ಹೂವಯ್ಯನನ್ನು ನೋಡಲು ಚಂದ್ರಯ್ಯಗೌಡರು ಮುತ್ತಳ್ಳಿಗೆ ಬರುತ್ತಾರೆಂದು ತಿಳಿದು. ಅವರನ್ನು ಅಲ್ಲಿ ಸಂಧಿಸಲು ಮನಸ್ಸಿಲ್ಲದೆ, ಸಿಂಗಪ್ಪಗೌಡರು ಬೆಳಗ್ಗೆ ಬಹು ಮುಂಚಿತವಾಗಿ ಎದ್ದು, ತಮ್ಮ ಮನೆಗೆ ಹೋಗಿದ್ದರು. ಅಲ್ಲಿಗೆ ಬಂದ ಓಬಯ್ಯನಿಂದ ತಾವು ಕಡಿಸಿದ್ದ ನಾಟಾ ಸಾಗಿಸುತ್ತಾರೆ ಎಂಬ ಸಂಗತಿಯನ್ನು ತಿಳಿದು, ಕೆಂಡವಾಗಿ, ತಮ್ಮ ಮಗ ಕೃಷ್ಣಪ್ಪನನ್ನೂ ತಮ್ಮ ಆಳು ಕಿಲಿಸ್ತರ ಜಾಕಿಯನ್ನೂ ಹತ್ತಿಪ್ಪತ್ತು ಜನಗಳೊಡನೆ ನಾಟಾ ರಕ್ಷಣೆಗೆ ಕಳುಹಿಸಿದರು. ” ಹೆಣ ಉರುಳಿದರೂ ಚಿಂತೆಯಿಲ್ಲ, ನಾಟಾದ ಒಂದು ತುಂಡೂ ಅವರ ಕೈಸೇರಬಾರದು. ಬಂದಿದ್ದೆಲ್ಲ ಬರಲಿ, ನಾನು ನೋಡಿಕೊಳ್ಳುತ್ತೇನೆ.ಇದರಲ್ಲಿ ನನ್ನ ಮನೆ ಮಾರಿ ಹೋದರೂ ಹೋಗಲಿ!” ಎಂಬುದರ ಭೀಷಣ ಆಜ್ಞೆಯೂ ಪ್ರತಿಜ್ಞೆಯೂ ಆಗಿತ್ತು. ಬಲಿಷ್ಠನೂ ಪುಂಡನೂ ಧೂರ್ತನೂ ಆಗಿದ್ದ ಕಿಲಿಸ್ತರ ಜಾಕಿ ” ಹೆಣ ಉರುಳಿಸಲೇಬೇಕು” ಎಂದು ಅರ್ಥಮಾಡಿಕೊಂಡು ದೃಢ ಮನಸ್ಸು ಮಾಡಿ ಹೊರಟಿದ್ದನು.

ಅವರೆಲ್ಲರೂ ನಾಟಾ ಕಡಿದಿದ್ದ ಸ್ಥಳವನ್ನು ಸೇರುತ್ತಿದ್ದ ಹಾಗೆಯೆ ನಾಯಿಗಳು ಹಂದಿಯನ್ನು ಅಟ್ಟಿಸಿಕೊಂಡು ಬಂದುವು. ಹಂದಿ ಗಾಯದಿಂದಲೂ ಆಯಾಸದಿಂದಲೂ ಮೆಲ್ಲಮೆಲ್ಲಗೆ ಓಡುತ್ತಿತ್ತು. ಕೃಷ್ಣಪ್ಪನು ತನ್ನ ಕೈಲಿದ್ದ ಬಂದೂಕಿನಿಂದ ಒಂದು ಗುಂಡು ಹೊಡೆದನು. ಹಂದಿ ಸತ್ತು ಬಿದ್ದಿತು. ನಾಯಿಗಳು ಅದನ್ನು ಮುತ್ತಿ ಅಲುಬಿದುವು.

ಕೃಷ್ಣಪ್ಪನಿಗೆ ನಾಯಿಗಳು ಕಾನೂರಿನವೆಂದು ಗುರುತಾಯಿತು. ಕಿಲಿಸ್ತರ ಜಾಕಿಯ ಸಲಹೆಯಂತೆ ಎಲ್ಲರೂ ಸೇರಿ ಹಂದಿಯನ್ನು ಒಂದೆಡೆ ಸೊಪ್ಪಿನ ತುಂಡೆಗಳಿಂದ ಮುಚ್ಚಿದರು. ಅದರ ಮೇಲೆ ಕಂಬಳಿ ಹಾಸಿಕೊಂಡು, ಕೈಯಲ್ಲೊಂದು ದೊಣ್ಣೆ ಹಿಡಿದುಕೊಂಡು, ಕಿಲಿಸ್ತರ ಜಾಕಿ ಕುಳಿತುಕೊಂಡನು. ನಾಯಿಗಳು ಬಳಿಸಾರಲು ಪ್ರಯತ್ನಪಟ್ಟಾಗ ದೊಣ್ಣೆಯನ್ನು ಬೀಸಿ ಪ್ರಹರಿಸಿದನು. ಅವುಗಳೆಲ್ಲ ಅಲ್ಲಿಯೆ ಸುತ್ತಲೂ ಸುಳಿದಾಡಹತ್ತಿದುವು. ಪುಟ್ಟಣ್ಣ ಇತರರೊಡನೆ ಅಲ್ಲಿಗೆ ಬರಲು, ಟೈಗರು ದೂರು ಹೇಳುವ ರೀತಿಯಲ್ಲಿ ಅವನ ಮೈಮೇಲೆ ಹಾರಿ ಹಾರಿ ಬಿದ್ದು, ಜಾಕಿ ಕೂತಿದ್ದ ಕಡೆಗೆ ಓಡಿಹೋಗಿ ನೋಡಿ, ” ಇಲ್ಲಿದೆ!” ಎನ್ನುವಂತೆ ಸೂಚಿಸಿ ಬಾಲವಳ್ಳಾಡಿಸುತ್ತಿತ್ತು.

ಅನುಭಶಾಲಿಯಾಗಿದ್ದ ಪುಟ್ಟಣ್ಣನಿಗೆ ಕ್ಷಣಮಾತ್ರದಲ್ಲಿ ನಡೆದ ಸಂಗತಿಯೆಲ್ಲ ಗೊತ್ತಾಯಿತು. ತಮಗೆ ಕೇಳಿಸಿದ್ದ ಈಡು ಕೃಷ್ಣಪ್ಪ ಹೊಡೆದುದಾಗಿರಬೇಕು. ಹಂದಿ ಸತ್ತಿರಬೇಕು. ಅದನ್ನು ಅಲ್ಲಿದ್ದವರು ಅಡಗಿಸಿರಬೇಕು. ಏಕೆಂದರೆ ಹಂದಿ ಮುಂದೆ ಹೋಗಿದ್ದ ಪಕ್ಷದಲ್ಲಿ ನಾಯಿಗಳು ಅದನ್ನು ಹಿಂಬಾಲಿಸದೆ ಅಲ್ಲಿಯೆ ನಿಲ್ಲುತ್ತಿರಲಿಲ್ಲ. ನಾಯಿಗಳ ಉದ್ವೇಗವೂ ನಡವಳಿಕೆಯ ರೀತಿಯೂ ತನ್ನ ಊಹೆಯನ್ನೇ ಸಮರ್ಥಿಸುತ್ತಿತ್ತು. ಅಲ್ಲಿದ್ದವರ ಮುಖಭಂಗಿಯೂ ಏನೋ ಒಂದು ಗುಟ್ಟನ್ನು ಬಿಟ್ಟುಕೊಡಬಾರದೆಂಬಂತಿದೆ! ಎಲ್ಲರೂ ಮಾತು ನಿಲ್ಲಿಸಿ ಮುಂದೇನಾಗುವುದೋ ಎಂಬ ನಿರೀಕ್ಷಣೆಯಿಂದ ನಿಂತಿದ್ದಾರೆ.

