ಇರುಳು ಚೆನ್ನಾಗಿ ಹೊಯ್ದಿದ್ದ ಮಳೆಯಲ್ಲಿ ತೊಯ್ದು ಒದ್ದೆಯಾಗಿದ್ದ ಹಸುರಾದ ಮಲೆಗಾಡುಗಳ ಮೇಲೆಯೂ ಹಚ್ಚನೆಯ ಗದ್ದೆಬಯಲುಗಳ ಮೇಲೆಯೂ ಬೆಳಗಾಯಿತು. ಹಾಸುಗೆಯಮೇಲೆ ಕುಳಿತು ಕೊಟಡಿಯ ಕಿಟಕಿಯಿಂದ ಹೊರಗೆ ನೋಡುತ್ತಿದ್ದ ಹೂವಯ್ಯನ ಹೃದಯಕ್ಕೆ ಗಿರಿನೆತ್ತಿಯ ದಿಗಂತದೆಡೆ ಹೊಗರೇರುತ್ತಿದ್ದ ಶೀತಲವಾದ ಅರುಣಕಾಂತಿ ಅನಂತಾಕಾಶದ ಪ್ರೇಮದಾಹ್ವಾನದಂತೆ ಮಧುರವಾಗಿ ಶೋಭಿಸಿತು.ಹತ್ತಿರದ ಕಾಡಿನಿಂದ ಕಾಜಾಣದ ವೀಣಾಗಾನ ಮಡಿವಾಳ ಹಕ್ಕಿಯ ಸಿಳ್ಳಿನಾಲಾಪನೆಯೊಡನೆ ಕೇಳಿ ಬರುತ್ತಿತ್ತು. ಮನೆಯ ಸುತ್ತಲೂ ಪೊದೆ ಗಿಡಮರಗಳಲ್ಲಿ ಪಿಕಳಾರ ಹಕ್ಕಿಗಳು ಸ್ವರಮೇಳ ಕೈಕೊಂಡಿದ್ದುವು. ಪ್ರಾತಃಕಾಲದ ಪ್ರಶಾಂತತೆಯಲ್ಲಿ ನಾಯಿಯೊಂದು ತೀಕ್ಷ್ಣವಾಗಿ ಬೊಗಳುತ್ತಿತ್ತು.

ಯಾರೋ ಬಾಗಿಲು ತಟ್ಟಿದರು. ಹೂವಯ್ಯನೆದ್ದು ಬಾಗಿಲು ತೆರೆದನು. ಸುಬ್ಬಮ್ಮ ತವರೂರಿಗೆ ಹೊರಡಲು ಸಿದ್ಧಳಾಗಿ ನಿಂತಿದ್ದವಳು ಒಳಗೆ ಬಂದು ತನ್ನ ಕೈಯಲ್ಲಿದ್ದ ಗಂಟೊಂದನ್ನು ಕೊಟ್ಟು, ಇಟ್ಟುಕೊಂಡಿರುವಂತೆ ಹೇಳಿದಳು.

ಹೂವಯ್ಯ “ಏನದು?” ಎಂದನು.

ಸುಬ್ಬಮ್ಮ ತಾನು ಕಾನೂರಿನಿಂದ ತೆಗೆದುಕೊಂಡು ಬಂದ ತನ್ನೊಡವೆಗಳೆಂದು ಹೇಳಿದಳು.

“ನನ್ನ ಹತ್ತಿರ ಯಾಕೆ?”

ಸುಬ್ಬಮ್ಮ ತನ್ನ ತವರುಮನೆ ಒಡವೆಗಳಿಗೆ ಸುರಕ್ಷಿತವಾದ ಸ್ಥಳವಲ್ಲವೆಂದು ಹೇಳುವ ಬದಲು “ಯಾಕೂ ಇಲ್ಲ. ಇಲ್ಲೇ ಇರಲಿ!” ಎಂದು, ಮುಂದೆ ಹೂವಯ್ಯನಿಗೆ ಮಾತಾಡಲು ಅವಕಾಶಕೊಡದೆ “ನಾ ಹೋಗೆ ಬತ್ತೀನಿ!” ಎಂದಳು. ಅವಳ ಕಣ್ಣಿನಲ್ಲಿ ನೀರಾಡುತ್ತಿತ್ತು. ಕಂಠ ಗದ್ಗದವಾಗುವುದರಲ್ಲಿತ್ತು.

