ಕಾನೂರಿನಲ್ಲಿ ‘ದೆಯ್ಯದ ಹರಕೆ’ ಎಂದರೆ, ಅದೊಂದು ಮಹಾಸಂಭ್ರಮದ ಘಟನೆ. ಚಂದ್ರಯ್ಯಗೌಡರ ಆಳು, ಒಕ್ಕಲು, ಸಮೀಪದ ಬಂಧುಗಳು ಎಲ್ಲರೂ ಅದರಲ್ಲಿ ಭಾಗಿಗಳಾಗುವುದು ವಾಡಿಕೆಯಾಗಿತ್ತು. ಕೆಲವು ಕುರಿಗಳೂ ಅನೇಕ ಕುಕ್ಕುಟಗಳೂ ಆ  ದಿನ ಭೂತ, ರಣ, ಬೇಟೆರಣ, ಚೌಡಿ, ಪಂಜ್ರೊಳ್ಳಿ ಮೊದಲಾದ ‘ದೆಯ್ಯ ದ್ಯಾವರು’ಗಳಿಗೆ ಬಲಿಯಾಗುತ್ತಿದ್ದುದರಿಂದ ಕೆಲವರ ಕಣ್ಣಿಗೂ ಎಲ್ಲರ ಹೊಟ್ಟೆಗೂ ಹಬ್ಬವಾಗುತ್ತಿತ್ತು. ನಂಟರೂ ನಂಟರ ಮನೆಯ ಮಕ್ಕಳೂ ಮನೆಯನ್ನೆಲ್ಲ ತುಂಬಿ, ಮನಸ್ಸಿಗೆ ಹರ್ಷವಾಗುವಂತ ಕಲಕಲರವವಾಗುತ್ತಿತ್ತು.

ಆದರೆ ಈ ವರ್ಷದ ‘ದೆಯ್ಯದ ಹರಕೆ’ ಮನೆಯವರಿಗೆ ಅಷ್ಟೇನೂ ಸಂಭ್ರಮಕಾರಿಯಾಗಿರಲಿಲ್ಲ. ಏಕೆಂದರೆ ಎಲ್ಲರ ಮನೋಗಗನದಲ್ಲಿಯೂ ಕಾರ್ಮುಗಿಲು ಕವಿದುಕೊಂಡಿತ್ತು. ಉಳಿದವರಿಗೆ ಎಂದಿನಂತೆಯೆ ಆಹ್ಲಾದಕರವಾಗಿತ್ತು.

ಕೆಲವು ಬಂಧುಗಳೂ ಒಕ್ಕಲುಗಳೂ ಹಿಂದಿನ ದಿನ ಸಾಯಂಕಾಲವೆ ಮನೆಗೆ ಬಂದುಬಿಟ್ಟಿದ್ದರು. ಮರುದಿನ ಬೆಳಿಗ್ಗೆ ಹೊರಗಿನ ಆಳುಗಳೆಲ್ಲ ಹಾಜರಾದರು. ಬೇಲರ ಬೈರ, ಸಿದ್ಧ, ಹಳೆಪೈಕದ ತಿಮ್ಮ, ಕೆಳಕಾನೂರು ಅಣ್ಣಯ್ಯಗೌಡರು, ಅವರ ಮಗಳು, ಬಾಡುಗಳ್ಳ ಡೊಳ್ಳುಹೊಟ್ಟೆಯ ಸೋಮ, ಗಂಗೆ ಮೊದಲಾದ ರಂಗಪ್ಪಸೆಟ್ಟರ ಕಡೆಯ ಕನ್ನಡ ಜಿಲ್ಲೆಯ ಆಳುಗಳು! ಸ್ವಲ್ಪ ಹೊತ್ತಾಗುವುದರೊಳಗೆ ಇತರ ಹಳ್ಳಿಗಳಿಗೆ ತನ್ನ ಕರ್ತವ್ಯದಮೇಲೆ ಹೋಗಿದ್ದ ಮಾರ್ಕನ ಸವಾರಿಯೂ ದಯಮಾಡಿಸಿತು. (ದೆಯ್ಯದ ಹರಕೆಗಿಂತಲೂ ತುಂಡು ಕಡುಬೇ ಅವನ ಆಗಮನಕ್ಕೆ ಬಹುಶಃ ಪ್ರಬಲತರವಾದ ಕಾರಣವಾಗಿದ್ದಿರಬಹುದು!) ಊರು ಬಿಟ್ಟು ಸೀತೆಮನೆಗೆ ಹೋಗಿದ್ದ ಓಬಯ್ಯನೂ ಬಂದನು. ಭೂತದ ಹರಕೆ ಎಂದರೆ ಅವನಿಗೆ ಹೆಚ್ಚು ಭಕ್ತಿ. ಅದರಲ್ಲಿಯೂ ಭೂತ ತನಗೆ ಆಗಾಗ ರ್ದಶನ ಕೊಡುತ್ತದೆಂದು ಅವನು ಎಲ್ಲೆಲ್ಲಿಯೂ ಸಾರಿಬಿಟ್ಟಿದ್ದನು. ಅಂತಹ ಭೂತಭಕ್ತ ಹರಕೆಗೆ ಬರದಿದ್ದರೆ ಆಗುತ್ತದೆಯೆ?

ಮೇಲುಜಾತಿಯ ಕೆಲವರು ಪಾಕಕಾರ್ಯಕ್ಕೆ ನಿಂತರು. ಕಡುಬಿಗೆ ಹಿಟ್ಟು ಕುಟ್ಟುವುದು, ಮಾಂಸಕ್ಕೆ ಕಾರ ಕಡೆಯುವುದು, ತೆಂಗಿನಕಾಯಿ ತುರಿಯುವುದು, ಮಸಾಲೆ  ಸಾಮಾನು ಸಜ್ಜುಗೊಳಿಸುವುದು, ದೊಡ್ಡ ದೊಡ್ಡ ಕಡಾಯಿಗಳನ್ನು ಸಿದ್ಧಮಾಡುವುದು, ಬಾಳೆಯಲೆ ಬಾಡಿಸುವುದು ಇತ್ಯಾದಿ ಕಾರ್ಯಗಳು ವಿತರಣೆಯಿಂದ ಸಾಗಲಾರಂಭವಾದುವು. ಮತ್ತೆ ಕೆಲವರು ಕೆರೆಯ ಬಳಿ ಕತ್ತಿಗಳನ್ನು ಮಸೆಯುವುದು, ಬಾಳೆಯ ಹೆಡೆಗಳನ್ನು ಹಾಸುವುದು, ಕುರಿಕೋಳಿಗಳನ್ನು ‘ಹಸಿಗೆ’ ಮಾಡಲು ಬೆಂಕಿಗಾಗಿ ಕಟ್ಟಿಗೆ ತಂದೊಡ್ಡುವುದು, ಎಲುಬು ಕತ್ತರಿಸಲು ‘ಕೊಚ್ಚುಗೊಲ್ಟಿ’ ಗಳನ್ನು ತಯಾರಿಸುವುದು ಇತ್ಯಾದಿ ಕೆಲಸಗಳಲ್ಲಿ ನಿಯುಕ್ತರಾದರು. ಇನ್ನೂ ಕೆಲವರು ಆಯಾ ದೆವ್ವ ಭೂತಗಳಿಗೆ ಕೊಡಬೇಕಾಗಿದ್ದ ಬಲಿಯ ಕಾರ್ಯಕ್ಕೆ ನಿಯೋಜಿತರಾದರು. ಒಟ್ಟಿನಲ್ಲಿ ಕೆಲಸ ಮೂರುಕಾಸಿನದಾದರೆ ಗಲಾಟೆ ಒಂದು ರೂಪಾಯಿನದಾಗಿತ್ತು! ವಾಸುವಿನ ನೇತೃತ್ವದಲ್ಲಿ ಅಂದು ಮನೆಯಲ್ಲಿ ನೆರೆದ ಬಾಲಕ ಬಾಲಕಿಯರಲ್ಲಿ ಕೇಕೆಹಾಕಿ ಕುಣಿದಾಡುವುದೇ ಪರಮ ಕರ್ತವ್ಯವೆಂದು ತಿಳಿದು ಕೆರೆಯಿಂದ ಅಡುಗೆಮನೆಗೂ ಅಡುಗೆಮನೆಯಿಂದ ಜಗುಲಿಗೂ ಅಲ್ಲಿಂದ ಹೊರ ಅಂಗಳಕ್ಕೂ ಹಾಸು ಹೊಕ್ಕಾಡುತ್ತಿದ್ದರು. ರಾಮಯ್ಯ ಚಂದ್ರಯ್ಯಗೌಡರ ಆಜ್ಞಾವಾಹಕನಾಗಿ, ತನಗೆ ದೆಯ್ಯದ ಹರಕೆಯಲ್ಲಿ ಒಂದಿನಿತೂ ಇಷ್ಟವಿಲ್ಲದಿದ್ದರೂ, ಹಿಂಸಾಮಯ ಭೂತಾರಾಧನೆಗೆ ತತ್ವತಃ ವಿರೋಧಿಯಾಗಿದ್ದರೂ, ತಂದೆಯ ಹೆದರಿಕೆಯಿಂದ ಅವರು ಹೇಳಿದ ಕೆಲಸಗಳನ್ನು ಯಂತ್ರದಂತೆ ಮಾಡುತ್ತಿದ್ದನು.ಎರಡು ಕಿವಿಗಳಿಗೂ ಹತ್ತಿ ತುರುಕಿಕೊಂಡಿದ್ದ ಚಂದ್ರಯ್ಯಗೌಡರು ಜನರ ಗಲಿಬಿಲಿಯನ್ನೆಲ್ಲ ಮೀರುವಂತೆ ತಾರಸ್ವರದಿಂದ ಹುಕುಂ ಚಲಾಯಿಸುತ್ತಿದ್ದರು. ಮನೆಯ ನಾಯಿಗಳಂತೂ ಎಲ್ಲಿ ಹೋದರೂ ಥೂ! ಛೀ! ಹಛೀ! ಎನ್ನಿಸಿಕೊಂಡು ನಿಲ್ಲಲು ತಾವಿಲ್ಲವೆಂಬಂತೆ ತಿರುಗುದ್ದುವು. ಪುಟ್ಟಣ್ಣನು ಗೌಡರ ಅಪ್ಪಣೆಯಂತೆ ಮಿಂದು ಕೊಳೆ ಪಂಚೆಯನ್ನೇ ಮಡಿಯುಟ್ಟುಕೊಂಡು ಪೂಜಾಸಾಮಗ್ರಿಗಳನ್ನೆಲ್ಲ ಸಜ್ಜುಗೊಳಿಸಿ ಅಗ್ರಹಾರದ ವೆಂಕಪ್ಪಯ್ಯ ಜೋಯಿಸರ ಆಗಮನವನ್ನೇ ಇದಿರು ನೋಡುತ್ತಿದ್ದನು. ಶೂದ್ರರಿಂದ ರಕ್ತಬಲಿಯಾಗುವ  ಮುನ್ನ ಬ್ರಾಹ್ಮಣರಿಂದ ಭೂತಗಳಿಗೆಲ್ಲ ಪೂಜೆ ಮಾಡಿಸಿ ‘ಜೈನೆಡೆ’ ಹಾಕಿಸುವುದು ವಾಡಿಕೆ. (‘ಜೈನೆಡೆ’ ಎಂದರೆ ಜೈನರ ಎಡೆ ಎಂದರ್ಥ. ಎಂದರೆ ನಿರಾಮಿಷ ನೈವೇದ್ಯ!)

