ಕಾನೂರು ಚಂದ್ರಯ್ಯಗೌಡರ ಮಂಗಳೂರು ಹೆಂಚಿನ ದೊಡ್ಡಮನೆ ಕಾಡು ಕಿಕ್ಕಿರಿದ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ. ಮಹಾ ವಟವೃಕ್ಷದ ಬುಡದಲ್ಲಿ ಎದ್ದಿರುವ ಹುತ್ತದ ನೆನಪು ತರುವಂತೆ ಏಕಾಂತವಾಗಿತ್ತು. ಮನೆಯ ಪೂರ್ವೋತ್ತರ ದಿಕ್ಕುಗಳಲ್ಲಂತೂ ಕಾಡುಬೆಟ್ಟಗಳ ಹೆಗ್ಗೋಡೆ ಭಯಂಕರ ಸಮೀಪವಾಗಿ ಮೇಲೆದ್ದಿತ್ತು. ಪಶ್ಚಿಮ ದಕ್ಷಿಣ ದಿಕ್ಕುಗಳಲ್ಲಿ ಅವರ ಗದ್ದೆ ತೋಟಗಳೂ, ಒಕ್ಕಲು ಮತ್ತು ಆಳುಗಳ ಹುಲ್ಲುಮನೆ ಮತ್ತು ಬಿಡಾರಗಳು. ಕಣ. ಕೊಟ್ಟಿಗೆ ಹಟ್ಟಿಗಳೂ ಇದ್ದವು.

ಮನೆ ಹಳೆಯ ಕಾಲದ್ದು. ರಚನೆಯಲ್ಲಿ ಎಲ್ಲೆಲ್ಲಿ ನೋಡಿದರೂ ಭೀಮತೆ ಪ್ರಧಾನವಾಗಿತ್ತು. ಗೋಡೆ ಕಂಭಗಳಿಂದ ಹಿಡಿದು ತೊಲೆ ಪಕಾಸಿ ರೀಪುಗಳವರೆಗೂ ಸ್ಥೂಲತೆ ತೋರುತ್ತಿತ್ತು. ಮನೆಗೆ ಹೊದಿಸಿದ್ದ ಮಂಗಳೂರು ಹೆಂಚುಗಳು ಮಳೆ ಬಿಸಿಲುಗಳಲ್ಲಿ ಹಾವಸೆ ಹಬ್ಬಿ, ಒಣಗಿ, ತಮಗೆ ಸಹಜವಾಗಿದ್ದ ಮಣ್ಣಿನ ಕೆಂಬಣ್ಣವನ್ನು ತೊರೆದು ಕಪ್ಪಾಗಿದ್ದವು. ಅಲ್ಲಲ್ಲಿ, ಮುಂಗಾರುಗಳಲ್ಲಿ ಬಿದ್ದ ದೊಡ್ಡ ದೊಡ್ಡ ಆಲಿಕಲ್ಲುಗಳಿಂದ ಬಿರುಕು ಬಿಟ್ಟು ಸೋರುತ್ತಿದ್ದ ಹೆಂಚುಗಳನ್ನು ತೆಗೆದು ಹೊಸ ಹೆಂಚುಗಳನ್ನು ಹಾಕಿದ್ದುದರಿಂದ ಸರ್ವಸಾಮಾನ್ಯವಾದ ಪ್ರಾಚೀನತೆಯ ನಡುವೆ ಅಪೂರ್ವವೂ ವಿರಳವೂ ಆಗಿರುವ ನವೀನತೆ ತಲೆಹಾಕಿದಂತಿತ್ತು. ಮನೆಗೆ ಉಪಯೋಗಿಸಿದ್ದ ಮರಮುಟ್ಟುಗಳೆಲ್ಲ ಅನೇಕ ವರ್ಷಗಳಿಂದ ಹೊಗೆ ಹಿಡಿದು ತಾರೆಣ್ಣೆ ಬಳಿದಂತೆ ಕರ್ರಗಾಗಿದ್ದವು. ಗೋಡೆಗಳಲ್ಲಿ ಒಂದೆರಡು ಎಡೆ ಹುತ್ತಗಳು ದೊಡ್ಡದಾಗಿ ಬೆಳೆದಿದ್ದವು. ಆ ಹುತ್ತಗಳಿಗೆ ಪೂಜಾ ಸಮಯದಲ್ಲಿ ಬಳಿದಿದ್ದ ಕೆಂಪು ಬಿಳಿ ನಾಮಗಳು ಚಿತ್ರ ವಿಚಿತ್ರವಾಗಿದ್ದವು. ಪ್ರಾಕಾರದ ನಡುವೆ ಇದ್ದ ಅಂಗಳದಲ್ಲಿ ಕಗ್ಗಲ್ಲಿನಿಂದ ವಿರಚಿಸಿದ್ದ ಒಂದು ದೊಡ್ಡ ತುಲಸೀ ಪೀಠವು ಶಿರದಲ್ಲಿ ಪುಷ್ಪವಾಗಿ ಬೆಳೆದಿದ್ದ ಒಂದು ತುಲಸಿಯ ಗಿಡವನ್ನು ಹೊತ್ತು” ಅಂಗಳದ ದೇವರಾಗಿ” ಕುಳಿತಿತ್ತು. ಅಂಗಳದ ಮೂಲೆಯಲ್ಲಿ ಅಡಕೆ ಒಲೆ; ಪಕ್ಕದಲ್ಲಿ ಮಣ್ಣಾದ ನೇಗಿಲು ಜಗಲಿಯ ಮೇಲೆ ಒಂದು ಹೆಗ್ಗಡಿಯಾರದ ಸುತ್ತಲೂ ಕೆಲವು ತಿರುಪತಿಯ ಬಣ್ಣದ ಚಿತ್ರಗಳಿದ್ದುವು. ಜೊತೆಗೆ ರವಿವರ್ಮನ ಬಣ್ಣದ ದೇವತೆಗಳೂ ಕುಳಿತಿದ್ದರು. ಒಬ್ಬಿಬ್ಬರು ದೇಶ ಭಕ್ತರ ಪಟಗಳೂ ಭಾರತಾಂಬೆಯ ಚಿತ್ರ ಪಟವೂ ಅಲ್ಲಿದ್ದುದು. ಸರ್ವವ್ಯಾಪಿಯಾಗುತ್ತಿದ್ದ ರಾಷ್ಟ್ರೀಯ ಮಹಾಸಭೆಯ ಪ್ರಭಾವವು ತನ್ನ ಕ್ಷೇಮಕರವಾದ ಆಶೀರ್ವಾದ ಹಸ್ತವನ್ನು ಆ ಮಲೆನಾಡಿನ ಮೂಲೆಗೂ ಚಾಚಿತ್ತು ಎಂಬುದಕ್ಕೆ ಸ್ಪಷ್ಟವಾದ ಸಾಕ್ಷಿಯಾಗಿ. ಆ ಮನೆಯಲ್ಲಿ ಪ್ರಾಚೀನ ನವೀನಗಳ ಸ್ನೇಹವೀ ಸಮರವೋ ನಡಯತೊಡಗಿದ್ದಂತೆ ತೋರುತ್ತಿತ್ತು. ಇದು ಆ ಮನೆಯ ಸನ್ನಿವೇಶ ಮತ್ತು ರೂಪಲಕ್ಷಣಗಳ ಸ್ಥಾವರ ಸ್ಥತಿಯ ಸ್ಥೂಲರೇಖಾ ಚಿತ್ರ.

ಅದರ ಜಂಗಮಸ್ಥಿತಿಯೂ ಸಾಧಾರಣವಾಗಿ ಕುತೂಹಲಕಾರಿಯಾಗಿಯೇ ಇರುತ್ತಿತ್ತು. ಏಳೆಂಟು ನಾಯಿಗಳು. ಕೆಲವು ಚೀನಿ, ಕೆಲವು ಕಂತ್ರಿ. ಕೆಲವು ಬಿಳಿ, ಕೆಲವು ಕಪ್ಪು, ಕೆಲವು ಬಣ್ಣ ಬಣ್ಣ . ಕೆಲವು ಮಲಗಿದ್ದರೆ, ಕೆಲವು ಒಳಗೆ ಹೊರಗೆ ಸುತ್ತುವುದು. ಆಗಾಗ ಗೌಡರ ಹತ್ತಿರಕ್ಕೆ ಕಾರ್ಯಾರ್ಥವಾಗಿ, ಬಿಳಿ ಬಟ್ಟೆಯವರೂ ಆಳುಕಾಳುಗಳೂ  ಬಂದು ಹೋಗುತ್ತಿರುವುದು. ಹಿತ್ತಲು ಕಡೆಯ ತಮ್ಮ ಪ್ರಪಂಚವನ್ನು ಅತಿಕ್ರಮಿಸಿ ಬಂದ ಕೋಳಿಗಳು- ಹುಂಜ, ಹೇಂಟೆ, ಮರಿ ಇತ್ಯಾದಿ…… ಅಲ್ಲಲ್ಲಿ ಸುತ್ತಿ ಮೇಯುತ್ತಿದ್ದು, ಅನಿವಾರ್ಯವಾಗಿ ಅಸಹ್ಯಮಾಡಿ, ಯಾರಾದರೂ ಮನುಷ್ಯರಾಗಲಿ ನಾಯಿಗಳಾಗಲಿ ಅಟ್ಟಿದಾಗ ಮಾತ್ರವೇ ಕುಕ್ಕುಟನಾದದೊಡನೆ ಹೊರಗೆ ಧಾವಿಸುವುದು. ಮನೆಗೆ ಹತ್ತಿಕೊಂಡೇ ಇದ್ದ ಕರೆಯುವ ಕೊಟ್ಟಿಗೆಯಿಂದ ವಿಶೃಂಖಲವಾದ ದನಕರುಗಳು ಒಮ್ಮೊಮ್ಮೆ ಸ್ಪಷ್ಟವಾದ ತಮ್ಮ ಖುರಪುಟ ಧ್ವನಿಗಳಿಂದ ಅಲ್ಲಿದ್ದವರಿಗೆ ತಮ್ಮನ್ನು ಅಟ್ಟುವಂತೆ ಎಚ್ಚರಿಕೆ ಹೇಳುತ್ತ ಬರುವುದು; ಬತ್ತ ಮಿದಿದು ಸದ್ದು ಮಾಡುವುದು. ಇತ್ಯಾದಿ, ಇತ್ಯಾದಿ, ಇತ್ಯಾದಿ.

