ಇತ್ತ ಬೈರ ಗಂಗನೊಡಗೂಡಿ ‘ಹೊಂಡ ತೊಣಕಿ’ ಮೀನು ಹಿಡಿಯುತ್ತಿದ್ದಾಗ ಅತ್ತ ಹಳೆಪೈಕದ ತಿಮ್ಮನ ಹುಲ್ಲುಮನೆಯಲ್ಲಿ ಮಾರ್ಕ ಕಳ್ಳಬಗನಿ ಕಟ್ಟಿದವನನ್ನು ಹಿಡಿಯಲು ವ್ಯೂಹರಚನೆ ಮಾಡುತ್ತಿದ್ದನು. ಆ ದಿನ ಸಾಯಂಕಾಲವೆ ಬಗನಿಯ ಮರದ ಬಳಿ ಕಾದು ಕುಳಿತು ಕಳ್ಳುಕಳ್ಳನನ್ನು ಹಿಡಿಯಬೇಕೆಂದು ನಿರ್ಣಯವಾಯಿತು. ಮಾರ್ಕನಿಗೆ ಅರಣ್ಯಗಳ ಪರಿಚಯ ಸಾಲದಿದ್ದುದರಿಂದಲೂ ಕತ್ತಲಾಗುವ ಹೊತ್ತು ಕಾಡಿನಲ್ಲಿ ಒಬ್ಬನೇ ಇರಲು ಧೈರ್ಯ ವಾಗದುದರಿಂದಲೂ, ಅಲ್ಲದೆ ಕಳ್ಳನೊಂದು ವೇಳೆ ತನಗಿಂತಲೂ ಬಲಿಷ್ಠನಾದರೆ ಕೇಡಾಗಬಹುದೆಂಬ ಆಶಂಕೆಯಿಂದಲೂ ತಿಮ್ಮನೂ ಅವನೊಡನೆ ಹೋಗ ಬೇಕೆಂದು ಗೊತ್ತಾಯಿತು.

ಬೈಗಿನ ಹೊತ್ತು ಇಬ್ಬರೂ ಸೇರಿ ಬೈರನು ಕಳ್ಳಬಗನಿ ಕಟ್ಟಿದ್ದ ತಾಣಕ್ಕೆ ಹೋಗಿ ಹಳುವಿನಲ್ಲಿ ಅಡಗಿ ಕುಳಿತರು. ಪಿಸುಮಾತಾಡುತ್ತ ನಡು ನಡುವೆ ಕಾನನ ನೀರವತೆಗೆ ಕಿವಿಕೊಟ್ಟು ಆಲಿಸುತ್ತಿದ್ದರು. ಆಲಿಸಿದಾಗಲೆಲ್ಲ ನಿಃಶಬ್ದತೆ, ಅಥವಾ ಗೊತ್ತುಕೂರಲು ಹಾರಿಹೋಗುವ ಗಿಳಿಕಾಮಳ್ಳಿಗಳ ಹಿಂಡಿನ ಗುಂಪುದನಿ, ಅಥವಾ ಮರಕುಟಿಗನ ಹಕ್ಕಿ ಒಣಮರವನ್ನು ತನ್ನ ಕಬ್ಬಿಣಗೊಕ್ಕಿನಿಂದ ಕುಟುಕುವ ಸದ್ದು ಅಥವಾ ಜೀರುಂಡೆಗಳ ಜೀರ್ದನಿ ಅಥವಾ ಗಾಳಿಯ ಸದ್ದು, ಕೇಳಿಬರುತ್ತಿತ್ತು.

ಇಬ್ಬರು ಎಲೆಯಡಕೆ ಹಾಕಿದರು. ಮಾರ್ಕ ನಶ್ಯವನ್ನೂ ಸೇದಿದನು. ಕಾನೂರಿನ ವಿಚಾರಗಳನ್ನು ಕುರಿತು ಮಾತಾಡಿದರು; ಆಕಳಿಸಿದರು. ಮಗ್ಗುಲಿಂದ ಮಗ್ಗುಲಿಗೆ ತಿರುಗಿ ಕುಳಿತರು. ಮನುಷ್ಯರಂತಿರಲಿ, ಯಾವ ಪ್ರಾಣಿಕೂಡ ಹತ್ತಿರ ಸುಳಿದಾಡಿದಂತೆ ತೋರಲಿಲ್ಲ. ಬಹಳ ಬೇಸರವಾಯಿತು.

ತಿಮ್ಮ ಬಿಸುಮಾತಿನಲ್ಲಿ “ಹಾಂಗಾದರೆ ನೀವಿಲ್ಲಿ ಕೂತ್ಕೊಂಡಿರಿ. ನಾನೀಗ ಬಂದುಬಿಟ್ಟೆ” ಎಂದು ಎದ್ದನು.

“ಎಲ್ಲಿಗೋ?”

“ಇಲ್ಲೇ, ನನ್ನ ಬೈನೇ ನೋಡ್ಕೊಂಡ್ಬತ್ತೀನಿ. ಹಮಾ ದೂರಿಲ್ಲ. ನಾಕೇಮಾರು. ನೀವೇನು ಹೆದರ್ಬೇಡಿ. ನಾನೀಗ ಒಂದು ಚಣದಲ್ಲಿ ಬಂದು ಬಿಟ್ಟೆ.”

“ಹೆಚ್ಚು ಹೊತ್ತು ಮಾಡಬೇಡ. ಬೇಗ ಬಂದುಬಿಡು!”

“ನಿಮಗ್ಯಾಕೆ? ಈಗ ಬಂದುಬಿಡ್ತೀನಿ, ಎಲೆಗೆ ಸುಣ್ಣ ಹಚ್ಚೋ ಒಳಗಾಗಿ!” ಸಂಧ್ಯಾ ಸಮಯದ ವನಾಂಧಕರದ ಹಳುವಿಲ್ಲಿ ತಿಮ್ಮನ ಆಕಾರ ಕಣ್ಮರೆಯಾಗಿ, ತರಗಲೆಗಳ ಮೇಲೆಯೂ ಮತ್ತು ಪೊದೆಗಳ ನಡುವೆಯೂ ನುಸಿಯುವ ಸದ್ದೂ ಬರಬರುತ್ತ ನಿಂತುಹೋಯಿತು. ಮಾರ್ಕನೊಬ್ಬನೇ ಹೆಮ್ಮರಗಳ ಕಾಡಿನ ಕಡೆಗೂ, ನಡುನಡುವೆ ಇಣಿಕಿದಂತಿದ್ದ ಆಕಾಶದ ಕಡೆಗೂ, ಮರಗಳ ನೆತ್ತಿಯ ಹಸುರಿಗೆ ಹೊನ್ನೆರಚಿದ್ದ ಮುದಿಬಿಸಿಲಿನ ಕಡೆಗೂ, ತನ್ನ ಹೂವಿನ ಕೈಯಲ್ಲಿ ಕರಿಯ ಮೊಗೆಯನ್ನು ಹಿಡಿದು ನಿಂತಿದ್ದ ಬಗನಿ ಮರದ ಕಡೆಗೂ ನೋಡುತ್ತ ಕಾದು ಕುಳಿತನು.