ಹೀಗೆ ಎಲ್ಲರೂ ಕೋಲಾಹಲದಲ್ಲಿ ಭಾಗಿಗಳಾಗಿದ್ದಾಗ ಉಪ್ಪರಿಗೆಯಲ್ಲಿ ಹೂವಯ್ಯನೊಬ್ಬನೆ ಕೂಳಿತು ಭಗದ್ಗೀತೆಯನ್ನು ಓದುತ್ತಿದ್ದನು. ಆದರೆ ಮನಸ್ಸು ಸಂಪೂರ್ಣವಾಗಿ ಭಗವದ್ಗೀತೆಯಲ್ಲಿತ್ತೆಂದು ಹೇಳಲಾಗುವುದಿಲ್ಲ . ಏಕೆಂದರೆ ಆಗಾಗ ಕತ್ತೆತ್ತಿ ಎದುರಿಗಿದ್ದ ಕಾಡು ಬೆಟ್ಟ ಬಾನುಗಳ ಕಡೆಗೆ ನೋಡುತ್ತಿದ್ದನು. ಅವುಗಳನ್ನೂ ನೋಡುತ್ತಿರಲಿಲ್ಲವೆಂದು ತೋರುತ್ತದೆ. ಅವನ ಕಣು ಮೊಟ್ಟೆಯ ಮೆಲೆ ಕಾವು ಕೂತ ಹಕ್ಕಿಯ ಕಣ್ಣಿನಂತೆ ಅಂತರ್ಮುಖವಾಗಿತ್ತು. ಚಿತ್ರಗಳೂ ಭಾವಗಳೂ ಆಲೋಚನೆಗಳೂ ಆಶೆ ಆಶಂಕೆಗಳೂ ಅವನ ಮನಸ್ ಸರೋವರದಲ್ಲಿ ತರಂಗಿತವಾಗಿ, ಒಂದರ ಮೇಲೊಂದದುರುಳಿ ಹೋಗುತ್ತಿದ್ದುವು.

ಆರ್ಯುಧರ್ಮದ ಉತ್ತಮ ಆದರ್ಶವೇನು? ಹಿಂದೂಗಳೆಂದು ಹೇಳಿಕೊಳ್ಳುವ  ಈ ಮಂದಿ ಮಾಡುತ್ತಿರುವ ಕಾರ್ಯಕಲಾಪಗಳೇನು? ಉಪನಿಷತ್ತು ಭಗವದ್ಗೀತೆಗಳ ಮಹೋನ್ನತ ದಿವ್ಯದರ್ಶನವೆಲ್ಲಿ? ಈ  ಮಂದಿ ಕೈ ಕೊಂಡಿರುವ ಪಿಶಾಚಾರಾಧನೆಯಲ್ಲಿ? ಇದನ್ನೆಲ್ಲ ತಿದ್ದುವ ಬಗೆ ಹೇಗೆ? ಒಂದು ರೀತಿಯಿಂದ ನೋಡಿದರೆ ಪಾದ್ರಿಗಳ ಖಂಡನೆ ಎಷ್ಟು ಸತ್ಯವಾಗಿದೆ! ― ಹೂವಯ್ಯ ಕೈಯಲ್ಲಿದ್ದ ಗೀತಾಶಾಸ್ತ್ರದ ಕಡೆಗೆ ನೋಡಿದನು. ಈ ಶ್ಲೋಕವು ಕಣ್ಣಿಗೆ ಬಿತ್ತು:

ಯಾಂತಿ ದೇವರ್ವತಾ ದೇವಾನ್ ಪಿತೃನ್ ಯಾಂತಿ ಪಿತೃವ್ರತಾಃ||
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್||

ದೇವತೆಗಳನು ಪೂಜಿಸುವವರಿಗೆ ದೇವಲೋಕ ಲಭಿಸುತ್ತದೆ. ಪಿತೃಪೂಜಕರು ಪಿತೃಲೋಕವನ್ನೈದುತ್ತಾರೆ. ಭೂತ ಪ್ರೇತ ಪೂಜಕರು ಆ ಭೂತ ಪ್ರೇತಗಳ ಲೋಕವನ್ನೇ ಸೇರುತ್ತಾರೆ. ನನ್ನ ಪೂಜಕರು ನನ್ನಲ್ಲಿಗೆ ಬರುತ್ತಾರೆ.

ಹಾಗೆಯೆ ಮತ್ತೊಂದು ಶ್ಲೋಕವೂ ನೆನಪಿಗೆ ಬಂದು ಹದಿನೇಳನೆಯ ಆಧ್ಯಾಯವನ್ನು ತೆಗೆದು ಓದಿದನು:

ಯಜಂತೇ ಸಾತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ||
ಪ್ರೇತಾನ್ ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ||

ಸಾತ್ವಿಕರು ದೇವತೆಗಳನು ಪೂಜಿಸುತ್ತಾರೆ. ರಾಜಸರು ಯಕ್ಷ ರಾಕ್ಷಸರನ್ನು ಪೂಜಿಸುತ್ತಾರೆ. ತಾಮಸಜನರು ಪ್ರೇತಭೂತಗಣಗಳನ್ನು ಪೂಜಿಸುತ್ತಾರೆ.

