ಜಗತ್ತು ರಾತ್ರಿಯ ನೀರವ ನಿದ್ದೆಗೆ ಸನ್ನಾಹಗೊಳಿಸುತ್ತಿತ್ತು. ಸೂರ್ಯನಾಗಲೆ ಮುಳುಗಿ, ಪಶ್ಚಿಮದಿಕ್ಕಿನ ಪರ್ವತ ವಿರಚಿತ ದಿಗಂತದಲ್ಲಿ ಅಪರಾಸ್ತದ ಕೆನ್ನೀಲಿಯ ಬೈಗುಬಣ್ಣವು ತೆಳುಮುಗಿಲುಗಳ ಹೃದಯಮಧ್ಯೆ ಅಂತರ್ಯಾಮಿಯಾಗಿತ್ತು. ಅರಣ್ಯಾವೃತವಾದ ಗಂಭೀರ ಸಹ್ಯಾದ್ರಿ ಶ್ರೇಣಿಗಳ ಗಿರಿಕಂದರಗಳ ಮೇಲೆ ಇರುಳದೇವಿ ತನ್ನುಡೆಯ ಕರಿಸೆರಗನ್ನು ಮೆಲ್ಲನೆ ಹೊದಿಸುತ್ತಿದ್ದಳು. ಗೂಡಿಗೆ ಹೋಗುವ ಹಕ್ಕಿಯ ಹಾಡು ಮುಗಿದಿತ್ತು. ಹಟ್ಟಿಗೆ ಹೋಗುವ ದನದ ಕೂಗು ನಿಂತಿತ್ತು. ಅವುಗಳಿಗೆ ಬದಲಾಗಿ, ಮಲೆನಾಡಿನಲ್ಲಿ ಬೈಗುಹೊತ್ತಿನಲ್ಲಿ ಕೇಳಿಬರುವ, ಓಂಕಾರದಂರೆ ನಾಡನ್ನೆಲ್ಲ ತುಂಬಿತುಳುಕುವ ಸಾವಿರಾರು ದುಂಬಿ ಜೇನುಹುಳುಗಳ ಝೇಂಕಾರದ ನಿರಂತರ ನಾದವಾಹಿನಿ ಅಥವಾ ವಾರಿಧಿ ಮೊರೆಯತೊಡಗಿತ್ತು. ಮರಗಿಡಗಳ ಸ್ಪಷ್ಟಾಕೃತಿಗಳು ಮಾದು ಅಸ್ಫುಟಾಕಾರವು ಮಸಿಮಸಿ ಮಾಸಲು ಮಾಸಲಾಗಿ ತೋರುತ್ತಿತ್ತು.

ಕಾನೂರು ಚಂದ್ರಯ್ಯಗೌಡರ ಮನೆಗೆ ತೆಂಕಣ ದೆಸೆಯಲ್ಲಿದ್ದ ಒಂದು ಗುಡಗಡಗಾಡಿನ ನೆತ್ತಿಯಲ್ಲಿ ಸಣ್ಣ ಬೆಂಕಿಯೊಂದು ಉರಿಯುತ್ತಿತ್ತು. ಸುತ್ತಲೂ ಮರಗಳು ದಟ್ಟವಾಗಿ ಬೆಳೆದು ಕಾಡಾಗಿದ್ದರೂ. ಆ ಸ್ಥಳದಲ್ಲಿ ಕೆಲವು ಹೆಬ್ಬಂಡೆ ಹಾಸುಬಂಡೆಗಳಿದ್ದು ಬಯಲು ಬಯಲಾಗಿತ್ತು. ಹಗಲು ಅಲ್ಲಿ ನಿಂತು ನೋಡಿದರೆ ಸುತ್ತಮುತ್ತ ಬಹುದೂರದವರೆಗೂ ಕಾಣಿಸುವಂತಿತ್ತು. ಸೀತೆಮನೆ ಮುತ್ತಳ್ಳಿ ಮೊದಲಾದ ಅನೇಕ ಮನೆಮಾರುಗಳನ್ನು, ಹಬ್ಬಿದ ಕಾಡುಗಳ ನಡುವೆ ಮೇಲೇಳುವ ಹೊಗೆಯಿಂದಲೂ ಅಡಕೆ ತೋಟಗಳಿಂದಲೂ ಗದ್ದೆ ಬಯಲುಗಳಿಂದಲೂ ಗುರುತಿಸಬಹುದಾಗಿತ್ತು. ಆಗುಂಬೆ ಘಾಟಿ, ಕುಂದದ ಗುಡ್ಡ, ಕುದುರೆಮುಖ, ಮೇರುತಿ ಪರ್ವತ ಮೊದಲಾದ ಸಹ್ಯಾದ್ರಿಯ ಭಾಗಗಳು ಕೆಲವು ಸಾರಿ, ಪ್ರಾತಃಕಾಲದಲ್ಲಿ ನಿಂತು ನೋಡಿದರೆ, ನೀಲ ವಾಯು ಮಂಡಲದಲ್ಲಿ ಪಶ್ಚಿಮ ನೀಲಾಕಾಶಕ್ಕೆದುರಾಗಿ ಮೈಲುತುತ್ತಿನ ಮಹಾರಾಶಿಗಳಂತೆ ದಿಗಂತ ಖಚಿತವಾಗಿ ರಂಜಿಸುತ್ತಿದ್ದವು. ಸೂರ್ಯೋದಯ ಸೂರ್ಯಾಸ್ತ ಚಂದ್ರೋದಯಗಳು ದ್ವಿಗುಣಿತ ರಮಣೀಯವಾಗಿ ಶೋಭಿಸುತ್ತಿದ್ದುವು. ರಜಾಕಾಲದಲ್ಲಿ ಊರಿಗೆ ಬಂದಾಗ ಹೂವಯ್ಯ ರಾಮಯ್ಯರಿಗೆ ಅದೊಂದು ನಿತ್ಯ ಸಂದರ್ಶನದ ಸೌಂದರ್ಯ ಸ್ಥಾನವಾಗಿತ್ತು. ಹಳ್ಳಿಗರು ಆ ಸ್ಥಳಕ್ಕೆ ” ಕಾನುಬೈಲು” ಎಂದು ನಾಮಕರಣ ಮಾಡಿದ್ದರು.

ಅಂದು ಆ ಬೈಗುಗಪ್ಪಿನಲ್ಲಿ ಆ “ಕಾನುಬೈಲಿ”ನಲ್ಲಿ ಉರಿಯುತ್ತಿದ್ದ ಕಿರುಬೆಂಕಿ ಒಮ್ಮೊಮ್ಮೆ ಸಣ್ಣದಾಗಿ ಆರಿಹೋದಂತಾಗುತ್ತಿತ್ತು. ಒಮ್ಮೊಮ್ಮೆ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿತ್ತು. ಮೂಢಗ್ರಾಮ್ಯರಾರಾದರೂ ದೂರದಿಂದ ನೋಡಿದ್ದರೆ ಅದನ್ನು ಕೊಳ್ಳಿದೆವ್ವವೆಂದು ತಿಳಿಯುತ್ತಿದ್ದರು. ತಿಳಿದವರು ” ದೊಂದಿ”( ಅಡಕೆ ಅಥವಾ ಬಿದಿರು) ದೆಬ್ಬೆಗಳಿಂದ ಮಾಡಿದ ಪೊಂಜು) ಎಂದು ಹೇಳುತ್ತಿದ್ದರು. ಆದರೆ ಯಾರಾದರೂ ಧೀರ ಕೌತೂಹಲಿಗಳು ಅಲ್ಲಿಗೆ ಹೋಗಿ ನೋಡಿದ್ದರೆ ವಾಸ್ತವಾಂಶ ಬೇರೆಯಾಗಿರುತ್ತಿತ್ತು.