ಇಷ್ಟೆಲ್ಲವೂ ಗೊತ್ತಾದರೂ ತಿಳಿಯದವರಂತೆ ಪುಟ್ಟಣ್ಣ ಮರ್ಯಾದೆಗಾಗಿ ” ಕೃಷ್ಣಪ್ಪಗೌಡರಿಗೆ ನಮಸ್ಕಾರ!….. ಏನು ಷಿಕಾರಿಗೆ ಬಂದಿರೇನು?” ಎಂದು ಕೇಳಿದನು. ಅವನ ಮುಖದಲ್ಲಿ ಹುಸಿನಗೆ ಮುಗುಳು ಬಿರಿಯುತ್ತಿತ್ತು.

ಕೃಷ್ಣಪ್ಪನೂ ವಿನೋದವಾಗಿಯೆ “ನಮಸ್ಕಾರ” ಹೇಳಿ ಸಮ್ಮತಿಸಿದನು. ಅವನ ವಾಣಿಯಲ್ಲಿ ಮೂದಲಿಕೆ ತುಂಬಿತ್ತು. ಕಿಲಿಸ್ತರ ಜಾಕಿಯ ಕಡೆ ಒಂದು ಸಾರಿ ಫಕ್ಕನೆ ತಿರುಗಿ ನೋಡಿ, ಮತ್ತೆ ಪುಟ್ಟಣ್ಣನನ್ನು ಕುರಿತು “ಎರಡು ಈಡು ಕೇಳಿತಲ್ಲಾ ನಿಮ್ಮ ಕಡೆಯವರೇ ಹೊಡೆದಿದ್ದೇನು?” ಎಂದನು.

“ಹೌದು, ನಾನೇ ಹೊಡೆದಿದ್ದು, ಒಂದು ಹಂದಿಗೆ, ಇತ್ತ ಮಖಾನೆ ಬಂತಪ್ಪ! ಇತ್ತಲಾಗಿ ಒಂದು ಈಡು ಕೇಳಿಸ್ತಲ್ಲಾ, ಯಾರು ಹೊಡೆದಿದ್ದು?”

“ಒಂದು ಈಡೇನೋ ಕೇಳಿಸಿತು ಈ ಕಡೆ. ಯಾರು ಹೊಡೆದರೋ ಗೊತ್ತಿಲ್ಲ.”

“ನಮ್ಮ ನಾಯಿ ಇಲ್ಲೆ ಅವೆ?” ಎಂದು ಪುಟ್ಟಣ್ಣ ಜಾಕಿಯ ಕಡೆ ಸಂಶಯದಿಂದ ನೋಡಿದನು.

“ಈಗ ನೀವು ಬರೋಹೊತ್ತಿಗೆ ಬಂದುವಷ್ಟೆ!” ಎಂದು ಜಾಕಿ ದೊಣ್ಣೆ ಬೀಸಿ ತನ್ನ ಬಳಿಗೆ ಬರುತ್ತಿದ್ದ ನಾಯಿಗಳನ್ನು ಚೆದರಿಸಿದನು. ಟೈಗರು ದೂರ ಚಿಮ್ಮಿನಿಂತು ರೋಷದಿಂದ ಜಾಕಿಯ ಕಡೆಗೆ ಬಗುಳಿತು.

ಪುಟ್ಟಣ್ಣನೂ ಸೇರೆಗಾರರೂ ಸ್ವಲ್ಪ ಪೆಚ್ಚಾದರು. ಯಾರೂ ಇರುವುದಿಲ್ಲ. ನಾಟಾಗಳನ್ನು ಸರಾಗವಾಗಿ ಸಾಗಿಸಿಬಿಡಬಹುದೆಂದು ಭಾವಿಸಿದ್ದ ಅವರಿಗೆ, ಅಷ್ಟು ಜನರು ಅಲ್ಲಿದ್ದದ್ದು ಆಶ್ಚರ್ಯವಾಗಿ ಕಂಡಿತು. ಅದರಲ್ಲಿಯೂ ಕಿಲಿಸ್ತರ ಜಾಕಿ! ಆ ಪಟಿಂಗನು ಖೂನಿ ಮಾಡುವುದಕ್ಕೂ ಹೇಸುವುದಿಲ್ಲ! ಇವತ್ತು ನಾಟಾ ಸಾಗಿಸುವುದು ಅಸಾಧ್ಯ ಎಂದು ಮನದಲ್ಲಿಯೆ ನಿರ್ಣಯಿಸಿದರು.