ಕಳ್ಳ ಬರುತ್ತಾನೆ. ಮರಕ್ಕೆ ಕಟ್ಟಿರುವ ಒಬ್ಬಿದಿರೇಣಿಯನ್ನು ಹತ್ತಿ ನೊರೆಗಳ್ಳು ತುಂಬಿರುವ ಮೊಗೆಯನ್ನು ಹಿಡಿದು ಕೆಳಗಿಳಿಯುತ್ತಿರುತ್ತಾನೆ. ಆಗ ಹೋಗಿ ಮರದ ಬುಡದಲ್ಲಿ ನಿಂತು ಅವನನ್ನು, ಮೊಗೆ ಬಗನಿಕತ್ತಿಗಳ ಸಮೇತ ಹಿದಿಯತ್ತೇನೆ. ಹಾಗೆ ಮಾಡದಿದ್ದರೆ ಸರಿಯಾದ ಸಾಕ್ಷಿ ಸಿಕ್ಕಿದಂತಾಗುವುದಿಲ್ಲ. ಆಮೇಲೆ ಸ್ವಲ್ಪ ಕಳ್ಳನ್ನೂ ಕುಡಿದರಾಯಿತು…. ಈ ಹಾಳು ತಿಮ್ಮ ಎಷ್ಟು ಹೊತ್ತು ಮಾಡುತ್ತಾನೆ?….. ಕಳ್ಳ ಬರ್ತಾನೆಯೋ ಇಲ್ಲವೋ ಇವತ್ತು!…. ಇವತ್ತು ಬರದಿದ್ದರೆ ನಾಳೆ! ― ಹೀಗೆಲ್ಲ ಆಲೋಚಿಸುತ್ತಿದ್ದ ಹಾಗೆಯೆ ದೂರದಲ್ಲಿ ತರಗೆಲೆಗಳ ಸದ್ದಾಯಿತು. ಮಾರ್ಕ ಮೈಯೆಲ್ಲ ಕಣ್ಣಾಗಿನೋಡಿದನು. ಹಳುವಿನ ನಡುವೆ ತರಗೆಲೆಗಳಲ್ಲಿ ನಡೆದುಬರುವ ಸದ್ದು ಕ್ರಮೇಣ ಸಮೀಪವಾಯಿತು…. ತಿಮ್ಮನೇ ಹಿಂತಿರುಗಿ ಬರುತ್ತಿರಬಹುದೆ? ಇಲ್ಲ; ತಿಮ್ಮ ಈ ದಿಕ್ಕಿನಿಂದ ಏಕೆ ಬರುತ್ತಾನೆ? ಸದ್ದು ತಟಕ್ಕನೆ ನಿಂತುಬಿಟ್ಟಿತು. ಮಾರ್ಕನ ಉತ್ಕಂಠಿತ ದೃಷ್ಟಿ ಸೂಜಿಯ ಮೊನೆಯ ಮೇಲೆ ಕೂಳಿತಂತಿತ್ತು. ಮತ್ತೆ ಸದ್ದು ಪ್ರಾರಂಭವಾಯಿತು. ― ಓಹೋ ಕಳ್ಳನೇ ಇರಬೇಕು! ನಿಂತು ನಿಂತು ನೋಡಿ ನೋಡಿ ಬರುತ್ತಿದ್ದಾನೆ! ಪಕ್ಕಾ ಕಳ್ಳ! ಲೌಡೀಮಗನಿಗೆ ಎಷ್ಟು ಎಚ್ಚರಿಕೆ! ― ಎಂದು ಮಾರ್ಕ ಕೆಳತುಟಿ ಯನ್ನು ಮೇಲಿನ ಹಲ್ಲು ಸಾಲಿನಿಂದ ಕಚ್ಚಿದನು. ಸದ್ದು ಹತ್ತಿರವಾಯಿತು. ಹತ್ತಿರ! ಹತ್ತಿರ! ಇನ್ನೂ ಹತ್ತಿರ! ಪೊದೆಗಳ ಚಲನೆ ಕಾಣುತ್ತಿದೆ! ಹ್ಞಾ! ಆ ಪೊದೆ ದಾಟಿದರೆ ಕಾಣಿಸುತ್ತಾನೆ: ಯಾರಿರಬಹುದು? ಮಾರ್ಕ ವ್ಯಕ್ತಿಯ ಮುಖ ಪರಿಚಯಕ್ಕಾಗಿ ಹಾತೊರೆದು ದೃಷ್ಟಿಯಿಂದಲೇ ಅವನನ್ನು ಪೊದೆಯಿಂದೀಚೆಗೆ ಎಳೆಯುತ್ತಿದ್ದನು! ಅದೋ, ಅಲ್ಲಿ! ಮಾರ್ಕನು ಮನಸ್ಸಿನಲ್ಲಿಯೇ ‘ಕಳ್ಳಬಡ್ಡೀಮಗನೇ’ ಎಂದುಕೊಂಡು ನೋಡುತ್ತಾನೆ: ಮನುಷ್ಯಾಕೃತಿ! ಆದರೆ ಮನುಷ್ಯನಲ್ಲ! ಮೂರು ನಾಲ್ಕು ಅಡಿಗಳಷ್ಟು ಎತ್ತರವಿದೆ! ಬೂದು ಬಣ್ಣದ ಬಿಳಿಯ ಛಾಯೆಯ ಕೂದಲು ಮೈ ತುಂಬಿದೆ! ಚಪ್ಪಟೆಯಾದ ಮುಖದ ಸುತ್ತಲೂ ಕರಿಗೂದಲು ಸುತ್ತುಗಟ್ಟಿ ದಟ್ಟವಾಗಿ ಬೆಳೆದಿದೆ! ಕಣ್ಣು ಬೈಗುಗಪ್ಪಿನಲ್ಲಿ ಮಿಳ್ಮಿಳಿಸುತ್ತಿವೆ! ಅಗಲವಾದ ಎದೆ! ಸಣ್ಣ ಸೊಂಟ! ಹಿಂಗಾಲುಗಳ ಮೇಲೆ ನಿಂತು ನೋಡುತ್ತಿದೆ ಮುಸಿಯ! (ಸಿಂಗಳೀಕವೆಂಬ ದೊಡ್ಡ ಕಪಿ.)

ಮಾರ್ಕನಿಗೆ ಸ್ವಲ್ಪ ಭಯವಾಯಿತು. ಆದರೂ ಕುತೂಹಲದಿಂದ ಆ ಮನುಷ್ಯಸದೃಶವಾದ ರಾಮಸೇವಕನ್ನೇ ನೋಡುತ್ತ ಕುಳಿತನು. ಅಲ್ಲಾಡಲಿಲ್ಲ. ಮುಸಿಯ ಸುತ್ತಲೂ ನೋಡಿ ಸದ್ದನ್ನಾಲಿಸಿತು. ಮಾರ್ಕನ ಕಿವಿಗೂ ಮತ್ತೊಂದು ಮುಸಿಯ ಹಿಂದುಗಡೆ ನಡೆದು ಬರುತ್ತಿದ್ದಂತೆ ಸದ್ದು ಕೇಳಿಸಿತು. ಆ ಸದ್ದು ಹತ್ತಿರವಾದಂತೆಲ್ಲ ಎದುರುಗಿದ್ದ ಮುಸಿಯ ಬೆದರುಗಣ್ಣಿನಿಂದ ತಿರುಗಿ ನೋಡುತ್ತ, ಗಿಡಗಳ ನಡುವೆ ಬಡಬಡನೆ ನುಗ್ಗಿ ಹೋಗಿ, ಒಂದು ಹೆಮ್ಮರವನ್ನೇರಿ ದೊಡ್ಡ ಕೊಂಬೆಗಳೂ ಕೂಡ ಅಲ್ಲಾಡುವಂತೆ ಶಬ್ದಮಾಡುತ್ತಾ ಮರದಿಂದ ಮರಕ್ಕೆ ಧಿಮ್ಮಧಿಮ್ಮನೆ ಹಾರಿ ಹಾರಿ ಹೋಯಿತು.