ಬೆಂಕಿಯ ಬಳಿ, ಅದಕ್ಕೆ ಕಾರಣವಾದ ಒಂದು ಮನುಷ್‌ಉಆಕೃತಿ ಗೋಚರವಾಗುತ್ತಿತ್ತು. ಇನ್ನೂ ಸ್ವಲ್ಪ ಮುಂದುವರಿದಿದ್ದರೆ ಕಳ್ಳಿನ ವಾಸನೆ ಗೊತ್ತಾಗುತ್ತಿತ್ತು. ಹತ್ತಿರ ಹೋಗಿದ್ದರೆ, ಕಾನೂರಿನಲ್ಲಿ ನಾವು ಬೆಳಿಗ್ಗೆ ಕಂಡ ಹಳೆಪೈಕದ ತಿಮ್ಮನು ಒಂದು ಮಣ್ಣಿನ ಮೊಗೆಯಲ್ಲಿ ಕಳ್ಳು ಕಾಯಿಸುತ್ತಿದ್ದನೆಂಬುದು ಪ್ರತ್ಯಕ್ಷವಾಗುತ್ತಿತ್ತು!

ತಿಮ್ಮನು ಬಗ್ಗಿ ಬೆಂಕಿ ಊದುವುದು, ಎದ್ದುನಿಂತು ಕಾನೂರಿನ ಕಡೆಗೆ ನಿರೀಕ್ಷಿತ ನಯನವಾಗಿ ನೋಡುವುದು. ಮತ್ತೆ ಯಾರನ್ನೂ ಕಾಣದೆ ಹತಾಶನಾಗಿ ಕೂರುಕೊಳ್ಳುವುದು. ಒಮ್ಮೊಮ್ಮೆ ಕೆಮ್ಮಿ ಗಂಟಲು ಸರಿಮಾಡಿಕೊಳ್ಳುವುದು. ಅಭ್ಯಾಸದಿಂದಲೋ ಎಂಬಂತೆ ತೊಡೆ ಹೊಟ್ಟೆ ಬೆನ್ನು ಕಾಲುಗಳನ್ನು ಕೆರೆದುಕೊಳ್ಳುವುದು. ಒಮ್ಮೊಮ್ಮೆ ನಿರ್ಜನತೆ ನೀರವತೆಗಳ ಭಾರವನ್ನು ಹಗುರಮಾಡಿಕೊಳ್ಳಲೋಸುಗ ಸದ್ದುಮಾಡುವುದು. ಹೀಗೆ ವರ್ತಿಸುತ್ತಿದ್ದನು. ನಡು ನಡುವೆ ಏನನ್ನೋ ಆಲೋಚಿಸಿ” ಬಡ್ಡೀಮಕ್ಳು ಯಾರಿರಬೇಕು? ಕಾಡೆಲ್ಲಾ ದಾರಿ ಮಡ್ತ ಇದಾರಲ್ಲಾ!” ಎಂದು ತನಗೆ ತಾನೆ ಹೇಳಿಕೊಳ್ಳುವನು. ” ಮಾಡ್ಳಿ, ಇನ್ನೊಂದು ಸಾರಿ” ಮಾರ್ಕ” ಬಂದಾಗ ಮಾಡಿಸ್ತೀನಿ”  ಎಂದವನು ಮತ್ತೆ ಆರಿಹೋದ ಬೆಂಕಿಯನ್ನು ಊದಿದನು. ಬೂದಿ ಹಾರಿತು. ಸುತ್ತಲಿದ್ದ ಕಸಕಡ್ಡಿ ಹುಲ್ಲುಗಳನ್ನು ಹಾಕಿ ಮತ್ತೆ ಊದಿದನು. ಹೊಗೆ ಮುದ್ದೆ ಮುದ್ದೆಯಾಗಿ ಮೇಲೆದ್ದು ಮತ್ತೆ ಭುಗ್ಗೆಂದು ಬೆಂಕಿ ಹೊತ್ತಿಕೊಂಡಿತು.

ಪಕ್ಕದ ಕಾಡುಗಳಲ್ಲಿ” ಬಗನಿ ಕಟ್ಟಿ” ಕಳ್ಳು ಇಳಿಸುವುದು ತಿಮ್ಮನ ಕುಲಕಸಬಾಗಿತ್ತು. ಅವನು ಅದನ್ನು ಹೊರಗಡೆ ಮಾರಾಟ ಮಾಡುತ್ತಿರಲಿಲ್ಲ. ಎಂದಾದರೂ  ಒಂದೊಂದು ಸಾರಿ ಕಳ್ಳು ಹೆಚ್ಚಾಗಿ ಉಳಿದರೆ ಕಳ್ಳಂಗಡಿಗೆ ಕದ್ದು ಮಾರುತ್ತಿದ್ದನು. ಅದರಲ್ಲಿಯೂ ಚಂದ್ರಯ್ಯಗೌಡರಿಗೆ ಪ್ರತಿದಿನವೂ ” ಕಾನುಬೈಲಿ” ನಲ್ಲಿ ಕಳ್ಳು ಕಾಯಿಸಿಕೊಡುವುದು ಮಾಮೂಲಾಗಿತ್ತು. ಅವನು ಅವರ ಒಕ್ಕಲಾಗಿದ್ದುದರಿಂದ ಒಡೆಯರಿಗೆ ಅದಷ್ಟುಮಟ್ಟಿಗೆ ಸಿಹಿಸಿಹಿ ಮಾಡುವುದು ಅವನ ಶ್ರೇಯಸ್ಸಾಗಿತ್ತು. ಗೌಡರೂ ಅವನನ್ನು ಇತರ ಒಕ್ಕಲುಗಳಂತಲ್ಲದೆ ಹೆಚ್ಚು ಆದರದಿಂದ ಕಾಣುತ್ತಿದ್ದರು. ಅವನಿಗೆ ಕೇಳಿದಹಾಗೆ ಸಾಲ; ಕೇಳಿದ ಗದ್ದೆ ಸಾಗುವಳಿಗೆ; ಕೇಳಿದ ಎತ್ತು ಉಳುವೆಗೆ! ಕೆಲವು  ಸಾರಿ ತಿಮ್ಮನ ಕೆಲಸಕ್ಕೆ ತಮ್ಮ ಮನೆಯ ಗಾಡಿ ಎತ್ತು ಆಳುಗಳನ್ನೂ ಕೊಡುತ್ತಿದ್ದರು. ಏಕೆಂದರೆ ಇತರರು ಮಾಡುವ ಕೆಲಸವನ್ನು ಮಾಡಲು ಅನೇಕರಿದ್ದರು. ಆದರೆ ತಿಮ್ಮನಂತೆ ಗುಟ್ಟಾಗಿತ್ತು.ಬೇಲರು, ಕುಂಬಾರರು. ಮರಾಟಿಗರು. ಸೆಟ್ಟರು. ಒಕ್ಕಲಿಗರು ಇವರು ಯಾರಿಗೂ ಜಾತಿಪದ್ಧತಿಯಂತೆ ಬಗನಿ ಕಟ್ಟುವ ಹಕ್ಕಿಲ್ಲ. ಆ ಹಕ್ಕು ಹಳೆಪೈಕರದು. ಆದ್ದರಿಂದಲೆ ಕಾನೂರಿನಲ್ಲಿ ಹಳೆಪೈಕದ ತಿಮ್ಮನೊಬ್ಬನೇ ಬಗನಿ ಮರಗಳ ಆಡಳಿತಕ್ಕೆ ಸರ್ವಾಧಿಕಾರಿಯಾಗಿದ್ದನು. ಬೇರೆ ಯಾರಾದರೂ ಆ ಕೆಲಸಕ್ಕೆ ಕೈ ಹಾಕಿದ್ದರೆ ಕೂಡಲೆ ಜಾತಿಬಾಹಿರರಾಗಿ ಬಹಿಷ್ಕೃತರಾಗುತ್ತಿದ್ದರು. ಆ ದಿನ ಮಧ್ಯಾಹ್ನ ಬೇಲರ ಬೈರನು ರಂಗಪ್ಪಸೆಟ್ಟರ ಕಾಲಿಗೆ ಬಿದ್ದದ್ದು ಲೈಸೆನ್ಸ ಇಲ್ಲದೆ ಬಗನಿಕಟ್ಟಿದ ರಾಜಕೀಯ ಭಯದಿಂದ ಮಾತ್ರವೇ ಅಲ್ಲ; ಅದರೊಂದಿಗೆ ಜಾತಿ ಕೆಟ್ಟುಹೋಗುತ್ತದೆ ಎಂಬ ಸಾಮಾಜಿಕ ಭೀತಿಯೂ ಸೇರಿತ್ತು!