ಹೂವಯ್ಯನ ಹೃದಯದಲ್ಲಿಯೂ ಸ್ವಲ್ಪ ಉದ್ವೇಗ ಸಂಚಾರವಾದಂತಾಗಿ “ಹ್ಞು ಆಗಲಿ; ಹೋಗಿ ಬನ್ನಿ.” ಎಂದು ಆಭರಣದ ಗಂಟನ್ನು ಪೆಟ್ಟಿಗೆಯಲ್ಲಿಡಲೆಂದು ಸರಿದನು.

ಸುಬ್ಬಮ್ಮ ಬಿರುಬಿರನೆ ಹೊರಗೆ ನಡೆದು ತನ್ನ ತಾಯಿಯೊಡಗೂಡಿ ನೆಲ್ಲುಹಳ್ಳಿಯ ಕಡೆಗೆ ಹೊರಟಳು. ಆಕೆಯಲ್ಲಿ ಸ್ವಾತಂತ್ರ್ಯ ಧೈರ್ಯ ಸಾಹಸಗಳು ಹೊಸದಾಗಿ ಹೊಮ್ಮುತ್ತಿರುವಂತೆ ತೋರಿತು ಹೂವಯ್ಯನಿಗೆ.

ಅವನಿಗೆ ಆಕೆಯಲ್ಲಿ ತೋರಿದ ಮತ್ತೊಂದು ವಿಶೇಷವೆಂದರೆ-ಆಕೆಯ ಸೌಂದರ‍್ಯ! ಆಕೆಯ ಮೈಕಟ್ಟು ಮೊದಲಿದ್ದಂತೆಯೆ ಬಲಶಾಲಿಯಾಗಿತ್ತು. ಆದರೆ ಮುಖದಲ್ಲಿ ಮೊದಲು ಇರದಿದ್ದ ಒಂದು ಚೆಲುವು ವಿಕಸಿತವಾಗಿದ್ದಂತೆ ತೋರಿತು. ಹಾಸಗೆಯಮೇಲೆ ಕುಳಿತು ಯೋಚಿಸುತ್ತಿದ್ದ ಹೂವಯ್ಯ ತನ್ನ ಮನಸ್ಸಿನಲ್ಲಿ ಸುಳಿದ ಒಂದು ಅಶ್ಲೀಲ ಭಾವನೆಗಾಗಿ ಬಹಳ ನಾಚಿಗೆಪಟ್ಟುಕೊಂಡು “ಇಸ್ಸಿ! ಏನು ಮನಸ್ಸು!” ಎಂದು ಬಾಯಲ್ಲಿ ಹೇಳುತ್ತ ಸರಕ್ಕನೆ ಮೇಲೆದ್ದು ಹಾಸಗೆಯನ್ನು ಸುತ್ತಿಟ್ಟು ಬಚ್ಚಲಿಗೆ ಹೋದನು.

ಅಂತಹ ಅಶ್ಲೀಲವಾದ ಆಲೋಚನೆ ಅದೇ ಮೊದಲನೆಯದಾಗಿರಲಿಲ್ಲ. ಅನೇಕ ಸಾರಿ ಆಗಾಗ್ಗೆ ಉದಾತ್ತ ಆಲೋಚನೆಗಳ ಮಧ್ಯೆ ದುರ್ಭಾವನೆಗಳೂ ನುಸುಳಿ ಬರುತ್ತಿದ್ದುವು. ಹೂವಯ್ಯ ಧ್ಯಾನದ ನಡುವೆ ತಟಕ್ಕನೆ ಎಚ್ಚತ್ತುಕೊಂಡು, ಅವುಗಳನ್ನು ಕಳ್ಳರನ್ನು ಹಿಡಿಯುವಂತೆ ಹಿಡಿದು ಹೊರಗೆ ದಬ್ಬುತ್ತಿದ್ದನು. ಆದರೆ ಈ ಸಾರಿಯ ಅಶ್ಲೀಲ ಭಾವನೆ ಹೊರಗೆ ದಬ್ಬಿದಂತೆಲ್ಲ ಮತ್ತೆ ಮತ್ತೆ ಒಳಗೆ ನುಗ್ಗುತ್ತಿದ್ದಿತು. ಹೊರನೂಕಲು ಹೆಚ್ಚಾಗಿ ಪ್ರಯತ್ನಪಟ್ಟಷ್ಟೂ ಹೆಚ್ಚಾಗಿ ಒಳಗೆ ನುಗ್ಗಿ ಹೂವಯ್ಯನನ್ನು ಅಣಕಿಸತೊಡಸಗಿತು. ’ನುಗ್ಗಿದರೆ ನುಗ್ಗು’ ಎಂದು ಉದಾಸೀನನಾದ ಮೇಲೆಯೆ ಅದರಿಂದ ಪಾರಾಗಲು ಸಾಧ್ಯವಾಯಿತು.