ಗಂಡಾಗುಂಡಿಯಲ್ಲಿ ಪುಟ್ಟಣ್ಣನೇನು ಕಿಲಿಸ್ತರ ಜಾಕಿಗೆ ಕಡಿಮೆಯಾದವನಲ್ಲ. ಅವನಿಗೆ ಮನೆ, ಮಾರು, ಹೆಂಡಿರು, ಮಕ್ಕಳು, ಆಸ್ತಿ, ಭೂಮಿ ಒಂದೂ ಇರಲಿಲ್ಲ ಅವನು ಯಾವುದಕ್ಕೂ ಅಂಜಿದವನೂ ಅಲ್ಲ. ಬೇಟೆಗಳಲ್ಲಿ ಹುಲಿ ಹಂದಿಗಳೊಡನೆ ಭಯಂಕರ ಸನ್ನಿವೇಶಗಳಲ್ಲಿ ಸಿಕ್ಕಿ ಪಾರಾಗಿದ್ದನು. ಕಾಡಿನಲ್ಲಿ ರಾತ್ರಿ ಹಗಲೆನ್ನದೆ ಹೆಗಲಮೇಲೆ ಕೋವಿ ಹಾಕಿಕೊಂಡು, ಯಾವಾಗ ಬೇಕೆಂದರೆ ಆವಾಗ ಅಲೆದಾಡುತ್ತಿದ್ದನು. ಎಷ್ಟೋ ರಾತ್ರಿಗಳನ್ನು ಕಾಡಿನಲ್ಲಿ ನೆಲದಮೇಲೆ ನಿಶ್ಚಿಂತನಾಗಿ ಮಲಗಿ ಕಳೆದಿದ್ದನು. ಭಯವೆಂಬುದು ಅವನರಿಯದ ಅನುಭವವಾಗಿತ್ತು. ಹಂದಿಯ ಕೋರೆಯ ಗಾಯಗಳು ಅವನ ಮೈಮೇಲೆ ನಾಲ್ಕೈದಕ್ಕಿಂತ ಹೆಚ್ಚಾಗಿಯೆ ಇದ್ದುವು. ಕೆಚ್ಚೆದೆ ಸಾಹಸ ಧೂರ್ತತನಗಳಲ್ಲಿ ” ದೈತ್ಯ” ಸದೃಶ್ಯನಾಗಿದ್ದನು. ಆದರೆ ಕಿಲಿಸ್ತರ ಜಾಕಿಯಂತೆ ಮಾನ ಮರ್ಯಾದೆಗಳನ್ನು ಬಿಟ್ಟು, ಕೆಟ್ಟಬಾಳು ಬಾಳಿದವನಾಗಿರಲಿಲ್ಲ. ಜಾಕಿ ಮಹಾ ಕುಡುಕ, ಕಟುಕ, ಅವನ ಕೆಚ್ಚೆದೆಗೆ ಅಜ್ಞಾನ ಅಸಂಸ್ಕೃತಗಳು ಮೂಲಾಧಾರವಾಗಿದ್ದವು. ಅವನಲ್ಲಿ ಒಂದು ವಿಧವಾದ ” ಹಂದಿತನ” ವಿತ್ತು. ಪುಟ್ಟಣ್ಣನಲ್ಲಿದ್ದ ನಯವಾಗಲಿ, ಸಂಸ್ಕೃತಿಯಾಗಲಿ, ಗೌರವ ಬುದ್ದಿಯಾಗಲಿ ಸ್ವಲ್ಪವೂ ಇರಲಿಲ್ಲ. ಹೆಮ್ಮರದ ಹೆಗ್ಗೊಂಬೆಗಳಂತೆ ಗಂಟುಗಂಟಾಗಿ ಮೊರಡಾಗಿದ್ದ ಅವನ ಕಾಲು ಕೈಗಳು, ಕರಿಯ ಮೈ, ಸಿಡುಬೆದ್ದು ಕುಣಿಕುಣಿಯಾಗಿದ್ದ ಮುಖ, ನೀಳವಾಗಿ ಪೊದೆಪೊದೆಯಾಗಿ ಮೃಗೀಯವಾಗಿದ್ದ ಮೀಸೆಗಳು, ಮೇಲ್ದುಟಿಯನ್ನು ಮೀಟಿ ಮೇಲೆದ್ದು ಕಾಣುತ್ತಿದ್ದ ಉಬ್ಬಹಲ್ಲು, ಕೆಂಪು ವಸ್ತ್ರವನ್ನು ಸುತ್ತಿಕೊಂಡಿದ್ದ ಕಗ್ಗಲ್ಲಿನಂತಿದ್ದ ಬೋಳುತಲೆ, ಕರಾಳವಾದ ಹುಬ್ಬುಗಳು, ಕರ್ಕಶ ದೃಷ್ಟಿಯ ಮೆಳ್ಳೆಗಣ್ಣುಗಳು. ಚಪ್ಪಟೆಯಾಗಿದ್ದ ಸಿಂಡುಮೂಗು-ಇವುಗಳಲ್ಲಿ ಒಂದೊಂದೂ ಅವನ ಕ್ರೂರತೆ ಭೀಷಣತೆ ನರ್ದಾಕ್ಷಿಣ್ಯಗಳಿಗೆ ಸಾಕ್ಷಿಯಾಗಿದ್ದುವು. ಪುರಾಣಗಳ ಕಾಲವಾಗಿದ್ದರೆ ಅವನನ್ನು ಹಿಡಿಂಬ, ಬಕಾಸುರ, ವಿರಾಧ ಮೊದಲಾದ ರಾಕ್ಷಸರ ಜಾತಿಗೆ ಸೇರಿಸಿ ಬಿಡಬಹುದಾಗಿತ್ತು. ಮತಾಂತರದಿಂದ ಅವನಲ್ಲಿದ್ದ  ರಾಕ್ಷಸೀಭಾವ ಒಂದಿನಿತೂ ಪಳಗಿರಲಿಲಲ. ಕ್ರೈಸ್ತ ಸಮಾಜದ ಅಭಾವದಿಂದ ಅದರ ಸಂಯಮ ನಿಯಮಗಳಿಗೂ ಸಿಕ್ಕದೆ, ಸ್ವಚ್ಛಂದ ಜೀವನದಿಂದ ಇಮ್ಮಡಿ ಕಿರಾತನಾಗಿದ್ದನು. ತೀರ್ಥಹಳ್ಳಿಯಲ್ಲಿ ತನ್ನನ್ನು ಕ್ರೈಸ್ತ ಮತಕ್ಕೆ ಸೇರಿಸಿದ ಪಾದ್ರಿಯನ್ನೇ ಕೊಲ್ಲಲು ಹೋಗಿದ್ದನಂತೆ! ಮತಕ್ಕೆ ಸೇರಿದರೆ ಹಣ ಕೊಡುತ್ತೇನೆಂದು ಸುಳ್ಳಾಡಿ ಮೋಸಮಾಡಿದುದಕ್ಕಾಗಿ! ಹೆಚ್ಚಾಗಿ ಬ್ರಾಂದಿ ಕುಡಿಯಲು ಹಣ ದೊರಕುತ್ತದೆ ಎಂದೇ ಅವನು ಕ್ರೈಸ್ತಮತಕ್ಕೆ ಸೇರಿದ್ದನಂತೆ! ಆಮೇಲೆ ಪಾದ್ರಿಯಿಂದ ದುಡ್ಡು ಸಿಕ್ಕದಿರಲು, ಸೀತೆಮನೆಯಲ್ಲಿ ಕೆಲವು ವರ್ಷಗಳಿಂದ ಸೇರಿಕೊಂಡಿದ್ದನು. ಸಿಂಗಪ್ಪಗೌಡರೂ ತಮ್ಮ ಬಲಕ್ಕೆ ಅಂಥವನೊಬ್ಬನು ಇರಬೇಕೆಂದು ಅವನಿಗೆ ಅನ್ನ ಹಾಕಿ ಇಟ್ಟುಕೊಂಡಿದ್ದರು.

ಎರಡು ಮೂರು ನಾಯಿಗಳು ಒಂದೆಡೆ ನೆಲದ ಮೇಲೆ ದಟ್ಟವಾಗಿ ಬಿದ್ದಿದ್ದ. ತರಗೆಲೆಗಳಲಲ್ಲಿ ಏನನ್ನೋ ನೆಕ್ಕುತ್ತಿದ್ದುದನ್ನು ಕಂಡ ಸೋಮನು ಅಲ್ಲಿಗೆ ಹೋಗಿ ನೋಡಿ ” ಅಯ್ಯಯ್ಯ ಯ್ಯೋ! ಏನು ರಯ್ತ ಕೋಡಿಹೋಯಿತ್ತು ಕಾಣಿ!… ಪುಟ್ಟೇಗೌಡ್ರೇ, ಹಂದಿ ಹೊಡ್ಡಿಲ್ಲಂಬ್ರಲ್ಲಾ, ಇಲ್ಲಿ ಬಂದು ಕಾಣಿ” ಎಂದು ಕಳ್ಳರನ್ನು ಪತ್ತೆ ಮಾಡಿದ ಸಂಭ್ರಮದಿಂದ ಕೂಗಿದನು.

ಪುಟ್ಟಣ್ಣ, ರಂಗಪ್ಪಸೆಟ್ಟರು, ತಿಮ್ಮ,ಬೈರ ಎಲ್ಲರೂ ನೋಡಿದರು. ಕೃಷ್ಣಪ್ಪನ ಕಡೆಯವರು ಮಾತ್ರ ಒಬ್ಬರೂ ನಿಂತಲ್ಲಿಂದ ಅಲುಗಾಡದೆ ತಮ್ಮ ತಮ್ಮಲ್ಲಿಯೆ ಒಬ್ಬರ ಕಣ್ಣನ್ನೊಬ್ಬರು ನೋಡಿಕೊಂಡರು.

“ಕೃಷ್ಣಪ್ಪಗೌಡರೇ, ಇಲ್ಲಿ ಬನ್ನಿ” ಕರೆದನು ಪುಟ್ಟಣ್ಣ.

ಕೃಷ್ಣಪ್ಪ ಸ್ವಲ್ಪವೂ ಚಲಿಸದೆ “ಯಾಕೆ?” ಎಂದನು, ಅವನ ಧ್ವನಿಯಲ್ಲಿ ಪ್ರತಿಭಟನೆಯಿತ್ತು.

ಸೇರೆಗಾರರಿಗೆ ರೇಗಿ “ಯಾಕೆ ಅಂದ್ರೆ? ಇಲ್ಲಿ ಬಂದು ಕಾಣಿ! ಹಂದಿ ಹೊಡ್ದಿಲ್ಲ ಅಂತಾ ಸುಳ್ಳು ಹೇಳಿದರಾಯ್ತೇನು? ರಕ್ತ ಕೋಡಿ ಹರಿದಿತ್ತು. ಹಂದಿ ಬಿದ್ದಿತ್ತು. ಒದ್ದುಕೊಂಡಿತ್ತು. ಕಾಣ್ತದೆ!” ಎಂದರು.