ಮಾರ್ಕನಿಗೆ ಇನ್ನೂ ಭಯವಾಯಿತು. ಹಿಂದುಗಡೆ ಬರುತ್ತಿದ್ದ ಪ್ರಾಣಿ ಮುಸಿಯನಾಗಿದ್ದರೆ ಈ ಮುಸಿಯನೇಕೆ ಹೆದರಿ ಓಡಬೇಕಾಗಿತ್ತು? ಹುಲಿಯೋ ಏನೋ? ತಿಮ್ಮನನ್ನು ಹೋಗಗೊಡಬಾರದಾಗಿತ್ತು. ಹಾಳು ಮನುಷ್ಯ! ಎಷ್ಟು ಹೊತ್ತಾಯಿತು! ಇನ್ನೂ ಬರಲೇ ಇಲ್ಲವಲ್ಲ! ಮಾರ್ಕ ಯೋಚಿಸುತ್ತಿದ್ದ ಹಾಗೆಯೆ ಸದ್ದು ಹತ್ತಿರವಾಗಿ ಪ್ರಾಣಿ ಮಬ್ಬಿನಲಿ ಗೋಚರವಾಯಿತು! ಎಂತಹ ವಿಧಿಲೀಲೆ? ಪ್ರಾಣಿಯಲ್ಲ, ಮನುಷ್ಯ! ಮಾರ್ಕ ಚನ್ನಾಗಿ ನೋಡುತ್ತಾನೆ, ತಾನು ಬೆಳಗ್ಗೆ ಗದ್ದೆಯಲ್ಲಿ ಕಂಡಿದ್ದವನೆ ಇವನು! ಕಾನೂರು ಚಂದ್ರಯ್ಯ ಗೌಡರ ಬೇಲರಾಳು! ‘ಇವನಿಗೇಕೆ ಬೇಕಿತ್ತಪ್ಪಾ ಈ ಕೆಲಸ?’ ಎಂದುಕೊಂಡನು.

ಬೈರ ಮರದ ಮೇಲೆ ಹಾರಿಹೋಗುತ್ತಿದ್ದ ಮುಸಿಯನ ಕಡೆಗೆ ನೋಡುತ್ತ ಸ್ವಲ್ಪ ಗಟ್ಟಿಯಾಗಿಯೇ “ಇದರ ಮನೆ ಹಾಳಾಗಲೋ! ಎಷ್ಟು ಹೆದರಿಬಿಡ್ತು ನನ್ನ!” ಎಂದುಕೊಂಡು ಅತ್ತ ಇತ್ತ ನೋಡದೆ ಬಗನಿಯ ಮರದ ಬುಡಕ್ಕೆ ಬಂದನು.

ಕಳ್ಳು ತುಂಬಿ ತೆಗೆದುಕೊಂಡು ಹೋಗಲೆಂದು ಮನೆಯಿಂದ ತಂದಿದ್ದ ಉಗ್ಗ ಹಾಕಿದ್ದ ಕರಿಯ ಮೊಗೆಯನ್ನು ಬುಡದಲ್ಲಿಟ್ಟು, ಬಗನಿಯ ಮರಕ್ಕೆ ಬಿಗಿದು ಕಟ್ಟಿದ್ದ ಬಿದಿರಿನ ಒಗ್ಗಾಲೇಣಿಯನ್ನು ಚತುರತೆಯಿಂದ ಸರಸರನೆ ಏರಿ, ಕಳ್ಳು ತುಂಬಿದ್ದ ಮೊಗೆಯನ್ನು ಬಿಚ್ಚಿ ಕೈಗೆ ತೆಗೆದುಕೊಂಡನು. ಕಳ್ಳಿನ ಹುಳಿ ವಾಸನೆಯನ್ನು ಆಘ್ರಾಣಿಸಿದ ಬೈರನಿಗೆ ಬಿಡಾರದಲ್ಲಿ ಸೇಸಿ ನಂಚಿಕೊಳ್ಳಲು ಮಾಡಿದ್ದ ಕಾರವಾದ ಕೆಂಬಣ್ಣದ ಮೀನುಪಲ್ಯದ ನೆನಪಾಯಿತು.

ಮೊಗೆಯ ಉಗ್ಗವನ್ನು ಒಂದು ಕೈಯಲ್ಲಿ ಬಲವಾಗಿ ಹಿಡಿದು, ಆನುಭವಶಾಲಿಯಾದ ಬೈರ ಮೆಲ್ಲಗೆ ಇಳಿಯತೊಡಗಿದನು. ನಾಲ್ಕೈದು ಮೆಟ್ಟಿಲು ಇಳಿದಾದ ಮೇಲೆ ನಲದ ಮೇಲೆ ಸದ್ದಾಯಿತು. ಬೈರ ಕೆಳಗೆ ನೋಡಿದನು. ಪೊದೆಗಳು ಅಲುಗಾಡುತ್ತಿದ್ದವು. ಬೈರ ಆಶ್ಚರ್ಯ ಕುತೂಹಲ ಉದ್ವೇಗ ಭಯದಿಂದ ನೋಡುತ್ತಿದ್ದ ಹಾಗೆಯೆ, ಮಾರ್ಕನು ಕಾಣಿಸಿಕೊಂಡನು, ಬಗನಿಯ ಮರದ ಬುಡಕ್ಕೆ ಬಂದು ನಿಂತು, ಮೇಲೆ ನೋಡಿದನು. ಇಬ್ಬರ ದಿಷ್ಟಿಗಳೂ ಸಂಧಿಸಿದವು.

“ಇಳಿ! ಇಳೀ! ಪರ್ವಾಯಿಲ್ಲ!” ಎಂದ ಮಾರ್ಕನ ಧ್ವನಿಯಲ್ಲಿ ಛಲವೂ ಹಾಸ್ಯವೂ ಇದ್ದುವೇ ಹೊರತು ಕನಿಕರವಿರಲಿಲ್ಲ.

ಬೈರ ಇಳಿಯಲಿಲ್ಲ. ಒಂದು ಕೈಯಲ್ಲಿ ಮೊಗೆಯನ್ನು ಹಿಡಿದು, ಮತ್ತೊಂದು ಕೈಯಲ್ಲಿ ಮರದ ಗಾತ್ರವನ್ನು ತಬ್ಬಿ, ಒಂದು ಕಾಲು ಮೇಲಿಟ್ಟು ಒಂದು ಕಾಲು ಕೆಳಗಿಟ್ಟು ಏಣಿಯ ಮೇಲೆ ― ಗಡ್ಡೆ ಬೆಳೆದಿದ್ದ ಡೊಳ್ಳುಹೊಟ್ಟೆ ಸಲಸಲಕ್ಕೂ ಮರದ ದಿಂಡನ್ನು ರಭಸದಿಂದ ಚುಂಬಿಸುವಷ್ಟರಮಟ್ಟಿಗೆ ದೀರ್ಘವಾಗಿ ಶ್ವಾಸೋಚ್ಛ್ವಾಸ ಬಿಡುತ್ತ ಸ್ತಬ್ಧ ನಿಃಶಬ್ಧವಾಗಿಬಿಟ್ಟನು. ಅವನಿಗೆ ಮುಂದೇನು ಮಾಡಬೇಕೆಂದು ಬಗೆಹರಿಯಲಿಲ್ಲ. “ನಾನು ಸಿಕ್ಕಿಬಿದ್ದೆ! ನನ್ನ ಗತಿ ಮುಗಿಯಿತು! ನಾನು ಕೆಟ್ಟೆ!” ಎಂದು ಮನಸ್ಸು ಕದಡಿಹೋಗಿ ಕಂಗೆಟ್ಟದ್ದನು.

“ಇಳೀತೀಯೋ ಇಲ್ಲೋ?” ಎಂದು ಮಾರ್ಕ ಮತ್ತೆ ಗದರಿ ಕೂಗಲು ― “ಇಳೀತೀನಿ, ನಮ್ಮಪ್ಪಾ! ನಿಮ್ಮ ದಮ್ಮಯ್ಯಾ ಅಂತೀನಿ! ಇದೊಂದು ಸಲಬಿಟ್ಟುಬಿಡಿ. ನಿಮ್ಮ ಕಾಲಿಗ್ಬೀಳ್ತೀನಿ!” ಎಂದು ಗಡ್ಡ ಮೀಸೆ ಒಂದೊಂದಂಗುಲ ಬೆಳೆದಿದ್ದ ಬೈರ ಹುಡುಗನಂತೆ ರೋದನಧ್ವನಿ ತೆಗೆದನೇ ಹೊರತು ಇದ್ದಲ್ಲಿಂದ ಒಮ್ದಿನಿತೊ ಅಲುಗಾಡಲಿಲ್ಲ.