ಕಾಫಿ ತಿಂಡಿ ಪೂರೈಸಿಕೊಂಡು, ಮೂಲೆಯಲ್ಲಿ ಕಂಬಳಿ ಹೊದೆದು ಮಲಗಿದ್ದ ಸೋಮನ ಯೋಗಕ್ಷೇಮವನ್ನು ವಿಚಾರಿಸಿ, ಹೂವಯ್ಯ ಪುಟ್ಟಣ್ಣನನ್ನು ಕರೆದು ಗದ್ದೆಗೆ ಹೋಗಲು ಹವಣಿಸುತ್ತಿದ್ದಾಗ ಕಾನೂರಿನ ಬೇಲರ ಕೇರಿಯಿಂದ ಬೈರ ಏದುತ್ತಾ ಓಡಿಬಂದು “ರಾತ್ರಿ ಸೇರೆಗಾರರು ಗಾಡಿನಿಂಗಯ್ಯನ ಮಗ ಪುಟ್ಟಯ್ಯನನ್ನು ಹೊಡಿದು ಕೊಂದುಹಾಕಿದ್ದಾರೆ!” ಎಂಬ ವರ್ತಮಾನವನ್ನು ಗಡಿಬಿಡಿಯಿಂದ ಹೆದರಿ ಬೆದರಿ ತೊದಲು ತೊದಲಾಗಿ, ಹದಿನೈದು ನಿಮಿಷ ಹೇಳಿದನು. ಕೇಳಿದವರಿಗೆ ಎದೆಗೆ ಸಿಡಿಲು ಬಡಿದಂತಾಯಿತು!  

ಸೀತೆಮನೆಗೂ ಮುತ್ತಳ್ಳಿಗೂ ಹೋಗಿ ಸಿಂಗಪ್ಪಗೌಡರಿಗೂ ಚಿನ್ನಯ್ಯನಿಗೂ ವರ್ತಮಾನ ತಿಳಿಸಿ, ಅವರಿಬ್ಬರನ್ನೂ ಜಾಗ್ರತೆಯಾಗಿ ಕರೆದುಕೊಂಡು ಕಾನೂರಿಗೆ ಬರುವಂತೆ ಹೇಳಿ ಬೈರನನ್ನು ಕಳಿಸಿ, ಹೂವಯ್ಯ ಪುಟ್ಟಣ್ಣನೊಡನೆ ಒಡನೆಯೆ ಬಂದೂಕು ಸಮೇತನಾಗಿ ಕಾನೂರಿಗೆ ನಡೆದನು.

ಕಾನೂರಿಗೆ ಹೋಗಿ ವಿಚಾರಿಸಿದಾಗ ಗಂಗೆಯಾಗಲಿ ಸೇರೆಗಾರರಾಗಲಿ ಮೊದಲು ತಲೆತೋರಿಸಲಿಲ್ಲ. ಗಟ್ಟಿಯಾಗಿ ಕರೆಯುತ್ತ ಹುಡುಕತೊಡಗಲು ಏನೂ ಅರಿಯದವರಂತೆ ಒಬ್ಬೊಬ್ಬರು ಒಂದೊಂದು ಕಡೆಯಿಂದ ಬಂದರು. ಪುಟ್ಟನೆಲ್ಲಿ ಎಂದು ಕೇಳಿದಾಗ,ಬೆಳಗ್ಗೆ ಗಂಜಿಯುಂಡುಕೊಂಡು ಏಡಿ ಹಿಡಿಯಲು ಹಳ್ಳಕ್ಕೆ ಹೋದನೆಂದು ಹೇಳಿದರು. ಆಳುಗಳನ್ನು ಅಟ್ಟಿ ಎಷ್ಟು ಹುಡುಕಿಸಿದರೂ ಸಿಕ್ಕಲಿಲ್ಲ. ಎಷ್ಟು ಕರೆದರೂ ಓಕೊಳ್ಳಲಿಲ್ಲ. ಕಡೆಗೆ ಪುಟ್ಟಣ್ಣನೂ ಹೂವಯ್ಯನೂ ಸೇರಿ ಮನೆಯನ್ನೆಲ್ಲ ಹುಡುಕಿದರು ಪ್ರಯೋಜನವಾಗಲಿಲ್ಲ.