ಪ್ರತಿಸ್ಪರ್ಧಿಗಳಾರೂ ಇಲ್ಲದೆ, ನಿರಾತಂಕವಾಗಿ, ಲೈಸನ್ಸ ಪಡೆದುಕೊಂಡಿರುವದಕ್ಕಿಂತಲೂ ಎರಡು ಮೂರು ಪಾಲು ಹೆಚ್ಚಾಗಿ ಬಗನಿ ಕಟ್ಟಿಕೊಂಡಿರುತ್ತದ್ದ ತಿಮ್ಮನ ಕಣ್ಣಿಗೆ ಕೆಲ ದಿನಗಳಿಂದ ಕಾಡಿನಲ್ಲಿ ಕಾಲುದಾರಿಗಳಾಗುತ್ತಿರುವುದು ತಿಳಿದುಬಂದು, ಒಂದೆಡೆ ಹೋಗಿ ನೋಡುತ್ತಾನೆ; ಯಾರೋ ಒಂದು ಮರಕ್ಕೆ ಬಗನಿ ಕಟ್ಟಿದ್ದಾರೆ! ಯಾರೆಂಬುದು ಅವನ ಊಹೆಗೂ ಹೊಳೆಯಲಿಲ್ಲ. ಬೇಲರ ಬೈರನು ಆ ಕೆಲಸಕ್ಕೆ ಹೋಗುತ್ತಾನೆಂದು ಅವನು ಸ್ವಪ್ನದಲ್ಲಿಯೂ ಭಾವಿಸುವಂತಿರಲಿಲ್ಲ. ಏಕೆಂದರೆ, ಬಗನಿ ಕಟ್ಟುವ ಕ್ರಮ, ಹದ, ರೀತಿ, ವಿಚಾರ ಇವೆಲ್ಲ ಆ ಮಡ್ಡ ಹೊಲೆಯನಿಗೆ ಹೇಗೆ ತಿಳಿಯಬೇಕು? ಅವನಲ್ಲ, ಅವನ ಇಪ್ಪತ್ತೊಂದು ಪಿತೃಗಳ ತಲೆಗಳೆಲ್ಲ ಸೇರಿದರೂ ಆ ಕೆಲಸ ಅಸಾಧ್ಯ ಎಂದು ತಿಮ್ಮನ ಹೆಮ್ಮೆಯಾಗಿತ್ತು. ಆದ್ದರಿಂದ ತಿಮ್ಮನು ತಾನು ಕಳ್ಳಬಗನಿ ಕಂಡಿದ್ದನ್ನೂ ಆ ಕಳ್ಳನನ್ನು ಹಿಡಿಯುವ ಕೆಲಸದಲ್ಲಿ ಸಹಾಯಕನಾದನು. ಬೈರ ತಿಮ್ಮರು ಸರದಿಯಮೇಲೆ ಕಾದರೂ ಕಳ್ಳನೂ ಸಿಗಲಿಲ್ಲ; ಆಗಾಗ ಕಳ್ಳೂ ಕಳುವಾಗುತ್ತಿತ್ತು! ಕಳ್ಳನೇ ಪೋಲೀಸೀನವನಾಗಿದ್ದಾನೆ ಎಂಬುದು ತಿಮ್ಮನಿಗೆ ಗೊತ್ತಾಗಲಿಲ್ಲ. ಕಡೆಗೆ ಸಿಟ್ಟುಬಂದು ಆ ಮರದ ಕೈಯನ್ನೇ ( ಕಳ್ಳು ಕೊಡುವ ಬಗನಿಯ ಮರದ ಹೂ) ಕಡಿದುಹಾಕಿದನು.