“ಇಳೀದಿದ್ದರೆ ನೋಡು! ಏಣಿ ಬಿಚ್ಚಿಹಾಕಿ ಹೋಗ್ತೀನಿ. ರಾತ್ರಿಯೆಲ್ಲಾ ಅಲ್ಲೇ ಕೂತಿರ್ಬೇಕು!” ಎಂದು ಮಾರ್ಕ ಕೆಳಭಾಗದ ಏಣಿಯ ತುಂಡಿಗೆ ಕೈಯಿಟ್ಟನು.

“ನಿಮ್ಮ ದಮ್ಮಯ್ಯಾ! ನಿಮ್ಮ ದಮ್ಮಯ್ಯಾ! ಇಳೀತೀನಿ!” ಎಂದುಬೈರ ಎರಡು ಮೆಟ್ಟಿಲು ಇಳಿದು ಮತ್ತೆ ” ನಿಮ್ಮ ಕಾಲಿಗ್ಬೀಳ್ತೀನಿ! ಇದೊಂದು ಸಲ ಮಾಪಿಮಾಡಿ! ನಿಮಗೆ ಏನು ಬಾಕಾದರೂ ಕೊಡ್ತಿನಿ!” ಎಂದು ಕಣ್ಣಿರು ಕರೆದನು.

“ಇಳೀತೀಯೋ ಇಲ್ಲೋ? ಲೌಡೀಮಗನೇ, ಥೂ!” ಎಂದು ಮಾರ್ಕ ರೇಗಿ, ಮೇಲಕ್ಕೆ ಉಗುಳಿದನು. ಉಗುಳು ಗಾಳಿಯಲ್ಲಿ ತುಂತುರು ತುಂತುರಾಗಿ ಅವನ ಮುಖದ ಮೇಲೆಯೇ ಬಿದ್ದಿತು. ಮೇರ್ಕನಿಗೆ ಮತ್ತಷ್ಟು ಕೋಪವೇರಿತು. ಒಂದು ಬಡಿಗೆ ತೆಗೆದುಕೊಂಡು ಬೈರನ ಕಡೆಗೆ ಬೀಸಿದನು. ಅದು ಅವನಿಗೆ ತಗುಲದೆ ಪಕ್ಕದಲ್ಲಿ ರೊಯ್ಯೆಂದು ನುಗ್ಗಿಹೋಗಿ ಹಳುವಿನಲ್ಲಿ ಬಿದ್ದು ಸದ್ದು ಮಾಡಿತು.

“ಅಯ್ಯಯ್ಯೋ! ಇಳೀತೀನಿ! ಇಳೀತೀನಿ ನಿಮ್ಮ ದಮ್ಮಯ್ಯ!” ಎಂದು ಬೈರ ಇಳಿಯತೊಡಗಿದನು. ಮಾರ್ಕನು ಮುಖವೆತ್ತಿ ಅವನನ್ನೇ ನೋಡುತ್ತ, ಅವನು ಕೆಳಗಿಳಿದೊಡನೆಯೆ ಹೇಗೆ ಹಿಡಿಯಬೇಕೆಂಬುದನ್ನು ಕುರಿತು ಆಲೋಚಿಸುತ್ತಿದ್ದನು. ಬೈರ ಇಳಿಯುತ್ತಿದ್ದಾಗಲೇ ಹೇಗೆ ತಪ್ಪಿಸಿಕೊಳ್ಳಬೇಕೆಂದು ಆಲೋಚಿಸುತ್ತಿದ್ದನು.

ಇನ್ನೇನು ನೆಲ ಒಂಬತ್ತು ಹತ್ತು ಅಡಿಗಳಷ್ಟು ದೂರದಲ್ಲಿದೆ ಎನ್ನುವಾಗ ಬೈರ ನಿಂತನು. ಕೆಳಗೆ ನೋಡಿದನು.

“ಇಳಿಯೋ! ಇಳಿಯೋ! ಕತ್ತಲಾಯ್ತು!” ಮಾರ್ಕ ಬೈರನಿಗೆ ನೇರವಾಗಿ ಕೆಳಗಡೆ ನಿಂತು ಆಕಾಶದ ಕಡೆಗೆ ಮುಖವೆತ್ತಿ ಹೇಳುತ್ತಿದ್ದನು.

ಕ್ಷಣಮಾತ್ರದಲ್ಲಿ ಬೈರನ ಮನಸ್ಸಿಗೆ ಒಂದು ಉಪಾಯ ಹೊಳೆಯಿತು. ಹಿಂದೆ ಪ್ರಯತ್ನಪಟ್ಟರೂ ಹೊಳೆದಿರಲಿಲ್ಲ. ಈಗ ಅಪಾಯ ಸನ್ನಿಹಿತವಾದಾಗ, ಸನ್ನಿವೇಶವೇ ಉಪಾಯವನ್ನೂ ತೋರಿಸಿಕೊಟ್ಟಿತು. ತುಂಬಿದ್ದ ಕಳ್ಳುಮುಗೆಯನ್ನು ಎಡಗೈಯಿಂದ ಬಲಗೈಗೆ ಜಾರಿಸಿಕೊಂಡನು. ಅದನ್ನೇ ನೋಡುತ್ತಿದ್ದ ಮಾರ್ಕ ಎಡಗೈ ಸೋತುದರಿಂದ ಬಲಗೈಗೆ ಸರಿಸಿಕೊಳ್ಳುತ್ತಿದ್ದಾನೆ ಎಂದು ಭಾವಿಸಿದನು. ಆದರೆ ಮರುಕ್ಷಣದಲ್ಲಿಯೇ ಕಳ್ಳುತುಂಬಿ ಭಾರವಾಗಿದ್ದ ಆ ಮೊಗೆ ಮೇಲೆ ನೋಡುತ್ತಿದ್ದ ಅವನ ಮುಖದಮೇಲೆ, ಅದರಲ್ಲಿಯೂ ಮೂಗಿಗೆ ಸರಿಯಾಗಿ, ಝಪ್ಪೆಂದು ಬಿದ್ದು ಒಡೆದು ಹೋಳುಹೋಳಾಗಿ ಚದರಿಹೋಯಿತು. ನೊರೆಗಳ್ಳು ಕಣ್ಣು ಮೂಗು ಬಾಯಿ ಕಿವಿ ಎಲ್ಲೆಲ್ಲಿಯೂ ನುಗ್ಗಿ ಪ್ರವಹಿಸಿತು! ಮೂಗಿನ ಎಲುಬಂತೂ ಮುರಿದುಹೋದಂತಾಗಿ ಅಸಾಧ್ಯವಾಗಿ ನೋವಾಯಿತು, ಕಣ್ಣುಗಳಿಗೆ ನುಗ್ಗಿದ ಹುಳಿಗಳ್ಳು ಬೈರನ ಪರವಾಗಿ ಚೆನ್ನಾಗಿ ವಾದಿಸಿತ್ತು.

“ಅಯ್ಯೋ! ಅಯ್ಯಯ್ಯೋ! ಅಯ್ಯಯ್ಯೋ ಸೂಳೇ ಮಗನೇ ಸತ್ತ್ಯೋ! ಕೊಂದನಲ್ಲೋ! ಕೊಂದನಲ್ಲೋ!…. ಹಿಡಕೊಳ್ಳೊ ಓಡ್ದನಲ್ಲೊ ! ಅಯ್ಯಯ್ಯೋ!….” ಎಂದು ಮೊದಲಾಗಿ ಮಾರ್ಕ ಆ ನಿಃಶಬ್ದವಾದ ಸಂಧ್ಯಾ ಕಾನನದಲ್ಲಿ ತಾರಸ್ವರದಿಂದ ಕೂಗಿಕೊಂಡು ಹುಚ್ಚು ಹಿಡಿದವನಂತೆ ಚೇಳು ಕಡಿದವನಂತೆ ವರ್ತಿಸಿದನು. ಬೈರ ಇಳಿದು ಪರಾರಿಯಾದುದನ್ನು ನೋಡಲೂ ಆಗಲಿಲ್ಲ; ಆಲಿಸಲೂ ಆಗಲಿಲ್ಲ.