ಹೂವಯ್ಯ ಬೆಂಕಿಬೆಂಕಿಯಾಗಿ ಸೇರೆಗಾರರನ್ನು ಕುರಿತು “ಒಳ್ಳೆಯ ಮಾತಿಗೆ ಹೇಳುತ್ತೀರೊ? ಅಥವಾ ತೀರ್ಥಹಳ್ಳಿಯಿಂದ ಪೋಲೀಸು ಕರೆಸಬೇಕೊ?” ಎಂದು ಗದರಿಸಿದನು.

ಸೇರೆಗಾರರು ಕೊರಮಬುದ್ಧಿಯಿಂದ “ಬೇಕಾದರೆ ಕರೆಸಬೇಕಪ್ಪಾ! ನನಗೆ ಗೊತ್ತಾಗುವುದಾದರೂ ಹ್ಯಾಂಗೆ?” ಎಂದು ಮಲೆತು ಮಾತಾಡಿದರು.

ಗಂಗೆಯನ್ನೂ ಹತ್ತಿರಕ್ಕೆ ಕರೆದು ಕೇಳಿದನು. ಅವಳು ನಡುಕು ತುಟಿಯಿಂದ ಅಸಂಬದ್ಧವಾಗಿ ಮಾತಾಡಿದಳು.

ಸ್ವಲ್ಪ ಜೋರು ಮಾಡಿದರೆ ಸತ್ಯ ಹೊರಬೀಳುತ್ತದೆಂದು ತಿಳಿದು ಒಂದು ಬೆತ್ತವನ್ನು ತೆಗೆದುಕೊಂಡು “ಹೇಳುತ್ತೀಯೊ ಇಲ್ಲವೋ?” ಎಂದು ಒಂದು ಬಿಗಿತ ಬಿಗಿದನು.

ಸೇರೆಗಾರರು “ಏನ್ರೀ ನೀವು ಕಂಡವರ ಹೆಂಡರನ್ನು ಹೊಡಿಯುವುದು?” ಎನ್ನುತ್ತಾ ಮೇಲ್ವಾಯುತ್ತಿರಲು, ಅವರ ಹಲ್ಲುಬ್ಬು ಮೋರೆಗೆ ಒಂದು ಬಲವಾದ ಪೆಟ್ಟುಕೊಟ್ಟನು.

ಅಷ್ಟರಲ್ಲಿಯೆ ಪುಟ್ಟಣ್ಣ ಅವರನ್ನು ಹಿಡಿದು ದೂರಕ್ಕೆ ದಬ್ಬಿದನು. ಗಂಗೆ ಮತ್ತೊಂದು ಬಿಗಿತ ಬೀಳಬೇಕಾದರೆ ಮೊದಲು ಎಲ್ಲವನ್ನೂ ಒದರಿಬಿಟ್ಟಳು.

“ಸೇರೆಗಾರರು ಪುಟ್ಟನನ್ನು ಹೊಡಿದು ಆ ಕೋಣೆಗೆ ಹಾಕಿ ಬೀಗಹಾಕಿದ್ದಾರೆ!”

ಸೇರೆಗಾರರಿಂದ ಬಲಾತ್ಕಾರವಾಗಿ ಕೋಣೆಯ ಬೀಗವನ್ನು ಕಸಿದುಕೊಂಡು ಬೀಗ ತೆಗೆದು, ಕಂಬಳಿಯಲ್ಲಿ ಸುತ್ತಿದ್ದ ಪುಟ್ಟನ ಕಳೇಬರವನ್ನು ಬಯಲಿಗೆ ತಂದರು.

ಆದರೆ ಪುಟ್ಟನಿಗೆ ಪ್ರಾಣಹೋಗಿರಲಿಲ್ಲ!