ಇಷ್ಟೆಲ್ಲವೂ ಆ ಮನೆಯ ಮುಂಚೆಕಡೆ” ಯ ಚಿತ್ರ. “ಹಿತ್ತಲು ಕಡೆ” ಯ ಚಿತ್ರವೇ ಬೇರೆ. ಅಲ್ಲಿ, ಸಂದರ್ಭ ಸಿಕ್ಕಿದಾಗಲೆಲ್ಲ ಕ್ರಮಾಕ್ರಮಗಳನ್ನು ಒಂದಿನಿತೂ ಗಣನೆಗೆ ತಾರದೆ ತಮ್ಮ ಉದರ ಪೋಷಣೆ ಮಾಡಿಕೊಳ್ಳುತ್ತ ಡೊಳ್ಳೇರಿ ಕಾಲು ಚಾಚಿಕೊಂಡು ಬಿದ್ದಿರುವ ಕುನ್ನಿ ಮರಿಗಳು! ತನ್ನ ಹೂ ಮರಿಗಳೊಡನೆ ನೆಲವನ್ನು ಕೆದರಿ ಗಲೀಜು ಮಾಡುತ್ತಿರುವ ಹೇಂಟೆ. ಮೂಲೆಯಲ್ಲಿ ಸಿಕ್ಕದ ಮೇಲೆ ದೊಡ್ಡ ಬುಟ್ಟಿಯಲ್ಲಿ ನೆಲ್ಲುಹುಲ್ಲಿನ ಮೇಲಿರುವ ಮೊಟ್ಟೆಗಳನ್ನು ರೆಕ್ಕೆಗಳಲ್ಲಿ ಅಪ್ಪಿಕೊಂಡು ಕಾವು ಕೂತಿರುವ ಕುಕ್ಕುಟ ಗರ್ಭಿಣಿ! ಒಂದೆಡೆ ದೊಡ್ಡದಾದ ಮುರುವಿನ ಒಲೆ. ಅಲ್ಲಿಯೇ ಮೇಲುಗಡೆ ನೇತಾಡುತ್ತಿರುವ ತಟ್ಟೆಯಲ್ಲಿ ಸಂಡಿಗೆ ಮಾಡಲು ಒಣಗಲಿಟ್ಟಿರುವ ಮಾಂಸದ ದೊಡ್ಡ ದೊಡ್ಡ ತುಂಡುಗಳು. ಅಟ್ಟದ ಮೇಲೆ ಕರಿಹಿಡಿದ ಪೊರಕೆಗಳ ದೊಡ್ಡ ಕಟ್ಟು. ಒಂದುಕಡೆ ಗೋಡೆಗೆ ಆನಿಸಿ ನಿಲ್ಲಿಸಿರುವ ಒಂದೆರಡು ಒನಕೆಗಳು. ಬಳಿಯಲ್ಲಿ ಕಲ್ಲಿನ ಒರಳು ಮತ್ತು ಕಡೆಗುಂಡು. ಒಂದು ಬೀಸುವ ಕಲ್ಲು; ಮೆಟ್ಟುಗತ್ತಿ; ನೀರು ತುಂಬಿದ ತಾಮ್ರದ ಹಂಡೆ, ಸಂದುಗೊಂದುಗಳಲ್ಲಿ ಕಿಕ್ಕಿರಿದಿರುವ ಜೇಡರ ಬಲೆಗಳ ತುಮುಲ ಜಟಿಲ ವಿನ್ಯಾಸ!  ಮುಡಿದು ಬಿಸಾಡಿರುವ ಒಣಗಿದ ಹೂಮಾಲೆ. ತಲೆ ಬಾಚಿ ಎಸೆದಿರುವ ಕೂದಲಿನ ಕರಿಯ ಮುದ್ದೆ. ತಾಂಬೂಲದ ಕೆಂಪಾದ ಉಗುಳು. ಇವುಗಳಿಗೆಲ್ಲ ಮಕುಟಪ್ರಾಯವಾಗಿ ಮೂತ್ರದ ವಾಸನೆ, ಇತ್ಯಾದಿ,ಇತ್ಯಾದಿ,ಇತ್ಯಾದಿ!