ಇದಾವುದರ ಅರಿವೂ ಇಲ್ಲದೆ, ತನ್ನ ಕೆಲಸವನ್ನು ಪೂರೈಸಿ, ಕೈಯಲ್ಲಿ ಕಳ್ಳಿನ ಮೊಗೆಯನ್ನು ಹಿಡಿದು ನಿಧಾನವಾಗಿ ಕಾಡಿನ ಹಳುವಿನಲ್ಲಿ ಏರಿ ಇಳಿದು ಬನಗತ್ತಲೆಯ ಮಬ್ಬುಗಪ್ಪಿನಲ್ಲಿ ಬರುತ್ತಿದ್ದ ಹಳೆಪೈಕದ ತಿಮ್ಮ ಮಾರ್ಕ ಭಯಂಕರ ಆರ್ತನಾದವನ್ನೂ ― ಅಯ್ಯೊಯ್ಯೊ…. ಕೊಂದ್ಯೇನೋ…. ತಿಮ್ಮಾ… ಎಲ್ಲಿ ಸತ್ತ್ಯೋ…. ಕೊಂದನಲ್ಲೊ… ಇತ್ಯಾದಿ ಪದಗಳನ್ನೂ ಕೇಳಿ ದಿಗಿಲುಬಿದ್ದು ಖೂನಿಯಾಯಿತೋ ಏನೋ ಎಂಬ ಬೀಭತ್ಸಭಯೋದ್ವೇಗದಿಂದ ಓಡತೊಡಗಿದನು. ಹಿಣಿಲು ಹಿಣಿಲಾಗಿ ಹೆಣೆದುಕೊಂಡಿದ್ದ ಪೊದೆಗಳ ನಡುವೆ ನುಗ್ಗಿ ಹಾರಿ ನುಸಿದು ಹೆಮ್ಮರಗಳಿಗೆ ತಾಗಿ ಬರುತ್ತಿರಲು, ದಾರಿಗೆ ಅಡ್ಡವಾಗಿದ್ದ ಒಂದು ಎತ್ತುಬೀಳಿಗೆ (ಒಂದು ಜಾತಿಯ ಮುಳ್ಳುಬಳ್ಳಿ) ಸಿಕ್ಕಿ ಮುಗ್ಗರಿಸಿ ಬಿದ್ದನು. ಕೈಲಿದ್ದ ಮೊಗೆ ಚೂರಾಗಿ ಕಳ್ಳು ಕಾಡುನೆಲದ ಪಾಲಾಯಿತು. ಮುಂಗೈ ಮೊಳಕಾಲು ತರಿದು ರಕ್ತವಾಯಿತು. ಅದನ್ನೂ ಲೆಕ್ಕಿಸದೆ ಎದ್ದು, ಸಾವು ಬದುಕನರಿಯದೆ ಓಡಿಯೋಡಿ ಬಂದನು

“ಕಳ್ಳಸೂಳೇಮಗನೇ ಎಲ್ಲಿ ಹೋಗಿದ್ಯೋ ನೀನು?”

ಮಾರ್ಕನು ಬೈದರೂ ― ಖೂನಿಯಾಗದಿದ್ದುದನ್ನು ಕಂಡು ― ತಿಮ್ಮನಿಗೆ ಸ್ವಲ್ಪ ಎದೆಶಾಂತಿಯಾಗಿ, ಏದುತ್ತ “ಏನಾಯಿತ್ರೋ?” ಎಂದನು.

“ಕಳ್ಳಸೂಳೇ ಮಗನೇ, ನಿಮ್ಮದೆಲ್ಲಾ ಒಳಸಂಚು! ನನಗೆ ಗೊತ್ತಾಯಿತು. ನೀವೆಲ್ಲಾ ಸೇರಿ ನನ್ನ ಕೊಲ್ಲಬೇಕು ಅಂತಾ ಮಾಡಿದ್ರೇನು?…. ಎಂದು ಮಾರ್ಕ ಹುಚ್ಚುಹುಚ್ಚಾಗಿ ಆಪಾದನೆ ಮಾಡಲಾರಂಭಿಸಿದನು. ಅವನ ಸ್ಥಿತಿ ನಗೆ ತರುವಂತಿದ್ದರೂ ತಿಮ್ಮ ನಗಲಿಲ್ಲ; ಸಮಾಧಾನ ಮಾಡಿದನು.

“ಎಲ್ಹೋದ್ನೋ ಅವನೂ!” ಮಾರ್ಕನು ಕೂಗಿದನು.

“ಯಾರು?” ಎಂದು ತಿಮ್ಮ ಬೆರಗಾಗಿ ಕೇಳಿದನು.

“ಯಾರೋ? ನಿನ್ನಪ್ಪ!…. ಗೊತ್ತಿಲ್ಲ ಅಂತ ನಟಿಸ್ತೀಯಾ! ಎಲ್ಲೋದ್ನೋ ಅವನು? ಹೇಳ್ತೀಯೋ ಇಲ್ವೋ?….. ನಿನಗೂ ಜೈಲು ಹಾಕಿಸ್ತೀನಿ! ಕಳ್ಳ ಸೂಳೇಮಗ್ನೇ, ಯಾರ್ಹತ್ರ ಈ ಠಕ್ಕು?”

ತಿಮ್ಮನು ಕಕ್ಕಾಬಿಕ್ಕಿಯಾದನು. ಮಾರ್ಕನನ್ನು ಆದಷ್ಟುಮಟ್ಟಿಗೆ ಸಮಧಾನಪಡಿಸಿ, ತಾನು ಬರುವುದಕ್ಕೆ ಏಕೆ ಹೊತ್ತಾಯಿತು ಎಂಬುದನ್ನು ತಿಳಿಸಿದನು. ಮಾರ್ಕ ನಡೆದ ಸಂಗತಿಯನ್ನೆಲ ಹೇಳಿ “ಅವನಿಗೆ ಸಜಾ ಹಾಕಿಸದೆ ಇದ್ದರೆ ನಾನು ಕಿಲಸ್ತರ ಜಾತಿಗೆ ಹುಟ್ಟಿದವನೇ ಅಲ್ಲ” ಎಂದು ಕೂಗಾಡಿದನು.

“ಅವನು ಯಾರು ನಿಮಗೆ ಗೊತ್ತೇನು?”

“ನಿಮ್ಮ ಬೇಲರ ಕೇರಿಯವನೋ ಅವನ ಸುಡುಗಾಡು ಹೆಸರು ನನಗೆ ಗೊತ್ತಿಲ್ಲ! ― ಒಮ್ದೊಂದು ಅಂಗುಲ ಬೆಳೆದಿದೆಯಲ್ಲಾ ಗಡ್ಡ! ಡೊಳ್ಳುಹೊಟ್ಟೆ! ― ಯಾರಿರಬಹುದು ಹೇಳು?”

ತಿಮ್ಮ ಆಲೋಚಿಸಿ “ಯಾರದಪ್ಪಾ ಗಡ್ಡ, ಡೊಳ್ಳ್ಹಟ್ಟೆ? ಹಾಂಗಿರೋನು ಬೈರೊಬ್ಬ….”

“ಅವ್ನೇ! ಅವ್ನೇ! ಬೈರಾ! ― ಸೂಳೇಮಗನಿಗೆ ಕೋಳ ಹಾಕಿಸ್ತೀನಿ!”