ಪೆಟ್ಟು ಬಿದ್ದು ಮೂರ್ಛೆಹೋಗಿದ್ದ ಅವನನ್ನು ಸೇರೆಗಾರರು ಆ ಇರುಳಿನಲ್ಲಿ ಗಡಿಬಿಡಿಯಲ್ಲಿ ಕುಡಿದು ತಲೆಗೇರಿದ್ದ ಮತ್ತಿನಲ್ಲಿ ಸತ್ತನೆಂದೇ ಭಾವಿಸಿ, ತರುವಾಯ ಗೋಪ್ಯವಾಗಿ ಹೂಳಲೆಂದು ಕಂಬಳಿಯಲ್ಲಿ ಸುತ್ತಿ ಕೋಣೆಗೆ ಹಾಕಿದರು. ರಾತ್ರಿ ಕಾನೂರಿನ ಒಡ್ಡಿಯಿಂದ ಕೋಳಿಗಳನ್ನು ಕದಿಯಲು ಬಂದಿದ್ದ ಬೇಲರ ಬೈರ ಹೊರಗೆ ನಿಂತು ಕಿಟಕಿಯಲ್ಲಿ ಎಲ್ಲವನ್ನೂ ನೋಡಿ ಪುಟ್ಟ ಸತ್ತನೆಂದೇ ಭಾವಿಸಿ, ವರದಿ ಹೇಳಿದ್ದನು.

ಗೊತ್ತಿದ್ದ ಮಟ್ಟಿಗೆ ಚಿಕಿತ್ಸೆ ಮಾಡಿದಮೇಲೆ ಪುಟ್ಟ ಸ್ವಲ್ಪಚೇತರಿಸಿಕೊಂಡನು. ಆದರೂ ಡೊಳ್ಳುಹೊಟ್ಟೆಯ ಬಡಕಲು ದೇಹದ ಆ ಹುಡುಗ ಮಾತಾಡಲಾರದೆ ಕಣ್ಣುಗಳನ್ನು ಮಿಳ್ಮಿಳನೆ ಬಿಡುತ್ತಿದ್ದನು. ಕಣ್ಣುಗಳಿಂದ ನೀರು ಧಾರೆಧಾರೆಯಾಗಿ ಸುರಿಯುತ್ತಿದ್ದುದರಿಂದ ಮಾತ್ರ ಅವನ ಒಡಲಬೇನೆ ಪ್ರಕಾಶವಾಗುತ್ತಿತ್ತು.

ಸುಮಾರು ಒಂದೂವರೆ ಎರಡು ಗಂಟೆಯ ತರುವಾಯ ಸಿಂಗಪ್ಪಗೌಡರೂ ಚಿನ್ನಯ್ಯನೂ ಗಾಬರಿಯಿಂದ ಏದುತ್ತ ಬೈರನೊಡನೆ ಬಂದರು. ಪುಟ್ಟನಿಗೆ ಪ್ರಾಣಹೋಗದಿದ್ದುದನ್ನು ಕಂಡಮೇಲೆಯೆ ಅವರ ದಿಗಿಲು ಒಂದಿನಿತು ಕಡಮೆಯಾದುದು.

ಚಿನ್ನಯ್ಯ “ಪುಟ್ಟನ ಪ್ರಾಣವೆಲ್ಲಿಯಾದರೂ ಹೋಗಿಬಿಟ್ಟರೆ ಖೂನಿಮಾಡಿದ ಅಪರಾಧಕ್ಕೆ ನಾವೆಲ್ಲರೂ ಹೊಣೆಯಾಗಿ ದಣಿಯಬೇಕಾಗುತ್ತದೆ. ಆದ್ದರಿಂದ ಮೊದಲೆ  ಪೋಲೀಸಿಗೆ ತಿಳಿಸಿ ಹೇಳಿಕೆ ತೆಗೆದುಕೊಡುಬಿಟ್ಟರೆ ಲೇಸು” ಎಂದು ಸೂಚಿಸಿದನು.

ಗಂಗೆ ಸೇರೆಗಾರರಿಬ್ಬರೂ ’ಪೋಲೀಸು’, ’ಹೇಳಿಕೆ’ ಮೊದಲಾದ ಮಾತುಗಳನ್ನು ಕೇಳಿದೊಡನೆಯೆ ಕಣ್ಣೀರು ಕರೆಯುತ್ತ ಸಿಂಗಪ್ಪಗೌಡರ, ಚಿನ್ನಯ್ಯನ ಮತ್ತು ಹೂವಯ್ಯನ ಕಾಲುಗಳ ಮೇಲೆ ಬಿದ್ದುಬಿದ್ದು “ತಮ್ಮಿಂದ ಅಪರಾಧವಾಯಿತು. ಕುಡಿದಾಗ ತಲೆ ನೆಟ್ಟಗಿರಲಿಲ್ಲ” ಎಂದು ಮೊದಲಾಗಿ ಸಬೂಬು ತಂದೊಡ್ಡಿ, ’ಪೋಲೀಸರ ಕೈಗೆ ಕೊಡಿವುದು ಬೇಡ’ ಎಂದು ಕೈ ಕೈ ಮುಗಿಯತೊಡಗಿದರು.