ಹಂದಿಮೇಲೆ ಕಂಬಳಿ ಹಾಸಿಕೊಂಡು ಕೂತಿದ್ದ ಜಾಕಿಗೆ ಆವೇಶವೇರುತ್ತಿತ್ತು. ಆದರೆ ತಾನು ಕುಳಿತ ಜಾಗದಿಂದ ಎದ್ದರೆ ನಾಯಿಗಳು ಗುಟ್ಟನ್ನು ಬಯಲು ಮಾಡುತ್ತವೆ ಎಂಬ ಹೆದರಿಕೆಯಿಂದ ಅಲ್ಲಿಂದಲೇ ” ಏನ್ರೀ, ನೀವು ಹೇಳೋದು? ಮಾನ ಮರ್ಯಾದೆ ಬಿಟ್ಟು ಮಾತಾಡ್ತೀರಿ! ನಿಮ್ಮ ಹಂದಿ ಹೆಣ ನಮಗ್ಯಾತಕ್ಕೆ? ಹೆಚ್ಚಿಗೆ ಮಾ…..” ಕುಳಿತಿದ್ದ ಜಾಕಿ ದಡಕ್ಕನೆ ಬೆಚ್ಚಿ ಬಿದ್ದೆದ್ದು ದೂರ ಹಾರಿ ಚಿಮ್ಮಿ ನಿಂತನು. ಹಠಾತ್ತಾಗಿ ಅವನ ಕಂಬಳಿಯ ಪೀಠ ಚಲಿಸಿತ್ತು. ಅದರಡಿಯಲ್ಲಿದ್ದ ಸೊಪ್ಪುಗೊಂಬೆಗಳಲ್ಲಿ ಸದ್ದಾಯಿತು. ಕಂಬಳಿ ಉಸಿರೆಳೆದುಕೊಳ್ಳುವಂತೆ ಡೊಳ್ಳಾಗಿ ಮೇಲೆದ್ದು ಮುಂಬರಿಯಿತು! ನಾಯಿಗಳೆಲ್ಲ ಕ್ಷಣಾರ್ಧದಲ್ಲಿ ಅಲ್ಲಿಗೆ ನುಗ್ಗಿದುವು. ಕಂಬಳಿ ಕೆಳಗುರುಳಿತು. ಸೊಪ್ಪು ತೊಲಗಿಯತು. ಗಾಯದ ಹಂದಿ ಹೊರಳಾಡುವುದು ಕಾಣಿಸಿಕೊಂಡಿತು. ರೋಷದಿಂದಿದ್ದ ಟೈಗರಂತೂ ಅದರ ಕುತ್ತಿಗೆಗೆಗ ಬಲವಾಗಿ ಕಚ್ಚಿ ಅಲುಬುತ್ತಿತ್ತು. ಜಾಕಿ ಭಯದಿಂದ ದೂರ ಓಡಿದುದನ್ನು ಕಂಡೊಡನೆ ಪುಟ್ಟಣ್ಣನಿಗೆ ಗುಟ್ಟು ತಿಳಿದು ಬಂದೂಕನ್ನು ಗುರಿ ಮಾಡಿದ್ದನು. ಆದರೆ ಹಂದಿ ಓಡಿಹೋಗುವಂತಿರಲಿಲ್ಲವಾದ್ದರಿಂದ ಬಂದೂಕನ್ನು ಕೆಳಗಿಟ್ಟು, ಜೇಬಿನಲ್ಲಿದ್ದ ದೊಡ್ಡ ಚೂರಿಯನ್ನು ತುಡುಕಿ ಹಿಡಿದು, ನಾಯಿಗಳ ನಡುವೆ ನುಗ್ಗಿ, ಹಂದಿಯ ಕುತ್ತಿಗೆಗೆ ತಿವಿದನು. ಬಿಸಿ ರಕ್ತದ ಬುಗ್ಗೆ ಚಲಕ್ಕನೆ ಹಾರಿ ಅವನ ಕೈ ಕೆಂಪಾಯಿತು!

ಕೃಷ್ಣಪ್ಪನ ಮೈಯೊದರಿಕೊಣಡು ತುಸು ಹೊತ್ತುನಲ್ಲಿ ನಿಶ್ಚಲವಾಯಿತು. ಪುಟ್ಟಣ್ಣ ರಕ್ತಮಯವಾಗಿದ್ದ ಚೂರಿಯನ್ನು ನೆಲದ ಮೇಲೆಸೆದು, ದೂರ ನಿಂತು, ನಿಡುಸುಯ್ಯತ್ತಿದ್ದನು. ನಾಯಿಗಳು ಮಾತ್ರ ಇನ್ನೂ ಪ್ರಾಣಿಯ ಮೇಲಿದ್ದ ತಮ್ಮ ರೋಷವನ್ನೆಲ್ಲ ತೀರಿಸಿಕೊಳ್ಳುವುದರಲ್ಲಿ ಮಗ್ನವಾಗಿದ್ದವು. ದೂರ ಓಡಿ ಹೋಗಿದ್ದ ಜಾಕಿ, ಹಂದಿಯ ಮೇಲಿದ್ದ ತನ್ನ ಹಕ್ಕನ್ನು ಮತ್ತೆ ಸ್ಥಾಪಿಸಿಲೋಸುಗ ರಭಸದಿಂದ ನುಗ್ಗಿಬಂದು, ನಾಯಿಗಳನ್ನು ದೊಣ್ಣೆಯಿಣದ ಚೆದರಿಸಿ, ಪಕ್ಕದಲ್ಲಿ ನಿಂತನು.

ಸೇರೆಗಾರರು “ಏ,ನಾಯಿ ಯಾಕೆ ಅಟ್ತೀಯೋ?” ಎಂದು ಕೂಗಿದರು.

ಜಾಕಿ “ಏನ್ರೀ! ಏ, ಗೀ” ಅಂತೀರಿ! ನಿಮ್ಮ ಹೆಂಡ್ತೀಗೆ ಹೇಳಿ “ಏ” ಅಂತಾ.. “ಎಂದವನೇ ತನ್ನ ಕಡೆಯವರನ್ನು ಕುರಿತು” ಬನ್ರೋ ಇಲ್ಲಿ. ಹಂದಿ ಕಾಲ್ಕಟ್ಟಿ ಹೊರಿ “ಎಂದು ಭೀಷಣ ಧ್ವನಿಯಿಂದ ಅಪ್ಪಣೆ ಮಾಡಿದನು. ಸೇರೆಗಾರರೂ ತಮ್ಮವರಿಗೆ ಹಾಗೆಯೇ ಅಪ್ಪಣೆ ಮಾಡಿದರು.

“ಮೈಮೇಲೆ ಬಂದ್ರೆ ಹೆಣಾ ಉರುಳಿಸಿಬಿಡ್ರೀನಿ” ಎಂದು ಜಾಕಿ ದೊಣ್ಣೆಯನ್ನು ಭದ್ರಮುಷ್ಟಿಯಿಂದ ಹಿಡಿದು ನಿಂತನು.

ಅನಾಹುತವಾಗುತ್ತದೆ ಎಂದು ಅಳುಕಿ, ಕೃಷ್ಣಪ್ಪ ” ಜಾಕೀ, ಜಾಕೀ, ಇಲ್ಲಿ ಬಾರೋ” ಎಂದು ಕರೆದನು.

ಜಾಕಿ “ಬಿಡಿ ಸ್ವಾಮಿ, ಹಂದಿ ಹೋಗ್ಬೇಕು. ಇಲ್ದದ್ರೆ ನನ್ನ ಹೆಣ ಹೋಗಬೇಕು” ಎಂದವನು ಕೃಷ್ಣಪ್ಪನ ಕಡೆಗೆ ತಿರುಗಿ ಕೂಡ ನೋಡಲಿಲ್ಲ. ಟೈಗರು ದೂರ ನಿಂತು ಜಾಕಿಯನ್ನು ರೋಷದೃಷ್ಟಿಯಿಂದ ನೋಡುತ್ತಿತ್ತು. ಸೇರೆಗಾರರೇನೋ ಅಪ್ಪಣೆ ಮಾಡಿದರು. ಆದರೆ ಜಾಕಿಯ ದೊಣ್ಣೆಗೆ ಹೆದರಿ ಯಾರೂ ಮುಂದುವರಿಯಲಿಲ್ಲ.