“ಅವನೆಲ್ಲಿದಾನೆ ಇವತ್ತು ಕೇರೀಲಿ? ಸೀತೇಮನೆ ಬೇಲರಕೇರೀಲಿ ಅವನ ನಂಟಬಾವ ಸತ್ತನಂತೆ. ಅಲ್ಲಿಗೆ ಹೋಗಿರಬೈದು.” ಬಗನಿ ಕಟ್ಟಿದವನು ಬೈರನೆಂದು ತಿಮ್ಮ ಕನಸಿನಲ್ಲಿಯೂ ಊಹಿಸಿರಲಿಲ್ಲ.

“ಸುಳ್ಳು ಹೇಳ್ತಿಯಾ? ಬೆಳಿಗ್ಗೆ ನೋಡಿದ್ದೀನಿ, ಹೊಂಡ ತೊಣಕಕ್ಕೆ ಹೋಗ್ತಿದ್ದ!”

“ಬೆಳಿಗ್ಗೆ ಹೊಂಡ ತೊಣಕಿದ್ರೆ ಮಜ್ಜಾನ ಹೋಗ್ಬಾರ್ದೇನು?”

ಹೀಗೆ ಬಹಳ ಹೊತ್ತು ವಾದವಿವಾದಗಳಾದ ಮೇಲೆಯೇ ಇಬ್ಬರೂ ಸೇರಿ ಸಾಕ್ಷಿಗಾಗಿ ಒಡೆದುಬಿದ್ದಿದ್ದ ಕಳ್ಳುಮೊಗೆಯ ಚೂರುಗಳನ್ನೂ ಮರದ ಬುಡದಲ್ಲಿ ಬೈರನಿಟ್ಟಿದ್ದ ಕಳ್ಳುಮೊಗೆಯನ್ನೂ ತೆಗೆದುಕೊಂಡು ಮನೆಯ ಕಡೆಗೆ ಹೊರಟರು.

ದಾರಿಯಲ್ಲಿ ತಿಮ್ಮನೆಂದನು! “ನೀವು ಕಿಲಿಸ್ತಾನ್ರು, ನಿಮಗೆ ಗೊತ್ತಾಗೋದಿಲ್ಲ. ಮನುಷ್ಯನಾದ್ರೆ ಇಷ್ಟೆಲ್ಲಾ ಮಾಡಿ ತಪ್ಪಿಸಿಕೊಳ್ಳಾಕೆ ಆಗ್ತದೆಯೇ?”

“ಮತ್ತೇನು ದೆವ್ವ ಅಂತ ಮಾಡಿಯೇನು?”

“ಹೀಂಗೆ ಎಷ್ಟೋ ಸಲ ಆಗ್ಯಾದೆ! ನಮ್ಮ ಭೂತ್ರಾಯ್ಗೆ ಕಿಲಿಸ್ತಾನ್ರು ಅಂದ್ರೆ ಆಗೋದಿಲ್ಲ.”

“ಹೋಗ್ಹೋಗೋ! ಯಾರಾದರೂ ಹಳ್ಳಿಗಮಾರರಿಗೆ ಹೇಳು” ಎಂದು ಮಾರ್ಕನ ಮನಸ್ಸಿನಲ್ಲಿ ತಿಮ್ಮನ ಮಾತಿನ ಹೆದರಿಕೆ ಬೇರೂರುತ್ತಿತ್ತು.

“ನೀವು ಹಾಂಗೆ ತಾತ್ಸಾರ ಮಾಡಬೇಡಿ. ನೋಡಿ, ನಿಮ್ಮ ಜಾತಿಯವನೇ ಆ ಸೀತೆಮನೆ ಜಾಕಣ್ಣ. ಅವನೂ ಮದ್ಲುಮದ್ಲು ಬಂದಾಗ ನಮ್ಮ ದೆಯ್ಯ ದ್ಯಾವರನ್ನ ಹಾಸ್ಯಮಾಡ್ತಿದ್ದ. ಒಂದು ಸಾರಿ ಚೌಡಿ ಕೊಡ್ತು ರಕ್ತ ಕಾರ್ಕೋಳ್ಳೊ ಹಾಂಗೆ! ಆಮೇಲೆ ನಮ್ಮ ದೆಯ್ಯ ದ್ಯಾವ್ರಿಗೆ ಹರಕೆ ಹೇಳ್ತಾನೆ; ಕೋಳಿ ಕುರಿಕೊಡ್ತಾನೆ. ಎಲ್ಲ ಮಾಡ್ತಾನೆ!…. ಅವನು ನಿಜವಾಗ್ಲೂ ನಮ್ಮ ಬೇಲರ ಬೈರನೆ ಆಗಿದ್ರೆ ನಿಮ್ಮಂಥ ಸರ್ಕಾರಿ ನೋಕ್ರ ಮುಖದ ಮೇಲೆ ಕಳ್ಳು ಮೊಗೆಹಾಕಿ ಓಡ್ಹೋಗೋದು ಅಂದ್ರೇನು? ಬೇಲರ ಬೈರಗೆ ಎಲ್ಲಿ ಬಂತು ಆ ಧೈರ್ಯ, ಆ ಉಪಾಯ? ನಿಮ್ಮಂಥೋರ ಕೈಲಿ ಅವನು ತಪ್ಪಿಸಿಕೊಂಡು ಹೋಗೋದೆ? ― ಎಲ್ಲ ಭೂತರಾಯನ ಚ್ಯಾಸ್ಟೆ! ನಾಳೆ ನಾಡ್ದಿನ ಹಾಂಗೆ ನಮ್ಮ ಭೂತರಾಯನ ಹರಕೆ ಆಗ್ತದೆ. ನೀವೂ ಇದ್ದು, ಧೂಪ ಹಾಕಿ, ಪಾರ್ತನೆ ಮಾಡಿ!”

ಆ ಕಾಡು, ಆ ಕತ್ತಲೆ, ಆ ಉದ್ವೇಗ, ಸಂದೇಹವೇನೆಂಬುದನ್ನೇ ಅರಿಯದ ತಿಮ್ಮನ ಆ ಶ್ರದ್ಧಾವಾಣಿ ಇವುಗಳಿಂದ ಮಾರ್ಕನ ಚರ್ಮದಲ್ಲಿ ಮಾತ್ರವಿದ್ದ ಕ್ರೈಸ್ತಮತ ಅಳುಕಿತು. ನಡೆದುದನ್ನು ನೆನೆದಂತೆಲ್ಲ ತಿಮ್ಮನ ಉಪಪತ್ತಿಯೆ ಋಜುವಾಗುವಂತೆ ತೋರಿತು. ಆದರೂ ಹೊರಗೆ ಮಾತ್ರ “ನಾಳೆ ಬೇಲರನ್ನೆಲ್ಲಾ ಕರೆಸಿ ಗೌಡರಿಂದ ವಿಚಾರಣೆ ಮಾಡಸ್ತೀನಿ” ಎಂದನು.

* * *

ಆ ರಾತ್ರಿ ಬೇಲರ ಸಿದ್ದ ಬಿಡಾರದಲ್ಲಿ ಕೂತದ್ದಾಗ ಬೈರ ಅಲ್ಲಿಗೆ ಬಂದು ಅವನ ಕಿವಿಯಲ್ಲಿ ಬಹಳ ಹೊತ್ತು ವಿಸುಮಾತಾಡಿದನು. ಆಮೇಲೆ ಅವರಿಬ್ಬರೂ ಸೇರಿ ಬೈರನ ಬಿಡಾರಕ್ಕೆ ಹೋದರು. ಅಲ್ಲಿ ಕ್ಷೌರದ ಕತ್ತಿ ಮತ್ತು ನೀರು ಸಿದ್ಧವಾಗಿತ್ತು. ಸಿದ್ದ ಬೈರನ ತಲೆಯನ್ನೂ ಗಡ್ಡ ಮೀಸೆಗಳನ್ನೂ ನುಣ್ಣಗೆ ಬೋಳಿಸಿದನು.