ಮೊದಮೊದಲು ಸಿಂಗಪ್ಪಗೌಡರು ಸೇರೆಗಾರರ ಮೇಲೆ ತಮಗಿದ್ದ ಜಿದ್ದಿನಿಂದ ಮನಕರಗದಿದ್ದರೂ ಕಡೆಗೆ ಹೂವಯ್ಯ ಚಿನ್ನಯ್ಯರನ್ನು ಸಮಾಧಾನಗೊಳಿಸಿ, ಪೋಲೀಸಿಗೆ ವರದಿ ಕಳುಹಿಸಲಿಲ್ಲ ಗಂಗೆ ಸೇರೆಗಾರರಿಬ್ಬರೂ ಕಾನೂರು ಮನೆಯನ್ನು ಬಿಟ್ಟು, ಅವರು ಮೊದಲು ವಾಸಿಸುತ್ತಿದ್ದ ಗಟ್ಟದವರ ಬಿಡಾರಗಳಲ್ಲಿಯೆ ವಾಸಿಸಬೇಕೆಂದು ನಿರ್ಧರವಾಯಿತು. ಧರ್ಮಸ್ಥಳಕ್ಕೆ ಯಾತ್ರೆ ಹೋದವರು ಹಿಂದಿರುಗುವತನಕ ಪುಟ್ಟಣ್ಣ ಕಾನೂರಿನಲ್ಲಿ ಇರಲಿ ಎಂದು ಚಿನ್ನಯ್ಯ ಸೂಚಿಸಿದನು. ಆದರೆ ಅದಕ್ಕೆ ಪುಟ್ಟಣ್ಣನೂ ಇಷ್ಟಪಡಲಿಲ್ಲ; ಹೂವಯ್ಯನೂ ಸಮ್ಮತಿಸಲಿಲ್ಲ. ಚಂದ್ರಯ್ಯಗೌಡರು ಅನ್ಯರೀತಿ ಭಾವಿಸಿಬಿಟ್ಟರೆ! ಸದ್ಯಕ್ಕೆ ಚಿನ್ನಯ್ಯನೇ ಅಲ್ಲಿರುವುದೆಂದು ಗೊತ್ತಾಯಿತು.

ಇಷ್ಟೆಲ್ಲ ನಡೆಯುತ್ತಿದ್ದಾಗಲೆ ಕೆಳಕಾನೂರಿನಿಂದ ಸೋಮನೂ ಕುಂಟುತ್ತ ನರಳುತ್ತ ಕಂಬಳಿ ಹೊದೆದುಕೊಂಡು ನಡೆದುಬಂದು, ಹಿಂದಿನ ಸಾಯಂಕಾಲ ತನ್ನ ’ಲೋಟಿನ ಕಟ್ಟು’ ಕಳುವಾದುದನ್ನೂ ತನ್ನನ್ನು ಹೊಡೆದು ಗುದ್ದಿ ನೆಲಕ್ಕೆ ಹಾಕಿ ತೀಡಿದುದನ್ನೂ ಹೇಳಿ, ಸೇರೆಗಾರರು, ಹಳೆಪೈಕದ ತಿಮ್ಮ, ಕಳ್ಳಂಗಡಿಯವನು, ಅವರಿಗೆ ನೆರವಾದ ಇನ್ನಿಬ್ಬರು ಗಟ್ಟದಾಳುಗಳು- ಇಷ್ಟು ಜನಗಳನ್ನೂ ’ಇಚಾರಣೆ’ ಮಾಡಬೇಕೆಂದು ಅಳತೊಡಗಿದನು.