ಆ ಮನೆಯಲ್ಲಿ ಮೂವತ್ತು ನಾಲ್ವತ್ತು ಮಂದಿ ನಿರಾತಂಕವಾಗಿ ವಾಸಮಾಡಬಹುದಾಗಿತ್ತು. ಈ ಕಥೆಯ ಕಾಲಕ್ಕೆ ಪೂರ್ವದಲ್ಲಿ ಗಂಡಸರು. ಹೆಂಗಸರು. ಮಕ್ಕಳು ಎಲ್ಲಾ ಇಪ್ಪತ್ತೈದು ಮೂವತ್ತು ಮಂದಿ ಮನೆಯವರೂ ಹತ್ತು ಹದಿನೈದು ಜನ ಸೇವಕರೂ ಒಟ್ಟು ನಾಲ್ವತ್ತೈದು ಜನಗಳ ಮ          ಟ್ಟಿಗೆ ಮನೆಯನ್ನೆಲ್ಲ ತುಂಬಿರುತ್ತಿದ್ದರಂತೆ; ಒಟ್ಟು ಕುಟುಂಬವಾಗಿದ್ದುದರಿಂದ ಹಾಗಿದ್ದುದರಲ್ಲೇನೂ ಆಶ್ಚರ್ಯವಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಮನೆಗೆ ಮಾರಿಯಮ್ಮನು ಸಿಡುಬು ರೋಗ ಕಾಲಿಟ್ಟು ಅನೇಕರನ್ನು ಆಹುತಿ ತೆಗೆದುಕೊಂಡಿದ್ದರಿಂದ ಈಗ ಆ ಕುಟುಂಬದಲ್ಲಿ ಏಳು ಜನರು ಮಾತ್ರ ಇದ್ದರು. ಅದರಲ್ಲಿಯೂ ಹೂವಯ್ಯ ರಾಮಯ್ಯರು ಓದಲು ಹೋಗಿದ್ದುದರಿಂದ ತತ್ಕಾಲದಲ್ಲಿ, ಆಳುಗಳನ್ನು ಬಿಟ್ಟರೆ, ಮನೆಯವರಾಗಿದ್ದವರು ಐದೇ ಮಂದಿ. ಯಜಮಾನರಾಗಿದ್ದ ಚಂದ್ರಯ್ಯಗೌಡರು; ಅವರ ಮೂರನೆಯ ಹೆಂಡತಿ ಸುಬ್ಬಮ್ಮ; ಅವರ ಎರಡನೆಯ ಹೆಂಡತಿಯ ಮಕ್ಕಳಾದ ಪುಟ್ಟಮ್ಮ. ವಾಸು; ಚಂದ್ರಯ್ಯಗೌಡರ ಗತಿಸಿದ ಅಣ್ಣನ ಸಹಧರ್ಮಿಣಿಯೂ ಹೂವಯ್ಯನ ಮಾತೃವೂ ಆದ ನಾಗಮ್ಮನವರು.

ಚಂದ್ರಯ್ಯಗೌಡರಿಗೆ ಮೊದಲು ಅವರ ಅಣ್ಣ ಸುಬ್ಬಯ್ಯಗೌಡರು ಸಾಯುವಾಗ ಅವರಿಗೂ ಚಂದ್ರಯ್ಯ ಗೌಡರಿಗೂ ಮನಸ್ಸು ಸರಿಯಿರಲಿಲ್ಲ. ನಾಗಮ್ಮನವರು ತಮ್ಮ ಗಂಡನ ಸಾವಿಗ ಚಂದ್ರಯ್ಯಗೌಡರೇ ಕಾರಣವೆಂದು ಎಲ್ಲರೊಂದಿಗೂ ಸಾರುತ್ತಿದ್ದರು. ತನ್ನ ಗಂಡನ ಮೇಲೆ “ದೆಯ್ಯಾಮಾಡಿ” ಕೊಂದರೆಂದು ಆಕೆ ನಂಬಿಟ್ಟಿದ್ದರು. ವಾಸ್ತವಾಂಶ, ಅವರು ರೇಷ್ಮೆ ಕಾಯಿಲೆಯಿಂದ ಮೃತರಾಗಿದ್ದರು. ಚಂದ್ರಯ್ಯಗೌಡರೂ ನಾಗಮ್ಮನವರ ಮಾತಿನಲ್ಲಿ ಇತರರಿಗೆ ನಂಬುಗೆಯಾಗುವಂತೆ ವರ್ತಿಸುತ್ತಿದ್ದರು. ಆಕೆಯ ವಿಷಯದಲ್ಲಿ ದ್ವೇಷದಿಂದಲ್ಲದಿದ್ದರೂ ಅನಾದರದಿಂದ ಇರುತ್ತಿದ್ದರು. ನೊಂದೆದೆಯ ನಾಗಮ್ಮವನರಿಗೆ ಅವರ ಒಂದೊಂದು ಅನಾವರಣೆಯೂ ಭಯಂಕರರ ವೈರದಂತೆ ತೋರುತ್ತಿತ್ತು. ಹೂವಯ್ಯನಿಗೆ ಇದೆಲ್ಲ ಗೊತ್ತಿದ್ದರೂ ಆತನು ಭಾವಜೀವಿಯಾಗಿದ್ದುದರಿಂದಲೂ. ಆತನ ಗಮನವೆಲ್ಲ ವಿದ್ಯಾರ್ಜನೆಯ ಕಡೆಗಿದ್ದುದರಿಂದಲೂ, ರಾಮಯ್ಯನ ವಿಶ್ವಾಸದ ಪ್ರಭಾವದಿಂದಲೂ, ಯಾವ ಇತ್ಯರ್ಥದ ಕಾರ್ಯಕ್ಕೂ ಕೈಹಾಕದೆ ಸುಮ್ಮನಿದ್ದನು.