“ಹೇ ಭಗವಾನ್, ಈ ಜನರ ಮನಸ್ಸನ್ನು ನಿನ್ನೆ ಕಡೆಗೆ ತಿರುಗಿಸಲು ನನಗೆ ಶಕ್ತಿಯನ್ನು ಕೃಪೆಮಾಡು” ಎಂದು ಹೂವಯ್ಯ ಮನದಲ್ಲಿಯೆ ಪ್ರಾರ್ಥಿಸಿದನು. ಯಾವುದೋ ಒಂದು ಭಾವೋತ್ಕರ್ಷದಿಂದ ಅವನ ಕಣ್ಣುಗಳಲ್ಲಿ ಹನಿ ತುಂಬಿತು. ಹನ್ನೆರಡನೆಯ ಅಧ್ಯಾಯವನ್ನು ತೆಗೆದು ಭಾವಪೂರ್ಣವಾಗಿ ಭಕ್ತಿಯೋಗದ ಶ್ಲೋಕಗಳನ್ನು ಓದತೊಡಗಿದನು: ಐದನೆಯ ಶ್ಲೋಕವನ್ನು ಮುಗಿಸಿ ಆರನೆಯದಕ್ಕೆ ಬಂದನು:

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ |
ಅನನ್ಯೇನೈವ ಯೋಗೇನ ಮಾಂ ಧ್ಯಾಯನ್ತ ಉಪಾಸತೇ||
ತೇಷಾಮಹಂ ಸಮುದ್ಧರ್ತಾ ಮೃತ್ಯು ಸಂಸಾರ ಸಾಗರಾತ್ |
ಭವಾಮಿ ನ ಚಿರಾತ್ಪಾರ್ಥ ಮಯ್ಯಾವೇಶಿತ ಚೇತಸಾಮ್||
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ್ತ್ಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ||

ಎಲ್ಲ ಕರ್ಮಗಳನ್ನು ನನ್ನಲ್ಲಿ ನಿವೇದಿಸಿ, ನನ್ನಲ್ಲಿಯೇ ತತ್ಪರನಾಗಿ, ಅನನ್ಯಯೋಗದಿಂದ ನನ್ನನ್ನು ಉಪಾಸಿಸುವರನ್ನು ಮೃತ್ಯುಸಂಸಾರ ಸಾಗರದಿಂದ ಉದ್ಧಾರ ಮಾಡುತ್ತೇನೆ. ನನ್ನಲ್ಲಿಯೇ ಮನಸ್ಸಿರಲಿ, ನನ್ನಲ್ಲಿಯೇ ಬುದ್ಧಿಯಿರಲಿ, ನಿಸ್ಸಂದೇಹವಾಗಿ ನೀನು ನನ್ನನ್ನು ಪಡೆಯುತ್ತೇಯೆ.

ಹೂವಯ್ಯ ಭಾವವಶನಾದನು. ಮೈ ಪುಲಕಿತವಾಯಿತು. ಗೀತಾ ಪುಸ್ತಕ ನೆಲಕ್ಕುರುಳಿತು. ಫಕ್ಕನೆ ಎಚ್ಚತ್ತವನಂತೆ ಮತ್ತೆ ಗ್ರಂಥವನ್ನೆತ್ತಿ, ತೆರೆದು ನಮಸ್ಕರಿಸುತ್ತಿರಲು, ಕಂಬನಿಯೊಂದು ಕಾಗದದ ಮೇಲೆ ತಟಕ್ಕೆಂದು ಬಿದ್ದಿತು. ಆ ಹನಿಯನ್ನು ಕೈಯಿಂದದೊರಸುತ್ತಿರಲು ತೊಯ್ದ ಶ್ಲೋಕವು ತೂರ್ಯವಾಣಿಯಂತೆ ಕಾಣಿಸಿತು!

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ||
ತದಹಂ ಭಕ್ತ್ಯು ಪಹೃತಮಶ್ನಾಮಿ ಪ್ರಯತಾತ್ಮನಃ||

ಒಂದು ಎಲೆಯನ್ನಾಗಲಿ ಒಂದು ಹೂವನ್ನಾಗಲಿ ಒಂದು ಹಣ್ಣನ್ನಾಗಲಿ ನನಗೆ ಯಾವನಾದರೂ ಭಕ್ತಿಯಿಂದ ನಿವೇದಿಸಿದರೆ ಅದನ್ನು ಆನಂದದಿಂದ ಸ್ವೀಕರಿಸುತ್ತೇನೆ.

“ಭಗವಾನ್, ಕಂಬನಿಯ ನೈವೇದ್ಯ ಎಲ್ಲಕ್ಕಿಂತಲೂ ಶ್ರೇಷ್ಠವಾದುದಲ್ಲವೆ?” ಎಂದುಕೊಂಡು ಹೂವಯ್ಯ ಚೈತ್ರ ಸೂರ್ಯನ ಕಾಂತಿಯಲಿ ಅನಂತ ವಿಸ್ತಾರವಾಗಿ ಹಬ್ಬಿದ್ದ ವನಪ್ರಾಂತವನ್ನು ನೋಡಿದನು.

ಕೆಳಗೆ ಹೊರ ಅಂಗಳದಲ್ಲಿ ಭೂತಬಲಿಗಾಗಿ ತಂದು ಕಟ್ಟಿದ್ದ ಮೇಕೆಗಳಲ್ಲಿ ಒಂದು ಅರಚಿಕೊಂಡಿತು. ಧ್ಯಾನಭಂಗವಾಗಿ ಹೂವಯ್ಯ ಕಿಟಕಿಯ ಬಳಿಗೆ ಹೋಗಿ ನಿಂತನು.