ಸಿಂಗಪ್ಪಗೌಡರು ಜನ ಕಳುಹಿಸಿ ಕಳ್ಳಂಗಡಿಯವನನ್ನೂ ತಿಮ್ಮನನ್ನೂ ಕರೆಸಿ, ಎಲ್ಲರನ್ನೂ ’ಇಚಾರಿಸಿದರು’. ಆದರೆ ಇತರ ಅಪರಾಧಗಳನ್ನು ಒಪ್ಪಿಕೊಂಡು ಅದಕ್ಕಾಗಿ ಸೋಮನಿಗೆ ದಂಡಕೊಡಲು ಸಮ್ಮತಿಸಿದರೂ ಯಾರೊಬ್ಬರು ’ಲೋಟಿನ ಕಟ್ಟು’ ಕಳುವಾದುದಕ್ಕೆ ಜವಾಬುದಾರರಾಗಲೊಲ್ಲದೆ ಹೋದರು.

ಸೋಮ ’ಹಾಂಗಾದ್ರೆ ಪರ್ಮಾಣ ಮಾಡಬೇಕು!’ ಎಂದು ಹಟ ಹಿಡಿದನು.

ಅವರಲ್ಲಿ ಯಾರೂ ಪ್ರಮಾಣ ಮಾಡಲು ಒಪ್ಪಲಿಲ್ಲ. ಚಿನ್ನಯ್ಯ “ನೀವು ಕದಿಯದಿದ್ದರೆ ನಿಮಗೇನು ಹೆದರಿಕೆ? ಪ್ರಮಾಣ ಮಾಡೋಕೆ ಹೆದರಿದಮೇಲೆ ನೀವೇ ಕದ್ದಿರಬೇಕು” ಎಂದು ಗದರಿಸಿದ ಮೇಲೆ ಪ್ರಮಾಣ ಮಾಡಲು ಒಪ್ಪಿದರು.

ಚೆನ್ನಾಗಿ ಬೆಳಗಿದ ನೀಲಾಂಜನಗಳಿಗೆ ತುಪ್ಪದಲ್ಲಿ ಅದ್ದಿದ ಹತ್ತಿಯ ಬತ್ತಿಗಳನ್ನು ಹಾಕಿ, ಸೊಡರು ಹೊತ್ತಿಸಿ, ತುಳಸಿಕಟ್ಟೆಯಮೇಲೆ ಸಾಲಾಗಿಟ್ಟರು. ದೇವರಿಗೆ ಹೂಮುಡಿಸಿ ಗಂಧ ಹಚ್ಚಿ, ಮಂಗಳಾರತಿ ಮಾಡಿದರು.ಸೇರೆಗಾರರು, ಹಳೆಪೈಕದ ತಿಮ್ಮ ಕಳ್ಳಂಗಡಿಯವನು ಮೂವರೂ ತುಳಸಿಕಟ್ಟೆಗೆ ಬಲವೆಂದು ಪ್ರದಕ್ಷಿಣೆಮಾಡಿ “ದೇವರಾಣೆಯಾಗಿಯೂ ಸೋಮನ ದುಡ್ಡನ್ನು ನಾ ಕದಿಯಲಿಲ್ಲ” ಎಂದು ಹೇಳುತ್ತ ಒಬ್ಬೊಬ್ಬರೂ ಒಂದೊಂದು ನೀಲಾಂಜನದ ದೀಪವನ್ನು ಆರಿಸಿದರು.

ಪ್ರೇಕ್ಷಕರೆಲ್ಲರೂ ಸ್ತಬ್ಧರಾಗಿ, ನಿಃಶಬ್ಧರಾಗಿ, ಆ ಮಹಾಸಾಕ್ಷ್ಯವನ್ನು ಪೂಜ್ಯಬುದ್ಧಿಯಿಂದಲೂ ಭಯಗೌರವಗಳಿಂದಲೂ ನೊಡುತ್ತ ಕುಳಿತಿದ್ದರು. ಅಲ್ಲಿದ್ದ ನಾಯಿಗಳಿಗೂ ಕೂಡ ಆ ಅನುಭವ ಮುಟ್ಟಿದಂತೆ ತೋರುತ್ತಿತ್ತು. ತತ್ಕಾಲದಲ್ಲಿ ಅಲ್ಲಿ ನೆರೆದಿದ್ದವರೆಲ್ಲರೂ ಬೇರೊಂದು ಪ್ರಪಂಚದ ಬೇರೊಂದು ಶುದ್ಧ ಸಾನ್ನಿಧ್ಯದಲ್ಲಿ ಇದ್ದಂತಿದ್ದರು!