ಬಾಡುಗಳ್ಳ ಡೊಳ್ಳು ಹೊಟ್ಟೆಯ ಸೋಮನು ಮಾತ್ರ ಮುಂದೆ ಸಾಗಿದನು. ಅವನು ಮುಂದುವರಿದುದು ಮಾಂಸಲೋಭದಿಂದಲೇ ಹೊರತು ಧೈರ್ಯದಿಂದಲೂ ಅಲ್ಲ, ಶಕ್ತಿಯಿಂದಲೂ ಅಲ್ಲ, ಅವೆರಡರಲ್ಲಿ ಅಲ್ಲಿದ್ದವರೆಲ್ಲರೂ ಅವನಿಗಿಂತ ಮೇಲಾಗಿದ್ದರು.

ಬರುತ್ತಿದ್ದ ಸೋಮನನ್ನು ಕಂಡು ಜಾಕಿ “ಬೇಡ, ದೂರ ಹೋಗು!” ಎಂದು ಗರ್ಜಿಸಿದನು.

ಸೋಮನು ಲಕ್ಷಿಸಲಿಲ್ಲ. ಅವನ ಮನಸ್ಸಿನಲ್ಲಿ ಜಾಕಿ ಹೆದರಿಸುತ್ತಾನೆಯೆ ಹೊರತು ಇಷ್ಟು ಜನರ ಮಧ್ಯೆ ನಿಜವಾಗಿಯೂ ತನ್ನನ್ನು ಹೊಡೆಯುವದಿಲ್ಲ ಎಂದು ಊಹಿಸಿದ್ದನು.

ಆದರೆ ಊಹೆ ತಪ್ಪಾಯಿತು. ಜಾಕಿ ದೊಣ್ಣೆಯನ್ನು ಬಲವಾಗಿ ಬೀಸಿದನು. ಸೋಮನು ಮೈಗೆ ಬೀಳುವ ಪೆಟ್ಟನ್ನು ನಿವಾರಿಸಲು ಕೈ ಎತ್ತಿದನು. ಪೆಟ್ಟು ಎಡಗೈಗೆ ತಗುಲಿ “ಅಯ್ಯೋ, ಸತ್ತೇ!” ಎಂದು ಅರಚಿಕೊಂಡು ಕುಸಿದುಬಿದ್ದನು.

ಸೆರೆಗಾರರು ಕ್ರೋಧದಿಂದಲೂ ಭಯದಿಂದಲೂ ಗಟ್ಟಿಯಾಗಿ “ಹಿಡಿ! ಟೈಗರ್! ಹಿಡಿ!” ಎಂದು ಕೂಗಿದನು.

ಸೋಮನು ಬಿದ್ದೊಡನೆಯೆ ಪುಟ್ಟಣ್ಣ ಕೃಷ್ಣಪ್ಪ ಎಲ್ಲರೂ “ಜಾಕೀ! ಜಾಕೀ!” ಎಂದು ಗದರಿಸುತ್ತ ಅವನಿದ್ದಲ್ಲಿಗೆ ಬರುತ್ತಿದ್ದರು.

ಸೇರೆಗಾರರು “ಹಿಡಿ! ಟೈಗರ್! ಹಿಡಿ!” ಎಂದು ಕೂಗಿದೊಡನೆಯೆ, ಮೊದಲಿನಿಂದಲೂ ಜಾಕಿಯ ಮೇಲೆ ರೋಷವಿಟ್ಟಿದ್ದ ಆ ದೊಡ್ಡ ಜಾತಿಯನಾಯಿ ಬಾಣದಂತೆ ಚಿಮ್ಮಿ ಜಾಕಿಯ ಮೇಲೆ ನುಗ್ಗಿತು. ಅವನು ಸ್ವಲ್ಪ ಹಿಂದಕ್ಕೆ ಹಾರಿನಿಂತು. ದೊಣ್ಣೆಯನ್ನು ಬಲವಾಗಿ ಬೀಸಿ, ಅದರ ತಲೆಗೆ ಹೊಡೆದನು. ನಾಯಿ ಕೂಗಿಕೊಳ್ಳುತ್ತ ಕೆಳಗೆ ಬಿತ್ತು.

“ಕೊಂದ್ಯೇನೋ ನಾಯೀನಾ!” ಎಂದು ಪುಟ್ಟಣ್ಣ ದುಃಖೋದ್ವೇಗದ ಧ್ವನಿಯಿಂದ ಕೂಗಿ, ಓಡಿ, ಕೆಳಗೆ ಬಿದ್ದಿದ್ದ ನಾಯಿಯ ಬಳಿ ಕುಳಿತು ಬಾಗಿದನು.

ಕೃಷ್ಣಪ್ಪ “ನಿನಗೇನು ಪಿತ್ತ ಕೆದರಿದೆಯೇನೋ?” ಎಂದು ಗದರಿಸುತ್ತ ಜಾಕಿಯ ಕೈಯಿಂದ ದೊಣ್ಣೆ ಕಸುಕೊಂಡನು.

ಟೈಗರ್ ನಿಶ್ಚಲವಾಗಿತ್ತು. ತಲೆಗೆ ಬಿದ್ದ ಪೆಟ್ಟನಿಂದ ಬುರುಡೆ ಬಿರಿದು ಬಿಳಿಯ ರೇಷ್ಮೇಯಂತಿದ್ದ ಅದರ ನುಣ್ಗೂದಲು ನೆತ್ತರಿನಿಂದ ತೊಯ್ದು ಕೆಂಪಾಗಿತ್ತು. ಮೂಗು ಬಾಯಿಗಳಲ್ಲಿಯೂ ರಕ್ತ ಹೊರಟಿತ್ತು. ಜೀವವಿರುವ ಸೂಚನೆ ಒಂದಿನಿತೂ ಇರಲಿ‌ಲ್ಲ. ತೆರೆದ ಗಾಜುಗಣ್ಣುಗಳು ಪುಟ್ಟಣ್ಣನ ಕರುಳಿನಲ್ಲಿ ಉರಿ ಹೊತ್ತಿಸುತ್ತಿದ್ದುವು. ಅವನು ಅದರ ಮೈ ಸವರಿದನು. “ತೋಪಿ” ಯಿಂದ ಗಾಳಿ ಬೀಸಿದನು. “ಟೈಗರ್! ಟೈಗರ್!” ಎಂದು ಕರೆದನು “ಬೈರಾ! ಬೈರಾ!” ನೀರು ತಗೊಂಡುಬಾರೋ” ಎಂದು ಅಳುದನಿಯಿಂದ ಹೇಳಿದನು. ಬೈರ ಓಡಿದನು.

ಸೇರೆಗಾರರೂ ಕೃಷ್ಣಪ್ಪನೂ ಸೋಮನನ್ನು ಎತ್ತಿ ಕೂರಿಸಿ, ಅವನ ಕೈಗೆ ಬಟ್ಟೆ ಸುತ್ತುತ್ತಿದ್ದರು. ಉಳಿದವರಲ್ಲಿ ಕೆಲವರು ಪುಟ್ಟಣ್ಣನ ಸುತ್ತಲೂ, ಮತ್ತೆ ಕೆಲವರು ಸೋಮನ ಸುತ್ತಲೂ, ಗುಂಪುಕಟ್ಟಿಕೊಂಡು ಮೌನವಾಗಿದ್ದರು. ಜಾಕಿ ಮಾತಾಡದೆ ದೂರ ಹೋಗಿ ನಿಂತಿದ್ದನು. ಅವನಲ್ಲಿ ಸ್ವಲ್ಪ ವಿವೇಕೋದಯವಾದಂತಿತ್ತು. ರೋಷಾವೇಶಗಳಿಗೆ ಬದಲಾಗಿ ಅವಮಾನ ಪಶ್ಚಾತ್ತಾಪಗಳು ಮೊಳೆದೋರಿದ್ದುವು. ಹೆಡೆಬಿಚ್ಚಿದ್ದ ಅವನ ಮೃಗೀಯ ಧೈರ್ಯ ಹೆಡೆಮುಚ್ಚಿ ಅಧೀರವಾಗಿತ್ತು.