ಹೊರಗಡೆ, ಹುಣೆಸೆಯ ಮರದ ಬೇರಿಗೆ, ಬಲಿಗಾಗಿ ತಂದಿದ್ದ ಮೂರು ನಾಲ್ಕು ಮೇಕೆಗಳನ್ನು ಕಟ್ಟಿದ್ದರು. ಆವುಗಳಲ್ಲಿ ಅಚ್ಚ ಕಪ್ಪು ಬಣ್ಣದ ಹೋತನೊಂದು, ತನಗೆ ಅನತಿದೂರದಲ್ಲಿ ಎಟುಕಿಯೂ ಎಟುಕದಂತಿದ್ದ ಪೊದೆಯ ಸೊಪ್ಪಿಗಾಗಿ, ಕೊರಳ  ಹಗ್ಗವನ್ನು ಜಗ್ಗಿ ತುಡಿದು, ಕುತ್ತಿಗೆಯನ್ನು ನೀಡಿ, ನಾಲಗೆಯನ್ನು ಚಾಚಿ ಚಾಚಿ ಸಾಹಸ  ಮಾಡುತ್ತಿತ್ತು. ನಾಲಿಗೆ ಒಂದು ಎಲೆಯ ತುದಿಯನ್ನು ಮುಟ್ಟುತಿದ್ದಿತೆ ಹೊರತು ಎಲೆ ಬಾಯಿಗೆ ಸಿಕ್ಕುತ್ತಿರಲಿಲ್ಲ. ಇನ್ನೊಂದು ಗಂಟೆಯೊಳಗಾಗಿ ಹತವಾಗಲಿರುವ ಆ ಪ್ರಾಣಿ ಆಹಾರ ಸಂಪಾದನೆಗಾಗಿ ಎಷ್ಟು ಪ್ರಯತ್ನಪಡುತ್ತಿದೆ ಎಂದುಕೊಂಡ ಹೂವಯ್ಯನಿಗೆ ಸಂಕಟವಾಯಿತು. ವಾಸು, ಪುಟ್ಟ ಮತ್ತೆ ಕೆಲವು ಹುಡುಗರು ಆ ಯಜ್ಞಪಶುಗಳಿಗೆ ಸ್ವಲ್ಪ  ದೂರದಲ್ಲಿ, ಅರ್ಧಚಂದ್ರ ವ್ಯೂಹವಾಗಿ ನಿಂತು ಏನೇನೊ ಚಿಲಿಪಿಲಿಗುಟ್ತುತ್ತಿದ್ದರು. ನಿಂಗ, ಓಬಯ್ಯ, ಹಳೆಪೈಕದ ತಿಮ್ಮ ಮತ್ತು ಇತರ ಕೆಲವು ಜನರು ಕುರಿಗಳನ್ನೇ ನೋಡುತ್ತ ಮಾತಾಡಿಕೊಳ್ಳುತ್ತಿದ್ದರು. ಅವರಾಡಿಕೊಳ್ಳುತ್ತಿದ್ದ ಮಾತಿನ ಪರಿಣಾಮವಾಗಿ ಮಾರ್ಕ  ಕರಿಯ ಹೋತನ ಬಳಿಗೆ ಹೋಗಿ, ತನ್ನ ಬಲಗೈಯನ್ನು ಕೊರಳಿಗೂ ಎಡಗೈಯನು ಪೃಷ್ಠಭಾಗಕ್ಕೂ ಕೊಟ್ಟು, ಪ್ರಾಣಿಯನ್ನು ಎತ್ತಿ ತೂಕವನ್ನು ನೋಡಿ “ಪರ್ವಾ ಇಲ್ಲ” ಎಂಬಂತೆ ಅಭಿನಯಿಸಿ ನಿಂತವರಿಗೆ ಏನನ್ನೋ ಹೇಳಿದನು. ಒಡನೆಯೆ ‘ಹ ಹ ಹ !’ ‘ಹೊ ಹೊ ಹೋ !’ ಎಂಬ ಅನೇಕ ಕಂಠಗಳ ನಗೆಯ ನಾದ ಕೇಳಿಸಿತು. ಮೇಕೆಗಳೆಲ್ಲ ಕಂಗಾಲಾಗಿ ಬೆದರುಗಣ್ಣಾದುವು.