ಕೆಲವು ದಿನಗಳಲ್ಲಿ ಬೈರನು ಮತ್ತೆ ಮತ್ತೊಂದು ಬಗನಿ ಮರಕ್ಕೆ ಮಡಕೆ ಕಟ್ಟಿದನು! ಆ ಮರದಡಿಯಲ್ಲಿಯೇ ಅವನಿಗೆ  ರಂಗಪ್ಪಸೆಟ್ಟರು ಕೋವಿಪೂಜೆ ಮಾಡುವುದರಲ್ಲಿದ್ದದ್ದು! ಆ ಮರ ಸ್ವಲ್ಪ ಗುಟ್ಟಾಗಿ, ಸಾಧಾರಣವಾಗಿ ಯಾರ ಕಣ್ಣಿಗೂ ಬೀಳದ ಸ್ಥಳದಲ್ಲಿತ್ತು. ಆದರೆ ತಿಮ್ಮನು ಆ ದಿನ ಸಂಜೆಯಲ್ಲಿ ತಾನು ಕಟ್ಟಿದ್ದ ಬಗನಿಯ ಮರಗಳನ್ನು ನೋಡಿ ಕಳ್ಳು ಇಳಿಸಿಕೊಂಡು ಬರಲು ಕಾಡಿಗೆ ಹೋಗಿ, ಹಾಗೆಯೇ ಬೇಲಿ ಬಿಗಿಯಲು ಬಗನಿಯ ಚಾರೆಯನ್ನು ಹುಡುಕುತ್ತಿದ್ದಾಗ ಅವನ ಕಣ್ಣಿಗೆ ಬೈರನ ಹೊಸಹಾದಿಯೂ ಬಿತ್ತು. ಅದರಲ್ಲಿ ಹೋಗಿ ನೋಡುತ್ತಾನೆ; ಮತ್ತೆ ಕಳ್ಳಬಗನಿ ಕಟ್ಟಿದ್ದಾರೆ! ಹುದುಗಿಸಿಟ್ಟ ಬಾಂಬು ಫಕ್ಕನೆ ಕಣ್ಣಿಗೆ ಬಿದ್ದಿದ್ದರೂ ಸಿ.ಐ.ಡಿ. ಗಳಿಗೆ ಅಷ್ಟು ಆಶ್ಚರ್ಯ ಆನಂದ ಕ್ರೋಧಗಳಾಗುತ್ತಿರಲಿಲ್ಲ.! ತಿಮ್ಮನಿಗೆ ಆಯಿತು! ಆ ಬಗನು ಕಟ್ಟಿದ್ದ ರೀತಿಯಿಂದ ಹಿಂದೆ ಕಳ್ಳಬಗನಿ ಕಟ್ಟಿದ್ದವನೇ ಅದನ್ನು ಕಟ್ಟಿರಬೇಕೆಂದು ಊಹಿಸಿ, ಈ ಸಾರಿ ಅವನನ್ನು ಹೇಗಾದರೂ ಹಿಡಿಯಬೇಕೆಂದು ನಿರ್ಧರಿಸಿದನು.

ಸಾಯಂಕಾಲ ” ಕಾನುಬೈಲಿ” ನಲ್ಲಿ ಚಂದ್ರಯ್ಯಗೌಡರಿಗಾಗಿ ಕಳ್ಳು ಕಾಯಿಸುತ್ತಿದ್ದ ತಿಮ್ಮನು ತಾನು ಕಂಡ ಕಳ್ಳಬಗನಿಯ ವಿಚಾರವಾಗಿಯೇ ಆಲೋಚಿಸುತ್ತ ” ಬಡ್ಡೀಮಕ್ಳು” ಯಾರಿರ್ಬೇಕು? ಕಾಡೆಲ್ಲ ದಾರಿಮಾಡ್ತಾ ಇದ್ದಾರಲ್ಲ!” ಎಂದೂ, ನಡುನಡುವೆ ” ಇನ್ನೊಂದು ಸಾರಿ ” ಮಾರ್ಕ” ಬಂದಾಗ ಮಾಡ್ತೀನಿ” ಎಂದೂ ಹೇಳಿಕೊಳ್ಳುತ್ತಿದ್ದನು. ತಿಮ್ಮನು ನಿರೀಕ್ಷಿಸುತ್ತಿದ್ದ ಹಾಗೆಯೆ ಕತ್ತಲೆ ಕಪ್ಪಗೆ ಕವಿಯಿತು. ದಿಗಂತದಲ್ಲಿ ಮಾತ್ರವೆ ಭೂಮಿ ಆಕಾಶಗಳಿಗೆ ವ್ಯತ್ಯಾಸ ಕಾಣುತ್ತಿತ್ತು. ಚುಕ್ಕಿಗಳಂತೂ ಬಾನಿನ ಮೈಯಲ್ಲಿ ಎದ್ದ ಬೆಳ್ಳಿಯ ತುರಿಗಜ್ಜಿಗಳಂತೆ ಲಕ್ಷೋಪಲಕ್ಷವಾಗಿದ್ದುವು; ಆಕಾಶಗಂಗೆ ಅಥವಾ ಅಮೃತ ಪಥವು ಚೆನ್ನಾಗಿ ತುರಿಸಿಕೊಂಡರೆ ಮೈಮೇಲೆ ಕಾಣುವ ಬೂದಿಬೂದಿಗೆರೆಯಂತೆಯೂ ತಿಮ್ಮನಿಗೆ ತೋರುತ್ತಿತ್ತು. ಅವನು ಅತ್ತ ಕಡೆ ದೃಷ್ಟಿ ಇಟ್ಟಿದ್ದರೆ ಮತ್ತೊಮ್ಮೆ ಚೆನ್ನಾಗಿ ಹಲ್ಲು ಕಿರಿಯುವವರೆಗೂ ತುರಿಸಿಕೊಂಡು, ಕಳ್ಳಿನ ಮೊಗೆಯನ್ನು ಕಲ್ಲೊಲೆಯಿಂದ ಕೆಳಗಿಟ್ಟು, ಒಂದು ಮುತ್ತುಗದೆಲೆಯಿಂದ ಅದರ ಬಾಯಿ ಮುಚ್ಚಿ, ಕಲ್ಲು ಹೇರಿ, ಅತ್ತಯಿತ್ತ ತಾಳ್ಮೆಮೀರಿ ತಿರುಗಾಡತೊಡಗಿದನು. ಜೇಬಿನಲ್ಲಿ ಎಲೆಯಡಕೆಯಿದ್ದರೂ ಕಳ್ಳು ಕುಡಿದು ತಾಂಬೂಲ ಸವಿಯಬೇಕು; ಮೊದಲೇ ಎಲೆ ಹಾಕಿಕೊಂಡರೆ ಕಳ್ಳಿನ ರುಚಿ ಸಿಕ್ಕುವುದಿಲ್ಲ ಎಂದು ಸುಮ್ಮನಿದ್ದನು. ಕಳ್ಳು ಕುಡಿಯೋಣವೆಂದರೆ  ಗೌಡರಿನ್ನೂ ಬಂದಿಲ್ಲ. ಅವರಿಗೆಲ್ಲಿಯಾದರೂ ಕಡಮೆಯಾದರೆ! ಗುದ್ದುತ್ತಾರೆ! ಅದೂ ಅಲ್ಲದೆ ಒಮ್ಮೊಮ್ಮೆ ಜೊತೆಗೆ ಯಾರನ್ನಾದರೂ ಕರೆದು ತರುತ್ತಿದ್ದುದೂ ಉಂಟು.