ಧೈರ್ಯಗಳಲ್ಲಿ ಎರಡು ವಿಧಗಳಿವೆ. ಒಂದನೆಯದು ಮೃಗೀಯ ಮತ್ತು ತಾಮಸ. ಎರಡನೆಯದು ದೈವಿಕ ಮತ್ತು ಸಾತ್ವಿಕ. ತಾಮಸ ಧೈರ್ಯ ರಾಗಮೂಲವಾದುದು. ಕ್ಷಣಿಕ ಉದ್ರೇಕಗಳಿಂದ ಉದ್ದಿಪನವಾದುದು, ಅವಿವೇಕವಾದುದು. ಸಾತ್ವೀಕ ಧೈರ್ಯ ನೀತಿಮೂಲವಾದುದು. ಮೊದಲನೆಯದು ಹುಲ್ಲುಬೆಂಕಿಯಂತೆ. ಎರಡನೆಯದು ಕಲ್ಲಿದ್ದಲ ಬೆಂಕಿಯಂತೆ. ಮೃಗೀಯಧೈರ್ಯ ದೇಹಬಲದ ಮೇಲೆ ನಿಂತಿದೆ. ದೈವಿಕಧೈರ್ಯ ಆತ್ಮಬಲದ ಮೇಲೆ ನಿಂತಿದೆ, ಮೃಗೀಯಧೈರ್ಯ ತನಗಿಂತಲೂ ಬಲವತ್ತರವಾದ ಪ್ರತಿಭಟನೆಯಿಂದ ಕುಗ್ಗಿಹೋಗುತ್ತಿದೆ. ಸಾತ್ತ್ವಿಕ ಧೈರ್ಯ ಕಷ್ಟ ಸಂಕಟ, ಪ್ರತಿಭಟನೆಯಿಂದ ಮತ್ತಿನಿತು ಹಿಗ್ಗಿ ಉಜ್ವಲವಾಗುತ್ತದೆ. ಮೊದಲನೆಯದಕ್ಕೆ ಮರಣಭಯವಿದೆ, ಎರಡನೆಯದಕ್ಕೆ ಅದಿಲ್ಲ ಮೊದಲನೆಯದು ಕೇಡಿಯಾಗಿರುವ ಮಾರುವೇಷದ ಹೇಡಿತನ. ಎರಡನೆಯದು ಶಿಲುಬೆಗೇರುವ ಯೇಸುಕ್ರಿಸ್ತನ ಅಪಾರ ಸಾಮರ್ಥ್ಯ, ತಾಮಸಧೈರ್ಯ ಉದ್ರೇಕ ಕೊನೆಗೊಂಡೊಡನೆಯೆ ತಲೆ ಬಾಗುತ್ತದೆ. ಆದ್ದರಿಂದಲೆ ಜಾಕಿ ಮೂಕನಾಯಿಯನ್ನು ಕೊಲೆಗೈದು ತನ್ನವರಿಂದಲೂ ತಿರಸ್ಕೃತನಾಗಿ ದೂರ ನಿಂತಿದ್ದು.

ಬೈರನು ಒಂದು ದೊಡ್ಡ ಎಲೆಯಲ್ಲಿ ಸರುವಿನಿಂದ ನೀರು ತಂದು ಪುಟ್ಟಣ್ಣನ ಹೇಳಿಕೆಯಂರತೆ ನಾಯಿಯ ತಲೆಮೇಲೆ ಸ್ವಲ್ಪನೀರು ಹಾಕಿದನು. ಅದರ ಬಾಯಿಗಷ್ಟು ನೀರು ಹಾಕಬೇಕೆಂದು ಪುಟ್ಟಣ್ಣನು ಪ್ರಯತ್ನಪಟ್ಟನು. ಆದರೆ ಬಾಯಿ ತೆರೆಯಲಿಲ್ಲ. ಅವನಿಗಿದ್ದ ದೂರದಾಸೆಯೂ ಸಿಡಿದೊಡೆದು, ನಾಯಿ ಬದುಕುತ್ತದೆಯೋ ಸಾಯುತ್ತದೆಯೋ ಎಂಬ ಸಂದೇಹ ಜನ್ಯವಾಗಿದ್ದ ಉದ್ವೇಗ ಕೊನೆ ಮುಟ್ಟಿ, ರೋಷ ಹೊಗೆಯಾಡಿತು. ಭೀಷಣನಾದನು.

ಬೇಟೆಗಾರನಿಗೆ ನಾಯಿಗಳೆಂದರೆ ಪ್ರಾಣ. ಅದರಲ್ಲಿಯೂ ಚೆನ್ನಾಗಿ ಷಿಕಾರಿ ಮಾಡುವ ನಾಯಿಗಳನ್ನು ಬಂಧುಮಮತೆಯಿಂದ ಕಾಣುತ್ತಾನೆ. ಅವುಗಳಿಗೂ ತನ್ನಂತೆಯೆ ವ್ಯಕ್ತಿತ್ವವಿದೆ ಎಂಬುವುದರಲ್ಲಿ ಅವನಿಗೆ ಸ್ವಲ್ಪ ಮಾತ್ರವೂ ಸಂದೇಹವಿರುವುದಿಲ್ಲ. ನಾಯಿಗಳಿಗಾಗುವ ಅಪಾಯವೂ ತನ್ನ ಅಂಗಗಳಿಗಾದ ಅಪಾಯದಂತೆ. ಶಿವಾಜಿ ತನಗೆ ಬಲಗೈಯಂತಿದ್ದು ಪ್ರೀತಿಪಾತ್ರನಾಗಿದ್ದ ತಾನಾಜಿಯ ಮರಣವಾರ್ತೆಯನ್ನು ಕೇಳಿದಾಗ ಎಷ್ಟು ಶೋಕಪಟ್ಟನೊ ಅಷ್ಟೇ ಶೋಕವಾಗುತ್ತದೆ, ಬೇಟೆಗಾರನಿಗೆ ತನ್ನ ನಚ್ಚಿನ ನಾಯಿಯ ಸಾವಿನಿಂದ!

ಟೈಗರ್ ಮೃರಪಟ್ಟುದು ನಿಶ್ಚಯವಾದೊಡನೆಯೆ ಪುಟ್ಟಣ್ಣ ರೋಷ ಭೀಷಣನಾಗಿ, ಮುಯ್ಯಿ ತೀರಿಸಿಕೊಳ್ಳುವ ಛಲದಿಂದ ಮೇಲೆದ್ದನು. ಹನಿ ತುಂಬಿದ್ದ ಅವನ ನೇತ್ರಗಳು ವಿಸ್ಫಾರಿತವಾಗಿ ಆರಕ್ತವಾದುವು. ಕ್ರೋಧವೇಗದಿಂದ ತುಟಿಗಳು ಕಂಪಿಸಿದುವು. ಮುಖ ಕರಾಳಕರ್ಕಶವಾಯಿತು. ನರಗಳೂ ಮಾಂಸಖಂಡಗಳೂ ಬಿಗಿದು ದೃಢನಿಶ್ಚಯತೆ ಮುಖದ ರೇಖೆ ರೇಖೆಗಳಲ್ಲಿಯೂ ಪ್ರಸ್ಫುಟವಾಗಿತ್ತು. ಹಂದಿಯ ರಕ್ತದಿಂದ ಮೊದಲೇ ಕೆಂಪಾಗಿದ್ದ ಅವನ ಕೈ ಮೈಗಳು ಅವನ ಸ್ಥಿತಿಯ್ನನ್ನು ದ್ವಿಗುಣಿತ ರೌದ್ರವನ್ನಾಗಿ ಮಾಡಿದುವು. ಅಲ್ಲಿದ್ದವರೆಲ್ಲರೂ ಮುಂದೇನೋ ಅನಾಹುತವಾಗುವುದಿದೆಂದು ಆಶಂಕೆಯಿಂದ ಭೀತರಾದರು.

