓಡಿಹೋಗಿ ಗಾಡಿಯ ನೊಗದಲ್ಲಿದ್ದ ಕೊರಳ ಗೂಟವನ್ನು ತುಡುಕಿ ಎಳೆದರು.

ಅವರು ಹಿಂತಿರುಗುವುದರೊಳಗಾಗಿ ಬೈರ ತನ್ನ ಕಂಬಳಿಯಲ್ಲಿ ಸುತ್ತಿದ್ದ ಬತ್ತದ ಗಂಟನ್ನು ಅಲ್ಲಿ ಬಿಸಾಟು, ಒಂದೇ ಉಸುರಿನಲ್ಲಿ, ಬಿಡಾರದ ಕಡೆಗೆ ಓಡಿಬಿಟ್ಟನು. ಇದನ್ನೆಲ್ಲ ನೋಡುತ್ತ ಅವಿತು ನಿಂತಿದ್ದ ಸಿದ್ದನೂ ಬೇರೆ ದಾರಿಯಲ್ಲಿ ಬೈರನಿಗಿಂತಲೂ ಹೆಚ್ಚು ಪ್ರಶಾಂತನೂ ಆಗಿ ಬಿಡಾರಕ್ಕೆ ಜುಣುಗಿದನು.

ಗದ್ದಲವನ್ನು ಕೇಳಿ ಅಲ್ಲಿಗೆ ಬಂದಿದ್ದ ನಾಯಿಗಳೂ ಮನುಷ್ಯರ ವರ್ತನೆಯನ್ನುಕಂಡು ಆಶ್ಚರ್ಯಪಡುತ್ತಿವೆಯೋ ಎಂಬಂತೆ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದುವು.

ಹೊರ ಅಂಗಳದಲ್ಲಿ ಆ ದೃಶ್ಯವಾಗುತ್ತಿದ್ದಾಗ ಉಪ್ಪರಿಗೆಯ ಮೇಲೆ ಬೇರೊಂದು ದೃಶ್ಯ ನಡೆಯುತ್ತಿತ್ತು.

ಹೂವಯ್ಯ ರಾಮಯ್ಯ ವಾಸು ಪುಟ್ಟಣ್ಣ ನಾಲ್ವರೂ ಕಿಟಕಿಯಿಂದ ಎಲ್ಲವನ್ನೂ ನೋಡುತ್ತಿದ್ದರು. ಗೌಡರು ಗಾಡಿಯ ನೊಗದ ಕೊರಳ ಗೂಟವನ್ನು ಎಳೆದುಕೊಳ್ಳಲು ಹೋದೊಡನೆಯೆ, ಬೈರನ ಮೇಲಣ ಕನಿಕರದಿಂದಲೂ ತಮ್ಮ ತಪ್ಪಿಗೆ ಇತರರು ನೋಯಬೇಕಾಯಿತಲ್ಲಾ ಎಂಬ ಪಶ್ಚಾತ್ತಾಪದಿಂದಲೂ ಹೂವಯ್ಯ ಚಿಕ್ಕಯ್ಯನನ್ನು ತಡೆದು ಬೈರನಿಗೆ ನೆರವಾಗಲು ಮನಸ್ಸುಮಾಡಿ ಹೊರಟನು. ರಾಮಯ್ಯ ಅವನ ಕೈಯನ್ನು ಬಲವಾಗಿ ಹಿಡಿದು “ಬೇಡ. ಅಣ್ಣಯ್ಯ ಈಗ ಹೋಗೋದು ಖಂಡಿತ ಬೇಡ. ಸಮಯ ಸರಿಯಾಗಿಲ್ಲ. ಅವರು ಈಗ ತಾನೇ ಕಳ್ಳುಗೊತ್ತಿನಿಂದ ಬಂದಿದಾರೆ. ಅವರ ಬುದ್ಧಿ ಅವರ ಕೈಲಿಲ್ಲ!” ಎಂದು ನಿಲ್ಲಿಸಿದನು. ಅಷ್ಟರಲ್ಲಿ ಬೈರ ಪರಾರಿಯಾದುದರಿಂದ ಹೂವಯ್ಯ ಚಿಕ್ಕಯ್ಯನನ್ನು ಸಂಧಿಸುವ ಸಾಹಸಕ್ಕೆ ಹೋಗಲಿಲ್ಲ.