“ಈಗ ನನ್ನ ಗುರ್ತು ಸಿಕ್ತದೇನು?” ಎಂದನು ಬೈರ.

“ಗುರ್ತು ಸಿಕ್ಕೋದೆ ಸೈ!! ನನಗೇ ಸಿಕ್ಕೋದಿಲ್ಲಾ! ಆ ಪ್ಯಾಟೆ ಕತ್ತೆ ಮಾರ್ಕಗೆ ಸಿಕ್ಕಿಬಿಟ್ರೆ ಇನ್ನೇನು ಕಡ್ಮೆಯಿಲ್ಲ!!!” ಎಂದು ಸಿದ್ದ ಪುನರ್ಜನ್ಮಧಾರಣೆ ಮಾಡಿದಂತಿದ್ದ ಬೈರನ ಮುಖವನ್ನೂ ಕಳ್ಳಿನ ಮೊಗೆಯಂತಿದ್ದ ಮಂಡೆಯನ್ನೂ ನೋಡಿ ನೋಡಿ ನಕ್ಕನು.

ಮರುದಿನ ಬೆಳಿಗ್ಗೆ ಪುಟ್ಟಣ್ಣ ಬೇಲರ ಕೇರಿಗೆ ಬಂದು ― ಗಂಡಸರೆಲ್ಲರೂ ಬರಬೇಕಂತೆ; ಗೌಡರ ಅಪ್ಪಣೆಯಾಗಿದೆ ― ಎಂದನು. ಸಿದ್ದ, ಬೈರ, ಮಂಜ, ಕೆಂಚ, ಗುತ್ತಿ, ದೊಡ್ಡರುದ್ರ, ಸಣ್ಣರುದ್ರ, ಎಲ್ಲರೂ ‘ಮನೆಗೆ’ ಹೊರಟರು. ತನ್ನ ಹಿಂದೆಯೇ ಬರುತ್ತಿದ್ದ ಗುಂಪನ್ನು ಅವಲೋಕಿಸಿ ಪುಟ್ಟಣ್ಣ ಬೈರ ಬರಲಿಲ್ಲಲ್ಲೋ! ಕರಿಯೋ ಅವನ್ನಾ!” ಎಂದನು.

“ಇಲ್ಲಿದ್ದೀನಲ್ರಯ್ಯಾ!” ಎಂದು ಬೈರ ಮುಗುಳ್ನಗೆ ನಕ್ಕನು.

ಪುಟ್ಟಣ್ಣ ಬೆಪ್ಪು ಬೆರಗಾಗಿ ನೋಡಿ “ಏನೋ ಇದೂ!” ಎಂದನು.

“ಸೀತೆಮನೆ ಕೇರೀಲಿ ನಮ್ಮ ನಂಟಬಾವ ಸತ್ತು ಹೋದ. ಅಲ್ಲಿಗೆ ಹೋಗಿದ್ದೆ” ಎಂದ ಬೈರ. ಪುಟ್ಟಣ್ಣಗೂ ತನ್ನ ಗುರುತು ಸಿಕ್ಕದಿದ್ದುದನ್ನು ಕಂಡು ಹಿಗ್ಗಿದನು. ಹತ್ತಿರದ ಸಂಬಂಧಿ ಸತ್ತಾಗ ತಲೆಯನ್ನು ನುಣ್ಣಗೆ ಮಾಡಿಕೊಳ್ಳುವುದು ಬೇಲರ ಜಾತಿಯ ಪದ್ಧತಿಯೆಂದು ಊಹಿಸಿ ಪುಟ್ಟಣ್ಣನೂ ಹೆಚ್ಚು ಪ್ರಶ್ನೆ ಮಾಡುವ ಗೊಜಿಗೆ ಹೋಗಲಿಲ್ಲ.

ಕಾನೂರು ಮನೆಯ ಅಂಗಳದಲ್ಲಿ ಬೇಲರೆಲ್ಲರೂ ಸಾಲಾಗಿ ನಿಂತರು.

ಚಂದ್ರಯ್ಯಗೌಡರು, ಹೂವಯ್ಯ, ರಾಮಯ್ಯ, ವಾಸು ಮೊದಲಾದವರು ಜಗಲಿಯಮೇಲೆ ಕೂತಿದ್ದರು. ಮಾರ್ಕ ಕಿರುಜಗುಲಿಯ ಮೇಲೆ ಕೂತಿದ್ದನು.

ಕಳ್ಳಬಗನಿ ಕಟ್ಟುವ ವಿಚಾರವಾಗಿ ಸಂಭಾಷಣೆಯಾಗುತ್ತಿತ್ತು.

ಚಂದ್ರಯ್ಯಗೌಡರು “ಇವರಿಗೆ ಏನು ಮಾಡಬೇಕಾಯ್ತು? ಹೇಳಿದರೆ ಕೇಳೋದಿಲ್ಲ. ಬೋವಿ ಮನೆಗೆ, ಕಳ್ಳಂಗಡಿಗೆ ಬತ್ತ ಹೊತ್ತೂ ಹೊತ್ತೂ ಕುಡಿದುಸಾಯೋದು ಸಾಲದೆ, ಕಳ್ಳಬಗನೀ ಬೇರೆ ಕಟ್ಟಾಕೆ ಸುರು ಮಾಡಿದ್ದರಲ್ಲಾ!” ಎಂದರು.

ಹೂವಯ್ಯನೂ ಸ್ವಲ್ಪ ವಿನೋದಕ್ಕಾಗಿ “ಹೌದು, ದೊಡ್ಡವರೆಲ್ಲ ಮಾನಪತ್ರಕ್ಕೆ ರುಜು ಹಾಕಿ, ದೇವರಮೇಲೆ ಆಣೆಹಾಕಿ, ಇನ್ನೂ ಕುಡಿಯೋದು ಬಿಟ್ಟಿಲ್ಲ. ಅಂದಮೇಲೆ ಬಡವರಿಗೆ ಯಾಕೆ ಹೇಳಬೇಕು? ದೊಡ್ಡವರಿಗೆ ದುಡ್ಡಿದೆ. ಲೈಸನ್ಸಿಗೆ ದುಡ್ಡು ಕೊಟ್ಟು ಬಗನಿಕಟ್ಟಿಸಿ, ಕಳ್ಳು ಕುಡಿಯುತ್ತಾರೆ. ಬಡವರು ಕದ್ದು ಬಗನಿಕಟ್ಟಿ ಕುಡಿಯುತ್ತಾರೆ!” ಎಂದನು.

ರಾಮಯ್ಯ “ಊರಿನಲ್ಲಿ ಯಾರೂ ಬಗನಿ ಕಟ್ಟಿಕೂಡದು ಎಂದು ಸಾರಿ ನಿಲ್ಲಿಸಿಬಿಟ್ಟರೆ ಎಲ್ಲ ಸರಿಹೊಗುತ್ತದೆ. ಒಬ್ಬರು ಬಗನಿ ಕಟ್ಟಿ ಕಳ್ಳುಕುಡಿಯುತ್ತಿದ್ದರೆ ಉಳಿದವರು ನೋಡುತ್ತ ಸುಮ್ಮನಿರುತ್ತಾರೇನು? ದುಡ್ಡಿಲ್ಲದಿದ್ದರೆ ಕಳ್ಳತನ ಮಾಡ್ತಾರೆ. ಹಾರೆ ಗುದ್ದಲಿ ಎಲ್ಲಾ ಹೊತ್ತುಕೊಂಡುಹೋಗಿ ಕದ್ದು ಮಾರಾಟ ಮಾಡಿ ಕುಡಿಯುತ್ತಾರೆ….” ಎಂದು ಮುಂತಾಗಿ ಆಡಿದನು.