ಪುಟ್ಟಣ್ಣ ” ಎಲ್ಲಿ ಆ ಸೂಳೇಮಗ?” ಎಂದು ಕೂಗಿ ಹಿಂತಿರುಗಿ ನೋಡಿದನು. ಸಿಟ್ಟಿನಿಂದ ಅವನ ಮೂಗು ಬುಸುಗುಡುತ್ತಿತ್ತು. ನಿಡುಸುಯ್ಲುಗಳಿಂದ ಎದೆ ಉಬ್ಬಿಯುಬ್ಬಿ ಬೀಳುತ್ತಿತ್ತು.

ಸೇರೆಗಾರರು” ಸ್ವಲ್ಪ ತಾಳಿನಿ, ಪುಟ್ಟೇಗೌಡ್ರೆ!” ಬೇಡುವ ದನಿಯಿಂದ ಹೇಳಿದರು.

“ಬಿಡ್ರಿ! ನನಗೆ ಹೆಂಡ್ರಿಲ್ಲ. ಮಕ್ಕಳಿಲ್ಲ…. ಅವನ್ನ ಗುಂಡಿನಲ್ಲಿ ಹೊಡೆದು….. ಗಲ್ಲಾದ್ರೆ ಆಗ್ಲಿ…” ಎಂದು ಪುಟ್ಟಣ್ಣ ಬಂದೂಕು ಬಿಟ್ಟಿದ್ದಲ್ಲಿಗೆ ನುಗ್ಗಿದನು.

“ತಾಳಿನಿ, ಪುಟ್ಟೆಗೌಡ್ರೇ!….. ಎ” ಸ್ವಲ್ಪತಾಳು,ಪುಟ್ಟಣ್ಣ!….” ಬೇಡ, ಬೇಡ, ನಿಮ್ಮ ದಮ್ಮಯ್ಯ….” ” ತಿಮ್ಮಾ, ಕೋವಿ ತಗೊಂಡು ಹೋಗೋ!….” ಎಂದು ಅನೇಕ ಉದ್ವೇಗದ ಭಯದ ವಾಣಿಗಳು ಸುತ್ತಲೂ ಕೇಳಿಸಿದುವು.

ಪುಟ್ಟಣ್ಣ ತಾನು ಇಟ್ಟಿದ್ದಲ್ಲಿ ಬಂದೂಕನ್ನು ಕಾಣದೆ ಇನ್ನಷ್ಟು ಕ್ರೋಧಾಂಧನಾಗಿ ” ಕೋವಿ ಕೊಡ್ತೀರೋ ಇಲ್ಲೋ!” ಎಂದು ಗರ್ಜಿಸಿ ಅಲ್ಲಿದ್ದವರ ಕಡೆ ಕೆಂಗಣ್ಣಾಗಿ ನೋಡಿದನು. ಕೋವಿ ಯಾರ ಬಳಿಯೂ ಇರಲಿಲ್ಲ ಹಳೆ ಪೈಕದ ತಿಮ್ಮ ಅದನ್ನು ತೆಗೆದುಕೊಂಡು ದೂರ ದೂರ ಹೋಗುತ್ತಿದ್ದನು. ಪುಟ್ಟಣ್ಣ” ನಿಲ್ತೀಯೋ ಇಲ್ಲೊ?” ಎಂದು ಹುಚ್ಚು ಹಿಡಿದವನಂತೆ ಆರ್ಭಟಿಸಿ ಅವನ ಕಡೆಗೆ ನುಗ್ಗಿದನು. ತಿಮ್ಮ ಭಯಗ್ರಸ್ತನಾಗಿ ಗೊಂಬೆಯಂತೆ ನಿಂತುಬಿಟ್ಟನು. ನಿಮಿಷಾರ್ಧದಲ್ಲಿಯೆ ಬಂದೂಕು ಪುಟ್ಟಣ್ಣನ ಕೈಲಿತ್ತು.

“ಓಡೋ, ಜಾಕಿ!” …. ಜಾಕಣ್ಣಾ, ಓಡು…” ” ಅಯ್ಯೋ ಅಯ್ಯೋ, ಬ್ಯಾಡ ಬ್ಯಾಡ…ದಮ್ಮಯ್ಯಾ ಬಿಡಿ…” ಎಂದು ಎಲ್ಲರೂ ಆರ್ತನಾದ ಮಾಡತೊಡಗಿದರು. ಜಾಕಿ ಮಾತ್ರ ನಿಂತಲ್ಲಿಂದ ಅಲುಗಾಡಲಿಲ್ಲ. ಪುಟ್ಟಣ್ಣ ಬಂದೂಕನ್ನು ತುಡುಕಿ ಹಿಡಿದು. ಜಾಖಿ ನಿಂತಿದ್ದ ದಿಕ್ಕಿಗೆ ತಿರುಗಿಸಿದೊಡನೆಯೆ ಸೇರೆಗಾರರೂ ಕೃಷ್ಣಪ್ಪನೂ” ಬೇಡ! ಬೇಡ!” ಎಂದು ಕೂಗಿದರು ಅವನನ್ನು ಬಲವಾಗಿ ಮುತ್ತಿದರು.

“ನನ್ನ ಕೊಂದು ಮುಂದೆ ಹೋಗಬೇಕು ನೀವು” ಎಂದು ಸೇರೆಗಾರರು ಕೋವಿಯನ್ನು ಭದ್ರಮುಷ್ಟಿಯಿಂದ ಹಿಡಿದರು. ಅದರ ನಳಿಗೆ ಅವರ ಎದೆಗೆ ತಾಗಿತ್ತು. ಜನಗಳ ಬೊಬ್ಬೆ, ನಾಯಿಗಳ ಕೂಗಿನಿಂದ ಕಾಡೆಲ್ಲ ಕಿವುಡಾಗಿತ್ತು.

ಬಿಡಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿ, ಪುಟ್ಟಣ್ಣ ಮುಷ್ಟಿಯನ್ನು ಸಡಿಲಿಸಿ ಕೋವಿಯನ್ನು ಸೇರೆಗಾರ ಕೈಯಲ್ಲಿಯೆ ಬಿಟ್ಟು. ಮತ್ತೆ ನಾಯಿಯ ಬಳಿ ಹೋಗಿ ಕುಳಿತು. ಬಿಕ್ಕಿ ಬಿಕ್ಕಿ ಅಳತೊಡಗಿದನು. ರೋಷವೆಲ್ಲ ರೋದನವಾಯಿತು. ಜಾಕಿಯ ನೆತ್ತರಿಗೆ ಬದಲಾಗಿ ತನ್ನ ಕಣ್ಣೀರನ್ನೇ ನಾಯಿಯ ಮೇಲೆ ಸುರಿದನು. ಕಾಡೆಲ್ಲ ಮಳೆ ಬಂದು ಬಿಟ್ಟಂತೆ ನೀರವಾಗಿತ್ತು.

ಸ್ವಲ್ಪ ಹೊತ್ತಾದ ಮೇಲೆ ದೈನ್ಯತಾ ಸೂಚಕವಾದ ದುಃಖಧ್ವನಿಯಿಂದ ಪುಟ್ಟಣ್ಣ ” ಬೈರಾ ಇಲ್ಲಿಬಾರೋ” ಎಂದನು. ಬೈರ ಬಳಿಗೆ ಬರಲು ಟೈಗರಿನ ಶವವನ್ನು ನಿರ್ದೇಶಿಸಿ ” ಹೊತ್ತುಕೋ” ಎಂದನು. ಬೈರ ನಾಯಿಯನ್ನೆತ್ತಿ ಬೆನ್ನಿನ ಮೇಲೆ ಹಾಕಿಕೊಂಡು ಹಿಂದೆ ಅನೇಖ ಸಾರಿ ಸತ್ತ ಕರುಗಳನ್ನು ಹಾಗೆಯೆ ಹೊತ್ತಿದ್ದ ಅವನಿಗೆ ಅದೊಂದು ಶ್ರಮವಾಗಿರಲಿಲ್ಲ.