ಇದ್ದಕ್ಕಿದ್ದ ಹಾಗೆ ತಿಮ್ಮನು ಕುತೂಹಲದಿಂದ ನಿಂತು ಎವೆಯಿಕ್ಕದೆ ನೋಡತೊಡಗಿದನು. ” ಕಾನುಬೈಲಿ” ಗೆ ನೈಋತ್ಯ ದಿಕ್ಕಿನಲ್ಲಿ ಸುಮಾರು ಒಂದು ಒಂದೂವರೆ ಮೈಲಿ ದೂರದ ಕಣಿವೆಯ ತಪ್ಪಲಿನಲ್ಲಿ ಒಂದು ಬೆಂಕಿ ಗೋಚರಿಸಿತು. ಸುತ್ತಲೂ ಮುತ್ತಿದ್ದ ಕತ್ತಲೆಯಲ್ಲಿ ಅದರ ತಪ್ತಸುವರ್ಣಕಾಂತಿ ದೇದೀಪ್ಯಮಾನವಾಗಿ ಮನೋಹರವಾಗಿತ್ತು.ತಿಮ್ಮನು ನೋಡುತ್ತಿದ್ದ ಹಾಗೆಯೇ ಬೆಂಕಿ ಹಿರಿದಾಯಿತು. ಅದರ ಮನೋಹರತೆ ಮಾದು ರುದ್ರತೆಯಾಗುತೊಡಗಿತು. ಮೊದಲು ಸ್ಥಿರವಾಗಿ ತೋರುತ್ತಿದ್ದು ಆಮೇಲೆ ಚಂಚಲ ಭೀಮಜ್ವಾಲಾಮಯವಾಗಿ ಬೆಂಕಿಯ ಮರುಳ್ಗಳಂತೆ ವಿಕಟ ನೃತ್ಯಮಾಡಲಾರಂಭಿಸಿತು. ಗುಡ್ಡದ ನೆತ್ತಿಯಲ್ಲಿ ನಿಂತು ನೋಡುತ್ತಿದ್ದ ತಿಮ್ಮನು ಏನಿರಬಹುದೆಂದು  ಶಂಕಿಸಿದನು, ಏನೇನನ್ನೋ ಊಹಿಸಿದನು. ಯಾವುದಾದರೂ ಗುಡಿಸಲಿಗೆ ಬೆಂಕಿ ಬಿದ್ದಿರಬಹುದೆ? ಅಥವಾ ಹುಲ್ಲು ಬಣಬೆಗೆ? ಅಥವಾ ಕರಿಗುಡ್ಡೆಗೆ? ಅಥವಾ ಬಿದಿರುಮೇಳೆಗೆ? ಅಲ್ಲಿ ಯಾವ ಗುಡಿಸಿಲೂ ಇಲ್ಲ! ಹುಲ್ಲು ಬಣಬೆಗೆ ಬೆಂಕಿ ಬಿದ್ದಿದ್ದರೆ ಬೆಂಕಿ ತಗುಲಿದ ಹುಲ್ಲಿನ ಮುದ್ದೆಗಳು ಹಾರಾಡಬೇಕಿತ್ತು! ಬಿದಿರುಮಳೆಗೆ ಬೆಂಕಿ ಬಿದ್ದಿದ್ದರೆ ಗೆಣ್ಣುಗಳು ಒಡೆದು ಸಿಡಿಯುವ ಸದ್ದು ಕೇಳಿಸಬೇಕಿತ್ತು!  ಕರಿಗುಡ್ಡೆಯ ಬೆಂಕಿ ಹೀಗೆ ಒಂದೇ ಸಮನೆ ದೇದೀಪ್ಯಮಾನವಾಗಿ ಉರಿಯುವುದಿಲ್ಲ! ಆಲೋಚಿಸುತ್ತಿದ್ದಂತೆ ತಿಮ್ಮನು ಬೆಚ್ಚಿದನು. ಅವನ ಮನಸ್ಸಿಗೆ ಮತ್ತೊಂದು ಸತ್ಯ ಹೊಳೆಯಿತು. ಬೆಂಕಿ ಉರಿಯುತ್ತಿದ್ದುದು ಕಾನೂರಿನ ಶ್ಮಶಾನದಲ್ಲಿಯಲ್ಲವೆ? ಕೆಳಕಾನೂರು ಅಣ್ಣಯ್ಯಗೌಡರ ಹೆಂಡತಿಗೆ ಕಾಯಿಲೆ ಜೋರಾಗಿತ್ತು! ಚಂದ್ರಯ್ಯಗೌಡರು ಕಳ್ಳುಗೊತ್ತಿಗೆ ಹೊತ್ತಿಗೆ ಸರಿಯಾಗಿ ಬರದೆ ಇದ್ದುದಕ್ಕೂ ಅದೇ ಕಾರಣವಿರಬಹುದು! ತಿಮ್ಮನು ಮತ್ತೆ ಬೆಂಕಿಯ ಕಡೆಗೆ ನೋಡಿದನು.

ಈ ಸಾರಿ ಅವನ ಆಲೋಚನೆ ಊಹೆಗಳೆಲ್ಲವೂ ದೃಷ್ಟಿಯಲ್ಲಿ ಪ್ರತ್ಯಕ್ಷವಾಗಿದ್ದುವು. ಆ ಬೆಂಕಿ ಹಾಗೇಕೆ ವಿಕಟಾಕಾರವಾಗಿ ಕುಣಿಯುತ್ತಿದೆ? ಅದು ನಿಜವಾಗಿಯೂ ಹೆಣ ಬೆಂಕಿ! ಅದರಲ್ಲಿ ದೆವ್ವಗಳಿವೆ! ಅದೋ ಆ ಜ್ವಾಲೆಯ ವಿಕಾರಾಕೃತಿ! ಆ ಬೆಂಕಿಯ ಬೆಳಕಿನಲ್ಲಿ ಯಾರೋ ಸುಳಿದಾಡುತ್ತಿದ್ದಾರಲ್ಲವೆ? ತಿಮ್ಮನ ಒಳಗಣ್ಣಿಗೆ ಸೂಡಿನ ಮೇಲಿದ್ದ ಹೆಣವು ಹಲ್ಲುಕಿರಿಯ ಮೈಮುರಿದು ಹಾಸ್ಯಮಾಡುತ್ತಿದ್ದಂತೆ ತೋರಿತು! ತಾನು ಕೇಳಿದ್ದ ಕೆಲವು ಭಯಾನಕ ಕಥೆಗಳೂ ನೆನಪಿಗೆ ಬಂದುವು. ಮನುಷ್ಯರು ಮನೆಗೆ ಹೋದಮೇಲೆ ಪಿಶಾಚಿಗಳು ಬಂದು, ಸೂಡಿನ ಮೇಲೆ ಅರೆಬೆಂದಿದ್ದ ಹೆಣವನ್ನು ಕೆಳಗಿಳಿಸಿಕೊಂಡು, ಪಾಲು ಹಂಚಿಕೊಂಡು ತಿನ್ನುತ್ತ ಕುಣಿಯುತ್ತವಂತೆ! ಆ ಸಮಯದಲ್ಲಿ ಜೀವವಿದ್ದರೂ ಸಹ ಕಣ್ಣಿಗೆ ಬಿದ್ದವರನ್ನು ಸೀಳಿ ತಿನ್ನುತ್ತವಂತೆ! ತಿಮ್ಮನಿಗೆ ಕಾಡು ಮತ್ತು ಕಾಡಿನ ಮೃಗಗಳಲ್ಲಿ ಅಂಜಿಕೆಯಿರಲಿಲ್ಲ; ಆದರೆ ಪಿಶಾಚಿ ಎಂದರೆ ಅವನಿಗೆ ನೆತ್ತರು ತಣ್ಣಗಾಗುತ್ತಿತ್ತು. ಕತ್ತಲಲ್ಲಿ ಕಾಡುಗುಡ್ಡದ ನೆತ್ತಿಯಲ್ಲಿ ನಿಂತು ತಪ್ಪಲಿನ ಸುಡುಗಾಡಿನಲ್ಲಿ ಧಗಧಗಿಸುತ್ತಿದ್ದ ಸೂಡುಬೆಂಕಿಯನ್ನು ಕಂಡ ಅವನಿಗೆ ತನ್ನ ಸುತ್ತಲೂ ದೆವ್ವಗಳು ನಿಂತು ತನ್ನನ್ನೇ ಅಳಿಯಾಸೆಯಿಂದ ನೋಡುತ್ತಿದ್ದಂತೆ ಭಾಸವಾಯಿತು. ಕತ್ತಲೆಯೆಲ್ಲಾ ಪಿಶಾಚಿಗಳ ಕಣ್ಣುಗಳಿಂದ ಕಿಕ್ಕಿರಿದಂತಾಯಿತು. ಅಷ್ಟರಲ್ಲಿ ಅವನ ಸಮೀಪದಲ್ಲಿ ಏನೋ ಪಟಪಟನೆ ಸದ್ದಾಗಿ ವಿಕಾರವಾಗಿ ಕೂಗಿಕೊಂಡಿತು. ತಿಮ್ಮನಿಗೆ ತನ್ನ ನಾಡಿಗಳಲ್ಲಿ ನೆತ್ತರಿಗೆ ಬದಲಾಗಿ ಕತ್ತಲೆಯ ಪ್ರವಹಿಸಿದಂತಾಯಿತು. ಅವನು ಅನುದ್ವಿಗ್ನನಾಗಿದ್ದರೆ ಅದೊಂದು ಕುರುಡುಗಪ್ಪಟೆ ಹಕ್ಕಿ ಎಂದು ಗೊತ್ತಾಗುತ್ತಿತ್ತು. ಆದರೆ ಬೆಚ್ಚಿದ ಮನಸ್ಸಿಗೆ ವಿಕೃತಿಯಲ್ಲದೆ ಪ್ರಕೃತಿ ಗೋಚರಿಸುವುದು ದುರ್ಲಭ. ತಿಮ್ಮನು ಬೆದರಿ ನೋಡುತ್ತಾನೆ ಮರಗಳ ಸಂದಿಯಲ್ಲಿ ಏನೋ ಬೆಳ್ಳಗೆ ನಿಂತಹಾಗಿದೆ! ಅದು ದೂರದ ಆಕಾಶ ಮಾತ್ರವೆಂದು ಅವನ ಕದಡಿದ ಬಗೆಗೆ ಗೊತ್ತಾಗಲಿಲ್ಲ. ತಿಮ್ಮನು ಒಂದೇ ಸಮನೆ ಕಳ್ಳನ್ನೂಮೊಗೆಯನ್ನೂ ಅಲ್ಲಿಯೆ ಬಿಟ್ಟು ಮನೆಯ ಕಡೆಗೆ ಧಾವಿಸತೊಡಗಿದನು.