ಅಷ್ಟರಲ್ಲಿ ಮತ್ತೊಂದು ಪರಿಚಿತ ಕಂಠಧ್ವನಿ ಕೇಳಿಸಿದಂತಾಗಲು ಹೂವಯ್ಯ ಆ ಕಾಡೆಗೆ ದೃಷ್ಟಿ ತಿರುಗಿಸಿದನು. ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರು ಚಂದ್ರಯ್ಯಗೌಡರೊಡನೆ ಮಾತಾಡುತ್ತ ನಿಂತಿದ್ದಾರೆ! ಪಕ್ಕದಲ್ಲಿ ಮುತ್ತಳ್ಳಿ ಚಿನ್ನಯ್ಯ ರಾಮಯ್ಯನೊಡನೆ ಮಾತಾಡುತ್ತಿದ್ದಾನೆ: ಹೂವಯ್ಯನ ಹೃದಯದಲ್ಲಿ ಇದ್ದಕ್ಕಿದ್ದಹಾಗೆ  ಭಾವಸಂಚಾರವಾಯಿತು. ಆ ದಿನದ ದೆಯ್ಯದ ಹರಕೆ ಅವನಿಗೆ ಸಂಪೂರ್ಣವಾಗಿ  ಅನಿಷ್ಟವಾಗಿದ್ದರೂ ಒಂದು ವಿಚಾರದಲ್ಲಿ ಮಾತ್ರ ಉತ್ಸಾಹವಿತ್ತು. ಚಿನ್ನಯ್ಯನನ್ನು ಕಂಡೊಡಾನೆ ಅದು ದ್ವಿಗುಣಿತವಾಯಿತು, ಅಣ್ಣನೊಡನೆ ತಂಗಿಯೂ ಬಂದಿರಬೇಕೆಂದು. ಪ್ರತಿ ವರ್ಷವೂ ಕಾನೂರಿನ ದೆಯ್ಯದ ಹರಕೆಗೆ ಶ್ಯಾಮಯ್ಯ ಗೌಡರಾಗಲಿ ಚಿನ್ನಯ್ಯನಾಗಲಿ ಗೌರಮ್ಮ, ಸೀತೆ, ಲಕ್ಷ್ಮಿಯರನ್ನು ಕರೆದುಕೊಂಡು ಬರುವುದು ವಾಡಿಕೆಯಾಗಿತ್ತು. ಹಾಗೆ ಬಂದಾಗಲೆಲ್ಲ ಸ್ತ್ರೀ ಬಂದುಗಳು ಒಂದೆರಡು ವಾರಗಳು ನಂಟರ ಮನೆಯಲ್ಲಿಯೆ ನಿಲ್ಲುತ್ತಿದ್ದರು. ಅದನ್ನು ನೆನೆದು ಹೂವಯ್ಯ ಹರ್ಷಚಿತ್ತನಾದನು.

ಆದರೆ ಅವರನ್ನು ಕರೆತಂದ ಗಾಡಿಯಲ್ಲಿ? ತಾನು ಗೀತೆಯನ್ನು ಓದುತ್ತ ಕೂತಿದ್ದಾಗ ಗಾಡಿ ಬಂದಿರಬೇಕು; ಅದನ್ನು ಗಾಡಿಕೊಟ್ಟಿಗೆಯಲ್ಲಿ ನಿಲ್ಲಿಸಿರಬೇಕು ಎಂದು ಆಲೋಚಿಸಿದ ಹೂವಯ್ಯ ನಿಂತಲ್ಲಿ ನಿಲ್ಲಲ್ಲಾರದೆ ಉಪ್ಪರಿಗೆಯನ್ನಿಳಿದು ಚಿನ್ನಯ್ಯರಾಮಯ್ಯರು ಮಾತಾಡುತ್ತಿದ್ದಲ್ಲಿಗೆ ಹೋದನು.

ಜೋಯಿಸರು ಭೂತಗಳಿಗೆ ‘ಜೈನೆಡೆ’ ಹಾಕಲು ಚಂದ್ರಯ್ಯಗೌಡರೊಡನೆ ಮಾತಾಡುತ್ತ ಹೋದರು. ಪುಟ್ಟಣ್ಣ ಸಕಲ ಸಾಮಗ್ರಿಗಳನ್ನು ಸಿದ್ಧಮಾಡಿಕೊಂಡು ಅವರ ಹಿಂದೆ ನಡೆದನು. ಉಳಿದ ಮೂವರು ಮರಳಿ ಉಪ್ಪರಿಗೆಯೇರಿದರು.

ಸ್ವಲ್ಪ ಹೊತ್ತು ಮಾತಾಡಿದ ಹೂವಯ್ಯ “ನಿಮ್ಮ ಗಾಡಿಯಲ್ಲಿ? ಬಂದಿದ್ದು ಕಾಣಲಿಲ್ಲ?” ಎಂದನು.

ರಾಮಯ್ಯ “ಅವನೊಬ್ಬನೆ ಬಂದಿದ್ದಾನೆ, ಗಾಡಿಯೇಕೆ?” ಎಂದನು.

ಹೂವಯ್ಯ “ಅದೇನು ಅತ್ತೆಮ್ಮ ಬರಲಿಲ್ಲವೇನು?” ಎಂದು ಕೇಳಿ ನಸುನಾಚಿದನು.

ಚಿನ್ನಯ್ಯ “ನಮ್ಮ ಸೀತೆಗೆ ಮೈ ಹುಷಾರಿಲ್ಲ. ಅದಕ್ಕೇ ಅವರು ಯಾರೂ ಬರಲಿಲ್ಲ” ಎಂದು ಹೇಳುತ್ತ ಜೇಬಿನಿಂದ ಸಿಗರೇಟು ಪೊಟ್ಟಣ ತೆಗೆದನು.

ಹುವಯ್ಯ ಸ್ವಲ್ಪ ಹತಾಶವಾಣಿಯಿಂದ “ಏನಾಗಿದೆ ಸೀತೆಗೆ?” ಎಂದು, ಚಿನ್ನಯ್ಯ ಬಾಯಲ್ಲಿದ್ದ ಸಿಗರೇಟಿಗೆ ಬೆಂಕಿ ಹೊತ್ತಿಸುವುದನ್ನು ನೋಡುತ್ತ ಪ್ರತ್ಯುತ್ತರಕ್ಕಾಗಿ ಕಾದನು.