ರಾಮಯ್ಯನ ತಾಯಿ- ಚಂದ್ರಯ್ಯಗೌಡರ ಪ್ರಥಮ ಪತ್ನಿ- ತೀರಿಕೊಂಡಾಗ ಅವರು ದುಃಖಾತಿರೇಕದಿಮದ ಆತ್ಮಹತ್ಯೆ ಮಾಡಿಕೊಳ್ಳಲೋಸಗ ಬಂದೂಕನ್ನು ಕೈಗೆ ತೆಗೆದುಕೊಂಡಿದ್ದರೂ ಒಂದು ವರ್ಷದ ಒಳಗಾಗಿಯೆ ಅವರಿಗೆ ಎರಡನೆ ವಿವಾಹ ನಡೆದುಹೋಗಿತ್ತು. ಎರಡನೆ ಹೆಂಡತಿ ಪುಟ್ಟಮ್ಮ ವಾಸು ಇಬ್ಬರನ್ನು ಹೆತ್ತು, ಮೂರನೆಯ ಹೆರಿಗೆಯಲ್ಲಿ ಶಿಶು ಸಮೇತ ದಿವಂಗತರಾದರು. ಅವರು ತೀರಿಕೊಂಡು ಇನ್ನೂ ಒಂದು ವರ್ಷ ಕಳೆಯುವುದರೊಳಗೆ ಚಂದ್ರಯ್ಯಗೌಡರಿಗೆ ಮೂರನೆಯ ಮದುವೆ ಅವಶ್ಯಕತೆಯೂ ತೋರಿ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಅವರು ವಿಧುರರಾದ ಕೆಲವು ತಿಂಗಳೊಳಗೆ ಅವರ ಮೇಲೆ ಅಪವಾದ ಹುಟ್ಟಿತ್ತು. ಅವರ ಸೇರೆಗಾರರಾಗಿದ್ದ ರಂಗಪ್ಪಸೆಟ್ಟರ ಕೈಕೆಳಗೆ ಕೆಲಸ ಮಾಡುತ್ತಿದ್ದ ಒಬ್ಬ ದಕ್ಷಿನ ಕನ್ನಡ ಜಿಲ್ಲೆಯ ಹೆಂಗಸಿನ ಪರವಾಗಿ ಅವರು ಪ್ರದರ್ಶಿಸಿದ ಅನನ್ಯ ಸಾಧಾರಣವಾದ ಅನುರಾಗವ ಅಪವಾದಕ್ಕೆ ಕಾರಣವಾಗಿತ್ತು. ಚಂದ್ರಯ್ಯಗೌಡರು ದೃಢಕಾಯರಾಗಿ ಶ್ರೀಮಂತರಾಗಿದ್ದರೂ ನಡುವಯಸ್ಸು ಮೀರಿದ್ದುದರಿಂದಲೂ ಮೂರು ಮಕ್ಕಳ ತಂದೆಯಾಗಿದ್ದುದರಿಂದಲೂ, ಸುಸಂಸ್ಕೃತರಾದ ಶ್ರೀಮಂತರೆಲ್ಲರೂ ಅವರಿಗೆ ಹೆಣ್ಣು ಕೊಡಲು ಹಿಂಜರಿದರು. ಗೌಡರು ಅಪ್ರತಿಭರಾಗದೆ ನೆಲ್ಲುಹಳ್ಳಿಗೆ ಹೋಗಿ ಹೆಣ್ಣು ಕೇಳಿದರು. ಅಸಂಸ್ಕೃತರೂ ಒರಟು ಜೀವಿಗಳೂ ಬಡವರೂ ಆಗಿದ್ದ ನೆಲ್ಲುಹಳ್ಳಿಯವರು ಹಿಗ್ಗಿ ಮರುಮಾತಾಡದೆ ಹೆಣ್ಣು ಕೊಡಲು ಒಪ್ಪಿದರು. ಆ ವಿಚಾರ ತಿಳಿದ ಕೂಡಲೆ  ಮುತ್ತಳ್ಳಿ ಶಾಮಯ್ಯಗೌಡರೇ ಮೊದಲಾದ ಹಿತಚಿಂತಕರೂ ಬಂಧುಗಳೂ ಚಂದ್ರಯ್ಯಗೌಡರನ್ನು ಆ ಸಾಹಸದಿಂದ ಪರಾಜ್ಞ್ಮುಖಗೊಳಿಸರು ಪ್ರಯತ್ನಿಸಿದರು. ಆ ಹೆಣ್ಣನ್ನು ತರುವುದು ನಿಮಗೆ ಯೋಗ್ಯವಲ್ಲ ಎಂದರು. ಪುಟ್ಟಮ್ಮ, ವಾಸು ಇಬ್ಬರೂ ತಮ್ಮ ದೊಡ್ಡಮ್ಮನಿಂದ ಎಲ್ಲ ವಿಷಯಗಳನ್ನೂ ಅರಿತು ಕಣ್ಣೀರು ಕರೆದರು. ಗೌಡರ ಮೇಲೆ ದ್ವೇಷವಿದ್ದ ನಾಗಮ್ಮನವರಿಗೂ ಕನಿಕರವುಂಟಾಯಿತು. ಏನೆಂದರೂ ಗೌಡರ  ನವದಾಂಪತ್ಯ ಪ್ರೇಮವು ಮಾತ್ರ ಒಂದಿನಿತೂ ಕುಗ್ಗಲಿಲ್ಲ. ವಿವಾಹವೂ ನಿಶ್ಚಯವಾಯಿತು. ಮೈಸೂತಿನಲ್ಲಿದ್ದ ಹೂವಯ್ಯ ರಾಮಯ್ಯರಿಗೆ ವಿಷಯವೇನೂ ಗೊತ್ತಾಗಲಿಲ್ಲ. ಗೌಡರ ಇಷ್ಟದ ಪ್ರಕಾರ ವಿವಾಹ ಮಹೋತ್ಸವಕ್ಕೆ ಅವರಿಬ್ಬರನ್ನು ಆಹ್ವಾನಿಸಲೂ ಇಲ್ಲ. ಆದಕಾರಣ ಗೌಡರ ತೃತೀಯ ವಿವಾಹದ ವಿಚಾರದಲ್ಲಿ ಅವರಲ್ಲಿ ಸಂಪೂರ್ಣ ಅಂಧಕಾರವಿತ್ತು.