ಸ್ವಲ್ಪ ದೂರ ಹೋಗುವಷ್ಟರಲ್ಲಿ ಯಾರೋ ಕೂಗಿದಂತಾಯಿತು. ತಿಮ್ಮನಿಗೆ ಮತ್ತೂ ಗಾಬರಿಯಾಗಿ ಮೆಲ್ಲಗೆ ಓಡತೊಡಗಿದನು. ಮತ್ತೆ ಗಟ್ಟಿಯಾಗಿ ಕೂಗಿದಂತಾಯಿತು ಚಂದ್ರಯ್ಯಗೌಡರ ಧ್ವನಿಯ ಗುರುತು ಸಿಕ್ಕಿ ನಿಂತನು. ಸೇರೆಗಾರ ರಂಗಪ್ಪಸೆಟ್ಟರೊಡಗೂಡಿ ಚಂದ್ರಯ್ಯಗೌಡರು ಹತ್ತಿರಕ್ಕೆ ಬಂದು ಮಾತಾಡಿಸಿದ ಮೇಲೆಯೇ ತಿಮ್ಮನಿಗೆ ಎದೆ ಗಟ್ಟಿಯಾದುದು!

“ಎಲ್ಲಿಗೆ ಹೋಗ್ತಿದ್ದೀಯೋ?” ಎಂದರು ಗೌಡರು.

“ನೀವು ಬರ್ತಿರೋ ಇಲ್ಲೋ ಅಂತಾ ಮನೆಗೆ ಹೋಗ್ತಿದ್ದೆ” ಎಂದನು ತಿಮ್ಮ.

ಮತ್ತೆ ಮೂವರೂ “ಕಾನುಬೈಲಿಗೆ” ಹಿಂತಿರುಗಿದರು. ತಿಮ್ಮನಿಗೆ ಸೂಡಿನ ಬೆಂಕಿಯಾಗಲಿ. ಕುರುಡುಗಪ್ಪಟೆ ಹಕ್ಕಿಯ ಕೂಗಾಗಲಿ, ಮರದ ಸಂದಿಯ ಆಕಾಶವಾಗಲಿ. ಈಗ ಭಯಂಕರವಾಗಿ ಕಾಣಲಿಲ್ಲ. ಅಣ್ಣಯ್ಯಗೌಡರು ತಮ್ಮ ಆಳುಗಳನ್ನು ಕರೆದು ಕೊಂಡು ಹೋಗಿ ದಹನಕಾರ್ಯದಲ್ಲಿ ಅವರಿಗೆ ಸಹಾಯಮಾಡಿದ್ದೂ, ಆದ್ದರಿಂದಲೆ ಹೊತ್ತಾದುದರಿಂದ ಸೇರೆಗಾರರನ್ನೂ ಜೊತೆಗೆ ಕರೆದುಕೊಂಡು ಬಂದಿದ್ದೂ ಎಲ್ಲಾ ತಿಮ್ಮನಿಗೆ ಗೊತ್ತಾಯಿತು. ತಿಮ್ಮನು ಬಿಸಿ ಬಿಸಿ ಕಳ್ಳನ್ನು ಕರಟಗಳಲ್ಲಿ ಬೊಗ್ಗಿಸಿಕೊಟ್ಟನು. ಗೌಡರೂ ಸೇರೆಗಾರರೂ ಚೆನ್ನಾಗಿ  ಹೀರಿದರು. ನಡುವೆ ಮಾತಾಡುತ್ತಲೆ ಇದ್ದರು.

“ನೀವು ಕಂಡಿದ್ದೆಲ್ಲಿ?” ಎಂದು ಗೌಡರು ಕೇಳಿದರು.

“ಕಾಣಿ, ಆ ಉಬ್ಬಿನಾಚೆ” ಎಂದು ಸೆಟ್ಟರು, ಆ ಕಾಡು ಬೆಟ್ಟಗಳಲ್ಲಿ ಒಂದು ದಿಕ್ಕಿನ ಕಡೆ ಕೈತೋರಿದರು.

“ನಾಟಾ ಕಡಿಸಿದವರು ಸಿಂಗಪ್ಪಗೌಡ್ರೇ ಅಂತಾ ನಿಮಗೆ ಗೊತ್ತಾಗಿದ್ದು ಹೇಗೆ?”