ಚಿನ್ನಯ್ಯಹೊಗೆ ಬಿಡುತ್ತ ಪ್ರಾರಂಭಿಸಿದನು:

“ಏನಪ್ಪಾ? ನನಗೆ ಬೇರೆ ಗೊತ್ತಾಗುವುದಿಲ್ಲ. ನೀವೆಲ್ಲ ಹೊರಟುಬಂದು ಮಾರನೆ ದಿನದಿಂದಲೆ ಯಾಕೊ ಏನೊ ಮಂಕಾಗಿದ್ದಾಳೆ. ಅವತ್ತು ರಾತ್ರಿಯೇನೋ ಕನಸಿನಲ್ಲಿ ‘ಹುಲಿ! ಹುಲಿ!’ ಅಂತ ಕೂಗಿಕೊಂಡಳಂತೆ. ಮರುದಿನ ಜ್ವರ ಬಂದು ಸ್ವಲ್ಪ ಚಿತ್ತವಿಕಾರವಾದಂತಿದೆ. ಅವಳ ಜಾತಕ ನೋಡಿದ ವೆಂಕಪ್ಪಯ್ಯನವರು ಯಾವುದೋ ಗ್ರಹದ ಕಾಟ ಅಂತ ಹೇಳಿ, ಏನೇನೊ ಮಂತ್ರತಂತ್ರ ಮಾಡಿದರಂತೆ. ಇವತ್ತು ನಾನಿಲ್ಲಿಗೆ ಹೊರಟಾಗ ತಾನೂ ಬರ್ತಿನಿ ಅಂತ ಹಟಹೀಡಿದು ಕೂತಿದ್ದಳು! ಅವ್ವ ಹೆದರಿಸಿ ಬ್ಯಾಡ’ ಅಂತು.”

“ಗಾಡಿ ಮೇಲೆ ಕರಕೊಂಡು ಬರಬಹುದಾಗುತ್ತು” ಎಂದನು ರಾಮಯ್ಯ. ಹೂವಯ್ಯ ಮಾತಾಡಲಿಲ್ಲ. ವೆಂಕಪ್ಪಯ್ಯನವರು ಸೀತೆಯ ಜಾತಕ ನೋಡಿದರು ಎಂದಾಗಲೆ ― ಸೀತೆಮನೆ ಸಿಂಗಪ್ಪಗೌಡರು ತಮ್ಮ ಮಗ ಕೃಷ್ಣಪ್ಪನ ಜಾತಕವನ್ನು ಮುತ್ತಳ್ಳಿಗೆ ತೆಗೆದುಕೊಂಡು ಹೋಗಿದ್ದುದು ನೆನಪಿಗೆ ಬಂದು, ಅವನ ಎದೆಯಲಿ ನಿರಾಕಾರ ಭಯವೊಂದು ಮೂಡಿತು.

“ಇದರ ಮಧ್ಯೆ ಒಂದು ಮದುವೆ ಬೇರೆ ನಿಶ್ಚಯವಾಗಿರೋ ಹಾಂಗೆ ಕಾಣ್ತದೆ!” ಎಂದನು ಚಿನ್ನಯ್ಯ.

ಹೂವಯ್ಯ ಅವ್ಯಕ್ತೋದ್ವೇಗದಿಂದ “ಯಾರಿಗೆ?” ಎಂದನು.

ಚಿನ್ನಯ್ಯ ಒಂದಿನಿತು ಅತೃಪ್ತಿಯಿಂದಲೊ ಎಂಬಂತೆ ಹೇಳಿದನು: “ನಮ್ಮ ಮಾತು ಯಾರು ಕೇಳ್ತಾರೆ? ಅವರು ಹಿಡಿದಿದ್ದೇ ಹಟ, ಆವರು ಹೋಗಿದ್ದೇ ಸರಿ ದಾರಿ; ನನಗೂ ಅಪ್ಪಯ್ಯನಿಗೂ ಅದೇ ವಿಚಾರದಲಿ ಎರಡೆರಡು ಮಾತು ಆಗಿಹೋಯ್ತು. ಅವಳಿಗೇಕಪ್ಪಾ  ಇಷ್ಟು ಬೇಗ ಮದುವೆ? ಇನ್ನೊಂದು ಎರಡು ವರ್ಷ ಹೋಗಿದ್ರೇನಾಗ್ತಿತ್ತು? ಆ ಸೀತೆಮನೆ ಸಿಂಗಪ್ಪ ಮಾವನಂತೂ ಓದೋದು ಶಾಸ್ತ್ರ, ಹಾಕೋದು ಗಾಣ ಒಳಗೊಳಗೇ ಕತ್ತರಿಸ್ತಾನೆ! ಕೃಷ್ಣಪ್ಪನಿಗೆ ಸೀತೇನ ಕೊಡಬೇಕು ಅಂತ ಕೇಳಿದನಂತೆ. ಇವರು ‘ಜಾತಕ ಸರಿಬಂದರೆ ಆಗಲಿ’ ಅಂದುಬಿಟ್ಟರಂತೆ. ಆ ಊರುಹಾಳ ವೆಂಕಪ್ಪಯ್ಯ ಜಾತಕ ನೋಡಿ ಲಗ್ನ ನಿಶ್ಚಯಮಾಡಿ ಕೊಟ್ಟಿದ್ದಾನಂತೆ…..”

“ಅವನ ಕೈಲಿ ಜಾತಕ ನೋಡಿಸಿ ಮದುವೆಯಾದವರು ಯಾರು ತಾನೆ ಸುಖ  ವಾಗಿದ್ದಾರೆ?” ಎಂದ ರಾಮಯ್ಯನಿಗೆ ತನ್ನ ಉದ್ವೇಗವನ್ನು ಮುಚ್ಚಿಡಲಾಗಲಿಲ್ಲ.

ಚಿನ್ನಯ್ಯ “ಅವನೊಬ್ಬ ಬೃಹಸ್ಪತಿ ಆಗಿಬಿಟ್ಟಿದ್ದಾನೆ, ಅಪ್ಪಯ್ಯ, ಕಾನೂರು ಮಾವ, ಸಿಂಗಪ್ಪ ಮಾವ ಇವರಿಗೆಲ್ಲ!” ಎಂದು ಸಿಗರೇಟಿನ ತುದಿಯ ಬೂದಿಯನ್ನು ಚಿಟಿಕಿ ಹೊಡೆದು ಉದುರುಸಿದನು.