ಅಂತೂ ಸುಬ್ಬಮ್ಮನು ಚಂದ್ರಯ್ಯಗೌಡರ ಧರ್ಮಪತ್ನಿಯಾಗಿ ಕಾನೂರಿಗೆ ಬಂದಳು.

ಸುಬ್ಬಮ್ಮ ಹಿಂದೆ ಒಂದೆರಡು ಸಾರಿ ವಿವಾಹ ಮಹೋತ್ಸವಗಳಿಗೆ ಹೋಗಿದ್ದಾಗ ನೆರೆದಿದ್ದ ಗೃಹಸ್ಥರ ಸಭೆಯಲ್ಲಿ ಹೂವಯ್ಯನ ತೇಜೋಮೂರ್ತಿಯನ್ನು ನೋಡಿದ್ದಳು. ನೆರೆದಿದ್ದ ಸ್ತ್ರೀಯರು ಅವನ ವಿಚಾರವಾಗಿ ಆಡಿಕೊಳ್ಳುತ್ತಿದ್ದ ಪ್ರಶಂಸಾತ್ಮಕವಾದ ಮಾತುಗಳನ್ನೂ ಕೇಳಿದ್ದಳು. ಹುಡುಗಿಯರು ಚೆಲುವರಾದ ಹುಡುಗರನ್ನು ಕಂಡಾಗ ಏನೇನು ಭಾವಿಸುತ್ತಾರೋ, ಊಹಿಸುತ್ತಾರೋ ಅಥವಾ ಆಶಿಸುತ್ತಾರೊ ಅದನ್ನೆಲ್ಲವನ್ನೂ ಬರಿಯ ಹಗಲುಗನಸುಗಳೆಂಬುದೂ ಆಕೆಗೆ ಚೆನ್ನಾಗಿ ತಿಳಿದಿತ್ತು. ನೈಶಾಕಾಶದ ಬಹುದೂರ ಪ್ರಾಂತದಲ್ಲಿ ಶಾಶ್ವರ ಜ್ಯೋತಿಯಿಂದ ತಳತಳಿಸುವ ತಾರೆಗೆ ಅಳುಪುವ ಮಣ್ಣಿನ ಹಣತೆಯಾಗಿದ್ದಳವಳು. ಉರಿಯುವ ಸೊಡರಿಲ್ಲದ ಮಣ್ಣಿನ ಹಣತೆ ಆ ದೂರದ ತಾರಗೆಯೇ ತನ್ನೆದೆಯಲ್ಲುರಿದ ಸೊಡರಾಗಬೇಕೆಂದು ಬಯಸಿದರೆ ಅದು ಅಪ್ರಾಪ್ಯವೇ ಹೊರತು ಅಪರಾಧವಲ್ಲ. ಕಾನೂರಿನ ಚಂದ್ರಯ್ಯಗೌಡರು ತಮ್ಮ ಮನೆಗೆ ಹೆಣ್ಣು ಕೇಳಲು ಬಂದಿದ್ದಾರೆ ಎಂಬ ಸುದ್ದಿ ಆಕೆಯ ಕಿವಿಗೆ ಬಿದ್ದ ಕೂಡಲೆ ಅಘಟನೆ ಘಟನವಾದಂತೆ ಆಕೆಗೆ ದಿಗ್ಭ್ರಮೆಯಾದರೂ, ನಿಲುಕದ ನಕ್ಷತ್ರವ ಹಸ್ತಗತವಾಗುತ್ತದೆಂದು ಆನಂದ ಸಂಭ್ರಮ ಸ್ರೋತವಾಗಿದ್ದಳು. ಆದರ ನಿಜವಾದ ಸಂಗತಿ ತಿಳಿದ ಮೇಲೆ ಆಕೆ ಹತಾಶೆಯಾದರೂ ಹೆಚ್ಚೇನೂ ವ್ಯಸನಪಡಲಿಲ್ಲ. ಸಾಧಾರಣ ಜೀವನಕ್ರಮದಂತೆ ಆಕೆ ಯಾವನಾದರೊಬ್ಬ ಬಡ ರೈತನ ಕೈ ಹಿಡಿದು ದುಡಿಮೆಯಿಂದ ಜೀವನಯಾತನೆ ಮಾಡಬೇಕಾಗಿತ್ತು. ಕಾನೂರಿನಂತಹ ಒಂದು ದೊಡ್ಡ ಮನೆಗೆ ಯಜಮಾನರಾಗಿ ಗಣ್ಯರಾಗಿದ್ದ ಚಂದ್ರಯ್ಯಗೌಡರ ಕೈಹಿಡಿಯುವುದೂ ಹೆಗ್ಗಡಿತಿಯಾಗುವುದೂ ಒಂದು ಮಹಾ ಸುಕೃತವೆಂದೇ ಭಾವಿಸಿ ಸಂತುಷ್ಟಳಾದಳು. ಕುಶಲಹೃದಯರಾದ ತರಳೆಯರಿಗಾದರೆ ತಾವು ಒಲಿದವನನ್ನುಳಿದು ಬೇರೆಯವನನ್ನು ಮದುವೆಯಾಗುವುದೂ ವಿಧುರ ವಿವಾಹವೂ ಎದೆಬಿರಿಯುವ ಮಹಾಸಂಕಟಗಳಾಗುತ್ತವೆ. ಆದರೆ ಸುಬ್ಬಮ್ಮನ ಬಾಳಿನಲ್ಲಿ ಅಂತಹ ಕುಶಲತೆಗೆ ಅವಕಾಶವಾಗಲಿ ತಾವಾಗಲಿ ಸ್ವಲ್ಪವೂ ಇರಲಿಲ್ಲ. ಆದ್ದರಿಂದ ಆಕೆ ಸಂಭ್ರಮದಿಂದಲೆ ಚಂದ್ರಯ್ಯಗೌಡರ ತೃತೀಯ ವಧುವಾಗಿ ಕಾನೂರಿಗೆ ಬಂದಿದ್ದಳು.