“ಆ ಬಡಗಿಯವರೆಲ್ಲ ನಮ್ಮೂರಿನವರೇ ಅಲ್ದಾ? ಎಲ್ಲ ಹೇಳಿ ಬಿಟ್ಟರು ನನಗೆ!”

“ಹಾಂಗಾದರೆ ಒಂದು ಕೆಲಸಮಾಡಿ. ನಾಳೆ ಬೆಳಿಗ್ಗೆ ಆಳು ಕರಕೊಂಡು ಹೋಗಿ, ಆದಷ್ಟು ನಾಟಾ ಹೊರಿಸಿಕೊಂಡು ಬಂದುಬಿಡಿ. ಆಮೇಲೆ ಏನಾಗ್ತದೆ ನೋಡಿಕೊಳ್ತೀನಿ ನಾನು.”

“ಅಲ್ಲಾ ಅಯ್ಯಾ, ಯಾರೋ ಕಾಡು ತುಂಬಾ ಕಳ್ಳಬಗನಿ ಕಟ್ಟಿದ್ದಾರಲ್ಲ! ಮನ್ನೆ ಮನ್ನೆ ಒಂದು ಕೈ ಕಡ್ಡು ಹಾಕ್ದೆ! ಇವತ್ತು ನೋಡ್ತೀನಿ, ಮತ್ತೊಂದು!” ಎಂದು ತಿಮ್ಮನು ನಡುವೆ ತನ್ನ ದೂರನ್ನು ಹೇಳಿಕೊಂಡನು.

“ಯಾರು? ನಿನಗೆ ಗೊತ್ತೇನೋ?”

“ಯಾರಂತಾ ಹೇಳ್ಲಿ?

ಸೇರೆಗಾರರು ಸುಮ್ಮನಿದ್ದರು. ಅವರಿಗೆ ಒಮ್ಮೆ ಬೈರನ ಹೆಸರನ್ನು ಹೇಳಿ. ಆ ದಿನ ತಮಗಾದ ಅನುಭವವನ್ನು ಹೇಳಿಬಿಡಬೇಕೆಂದು ಚಪಲತೆಯಾಯಿತು. ಸತ್ಯ ಬುದ್ದಿಯಿಂದಲ್ಲ. ಸಾಹಸದ ಬುದ್ದಿಯಿಂದ! ಆದರೆ ಬೈರನು ಕಾಲಿಗೆ ಬೀಳುವುದರಿಂದಲೂ, ಕಳ್ಳಕೊಡುವುದರಿಂದಲೂ ಸೆಟ್ಟರ ನಾಲಗೆಗೆ ಬೀಗಮುದ್ರೆ ಹಾಕಿದ್ದನು.

“ಇನ್ನೊಂದು ಸಾರಿ “ಮಾರ್ಕ” ಬಂದಾಗ ಆ ಮರ ತೋರಿಸು, ಅವನೇ ಹಿಡೀಲಿ ಕಳ್ಳನ್ನ” ಎಂದರು ಗೌಡರು.

“ಹೌದೂ, ನಾನೂ ಒಂದೆರಡು ಮರ ಲೆಸನ್ ಇಲ್ದೇ ಕಟ್ಟೀನಲ್ಲಾ! ಅವನ್ನ ಕಾಡಿಗೆ ಕರಕೊಂಡುಹೋದ್ರೆ ಅವನ್ನೂ ನೋಡಿಬಿಡ್ತಾನೋ ಏನೋ! ” ಎಂದನು ತಿಮ್ಮ ದೀನವಾಣಿಯಿಂದ.

“ಪರ್ವಾ ಇಲ್ಲೋ! ಅದಕ್ಕೇನು? ನಾನು ಹೇಳ್ತೀನಿ. ಕೈ ಬೆಚ್ಚಗೆ ಮಾಡಿದ್ರಾಯ್ತು! ಅವನಪ್ಪನ ಗಂಟೇನು ಹೋಗ್ತದೆ! ಮರ ಕಾಡಿನ್ದು; ಕಟ್ಟಾಂವ ನೀನು!”

ದೂರದ ಕಣಿವೆಯಲ್ಲಿದ್ದ ಸೂಡಿನ ಬೆಂಕಿಯನ್ನೇ ನೋಡುತ್ತಿದ್ದ ಸೇರೆಗಾರರು ಬೆಚ್ಚಿಬಿದ್ದರು. ಕೈಲಿದ್ದ ಕರಟವು ಕಳ್ಳಿನೊಡನೆ ಕೆಳಗೆ ಬಿತ್ತು. ಅವರಿಗೆ ತಾವು ನೋಡಿದ್ದ ಹೆಣದ ವಿಕಟ ಚಿತ್ರವು ನೆನಪಿಗೆ ಬಂದು ಭೀತಿಯಾಗಿತ್ತು. ಗಟ್ಟದ ಕೆಳಗಿನವರು ಜೀವಂತವಾಗಿರುವಾಗಲೇ ಮೋಸಗಾರರೆಂದೂ, ಗಟ್ಟದ ಮೇಲಿನವರನ್ನು ಸತ್ತ ಮೇಲೆ ನಂಬಬಾರದೆಂದೂ ಅವರ ನಂಬುಗೆಯಾಗಿತ್ತು. ಗಟ್ಟದ ಮೇಲಿನ ” ದೆಯ್ಯ”ಎಂದರೆ ಪೋಲೀಸಿನವರೂ ಜೈಲೂ ಬಗ್ಗಿಸಲಾರದ ಅವರನ್ನು ಮಲೆನಾಡಿನವರು” ದೆಯ್ಯ” ಗಳಿಂದ ನ್ಯಾಯವಾಗಿ ವರ್ತಿಸುವಂತೆ ಮಾಡುತ್ತಿದ್ದರು.

ಸೆಟ್ಟರು ಸ್ಥಿತಿಯನ್ನು ನೋಡಿ ಚಂದ್ರಯ್ಯಗೌಡರಿಗೂ ಸ್ವಲ್ಪ ಭೀತಿಯಾಗಿ ಕಡೆಗೂ ನೋಡಿ. ” ಇವತ್ತು ಅಮಾವಾಸ್ಯೆ ಅಲ್ಲವೇ? ಹೊತ್ತಾಗುತ್ತದೆ. ಮನೆಗೆ ಹೋಗುವ” ಎಂದರು.