ಟೀಕೆಯ ಕೊಡಲಿ ತಮ್ಮ ಬುಡಕ್ಕೇ ಬೀಳುತ್ತಿರಲು ಗೌಡರು ನಸುಮುನಿದು “ಒಳ್ಳೇ ಮಾತು ಹೇಳ್ತೀರಿ ನೀವಿಬ್ಬರೂ. ಸರ್ಕಾರಕ್ಕೆ ಮೋಸಮಾಡಿ ಅಂತಾ ಹೇಳ್ಕೊಡಿ ಎಲ್ರಿಗೂ; ಪಸಂದಾಗ್ತದೆ” ಎಂದು ಮಾರ್ಕನ ಕಡೆ ನೋಡಿದರು.

ಹೂವಯ್ಯ “ಸರ್ಕಾರದ ಬೊಕ್ಕಸ ಬೆಳೆಯಲಿ ಎಂದೇನು ನೀವೆಲ್ಲ ಬಗನಿ ಮರಗಳಿಗೆ ತೆರಿಗೆ ತೆರುವುದು?” ಎಂದು ಹಾಸ್ಯಮಾಡಿದನು.

ರಾಮಯ್ಯನೂ “ಸರ್ಕಾರ ಮಾಡಿದ್ದೆಲ್ಲ ಸತ್ಕಾರ್ಯವೇನು? ಅದಕ್ಕೆ ಬೇಕಾಗಿರುವುದೂ ದುಡ್ಡೇ! ಇಲ್ಲಿ ಇವರೆಲ್ಲ ಕುಡಿದು, ಆರೋಗ್ಯ ಕೆಟ್ಟು ಸತ್ತರೇನಂತೆ? ಅಲ್ಲಿ ಪಟ್ಟಣ ಸಿಂಗಾರ ಮಾಡ್ತಾರೆ!” ಎಂದನು.

ಕ್ರಾಪು ಬಿಟ್ಟು, ಖಾದಿ ಬಟ್ಟೆ ತೊಟ್ಟು, ಇಂಗ್ಲೀಷು ಮಾತಾಡಬಲ್ಲ ತರುಣರನ್ನು ನೋಡಿದ ಮಾರ್ಕ ಮಾತಾಡಲಿಲ್ಲ. ಗೌಡರಿಗಂತೂ ಹೂವಯ್ಯನೂ ಅನೇಕ ಜನರ ಸಮಕ್ಷಮದಲ್ಲಿ ತಮ್ಮ ಹುಳುಕನ್ನು ಬಿಚ್ಚಿ ಹೇಳಿದ್ದರಿಂದ ಒಳಗೊಳಗೆ ಹೊಗೆಯಾಡಿತು. ಸೇರೆಗಾರ ರಂಗಪ್ಪಸೆಟ್ಟರ ದೃಷ್ಟಿ ಒಂದು ಸಾರಿ ಹೂವಯ್ಯನ ಕಡೆಗೂ ಮತ್ತೊಂದು ಸಾರಿ ಗೌಡರ ಕಡೆಗೂ ಹೊರಳುತ್ತಿತ್ತು. ಎರಡು ದಿನಗಳ ಹಿಂದೆ ಬೈರನಿಗೆ ಬತ್ತ ಕೊಡದಿದ್ದಾಗ ಹೂವಯ್ಯನಿಂದ ತಮಗಾಗಿದ್ದ ಮುಖಭಂಗವನ್ನು ಅವರು ಮರೆತಿರಲಿಲ್ಲ. ಅವರ ದೃಷ್ಟಿ ಅವರ ತಲೆಯ ಹುತ್ತದಲ್ಲಿ ಸರ್ಪವಾಗಿತ್ತು.

ಮಾರ್ಕನು ಸಾಲಾಗಿ ನಿಂತಿದ್ದ ಬೇಲರನ್ನು ಪರೀಕ್ಷಿಸಿ ಗುರುತು ಹಿಡಿಯಲು ಅಂಗಳಕ್ಕಿಳಿದನು. ಒಂದೆರಡು ನಿಮಿಷಗಳವರೆಗೆ ಚೆನ್ನಾಗಿ ಅವಲೋಕಿಸಿದನು. ಬೈರನ ಕಡೆಗಂತೂ ಕಣ್ಣೆತ್ತಿ ಕೂಡ ನೋಡಲಿಲ್ಲ. ಮನೆಯೆಲ್ಲ ಮೌನವಾಗಿ ಫಲಿತಾಂಶವನ್ನು ಕುತೂಹಲದಿಂದ ಕಾಯುವಂತಿತ್ತು. ಬೈರನಂತೂ ತಾನು ಪಾರಾದರೆ ಭೂತರಾಯನಿಗೆ ಒಂದು ಕೋಳಿ ಹೆಚ್ಚಾಗಿ ಕೊಡುತ್ತೇನೆಂದು ಹರಕೆ ಹೊರುತ್ತಿದ್ದನು.

“ಬೇಲರು ಎಲ್ಲಾ ಇದ್ದಾರೇನು ಇಲ್ಲಿ?” ಎಂದು ಮಾರ್ಕ ಗೌಡರ ಕಡೆ ನೋಡಿದನು.

ಗೌಡರಿಗೂ ತಮ್ಮ ಜೀತದಾಳು ಸರ್ಕಾರದ ಕೈಗೆ ಸಿಕ್ಕಿಬೀಳುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಎಲ್ಲಿಯಾದರೂ ಹಾಗಾದರೆ ತಾವೂ ಕಷ್ಟನಷ್ಟಗಳಿಗೆ ಗುರಿಯಾಗ ಬೇಕಾಗುತ್ತದೆ ಎಂದು ಅವರಿಗೆ ತಿಳಿದಿತ್ತು.

“ಎಲ್ಲ ಬಂದಿದ್ದಾರೆ!” ಎಂದರು.

ಮಾರ್ಕ ಗುರುತುಹಿಡಿಯಲಾರದೆ ಹಿಂದಕ್ಕೆ ಬಂದು ಕುಳಿತನು. ಬೇಲರೆಲ್ಲರೂ ಗುಜುಗುಜು ಮಾತಾಡುತ್ತ ಹೆಬ್ಬಾಗಿಲು ದಾಟಿದರು.

“ನಿನ್ನೆ ಬೆಳಿಗ್ಗೆ ನಾನು ಗದ್ದೆಯಲ್ಲಿ ನೋಡಿದವನು ಬಂದಿಲ್ಲ” ಎಂದನು ಮಾರ್ಕ

“ಹಾಂಗಾದ್ರೆ ನೀನು ನೋಡಿದ್ದು ಯಾರನ್ನೋ? ಇಲ್ಲಿ ನಮ್ಮ ಬೇಲರೆಲ್ಲ ಬಂದಿದ್ದರು.”

“‘ಬೈರ’ ಅನ್ನುವನು ಬಂದಿದ್ನೇನು?”

“ಒಹೋ! ಭೇಷಕ್, ಬಂದಿದ್ದ!” ಎಂದನು ಪುಟ್ಟಣ್ಣ.

“ಎಲ್ಲಿ ನಾನು ಅವನ್ನ ಕಾಣಲಿಲ್ಲ.”

“ಅವನು ನಿನ್ನೆ ಸೀತೆಮನೆ ಕೇರಿಗೆ ಹೋಗಿದ್ದನಂತೆ. ಯಾರೋ ಅವನ ನಂಟಬಾವ ಸತ್ತಿದ್ದನಂತೆ. ಊರಿನಾಗೆ ಇಲ್ಲದಿದ್ದವನ್ನ ಕಟ್ಟಿಕೊಂಡು ನೀವೇನು ಮಾಡ್ತೀರಿ?” ಎಂದನು ಪುಟ್ಟಣ್ಣ.

ಮಾರ್ಕನಿಗೆ ತಿಮ್ಮ ಹೇಳಿದ್ದ ಭೂತರಾಯನ ಕಥೆ ನೆನಪಿಗೆ ಬಂದು, ತಾನು ಹರಕೆಯಲ್ಲಿ ಭಾಗಿಯಾಗಲು ಮನಸ್ಸು ಮಾಡಿದನು.