ದಾರಿದ್ರದಲ್ಲಿ ಹುಟ್ಟಿ ಬೆಳೆದು. ಅಸಂಸ್ಕೃತರಿಂದ ಪೋಷಿತವಾಗಿ, ಅವರ ನಡೆನುಡಿ ಆಚಾರ ವ್ಯವಹಾರ ಶೀಲಗಳನ್ನು ಕಲಿತ ಸುಬ್ಬಮ್ಮನಲ್ಲಿ ಸುಸಂಸ್ಕೃತ ಸ್ತ್ರೀ ಸಹಜವಾದ ಔದಾರ್ಯ ಗಾಂಭೀರ್ಯ ನಯವಿನಯ ಸಂಯಮ ಸಂಚಲನಗಳು ಒಂದಿನಿತೂ ಇರಲಿಲ್ಲ. ಆದಕಾರಣ ಅದುವರೆಗೂ ಅವಕಾಶ ಸಿಕ್ಕದೆ ಸುಪ್ರವಾಗಿದ್ದ ಅಹಂಕಾರ, ಛಲ, ದರ್ಪ, ಸ್ವಾರ್ಥಪರತೆ, ದುರಭಿಮಾನ, ಮೊದಲಾದ ಕಾಡುಭಾವಗಳು ಆಕೆ ಯಜಮಾನರ ಪತ್ನಿಯಾಗಿ ಕಾನೂರಿಗೆ ಹೆಗ್ಗಡತಿಯಾದ ಕೂಡಲೆ ಭಯಾನಕವಾಗಿ ಹೆಡೆಯೆತ್ತಿ ನಿಂತುವು. ಆಕೆ ಎಲ್ಲದರಲ್ಲಿಯೂ ಎಲ್ಲರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಹುಕುಂ ಚಲಾಯಿಸತೊಡಗಿದಳು. ಪ್ರತಿಯೊಂದರಲ್ಲಿಯೂ ಸಣ್ಣ ಬುದ್ದಿಯೇ ಪ್ರಕಾಶಿತವಾಯಿತು. ಅದು ಎಷ್ಟು ಅಧೋಗತಿಗೆ ಇಳಿಯಿತೆಂದರೆ,ಹುಟ್ಟಿದಂದಿನಿಂದಲೂ ಸಾಬೂನಿನ ಹೆಸರನ್ನೇ ಕೇಳದೆ ಇದ್ದ ಆಕೆ, ಒಂದುಸಾರಿ ನಾಗಮ್ಮನವರು ವಾಸುವಿನ ಮೈಗೆ ತನ್ನ ಸಾಬೂನನ್ನು ಹಚ್ಚಿದರೆಂದು ಕೇಳಿ, ಬಾಯಿಗೆ ಬಂದಂತೆ ಬಯ್ದುಬಿಟ್ಟಳಂತೆ! ನಾಗಮ್ಮವರಿಗೆ ಆ ಹೊಸ ಕಾಡು ರಾಣಿಯ ಆಳ್ವಿಕೆ ಸರಿಬೀಳಲಿಲ್ಲ. ಪುಟ್ಟಮ್ಮನಿಗಂತೂ ಸುಬ್ಬಮ್ಮನ ನೆರಳು ಕಂಡರೂ ಆಗದಂತಾಯಿತು. ತುಪ್ಪ ಬೆಣ್ಣೆ ಮೊದಲಾದ ಪದಾರ್ಥಗಳಿಗಂತೂ ಆ  ಹೆಗ್ಗಡತಿ ಬೀಗಮುದ್ರೆ ಮಾಡಿಬಿಟ್ಟಳು. ಹೀಗಾಗಿ ಮನೆಯಲ್ಲಿ ಮೂರು ಹೊತ್ತೂ ಕದನವಾಗಿ ನೆಮ್ಮದಿ ತಪ್ಪಿಹೋಗಿತ್ತು.