ಅವರ ಸ್ವರ ಮತ್ತು ಮಾತುಗಳ ಅರ್ಥ ಎಲ್ಲರಿಗೂ ಆಯಿತು. ಅದನ್ನು ಮಾತ್ರ ಕುರಿತು ಮಾತಾಡದೆ ಬೇರೆ ವಿಷಯ ಮಾತಾಡುತ್ತ ಎಲ್ಲರೂ ಮನೆಯ ಕಡೆಗೆ ಹೊರಟರು. ಅಷ್ಟರಲ್ಲಿ ಗಾಡಿ ಎತ್ತುಗಳ ಗಂಟೆಯ ಸ್ವರ ಕತ್ತಲೆಯ ಮೌನದಲ್ಲಿ ಮೃದು ಮಧುರವಾಗಿ ಮಾಲೆ ಮಾಲೆಯಾಗಿ ಹನಿಹನಿಯಾಗಿ ತೆರೆ ತೆರೆಯಾಗಿ ಕೇಳಿಬಂದಿತು. ಆದರೆ ಅದನ್ನು ಆಲಿಸಿದ ಚಂದ್ರಯ್ಯಗೌಡರಲ್ಲಿ ಹರ್ಷಕ್ಕಿಂತಲೂ ಹೆಚ್ಚಾಗಿ ಕ್ರೋಧ ಉಂಟಾಯಿತು. ಮಧ್ಯಾಹ್ನವೇ ಬರಬೇಕಾಗಿದ್ದ ಗಾಡಿ ರಾತ್ರಿಯವರೆಗೆ ಬಾರದಿದ್ದುದು ಅವರ ಕೋಪಕ್ಕೆ ಕಾರಣ. ಅದೂ ಅಲ್ಲದೆ ಆ ದಿನ ಪ್ರಾತಃಕಾಲದಿಂದ ನಡೆದ ಒಂದೊಂದು ಘಟನೆಯೂ ಜೋಯಿಸರಿದ್ದಾಗಲೇ ಅಡುಗೆ ಮನೆಯಲ್ಲಿ ಕೂಗಾಟವಾದದ್ದು. ಅಣ್ಣಯ್ಯಗೌಡರಿಗೆ ಹಣ ಕೊಡದೆ ಕಳುಹಿಸಬೇಕಾಗಿ ಬಂದದ್ದು, ಆಮೇಲೆ ಪುಟ್ಟಮ್ಮ ದೂರು ಹೇಳಿದ್ದ, ತಾವು ಹೆಂಡತಿಯನ್ನು ಹೊಡೆದದ್ದು. ತೀರ್ಥಹಳ್ಳಿಗೆ ಹೋದ ಗಾಡಿ ಸಕಾಲಕ್ಕೆ ಬಾರದಿದ್ದುದು. ಸಿಂಗಪ್ಪಗೌಡರು ಕಳ್ಳನಾಟಾ ಕಡಿಸುತ್ತಿದ್ದಾರೆಂದು ಸೆಟ್ಟರಿಂದ ತಿಳಿದಿದ್ದು, ಅಣ್ಣಯ್ಯಗೌಡರ ಹೆಂಡತಿ ತೀರಿ ಕೊಂಡದ್ದರಿಂದ ಅಲ್ಲಿಗೆ ಆಳುಗಳೊಡನೆ ಹೋಗಿ ದಣಿಯಬೇಕಾಗಿ ಬಂದದ್ದು- ಗೌಡರ ಮನಸ್ಸನ್ನು ಕಲಕುತ್ತಲೇ ಬಂದಿದುದರಿಂದ  ಅವರಿಗೆ ಸಮಾಧಾನವಿರಲಿಲ್ಲ. ಕತ್ತಲೆಯಲ್ಲಿ ಕಲ್ಲುಮುಳ್ಳಿನ ಹಾದಿಯಲ್ಲಿ ನಿಮಿಷಕ್ಕೊಂದು ಹೆಜ್ಜೆಯಿಡುತ್ತ ತಡವಿ ಎಡವಿ ನಡೆಯುತ್ತ ಮುಂದುವರಿದರು. ಮನೆಯ ಸಮೀಪಕ್ಕೆ ಬರಲು ನಾಯಿಗಳ ಕೂಗಾಟದೊಂದಿಗೆ ಮನುಷ್ಯ ಕಂಠದ ರೋದನದ ಬೊಬ್ಬೆಯೂ ಕೇಳಿಸಿ. ಗೌಡರಿಗೆ ಗಾಬರಿಯಾಯಿತು.

“ಯಾರ‍್ರೀ ಅದು ಅಳೋದು?” ಎಂದು ಹಿಂದೆ ಬರುತ್ತಿದ್ದ ಸೇರೆಗಾರರನ್ನು ಕೇಳಿದರು.

ಸೇರೆಗಾರರು ಸ್ವಲ್ಪ ನಿಂತು ಆಲಿಸಿ” ಹಾಳು ನಾಯಿ! ಏನು ಬೊಬ್ಬೆ ಹಾಕ್ತವೆ?” ಎಂದರು.

ತಿಮ್ಮನು “ನಾಗಮ್ಮನೋರ ದನಿ ಕೇಳ್ದಂಗೆ ಆಗ್ತದೆ” ಎಂದನು.

ಮೂವರೂ ಮತ್ತೆ ಮುಂದುವರಿದರು. ಹೆಬ್ಬಾಗಿಲು ಬಳಿಗೆ ಬರಲು ಒಳಗಿನಿಂದ ” ಅಯ್ಯೋ ದೇವರೇ, ನಿನ್ನ ಗುಡಿ ಹಾಳಾಗ! … ನಿನ್ನ ಕಣ್ಣಿಂಗಿ ಹೋಗ!….. ನಾನೇನು ಮಾಡಿದ್ದೇನೋ ನಿನಗೆ?….. ಅವರನ್ನು ತಿಂದುಕೊಂಡಿದ್ದೂ ಸಾಲದೆ, ಇದ್ದೊಬ್ಬ ಮಗನ ಬೆನ್ನು ಮುರಿದೇನೋ!… ನಿನ್ನ ಗುಡಿ ಹಾಳಾಗ!” ಎಂದು ಮೊದಲಾಗಿ ಬೈಗುಳವೂ ಆರ್ತನಾದವೂ ಭಯಂಕರವಾಗಿ ಕೇಳಿಸಿತು. ಗೌಡರು ಮನೆಯೊಳಗೆ ಹೋಗಿ ನೋಡುತ್ತಾರೆ. ಜಗಲಿಯ ದೀಪದ ಮಂದ ಕಾಂತಿಯಲ್ಲಿ ಅಂಗಳದ ನಡುವೆ ತುಳಿಸಿಯ ಕಲ್ಲುಪೀಠದ ಬಳಿ ನಾಗಮ್ಮನವರು ನಿಂತು ಶಪಿಸುತ್ತ ಅಳುತ್ತ ಆಗಾಗ ತಮ್ಮ ತಲೆಯನ್ನು ಕಲ್ಲಿನ ಪೀಠಕ್ಕೆ ರಭಸದಿಂದ ಬಡಿಯುತ್ತ, ತಲೆ ಎದೆಗಳನ್ನು ಎರಡು ಕೈಯಿಂದಲೂ ಹೊಡೆದುಕೊಳ್ಳುತ್ತ, ಶೋಕದ ಮೂರ್ತಿಯಾಗಿ ನಿಂತಿದ್ದಾರೆ! ಪಕ್ಕದಲ್ಲಿ ಪುಟ್ಟಮ್ಮ ವಾಸು ಇಬ್ಬರೂ ಅಳುತ್ತ ಸಮಾಧಾನಪಡಿಸುತ್ತ ನಿಂತಿದ್ದಾರೆ! ಸ್ವಲ್ಪ ದೂರದಲ್ಲಿ ನಿಂತು ಪುಟ್ಟಮ್ಮನೂ ಸಂತೈಕೆಯ ಮಾತುಗಳನ್ನು ಹೇಳುತ್ತಿದ್ದಾನೆ!