ಪುಟ್ಟಣ್ಣ ಕಣ್ಣೊರೆಸಿಕೊಳ್ಳುತ್ತ ಮೇಲೆದ್ದು, ಸೇರೆಗಾರರ ಬಳಿಗೆ ಬಂದು ಅತ್ಯಂತವಾದ ಶಾಂತ ನಮ್ರವಾಣಿಯಿಂದ ಮೃದುವಾಗಿ” ಕೋವಿ ಕೊಡಿ, ಸೇರೆಗಾರ‍್ರೇ” ಎಂದು ಕೈ ನೀಡಿದನು. ಹಿಂದೆ ರೋಷಮೂರ್ತಿಯಾಗಿದ್ದವನು ಈಗ ದುಃಖ ಮೂರ್ತಿಯಾಗಿದ್ದನು. ಆದರೂ ಸೇರೆಗಾರರಿಗೆ ಕೋವಿಯನ್ನು ನೀಡಲು ಧೈರ್ಯ ಬಾರದೆ” ನಾನೇ ತರುತ್ತೇನೆ” ಎಂದರು.

“ಕೋಡಿ, ಆ ಪಾಪೀನ ನಾನ್ಯಾಕೆ ಕೊಲ್ಲಲಿ. ಬದುಕಿ ಹಾಳಾಗಲಿ” ಎಂದನು. ಸೇರೆಗಾರರು ಬಂದೂಕನ್ನು ಕೈಗೆ ನೀಡಲು ಅದರ ನಳಿಗೆಯನ್ನು ಬಿಚ್ಚಿ ನೋಡಿದನು. ತೋಟಾಗಳಿರಲಿಲ್ಲ.

“ತೋಟಾ ಎಲ್ಲಿ? ಕೊಡಿ”.

“ಇಲ್ಲ. ನಾ ತೆಗೀಲಿಲ್ಲ.”

ತಿಮ್ಮ ಹಿಂದಿನಿಂದ “ನಾನಾಗ್ಲೆ ತೆಗ್ದಿಟ್ಕೊಂಡಿದ್ದೆ! ಹಿಡೀರಿ” ಎಂದು ಎರಡು ಕೆಂಬಣ್ಣದ ತೋಟಾಗಳನ್ನು ನೀಡಿದನು. ಪುಟ್ಟಣ್ಣ ಅವುಗಳನ್ನು ನಳಿಗೆಗೆ ಹಾಕದೆ, ಜೇಬಿಗೆ ಹಾಕಿಕೊಂಡು, ನಾಯಿಯ ಹೆಣವನ್ನು  ಹೊತ್ತು ನಿಂತಿದ್ದ ಬೈರನಿಗೆ ತಲೆಯಾಲ್ಲಡಿಸಿ ಹೊರಡಲು ಸನ್ನೆ ಮಾಡಿ, ಬಂದೂಕನ್ನು ಹೆಗಲ ಮೇಲಿಟ್ಟುಕೊಮಡು ಹೊರಟನು. ನಾಯಿಗಳೆಲ್ಲ ಮೌನವಾಗಿ ಅವನ ಹಿಂದೆ ನಡೆದುವು. ಬೈರನು ಹೆಜ್ಜೆಯಿಟ್ಟಂತೆಲ್ಲ ಅವನ ಬೆನ್ನುಗಡೆ ಜೋಲು ಬಿದ್ದಿದ್ದ ಟೈಗರಿನ ತಲೆ ತೂಗಾಡುತ್ತಿತ್ತು. ಕೆಲವು ನಾಯಿಗಳು  ಆಗಾಗ ಅದರಕಡೆ ಬೆರಗಾಗಿ ನೋಡುತ್ತಿದ್ದುವು. ಟೈಗರೂ ಹಿಂದೆ ಅನೇಕ ಸಾರಿ ಬೈರನು ಹಾಗೆಯೇ ಹೊತ್ತಿದ್ದ ಕಾಡುಪ್ರಾಣಿಗಳ ಹೆಣವನ್ನು ಹಾಗೆಯೇ ನೋಡಿತ್ತು. ಆದರೆ ನೋಟದಲ್ಲಿ ದಿಗ್ವಿಜಯದ ಸೂಚನೆಯಿರುತ್ತಿತ್ತು.

ಅಪರಾಹ್ಣವಾಗಿದ್ದರೂ ಆ ದಟ್ಟವಾದ ಕಾಡಿನಲ್ಲಿ ತಂಪುನೆಳಲು ಅಕ್ಷತವಾಗಿತ್ತು. ಎಲ್ಲಿಯಾದರೂ ಒಂದೊಂದೆಡೆ ಮಾತ್ರ ಬಿಸಿಲು ಚೆಲ್ಲಿದ್ದಿತು. ಸೇರೆಗಾರರೂ ಕೃಷ್ಣಪ್ಪನೂ ಮತ್ತುಳಿದವರೆಲ್ಲರೂ ಮಾತಾಡದೆ ನಿಂತು ನೋಡಿದರು. ಹೆಗಲಮೇಲೆ ಬಂದೂಕು ಹೊತ್ತಿದ್ದ ಪುಟ್ಟಣ್ಣ ಮುಂದೆ, ನಾಯಿಯ ಬಿಳಿಯ ಹೆಣವನ್ನು ಬೈರ ಹಿಂದೆ, ಅವರ ಸುತ್ತಲೂ ಸಣ್ಣ ದೊಡ್ಡ ನಾಯಿಗಳ ಚಲಿಸುತವ ಮಂದೆ! ಅದೊಂದು ಭವ್ಯವಾದ ಶ್ಮಶಾನ ಮೆರವಣಿಗೆಯಂತಿತ್ತು. ಅದೇ ಶೋಕ, ಅದೇ ಮೌನೆ, ಅದೇ ಗಾಭೀರ್ಯ! ಆದರೆ ಮೃತ್ಯಸೂಚಕವಾದ ಶೋಕವಾದ್ಯಗಳಿರಲಿಲ್ಲ. ಅದನ್ನು ನೋಡಿ ಜಾಕಿಯ ಮನಸ್ಸು ಕೂಡ ವಿಕ್ಷುಬ್ದವಾಗಿತ್ತು. ಅವನು ಕಂಡಿದ್ದ ತನ್ನ ಜಾತಿಯವರ ಶ್ಮಶಾನಯಾತ್ರೆ ಅದಕ್ಕಿಂತಲೂ ಹೆಚ್ಚೇನೂ ಶೋಕಪೂರ್ಣವಾಗಿ ಭವ್ಯತರವಾಗಿರಲಿಲ್ಲ.

ತುಸು ಹೊತ್ತಿನಲ್ಲಿ ಪುಟ್ಟಣ್ಣನೂ ಬೈರನೂ ನಾಯಿಗಳೂ ಹಳುವಿನ ಮಧ್ಯೆ ಕಣ್ಮರೆಯಾದರೆ, ಬಾಣಗಳಂತೆ ಹಾರಿಬಂದ ನೂರಾರು ಗಿಳಿಗಳ ಒಂದು ಹಸುರುಹಿಂಡು ಕಾಡಿನ ನೀರವತೆಯನ್ನು ಕ್ಷಣಮಾತ್ರ ಗಾನಮಯವನ್ನಾಗಿ ಮಾಡಿ ಹಾದುಹೋಯಿತು.

ಕೈಗೆ ಬಟ್ಟೆ ಕಟ್ಟಿಕೊಂಡು ಕುಳಿತಿದ್ದ ಸೋಮನು ಹಂಬಲಿಕೆಯಿಂದ ನೋಡುತ್ತಿದ್ದನು. ಸತ್ತ ಹಂದಿಯ ಕಡೆಗೆ!