ಚಂದ್ರಯ್ಯಗೌಡರು ಸ್ವಭಾವತಃ ದರ್ಪಶೀಲರಾಗಿದ್ದರೂ ತಮ್ಮ ನವವಧುವಿನ ಮಾಧುರ್ಯಸಾರ ಶೋಷಣಾಸಕ್ತರಾಗಿ ಅಂತರಂಗದಲ್ಲಿ ಆಕೆಯ ಸೂತ್ರಗೊಂಬೆಯಂತಾದರು. ಚಿಕ್ಕವಯಸ್ಸಿನಲ್ಲಾಗಿದ್ದರೆ ಸುಬ್ಬಮ್ಮ ಅವರ ಕಣ್ಣಿಗೆ ಸುಂದರಿಯಾಗಿರುವುದಂತೂ ಇರಲಿ, ಕುರೂಪಿಯಾಗಿ ಕಾಣುತ್ತಿದ್ದಳು. ಆದರೆ ಈಗ ಅವರಿಗೆ ಆಕೆ ರತಿಯಾಗಿದ್ದಳು. ಹಳೆಯದಕ್ಕೆ ಹೊಸದಾದುದೆಲ್ಲವೂ ಸೌಂದರ್ಯವೇ! ಅವರು ಸುಬ್ಬಮ್ಮನನ್ನು ತಿದ್ದುವುದಕ್ಕೆ ಬದಲಾಗಿ ಆಕೆಯ ಚಾಡಿಯ ಮಾತುಗಳಿಗೆ ಕಿವಿಗೊಟ್ಟು ನಾಗಮ್ಮನವರ ಮೇಲೆಯೂ ತಮ್ಮ ಸ್ವಂತ ಮಕ್ಕಳಿಬ್ಬರ ಮೇಲೆಯೂ ಕಠೋರರಾದರು. ಇದರಿಂದ ಸುಬ್ಬಮ್ಮನಿಗೆ ಮತ್ತಷ್ಟು ಕೋಡು ಬಂದಂತಾಗಿ ಎಲ್ಲರನ್ನೂ ಹಾಯತೊಡಗಿದಳು

ಚಂದ್ರಯ್ಯಗೌಡರು ತಮ್ಮ ಹದಿನೆಂಟು ವರ್ಷದ ಪುಟ್ಟ ಹೆಂಡತಿಗೆ ಶರಣಾದುದರಲ್ಲಿ ಒಂದು ರಹಸ್ಯವಿತ್ತು. ಹೆಚ್ಚು ವಯಸ್ಸಾಗಿದ್ದುದರಿಂದ ಚಿಕ್ಕ ವಯಸ್ಸಿನ ಹುಡುಗಿಗೆ ತಾನು ವರನಲ್ಲ ಎಂಬುದು ಅವರಿಗೆ ತಿಳಿಯದೆ ಇರಲಿಲ್ಲ. ಸೌಂದರ್ಯ ಯೌವನ ಸರಸ ಇವುಗಳಿಂದ ತರುಣಿಯನ್ನು ವಶಮಾಡಿಕೊಳ್ಳುವ ಸುಯೋಗವು ತಮ್ಮದಾಗಿರಲಿಲ್ಲವಾದುದರಿಂದ ಚಾಡಿಯ ಮಾತು ಕೇಳುವುದು. ಅವಳನ್ನು ಅನಾಗರಿಕವಾಗಿ ವರ್ತಿಸಲು ಬಿಡುವುದು. ವಸನ ಭೂಷಣಗಳನ್ನು ಮೇಲ್ವಾಯ್ದು ತಂದುಕೊಡುವುದು. ಇವೇ ಮೊದಲಾದ ಹೀನೋಪಾಯಗಳಿಂದ ತಮ್ಮ ಪತ್ನಿಯ ಮನಸ್ಸನ್ನು ತಮ್ಮ ಕಡೆಗೆ ಒಲಿಸಿಕೊಳ್ಳಲು ಸಾಹಸ ಮಾಡುತ್ತಿದ್ದರು. ಅದೂ ಅಲ್ಲದೆ ಆಕೆಯ ಹೃದಯವು ಅನ್ಯಾಕ್ರಾಂತವಾದೀತು ಎಂಬ ಭೀತಿಯೂ ಅವರನ್ನು ಒಳಗೊಳಗೇ  ಪೀಡಿಸುತ್ತಿತ್ತು. ಆ ಆಶಂಕೆಗೆ ಆಧಾರವಾಗಿದ್ದವರು ಅವರ ಮನೆಯಲ್ಲಿ ಆಳು ಕೆಲಸಮಾಡಿಸುತ್ತಿದ್ದ ಸೇರೆಗಾರ ರಂಗಪ್ಪಸೆಟ್ಟರು.

ಅಂತೂ ನೆಲ್ಲುಹಳ್ಳಿಯ ಜನರಿಂದ” ಸುಬ್ಬಿ” ಎಂದು ಕರೆಯಿಸಿಕೊಳ್ಳುತ್ತಿದ್ದವಳು ಚಂದ್ರಯ್ಯಗೌಡರ ಕೃಪೆಯಿಂದ ಕಾನೂರು ಸುಬ್ಬಮ್ಮ ಹೆಗ್ಗಡಿತಿಯಾಗಿದ್ದಳು.