“ಲಗ್ನ ನಿಶ್ಚಯವಾಗಿಹೋಯ್ತೇನು?” ಎಂದ ಹೂವಯ್ಯನ ಕೊರಳಿನಲ್ಲಿ ದುಃಖ ಧ್ವನಿಯಿತ್ತು.

ಚಿನ್ನಯ್ಯ “ಹೌದಂತೆ! ಈ ಹುಣ್ಣಿಮೆ ಕಳೆದಮೇಲಂತೆ! ‘ಲಗ್ನ ಪತ್ರಿಕೆ ಮಾಡಿಸಬೇಕು, ತೀರ್ಥಹಳ್ಳಿಗೆ ಹೋಗಬೇಕು’ ಅಂತಿದ್ದರು. ಇಷ್ಟು ಬೇಗ ಏನು ಅವಸರವಾಗಿತ್ತೋ ಏನೋ? ಎರಡು ವರ್ಷ ತಡೆದಿದ್ದರೆ ಬೇರೆ ಗಂಡು ಸಿಕ್ತಿರಲಿಲ್ಲವೆ?” ಎಂದು ಹೂವಯ್ಯನ ಕಡೆಗೆ ಅರ್ಥಗರ್ಭಿತವಾಗಿ ನೋಡಿದನು. ಅವನ ಕಣ್ಣೂ ಒದ್ದೆಯಾದಂತಿತ್ತು.

ಇತ್ತ ಜೋಯಿಸರು ಭೂತಕ್ಕೆ ಹಣ್ಣು ಕಾಯಿ ಹಾಕಿ, ತಮಗೆ ಮಾಮೂಲಾಗಿ ಬರಬೇಕಾದ ದಾನ ದಕ್ಷಿಣೆಗಳನ್ನೆಲ್ಲ ಮಡಿಪಂಚೆಯಲ್ಲಿ ಗಂಟುಹಾಕಿಕೊಂಡು ಅಗ್ರಹಾರಕ್ಕೆ ಹಿಂತಿರುಗಿದರು. ಅವರಿಂದ ಮುತ್ತಳ್ಳಿಗೂ ಸೀತೆಮನೆಗೂ ಆಗಲಿರುವ ಹೊಸ ಸಂಬಂಧದ ಸುದ್ದಿಯನ್ನು ಕೇಳಿದ ಚಂದ್ರಯ್ಯ ಗೌಡರು ಮನದಲ್ಲಿ ಕುದಿದರು. ಸೀತೆಯನ್ನು ತಮ್ಮ ಮಗ ರಾಮಯ್ಯನಿಗೆ ತಂದುಕೊಳ್ಳಬೇಕೆಂಬುದು ಅವರ ಆಸೆಯಾಗಿತ್ತು. ಅವರೂ ಇನ್ನೇನು ಹೆಣ್ಣು ಕೇಳುವುದರಲ್ಲಿದ್ದರು. ಹಿರಿಯವನಾದ ಹೂವಯ್ಯ ಮನೆಯಲ್ಲಿದ್ದಾಗಲೆ ಕಿರಿಯವನಾದ ರಾಮಯ್ಯನಿಗೆ ಮದುವೆಮಾಡಿದರೆ ಜನರ ನಿಂದೆಗೆ ಗುರಿಯಾಗ ಬೇಕಾಗುತ್ತದೆ ಎಂದು ಭಾವಿಸಿ, ಹೂವಯ್ಯನಿಗೆ ಆಸ್ತಿಯಲ್ಲಿ ಪಾಲುಕೊಟ್ಟು ಬೇರೆ ಹಾಕಿದೊಡನೆಯೆ ಮಗನ ಮದುವೆಯನ್ನು ನೆರವೇರಿಸಬೇಕೆಂದು ಅವರ ಮನಸ್ಸಾಗಿದ್ದಿತು. ಸಿಂಗಪ್ಪಗೌಡರ ದೆಸೆಯಿಂದ ತಮ್ಮ ಆಶೆಗೆ ಭಂಗಬಂದಿತಲ್ಲಾ ಎಂದು ಅವರ ಮೇಲೆ ಮತ್ತಷ್ಟು ಮುನಿದುಕೊಂಡರು. ತಮ್ಮ ಕೈಯಲ್ಲಾಗುವ ತಳತಂತ್ರಗಳನ್ನೆಲ್ಲ ಹೂಡಿ ಈ ಸಂಬಂಧವನ್ನು ಮುರಿಯಬೇಕೆಂದು ಮನಸ್ಸು ಮಾಡಿದ್ದರು. ಆದರೆ ಅದ ಹೇಗೆ ಸಾಧ್ಯ?….. ಶ್ಯಾಮಗೌಡರೂ ತನ್ನನ್ನು ಒಂದು ಮಾತು ಕೇಳದೆ, ಹೆಣ್ಣು ಕೊಡಲು ಒಪ್ಪಿದರಲ್ಲಾ ಎಂದು, ಅವರ ಮೇಲಯೂ ಸಿಟ್ಟಾದರು. ಸಿಂಗಪ್ಪಗೌಡರೂ ಕಳ್ಳನಾಟಾ ಕಡಿಸಿ ಮನೆಗೆ ಸಾಗಿಸಿದುದು ನೆನಪಿಗೆ ಬಂದು ‘ಇರಲಿ’, ನಾನೂ ಒಂದು ಮದುವೆ ಮಾಡಿಸ್ತೀನಿ ಅವನಿಗೆ’ ಎಂದುಕೊಂಡರು.